ತಿಕಲ್ ಮೈಂಡು (ನಗೆ ಬರಹ)

ರಾತ್ರಿ ಮಲಗಿದಾಗಲೆ ಗಂಟೆ ಹನ್ನೊಂದು ನಲವತ್ತಾಗಿತ್ತು. ಯಾಕೊ ಇತ್ತೀಚೆಗೆ ಬೇಗ ನಿದ್ದೆ ಬರುತ್ತಿಲ್ಲ. ಏನೇನೊ ಯೋಚನೆಗಳು ತಲೆ ತುಂಬ. ಸಂಪ್ರದಾಯ, ಆಚರಣೆ, ಜ್ಯೋತಿಷ್ಯ ಅದು ಇದು ಅಂತ ಸಿಕ್ಕಾಪಟ್ಟೆ ಯೋಚನೆ ಮಾಡಲು ಶುರುಮಾಡಿಬಿಟ್ಟಿದೆ ಈ ತಲೆ. ರಾತ್ರಿ ಗೂಗಲ್ನಲ್ಲಿ ಅದೇನೊ ನೋಡಲು ಹೋಗಿ,ಯಾರೊ ಬರೆದ ” ವೃಷಭ ರಾಶಿಯವರ 2016ರ ಭವಿಷ್ಯ” ಕಣ್ಣಿಗೆ ಬೀಳ ಬೇಕಾ! ಸರಿ ಹೋಯ್ತು, ತಗಲಾಕ್ಕೊಂಡೆ ಅಲ್ಲಿ. ಸರಿ ಕುತೂಹಲ ತಿಕಲ ಮೈಂಡಗೆ.

ಈ ರಾಶಿಯವರ ಜನ್ಮ ನಕ್ಷತ್ರ ರೋಹಿಣಿ..‌‌‌‌…ಇನ್ನೂ ಅದ್ಯಾವ್ಯಾವದೊ ಎರಡು ಮೂರು ನಕ್ಷತ್ರಗಳ ಸೇರಿಸಿ ಬರೆದಿದ್ದಾರೆ. ಸರಿ ಓದುತ್ತ ಹೋದಂತೆ ಮುಖದಲ್ಲಿ ಖುಷಿಯ ಕಳೆ. ಸರಿಯಾಗಿ ಕುಳಿತು ಆಸಕ್ತಿಯಿಂದ ಮುಂದುವರೆಯಿತು ನನ್ನ ರೀಡಿಂಗು.

ಈ ನಕ್ಷತ್ರ ಕೃಷ್ಣನ ನಕ್ಷತ್ರ. ಬಹಳ ಅದೃಷ್ಟವಂತರು. ಯಾರು ಕೈತುಂಬ ಹಣ ಇದ್ದು ಐಶಾರಾಮಿ ಜೀವನ ನಡೆಸುತ್ತಾರೊ ಅವರೆಲ್ಲ ಈ ನಕ್ಷತ್ರಕ್ಕೆ ಸೇರಿರುತ್ತಾರೆ ಎಂದು ನಂಬಬಹುದು.ಇವರು ಯಾವಾಗಲು ಸಂತೋಷದಿಂದ ಕಾಲ ಕಳೆಯುತ್ತಾರೆ ಎಂದು ಹೇಳಬಹುದು. ಜೀವನದಲ್ಲಿ ಸುಃಖವಾಗಿ ಇರುತ್ತಾರೆ. ಇವರಿಗೆ ಈ ವಷ೯ ತುಂಬಾ ಅದೃಷ್ಟ ತರುವ ವಷ೯”. ಇನ್ನು ಏನೇನೊ ಒಕ್ಕಣೆ.

ಓಹ್! ಗೊತ್ತಾಯ್ತು. ಇವರ್ಯಾರೊ ಸರೀ ಬೂಚಿಡೊ ಗಿರಾಕಿ. ಯಾಕೆ ಗೊತ್ತಾ ನನ್ನದೆ ನಕ್ಷತ್ರ ಇದು‌. ಆಗಲೆ ಒಂದು ತಿಂಗಳಾಯಿತು ಹೊಸ ವಷ೯ ಶುರುವಾಗಿ. ಏನಾದರೂ ಜ್ಯೊತಿಷಿ ಹೇಳಿದಾಗೆ ಬದಲಾವಣೆ ಇದೆಯಾ? ಇಲ್ಲಪ್ಪ ಇಲ್ಲ. ಅದೆ ಖಾಲಿ ಡಬ್ಬ, ಒಡೆದು ಹೋದ ಶೀಶೆ. ನಿಂತ ನೀರು. ತೇಲಿ ಮುಂದೆ ಹೋಗೋದೆ ಇಲ್ಲ ಅನ್ನುತ್ತೆ ನನ್ನ ರೋಹಿಣಿ ಮಹಾ ನಕ್ಷತ್ರ.

ಇದೆ ಯೋಚನೆಯಲ್ಲಿ ಮಲಗಿದ್ನಾ, ಡಬಾರ ಅಂತ ಸೌಂಡ. ಸರಿ ಲೈಟ ಹಾಕಿ ನೋಡ್ತೀನಿ, ಗೋಡೆಗೆ ತಗಲಾಕಿದ ಕೃಷ್ಣ ಪರಮಾತ್ಮನ ಫೋಟೋ ಬಿದ್ದು ಗ್ಲಾಸೆಲ್ಲ ಪುಡಿ ಪುಡಿ. ಇನ್ನೆಲ್ಲಿ ನಿದ್ದೆ? ಗಂಟೆ ನೋಡಿದರೆ ನಾಲ್ಕು ಇಪ್ಪತ್ತೈದು‌. ತತ್ತರಿಕೆ ಅತ್ಲಾಗೆ ಏಳೋ ಹಾಗೂ ಇಲ್ಲ ಇತ್ಲಾಗೆ ನಿದ್ದೇನೂ ಬರ್ತಿಲ್ಲ. ಏನು ಮಾಡೋದು. ಇದೆಯಲ್ಲ ಬರೆಯೊ ಕೈ. ಶುರು ಹಚ್ಚಕೊಂಡೆ. ತಿಕಲ್ ಮೈಂಡ್ಗೆ ಶುರುವಾಯಿತು ಕಾಯಿಲೆ, ಯಾಕೆ ಫೋಟೊ ಬಿತ್ತು? ಅದೂ ಕೃಷ್ಣನ ಫೋಟೊ.

ಬೆಳಗಾಗೋದೆ ಕಾಯ್ತಿದ್ದೆ‌

ಮೊಬೈಲ ಕಾಲ ಲೀಸ್ಟ ತಡಕಾಡಿ ನನ್ನ ಗೆಳತಿ ಕೊಟ್ಟ ಜ್ಯೋತಿಷಿ ನಂಬರ ಹುಡುಕ್ಕಿದ್ದಾಯಿತು. ” ಹಲೊ, ಸರ್ ನಮಸ್ಕಾರ, ನಾನು ಮೊನ್ನೆ ನನ್ನ ಮಗಳ ಜಾತಕ ತೆಗೆದುಕೊಂಡು ಬಂದಿದ್ದೆ, ನೆನಪಾಯಿತಾ? ನಿಮ್ಮ ಹತ್ತಿರ ಏನೊ ಕೇಳಬೇಕಿತ್ತು, ಫ್ರೀ ಇದಿರಾ? ” ” ಏನು ಹೇಳಿ ” “ಅದೆ ನನ್ನ ಮಗಳಿಗೊಂದು ಗಂಡು ಬಂದಿದೆ.” ಗೋತ್ರ, ನಕ್ಷತ್ರ ಎಲ್ಲ ಹೇಳಿದ್ದಾಯಿತು. ” ನೋಡಿ ಅಮ್ಮ ನೀವು ಹತ್ತು ನಿಮಿಷ ಬಿಟ್ಟು ಫೋನ ಮಾಡುತ್ತೀರಾ?” ಆಯಿತು.
(ನಾನು ಏನು ಕೇಳಬೇಕು ಅಂತಿದ್ದೆನೊ ಅದು ಬಿಟ್ಟು ಆಮೇಲೆ ಕೇಳೋಣ ಅಂದುಕೊಂಡಿದ್ನಲ್ಲ,; ಅದನ್ನು ಊದಿಬಿಟ್ಟೆ.)

ನಾನು ಇನ್ಯಾವುದೊ ಕೆಲಸದಲ್ಲಿ ಮರೆತು ಬಿಟ್ಟೆ ಫೋನ ಮಾಡಲು. ಮುಂಡೆದಕ್ಕೆ ಇತ್ತೀಚೆಗೆ ಯಾಕೊ ತಲೆಯೆಲ್ಲ ಚೊಂಬಾಗಿ ಹೋಗಿದೆ. ಏನೊ ಮಾಡೋಕೇ ಹೋಗ್ತೀನಿ, ಅಲ್ಲಿ ಇನ್ನೇನೊ ಕಣ್ಣಿಗೆ ಬಿತ್ತಾ , ಮಾಡೊ ಕೆಲಸ ಬಿಟ್ಟು ಅಲ್ಲಿ ಸೇರಿಕೊಂಡು ಬಿಡುತ್ತೀನಿ.

ಮೊನ್ನೆ ಹಾಗೆ ಆಯ್ತು, ಒಲೆ ಮೇಲೆ ಬೆಳಗಿನ ಹಾಲು ಸ್ವಲ್ಪ ಇತ್ತಾ, ಸರಿ ಕಾಯಿಸಿಡೋಣ, ಬೆಳಿಗ್ಗೆ ಎದ್ದ ಹಾಗೆ ಮೊದಲು ಚಾ ಕುಡಿಯೊ ಅಬ್ಯಾಸ, ಕೇಳ ಬೇಕಲ್ಲ ಬಾಯಿ ಚಪಲ, ಹಾಲು ಹಾಳಾಗೋದರೆ ಅಂತ ಕಾಳಜಿ ಬೇರೆ. ಕಾಯಿಸೋಕೆ ಇಟ್ಟು ಯಾಕೊ ಟಿವಿ ಹಾಕೋಣ ಅಂತ ಬಂದೆ. ಪಕ್ಕದಲ್ಲಿರೊ ಪೇಪರ ಕಣ್ಣಿಗೆ ಬಿತ್ತು. ಬೋಧಿ ವೃಕ್ಷ ಪುರವಣಿ ಓದುತ್ತ ಕೂತೆ‌‌.

ಏನೊ ಸೌಂಡ. ಪಟ್ ಪಟ್. ಏ ಹಿಂದೆ ಸೈಟಲ್ಲಿ ನಾಯಿ ಏನೊ ಕೆರಿತಿರಬೇಕು. ಮತ್ತೆ ಚಿಟ್ ಚಿಟ್. ಸಾಕಿದ ನಾಲ್ಕು ಕಾಲು ನನ್ನ ಮರಿ ಆ ಕಡೆ ಈ ಕಡೆ ಸುಳಿತಾ ಭೌ ಭೌ ಅಂತು. ಅರೆ ಇಸ್ಕೀ ಏನಿದು ಅಂತ ಎದ್ದೆ ಅಲ್ಲಿಂದ. ಅಯ್ಯೋ ದೇವರೆ, ಆಗ ನೆನಪಾಯಿತು, ಓಹ್, ಹಾಲಿನ ಕಥೆ. ಹೋಗಿ ಪಟಕ್ ಅಂತ ಗ್ಯಾಸ ಬಂದ ಮಾಡಿ ನೋಡ್ತೀನಿ ಹಾಲೆಲ್ಲ ಬತ್ತಿ ತಳ ಹಿಡಿಯೊ ಸೌಂಡ ಪಟ್ ಪಟ್. ನಿಜ ಕಂಣ್ರೀ, ಬೇಕಾದರೆ ನೀವು ಒಮ್ಮೆ ಟ್ರೈ ಮಾಡಿ ನೋಡಿ, ಸೌಂಡ ಒಳ್ಳೆ ಪಿಸ್ತೂಲನಲ್ಲಿ ಚಿಟಿ ಪಿಟಿ ಪಟಾಕಿ ಹೊಡೆದ ಹಾಗೆ ಇರುತ್ತೆ. ಪಟಾಕಿ ಪಿಸ್ತೂಲು ಕಂಣ್ರೀ. ಬೆಳಿಗ್ಗೆ ಚಾ ಗೋತಾ, ಬೇಜಾರಾಗಿತ್ತು.

ಟ್ರಕ್ಕಕ್ಕು, ಟ್ರಕ್ಕಕ್ಕು ಟ್ರಕ್ಕಕ್ಕು ಮೋಟರೋಲಾ ಮೊಬೈಲು ರಿಂಗಣ. ” ಹಲೊ , ಯಾರು?” ” ನಾನ್ರೀ” ತಲೆಗೆ ಹೊಳಿಬೇಕಲ್ಲ, ಬಂದಿರೊ ಫೋನ್ ಯಾರದ್ದು ಅಂತ ನೋಡಬೇಕು, ಯಾರು ಅಂತ ಹಾಗೆಲ್ಲ ಕೇಳಬಾರದು ಅಂತ. ಇಡೀ ದಿನ ಒಬ್ಬಳೆ ಮನೇಲಿ ಇರ್ತೀನ, ಸರಿ ಯಾರದ್ದಾದರೂ ಫೋನ್ ಬಂದರೆ ಅದೇನೊ ಮಹಾ ಖುಷಿ, ಸ್ವಲ್ಪ ಹರಟೆ ಹೊಡಿಬಹುದಲ್ಲ. ಪಟಕ್ ಅಂತ ಗುಂಡಿ ಒತ್ತಿಬಿಡೋದೆ.

ಜ್ಯೋತಿಷಿಗಳು. ” ನೋಡಮ್ಮ ನೀವು ಹೇಳಿದ ಪ್ರಕಾರ ನಕ್ಷತ್ರ ಎಲ್ಲ ತಾಳೆ ಮಾಡಿ ನೋಡಿದೆ, ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತೆ, ಬಹಳ ಪ್ರೀತಿಯಿಂದ ಇರುತ್ತಾರೆ, ಮುಂದುವರಿಯಬಹುದು” ನನಗೊ ಆಕಾಶಕ್ಕೆ ಮೂರೇ ಗೇಣು. ” ಹಾ ಸರಿ ಸರ್” “ಆದರೆ ಒಂದು ಪೂಜೆ ಮಾಡಬೇಕಲ್ಲಮ್ಮ” ಹೊ , ಇಟ್ಟರು ಬತ್ತಿ.

ಅದೇನೊ “ಕೇರಳದಲ್ಲಿ ಪೂಜೆ ಮಾಡಬೇಕು, ನಾನೇ ಖುದ್ದಾಗಿ ಹೋಗಿ ಅಮವಾಸ್ಯೆ ದಿನ ಪೂಜೆ ಮಾಡಿಕೊಂಡು ಬಂರುತ್ತೀನಿ. ಇಲ್ಲಾಂದರೆ ಮದುವೆ ಮುಂದೆ ಹೋಗುತ್ತಲೇ ಇರುತ್ತದೆ. ಈ, ಅಮಾವಾಸ್ಯೆ ಒಳಗಡೆ ಮಾಡಬೇಕು. ನೀವು ಮನೆಯಲ್ಲಿ ಪ್ರತೀ ಗುರುವಾರ ಪೂಜೆ ಮಾಡಿ ಒಂದು ಹದಿಮೂರು ವಾರ. ನೋಡಿ ನಿಮ್ಮ ಪೂಜೆ ಮುಗಿತಾ ಇದ್ದ ಹಾಗೆ ಗಂಡು ಸೆಟ್ಟಾಗುತ್ತೆ. ಯೋಚನೆ ಮಾಡಬೇಡಿ. ಒಳ್ಳೆ ಮನೆ ಸೇರುತ್ತಾಳೆ ” ಇನ್ನೂ ಏನೇನೊ ಹೇಳಿ ರೈಲು ಹತ್ತಿಸಿ ಆಗಿತ್ತು. ಕೇಳಿದಷ್ಟು ಹಣನೂ ಕೊಟ್ಟು ಕೈ ಸುಟ್ಟ ಕೊಂಡಿದ್ದಾಯ್ತು.

ಅವರೇಳಿದಂತೆ ಕೇಳಿ ಹದಿಮೂರೇನು, ಹದಿನೇಳು ವಾರನೇ ಪೂಜೆ ಮಾಡಿದ್ದಾಯಿತು. ಇನ್ನೂ ಯಾರ ಮನೆ ಸಿದ್ದೆನೂ ಒದ್ದಿಲ್ಲ.

ಈಗ ಇದೇನು ಹೊಸ ವರಸೆ. ಎಲ್ಲಾ ಪೂಜೆನು ಮಾಡಿದ್ದೇನೆ ಅಂದವರು ಈಗ ಪೂಜೆ ಹೆಸರಲ್ಲಿ ಪುನಃ ಹಣ ಕೇಳ್ತಿದ್ದಾರಲ್ಲ! ಹೋಗಲಿ ನನ್ನ ಬಗ್ಗೆ ಕೇಳೋಣ, ನೋಡೋಣ ಅಂತ “ಸ್ವಾಮಿ, ನಾನು ಈಗಾಗಲೆ ತುಂಬಾ ಬರಿತಿದಿನಿ, ನನ್ನ ಭವಿಷ್ಯ ಹೇಗಿದೆ, ಸ್ವಲ್ಪ ಹೇಳ್ತೀರಾ” ” ನೋಡಿ ಅಮ್ಮ, ನಿಮದು ರೋಹಿಣಿ ನಕ್ಷತ್ರ, ಶನಿಯ ಪ್ರಭಾವ ಇದೆ, ಈ ಕ್ಷೇತ್ರ ಒಳ್ಳೆ ಹೆಸರು ತರುತ್ತದೆ, ಪದ್ಮಶ್ರೀ ಪ್ರಶಸ್ತಿ ಬರುವಂತ ಯೋಗ ಇದೆಯಮ್ಮ,” ಅಬ್ಬಾ, ನಾನು ಕೇಳಿ ಸುಸ್ತು‌. ಫೋಟೊ ಬಿದ್ದ ವಿಷಯ ಅಲ್ಲೆ ಡಮಾರ್.

ಬೇರೆ ದಾರಿ ಇರಲಿಲ್ಲ‌ ಅವರು ಹೇಳಿದಂತೆ ಆಗುತ್ತದೆ ಎಂದು ಹೇಳಿದವಳು ನನ್ನ ಗೆಳತಿ. ಯಾವ ಯಾವುದೊ ಉದಾಹರಣೆ ಬೇರೆ ಕೊಟ್ಟಳು. ಹೌದು ಅಂತ ನಂಬಿದೆ ತಪ್ಪಾ? ಪುರಂದರ ದಾಸರು ಹೇಳಿಲ್ಲವೇ “ನಂಬಿ ಕೆಟ್ಟವರಿಲ್ಲ” ನೋಡೋಣ ಇನ್ನೂ ಅವರೇಳಿದ ಟೈಮು ಮುಗಿದಿಲ್ಲ‌.(ಮುಂಡೆದಕ್ಕೆ ಇನ್ನೂ ನಂಬಿಕೆ ಚೂರು ಉಳಿದುಬಿಟ್ಟಿದೆ ತಲೆಲಿ)

ಇದರ ಮದ್ಯೆ ಕನಸು ಬಿದ್ದಿದ್ದಕ್ಕೆ, ಜಾರಿ ಬಿದ್ದಿದ್ದಕ್ಕೆ, ಎಲ್ಲದಕ್ಕೂ ಫೋನ ಮಾಡಿ ಶಕುನ ಕೇಳಿದ್ದಾಯಿತು. ಸದ್ಯ ಆಗೆಲ್ಲ ಅಮಾವಾಸ್ಯೆ, ಹುಣ್ಣಿಮೆ ಗೃಹಚಾರ ಅಂತ ಸಮಾಧಾನ ಹೇಳಿದ್ದರು.

ಆಮೇಲೆ ಒಂದಿನ ಸರಿ ಬಿದ್ದೆ ನೋಡಿ ಬಲಗೈಗೆ ಪ್ಲಾಸ್ಟರ್ ಹಾಕಿಸಿಕೊಂಡು ಮೂವತ್ತಾರು ದಿನ ನಾ ರೊಡ್ಡಿ! ಬಲಗೈ ನಾಲ್ಕು ಬೆರಳು ಅಲ್ಲಾಡುತ್ತಿತ್ತು, ಅದರಲ್ಲೆ ಮೊಬೈಲ್ ಡೈರಿಯಲ್ಲಿ ಬರೆದೆ. ಈ ಬರೆಯೊ ಚಟ ಎಲ್ಲಿ ಸುಮ್ಮನೆ ಕೂಡಲು ಬಿಡುತ್ತೆ ಹೇಳಿ! ಈ ವಿಷಯ ಕೇಳಿದ್ದಕ್ಕೆ “ಗ್ರಾಚಾರ ಹೋಯ್ತು ಬಿಡಿ, ಪೂಜೆ ಮಾಡಿರೋದರಿಂದ ಉಳಿದುಕೊಂಡಿರಿ.”

ಹಾಗಾದರೆ “ಭ್ರಹ್ಮ ಅಲ್ವಾ ಸೃಷ್ಟಿ ಕತ೯” ಅಂತ ಯೋಚನೆ ಶುರುವಾಗಿದೆ!

9-2-2016. 5.31am
(Published in Sampada net.)

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s