ಖಾಲಿ ಹಾಳೆ(ಸಣ್ಣ ಕಥೆ)

ನನ್ನೊಳಗಿನ ಮಾತನ್ನು ಯಾರು ಕೇಳುತ್ತಾರೆ? ಎಲ್ಲರಿಗು ಅವರದೆ ಆದ ಸಾಮ್ರಾಜ್ಯವಿದೆ. ಆದರೆ ನನಗ್ಯಾರು ಇದ್ದಾರೆ. ಅಂತರಂಗದ ಗೊಣಗಾಟ.

ಮದುವೆಯ ವಯಸ್ಸಿನಲ್ಲಿ ನನ್ನೊಳಗಿನ ಕನಸುಗಳಿಗೆ ಲೆಕ್ಕವೇ ಇರಲಿಲ್ಲ. ಪ್ರತಿ ದಿನ ಪ್ರತಿ ಕ್ಷಣ ಅದರದೆ ಗುಂಗಿನಲ್ಲಿ ಅದೆಷ್ಟು ದಿನ ಕಳೆದೆ. ಅದೊಂದು ಸುಂದರ ಲೋಕ. ನನ್ನ ಪಾವಿತ್ರತೆ ಉಳಿಸಿಕೊಳ್ಳಲು ಅದೆಷ್ಟು ಹೆಣಗಾಡಲಿಲ್ಲ. ಸೌಂದರ್ಯದ ಸೊಬಗು ಎಲ್ಲರ ಕಣ್ಣು ಕಕ್ಕುತ್ತಿತ್ತು ಅನಿಸುತ್ತದೆ. ಅದಕೆ ತಾನೆ ಆ ಕಡೆ ಈ ಕಡೆ ಚಲಿಸುವಾಗೆಲ್ಲ ಕಿವಿಗೆ ಬೀಳುವ ಮಾತುಗಳು; ಹಾಯ್ ಸ್ವೀಟಿ, ಹೌ ಬ್ಯೂಟಿಫುಲ್ ಯು ಆರ್. ಒಳಗೊಳಗೆ ಒಣ ಜಂಬ ಮುಂಡೆದಕ್ಕೆ. ತನ್ನನ್ನು ಕೆಣಕುವ ಮಾತು, ಕಣ್ಣೋಟ ಖುಷಿ ತಂದರೂ ಕೆಲವರ ನಡೆ ಅಸಭ್ಯ ವತ೯ನೆ ವಾಕರಿಕೆನೂ ತಂದಿತ್ತು. ಯೌವನವೆ ಹಾಗೆ. ಕಂಡವರೆಲ್ಲ ತನ್ನ ನೋಡಿ ಹೊಗಳಬೇಕು. ತಾನು ಅನ್ನುವ ಒಣ ಅಹಂಕಾರ ಹೆಡೆಯೆತ್ತಿ ಆಡುತ್ತಿರುತ್ತದೆ. ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕೆನ್ನುವ ಒಂದಿನಿತು ಮಹದಾಸೆ. ಎಲ್ಲರಲ್ಲು ಏನಾದರು ಕೊಂಕು ತೆಗೆದು ಮದುವೆ ವಯಸ್ಸು ಮೀರುವ ಹಂತಕ್ಕೆ ಬಂದಾಗ ಹಪಹಪಿಸೋದು. ಆಮೇಲೆ ಒಂದು ರೀತಿ ವಿರಾಗಿಯ ಮಾತಾಡಿದರೆ ಲೈಫ್ ಸೆಟ್ಲ ಆಗುತ್ತ? ಎಲ್ಲವೂ ತನ್ನ ಮೂಗಿನ ನೇರಕ್ಕೆ ಆಗಬೇಕು ಅಂದರೆ ಸಾಧ್ಯವೇ?

ಅಂತೂ ಒಂಟಿ ಬದುಕಲ್ಲಿ ಪ್ರತಾಪನ ಪ್ರವೇಶ. ಹಿಂದಿಲ್ಲ ಮುಂದಿಲ್ಲ. ಯಾರಿವನು, ಇವನ ಕುಲ ಗೋತ್ರ ಒಂದೂ ತನಗೆ ಗೊತ್ತಿಲ್ಲ. ಅದೆಲ್ಲಿ ಇದ್ದನೊ ಪುಣ್ಯಾತ್ಮ. ಬಂದು ಸೇರಿಕೊಂಡ ಅವಳ ಬಾಳಲ್ಲಿ. ಕರಿಮಣಿ ಮೂರು ಗಂಟು ನೇತಾಕಿ ತಾನು ಇವಳ ಗಂಡ ಅನ್ನೊ ಛಾಪು ಒತ್ತಿದ. ಹೇಗಿದ್ದರು ಹಿರಿಯರು ನೋಡಿ ಮಾಡಿದ್ದು ತಾನೆ. ಬದುಕಿಗೊಂದು ಆಸರೆ ಆಗಿರುತ್ತಾನೆ. ತನ್ನ ಕಾಯೋಕೊಬ್ಬ ಗಂಡು ಸಿಕ್ಕಿದ. ಇರೊದಕ್ಕೊಂದು ಗೂಡು ಇದ್ದರೆ ಸಾಕು.

ಮೊದ ಮೊದಲು ಅವನ ಬಗ್ಗೆ ಆದರ, ಆಸಕ್ತಿ. ತಿದ್ದಿ ತೀಡಿ ಅವನನ್ನು ಸರಿ ದಾರಿಗೆ ತರುವ ಪ್ರಯತ್ನ. ದೂರದ ಆಸೆ ಹೇಗೂ ತಗಲಾಕ್ಕೊಂಡಾಗಿದೆ ಇವನೇ ಯಾಕೆ ನನ್ನ ಕನಸುಗಾರನಾಗಿರಬಾರದು? ಆದರೆ ಅದು ಬರೀ ಹಗಲುಗನಸಾಗೇ ಉಳಿಯಿತು. ಎಂತಿದ್ದರೂ ನಾಯಿ ಬಾಲ ಡೊಂಕೆ. ಬದಲಾವಣೆ ಮಾಡುವ ಪ್ರಯತ್ನ ಬಿಟ್ಟಾಯಿತು. ಮದುವೆ ಆದ ತಪ್ಪಿಗೆ ಮನಸ್ಸಿನಲ್ಲೆ ಕನಸುಗಾರನಿಗೆ ತಿಥಿ ಶಾಸ್ತ್ರ ಮುಗಿಸಿ ಮುಖವಾಡದ ಬದುಕು ಶುರು ಹಚ್ಚಿಕೊಂಡಳು. ಇನ್ನು ನನ್ನ ಹೃದಯ ಖಾಲಿನೆ ಜನ್ಮ ಇರೋವರೆಗು. ಯಾಕೆಂದರೆ ಕನಸೊಳಗಿನ ವ್ಯಕ್ತಿ ಇವನಲ್ಲವಲ್ಲ. ಹೇಗೊ ದೇವರು ಕೊಟ್ಟ ಜೀವ ಇನ್ನು ಹೇಗಿದ್ದರೇನು. ಹಾಗೆ ಸಾಗಿ ಹೋಗುತ್ತಲೆ ಇತ್ತು ಅವಳ ಜೀವನ. ಕಂಡವರೆದುರಿಗೆ ತಾನು ಮುತ್ತೈದೆ. ಒಳಗೊಳಗೆ ಅವಳ ಮನಸ್ಸು ಕೊರಗುತ್ತಿತ್ತು ತಾನು ಗಂಡನಿಲ್ಲದ ಮುತ್ತೈದೆ. ಕತ೯ವ್ಯದ ಕರೆಗೆ ಓ ಗೊಟ್ಟು ಮಾಡೊ ಕೆಲಸ ಚಾಚೂ ತಪ್ಪದೆ ಮಾಡುತ್ತಿದ್ದಾಳೆ‌.

“ಹಲೊ ಪದ್ದಿ ಏನೆ ಮಾಡ್ತೀದ್ದೀಯಾ? ಹುಷಾರಿಲ್ವನೆ? ಯಾಕೆ ಬ್ಯಾಂಕಿಗೆ ಬಂದಿಲ್ಲ? ಏನಾಯಿತೆ?”

“ಹಾಗೇನಿಲ್ಲ. ಸುಮ್ಮನೆ ಮನೆಯಲ್ಲಿ ಇದ್ದೇನೆ. ಯಾಕೊ ಆರಾಮಾಗಿ ಮನೆಯಲ್ಲೇ ಇರೋಣ ಅನಿಸಿತು ಕಣೆ.”

“ಯಾಕೆ ನನ್ನ ಹತ್ತಿರನೂ ಸುಳ್ಳ? ನನಗೆ ಗೊತ್ತಿಲ್ವಾ ನಿನ್ನ ಬುದ್ಧಿ.”

ಅಯ್ಯೋ ಇವಳು ಅಂಟು ಹಿಡಿದ ಹಾಗೆ. ಹೇಳಿದಂತೂ ಬಿಡೋದೇ ಇಲ್ಲ. ಬಾಲ್ಯದ ಗೆಳತಿ. ಊರೂರು ಅಲೆದು ಈಗ ಒಂದೆ ಬ್ರ್ಯಾಂಚಲ್ಲಿ ಸೇರಿಕೊಂಡುಬಿಟ್ಟಿದಿವಿ. ಒಂದಿನ ನನ್ನ ಕಾಣದೆ ಇದ್ದರೆ ತಕ್ಷಣ ಫೋನ ಮಾಡುತ್ತಾಳೆ. ನನಗೂ ಅಷ್ಟೆ; ಅವಳು ನನ್ನೊಳಗಿನ ಮಾತುಗಳಿಗೆ ಕಿವಿಗೊಡುವ ಆಪ್ತ ಸ್ನೇಹಿತೆ. ನನ್ನ ಒಂಟಿತನ ಅಲ್ಪ ಸ್ವಲ್ಪ ದೂರ ಮಾಡುತ್ತಿರುವ ಗೆಳತಿ.

“ಏಯ್ ಬಾರೆ ಬ್ಯಾಂಕ್ ಮುಗಿಸಿಕೊಂಡು. ಇವರಿಲ್ಲ ಆಫೀಸ ಟೂರ್ ಹೋಗಿದ್ದಾರೆ.”

” ಸರಿ ಬಿಡು. ಇವತ್ತು ನಾನೆ ನಿನ್ನ ಗಂಡ. ಬರ್ತೀನಿ. ಅಲ್ಲೆ ಇರ್ತೀನಿ.”

“ಏಯ್ ಎನೆ ಆಯಿತು ನಿನಗೆ? ಗಂಡ ಗಿಂಡ ಅಂತಿಯಾ?”

“ಹಂಗೆ ತಮಾಷೆಗೆ. ನನಗೆ ಗೊತ್ತು. ನೀ ಏನೊ ತಲೆ ಬಿಸಿ ಮಾಡಿಕೊಂಡಿದಿಯಾ. ನಗಿಸೋಣ ಅನಿಸಿತು. ಹಂಗೆ ಸಣ್ಣ ಕಚಗುಳಿ ಇಟ್ಟೆ. ”

“ಪರವಾಗಿಲ್ವೆ, ನೀನು ಒಂಥರಾ ಭಜಾರಿ.”

“ಹೌದು ಮತ್ತೆ ಹೀಗಿದ್ರೇನೆ ಈ ಸಮಾಜದಲ್ಲಿ ಒಂಟಿಯಾಗಿ ಬಾಳೋಕೆ ಆಗೋದು. ನೀನೂ ಇದ್ದಿಯಾ. ಎಲ್ಲದಕ್ಕೂ ಮುಸಿ ಮುಸಿ ಅಳ್ತೀಯಾ. ಸ್ವಲ್ಪ ಗಟ್ಟಿ ಆಗು ನನ್ನ ಥರ. ಸರಿ ಇಡ್ತೀನಿ ಕಣೆ. ಟೈಮ್ ಆಯಿತು. ಸಾಯಂಕಾಲ ಬರ್ತೀನಿ. ತಿಂಡಿ ಮಾಡೆ ಏನಾದ್ರೂ. ಬಾಯ್.”

ಮನಸ್ಸೆಲ್ಲ ಕುದಿತಾ ಇದೆ. ಅವಳ ಫ್ರೀಡಂ ನೋಡಿ. ನಾನ್ಯಾಕೆ ಮದುವೆ ಬಂಧನದಲ್ಲಿ ಸಿಕ್ಕಾಕ್ಕೊಂಡೆ. ಎಲ್ಲ ನನ್ನ ಹಣೆಬರಹ. ಚಿತ್ತ ಯಾವಾಗಲೂ ಹಂಗಿಸುತ್ತೆ; ಅನುಭವಿಸು. “ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ”
ಮದುವೆ ಆದವರಿಗೇ ಗೊತ್ತು ಅದರ ಒಳಗುಟ್ಟು. ಕಂಡೂ ಕಾಣದ, ಹುಟ್ಟ ಪರ ನೋಡದೆ ಇರೊ ವ್ಯಕ್ತಿ. ಅದೇಗೆ ಏನೊಂದೂ ವಿಚಾರ ಮಾಡದೆ, ಒಂದಿನಾನೂ ಮಾತಾಡದೆ ಮದುವೆಗೆ ಗೋಣು ಅಲ್ಲಾಡಿಸಿದೆ? ಇದೇ ಇರಬೇಕು ಋಣಾನುಬಂಧ. ಅಯ್ಯೋ ಬಿಟ್ಟಾಕು ಈಗ್ಯಾಕೆ ತಲೆ ಕೆಡಿಸಿಕೊಳ್ತೀಯಾ. ಅಧ೯ ಜೀವನ ಸವೆದು ಹೋಯಿತು. ಮಕ್ಕಳಿಲ್ಲ ಮರಿ ಇಲ್ಲ. ಸುಮ್ಮನೆ ಯೋಚಿಸಬೇಡ ಅಂತ ಅದೆಷ್ಟು ಸಾರಿ ಚಿತ್ತಕ್ಕೆ ತೂರ್ಸಿದಿನಿ. ಕೇಳೋದೆ ಇಲ್ಲ. ಹೋಗಿ ಒಂದಷ್ಟು ತಣ್ಣೀರು ತಲೆ ಮೇಲೆ ಹೊಯ್ಕೊಳ್ಳಬೇಕು.

ಎದೆಯ ಸಂಕಟ ಯಾರ ಹತ್ತಿರ ಹೇಳಿಕೊಳ್ಳುವುದು. ಒಂದು ಕ್ಷಣದ ಮೌನ ಇಡೀ ನನ್ನ ಜೀವನವನ್ನು ತಿಂದಾಕಿ ಬಿಡ್ತು. ಆಯುಷ್ಯವೆಲ್ಲ ಹೀಗೆಯೇ ಕಳೀಬೇಕು ಅನ್ನುವ ಕಿತ್ತು ತಿನ್ನುವ ಯೋಚನೆ ಅಳು ಒತ್ತರಿಸಿ ಬರ್ತಿದೆ‌. ಬಹುಶಃ ನನ್ನೊಬ್ಬಳ ಕೊರಗಾಗಿರಲಿಕ್ಕಿಲ್ಲ. ಪ್ರಪಂಚದಲ್ಲಿ ಅದೆಷ್ಟು ಹೆಣ್ಣಿನ ಜೀವನ ಹೀಗಿದೆಯೊ ಯಾರಿಗ್ಗೊತ್ತು. ಹಿರಿಯರ ಅಣತಿಯಂತೆ ನಡೆಯುವ ಪ್ರತಿಯೊಬ್ಬರ ಜೀವನದಲ್ಲೂ ಏನಾದರೂ ಕೊರತೆ ಇದ್ದೇ ಇರಬೇಕಲ್ವ. ಹೀಗಂದುಕೊಂಡೆ ನಾನೂ ಬಾಳ್ತೀರೋದು. ಇವತ್ಯಾಕೆ ನಾನಿಷ್ಟೊಂದು ಅಪಸೆಟ್ ಆದೆ. ಬಹುಶಃ ಈ ಒಂಟಿತನ ಜಾಸ್ತಿ ಯೋಚಿಸುವಂತೆ ಮಾಡಿದೆ.

ತಲೆಗೆ ಬಿದ್ದ ತಣ್ಣೀರಿನ ಪ್ರಭಾವವೊ ಅಥವಾ ಗೆಳತಿಯ ಆಗಮನದ ನಿರೀಕ್ಷೆಗೊ ಗೊತ್ತಿಲ್ಲ, ಮನಸ್ಸು ಸ್ವಲ್ಪ ನಿರಾಳವಾಯಿತು. ತಿಂಡಿ ಮಾಡುವ ತಯಾರಿ ನಡೀತು ಸಣ್ಣದಾಗಿ ಹಾಡು ಗುಣ ಗುಣಿಸುತ್ತ. “ಭಾನಲ್ಲು ನೀನೆ, ಭುವಿಯಲ್ಲು ನೀನೆ; ಎಲ್ಲೆಲ್ಲೂ ನೀನೆ, ನನ್ನಲ್ಲು ನೀನೆ….”
ಅವಳಿಗಿಷ್ಟವಾದ ಹಾಡದು. ಕನಸುಗಾರನ ನೆನೆನೆನೆದು ಹಾಡುವ ರಾಗವದು. ಛೆ, ನಾ ಯಾಕೆ ಈ ಹಾಡು ಗುಣಗುಣಿಸ್ತೀನಿ. ಬಿಡಬೇಕು ಅಂದರು ಮತ್ತದೆ ಬಾಯಿಗೆ ಬರುತ್ತಲ್ಲ. ಮುಗಿದ ಬಾಳಿಗಿನ್ನೆಲ್ಲಿ ಭಾನೂ ಇಲ್ಲ ಭುವಿನೂ ಇಲ್ಲ. ಇರೋದೊಂದೆ ಬರಡು ಬಾಳು. ಮತ್ತೆ ಕಣ್ಣು ಮಂಜು. ಸಿಗದುದಕ್ಕೇ ಆಸೆ ಪಡುವ ಈ ಸುಟ್ಟ ಮನಸ್ಸನ್ನು ಹೇಗೆ ತಡೆ ಹಿಡಿಯೋದು? ಭಗವಂತಾ ನನಗೆ ಗಟ್ಟಿ ಮನಸ್ಸು ಕೊಡು ಸದಾ ಪ್ರಾಥ೯ನೆ.

“ಪದ್ದಿ, ಪದ್ದಿ ಬಾಗಿಲು ತೆಗಿಯೆ.”

“ಹಾ ಬಂದೆ.”

“ಅಬ್ಬಾ ಏನ್ ಸೆಕೆ ಸ್ವಲ್ಪ ತಣ್ಣನೆ ನೀರು ಕೊಡೆ.”

“ತಗೊ, ಕುಡಿ. Fresh up ಆಗಿ ಬಾರೆ. ತಿಂಡಿನೂ ಆಗಿದೆ, ತಿನ್ನುತ್ತ ಮಾತಾಡೋಣ.”

“ವಾವ್! ಉಪ್ಪಿಟ್ಟು ಚೆನ್ನಾಗಿ ಮಾಡಿದಿಯಾ ಕಣೆ. ಎನೊ ಮೂಡಿಲ್ಲ ದೇವರೆ ಇನ್ನೇನು ತಿಂಡಿ ಮಾಡ್ತೀಯೊ, ಅದನ್ನು ನಾ ಹೇಗೆ ತಿನ್ನಲೊ ಅಂತ ಅಂದುಕೊಂಡಿದ್ದೆ. ಕಾಪಾಡಬಿಟ್ಟ ಪರಮಾತ್ಮ.”

“ಎಯ್, ಹೋಗೆ. ಎನ್ ನನ್ನ ಅಷ್ಟು ಕಂಡಮ್ ಮಾಡ್ತಿದಿಯಾ,ಸುಮ್ಮನೆ ತಿನ್ನೆ ಸಾಕು.”

ಅದೆಷ್ಟು ಸಲುಗೆ ಇಬ್ಬರಲ್ಲು. ಅಷ್ಟೆ ಆತ್ಮೀಯತೆ, ನಂಬಿಕೆ. ಮಾತಾಡದ ಮಾತಿಲ್ಲ, ಹೇಳಿಕೊಳ್ಳದ ವಿಷಯವಿಲ್ಲ. ಆದರೂ ಅಲ್ಲೊಂದು ಸಣ್ಣ ಗುಟ್ಟಿತ್ತು ಇಬ್ಬರಲ್ಲೂ; ಅದು ಹೇಳಿದರೆ ಅಲ್ಲೋಲ ಕಲ್ಲೋಲವಾಗಿಬಿಡಬಹುದೆನ್ನುವ ಕಹಿ ಸತ್ಯದ ಗುಟ್ಟು.

ಹಿಂದಿಯಲ್ಲಿ ಒಂದು ಮಾತಿದೆ:
“ಬೋಲೆ ತೊ ಮಾ ಮಾರತಾ, ನ ಬೋಲೆ ತೊ ಬಾಪ್ ಕುತ್ತಾ ಖಾತಾ”

ಗೆಳೆತನಕೆ ತಿಲಕವಿಟ್ಟಂತಿರುವ ಸುಮನಾ ಹೆಸರಿಗೆ ತಕ್ಕಂತೆ ನಡೆ ನುಡಿ. ಯಾರನ್ನೂ ನೋಯಿಸದ ತನ್ನ ಗೆಳತಿ ಅನ್ನುವ ಅಭಿಮಾನ ಪ್ರೀತಿ ಇಟ್ಟುಕೊಂಡ ಸದೃದಯಿ. ನೋಡಿದವರು ಇವರಿಬ್ಬರ ಗೆಳೆತನ ಅಸೂಯೆ ಪಟ್ಟುಕೊಳ್ಳುವಷ್ಟು ಹೊಂದಾಣಿಕೆ ಇಬ್ಬರಲ್ಲು.

“ಏಯ್, ಹೇಳೆ ಏನಾಯಿತೆ ನಿಂಗೆ. ಈ ರೀತಿ ಆಗಾಗ ಕೆಲಸಕ್ಕೆ ಚಕ್ಕರ್ ಹಾಕ್ತಾ ಇದ್ದರೆ ನಿನ್ನ ಕೆಲಸವೆಲ್ಲ ಪೆಂಡಿಂಗ ಇರುತ್ತೆ. ಆಮೇಲೆ ಮೆಮೊ ಅದು ಇದೂ ಅಂತ ಯಾಕೆ ತೊಂದರೆ ತಂದುಕೋತಿಯಾ. ಮೊದಲೆ ಸ್ಟಾಪ್ ಕಮ್ಮಿ. ಇಬ್ಬರ ಕೆಲಸ ಒಬ್ಬರು ಮಾಡಬೇಕು. ಬರಿ ಸದಾ ನಿನ್ನ ಬಗ್ಗೆನೆ ಯೋಚಿಸ್ತಿರ್ತಿಯಲ್ಲ. ನಿನಗೊಬ್ಬಳಿಗೇನಾ ಚಿಂತೆ ಇರೋದು?”.

“ಹಲೋ, ನೀನೇನು ನನ್ನ ಬಯ್ಯೋಕೆ ಬಂದಿದ್ದ ಅಥವಾ ಸಮಾಧಾನ ಮಾಡೋಕೆ ಬಂದಿದ್ದ? ಸ್ವಲ್ಪ ಪವರ್ ಕಡಿಮೆ ಮಾಡೆ.”

ಇಬ್ಬರೂ ಜೋರಾಗಿ ನಗು ವಾತಾವರಣ ತಿಳಿಗೊಳಿಸಿತು.

“ಏಯ್ ಪದ್ದಿ ಬೇಗ ರೆಡಿ ಆಗೆ ಹಂಗೆ ಸುತ್ತಾಡಿಕೊಂಡು ಒಳ್ಳೆ ಹೊಟೆಲ್ನಲ್ಲಿ ಊಟ ಮುಗಿಸಿ ಬರೋಣ. ಇವತ್ತು ನಮ್ಮದೆ ರಾಜ್ಯ ಬಾ. ನಮ್ಮನೆಲೂ ಅಮ್ಮ ಇಲ್ಲ. ಊರಿಗೆ ಹೋಗಿದಾರೆ.”

ನಿರಾಳ ಮನಸ್ಸಿನ ಗೆಳತಿ ರೆಡಿಯಾಗಿ ಬಂದಾಗ ತಟ್ಟನೆ ಉಸುರಿದಳು ” ಅಲ್ಲ ಕಣೆ ಇಷ್ಟೊಂದು ರೂಪ ಇರುವ ನೀನು ನಿನ್ನ ಚಿಕ್ಕ ವಯಸ್ಸಿನಲ್ಲಿ ಯಾರಿಂದಲಾದರೂ ಹೆರಾಸ್ಮೆಂಟಗೆ ಗುರಿಯಾಗಿದ್ಯೆನೆ. ಯಾಕೆಂದರೆ ರೂಪವೆ ಹೆಣ್ಣಿಗೆ ಶತ್ರು. ನಾನೇನಾದರು ನಿನ್ನ ಮದುವೆ ಆಗೊ ಹಾಗಿದ್ದಿದ್ದರೆ ಓಡಿಸಿಕೊಂಡು ಹೋಗಿ ಮದುವೆ ಮಾಡಿಕೊಳ್ತಾ ಇದ್ದೆ. ಗ್ಯಾರಂಟಿ. ನಮ್ಮಿಬ್ಬರಲ್ಲಿ ಅಷ್ಟು ಸಾಮ್ಯತೆ ಇದೆ. ಆಯುಷ್ಯವೆಲ್ಲ ಹೀಗೆ ಮಾತಾಡ್ತಾ ಹಾಯಾಗಿ ಇರಬಹುದಿತ್ತು. ಎನ್ಮಾಡ್ಲಿ ನಾನು ಹೆಣ್ಣಾಗಿ ಹುಟ್ಟುಬಿಟ್ಟೆ.”

“ಸಾಕು ಮಾಡೆ ನಿನ್ನ ತರಲೆ ಬುದ್ದಿ. ಎಂತ ಇಲ್ಲ ಮಣ್ಣಂಗಟ್ಟಿ. ನನ್ನ child life ಚೆನ್ನಾಗೆ ಇತ್ತು. ನೆನಪಿಸಿಕೊಂಡರೆ ಖುಷಿ ಆಗುತ್ತದೆ. ಬಾ ಹೋಗೋಣ.”

ಬೀಗ ಜಡಿದು ಹೊರಟ ಗೆಳತಿಯರಿಬ್ಬರ ಮಾತಿಗೆ ಕೊನೆಯೆ ಇಲ್ಲ. ಪೇಟೆಯೆಲ್ಲ ಒಂದು ರೌಂಡ ಹೊಡೆದು ಪಾಕಿ೯ನಲ್ಲಿ ಬಂದು ಕೂತ ಸಮಯ ಆಗಲೆ ಏಳೂ ಮೂವತ್ತು.

“ಈಗಲಾದರೂ ಹೇಳೆ. ಏನಂತ ರಜೆ ಹಾಕಿದೆ? ಮಕ್ಕಳು ಮರಿ ಯೋಚನೆ ಶುರುವಾಯಿತೆನೆ. ಪಾಪ ನಿನಗೊಂದು ಮಗು ಇರಬೇಕಿತ್ತು. ದೇವರು ಅನ್ಯಾಯ ಮಾಡಿಬಿಟ್ಟ. ಹೇಳೆ ಏನಾಯಿತೆ?”

ಅಯ್ಯ, ಇವಳೆನೇನೊ ಯೋಚಿಸ್ತಿದ್ದಾಳೆ. ಮಕ್ಕಳಂತೆ ಮಕ್ಕಳು: ಹತ್ತಿರ ಬಂದರೆ ಹೇಸಿಗೆಯಾಗುತ್ತೆ ನನಗೆ, ಇದ ಬೇರೆ ಕೇಡು. ಮದುವೆ ಆಗದಿರೊ ಇವಳ ಹತ್ತಿರ ಈ ವಿಷಯ ಎಲ್ಲ ಹೇಗೆ ಹೇಳೋದು? ಬೇಡ ಈ ವಿಷಯ ಮಾತಾಡೋದೆ ಬೇಡ. ದಾಂಪತ್ಯ ಅಂದರೆ ಏನು ಅಂತ ಗೊತ್ತಿಲ್ಲದ ಇವಳಿಗೆ ನನ್ನ ಭಾವನೆಗಳು ಹೇಗೆ ಅಥ೯ವಾಗುತ್ತದೆ. ಹೃದಯದಿಂದ ಹುಟ್ಟಿ ಬಂದ ಭಾವನೆಗಳ ಸಾಂಗತ್ಯದ ಪ್ರೀತಿಯ ಸವಿ ಕ್ಷಣಗಳು ಕನಸಾಗೆ ಉಳಿತು ಅಂತ ಹೇಳಲಾ? ಇವಳಿಗೆ ಅಥ೯ವಾಗದ ನನ್ನನ್ನು ಜೀವಂತವಾಗಿ ಕೊಲ್ಲುವ ವಿಚಾರ ನನ್ನೊಂದಿಗೆ ಸತ್ತು ಹೋಗಲಿ. ಯಾವ ಭಾವನೆಗಳಿಲ್ಲದ ಒಬ್ಬ ವಿಚಿತ್ರ ವ್ಯಕ್ತಿ ಅಂತ ಹೇಳಿ ಮತ್ತೆ ಮತ್ತೆ ನೂರೆಂಟು ಪ್ರಶ್ನೆ ಕೇಳುವಂತೆ ಮಾಡುವ ಬದಲು ಹೇಳದೆ ಇರೋದೆ ವಾಸಿ. ಗುಟ್ಟು ಗುಟ್ಟಾಗೆ ಇರಲಿ!

“ಅಂತೂ ನಾ ಹೇಳೊವರೆಗೂ ಬಿಡೋಲ್ಲ ಅಂದಾಂಗಾಯಿತು. ಅದೆ ಯಾಕೊ ನನಗೆ ಇವರ ಜೊತೆ ಬದುಕೋದು ಕಷ್ಟ ಆಗ್ತಿದೆ ಕಣೆ. ದೂರ ಬಹುದೂರ ಹೋಗಿ ಒಂಟಿಯಾಗಿ ಇದ್ದುಬಿಡೋಣ. ಯಾರೂ ಬೇಡ. ನಾನಾಯಿತು, ನನ್ನ ಕೆಲಸವಾಯಿತು ಅಂತಿದ್ದು ಬಿಡೋಣ ಅನ್ನಿಸ್ತಿದೆ. ಯಾವ ಕೆಲಸ ಮಾಡೋಕು ಬೇಜಾರು. ಯಾವ ಉತ್ಸಾಹ ಇಲ್ಲ. ಎಷ್ಟು ದಿನ ಅಂತ ಹೀಗೆ ಬದುಕು ಸವೆಸಲಿ? ಇಷ್ಟವಿಲ್ಲದ ಬದುಕು ಬಾಳೋದು ಕಷ್ಟ ಆಗ್ತಿದೆ. ಆದರೆ ನನಗೆ ನನಗೆ ಧೈರ್ಯ ಇಲ್ಲ. ಸಮಾಜಕ್ಕೆ ಅಂಜತೀನಿ. ಸಂಬಂಧಿಕರಿಗೆ ಅಂಜತೀನಿ. ನಾನು, ನಾನು ಸತ್ತೋಗಬೇಕು ಅನಿಸ್ತಿದೆ. ಆಗ ಯಾವ ತೊಂದರೆನೂ ಇಲ್ಲ.”

ಅಳುವ ಹಂತದಲ್ಲಿ ಗೆಳತಿಯ ಸಾಂತ್ವನ ಇನ್ನೂ ಒತ್ತರಿಸಿ ಬರುತ್ತಿದೆ ದುಃಖ. ಹೆಚ್ಚಿನ ಬೆಳಕಿಲ್ಲದ ಪಾರ್ಕ್. ಇವರ ಕಡೆ ಯಾರ ಗಮನವಿಲ್ಲ ಸದ್ಯ. ಅಲ್ಲೊಂದು ಸಂಗೀತದ ಸಂಜೆ ಶುಕ್ರವಾರದ ಹೆಸರಲ್ಲಿ ಕಾಲ ಕಳೆಯಲು ಬಂದವರಿಗೊಂದು ಮನರಂಜನೆ. ಅದರಲ್ಲಿ ತಲ್ಲೀನ ಬಂದ ಜನ ತಾಪತ್ರಯ ಬದಿಗಿಟ್ಟು ಕುಳಿತಂತಿದೆ.

“ಏಯ್ ಮಾರಾಯ್ತಿ ಬಿಡ್ತು ಅನ್ನು. ಇಷ್ಟೆಲ್ಲಾ ಮನಸ್ಸಿನಲ್ಲಿ ಬೇಜಾರು ಇಟ್ಟುಕೊಂಡು ಹೇಗೆ ಸಂಸಾರ ಮಾಡ್ದೆ. ಈಗ್ಯಾಕೆ ಇಷ್ಟು ವಷ೯ದ ಮೇಲೆ ಈ ರೀತಿ ಯೋಚನೆ ನಿನಗೆ. ಅವನನ್ನು ಅಥ೯ ಮಾಡಿಕೊಂಡು ಹೊಂದಿಕೊಂಡು ಬದುಕೆ. ಸ್ವಲ್ಪ ಮನಸ್ಸನ್ನು ಹತೋಟಿಯಲ್ಲಿಡಲು ಪ್ರಯತ್ನ ಮಾಡೆ.”

ಅವಳ ಮಾತು ಏನನ್ನಿಸಿತೊ ಏನೊ. ತಟ್ಟನೆ ಗೆಳತಿ ಸುಮಾಳನ್ನು ಕೇಳುತ್ತಾಳೆ.

“ಅಲ್ಲ ಕಣೆ ನೀ ಯಾಕೆ ಮದುವೆ ಆಗಲಿಲ್ಲ?”

ಅನಿರೀಕ್ಷಿತವಾಗಿ ಬಂದ ಪ್ರಶ್ನೆ. ಹಿಂದೆ ಎಷ್ಟೋ ಸಾರಿ ಇವಳು ಕೇಳಿದ್ರು ಹೇಗೊ ಜಾರಿಕೊಂಡಿದ್ದೆ. ಇವತ್ತೇನು ಮಾಡೋದು. ಇವಳ ಮನೆಯಲ್ಲಿ ಇವತ್ತೆಲ್ಲ ಇರಬೇಕು. ಬಿಡೋಳಲ್ಲ. ಆಗಲೆ ವಾಚ್ ಮನ್ ಗೇಟು ಸೌಂಡ ಮಾಡಬೇಕಾ. ಸದ್ಯ ಬೀಸೊ ದೊಣ್ಣೆ ತಪ್ಪಿದರೆ ಸಾವಿರ ವಷ೯ಆಯುಷ್ಯ.

“ಬಾ ಹೋಗೋಣ. ಗೇಟು ಹಾಕುವ ಸಮಯ ಆಯಿತು.”

ಮನೆಗೆ ಬಂದಾಗ ಹತ್ತು ಗಂಟೆ.

“ಟೀವಿ ಹಾಕಿ ಸ್ವಲ್ಪ news ಕೇಳೋಣ. ಹಾಕೆ ಟೀವಿ 9″.

ಏನೇನೋ ರಾಜಕೀಯ ಸುದ್ದಿಗಳ ಸರಮಾಲೆ. ಇನ್ನೇನು ಟೀವಿ ಬಂದ ಮಾಡಬೇಕು ಅನ್ನುವಷ್ಟರಲ್ಲಿ; ಇದೀಗ ಬಂದ ಸುದ್ದಿ; ಎರನಾಕುಲಂನಿಂದ ಬೆಂಗಳೂರಿಗೆ ಬರುತ್ತಿದ್ದ ರೈಲಿನ ದುರಂತ ಸಮಾಚಾರ.

ಇದ್ದಕ್ಕಿದ್ದಂತೆ ಪದ್ದಿ ಜೋರಾಗಿ ಕಿರುಚಿಕೊಂಡ ಸದ್ದು. ಏನಾಯಿತು ಅಂತ ಎದ್ದು ಹೋಗಿ ನೋಡಿದರೆ ಹಲ್ಲಿ ಗೋಡೆ ಮೇಲೆ ಲೊಚ ಗುಡುತ್ತಿದೆ. ಇವಳಿಗೆ ಅವಳ ಅವಸ್ಥೆ ಕಂಡು ನಗಬೇಕೊ ಬೈಯ್ಯಬೇಕೊ ಗೊತ್ತಾಗಲಿಲ್ಲ‌

” ತತ್ತರಕಿ ಇದೇನಾ ನಿನ್ನ ಧೈರ್ಯ? ಹಲ್ಲಿ ಕಂಡರೆ ಹೆದರುವವಳು ನೀನು ಒಂಟಿಯಾಗಿ ಬೇರೆ ಇರ್ತೀಯಾ? ನಿನ್ನ ತಲೆಗೊಂದಿಷ್ಟು. ಅಲ್ಲ ಕಣೆ ಅಡಿಗೆ ಮನೆಗೆ ಯಾಕೆ ಬಂದೆ? ಮನೆಗೆ ಬಂದವಳೆ?”

“ಹಾಲು ಕಾಯಿಸಿಡೋಣ ಅಂತ. ಸ್ವಿಚ್ ಹಾಕಲು ಹೋದೆ ಹಲ್ಲಿ ಮೇಲೆ ಕೈ ಇಟ್ಟೆ. ನನಗೆ ಹಲ್ಲಿ ಕಂಡರೆ ಮೊದಲೆ ಭಯ. ಹೆಗಲ ಮೇಲೆ ಪಟಕ ಅಂತ ಜಿಗಿತಾ, ಭಯದಿಂದ ಕಿರಿಚಿಬಿಟ್ಟೆ. ನೀನು ನಮ್ಮ ಮನೆಗೆ ಬರ್ತೀನಿ ಅಂತ ಫೋನ ಮಾಡಿದ್ಯಲ್ಲ, ಆಮೇಲೆ ಇವರೂ ಫೋನ್ ಮಾಡಿದ್ರು. ಇವತ್ತು ರಾತ್ರಿನೆ ಬರ್ತಾ ಇದ್ದೀನಿ. ಸ್ವಲ್ಪ ಲೇಟ್ ಆಗುತ್ತೆ. ಅದಕೆ ಬಂದಾಗ ಹಾಲಾದರೂ ಕೊಡೋಣ ಅಂತ.”

“ಹೌದು ನಿನ್ನ ಗಂಡ ಎಲ್ಲಿಗೋಗಿರೋದು.”

“ತಮಿಳುನಾಡು. ಟ್ರೇನಲ್ಲಿ ಆಗಲೆ ಹೊರಟಿದಾರೆ. ರಾತ್ರಿ ಹನ್ನೆರಡೂವರೆ ಆಗಬಹುದು ಅಂದ್ರು.”

ಅವಳ ಮಾತು ತಲೆ ಸುತ್ತಿ ಬೀಳುವಂತಾಯಿತು. ಸೀದಾ ಬಂದು ಟೀವಿ ವಾಲ್ಯೂಮ್ ಜಾಸ್ತಿ ಮಾಡಿ ದುರಂತ ನಡೆದ ರೈಲಿನ ಚಿತ್ರಣ ನೋಡುತ್ತ ಕುಳಿತಳು. ಪದ್ದಿ ಅವಳ ಪಾಡಿಗೆ ಅವಳು ಇನ್ನೂ ಅಡಿಗೆ ಮನೇಲೆ ಇದ್ದಾಳೆ‌. ಟೀವಿಯಲ್ಲಿ ಬಂದ ಸುದ್ದಿ ಬೋಗಿ ಬೋಗಿನೆ ಸುಟ್ಟು ಉರಿಯುತ್ತಿರುವ ದೃಶ್ಯ, ಜನರ ಕಿರುಚಾಟ, ಹಾಹಾಕಾರ.

ಮಂತ್ರ ಮುಗ್ದವಾಗಿ ನೋಡುತ್ತಲೆ ಇದ್ದಾಳೆ . ಧಾರಾಕಾರವಾಗಿ ಕಣ್ಣೀರು ಇಳಿಯುತ್ತಿದೆ. ಉಸಿರೆ ನಿಂತು ಹೋಗುವಷ್ಟು ಗಂಟಲು ಕಟ್ಟಿ ಬರುತ್ತಿದೆ. ಫಸ್ಟ್ ಕ್ಲಾಸನ ಎಲ್ಲಾ ಭೋಗಿಗಳೂ ಪೂತಿ೯ ಬೆಂಕಿಯಿಂದ ಉರಿದು ಹೋಗುತ್ತಿದೆ. ಯಾರೊಬ್ಬರು ಬದುಕುಳಿಯುವ ಸಾಧ್ಯತೆ ಇಲ್ಲ. ಇದರಲ್ಲಿ ಬೆಂಗಳೂರಿನಲ್ಲಿ ವಾಸವಾಗಿರುವವರೆ ಹೆಚ್ಚಿನ ಪ್ರಯಾಣಿಕರಿದ್ದಾರೆ……‌‌‌‌‌.. ವರದಿ ಬರುತ್ತಲೆ ಇದೆ. ಕಿವಿ ಮಂದವಾಗಿ ಏನೂ ಕೇಳಿಸದ ಹಂತ. ತನ್ನನ್ನೇ ಮರೆತು ಕುಳಿತಂತಿದೆ ಅವಳ ಅವಸ್ಥೆ.

“ಸುಮ, ಸುಮ ಏನಾಯಿತೆ, ಯಾಕೆ ಅಳುತ್ತ ಕೂತಿದಿಯಾ?”

ಮೌನವಾಗಿ ಟೀವಿ ಕಡೆ ಕೈ ತೋರಿಸುತ್ತಾಳೆ. ರೈಲು ದುರಂತದ ವಿವರ. ಅದೆಷ್ಟು ಹೊತ್ತು ನೋಡುತ್ತಿದ್ದರೊ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಕರೆಂಟು ಕಟ್ ಆಯಿತು. ಜೋರಾಗಿ ಬೀಸುತ್ತಿದೆ ಗಾಳಿ. ಮಳೆ ಬರುವ ಸೂಚನೆ. ಕತ್ತಲೆಯಲ್ಲಿ ಕುಳಿತ ಇಬ್ಬರು ಗೆಳತಿಯರಿಗೆ ದುಃಖ ಯಾರನ್ನು ನುಂಗುತ್ತಿದೆ ತಿಳಿಯುತ್ತಿಲ್ಲ.

ಹನ್ನೆರಡಾಯಿತು, ಒಂದು ಗಂಟೆಯಾಯಿತು. ಪ್ರತಾಪನ ಸುಳಿವಿಲ್ಲ. ಅಸಹಾಯಕತೆ ಇಬ್ಬರಲ್ಲು.

“ಪದ್ದಿ, ನಿನ್ನ ಮೊಬೈಲು ಕೊಡು. ಪ್ರತಾಪನ ಮೊಬೈಲ್ ರಿಂಗಾಗುತ್ತಿಲ್ಲ. ಏನೆ ಮಾಡೋದೀಗ….. ಇದೇ ಟ್ರೈನ್ಗೆ ಬರ್ತೀನಿ ಹೇಳಿದ್ದು ಕನ್ಫಮಾ೯? ಅಯ್ಯೋ ಎಂತ ಕೆಲಸ ಆಗೋಯ್ತೆ. ಮುಗೀತು, ಎಲ್ಲ ಮುಗೀತು. ಜೋರಾದ ಸ್ವರದಲ್ಲಿ ಸುಮಳ ಅಳು.”

ಪದ್ದಿಗೆ ಯಾಕೀತರ ಇವಳು ಹೊಯ್ಕತಾ ಇದಾಳೆ ಅಥ೯ ಆಗುತ್ತಿಲ್ಲ. ಕೇಳಿದರೆ ಹೇಳುತ್ತಲೂ ಇಲ್ಲ. ಅತ್ತು ಅತ್ತು ಸಮಾಧಾನ ಮಾಡಿಕೊಳ್ಳಲಿ. ಅವಳಷ್ಟಕ್ಕೆ ಬಿಟ್ಟು ಅಲ್ಲೆ ದಿಂಬಿಗೆ ತಲೆ ಕೊಡುತ್ತಾಳೆ. ಅವಳಿಗೆ ತನ್ನ ಗಂಡನ ಬಗ್ಗೆ ಚಿಂತಿಸುವಷ್ಟು ಮನಸ್ಸೂ ಇಲ್ಲ. ನಿರ್ಲಿಪ್ತ ಭಾವನೆ. ಇದ್ದರೂ ಒಂದೆ ಇಲ್ಲದಿದ್ದರೂ ಒಂದೆ ಅನ್ನುವ ಹಂತ ತಲುಪಿ ಆಗಿದೆ. ಮನಸ್ಸು ರೋಸಿ ಹೋದ ಜೀವನ. ಕನಸುಗಳು ಸತ್ತ ಜೀವನ. ನಿದ್ದೆಗೆ ಜಾರಿದ್ದು ಗೊತ್ತಾಗಲಿಲ್ಲ.

ಫೋನ್ ರಿಂಗಾಗುತ್ತಿದೆ. ದಡ್ ಅಂತ ಎಚ್ಚರವಾದಾಗ ಸಮಯ ಆಗಲೆ ಏಳು ಗಂಟೆ.

“ಹಲೋ, ಹಲೋ ಯಾರು ಪದ್ಮಾವತಿಯವರ? ನಿಮ್ಮ ಗಂಡನ ಹೆಸರು ಪ್ರತಾಪ ಅಂತನಾ? ಅವರ ಅಡ್ರೆಸ್ನಲ್ಲಿ ಈ ಫೋನ್ ನಂಬರ್, ಹೆಸರು ಇದೆ. ನೀವು ನಿಮ್ಮ ಗಂಡನ ಡೆಡ್ಬಾಡಿ ಗುರುತಿಸಿ ತೆಗೆದುಕೊಂಡು ಹೋಗಬಹುದು. ನಿನ್ನೆ ನಡೆದ ರೈಲು ದುರಂತದಲ್ಲಿ ಬಾಡಿ ಸುಟ್ಟು ಕರಕಲಾಗಿದೆ. ಗುರುತಿಸಲು ಸಾಧ್ಯ ವಾಗುತ್ತಾ ಬಂದು ನೋಡಿ………”

ಆ ಕಡೆಯಿಂದ ಮಾತು ಆಡುತ್ತಿದ್ದರೆ ಉತ್ತರಿಸಲು ಆಗುತ್ತಿಲ್ಲ ಸುಮಾಗೆ…. ಫೋನಿಗಾಗಿ ಕಾಯುತ್ತಿದ್ದವಳು ಅವಳು. ಅಳು ಬತ್ತಿ ಹೋಗಿದೆ. ಪದ್ದಿ, ನಿದ್ದೆಯಲ್ಲಿದ್ದಾಳೆ. ಇವಳಿಗೆ ನಾನು ಹೇಗೆ ಹೇಳಲಿ.  ಬೇಡ ಏನೂ ಹೇಳುವುದೆ ಬೇಡ.  ಎಲ್ಲವೂ ನನ್ನೊಂದಿಗೆ ಸತ್ತು ಹೋಗಲಿ.

ಇವಳ ಗಂಡನೆ ಹಿಂದೆ ನಾನು ಪ್ರೀತಿಸಿ ನಮ್ಮಿಬ್ಬರ ಮದುವೆಗೆ ಜಾತಿ ಅಡ್ಡ ಬಂದು ಮದುವೆ ತಪ್ಪಿದ್ದು. ಕೀಳು ಜಾತಿ ನನ್ನದು. ವಯಸ್ಸಾಗುತ್ತಿರುವ ಹೆತ್ತವರಿಗೆ ದುಃಖ ಕೊಡಲಾಗದೆ ಅವರು ತೋರಿಸಿದ ಹುಡುಗಿಗೆ ತಾಳಿ ಕಟ್ಟಿದ ಮಹಾಶಯ. ನಾನು ನನ್ನನ್ನು ಕಳೆದುಕೊಂಡು ಮುಖವಾಡ ಹೊತ್ತು ಬದುಕುತ್ತಿರುವ ಕಥೆ. ಯಾರಿಗೂ ಮತ್ತೆ ಮನಸ್ಸು ಕೊಡದೆ ಇಷ್ಟು ವಷ೯ವಾದರು ಅವನನ್ನು ನನ್ನ ಹೃದಯದಲ್ಲಿ ಪೂಜಿಸುತ್ತಿರುವುದು. ಅವನ ಒಳ್ಳೆ ತನ, ಮನಸ್ಸು ಇವಳು ಅಥ೯ ಮಾಡಿಕೊಳ್ಳದೆ ಜೀವನ ಹಾಳು ಮಾಡಿಕೊಂಡಿದ್ದು. ನಮ್ಮಿಬ್ಬರ ಮದ್ಯೆ ಯಾವ ಸಂಬಂಧವೂ ಇಲ್ಲದೆ ಕೇವಲ ನೆನಪಲ್ಲೆ ಬದುಕುತ್ತಿರುವುದು. ಅವನು ಒಳ್ಳೆಯ ವ್ಯಕ್ತಿ ಆಗಿರೋದರಿಂದಲೆ ನೀನು ಹೇಗೇ ನಡೆದುಕೊಂಡರು ಇದುವರೆಗೂ ನಿನ್ನೊಂದಿಗೆ ಇದ್ದ. ಇನ್ನು ಏನು ಹೇಳಿದರೆ ಏನು ಪ್ರಯೋಜನ. ಆಗಬಾರದ್ದು ಆಗಿ ಹೋಯಿತು. ಅನುಭವಿಸು ನನ್ನಂತೆ ಬದುಕೆಲ್ಲ ಖಾಲಿ ಹಾಳೆಯಂತೆ……..!
19-4-2016 12.39pm
(Published in Sampada net)

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s