ವಿಧ ವಿಧ ಮನಸ್ಥಿತಿಯಲ್ಲಿನ ಕವನಗಳ ಗೊಂಚಲು

image

ಬದಲಾವಣೆ

ಇಟ್ಟಿದ್ದೆ ನಾನು
ಹಳೆ ಪೇಪರ ಕಂತೆ
ಅಂದು
ಕಥೆ, ಕವನ ಅಂತ
ಆಯ್ಕೆಗಳ ಪಟ್ಟಿ
ಬೆಳಿತಾನೆ ಇತ್ತು.

ಇಂದು ಯಾಕೊ
ಕಂತೆ ತಿರುವಿದೆ
ಕಣ್ಣಿಗೆ ಬಿತ್ತು
ಕೇವಲ ಅವರೆ ಕಾಳಿನ
ತರಾವರಿ ತಿಂಡಿಗಳು.

ವ್ಯತ್ಯಾಸ ಇಷ್ಟೇ
ಮನಸ್ಸಿನ ಅಭಿರುಚಿ ಬದಲಾಗಿ
ಆಸಕ್ತಿ ಕಳೆದು ಹೋಗಿ
ಕಾಣುವುದು ಇಷ್ಟು
ಇದೇ ನನ್ನ ಪ್ರಪಂಚ.
18-10-2010

ನಿರಾಸೆ

ಮನಸ್ಸು ಖಾಲಿ ಡಬರಿ
ಒಳಗೆಲ್ಲ ಒದ್ದಾಡುವ ಡಬಡಬ ಸದ್ದು
ಕಿವಿ ಕಿತ್ತು ಬರುವ
ಅರಚಾಟ
ಚೀರಾಟ
ಸಂಕಟ
ತೊಳಲಾಟ
ಬರೀ ಶೂನ್ಯ
ಒಡಲೊಳಗೆಲ್ಲ ಬೆಂಕಿ
ಜೀವ ಕುಟ್ಟಿ ಕುಟ್ಟಿ
ಬಡಿದರು ಸಾಯದು
ಈ ಬದುಕು.
31-12-2009.

ನೆನಪು

ಬಿಟ್ಟರೂ ಬಿಡದೆ
ಅಲೆ ಅಲೆಯಾಗಿ ಬಂದು
ನೆನಪುಗಳೆ
ಏಕೆ ಕಾಡುವಿರಿ ನನ್ನ!

ನೀವೆಷ್ಟು ಕಾಡಿ ಬೇಡಿದರೂ
ಬಾರದಿಹನವನು
ಈಗ ದೂರದೂರಿನ
ನೆಂಟನವನು!
7-7-2008.

ನಿನ್ನೆ – ನಾಳೆಗಳ ನಡುವೆ

ಬನ್ನಿ ಬನ್ನಿ ನಿನ್ನೆಗಳೆ
ಒಮ್ಮೆ ಬನ್ನಿ
ಅಗಲಿರುವ ನಮ್ಮವರ
ಹೊತ್ತು ತನ್ನಿ.
ಅವರೆಲ್ಲರೊಡಗೂಡಿ
ಬೆಳೆದವರು ನಾವು
ಈಗ ನಮಗಿಲ್ಲಿ
ಗಾಯವಿಲ್ಲದ ನೋವು.
ಹೇಳಿ ನಿನ್ನೆಗಳೆ
ನೀವೂ ಹೋಗಿ
ಕಾಡದಿರಲಿ ಎಂದೂ
ನಮಗೂ ಬರಬಾರದೆ
ಸಾವು!
4-10-2010

ಅಂತ್ಯ

ಕಾಲನ ಚಕ್ರ ಉರುಳುತ್ತಿದೆ
ಬಂಡಿಯ ಗಾಲಿ ಸವೆಯುತ್ತಿದೆ
ಹೊಸತೇನೂ ಇಲ್ಲ ಜೀವಕ್ಕೆ
ಎಲ್ಲ ಹಳೆಯ ಮರದ ಪಳೆಯುಳಿಕೆ
ಲಡ್ಡು ಹಿಡಿದ ಚಿತ್ತಾರ
ಅಲ್ಲಲ್ಲಿ ತೂತು ಕಂಡ ಮಡಿಕೆ
ಕಿತ್ತು ತಿನ್ನುವ ಹುಳುಗಳ ದಂಡು
ಖಾಲಿಯಾಗುತ್ತಿದೆ ಜೀವ ಜಲ
ಇನ್ನೆಲ್ಲಿ ಉಸಿರ ಹಿಡಿದಿಡುವ ಉತ್ಸಾಹ!
ಬರಿದೆ ಬರಿದಾದ ಠೊಳ್ಳು
ಮೇಲೆಲ್ಲ ಸವರಿದೆ ಮುಲಾಮು
ಬಿರುಗಾಳಿ ಬಂದರೂ
ಬಾರದೆ ಇದ್ದರೂ
ಎಲ್ಲ ಒಂದೆ.
ಕೆನ್ನಾಲಿಗೆಗೆ ಕಾಡೆಲ್ಲ ಕಾಳ್ಗಿಚ್ಚಿಗೆ ಬಲಿ
ಕಾಲನ ಕೋಲು ಬೀಸುತ್ತಿದೆ
ಬೆಂದು ಬೆಂದು
ಎಲ್ಲ ಭೂದಿಯಾಗಿ
ಕರಗಿ ಹೋಗಲಿ
ನನ್ನ ಚಿತಾಭಸ್ಮದಲ್ಲಿ!
15-10-2015 1.25pm

ಮನಸೆಂಬ ಮಾಯೆ

ಮನಸು ಮಾಯೆಯ ಸೊತ್ತು
ಹೊತ್ತಿಲ್ಲ ಗೊತ್ತಿಲ್ಲ
ಮಾತಿಗೂ ಮೌನಕ್ಕೂ
ಗೋಜಲುಗಳ ಗೂಡು
ಎಲ್ಲ ತಿಕಲ್ಮೈಂಡು
ಪರರ ಚಿಂತೆ ಇದಕ್ಕಿಲ್ಲ
ಬುರುಡೆಗೆ ಅನಿಸಿದ್ದೆಲ್ಲ
ಖಾರಿಬಿಡುವ ಆತುರ
ಒಡನೆ ಒಳಗೊಳಗೆ ಬೇಸರ
ಆಡಬಾರದ್ದು ಆಡಿದೆನೆಂಬ
ಹೊಯ್ದಾಟ, ಒದ್ದಾಟ
ಎಲ್ಲ ಹೇಗೆ ಕಟ್ಟಿಹಾಕಲಿ ಇದನ್ನ?
ಇದಕಿಲ್ಲ ತಡೆಗೋಡೆ
ಕೆಲಸ ಕಾಯ೯ ಬಿಟ್ಟು
ವ್ಯಥ೯ ಕಾಲಹರಣ
ಮುಗಿದು ಹೋಗಲಿ ಇಂದೆ
ಇದರ ದಪ೯ ಗಿಪ೯
ಮುಳುಗಿ ಹೋಗಲಿ ಇಂದೆ
ಮಾಯೆಯ ಅಟ್ಟಹಾಸ!
30-10-2015 3.20pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s