ಮಲೆನಾಡಿನ ಮಳೆಗಾಲ.

ಮಲೆನಾಡಿನ ಮಳೆಗಾಲ ಕಂಬಳಿ ಹೊದ್ದು ಬಿಸಿ ಬಿಸಿ ಬಜ್ಜಿ ಚಪ್ಪರಿಸುವ ಆಸೆ ಹುಟ್ಟಿಸುವ ವಾತಾವರಣ. ಜನರನ್ನು ಗದ್ದೆ ತೋಟದ ಕಡೆಗೆ ಕುಡುಗೋಲು, ಕತ್ತಿ, ನೇಗಿಲ ಕಟ್ಟಿ ಹೂಳಲು ರೆಡಿ ಆಗು ; ನಾ ಸುರಿಯುತ್ತೇನೆ ತಂಪನೆಯ ತುಂತುರು ನೀರ ಹನಿ ಎಂದೆಚ್ಚರಿಸುವ ಹಾಗಿರುತ್ತದೆ. ಒಮ್ಮೆ ಮಳೆಗಾಲ ಶುರುವಾಯಿತೆಂದರೆ ಅದು ಪೂತಿ೯ ನಿಲ್ಲುವುದು ದೀಪಾವಳಿ ಮಾರನೆ ದಿನವೆ. ಎಲ್ಲಿ ನೋಡಿದರೂ ವನ ಸಿರಿಯ ಸೊಬಗು ಹಸಿರು ರಾಚಿ ಹೊದ್ದಂತಿರುವ ಗಿಡ ಮರಗಳ ಸೌಂದರ್ಯ ವಣ೯ನಾತೀತ. ಅದೇಕೊ ಮನೆ ಮುಂದಿನ ಗಿಡಗಳಿಗೆ ನಾವು ಹಾಕಿದ ನೀರು ತಾಕೋದಿಲ್ವಾ? ಹೀಗೆ ಎಷ್ಟು ಸಾರಿ ಯೋಚಿಸಿದ್ದೇನೆ. ಮಳೆ ಬಂದರೆ ಗಿಡಗಳ ಕಳೆನೆ ಬೇರೆ. ಮದುವೆಯ ಹೆಣ್ಣು ಕಳೆ ಕಳೆಯಾಗಿರುತ್ತಾಳಲ್ಲ; ಹಾಗಿರುತ್ತದೆ ಮಲೆನಾಡಿನ ದೃಶ್ಯ.

ಮೇ ಹದಿನೈದರ ನಂತರ ಮಳೆಗಾಲ ಶುರುವಾದರೆ ಗದ್ದೆ ಹೂಳಿ ಬಿತ್ತನೆ ಮಾಡಲು ರೈತರಿಗೆ ಪ್ರಶಸ್ತ ಕಾಲ. ಅಟ್ಟದ ಮೇಲಿನ ಗುದ್ದಲಿ, ಪಿಕಾಸು ಕತ್ತಿ ಕುಡುಗೋಲು ಇನ್ನಿತರ ವ್ಯವಸಾಯದ ಸಲಕರಣೆಗಳಿಗೆ ಜೀವ ಬರುತ್ತದೆ. ಅದುವರೆಗೆ ಮಳೆಗಾಲದ ತಯಾರಿಯೆಲ್ಲ ಹೆಂಗಳೆಯರದು. ಕೊಚ್ಕಾಯಿ ಮಾವಿನ ಕಾಯಿ, ಹಲಸಿನ ತೊಳೆ ಉಪ್ಪಾಕಿ ಭರಣಿ ತುಂಬಿ ಬಟ್ಟೆ ಕಟ್ಟಿ ಒಪ್ಪ ಮಾಡಿ, ಜೀರಿಗೆ ಮಾವಿನಕಾಯಿ ತಂದು ಬರಣಿ ತುಂಬಾ ಶುಚಿ ರುಚಿಯಾದ ಮಿಡಿ ಉಪ್ಪಿನಕಾಯಿ ಹಾಕಿ ಎಲ್ಲಿ ಹುಳ ಗಿಳ ಆಗಿಬಿಟ್ರೆ ಅನ್ನೊ ಆತಂಕದಲ್ಲಿ ಹೆಚ್ಚಿನ ಮುತುವಜಿ೯ಯಲ್ಲಿ ಬಿಗಿಯಾಗಿ ಬಟ್ಟೆ ಕಟ್ಟಿ “ಬೆಚ್ಚಗಿನ ಜಾಗದಲ್ಲಿ ಎತ್ತಿಡವ್ರೋ , ಮತ್ತೆ ಹೇಳಿದ್ನಿಲ್ಲೆ ಹೇಳಡಿ” ಎಂದೆಚ್ಚರಿಸಿ ಗಂಡನಿಂದ ವಷ೯ಕ್ಕೆ ಬೇಕಾದಷ್ಟು ಪ್ರಾವಿಜನ್ ಸಾಮಾನು ತರಿಸಿ ಬಿಸಿಲಿಗೆ ಹಾಕಿ ಒಣಗಿಸಿ ಡಬ್ಬಿ ತುಂಬಿ ಎತ್ತಲಾಗದ ಡಬ್ಬಿಯನ್ನು ಮಕ್ಕಳ ಹತ್ತಿರವೊ ಇಲ್ಲ ಗಂಡನ ಕೈಯ್ಯಲ್ಲೊ ನಡುಮನೆಯ ನಾಗಂದಿಗೆಯ ಮೇಲೆ ಜೋಡಿಸಿ ” ಆ ಡಬ್ಬ ಇತ್ಲಾಗಿಡು ಎದುರು ಖಚಿ೯ಗೆ ಬೇಕು ಹೇಳಿ ತೆಗೆದಿಟ್ಟಿದ್ದಿ ಹೋದ ವಷ೯ದ್ದು , ಇಕ ಇದು ಹಪ್ಪಳ ಸಂಡಿಗೆ ಡಬ್ಬ ಎದುರಿಗೆ ಕೈಗೆ ಸಿಕ್ಕ ಹಂಗೆ ಇಡು ಪ್ರತೀ ಸತಿ೯ ನಿಂಗ್ಳ ಕರೆಯಲ್ಲಾಗ್ತಿಲ್ಲೆ” ಎಂದು ಮಾತಾಡಲು ಅವಕಾಶ ಕೊಡದೆ ಮನೆಯ ದಭಾ೯ರದ ಕೀಲಿ ಕೈ ಅಲ್ಲಾಡಿಸುವ ಗತ್ತು ಒಂದೆಡೆಯಾದರೆ ; ಗಂಡು ಆಳುಗಳ ಹಿಡಿದು ಮಳೆಗಾಲದಲ್ಲಿ ಉರುವಲಿಗೆ ಬೇಕಾಗುವ ಕಟ್ಟಿಗೆ ಮರೆಯಲ್ಲಿ ಒಪ್ಪವಾಗಿ ಜೋಡಿಸಿಡುವ ಹಳ್ಳಿಯ ಕೈಚಳಕದ ಅಂದ ನೋಡಿಯೆ ಅನುಭವಿಸಬೇಕು. ಕೊಟ್ಟಿಗೆಯ ಜಾನುವಾರುಗಳು ಮನೆಯ ಮಕ್ಕಳೆಂದು ಪರಿಗಣಿಸುವ ಮಂದಿ ಹಳ್ಳಿ ಮಂದಿ. ಅವುಗಳಿಗೆ೦ದು ಪೇರಿಸಿಟ್ಟ ಬಿಳಿಹುಲ್ಲು,ಕೊಟ್ಟಿಗೆ ಅಟ್ಟಕ್ಕೆ ಸಾಗಿಸಿ ಹಿಂಡಿ ಇತ್ಯಾದಿ ಕೂಡ ಮಳೆಗಾಲದ ಶೇಖರಣೆಯ ದಾಸ್ತಾನಿನಲ್ಲಿ ಸೇರಿಸುವುದು ಒಂದೆಡೆಯಾದರೆ, ಮನೆ ಮತ್ತು ಕೊಟ್ಟಿಗೆಯ ಸೈಡಲ್ಲಿ ಮಳೆ ಜಡಿ ಹೊಡೆಯಬಾರದೆಂದು ಅಡಿಕೆ ಸೋಗೆ ಅಥವಾ ಹಾಳೆಯ ತಟ್ಟಿ ಒಪ್ಪವಾಗಿ ಜೋಡಿಸಿ ನೆಲ ತಾಗುವ ಕೊನೆಯಲ್ಲಿ ಕತ್ತರಿಸಿದ ಸ್ಟೈಲು ಈಗಿನ ಹೆಣ್ಣು ಮಕ್ಕಳ ಬಾಪ್ ಕಟ್ಟಿನಂತೆ ಓರಣವಾಗಿರುತ್ತದೆ. ಪ್ರತಿಯೊಂದು ಕೆಲಸದಲ್ಲಿ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಅವರ ಶೃದ್ಧೆ, ಭಕ್ತಿಗೆ ಮೆಚ್ಚಬೇಕು.

ಮಳೆಗಾಲದ ತುಂತುರು ಹನಿಗೆ ಚೀಲದಲ್ಲಿ ಮಣ್ಣಿನಲ್ಲಿ ಹೂತಿಟ್ಟ ಡೇರೆ ಗೆಡ್ಡೆ, ನೆಲದಲ್ಲಿಯ ಕೆಸುವಿನ ಗಡ್ಡೆ ಚಿಗುರಿದಾಗ ಹೆಂಗಸರ ಮುಖ ಇಷ್ಟಗಲ. ತಾವೇ ಸ್ವತಃ ಬುಡ ಬಿಡಿಸಿ ಕೊಟ್ಟಿಗೆ ಗೊಬ್ಬರ ಹಾಕಿ, ಮನೆ ಗೋಡೆ ಸೈಡಿಗೆ ಸೇವಂತಿಗೆ ಗಿಡ ಸ್ಥಾನ ಪಡೆದರೆ, ಡೇರೆ ಗಿಡ ನೆಟ್ಟು ಏರು ಓಳಿ ಮಾಡಿ ಗೂಟ ಕೊಟ್ಟು ವಿಧ ವಿಧ ಅಂದದ ಹೂವಿನ ಸ್ವಾಗತಕ್ಕೆ ಕಾಯುತ್ತ, ಊರ ಅಕ್ಕ ಪಕ್ಕದ ಮನೆಯ ಹೆಂಗಸರೊಂದಿಗೆ ಕಾಂಪಿಟೇಶನ್ ಊರಿಗೆ ಹೋದಾಗೆಲ್ಲ ಕಣ್ಣಿಗೆ ಕಟ್ಟಿದಂತಿರುತ್ತದೆ. ಹಳ್ಳಿಯ ಸುತ್ತಾಡಿ ಬರಲು ಇದೆ ಪ್ರಶಸ್ತ ಕಾಲ. ಶ್ರಾವಣ ಮಾಸದಿಂದ ಶುರುವಾಗುವ ಹಬ್ಬ ಹುಣ್ಣಿಮೆಗಳಿಗೆ ತಾಜಾ ಹೂವೂ ತರಕಾರಿಗಳ ಮೆರವಣಿಗೆ. ನೋಡಲು ಎರಡು ಕಣ್ಣು ಸಾಲದು.

ತೋಟಕ್ಕೆ ಮದ್ದು ಹೊಡೆಯುವ, ಅಯ್ಯೋ ಕೊಳೆ ಬರದೆ ಇದ್ರೆ ಸಾಕೆನ್ನುವ ಆತಂಕದ ಮನ ಹೊತ್ತ ರೈತ ಕೃಷಿಯ ಸೇವೆಯೆ ತನ್ನ ಜೀವನವೆಂದು ಬದುಕನ್ನೆ ಮುಡಪಾಗಿಟ್ಟ ಬಾಳು ಹಳ್ಳಿಗಳ ಸುತ್ತಾಡಿಯೆ ಅವರ ಕಷ್ಟ ಅರಿಯಬೇಕು. ವಷ೯ವೆಲ್ಲ ಕಷ್ಟ ಪಟ್ಟು ದುಡಿದ ರೈತ ಅಕಾಲಿಕ ಮಳೆ ಗಾಳಿಗೆ ಫಸಲೆಲ್ಲ ಹಾಳಾದಾಗ ಒದ್ದಾಡುವ ಸಂಕಟ, ನೋವು, ಹತಾಷೆ, ಊಟ ನಿದ್ದೆಯಿಲ್ಲದೆ, ಬಂದ ಬೆಳೆಗೆ ಸರಿಯಾದ ಬೆಲೆ ಸಿಗದೆ ನಿರಾಸೆಯಿಂದ ಕಣ್ಣೀರಿಡುವ ಸ್ಥಿತಿ ಕಣ್ಣಾರೆ ನೋಡಿ ಅನುಭವಿಸಿದ ಗಳಿಗೆಗಳು
ಯಾವತ್ತೂ ಮರೆಯಲು ಸಾಧ್ಯವಿಲ್ಲ. “ಈ ವಷ೯ ಯಮ್ಮಲ್ಲಿ ಶುಭ ಕಾಯ೯ ಮಾಡಲ್ಲಾಗ್ತಿಲ್ಲೆ, ದುಡ್ಡು ಬೇಕಲ” ಆತ್ಮೀಯರಲ್ಲಿ ಹೇಳಿಕೊಂಡು ಕೊನೆಯಲ್ಲಿ ನಿಟ್ಟುಸಿರು. ಮದುವೆಗೆ ನಿಂತ ಮಕ್ಕಳ ಮನಸ್ಸು ಅಪ್ಪನ ಮಾತಿನಿಂದ ಮುದುಡುವುದು ಸಾಮಾನ್ಯ.

ಆದರೆ ಈ ಮಳೆಗಾಲದಲ್ಲಿ ಶಾಲೆಗೆ ಹೋಗುವುದು ಅಂದರೆ ಖುಷಿನೂ ಹೌದು ಬೇಜಾರೂ ಹೌದು. ಯಾಕೆಂದರೆ ಮಳೆ ಚಳಿಗೆ ಬೆಚ್ಚಗೆ ಕಂಬಳಿ ಹೊದ್ದು ಮಲಗೋದು, ಬೆಳಗಿನ ನಿದ್ದೆ ತುಂಬ ಸುಃಖ ಕೊಡುತ್ತದೆ. ಅದರಲ್ಲೂ ಆಯಿ ಮಾಡಿದ ಸೌತೆಕಾಯಿ ತೆಳ್ಳವು ನೀರ್ ಬೆಲ್ಲ ತುಪ್ಪ ಕಲೆಸಿ ಬಿಸಿ ಬಿಸಿಯಾಗಿ ತಿನ್ನೋದು ಅದೆಷ್ಟು ತಿಂದೆ ಅನ್ನುವ ಗೊಡವೆಗೆ ಹೋಗದೆ ಕೊನೆಯಲ್ಲಿ ಸ್ವಲ್ಪ ಹಿಟ್ಟಿಗೆ ಬೆಲ್ಲ ಹಾಕಿ ಸಿಹಿ ದೋಸೆ ತುಪ್ಪ ಹಾಕಿ ಬೇಯಿಸಿದ್ದು ತಿಂದ ರುಚಿ ನೆನಪಾಗಿ ಈಗಲೂ ಬಾಯಲ್ಲಿ ನೀರೂರುತ್ತೆ. ಆದ್ರೆ ಮಾಡುತ್ತಿದ್ದ ಕೈ ಈಗಿಲ್ಲ.

ಹಾಗೆ ಖುಷಿ ಕೊಟ್ಟಿದ್ದು ಅಂದರೆ ಹೈಸ್ಕೂಲಿಗೆ ಒಂದೂವರೆ ಮೈಲು ನಡೆದು ಹೋಗುವಾಗ ದಾರಿಯಲ್ಲಿ ಸಿಗುವ ಹೊಳೆಯಲ್ಲಿ ಕಾಲಾಡಿಸ್ತಾ ರಸ್ತೆಯೆ ನದಿಯಾಗಿ ತೂಬು ಕೊರೆದ ಸಂದಿಗಳಲ್ಲಿ ನುಗ್ಗಿ ನಡೆಯುವ ನೀರಿನ ರಭಸ ಕಪ್ಪೆ ಹಿಡಿಯಲು ಬಂದ ಒಕ್ಕಲಿಗರ ಗಂಡು ಮಕ್ಕಳ ಸಾಹಸ ಮನಸೊ ಇಶ್ಚೆ ನೋಡಿ ಇಷ್ಟವಿಲ್ಲದ ಹೆಜ್ಜೆ ಹಾಕಿ ಶಾಲೆಗೆ ತಡವಾದರೆ ಮೂಲೆಯಲ್ಲಿ ಮುಖ ತಿರುಗಿಸಿ ನಿಲ್ಲಬೇಕಲ್ಲ ಅನ್ನುವ ಹೆದರಿಕೆಯಲ್ಲಿ ಬಿರ ಬಿರನೆ ನಡೆಯುವಾಗ ಬೇಣದಲ್ಲಿ ಮಾನವ ನಡೆದಾಟಕ್ಕೆ ಹುಟ್ಟಿಕೊಂಡ ಅಂಕು ಡೊಂಕು ಕಾಲಾದಿಯಲ್ಲಿ ಪಾಚಿ ಕಟ್ಟಿದ ಮಳೆರಾಯನ ಅವತಾರ ನೋಡದೆ ಸುಯ್ಯ^^^^^^ ಅಂತ ಜಾರಿ ಬಿದ್ದು ಹಾಕಿದ ಸ್ಕಟ೯ ಒದ್ದೆಯಾಗಿ ಅದೆ ಒದ್ದೆ ಅವಸ್ಥೆಯಲ್ಲಿ ಶಾಲೆಯಲ್ಲಿ ಸಾಯಂಕಾಲದವರೆಗೂ ಕುಳಿತು ಬೇಂಚೆಲ್ಲ ಥಂಡಿಯಾಗಿ ದೇಹಕ್ಕೆ ಚಳಿಯಾದಾಗ ಬಿಡುಗಡೆಯ ಗಂಟೆ ಭಾರಿಸುವುದನ್ನೆ ಕಾಯುತ್ತ ಮನೆಗೆ ಓಟ ಕಿತ್ತ ಹಳೆಯ ನೆನಪಾದರೂ ಅದೊಂದು ಖುಷಿಯ ಕ್ಷಣವಾಗಿತ್ತು. ಏಕೆಂದರೆ ಸುತ್ತ ಗೆಳತಿಯರ ತಂಡ ಅಪ್ಪಿ ತಪ್ಪಿಯೂ ಹಳ್ಳಿ ಕಡೆ ಹೈಸ್ಕೂಲಲ್ಲಿ ಹುಡುಗರ ಹತ್ತಿರ ಮಾತಾಡಿದ ನೆನಪಿಲ್ಲದ ಗೆಳತಿಯರ ದಂಡೇ ನನ್ನಿಂದೆ ನೇರಳೆ ಹಣ್ಣು ಕೀಳುವ ಕಸರತ್ತು ಕೊಡೆಯ ಕೊಕ್ಕೆಯಲ್ಲಿ ಅಧ೯೦ಬಧ೯ ಮರ ಹತ್ತಿ ” ಎಲ್ಲ ಅಂಗಿ ಅಗಲ ಮಾಡಿ ಹಿಡಿರೆ ನಾ ಗಲಗಲ ಹೇಳಿ ಉದರಸ್ತಿ ಮೇಲೆ ಯಾರು ನೋಡಡಿ ” ನನ್ನಾಜ್ಞೆಯ ಮಾತು ಪಾಲಿಸುವ ಗೆಳತಿಯರ ನಡುವೆ ಕತ್ತಲಾಗುವ ಮೊದಲೆ ಮನೆ ಸೇರಿಕೊಳ್ಳುವ ಆಗಿನ ನಮ್ಮ ಜವಾಬ್ದಾರಿಯುತ ನಡೆ ಈಗಿನ ಹೆಣ್ಣು ಮಕ್ಕಳು ಸರಿ ರಾತ್ರಿಯವರೆಗೂ ಒಬ್ಬರೆ ತಿರುಗಾಡಿ ಬರುವ ನಡೆ ಯಾಕೊ ತಲೆಯಲ್ಲಿ ಹುಳ ಬಿಟ್ಟಂತಾಗುತ್ತದೆ. ಇದುವರೆಗೂ ಯಾವುದು ಸರಿ ಯಾವುದು ತಪ್ಪು ಅನ್ನುವ ನಿದಾ೯ರ ಇನ್ನೂ ತೆಗೆದುಕೊಳ್ಳಲು ಸಾಧ್ಯ ಆಗುತ್ತಿಲ್ಲ. ಅದು ಆ ಕಾಲಕ್ಕೆ ಇದು ಈ ಕಾಲಕ್ಕೆ ಅಂತ ಸುಮ್ಮನಿರಬೇಕು. ಏಕೆಂದರೆ ಈಗ ಐಟಿ ದಭಾ೯ರ.

ಮಳೆಗಾಲದ ಮನೆಯೊಳಗಿನ ಆಟ ಈಗ ಎಲ್ಲಾ ಗಿರಕಿಹೊಡೆದಾಗಿದೆ. ಹೊಡತ್ಲ ಮುಂದೆ ಬೆಂಕಿ ಕಾಯಿಸ್ತಾ ಹಲಸಿನ ಬೇಳೆ, ಇಡೀ ಗೇರು ಬೀಜ ಸುಟ್ಟು ತಿನ್ನುವ ಮಜಾ ಈಗೆಲ್ಲಿ. ಅಲ್ಲೂ ಟೀವೀದೆ ಹಾವಳಿ. ಹೆಂಗಸರಂತೂ ಮನೆ ಕೆಲಸ, ಕೊಟ್ಟಿಗೆ ಕೆಲಸ ಬೇಗ ಬೇಗ ಮುಗಿಸಿ ಟೀವಿ ದಾರಾವಾಹಿಯೊಳಗಡೆಯೇ ಸೇರಿಕೊಂಡಿರುತ್ತಾರೆ. ಗಂಡಸರು ರಾತ್ರಿ ಹನ್ನೊಂದಾದರೂ ನ್ಯೂವ್ಸ ನೋಡೋದು ಇಲ್ಲ ರಾಜಕೀಯ ಚಚೆ೯ಯನ್ನು ವೀಕ್ಷಿಸುವುದರಲ್ಲಿ ತಲ್ಲೀನ. ಏಕೆಂದರೆ ಹಳ್ಳಿ ಜನ ಈಗ ಬಹಳ ಹೊಸತನ ಮೈಗೂಡಿಸಿಕೊಂಡಿದ್ದಾರೆ.

ಸುಧಾರಿತ ಕೃಷಿಯ ಅಡಿಕೆ ತೋಟದಲ್ಲಿ ಸ್ಪಿಂಕಲರ್ ಕುಣಿತ ಜಾಸ್ತಿ ಆಗಿದೆ. ಸುತ್ತ ಕಾಡಲ್ಲಿ ಅಡ್ಡಾಡಿ ಕುಣಿವ ಮಂಗಗಳು ಅಡಿಕೆ ತೋಟಕ್ಕೆ ಲಗ್ಗೆ ಇಟ್ಟಿವೆ. ಬಾಳೆ ಕಾಯಿ ಗೊನೆ ದಂಟು ನೇತಾಡುತ್ತಿರುತ್ತದೆ; ಬೆಳೆದ ಕಾಯಿಗಳೆಲ್ಲ ಮಂಗನ ಪಾಲು. ಬಾಳೆಕಾಯಿ ಸಂರಕ್ಷಿಸಲು ರೈತರ ಹರ ಸಾಹಸ ಒಂದಲ್ಲಾ ಎರಡಲ್ಲಾ. ಹೈಟೆಕ್ ಮಂಗಗಳು ಮನೆ ಸುತ್ತ ಮುತ್ತಲೂ ಬಂದು ಕಿತಾಪತಿ ಶುರು ಮಾಡಿವೆ. ಇದರ ಮದ್ಯ ವೆನಿಲಾ ಬೆಳೆ ಹೊಸದಾಗಿ ಬಂದು ಕೋಲಾರದಲ್ಲಿ ಎಲ್ಲರೂ ಟೊಮೆಟೊ ಬೆಳೆದು ರೇಟು ಕುಸಿದು ರೋಡಿಗೆ ಚೆಲ್ಲಿದಂತೆ, ಯಾರು ನೋಡಿದರೂ ವೆನಿಲಾ ಬೆಳೆದು ರೇಟಿಲ್ಲದೆ ಸಂಕಟಪಟ್ಟಿದ್ದೂ ಆಗಿದೆ. ಹಾಗೆ ತೋಟದಲ್ಲಿ ಹೊಸದಾಗಿ ಹುಟ್ಟಿಕೊಂಡ ಸೊಳ್ಳೆಗಳ ಹಿಂಡು ನೋಡಿದರೆ ಪಾಪ ಅದು ಹೇಗೆ ಆಳುಗಳು ಕೆಲಸ ಮಾಡುತ್ತಾರೊ ಅನಿಸುತ್ತದೆ. “ಈ ಪರಿ ಸೊಳ್ಳೆ ಮೊದಲಿರಲಿಲ್ಲ. ಇಲ್ಕಾಣಿ ಮೈ ಕೈ ಎಲ್ಲ ದಡಪಲಾಗಿ ರಾತ್ರಿ ಮಲಗುವಾಗ ಎಣ್ಣೆ ಸವರ್ಕಂಡು ಮಲಗೂದು ಆಯ್ತಾ”. ನಿಜ ಊರಿಗೆ ಹೋದಾಗ ಕಂಡ ದೃಶ್ಯ. ಏಲಕ್ಕಿ, ಮೆಣಸಿನ ಬಳ್ಳಿ ಅಪರೂಪವಾಗಿದೆ ರೋಗ ತಗುಲಿ. ಅಡಿಕೆ ಕಾಯಿ ಇಣಚಿಗಳು ರುಚಿ ನೋಡುತ್ತಿವೆ. ಮಂಗಗಳೂ ಧಾಳಿ ಮಾಡ್ತಿವೆ. ಅಡಿಕೆ ಬೆಳೆಗಾರರ ಗೋಳು ಮಲೆನಾಡು ಸುತ್ತಿ ರೈತರ ಮನೆ ಹೊಕ್ಕಾಗಲೆ ಗೊತ್ತಾಗುವುದು.

ಆದರೆ ಕೃಷಿಗೆ ಮಾಡುವ ಕಾಯ೯ ಭಕ್ತಿಯಿಂದ ಮಾಡುತ್ತಲೆ ಇದ್ದಾರೆ. ಕಾಲ ಕಾಲಕಾಲಕ್ಕೆ ಬರುವ ಮಳೆಯೆ ರೈತರ ಜೀವನಾಡಿ. ಮುಂದಿನ ಬೆಳೆ ಕೈ ತುಂಬಾ ಫಸಲು ಕೊಡು ತಾಯಿ ಅಂತ ಪ್ರತಿಯೊಬ್ಬ ರೈತ ಅಂಗಲಾಚಿ ದಿನ ಬೆಳಗಾದರೆ ಮಳೆಯನ್ನೂ ಲೆಕ್ಕಿಸದೆ ಕೊಟ್ಟಿಗೆಗೆ ಹಾಸಲು ಸೊಪ್ಪು ಕಡಿಯಲು ಕಂಬಳಿಕೊಪ್ಪೆ ತಲೆಗೇರಿಸಿ ಹೊರಟರೆ ಗದ್ದೆ ನೆಟ್ಟಿಗೆ, ತೋಟದ ಕೆಲಸಕ್ಕೆ ಬರುವ ಆಳುಕಾಳುಗಳಿಗೆ ದೋಸೆ ಚಾ, ಮಧ್ಯಾಹ್ನದ ಊಟದ ತಯಾರಿ ಹೆಂಗಸರದ್ದು. ರೈತಾಪಿ ಜೀವನ ಸದಾ ಮೈ ತುಂಬಾ ಕೆಲಸ. ಬಿಡುವಿಲ್ಲದ ದುಡಿತ.

ಜೊತೆಗೆ ಸಾಲು ಸಾಲು ಹಬ್ಬಗಳ ಕಾಲ ಬೇರೆ. ಅಲ್ಲಿ ಪ್ರತಿಯೊಂದು ಹಬ್ಬವೂ ಶಾಸ್ತ್ರೋಕ್ತವಾಗಿ ನಡೆಯಬೇಕು. ಶ್ರಾವಣದಲ್ಲಿ ಸತ್ಯನಾರಾಯಣ ಪೂಜೆ ಎಲ್ಲರ ಮನೆಯಲ್ಲಿ ಸಾಮಾನ್ಯ. ಗಣೇಶ ಚತುಥಿ೯ ಮಂಟಪ ಕಟ್ಟುವಲ್ಲಿಯೂ ಕಾಂಪಿಟೇಷನ್. ದಸರಾ ನವರಾತ್ರಿ ಹಬ್ಬ ಎಂದು ಹೇಳುವ ವಾಡಿಕೆ. ದೀಪಾವಳಿ ಹಸುಗಳ ಮೆರವಣಿಗೆ ಸಂಭ್ರಮದ ಹಬ್ಬ. ಕೊನೆಯಲ್ಲಿ ತುಳಸಿ ಮದುವೆ(ಕಾತೀ೯ಕ). ಇದರ ಮದ್ಯ ಸಣ್ಣಪುಟ್ಟ ಹಬ್ಬದ ಆಚರಣೆ ಬಿಡುವುದಿಲ್ಲ.

ಎಲ್ಲ ನೆನಪಾಗಿ ಉಲಿಯುವುದು ಮನ ಮಳೆಗಾಲ ಬಂದಾಗ—–

ಮುಗಿ ಬಿದ್ದು ಮೈ ತಳೆದ
ಫಸಲು ಭತ್ತ ಗೊನೆ ಅಡಿಕೆ
ತೆಂಗು ಕಂಗುಗಳ ನಾಡು
ನನ್ನ ತವರು.

ಮಳೆ ಬೆಳೆ ಎಲ್ಲ
ಹಸನಾಗಿ ಫಲಿಸಿ
ಬೆಳೆದ ಪೈರು ಕೈ
ತುಂಬಾ ಸಿಗಲಿ!
13-7-2016. 8.45pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s