ಧನುರ್ಮಾಸದ ತೀರ್ಥ ಕ್ಷೇತ್ರ ದರ್ಶನ (ಭಾಗ – 5)  ಶ್ರೀ ಕ್ಷೇತ್ರ ಮದುರೈ

ಈ ಕ್ಷೇತ್ರ ತಲುಪಿದಾಗ ಸಂಜೆ 3.40pm. ಕನ್ಯಾಕುಮಾರಿಯಿಂದ 247 ಕಿ.ಮೀ. ದೂರವಿದ್ದು ದೇವಸ್ಥಾನದ ಬಾಗಿಲು ಸಾಯಂಕಾಲ ನಾಲ್ಕು ಗಂಟೆಗೆ ತೆಗೆಯುತ್ತಾರೆ. ಬಿಗಿ ಸೆಕ್ಯುರಿಟಿಯಲ್ಲಿ ಚಕಿಂಗ್ ಮುಗಿಸಿ ದರ್ಶನ ಟಿಕೆಟ್ ಪಡದು ಸರತಿ ಸಾಲಿನಲ್ಲಿ ನಿಂತುಕೊಳ್ಳಬೇಕು.

ಪುರಾತನ ಕಾಲದ ಪಾಂಡ್ಯ ದೇಶದ ಕೇಂದ್ರ ಸ್ಥಳ ಮದುರೈ. ವೈಗೈ ನದಿಯ ತೀರದಲ್ಲಿ ಬೆಳೆದ ಮಹಾ ನಗರವಿದು. ದೇವಿ ಮೀನಾಕ್ಷಿ ದೇವಿಯೊಂದಿಗೆ ಮಹಾದೇವನು ತನ್ನ ಭಕ್ತರಿಗಾಗಿ 64 ಲೀಲೆಗಳನ್ನು ಪ್ರದರ್ಶಿಸಿದ ನೆಲೆವೀಡಿದು. ಅಂಬರ ಚುಂಬಿತ ನಾಲ್ಕು ಗೋಪುರಗಳು ಎರಡು ಮೈಲಿ ದೂರದಿಂದಲೆ ಸ್ವಾಗತಿಸುತ್ತವೆ. ಮೊದಲನೆ ಸೇವೆ ಮೀನಾಕ್ಷಿಗೆ ಮೂಡಣ ದಿಕ್ಕಿನಿಂದ ಪ್ರವೇಶ. ಅಷ್ಟಶಕ್ತಿ ಮಂಡಲ, ವಿನಾಯಕ, ಸುಬ್ರಹ್ಮಣ್ಯ, ಇದರ ನಡುವೆ ಮೀನಾಕ್ಷಿ ಕಲ್ಯಾಣದ ಕಥಾ ರೂಪಕಗಳು

ಒಳಗಡೆ ದೊಡ್ಡದಾಗಿ ನಿಂತಿರುವ ಎಂಟು ಕಂಬಗಳಲ್ಲಿ ಅಷ್ಟ ಶಕ್ತಿ ಶಿಲ್ಪ ಸೌಂದರ್ಯ, ತಿರುವಿಳೈಯಾಡಲ್ ಎಂಬ ಶಿವಲೀಲಾ ವಿಲಾಸದ ಚಿತ್ರಗಳು ತುಂಬಿದ ಈ ಮಂಟಪದಲ್ಲಿ ಧರ್ಮ ಚತುಷ್ಟರು, ದ್ವಾರ ಪಾಲಕರು ಕಾಣುತ್ತಾರೆ.
ಮುಂದೆ ಮೀನಾಕ್ಷಿ ನಾಯಕನ್ ಮಂಟಪದಲ್ಲಿ ಯಾಳ್ಳೀ ಎಂಬ ತೋರಣ ಶಿಲ್ಪ, ಕೆಳಗಡೆ ಚಿಕ್ಕ ಚಿಕ್ಕ ಶಿಲ್ಪವಿರುವ ಆರು ರೀತಿಯ ಕಂಬಗಳು, ಬೇಡ ಬೇಡತಿಯರ ಶಿಲ್ಪ, ಮಂಡಲದ ಪಶ್ಚಿಮದ ಕೊನೆಯಲ್ಲಿ ಹಿತ್ತಾಳೆಯ ಸಾವಿರದೆಂಟು ದೀಪ ಪ್ರಣತೆಗಳು ಕಣ್ಣು ತುಂಬುತ್ತವೆ.
ನಂತರದ ಕತ್ತಲೆಯ ಮಂಟಪ ಮುದಪಿಳ್ಳೈ ಭಿಕ್ಷಾಟನ ದೇವನ ಸೌಂದರ್ಯದಲ್ಲಿ ಮೋಹಿತರಾಗಿ ನಿಂತಿರುವ ದಾರುಕಾವನದ ಮುನಿಪತಿಯ ಪಕ್ಕದಲ್ಲಿ ಮೋಹಿನಿಯ ಮಂಟಪ. ಇಲ್ಲಿಂದ ದಾಟಿದರೆ ಪೊಟ್ತ್ರಾಮರೈಕುಳಂ ಎಂಬ ಕೊಳ ಇಂದ್ರನು ಪೂಜೆಗಾಗಿ ಸ್ವರ್ಣ ಕಮಲಗಳನ್ನು ತಿರಿದನಂತೆ. ಈ ಕೊಳವು ಉದ್ದ ಚೌಕಾಕಾರವಾಗಿ ಸುಂದರ ಮೆಟ್ಟಿಲುಗಳಿವೆ. ಸುತ್ತ ಕಬ್ಬಿಣದ ಬೇಲಿ ನೀರಿಗಿಳಿಯದಂತೆ ಕಾವಲಿದೆ. ಉತ್ತರ ದಿಕ್ಕಿನ ತೀರದಲ್ಲಿರುವ ಕಂಬಗಳಲ್ಲಿ 24 ಪುರಾತನ ಮಹಾ ಕವಿಗಳ ಶಿಲಾ ವಿಗ್ರಹ ಕಂಡರೆ ಗೋಡೆಗಳಲ್ಲಿ ತಿರುವಿಳೈಯಾಡಲ್ ಪುರಾತನ ಲೀಲಾ ವಿಲಾಸಗಳನ್ನು ವರ್ಣ ಚಿತ್ರಗಳಲ್ಲಿ ಚಿತ್ರಿಸಲಾಗಿದೆ. ಮೂಡುಗಡೆಯ ತೀರದಲ್ಲಿ ನಿಂತು ಅಮ್ಮನವರ ಆಲಯಗಳ ಸ್ವರ್ಣ ವಿಮಾನಗಳನ್ನು ದರ್ಶನ ಮಾಡಬಹುದು.

ಕೊಳದ ಪಶ್ಚಿಮ ಬದಿಯಲ್ಲಿ ಊಂಜಲ್ ಮಂಟಪ, ಉಯ್ಯಾಲೆ, ಆರುಪಡೈವೀಡು ಎಂಬ ಆರು ದೇವಾಲಯಗಳ ಚಿತ್ರಗಳು, ರಾಣಿ ಮಂಗಮ್ಮ ಮತ್ತು ಅಮಾತ್ಯ ರಾಮಪ್ಪಯ್ಯನ್ ರೂಪ ಶಿಲ್ಪಗಳಿವೆ.
ಊಂಜಲ್ ಮಂಟಪದ ಹತ್ತಿರ ಕಿಳಿಕ್ಕೂಡು ಮಂಟಪದಲ್ಲಿ ವಾಲಿ, ಸುಗ್ರೀವ ಪುರುಷಾಮೃಗ,ದ್ರೌಪತಿ ಮೇಲ್ಭಾಗದ ತೊಲೆಗಳಲ್ಲಿ ವಿನಾಯಕ,ಸುಬ್ರಹ್ಮಣ್ಯ, ಪರಮಶಿವರ ಬೇರೆ ಬೇರೆ ಭಂಗಿಯ ವರ್ಣ ಚಿತ್ರಗಳು ಕಣ್ಮನ ಸೆಳೆಯುತ್ತವೆ. ಅಮ್ಮನವರ ನೇರಕ್ಕೆ ಎದುರಲ್ಲಿ ಕಲ್ಯಾಣ ವೈಭವ,ಮಕುಟೌಭಿಷೇಕದ ಭವ್ಯ ದೃಶ್ಯ ವರ್ಣ ಚಿತ್ರದಲ್ಲಿ ಆಕಷ೯ಕವಾಗಿವೆ.
ಮೀನಾಕ್ಷಿ ಆಲಯ. ಎರಡು ಪ್ರಾಕಾರಗಳಿವೆ. ಎರಡನೆ ಪ್ರಾಕಾರದಲ್ಲಿ ಬಂಗಾರದ ಧ್ವಜಸ್ತಂಭ, ತಿರುಮಲೈ ನಾಯಕ ಮಂಟಪ, ವಿಘ್ನೇಶ್ವರ ಕೂಡಲ್ ಕುಮರರ ಸನ್ನಿಧಿ, ಎರಡು ದೊಡ್ಡ ದ್ವಾರ ಪಾಲಕರ ತಾಮ್ರದ ವಿಗ್ರಹ, ಅರುಣಗಿರಿನಾಥರ ಸ್ತೋತ್ರ ಕೊರೆಯಲ್ಪಟ್ಟಿದೆ. ಇಲ್ಲಿಂದ ಭಕ್ತರು ಮೀನಾಕ್ಷಿ ದೇವಿಯ ಮಹಾಮಂಟಪವನ್ನು ಪ್ರವೇಶಿಸಬಹುದು. ಇದೇ ಮೊದಲನೆ ಪ್ರಾಕಾರ. ಐರಾವತ, ವಿನಾಯಕ, ಕುಮರನ್ ಸನ್ನಿಧಿ ಶಯನ ಮಂದಿರಗಳಿವೆ. ಪಶ್ಚಿಮದಲ್ಲಿ ಅರ್ಧ ಮಂಟಪ ಗರ್ಭ ಗುಡಿಗಳಿರುತ್ತವೆ. ಗರ್ಭ ಗುಡಿಯೊಳಗೆ ಕೈಯಲ್ಲಿ ಗಿಳಿಯನ್ನೇರಿಸಿಕೊಂಡ ಹೂಚೆಂಡನ್ನು ಧರಿಸಿ ನಿಂತಿರುವ ದೇವಿ ಮೀನಾಕ್ಷಿ ದರ್ಶನ.

ಅರ್ಚನೆಯನ್ನು ಮಾಡಿಸಿ ದೇವಿಯ ಅಡಿದಾವರೆಗೆ ನಮಸ್ಕರಿಸಿ ಪರವಶರಾಗುವಷ್ಟು ಮನಮೋಹಕ ನಿಂತ ಮೂರ್ತಿ ಆ ತಾಯಿ ಮೀನಾಕ್ಷಿ. ಅಷ್ಟು ಹೊತ್ತು ಕೊಂಕಣ ಸುತ್ತಿ ಸುತ್ತಿ ಮೈಲಾರಕ್ಕೆ ಬಂದ ಆಯಾಸ ಕ್ಷಣ ಮಾತ್ರದಲ್ಲಿ ಕರಗಿ ದೇವಾಲಯದ ವೈಭೋಗ ಅಲ್ಲಿಯ ಶಿಲ್ಪ ಕಲೆ ಆ ತಾಯಿಯ ದರ್ಶನ ಬಂದಿದ್ದು ಸಾರ್ಥಕ ಭಾವನೆ ತನು ಮನದೊಳಗೆಲ್ಲ. ವಜೃ ವೈಢೂರ್ಯಗಳಿಂದ ಸರ್ವಾಲಂಕೃತ ದೇವಿ ಕಳೆ ಕಳೆಯಾಗಿ ಎಣ್ಣೆ ದೀಪದ ಬೆಳಕಲ್ಲಿ ಕಂಗೊಳಿಸುತ್ತಾಳೆ. ಸರತಿಯಲ್ಲಿ ಸಾಗುವಾಗ ತುಪ್ಪದ ದೀಪ, ದೇವಿ ದೀಪಕ್ಕೆ ಎಣ್ಣೆ ಎಲ್ಲವೂ ದೊರೆಯುತ್ತದೆ. ಅವರವರ ಇಷ್ಟಾನುಸಾರ ಕಾಣಿಕೆ ಹರಕೆ ಸಲ್ಲಿಸಬಹುದು.
ಇಲ್ಲಿಂದ ಮುಂದೆ ಮುಕ್ಕುರುಣಿ ವಿಘ್ನೇಶ್ವರ ಎಂಟಡಿ ಎತ್ತರವಿರುವಿದ್ದು, ಬಗೆ ಬಗೆಯ ಶಿಲ್ಪಗಳಿರುವ ಮಂಟಪ, ಕಾಳಿಕಾ ದೇವಿ, ಶಿವನ ಊರ್ಧ್ವತಾಂಡವ, ಅಘೋರ ವೀರಭದ್ರ ಶಿಲ್ಪಗಳು ಒಮ್ಮೆ ಮೈ ನಡುಗುವಷ್ಟು ಬೃಹದಾಕಾರದಲ್ಲಿ ಕೆತ್ತಲಾಗಿದೆ.
ಮುಂದೆ ಸ್ವಾಮಿ ಸನ್ನಿಧಿಗೆ ಹೋಗುವ ದ್ವಾರದ ಎರಡೂ ಬದಿಯಲ್ಲಿ 12 ಅಡಿ ಎತ್ತರದ ದ್ವಾರಪಾಲಕರು, ತಿರುವಿಳೈಯಾಡಲ್ ಪೀಠ, ಮಂಟಪದ ಸುತ್ತ 63 ನಾಯನ್ಮಾರ್ಗಳೆಂಬ ಮಹಾ ಭಕ್ತರನ್ನೂ , ಸರಸ್ವತಿ ಗುಡಿ, ಉತ್ಸವ ಮೂರ್ತಿ,ಕಾಶೀ ವಿಶ್ವನಾಥ, ಭಿಕ್ಷಾಟನರ್, ಸಿದ್ದರು,ದುರ್ಗೆ ಇವರೆಲ್ಲರ ಗುಡಿಗಳಿವೆ. ಕದಂಬ ವೃಕ್ಷ, ಕನಕ ಸಭೆ, ಯಾಗ ಶಾಲೆ, ರತ್ನ ಸಭೆ,ವನ್ನೀ ವೃಕ್ಷ, , ಭಾವಿ ಇವುಗಳನ್ನೆಲ್ಲ ಈ ಪ್ರಾಕಾರದಲ್ಲಿ ಕಾಣಬಹುದು.
ಇಲ್ಲಿಂದ ಆರು ಕಾಲು ಪೀಠ ದಾಟಿ ಬೆಳ್ಳಿಯಂಬಲದಲ್ಲಿ ನೃತ್ಯ ಭಂಗಿಯ ನಟರಾಜ, ಗಭ೯ಗುಡಿಯಲ್ಲಿ 8 ಆನೆಗಳು, 32 ಸಿಂಹಗಳು, 64 ಭೂತ ಗಣಗಳು ಈ ವಿಮಾನವನ್ನು ಹೊತ್ತುಕೊಂಡಿರುವಂತೆ ನಿರ್ಮಿಸಲಾಗಿದೆ. ಗರ್ಭ ಗುಡಿಯೊಳಗೆ ಲಿಂಗ ರೂಪದ ಚೊಕ್ಕನಾಥ ಸ್ವಾಮಿಗೆ ನಮಿಸಿ ಧನ್ಯರಾಗುತ್ತೇವೆ.

ಇಲ್ಲಿಂದ ಕಂಬತ್ತಡಿ ಮಂಟಪದಿಂದ ಹೊರಗೆ ಬಂದು ದೇವಾಲಯದ ಉಳಿದ ಭಾಗ ವೀಕ್ಷಿಸಬಹುದು.
ಆಯಿರಕ್ಕಾಲ್ ಮಂಟಪ ಮೇಲ್ಭಾಗದಲ್ಲಿ 60 ಸಂವತ್ಸರ ಕೆತ್ತಿದ್ದು ಹಲವಾರು ಶಿಲ್ಪಗಳ ಕೆತ್ತನೆಯುಳ್ಳ 985 ಕಂಬಗಳಿದ್ದು ಯಾವ ಕೋನದಿಂದ ನೋಡಿದರೂ ನೇರವಾದ ಸಾಲಿನಲ್ಲಿರುವಂತೆ ನಿಲ್ಲಿಸಲ್ಪಟ್ಟಿರುವುದು ನೋಡುಗರು ಬೆರಗಾಗುವಂತೆ ಮಾಡುತ್ತದೆ. ಮನ್ಮಥ, ಕಲಿ ಮೊದಲಾದ 20 ಅದ್ಭುತ ಶಿಲ್ಪಗಳು ಇಲ್ಲಿವೆ. ಮುಂಗೈಯರ್ಕರಸಿ ಮಂಟಪದಲ್ಲಿ ಶಿವಲಿಂಗವಿದೆ.
ಮೀನಾಕ್ಷಿ ಸುಂದರೇಶ್ವರ ಆಲಯಗಳಿಗೆ ನಾಲ್ಕು ದೊಡ್ಡ ದೊಡ್ಡ ಗೋಪುರಗಳು ನಾಲ್ಕು ದಿಕ್ಕಿಗಿದ್ದು ಅದರಲ್ಲಿ ದಕ್ಷಿಣದ ಗೋಪುರ 160 ಅಡಿ ಎತ್ತರವಿದ್ದು 16ನೇ ಶತಮಾನದಲ್ಲಿ ಶೆಲ್ವರ್ ಚೆಟ್ಟಿಯಾರ್ ನಿರ್ಮಿಸಿದ್ದು ಸ್ವಲ್ಪ ಬಾಗಿದ ಹಾಗಿರುವುದೆ ಇದರ ವಿಶೇಷ. 154 ಅಡಿಗಳ ಎತ್ತರವಿರುವ ಉತ್ತರ ದಿಕ್ಕಿನ ಗೋಪುರದಿಂದ ದೇವಸ್ಥಾನಕ್ಕೆ ಮೊದಲು ಪ್ರವೇಶವಾದರೆ, ಪೂರ್ವ ದಿಕ್ಕಿನ ಗೋಪುರ 13ನೇ ಶತಮಾನದಾಗಿದ್ದು 153 ಅಡಿ ಎತ್ತರ, ಪಶ್ಚಿಮ ಗೋಪುರ 14ನೇ ಶತಮಾನದ್ದಾಗಿದೆ.
ಉತ್ತರ ದಿಕ್ಕಿನಲ್ಲಿ 5 ನಾದ ಸ್ತಂಭಗಳಿವೆ. ಒಂದೊಂದು 22 ಚಿಕ್ಕ ಕಂಬಗಳನ್ನೊಳಗೊಂಡಿದೆ. ತಟ್ಟಿದರೆ ವಿಧವಿಧವಾದ ಸುನಾಧವನ್ನು ಹೊರಡಿಸುವುದು ಶಿಲ್ಪಿಯ ಅದ್ಭುತ ಕಲೆಯೇ ಸರಿ. ದೇವಾಲಯದ ಹೊರಗಡೆ ಪುದು ಮಂಟಪ, ರಾಯ ಗೋಪುರ,ತಿರುಮಲೈ ನಾಯಕರ್ ಮಹಲು ಅನತಿ ದೂರದಲ್ಲಿ ವೀಕ್ಷಿಸಬಹುದು.
ಒಂದು ಸಾರಿ ಇಂದ್ರನು ಬ್ರಹ್ಮಹತ್ಯಾ ದೋಷ ಕಳೆದುಕೊಳ್ಳಲಿಕ್ಕಾಗಿ ಕ್ಷೇತ್ರಾಟನೆ ಮಾಡುತ್ತಿರುವಾಗ ಇಲ್ಲಿಯ ಕದಂಬ ವನದಲ್ಲಿ ಸ್ವಯಂಭೂ ಲಿಂಗವನ್ನು ಪ್ರತಿಷ್ಪಟಾಪಿಸಲಾಗಿ ಅವನ ಪಾತಕ ದೋಷ ಪರಿಹಾರವಾಗಿ ಆನಂದಗೊಂಡು ವಿಮಾನದಲ್ಲಿ ತನ್ನ ಲೋಕಕ್ಕೆ ಹೋದನು. ಅಂದಿನಿಂದ ಇಲ್ಲಿ ದೇವ ಪೂಜೆ ನಡೆಯುತ್ತಿದ್ದು ಕಾಲ ಕ್ರಮೇಣ ಬೆಳೆಯಿತೆಂದೂ ಇತಿಹಾಸ ಹೇಳುತ್ತದೆ. ಮದುರೈ ದೇವಾಲಯವು ಸ್ವಾಮಿಯ ಆಲಯ ಮತ್ತು ಇಂದ್ರ ವಿಮಾನ ಪ್ರಾಮುಖ್ಯತೆ ಪಡೆದಿದೆ. 3600 ವರ್ಷಗಳಿಗಿಂತ ಹಿಂದಿನದು. 7ನೇ ಶತಮಾನದಿಂದಲೂ ಬೆಳೆದುಕೊಂಡು ಬಂದು 12 ರಿಂದ 18 ನೇ ಶತಮಾನಗಳ ಮಧ್ಯದ 600 ವರ್ಷ ಕಾಲದಲ್ಲಿ ಅಭಿವೃದ್ಧಿಗೊಂಡು ಪೂರ್ತಿಯಾಗಿದೆ.

ಇಲ್ಲಿ ಪ್ರತಿ ತಿಂಗಳೂ ವೈಭವದಿಂದ ಉತ್ಸವಗಳನ್ನು ನಡೆಸುತ್ತ ಬಂದಿದ್ದಾರೆ. ಒಟ್ಟಿನಲ್ಲಿ ಅತ್ಯದ್ಭುತವಾದ ಈ ದೇವಾಲಯ ನೋಡಲು

ಅದೆಷ್ಟು ಸಮಯ ಮೀಸಲಿಟ್ಟರೂ ಸಾಲದು. ಎಲ್ಲ ಅನುಕೂಲಗಳಿರುವ ಊರು ಈ ದೇವಸ್ಥಾನದ ಸೊಬಗು ಸವಿಯಲು ಒಮ್ಮೆ ತಾಯಿ ದರ್ಶನಕ್ಕೆ ಪಾತ್ರರಾಗಬೇಕು.ಇವೆಲ್ಲ ಕ್ಷೇತ್ರ ದರ್ಶನದಿಂದ ಮನಸ್ಸಿಗೆ ಶಾಂತಿ,ಸಮಾಧಾನ,ನೆಮ್ಮದಿ ತುಂಬಿಕೊಂಡು ಬೆಂಗಳೂರಿನ ಮನೆ ಸೇರಿದಾಗ ಡಿಸೆಂಬರ್ 26ರ ಮಧ್ಯರಾತ್ರಿ ಕಳೆದಿತ್ತು.
ಮುಗಿಯಿತು.
2-1-2017. 7.19pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s