ಬಾಲ್ಯದಲ್ಲಿ ಶ್ರಾವಣದ ಸಂಭ್ರಮ

ಆಗಿನ್ನೂ ಸಕಾ೯ರಿ ಕನ್ನಡ ಶಾಲೆಯಲ್ಲಿ ಓದುತ್ತಿದ್ದೆ ಅಜ್ಜಿಯ ಮನೆಯಲ್ಲಿ ಇದ್ದು. ಅದು ಮೂರೇ ಮೂರು ಮನೆಯಿರುವ ಹಳ್ಳಿ. ಮೂರು ಮನೆ ಹಿಂದೆ ಒಂದೇ ಕುಟುಂಬವಾಗಿತ್ತಂತೆ. ನಂತರದ ದಿನಗಳಲ್ಲಿ ಕುಟುಂಬ ಬೆಳೆದು ಒಂದೇ ಸೂರಿನಡಿಯಲ್ಲಿ ಮೂರು ಮನೆಗಳಾಗಿ ನಿಂತವು. ಹಾಗಂತ ಅಜ್ಜ ಸುದ್ದಿ ಹೇಳುತ್ತಿದ್ದರು. ಒಬ್ಬರ ಮನೆಯಿಂದ ಇನ್ನೊಂದು ಮನೆಗೆ ಹೋಗಲು ಸಂಧಿಯಲ್ಲಿ ಚಿಕ್ಕ ಬಾಗಿಲಿರಿಸಿಕೊಂಡು ನಾವೆಲ್ಲ ಈಗಲೂ ಒಂದೇ ಅನ್ನುವ ಪ್ರೀತಿ ವಿಶ್ವಾಸ ತೋರಿಸುತ್ತಿದ್ದರು. ಮೂರೂ ಮನೆಯವರು ಸಮಾನ ಶ್ರೀಮಂತರು. ಮನೆ ತುಂಬ ಆಳು ಕಾಳು ಯಾವುದಕ್ಕೂ ಕಡಿಮೆ ಇಲ್ಲ.

ಇಂಥವರ ಮನೆಯಲ್ಲಿ ಹಬ್ಬ ಹರಿ ದಿನ ಅಂದರೆ ಕೇಳಬೇಕಾ? ಮುಗಿದೇ ಹೋಯ್ತು. ಶ್ರಾವಣ ಮಾಸದಿಂದ ಶುರುವಾಗುವ ಪೂಜೆ ಪುನಸ್ಕಾರ ಏನ್ ಕೇಳ್ತೀರಾ. ಅದರಲ್ಲೂ ಹಳ್ಳಿಯ ಹಿತ್ತಲ ಗಿಡಗಳಲ್ಲಿ ಅರಳಿದ ತರಾವರಿ ಡೇರೆ ಹೂವು, ಸೇವಂತಿಗೆ, ಮಲ್ಲಿಗೆ, ಸಂಪಿಗೆ ಘಮ ತೋಟದ ಅಂದದೊಂದಿಗೆ ದೇವರ ಮನೆಯಲ್ಲಿ ಹೂವಿನ ತೋರಣ. ಜಗಮಗಿಸುವ ಹಿತ್ತಾಳೆ ದೀಪ ಹೊಸದಾಗಿ ಹುಣಿಸೆ ಹಚ್ಚಿ ಬೆಳಗಿ ಎದ್ದು ಕಾಣುತ್ತಿತ್ತು ದೇವರ ಮನೆ ಎದುರು. ಅರಿಶಿನ ಕುಂಕುಮ ಹೊತ್ತ ತರಾವರಿ ರಂಗೋಲಿ ಎದುರು ಬಾಗಿಲಿಂದ ಹಿಡಿದು ದೇವರ ಮನೆವರೆಗೆ. ಹೊಸಿಲಿಗೆ ಬಿಳಿ ಬಣ್ಣದಲ್ಲಿ ಸೂಕ್ಷ್ಮ ಎಳೆಗಳಲ್ಲಿ ಬರೆದ ತರತರದ ಹುಂಡಿನ ಚಿತ್ತಾರ , ಮನೆಯೊಳಗೆ ಅಡಿ ಇಡುವ ಮುನ್ನ ಅಲ್ಲೆ ಕ್ಷಣ ನಿಲ್ಲಿಸುವಷ್ಟು ಸುಂದರ.

ಹೊರಗೆ ಮಳೆಯ ತುಂತುರು ಆಗಾಗ ಆಭ೯ಟ. ಹೆಂಚಿನ ಮಾಳಿಗೆಯ ಮನೆ ನೂರಾರು ವಷ೯ ಹಳೆಯದು ಮರದ ಕೆತ್ತನೆಯ ವೈಭೋಗ. ಮಳೆ ನೀರು ಮಾಡಿನಿಂದ ಇಳಿದು ಬರುವಲ್ಲೂ ಕೈಯ್ಯಾಡಿಸುತ್ತ ” ಮಳೆ ಬಂತು ಹಸೀ ತಂತು ಹೊಲಕ್ಕೆ ಹೋಗೋದಾ ನೆಲಕೆ ಬೀಜ ಬಿತ್ತೋದಾ” ಹಾಡು ಹೇಳಿಕೊಂಡು ನಲಿದಾಡಿದ ದಿನಗಳು ಬರಿ ನೆನಪೀಗ.

ಶ್ರಾವಣಕ್ಕೆ ಇನ್ನೊಂದು ಅದ್ಭುತವಾದ ವಿಷಯ ಅಂದರೆ “ಸತ್ಯ್ ನಾರಾಯಣ ಪೂಜೆ”. ನನ್ನ ಗಮನ ಪೂರ ಪೂಜೆ ಕಡೆ ಅಲ್ಲ ಅಲ್ಲಿ ಕೊಡುವ ಭೋಜನ ದಕ್ಷಿಣೆ ಕಡೆಗೆ. ಮೂರೂ ಮನೆಯಲ್ಲಿ ಶ್ರಾವಣ ಮಾಸದಲ್ಲಿ ಪ್ರತೀ ವಾರ ಈ ಪೂಜೆ. ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ದಿನ. ಆ ದಿನ ಅದ೯ ದಿನ ಮಾತ್ರ ಶಾಲೆಗೆ ಹೋಗೋದು. ಅದು ಬೇರೆ ಖುಷಿ. ಆಮೇಲೆ.” ನೀ ಓಡಾಡಿ ಪೂಜೆಗೆ ಪಡಿಚಾಕರಿ ಮಾಡಿದ್ದೆ, ತಗಳೆ ” ಅಂತ ಅಜ್ಜನ ಬಕ್ಷೀಸು. ಪೊಗದಸ್ತಾದ ಬಗೆ ಬಗೆ ಸಿಹಿ ತಿಂಡಿ ವಾರವೆಲ್ಲ ಮೆಲ್ಲೋದು. ಅದು ಹಳ್ಳಿ ಆದರೂ ಎರಡು ಕಿಲೋ ಮೀಟರ ದೂರದಲ್ಲಿರೊ ಪೇಟೆ ಶಾಲೆ. ಅಲ್ಲಿ ಹುಡುಗಿಯರಿಗೆ ಹೂವು ಅಂದರೆ ಪ್ರಾಣವಾಗಿತ್ತು. ನಾನು ಹುಳುಕಿ. ತಲೆ ತುಂಬಾ ಹೂ ಮುಡಿದು ಹೋಗುತ್ತಿದ್ದೆ, ಯಾರಿಗೂ ಕೊಡ್ತಿರಲಿಲ್ಲ. ಒಂದೆರಡು ನನ್ನ ಮಾತು ಕೇಳುವ ಗೆಳತಿಯರಿಗೆ ಮಾತ್ರ ಕೊಡುತ್ತಿದ್ದೆ.

ಪೂಜೆ ದಿನ ಸಿಕ್ಕ ದುಡ್ಡು ಹಾಕೋಕೆಂತ ಒಂದು ಕರಡಿಗೆ. ದಿನಕ್ಕೆ ಎಷ್ಟು ಸಾರಿ ಎಣಿಸುತ್ತಿದ್ದೆನೊ! ಕೆಲವೊಮ್ಮೆ ಲೆಕ್ಕ ತಪ್ಪಿ ಯಾರಾದರೂ ದುಡ್ಡು ತೆಗೆದಿದ್ದಾರಾ ಅಂತ ನನ್ನೊಳಗೆ ನಾನು ಸಂಶಯಪಟ್ಟು ರಾತ್ರಿ ನಿದ್ದೆಗೆಟ್ಟಿದ್ದೂ ಇದೆ. ಅದೇನೊ ಗೊತ್ತಿಲ್ಲ ಆಗಿನಿಂದ ಅಂಟಿಕೊಂಡ ದುಡ್ಡು ಒಟ್ಟಾಕೊ ಗೀಳು ಈಗಲೂ ಸ್ವಲ್ಪ ಇದೆ. ಸಿಗುತ್ತಿದ್ದ ನಾಲ್ಕಾಣೆ ಎಂಟಾಣೆಗೆ ಅದೆಷ್ಟು ಮುತುವಜಿ೯ ಸರ ಬಳೆ ರಿಬ್ಬನ್ನು ತಗೊಳ್ಳೋಕೆ. ಶ್ರಾವಣದ ಸಂಭ್ರಮದಲ್ಲಿ ಬಾಲ್ಯದ ನೆನಪು ನೆನಪಾದರೆ ನಗುವಿನೊಂದಿಗೆ ಆ ಬಾಲ್ಯದ ದಿನಗಳು ಒಮ್ಮೆ ಬರಬಾರದಿತ್ತೆ ಅನಿಸುತ್ತದೆ.

ನಿಜಕ್ಕೂ ನನಗಂತೂ ನನ್ನ ಬಾಲ್ಯದ ದಿನಗಳೆ ಚೆನ್ನಾಗಿತ್ತು ಅನಿಸುತ್ತದೆ. ಯಾವ ಚಿಂತೆ ಇಲ್ಲ, ಗೊಂದಲವಿಲ್ಲ, ಜವಾಬ್ದಾರಿ ಇಲ್ಲ ಕನಸೂ ಇಲ್ಲ ನಾಳಿನ ಕುರಿತು ಯೋಚನೆ ಇಲ್ಲ, ಇರೋದರಲ್ಲೆ ಸಂತೋಷಪಟ್ಟು ಕುಣಿದು ಕುಪ್ಪಳಿಸುವ ದಿನಗಳವು!
14-7-2016. 4.42pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!