ಕಳಕಳಿ

ಮನುಷ್ಯ ತನ್ನ ಐಷಾರಾಮಿ ಬದುಕಿಗೆ ಮೂಕ ಪ್ರಾಣಿಗಳನ್ನು ಅದೆಷ್ಟು ಕ್ರೂರವಾಗಿ ತನ್ನಾಟದ ವಸ್ತುಗಳಂತೆ ಬಳಸುತ್ತಿದ್ದಾನೆ. ಅವಕ್ಕೂ ಕಷ್ಟ ಆಗುತ್ತದೆ, ನೋವಾಗುತ್ತದೆ, ಅವಕ್ಕೂ ಒಂದು ಹೃದಯ ಇದೆ, ಜೀವ ಇದೆ ಅನ್ನುವ ಪರಿಜ್ಞಾನವೂ ಇಲ್ಲವೆ? ಸಾಕು ಪ್ರಾಣಿಗಳು ಅತ್ಯಂತ ಘೋರವಾಗಿ ಸಾವನ್ನಪ್ಪುವುದು ವಿಪರ್ಯಾಸ. ಮಾತು ಬಾರದೆ ಬಾಯಿಂದ ಬರಿ ಒಂದೇ ಒಂದು ಸ್ವರದಲ್ಲಿ ತಮ್ಮ ಇಡೀ ಬದುಕನ್ನು ಬರುವ ಹಿಂಸೆ, ಕಷ್ಟ ಎಲ್ಲ ಸಹಿಸಿಕೊಂಡು ಜೀವಿಸಬೇಕಲ್ಲ! ಛೆ, ಯಾವ ಪಾಪ ಮಾಡಿ ಪ್ರಾಣಿಗಳಾಗಿ ಹುಟ್ಟಿದವೊ ಏನೊ. ಕಾಡಲ್ಲಿ ಓಡಾಡಿಕೊಂಡು ಬದುಕುವ ಪ್ರಾಣಿಗಳಿಗೆ ಆಹಾರದ ಕೊರತೆ. ಬೇಟೆ ಆಡಿ ಸಾಯಿಸುವ ನಿರ್ಧಯಿಗಳ ಕಾಟ. ನಾಡಿನಲ್ಲಿ ಓಡಾಡಿಕೊಂಡಿರುವ ನಿಯತ್ತಿನ ನಾಯಿಗಳಿಗೂ ಇಂತಹ ಪರಿಸ್ಥಿತಿ. ಭಾರ ಹೊರಲಾಗದ ಈ ರೀತಿ ಬಳಸಿಕೊಳ್ಳುವುದು ಅದೆಷ್ಟು ಸರಿ.

ಈಗೀಗ ಸಾಮಾಜಿಕ ಜಾಲ ತಾಣದಲ್ಲಿ ಹಸುಗಳನ್ನು ಮೋಜಿಗಾಗಿ ಚೂರಿಯಿಂದ ಚುಚ್ಚಿ ಚುಚ್ಚಿ ಹಿಂಸಿಸುವ ದೃಶ್ಯ ಕಂಡು ಕರುಳು ಕಿವುಚಿದಂತಾಯಿತು. ಅವುಗಳನ್ನು ಯಂತ್ರಕ್ಕೆ ಕೊಟ್ಟು ಕೊಲ್ಲುವ ದೃಶ್ಯ ಕಂಡ ವೀಡಿಯೊ ಇನ್ನೂ ಮನಸ್ಸಿಂದ ಮರೆಯಾಗುತ್ತಿಲ್ಲ..ಹೀಗೆ ಹಲವಾರು ಕಂಡ ದೃಶ್ಯಗಳು ಮನಸ್ಸಿಗೆ ಆಗಾಗ ನೆನಪಾಗಿ ನೆಮ್ಮದಿ ಇಲ್ಲದಂತಾಗಿದೆ.

ಹುಂಜಕ್ಕೆ ಚೂರಿ ಕಟ್ಟಿ ಆಡಿಸುವ ಆಟ, ಹಸುಗಳನ್ನು ಹೊಡೆಯುತ್ತ ಕೆಸರು ಗದ್ದೆಯಲ್ಲಿ ಓಡಿಸುವ ಆಟ, ಗೂಳಿ ಹಸುಗಳನ್ನು ಪೊಗದಸ್ಥಾಗಿ ಸಾಕಿ ಸಲಹಿ ಕೊನೆಗೆ ತನ್ನ ಮೋಜಿಗಾಗಿ ಆಚರಣೆಯ ಹೆಸರಲ್ಲಿ ಅಟ್ಟಾಡಿಸಿ ಓಡಿಸುವ ಆಚರಣೆಗಳು ಬೇಕಾ? ಜಗತ್ತು ಎಷ್ಟು ಮುಂದುವರೆದಿದೆ. ಮನುಷ್ಯ ಮಾತ್ರ ತನಗೆ ಮಡಿ, ಮೈಲಿಗೆ, ಆಚಾರ, ವಿಚಾರ ಎಲ್ಲ ಕಷ್ಟ ಎಂದು ಬಿಡುತ್ತ ಬಂದಿದ್ದಾನೆ. ಐಷಾರಾಮಿ ಉಪಕರಣ ಬಳಸಿ ತನ್ನ ದಿನ ನಿತ್ಯದ ಬದುಕು ಸುಲಭ ಮಾಡಿಕೊಳ್ಳುತ್ತ ಬಂದಿದ್ದಾನೆ. ನೀರು ಸೇದುವುದಿಲ್ಲ, ರುಬ್ಬುವುದಿಲ್ಲ, ಬಟ್ಟೆ ಒಗೆಯುವುದಿಲ್ಲ. ಪಾತ್ರೆ, ಅಡಿಗೆ ಇನ್ನಿತರ ಕೆಲಸಗಳಿಗೆ ಸಹಾಯಕರನ್ನು ಬಳಸಿ ಸುಃಖ ಪಡುತ್ತಿದ್ದಾನೆ. ಓಡಾಡಲು ವಾಹನಗಳು, ಐಷಾರಾಮಿ ಬಂಗಲೆ ಒಂದಾ ಎರಡಾ. ಆದರೆ ಈ ಮೂಕ ಪ್ರಾಣಿಗಳ ಬದುಕು ದಿನ ದಿನ ಹೋದಂತೆ ಕ್ರೂರವಾಗುತ್ತ ಹೋಗುತ್ತಿದೆ. ಅವುಗಳಿಗೆ ಇವರಾಟ ಆಡುವ ದಿನ ಅವುಗಳ ಮನಸ್ಥಿತಿ ಹೇಗಿರುತ್ತದೆ, ಆರೋಗ್ಯ ಹೇಗಿರುತ್ತದೆ, ಅವುಗಳ ಕೊರಗೇನು ಯಾರಾದರೂ ಪರಿಗಣಿಸುತ್ತಾರಾ? ಇಲ್ಲ ನಾನು ಸಾಕಿದ್ದೇನೆ, ನನ್ನ ಸೊತ್ತು, ನಾನೇಳಿದಂತೆ ಅವು ಕೇಳಬೇಕು, ಸಾಯಲೂ ರೆಡಿ ಇರಬೇಕು. ಇದು ಮಾನವನ ಧೋರಣೆ. ಮಕ್ಕಳಂತೆ ಸಾಕಿದ್ದೇನೆ ಅನ್ನುವ ಮಾತು ಬೇರೆ. ಹಾಗಾದರೆ ಇವರ ಮಕ್ಕಳನ್ನು ಹೀಗೆ ಬಳಸಿಕೊಳ್ಳುತ್ತಾರಾ?

ಮನುಷ್ಯ ಹೇಗೆ ತನ್ನ ಜೀವನ ಸುಲಭ, ಐಷಾರಾಮಿ ಮಾಡಿಕೊಳ್ಳುತ್ತಿದ್ದಾನೊ ಅದೆ ರೀತಿ ಪ್ರಾಣಿಗಳ ವಿಷಯದಲ್ಲಿ ಯಾಕೆ ಯೋಚಿಸುತ್ತಿಲ್ಲ.? ಏಕೆಂದರೆ ಮನುಷ್ಯ ಮಹಾ ಸ್ವಾರ್ಥಿ. ತನಗೆ ಯಾವುದು ಸುಲಭ, ಮೋಜು ಮಸ್ತಿಗೆ, ಬಾಯಿ ಚಪಲಕ್ಕೆ ಪ್ರಾಣಿಗಳು ಗುರಿ. ಹಬ್ಬ ಹುಣ್ಣಿಮೆ ಅದೆಷ್ಟು ಹಳಬರಂತೆ ನಡೆಸಿಕೊಂಡು ಬರುತ್ತಿದ್ದಾರೆ? ಇಲ್ಲ ಅದಕ್ಕೆಲ್ಲ ಟೈಮಿಲ್ಲ, ಅದು ಕಂದಾಚಾರ, ಮಡಿ ಮೈಲಿಗೆ ಎಲ್ಲ ಸುಳ್ಳು. ನಾವು ಆಧುನಿಕತೆಯಲ್ಲಿ ಇರುವವರು. ಹಳೆ ಕಾಲದವರಂತೆ ಯೋಚಿಸೋಕಾಗುತ್ತಾ? ಈಗೇನಿದ್ರೂ ಪಟಾಪಟ್,ರೆಡಿಮೇಡ್ ಪೂಜೆ, ಮಂತ್ರ. ಮದುವೆ, ಸಂಸಾರ ಎಲ್ಲ ಮೊಡರ್ನ. ಎಲ್ಲರೂ ಸ್ವತಂತ್ರವಾಗಿ ಯೋಚಿಸಬೇಕು. ಹೆತ್ತವರು ತಮ್ಮ ಕೊನೆಗಾಲದ ಬಗ್ಗೆ ಯೋಚನೆ, ಯೋಜನೆ ಮಾಡಿಕೊಂಡಿರಬೇಕಪ್ಪಾ? ನಾವು ನಮ್ಮ ಕ್ಯಾರಿಯರ್ ನೋಡಿಕೊಳ್ಳೋದು ಬೇಡ್ವಾ? ಇತ್ಯಾದಿ.

ಇಷ್ಟೆಲ್ಲಾ ಮುಂದುವರಿದ ಮನುಷ್ಯ ಪ್ರಾಣಿಗಳನ್ನು ಬಳಸಿಕೊಂಡು ಆಡುವ ಗ್ರಾಮೀಣ ಕ್ರೀಡೆಯನ್ನೂ ಸುಧಾರಣೆಗೆ ತರಲಿ. ಆ ಹಬ್ಬ ಹುಣ್ಣಿಮೆಗಳಲ್ಲಿ ವಿಶೇಷ ಮುತುವರ್ಜಿವಹಿಸಿ ಅವುಗಳನ್ನು ನೋಡಿಕೊಂಡು ಅವುಗಳಿಗೆ ಯಾವುದೆ ಹಿಂಸೆ ಮಾಡದೆ ಮನೆ ಮಕ್ಕಳೊಂದಿಗೆ ಆಡುವಂತೆ ಅವುಗಳ ಚಲನವನ್ನರಿತು ಕ್ರೀಡೆಗೆ ತೊಡಗಿಸಿಕೊಳ್ಳಲಿ. ಆಯಾಯಾ ಪ್ರಾಣಿಗಳನ್ನು ಮಾತ್ರ ಬಳಸಿ ಹಿಂಸೆಯಿಂದ ಮುಕ್ತಗೊಳಿಸುವತ್ತ ತನ್ನ ಹೆಜ್ಜೆ ಇಡುವ ಕುರಿತು ಪ್ರತಿಯೊಬ್ಬ ಮನುಷ್ಯ ವಿಚಾರ ಮಾಡಲಿ. ಆಯಾ ಪ್ರದೇಶದ ಹಿರಿಯ ಮುಖಂಡರು ಸೇರಿ ಚರ್ಚಿಸಿ ಒಂದು ಒಳ್ಳೆಯ ತೀರ್ಮಾನ ತೆಗೆದುಕೊಳ್ಳುವ ಮನಸ್ಸು ಮಾಡಿ ಪ್ರಾಣಿಗಳ ಜೀವನ ಸುಃಖಮಯಗೊಳಿಸಲಿ. ಆದಿನಗಳು ಬೇಗ ಬರಲಿ.

25-1-2017. 11.12am

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!