ಡೈನಿಂಗ್ ಟೇಬಲ್

ಗೃಹಿಣಿಯೆ ಮನೆಗೆ ಪ್ರಧಾನ. ನಾ ಒಪ್ಪುವೆ. ಆದರೆ ಮನೆಯ ಸರ್ವಾಂತರ್ಯಾಮಿ ಅಂದರೂ ತಪ್ಪಿಲ್ಲ ಈಗಿನ ಕಾಲದ ಡೈನಿಂಗ್ ಟೇಬಲ್. ಇಡೀ ಮನೆಯ ಸುದ್ದಿ ಸಮಾಚಾರ, ಚರ್ಚೆ ಎಲ್ಲ ನಡೆಯೋದು ಇದರ ಮುಂದೆ ಕೂತು. ಊಟಕ್ಕೂ, ತರಕಾರಿ ತಂದಿಡೋಕೂ, ಮಕ್ಕಳ ಹೋಂ ವರ್ಕ ಮಾಡಿಸಲು ಗೃಹಿಣಿಗೆ ಹೇಳಿ ಮಾಡಿಸಿದ ಸ್ಥಳ. ಯಾಕೆಂದರೆ ಹೆಚ್ಚಿನ ಗೃಹಿಣಿಯರಿಗೆ ಕೆಳಗೆ ಕುಳಿತು ಕೊಳ್ಳೋದು ಕಷ್ಟ ಹಾಗೆ ಹಂಗಂಗೆ ಪಾಠ ಹೇಳಿ ಕೊಡುತ್ತ ಅಡಿಗೆ ತಯಾರಿನೂ ಸಲೀಸಾಗಿ ಮಾಡಲು ನೆರವಾಗುತ್ತದೆ. ಅದೇ ರೀ…ಈರುಳ್ಳಿ, ಬೆಳ್ಳುಳ್ಳಿ, ತರಕಾರಿ ಬಿಡಿಸೋದು. ಅಯ್ಯೋ! ಅದೆಷ್ಟು ವಿಶಾಲ ಬುದ್ಧಿ ಈ ಡೈನಿಂಗ್ ಟೇಬಲ್ಲಿಗೆ. ಹೊರಗಡೆಯಿಂದ ಏನು ತಂದರೂ ಮೊದಲು ವಿರಾಜ ಮಾನ ಆಗೋದು ಇಲ್ಲೆ.

ಅದು ಇರಲಿ, ಬೆಳಗಿನ ಬಿಸಿ ಬಿಸಿ ಚಹಾ ಹೀರುತ್ತ ಪೇಪರಲ್ಲಿ ಬರೊ ಸತ್ತವರ ಸುದ್ದಿಯಿಂದ ಹಿಡಿದು ಬುಡದಿಂದ ಕೊನೆಯವರೆಗೂ ನಿರಾಳವಾಗಿ ಓದಲು ಸಹಕಾರಿಯಾಗೋದು ಇದೆ ಟೇಬಲ್ಲು. ಅಮ್ಮಾ ತಿಂಡಿ ಮಗರಾಯ “ಡಂಕಣಕ ಡಂಕಣಕ” ತಬಲಾ ಬಾರಿಸಿದರೂ ಊಹೂಂ ಬೇಡ ಅನ್ನೋದೆ ಇಲ್ಲ. ನೋಡೆ ನಾನು ಆಫೀಸಿಗೆ ಹೊರಡತೀನಿ,ದುಡ್ಡು ಅಲ್ಲೆ ಟೇಬಲ್ ಮೇಲೆ ಇಟ್ಟಿದ್ದೀನಿ ಅಂತ ಎಜಮಾನರು ತಿಂಗಳು ಕರ್ಚಿಗೆ ಕೊಡೊ ಬಾಬತ್ತಿಗೂ ಇದೆ ಟೇಬಲ್ಲೆ ಆಗಬೇಕು. ಇದೇನೆ ನಿಂದು ಇಲ್ಲಿ ಬಂದು ಕೂತಿದೀಯ, ಬೇರೆಲ್ಲೂ ಜಾಗ ಸಿಗಲಿಲ್ವಾ ಅಂತ ಕೇಳಿದರೂ ಒಮ್ಮೆ ಕೂಡಾ ತುಟಿಪಿಟಕ್ ಅನ್ನದೆ ಮಗಳು ನವಿರಾದ ಬೆರಳ ಉಗುರಿಗೆ ಬಣ್ಣ ಹಚ್ಚುವ ಜಾಗ ಅಂದರೆ ಇಲ್ಲೆ.

ಬಹುಶಃ ಕೆಲವರ ಮನೆಗಳಲ್ಲಿ ಈ ಟೇಬಲ್ ಚಿಕ್ಕ ಉಗ್ರಾಣವೆ ಆಗಿರುತ್ತದೆ. ನೀರಿನ ಬೇಡಾದ,ಬೇಕಾದ ಬಾಟಲ್ಲುಗಳು, ಹಿರಿ ಕಿರಿಯರ ಔಷಧ ಮಾತ್ರೆಗಳು, ತರಕಾರಿ, ಹೂವು, ಹಣ್ಣು ಇತ್ಯಾದಿ ಎಲ್ಲ ಪೇರಿಸಿಟ್ಟಿರೋದು ನೋಡಿದ್ದೇನೆ. ಏಕೆಂದರ ಮನೆಯ ಸರ್ವಸ್ವ, ವಿವಾದ ರಹಿತ ತಾಣ ಅಂದರೆ ಈ ಟೇಬಲ್ ಮಾತ್ರ.

ಇನ್ನು ಕೆಲವರ ಮನೆಯಲ್ಲಿ ಅಂದವಾಗಿ ಹೂವಿನ ಗುಚ್ಛ, ಹಣ್ಣಿನ ಚಂದದ ಬುಟ್ಟಿ, ಹೀಗೆ ಊಟದ ಕೆಲವು ಅಗತ್ಯ ಪರಿಕರಗಳನ್ನು ಜೋಡಿಸಿ ಅಂದ ಹೆಚ್ಚಿಸಿರುತ್ತಾರೆ. ಗ್ಲಾಸಿನ ಟೇಬಲ್ ಆದರಂತೂ ಅದರಂದ ಇಮ್ಮಡಿಯಾಗಿ ಕಾಣಿಸುತ್ತದೆ. ಅರೆ! ಹೌದಲ್ಲ ಎಷ್ಟು ಚಂದ ಇದೆ ಜೋಡಣೆ ಅಂತ ಒಮ್ಮೆ ಹತ್ತಿರ ಹೋಗಿ ನೋಡಿದೆ ಹಣ್ಣುಗಳು ಒರಿಜಿನಲ್ಲ ಅಲ್ಲವೆ ಅಲ್ಲ, ಇನ್ನು ಹೂವು ಅದೂ ಒರಿಜಿನಲ್ ಅಲ್ಲ. ಎಲ್ಲವೂ ಡೈನಿಂಗ್ ಟೇಬಲ್ ಶೃಂಗಾರದ ಸಾಧನಗಳು. “ಅದ್ಯಾವುದೊ ಎಗ್ಜಿಬಿಷನ್ ನಲ್ಲಿ ತಂದಿದ್ದು ಕಂಡ್ರೀ…. ಬಹಳ ಚಂದ ಇದೆ ಅಲ್ವಾ? ” ಅಯ್ಯೋ ರಾಮಾ! ಇದೇನಿದು ಎಲ್ಲವೂ ಶೃಂಗಾರಮಯ. ಟೇಬಲ್ಲಿಗೂ ಮದುವಣಗಿತ್ತಿ ಶೃಂಗಾರ ಮಾಡಬಹುದು ; ಅದೆ ಈಗೆಲ್ಲ ಆರ್ಟಿಫಿಶಲ್ ಒಡವೆ ಅದೂ ಇದೂ ಸಿಗುತ್ತಲ್ಲ ಹಾಗೆ. ಅಲ್ಲೊಂದು ಮುದ್ದಾದ ಹೂ ದಾನಿ,ಅದರಲ್ಲಿ ಪೋರ್ಕುಗಳು, ಪೋರ್ಕುಗಳ ಹಿಡಿಕೆಗಳಿಗೆ ಹಾರ್ಟ ಶೇಪ್ ಬಟನ್ಗಳು. ಅಯ್ಯಪ್ಪಾ ಅವರ ಮನೆಯಲ್ಲಿ ಊಟ ಮಾಡಲು ಕುಳಿತರೆ ಅದಿನ್ನೇನೇನು ಚಿತ್ರ, ವಿಚಿತ್ರ ಪರಿಕರಗಳಿಂದ ಈ ಟೇಬಲ್ ಶೃಂಗಾರಗೊಳ್ಳುತ್ತೊ ಅಂತ ಮನಸ್ಸು ಲೆಕ್ಕ ಹಾಕಲು ಶುರು ಮಾಡಿತು.

ಹೀಗೆ ಬರೆಯುತ್ತ ಹೋದರೆ ಇದನ್ನು ಬಳಸುವ ರೀತಿ ಇನ್ನೂ ಹಲವಾರು ಇವೆ. ಅವರವರ ಮನೆಗೆ ತಕ್ಕಂತೆ ಬೆಂಡಾಗುವ ಮೌನ ಗೌರಿ.

ನಿಜ. ಆಧುನಿಕ ಜಗತ್ತಿನ ಥಳಕು ಬಳುಕಿಗೆ ಒಂದು ಚೂರೂ ದೇಹಕ್ಕೆ ಶ್ರಮವಾಗದಂತೆ ನಮ್ಮನ್ನು ಪರೋಕ್ಷವಾಗಿ ನೋಡಿಕೊಳ್ಳುವ ಸಾಮಾನ್ಯವಾಗಿ ಎಲ್ಲ ಮನೆಯ ಸಾಧನ ಅಂದ್ರೆ ಈ ಟೇಬಲ್. ಹಿಂದೆಲ್ಲ ಬಾಡಿಗೆ ಮನೆಯಲ್ಲಿ ಇರುವಾಗ ಕಂಡವರ ಮನೆ ಟೇಬಲ್ ನೋಡಿದಾಗಲೆಲ್ಲ ನಮ್ಮನೆಯಲ್ಲೂ ಇದ್ದಿದ್ದರೆ, ಹಾಕಲು ಜಾಗವಿಲ್ಲದೆ ಖರೀದಿ ಮಾಡುವ ಉಮೇದಿಗೆ ಕಡಿವಾಣ ಹಾಕಿದ್ದೆ. ಅದರಲ್ಲೂ ಟಿವಿ ಸೀರಿಯಲ್ಲ ಯಾವುದೇ ನೋಡಲಿ ಅಲ್ಲಿ ಕೂಡಾ ಈ ಟೇಬಲ್ ಹಲವಾರು ಸನ್ನಿವೇಶದಲ್ಲಿ ಕಣ್ಣಿಗೆ ಬೀಳುತ್ತಿತ್ತು. ಅದೇ ಆ ಪಾಪ ಪಾಂಡು ನಗೆ ಚಟಾಕಿ ಹೆಚ್ಚಿನವುಗಳು ಈ ಟೇಬಲ್ ಕೇಳಿಸಿಕೊಂಡಿದ್ದೇ ಜಾಸ್ತಿ. ಅಲ್ಲಿ ಹಲವಾರು ಕಸರತ್ತು. ಮೇಲತ್ತೋದಂತೆ,ಅಡಿಗೆ ಅಡಕೊಳೋದಂತೆ ಇತ್ಯಾದಿ.

ಅದ್ಯಾವತ್ತು ಮನೆ ಕಟ್ಟೋದು ಅಂತ ಪ್ಲ್ಯಾನ್ ರೆಡಿ ಆಯಿತೊ, ಅಕಸ್ಮಾತ್ ಸಿಕ್ಕ ಬಡಗಿಗೆ ಮೊದಲು ಆರ್ಡರ್ ಮಾಡಿದ್ದು ಅಂದರೆ ಈ ಟೇಬಲ್ಲು. ಅದೂ ಇಲ್ಲೆಲ್ಲೂ ಅಲ್ಲ, ಶಿಖಾರಿಪುರದಿಂದ ಪೊಗದಸ್ತಾದ ರೋಸ್ ವುಡ್. ಹಂಗೆ ಸೋಫಾಸೆಟ್ ಆರ್ಡರ್ ಜಡಾಯಿಸಿದ್ದೆ!. ಎಜಮಾನರಿಗೆ ದುಂಬಾಲು ಬಿದ್ದು. ಅಯ್ಯೋ! ನಿನೊಂದು ಅದಕ್ಯಾಕೆ ಅರ್ಜಂಟು,ಆಮೇಲೆ ತಗೊಂಡರೆ ಆಗಲ್ವ? ಕೇಳಬೇಕಲ್ಲ. ಒಳಗಿನ ತರಾತುರಿ ಮನಸ್ಸು. ಇವತ್ತಿಗೂ ನೆನಪಾದರೆ ನನ್ನ ಬುದ್ಧಿಗೆ ನಾನೆ ನಗ್ತೀನಿ.

ಏನೆ ಆಗಲಿ ಈ ಡೈನಿಂಗ್ ಟೇಬಲ್ ಮಾತ್ರ ನನ್ನ ದಿನನಿತ್ಯದ ಸಂಗಾತಿ. ಇದು ಬರೆದಿದ್ದು ಅದರ ಆಸರೆಯಲ್ಲೆ. ಈಗ ಹೇಳಿ ಗೃಹಿಣಿಗಿರುವಷ್ಟೆ ಪ್ರಾಧಾನ್ಯತೆ ಮನೆಯವರೆಲ್ಲರ ತಾಣವಾಗಿರುವ ಈ ಡೈನಿಂಗ್ ಟೇಬಲ್ಲಿಗೂ ಕೊಡಬೇಕು ಅಲ್ವಾ? ಸರಿ ಅಂದವಾಗಿ ಜೋಡಿಸಿ ಚಂದವಾಗಿ ನೋಡಿಕೊಳ್ಳಿ.

24-2-2017. 2.57pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

2 thoughts on “ಡೈನಿಂಗ್ ಟೇಬಲ್”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s