ಮಲೆನಾಡಿನ ಹವ್ಯಕರಲ್ಲಿ ಗಣೇಶ ಹಬ್ಬದ ಆಚರಣೆ (ಭಾಗ -1)

ಓಂ ನಮೋ ನಮಃಸ್ತುಭ್ಯಂ
ಗಣರಾಜ ಮಹೇಶ್ವರಃ
ಸರ್ವ ವಿಘ್ನ ಹರೋದೇವಾ
ಪ್ರಥಮಂ ತವ ವಂದನಾ||

ಈ ಶ್ಲೋಕ ನನ್ನ ಆಯಿ(ಅಮ್ಮ) ದಿನವೂ ದೇವರಿಗೆ ನಮಸ್ಕಾರ ಮಾಡುವಾಗ ಮೂರೊತ್ತೂ ಹೇಳುತ್ತಿದ್ದರು.ದಿನವೂ ಕೇಳುವ ಕಿವಿಗಳು ನನ್ನ ಬಾಯಲ್ಲಿ ಉದುರಲು ಪ್ರಾರಂಭವಾಗಿರೋದು ತೊದಲು ನುಡಿಗಳ ವಯಸ್ಸಿನಲ್ಲಿ. ಅದೂ ಆಯಿಯೊಂದಿಗೆ ಕ್ರಮೇಣ ದಿನವೂ ಲೊಚ ಲೊಚ ಭಾಷೆಯಲ್ಲಿ ಹೇಳುವಾಗ ಆಯಿಯ ಮುಖದಲ್ಲಿ ಗಿಕಿ ಗಿಕಿ ನಗು, ತನ್ನ ಮಗಳು ಮಹಾ ಬುದ್ಧಿವಂತೆ ಎಲ್ಲರೆದುರು ಕೊಚ್ಚಿಕೊಂಡಿದ್ದೆ ಕೊಚ್ಚಿಕೊಂಡಿದ್ದು.

ನನಗೇನು ಗೊತ್ತು ಈ ಶ್ಲೋಕ ಯಾಕೆ ಹೇಳುತ್ತಾರೆ? ಗೂಡಲ್ಲಿ ಅದೇನೇನೊ ಮೂರ್ತಿಗಳು, ಫೋಟೊಗಳು, ದಿನಾ ಗಂಟೆ ಭಾರಿಸುತ್ತಾರೆ, ತೊಳಿತಾರೆ,ಬೆಂಕಿ ಹಚ್ಚುತ್ತಾರೆ(ದೀಪ) ಮೇಲಿಂದ ಕೆಳಕ್ಕೆ ಕೈ ಆಡಿಸುತ್ತಾರೆ, ಹಾಲು ಮೊಸರು ಮುಂದೆ ಇಡ್ತಾರೆ ಹೀಗೆ ಹಲವಾರು ಅರ್ಥವಾಗದ ವಿಷಯಗಳು ತಲೆಯಲ್ಲಿ. ಅದಕೆ ಏನೇನೊ ಪ್ರಶ್ನೆ ಕೇಳಿ ಹೊಗಳಿಸಿಕೊಂಡು ಅಟ್ಟಕ್ಕೆ ಏರಿದ್ದೇನೆ ಬೇಡಾದ ಪ್ರಶ್ನೆ ಕೇಳಬಾರದು ಅಂದರೂ ಕೇಳಿ ಸಖತ್ ಬೈಯ್ಯಿಸಿಕೊಂಡಿದ್ದೇನೆ. ಆಗೆಲ್ಲ “ಹೋಗು ದೇವರ ಹತ್ತಿರ ಕ್ಷಮೆ ಕೇಳು ” ಅಂತಿದ್ರು. ಮತ್ತೂ ಬಿಡದೆ “ಅಲ್ಲಿ ಯಾರ ಹತ್ತಿರ ಕೇಳಲಿ ತುಂಬಾ ದೇವರಿದೆ?” “ಅಯ್ಯೋ ! ನನ್ನ ತಲೆ ಬಡಕ ಬೇಕು ಹೋಗು ಆ ಗಣೇಶನ ಹತ್ತಿರ ಹೋಗಿ ಹೇಳು.” “ಆಯಿ ಗಣೇಶ ಅಂದರೆ ಯಾವುದು?” ” ಅದೆ ಸೊಂಡಿಲು ಇರೋದು ನೋಡೆ ಸಾಕು.”(ಇವೆಲ್ಲ ನನಗೆ ತಿಳುವಳಿಕೆ ಬಂತಂತೆ ಆಯಿ ಆಗಾಗ ಹೇಳಿ ನಗುತ್ತಿದ್ದರು.)

ಮೊಂಡು ಬುದ್ಧಿಯ ನನ್ನ ತಲೆಯಲ್ಲಿ ತಪ್ಪು ಮಾಡಿದರೆ ಗಣೇಶನಲ್ಲಿ ಹೇಳಬೇಕು, ದೇವರು ಅಂದರೆ ಅವನೆ ಇತ್ಯಾದಿ ತಲೆ ಹೊಕ್ಕಿಸಿದ್ದು ನನ್ನ ಹೆತ್ತಮ್ಮ. ಇಂದಿಗೂ ನನ್ನ ಆರಾಧ್ಯ ದೈವ ಆ ಶ್ರೀ ಗಣೇಶ. ಆ ಅಮ್ಮನೆಂಬ ಗುರುವಿನ ಮುಂದೆ ಇನ್ನಾರ ಕಾಣಲಿ! ಅದಕ್ಕೆ ನಮ್ಮೂರಿನ ಹವ್ಯಕರ ಮನೆಗಳಲ್ಲಿ ನಡೆಯುವ ವಿಜೃಂಭಣೆಯ “ಗಣೇಶ ಹಬ್ಬದ” ಕುರಿತು ಬರೆಯಲೇ ಬೇಕು ಅನಿಸಿತು.

ನನಗಂತೂ ಗಣೇಶ ಹಬ್ಬ ಅಂದರೆ ನಮ್ಮೂರಿಂದಪ್ಪಾ. ಅಲ್ಲಿದು ಬಿಟ್ಟರೆ ಬೇರೆಲ್ಲಿ ನೋಡಿದರೂ ಟುಸ್. ನನಗೆ ಬುದ್ಧಿ ಬಂದಾಗಿನ ನೆನಪಿನೊಂದಿಗೆ ಈ ಹಬ್ಬದ ಸಡಗರ ಹೇಳ್ತೀನಿ ಕೇಳಿ.

ಸೃಷ್ಟಿ ಸೌಂದರ್ಯದ ತವರೂರಾದ ಮಲೆನಾಡಿನ ಪುಟ್ಟ ಹಳ್ಳಿಯ ಮಡಿಲಲ್ಲಿ ಇದೆ ನಮ್ಮೂರು ಹೆಸರು ಕಲ್ಮನೆ, ಕಾರವಾರ ಜಿಲ್ಲೆ. ನಮ್ಮದು ಬ್ರಾಹ್ಮಣರಲ್ಲಿ ಹವ್ಯಕ ಕುಟುಂಬ. ಈ ಜಿಲ್ಲೆಯಾದ್ಯಂತ ನೂರಾರು ಹವ್ಯಕ ಕುಟುಂಬಗಳು ಅಲ್ಲಲ್ಲಿ ನಾಲ್ಕು ಐದು ಮನೆಗಳಿಂದ ಸಣ್ಣ ಸಣ್ಣ ಹಳ್ಳಿಗಳಾಗಿ ಪುರಾತನ ಕಾಲದಿಂದಲೂ ನೆಲೆ ನಿಂತಿವೆ. ಒಂದೊಂದು ಹಳ್ಳಿಗೂ ಒಂದೊಂದು ಹೆಸರು.

ಸುಮಾರು 1970-71ನೇ ಇಸವಿ ಇರಬಹುದು. ಇನ್ನೂ ಫ್ರಾಕ್ ಹಾಕಿಕೊಂಡು ಥೈ ಥೈ ಜಿಗಿಯೊ ವಯಸ್ಸು. ಮುಕ್ತ ಮನಸ್ಸಿನಿಂದ ಹಬ್ಬಗಳಲ್ಲಿ ಸಂಭ್ರಮ ಪಟ್ಟಿದ್ದು ಆಗಲೆ. ಅದರಲ್ಲೂ ಈ ಚೌತಿ ಹಬ್ಬಕ್ಕೆ (ಗಣೇಶನ ಹಬ್ಬ ಹೀಗೆ ಹೇಳೋದು) ಒಂದು ವಾರಕ್ಕೆ ವೊದಲೆ ನಮ್ಮ ಮಕ್ಕಳ ಗುಂಪು ನಮ್ಮೂರ ಓಣಿ ಬಾಗಿಲ (ಊರ ಎಂಟ್ರೆನ್ಸ) ರಸ್ತೆ ಪಕ್ಕದಲಿರೊ ಊರ ಪಟೇಲನ ಭತ್ತದ ಗೊಣಬೆ ಹಾಕೊ ಕಣದಲ್ಲಿ ಮೀಟಿಂಗು ಸೇರುತ್ತಿತ್ತು.

ಚೌತಿ ಹಬ್ಬಕ್ಕೆ ಎಷ್ಟು ದೊಡ್ಡ ಗಣೇಶ ತರತಾರೆ? ಕೆಂಪದ ಅಥವಾ ಗುಲಾಭಿ ಕಲರಿಂದ? ಬಲಮುರಿನ ಎಡಮುರಿನ? ಯಾವ ರೀತಿ ಶೃಂಗಾರ ಮಾಡಬೇಕು? ಗಣೇಶನನ್ನು ಯಾವ ಹೊಳೆಯಲ್ಲಿ ಬಿಡೋದು? ಹೊಸಾ ಬಟ್ಟೆಗೆ ಸ್ಕೆಚ್, ತಿಂಡಿಗಳ ನೆನಪಲ್ಲಿ ಬಾಯಿ ಚಪ್ಪರಿಸೋದು, ಪಟಾಕಿ ಇತ್ಯಾದಿ ಎಲ್ಲ ಚರ್ಚೆಯೊಂದಿಗೆ ತೀರ್ಮಾನ ನಮ್ಮ ನಮ್ಮಲ್ಲಿ ನಡೆಯುತ್ತಿತ್ತು. ಎಲ್ಲ ಜವಾಬ್ದಾರಿ ಹಿರಿಯರದೆ ಆದರೂ ಮನೆಯಲ್ಲಿ ನಮಗೆ ಬೇಕಂತೆ ಹಠ ಮಾಡಲು ಇದು ಪೂರ್ವ ತಯಾರಿಯ ವೇದಿಕೆ ಅಷ್ಟೆ.

ಆದರೆ ಈ ಗಣೇಶ ಹಬ್ಬಕ್ಕೆ ತಲೆ ತಲಾಂತರದಿಂದ ಮನೆತನದಲ್ಲಿ ನಡೆದುಕೊಂಡು ಬಂದಂತೆ ಹಲವು ಪದ್ಧತಿಗಳನ್ನು ನಡೆಸಿಕೊಂಡು ಬರಬೇಕಾಗಿತ್ತು. ಅದು ಈಗಲೂ ಮುಂದುವರೆದಿದೆ. ಆದರೆ ಚಿಕ್ಕವರಾದ ನಮಗೆ ಇದೆಲ್ಲ ಗೊತ್ತಾಗುತ್ತಿರಲಿಲ್ಲ. ಮನಸಿಗೆ ಅನಿಸಿದ್ದು ಬೇಕು, ಮಾಡಬೇಕು ಅಷ್ಟೆ. ಹಠದಲ್ಲಿ ಗೆಲ್ಲಲಾಗದಿದ್ದರೆ ಅಳೋದು ಇದ್ದಿದ್ದೆ. ಆದರೆ ಇದು ಅರೆ ಕ್ಷಣ. ಮಕ್ಕಳ ಮನಸ್ಸು ಹಾಗೆ ಅಲ್ಲವೆ?

ಹಬ್ಬಕ್ಕೆ ಹದಿನೈದು ದಿನಗಳಿರುವಾಗಲೆ ಹಬ್ಬದ ತಯಾರಿ ಶುರುವಾಗುತ್ತದೆ. ಭಾದ್ರಪದ ಶುಕ್ಲ ತೃತೀಯ ದಿನ ಸ್ವರ್ಣ ಗೌರಿ ವೃತವಾದರೆ ಮಾರನೆ ದಿನ ಚತುರ್ಥಿ ಚೌತಿಯ ದಿನ ಈ ಹಬ್ಬ ಆಚರಿಸುವ ಪದ್ಧತಿ. ಮಳೆಗಾಲ ಅಲ್ಪ ಸ್ವಲ್ಪ ಇರುತ್ತದೆ. ಅಡಿಕೆ ತೋಟದ ಕೆಲಸ ಹಬ್ಬದ ತಯಾರಿಗೆ ಅಡ್ಡಿ ಆಗದಂತೆ ಪೂರೈಸಿಕೊಳ್ಳುವ ಜವಾಬ್ದಾರಿ ಬೇರೆ.

ನಮಗೊ ಹಬ್ಬಕ್ಕೆ ತಂದ ಪಟಾಕಿ ಎಲ್ಲಿ ಬಿಸಿಲಿದೆ ನೋಡಿ ಅಲ್ಲಿ ಒಣಗಿಸೋದು, ಮಳೆ ಮೋಡವಾದರೆ ಮುಗೀತು ; ಕಂಬಳಿ ಒಣ ಹಾಕಲು ಮಾಡಿರುವ ಬೆಂಕಿಯ ಹೊಡತಲದ ಪಕ್ಕದಲ್ಲಿ ಒಣಗಿಸೊ ಪ್ರಯತ್ನ ಬಿಸಿ ಭೂದಿಯ ಶಾಖದಲ್ಲಿ. ಸುರ್ ಸುರ್ ಬತ್ತಿ,ಆನೆ ಪಟಾಕಿ,ಕುಡಿಕೆ,ನೆಲಚಕ್ರ, ಸರ್ ಪಟಾಕಿ, ಕೇಪು ಹೀಗೆ ಹಲವಾರು ಪಟಾಕಿ ಹೊಡೆಯುವ ಸಡಗರ ಹಬ್ಬದ ನಾಲ್ಕು ದಿನದಿಂದಲೆ. ” ಕೊಟ್ಟಿಗೆಯಲ್ಲಿ ಹಸುಗಳೆಲ್ಲ ಹೆದರತ,ಈಗಲೆ ಹೊಡೆಯಡದ್ರೆ, ಎಮ್ಮೆ ಹಾಲು ಕೊಡ್ತಿಲ್ಲೆ” ಅಜ್ಜಿ ಒಂದೆ ಸಮ ಗಲಾಟೆ ಮಾಡುತ್ತಿದ್ದರೂ ನಮಗೆ ಕಿವಿಗೆ ಬೀಳುತ್ತಿರಲಿಲ್ಲ.

ಮುಂದುವರಿಯುವುದು (ಭಾಗ-2)ರಲ್ಲಿ

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s