ಉಧ್ಯೋಗ ಕ್ಷೇತ್ರ(ಭಾಗ-1)

(ಚಿತ್ರ ಕೃಪೆ – ಗೂಗಲ್)

ಅದೊಂದು ದೊಡ್ಡ ಹಾಲ್. ನಾಲ್ಕು ಜನ ಕುಳಿತುಕೊಳ್ಳುವಷ್ಟು ಎತ್ತರವಾದ ಉದ್ದನೆಯ ಕೌಂಟರ್ ಎದುರಿಗೆ ಗೋಡೆಗೆ ಸಮನಾಗಿ. ಅಲ್ಲಿ ಮೂರು ಜನ ಕುಳಿತವರ ದೃಷ್ಟಿ ನನ್ನ ಮೇಲೆ ಇದೆ. ಅದು ನನ್ನರಿವಿಗೆ ಬಂದರೂ ಏನೂ ಗೊತ್ತಿಲ್ಲದವರಂತೆ ತಲೆ ತಗ್ಗಿಸಿ ಕೆಲಸ ಮಾಡುತ್ತಿದ್ದೇನೆ. ದೇಹವೆಲ್ಲ ಸಂಕೋಚದಿಂದ ಮುದುಡಿದ ಅನುಭವ.

ಕೌಂಟರ ಒಂದು ಮೂಲೆಯ ಪಕ್ಕ ಲೆಕ್ಕಾಧಿಕಾರಿಯವರ ಟೇಬಲ್. ಒಂದಷ್ಟು ಫೈಲು, ಲೆಡ್ಜರ್, ಸ್ಥಿರ ದೂರವಾಣಿ ಇತ್ಯಾದಿ ಹರಡಿಕೊಂಡ ಟೇಬಲ್ ಹೊಟ್ಟೆ ತುಂಬಿದಂತೆ ಗೋಚರವಾಗುತ್ತಿತ್ತು. ಕುಳಿತ ಅಧಿಕಾರಿ ಒಮ್ಮೆ ಫೈಲ್ ನೋಡೋದು ಇನ್ನೊಮ್ಮೆ ದೂರವಾಣಿಯಲ್ಲಿ ಮಾತಾಡೋದು,ಮ್ಯಾನೇಜರ್ ಕರೆದರು ಅಂತ ಒಳಗೋಗೋದು, ಅವರ ಛೇಂಬರ್ನಲ್ಲಿ ಅದೇನು ಗುಟ್ಟೊ ನಾ ಕಾಣೆ. ಆಗಾಗ ಬರುವ ಕಸ್ಟಮರ್ ಜೊತೆ ಸಂಭಾಷಣೆ. ಟ್ರಣ್^^^^ ಬೆಲ್ಲೊತ್ತಿ ಪ್ಯೂನ್ ಕರೆಯುವ ವೈಖರಿ. ” ಬಂದೇ ಸಾರ್. ” ಗಡಿಬಿಡಿಯಲ್ಲಿ ಅವ ಓಡಿ ಬರುವಾ!

ಈ ಅವಕಾಶ ಉಪಯೋಗಿಸಿಕೊಂಡ ಆ ಮೂವರು ತಮ್ಮ ತಮ್ಮಲ್ಲೇ ಅದೇನೊ ಗುಸು ಗುಸು ಪಿಸು ಪಿಸು. ಒಂದೆರಡು ಮಾತುಗಳು ಅಸ್ಪಷ್ಟವಾಗಿ ಕಿವಿಗೆ ಬೀಳುತ್ತಿದ್ದವು. ಎಲ್ಲರೂ ಬ್ರಹ್ಮಚಾರಿಗಳೋ ಏನೋ! ಅವರ ಕಳ್ಳ ನೋಟ ನನಗೆ ಹಾಗನಿಸುತ್ತಿತ್ತು. ಇದ್ದಕ್ಕಿದ್ದಂತೆ ಗೊಳ್ಳನೆ ನಗು. ಕೌಂಟರ್ ಇನ್ನೊಂದು ತುದಿಯಲ್ಲಿ ಕ್ಯಾಷ್ ಕೌಂಟರಿನಲ್ಲಿ ಕೂತ ಮಹಾಶಯನದು. ಪಾಪ! ಬಾಯಿ ತುಂಬಾ ಕವಳದ ಎಂಜಲು ಜಗಿದೂ ಜಗಿದೂ ನುಣ್ಣಗಾಗಿರಬಹುದು. ಇವರಾಡುವ ಮಾತಿಗೆ ಉಕ್ಕಿ ಬಂದ ನಗುವಿಕೆ ಕೊಂಚ ಅಂಗಿ ಮೇಲೆ ರಾಡಿ ಮಾಡಿಕೊಂಡ ಭೂಪ ಜಂಗನೇ ನೆಗೆದೊಡೋಡಿ ನಾ ಕೂತ ಟೇಬಲ್ ಪಕ್ಕದ ಹೆಬ್ಬಾಗಿಲ ಕಡೆ ಬರುವಾಗ ಆ ಸ್ಥಿತಿಯಲ್ಲೂ ವಾರೆಗಣ್ಣಿಂದ ನನ್ನ ಕಡೆ ದೃಷ್ಟಿ ಹಾಯಿಸುವುದು ಮರೆಯಲಿಲ್ಲ. ನಾನೂ ಅವನ ಅವಸ್ಥೆ ನೋಡಿರುವುದರಿಂದ ತಾನೆ ಗೊತ್ತಾಗಿದ್ದು. ನಾನು ಸಂಭಾವಿತ ಪೋಕ್ರಿ ಅಂತ ಹೇಳಿಕೊಳ್ಳುತ್ತಿಲ್ಲ. ಆದರೂ…..ಹೇಳಿದೆ😊

ದಿನ ನಿತ್ಯ ಮೂರೊತ್ತೂ ಅವನ ಕವಳದ ಪಿಚಕಾರಿ ಪಕ್ಕದ ಓಣಿಯಲ್ಲಿ ಕೆಂಪಿನ ರಾಡಿ ರಾಚಿತ್ತು. ಅದಕ್ಕವನು ಕವಳದ ಗುಡ್ಡ ಅಂದು ನಗುತ್ತಿದ್ದ. ಇತ್ತ ಬಾಯಿ ಬರಿದು ಮಾಡಿ ಬಂದವನೆ ಮೂರು ಜನರೊಂದಿಗೆ ತಾನೂ ಸೇರಿದ ಮಾತಿನಲ್ಲಿ. ಇನ್ನೇನು ಕೇಳಬೇಕಾ? ಅವರವರಲ್ಲೇ “ತೂ ಸಾಂಗೊ, ಅಯ್ಯಪ್ಪಾ ಮಕ್ ಗೊತ್ನಾ, ತೂ ಪೊಳೆಲೆ? ಪೊಣ್ಣು ಬಾರೀಕಸಾ ಹೈವೇ?” ಇಂತಹ ಮಾತುಗಳು ನನಗರ್ಥ ಆಗಲಿಲ್ಲ. ಅಂತೂ ಇಂತೂ ಅವರಲ್ಲೊಬ್ಬವ ನಾನು ಅವರತ್ತ ನೋಡೋದೇ ಕಾಯ್ತಾ ಇದ್ದ ಅನಿಸುತ್ತದೆ. ಒಮ್ಮೆ ಆ ಕಡೆ ನೋಡಿದ್ದೇ ತಡ “ಬಾಯೋರೆ” ಅಂದಾ. ನಾನು ಆ ಕಡೆ ಈ ಕಡೆ ಅಕ್ಕ ಪಕ್ಕ ನೋಡಿದರೆ ಯಾರೂ ಇಲ್ಲ. ” ನಿಮಗೇ ಹೇಳಿದ್ದು.” ನನಗೊ ಹಾಂಗಂದರೆ ಏನು? ಯಾಕೆ ಹೀಗೆ ಕರಿತಾರೆ? ಅರ್ಥ ಆಗಲಿಲ್ಲ. ಅವನು ಮೀನು ತಿನ್ನುವ ಕೊಂಕಣಿ ಜನಾಂಗದವನು. ಬಲೂ ಸೂಕ್ಷ್ಮ, ಚೂಟಿ. ಗೊತ್ತಾಯಿತು ಅನಿಸುತ್ತದೆ. ” ಅದೇರಿ ನಾವು ಆಫೀಸಲ್ಲಿ ಹೆಣ್ಣು ಮಕ್ಕಳಿಗೆ ಬಾಯೋರೆ ಅಂತ ಕರೆಯೋದು. ಅದಕ್ಕೆ ನಿಮ್ಮನ್ನು ಹಾಗೆ ಕರೆದೆ.” ನಾನು ಏನೂ ಮಾತನಾಡಲಿಲ್ಲ. “ನಿಮ್ಮ ಹೆಸರೇನು? ಯಾವೂರು? ” ಹಿ…ಹಿ.. ಅಂದ. ಗೊತ್ತಾಯಿತು. ಬಹಳ ಗೌರವ ತೋರಿಸುತ್ತಿದ್ದಾರೆ, ಮಾತನಾಡಿಸುವ ಪೀಠಿಕೆ. ಎಲ್ಲಾ ಗೊತ್ತಿದೆ. ಸುಮ್ನೆ ಕೇಳೋದು, ಅದೂ ಗೊತ್ತಾಗಿದೆ ನನಗೆ. ಆದರೂ ಅವನು ಕೇಳಿದ್ದಕ್ಕೆ ಚುಟುಕು ಉತ್ತರ ಕೊಟ್ಟೆ. ನಂತರ ಇನ್ನೊಬ್ಬನು “ಇಲ್ಲಿ ಎಲ್ಲಿದ್ದೀರಿ? ಊರಿಂದ ಓಡಾಡ್ತೀರಿ?” ಪಾಕಡಾ ಇದೂ ಗೊತ್ತಲ್ಲಾ ಇವರಿಗೆ! ಪರವಾಗಿಲ್ವೆ. ನನ್ನ ವಾಚ್ ಮಾಡ್ತಿದ್ದಾರೆ. ಅದೆ ಆ ಕ್ಯಾಷಿಯರ್ ಬಾಯಿ ಖಾಲಿ ಆಗಿತ್ತಲ್ಲ, ಆಫೀಸ್ ಪ್ಯೂನ್ ಕರೆದು ಮಧ್ಯಾಹ್ನದ ಟೀಗೆ ಆರ್ಡರ್ ಮಾಡಿದ. ಮತ್ತೆ “ಬಾಯೋರೆ ನೀವು ಏನು ಕುಡಿತೀರಾ? ಏಯ್ ಹೋಗೊ ಅವರನ್ನು ಕೇಳಿ ಅವರಿಗೇನು ಬೇಕು ತಗೊಂಬಾ” ಸರಿ ನನಗೇನು ಬೇಕು ಅದು ಹೇಳಿದ್ದೂ ಆಯಿತು.

ಮೆಲ್ಲನೆ ಎದ್ದು ಬಂದ ಲೆಕ್ಕಾಧಿಕಾರಿ ನನ್ನ ಪಕ್ಕ ಬಂದು ನಿಂತರು. “ಏನ್ರೀ ಮಾಡ್ತಿದ್ದೀರಾ? ” ನನಗೊ ಹೊಸದಾಗಿ ಸೀರೆ ಉಟ್ಟ ಅವತಾರಕ್ಕೆ ಪಕ್ಕನೆ ಎದ್ದು ನಿಲ್ಲೋಕೆ ಆಗ್ತಿಲ್ಲ. ನೆರಿಗೆ ಕಾಲಡಿ ಸಿಕ್ಕಾಕಿಕೊಂಡು ಬಿಟ್ಟಿದೆ. “ಇರಲಿ ಇರಲಿ,ಕೂತಲ್ಲೇ ಹೇಳಿ.” ” ಸರ್ ಷೆಡ್ಯುಲ್ ಟೋಟಲ್ ಹಾಕ್ತಿದ್ದೇನೆ.” “ಎಲ್ಲಿ ತೋರಿಸಿ ಬೆಳಗಿಂದ ಎಷ್ಟು ಪೇಜಾಗಿದೆ.?” ಎಷ್ಟು ಪೇಜೇನು? ನೆಟ್ಟಗೆ ಎರಡು ಪೇಜ್ ದಾಟಿಲ್ಲ. ಗಮನ ಕೆಲಸದ ಕಡೆ ಇದ್ದರೆ ತಾನೆ? ಎಲ್ಲ ಎದುರುಗಡೆ ಇರೊ ನಾಲ್ಕು ಜನ,ನಾಲ್ಕು ಬಾಯಿ,ಎಂಟು ಕಣ್ಣು, ಅವರ ಮಾತು ಇದರ ಕಡೆಗೆ ನನ್ನ ಲಕ್ಷ, ಲೆಕ್ಕ ಅಲಕ್ಷ ಆಗೋಯ್ತು. ಆಗೆಲ್ಲ ಬಾಯಿ ಲೆಕ್ಕ. ಕ್ಯಾಲ್ಕೂಲೇಟರ್ ಇಲ್ಲ. ಕಂಪ್ಯೂಟರ್ ಬಂದೇ ಇರಲಿಲ್ಲ. ಉಳಿತಾಯ ಖಾತೆ ಷೆಡ್ಯೂಲ್ ಟೋಟಲ್ ಹಾಕಲು ಕೊಟ್ಟಿದ್ದರು. ಅವರಿಗೆ ಅರಿವಾಯಿತು. ” ಸರಿ ಸರಿ ಮಾಡಿ” ತಮ್ಮಷ್ಟಕ್ಕೇ ನಕ್ಕೊಂಡು ಆ ಕಡೆ ಹೋದರು. ಈ ಎಂಟು ಕಣ್ಣು ಬಾಯಿ ಬಿಟ್ಟುಕೊಂಡು ನೋಡ್ತಾ ಇತ್ತು. ಎಲ್ಲಾ ಹುಡುಗಾಟ್ಗೆ ವಯಸ್ಸಿನವರು ನನ್ನ ಹಾಗೆ.😊 ಒಂದು ನಿಮಿಷ ಬಿಡದೆ ತಮ್ಮತಮ್ಮಲ್ಲೇ ಮಾತಾಡಿಕೊಂಡು ನನ್ನನ್ನೂ ತಮ್ಮ ಜೊತೆ ಸೇರಿಸಿಕೊಳ್ಳಲು ಹವಣಿಸುತ್ತಿದ್ದರು. ಅವರಿಗೆಲ್ಲ ಅದೇನೋ ಖುಷಿ. ಬರೀ ಗಂಡು ಹೈಕಳ ಜೊತೆ ಇದೊಂದು ಹೆಣ್ಣು ಬಂತಲ್ಲಾ ಅಂತ.

ಹೀಗೆ ಅದು ಇದೂ ಮಾತು, ಪರಿಚಯ, ಕೆಲಸ ಕಲಿಯುವ ನನ್ನ ಉಮೇದಿ, ಅಲ್ಲಿ ವಾತಾವರಣ ನನಗಂತೂ ಸಖತ್ ಇಷ್ಟ ಆಯಿತು. ಗಂಟೆ ಐದೂ ಮೂವತ್ತು ಆಗಿದ್ದು ಅವರೆಲ್ಲ ಹೊರಟು ನಿಂತಾಗಲೇ ಗೊತ್ತಾಗಿದ್ದು. ಅರೆ ಇಷ್ಟು ಬೇಗ ಟೈಮ್ ಆಯ್ತಾ? ಅನಿಸಿತ್ತು.

“ಬಾಯೋರೆ ನೀವು ಇಲ್ಲಿ ಸೇರಿಕೊಂಡಿದ್ದು ನಮಗೆಲ್ಲ ತುಂಬಾ ಸಂತೋಷ ಆಗಿದೆ. ಬನ್ನಿ ಹೋಗುವಾಗ ಎಲ್ಲರೂ ಈ ಖುಷಿಗೆ ಹೊಟೇಲ್ನಲ್ಲಿ ತಿಂಡಿ ತಿಂದು ಹೋಗೋಣ. ನಡಿರಿ ನಡಿರಿ”.

ಬೇಡವೆಂದರೂ ಕೇಳದೇ ಆ ದಿನ ನನಗಿಷ್ಟವಾದ ತಿಂಡಿ ಕೊಡಿಸಿ ಬಸ್ ಸ್ಟ್ಯಾಂಡಿನವರೆಗೂ ಬೀಳ್ಕೊಟ್ಟು ” ನಾಳೆ ಬರೋದು ಮರಿಬೇಡಿ. ಈಗ ಕೆಲಸಕ್ಕೆ ಸೇರಿಕೊಂಡಿದ್ದೀರಾ. ” ಇದು ಮ್ಯಾನೇಜರ್ ಮತ್ತು ಅಲ್ಲಿಯ ಉಳಿದ ಗುಮಾಸ್ತರು ಮೊದಲ ದಿನ ನನ್ನ ಕಂಡ ರೀತಿ. ಹೇಗೆ ಮರೆಯಲು ಸಾಧ್ಯ !!!

ಹಾಂ, ಇಷ್ಟೊತ್ತೂ ಹೇಳಿದ್ದು ನಾನು 1980 ನವೆಂಬರ ತಿಂಗಳಲ್ಲಿ ಬ್ಯಾಂಕಿನ ಕೆಲಸಕ್ಕೆ ಸೇರಿದ ಮೊದಲ ದಿನದ ಅನುಭವ ಇದು. ಇಷ್ಟು ವರ್ಷಗಳಾದರೂ ನೆನಪಿನ್ನೂ ಹಚ್ಚ ಹಸಿರಾಗಿದೆ. ಕೆಲವು ನೆನಪುಗಳು ಹಾಗೆ ಅಲ್ಲವೆ?

ಮುಂದುವರಿಯುವುದು…

12-7-2017. 1.25pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s