ಶ್ರೀ ಜಯಂತರವರ ಪುಸ್ತಕ ಬಿಡುಗಡೆ ಸಮಾರಂಭದ ಅನಿಸಿಕೆ, ನೋಟ

ದಿನಾಂಕ 22-4-2018ರಂದು ಅಂಕಿತ ಪ್ರಕಾಶನ,ಬೆಂಗಳೂರು ಇವರು ಹೊರ ತಂದಿರುವ ಪುಸ್ತಕ ಬಿಡುಗಡೆಯ ಸಮಾರಂಭ “ಗುಲ್ ಮೊಹರ್” ಮತ್ತು “ರೂಪಾಂತರ ನಾಟಕಗಳು” ಕರ್ನಾಟಕದ ಜನ ಮನದ ಪ್ರೇಮ ಕವಿ ಶ್ರೀ ಜಯಂತ್ ಕಾಯ್ಕಿಣಿಯವರದು.

ಸಭಾಂಗಣದಲ್ಲಿ ಕಾಲಿಟ್ಟಾಗ ನೆಚ್ಚಿನ ಹಿರಿಯ ಸಾಹಿತಿ ಕಂಡು ಕವಿಗೆ ನಮಸ್ಕರಿಸಿದಾಗ ಆಲಿಂಗನದ ಪ್ರೀತಿಯ ಸ್ವಾಗತ. 2013ರ ನಂತರದ ಮೊದಲ ಬಾರಿ ಕಂಡೆ ಬಹಳ ಖುಷಿ ತರಿಸಿತು. ಗಡಿಬಿಡಿಯ ಧಾವಂತದಲ್ಲಿ ಕೂಡಾ ಒಂದೆರಡು ಮಾತಾಡಿ ಹೋಗುವಾಗ ಸಿಕ್ಕು ನಿಮ್ಮ ದೂರವಾಣಿ ನಂಬರ ಕೊಡಿ ಅಂದು ಮತ್ತೆಲ್ಲೊ ಮಾಯ.

ಕಿಕ್ಕಿರಿದ ಸಭಾಂಗಣ ಸರಿಯಾಗಿ 10.30ಕ್ಕೆ ಕುಮಾರಿ ಅವನಿ ಉಡುಪಾ ಅವರಿಂದ ಗಣೇಶ ಸ್ತುತಿ ಹಾಗೂ ಮಹಾತ್ಮಾ ಗಾಂಧೀಜಿಯವರ ಅತ್ಯಂತ ಪ್ರೀತಿಯ ಹಾಡು “ವೈಷ್ಣವ ಜನಕೊ ದೇಹಿ ಕಹಿಯೆ”ಶ್ರೀ ಜಯಂತವರು ಕನ್ನಡದಲ್ಲಿ ಅನುವಾದಿಸಿದ “ಎಲ್ಲರ ನೋವನು ಬಲ್ಲವನಾದರೆ…..” ಸುಶ್ರಾವ್ಯವಾದ ಹಾಡಿನೊಂದಿಗೆ ಕಾರ್ಯಕ್ರಮ ಶುರುಮಾಡಿದರು.

ಒಂದು ವಾರದಿಂದಷ್ಟೆ ನಿಧನರಾದ ದಿ||ರಾವ್ ಬೈಲ್ ರವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನವಿದ್ದು ಅವರ ಶ್ರೀಮತಿ ಮತ್ತು ಮಕ್ಕಳಿಗೆ ಗೌರವ ಸಲ್ಲಿಸಿದ ನಂತರ ಪುಸ್ತಕ ಬಿಡುಗಡೆಯೊಂದಿಗೆ ಕಾರ್ಯಕ್ರಮ ವಿಧ್ಯುಕ್ತವಾಗಿ ಪ್ರಾರಂಭವಾಯಿತು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಕೆ.ಪಿ.ರಾವ್ ರವರು ಮಾತನಾಡುತ್ತ ಓದು ಮೊದಲೊ,ಬರಹ ಮೊದಲೊ? ಓದು ಮೊದಲು ಎಂದು ನನ್ನ ಅಭಿಪ್ರಾಯ. ಉದಾ: ಪ್ರಾಣಿಗಳ ಹೆಜ್ಜೆಯನ್ನು ಗುರುತಿಸುತ್ತ ಓದಿನತ್ತ ಮನುಷ್ಯನ ಮನಸ್ಸು ವಾಲಿರಬಹುದು. ಭಾಷೆಗೆ ಅಮರತ್ವ ಇಲ್ಲ, ಆದರೆ ಬರಹಕ್ಕೆ ಅಮರತ್ವ ಇದೆ. ಅಕ್ಷರಗಳಿಂದ ಅಮರತ್ವ ಸಾಧಿಸಬಹುದು. ಅದು ನಮ್ಮ ನಂತರವೂ ಜನಮಾನಸದಲ್ಲಿ ಉಳಿಯುವಂಥಹುದು. ನೀವೆಲ್ಲರೂ ಒಂದು ವಿಲ್ಲಾದರೂ ಬರಿರಿ. ಅಲ್ಲಿ ನನ್ನ ಹೆಸರು ಬರೆಯಿರಿ ಎನ್ನುತ್ತ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.

ಭಾಷಣ ಮುಗಿಸಿ ಕುಳಿತಾಗ ಶ್ರೀ ಜಯಂತರವರು “ನೀವು ಬೇಂದ್ರೆ, ಅರವಿಂದರವರೊಂದಿಗಿನ ಒಡನಾಟದ ಬಗ್ಗೆ ಸ್ವಲ್ಪ ಹೇಳಿ,ಆದರೆ ನಿಮ್ಮ ಒಡನಾಟದವರ ಬಗ್ಗೆ ಹೇಳುವುದು ಬೇಡಾ”ಅಂದು ಮತ್ತೊಮ್ಮೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಕೆ.ಎನ್ ಗಣೇಶಯ್ಯನವರು ಮಾತನಾಡುತ್ತ ಮೈಸೂರು ಮಲ್ಲಿಗೆ ನಂತರ ಕರ್ನಾಟಕದ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿರುವ ಏಕೈಕ ಪ್ರೇಮ ಕವಿ, ನಮ್ಮನ್ನು ತಮ್ಮ ಕವಿತೆಯಲ್ಲಿ ಮಗ್ನಗೊಳಿಸುವ ನಡೆದಾಡುವ ಸಾಹಿತ್ಯದ ಹಾವಾಡಿಗ ಅಂದರೆ ಶ್ರೀ ಜಯಂತರವರು ಎಂದಾಗ ಸಭಿಕರಿಂದ ಜೋರಾದ ಕರತಾಡನ.

ನಮ್ಮೆಲ್ಲರ ನೆಚ್ಚಿನ ಸಾಹಿತಿ ಶ್ರೀ ಜಯಂತ ಕಾಯ್ಕಿಣಿಯವರು ಮಾತನಾಡುತ್ತ ದಿ|| ರಾವ್ ಬೈಲೂರವರ ಕುರಿತಾಗಿ ತಮ್ಮ ಮನದಾಳದ ಮಾತುಗಳನ್ನಾಡುತ್ತ ಅವರೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದುವರೆಗಿನ ತಮ್ಮ ಸಾಹಿತ್ಯದ ಓಟ, ಅಗಲಿದ ಸಾಹಿತ್ಯದ ಒಡನಾಡಿಗಳು, ವಿವಾಹ ಪೂರ್ವ ಆ ನಂತರದ ಕೆಲವು ವಿಷಯಗಳ ಹಾಸ್ಯ ಪ್ರಸಂಗ ಇತ್ಯಾದಿ ತಮ್ಮ ಮಾತಿನ ಉಪಮೆ ವೈಖರಿಯಲ್ಲಿ ಮುಂದುವರಿಸಿದರು.

ತಮ್ಮ ಪುಸ್ತಕದ ಕುರಿತಾಗಿ ವಿವರಣೆ ನೀಡುತ್ತ ” ನನ್ನ ಒಳಪುಟ ಒಂದು ಬನಿಯನ್ ಅಂತೆ. ಅಂದರೆ ಟಿಪ್ ಟಾಪಾಗಿರೊ ಒಬ್ಬ ಮನುಷ್ಯನ ಒಳ ಬನಿಯನ್ ಒಂದು ಚೂರು ಕಂಡರೆ ಇವನೊಬ್ಬ ನಮ್ಮಂತೆ ಸಾಮಾನ್ಯ ಮನುಷ್ಯ ಅಂತ ಸಮಾಧಾನಪಟ್ಟುಕೊಳ್ಳುವಂತೆ ನನ್ನ ಪುಸ್ತಕ ಕೂಡಾ. ಗಂಗಾದರ ಚಿತ್ತಾಲರವರು ಬರೆದ “ಗುಲ್ ಮೊಹರ್ “ಕವನ ಮೆಚ್ಚಿ ಮುಂಬೈ ನಗರದಲ್ಲಿ ಆ ಕೆಂಪು ಹೂಗಳನ್ನು ಕಂಡಾಗಿನ ಖುಷಿ ನಾನು ನನ್ನ ಪುಸ್ತಕಕ್ಕೆ ಇದೇ ಹೆಸರಿಡಲು ಕಾರಣ” ಎನ್ನುತ್ತ ತಮ್ಮ ಮುಂಬೈ ವಾಸದ ದಿನಗಳನ್ನು ನೆನಪಿಸಿಕೊಂಡರು.

“ರೂಪಾಂತರ ನಾಟಕಗಳು” ತಮ್ಮ ಈ ಪುಸ್ತಕದ ಕುರಿತಾಗಿ ಮಾತನಾಡುವಾಗ ಎಂದಿನಂತೆ ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿ ಹಲವು ಉಪಮೆಗಳೊಂದಿಗೆ ಮಾತನಾಡುತ್ತ ಈ ಪುಸ್ತಕದಲ್ಲಿಯ ನಾಟಕಗಳನ್ನು ಓದುವಾಗ “ನೀವು ಆಗಷ್ಟೆ ಹೊಸದಾಗಿ ಬಂದ ಪತ್ರಗಳನ್ನು ಓದುವಾಗ ಹೇಗೆ ಓದುತ್ತೀರಿ, ಹಾಗೆ ಓದಿ ” ಎಂಬ ನಾಟಕವನ್ನು ಸವಿಯುವ ಕಿವಿ ಮಾತು. ಹೊರಗಡೆ ಕೇಟರಿಂಗನಲ್ಲಿ ನಿಂತಾಗ ನನ್ನ ಗಮನಕ್ಕೆ ಬಂದಿರುವುದು ಚಟ್ನಿಯನ್ನು ರುಬ್ಬುವ ಆ ಒರಳು. ಚಟ್ನಿ ಹೊರಗೆ ಬಂದಂತೆಲ್ಲ ಅದನ್ನು ಒಳಗೆ ತಳ್ಳಿ ತಳ್ಳಿ ನುಣ್ಣಗೆ ಮಾಡುವಂತೆ ಈ ಸಾಹಿತ್ಯ ಕೂಡಾ. ಅಲ್ಲಿ ಒಂದು ಕರಟ ಇರುತ್ತದೆ ನೋಡಿದ್ರಾ. ಅದನ್ನು ದಿನಾ ಬಳಸಿ ಬಳಸಿ ಹೇಗೆ ನುಣ್ಣಗೆ ಆಗಿರುತ್ತದೆ. ಹಾಗೆ ನಮ್ಮ ಸಾಹಿತ್ಯ ಪಳಗಬೇಕು.” ಮತ್ತೆ ಕರತಾಡನ.

ಎಂತಹ ಮಾತು ಉಪಮೆಗಳು. ನಿಜಕ್ಕೂ ಅವರು ಮಾತಾಡುತ್ತಿರುವ ಅಷ್ಟು ಹೊತ್ತೂ ಆಗಾಗ ನಮ್ಮನ್ನೆಲ್ಲ ನಗೆಗಡಲಲ್ಲಿ ತೇಲಿಸಿ ಮುಳುಗಿಸಿ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಕಾರ್ಯಕ್ರಮದ ಕೊನೆಯಲ್ಲಿ ಪ್ರತಿಯೊಬ್ಬರನ್ನೂ ಸ್ಮರಿಸುತ್ತ ಅಂದರೆ ಎಲ್ಲಾ ಪುಸ್ತಕ ಅಂಗಡಿಗಳ ಸಿಬ್ಬಂದಿ, ಅಂಕಿತ ಬುಕ್ ಹೌಸಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗಳನ್ನೊಳಗೊಂಡು ಎಲ್ಲರಿಗೂ ತಮ್ಮ ಕೃತಜ್ಞತೆ ಹೇಳಿರುವುದು ಜಯಂತರವರ ನಿಷ್ಕಲ್ಮಶ ಮನಸ್ಸು ಸಿಂಪಲಿಸಿಟಿಗೆ ಹಿಡಿದ ಕನ್ನಡಿ.

ಹೊರಡುವಾಗ ಬಹುತೇಕ ಮಂದಿಗೆ ಅವರ ಹಸ್ತಾಕ್ಷರ, ಸೆಲ್ಫಿ ತೆಗೆಸಿಕೊಂಡು ಕೈ ಕುಲುಕುವ ಧಾವಂತ. ಅದರಲ್ಲಿ ನಾನೂ ಸೇರಿ ಒಂದೆರಡು ಮಾತಾಡಿ ಹೊರಟಾಗ ಇಡೀ ದಿನ ಖುಷಿಯ ಗಳಿಗೆ. ಇಷ್ಟು ಸಾಕಲ್ಲವೆ ಸಾಹಿತ್ಯಾಸಕ್ತರಿಗೆ!!

22-4-2018. 4.48pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s