ಬಂಧ ( ಕಥೆ )

ಶಂಕರನು ಶಾಲೆಯಿಂದ ಬಂದು ಸೈಕಲ್ಲನ್ನು ಒಳಗಡೆ ನಿಲ್ಲಿಸಿ ಮನೆಯೊಳಗೆ ಬರುತ್ತಾನೆ. ಎರಡನೇ ಮಗಳು ಓಡಿ ಬಂದು ಪಪ್ಪ ಎಂದು ಹೆಗಲೇರುತ್ತಾಳೆ.

“ಪಪ್ಪ ಚಾಕ್ಲೆಟ್ ತಂದ್ಯಾ?”

“ಇಲ್ಲ ಮಗಳೇ, ನಾಳೆ ತರುವೆ.”

“ಇಲ್ಲ ಪಪ್ಪ ಈಗಲೇ ನಂಗ್ ಬೇಕು.”

“ಆಯ್ತು ಮಗಳೆ… ಆಮೇಲೆ ಹೋಗೋಣ ಆಯ್ತಾ?”

“ಇಲ್ಲ ಈಗಲೇ ಹೋಗೋಣ.”

ಮಗಳು ನವ್ಯಾಳದು ಒಂದೇ ಹಟ. ಅಂತು ಇಂತು ಅವಳ ಮನಸ್ಸು ಹೊರಳಿಸಿ ಚಹಾ ಕುಡಿಯಲು ಕುಳಿತಾಗ ಹೆಂಡತಿಯು ಮಗಳನ್ನು ಶಾಲೆಗೆ ಸೇರಿಸುವ ವಿಷಯವಾಗಿ ಕೇಳುತ್ತಾ,

“ರೀ, ಮಗಳ ಅಡ್ಮಿಷನ್ ಬಗ್ಗೆ ಮಾತನಾಡಿದೀರಾ? ಹಣದ ಹೊಂದಿಕೆ ಹೇಗೆ ಮಾಡುವಿರಿ? ”

“ನೋಡೋಣ, ಹೇಗೋ ಆಗುತ್ತೆ ಬಿಡು. ”

ಅಂದು ಹೆಂಡತಿಯ ಮಾತಿಗೆ ಏನೋ ಒಂದು ಹಾರಿಕೆಯ ಉತ್ತರಕೊಟ್ಟು ಹೊರ ನಡೆದ ಶಂಕರನಿಗೆ ನಿಜಕ್ಕೂ ದಿಕ್ಕೇ ತೋಚದಂತಾಗಿತ್ತು.

ಊರಿನಲ್ಲಿ ಹಿರಿಯರು ಕಟ್ಟಿದ ಪುಟ್ಟ ಮನೆ, ಸ್ವಲ್ಪ ಆಸ್ತಿ ಇದೆ. ಬಿಟ್ಟರೆ ಸರಕಾರಿ ಶಾಲೆಯಲ್ಲಿ ಜವಾನನ ಕೆಲಸ. ತಾವಿರುವ ಪರಿಸ್ಥಿತಿಗೆ ಹುಟ್ಟಿರುವ ಹೆಣ್ಣು ಮಗು ನಮಿತಾಳೊಂದೇ ಸಾಕು. ಗಂಡು ಹೆಣ್ಣು ಎರಡೂ ಇವಳೇ ಎಂದು ಇರುವುದರಲ್ಲೆ ಯಾವ ಕೊರತೆಯೂ ಬಾರದಂತೆ ಮುತುವರ್ಜಿಯಿಂದ ಮಗಳನ್ನು ಬೆಳೆಸುತ್ತಿದ್ದರು ದಂಪತಿಗಳು.

ಹೀಗಿರುವಾಗ ಹದಿಮೂರು ವರ್ಷಗಳ ನಂತರ ಅಚಾನಕ್ಕಾಗಿ ಹುಟ್ಟಿ ಬಂದವಳು ಎರಡನೇ ಮಗಳು ನವ್ಯಾ. ಒಂದು ಕಡೆ ಇಬ್ಬರು ಮಕ್ಕಳನ್ನು ಹೇಗೆ ಸಾಕಿ, ಬೆಳೆಸಿ,ವಿದ್ಯಾಭ್ಯಾಸ ಕೊಡಿಸಿ ಅವರುಗಳಿಗೊಂದು ಜೀವನ ರೂಪಿಸಿಕೊಡುವುದೆಂಬ ಚಿಂತೆ ಕಾಡಿದರೂ ಅಪರೂಪಕ್ಕೆ ಹುಟ್ಟಿದ ಮಗಳಲ್ಲವೇ? ಎಲ್ಲಾ ಆ ದೇವರ ವರಪ್ರಸಾದವೆಂದು ಸಂತೋಷದಿಂದಲೇ ಸ್ವೀಕರಿಸಿದ್ದರು ದಂಪತಿಗಳು. ಅವಳು ಹುಟ್ಟಿದ ಮೇಲೆ ಮನೆ ಆನಂದದ ನಿಲಯವಾಗಿದ್ದಂತೂ ನಿಜ. ಸದಾ ಮಕ್ಕಳ ಕಿಲ ಕಿಲ ನಗು, ಆಟ,ಪಾಠ, ತರಲೆ ಬುದ್ಧಿ, ಅವರ ಚೇಷ್ಠೆಗಳು ಖುಷಿಯ ವಾತಾವರಣ ಮನೆ ತುಂಬ. ಅಪರೂಪದ ಮಗಳ ಬಗ್ಗೆ ಮುದ್ದೂ ಜಾಸ್ತಿ ಆಗಿತ್ತು. ಅವಳಲ್ಲಿ ಹಠವೂ ಬೆಳೆಯುತ್ತಾ ಬಂದಿತ್ತು. ಏನಾದರೂ ಬೇಕು ಅಂದರೆ ಬೇಕೇ ಬೇಕು. ಕಷ್ಟ ಸುಖ ಅವಳಿಗೆಲ್ಲಿ ಅರ್ಥ ಆಗಬೇಕು? ಅಂತೂ ಇರುವುದರಲ್ಲೇ ಸಂಸಾರ ಸುಖವಾಗಿ ಸಾಗುತ್ತಿತ್ತು.

ಆದರೆ, ನವ್ಯಾ ಹುಟ್ಟಿದ ಐದು ವರ್ಷಕ್ಕೆ ಇದ್ದಕ್ಕಿದ್ದಂತೆ ಹಠಾತ್ತನೆ ಬಂದೆರಗಿದ ಸರ್ಕಾರದ ಆದೇಶ ಓದಿ ಶಂಕರ ಕಂಗಾಲಾಗಿದ್ದ.
ಕಾರಣ, ಊರಿನಲ್ಲಿ ಅನಾದಿಕಾಲದಿಂದ ವ್ಯವಸಾಯ ಮಾಡುತ್ತ ಬಂದ ಭೂಮಿ ಸರ್ಕಾರದವರು ನಡೆಸುತ್ತಿದ್ದ ಹಳ್ಳಿಯ ಅಭಿವೃದ್ಧಿಯ ಹೆಸರಿನಲ್ಲಿ ಹೊಸದಾಗಿ ನಿರ್ಮಿಸುತ್ತಿದ್ದ ರಸ್ತೆಯ ಅಳತೆಯಲ್ಲಿ ತನ್ನ ಜಮೀನು ಕೊಚ್ಚಿಕೊಂಡು ಹೋಗುವುದೆಂದು ತಿಳಿದಾಗ ದೌಡಾಯಿಸಿ ಊರ ಕಡೆಗೆ ಪ್ರಯಾಣ ಬೆಳೆಸಿದ್ದ.

ಸರ್ಕಾರದವರು ಹಳ್ಳಿಯ ರಸ್ತೆಯನ್ನು ಹೊಸದಾಗಿ ನಿರ್ಮಿಸುವತ್ತ ಗಮನ ಹರಿಸಿದ್ದು ಇಡೀ ಊರಿಗೆ ಊರೇ ಕೊಂಡಾಡುತ್ತಿತ್ತು. ಕಾರಣ ತಮ್ಮ ತಾತ ಮುತ್ತಾತರ ಕಾಲದಲ್ಲಿ ಹಳ್ಳಿ ಜನರೇ ಸೇರಿಕೊಂಡು ನಿರ್ಮಿಸಿಕೊಂಡ ಅಂಕುಡೊಂಕು ರಸ್ತೆ ಅದಾಗಿತ್ತು. ಅಲ್ಲದೇ ಅರ್ಧ ರಸ್ತೆ ಮಧ್ಯೆ ಸಿಗುವ ಹಳ್ಳವೊಂದು ಮಳೆಗಾಲದಲ್ಲಿ ಸುಮಾರು ಅರ್ಧ ಕಿ.ಮೀ ರಸ್ತೆಯು ನದಿಯಾಗಿ ಪರಿವರ್ತನೆ ಆಗುತ್ತಿದ್ದುದರಿಂದ ಓಡಾಡಲು ಬಹಳ ಕಷ್ಟವಾಗುತ್ತಿತ್ತು. ಸುತ್ತಮುತ್ತಲಿನ ಹಳ್ಳಿಯವರು ಆಗಾಗ ಇದೇ ರಸ್ತೆಯ ಮೂಲಕ ಹತ್ತಿರದ ಊರು ಪೇಟೆಗೆಲ್ಲ ಹೋಗಲು, ಮಕ್ಕಳು ಸ್ಕೂಲಿಗೆ ಹೋಗಿಬರಲು ಬಳಸುತ್ತಿದ್ದರು. ಹಸು ದನ ಕರುಗಳೂ ಮೇಯಲು ಹೋಗುವಾಗ ಎಷ್ಟೋ ಸಲ ಅವಸ್ಥೆಗೀಡಾದ ಪ್ರಸಂಗಗಳೂ ಇವೆ. ತಾನು ಶಾಲೆಗೆ ಹೋಗುವಾಗ ಒಮ್ಮೆ ಈ ಹಳ್ಳದಲ್ಲಿ ಕಲ್ಲಿಗೆ ಪಾದ ತರಚಿ ನೀರು ಸೇರಿ ಹುಣ್ಣಾಗಿ ಕೊನೆಗೆ ಮನೆಯ ಆಳೊಬ್ಬರು ತಮ್ಮ ಹೆಗಲ ಮೇಲೆ ಎರಡು ಕಿ.ಮೀ.ಹೊತ್ತು ಬಸ್ಸು ನಿಲ್ದಾಣ ತಲುಪಿದ್ದರು. ಸಿಟಿ ಆಸ್ಪತ್ರೆಯಲ್ಲಿ ಕೀವು ತೆಗೆದು ಔಷಧೋಪಚಾರದಲ್ಲಿ ವಾಸಿ ಮಾಡಿಕೊಂಡಿದ್ದು ಯಾವತ್ತೂ ಮರೆಯಲಾರದ ಘಟನೆಯಾಗಿ ಉಳಿದಿತ್ತು ಶಂಕರನ ಮನದಲ್ಲಿ.

ರಸ್ತೆಯ ಅಭಿವೃದ್ಧಿಯ ಬಗ್ಗೆ ಯಾರೂ ಚಕಾರ ಎತ್ತುವ ಮಾತೇ ಇರಲಿಲ್ಲ. ಈ ರಸ್ತೆಯನ್ನು ಆ ಕಡೆಯಿಂದ ಈಕಡೆಗೆ ನೇರವಾಗಿ ಅಳತೆ ಮಾಡಿ ಹಳ್ಳಕ್ಕೆ ಸೇತುವೆಯನ್ನು ಕಟ್ಟಿ ಜನರಿಗೆ ಓಡಾಡಲು ಅನುಕೂಲ ಮಾಡಿಕೊಡುವ ಉದ್ದೇಶ ಸರಕಾರದವರದ್ದು. ಕೆಲವರ ಭತ್ತ ಬೆಳೆಯುವ ಗದ್ದೆ ಈ ರಸ್ತೆಯ ಪಾಲಾಯಿತು. ಇದರಲ್ಲಿ ಮುಖ್ಯವಾಗಿ ಊರ ಪಟೇಲ ತನ್ನ ಮುಂದಾಳತ್ವ ಬೆರೆಸಿದ್ದ. ಬಂದ ಅಧಿಕಾರಿಗಳು ಅವನ ಮನೆಯಲ್ಲಿ ಆಥಿತ್ಯ ಸ್ವೀಕರಿಸಿ ಒಳಗೊಳಗೇ ಪಟೇಲ ತನ್ನ ಬೇಳೆ ಬೇಯಿಸಿಕೊಂಡು ತನ್ನ ಜಮೀನು ಬಚಾವ್ ಮಾಡಿಕೊಂಡಿದ್ದು ಪಕ್ಕದಲ್ಲೇ ಇರುವ ಶಂಕರನ ಜಮೀನು ಬಲಿಯಾಗಿದ್ದು ಎಲ್ಲಾ ಗೊತ್ತಾದ ಮೇಲಂತೂ ಬೂದಿ ಮುಚ್ಚಿದ ಕೆಂಡದಂತೆ ಈ ವಿಷಯ ಕಾಡುತ್ತಿತ್ತು. ವರ್ಷಕ್ಕೆ ಅಲ್ಪ ಸ್ವಲ್ಪ ಬರುವ ಆದಾಯ ಸಂಪೂರ್ಣ ಇಲ್ಲವಾಯಿತು. ರಸ್ತೆ, ಜಮೀನಿನ ಮಧ್ಯೆ ಹಾದು ಹೋಗಿ ಅಕ್ಕ ಪಕ್ಕ ಇರುವ ತುಂಡು ಜಮೀನಿನಲ್ಲಿ ವ್ಯವಸಾಯ ಮಾಡುವಂತೆಯೂ ಇರಲಿಲ್ಲ. ಬರುವ ಆದಾಯವೇ ಇಲ್ಲವಾದಾಗ ದಿಕ್ಕೇ ತೋಚದಂತಾಗಿತ್ತು.

ಸರಕಾರದವರು ಕೊಟ್ಟ ಪರಿಹಾರ ಧನವನ್ನು ದೊಡ್ಡ ಮಗಳು ನಮಿತಾಳ ಕಾಲೇಜಿಗೆ ಸೇರಿಸಲು ಉಪಯೋಗಿಸಿ ಅವಳ ಹಠಕ್ಕೆ ಮಣಿದು ಸ್ಕೂಟಿನೂ ಕೊಡಿಸಿದ್ದಾಯಿತು. ಅವಳು ಓದಿನಲ್ಲಿ ಬಲೂ ಜಾಣೆ. ತನ್ನ ಖರ್ಚನ್ನು ಸಂಜೆಯ ವೇಳೆ ಮಕ್ಕಳಿಗೆ ಟ್ಯೂಷನ್ ಹೇಳಿ ಬಂದ ಹಣದಲ್ಲಿ ನಿಭಾಯಿಸಿಕೊಳ್ಳುವಷ್ಟು ಬುದ್ಧಿವಂತಳಾಗಿದ್ದಳು.

ಪ್ರೀತಿಯ ಹೆಂಡತಿ ಗೌರಿಗೆ ಮತ್ತು ಮುದ್ದಾದ ಎರಡು ಮಕ್ಕಳಿಗೆ ಖುಷಿ ಪಡಿಸಲು ಊರಿನ ಜಾತ್ರೆ ಅದೂ ಇದೂ ಖರ್ಚಿಗೆ ವಿನಿಯೋಗಿಸುವಷ್ಟರಲ್ಲಿ ಕೈ ಬರಿದಾಗಿತ್ತು. ಪಾಪ! ಅವರೆಲ್ಲರೂ ಖುಷಿಯಾಗಿ ಇರಲಿ ತನಗೆ ಹೇಗೋ ಆಗುತ್ತದೆ ಎಂಬ ಉತ್ಕಟತೆ.
ಆದರೆ ಏನೇ ಬರಲಿ ತನ್ನ ಮನಸ್ಸಿನ ನೋವನ್ನು ಯಾರಲ್ಲೂ ಹೇಳಿಕೊಳ್ಳದೇ ಯಾಂತ್ರಿಕವಾಗಿ ಇದ್ದು ಬಿಡುವ ಜೀವ ಅವನದು. “ಬಂದಿದ್ದೆಲ್ಲಾ ಬರಲಿ ಗೋವಿಂದನ ದಯವಿರಲಿ” ಎಂಬಂತೆ ಅವನ ಸರಳ ನಡೆ.

ನಂತರದ ದಿನಗಳಲ್ಲಿ ಮಕ್ಕಳ ಸ್ಕೂಲಿನ ಖರ್ಚಿಗೂ ಸಂಚಕಾರ ಬಿತ್ತು. ಪುಟ್ಟ ಮಗಳ ಚಿಕ್ಕ ಆಸೆಯನ್ನು ಈಡೇರಿಸಲಾಗದ ನಾನೆಂಥ ತಂದೆ? ಶಾಲೆಗೆ ಸೇರಿಸಲು, ಸ್ಕೂಲಿನ ಫೀಸು ಕಟ್ಟುವುದಕ್ಕೂ ಯೋಚಿಸುವಂತಾಯಿತಲ್ಲ ಎಂಬ ಗಿಲ್ಟಿ ಕಾಡತೊಡಗಿತ್ತು.

ಹಳೆಯದೆಲ್ಲ ನೆನಪಿಸಿಕೊಂಡು ಗದ್ದೆಯ ಹಾಳಿಯ ಮೇಲೆ ಅದೆಷ್ಟು ಹೊತ್ತು ಕುಳಿತಿದ್ದನೋ ಏನೋ! ಹಿಂದೆ ನಡೆದಿದ್ದೆಲ್ಲಾ ಮನಃಪಟಲದಲ್ಲಿ ಹರಿದಾಡುತ್ತಿದ್ದಂತೆ ಹೇಗೆ ಎಲ್ಲವನ್ನೂ ನಿಭಾಯಿಸಿದೆ? ಎಂಬ ಅಚ್ಚರಿ ಒಂದೆಡೆಯಾದರೆ ನವ್ಯಾ ಬೆಳೆದು ದೊಡ್ಡವಳಾಗಿ ಅವಳ ಮದುವೆ ಮಾಡಿದ ಸಂತೃಪ್ತಿ ಒಂದು ಕಡೆಯಾದರೆ ದೊಡ್ಡ ಮಗಳು ಸ್ಕಾಲರ್ಶಿಪ್ ಸಿಕ್ಕಿದ್ದೇ ತಡ ಓದಿನ ನೆಪ ಹೇಳಿ ವಿದೇಶಕ್ಕೆ ಹಾರಿದವಳು ಮತ್ತೆ ತನ್ನ ಸ್ವದೇಶಕ್ಕೆ ಬರುವ ಮನಸ್ಸು ಮಾಡಲೇ ಇಲ್ಲ. ಪ್ರೀತಿಸಿದ ಹುಡುಗನೊಂದಿಗೆ ಮದುವೆ ಮಾಡಿಕೊಂಡು ಅಲ್ಲೇ ನೆಲೆಸಿಬಿಟ್ಟಳು. ಮಕ್ಕಳಾದ ಮೇಲಂತೂ ಸ್ವಂತ ಮನೆ ಖರೀದಿಸಿ ಗಂಡನೊಂದಿಗೆ ಖಾಯಂ ಅಲ್ಲೇ ನೆಲೆ ನಿಂತ ಅವಳು ತಂದೆ ತಾಯಿಗೆ ಅಪರೂಪದ ಮಗಳಾಗೇ ಉಳಿದು ಬಿಟ್ಟಳು.

ಇತ್ತ ಮುದ್ದು ಮಗಳು ನವ್ಯಾ ಈಗ ಹೆತ್ತ ತಾಯಾದರೂ ತವರಿಗಿನ್ನೂ ಪುಟ್ಟ ಮಗುವೆ! ಅವಳು ಬಂದ ನೆನಪಾದೊಡನೆ ಎದ್ದು ನಿಧಾನವಾಗಿ ಕಾಲೆಳೆಯುತ್ತ ಮನೆಯ ಕಡೆ ಮುಖ ಮಾಡಿದ. ಆದರೆ ದೊಡ್ಡ ಮಗಳು ದೂರಾದ ಚಿಂತೆ ಕಾಡುವುದು ದೂರವಾಗಲೇ ಇಲ್ಲ.

ಮನೆಗೆ ಬಂದವನೆ ಸುಸ್ತಾದಂತಾಗಿ ಜಗುಲಿಯ ಮೇಲೆ ಇರುಳಿನ ಕತ್ತಲನ್ನೇ ಸೀಳಿ ಬಂದ ಸೂರ್ಯನಂತೆ ನಿಟ್ಟುಸಿರನೆಳೆದು ಕುಳಿತು ಕಾಡುವ ಮನಸಿನಾಳದ ಭಾವಕ್ಕೆ ಸಾಂತ್ವನದ ಮಾತುಗಳನ್ನಾಡುತ್ತ ಪಶ್ಚಿಮದ ಕಡೆಗೆ ಮುಖ ಮಾಡಿ ತನ್ನ ಬಿಳಿಗಡ್ಡದ ಮೇಲೆ ಕೈಯಾಡಿಸುತ್ತ ಪುನಃ ನಿನ್ನೆಯ ದಿನದ ಯೋಚನೆಯಲ್ಲೇ ಮೈಮರೆತಾಗ ಅವನ ಮನದಲ್ಲಿ ತಡೆಯಲಾರದ ದುಃಖ ಮಡುಗಟ್ಟಿತ್ತು. ಅದೇ ವೇಳೆಗೆ…

“ಅಪ್ಪಾ …. ಏನು ಮಾಡ್ತಾ ಇದೀಯಾ? ಎಲ್ಲೋಗಿದ್ದೆ? ಯಾವಾಗ ಬಂದೆ? ಬಂದಿದ್ದೇ ಗೊತ್ತಾಗಲಿಲ್ಲ.” ಎಂದು ಕರೆದ ಮಗಳ ಮುಖ ಕಂಡು ಬಾಚಿ ತಬ್ಬಿ ಕಣ್ಣೀರು ಸುರಿಸುತ್ತ ” ನೀನೂ ನಮ್ಮನ್ನು ದೂರ ಮಾಡಬೇಡಾ ಪುಟ್ಟಾ. ನಾವು ಸಹಿಸಲಾರೆವು. ನೀವಿಬ್ಬರೂ ನಮ್ಮೆರಡು ಕಣ್ಣಿದ್ದಂತೆ. ಇನ್ನೆಷ್ಟು ದಿನ ನಮ್ಮ ಜೀವವಿರುತ್ತದೊ ಗೊತ್ತಿಲ್ಲ. ಗಂಡನ ಮನೆಯಲ್ಲಿ ಸುಖವಾಗಿರುವ ನೀವುಗಳು ನಮಗದೇ ಸಂತೃಪ್ತಿ. ಅವಳಂತೂ ವಿದೇಶದಲ್ಲಿ ನೆಲೆಯಾದಳು. ಇನ್ನು ನೀವುಗಳೂ ಹೋಗುತ್ತಿರುವ ಸುದ್ದಿ ನಿಮ್ಮಮ್ಮ ಹೇಳಿದಳು. ನೀನೂ ಹೋಗ್ತಿಯೇನಮ್ಮಾ? ” ಅವನ ದುಃಖದ ಕಟ್ಟೆ ಒಡೆದಿತ್ತು.

ಗದ್ಗದ ಕಂಠದಿಂದ ಕೇಳಿದ ಅಪ್ಪನ ಮಾತಿಗೆ ನವ್ಯಳಿಗೆ ಅಪ್ಪನ ದುಃಖ ಏನೆಂದು ಅರ್ಥವಾಯಿತು. ಅಕ್ಕನಂತೆ ನಾನೂ ದೂರಾಗಿಬಿಡುವೆನೆಂಬ ಆತಂಕ ಅಷ್ಟೆ. ಆದರೆ ಇದು ನನಗೆ ಅಷ್ಟೆ ಅನಿಸಿದರೂ ಹೆತ್ತವರ ಸಂಕಟ ಮಕ್ಕಳು ಸದಾ ಕಣ್ಣ ಮುಂದೆಯೇ ಇರಬೇಕೆನ್ನುವ ಹಂಬಲ. ಆದರೆ ಈಗಿನ ದಿನಮಾನದಲ್ಲಿ ಸಂಪಾದನೆಯ ಹಾದಿ ಹಿಡಿದಾಗ ಮನಸ್ಸಿಗೆ ಎಲ್ಲವೂ ಗೊತ್ತಾದರೂ ಬಯಸದೇ ಬಂದ ಭಾಗ್ಯ ದೂರ ಮಾಡಲು ನವ್ಯಳಿಗೂ ಮನಸ್ಸಿರಲಿಲ್ಲ.

“ನವ್ಯಾ ರೆಡಿಯಾಗು ನಾವೂ ಅಮೇರಿಕಾಕ್ಕೆ ಹೋಗುತ್ತಿದ್ದೇವೆ. ಮಕ್ಕಳನ್ನು ಬೋರ್ಡಿಂಗ್ ಸ್ಕೂಲಿಗೆ ಇಲ್ಲೇ ಸೇರಿಸಿ ಎರಡು ವರ್ಷದ ಮಟ್ಟಿಗೆ ಹೋಗಿ ಬರೋಣ. ಈ ದಿನ ನಮ್ಮ ಬಾಸ್ ನನಗೀ ವಿಷಯ ಹೇಳಿದಾಗ ಎಷ್ಟು ಸಂತೋಷವಾಯಿತು ಗೊತ್ತಾ? ನನ್ನ ಕನಸು ಈಗ ನನಸಾಗುವ ಅವಕಾಶ ಸಿಕ್ಕಿದೆ. ಬೇಡಾ ಅಂತ ಮಾತ್ರ ಹೇಳಬೇಡಾ.”

ಗಂಡನಿಂದ ಬಂದ ಈ ಮಾತು ಒಮ್ಮೆ ಸಂತೋಷ ತಂದರೂ ಮಕ್ಕಳನ್ನು ಇಲ್ಲೇ ಬಿಟ್ಟು ಹೋಗುವುದು ಸುತಾರಾಂ ಇಷ್ಟ ಇರಲಿಲ್ಲ. ಗಂಡನಿಗೋ ಎಷ್ಟು ವಿವರಿಸಿ ಹೇಳಿದರೂ ಇವಳ ಮಾತಿಗೆ ಬಗ್ಗೋನಲ್ಲ. ಕೊನೆಗೆ ಎರಡು ವರ್ಷ ತಾನೆ, ಹೂಂ ಎಂದು ಒಪ್ಪಿಗೆಯನ್ನೂ ಕೊಟ್ಟಾಗಿತ್ತು. ಎಲ್ಲಾ ತಯಾರಿ ಮಾಡಿಕೊಂಡು ಮಕ್ಕಳೊಂದಿಗೆ ತವರಿಗೆ ಬಂದಿದ್ದಳು. ಇಲ್ಲಿ ನೋಡಿದರೆ ಅಪ್ಪ ತುಂಬಾ ಸಂಕಟ ಪಡುತ್ತಿದ್ದಾನೆ. ಅಮ್ಮನದೂ ಇದೇ ಗೋಳು. ಇವರಿಗೆ ಹೇಗೆ ಸಮಾಧಾನ ಮಾಡೋದು? ದಿಕ್ಕೇ ತೋಚದಂತಾಯಿತು.

ರಾತ್ರಿ ಊಟ ಮಾಡಿ ಎಲ್ಲರೂ ಟೀವಿ ನೋಡುತ್ತಿರುವಾಗ ಮಕ್ಕಳಿಬ್ಬರೂ ಅಜ್ಜಿಯ ತೊಡೆಯೇರಿ ನಿದ್ದೆಗೆ ಜಾರಿದ್ದರು. ಆ ಎರಡು ಮುದ್ದು ಕಂದಮ್ಮಗಳನ್ನು ಬಿಟ್ಟಿರುವುದು ನನ್ನಿಂದ ಸಾಧ್ಯವಾ? ಅಮ್ಮ ಅಪ್ಪನಿಗಾದ ಸಂಕಟ ನನಗೂ ಆಗುತ್ತಿದೆ. ಇನ್ನು ಈ ವಯಸ್ಸಾದವರು ಹೇಗೆ ಸಹಿಸಿಕೊಂಡಾರು? ನಾನು ಗಂಡನಿಗೆ ತನ್ನ ಒಪ್ಪಿಗೆ ತಿಳಿಸಬಾರದಾಗಿತ್ತು. ನೀವೊಬ್ಬರೇ ಹೋಗಿ ಬನ್ನಿ ಎಂದು ಹೇಳಿಬಿಡಬೇಕಿತ್ತು. ಹಾಗೆ ಹೇಳಿದರೂ ತಪ್ಪಾಗುತ್ತಿತ್ತೇನೊ. ಒಂದು ರೀತಿ ಇಕ್ಕಟ್ಟಿನ ಪರಿಸ್ಥಿತಿ. ಏನು ಮಾಡಲಿ? ಏನು ಮಾಡಲಿ? ತೀವ್ರ ಒದ್ದಾಟದಲ್ಲಿ ರಾತ್ರಿ ಮಲಗಿದರೂ ನಿದ್ದೆ ಸುಳಿಯದಾಯಿತು.

ಬೆಳಗ್ಗೆ ಎದ್ದಾಗ ತೀವ್ರ ತಲೆ ಸಿಡಿತ. ದಿನವೆಲ್ಲ ಯೋಚಿಸಿ ಒಂದು ನಿರ್ಧಾರಕ್ಕೆ ಬಂದ ನವ್ಯಾ ಗಂಡನಿಗೆ ಫೋನ್ ಮಾಡಿ ತಾನು ಬರುವುದಿಲ್ಲ ಎಂದು ಹೇಳಿಬಿಡಬೇಕು. ನನ್ನ ಒಂದು ನಿರ್ಧಾರದಿಂದ ಈ ನಾಲ್ಕು ಜೀವಗಳು ಸಂತೋಷ ಪಡುತ್ತವೆ. ಹಾಗೆ ಗಂಡನಿಗೂ ನಿರಾಸೆ ಕೋಪ ಎಲ್ಲಾ ಆಗುವುದು ಗೊತ್ತು. ಆದರೆ ಗತಿ ಇಲ್ಲ. ಓದಿದವರು ತಿಳಿದವರು. ನಿಧಾನವಾಗಿಯಾದರೂ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವರೆಂಬ ನಂಬಿಕೆ.

ಸರಿ ಇನ್ನೇನು ಫೋನ್ ಮಾಡಬೇಕು ಅನ್ನುವಷ್ಟರಲ್ಲೇ ಗಂಡನಿಂದ ಫೋನ್. ಆಶ್ಚರ್ಯ, ಸಂತೋಷ, ಆತಂಕ.

“ಹಲೋ ಹಲೋ ನವ್ಯಾ ಎಲ್ಲಾ ಹೇಗಿದ್ದೀರಿ? ನಾನು ಈ ದಿನ ರಾತ್ರಿ ಬಸ್ಸಿಗೆ ನಿಮ್ಮೂರಿಗೆ ಬರುತ್ತಿದ್ದೇನೆ. ನಾಳೆ ಬಂದ ಮೇಲೆ ಅಲ್ಲೇ ಮಾತಾಡೋಣ. ನನಗೆ ಅರ್ಜೆಂಟ್ ಕೆಲಸವಿದೆ. ಬಾಯ್.”

ತೀವ್ರ ನಿರಾಸೆಗೊಳ್ಳುವ ಪಾಳಿ ನವ್ಯಾಳದು. ತನ್ನ ನಿರ್ಧಾರ ಹೇಳಲಾಗಲೇ ಇಲ್ಲವಲ್ಲಾ. ಇನ್ನು ಇವರು ಬಂದು ಅದೇನು ಮಾತಾಡುತ್ತಾರೋ…ಇವರೆಲ್ಲ ಇನ್ನೆಷ್ಟು ಗೋಳಾಡ್ತಾರೋ…ದೇವರೇ… ಈ ಸಂಕಟದಿಂದ ಪಾರು ಮಾಡು..‌‌..

ಬೆಳ್ಳಂಬೆಳಗ್ಗೆ ಬಂದ ಅಳಿಯನನ್ನು ಆದರದಿಂದ ಬರಮಾಡಿಕೊಂಡ ಮಾವನ ಮುಖ ಕುಂದಿಹೋಗಿತ್ತು. ಮನೆಯೆಲ್ಲ ನಿಶ್ಯಬ್ದ ಮೌನ. ಮಕ್ಕಳು ಇನ್ನೂ ಎದ್ದಿರಲಿಲ್ಲ. ಹೆಂಡತಿಯ ಮುಖವೂ ಕುಂದಿರುವುದು ಕಂಡು ” ನೀವೆಲ್ಲರೂ ಯಾಕೆ ಹೀಗಿದ್ದೀರಿ? ಯಾರಿಗೆ ಏನಾಯ್ತು? ಮಕ್ಕಳು ಎಲ್ಲಿ? ಮಲಗಿದ್ದಾರಾ?”

ಪ್ರಶ್ನೆಗಳ ಮೇಲೆ ಪ್ರಶ್ನೆ. ಯಾರೊಬ್ಬರೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಅಪ್ಪನ ಮಾತು ಕೇಳುತ್ತಿದ್ದಂತೆ ಎಚ್ಚರವಾದ ಮಕ್ಕಳಿಬ್ಬರೂ ಓಡಿ ಬಂದು ಅಪ್ಪನ ಕೊರಳಿಗೆ ಮಾಲೆಯಾದರು. ಲೊಚ ಲೊಚ ಮಾತು ಇಬ್ಬರು ಮಕ್ಕಳ ಬಾಯಲ್ಲೂ…..

“ಪಪ್ಪಾ ಪಪ್ಪಾ ಮತ್ತೆ ಮತ್ತೆ ನಮ್ಮನ್ನು ಬಿಟ್ಟು ನೀನು ಅಮ್ಮ ದೂರ ಹೋಗುತ್ತಿದ್ದೀರಂತೆ… ಹೌದಾ? …‌ಅಜ್ಜಿ ಹೇಳಿದರು. ಎಲ್ಲಿಗಪ್ಪಾ ಹೋಗ್ತಿದ್ದೀರಾ? ನಾವೂ ಬರ್ತೀವಿ. ನಮ್ಮನ್ನೂ ಕರೆದುಕೊಂಡು ಹೋಗಿ. ” ಮುಖ ಊದಿಸಿಕೊಂಡು ಹೇಳಿದ ಮಗನನ್ನು ಮುದ್ದಿಸುತ್ತ ಅವನನ್ನು ಸಮಾಧಾನಿಸುತ್ತ

“ಇರ್ರೋ…..ನಾನು ಎಲ್ಲೂ ಹೋಗೋದಿಲ್ಲ. ಎಲ್ಲಾ ಕ್ಯಾನ್ಸಲ್ ಆಯಿತು. ತಗೊಳ್ಳಿ ಚಾಕ್ಲೇಟ್ ….”

ಮಕ್ಕಳೇನು ಉಳಿದವರಿಗೂ ಕುಣಿದು ಕುಪ್ಪಳಿಸುವಷ್ಟು ಸಂತೋಷ.

” ಹೌದೇನ್ರಿ…ನಿಜಾನಾ? ನನಗೆ ನಂಬೋಕೇ ಆಗ್ತಿಲ್ಲ. ಏನಾಯ್ತು? ಯಾಕೆ? ಯಾಕೆ ಕ್ಯಾನ್ಸಲ್ ಆಯಿತು? ಬೇಗ ಹೇಳಿ. ಮಕ್ಕಳನ್ನು ನಂಬಿಸೋಕೆ ಸುಳ್ಳು ಹೇಳ್ತಿಲ್ಲ ತಾನೆ?”

“ಇಲ್ಲ ಮಾರಾಯ್ತಿ. ಸತ್ಯವಾಗಿ ಹೇಳ್ತಿದ್ದೇನೆ. ಈಗ ಹೋಗುವಂತೆಯೇ ಇಲ್ಲ. ಇಂಡಿಯಾದಿಂದ ವಿದೇಶಕ್ಕೆ ಹೋಗುವ ಎಲ್ಲಾ ಫ್ಲೈಟೂ ಕ್ಯಾನ್ಸಲ್ ಮಾಡಿದ್ದಾರೆ. ಇಂದು ಭಾರತದಲ್ಲಿ ಒಂದು ದಿನದ ಲಾಕ್ಡೌನ್ ಜಾರಿಗೊಳಿಸಿದ್ದು ಟೀವಿಯಲ್ಲಿ ನಿನ್ನೆ ನೋಡಿಲ್ವಾ? ಇದು ಮುಂದುವರಿಯಲೂ ಬಹುದು. ಅದಕ್ಕಾಗಿ ನಿನ್ನೆ ರಾತ್ರಿನೆ ಹೊರಟು ಬಂದೆ ಒಂದು ವಾರ ರಜೆ ಹಾಕಿ.”

“ಅಲ್ಲಾ ಕಣ್ ಮಗಾ ಹಾಂಗಂದರೆ ಎಂತಾ? ಸ್ವಲ್ಪ ಬಿಡಿಸಿ ಹೇಳು. ”

“ಅಯ್ಯೋ ಮಾವಾ ನೀವೆಲ್ಲಾ ಎಲ್ಲಿದ್ದೀರಿ? ಇಡೀ ಪ್ರಪಂಚಕ್ಕೆ ಕೊರೋನಾ ಎಂಬ ವೈರಸ್ ವಕ್ಕರಿಸಿ ಜನ ಒದ್ದಾಡುತ್ತಿದ್ದಾರೆ. ಇದು ಅಂಟುರೋಗ. ಇದಕ್ಕಿನ್ನೂ ಔಷಧಿ ಕಂಡುಹಿಡಿದಿಲ್ಲ. ಆದುದರಿಂದ ಈ ರೋಗ ತಡೆಗಟ್ಟಲು, ಇದು ಬರದೇ ಇರುವಂತೆ ಎಚ್ಚರಿಕೆಯಿಂದ ಇರಲು ಸರ್ಕಾರ ಹಲವು ಮಾರ್ಗದರ್ಶನ ನೀಡುತ್ತಿದೆ. ಅದರಂತೆ ನಾಗರಿಕರಾದ ನಾವೆಲ್ಲರೂ ತಪ್ಪದೇ ಪರಿಪಾಲಿಸಲೇಬೇಕು…….”

ಕೇಳುತ್ತಿದ್ದ ಅತ್ತೆ ಮಾವ ಇಬ್ಬರಿಗೂ ಅರಿವಾಗುತ್ತಿದ್ದಂತೆ….

“ಸದ್ಯ ದೇವರು ದೊಡ್ಡವನು. ನೀನು ಹೋಗೊ ಮೊದಲೇ ಎಲ್ಲಾ ಗೊತ್ತಾಯ್ತಲ್ಲಾ. ಹೋದ ಮೇಲೆ ಹೀಗಾಗಿದ್ದರೆ ಏನು ಮಾಡೋದಿತ್ತು. ಒಂದು ಮಾತು ಹೇಳ್ತೀನಿ ಜಪ್ತಿ ಮಡಕ್ಕೋ….ಇನ್ನು ಆ ದೇಶ ಈ ದೇಶ ಅಂತ ಹೆಸರು ಹೇಳಬಾರದು. ಹುಟ್ಟಿದ ದೇಶದಲ್ಲಿ ಬಾಳಿ ಬದುಕಬೇಕು ಅಷ್ಟೆ…….”

ಅತ್ತೆಯ ಮಾತು ಮುಂದುವರೆದಿತ್ತು. ಮಾವ ಹೌದೌದು ಎಂದು ತಲೆಯಾಡಿಸುತ್ತಿದ್ದರೆ ಇತ್ತ ಅಳಿಯ ಹೆಂಡತಿ ಮಕ್ಕಳು ಹಾಗೂ ಇವರೆಲ್ಲರ ಖುಷಿ ಕಂಡು ಇಂತಹ ಪ್ರೀತಿ ವಿಶ್ವಾಸಕ್ಕಿಂತ ಜೀವನದಲ್ಲಿ ಯಾವುದೂ ದೊಡ್ಡದಲ್ಲ. ಹುಚ್ಚು ಮನಸಿನ ಆಸೆಗೆ ಬಲಿಯಾಗಿ ಇವನ್ನೆಲ್ಲಾ ಕಳೆದುಕೊಂಡುಬಿಡುತ್ತಿದ್ದೆ.

” ಅತ್ತೆ ಮಾವ ನೀವು ನನ್ನ ಕಣ್ಣು ತೆರೆಸಿದಿರಿ. ಕ್ಷಣಿಕ ಆಸೆಗೆ ಬಲಿಯಾಗಿ ವಿದೇಶದ ವ್ಯಾಮೋಹಕ್ಕೆ ಒಳಗಾಗಿ ಏನೇನೋ ನಿರ್ಧಾರ ಮಾಡಿದ್ದಕ್ಕೆ ನನಗೆ ದೇವರು ಸರಿಯಾದ ಪಾಠ ಕಲಿಸಿದ. ಇನ್ನೆಂದೂ ಈ ದೇಶ ಬಿಟ್ಟು, ನಿಮ್ಮನ್ನೆಲ್ಲ ಬಿಟ್ಟು ದೂರ ಹೋಗುವ ಯೋಚನೆ ಕನಸಿನಲ್ಲೂ ಮಾಡುವುದಿಲ್ಲ ” ಎಂದು ಹೇಳುತ್ತ ಹಿರಿಯರ ಕಾಲಿಗೆರಗಿದ.

“ಎದ್ದೇಳಪ್ಪಾ, ಈಗಷ್ಟೇ ಪ್ರಯಾಣದಿಂದ ಆಯಾಸವಾಗಿದೆ. ಸಾಕು ಇನ್ನು ಪರಿತಾಪವೇಕೆ? ಹೋಗಿ ಮುಖ ತೊಳೆದು ಬಾ. ಬಿಸಿ ಬಿಸಿ ಚಹಾ ಕುಡಿದು ತಿಂಡಿ ತಿನ್ನೋಣವಂತೆ. ಪ್ರಯಾಣದ ಆಯಾಸ ಪರಿಹರಿಸಿಕೊಂಡು ಆಮೇಲೆ ಮಾತನಾಡುವಂತೆ” ಎಂದು ಅಳಿಯನನ್ನು ಆದರಿಸಿದ ಮಾವ.

ತನ್ನ ನಿವೃತ್ತಿಯ ನಂತರ ಷಹರದ ಬಾಡಿಗೆ ಮನೆಯಿಂದ ಬಿಡುಗಡೆಗೊಂಡು ಹೆಂಡತಿಯೊಂದಿಗೆ ಊರಿಗೆ ಬಂದು ನೆಲೆಸಿದ್ದ ಶಂಕರ. ಬಂದ ಹಣದಲ್ಲಿ ಮನೆಯ ಸುತ್ತಮುತ್ತಲಿನ ಜಾಗ ಹದಗೊಳಿಸಿ ತೆಂಗು, ಬಾಳೆಯ ಗಿಡಗಳನ್ನು ನೆಡಿಸಿ ,ತರಕಾರಿ ಬೆಳೆಯಲು ಶುರು ಮಾಡಿದ. ರಸ್ತೆಯ ಅಕ್ಕ ಪಕ್ಕ ಉಳಿದುಕೊಂಡ ತನ್ನ ಜಾಗಕ್ಕೆ ಬೇಲಿ ಕಟ್ಟಿ ಹಸುಗಳಿಗೆ ಹುಲ್ಲು ಬೆಳೆಯುವ ಯೋಚನೆ ಬಂದಂತೆ ಒಂದು ಹಸುವನ್ನು ಕೊಂಡುಕೊಳ್ಳುವ ಯೋಚನೆ ಹೆಂಡತಿಯಿಂದ ಬಂದಾಗ ಯಾಕಾಗಬಾರದು? ಎರಡು ಹಸುಗಳನ್ನು ಕೊಂಡಿದ್ದೂ ಆಯಿತು. ಹಾಲು, ತರಕಾರಿ ಮಾರಾಟದಿಂದ ಅಲ್ಪಸ್ವಲ್ಪ ಹಣವೂ ಕೈ ಸೇರುತ್ತಿತ್ತು. ನಾಲ್ಕಾರು ವರ್ಷಗಳಲ್ಲಿ ಅವನ ಆರ್ಥಿಕ ಪರಿಸ್ಥಿತಿಯೂ ಕೊಂಚ ಸುಧಾರಿಸಿತ್ತು. ಮನೆಯ ಹತ್ತಿರವೇ ಮಾರಾಟಕ್ಕಿದ್ದ ಎರಡು ಎಕರೆ ಭತ್ತ ಬೆಳೆಯುವ ಗದ್ದೆಯನ್ನು ಅಳಿಯ ಸ್ವತಃ ತಾನೇ ಬಂದು ಖರೀದಿಸಿದಾಗಲಂತೂ ಶಂಕರನಿಗೆ ಬಿಡುವಿಲ್ಲದ ಕೆಲಸ. ಕಳೆದುಕೊಂಡ ಜಮೀನು ಸಿಕ್ಕಷ್ಟು ಸಂತೋಷ. ದಿನವಿಡೀ ಭೂಮಿಯ ಕೆಲಸದಲ್ಲಿ ನಿರತರಾದ ದಂಪತಿಗಳಿಗೆ ಹೊತ್ತು ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ. ಗದ್ದೆಯ ಸುತ್ತಲಿನ ಎರಡು ಕಡೆ ನೀರಿನ ಹರಿವು. ಸುತ್ತಲೂ ತೆಂಗು, ಬಾಳೆ,ಹಲಸು,ಮಾವಿನ ಗಿಡಗಳನ್ನು ನೆಟ್ಟಿದ್ದು ಫಲ ಕೊಡುತ್ತಿದ್ದವು. ತನ್ನ ಪರಿಶ್ರಮದ ಪಲ ತೋರಿಸುವ ಉಮೇದಿ ಬಂದವರಿಗೆ.

ಸಂಜೆಯಾಗುತ್ತಿದ್ದಂತೆ ಎಲ್ಲರೂ ಗದ್ದೆಯ ಕಡೆ ಸುತ್ತಾಡಿಬರಲು ಹೊರಟರು. ಮೊಮ್ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಗದ್ದೆ ಬಯಲಿನ ಹಾಳಿಯ ಮೇಲೆ ಒಬ್ಬರ ಹಿಂದೆ ಒಬ್ಬರು ನಡೆಯುವಾಗ ಬಾನಾಡಿಯಲ್ಲಿ ಹಾರಾಡುವ ಬೆಳ್ಳಕ್ಕಿಗಳ ಸಾಲು, ಮುಗಿಲು ಕೆಂಪಾಗಿಸುತ್ತಿರುವ ಸೂರ್ಯ, ಗದ್ದೆಯಲ್ಲಿ ತೊನೆದಾಡುತ್ತಿರುವ ಭತ್ತದ ಪೈರು, ಆ ಅಂದದ ಜೊತೆಗೆ ಮಾವ ಅತ್ತೆಗಂತೂ ಅಳಿಯ ಮಗಳ ಮುದ್ದಾದ ಸಂಸಾರ ಊರಿಗೆ ಬಂದ ಸಂಭ್ರಮ ಅವರ ವಯಸ್ಸು ಕಡಿಮೆ ಮಾಡಿತ್ತು.

ನಾಲ್ಕಾರು ದಿನಗಳು ಕಳೆಯುತ್ತಿದ್ದಂತೆ ಹೊರಡಲು ಅಣಿಯಾದ ಅಳಿಯ ಮಗಳನ್ನು ಸುತಾರಾಂ ಕಳಿಸಲು ಮನಸ್ಸಿಲ್ಲದಿದ್ದರೂ ನಾಳೆ ಹೊರಡುತ್ತೇವೆ ಎಂದಾಗ ಒಪ್ಪಿಗೆ ಕೊಡದೇ ಬೇರೆ ಗತಿ ಇರಲಿಲ್ಲ. ಸದ್ಯ ಮಕ್ಕಳು ಇಲ್ಲೇ ಇರುತ್ತಾರಲ್ಲ. ಶಾಲೆ ಶುರುವಾಗುವವರೆಗೂ ಇಲ್ಲಿಯೇ ಇರುತ್ತಾರೆಂದು ಅಳಿಯ ಮಗಳಿಗೆ ತಾಕೀತು ಮಾಡಿದರು ಹಿರಿಯ ದಂಪತಿಗಳು.

ರಾತ್ರಿ ಬಸ್ ಪ್ರಯಾಣದ ತಯಾರಿ ಮುಗಿಸಿ ಹೊರಟಾಗ ಸಂತೋಷದಿಂದ ಬೀಳ್ಕೊಟ್ಟರು ಆ ಹಿರಿಯ ಜೀವಗಳು. ಮೊಮ್ಮಕ್ಕಳ ತಬ್ಬಿಕೊಂಡು ನಿಂತ ಅತ್ತೆಯನ್ನು ನೋಡಿ ಶಂಕರನಿಗೆ ತನ್ನ ಹೆತ್ತವರ ನೆನಪಾಗದಿರಲಿಲ್ಲ. ಎಲ್ಲಿಯ ಅಪ್ಪ ಅಮ್ಮ! ಆಗಿನ್ನೂ ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿದ ಸಮಯ. ರಜೆ ಪಡೆದು ಆಗಾಗ ಊರಿಗೆ ಹೋಗಿ ಬರುವುದು ನಡೆದೇ ಇತ್ತು. ಹೀಗಿರುವಾಗ ಊರಿನ ಒಂದು ಮದುವೆ ದಿಬ್ಬಣದೊಂದಿಗೆ ಅವರು ಮಾಡಿದ ಖಾಸಗಿ ವಾಹನದಲ್ಲಿ ತೆರಳಿದ ಹೆತ್ತವರು ಹೋಗಿದ್ದು ಮದುವೆಗಲ್ಲ,ಮಸಣಕ್ಕೆ. ಹಳ್ಳದ ಪಕ್ಕದ ರಸ್ತೆ. ಬಸ್ಸಿನಲ್ಲಿ ಜೋರಾಗಿ ಸ್ಪೀಕರ್ ಹಾಡು ಮೊಳಗುತ್ತಿತ್ತು. ಒಳಗಿದ್ದ ದಿಬ್ಬಣದವರೂ ಬಹಳ ಖುಷಿಯಿಂದ ತಮ್ಮ ತಮ್ಮಲ್ಲೇ ಮಾತು, ಹಾಸ್ಯ ಚಟಾಕಿಯೊಂದಿಗೆ ಮೈಮರೆತಿದ್ದರು. ಡ್ರೈವರ್ ಗಾಡಿ ಓಡಿಸುತ್ತಿದ್ದಂತೆ ಬ್ರೇಕ್ ಫೇಲಾಗಿ ನಿಯಂತ್ರಣ ತಪ್ಪಿ ದಾರಿಯ ಪಕ್ಕದ ಒಂದು ಮರಕ್ಕೆ ಹೋಗಿ ಗುದ್ದಿತು ವಾಹನ. ಇದರ ಹೊಡೆತಕ್ಕೆ ಒಳಗಿದ್ದವರು ವಾಹನದಿಂದ ಸಿಡಿದು ಎಲ್ಲೆಂದರಲ್ಲಿ ಬಿದ್ದು ಅನೇಕರು ಸಾವನ್ನಪ್ಪಿದರು. ಸುದ್ದಿ ತಿಳಿದ ಶಂಕರ ಊರಿಗೆ ಬರುವಷ್ಟರಲ್ಲಿ ತನ್ನ ಹೆತ್ತವರನ್ನು ಕಳೆದುಕೊಂಡಿದ್ದ.

ನೆನಪು ಮರುಕಳಿಸಿ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡು ಮ್ಲಾನವಾಗಿ ನಿಂತ ಶಂಕರನನ್ನು ಹೆಂಡತಿ ” ರೀ….ಏನಾಯ್ತು? ಅದೇಕೆ ಅಮ್ಮ ಅಪ್ಪನನ್ನು ಹಾಗೆ ನೋಡುತ್ತಿದ್ದೀರಿ? ಬನ್ನಿ ಬಸ್ಸಿಗೆ ತಡವಾಗುತ್ತದೆ. ಹೊರಡೋಣ” ಎಂದು ಅಂದಾಗಲೇ ಸಹಜ ಸ್ಥಿತಿಗೆ ಬಂದು ಹಿರಿಯರಿಗೆ ನಮಸ್ಕರಿಸಿ ಇಬ್ಬರೂ ಹೊರಟರು.

ಎಂದಿನಂತೆ ಆಫೀಸು ಮನೆ, ಜೊತೆಗೆ ಮಾಸ್ಕ್ ದಿಗ್ಬಂಧನ, ಎಲ್ಲೂ ಹೋಗುವಂತಿಲ್ಲ. ಎಷ್ಟು ಎಚ್ಚರಿಕೆ ತೆಗೆದುಕೊಂಡರೂ ಸಾಲದು. ಮಕ್ಕಳನ್ನು ಊರಿನಲ್ಲಿ ಬಿಟ್ಟು ಬಂದಿದ್ದು ಒಳ್ಳೆಯದಾಯಿತೆಂದು ಇಬ್ಬರೂ ಮಾತನಾಡಿಕೊಳ್ಳುತ್ತಿದ್ದರು. ಟೀವಿಯಲ್ಲಿ ಬರುವ ವರದಿ ದಿನ ದಿನವೂ ಆತಂಕದ ವಾತಾವರಣ ಮೂಡಿಸುತ್ತಿತ್ತು.

ಅಳಿಯ ನರಹರಿ ಕೆಲಸ ಮಾಡುತ್ತಿದ್ದುದು ಒಂದು ಐಟಿ ಕಂಪನಿ. ಒಂದು ತಿಂಗಳು ವರ್ಕ್ ಫ್ರಾಮ್ ಹೋಮ್ ಎಂದು ಆದೇಶ ಹೊರಬಿದ್ದಾಗ ಅವನಿಗಾದ ಸಂತೋಷ ಅಷ್ಟಿಷ್ಟಲ್ಲ. ಮನೆಗೆ ಬಂದವನೇ ” ನವ್ಯಾ ಬೇಗ ಬೇಗ ಎಲ್ಲಾ ಬಟ್ಟೆ ಪ್ಯಾಕ್ ಮಾಡು. ನಾನು ಒಂದು ತಿಂಗಳು ಮನೆಯಿಂದಲೇ ಕೆಲಸ ಮಾಡಬಹುದು. ಊರಿಗೆ ಹೋಗೋಣ. ಒಂದು ಕಾರು ಬುಕ್ ಮಾಡ್ತೀನಿ. ಈ ಸಮಯದಲ್ಲಿ ಬಸ್ಸು ಸಿಗೋದೂ ಕಷ್ಟ, ಹೋಗೋದೂ ಡೇಂಜರ್. ಮನೆಯಲ್ಲಿ ಬೆಲೆ ಬಾಳುವ ವಸ್ತು ಯಾವುದೂ ಇಡುವುದು ಬೇಡ. ನಾನೀಗಲೇ ಓನರ್ ಗೆ ಊರಿಗೆ ಹೋಗಿ ಇರುವ ಸುದ್ದಿ ಹೇಳಿ ಬರುತ್ತೇನೆ. ಬೆಳಗಿನ ಜಾವವೇ ಹೊರಡೋಣ. ನಾಳೆ ಹೇಗಿದ್ದರೂ ಶನಿವಾರ, ರಜೆಯಿರುತ್ತಲ್ವಾ?”

” ಅಲ್ಲಾರೀ….”

” ಅಲ್ಲನೂ ಇಲ್ಲ ಗಿಲ್ಲಾನೂ ಇಲ್ಲ. ನಡಿ ನಡಿ ಊರಲ್ಲಿ ಇರೋದು ಒಳ್ಳೆಯದು. ಎಷ್ಟು ಖುಷಿ ಅಲ್ಲಿ. ಹೇಳಿದಷ್ಟು ಮಾಡು.”
ನವ್ಯಾ ಮರು ಮಾತಿಲ್ಲದೆ ಹೊರಡುವ ತಯಾರಿ ಮಾಡಿದಳು. ಬೆಳಗಿನ ಐದು ಗಂಟೆಗೆಲ್ಲ ಹೊರಟಿತು ಊರ ಕಡೆಗೆ ಇವರಿದ್ದ ಕಾರು.

ದಿಢೀರನೆ ಬಂದ ಮಗಳು ಅಳಿಯನ ಕಂಡು ಬೆರಗಾದರು. ಕತ್ತಲಾವರಿಸತೊಡಗಿತ್ತು. ಜಗದ ತುಂಬ ದೀಪಗಳ ದೀಪೋತ್ಸವಕ್ಕೆ ಅಣಿಯಾದ ಹೊತ್ತು. ಮುದ್ದಿನ ಮಗಳ ಆಗಮನ ಮನೆಗೆ ಮಹಾಲಕ್ಷ್ಮಿ ಬಂದ ಕಳೆ ತಂದಿತು. ಅದಾಗಲೇ ಮಕ್ಕಳು ಓಡಿ ಬಂದು ಅಪ್ಪನನ್ನು ತಬ್ಬಿಕೊಂಡು ಅವನು ತಂದ ಚಾಕಲೇಟ್ ಹುಡುಕಲು ಶುರುಮಾಡಿದರು. ಅವರುಗಳಿಗೆ ಹೆತ್ತವರ ಕಂಡು ಸಂಭ್ರಮವೋ ಸಂಭ್ರಮ. ರಾತ್ರಿ ಊಟ ಆದಂತೆ ಪ್ರಯಾಣದ ಆಯಾಸ, ಮನಸಿಗಾಗುತ್ತಿರುವ ಖುಷಿ ಕಣ್ಣು ಬೇಗನೇ ನಿದ್ದೆಗೆ ಜಾರಿತು.

ಎಲ್ಲೆಲ್ಲೂ ಹಕ್ಕಿಗಳ ಕಲರವ, ಕೊಟ್ಟಿಗೆಯಲ್ಲಿನ ಹಸುವಿನ ‘ಅಂಬಾ’ ಎನ್ನುವ ಕೂಗು ನರಹರಿಯನ್ನು ಎಬ್ಬಿಸಿತು. ಈ ದಿನ ಹೊಸದಿನ. ಬೇಗ ಎದ್ದು ನಿತ್ಯ ಕರ್ಮ ಮುಗಿಸಿ ಕೆಲಸಕ್ಕೆ ಕುಳಿತುಕೊಳ್ಳಲು ನೆಟ್ವರ್ಕ್ ಮನೆಯಲ್ಲಿ ಎಲ್ಲಿ ಸಿಗಬಹುದೆಂಬ ಹುಡುಕಾಟ. ಯಾವ ಕಡೆ ಹೋದರೂ ನೆಟ್ವರ್ಕ್ ಸಿಗುತ್ತಿಲ್ಲ. ಥತ್ತರಕಿ! ಏನು ಮಾಡುವುದು ಈಗ?

ಆಗಲೇ ಮಾವ ಅತ್ತೆ ಇಬ್ಬರೂ ಎದ್ದಾಗಿತ್ತು. ಮೆಲ್ಲಗೆ ಅವರ ರೂಮಿಗೆ ನವ್ಯಳನ್ನು ಕರೆದುಕೊಂಡು ನುಗ್ಗಿದ. ರೂಮಿನ ಒಂದು ಮೂಲೆಯಲ್ಲಿ ನೆಟ್ವರ್ಕ್ ಸಿಗುತ್ತಿದೆ. ಖುಷಿಯಿಂದ ಒಮ್ಮೆ ಹಿಪ್ಪಿಪ್ ಹುರ್ರೇ…..ಎಂದು ಸ್ವಲ್ಪ ಜೋರಾಗೆ ಹೇಳಿಬಿಟ್ಟ. ಮನೆಯಲ್ಲಿ ಇದ್ದವರೆಲ್ಲ ಇವನ ಮುಂದೆ. ಮುಜುಗುರದಲ್ಲಿ ಇದ್ದ ಗಂಡನ ಪರವಾಗಿ ನವ್ಯಳೇ ಇರುವ ವಿಷಯ ಅರುಹಿದಾಗ ” ಇದಕ್ಯಾಕೆ ಇಷ್ಟು ಸಂಕೋಚ? ಇಲ್ಲೇ ಕುಳಿತು ನಿಮ್ಮ ಕೆಲಸ ಮಾಡಿಕೊಳ್ಳಿ ಅಳಿಯಂದಿರೆ. ನನ್ನ ಸಮ್ಮತಿ ಇದೆ” ಎಂದು ಎಲ್ಲರೂ ನಗುವಂತೆ ಮಾಡಿದ ಮಾವನ ಹಾಸ್ಯಭರಿತ ಮಾತು ಮನೆಯೆಲ್ಲ ನಗೆಗಡಲಲ್ಲಿ ಮುಳುಗಿಸಿತು.

ನರಹರಿ ಆಫೀಸ್ ಕೆಲಸವನ್ನೆಲ್ಲ ಮಾವನ ಕೋಣೆಯಲ್ಲೇ ಕುಳಿತು ಮಾಡತೊಡಗಿದ. ಸಮಯವಾದಾಗಲೆಲ್ಲ ಮಾವನ ಸಂಗಡ ಗದ್ದೆಯ ಕಡೆಗೆ ಹೋಗುವುದು ಕೆಲಸದವರ ಜೊತೆಗೆ ಮಾತು, ಅವರೊಂದಿಗಿನ ಒಡನಾಟದಲ್ಲಿ ಹೆಚ್ಚು ಹೆಚ್ಚು ಮನಸ್ಸು ಕೃಷಿಯ ಕಡೆಗೆ ವಾಲತೊಡಗಿತು. ಹೆಂಡತಿ ಅವಳಮ್ಮ ಮಕ್ಕಳ ಜೊತೆಗೇ ಹೆಚ್ಚು ಸಮಯ ಕಳೆಯುತ್ತಿದ್ದರಿಂದ ಆಗಾಗ ತಾನೊಬ್ಬನೇ ಸುತ್ತಮುತ್ತಲಿನ ರೈತರ ಕೃಷಿ ಭೂಮಿ ನೋಡಲು ಹೋಗುತ್ತಿದ್ದ. ಅವರ ಪರಿಚಯ, ಸ್ನೇಹ ಹೊಸ ವಾತಾವರಣವನ್ನೇ ಸೃಷ್ಟಿಸಿಬಿಟ್ಟಿತು.

ಕೆಲಸದ ಜೊತೆ ಜೊತೆಗೆ ನಿಧಾನವಾಗಿ ಕೃಷಿಗೆ ಸಂಬಂಧಪಟ್ಟ ಮಾಹಿತಿಗಳನ್ನು ತಿಳಿಯತೊಡಗಿದ ಗೂಗಲ್ ಸರ್ಚ ಮಾಡುತ್ತ. ಇದಕ್ಕೆ ಇಂಬು ನೀಡುವಂತೆ ಅದೇ ಊರಿನ ಒಬ್ಬ ಕೃಷಿಕ ಸುರೇಶನ ಪರಿಚಯವೂ ಆಯಿತು.

ಅವನೊಬ್ಬ ಇಂಜನೀಯರಿಂಗ್ ಓದಿದ ಹುಡುಗ. ಹೆಸರು ಸುರೇಶ. ಲಕ್ಷಾಂತರ ರೂಪಾಯಿ ಸಂಪಾದನೆ ಇರುವ ಕೆಲಸ ಬಿಟ್ಟು ಬಂದು ತನ್ನ ಹಳ್ಳಿಯಲ್ಲಿ ನೆಲೆಸಿದ್ದ. ತಂದೆಯ ಜಮೀನಿನಲ್ಲಿ ಆಯಾಯಾ ಬೆಳೆಗಳಿಗೆ ಸಂಬಂಧಪಟ್ಟ ಹೊಸ ಹೊಸ ತಂತ್ರಜ್ಞಾನ ಬಳಸಿ ಕೃಷಿಯಲ್ಲಿನ ಹೊಸ ಹೊಸ ಉಪಕರಣಗಳು, ಹನಿ ನೀರಾವರಿ ಅಳವಡಿಸಿಕೊಂಡು ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತಿದ್ದ. ಕೆಲಸದವರಿಗೆಂದೇ ನಾಲ್ಕಾರು ಪುಟ್ಟ ಪುಟ್ಟ ಮನೆಗಳನ್ನು ಕಟ್ಟಿ ವಾಸಿಸಲು ಅನುಕೂಲ ಮಾಡಿಕೊಟ್ಟು ಸದಾ ಉತ್ಸಾಹದಿಂದ ಕೆಲಸದಲ್ಲಿ ತೊಡಗಿರುವಂತೆ ಮಾಡಿ ತಂದೆಗೆ ಹೆಗಲಾಗಿ ಅವನ ನೂರಾರು ಎಕರೆ ಜಮೀನು ಹಸಿರಿನಿಂದ ಕಂಗೊಳಿಸಿ ಆದಾಯ ದ್ವಿಗುಣವಾಗುವಂತೆ ಮಾಡಿದ್ದ. ನರಹರಿ ಅವನು ಹೊಸದಾಗಿ ಕೃಷಿಯಲ್ಲಿ ತೊಡಗಿಸಿಕೊಂಡ ರೀತಿ ನೋಡಿ ಬೆರಗಾದ. ಇಬ್ಬರದೂ ಒಂದೇ ಶಿಕ್ಷಣ ಹಾಗೆ ಸ್ನೇಹವೂ ಬೆಳೆಯಿತು. ಸಮಯವಾದಾಗಲೆಲ್ಲ ಅವನಲ್ಲಿಗೆ ಬಂದು ಹೋಗುವುದು ಸಾಮಾನ್ಯವಾಯಿತು.

ದಿನಗಳು ಸರಿದಿದ್ದೇ ಗೊತ್ತಾಗಲಿಲ್ಲ ಹಳ್ಳಿಯ ವಾತಾವರಣದಲ್ಲಿ. ಮೂರು ತಿಂಗಳು ಕಳೆದು ಹೋಗಿದೆ ಊರಿಗೆ ಬಂದು. ವರ್ಕ್ ಫ್ರಮ್ ಹೋಂ ಮುಂದುವರಿಯುತ್ತಲೇ ಇದೆ. ದಿನ ಕಳೆದಂತೆ ಆಫೀಸ್ ಕೆಲಸದ ಒತ್ತಡ ಹೆಚ್ಚಾಗುತ್ತಲೇ ಹೋಯಿತು. ಒಮ್ಮೆ ಕೆಲಸಕ್ಕೆ ಕೂತರೆ ಆಗಾಗ ಮೀಟಿಂಗ್ ಮೀಟಿಂಗ್. ಒಮ್ಮೊಮ್ಮೆ ಊಟ ತಿಂಡಿ ಎಲ್ಲಾ ಹೊತ್ತಲ್ಲದ ಹೊತ್ತಲ್ಲಿ ಆಗುವಂತಾಯಿತು. ಬರಬರುತ್ತಾ ಟೆನ್ಷನ್ ಜೊತೆಗೆ ತಡವಾಗಿ ಬರುವ ನಿದ್ದೆಯ ರಾತ್ರಿಗಳೇ ಹೆಚ್ಚಾದವು. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದಾಗ ಮನೆಯವರೆಲ್ಲ ದಿಗಿಲುಗೊಂಡರು. ಅವರೆಲ್ಲರ ಒತ್ತಾಯದ ಮೇರೆಗೆ ಎರಡು ದಿನ ರಜೆ ಹಾಕಿ ಸ್ವಲ್ಪ ನಿರಾಳವಾದರೂ ನರಹರಿ ಇರುವುದು ಜವಾಬ್ದಾರಿ ಸ್ಥಾನದಲ್ಲಿ. ಕೆಲಸ ಮಾಡದೇ ಬೇರೆ ದಾರಿ ಇರಲಿಲ್ಲ. ಹಿಂದೆಲ್ಲ ಇದಕ್ಕೆ ಏನಾದರೂ ಪರಿಹಾರ ಕಂಡುಹಿಡಿಯುವಲ್ಲಿ ಹಲವಾರು ಬಾರಿ ಯೋಚಿಸಿದರೂ ಪರಿಹಾರ ಮಾತ್ರ ಪ್ರಶ್ನೆಯಾಗಿಯೇ ಉಳಿದಿತ್ತು.

ಜೀವನದಲ್ಲಿ ಏನಾದರೂ ಘಟಿಸಲು ಒಂದು ಹುಲ್ಲು ಕಡ್ಡಿಯ ನೆವ ಸಾಕು. ಹಾಗೆ ಆ ಕೃಷಿಕ ಸುರೇಶ ಒಂದು ದಿನ ಇದ್ದಕಿದ್ದಂತೆ ಇವರ ಮನೆಗೆ ಬಂದು “ನಿಮ್ಮ ಹತ್ತಿರ ಸ್ವಲ್ಪ ಮಾತನಾಡಬೇಕು. ನನ್ನ ಜೊತೆ ಬರುತ್ತೀರಾ? ಇಲ್ಲಿ ಬೇಡ ಹೊರಗೆ ಹೋಗೋಣ” ಎಂದಾಗ ಹೆಂಡತಿಗೆ ಹೇಳಿ ಹೊರಟ ನರಹರಿ.

ಅವನು ತನ್ನ ಗದ್ದೆಯಂಚಿನಲ್ಲಿ ನರಹರಿಯೊಂದಿಗೆ ಕೂತು ” ನಿಮಗೆ ನಿಮ್ಮ ಕೆಲಸದಲ್ಲಿ ಸಂತೃಪ್ತಿ ಇದೆಯಾ? ಸ್ವತಂತ್ರ ಇದೆಯಾ? ಹೀಗೆ ಎಷ್ಟು ದಿನ ಆ ಕಂಪ್ಯೂಟರ್ ಮುಂದೆ ಕೆಲಸ ಮಾಡಲು ಸಾಧ್ಯ? ಯೋಚಿಸಿದ್ದೀರಾ? ಕೃಷಿ ನಿಮಗೆ ಇಷ್ಟ ಎಂಬುದು ನಾನು ಇಷ್ಟು ದಿನಗಳ ನಿಮ್ಮ ಒಡನಾಟದಲ್ಲಿ ಕಂಡುಕೊಂಡಿದ್ದೇನೆ. ಯಾಕೆ ನೀವೂ ಒಬ್ಬ ರೈತ ಆಗಬಾರದು? ನೋಡಿ ಹಿಂದೆ ನಾನೆಷ್ಟು ಅತಂತ್ರನಾಗಿದ್ದೆ. ಒಂದೇ ರೀತಿಯ ಜೀವನ. ತಲೆ ಚಿಟ್ಟು ಹಿಡಿದು ರಿಸೈನ್ ಮಾಡಿ ಹಳ್ಳಿ ಸೇರಿಕೊಂಡೆ. ನೀವೂ ಯಾಕೆ ಹೀಗೆ ಮಾಡಬಾರದು?”

ಇದ್ದಕ್ಕಿದ್ದಂತೆ ಬಂದ ಅವನ ಸಲಹೆ, ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಲು ತಡವರಿಸಿದ. ” ಸಮಾಧಾನವಾಗಿ ಯೋಚಿಸಿ ಇದರ ಬಗ್ಗೆ ತೀರ್ಮಾನ ಕೈಗೊಳ್ಳುವೆ. ಮನೆಯಲ್ಲೂ ಹೇಳಿ ಅಭಿಪ್ರಾಯ ತಿಳಿದುಕೊಳ್ಳುವೆ. ನಿಮಗಾದರೆ ನಿಮ್ಮ ತಂದೆಯವರ ಜಮೀನು ಇತ್ತು. ಆದರೆ ನನಗೆ ಇರೊ ಎರಡೆಕರೆ ಜಾಗದಲ್ಲಿ ಏನು ಮಾಡಲು ಸಾಧ್ಯ ಹೇಳಿ? ಅದೂ ಈಗ ಮಾವ ಅಭಿವೃದ್ಧಿ ಮಾಡಿದ್ದಾರೆ. ನನ್ನದು ಅಂತ ಒಂದು ಅಂಗೈಅಗಲ ಜಾಗ ಇಲ್ಲ.” ಮಾತಿನಲ್ಲಿ ನಿರಾಶೆಯ ಛಾಯೆ!

ಜೋರಾಗಿ ನಗುತ್ತ ಸುರೇಶ ಹೇಳಿದ ; ” ಮನಸ್ಸಿದ್ದರೆ ಮಾರ್ಗವಿದೆ. ನೀವು ಧೈರ್ಯ ಮಾಡಬೇಕು. ಯೋಚಿಸಿ ತೀರ್ಮಾನಕ್ಕೆ ಬನ್ನಿ. ನಾನು ನಿಮಗೆ ಸಹಾಯ ಮಾಡುವೆ.”

ಮನೆಯ ದಾರಿ ಹಿಡಿದ ನರಹರಿಯ ಮನಸ್ಸು ಎಂದಿನಂತೆ ಇರಲಿಲ್ಲ. ಕೂತಲ್ಲಿ ನಿಂತಲ್ಲಿ ಸುರೇಶನ ಮಾತುಗಳೇ ಗಿರಕಿ ಹೊಡೆಯುತ್ತಿತ್ತು. ಏನು ಮಾಡಲಿ? ಏನು ಮಾಡಲಿ? ಊಟ ಬೇಡ, ನಿದ್ದೆ ಬೇಡ, ಆಫೀಸ್ ಕೆಲಸ ಕೂಡಾ ಹೊರೆಯಾಗುವಂತೆ ಭಾಸವಾಗತೊಡಗಿತು. ಹೇಗೆ ಇದರಿಂದ ಮುಕ್ತಿ ಪಡೆಯಲಿ? ಯಾರಲ್ಲಿ ಹೇಳಿಕೊಳ್ಳಲಿ? ಧೈರ್ಯದಿಂದ ಮುನ್ನುಗ್ಗಲು ಆಗುತ್ತಿಲ್ಲವಲ್ಲಾ.

ನಾಲ್ಕಾರು ದಿನ ಹೀಗೇ ಕಳೆಯಿತು. ಹೆಚ್ಚು ಹೆಚ್ಚು ಮೌನವಾಗುತ್ತಿರುವ ನರಹರಿಯ ಕಂಡು ನವ್ಯಾ ಮೊದಮೊದಲು ಆಫೀಸ್ ಕೆಲಸದ ಟೆನ್ಷನ್ ಇರಬಹುದು ಎಂದು ಸುಮ್ಮನಾಗಿದ್ದಳು. ಅವನ ಮೌನ ಮಕ್ಕಳೂ ಮಾತಾಡುವಂತಾದಾಗ ತಡೆಯಲಾಗದೆ ಕೇಳಿಯೇಬಿಟ್ಟಳು ; ” ರೀ…..ಏನಾಗಿದೆ ನಿಮಗೆ? ಯಾಕೋ ಒಂದು ರೀತಿ ಇದ್ದೀರಿ. ನನಗೂ ಹೇಳಬಾರದಾ? ನೀವು ಹೇಳದೇ ಇದ್ದರೆ ನನಗೆ ಗೊತ್ತಾಗೋದಾದರೂ ಹೇಗೆ ಹೇಳಿ? ಯಾಕೋ ನಿಮಗಿಲ್ಲಿ ಬೇಜಾರಾಗ್ತಾ ಇರಬೇಕು. ನಡೀರಿ ನಮ್ಮನೆಗೆ ಹೋಗಿಬಿಡೋಣ. ಮಕ್ಕಳು ಇಲ್ಲೇ ಇರಲಿ. ಶಾಲೆ ಶುರುವಾದ ಮೇಲೆ ಬಂದು ಕರೆದುಕೊಂಡು ಹೋಗೋಣ. ಏನ್ರೀ…ಕೇಳ್ತಾ?”
ಹೂಂ ಇಲ್ಲ ಊಹೂಂ ಇಲ್ಲ. ದೊಡ್ಡ ತಲೆ ನೋವಾಯಿತು ಅವಳಿಗೆ.

ಮಾರನೇ ದಿನ ಅಪ್ಪನ ಹತ್ತಿರ ” ನೀನೇ ವಿಚಾರಿಸು ಏನಾಗಿದೆ ಅಂತ. ಯಾಕೋ ಒಂಥರಾ ಇದ್ದಾರೆ. ನನಗೂ ಹೇಳುತ್ತಿಲ್ಲ” ಮಗಳ ಕಣ್ಣು ತುಂಬಿದ್ದು ಕಂಡು ಗಾಬರಿಯಾಗಿ ” ವಿಚಾರಿಸ್ತೀನಿ ಇರವ್ವಾ. ಅದ್ಯಾಕೆ ಇಷ್ಟೊಂದು ಬೇಜಾರು ಮಾಡ್ಕಂಡಿ? ” ಎಂದು ಸಮಾದಾನಪಡಿಸಿದರು.

ಅಳಿಯನನ್ನು ಗಮನಿಸಿದ ಅವರಿಗೂ ಆತಂಕ ಕಾಡುತ್ತಿತ್ತು. ಆದರೆ ಮಗಳೇ ಸುಮ್ಮನಿರುವಾಗ ತಾನು ಹೇಗೆ ಕೇಳುವುದು? ಎಂಬ ಗೊಂದಲದಲ್ಲಿ ಇರುವಾಗ ಮಗಳಿಂದ ಬಂತ ಕೋರಿಕೆ ಖುದ್ದಾಗಿ ಅಳಿಯನನ್ನು ವಿಚಾರಿಸಲು ಅನುವು ಮಾಡಿಕೊಟ್ಟಂತಾಯಿತು.

ಅಂದು ಶನಿವಾರ. ಮಾಮೂಲಿಯಂತೆ ಗದ್ದೆಯ ಕಡೆ ಹೊರಟವರು ಒತ್ತಾಯವಾಗಿ ಅಳಿಯನನ್ನು ಜೊತೆಗೆ ಕರೆದುಕೊಂಡು ಹೊರಟರು. ಮೊದಲಿನಂತೆ ಹೊರಗೆಲ್ಲೂ ಹೋಗದೇ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದ ನರಹರಿ ಮಾವನ ಮಾತಿಗೆ ಮರು ಮಾತಾಡದೇ ಹೊರಟಿದ್ದು ಕಂಡು ನವ್ಯಾಳಿಗೆ ಸಮಾಧಾನವಾಯಿತು.

” ನೋಡು ನರಹರಿ ನಾನು ನಿನ್ನ ತಂದೆಯ ಸ್ಥಾನದಲ್ಲಿ ನಿಂತು ಕೇಳುತ್ತಿದ್ದೇನೆ. ನಿನಗೆ ಏನಾಗಿದೆ ಎಂಬುದು ನನಗಾದರೂ ಹೇಳು. ಏನು ಸಮಸ್ಯೆ ನಿನ್ನದು? ಯಾಕೆ ಈ ಮೌನ,ನಿರಾಶೆ. ನಮ್ಮಲ್ಲಿದ್ದು ಬೇಜಾರಾಗಿದೆಯಾ? ನಾವೇನಾದರೂ ತಪ್ಪಾಗಿ ನಡೆದುಕೊಂಡಿದ್ದರೆ ಹೇಳು. ಕ್ಷಮೆ ಕೇಳುತ್ತೇನೆ. ಆದರೆ ನೀನು ಮಾತ್ರ ಹೀಗಿರಬಾರದು. ಇದು ನಿನಗೆ ಶೋಭೆಯಲ್ಲ. ಇದು ಸಣ್ಣ ಹಳ್ಳಿ. ಇಲ್ಲಿ ಏನಾದರೂ ಗಮನಿಸುವವರು ಜಾಸ್ತಿ. ಆಗಲೇ ಜನ ಕೇಳುತ್ತಿದ್ದಾರೆ ; ನಿಮ್ಮ ಅಳಿಯ ಎಲ್ಲಿ? ಇತ್ತೀಚೆಗೆ ಕಾಣಿಸ್ತಾನೇ ಇಲ್ಲ. ಯಾಕೆ ಮೈಗುಶಾರಿಲ್ವಾ? ಅಂತ. ಅದೇನು ಅಂತ ಹೇಳಪ್ಪಾ. ನನ್ನ ಹತ್ತಿರ ಸಂಕೋಚ ಬೇಡ.”

ಶಂಕರನಿಗೆ ತನ್ನ ಮನಸ್ಸಿನ ಗೊಂದಲಕ್ಕೆ ಇಂಬು ಸಿಕ್ಕಂತಾಯಿತು ಹಿರಿ ಜೀವದ ಮಾತು. ತದೇಕವಾಗಿ ಮಾವನನ್ನೇ ನೋಡುತ್ತಿದ್ದ. ಕೃಷ ಶರೀರ. ನೆರೆತ ಕೂದಲು, ಸ್ವಲ್ಪ ಬಾಗಲು ಅಣಿಯಾದ ಬೆನ್ನು, ಬದುಕಿನ ಕಷ್ಟ ಸುಖ ಅನುಭವಿಸಿ ಹೈರಾಣಾದ ಅವರನ್ನು ನೋಡಿ ಹೌದು, ನಾನು ಎಲ್ಲ ಜವಾಬ್ದಾರಿ ಇವರ ಮಗನಾಗಿ ತೆಗೆದುಕೊಳ್ಳಬೇಕು. ಹೈರಾಣಾದ ಜೀವಗಳು ಸಂತೃಪ್ತಿಯಿಂದ ನಿರಾಳವಾಗಿ ಇನ್ನುಳಿದ ಜೀವನ ನಡೆಸುವಂತಾಗಬೇಕು. ಮನೆಯಲ್ಲಿ ಕೂತು ಮೊಮ್ಮಕ್ಕಳೊಂದಿಗೆ ಖುಷಿ ಖುಷಿಯಾಗಿ ಇರಬೇಕಾದ ಸಮಯವಿದು. ತನ್ನ ಮನಸ್ಸಿನಲ್ಲಾಗುತ್ತಿರುವ ಕಳವಳ, ಗೊಂದಲ ಎಲ್ಲವನ್ನೂ ಇವರಲ್ಲಿ ಹೇಳಿಬಿಡಬೇಕು. ಅನುಭವಸ್ಥರು, ಹಿರಿಯರು. ಇವರೇ ನನಗೆ ಸರಿಯಾದ ಮಾರ್ಗದರ್ಶನ ನೀಡುವವರು ಎಂಬ ಗೌರವ ಭಾವ ಶಂಕರನಲ್ಲಿ ಪುಟಿದೆದ್ದಿತು.

” ಮಾವ ನಾನು ಕೆಲಸ ಬಿಡುವ ಯೋಚನೆ ಮಾಡುತ್ತಿದ್ದೇನೆ. ನಾನು ಹೆಂಡತಿ ಮಕ್ಕಳೊಂದಿಗೆ ಇಲ್ಲೇ ಇದ್ದುಬಿಡಲಾ?”

ಅನಿರೀಕ್ಷಿತವಾಗಿ ಬಂದ ಶಂಕರನ ಮಾತು ಒಂದು ಕಡೆ ಅತೀವ ಖುಷಿ ತಂದರೆ ಈ ಹಳ್ಳಿಯಲ್ಲಿದ್ದು ಏನು ಮಾಡುವನಿವನು? ಮಕ್ಕಳು ಚಿಕ್ಕವರು. ನನ್ನ ಹತ್ತಿರ ಇವರನ್ನೆಲ್ಲ ಸಾಕಲು ಸಾಧ್ಯವೇ? ಬರಿಗೈಲಿ ಮನೆಯಲ್ಲಿ ಕುಳಿತ ಅಳಿಯನನ್ನು ನೋಡಿ ಜನ ಆಡಿಕೊಳ್ಳೋದಿಲ್ವಾ? ಇತ್ಯಾದಿ ಇತ್ಯಾದಿ ಪ್ರಶ್ನೆಗಳು ಧುತ್ತೆಂದು ಶಂಕರನನ್ನು ಕಾಡಲು ಶುರುಮಾಡಿದವು. ಏನೊಂದೂ ಮಾತನಾಡದೇ ಇರುವುದನ್ನು ನೋಡಿದ ನರಹರಿ ತಾನೇ ಮಾತು ಮುಂದುವರೆಸಿದ ;

“ಮಾವ ನೀವು ಚಿಂತೆ ಮಾಡಬೇಡಿ. ಕೆಲಸ ಬಿಟ್ಟು ನಾನು ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಆಫೀಸಿನಿಂದ ಒಂದಿಷ್ಟು ಹಣ ಹೇಗಿದ್ದರೂ ಬರುತ್ತದೆ. ಸಿಟಿಯಲ್ಲಿರುವ ಮನೆ ಖಾಲಿ ಮಾಡಿದರೆ ಅಡ್ವಾನ್ಸ್ ಹಣವೂ ಕೈ ಸೇರುತ್ತದೆ. ಮಕ್ಕಳು ಹೇಗಿದ್ದರೂ ಚಿಕ್ಕವರು. ಇಲ್ಲಿಯ ಶಾಲೆಗೇ ಸೇರಿಸಿದರಾಯಿತು. ಹೊಂದಿಕೊಳ್ಳುತ್ತಾರೆ. ಸುರೇಶನೂ ನನಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾನೆ. ಅವನೊಂದಿಗೆ ಕೂತು ಕೂಲಂಕಷವಾಗಿ ಮಾತನಾಡಲು ಮಾರ್ಗದರ್ಶಕರಾಗಿ ನೀವು ಇರಿ ಸಾಕು. ನಿಮ್ಮ ಅಭಿಪ್ರಾಯ ಏನು ಹೇಳಿ” ಎಂದಾಗ ಶಂಕರನಿಗೂ ಒಂದು ರೀತಿಯಲ್ಲಿ ಅಳಿಯನ ನಿರ್ಧಾರ ಸರಿ ಎನಿಸಿತು.

” ಆಗಲಿ ನರಹರಿ. ನೀನು ಮಾಡುತ್ತಿರುವ ವಿಚಾರ ಸರಿಯಾಗಿಯೇ ಇದೆ. ಸಿಟಿ ಜೀವನ ನಾನೂ ಅನುಭವಿಸಿ ಹೈರಾಣಾಗಿದ್ದೇನೆ. ಒಂದಕ್ಕಿದ್ದರೆ ಇನ್ನೊಂದಕ್ಕಿಲ್ಲ. ಸುರೇಶನ ಸಲಹೆ,ಸಹಾಯ ಮೊದಲು ಏನು ಅಂತ ತಿಳಿದು ಮುಂದಿನ ತೀರ್ಮಾನ ಕೈಗೊಳ್ಳೋಣ. ಆತುರಪಡುವುದು ಬೇಡ. ಮನೆಯಲ್ಲಿ ಈ ವಿಷಯದ ಕುರಿತು ಮಾತನಾಡೋಣ. ಒಟ್ಟಿನಲ್ಲಿ ನೀವು ನನ್ನ ಕಣ್ಣ ಮುಂದಿದ್ದರೆ ಅದಕ್ಕಿಂತ ಸಂತೋಷ ಇನ್ಯಾವುದಿದೆ ಹೇಳು. ನಡಿ ಹೋಗೋಣ ಮನೆಗೆ.”

ಅಪ್ಪನಿಂದ ವಿಷಯ ತಿಳಿದ ನವ್ಯಾಳಿಗೂ ಗಂಡನ ನಿರ್ಧಾರ ಸರಿ ಅನ್ನಿಸಿತು. ಗಂಡ ಮಕ್ಕಳು ಹೋದ ಮೇಲೆ ದಿನವಿಡೀ ಒಬ್ಬಳೆ ಮನೆಯಲ್ಲಿ ಕೂತು ಕಾಲ ಕಳೆಯುವ ಅನಿಷ್ಟ ತಪ್ಪಿತಲ್ಲ. ಇಲ್ಲಾದರೆ ಎಲ್ಲರೂ ಇರುತ್ತಾರೆ. ಹುಟ್ಟಿದೂರು ಎಷ್ಟೆಂದರೂ ಹೆಣ್ಣಿಗೆ ಅಚ್ಚುಮೆಚ್ಚು. ಒಂದೇ ಉಸುರಿಗೆ ” ಹೌದು ಹಾಗೆಯೇ ಮಾಡೋಣ. ಬೆಂಗಳೂರಿನ ಬಾಡಿಗೆ ಮನೆ ಖಾಲಿ ಮಾಡಿ ಬರೋಣ. ನೀವು ಕೆಲಸ ಬಿಟ್ಟುಬಿಡಿ ಮಾರಾಯರೆ. ನಡಿರಿ ನಾಳೆಯೇ ಬೆಂಗಳೂರಿಗೆ ಹೋಗೋಣ್ವಾ?”

ಹೆಂಡತಿಯ ಮಾತಿಗೆ ಬಹುದಿನಗಳಿಂದ ಮೌನವಾಗಿದ್ದ ನರಹರಿ ಜೋರಾಗಿ ನಕ್ಕಿದ್ದು ಕಂಡು ಆಕಾಶದಲ್ಲಿ ದಟ್ಟವಾಗಿ ಕಟ್ಟಿದ ಮೋಡ ಮಳೆ ಸುರಿದು ಸುತ್ತಲಿನ ವಾತಾವರಣ ತಂಪು ಮಾಡಿ ತಿಳಿಯಾದಷ್ಟು ಸಂತೋಷವಾಯಿತು ಎಲ್ಲರಿಗೂ. ಹಾಗೆ ಚಿಕ್ಕ ಮಕ್ಕಳಂತೆ ಆತುರದಿ ಮಾತನಾಡಿದ ನವ್ಯಾಳ ಮಾತಿಗೆ ಅವಳಮ್ಮ ” ಅದೆಷ್ಟು ಆತುರವೆ ನಿನಗೆ ಈ ಹಳ್ಳಿಯಲ್ಲೇ ಇರಲು? ನೋಡು ನಿನ್ನ ಗಂಡನನ್ನೂ ಇಲ್ಲಿರುವಂತೆ ಮನಸ್ಸು ಬದಲಾಯಿಸಿಬಿಟ್ಟೆ. ಸ್ವಲ್ಪ ತಾಳ್ಮೆ ಇರಲಿ. ತಡಿ…ತಡಿ..” ಎಂದು ಹೇಳುತ್ತಿದ್ದಂತೆ ವಾಸ್ತವಕ್ಕೆ ಬಂದ ನವ್ಯಾ ಗಂಡನನ್ನು ಕುಡಿನೋಟದಲ್ಲೆ ನೋಡಿ ಮೆಚ್ಚುಗೆ ಸೂಸುತ್ತ ರೂಮು ಸೇರಿಕೊಂಡಳು. ಮಕ್ಕಳು ಅಂಗಳದಲ್ಲಿ ಆಟದಲ್ಲಿ ಮಗ್ನವಾಗಿದ್ದರು!

ಅವಳಪ್ಪನಿಗೋ…..ಮಗಳ ಖುಷಿ ಕಂಡು ಆಕಾಶಕ್ಕೆ ಏಣಿ ಹಾಕಿದಷ್ಟು ಸಂತೋಷದಿಂದ ” ಗೌರಿ ಬಹಳ ದಿನವಾಗಿದೆ ಪಾಯಸದ ಅಡಿಗೆ ಉಂಡು. ಸ್ವಲ್ಪ ಸಣ್ಣಕ್ಕಿ ಕಡಲೆ ಬೇಳೆ ಹಾಕಿ ಹಾಲು ಪಾಯಸ ಮಾಡು ಇವತ್ತು ” ಎನ್ನುತ್ತ ಹಸುವಿಗೆ ಮೇವು ಹಾಕಲು ಕೊಟ್ಟಿಗೆಯ ಕಡೆಗೆ ನಡೆದ.

ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಯಾಗಿತ್ತು. ಸಿಹಿ ಅಡುಗೆಯ ಬೋಜನ ಎಲ್ಲರೂ ಉಂಡು ನಾಳಿನ ದಿನದ ಕನಸು ನನಸಾಗಿಸಿಕೊಳ್ಳುವತ್ತ ಎಲ್ಲರ ಚಿತ್ತ. ನರಹರಿ ಮೊದಲಿನಂತೆ ಲವಲವಿಕೆಯಿಂದ ತನ್ನ ಆಫೀಸ್ ಕೆಲಸ ಉಳಿದ ಪೃಕ್ರಿಯೆಗಳತ್ತ ಹೆಚ್ಚಿನ ಗಮನ ಹರಿಸಿದ. ಎಲ್ಲವೂ 0nline ಮೂಲಕವೇ ಮಾಡಬಹುದಾದ್ದರಿಂದ ಓಡಾಟದ ಪ್ರಶ್ನೆಯೇ ಇರಲಿಲ್ಲ.

ಎಲ್ಲ ವ್ಯವಹಾರದ ಮಾತುಕತೆ ಸುರೇಶ ತನ್ನ ತಂದೆಯನ್ನು ಮುಂದಿಟ್ಟುಕೊಂಡು ನರಹರಿಯು ಕೃಷಿಯಲ್ಲಿ ತೊಡಗಿಸಿಕೊಳ್ಳಲು ತನ್ನ ಇಪ್ಪತ್ತು ಎಕರೆ ಜಮೀನನ್ನು ಗುತ್ತಿಗೆಯ ಮೇರೆಗೆ ಬಿಟ್ಟುಕೊಡಲು ಕರಾರು ಪತ್ರವನ್ನೂ ಮಾಡಿಕೊಟ್ಟ. ವ್ಯವಸಾಯಕ್ಕೆ ಬೇಕಾದ ಉಪಕರಣ,ಆಳುಗಳ ವ್ಯವಸ್ಥೆ ಮಾರ್ಗದರ್ಶನ ಸುರೇಶನೇ ಒದಗಿಸಬೇಕು ಹಾಗೂ ಇದಕ್ಕಾಗುವ ಖರ್ಚು ನರಹರಿ ಕೊಡುತ್ತಾನೆ ಎಂದು ಶಂಕರನು ಕೇಳಿಕೊಂಡಾಗ ಇದಕ್ಕೂ ಸುರೇಶನ ಕಡೆಯಿಂದ ಒಪ್ಪಿಗೆ ಸಿಕ್ಕಿತು. ಇನ್ನೇನು ಅಲ್ಪ ಬಂಡವಾಳದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಬಹುದಾದ ಅವಕಾಶ ಸಿಕ್ಕಿದ್ದು ಆ ದೇವರ ಕೃಪೆಯೇ ಸರಿ ಎಂದು ಮನಸ್ಸಿನಲ್ಲೇ ಕೃತಜ್ಞತೆ ಸಲ್ಲಿಸಿದ ನರಹರಿ.

ಒಂದು ಶುಭ ಮುಹೂರ್ತದಲ್ಲಿ ತಮ್ಮ ಗದ್ದೆಗೆ ಹೊಂದಿಕೊಂಡಂತೆ ಇರುವ ಸುರೇಶನ ಇಪ್ಪತ್ತು ಎಕರೆ ಜಮೀನಿನಲ್ಲಿ ನಾಲ್ಕಾರು ಆಳುಗಳನ್ನು ಕರೆಸಿ ಕೃಷಿ ಚಟುವಟಿಕೆ ಶುರು ಮಾಡಿಸಿದ್ದೂ ಆಯಿತು. ನೋಡ ನೋಡುತ್ತಿದ್ದಂತೆ ವರ್ಷ ಕಳೆದಿದ್ದೂ ಗೊತ್ತಾಗಲಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ಹಿರಿಯರ ಮಾರ್ಗದರ್ಶನ, ಸ್ನೇಹಿತನ ಸಹಾಯ ಹಸ್ತ, ಹೆಂಡತಿ ಮಕ್ಕಳೊಂದಿಗಿನ ಅನ್ಯೋನ್ಯ ಸಂಸಾರ ನರಹರಿ ಅಪ್ಪಟ ಕೃಷಿಕನಾಗಲು ಹೆಚ್ಚು ದಿನ ಬೇಕಾಗಲೇ ಇಲ್ಲ. ದೇಶ ಸುತ್ತಿಬರಲು ತುದಿಗಾಲಿನಲ್ಲಿ ನಿಂತ ನರಹರಿಗೆ ಉಳುವ ಭೂಮಿ ಸಂತೃಪ್ತಿ ನೀಡಿತ್ತು.

**************

26-11-2020 10.50pm

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮ ಟಿಪ್ಪಣಿ ಬರೆಯಿರಿ