ಕವನ (127)

ನಿನ್ನ ಎದೆಗವಚಿಕೊಂಡು
ಮುದ್ದು ಮಾಡುವಷ್ಟು
ಕಾತುರ ನನಗೆ.

ಹೇಗೆ ಹೇಳಲಿ ಹೇಳು
ಉಕ್ಕಿ ಬರುವ ಲಾವಾ ರಸದಂತೆ
ನನ್ನೆದೆಯಾಳದ ತವಕ.

ಎಷ್ಟೊಂದು ಮೋಡಿ
ಮಾಡಿದೆ ನೀನು
ಈ ತನ್ಮಯತೆಗೆ ಎಣೆಯುಂಟೇ?

ಬಾ ಹತ್ತಿರ ಒಮ್ಮೆ
ನಿನ್ನ ನೋಡಿ ಮುದ್ದಾಡಿ
ಮೊಗಮ್ಮಾಗಿ ಕಳೆದು ಹೋಗುವೆ.

ಸದಾ ಚಿತ್ತದ ಭಿತ್ತಿಯೊಳಗಿನ
ಕಲರವಗಳ ಬೆಂಡೆತ್ತಿ
ಬಿಡದೆ ಬರೆಸುತಿಹೆಯಲ್ಲೆ.

ಎಲ್ಲಿ ನೀನೆಲ್ಲಿ
ಹುಡುಕುವ ಚಾಳಿ ನಿರಂತರ
ನನ್ನಲ್ಲಿ ಬಡಿದೆಬ್ಬಿಸುತಿಹೆಯಲ್ಲೆ.

ಆ ರಾಧೆಯಾದರೂ
ಚಂದದ ಮುರಳೀಲೋಲನ
ಕಾಣಲು ಈ ಪರಿ ತವಕಿಸುತಿರಲಿಲ್ಲವೇನೋ.

ಆದರೆ ನೀನದೆಷ್ಟು ಮಿಟಕಲಾಟಿ
ಬಾ ಎಂದರೆ ಬರುವುದೇ ಇಲ್ಲ
ಕಾದೂ ಕಾದೂ ಸುಸ್ತಾಗಿಹೆನಿಲ್ಲಿ.

‘ಭಟ್ಟರ ಮಗಳಿಗೆ
ಹುಟ್ಟೋಕೆ ದಿನವಿಲ್ಲವಂತೆ’
ಹೀಗಾಯಿತೇ ನಿನ್ನ ಕಥೆ!

ಇರಲಿ, ಅದೇನೊ ನನಗೆ ಗೊತ್ತಿಲ್ಲ
ಬಿರೀನೆ ಬಂದೀಗ
ಜನ್ಮದ ನಂಟು ಬಿಡಿಸು!!

25-2-2018. 8.22am

Advertisements

ನಿಜವಾದ ವಿರಾಗಿಗಳು ನಾವು..!! – Avadhi/ಅವಧಿ

http://avadhimag.com/?p=194393

ನಿಜವಾದ ವಿರಾಗಿಗಳು ನಾವು..

(ನಿನ್ನೆ ಅವಧಿಯಲ್ಲಿ ಪ್ರಕಟವಾದ ಶ್ರೀ ಹಂದ್ರಾಳ್ ಕೇಶವ ರೆಡ್ಡಿಯವರ ಕವನ ಓದಿ ನನಗೂ ಮನ ಕಲಕಿ ಬರೆದ ಕವನವಿದು)

ಬೀಳಬಹುದು ನಾಳೆಯೇ ನಮ್ಮ ಹೆಣಗಳು
ಹೊಟ್ಟೆಯ ಹಸಿವು ತಾಳಲಾಗದೇ
ಅಥವಾ ಕುಡಿಯಲು ಗುಟುಕು ನೀರಿಲ್ಲದೇ
ಬನ್ನಿ ಬಲಾಡ್ಯರೆ ನಮ್ಮ ಹೆಣಗಳಲೂ
ಒಂದಷ್ಟು ಕಾಸು ಕವಡೆ ನಿಮಗೆ ಸಿಗಬಹುದು
ಹುಡುಕಿ ಬೇಗ ಇದಕೊಂದು ತಂತ್ರ ಮಂತ್ರ.

ಏಕೆ ನಿಮಗಿದರಿಂದ ಕಾಸು ಹುಟ್ಟಿಸಿಕೊಳ್ಳುವ ಖರಾಮತ್ತು
ಎಂದು ನಾವಂತೂ ಕೇಳುವುದೇ ಇಲ್ಲ
ಏಕೆಂದರೆ ಇಲ್ಲಿ ನಮ್ಮ ಸಂಸ್ಕಾರ ಮಾಡಲು
ಈಗಿನ ಮಂದಿಗೆ ವ್ಯವಧಾನವೂ ಇಲ್ಲ, ಸಮಯವೂ ಇಲ್ಲ,
ಇವೆಲ್ಲ ಮೂಢ ನಂಬಿಕೆ, ಪುರೋಹಿತರ ಅಭಾವವೆಂಬ ನೆವ
ಈ ದೇಶ ಬಿಟ್ಟು ತೊಲಗಿ ತಮ್ಮ ಧ್ಯೇಯ ಬೇಯಿಸಿಕೊಳ್ಳುತ್ತಿರುವ
ಒಂದಷ್ಟು ಮಕ್ಕಳು ಹುಟ್ಟಿ ಸಂಪ್ರದಾಯವೆಂಬುದು
ಕೆಟ್ಟು ಕುಲಗೆಟ್ಟು ಹೋಗಿದೆ!

ಮೊನ್ನೆ ಅದ್ಯಾವನೊ ಕೈಲಾಗದ ಹೆತ್ತ ತಾಯಿಯ
ಮೆಟ್ಟಲತ್ತಿಸಿ ಮೇಲಿಂದ ದೂಡಿಲ್ಲವೆ?
ಇನ್ನೂ ಹತ್ತು ಹಲವು ನಿಧರ್ಶನ ಗೋರಿಗೆ ತಳ್ಳಲು
ಜೀವಂತವಾಗಿರುವಾಗಲೇ ಸತ್ತು ಸತ್ತು ಬದುಕುವ ಹೆಣಗಳು
ಕೈ ಜೋಡಿಸುತ್ತಿರುವ ನಿಮ್ಮಂಥವರಿಗೂ
ಸಾಪ್ಟಾಂಗ ನಮಸ್ಕಾರ ಮಾಡಿ ಹೋಗಲು ತಯಾರಿದ್ದೇವೆ.

ಬದುಕಿನ ದಿನಗಳ ನೆನೆದು ಪರಿತಪಿಸುತ್ತ
ನಾಳೆಯ ಕಿಂಡಿಯಲಿ ಬೆಳಕ ಹುಡುಕುವ ಕನಸು
ಮಗ ಬರುವನೆ? ನಮ್ಮ ನೋಡಿಕೊಳ್ಳಬಹುದೆ?
ರಾಜ್ಯವನಾಳುವ ಧೀಮಂತರು ನಮ್ಮ ನೆರವಿಗೆ ಬರಬಹುದೆ?
ನೆಮ್ಮದಿಯ ಬದುಕು ಕೊನೆಗಾಲದಲ್ಲಾದರೂ ಕಾಣಬಹುದೆ?
ಇವೆಲ್ಲಾಗಲೇ ಸತ್ಯವಾಗಿಯೂ ಸತ್ತು ಕೆರೆ ಕಂಡಿರುವಾಗ
ಮಾತಿದ್ದೂ ಮೂಕರಾಗಿದ್ದೇವೆ ಚಿಂತೆಯನ್ನೆಂತೂ ಮಾಡದಿರಿ
ಇರುವುದೆಲ್ಲವ ಬಿಟ್ಟು ಹೊರಡಲು ನಿಂತ
ನಿಜವಾದ ವಿರಾಗಿಗಳು ನಾವು!!

22-2-2018. 10.39am

ತೃಪ್ತಿ (ಸಣ್ಣ ಕಥೆ)

ಅವರಿನ್ನೂ ಹೊಸದಾಗಿ ಮದುವೆಯಾದ ದಂಪತಿ. ಹೇಳಿಕೊಳ್ಳುವ ಸ್ಥಿತಿವಂತರೇನೂ ಅಲ್ಲ. ಹಳ್ಳಿಯಲ್ಲಿ ಒಂದು ಪುಟ್ಟ ಮನೆ. ತಂದೆ ತಾಯಿ, ಓದುತ್ತಿರುವ ತಂಗಿಯನ್ನು ಸಾಕುವ ಜವಾಬ್ದಾರಿ ಅವನ ಹೆಗಲಿಗಿತ್ತು. ಈಗ ಮದುವೆಯಾದ ತನ್ನ ಹೆಂಡತಿಯ ಜವಾಬ್ದಾರಿ ಬೇರೆ. ಅವಳು ಹೆಚ್ಚು ಕಲಿತವಳಲ್ಲ. ಊರಿನ ಪರಿಚಯದವರ ದೂರದ ನೆಂಟರ ಮಗಳು ; ಇವನ ಗುಣ ನಡತೆ ಕಂಡು ತಾವಾಗೇ ಕೇಳಿಕೊಂಡು ಬಂದ ಸಂಬಂಧ. ಇವನಿಗೋ ಎಲ್ಲಾ ಜವಾಬ್ದಾರಿ ತನಗಿರುವಾಗ ಈಗಲೇ ಮದುವೆ ಏಕೆ ಎಂದು ಗೊಣಗಾಡಿದ, ಹಿರಿಯರ ಒತ್ತಾಸೆಗೆ ಮದುವೆನೂ ಆದ. ವಯಸ್ಸು ಇನ್ನೂ ಅವಳಿಗೆ ಹದಿನೆಂಟು, ಇವನಿಗೆ ಇಪ್ಪತ್ತೈದು. ತಂಗಿಗೆ ಅವಳದೇ ವಯಸ್ಸು. ಹೀಗಿರುವಾಗ ಅತ್ತಿಗೆ ನಾದಿನಿಯರಿಬ್ಬರೂ ಒಂದೇ ವಾರಿಗೆಯವರಾಗಿರುವುದರಿಂದ ಸಂಸಾರದಲ್ಲಿ ಯಾವ ಜಗಳ, ತಕರಾರು ಇರಲಿಲ್ಲ. ಸಂಸಾರ ಸಾಂಗವಾಗಿ ನಡೆಯುತ್ತಿತ್ತು.

ಆದರೆ ಅಷ್ಟು ಚಿಕ್ಕ ಮನೆಯಲ್ಲಿ ಇರುವುದೊಂದೇ ಕೋಣೆ. ಜಗುಲಿ ದೊಡ್ಡದಾಗೇನೋ ಇತ್ತು. ಆದರೆ ಅಪ್ಪ ಅಮ್ಮ ಮದುವೆಯಾದ ಮಗನಿಗೆ ತಮ್ಮ ಕೋಣೆ ಬಿಟ್ಟುಕೊಟ್ಟಾಗ ಇವನ ಮನಸ್ಸಿಗೆ ಸಮಾಧಾನ ಇರಲಿಲ್ಲ. ಸದಾ ಒಳಗೊಳಗೆ ಒಂದು ರೀತಿ ಸಂಕಟ. ಬೆಚ್ಚಗಿನ ಕೊಠಡಿಯಲ್ಲಿ ವಯಸ್ಸಾದ ತಂದೆ ತಾಯಿ ಮಲಗಲು ಬಿಡದೆ ತಾನು ಕಸಿದುಕೊಂಡೆ ಅನ್ನುವ ಭಾವ. ಜೊತೆಗೆ ವಯಸ್ಸಿಗೆ ಬಂದ ತಂಗಿ ಹಜಾರದಲ್ಲಿ ಮಲಗುವುದು ಅಂದರೇನು?

ಹೀಗೆ ಯೋಚಿಸುತ್ತಿದ್ದ ಅವನು ಒಂದು ತೀರ್ಮಾನಕ್ಕೆ ಬಂದ. ತಾನು ಕೆಲಸ ಮಾಡುತ್ತಿದ್ದ ಸೊಸೈಟಿಯಲ್ಲಿ ಸ್ವಲ್ಪ ಸಾಲ ತೆಗೆದುಕೊಂಡು ಇನ್ನೊಂದು ಕೋಣೆ ಕಟ್ಟಿಸಿಬಿಡುವಾ. ಆಗ ಈ ಸಮಸ್ಯೆಗೆ ಪರಿಹಾರ ಕೂಡಾ ಸಿಕ್ಕಂತಾಗುತ್ತದೆ. ಈ ವಿಚಾರವಾಗಿ ತನ್ನ ಅಮ್ಮನಲ್ಲಿ ಹೇಳಿದಾಗ ಅವಳು ಇವನ ಮಾತಿಗೆ ಏನೂ ಹೇಳಲಾಗದೆ ಮೌನವಾಗಿದ್ದಳು. ಆದರೆ ಒಳಗೊಳಗೆ ಬಹಳ ಸಂತೋಷಪಟ್ಟಳು. ಮಗ ಇನ್ನೊಂದು ಕೊಠಡಿ ಕಟ್ಟಿಸುತ್ತಿರುವ ಬಗ್ಗೆ ಅಲ್ಲ ; ಹೆತ್ತವರ ಬಗ್ಗೆ ಅವನಿಗಿರುವ ಕಾಳಜಿ, ಪ್ರೀತಿ ಅವಳ ಹೃದಯ ತುಂಬಿ ಬಂತು. “ನಿನ್ನಭಿಲಾಷೆ ಈಡೇರಲಿ” ಎಂದು ಹರಸಿದಳು.

ಅದೊಂದು ಶುಭದಿನ ಆಫೀಸಿಗೆ ಹೋದವನೆ ತನ್ನ ಮೇಲಧಿಕಾರಿಯ ಹತ್ತಿರ ತನ್ನ ಸಮಸ್ಯೆ ಮುಂದಿಡುತ್ತಾನೆ. ಮತ್ತು “ನನಗೆ ಮನೆ ಇನ್ನಷ್ಟು ದೊಡ್ಡದಾಗಿ ಕಟ್ಟಲು ತಮ್ಮಲ್ಲಿ ಸಾಲ ಸಿಗಬಹುದೇ?” ಎಂದು ಕೇಳುತ್ತಾನೆ. ಅವರು ಇವನಿಗಿರುವ ವ್ಯವಸಾಯದ ಉತ್ಪನ್ನ ಇತ್ಯಾದಿ ತಿಳಿದು “ನೀವು ಕೇಳಿದಷ್ಟು ಸಾಲ ಕೊಡಲು ಕಷ್ಟ. ಸ್ವಲ್ಪ ಬೇಕಾದರೆ ಕೊಡಬಹುದು. ಮಿಕ್ಕಿದ್ದು ನೀವೆ ಹೇಗಾದರೂ ಹೊಂದಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ” ಎಂದು ಹೇಳುತ್ತಾರೆ.

ಮನೆಗೆ ಬಂದ ಮಗನ ಮುಖ ನೋಡಿದ ತಾಯಿ ಅವನಿಗಾದ ನಿರಾಸೆ ಅರ್ಥ ಮಾಡಿಕೊಂಡು “ಬಾ ಮಗಾ ಇಲ್ಲಿ. ಇಷ್ಟಕ್ಕೆಲ್ಲಾ ಚಿಂತೆ ಮಾಡಿದರೆ ಹೇಗೆ? ನಾವು ಇದೇ ಚಿಕ್ಕ ಮನೆಯಲ್ಲಿ ಬಾಳಿ ಬದುಕಿಲ್ಲವೇ? ಈಗ ನಿನ್ನ ಹೆಂಡತಿಯೊಬ್ಬಳು ಮಾತ್ರ ಹೆಚ್ಚಾಗಿದ್ದಾಳೆ. ತಲೆ ಕೆಡಿಸಿಕೊಳ್ಳಬೇಡಾ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ಎಂದಾದರೂ ದಾರಿ ತೋರಿಸೇ ತೋರಿಸುತ್ತಾನೆ. ಒಳ್ಳೆ ಹೆಂಡತಿ, ಪ್ರೀತಿಯ ತಂಗಿ, ಜೊತೆಗೆ ನಾವು ಅನ್ಯೋನ್ಯವಾಗಿ ಇರುವಾಗ ಚಿಕ್ಕ ಮನೆ ಅಂತ ಚಿಂತೆ ಮಾಡಬೇಡಾ ಮಗಾ. ನಮಗಿಂತ ಚಿಕ್ಕ ಮನೆಯಲ್ಲಿ ಅದೆಷ್ಟು ಸಂಸಾರ ಬದುಕುತ್ತಿಲ್ಲ ಹೇಳು. ಯಾವಾಗಲೂ ನಮಗಿಂತ ಮೇಲಿನವರನ್ನು ನೋಡಬಾರದು, ನಮ್ಮ ಕತ್ತು ಯಾವಾಗಲೂ ಬಾಗಿರಬೇಕು. ನಮ್ಮೆದುರಿಗಿರುವ ಜವಾಬ್ದಾರಿಯ ಕಡೆ ನಮ್ಮ ಗಮನವಿರಬೇಕು. ಮನೆ ಎಷ್ಟು ದೊಡ್ಡದಾದರೇನು? ಮಲಗುವುದು ಆರಡಿ ಮೂರಡಿಯಲ್ಲಿ ಮಾತ್ರ. ವಿಶಾಲವಾದ ಮನಸ್ಸು ಮನೆಯನ್ನು ದೊಡ್ಡ ಮಾಡುವುದು. ಇರುವುದರಲ್ಲೇ ಅನುಸರಿಸಿಕೊಂಡು ಹೋಗುವ ನಡೆ ರೂಢಿಸಿಕೊ ಮಗಾ. ಇಲ್ಲಿ ಯಾರಿಗೂ ಇಲ್ಲದ ಚಿಂತೆ ನಿನಗ್ಯಾಕೆ. ಸುಮ್ಮನೇ ಇಲ್ಲದ ಯೋಚನೆ ಮಾಡುವುದು ಬಿಟ್ಟು ಕೈ ಕಾಲು ಮುಖ ತೊಳೆದು ಬಾ. ಮುದ್ದೆ ಉಣ್ಣುವಂತೆ” ಅನ್ನುತ್ತ ಅಡುಗೆ ಮನೆ ಕಡೆ ನಡೆದಳು.

ಅಮ್ಮನ ತಿಳುವಳಿಕೆಯ ನುಡಿ ಅವನ ಕಣ್ಣು ತೆರೆಸಿತು. ಮತ್ತೆಂದೂ ಸಾಲ ಮಾಡಿ ಮನೆ ಬೆಳೆಸಬೇಕೆಂಬ ಚಿಂತೆ ಮಾಡಲೇ ಇಲ್ಲ. ಚಿಕ್ಕ ಮನೆಯಲ್ಲಿ ಚೊಕ್ಕ ಸಂಸಾರ ಅವನದಾಗಿತ್ತು. ಮನೆಯಲ್ಲಿ ಸದಾ ನಗು ತುಂಬಿತ್ತು.
**************
16-2-2018. 7.31pm

ಪರಿಸ್ಥಿತಿ

ಒಂದು ಮಾತು ನಿಜ ; ನಾವು ಯಾವತ್ತೂ ಒಂದಕ್ಕೇ ಅಂಟಿಕೊಂಡಿರಬಾರದು. ಅದು ವಸ್ತುವೇ ಆಗಿರಬಹುದು ಅಥವಾ ವ್ಯಕ್ತಿಯೇ ಆಗಿರಬಹುದು. ಯಾವುದನ್ನು ಎಷ್ಟು ಬೇಕೊ ಅಷ್ಟಕ್ಕೇ ಸೀಮಿತವಾಗಿದ್ದರೆ ಒಳ್ಳೆಯದು. ಇದು ನನ್ನ ಅನುಭವದ ಮಾತು.

ಇತ್ತೀಚಿನ ದಿನಗಳಲ್ಲಿ ಕೆಲವರ ನಡೆ ಹಾಗೂ ಕೆಲವೊಂದು ಉಪಯೋಗಕ್ಕೆ ಬಾರದ ವಸ್ತುಗಳನ್ನು ನಾನಾಗೇ ಹೊರತಳ್ಳಬೇಕಾದ ಸಮಯದಲ್ಲಿ ಮನಸ್ಸಿಗೆ ಬಹಳ ನೋವಾಗಿರುವುದು ಚೆನ್ನಾಗಿ ಅನುಭವಿಸಿದ್ದೇನೆ. ಅದರ ಬಗ್ಗೆ ಇರುವ ಸೆಂಟಿಮೆಂಟಲ್ ಫೀಲಿಂಗ್ ಜಡ ವಸ್ತುಗಳೂ ಜೀವ ತುಂಬಿ ಬಿಡುತ್ತವೆ. ಜೀವವಿರುವ ಪ್ರಾಣಿ ಮನಸ್ಸನ್ನೇ ಜಡ ಮಾಡಿಬಿಡುತ್ತಾನೆ. ಆದರೆ ಈ ಫೀಲಿಂಗ್ ಮನಸ್ಸಿನಿಂದ ಹೊರ ಹಾಕದೇ ಗತ್ಯಂತರವಿಲ್ಲ.

ವಸ್ತುಗಳಾದರೆ ಹೇಗೋ ಮನಸ್ಸಿಗೆ ಒಂದಷ್ಟು ದಿನ ಕಷ್ಟ ಆದರೂ ಸಹಿಸಿಕೊಳ್ಳಬಹುದು. ಅದು ನಾವಾಗಿಂದಲೇ ಹೊರತಳ್ಳಿರೋದು ಎಂಬ ಭಾವ, ಜೊತೆಗೆ ಇಷ್ಟು ದಿನ ಉಪಯೋಗಿಸಿದೆನಲ್ಲಾ ; ಮನೆಯಲ್ಲಿ ಹಳೆಯ ಬೇಡಾದ ವಸ್ತುಗಳನ್ನು ಇಟ್ಟುಕೊಳ್ಳಬಾರದು ವಾಸ್ತು ಪ್ರಕಾರ ಎಂಬ ನಂಬಿಕೆ. ಇದು ಮೂಢ ನಂಬಿಕೆ ಕೂಡಾ ಆಗಿರಬಹುದು. ನನಗೆ ಇವೆಲ್ಲ ನಂಬಿಕೆ ಇಲ್ಲ ಅಂತ ಖಡಾಖಂಡಿತವಾಗಿ ಹೇಳಲು ಧೈರ್ಯ ಇಲ್ಲ. ಏಕೆಂದರೆ ಹುಟ್ಟಿನಿಂದ ಸ್ವಲ್ಪ ಸಂಪ್ರದಾಯ, ಮಡಿ ಮೈಲಿಗೆಗೆ ಅಂಟಿಕೊಂಡು ಬಂದವಳು. ಎಷ್ಟೋ ಸಾರಿ ನಾನೇ ಹೇಳಿದ್ದಿದೆ “ನನಗೆ ಇದರ ಮೇಲೆಲ್ಲ ನಂಬಿಕೆ ಇಲ್ಲಪ್ಪಾ” ಆದರೆ ಇದು ಉಡಾಫೆ ಮಾತಾ? ಅಂತ ನನ್ನ ಮೇಲೇ ನನಗೆ ಸಂಶಯ.

ಕಾರಣ ಇತ್ತೀಚೆಗೆ ಮನೆಯಲ್ಲಿ ಏನಾದರೂ ಒಂದು ಸಣ್ಣ ಅವಾಂತರ. ಒಂದಾ ನಾ ಬೀಳೋದು, ನಾನು ಸಾಕಿದ ಶೋನೂ ಇದ್ದಕ್ಕಿದ್ದಂತೆ ಸತ್ತೋಗಿರೋದು, ಅಂದುಕೊಂಡ ಕೆಲವು ಕೆಲಸ ಆಗದೇ ಇರೋದು ಇತ್ಯಾದಿ. ಹೀಗೆಲ್ಲ ಆದಾಗ ಮನಸ್ಸು ಅಧೀರವಾಗಿ ಹಿಂದೆಲ್ಲಾ ಆಚರಿಸುತ್ತಿದ್ದ ಅನುಕರಣೆ ಮತ್ತೆ ಪುನರಾವರ್ತನೆ ಮಾಡುವಂತಾಗಿದೆ. ಈ ರೀತಿ ಅಭಶಖುನವಾದಾಗ ಶನಿ ದೇವರಿಗೆ ಐದು ವಾರ ಎಳ್ಳು ದೀಪ ಹಚ್ಚಬೇಕು ಅಂತ ಯಾರೋ ಹಿರಿಯರು ಹೇಳಿದ ಉಪದೇಶ ಮತ್ತೆ ಶಿರಸಾವಹಿಸಿ ಪಾಲಿಸುತ್ತೇನೆ. ಏನೋ ಒಂದಷ್ಟು ಮನಸ್ಸಿಗೆ ಸಮಾಧಾನ ಸಿಕ್ಕಿದ್ದು ನಿಜ. ಇದು ನಂಬಿಕೆಯ ಪ್ರಭಾವ ಇರಬಹುದೇ?

ಆದರೆ ನಾವು ಯಾರನ್ನಾದರೂ ಅತ್ಯಂತ ಪೂಜ್ಯ ಭಾವನೆಯಿಂದ ಅವರನ್ನು ಗೌರವಿಸುತ್ತಿರುವಾಗ ಇದ್ದಕ್ಕಿದ್ದಂತೆ ಅವರು ಮೌನವಾದಾಗ ಏನು ಅಂತ ಅರ್ಥ ಆಗದೇ ಬಹಳ ಬಹಳ ಸಂಕಟವಾಗುತ್ತದೆ. ಎಷ್ಟು ಸಮಾಧಾನ ಮಾಡಿಕೊಳ್ಳಬೇಕೆಂದರೂ ಸಾಧ್ಯ ಆಗುವುದಿಲ್ಲ. ಮನಸ್ಸು ಮೂಖವಾಗಿ ರೋಧಿಸುತ್ತದೆ. ಎಲ್ಲಿ ನಾವು ತಪ್ಪು ಮಾಡಿದ್ದೇವೆ? ನಮಗೇ ಅರ್ಥ ಆಗದೇ ಒದ್ದಾಡುತ್ತದೆ ಮನ. ಕೇಳುವಾ ಅಂದರೆ ಅವರು ಮೌನ ಮುರಿಯದಿದ್ದರೆ ಇನ್ನಷ್ಟು ವ್ಯಥೆ.

ಆದರೆ ಇದರಿಂದ ನಾವು ಹೊರ ಬರಲೇ ಬೇಕು. ಯಾವತ್ತೂ ಯಾರನ್ನೂ ಅಷ್ಟಾಗಿ ಹಚ್ಚಿ ಕೊಳ್ಳುವುದು ಒಳ್ಳೆಯದಲ್ಲ. ಬಹುಶಃ ನಮ್ಮ ಬರಹಕ್ಕೆ ದೊರೆಯುತ್ತಿರುವ ಅವರ ಪ್ರೋತ್ಸಾಹ ಇರಬಹುದು ಅಥವಾ ಜೀವನದಲ್ಲಿ ಸೋತಾಗ ಒಂದಷ್ಟು ಸಾಂತ್ವನ, ಸಹಾಯ ಮಾಡಿರುವುದು ಇಷ್ಟಕ್ಕೆಲ್ಲ ಕಾರಣವಾಗಿರಬಹುದು ಅನಿಸುತ್ತದೆ.

ಈ ರೀತಿ ವರ್ತನೆ ಕೊನೆ ಕೊನೆಗೆ ನಮ್ಮನ್ನೇ ತಿಂದು ಹಾಕುವಷ್ಟರ ಮಟ್ಟಿಗೆ ನಾವು ಅಧೀರರಾಗಿ ಇಲ್ಲಿ ನನ್ನದೇ ತಪ್ಪು ಇರಬಹುದೇ? ಎಲದಕ್ಕೂ ಕಾರಣ ನಾನು ಮಾತ್ರನಾ? ಯಾವಾಗ ಏನಾಯಿತು? ಹೀಗೆ ತನ್ನನ್ನೇ ಹಳಿದುಕೊಳ್ಳುವ ಮನ ಇದುವರೆಗಿನ ಅವರೊಂದಿಗಿನ ಒಡನಾಟವನ್ನು ಕೂಲಂಕುಶವಾಗಿ ನೆನಪಿಸಿಕೊಂಡು ಹುಡುಕಾಟ ನಡೆಸುತ್ತಿದೆ. ಆದರೆ ಇದಕ್ಕೆಲ್ಲ ಎಷ್ಟೊಂದು ಸಮಯ ವ್ಯರ್ಥ! ಬೇಕಿತ್ತಾ ಮನವೆ ತೆಪ್ಪಗೆ ನಿನ್ನಷ್ಟಕ್ಕೇ ನೀನಾಯಿತು ನಿನ್ನ ಕೆಲಸವಾಯಿತು ಅಂತ ಇರೋದು ಬಿಟ್ಟು? ಅದೇನೇನು ತಾಕಲಾಟವೋ ಕಳೆದುಕೊಂಡ ದುಃಖದಲ್ಲಿ! ಎಲ್ಲರೂ ಹೀಗಿರೋದಿಲ್ಲ. ಕೆಲವರಲ್ಲಿ ಈ ಗುಣ ಅವರ ನೆಮ್ಮದಿಯನ್ನು ಕಿತ್ತು ತಿನ್ನುವುದಂತೂ ದಿಟ.

ಈ ಸಾಹಿತ್ಯದ ಸಾಂಗತ್ಯದಲ್ಲಿ ತಿಳಿದಿರುವ ಕೆಲವರ ಸಹವಾಸವಾದರೂ ಬೇಕೇ ಬೇಕಾಗುತ್ತದೆ. ನಮ್ಮ ಬರಹ ದ ಬಗ್ಗೆ ಒಂದಷ್ಟು ತಿಳುವಳಿಕೆ, ಬರಹದ ಗುಣಮಟ್ಟ, ತಪ್ಪು, ಸರಿ ಇವೆಲ್ಲ ನಮಗೆ ಗೊತ್ತಾಗಬೇಕಾದರೆ ಇನ್ನೊಬ್ಬರ ಮುಂದೆ ಇಟ್ಟಾಗ ಮಾತ್ರ ಸಾಧ್ಯ. ಮೊದಮೊದಲು ಸಲಹೆ ಸೂಚನೆಗಳು ಸಿಕ್ಕರೂ ತದ ನಂತರದಲ್ಲಿ ಕೆಲವರು ನಮ್ಮ ಬಗ್ಗೆ ಉತ್ಸಾಹ ಅಷ್ಟೊಂದು ತೋರಿಸುವುದಿಲ್ಲ. ಈ ನಡೆ ಅವರಿಗಿರುವ ಕೆಲಸದ ಒತ್ತಡ ಅಥವಾ ಇನ್ನೇನೊ ಕಾರಣ ಇರಬಹುದು. ಹೀಗಂತ ಸಕಾರಾತ್ಮಕವಾಗಿ ನಾವು ಯೋಚಿಸಿದಾಗ ಮಾತ್ರ ಮನಸ್ಸಿಗೆ ಒಂದಷ್ಟು ನೆಮ್ಮದಿ. ಅದಿಲ್ಲವಾದರೆ ವ್ಯತಿರಿಕ್ತ ಯೋಚನೆ ಬಂದು ಈ ಬರವಣಿಗೆಯನ್ನೇ ನಿಲ್ಲಿಸಿಬಿಡಬೇಕು ಅಂತ ಅನಿಸುವುದೂ ಇದೆ. ಆದರೆ ಇದು ಒಬ್ಬ ನಿಜವಾದ ಬರಹಗಾರನಿಗೆ ಸಾಧ್ಯವಾಗದ ಮಾತು.

ಇಂತಹ ಸನ್ನಿವೇಶ ನನಗೇ ಎದುರಾದಾಗ ಒಂದಿನ ನನಗೇ ನಾನು ಪ್ರಶ್ನೆ ಹಾಕಿಕೊಂಡೆ ” ಯಾಕೆ ನನಗೀ ನಿರೀಕ್ಷೆ? ಅವರ್ಯಾರೋ ನಾನ್ಯಾರೋ. ಏನೊ ಒಂದಷ್ಟು ದಿನ ನನ್ನ ಬರಹ ಅವರಿಗೆ ಮೆಚ್ಚುಗೆ ಆಗಿರಬಹುದು. ಹಾಗಂತ ನಾನು ಈ ವಿಷಯದಲ್ಲಿ ಸ್ವಾರ್ಥಿ ಆಗೋದು ತಪ್ಪು. ಇಷ್ಟು ದಿನ ಸಿಕ್ಕ ಪ್ರೋತ್ಸಾಹ ನನ್ನ ಭಾಗ್ಯ ಅಂತ ತಿಳಿದು ಈ ಬರವಣಿಗೆ ಮುಂದುವರಿಸುವುದು ಸೂಕ್ತ. ಅಷ್ಟಕ್ಕೂ ನಾನು ಯಾರಿಗೋಸ್ಕರ ಈ ಬರವಣಿಗೆ ಶುರು ಮಾಡಿಲ್ಲ. ನನಗೆ ಹೀಗೆ ಬರೆಯುತ್ತ ಇರುವುದರಲ್ಲಿ ಹೇಳಲಾಗದಷ್ಟು ಸಂತೋಷ ಇದೆ. ನನಗೆ ಜೀವನದಲ್ಲಿ ಬಹುದೊಡ್ಡ ನಿಧಿ ಸಿಕ್ಕಂತಾಗಿದೆ. ಉಸಿರಿರುವವರೆಗೂ ಮುಂದುವರಿಸಬೇಕು. ನಾನು ನನ್ನ ಬರಹ. ಸಾಕು ಇದೇ ನನ್ನ ಪ್ರಪಂಚ. ಮಿಕ್ಕಿದ್ದು ನನಗೆ ಗೌಣ.” ಈ ಹಂತದ ವಿಚಾರ ಮನಸು ಮಾಗಿದಷ್ಟು ಶಾಂತತೆ. ಮತ್ತಷ್ಟು ಬರೆಯುವ ಉತ್ಸಾಹ. ಬರಹದ ಗುರಿಗೆ ಮೇರೆಯುಂಟೇ? ಅದರ ಸಹವಾಸದಲ್ಲಿ ಬಹುಶಃ ಜಗತ್ತನ್ನೇ ಮರೆಯಬಹುದೇನೊ!!

ಎಲ್ಲಿಯವರೆಗೆ ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿ ಇರುತ್ತದೊ ಅಲ್ಲಿಯವರೆಗೆ ಜೀವನದ ಹಾದಿಯಲ್ಲಿ ತುಳಿಯುವ ಕಲ್ಲು ಮುಳ್ಳುಗಳನ್ನು ಹೂವ ಹಾಸಿಗೆಯಾಗಿ ಪರಿವರ್ತಿಸಿಕೊಳ್ಳಬಹುದು. ದುಃಖತಪ್ತ ಮನಕ್ಕೆ ಸಾಂತ್ವನ ಹೇಳುವ ತಾಕತ್ತು, ತಿಳುವಳಿಗೆ ಮೂಡಿಸಿ ಸಮಾಧಾನದಿಂದ ಬದುಕು ಮುನ್ನಡೆಸುವ ಹಾದಿ ತೋರಿಸುವ ಶಕ್ತಿ ನಮ್ಮೊಳಗೇ ಇದೆ. ಅದನ್ನು ಇಂತಹ ವೇಳೆಯಲ್ಲಿ ಆಗಾಗ ಜಾಗೃತಗೊಳಿಸುತ್ತಿರಬೇಕು. ಚಿಂತೆ ಮಾಡುತ್ತ ಕೂತರೆ ಅದು ನಮ್ಮ ದೇಹ ಸುಡುತ್ತದೆ. ಅದೇ ತಿಳುವಳಿಕೆ ಗಂಧ ತೀಡಿದರೆ ಪ್ರಕಾಶಮಾನವಾಗಿ ಬೆಳಗುತ್ತದೆ. ಇಷ್ಟಲ್ಲದೇ ಜ್ಞಾನಿಗಳು ಹೇಳಿಲ್ಲವೇ? “ನಮಗೆ ನಾವೇ ಶತ್ರು, ನಮಗೆ ನಾವೇ ಮಿತ್ರ.”

17-2-2018. 12.44pm

ಕವನ(126)

ನನ್ನಷ್ಟಕ್ಕೆ ಒಂದಷ್ಟು ದಿನ
ಹಾಯಾಗಿದ್ದುಬಿಡುವೆ ಸಖೀ
ಕೊಂಚ ನೀ ಬಿಡುವು ಕೊಡು
ಶಿರ ಬಾಗಿ ಕೈ ಮುಗಿವೆ
ಮನದ ಕಾನನವ ನೀ ಹೀಗೆ
ಸದಾ ಅಲ್ಲಾಡಿಸುತ ಬರೆಸದಿರು
ಕಣ್ಣಿಗೆ ಕಾಣದಷ್ಟು ದೂರ
ನಾ ನಿನ್ನೊಂದಿಗೆ ಬಂದಿರುವೆ
ಸವೆದ ದಾರಿಯ ಮರೆತಿರುವೆ
ಅಲ್ಲಿ ಕಳೆದು ಹೋದ
ನನ್ನ ನಾ ಹುಡುಕುತಿರುವೆ!!

18-2-2018. 11.09am

ದೇವರ ನಂಬರ್….??

“ಸಲಾಂ ಆಲೆ ಕೋಂ” ಆ ಕಡೆಯ ಧ್ವನಿ.

“ಆಲೆ ಕೋ ಸಲಾಂ” ಇತ್ತ ನನ್ನ ಪ್ರತ್ಯುತ್ತರ. ಆಮೇಲೆ ಅವರೇನೊ ಹೇಳೋದು ನಾನು “ಸಾರಿ, ರಾಂಗ್ ನಂಬರ್.”

ಅರೆ ಇದೇನಿದು ಹೀಗೆ ಬರಿತಿದ್ದಾಳೆ ಅಂದುಕೊಂಡ್ರಾ? ನಿಜ ಕಂಡ್ರೀ…ಈಗ ಒಂಬತ್ತು ವರ್ಷಗಳಿಂದ ನನ್ನ ಮೊಬೈಲಲ್ಲಿ ಈ ರೀತಿಯ ಸಂಭಾಷಣೆ ಆಗಾಗ. ಅವರು ಯಾರು? ಎತ್ತ? ಏನೂ ನನಗೆ ಗೊತ್ತಿಲ್ಲ. ಆದರೆ ಆಗಾಗ ನನಗವರುಗಳಿಂದ ಫೋನ್ ಬರುತ್ತದೆ. ಸಾಮಾನ್ಯವಾಗಿ ಮುಸ್ಲಿಂ ಹಬ್ಬಗಳಲ್ಲಿ ನನಗೆ ಶುಭಾಶಯಗಳು ಒಂದೆರಡಾದರೂ ಬಂದೇ ಬರುತ್ತದೆ.

ಇವೆಲ್ಲ ಹೇಗೆ ಕೇಳ್ತೀರಾ? ಇಲ್ಲಿದೆ ನೋಡಿ ಇದರ ಗುಟ್ಟು.

ಈಗಿನ ತಾಂತ್ರಿಕ ಜಗತ್ತು ಎಷ್ಟೇ ಮುಂದುವರಿಯಲಿ ನಾನು ಮಾತ್ರ ಕೆಲವೊಂದು ಹಳೆಯ ಸಲಕರಣೆ, ವಿಚಾರ, ರೂಢಿ ಇತ್ಯಾದಿ ಇನ್ನೂ ಬಿಟ್ಟಿರಲಿಲ್ಲ. ಎಲ್ಲರ ಕೈಲೂ ಮೊಬೈಲು ಬಂದು ಆಗಲೇ ಅದೆಷ್ಟು ವರ್ಷ ಆಗಿತ್ತು. ಆದರೆ ನಾನು ಬಿಎಸ್ಎನ್ಎಲ್ ಲ್ಯಾಂಡ್ ಲೈನಿಗೆ ಶರಣಾಗಿದ್ದೆ. ಅದನ್ನು ನಾನು ಮಾತ್ರ ಉಪಯೋಗಿಸ್ತಾ ಇದ್ದಿದ್ದು. ಅದರಲ್ಲಿ ಕಾಲ್ ಬಂದರೆ ಯಾರೂ ರಿಸೀವ್ ಮಾಡ್ತಿರಲಿಲ್ಲ. ಏಕೆಂದರೆ ಅಲ್ಲಿ ಬರೊ ಕಾಲ್ ಎಲ್ಲ ನನಗೇ ಅಂತ ಎಲ್ಲರ ಅಂಬೋಣ.

“ನನಗೆ ಮೊಬೈಲ್ ಬೇಡಾ. ನನಗಿದೇ ಸಾಕು. ನೀನೆ ಬೇಕಾದರೆ ಮತ್ತೊಂದು ಮೊಬೈಲ್ ನನ್ನ ಹೆಸರಲ್ಲಿ ತಗೊ.”

ಸದಾ ನನ್ನ ಮಗಳು ಮೊಬೈಲು ಕೊಡಸ್ತೀನಿ ಬಾರೆ ಅಂದಾಗೆಲ್ಲ ನನಗೂ ಅವಳಿಗೂ ಕಿತ್ತಾಟ. ಅಂತೂ ಒಂದಿನ ಅವಳ ಕಾಟಕ್ಕೆ ನಾನು ಮೊಬೈಲ್ ತೆಗೆದುಕೊಳ್ಳಲು ಒಪ್ಪಿದ್ದು ಒಂಬತ್ತು ವರ್ಷದ ಹಿಂದೆ. ಅದೂ ಅವಳ ಒತ್ತಾಯಕ್ಕೆ. ಈಗಿನ ಮಕ್ಕಳೇ ಹಾಗೆ ಹೆತ್ತವರನ್ನು ಮಾಡರ್ನ ಮಾಡೋ ಧಾವಂತ. ನಮಗೋ ಅದರ ಗಂಧ ಗಾಳ ಗೊತ್ತಿರೋದಿಲ್ಲ. ಅದನ್ನು ಉಪಯೋಗಿಸ್ತಾನೂ ಇರಲಿಲ್ಲ ಬಿಡಿ. ಒಮ್ಮೆ ರೀಚಾರ್ಜ ಮಾಡಿದರೆ ಆರು ತಿಂಗಳಾದರೂ ಖರ್ಚು ಆಗ್ತಿರಲಿಲ್ಲ ಅದರಲ್ಲಿರೊ ಕಾಸು.

ಯಾವತ್ತಾದರೂ ಅಪರೂಪಕ್ಕೆ ಏನಾದರೂ ಕುಟ್ಟಿ ಆಮೇಲೆ ಮೂರ್ ಮೂರ್ ದಿವಸಕ್ಕೂ “ನೋಡೆ ಇದೇನೊ ಆಗೋಗಿದೆ. ಸ್ವಲ್ಪ ಸರಿಮಾಡೆ.”

“ಅಯ್ಯೋ ಅಮ್ಮಾ ಏನು ಮಾಡಿದ್ಯೆ? ಎಲ್ಲಿ ಒತ್ತತೀಯಾ? ಸ್ವಲ್ಪ ಓದಿ ನೋಡು. ನೀನೆ ಕಲ್ತಕಬೇಕಪ್ಪಾ.”
ಸಿಟ್ಟಲ್ಲಿ “ಸರಿ ಕೊಡಿಲ್ಲಿ..”

ಇಂತಹ ಅನೇಕ ಮಾತು, ಒಂದಷ್ಟು ಚರ್ಚೆ, ಬಯ್ಸ್ಕೋಳೋದು ಅವಳ ಧಾವಂತದ ಗಡಿಬಿಡಿ ಬದುಕಲ್ಲಿ ಕೊನೆಗೆ ಅಮ್ಮ ದಡ್ಡಿ. ನನಗೊ ಈ ಇಂಗ್ಲಿಷ್ ಓದೋದು ತಿಳ್ಕಳೋದು ಬಲೂ ಬೇಜಾರು. ಇದರ ಸಹವಾಸವೇ ಬೇಡಾ ಎಂದು ಅದರ ಉಸಾಬರಿಗೇ ಹೋಗ್ತಿರಲಿಲ್ಲ. ಯಾವುದಾದರೂ ಕಾಲ್ ಬಂದರೆ ಮಾತ್ರ ಹಲೋ ಅನ್ನೋದಾಗಿತ್ತು.

ಯಾವಾಗ ಒಂದೂವರೆ ವರ್ಷದ ಹಿಂದೆ ಬಿದ್ದು ಬಲಗೈ ಫ್ರ್ಯಾಕ್ಚರ್ ಆಯಿತೊ ಆಗ ಪೆನ್ನು ಹಿಡಿದು ಬರೆಯಲಾಗದೆ ಅಳುತ್ತ ಕೂತಾಗ ಮೊಬೈಲ್ ಡೈರಿ ಓಪನ್ ಮಾಡಿ ಕೊಟ್ಳು ಮಗಳು. ಆಗ ಮೊಬೈಲಲ್ಲಿ ಕನ್ನಡ ಆಪ್ ನಾನೇ ಕಂಡುಕೊಂಡಿದ್ದು ಮಹಾ ಸಾಹಸ ನನ್ನ ಮೊಬೈಲ್ ಜೀವನದಲ್ಲಿ.

“ಈಗ ಅಮ್ಮ ಗ್ರೇಟ್ ” ನಾನೆಂದರೆ

“ಏನ್ ಮಹಾ?” ಮಗಳು ಉವಾಚ.

ಎಷ್ಟೆಂದರೂ ಚಕಚಕನೆ ಕೈ ಆಡಿಸುವವರ ಮುಂದೆ ನಾನೇನು ಮಾಡಿದರೂ ದಡ್ಡೀನೆ. ಆದರೂ ನಾ ಮಾತ್ರ ನನ್ನ ಬೆನ್ನು ತಟ್ಕೊತೀನಪ್ಪಾ ಯಾವಾಗಲಾದರೂ ಏನಾದರೂ ಹೊಸದು ಕಂಡಹಿಡದೆ ಅಂದರೆ ಮೊಬೈಲಲ್ಲಿ. ನಮ್ಮನ್ನು ನಾವೇ ಹೊಗಳಿಕೊಳ್ಳದಿದ್ದರೆ ಇನ್ನಾರು ಹೊಗಳೋದು ಅಲ್ವಾ? ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಬೆರಳಾಡಿಸೋದು ನನಗೂ ರೂಢಿ ಆಗಿಬಿಟ್ಟಿದೆ. ಇರಲಿ ವಿಷಯಕ್ಕೆ ಬರೋಣ.

ರಾಜಾಜಿನಗರ ದೊಡ್ಡ ಮೊಬೈಲ್ ಅಂಗಡಿ. ಬಗ್ಗಿದರೆ ನಡೆದಾಡೊ ನೆಲಾನೂ ನನ್ನ ಮುಖ ತೋರಿಸುತ್ತಿತ್ತು. ಅದೇನು ಅಣುಕಿಸಿತೊ ಅಥವಾ ನನಗೆ ಈಗ ಹಾಗನಿಸುತ್ತಿದೆಯೊ ಗೊತ್ತಿಲ್ಲ. ಆಗ ಕೋಲೆ ಬಸವನ ಥರ ಮಗಳೊಟ್ಟಿಗೆ ಜೀವನದಲ್ಲಿ ಮೊದಲ ಬಾರಿ ಮೊಬೈಲ್ ಅಂಗಡಿ ಗೃಹಪ್ರವೇಷ ಮಾಡಿದ್ದೆ. ಮೋಸ್ಟ್ಲಿ ಬಲಗಾಲಿಟ್ಟಿದ್ದೆ ಅನಿಸುತ್ತೆ ಮೊದಲ ಹೆಜ್ಜೆ ಅಂಗಡಿ ಒಳಗೆ. ಎಷ್ಟೊಳ್ಳೆ ನಂಬರ್ ಆರಿಸಿದ್ದೆ ಅಂಗಡಿಯವರು ಒಂದಷ್ಟು ಸಿಮ್ ಕಾರ್ಡ ನನ್ನ ಮುಂದೆ ಹರವಿದಾಗ! ಹೆಚ್ಚು ಕಡಿಮೆ ಒಂದಿಪ್ಪತ್ತು ನಿಮಿಷವಾದರೂ ಆಗಿರಬಹುದು ಇದೇ ನಂಬರ್ ಇರಲಿ ಎಂದು ನನ್ನ ಮನಸ್ಸಿಗೆ ನನ್ನ ಬುದ್ಧಿ ತಿಳಿ ಹೇಳಲು.

ಬುದ್ಧಿ “ಏ…ಇದೇ ಇರಲಿ ಕಣೆ ಅಪರೂಪದ ನಂಬರ್ ; ಮನಸು ಬೇಡಪ್ಪಾ ಈ ನಂಬರ್ ನಾ ತಗೊಂಡರೆ ತಪ್ಪಾಗುತ್ತೇನೊ! ಇಂತಹ ನಂಬರ್ ನಾವು ಆರಿಸಿಕೊಳ್ಳಬಾರದು ಅಲ್ವಾ? ” ಅಂತೂ ಕೊನೆಗೆ ಬುದ್ಧಿ ಮಾತು ಫೈನಲ್ ಆಯ್ತು. ಆದರೆ ಸಧ್ಯ ಮಗಳು ಅದೇನೊ ನೋಡ್ತಾ ತನ್ನ ಕೆಲಸದಲ್ಲಿ ಮಗ್ನಳಾಗಿದ್ಲು. ಇಲ್ಲಾ ಅಂದರೆ …. ಆಮೇಲೆ ಅವಳೇನು ನಾನು ಆರಿಸಿದ ನಂಬರ್ ಕಡೆ ಗಮನ ಕೊಟ್ಟಿಲ್ಲ. ಅದು ಬೇರೆ ಮಾತು.

ಸರಿ ಅಂದಿನಿಂದ ಮೊಬೈಲ್ ರಾಣಿ ನಾನೂ ಆದೆ. ಆ ಸಿಮ್ 2026ರವರೆಗೂ ಉಪಯೋಗಿಸಬಹುದು. ಬರೀ ರೀ ಚಾರ್ಜ್ ಮಾಡಿದರೆ ಸಾಕು. ಈ ಮಧ್ಯೆ ಒಮ್ಮೆ ಅದೇನೊ ತೊಂದರೆ ಆಗಿ ಬೇರೆ ಸಿಮ್ ಅದೇ ನಂಬರಿಗೆ ಹಾಕಿಸಿಕೊಂಡರೂ 2026ರವರೆಗಿನ ಅವಧಿ ಹಾಗೆಯೇ ಉಳಿತು.

ಅಂಗಡಿಯವನಂದಾ “ನೀವು ಲಕ್ಕಿ ಕಂಡ್ರೀ. ಅವಧಿನೂ ಹಾಗೆ ಕಂಟಿನ್ಯೂ ಆಗಿದೆ. ಲಕ್ಕಿ ನಂಬರ್ ಬೇರೆ ಆರಿಸಿದ್ದೀರಾ, ಸೂಪರ್.”

ಒಂದಿನ ಮನೆ ಹತ್ತಿರದವನ ಪರಿಚಯವಿರೊ ಆಟೋದಲ್ಲಿ ಸ್ವಲ್ಪ ದೂರ ಇರೊ ನೆಂಟರ ಮನೆಗೆ ಹೊರಟೆ. ಅದೂ ಇದೂ ಮಾತನಾಡುತ್ತ “ಮೇಡಂ ನಿಮ್ಮ ನಂಬರ್ ಹೇಳಿ. ಸೇವ್ ಮಾಡ್ಕೋತೀನಿ. ನಾನು ನಿಮಗೆ ಮಿಸ್ ಕಾಲ್ ಕೊಡ್ತೀನಿ. ನೀವೂ ಸೇವ್ ಮಾಡ್ಕಳಿ. ಎಲ್ಲಾದರೂ ಹೋಗಬೇಕು ಅಂದರೆ ಫೋನ್ ಮಾಡಿ. ಮನೆ ಹತ್ತಿರ ಬರ್ತೀನಿ” ಅಂದಾ. ನನ್ನ ನಂಬರ್ ಹೇಳಿದ್ದೇ ತಡಾ; “ಮೇಡಂ ಇದು ದೇವರ ನಂಬರ್. ಬೇಕೂ ಅಂದರೂ ಈ ನಂಬರ್ ಸಿಕ್ಕೋದಿಲ್ಲ. ಕಾದಿರಿಸಿ ದುಡ್ಡು ಕೊಟ್ಟು ತಗೋತಾರೆ ಮುಸ್ಲಿಂ ಮಂದಿ. ಯಾರಿಗೂ ಕೊಡಬೇಡಿ ಆಯ್ತಾ? ” ನನ್ನ ಬೆನ್ನು ನಾನೇ ತಟ್ಟಿಕೊಳ್ಳಲು ಮರಿಲಿಲ್ಲ. ಹಾಗೆ ಈ ನಂಬರ್ ಸಿಕ್ಕ ಪುರಾಣನೂ ಇದೇ ಖುಷಿಯಲ್ಲಿ ಊದಿಬಿಟ್ಟೆ.

ಐದನೇ ಕ್ಲಾಸಿಂದ ಏಳನೇ ಕ್ಲಾಸಿನವರೆಗೆ ಸರ್ಕಾರಿ ಕನ್ನಡ ಶಾಲೆಯಲ್ಲಿ ನನ್ನ ಮುಸ್ಲಿಂ ಆಪ್ತ ಗೆಳತಿ ಮಾಗ್ದಾಲಿನಾ. ಅವಳ ಮನೆಯ ಕಟ್ಟೆ ಮೇಲೆ ಕುಳಿತು ಹರಟಿ ಅವರಾಡುವ ಒಂದೆರಡು ಮಾತು ಕಲಿತಿದ್ದು ಈಗ ಉಪಯೋಗಕ್ಕೆ ಬಂತು. ಹಾಗೆ ಅವಳ ನೆನಪು ಕೂಡಾ. ಈ ಅಂಡಲೆಯುವ ಮನ ಸಂದರ್ಭಕ್ಕೆ ತಕ್ಕಂತೆ ಹಳೆಯ ಪಳೆಯುಳಿಕೆಗೆ ಜೀವ ತುಂಬುವ ಪರಿ ಜ್ಞಾಪಿಸಿಕೊಂಡು ಅವಳೇಗಿದ್ದಾಳೊ, ಎಲ್ಲಿದ್ದಾಳೊ ಅಂತ ಮೊದ ಮೊದಲು ಮೊಬೈಲ್ ರಾಂಗ್ ನಂಬರ್ ಭಾಷೆಯಿಂದಾಗಿ ನೆನಪಾದಾಗ ಕಣ್ಣಾಲಿಗಳು ಮಂಜಾಗುತ್ತಿದ್ದವು. ಜೀವನ ಅಂದರೆ ಹೀಗೆ ಅಲ್ಲವೆ? ನಿರ್ಜೀವ ವಸ್ತುಗಳೂ ಕೂಡಾ ಜೀವ ತುಂಬುತ್ತವೆ. ಒಂದಕ್ಕೊಂದು ಕೊಂಡಿ. ಹಳೆಯ ಭಾಂದವ್ಯದ ನೆನಪು ಈ ನಂಬರ್ ಬಹಳ ಮನಸ್ಸಿಗೆ ಹತ್ತಿರವಾಗಿ ಹಿತ ಕೊಡುತ್ತಿದೆ.

ಹೀಗೆ ನನಗೆ ಸಿಕ್ಕ ಅಪರೂಪದ ಮೊಬೈಲ್ ನಂಬರು ಇದುವರೆಗೂ ಹಲವರಿಂದ ಹೊಗಳಿಸಿಕೊಳ್ತಾ ಆಗಾಗ ರಾಂಗ್ ನಂಬರ್ ರಿಸೀವ್ ಮಾಡ್ತಾ ನನ್ನ ನೆನಪಿನ ಬುತ್ತಿ ಬಿಚ್ತಾ ನನ್ನ ಅದರ ಭಾಂದವ್ಯ ಸಾಗುತ್ತಾ ಇದೆ. ಒಮ್ಮೊಮ್ಮೆ ಏನೊ ಕೆಲಸದಲ್ಲಿರುವಾಗ ಮಾಡೊ ಕೆಲಸ ಬಿಟ್ಟು ಫೋನು ಬಂತಲ್ಲಾ ಅಂತ ರಿಸೀವ್ ಮಾಡಿ ಅದು ರಾಂಗ್ ನಂಬರ್ ಅಂತ ಗೊತ್ತಾದಾಗ ರೇಗಿದ್ದೂ ಇದೆ. ” ಹಲೋ, ಬಾಬಿಜಾನ್ , ಹಲೋ ಹಮ್ ಸಾಜೀದ್ ಬೋಲ್ತಿ, …..”

ಪಾಪ! ಅವರ ತಪ್ಪಿಲ್ಲ ಬಿಡಿ. ಮೊದಲ ನಂಬರಿನಲ್ಲಿ ಯಾವುದಾದರೂ ಒಂದು ವ್ಯತ್ಯಾಸವಾಗಿ ಒತ್ತಿ ಕೊನೆಯ ನಂಬರ್ 786 ನನ್ನದು ಇಷ್ಟಕ್ಕೆಲ್ಲ ಕಾರಣ. ಒಮ್ಮೊಮ್ಮೆ ನಾನವರ ನಂಬರ್ ಕಸಿದುಕೊಂಡೆನಾ ಅಂತ ಭಾವುಕಳಾಗುತ್ತೇನೆ. ಆದರೆ ಈ ನಂಬರ್ ನಾನೇ ಆರಿಸಿಕೊಂಡಾಗಿದೆ. ಎಷ್ಟೊಂದು ಕಡೆ ದಾಖಲಾಗಿದೆ ; ಬಿಡೊ ಹಾಗಿಲ್ಲ!!

15-2-2018. 10.28pm