ವಾವ್! ಅಂಡಮಾನ್…..

ಭಾಗ – (1)

ಅನುಭವ ;

ದಿನಾಂಕ 5-2-2019.ಮನೆ ಬಿಟ್ಟಾಗ ಬೆಳಗಿನ 8.30am. “ಕ್ಯಾಬ್ ಬಂತು ಬೇಗ ಹೊರಡೇ ” ಮಗಳ ಧಾವಂತ. ನನಗೋ ಮಣ ಮಣ ಶ್ಲೋಕ ಹೇಳ್ತಾ ದೇವರ ಪೂಜೆ ಮುಗಿಸಿ ತಿಂಡಿ ಗಂಟಲಲ್ಲಿ ಇಳಿಸಿದ್ದು ಗೊತ್ತಾಗಲೇ ಇಲ್ಲ ಹೊರಡೋ ಅವಸರದಲ್ಲಿ. ” ಡ್ರೆಸ್ ಹಾಕು, ತಲೆ ಬಾಚ್ಕ, ಬ್ಯಾಗ್ ಪ್ಯಾಕ್ ಆಯ್ತಾ, ಬಾಗಿಲು ಹಾಕ್ಲ, ಸುಬ್ಬಂಗೆ(ಬೆಕ್ಕು) ಎಲ್ಲಾ ಇಟ್ಯ, ಅವನೆಲ್ಲೋದಾ, ಕೊನೆಗೆ ನೀ ಎಂತಕ್ಕೆ ಒದರ್ತೆ…?” ನನ್ನಿಂದೆ ಹಿಂದೆನೇ ಮಗಳ ಮಾತು ಕೇಳಿ ಕೊನೆಗೆ ರೇಗಿ “ಇರೆ ಬಂದೆ” ಅಂದೆ ಜೋರಾಗಿ ಬೆಳಗಿನ ಜಾವ 4.30ಕ್ಕೇ ಎದ್ದರೂ ಇನ್ನೂ ಮುಗಿಯದ ಗಡಿಬಿಡಿಯಲ್ಲಿ

ಅಂದ ಹಾಗೆ ನಮ್ಮ ಪಯಣ ಹೊರಟಿತ್ತು “ಅಂಡಮಾನ್ ದ್ವೀಪ” ವೀಕ್ಷಿಸಲು. ಎಲ್ಲಾದರೂ ಹೋಗಬೇಕು ಅಂತ ಪ್ಲ್ಯಾನ್ ಹಾಕುವಾಗ “ಮೋತಿ ಮೋತಿ ಮದುವೆಗೆ ಬರ್ತೀಯಾ ಅಂದರೆ ಮೋಟ್ಕಾಲ್ ನೆಕ್ಕಂಡೆ ಇದ್ದೀನಿ” ಅನ್ನುವ ಜಾಯಮಾನ ನಂದು. ಅದೇನು ಉತ್ಸಾಹ, ಉಮೇದಿ, ತರಾತುರಿ,ಯಾವಾಗ ಆ ದಿನ ಬರುತ್ತೋ ಅನ್ನೋ ಹುಚ್ಚು ಕೋಡಿ ಮನಸು. ಹೊರಡೋಕೆ ನಾಲ್ಕು ದಿನ ಇರುವಾಗಲೇ ಬಿಟ್ಟು ಹೋಗೊ ಮನೆ, ನೆಟ್ಟ ಗಿಡ, ಸಾಕಿದ ಪುಟ್ಟ ಇವಕೆಲ್ಲ ಒಂದು ಸರಿಯಾದ ವ್ಯವಸ್ಥೆ ಮಾಡೋದರಲ್ಲಿ ದೇಹ ಸುಸ್ತು. ಹೊರಡೋ ದಿನವಂತೂ ಯಾವುದು ಮರೆತೆ ಯಾವುದು ಬಿಟ್ಟೆ ಒಳಗೊಳಗೇ ಮನಸಿನ ಲೆಕ್ಕಾಚಾರ.

ಆದರೆ ಈ ಮಕ್ಕಳು ಮಾತ್ರ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ನಿರಾಳವಾಗಿ ಇದ್ಬಿಡೋದು ಸಾಮಾನ್ಯ. “ಛೆ! ಮಕ್ಕಳಿಗೆ ನಾವು ಜವಾಬ್ದಾರಿ ಕೊಡೋದರಲ್ಲಿ ಅವರನ್ನು ಬೆಳೆಸೋದರಲ್ಲಿ ಸ್ವಲ್ಪ ತಪ್ಪು ಮಾಡಿದ್ವಾ? “ಅಂತ ಆಮೇಲೆ ಅನಿಸೋದು ಇಂತಹ ಸಂದರ್ಭದಲ್ಲಿ. ಹಾಗೆ ಮಾಡಿ ಹೀಗೆ ಮಾಡಬೇಕು ಅಂತ ಯಾವಾಗಲಾದರೂ ಬುದ್ಧಿ ಹೇಳಲು ಹೋದರೆ ರೇಗೋದು ಈಗಿನ ಮಕ್ಕಳ ನಡವಳಿಕೆ. ತಾಳ್ಮೆ ಕಡಿಮೆ. ಆದರಿವತ್ತು ಮಗಳ ಜವಾಬ್ದಾರಿ ಮಾತು ಕೇಳಿ ನಾನು ಸ್ವಲ್ಪ ಖುಷಿ ಪಟ್ಟಿದ್ದಂತೂ ನಿಜ. ಪರವಾಗಿಲ್ವೆ ಅಂತು ಮನಸ್ಸು.

ಹಾಂಗ್ ಸುತ್ತಿ ಹೀಂಗ್ ಸುತ್ತಿ ಏರ್ಪೋರ್ಟ ತಲುಪಿದಾಗ 10.15am ದಾಟಿತ್ತು. ಕ್ಯಾಬಲ್ಲಿ ಡ್ರೈವರನನ್ನು ಕೆದಕಿ ಮಾತಾಡಿಸೋದು ನನ್ನ ಜಾಯಮಾನ. ರಸ್ತೆಯಲ್ಲಿ 2,3,ಬಾರಿ ಒಂದೆರಡು ಜನ “ಡೋರ್ ಸರಿ ಕೂತಿಲ್ಲ” ಅಂದಾಗ ನಾವೇ ಜೋರಾಗಿ ಡೋರ್ ಹಾಕಿದರೂ ಮತ್ತದೇ ಕಂಪ್ಲೇಂಟ್. ಪಕ್ಕಕ್ಕೆ ನಿಲ್ಲಿಸಿ ಅವರೇ ಡೋರ್ ಸರಿ ಮಾಡಿ ಬಂದು ತನ್ನ ಸೀಟಲ್ಲಿ ಕೂತಂದಿದ್ದು ” ಚೈಲ್ಡಲಾಕ್ ತೆಗೆಸಿದ್ದಾರೆ. ಡೋರ್ ಸರಿ ಕೂತ್ಕಳಲ್ಲ. ಘಾಟ್ ಸೆಕ್ಷನ್ನಲ್ಲಿ ಹೋಗುವಾಗ ಯಾರಾದರೂ ಬಿದ್ದಾಗ ಬುದ್ಧಿ ಬರುತ್ತದೆ, ಈ ರೀತಿ ರೋಡಲ್ಲಿ ಪರವಾಗಿಲ್ಲ ಮೇಡಂ”ಅಂದ ಗುರ್ ಅಂತಾ.

ಮೊದಲೇ ನಾ ಕೇಳಿದಾಗ ಏನೂ ಉತ್ತರಿಸದ ಅವನ ರೀತಿ “ಓ…ಇವನೆಲ್ಲೊ ಸಿಡಕಾ” ಅಂದುಕೊಂಡಿದ್ದೆ. ಆದರೆ ಹಾಗೇನಿಲ್ಲಾ ದಾರಿಯುದ್ದಕ್ಕೂ ಅದು ಇದು ಮಾತಾಡ್ತಾ ಒಂದಷ್ಟು ಮಾಹಿತಿ ಕಲೆ ಹಾಕ್ದೆ. ಇಳಿದಾಗ ಮೀಟರ್ಗಿಂತ ಕಾಸು ಜಾಸ್ತಿ ಕೊಡುವ ಮಗಳ ಉದಾರತೆ ಅವನಿಗೇನನಿಸಿತೋ ಏನೊ”HAPPY JOURNEY” ಹೇಳಿ ನಗುತ್ತಾ ತನ್ನ ಕಾರಲ್ಲಿ ಮರೆಯಾಗಿದ್ದು ಬೆಳಗಿನ ಗಳಿಗೆ ಮನಸಿಗೊಂದಿಷ್ಟು ಖುಷಿ ತಂದಿದ್ದಂತೂ ದಿಟ. ದಿನಕ್ಕೆ ಹಲವಾರು ಪ್ರಯಾಣಿಕರನ್ನು ಭೇಟಿಯಾಗುವ ಈ ಡ್ರೈವರ್ ಗಳು ಅವರಿಗೆ ತಕ್ಕಂತೆ ಹೊಂದಿಕೊಳ್ಳುವುದು ಸಾಹಸವೇ ಸರಿ!

ಆರಂಭದಲ್ಲೇ ‌ಸ್ವಲ್ಪ ಮುತುವರ್ಜಿ ವಹಿಸಿ ಬ್ಯಾಗ್ ಪ್ಯಾಕ್ ಮಾಡಿಕೊಂಡಿದ್ದು ಎಲ್ಲೂ ತೊಂದರೆ ಆಗಲಿಲ್ಲ. ಏರ್ಪೋರ್ಟ ನಿಯಮಕ್ಕನುಸಾರವಾಗಿ ಎಲ್ಲ ಸುಸೂತ್ರವಾಗಿ ಮುಗಿಸಿ “Port Blair” ವಿಮಾನ ಏರಲು ನಿಗದಿಪಡಿಸಿದ್ದ ಸ್ಥಳದಲ್ಲಿ ಹೋಗಿ ಕುಳಿತುಕೊಳ್ಳುವಷ್ಟರಲ್ಲಿ ಬೆಳಗಿನ ಸಣ್ಣ ವಾಕಿಂಗ್ ಮುಗಿಸಿದಂತಾಗಿತ್ತು.

ಯಪ್ಪಾ ಈ ಜನ ಅದೆಲ್ಲಿಗೋಗ್ತಾರೊ ಅದೆಲ್ಲಿಂದ ಬರ್ತಾರೊ! ವಿಮಾನ ಪ್ರಯಾಣ ಅತೀ ದುಬಾರಿ ಆದರೂ ಜನ ಖರ್ಚು ಮಾಡೋದು ನೋಡಿದರೆ ದುಡ್ಡಿಗೆ ಬೆಲೆನೇ ಇಲ್ವಾ ಅನಿಸುತ್ತದೆ ನಮ್ಮನ್ನೂ ಸೇರಿ!

ನಾವು ವಿಮಾನ ಏರಿದಾಗ 11.55am. ನನಗಿದು ವಿಮಾನ ಪ್ರಯಾಣದ ಎರಡನೇ ಅನುಭವವಾದ್ದರಿಂದ ಮೊದಲಿನಷ್ಟು ಕುತೂಹಲ ಇರಲಿಲ್ಲ. ಅದಾಗಲೇ ಶಾಲೊದ್ದು ಬೆಲ್ಟ ಬಿಗಿದು ರೆಡಿಯಾಗಿ ಕೂತೆ. ಏಕೆಂದರೆ ನನ್ನ ದೇಹ ಈ ಥಂಡಿ ಹವಾ ಸುತಾರಾಂ ಒಪ್ಪಲ್ಲಾ. ಆಗಾಗ ವಿಮಾನ ಸಿಬ್ಬಂದಿ ಇಂಗ್ಲಿಷ್, ಹಿಂದಿಯಲ್ಲಿ ಹೊರಡುವ ಸೂಚನೆ ಇತ್ಯಾದಿ ಹೇಳುತ್ತಿದ್ದದ್ದು ಕನ್ನಡಕ್ಕೆ ಮಾತ್ರ ದೊಡ್ಡ ಸೊನ್ನೆ😢

ವಿಮಾನ ಒಂದಷ್ಟು ದೂರ ಹೋಗಿ ಭೂಮಿ ಬಿಡುತ್ತಿದ್ದಂತೆ ಮೇಲೇರುವ ಅನುಭವ ಈ ಬಾರಿ ತಲೆಗೆ ಸ್ವಲ್ಪ ಕಿರಕ್ ಮಾಡಿತು. ಒಂದು ರೀತಿ ತಲೆ ಎಲ್ಲಾ ಝುಂ ಝುಂ ಏನೋ ಕಿರಿ ಕಿರಿ. ಮಗಳಿಗೆ ಏನೂ ಹೇಳದೆ ಸೈಲೆಂಟಾಗಿ ಕಣ್ಣು ಮುಚ್ಚಿ ಕೂತೆ. ಯಾಕೋ ಸಮಾಧಾನ ಆಗ್ತಿಲ್ಲ. ಸ್ವಲ್ಪ ಬಿಸಿ ನೀರು ಕೇಳಿ ಕುಡಿದೆ. ಸ್ವಲ್ಪ ಸಮಾಧಾನ ಆದರೂ ಕಣ್ಣು ಮಂಜು ದೇಹ ವಲ್ಲೆ ಅಂತಿದೆ. ಇಳಿಯೋಕ್ಕಾಗುತ್ತಾ? ಊಹೂಂ, ಕದಂ ಕೋಲ್ ಏಕ್ ಸಾನ್! ಹಾಗೇ ಕೂತಿರಬೇಕು. ತತ್ತರಕಿ ನಮ್ಮ ಬಸ್ಸು, ಟ್ರೈನೇ ಎಷ್ಟೋ ವಾಸಿ. ಮನಸ್ಸಿನ ಸ್ವಾತಂತ್ರ್ಯಕ್ಕೆ ಒಂದು ಚೂರೂ ಧಕ್ಕೆ ಇಲ್ಲ. ಇಲ್ಲೋ ಶ್ರೀ ಗಣೇಶಾಯನಮಃ ಪಾಡೋದರಲ್ಲೇ ಮಧ್ಯಾಹ್ನ, ಇನ್ನು ಎರಡೂವರೆ ತಾಸು ಕಮಕ್ ಕಿಮಕ್ ಎನ್ನದೇ ಕೂತಿರಬೇಕಲ್ಲಾ. ಇದ್ಯಾವ ಶಿಕ್ಷೆ!! ಆದರೇನು ಮಾಡೋದು “ಅಂಡಮಾನ್ ” ಒಂದು ದ್ವೀಪ. ವಿಮಾನವೇ ಗತಿ.

ಹಂಗೇ ಕೂತು ಏನು ಮಾಡೋದು? ಏರ್ ಪೋರ್ಟಗೆ ಬಂದಾಗಿಂದ ಸಿಕ್ಕ ಟೈಮಲ್ಲಿ ಅನುಭವ ಬರಿತಾ ಬಂದು ಈಗ ವಿಮಾನದಲ್ಲಿ ಹಾರಾಡುತ್ತ ಒಂದಷ್ಟು ತಲೆ ಪಿರ್ಕಿ ತಹಬದಿಗೆ ಬಂದ ನಂತರ ಬರೆಯೋದು ಮುಂದುವರಿಸಿದೆ.

ಬಿಸಿಲು ನೆತ್ತಿಗೇರಿದೆ, ಭೂಮಿ ಉಡುಗಿ ಹೋಯ್ತು, ಮೇಲೆ ಅಚ್ಚ ನೀಲಾಕಾಶ ಕೆಳಗೆ ಬಿಳಿ ಮೋಡದ ಸಮುದ್ರ ನೂರಾರು ಪ್ರಯಾಣಿಕರು ಹೊತ್ತು ಕಳೆಯಲು ಅವರವರ ಅನುಕೂಲಕ್ಕೆ ತಕ್ಕಂತೆ ಅವರದೇ ಲೋಕದಲ್ಲಿ ಮಗ್ನವಾಗಿದ್ದಾರೆ, ಆಗಾಗ ವಿಮಾನದ ಚಲನದ ತಕತಕ ಕಂಪನ. ನಿಜಕ್ಕೂ ಸಿಟಿ ಸ್ಕ್ಯಾನಿಂಗ್ ಮಾಡುವಾಗ ಮಿಷಿನ್ ಒಳಗಡೆ ತೂರಿಸ್ತಾರಲ್ಲ ದೇಹನ ಹಾಗಿದೆ ನೋಡಿ. ಅಲ್ಲಿ ಬಟ್ಟೆ ಬೇರೆ ಹಾಕಸ್ತಾರೆ ಇಲ್ಲಿ ಹಾಕಿದ್ದೇ ಬಟ್ಟೇಲಿ ವಿಮಾನದಲ್ಲಿ ತೂರೋದು, ನೆಟ್ಟಗೆ ಸೆಟಗೊಂಡು ಕೂಡೋದು‌. ಒಂದರ್ಧ ಗಂಟೆ ನಾ ಹೀಂಗೆ ಕೂತವಳಲ್ಲ. ಇಲ್ಲಿ ಪರಮ ಶಿಕ್ಷೆ ಅನಿಸ್ತಾ ಇದೆ. ಅದ್ಯಾವಾಗ ಇಲ್ಲಿಂದ ಇಳಿವೆ ಕಾಲೆಲ್ಲಾ ಜೋಮು ಫುಲ್ ಓಡಾಡಬೇಕು!!

ಗಗನ ಸಖಿಯರ ಹಾವ ಭಾವ ಗಮನಿಸ್ತಾ ತರೊ ತಿಂಡಿಗಳ ಪಟ್ಟಿ ನೋಡ್ತಾ ಬೆರಗಾದೆ ಯಪ್ಪಾ ಅದೆಷ್ಟು ರೇಟು ಒಂದೊಂದು ತಿಂಡಿಗೂ! ನೀರೊಂದು ಫ್ರೀ.
ಹಂಗೆ ವಿಮಾನದಲ್ಲಿ ಶಾಪಿಂಗೂ ಮಾಡಬಹುದು. ವಿವರಣೆಗಳ ಪುಸ್ತಕ ಪ್ರತೀ ಸೀಟಿಗೂ ಇಟ್ಟಿರ್ತಾರೆ.

ಮತ್ತೆ ಕಣ್ಮುಚ್ಚಿ ಕೂತೆ. ಮನಃಪಟಲದಲ್ಲಿ ಏನೇನೋ ಯೋಚನೆ. ಅಲ್ಲಾ ಇಷ್ಟು ದೊಡ್ಡ ಜಾಗ ಏರ್ಪೋರ್ಟ ಕಬಳಿಸಿದೆಯಲ್ಲಾ, ಎಷ್ಟು ನೀರಾವರಿ ಬೆಳೆ ಬೆಳೆಯೊ ಭೂಮಿ ವಶಪಡಿಸಿಕೊಂಡಿರಲಿಕ್ಕಿಲ್ಲ. ತಲೆ ತಲಾಂತರದಿಂದ ಬಂದ ಆಸ್ತಿ ಕಳಕೊಂಡವರೆಷ್ಟೋ, ದುಡ್ಡಿನಾಸೆಗಾಗಿ ಕಿತ್ತಾಡಿ ಬಲಿಯಾದವರೆಷ್ಟೋ. ಹಿಂದೆಲ್ಲಾ ಈ ಜಾಗದಲ್ಲಿ ನಡೆದ ಘಟನಾವಳಿಗಳ ಬಗ್ಗೆ ಓದಿದ, ಕೇಳಿದ ಅನೇಕ ಘಟನೆಗಳು ಮನಃಪಟಲದಲ್ಲಿ ಸುಳಿದಾಡಿತು. ಇನ್ನೂ ಹೆಚ್ಚು ಯೋಚಿಸದೇ ಮನಕ್ಕೆ ಬ್ರೇಕ್ ಹಾಕಿ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕೂತೆ. ಪಕ್ಕದ ಸೀಟ್ ಖಾಲಿ ಇತ್ತು. ಕಾಲು ಮೇಲಾಕಿ ಉದ್ದಕ್ಕೂ ಮಲಕೊಂಡು ಬಿಡಲಾ ಅನ್ನಿಸಿ ಅತ್ತಿತ್ತ ಕಣ್ಣಾಯಿಸಿದೆ. ಎಲ್ಲಾ ನನ್ನೇ ನೋಡಿದರೆ? ಇದ್ಯಾಕೊ ಯಡಬಿಡಂಗಿ ಬ್ಯಾಡಪ್ಪಾ ಅಂತ ತೆಪ್ಪಗೆ ಕೂತೆ.

ಮಗಳಾಗಲೇ ನಿದ್ದೆಗೆ ಜಾರಿದವಳು ಅಂಡಮಾನ ಬಂತೆಂಬ ಪರಿಚಾರಿಕೆಯವರು ವರದಿ ಒಪ್ಪಿಸುತ್ತಿರುವಾಗ ನಾನೇ ಎಬ್ಬಿಸಿದ್ದು.

ಪೋರ್ಟ್ ಬ್ಲೇರ್ ;

ಅಂಡಮಾನ್ ನಲ್ಲಿ ನಾವು ತಲುಪಿದ ಮೊದಲ ಸ್ಥಳ. ಇಲ್ಲಿಯೇ ಏರ್ಪೋರ್ಟ್ ಇರುವುದರಿಂದ ಅಂಡಮಾನಿಗೆ ಬರುವವರು ಮೊದಲು ಇಲ್ಲಿಗೇ ಬರಬೇಕಾಗುತ್ತದೆ. ಮತ್ತೆ ಇಲ್ಲಿಂದಲೇ ವಾಪಸ್ಸಾಗಬೇಕು. ಸುತ್ತ ಮುತ್ತಲ ದೃಶ್ಯಾವಳಿ ರಮಣೀಯ. ನೀಲ ಶುಭ್ರ ಆಕಾಶದಷ್ಟೇ ತಿಳಿ ನೀರು. ದೊಡ್ಡ ಅರಣ್ಯ ಪ್ರದೇಶ ಎತ್ತ ನೋಡಿದರೂ. ಮೇಲೆ ಸೂರ್ಯನ ಪ್ರಕರ ಬಿಸಿಲು. ವಿಮಾನ ಭೂ ಸ್ಪರ್ಶ ಮಾಡಿದರೂ ಸುತ್ತ ಮುತ್ತ ಹಸಿರೇ ಹಸಿರು. ಬೆಂಗಳೂರಿನ ಏರ್ಪೋರ್ಟ ಸುತ್ತ ಕಾಂಕ್ರೀಟ್ ಮಯ ಕಂಡಿದ್ದು ಇಲ್ಲಿ ಈ ರೀತಿ ಇರೋದು ಆಶ್ಚರ್ಯ, ಸಂತೋಷ. ಇಲ್ಲಿ ಬಂದಿಳಿದಾಗ ಮಧ್ಯಾಹ್ನ ಗಂಟೆ 2.30pm. ಏರ್ಪೋರ್ಟ ಚಿಕ್ಕದು, ಆಧುನಿಕ ಸೌಂದರ್ಯ, ಸೌಕರ್ಯ ಹೊಂದಿದೆ. ಟ್ಯಾಕ್ಸಿ ಆಟೋಗಳಿಗೆ ಬರವಿಲ್ಲ, ಹಾಗೆ ಅವರೇಳುವ ರೇಟಿಗೂ ! ಈ ಸಮಯದಲ್ಲಿ ಇಲ್ಲಿ 30ಡಿಗ್ರಿ ಆಸುಪಾಸು ಹವಾಮಾನ.

ಒಂದು ಟ್ಯಾಕ್ಸಿ ಹಿಡಿದು ನಿಗದಿಪಡಿಸಿಕೊಂಡ ಹೊಟೇಲ್ ಸೇರಿದೆವು. ಎರಡನೇ ಮಹಡಿಯ ರೂಮು, ಎದುರುಗಡೆ ನೇವಿಯವರು ಆಕ್ರಮಿಸಿದ ಸುಂದರ ಸಮುದ್ರ ತೀರ ವಾವ್! ಹೆಜ್ಜೆ ಮುಂದಡಿಯಿಡಲಾರದೆ ತಡೆದು ನಿಲ್ಲಿಸಿತು. ಬೈನಾಕ್ಯುಲರ್ ವ್ಯವಸ್ಥೆ, ಆರಾಮಾಗಿ ವಿಶ್ರಾಂತಿ ಪಡೆಯಲು ಆಸನ, ವಿದ್ಯುತ್ ಅಲಂಕಾರದ ಚಿಕ್ಕ ಲಾನ್ ಎಲ್ಲ ನೋಡಿ ಖುಷಿಯಾಯಿತು. ಸಕಲ ಸೌಲಭ್ಯಗಳಿರುವ ರೂಮು ದಿನಕ್ಕೆ ರೂ.3,000/- ಬಾಡಿಗೆ ಬೆಳಗಿನ ತಿಂಡಿ ಸೇರಿ. ಹತ್ತಿರದ ಹೊಟೆಲ್ ಒಂದರಿಂದ ತರಿಸಿದ ಪಾರ್ಸೆಲ್ ಖಾಲಿ ಮಾಡಿ (ಮಧ್ಯಾಹ್ನ ಇಲ್ಲಿ ಊಟದ ವ್ಯವಸ್ಥೆ ಇಲ್ಲ) ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಸಂಜೆ ನಾಲ್ಕು ಗಂಟೆಗೆ ಸುಮಾರು 4 ಕೀ.ಮೀ.ದೂರದಲ್ಲಿರುವ ಸರಕಾರಿ ಎಂಪೋರಿಯಂಗೆ ಭೇಟಿ. ಅಲ್ಲೊಂದಷ್ಟು ಹೊತ್ತು ತರಾವರಿ ಪೇರಿಸಿಟ್ಟ ಸಮುದ್ರ ಉತ್ಪನ್ನ ವೀಕ್ಷಿಸಿ ಕೊಂಚ ಖರೀದಿಯೊಂದಿಗೆ ಒಂದಷ್ಟು ಪೇಟೆ ಸುತ್ತಾಡಿ ಸುಸ್ತಾಗಿ ರೂಮು ಸೇರಿ ಹಾಸಿಗೆ ಕಂಡಿದ್ದಷ್ಟೇ ಗೊತ್ತು. ಕಣ್ಣು ನಿದ್ದೆಗೆ ಜಾರಿದ್ದು ಗೊತ್ತೇ ಆಗಲಿಲ್ಲ.

ಮುಂದುವರಿಯುವುದು ಭಾಗ (2)ರಲ್ಲಿ.
5-2-2019. 4.32pm

Advertisements

ಜನರಲ್ ಭೋಗಿ

ಬದುಕನ್ನು ನಾವು ಯಾವ ರೀತಿ ನೋಡುತ್ತೀವೊ ಅದರಲ್ಲಿ ನಮ್ಮ ನೆಮ್ಮದಿ ಅಡಗಿದೆ. ಸಿಗಲಾರದ್ದಕ್ಕೆ ಪರಿತಪಿಸುತ್ತ ವ್ಯಥೆ ಪಡುವುದಕ್ಕಿಂತ ಸಿಕ್ಕಿದ್ದನ್ನೇ ಸ್ವೀಕರಿಸಿ ಅನುಭವಿಸುವುದರಲ್ಲಿ ಹೆಚ್ಚಿನ ಸಂತೋಷವಿದೆ.

ಇತ್ತೀಚೆಗೆ ಮಧುರೈ ಪ್ರಯಾಣ ರೈಲಿನಲ್ಲಿ. ಟಿಕೆಟ್ ಕನ್ಫರ್ಮ್ ಆಗದೇ ಜನರಲ್ ಭೋಗಿಯಲ್ಲಿಯ ಪ್ರಯಾಣದನುಭವ ಜೀವನದಲ್ಲಿ ಹೊಸದು. ರೈಲ್ವೆ ಸ್ಟೇಷನ್ನಿನಲ್ಲಿ ಅಲ್ಲೇ ಬೇಂಚ್ ಮೇಲೆ ಕೂತಿದ್ದ ಇಬ್ಬರು ನೌಕರರನ್ನು ವಿಚಾರಿಸಿದಾಗ ಟಿಕೆಟ್ ಕನ್ಫರ್ಮ್ ಆಗದೇ ಇರುವುದು ಗಮನಕ್ಕೆ ಬಂದು ನಮಗೆ ಸ್ವಲ್ಪ ದಿಗಿಲಾದರೂ ಅವರು ” ನಾವು ಟಿಟಿಗೆ ಹೇಳಿ ಸ್ಥಳಾವಕಾಶ ಮಾಡಿಕೊಡ್ತೀವಿ, ಯಾವುದಕ್ಕೂ ಜನರಲ್ ಭೋಗಿ ಟಿಕೇಟ್ ತಂದುಬಿಡಿ ನಮ್ಮ ಅಸಿಸ್ಟೆಂಟ್ ಯಾರೂ ಇಲ್ಲ ಇಲ್ಲಿ. ಇಲ್ಲಾಂದ್ರೆ ನಾವೇ ತರಿಸಿಕೊಡ್ತಿದ್ವಿ “ಅಂದಾಗ ಸ್ವಲ್ಪ ಆಶ್ಚರ್ಯ! ಆಗಲೇ ರೈಲು ಹೊರಡಲು ಅರ್ಧ ಗಂಟೆ ಮಾತ್ರ ಸಮಯ ಇದೆ. ಹೊರಡುವಾಗ ಗಮನಿಸಿಕೊಳ್ಳದೇ ಅಲ್ಲಿ ಹೋಗಿ ಈ ಅವಸ್ಥೆ. ವಾಪಸ್ ಬರೊ ಹಾಗಿಲ್ಲ. ನನಗಂತೂ ಈ ರೈಲಿನ ನಿಯಮ ಏನೂ ಗೊತ್ತಿಲ್ಲ. ಅವಸರದಲ್ಲಿ ಮಗಳು ಹೋಗಿ ಟಿಕೇಟ್ ತಂದ್ಲು. “ಸರಿ ನೀವು ಸ್ಲೀಪರ್ ಕೋಚಲ್ಲಿ ಕೂತಿರಿ ನಾವು ಟಿಟಿ ಹತ್ತಿರ ಮಾತಾಡ್ತೀವಿ” ಅಂತ ನಮ್ಮ ಜೊತೆಗೇ ಬಂದು ಯಾವ ಟಿಟಿ ಕೇಳಿದರೂ ಸೀಟಿಲ್ಲ. ಶಿವನೆ ಜನರಲ್ ಭೋಗಿನೇ ಗತಿನಾ? “ಬನ್ನಿ ಬನ್ನಿ ಇನ್ನೇನು ರೈಲು ಹೊರಡುತ್ತೆ ಸೀಟಿ ಹಾಕ್ತಿದೆ” ಅಂದಾಗ ಅವರಿಂದೇ ನಮ್ಮ ದೌಡು. ಪಾಪ! ನಮ್ಮನ್ನು ಜನರಲ್ ಭೋಗಿ ಹತ್ತಿಸಿ ಹೋದ್ರು. ಅವರ ಸಹಾಯ ಇಲ್ಲದಿದ್ದರೆ ನಮ್ಮ ಅವಸ್ಥೆ ಏನಾಗ್ತಿತ್ತೋ ಗೊತ್ತಿಲ್ಲ. ಅವರಿಬ್ಬರಿಗೂ ಧನ್ಯವಾದ ಹೇಳಿ ಭೋಗಿ ಪ್ರವೇಶಿಸಿದಾಗ ಅಲ್ಲೋ ಕಾಲಿಕ್ಕಲೂ ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಕ್ರಿಸ್ಮಸ್ ರಜೆ ಪರಿಣಾಮ. ಹೇಗಪ್ಪಾ ಇಲ್ಲಿದ್ದು ಪ್ರಯಾಣ ಮಾಡೋದು ಸುಮಾರು ಹನ್ನೆರಡು ಗಂಟೆಗಳ ಕಾಲ? ಸ್ಥಳಾವಕಾಶ ಇರುವ ಮೇಲಿನ ಅಟ್ಟಣಿಗೆಯಲ್ಲಿ ಹತ್ತಿ ಕೂಡೋಕಾಗಲ್ಲ ಮಗಳೆ ಬ್ಯಾಗ್ ಇಟ್ಟುಕೊಂಡು ನೀ ಕೂಡು ಅಂದೆ.

ಪಕ್ಕದ ಕಂಪಾರ್ಟಮೆಂಟಲ್ಲಿ ದಡೂತಿ ಹೆಂಗಸು ಮೊಮ್ಮಗನನ್ನು ಕೂಡಿಸಿಕೊಂಡು ಮೂರು ಸೀಟು ಆವರಿಸಿದ್ದು ಗಮನಿಸಿದೆ. ಮುಗುಳು ನಕ್ಕೆ. ಭಾಷೆ ಬರಲ್ಲ ಸೀಟು ಗಿಟ್ಟಿಸಿಕೊಳ್ಳಬೇಕಲ್ಲ. ಆ ಅಜ್ಜಿನೋ ಜಪ್ಪಯ್ಯಾ ಅಂದರೂ ಜರುಗವಲ್ಲಳು. ಈ ಕಡೆ ಕೂತ ಹುಡುಗಿ ಸ್ವಲ್ಪ ಜಾಗ ಕೊಟ್ಟಳು ಕೂತೆ ನೋಡಿ ಪಕ್ಕಾ ಬೇಸಿಗೆಯಲ್ಲಿ ಡನ್ಲಪ್ ಬೆಡ್ ಮಧ್ಯ ಕೂತಾಂಗಾಯ್ತು ಸ್ವಲ್ಪ ಹೊತ್ತಲ್ಲಿ ಶೆಖೆ ಶುರುವಾಯಿತು. ದಡೂತಿ ಅಜ್ಜಿ ಬೇರೆ ಪಕ್ಕದಲ್ಲಿ, ರೈಲು ಓಡುವ ರಭಸಕ್ಕೆ ನುಗ್ಗುವ ಗಾಳಿ ತಡೆಯಲಾಗದೆ ಆಗಲೇ ಕಿಟಕಿಯೆಲ್ಲ ಮುಚ್ಚಿದ್ರು. ಕಿಕ್ಕಿರಿದ ಜನರ ಉಸಿರಿಗೊ ಒಳಗಡೆ ವಾತಾವರಣ ಸ್ವಲ್ಪ ಹದಗೆಟ್ಟಿದ್ದು ತಡೆಯೋಕಾಗದೇ ಫ್ಯಾನ್ ಹಾಕ್ರಪ್ಪಾ ಅಂದೆ. ಕೈಯಲ್ಲಿರೋ Mi ಪ್ಯಾಡ ಡೈರಿಯಲ್ಲಿ ದಾಖಲಾಗಿದ್ದ ಹಲವು ಬರಹಗಳನ್ನು ಪರಿಶೀಲನೆ ಮಾಡುತ್ತ ಒಂದಷ್ಟು ಹೊತ್ತು ಕಳೆದೆ. ಪಕ್ಕದ ಕಂಪಾರ್ಟಮೆಂಟಲ್ಲಿ ಕುಳಿತ ಒಂದಷ್ಟು ಹುಡುಗಿಯರ ದಂಡು ಲೊಟ ಲೊಟ ಮಾತು ಮೊಬೈಲಲ್ಲಿ ತಮಿಳು ಹಾಡು ಕೇಳ್ತಾ ಇತ್ತು.

ಹಾಂಗೂ ಹೀಂಗೂ ಒಂದು ಗಂಟೆ ರಾತ್ರಿ ಕಳೀತು. ನಿದ್ದೆ ವಕ್ಕರಿಸುತ್ತಿದೆ. ಓಡಾಡುವ ಹಾದಿಯಲ್ಲಿ ಎಲ್ಲೆಂದರಲ್ಲಿ ಜನ ಅಡ್ಡ ಉದ್ದ ಬಿದ್ಕೊಂಡಿದ್ದಾರೆ. ನನಗೂ ಕೂಡೋಕಾಗ್ತಿಲ್ಲ. ಸರಿ ನಾನೂ ಅವರ ಮಧ್ಯೆ ತೂರಿಕೊಂಡು ತಲೆ ಕೊಟ್ಟಿದ್ದೊಂದೇ ನೆನಪು ಎಚ್ಚರಾದಾಗ ಮೂರು ಗಂಟೆ ದಾಟಿತ್ತು. ಸೇಲಂ ನಿಲ್ದಾಣದಲ್ಲಿ ಹೆಚ್ಚಿನ ಜನ ಖಾಲಿ ಆದರು ಸ್ವಲ್ಪ ಜನ ಹತ್ತಿದ್ದರು. ನಾನು ಕೂತ ಸೀಟಲ್ಲಿ ಎರಡು ಸೀಟು ಖಾಲಿ ಆಗಿ ಮೇಲೆ ಕುಳಿತವರು ಕೆಳಗೆ ಬಂದು ಕೂಡಬೇಕಾ? ಈ ಅಜ್ಜಿ ಆಗಲೇ ಸೀಟಡಿಗೆ ಉದ್ದಕ್ಕೂ ಪವಡಿಸಿದ್ಲು. ನಾ ಮಲಗಿದ್ದಲ್ಲಿ ಯಾರದ್ದೋ ಕಾಲು ಯಾರದ್ದೊ ಕೈ ಇನ್ಯಾರದ್ದೋ ದೇಹ ಒಬ್ಬರನ್ನೊಬ್ಬರು ತಗಲಿಕೊಳ್ತಾ ಇದ್ರೂ ಯಾರೂ ತುಟಿಪಿಟಕ್ಕನ್ನದೆ ಮಲಗಿದ್ದು ಅಬ್ಬಾ ನಿದ್ದೆಯೇ! ಅದೇ ಬೇರೆ ಟೈಮಲ್ಲಿ ಹೀಗಾಗಿದ್ರೆ ಮಾರಾ ಮಾರಿ ಆಗ್ತಿದ್ದದ್ದು ಗ್ಯಾರಂಟಿ ಅಲ್ವಾ? ಮಲಗಿದ್ದಲ್ಲಿಂದ ಮೆಲ್ಲನೆದ್ದು ಸೀಟಲ್ಲಿ ಕೂತೆ. ಆಗ್ತಿಲ್ಲ ಕೂಡೋಕೆ. ಮತ್ತಲ್ಲೆ ಕಾಲು ಮುದುರಿ ಮಲಗಿದೆ. ಅಜ್ಜಿ ಮೊಮ್ಮಗ ನನ್ನ ಕಾಲಡಿಯಲ್ಲಿ ನನ್ನ ತಲೆ ಅದಾರೊ ಹೆಣ್ಣು ಮಗಳ ತೊಡೆಗೆ ಆತು.

ಕಣ್ಣು ಬಿಟ್ಟಾಗ ಬೆಳ್ಳನೆಯ ಬೆಳಗು ಮಧುರೈ ಹತ್ತಿರ ಬರುತ್ತಿದೆ, ಇಳಿಯುವವರ ತಯಾರಿ. ನಾನೂ ಎದ್ದು ಮಗಳಿಗೆ ಸೂಚನೆ ಕೊಟ್ಟೆ, ರಾತ್ರಿ ಅಪರಿಚಿತರಾಗಿ ಕಂಡ ಜನ ಬೆಳಗಾಗುವುದರಲ್ಲಿ ಭೋಗಿಯ ಜನರೆಲ್ಲಾ ಪರಿಚಿತರಾಗಿದ್ದರು. ಇಂಚೂ ಜರುಗದ ಅಜ್ಜಿ ಆಗಲೇ ದೋಸ್ತಿ,ಲಟಪಟ ಮಾತು. ನಿಜಕ್ಕೂ ನನಗೆ ಆಶ್ಚರ್ಯ “ಅಲ್ಲಾ ಸ್ಲೀಪರ್ ಕೋಚಲ್ಲಿ ಜಾಗ ಸಿಕ್ಕಿದ್ರೆ ನಿಜಕ್ಕೂ ನನಗೆ ನಿದ್ದೆ ಬರ್ತಿತ್ತಾ?” ಏಕೆಂದರೆ ಪ್ರಯಾಣ ಮಾಡುವಾಗ ನಿದ್ದೆ ಬರೋದು ಅಪರೂಪ. ಆದರಿಲ್ಲಿ ಸುಪ್ಪತ್ತಿಗೆಯಲ್ಲಿ ಮಲಗಿದಂತೆ ನಿದ್ದೆ ಮಾಡಿದ್ನಲ್ಲಾ. ಅವರೊಂದಿಗಿನ ಒಡನಾಟ ಮಾತು ಅನೇಕ ವಿಚಾರ ವಿನಿಮಯ ಕಷ್ಟ ಸುಃಖ ಹಂಚಿಕೊಂಡ ಅವರ ನಡೆ ಮನಸ್ಸಿಗೆ ಸಂತೋಷ ತಂದಿತ್ತು. ಜನರಲ್ ಭೋಗಿ ಪ್ರಯಾಣ ಕಷ್ಟ ಅಂತ ಅನಿಸಲೇ ಇಲ್ಲ. ಆ ಒಂದು ನೆನಪೇ ಈ Quote ಬರೆಯಲು ಕಾರಣವಾಯಿತು.

ಅಂದಾಃಗೆ Yourquoteಲ್ಲಿ ಇತ್ತೀಚೆಗೆ ನಾನೂ ಬರೆಯುತ್ತಿದ್ದು 1-1-2019ರಿಂದ 365 days 365 quotes ಅಭಿಯಾನ ಶುರುವಾಗಿದ್ದು ನಾನೂ ಭಾಗವಹಿಸಿ ಪ್ರತಿದಿನ ಒಂದು quote ಬರೆಯುತ್ತಿದ್ದೇನೆ. ಗುರಿ ಮುಟ್ಟುವ ಹಂಬಲ ಅಧಮ್ಯ.😊

9-1-2019 4.10am

ಹಾಂ, ಸಿಕ್ಕಿತು…

ಪಟಕ್ಕನೆ ಯಾಕೊ ನೆನಪಾಯಿತು, ಹರಡಿಕೊಂಡು ಕೂತೆ. ಕಣ್ಣು ಇಷ್ಟಗಲ ಹೃದಯದಲ್ಲಿ ಸಂತಸದ ನಗಾರಿ. ಓದುತ್ತ ಓದುತ್ತ ಎಲ್ಲೋ ಹೋಗಿಬಿಟ್ಟೆ ಒಂದು ಕ್ಷಣ ಹಂಗಂಗೆ.

ಹೌದು ಆ ದಿನಗಳಲ್ಲಿ ಪೋಸ್ಟಮನ್ಗೆ ಅದೆಷ್ಟೊಂದು ಬೆಲೆಯಿತ್ತು. ಹಳ್ಳಿಯಲ್ಲಿರುವಾಗ ಹತ್ತಿರದವರಿಂದ ಬರುವ ಪತ್ರಗಳಿಗಾಗಿ ಪೋಸ್ಟ್ ಮನ್ ಬರಾ ಕಾಯೋದೇನು, ದೂರದಿಂದಲೇ ಸೈಕಲ್ ಬೆಲ್ ಬಾರಿಸುತ್ತ ಬರೋ ಅವನ ಶೈಲಿ, ಓಡಿ ಹೋಗಿ ಕೊನೆಗೆ ಪತ್ರ ಬರದಾಗ ಪೆಚ್ಚು ಮೋರೆ ಹಾಕೋದು, ಇವೆಲ್ಲ ಹಳ್ಳಿಯಲ್ಲಿದ್ದಾಗ ಮಾಮೂಲಾಗಿತ್ತು. ಅದರಲ್ಲೂ ಈ ಹಬ್ಬಗಳು ಬಂದರಂತೂ ಮುಗೀತು ಶುಭಾಶಯ ಸಂದೇಶಗಳನ್ನು ಹೊತ್ತು ತರುವ ವಿಧವಿಧವಾದ ಚಂದದ ಗ್ರೀಟಿಂಗ್ಸ್ ಅದರೊಳಗಿನ ಮನ ಸೂರೆಗೊಳ್ಳುವ ಒಕ್ಕಣೆಗಳು

ಆಗೆಲ್ಲ ಪತ್ರ ಬರೆಯೋದೇ ಒಂದು ಸಡಗರ. ಬರೆದಾದ ಮೇಲೆ ಮನೆಯಲ್ಲಿ ಗಮ್ ಇಲ್ಲದೇ ಒದ್ದಾಟ. ” ಅನ್ನ ಮುಸುರೆ ಕೂಸೆ” ಅಜ್ಜಿ ಹೇಳಿದರೂ ಕೇಳದೆ ಅದನ್ನೇ ಗಮ್ಂತೆ ಉಪಯೋಗಿಸಿರೋದು , ಮೈಲಿಗಟ್ಟಲೆ ನಡೆದುಕೊಂಡು ಹೋಗಿ ಸ್ಟಾಂಪ್ ಹಚ್ಚಿ ಪೋಸ್ಟ್ ಡಬ್ಬಿಗೆ ಹಾಕೋದು. ದೊಡ್ಡ ಪತ್ರವಾದರೆ ಹಾಕಲೆಂದು ಪೋಸ್ಟ್ ಕವರ್ ಮುಂಗಡವಾಗಿ ಕಾರ್ಡು, ಇನ್ಲೆಂಡ್ ಲೆಟರ್ ತಂದಿಟ್ಟುಕೊಳ್ಳೋದೇನು? ಅಬ್ಬಬ್ಬಾ ಮಸ್ತ್ ಮಜಾ ಸಂಕ್ರಾಂತಿ, ದೀಪಾವಳಿ,ಹೊಸ ವರ್ಷ ಹೀಗೆ. ಶುಭಾಶಯಗಳ ವಿನಿಮಯ ಹಲವಾರು. ಆಮೇಲೆ ಅದೆಲ್ಲ ಸಂಗ್ರಹಿಸಿಡೋದು.

ಹೀಗೆ ಸಂಗ್ರಹಿಸಿಟ್ಟ ಕಂತೆಗಳೇ ಇವತ್ತು ನನ್ನ ಸಂತೋಷದ ಕಡಲಲ್ಲಿ ಮುಳುಗಿಸಿದ್ದಂತೂ ನಿಜ. ಅದೂ ಇರುವನೊಬ್ಬನೇ ಅಣ್ಣನ ಪತ್ರಗಳು ಜೋಪಾನವಾಗಿ ಎತ್ತಿಟ್ಟಿದ್ದೆ. ಒಂದೇ ಪತ್ರದಲ್ಲಿ ಅತ್ತಿಗೆಯ ಒಕ್ಕಣೆಯೂ ಇರುತ್ತಿತ್ತು. ಅಣ್ಣನ ಮನದಾಳದ ಮಾತುಗಳು, ಪ್ರೀತಿ ತುಂಬಿದ ಹಾರೈಕೆ, ಅತ್ತಿಗೆಯ ಪಾರುಪತ್ಯದ ಸಂಗತಿಗಳು, ಊರ ಸುದ್ದಿ ಕೊನೆಗೆ “ಯಾವಾಗ ಬರ್ತ್ಯೇ?”.

ಆಹಾ! ಮತ್ತೊಮ್ಮೆ ಓದುತ್ತ ಕಳೆದೇ ಹೋದೆ 1987ರಲ್ಲಿ ನಾ ಬೆಂಗಳೂರು ಕಾಲಿಕ್ಕಿದ ದಿನದಿಂದ ಬಂದ ಪತ್ರಗಳು. ಆಗ ಅಮ್ಮ ಇದ್ದರು. ಅವರ ಸಮಾಚಾರ ಈಗ ಬರೀ ನೆನಪಷ್ಟೇ. ಅಣ್ಣನ ಮಗನ ತೀಟೆ,ಹುಡುಗಾಟಿಕೆಯ ಸಾಲುಗಳು ನಗುವಿಗೆ ನಾಂದಿ
ಹಾಡಿದರೆ ಈಗ ಬೆಳೆದು ದೊಡ್ಡವನಾದವನಿಗೆ ಈ ಪತ್ರಗಳನ್ನು ಓದಿ ಏನನಿಸಬಹುದು? ಖಂಡಿತ ಅವರ್ಯಾರೂ ಅಂದುಕೊಂಡಿರೋಲ್ಲ ; ಇದುವರೆಗೂ ಅವರ ಪತ್ರಗಳು ನನ್ನ ಹತ್ತಿರ ಜೋಪಾನವಾಗಿ ಇವೆಯೆಂಬುದು.

ಆದರೆ ಆನಂತರದ ದಿನಗಳಲ್ಲಿ ಬಂದ ಬಿಎಸ್ಎನ್ಎಲ್ ಲ್ಯಾಂಡ್ ಲೈನ್ ಫೋನ್ ಕನೆಕ್ಷನ್ ಊರಲ್ಲೂ ನಮ್ಮನೆಯಲ್ಲೂ ಈ ಪತ್ರ ವ್ಯವಹಾರ ನಿಂತು ಬರೀ ದೂರವಾಣಿಯಲ್ಲಿ ಮಾತಾಡೋದು ಆಗೋಯ್ತು. ನೆನಪಾಗಿ ಉಳಿಯಬೇಕಾದ ಮಾತುಗಳು ಮರೆವಿಗೆ ಬಲಿಯಾಯ್ತು. ಹೊಸದರಲ್ಲಿ ದೂರದಿಂದಲೇ ಮಾತಾಡೋದು ಖುಷಿ ತರಿಸಿದರೂ ಬರಹದಲ್ಲಿ ಬರೆಯುವ ಮನಸಿನ ಮಾತುಗಳನ್ನು ಖಂಡಿತಾ ಮಾತುಗಳಲ್ಲಿ ವ್ಯಕ್ತಪಡಿಸಲು ಸಾದ್ಯವಿಲ್ಲ ಅಂತ ಈ ಪತ್ರಗಳನ್ನು ಓದಿದಾಗ ಅನಿಸುತ್ತದೆ. ನಿಜಕ್ಕೂ ಪತ್ರಗಳು ಕೊನೆಯವರೆಗೂ ನನ್ನ ಜೀವನ ಸಂಗಾತಿಗಳು.

ಮೊಬೈಲ್ ಬಂದ ನಂತರವಂತೂ ಎಷ್ಟೋ ಸಾರಿ ನೆಟ್ವರ್ಕ್ ಸಿಗದೇ ಮನಸು ಮಾತಾಡಬೇಕೆಂದಾಗ ಮಾತಾಡಲಾಗದೇ ನೆಟ್ವರ್ಕ್ ಸಿಕ್ಕಾಗ ಮಾತನಾಡಲು ಹೋಗಿ ಆಡಬೇಕಾದ ಆ ಕ್ಷಣದ ಮಾತುಗಳು ಮರೆತು ಒಂದು ರೀತಿ ಯಾಂತ್ರಿಕ ವಾತಾವರಣ. ಸಂತೋಷ ಸ್ವಾತಂತ್ರ್ಯ ಕಳೆದುಕೊಂಡ ಭಾವ.

ಇದ್ದಕ್ಕಿದ್ದಂತೆ ಪಕ್ಕನೇ ಮನದ ಯೋಚನೆ ಈ ಬಾರಿ ಊರಿಗೆ ಹೋಗುವಾಗ ಎಲ್ಲರಿಗೂ ಏನು ಒಯ್ಯಲಿ? ಹಾಂ,ಸಿಕ್ಕಿತು. ಈ ಪತ್ರಗಳ ಕಂತೆಗಳನ್ನೇ ಯಾಕೆ ಹೊತ್ತೊಯ್ಯಬಾರದು? ಅವರೊಂದಿಗೆ ಕೂತು ಓದುತ್ತ ನೆನಪಿನ ರಂಗೋಲಿ ಮನೆಯೆಲ್ಲ ಬರೆದುಬಿಡಬೇಕು. ಸಂತಸದ ತಂಗಾಳಿ ನನ್ನಪ್ಪನ ಮನೆ ತುಂಬ ಹುಯ್ಲೆಬ್ಬಿಸಿಬಿಡಬೇಕು. ಜೊತೆಗೊಂದಿಷ್ಟು ಹರಟೆಯ ಮದ್ಯೆ ಅತ್ತಿಗೆ ಮಾಡಿದ ಹಳ್ಳಿ ತಿಂಡಿಗಳು ಬಟ್ಟಲಲ್ಲಿದ್ದರೆ……. ವಾವ್! ಬಹುಶಃ ಇಷ್ಟು ಸಂತೋಷ ನಾನು ಬೇರೆ ಏನು ತೆಗೆದುಕೊಂಡು ಹೋದರೂ ಸಿಗಲು ಸಾಧ್ಯ ಇಲ್ಲ ಅಲ್ಲವೇ??

11-10-2018. 8.35am

ವಾಕಿಂಗ್ ಹೋಗಿ ರನ್ನಿಂಗ್

ನಮ್ಮ ಮನೆ ಕಟ್ಟಿದ ಹೊಸದರಲ್ಲಿ ಹತ್ತಿರದಲ್ಲೆಲ್ಲೂ ಒಂದೊಳ್ಳೆ ಪಾರ್ಕ್ ಆಗಲಿ ಅಥವಾ ವಾಕಿಂಗ್ ಮಾಡುವ ತಾಣವಾಗಲಿ ಕಣ್ಣಿಗೆ ಕಾಣಲಿಲ್ಲ. ಕೊನೆಗೆ ಕಣ್ಣಿಗೆ ಬಿದ್ದಿದ್ದು ಬೆಂಗಳೂರು ಯುನಿವರ್ಸಿಟಿ ರೋಡು. ಇಲ್ಲಿ ವಾಕಿಂಗ್ ಮಾಡೋದು ಅಂದರೆ ನನಗೆ ಬಹಳ ಬಹಳ ಇಷ್ಟ. ಸಖತ್ ಮಜಾ, ಸಖತ್ ಖುಷಿ. ದಿನಾ ನಾಲ್ಕೂವರೆಗೆ ಎದ್ದು ಐದಕ್ಕೆಲ್ಲ ಮನೆ ಬಿಡ್ತಾ ಇದ್ದೆ. ಗಾಂಧೀ ಭವನದವರೆಗೆ ಹೋಗಿ ಸ್ವಲ್ಪ ಹೊತ್ತು ಕೂತು ವಾಪಸ್ ಬರ್ತಾ ಇದ್ದೆ ಒಬ್ಬಳೇ. ಸಾಕಷ್ಟು ಜನರೂ ಬರ್ತಾ ಇದ್ರು. ಹೀಗೆ ವಾಕಿಂಗ್ ಮಾಡ್ತಾ ಮಾಡ್ತಾ ಹೆಚ್ಚು ನಡೆಯುವುದು ರೂಢಿ ಆಯ್ತು.

ವಾಕಿಂಗ್ನಲ್ಲಿ ಇರೊ ಲವಲವಿಕೆ, ಖುಷಿ ಆ ಗಿಡಮರಗಳ ನಡುವೆ ಮತ್ತೆಲ್ಲಿ ಸಿಗಲು ಸಾಧ್ಯ. ಎಷ್ಟು ನಡೆದರೂ ಇನ್ನಷ್ಟು ನಡೆಯುವಾ. ಆ ತಂಪಾದ ಆಹ್ಲಾದಕರ ವಾತಾವರಣ ಮನಸ್ಸಿಗೆ ಎಷ್ಟೊಂದು ಖುಷಿ ಕೊಡುತ್ತದೆ. ಅದರಲ್ಲೂ ಈ ವಸಂತಕಾಲದಲ್ಲಿ ಆಗೊಮ್ಮೆ ಈಗೊಮ್ಮೆ ಬೀಳುವ ಮಳೆಗೆ ನೆನದು ತೊನೆದಾಡುವ ಗಿಡಮರಗಳ ವೈಯ್ಯಾರ ನವ ವಧುವಿನಂತೆ ಶೃಂಗಾರಗೊಂಡ ಪ್ರಕೃತಿ ವಾವ್! ಅದ್ಭುತ.

ಒಂದಿನ ಹಾಗೆ ಯುನಿವರ್ಸಿಟಿವರೆಗೂ ಹೋಗೋಣ ಅಂತ ಹೋಗ್ತಾ ಇದ್ನಾ. ಸುತ್ತ ಯಾರೂ ಇಲ್ಲ. ದೂರದಲ್ಲಿ ಯಾರೋ ಒಂದಿಬ್ಬರು ಜೋರಾದ ನಡಿಗೆ. ಇನ್ನೇನು ಯುನಿವರ್ಸಿಟಿ ಕಾಣ್ತಾ ಇದೆ ; ನನ್ನ ಹಿಂದಿಂದ ಯಾರೋ ಬಂದಾಂಗಾಯಿತು. ಸ್ವಲ್ಪ ಹತ್ತಿರ ಬಂದವನೆ ” ಮೇಡಂ ನೀವೂ ನಮ್ಮ ಏರಿಯಾದವರಾ “ಅಂತ ತನ್ನ ಏರಿಯಾ ಹೆಸರು ಹೇಳ್ದಾ. ” ಹೌದು, ಯಾಕೆ” ಅಂದೆ. “ನೀವೂ ಒಬ್ಬರೇ ಬರೋದಾ?” ” ಹೌದು ” ಅಂದೆ. “ನಾನೂ ಒಬ್ಬನೇ ಬರೋದು, ನೀವೂ ಒಬ್ಬರೇ ಬರೋದು. ಒಳ್ಳೆದಾಯಿತು. ನನಗೊಬ್ಬರು ಸಿಕ್ಕದಾಂಗಾಯತು ” ಅಂತಾನೆ! ಏನೇನೊ ಬಡಬಡಿಸ್ತಾನೆ!

ನನಗೊ ಕಾಲು ತರ ತರ ನಡುಗಿ ಹೆದರಿಕೆಯಿಂದ ಮೈ ಬಿಸಿಯೇರೋಕೆ ಶುರುವಾಯಿತು. ತಕ್ಷಣ ಪೀಚೇ ಮೂಡ್. ನನ್ನ ವಾಕಿಂಗ್ ಹೋಗಿ ರನ್ನಿಂಗ್ ಆಯ್ತು. ಮೂರು ಕಿ.ಮೀ.ದೂರ ಬೇರೆ. ಗಾಂಧಿ ಭವನದವರೆಗೆ ಓಡಿದ ನಾನು ಕೇವಲ ಅರ್ಧ ಗಂಟೆಯಲ್ಲಿ ಮನೆಯಲ್ಲಿ ಇದ್ದೆ. ಮಾರನೇ ದಿನದಿಂದ ವಾಕಿಂಗ್ ಬಿಟ್ಟೆ ಅಂದುಕೊಂಡ್ರಾ? ಇಲ್ಲಪ್ಪಾ. ಹೋಗ್ತಿದ್ದೆ ; ಆದರೆ ಮೊದಲಿನಷ್ಟು ದೂರ ಅಲ್ಲ. ಜನರಿರುವ ಮದ್ಯ ನನ್ನ ವಾಕಿಂಗ್. ಈ ಘಟನೆಯಿಂದ ಹುಚ್ಚು ಧೈರ್ಯ ನನಗರಿವಿಲ್ಲದಂತೆ ಕಡಿವಾಣ ಹಾಕಿತ್ತು. ಆಗ ಈಗಿನಂತೆ ಅಷ್ಟೊಂದು ಭದ್ರತೆ ಕೂಡಾ ಇರಲಿಲ್ಲ. ಈಗ ಸಿಸಿ ಕ್ಯಾಮೆರಾ ಅಲ್ಲಲ್ಲಿ ಅಳವಡಿಸಿ ರಕ್ಷಣೆ ಒದಗಿಸಿದ್ದಾರೆ.

ಆದರೆ ಹೋಗುವ ದಾರಿಯ ಅಲ್ಲಲ್ಲಿ ಅಕ್ಕ ಪಕ್ಕ ಜನರು ಮನೆಯಿಂದ ಕಸ ತಂದು ಒಗೆಯೋದು ಯಾವಾಗ ಬಿಡುತ್ತಾರೋ ಅನಿಸುತ್ತದೆ. ಎಷ್ಟೊಂದು ಬ್ಯಾನರ್ಗಳನ್ನು ಹಂಚಿ ಜನರಿಗೆ ತಿಳುವಳಿಕೆ ನೀಡುವಲ್ಲಿ ಶ್ರಮಿಸಿದ್ದಾರೆ ಸಮಾಜ ಸೇವಕರು. ಕಸ ಬಿಸಾಕುವ ಕೆಲವರು ಕ್ಯಾರೆ ಅನ್ನಲ್ಲ ; ತಮ್ಮ ಚಾಳಿ ಬಿಟ್ಟಿಲ್ಲ. ಪರಿಸರ ಹಾಳು ಮಾಡುತ್ತಿರುವವರ ಬಗ್ಗೆ ತುಂಬಾ ಅಸಹ್ಯ ಅನಿಸುತ್ತದೆ. ಆ ದೇವರೆ ಬುದ್ಧಿ ಕೊಡಬೇಕು.

3-4-2018. 4.32pm

ದೇವರ ನಂಬರ್….??

“ಸಲಾಂ ಆಲೆ ಕೋಂ” ಆ ಕಡೆಯ ಧ್ವನಿ.

“ಆಲೆ ಕೋ ಸಲಾಂ” ಇತ್ತ ನನ್ನ ಪ್ರತ್ಯುತ್ತರ. ಆಮೇಲೆ ಅವರೇನೊ ಹೇಳೋದು ನಾನು “ಸಾರಿ, ರಾಂಗ್ ನಂಬರ್.”

ಅರೆ ಇದೇನಿದು ಹೀಗೆ ಬರಿತಿದ್ದಾಳೆ ಅಂದುಕೊಂಡ್ರಾ? ನಿಜ ಕಂಡ್ರೀ…ಈಗ ಒಂಬತ್ತು ವರ್ಷಗಳಿಂದ ನನ್ನ ಮೊಬೈಲಲ್ಲಿ ಈ ರೀತಿಯ ಸಂಭಾಷಣೆ ಆಗಾಗ. ಅವರು ಯಾರು? ಎತ್ತ? ಏನೂ ನನಗೆ ಗೊತ್ತಿಲ್ಲ. ಆದರೆ ಆಗಾಗ ನನಗವರುಗಳಿಂದ ಫೋನ್ ಬರುತ್ತದೆ. ಸಾಮಾನ್ಯವಾಗಿ ಮುಸ್ಲಿಂ ಹಬ್ಬಗಳಲ್ಲಿ ನನಗೆ ಶುಭಾಶಯಗಳು ಒಂದೆರಡಾದರೂ ಬಂದೇ ಬರುತ್ತದೆ.

ಇವೆಲ್ಲ ಹೇಗೆ ಕೇಳ್ತೀರಾ? ಇಲ್ಲಿದೆ ನೋಡಿ ಇದರ ಗುಟ್ಟು.

ಈಗಿನ ತಾಂತ್ರಿಕ ಜಗತ್ತು ಎಷ್ಟೇ ಮುಂದುವರಿಯಲಿ ನಾನು ಮಾತ್ರ ಕೆಲವೊಂದು ಹಳೆಯ ಸಲಕರಣೆ, ವಿಚಾರ, ರೂಢಿ ಇತ್ಯಾದಿ ಇನ್ನೂ ಬಿಟ್ಟಿರಲಿಲ್ಲ. ಎಲ್ಲರ ಕೈಲೂ ಮೊಬೈಲು ಬಂದು ಆಗಲೇ ಅದೆಷ್ಟು ವರ್ಷ ಆಗಿತ್ತು. ಆದರೆ ನಾನು ಬಿಎಸ್ಎನ್ಎಲ್ ಲ್ಯಾಂಡ್ ಲೈನಿಗೆ ಶರಣಾಗಿದ್ದೆ. ಅದನ್ನು ನಾನು ಮಾತ್ರ ಉಪಯೋಗಿಸ್ತಾ ಇದ್ದಿದ್ದು. ಅದರಲ್ಲಿ ಕಾಲ್ ಬಂದರೆ ಯಾರೂ ರಿಸೀವ್ ಮಾಡ್ತಿರಲಿಲ್ಲ. ಏಕೆಂದರೆ ಅಲ್ಲಿ ಬರೊ ಕಾಲ್ ಎಲ್ಲ ನನಗೇ ಅಂತ ಎಲ್ಲರ ಅಂಬೋಣ.

“ನನಗೆ ಮೊಬೈಲ್ ಬೇಡಾ. ನನಗಿದೇ ಸಾಕು. ನೀನೆ ಬೇಕಾದರೆ ಮತ್ತೊಂದು ಮೊಬೈಲ್ ನನ್ನ ಹೆಸರಲ್ಲಿ ತಗೊ.”

ಸದಾ ನನ್ನ ಮಗಳು ಮೊಬೈಲು ಕೊಡಸ್ತೀನಿ ಬಾರೆ ಅಂದಾಗೆಲ್ಲ ನನಗೂ ಅವಳಿಗೂ ಕಿತ್ತಾಟ. ಅಂತೂ ಒಂದಿನ ಅವಳ ಕಾಟಕ್ಕೆ ನಾನು ಮೊಬೈಲ್ ತೆಗೆದುಕೊಳ್ಳಲು ಒಪ್ಪಿದ್ದು ಒಂಬತ್ತು ವರ್ಷದ ಹಿಂದೆ. ಅದೂ ಅವಳ ಒತ್ತಾಯಕ್ಕೆ. ಈಗಿನ ಮಕ್ಕಳೇ ಹಾಗೆ ಹೆತ್ತವರನ್ನು ಮಾಡರ್ನ ಮಾಡೋ ಧಾವಂತ. ನಮಗೋ ಅದರ ಗಂಧ ಗಾಳ ಗೊತ್ತಿರೋದಿಲ್ಲ. ಅದನ್ನು ಉಪಯೋಗಿಸ್ತಾನೂ ಇರಲಿಲ್ಲ ಬಿಡಿ. ಒಮ್ಮೆ ರೀಚಾರ್ಜ ಮಾಡಿದರೆ ಆರು ತಿಂಗಳಾದರೂ ಖರ್ಚು ಆಗ್ತಿರಲಿಲ್ಲ ಅದರಲ್ಲಿರೊ ಕಾಸು.

ಯಾವತ್ತಾದರೂ ಅಪರೂಪಕ್ಕೆ ಏನಾದರೂ ಕುಟ್ಟಿ ಆಮೇಲೆ ಮೂರ್ ಮೂರ್ ದಿವಸಕ್ಕೂ “ನೋಡೆ ಇದೇನೊ ಆಗೋಗಿದೆ. ಸ್ವಲ್ಪ ಸರಿಮಾಡೆ.”

“ಅಯ್ಯೋ ಅಮ್ಮಾ ಏನು ಮಾಡಿದ್ಯೆ? ಎಲ್ಲಿ ಒತ್ತತೀಯಾ? ಸ್ವಲ್ಪ ಓದಿ ನೋಡು. ನೀನೆ ಕಲ್ತಕಬೇಕಪ್ಪಾ.”
ಸಿಟ್ಟಲ್ಲಿ “ಸರಿ ಕೊಡಿಲ್ಲಿ..”

ಇಂತಹ ಅನೇಕ ಮಾತು, ಒಂದಷ್ಟು ಚರ್ಚೆ, ಬಯ್ಸ್ಕೋಳೋದು ಅವಳ ಧಾವಂತದ ಗಡಿಬಿಡಿ ಬದುಕಲ್ಲಿ ಕೊನೆಗೆ ಅಮ್ಮ ದಡ್ಡಿ. ನನಗೊ ಈ ಇಂಗ್ಲಿಷ್ ಓದೋದು ತಿಳ್ಕಳೋದು ಬಲೂ ಬೇಜಾರು. ಇದರ ಸಹವಾಸವೇ ಬೇಡಾ ಎಂದು ಅದರ ಉಸಾಬರಿಗೇ ಹೋಗ್ತಿರಲಿಲ್ಲ. ಯಾವುದಾದರೂ ಕಾಲ್ ಬಂದರೆ ಮಾತ್ರ ಹಲೋ ಅನ್ನೋದಾಗಿತ್ತು.

ಯಾವಾಗ ಒಂದೂವರೆ ವರ್ಷದ ಹಿಂದೆ ಬಿದ್ದು ಬಲಗೈ ಫ್ರ್ಯಾಕ್ಚರ್ ಆಯಿತೊ ಆಗ ಪೆನ್ನು ಹಿಡಿದು ಬರೆಯಲಾಗದೆ ಅಳುತ್ತ ಕೂತಾಗ ಮೊಬೈಲ್ ಡೈರಿ ಓಪನ್ ಮಾಡಿ ಕೊಟ್ಳು ಮಗಳು. ಆಗ ಮೊಬೈಲಲ್ಲಿ ಕನ್ನಡ ಆಪ್ ನಾನೇ ಕಂಡುಕೊಂಡಿದ್ದು ಮಹಾ ಸಾಹಸ ನನ್ನ ಮೊಬೈಲ್ ಜೀವನದಲ್ಲಿ.

“ಈಗ ಅಮ್ಮ ಗ್ರೇಟ್ ” ನಾನೆಂದರೆ

“ಏನ್ ಮಹಾ?” ಮಗಳು ಉವಾಚ.

ಎಷ್ಟೆಂದರೂ ಚಕಚಕನೆ ಕೈ ಆಡಿಸುವವರ ಮುಂದೆ ನಾನೇನು ಮಾಡಿದರೂ ದಡ್ಡೀನೆ. ಆದರೂ ನಾ ಮಾತ್ರ ನನ್ನ ಬೆನ್ನು ತಟ್ಕೊತೀನಪ್ಪಾ ಯಾವಾಗಲಾದರೂ ಏನಾದರೂ ಹೊಸದು ಕಂಡಹಿಡದೆ ಅಂದರೆ ಮೊಬೈಲಲ್ಲಿ. ನಮ್ಮನ್ನು ನಾವೇ ಹೊಗಳಿಕೊಳ್ಳದಿದ್ದರೆ ಇನ್ನಾರು ಹೊಗಳೋದು ಅಲ್ವಾ? ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಬೆರಳಾಡಿಸೋದು ನನಗೂ ರೂಢಿ ಆಗಿಬಿಟ್ಟಿದೆ. ಇರಲಿ ವಿಷಯಕ್ಕೆ ಬರೋಣ.

ರಾಜಾಜಿನಗರ ದೊಡ್ಡ ಮೊಬೈಲ್ ಅಂಗಡಿ. ಬಗ್ಗಿದರೆ ನಡೆದಾಡೊ ನೆಲಾನೂ ನನ್ನ ಮುಖ ತೋರಿಸುತ್ತಿತ್ತು. ಅದೇನು ಅಣುಕಿಸಿತೊ ಅಥವಾ ನನಗೆ ಈಗ ಹಾಗನಿಸುತ್ತಿದೆಯೊ ಗೊತ್ತಿಲ್ಲ. ಆಗ ಕೋಲೆ ಬಸವನ ಥರ ಮಗಳೊಟ್ಟಿಗೆ ಜೀವನದಲ್ಲಿ ಮೊದಲ ಬಾರಿ ಮೊಬೈಲ್ ಅಂಗಡಿ ಗೃಹಪ್ರವೇಷ ಮಾಡಿದ್ದೆ. ಮೋಸ್ಟ್ಲಿ ಬಲಗಾಲಿಟ್ಟಿದ್ದೆ ಅನಿಸುತ್ತೆ ಮೊದಲ ಹೆಜ್ಜೆ ಅಂಗಡಿ ಒಳಗೆ. ಎಷ್ಟೊಳ್ಳೆ ನಂಬರ್ ಆರಿಸಿದ್ದೆ ಅಂಗಡಿಯವರು ಒಂದಷ್ಟು ಸಿಮ್ ಕಾರ್ಡ ನನ್ನ ಮುಂದೆ ಹರವಿದಾಗ! ಹೆಚ್ಚು ಕಡಿಮೆ ಒಂದಿಪ್ಪತ್ತು ನಿಮಿಷವಾದರೂ ಆಗಿರಬಹುದು ಇದೇ ನಂಬರ್ ಇರಲಿ ಎಂದು ನನ್ನ ಮನಸ್ಸಿಗೆ ನನ್ನ ಬುದ್ಧಿ ತಿಳಿ ಹೇಳಲು.

ಬುದ್ಧಿ “ಏ…ಇದೇ ಇರಲಿ ಕಣೆ ಅಪರೂಪದ ನಂಬರ್ ; ಮನಸು ಬೇಡಪ್ಪಾ ಈ ನಂಬರ್ ನಾ ತಗೊಂಡರೆ ತಪ್ಪಾಗುತ್ತೇನೊ! ಇಂತಹ ನಂಬರ್ ನಾವು ಆರಿಸಿಕೊಳ್ಳಬಾರದು ಅಲ್ವಾ? ” ಅಂತೂ ಕೊನೆಗೆ ಬುದ್ಧಿ ಮಾತು ಫೈನಲ್ ಆಯ್ತು. ಆದರೆ ಸಧ್ಯ ಮಗಳು ಅದೇನೊ ನೋಡ್ತಾ ತನ್ನ ಕೆಲಸದಲ್ಲಿ ಮಗ್ನಳಾಗಿದ್ಲು. ಇಲ್ಲಾ ಅಂದರೆ …. ಆಮೇಲೆ ಅವಳೇನು ನಾನು ಆರಿಸಿದ ನಂಬರ್ ಕಡೆ ಗಮನ ಕೊಟ್ಟಿಲ್ಲ. ಅದು ಬೇರೆ ಮಾತು.

ಸರಿ ಅಂದಿನಿಂದ ಮೊಬೈಲ್ ರಾಣಿ ನಾನೂ ಆದೆ. ಆ ಸಿಮ್ 2026ರವರೆಗೂ ಉಪಯೋಗಿಸಬಹುದು. ಬರೀ ರೀ ಚಾರ್ಜ್ ಮಾಡಿದರೆ ಸಾಕು. ಈ ಮಧ್ಯೆ ಒಮ್ಮೆ ಅದೇನೊ ತೊಂದರೆ ಆಗಿ ಬೇರೆ ಸಿಮ್ ಅದೇ ನಂಬರಿಗೆ ಹಾಕಿಸಿಕೊಂಡರೂ 2026ರವರೆಗಿನ ಅವಧಿ ಹಾಗೆಯೇ ಉಳಿತು.

ಅಂಗಡಿಯವನಂದಾ “ನೀವು ಲಕ್ಕಿ ಕಂಡ್ರೀ. ಅವಧಿನೂ ಹಾಗೆ ಕಂಟಿನ್ಯೂ ಆಗಿದೆ. ಲಕ್ಕಿ ನಂಬರ್ ಬೇರೆ ಆರಿಸಿದ್ದೀರಾ, ಸೂಪರ್.”

ಒಂದಿನ ಮನೆ ಹತ್ತಿರದವನ ಪರಿಚಯವಿರೊ ಆಟೋದಲ್ಲಿ ಸ್ವಲ್ಪ ದೂರ ಇರೊ ನೆಂಟರ ಮನೆಗೆ ಹೊರಟೆ. ಅದೂ ಇದೂ ಮಾತನಾಡುತ್ತ “ಮೇಡಂ ನಿಮ್ಮ ನಂಬರ್ ಹೇಳಿ. ಸೇವ್ ಮಾಡ್ಕೋತೀನಿ. ನಾನು ನಿಮಗೆ ಮಿಸ್ ಕಾಲ್ ಕೊಡ್ತೀನಿ. ನೀವೂ ಸೇವ್ ಮಾಡ್ಕಳಿ. ಎಲ್ಲಾದರೂ ಹೋಗಬೇಕು ಅಂದರೆ ಫೋನ್ ಮಾಡಿ. ಮನೆ ಹತ್ತಿರ ಬರ್ತೀನಿ” ಅಂದಾ. ನನ್ನ ನಂಬರ್ ಹೇಳಿದ್ದೇ ತಡಾ; “ಮೇಡಂ ಇದು ದೇವರ ನಂಬರ್. ಬೇಕೂ ಅಂದರೂ ಈ ನಂಬರ್ ಸಿಕ್ಕೋದಿಲ್ಲ. ಕಾದಿರಿಸಿ ದುಡ್ಡು ಕೊಟ್ಟು ತಗೋತಾರೆ ಮುಸ್ಲಿಂ ಮಂದಿ. ಯಾರಿಗೂ ಕೊಡಬೇಡಿ ಆಯ್ತಾ? ” ನನ್ನ ಬೆನ್ನು ನಾನೇ ತಟ್ಟಿಕೊಳ್ಳಲು ಮರಿಲಿಲ್ಲ. ಹಾಗೆ ಈ ನಂಬರ್ ಸಿಕ್ಕ ಪುರಾಣನೂ ಇದೇ ಖುಷಿಯಲ್ಲಿ ಊದಿಬಿಟ್ಟೆ.

ಐದನೇ ಕ್ಲಾಸಿಂದ ಏಳನೇ ಕ್ಲಾಸಿನವರೆಗೆ ಸರ್ಕಾರಿ ಕನ್ನಡ ಶಾಲೆಯಲ್ಲಿ ನನ್ನ ಮುಸ್ಲಿಂ ಆಪ್ತ ಗೆಳತಿ ಮಾಗ್ದಾಲಿನಾ. ಅವಳ ಮನೆಯ ಕಟ್ಟೆ ಮೇಲೆ ಕುಳಿತು ಹರಟಿ ಅವರಾಡುವ ಒಂದೆರಡು ಮಾತು ಕಲಿತಿದ್ದು ಈಗ ಉಪಯೋಗಕ್ಕೆ ಬಂತು. ಹಾಗೆ ಅವಳ ನೆನಪು ಕೂಡಾ. ಈ ಅಂಡಲೆಯುವ ಮನ ಸಂದರ್ಭಕ್ಕೆ ತಕ್ಕಂತೆ ಹಳೆಯ ಪಳೆಯುಳಿಕೆಗೆ ಜೀವ ತುಂಬುವ ಪರಿ ಜ್ಞಾಪಿಸಿಕೊಂಡು ಅವಳೇಗಿದ್ದಾಳೊ, ಎಲ್ಲಿದ್ದಾಳೊ ಅಂತ ಮೊದ ಮೊದಲು ಮೊಬೈಲ್ ರಾಂಗ್ ನಂಬರ್ ಭಾಷೆಯಿಂದಾಗಿ ನೆನಪಾದಾಗ ಕಣ್ಣಾಲಿಗಳು ಮಂಜಾಗುತ್ತಿದ್ದವು. ಜೀವನ ಅಂದರೆ ಹೀಗೆ ಅಲ್ಲವೆ? ನಿರ್ಜೀವ ವಸ್ತುಗಳೂ ಕೂಡಾ ಜೀವ ತುಂಬುತ್ತವೆ. ಒಂದಕ್ಕೊಂದು ಕೊಂಡಿ. ಹಳೆಯ ಭಾಂದವ್ಯದ ನೆನಪು ಈ ನಂಬರ್ ಬಹಳ ಮನಸ್ಸಿಗೆ ಹತ್ತಿರವಾಗಿ ಹಿತ ಕೊಡುತ್ತಿದೆ.

ಹೀಗೆ ನನಗೆ ಸಿಕ್ಕ ಅಪರೂಪದ ಮೊಬೈಲ್ ನಂಬರು ಇದುವರೆಗೂ ಹಲವರಿಂದ ಹೊಗಳಿಸಿಕೊಳ್ತಾ ಆಗಾಗ ರಾಂಗ್ ನಂಬರ್ ರಿಸೀವ್ ಮಾಡ್ತಾ ನನ್ನ ನೆನಪಿನ ಬುತ್ತಿ ಬಿಚ್ತಾ ನನ್ನ ಅದರ ಭಾಂದವ್ಯ ಸಾಗುತ್ತಾ ಇದೆ. ಒಮ್ಮೊಮ್ಮೆ ಏನೊ ಕೆಲಸದಲ್ಲಿರುವಾಗ ಮಾಡೊ ಕೆಲಸ ಬಿಟ್ಟು ಫೋನು ಬಂತಲ್ಲಾ ಅಂತ ರಿಸೀವ್ ಮಾಡಿ ಅದು ರಾಂಗ್ ನಂಬರ್ ಅಂತ ಗೊತ್ತಾದಾಗ ರೇಗಿದ್ದೂ ಇದೆ. ” ಹಲೋ, ಬಾಬಿಜಾನ್ , ಹಲೋ ಹಮ್ ಸಾಜೀದ್ ಬೋಲ್ತಿ, …..”

ಪಾಪ! ಅವರ ತಪ್ಪಿಲ್ಲ ಬಿಡಿ. ಮೊದಲ ನಂಬರಿನಲ್ಲಿ ಯಾವುದಾದರೂ ಒಂದು ವ್ಯತ್ಯಾಸವಾಗಿ ಒತ್ತಿ ಕೊನೆಯ ನಂಬರ್ 786 ನನ್ನದು ಇಷ್ಟಕ್ಕೆಲ್ಲ ಕಾರಣ. ಒಮ್ಮೊಮ್ಮೆ ನಾನವರ ನಂಬರ್ ಕಸಿದುಕೊಂಡೆನಾ ಅಂತ ಭಾವುಕಳಾಗುತ್ತೇನೆ. ಆದರೆ ಈ ನಂಬರ್ ನಾನೇ ಆರಿಸಿಕೊಂಡಾಗಿದೆ. ಎಷ್ಟೊಂದು ಕಡೆ ದಾಖಲಾಗಿದೆ ; ಬಿಡೊ ಹಾಗಿಲ್ಲ!!

15-2-2018. 10.28pm

ವಿಮಾನ ಪ್ರಯಾಣದ ಅನುಭವ.

ಉತ್ತರ ಭಾರತದ ಯಾತ್ರೆ, ವಿಮಾನ ಯಾನ,ಕಾಶಿ ಪಟ್ಟಣ ಎಲ್ಲವೂ ಜೀವನದಲ್ಲಿ ಮೊದಲ ಅನುಭವ. ಭಯ,ತಳಮಳ,ಏನೊ ಆತಂಕ,ಖುಷಿ, ಸಂಭ್ರಮ ಹೊರಡುವ ದಿನ ಹತ್ತಿರ ಬಂದಂತೆ. ಅಂತೂ ದಿನಾಂಕ 27-9-2017 ರಂದು ಹೊರಟೆ ಕಾಶಿಗೆ. ಬೆಂಗಳೂರು ವಿಮಾನ ನಿಲ್ದಾಣ ತಲುಪಿದಾಗ 5.10pm. ಪೂರ್ವ ತಯಾರಿ ಎಲ್ಲ ಮುಗಿಸಿ ವಿಮಾನದಲ್ಲಿ ಕುಳಿತಾಗ ಸಣ್ಣ ನಿರಾಸೆ. ಯಾಕೆ ಗೊತ್ತಾ. ವಿಮಾನ ಹತ್ತುವಾಗ ನನಗೆ ಪೋಟೋ ತೆಗೆಸಿಕೊಳ್ಳಬೇಕಿತ್ತು. ಟೀವಿಯಲ್ಲಿ ನೋಡಿದ್ದೆ. ಆದರೆ ವಿಮಾನದೊಳಗೆ ಹೋಗುವ ದಾರಿ ಅದೇನೊ ಸೀದಾ ವಿಮಾನದೊಳಗೆ ಹೋಗುವಂತಿತ್ತು. ಚಕಿಂಗ್ ಕೌಂಟರಿನಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ನನ್ನ ಮೊದಲ ಪ್ರಯಾಣವೆಂದು ತಿಳಿದು “ಇವರಿಗೆ ಕಿಟಕಿ ಪಕ್ಕ ಕೂರಿಸಿ” ಎಂದು ಮಗಳಿಗೆ ಇಂಗ್ಲೀಷನಲ್ಲಿ ಹೇಳಿದಾಗ “ನಮ್ಮದು ಕಿಟಕಿ ಪಕ್ಕ ಅಲ್ವಲ್ಲಾ ಅಮ್ಮಾ ” ಅಂದ್ಲು. ಕಿಟಕಿ ಪಕ್ಕದ ಸೀಟು ಗಿಟ್ಟಿಸಿಕೊಂಡೆ ಮೊಬೈಲಲ್ಲಿ ಮಾತಾಡುತ್ತಿರುವ ಹುಡುಗ ಪಕ್ಕಕ್ಕೆ ಸರಿದಾ. ಅಷ್ಟು ಕೆಟ್ಟ ಆತುರ😊

ಬೆಲ್ಟ ಹಾಕಿಕೊಂಡು ಸುತ್ತ ಕಣ್ಣಾಡಿಸುತ್ತ ಕೂತೇ ಇರಬೇಕು ನೆಟ್ಟಗೆ. ಮಾತಿಲ್ಲ ಕತೆಯಿಲ್ಲ. ಎಲ್ಲಿ ನೋಡಿದರೂ ಬರೀ ಇಂಗ್ಲೀಷ್ ಹಿಂದಿ ಮಯ. ತಿಂಡಿನೂ ಒಯ್ಯೊ ಹಾಗಿಲ್ಲ. ಪಿಕಿ ಪಿಕಿ ಹದ್ದಿನ ಕಣ್ ಬಿಟ್ಕೊಂಡು ನೋಡ್ತಾ ಇದ್ದೆ. ಏಕೆಂದರೆ ನನಗೆ ಎಲ್ಲವೂ ಹೊಸದೆ. ಮೌನದಲ್ಲೇ ಎಲ್ಲವನ್ನೂ ಗೃಹಿಸ ತೊಡಗಿದೆ. ಯಾರು ನೋಡಿದರೂ ಕೈಯಲ್ಲಿ ಮೊಬೈಲು ಇಲ್ಲಾ ಲ್ಯಾಬ್ಟಾಪ್,ಕಿವಿಗೆ ಏರ್ ಫೋನ್. ಕೆಲವರ ಕೈಯಲ್ಲಿ ಯಾವುದೊ ಪುಸ್ತಕ. ವಿಮಾನ ಪರಿಚಾರಿಕೆಯರು ಮೈಕಲ್ಲಿ ಮಾತಾಡುತ್ತಿದ್ದಂತೆ ವಿಮಾನ ನಿಧಾನವಾಗಿ ಚಾಲೂ ಆಯಿತು. ಅಯ್ಯೋ! ಇದೆಷ್ಟೊತ್ತಪ್ಪಾ ಮೇಲೇರಲು? ಬರೀ ಸೌಂಡು,ಲೈಟು ಪಕಾ ಪಕಾ ಅನ್ನುತ್ತೆ ರೆಕ್ಕೆಯಲ್ಲಿ. ಛೆ! ಆಗಲೆ ಸುಮಾರು ಎರಡೂವರೆ ತಾಸಾಯಿತು ನಿಲ್ದಾಣಕ್ಕೆ ಬಂದು. 6.50pm ವಿಮಾನ ಹೊರಡುವ ಸಮಯ. ಸರಿಯಾದ ಸಮಯಕ್ಕೆ ಹೊರಟಿದೆ. ಆದರೆ ನನಗೊ ಬಹಳ ಕಾತುರ ಮೇಲಿನ ಅನುಭವ ಪಡೆಯಲು.

ಹಾಂ,ಮೇಲೆರುತ್ತಿದ್ದಂತೆ ಖುಷಿಯೊ ಖುಷಿ. ಚಿಕ್ಕವಳಿರುವಾಗ ನಮ್ಮಳ್ಳಿಗೆ ಒಂದು ಕಾರು ಅಥವಾ ಸ್ಕೂಟರ್ ಬಂದರೆ ಊರಿನ ಮಕ್ಕಳೆಲ್ಲ ಅದರ ಸುತ್ತ ಜಮಾಯಿಸಿ ಅದೆಷ್ಟು ಆಸಕ್ತಿಯಿಂದ ಪ್ರತಿಯೊಂದೂ ಕೈಯಲ್ಲಿ ತಡಕಾಡಿ ಸಂತೃಪ್ತಿ ಪಡತಾ ಇದ್ವಿ. ಹಾರನ್ ಬಾರಿಸಿ ಅಂತ ಅದರ ಎಜಮಾನನಿಗೆ ದುಂಬಾಲು ಬೀಳ್ತಾ ಇದ್ವಿ. ಹಾಗೆ ಆಕಾಶದಲ್ಲಿ ಹಾರಾಡುವ ವಿಮಾನ ಅಪರೂಪಕ್ಕೆ ಕಂಡರೆ ಹೋ^^^^^ ಅಲ್ನೋಡ್ರೋ…. ವಿಮಾನ! ಅದರಲ್ಲೂ ಕೆಲವೊಮ್ಮೆ ಸ್ವಲ್ಪ ದೊಡ್ಡದಾಗಿ ಕಂಡರೆ ಊರ ಹಿಂದಿನ ಬೆಟ್ಟ ಹತ್ತೊ ಆತುರ. ಅದಾಗಲೆ ಮಂಗ ಮಾಯ. ಆದರೂ ಅದರ ಸೌಂಡು ಕಿವಿಗೆ ಬಿದ್ದಿದ್ದೇ ಸಮಾಧಾನ. ಆಗೆಲ್ಲ ನಮಗೆ ಇವೆಲ್ಲ ಶ್ರೀಮಂತರ ಪೇಟೆಯವರ ಸೊತ್ತು. ಬರೀ ನೋಡೋದಷ್ಟೆ ನಮ್ಮ ಗತಿ ಕಣ್ರೋ, ನಾವೆಲ್ಲಾ ವಿಮಾನ ಹತ್ತೋಕೆ ಸಾಧ್ಯನಾ? ಅಂತ ನಮ್ಮನಮ್ಮಲ್ಲೆ ಮಾತಾಡ್ಕೋತಾ ಇದ್ವಿ. ಆದರೆ ಒಳಗೊಳಗೆ ಆಸೆ ಎಲ್ಲರ ಕಣ್ಣಲ್ಲಿ. ನೋಡುವುದರಲ್ಲೆ ತೃಪ್ತಿ ಪಡುತ್ತಿದ್ವಿ. ಆದರೆ ನಾನೂ ಒಂದಿನ ವಿಮಾನ ಏರುತ್ತೇನೆ ಅಂತ ಒಂದು ದಿನವೂ ಅಂದುಕೊಂಡಿರಲಿಲ್ಲ. ಅದಕ್ಕೆ ಈಗ ಭಯಂಕರ ಖುಷಿ, ಕಾತುರ.

ಕಿಟಕಿಯಿಂದ ಮೊಬೈಲ್ನಲ್ಲಿ ವಿಡಿಯೋ, ಪಿಕ್ಕು ಕ್ಲಿಕ್ಕಿಸಿದೆ. ಅತ್ಯದ್ಭುತ ಅನುಭವ. ಮೊದಲು ಬೆಂಗಳೂರಿನ ಸುತ್ತ ಮುತ್ತಲ ದೃಶ್ಯ ಕಾಣುತ್ತಿದ್ದಂತೆ, ನಿಧಾನವಾಗಿ ನೀರಿನೊಳಗೆ ದೃಶ್ಯ ಕಂಡಂತಾಗಿ ಕ್ರಮೇಣ ಎಲ್ಲವೂ ಮರೆಯಾಗಿ ಬರೀ ಹತ್ತಿಯ ಹಿಂಜಿನಂತಹ ಬಿಳಿ ಮೋಡ. ಅಬ್ಬಾ! ಅದೆಷ್ಟು ಚಂದ ಆ ದೃಶ್ಯ. ನಾನೆಲ್ಲಿ ಇದ್ದೇನೆ ಅನ್ನುವುದನ್ನು ಮರೆತು ಜೋರಾಗಿ ಕಿರುಚಬೇಕೆನ್ನುವಷ್ಟು ಸಂತೋಷವಾಯಿತು. ಮತ್ತೆ ಮೇಲೆ ಮೇಲೆ ಹೋದಂತೆ ಕತ್ತಲು ಏನೂ ಕಾಣದಾಯಿತು. ಆಗ ಅನುಭವಕ್ಕೆ ಬಂತು ಅದೆಷ್ಟೊತ್ತು ಕತ್ತು ಒಂದೆ ಕಡೆ ತಿರುಗಿಸಿ ಅಂಟಿಕೊಂಡ ನೋವು ಸ್ವಲ್ಪ ಮುಲಾಮು ಸವರಿದೆ. ಸ್ವಲ್ಪ ಕಿವಿ ಕೆಪ್ಪಾದಂತಾಗಿ ಸಣ್ಣಗೆ ನೋವು ಚಳಿಯ ಅನುಭವ. ಶಾಲು ಹೊದ್ದು ಬೆಚ್ಚಗೆ ಕೂತೆ. ಬಿಸಿ ನೀರು ಕುಡಿದು ಸಮಾಧಾನಿಸಿಕೊಂಡೆ. ಇವೆಲ್ಲ ಸಂಭ್ರಮದಲ್ಲಿ ದಾರಿ ಸವೆದಿದ್ದೆ ಗೊತ್ತಾಗಲಿಲ್ಲ.

ವಾರಣಾಸಿ ವಿಮಾನ ನಿಲ್ದಾಣ ಬರುತ್ತಿದ್ದಂತೆ ಮತ್ತೆ ಕಿಟಕಿಯತ್ತ ಬಗ್ಗಿದೆ. ನಕ್ಷತ್ರಗಳಂತೆ ಮಿನುಗುವ ವಿದ್ಯುತ್ ಬಲ್ಬುಗಳು. ವಿಮಾನ ಇಳಿಯುತ್ತಿದ್ದಂತೆ ತೊಟ್ಟಿಲು ತೂಗಿದ ಅನುಭವ. ಮತ್ತೆ ವಿಮಾನ ಪರಿಚಾರಿಕೆಯರಿಂದ ವಿವರಣೆಗಳು. ಆದರೂ ಯಾರೂ ಗಡಬಡಾಯಿಸುವುದಿಲ್ಲ ಬಸ್ಸು ರೈಲಿನಂತೆ ಕೆಳಗಿಳಿಯಲು. ಎಲ್ಲರೂ ಇಲ್ಲಿ ಎಷ್ಟು ಚೆನ್ನಾಗಿ ಶಿಸ್ತು ಪರಿಪಾಲಿಸುತ್ತಾರೆ. ವಿಮಾನ ಏರಿದಾಗ Happy journey, ಇಳಿಯುವಾಗ Good night ವಿಮಾನ ಪರಿಚಾರಿಕೆಯರ ಕೆಂಪು ತುಟಿಯಂಚಿನ ಕಿರು ನಗೆಯಲ್ಲಿ. ಮುಗುಳು ನಕ್ಕು ಹೊರ ಬಂದೆ. ಕತ್ತಲಾಗಿತ್ತು. ಪ್ರಖರವಾದ ವಿದ್ಯುತ್ ಬೆಳಕು ಇಷ್ಟು ದೊಡ್ಡ ನಿಲ್ದಾಣಕ್ಕೆ ಮಂಕಾಗಿ ಕಾಣುತ್ತಿತ್ತು. ಈ ಮಂಕು ಬೆಳಕಲ್ಲೆ ವಿಮಾನದ ಪಕ್ಕ ನಿಂತು ಫೋಟೋ ತೆಗೆಸಿಕೊಳ್ಳುವ ಚಟ ತೀರಿಸಿಕೊಂಡೆ.

ಇನ್ನು ವಾಪಸ್ಸು ಬೆಂಗೂರಿಗೆ ಬರುವಾಗಲೂ ಕೂಡ ವಿಮಾನದ ಮೆಟ್ಟಿಲು ಹತ್ತುವ ಅವಕಾಶ ಸಿಗಲಿಲ್ಲ.😢 ಒಳಗೆ ಹೋಗಿ ಕುಳಿತು ಮತ್ತದೆ ಕಿಟಕಿ ಪಕ್ಕದ ಸೀಟು ಗಿಟ್ಟಿಸಿಕೊಂಡೆ. ಆದರೆ ಕತ್ತಲಾಗಿದ್ದರಿಂದ ಏನೂ ಕಾಣ್ತಿರಲಿಲ್ಲ. ವಿಮಾನ ಮೇಲೆರುತ್ತಿದ್ದಂತೆ ಅದೆ ಪರಿಚಾರಿಕೆಯರ ಹಾವ ಭಾವ ಮಾತು ವಿಶೇಷವಾಗಿ ಅನಿಸಲಿಲ್ಲ. ವಿಮಾನದೊಳಗೆಲ್ಲ ಮಂಜು ನಿಧಾನವಾಗಿ ಹೊಗೆಯಂತೆ ಒಳನುಗ್ಗುತ್ತಿತ್ತು. ಒಂದು ಸಾರಿ ಗಾಭರಿ. ಹಾಗೆ ನೋಡ್ತಾ ಇದ್ದೆ. ಹವಾಮಾನದ ವೈಪರಿತ್ಯ, ಎಲ್ಲರೂ ಬೆಲ್ಟ ಸರಿಪಡಿಸಿಕೊಳ್ಳಿ ಎಂಬ ವಾಣಿ ಕೇಳುತ್ತಿದ್ದಂತೆ ಟಕಟಕ ಸೌಂಡ. ಅದೆ ಬೆಲ್ಟ ಕ್ಲಿಪ್ಗಳದ್ದು. ಸ್ವಲ್ಪ ಇಳಿಯುತ್ತಿದ್ದ ವಿಮಾನ ಮೇಲೇರಿತು ಮತ್ತೆ. ಅಂತೂ ಹೈದರಾಬಾದ್ ತಲುಪಿ ಒಂದು ತಾಸು ಕಾದು ಅಲ್ಲೊಂದಷ್ಟು ನಡೆದು ಪರದಾಡಿ ಮತ್ತೊಂದು ವಿಮಾನ ಹತ್ತಿ ಮತ್ತೊಂದಷ್ಟೊತ್ತು ಪ್ರಯಾಣ ಮಾಡಿ ಬೆಂಗಳೂರು ತಲುಪಿ ಕ್ಯಾಬಿಗಾಗಿ ಮುಕ್ಕಾಲು ಗಂಟೆ ಕಾದು ಮನೆ ಸೇರದಾಗ 3ನೇ ತಾರೀಖಿನ ರಾತ್ರಿ ಒಂದು ಗಂಟೆ.

ಸಾಕಪ್ಪಾ ಸಾಕು. ಬರೀ ಎಲ್ಲೋದರೂ ಕಾಯೋದು, ಬೆಲ್ಟ ಹಾಕಿಕೊಂಡು “ಕದಂ ಕೋಲ್” ಅಂದಂತೆ ವಿಮಾನದಲ್ಲಿ ನೆಟ್ಟಗೆ ಕೂಡೋದು. ಸಮಯ ಉಳಿತಾಯ ಬರೀ ಪ್ರಯಾಣದಲ್ಲಿ ಬಿಟ್ಟರೆ ಮತ್ತೆಲ್ಲಾ ಕಡೆ ಕಾಯೋದೊಂದು ಶಿಕ್ಷೆ.

ಇದಕ್ಕಿಂತ ಬಸ್ಸು ಅಥವಾ ರೈಲಿನ ಪ್ರಯಾಣವೆ ಆರಾಂ ಅನ್ನಿಸಿತು. ಕಂಡವರ ಪರಿಚಯ ಮಾಡಿಕೊಂಡು ಸಿಕ್ಕಿದ್ದು,ಕಟ್ಟಿಕೊಂಡು ಹೋಗಿದ್ದು ಎಲ್ಲಾ ಮಾತಾಡ್ತಾ ಮೆಲ್ಲುತ್ತಾ ಅಲ್ಲೆ ಕಾಲಾಡಿಸ್ತಾ ಸುಸ್ತಾದರೆ ಕಾಲು ಚಾಚಿ ಮಲಗಿ ಒಂದಷ್ಟು ಓದುವ ಮನಸ್ಸಾದರೆ ಓದೋದು ಸುತ್ತ ಮುತ್ತಲ ಸೃಷ್ಟಿ ಸೌಂದರ್ಯ ಮನಸಾರೆ ಸವಿಯುತ್ತ ಪ್ರಯಾಣದ ಖುಷಿಯನ್ನಾದರೂ ಅನುಭವಿಸಬಹುದು. ಇದು ಸ್ವತಂತ್ರ ಪ್ರಯಾಣ. ವಿಮಾನದ ಪ್ರಯಾಣ ಅತಂತ್ರ ಪ್ರಯಾಣ.

ಜೀವನದಲ್ಲಿ ಎಲ್ಲವೂ ಹಾಗೆ ಅಲ್ವಾ? ಕೈಗೆ ಗಿಟಕೊತನಕ ಕುತೂಹಲ, ಕಾತರ. ಸಿಕ್ಕ ಮೇಲೆ ಇಷ್ಟೇನಾ ಅಂತ ಅನಾದರ.

27-10-2017. 2.20pm