ಮಳೆಯ ಅವಾಂತರ

ಮೇ ಮೊದಲ ವಾರ. ಆಗಿನ್ನೂ ಅಲ್ಲೊಂದು ಇಲ್ಲೊಂದು ಕಪ್ಪು ಮೋಡ ಕಟ್ಟಿ ಇನ್ನೇನು ಮಳೆ ಬಂದೇ ಬಿಡುವ ಸೂಚನೆ ನೀಡುತ್ತಿದ್ದರೂ ಮತ್ತದೇ ನೀಲಾಕಾಶ ಎಲ್ಲ ಮೋಡಗಳ ಸರಿಸಿ ತನ್ನ ಚಂದ ತೋರಿಸುತ್ತಿತ್ತು. ಇದಕ್ಕೆ ಗಾಳಿಯೂ ಸಾಥ್ ನೀಡಿದಾಗ ಮೋಡಗಳು ಕೂಡಾ ಹೆದರಿ ದಿಕ್ಕಾ ಪಾಲು. ಹೀಗೆ ನಡೆಯುವ ಕಣ್ಣಾ ಮುಚ್ಚಾಲೆ ಆಟ ತೋಳ ಬಂತಲೇ ತೋಳ ಎನ್ನುವಂತೆ ಜನರಿಗೆ ಮಂಕು ಭೂದಿ ಎರಚಿ ಇರುವ ಕೆಲಸ ಬಿಟ್ಟು ಮಳೆಯ ಮುನ್ಸೂಚನೆ ಎಂದು ತಿಳಿದೇ ಗಡಿಬಿಡಿಯಲ್ಲಿ ಎಲ್ಲ ಸಾಮಾನು ಸರಂಜಾಮು ಎತ್ತಿಡುವ ಧಾವಂತ ಹುಯಿಲೆಬ್ಬಿಸುವ ಕಾರ್ಯ ಈ ಮುಂಗಾರೆಂಬ ಮಳೆಯ ಮಾಯಾ ಜಿಂಕೆಗೆ!

ಸುತ್ತ ಮುತ್ತ ಬೆಟ್ಟ ಗುಡ್ಡಗಳಿರುವ ಮಲೆನಾಡಿನ ನನ್ನ ತವರು ಪುಟ್ಟ ಹಳ್ಳಿ. ತೆಂಗು ಅಡಿಕೆಗಳು ಸೋಂಪಾಗಿ ಬೆಳೆದು ಸೃಷ್ಟಿಯ ಸೊಬಗನ್ನು ಮೊಗೆದೂ ಮೊಗೆದೂ ಉಣ ಬಡಿಸುವ ಉದಾರತೆ ತೋರುವ ಅಲ್ಲಿಯ ಭೂರಮೆ. ಬೆಳ್ಳಂಬೆಳಗ್ಗೆ ದೂರದಲ್ಲಿ ನವಿಲ ಕೂಗು, ಕಿಚಿ ಕಿಚಿ ಕಿಚಾಯಿಸುವ ಹಕ್ಕಿಗಳ ಕಲರವ, ಅಂಬಾ ಎಂದು ಹೆಂಗಸರ ಮಗ್ಗುಲ ಬದಲಾಯಿಸಿ ತಮ್ಮ ಕರೆಗಂಟೆ ಒತ್ತುವ ಕಾಮಧೇನುವಿನ ತೊದಲು ಎದ್ದಡಿಯಿಟ್ಟು ಒಂದಷ್ಟು ಮೇವು ಬೇಗ ನೀಡು ಹಸಿದ ಕರುಳ ಬಳ್ಳಿಯ ಹಸಿವ ನೀಗಿಸಬೇಕೆಂಬ ಸೂಚನೆ. ಸಾಕಿದ ಶ್ವಾನಗಳಿಗೂ ಓಡಿ ಹೋಗುವ ತರಾತುರಿ ಬಯಲಕಡೆಗೆ.

ಒಮ್ಮೊಮ್ಮೆ ಮುಂಜಾವಿನ ಮಗ್ಗುಲಲ್ಲೇ ತನ್ನದೊಂದೆಲ್ಲಿಡಲೆಂಬ ಹಪಹಪಿ ಈ ಮುಂಗಾರು ಮಳೆರಾಯನಿಗೆ. ಕೈ ಬಿಡುವಿಲ್ಲದ ಧಾವಂತದ ದಿನಗಳು ಈ ಮಳೆಗಾಲದ ಸನ್ನಿವೇಶ. ದಬದಬನೆ ಸುರಿಯದಿದ್ದರೂ ಜಿಟಿ ಜಿಟಿ ಮಳೆಯ ಸಣ್ಣ ಹನಿಗಳು ಪಟಪಟನೆ ಸುರಿಯುವಾಗ ಬಚ್ಚಲು ಮನೆಯ ಮಾಡಿನಲ್ಲಿ ತಟಪಟ ಸದ್ದು ಗದ್ದಲವಿಲ್ಲದ ಮಲೆನಾಡಿನ ಮನೆಗಳಲ್ಲಿ.

ಚಿಕ್ಕವಳಿರುವಾಗಿನಿಂದಲೂ ಎಲ್ಲವನ್ನೂ ಕಣ್ಣಾರೆ ಕಂಡು ಆಲಿಸಿ ಕಿವಿ ನಿಮಿರಿಸಿಕೊಂಡು ಕೇಳುತ್ತಿದ್ದೆ. ಬೆಳಿಗ್ಗೆ ಮಳೆ ಬಂದರೆ ಪಕ್ಕನೆ ಹೋಗುವ ನೆಂಟ ಇವನಲ್ಲವೆಂಬ ಗಾದೆ ನಮ್ಮ ಹಳ್ಳಿ ಕಡೆ. ಆಗೆಲ್ಲ ನಮಗೆ ಎಷ್ಟೊಂದು ಸಂತೋಷದ ಸುಗ್ಗಿ! ಮತ್ತೇನಿಲ್ಲ ಶಾಲೆಗೆ ರಜೆ ಗ್ಯಾರಂಟಿ ಮಳೆ ಜೋರಾದರೆ ಅಂತ. ಊರ ಹುಡುಗ ಹುಡುಗಿಯರೆಲ್ಲ ಸೇರಿ ಹಾಡುತ್ತಿದ್ದ ಮಳೆಯ ಹಾಡು “ಬಾರೊ ಬಾರೊ ಮಳೆರಾಯ, ಬಿಂದಿಗೆ ತುಂಬ ನೀರು ತಾರೊ…..” ಹೀಗೆ ಸಾಗುತ್ತಿದ್ದ ನಮ್ಮ ಹಾಡು ಮನೆ ಮುಂದಿನ ಕೆಸರು ರಸ್ತೆಯಲ್ಲಿ ಬೇಕಂತಲೇ ಗುಪ್ಪಾರಿ, ಇನ್ನಷ್ಟು ಕೆಸರು ಮಾಡಿ ಮೈಗೆಲ್ಲಾ ಮೆತ್ತುತ್ತಿದ್ದರೂ ಅದೇ ಒಂದು ಖುಷಿ. ಜಿಟಿ ಜಿಟಿ ಮಳೆ ನಮ್ಮ ಮೈಗೆ ತಾಗುತ್ತಲೇ ಇರಲಿಲ್ಲ. ನಿಂತ ನೀರ ಸಣ್ಣ ಹೊಂಡದಲ್ಲಿ ಇನ್ನಷ್ಟು ಮಣ್ಣು ತೆಗೆದು ಆ ಕೆಸರು ನೀರನ್ನೇ ಮೈಗೆ ಸೋಕಿಕೊಂಡು ಒಬ್ಬರನ್ನೊಬ್ಬರು ಬೀಳಿಸಿ ಹೊಳ್ಳಾಡಿಸಿ ಎಮ್ಮೆ ಹೊಂಡ ಇದು ಬನ್ನ್ರೋ ಹೊರಳಾಡೋಣ ಅಂತ ಕೊಟ್ಟಿಗೆಯಲ್ಲಿರುವ ಎಮ್ಮೆಗಳು ಬೇಸಿಗೆಯಲ್ಲಿ ನೀರಿರುವ ಹೊಂಡದಲ್ಲಿ ಹೊರಳಾಡಿದ ನೋಟ ನೆನಪಿಸಿಕೊಂಡು ಆಟ ಆಡಿರುವುದು ಈ ಮಳೆಗಾಲ ಬೇಡಬೇಡವೆಂದರೂ ಜ್ಞಾಪಿಸಿ ದೊಡ್ಡವರಾಗಿ ಈಗ ಎಲ್ಲೆಲ್ಲೊ ಚದುರಿ ಹೋದವರ ನೆನಪೆಲ್ಲ ಒಂದುಗೂಡಿಸಿಬಿಡುತ್ತದೆ.

ಮನೆ ಅಂದರೆ ಮಲೆನಾಡಿನಲ್ಲಿ ಬರೀ ಹಂಚಿನ ಮನೆಗಳೇ ಜಾಸ್ತಿ. ಅಲ್ಲಿಯ ಧೋ… ಎಂದು ಸತತವಾಗಿ ಎರಡು ಮೂರು ದಿನ ಆಗಾಗ ಎಡಬಿಡದೇ ಸುರಿಯುವ ಮಳೆಗೆ ಷಹರದಂತೆ ಟಾರಸಿ ಮನೆಗಳು ತಡೆಯುವುದಿಲ್ಲ. ಏನೋ ಶೋಕಿಗೆ ಇಂತಹ ಮನೆ ಇತ್ತೀಚೆಗೆ ಅಲ್ಲೊಂದು ಇಲ್ಲೊಂದು ಕಟ್ಟಿ ಕೊಂಡವರೂ ಮಳೆಯ ರಭಸಕ್ಕೆ ಟಾರಸಿಯಲ್ಲಿ ಲೀಕೇಜು ಶುರುವಾಗಿ ಕೊನೆಗೆ ಹಂಚೊ, ಶೀಟೊ ಹಾಕಿ ಮೇಲೊಂದು ಮುಚ್ಚಿಗೆ ನಿರ್ಮಾಣ ಮಾಡಿಕೊಳ್ಳುವುದು ಮಾಮೂಲಿ. ಪ್ರತಿ ವರ್ಷದ ಮಳೆಗಾಲದಲ್ಲೂ ಇಡೀ ಮನೆ ಜಾಲಾಡಿ ಹಂಚು ಒಡೆದಿದೆಯೊ, ಕಸ ಕಟ್ಟಿದೆಯೊ, ಇಲಿ ಡೊಂಬು ಮಾಡಿದೆಯೊ, ಒರಲೆ ಏನಾದರೂ ಬಂದಿದೆಯೊ ಇತ್ಯಾದಿ ಹೀಗೆ ಸೂಕ್ಷ್ಮವಾಗಿ ಗಮನಿಸುವುದು ಸಾಮಾನ್ಯವಾಗಿ ಮನೆಯ ಎಜಮಾನನ ಅಥವಾ ಆ ಮನೆಯ ಹಿರಿಯರ ಕೆಲಸ. ಇನ್ನು ಮಳೆಯ ಜಡಿ ಹೊಡೆಯುವ ಜಾಗದಲ್ಲೆಲ್ಲ ಅಡಿಕೆ ಸೋಗೆಯಿಂದ ತಟ್ಟಿ ಕಟ್ಟುವ ಕಾಯಕ ಪ್ರತೀ ವರ್ಷ. ಹೀಗೆ ಒಂದಿಲ್ಲೊಂದು ಮಳೆಗಾಲದ ತಯಾರಿಯೆಂದೇ ಕರೆಸಿಕೊಳ್ಳುವ ಕೆಲಸಗಳು ಹಳ್ಳಿ ಜನರ ಕೈ ತುಂಬ.

ಈ ಕಾಂಕ್ರೀಟ್ ಕಾಡಿನಿಂದ ದೂರಾಗಿ ಒಂದಷ್ಟು ದಿನ ಹಳ್ಳಿಯ ವಾಸದಲ್ಲಿ ಕಳೆದ ದಿನಗಳ ನೆನಪಾಗಿ ಮೊಗಮ್ಮಾಗಿ ಬೆಟ್ಟ ಗುಡ್ಡ ತೋಟ ಆಡಿ ಬೆಳೆದ ಜಾಗವೆಲ್ಲ ಸುತ್ತಾಡಿ ಮನಸ್ಸು ರಂಗಿನ ತೇರನೇರಿತ್ತು. ಬಿಟ್ಟರೂ ಬಿಡಲಾಗದ ತವರ ಸೆಳೆತ ಮನಸು ಮ್ಲಾನ ಹೊರಟಿತ್ತು ದೇಹ ಮಾತ್ರ ವಾಪಸ್ಸು. ಬಸ್ಸು ಏರಲು ಬರಬೇಕು ಎರಡು ಕೀ.ಮೀ. ಹಳ್ಳಿಯಿಂದ. ರಾತ್ರಿಯ ಬಸ್ಸು. ಆಗಲೇ ಸಾಯಂಕಾಲ ಐದು ಗಂಟೆಗೇ ಕರೆಂಟು ಹಳ್ಳಿಯಲ್ಲಿ ಇರಲಿಲ್ಲ. ಹೊರಡುವ ತಯಾರಿಯಲ್ಲಿ ಆಕಾಶದ ಕಡೆ ಗಮನವನ್ನೇ ಕೊಟ್ಟಿರಲಿಲ್ಲ. ಮಿಣುಕು ಚಾರ್ಜೆಬಲ್ ಲೈಟು ಕರೆಂಟು ಬರುವುದನ್ನೇ ಕಾಯುತ್ತಿದ್ದ ನನಗೆ ” ಬೇಗ ಹೊರಡಬೇಕು ಮಳೆ ಬರುವ ಹಾಗಿದೆ ದಟ್ಟ ಮೋಡ ಆವರಿಸಿದೆಯೆಂದು ” ಅಣ್ಣ ಹೇಳಿದಾಗಲೇ ಗೊತ್ತಾಗಿದ್ದು. ಮಿಂಚಿಲ್ಲ ಗುಡುಗಿಲ್ಲ, ಆಕಾಶವೆಲ್ಲ ನಿಶ್ಯಬ್ದ.

ಮತ್ತದೇ ತೋಳ ಬಂತಲೇ ತೋಳದ ಕಥೆ ಇರಬಹುದಾ ಅಂತ ನನ್ನ ಎಣಿಕೆ. ಆದರೂ ಗಡಿಬಿಡಿಯಲ್ಲಿ ಗಬಗಬಾಂತ ಉಂಡು ಹೊರಟಾಗ ಸಣ್ಣಗೆ ಗಾಳಿ ಶುರುವಾಯಿತು. ಮಾರನೇ ದಿನ ಎಲೆಕ್ಷನ್. ಮೊದಲೇ ಕಾದಿರಿಸಿದ ಬಾಡಿಗೆ ವಾಹನದ ಪತ್ತೆ ಇಲ್ಲ. ಗತಿ ಇಲ್ಲದೇ ಟೂ ವೀಲರನಲ್ಲಿ ಹೊರಟ ನಮ್ಮ ಸವಾರಿ ಅರ್ಧ ಕೀ.ಮೀ.ಸಾಗಿರಲಿಕ್ಕಿಲ್ಲ ಜೋರಾಗಿ ರಭಸದಿಂದ ಬೀಸುವ ಗಾಳಿಗೆ ಹಿಂದೆ ಕುಳಿತ ನನಗೆ ಉಸಿರಾಡುವುದಕ್ಕೂ ಕಷ್ಟ ಆಯಿತು. ಹೇಗಾದರೂ ಸರಿ ಬೇಗ ಬಸ್ಟಾಪ್ ಸೇರುವ ತವಕ ಅಣ್ಣನಿಗೆ. ಗಾಡಿ ಜೋರಾಗಿ ಓಡುತ್ತಿದೆ ಮಳೆಯ ದೊಡ್ಡ ದೊಡ್ಡ ಹನಿಗಳು ಶುರುವಾಯಿತು. ರಸ್ತೆಯೆಲ್ಲ ಕತ್ತಲು ಕೋಟೆ. ಒಂದು ನರ ಪಿಳ್ಳೆ ಇಲ್ಲ. ವಾಹನಗಳ ಸಂಚಾರವೂ ಇಲ್ಲ. ಇರುವುದು ನಾವಿಬ್ಬರೇ. ಕೈಯಲ್ಲಿ ಬ್ಯಾಗು, ಅಕ್ಕ ಪಕ್ಕ ಇನ್ನೊಂದೆರಡು ಚೀಲ ಕಟ್ಟಿ ನಾ ಕೂತದ್ದು ಕದಂ ಕೋಲ್. ಉಸಿರು ಕಟ್ಟುವ ಅನುಭವ. ಅಣ್ಣಾ ನಿಲ್ಲಿಸು ಅಂತೇಳಲೂ ಬಾಯಿ ಬರುತ್ತಿಲ್ಲ, ಹೇಳಿದರೂ ಕೇಳುವ ಸ್ಥಿತಿಯಲ್ಲಿ ಅವನೂ ಇಲ್ಲ. ಗಮನವೆಲ್ಲ ವೇಗದ ಕಡೆಗೆ. ಅಕ್ಕ ಪಕ್ಕ ಸಾಕಷ್ಟು ಎತ್ತರವಾದ ಗಿಡಮರಗಳ ರಾಶಿ ರಾಶಿ ಎಲೆಗಳು ಟಾರು ರೋಡನ್ನು ಮುಚ್ಚಿ ಬಿಟ್ಟಿದ್ದವು. ಎತ್ತ ನೋಡಿದರೂ ಕಗ್ಗತ್ತಲು. ಜೋರಾಗುತ್ತಿರುವ ಮಳೆ ತೋಯುತ್ತಿರುವ ದೇಹ ಮದ್ಯದಲ್ಲಿ ಗಾಡಿ ನಿಲ್ಲಿಸುವಂತಿಲ್ಲ.

ಅಂತೂ ಅಲ್ಲೇ ಹತ್ತಿರದಲ್ಲಿ ಇರುವ ಇನ್ನೊಂದು ಬಸ್ಸ್ ಸ್ಟಾಪಿಗೆ ನುಗ್ಗಿದಾಗ ಗಾಡಿಯ ಲೈಟೂ ಬಂದಾಗಿದ್ದರಿಂದ ಏನೊಂದೂ ಕಾಣಿಸದು. ಬರೀ ನೀರೇ ನೀರು. ಮಳೆಯ ಆರ್ಭಟಕೆ ಇಬ್ಬರೂ ತತ್ತರಿಸಿದ್ದು ಈಗಲೂ ನೆನೆದರೆ ಮೈ ಝುಮ್ ಅನ್ನುವುದು. ಬಸ್ಸಿಗೆ ಸಮಯವಾಗುತ್ತಿದೆ, ಕಾದಿರಿಸಿದ ಟಿಕೆಟ್ಟು ಬೇರೆ. ಇನ್ನೂ ಒಂದು ಕೀ.ಮೀ. ಸಾಗಬೇಕು ನಿಗದಿ ಪಡಿಸಿದ ಬಸ್ಸು ಏರಲು. ಮಳೆ ಮಾತ್ರ ಜೋರಾಗುತ್ತಲೇ ಇದೆ. ಹೇಗಪ್ಪಾ ಹೋಗೋದು?

ಅರ್ಧ ಗಂಟೆಯ ಆ ಕಗ್ಗತ್ತಲಲ್ಲಿ ಗುಡುಗು ಮಿಂಚಿನ ಆರ್ಭಟಕ್ಕೆ ಹೆದರಿ ಮುದುಡಿ ನಿಂತಿದ್ದೆ ಧರೆಗಿಳಿವ ಮಳೆಯ ರಭಸ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತ. ಅಣ್ಣನೋ ಆ ಸುರಿವ ಮಳೆಯಲ್ಲಿ ರಸ್ತೆಯ ಅಂಚಿಗೆ ಯಾವುದಾದರೂ ವಾಹನ ಬರಬಹುದೇ ಎಂಬ ನಿರೀಕ್ಷೆಯಲ್ಲಿ ಕಾದು ನಿಂತಿದ್ದ ಪಾಪ! ಛೆ! ನನ್ನಿಂದ ಅಣ್ಣ ಹೀಗೆ ಮಳೆಯಲ್ಲಿ ತೋಯುವಂತಾಯಿತಲ್ಲ ; ಬೇಸರ ಆವರಿಸಿತು. ಮನೆಯಿಂದ ಹೊರಡುವಾಗ ಛತ್ರಿ ತಂದಿದ್ದು ನಾಮಕಾವಸ್ಥೆಯಾಯಿತು. ಅಲ್ಲಿ ಮುಖ್ಯ ರಸ್ತೆಯಲ್ಲಿ ಹಾದು ಹೋಗುವ ವಾಹನಗಳಿಗೆ ಕೈ ಮಾಡಿದರೂ ಯಾರೂ ನಿಲ್ಲಿಸುತ್ತಲೂ ಇಲ್ಲ.

ಅಂತೂ ನಮ್ಮೂರ ಮಾರ್ಗದಿಂದಲೇ ಬಂದ ಒಂದು ಕಾರು ನಿಲ್ಲಿಸಿದ್ದರಿಂದ ಬಚಾವು. ಗಾಡಿ ಅಲ್ಲೇ ನಿಲ್ಲಿಸಿ ಹೇಗೊ ಇಬ್ಬರೂ ಕಾರಲ್ಲಿ ತೂರಿಕೊಂಡು ತಲುಪ ಬೇಕಾದ ಬಸ್ ಸ್ಟಾಪ್ ಸೇರಿ ಇಳಿದಾಗ ಮೈಯೆಲ್ಲಾ ತೊಪ್ಪೆಯಾಗಿದ್ದ ಅನುಭವ ಗಡ ಗಡ ನಡುಕದಲ್ಲಿ ರಾತ್ರಿ ಹತ್ತು ಗಂಟೆ ಪ್ರಯಾಣ ಒದ್ದೆ ಬಟ್ಟೆಯಲ್ಲಿ ಕೂತು ಪಟ್ಟ ಪಾಡು ಆ ದೇವರಿಗೇ ಪ್ರೀತಿ. ಜನ್ಮದಲ್ಲೇ ಇಂತಹ ಮಳೆ ಕಂಡಿಲ್ಲ, ಅವಸ್ಥೆನೂ ಪಟ್ಟಿರಲಿಲ್ಲ. ಮನೆ ಸೇರಿ ಇನ್ನೂ ಅರ್ಧ ಗಂಟೆ ಆಗಿಲ್ಲ ಆಗಲೇ ಊರಿಂದ ಫೋನು.

ಅಲ್ಲಿ ಮಳೆಯ ಅಬ್ಬರದಿಂದ ಆದ ಅನಾಹುತ ಕೇಳಿ ಅದೆಷ್ಟು ಅತ್ತಿದ್ದೆ ನಾನು!! ಪೊಗದಸ್ತಾಗಿ ತಿಂದು ಬಂದ ಕೊಟ್ಟಿಗೆ ಹತ್ತಿರ ಇರೊ ಹಲಸಿನ ಹಣ್ಣಿನ ಮರ ಉರುಳಿದೆ, ಹಿತ್ತಲಿನ ಎರಡು ತೆಂಗಿನ ಮರ ಅರ್ಧಕ್ಕೆ ಕಟ್ಟಾಗಿ ಬಿದ್ದಿದೆ ಕಾಯಿ ಎಷ್ಟಿತ್ತು! ಗಾಳಿಗೆ ತೆಂಗಿನ ಹೆಡೆ ಈಗಿತ್ತಲಾಗಿ ರಿಪೇರಿ ಮಾಡಿದ ಮಾಡಿನ ಮೇಲೆ ಬಿದ್ದು ಹಂಚೆಲ್ಲಾ ಪುಡಿ ಪುಡಿ. ಜಗುಲಿಯೆಲ್ಲಾ ನೀರೇ ನೀರು. ತೋಟಕ್ಕೆ ಹೋದರೆ ಅಡಿಕೆ ಮರ ಅದೆಷ್ಟು ಬುಡ ಸಮೇತ ಉರುಳಿದೆ ಗೊತ್ತಾ? ಕರೆಂಟು ಬಂದೇ ಇಲ್ಲಾ. ಕೆಲಸದವರೂ ಸಿಗುತ್ತಿಲ್ಲ. ಏನು ಮಾಡಬೇಕು ತಿಳೀತಿಲ್ಲ. ನೀನು ಸುರಕ್ಷಿತವಾಗಿ ತಲುಪಿದೆಯಾ?

ಮುಂಗಾರು ಮಳೆಯ ಅದರಲ್ಲೂ ಮೊದಲ ಮಳೆಯ ಭೀಕರ ಅವಾಂತರ ಊರಲ್ಲಿ ಆದದ್ದು ಕೇಳಿ ನನಗಾದ ಕಷ್ಟ ಮರೆತು ಊರಿಗೋದಾಗಿನ ಖುಷಿ ಜರ್ರಂತ ಇಳಿದೋಯಿತು. ಮತ್ತೆ ಮತ್ತೆ ಮಳೆಯ ಅಬ್ಬರ ಅಲ್ಲಿ ಜೋರಾಗಿದೆ ಅಂತ ಗೊತ್ತಾದಾಗೆಲ್ಲ ಇನ್ನೇನು ಅನಾಹುತವಾಗಿಬಿಡುತ್ತೊ ಅನ್ನುವ ಆತಂಕ ಎದೆ ತಿವಿಯೋದು ಈ ಮಳೆಯಿಂದಾಗಿ. ಮಳೆಯೇ ನೀ ಬಾ ಹಗುರಾಗಿ, ಸಾಂಗವಾಗಿ, ಶಾಂತವಾಗಿ, ಎಂದುಸುರುವುದು ಮನ ಮೌನಿಯಾಗಿ ಕಾಣದ ದೇವರಿಗೆ ಕೈ ಮುಗಿಯುತ್ತ!!

24-7-2018. 5.40pm

Advertisements

ವಿಶ್ವ ಪರಿಸರ ದಿನಕ್ಕೊಂದು ಝಲಕ್

ಚುಮು ಚುಮು ಬೆಳಗು. ಹಕ್ಕಿಗಳ ಕಲರವ ಕಿಚಿ ಕಿಚಿ. ದೂರದಲ್ಲಿ ನವಿಲ ಕೂಗು. ಮರಕುಟಿಗ ಹಕ್ಕಿಯ ಕುಟು ಕುಟು ಸದ್ದು. ಅಂಬಾ ಎಂದು ಕರೆಯುವ ಹಸುವಿನ ಕರೆ. ಮತ್ಯಾವ ಸದ್ದೂ ಅಲ್ಲಿಲ್ಲ. ಪ್ರತಿದಿನ ಏಳುವಾಗ ಇವಿಷ್ಟೇ ನನ್ನ ಕಿವಿಗೆ ಬೀಳುವ ಶಬ್ದಗಳಾಗಿತ್ತು.

ಹೌದು. ಊರಿಗೆ ಬಂದು ಒಂದು ವಾರವಷ್ಟೇ ಆಗಿತ್ತು. ಅಲ್ಲಿ ಇರುವಷ್ಟೂ ದಿನ ಬೆಳಗಿನ ವಾಯು ವಿಹಾರ ಒಂಟಿ ಪಯಣಿಗನ ಚಾರಣದಂತಿತ್ತು. ಭಯ ಎನ್ನುವುದು ನನ್ನ ಹತ್ತಿರ ಸುಳಿಯಲೇ ಇಲ್ಲ. ಬೆಳಗಾಗುವುದನ್ನೇ ಕಾಯುತ್ತಿತ್ತು ನನ್ನ ಮನ. ರವಿ ತನ್ನ ತಾಣದಲ್ಲಿ ಮೂಡುವ ಮೊದಲೇ ಎದ್ದು ರೆಡಿಯಾಗುತ್ತಿದ್ದೆ ದಿನವೂ ಒಂದೊಂದು ದಿಕ್ಕಿಗೆ ಸಾಗಿ ಸುತ್ತಾಡಿ ಬರಲು. ಸುಸ್ತು ನನ್ನ ದೇಹ ತಾಕಲಿಲ್ಲ.

ಚಿಕ್ಕವಳಿರುವಾಗ ಮನಸೋ ಇಶ್ಚೆ ಗುಡ್ಡ ಬೆಟ್ಟ ಸುತ್ತಿ ಹತ್ತಿ ಇಳಿದು ಗೆಳೆಯ ಗೆಳತಿಯರ ಜೊತೆ ಕುಣಿದು ಕುಪ್ಪಳಿಸಿದ ಜಾಗಗಳಲ್ಲವೇ? ಒಬ್ಬಳೇ ಆ ಒಣಗಿದ ಎಲೆಗಳ ನಡುವೆ ಸರಪರ ಸದ್ದು ಕಾಲ್ನಡಿಗೆ ನಾನು ಬರುತ್ತಿರುವ ಸೂಚನೆ ನೀಡುತ್ತ “ಅದೋ ಆ ಅದೇ ಗಿಡ ಮರವಾಗಿದೆ ತನ್ನ ಸುತ್ತ ಬೀಜ ಬಿತ್ತಿ ಮತ್ತಷ್ಟು ಸಂತಾನ ಬೆಳೆಸಿದೆ” ಖುಷಿ ಖುಷಿ ವದನದ ತುಂಬ. ಎಲ್ಲಿ ನೋಡಿದರಲ್ಲಿ ಪುಟ್ಟ, ಸಣ್ಣ, ಸ್ವಲ್ಪ ದೊಡ್ಡ, ದೊಡ್ಡ ಹೀಗೆ ಹಲವಾರು ಗಿಡಗಳು ಸೋಂಪಾಗಿ ಬೆಳೆದು ನಿಂತು ಸುತ್ತ ಚಂದದ ರಾಶಿಯನ್ನೇ ಚೆಲ್ಲಿವೆ. ಹೇಗೆ ವರ್ಣಿಸಲಿ ಅದರ ಅಂದವಾ!?

ನಿಜ. ನನ್ನೂರು ಕಲ್ಮನೆ ಅಡಿಕೆ ತೆಂಗುಗಳ ಬೀಡು. ನಾಲ್ಕೈದು ಮನೆಗಳ ಪುಟ್ಟ ಹಳ್ಳಿ. ಎಲ್ಲಾ ಆದುನಿಕ ಸೌಲತ್ತುಗಳೂ ಎಲ್ಲರ ಮನೆಯಲ್ಲಿ ಇವೆ. ದೊಡ್ಡ ದೊಡ್ಡ ಹೆಂಚಿನ ಮನೆಗಳು. ಕನಿಷ್ಠ ಎಂದರೂ ಐವತ್ತು ವರ್ಷದ ಹಿಂದಿನ ಮನೆಗಳೇ. ಸುಂದರವಾದ ಕೆತ್ತನೆಯ ಮರದ ಕುಸುರಿ ಪ್ರತಿ ಮನೆಯಲ್ಲೂ ಕಾಣಬಹುದು. ಹೌದು, ಆಗಿನ ಕಾಲವೇ ಹಾಗಿತ್ತು. ಮಣ್ಣಿನ ಗೋಡೆ,ಮಿಕ್ಕೆಲ್ಲ ಗಟ್ಟಿ ಮರದ ಕೆತ್ತನೆಯ ಆಸರೆ. ಯಾರ ಮನೆ ಒಳಗೆ ಕಾಲಿಟ್ಟರೂ ಸಾಕು ಹಾಯ್! ಅನ್ನುವಷ್ಟು ಸದಾ ತಂಪು ವಾತಾವರಣ.

ಸಿಟಿಯಂತೆ ಕಸ,ಪೊಲ್ಯೂಷನ್, ಶಬ್ದ ಮಾಲಿನ್ಯ ಯಾವುದೂ ಇಲ್ಲ. ಉರುವಲಿಗೆ,ಹಸುಗಳ ಕೊಟ್ಟಿಗೆಗೆ ಮೊದಲೆಲ್ಲ ಸದಾ ಗಿಡ ಮರಗಳನ್ನು ಕಡಿಯುತ್ತಿದ್ದರು. ಆದರೆ ಈಗ ಗೋಬರ್ ಗ್ಯಾಸ್ ಎಲ್ಲಾ ಮನೆಯಲ್ಲಿ. ಜೊತೆಗೆ ಸಿಲಿಂಡರ್ ಗ್ಯಾಸ್ ಕೂಡಾ ಇದೆ. ಹಸುವಿನ ಕೊಟ್ಟಿಗೆ ಮೊದಲಿನಂತೆ ಮಣ್ಣು ಇಲ್ಲ, ಎಲ್ಲಾ ಸಿಮೆಂಟ್ ಮಯ. ಹಸಿ ಸೊಪ್ಪು ದಿನವೂ ತಂದು ಕೊಟ್ಟಿಗೆಗೆ ಹಾಸಿ ದನಗಳಿಗೆ ಮಲಗಲು ಅನುವು ಮಾಡಿಕೊಡುತ್ತಿದ್ದರು. ಈಗ ಸಿಮೆಂಟ್ ನೆಲ ಹಾಸು ಆಗಿರೋದರಿಂದ ಆಗಾಗ ಸಗಣಿ ಬಾಚಿ ನೀರಿಂದ ತೊಳೆಯುವ ಪದ್ಧತಿ ರೂಢಿಯಾಗಿದೆ. ಹೀಗಾಗಿ ಅರಣ್ಯ ಅಡಿಕೆ ತೋಟದ ಸುತ್ತಮುತ್ತ ತನ್ನಷ್ಟಕ್ಕೇ ಬೆಳೆಯುತ್ತಿದೆ.

ಇನ್ನು ಮನೆಯಲ್ಲಿ ಉತ್ಪನ್ನವಾಗುವ ಹಸಿ ಕಸ ಗೊಬ್ಬರದ ಗುಂಡಿ ಸೇರಿದರೆ ಒಣ ಕಸ ಹಂಡೆಯ ಒಲೆಯ ಉರುವಲಾಗಿ ಬಳಸುತ್ತಾರೆ. ಅಲ್ಲಿ ಕೂಡಾ ಸಿಟಿಯಂತೆ ಪ್ಲಾಸ್ಟಿಕ್ ಅದೂ ಇದೂ ಹಳೆಯ ಸಾಮಾನುಗಳನ್ನು ಖರೀದಿಸಲು ಮನೆ ಬಾಗಿಲಿಗೆ ಬರುತ್ತಾರೆ ಆಗ ಈಗ. ಹಾಗಾಗಿ ಅಲ್ಲಿಯ ಜನ ಒಂದು ಕಡೆ ಇಂತಹ ಸಾಮಾನುಗಳನ್ನು ಪೇರಿಸಿಟ್ಟಿರುತ್ತಾರೆ.

ಊರಲ್ಲಿ ಯಾವುದೇ ಬೆಕ್ಕು, ನಾಯಿ, ಹಸು,ಎಮ್ಮೆ ಸತ್ತರೂ ಅವುಗಳನ್ನು ದೂರದಲ್ಲಿ ಹೊಂಡ ತೋಡಿ ಹೂಳುತ್ತಾರೆ.

ಊರ ಕೊನೆಯಲ್ಲಿ ಒಂದು ಸ್ವಲ್ಪ ವಿಸ್ತೀರ್ಣದ ಜಾಗ ರಸ್ತೆಯ ಪಕ್ಕ. ಊರವರೆಲ್ಲ ಅಲ್ಲಿ ತಂದು ಹಾಕುವ ಒಂದಷ್ಟು ಉರುವಲು ಕಸ ಅಕ್ಕ ಪಕ್ಕ ಎಲ್ಲ ಗುಡಿಸಿ ಒಂದಷ್ಟು ಮಣ್ಣು ಅದರ ಮೇಲೆ ಹಾಕಿ ಆಗಾಗ ಬೆಂಕಿ ಹಾಕುತ್ತಾರೆ. ಅಲ್ಲಿ ಸುಡು ಮಣ್ಣು ತಯಾರಾಗುತ್ತದೆ. ಊರ ಮಂದಿ ತಮಗೆ ಬೇಕಾದಷ್ಟು ತಮ್ಮ ಗದ್ದೆ ತೋಟಕ್ಕೆ ಸುರುವಿಕೊಳ್ಳುತ್ತಾರೆ. ಇದು ಫಲವತ್ತಾದ ಮಣ್ಣು.

ವಾತಾವರಣ ಕಲ್ಮಶವಿಲ್ಲದ ಕುರುಹು ಅಲ್ಲಿ ಹೋಗಿ ಉಳಿದಷ್ಟೂ ದಿನ ದೇಹ ಸವರಲು ಯಾವ ಎಣ್ಣೆಯೂ ಬೇಡ ಯಾವ ಮುಲಾಮಿನ ಅಗತ್ಯ ಇಲ್ಲವೇ ಇಲ್ಲ. ಇಲ್ಲಿ ಆದ ಒಣ ಚರ್ಮ ಅಲ್ಲಿ ಹೋದ ಒಂದೆರಡು ದಿನದಲ್ಲಿ ಎಷ್ಟು ಮೃದುವಾಗುವುದು ಗಮನಕ್ಕೆ ಬರದೇ ಇರುವುದಿಲ್ಲ. ಇಲ್ಲಿ ಮಿನರಲ್ ವಾಟರ್ ಅಥವಾ ಕಾಯಿಸಿಕೊಂಡೋ ಇಲ್ಲಾ ಫಿಲ್ಟರ್ ನೀರು ಕುಡಿದರೆ ಗಂಟಲ ಆರೋಗ್ಯ ಬಚಾವ್. ಆದರೆ ಅಲ್ಲಿದ್ದಷ್ಟೂ ದಿನ ಬಾವಿಯ ನೀರು ಲೀಲಾಜಾಲವಾಗಿ ಗಂಟಲು ಇಳಿದರೂ ಗಂಟಲು ಕಿರಿ ಕಿರಿ, ನೆಗಡಿ ಕೇಳ್ಬೇಡಿ. ಅಷ್ಟು ಶುದ್ಧ ಬಾವಿಯ ನೀರು.

ಅಡಿಕೆ ತೋಟದ ಕೊನೆಯಲ್ಲಿ ಬೇಸಿಗೆಯಲ್ಲೂ ಬತ್ತದ ಸಮೃದ್ಧ ಎರಡು ಕೆರೆ ಇದೆ. ಊರವರೆಲ್ಲ ಸೇರಿ ಹೂಳೆತ್ತಿ ತೋಟಕ್ಕೆ ಸ್ಪಿಂಕ್ಲರ್ ನೀರಿನ ವ್ಯವಸ್ಥೆ ಮಾಡಿಕೊಂಡರೆ ಇದೇ ಕೆರೆಗಳಿಂದ ಊರ ಎಲ್ಲಾ ಮನೆಗಳಿಗೂ ಪೈಪ್ ಅಳಲಡಿಸಿಕೊಂಡು ನಲ್ಲಿ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕರೆಂಟಿನ ಅಗತ್ಯ ಇಲ್ಲ.

ಸರಕಾರದಿಂದ ಸಿಕ್ಕ ಸಬ್ಸಿಡಿ ಒಂದಷ್ಟು ಬಿಟ್ಟರೆ ಊರ ಜನರೆ ಹಣ ಹಾಕಿ 365 ದಿನ 24 ಗಂಟೆ ನೀರು ಹರಿದು ಬರುವಂತೆ ಅನುಕೂಲ ಮಾಡಿಕೊಂಡಿದ್ದಾರೆ. ಮನೆಯ ಸುತ್ತ ಮುತ್ತ ತೆಂಗು, ಹಣ್ಣಿನ ಗಿಡಗಳು, ಹೂಗಿಡಗಳು ಬಿರು ಬೇಸಿಗೆಯಲ್ಲೂ ನಳನಳಿಸುತ್ತಿವೆ. ಎಲ್ಲಿ ನೋಡಿದರಲ್ಲಿ ಊರು, ತೋಟ ಭೂತಾಯಿಯು ಕಳೆ ಕಳೆಯಾಗಿ ಕಾಣುವಾಗ ಮನಕೆಷ್ಟಾನಂದ! ಅಲ್ಲಿಯೇ ಇದ್ದುಬಿಡುವಾ ಅಂದನಿಸುವುದು ಅತಿಶಯೋಕ್ತಿಯಲ್ಲ. ಕಣ್ಣು ಮನ ತಣಿಯುವಷ್ಟು ತಿರುಗಾಡಿ ಆ ಸೌಂದರ್ಯ ಒಂದಷ್ಟು ಮೊಬೈಲಲ್ಲಿ ಸೆರೆ ಹಿಡಿದೆ.

ಕಲಿತು ಬೆಂಗಳೂರು ಸೇರಿದ ಕೆಲವು ರೈತ ಕುಟುಂಬದವರು ಹಳ್ಳಿಯತ್ತ ಮುಖ ಮಾಡಿದ್ದು, ನಮ್ಮ ಹಳ್ಳಿಗೆ ಸಮೀಪದಲ್ಲಿ ಹತ್ತಾರು ಎಕರೆ ಜಮೀನು ಖರೀದಿಸಿ ಅನೇಕ ಹೊಸ ತಳಿಯ ಅಪರೂಪದ ಹಸುಗಳ ತಂದು ಹೈನುಗಾರಿಕೆ ಮಾಡುತ್ತಿರುವುದು ಕಣ್ಣಾರೆ ಕಂಡು ಬಂದೆ. ಬಹಳ ಸಂತೋಷ ತರಿಸಿತು.

ನಮ್ಮ ಮೋದೀಜಿಯವರು ಕಂಡ ಕನಸು ಅಕ್ಷರಶಃ ಮಲೆನಾಡಿನ ಹಳ್ಳಿಗಳಲ್ಲಿ ಮೊದಲಿಂದಲೂ ರೂಢಿಸಿಕೊಂಡು ಬಂದಿದ್ದಾರೆ ಎಂದರೆ ತಪ್ಪಾಗಲಾರದು. ಈಗಂತೂ ಸರಕಾರದಿಂದ ಸಿಗುವ ಸವಲತ್ತು ಹಳ್ಳಿ ಹಳ್ಳಿಗಳಲ್ಲಿ ಕಾಣಬಹುದು. ಮೊದಲೆಲ್ಲ ಮಣ್ಣಿನ ರಸ್ತೆ ಇದ್ದವು. ಈಗ ಊರ ಬಾಗಿಲವರೆಗೂ ಸಿಮೆಂಟ್, ಟಾರು ರಸ್ತೆಗಳಾಗಿವೆ. ಊರ ಹೆಬ್ಬಾಗಿಲಲ್ಲಿ ಬೀದಿಯ ದೀಪ ಕತ್ತಲಾವರಿಸುತ್ತಿದ್ದಂತೆ ಮಿನುಗುತ್ತವೆ. ಸುತ್ತಮುತ್ತಲಿನ ಹಳ್ಳಿಗಳ ಸೆಂಟರ್ ಜಾಗದಲ್ಲಿ ಹಾಲಿನ ಡೈರಿ ಇತ್ತೀಚಿನ ವರ್ಷದಲ್ಲಿ ತೆರೆದಿದ್ದು ಹಳ್ಳಿಯ ಪ್ರತೀ ಮನೆಗಳಲ್ಲಿ ಹೈನುಗಾರಿಕೆ ಸಮೃದ್ಧವಾಗಿದೆ. ಆಯಾ ದಿನದ ಹಾಲಿನ ರಖಂ ಅವರವರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಹಳ್ಳಿಗಳಲ್ಲಿ ಕೆಲಸದಾಳುಗಳ ಕೊರತೆ ತುಂಬಾ ಇದೆ. ಪ್ರತಿ ಮನೆಯ ಹೆಂಗಸರು ಗಂಡಸರು ಎನ್ನದೆ ಮಕ್ಕಳಾದಿಯಾಗಿ ತಮಗಾದ ಕೆಲಸ ಮಾಡಲೇ ಬೇಕು. ಗತ್ಯಂತರವಿಲ್ಲ. ಸಾರಿಗೆ ಸೌಲಭ್ಯಗಳ ಅನುಕೂಲ ಸಾಕಷ್ಟಿದೆ. ರೈತಾಪಿ ಜೀವನಕ್ಕೆ ಬೇಕಾದ ಸಾಧನ ಸಲಕರಣೆಗಳನ್ನು ಎಲ್ಲಾ ಮನೆಗಳಲ್ಲಿ ಖರೀದಿಸುತ್ತಿದ್ದಾರೆ. ಆಯಾ ಸಮಯಕ್ಕೆ ತಕ್ಕಂತೆ ವ್ಯವಸಾಯ ಮಾಡಲು ಆದಷ್ಟು ಅನುವು ಮಾಡಿಕೊಳ್ಳುತ್ತಿದ್ದಾರೆ.

ಹೀಗೆ ಪರಿಸರದ ಬಗ್ಗೆ ಕಾಳಜಿ ತೋರಿಸುತ್ತ ದಿನವೆಲ್ಲ ಮೈ ಮುರಿದು ದುಡಿಯುವ ಅವರ ಜೀವನ ಕಂಡಾಗ, ಅವರ ಆರೋಗ್ಯ ಸುಸ್ಥಿತಿಯಲ್ಲಿ ಇರುವುದು ನೋಡಿದರೆ ಬಹಳ ಖುಷಿಯಾಗುತ್ತದೆ. ಇಂತಹ ಒಂದು ಮನೋಭಾವ, ಒಗ್ಗಟ್ಟು, ತನ್ನ ಊರು,ತನ್ನ ಪರಿಸರ ಚೆನ್ನಾಗಿ ಇಟ್ಟುಕೊಳ್ಳಬೇಕೆಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಿದರೆ ಬಹುಶಃ ಎಷ್ಟೇ ಜನ ಸಂಖ್ಯೆ ಇರುವ ಷಹರವೇ ಆಗಲಿ ಸ್ವಚ್ಛತೆಯಿಂದ ಕೂಡಿರುತ್ತಿತ್ತು ಅನಿಸುತ್ತದೆ. ಎಲ್ಲೆಂದರಲ್ಲಿ ಕಸ ಒಗೆದು ಹೋಗುವ ಕೆಟ್ಟ ಚಾಳಿ ಮನುಷ್ಯ ಮೊದಲು ಬಿಡಬೇಕು. ತಮ್ಮ ತಪ್ಪನ್ನು ತಿದ್ದಿಕೊಂಡು ಸ್ವಲ್ಪವಾದರೂ ಪರಿಸರ ಸ್ವಚ್ಛವಾಗಿರಿಸಿಕೊಳ್ಳಲು ಕಾಳಜಿ ವಹಿಸಬೇಕು. ಹಸಿವು ನೀಗಿಸಿಕೊಳ್ಳಲು ಬರುವ ಮುಖ್ಯವಾಗಿ ಬೀಡಾಡಿ ಹಸುಗಳ ಬಾಯಿ ಪ್ಲಾಸ್ಟಿಕ್ ನುಂಗಂತೆ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಬೇಕು. ಈ ಒಂದು ದಿನವೊಂದೇ ಅಲ್ಲ ಪ್ರತೀ ದಿನವೂ ನಮ್ಮ ಪರಿಸರ ಸ್ವಚ್ಛವಾಗಿರಿಸಿಕೊಳ್ಳುವತ್ತ ಪಣ ತೊಡೋಣ.

ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.

3-6-2018. 11.05pm

ಅಮ್ಮಾ…..

ತವರೂರು ಕಲ್ಮನೆಯಲ್ಲಿ ಹನ್ನೆರಡು ದಿನ ಉಳಿದು ಬಂದೆ. ಮಲೆನಾಡಿನ ಆ ಸುಂದರ ಪರಿಸರದಲ್ಲಿ ಎಲ್ಲವೂ ಇತ್ತು.

ದೊಡ್ಡ ಮನೆ, ಮನೆ ತುಂಬ ಪ್ರೀತಿಸುವ ಜೀವಗಳು, ಹಸು,ಕರು,ಚಂದದ ಶ್ವಾನಗಳು, ಮ್ಯಾವ್ ಮ್ಯಾವ್ ಎಂದು ಸದಾ ಕಾಲು ಸುತ್ತುವ ಬೆಕ್ಕಿನ ಮರಿಗಳು, ಹಾಲು,ತುಪ್ಪ, ಮೊಸರು ಪೊಗದಸ್ತಾದ ಊಟ, ಮೆತ್ತನೆಯ ಹಾಸಿಗೆ.

ತಂಪಾದ ಗಾಳಿ ಮನಸೊ ಇಶ್ಚೆ ಸುತ್ತಾಡುವಷ್ಟು ಕಾಡು ಮೇಡು, ಅಡಿಕೆಯ ತೋಟ,ತೆಂಗು,ಮಾವು ತೂಗಾಡಿ ಮನಸಿಗೆ ಅತೀವ ಮುದ ನೀಡುತ್ತಿತ್ತು.

ಆದರೆ ಒಂದೇ ಒಂದು ಕೊರತೆ ಪ್ರತೀ ಕ್ಷಣ ಕಾಡುತ್ತಿತ್ತು.

ಅವಳ ನಡಿಗೆ, ಅವಳ ಇರುವು, ಅವಳ ಮಾತು, ಅವಳ ಪ್ರೀತಿ,ಕಳಕಳಿ,ಮಮತೆ ಹೊರಡುವೆನೆಂದಾಗ ಅಪ್ಪಿ ಅಳುವ ಆ ತಾಯ ಮಮತೆ ಸಿಗದೇ ಮನಸು ಬಹಳ ಒದ್ದಾಡಿತು.
HAPPY MOTHER’S DAY ಅಮ್ಮಾ.
**************

ತಾರಕಕ್ಕೇರಿದ ಸ್ವರದಲ್ಲಿ ಕೂಗಿಬಿಡಲೇ ಒಮ್ಮೆ
ಆದರೆ ನೀನಿಲ್ಲಿ ಇಲ್ಲವೇ ಇಲ್ಲ
ಮನಸು ಮುದುಡಿ ಮೊಗವು ಬಾಡಿ
ಕಣ್ಣು ಮುಂಜಾಗುವುದು
ಈ ಮನೆತುಂಬ ನಿನ್ನದೇ ಧ್ಯಾನ
ಅಡಿಗಡಿಗೆ ತೊಡರುವುದು ನಿನ್ನ ನೆನಪು ಸತ್ತಿಲ್ಲ
ಸೊತ್ತಿಲ್ಲದಿದ್ದರೂ ಮತ್ತದೇ ಕಾಡುವ
ಇಂಚಿಂಚು ಬೆಳೆಯುತ್ತ ಬೆಳೆಯುತ್ತ ಹೆಮ್ಮರವಾಗುವ
ಆಕಾಶದೆತ್ತರಕೆ ಕದಂಬ ಬಾಹು ಚಾಚಿದಂತೆ
ನನ್ನೊಳಗಿನ ಸಂಕಟಕೆ ಕೊನೆಯೆಂದು?

7-5-2018. 8.25pm

ಅವಳು….??

ಅಮ್ಮಾ ನೀನಿಲ್ಲದ ಊರಲ್ಲಿ
ನನಗೇನು ಕೆಲಸ
ಅಲ್ಲಿ ತೊನೆದಾಡುವ ನೆನಪುಗಳಷ್ಟೇ
ಜೋತಾಡುತ್ತಿವೆ ನೀ ಹೆಜ್ಜೆಯಿಟ್ಟಲ್ಲೆಲ್ಲ
ಕೂತಲ್ಲಿ ಕೂರಲಾಗದೇ ಬಳಲುತ್ತೇನೆ
ಕಿವಿಯಲ್ಲಿ ನಿನ್ನ ಮಾತು ತರಂಗಗಳಂತೆ ಅಪ್ಪಳಿಸಿ
ಇನ್ನಷ್ಟು ಮತ್ತಷ್ಟು ಕೇಳಬೇಕೆನಿಸುತ್ತದೆ
ಹಾಗೆ ಹಾಗೆ ನಿನ್ನ ಮಡಿಲ ತುಂಬೆಲ್ಲ
ನನ್ನನ್ನೇ ನಾ ಹರಡಿಕೊಂಡು
ಕಿತ್ತೊಗೆಯಬೇಕು “ಇಲ್ಲಾ ” ಎನ್ನುವ ಈ ಶಬ್ದವನ್ನೇ.

ಆದರೆ ಸಾಧ್ಯವಾಗದ ಮಾತು
ನೀನು ಇಲ್ಲಾ ಎನ್ನುವ ಸತ್ಯದಷ್ಟೆ.

ನೀನೂ ಮಹಿಳೆ
ನಿನ್ನ ರಕ್ತ ಮಾಂಸ ಹಂಚಿಕೊಂಡು ಹುಟ್ಟಿದ
ನಾನೂ ಮಹಿಳೆ
ಆದರೂ ನಿನ್ನೆತ್ತರಕ್ಕೆ ನಾ ಏರಲಾರೆ
ಮಗಳು ನನ್ನ ಮಡಿಲ ತುಂಬಿದ್ದರೂ
ಗೊತ್ತು ನನಗೆ ಏಕೆಂದು!

ಆ ನಿನ್ನ ಮುಗ್ಧ ನಗು
ಎಲ್ಲರೂ ನನ್ನ ಮಕ್ಕಳೆಂದು ಕಾಣುವ ಬಗೆ
ನಿಸ್ವಾರ್ಥ ನಿನ್ನ ಬದುಕು
ಬೇಕು ಎನ್ನುವುದ ಬಿಟ್ಟು
ಸಾಕು ಸಿಕ್ಕಷ್ಟೇ
ಎಂದಂದುಕೊಂಡೇ ಬದುಕಿದವಳು
ಕೊನೆಗೊಂದು ದಿನ
ನಿರಾಳವಾಗಿ ಅಂಗಾತ ಮಲಗಿದವಳು
ಈ ಶುಭದಿನಕೆ
ನನ್ನ ಬದುಕಲ್ಲಿ ಸಾಕ್ಷಿಯಾದವಳು!!

8-3-2018. 8.41am

ಜೀವಜಲ

ಅಮ್ಮನಿಗಾಗಿ ನಾನಿಲ್ಲ
ಅಮ್ಮ ನನಗಿಲ್ಲ
ಅಮ್ಮಾ ಅನ್ನುವ ಕೂಗು
ಕೂಗಲು
ಅಮ್ಮನೇ ಇಲ್ಲ
ಆದರೂ
ನೆನಪು ಮಾಸುವುದಲ್ಲ
ಕದ ತಟ್ಟಿ
ಬಡಿದೆಬ್ಬಿಸುವ ಪರಿ
ಇನ್ನೂ ಬಿಟ್ಟಿಲ್ಲ
ಸದಾ ಮುಗುಳುನಗುವಮ್ಮ
ನಿನ್ನ ಕಂಗಳ ದೃಷ್ಟಿ
ಆ ನಿಲುವು
ಎದೆ ಬಾಗಿಲ ಬಿಟ್ಟು
ಸರಿದಿಲ್ಲವಲ್ಲ
ಮತ್ತೆ ನೀನಿಲ್ಲವೆಂದು
ಮತ್ಯಾಕೆ ನನಗೀ ತಾಕಲಾಟ?
ಕೇಳುವೆ ಆಗಾಗ
ನನ್ನ ನಾ
ಉಲಿಯುವೆ ಆಗ
ಅದು ಹಾಗೆ ಕಂದಾ
ಮನದ ಬಿಕ್ಕುಗಳಿಗೆ
ಏಕೈಕ ಮುಲಾಮು
ಎಟುಕುವುದೆಲ್ಲರಿಗೂ
ಗಳಿಗೆಗೊಮ್ಮೆ
ಬೇಕೆಂದಾಗಲೆಲ್ಲ
ದಾಹ ತೀರಿಸುವ
ಜೀವಜಲದಂತೆ!

8-11-2017. 9.47am

ತವರ ತುಡಿತ

ಆಷಾಢ ಮಾಸ
ತಂದಿತು ನವೋಲ್ಲಾಸ
ತವರು ಮನೆಯ
ನೆನಪಿನಂಗಳದಲಿ
ಹುಚ್ಚೆದ್ದು ಕುಣಿದಿದೆ ಮನ॥

ಅಕ್ಕರೆಯ ಅಣ್ಣ
ಬರುವ ನನ್ನ ಕರೆದೊಯ್ಯಲು
ಬಗಬಗೆಯ ತಿಂಡಿ ಮಾಡಿ
ಹೊಸಿಲ ಬಾಗಿಲಲಿ
ನಿರೀಕ್ಷೆ ಅಮ್ಮನದು॥

ಅಪ್ಪಯ್ಯನೊಂದಿಗೆ ಹರಟೆ
ಅಜ್ಜಿಯ ಕಥೆಕಟ್ಟು ಬಿಚ್ಚಿ
ತಂಗಿಯರೊಡಗೂಡಿ
ಮನಸೋ ಇಶ್ಚೆ
ಕಾಲ ಕಳೆವ ಸುಸಮಯ॥

ಹಳೆ ಗೆಳತಿಯರೊಂದಿಗೆ ಭೇಟಿ
ಕಷ್ಟ ಸುಃಖದ ಮಾತು ಹಂಚಿ
ಸುತ್ತ ಬೇಣ ಬೆಟ್ಟ ಸುತ್ತಿ
ಅಡಿಕೆತೋಟ ಗದ್ದೆ ಬಿಡದೆ
ಸಖತ್ ದಿನ ಕಳೆಯುವ ಸಮಯ॥

“ಯಮ್ಮನಿಗೆ ಬಾರೆ ಯಮ್ಮನಿಗೆ ಬಾರೆ”
ಊರ ಮಂದಿಗೆಲ್ಲ
ನನ್ನ ಕಂಡರೆ ಬಲು ಇಷ್ಟ
ಊಟ ತಿಂಡಿ ವಗೈರೆ
ಒಂದೊಂದು ಮನೆ ಹೊಕ್ಕಿ ಬರುವೆ॥

ನಲ್ಲಾ ಇದೇ ನೋಡು
ನನ್ನ ತವರಿಗೆ ಹೋಗುವ ಸಂಭ್ರಮ
ಕೊಂಚ ಬಿಡುವು ಮಾಡಿ ಕೊಡು
ಆಷಾಢ ಮುಗಿದೊಡೆ
ನಿನ್ನ ಹತ್ತಿರ ಓಡೋಡಿ ಬರುವೆ॥

ಇಲ್ಲಿರಲು ನೀ ನನಗೆ ಚಂದ
ಅಲ್ಲಿರಲು ನನ್ನ ತೌರೇ ಅಂದ
ಅಮಿತ ಪ್ರೀತಿ ಮನೆ ಮಾಡಿಹುದು
ಎರಡೂ ಮನೆ ಕೀರ್ತಿ ಅರಿತು
ಬಾಳಿ ಬೆಳಗುವೆ ನಾನು॥

2-7-2017. 4.31pm

ಅಪ್ಪನೆಂಬ ಆಪ್ತ

ಇತಿ ಮಿತಿಯಿಲ್ಲದ ಪ್ರೀತಿಯ ತೇರು ಎಂದರೆ ಹೆತ್ತವರು. ಅಲ್ಲಿ ನಾನು ನನ್ನದೆಂಬ ವಾಂಚೆ ತುಂಬಿ ತುಳುಕುವಷ್ಟು ಮೋಹ. ಈ ಮೋಹದ ಪಾಶಾ ಬಂಧನ ವರ್ಣಿಸಲಸಾಧ್ಯ. ಅಲ್ಲಿ ಸದಾ ನೆನಪಿಸಿಕೊಳ್ಳುವ, ನೆನೆನೆನೆದು ಆಗಾಗ ಪುಳಕಿತಗೊಳ್ಳುವ ಅಪ್ಪನೊಂದಿಗಿನ ದಿನಗಳು ಪ್ರತಿಯೊಬ್ಬರ ಜೀವನದಲ್ಲೂ ಅಮೂಲ್ಯ.

ಅದರಲ್ಲೂ ಹೆಣ್ಣು ಮಕ್ಕಳು ಅಪ್ಪನನ್ನು ಅಪ್ಪಿಕೊಳ್ಳುವುದು ಜಾಸ್ತಿ. ಆಗಾಗ ಬಯ್ಯುವ ಅಮ್ಮನಿಗಿಂತ ಅಪ್ಪನ ಕಂಡರೆ ಹೆಣ್ಣು ಮಕ್ಕಳಿಗೆ ಅಮಿತ ಪ್ರೀತಿ. ಅಪ್ಪನಿಗೂ ಅಷ್ಟೆ, ಮಗಳೂ ಅಂದರೆ ಆಯಿತು. ಅವಳೇನು ಮಾಡಿದರೂ ಚಿಕ್ಕಂದಿನಲ್ಲಿ ವಹಿಸಿಕೊಂಡು ಬರುವುದು ಅಪ್ಪ ಮಾತ್ರ. ಅದಕ್ಕೇ ಏನೊ ಮಗಳು ಏನು ಕೇಳುವುದಿದ್ದರೂ ಅಪ್ಪನ ಕೊರಳಿಗೆ ಹಾರವಾಗಿ ಅಪ್ಪಾ ಅದು ಕೊಡಸ್ತೀಯಾ? ಅಲ್ಲಿ ಕರ್ಕೊಂಡು ಹೋಗ್ತೀಯಾ? ಅಪ್ಪಾ ಅಂದರೆ ನನ್ನಪ್ಪಾ! ಎಷ್ಟು ಚಂದ ನನ್ನಪ್ಪಾ. ನಂಗೆ ಅಮ್ಮನಿಗಿಂತ ಅಪ್ಪಾ ಅಂದರೇನೆ ಬಲೂ ಇಷ್ಟ. ಈ ಅಮ್ಮ ಯಾವಾಗಲೂ ಬಯ್ತಾಳೆ, ರೇಗುತ್ತಾಳೆ. ಅದು ಕಲಿ ಇದು ಕಲಿ, ಅಲ್ಲಿ ಹೋಗಬೇಡಾ ಇಲ್ಲಿ ಹೋಗಬೇಡಾ, ಸದಾ ಕಾಟ ಕೊಡ್ತಾಳೆ ಹೀಗೆ ಹಲವಾರು ಕಂಪ್ಲೇಂಟು ಕಂಡವರ ಮುಂದೆ ಮಗಳಿಂದು.

ಇದಕ್ಕೆ ಸರಿಯಾಗಿ ಓದುವ ದಿನಗಳಲ್ಲಿ ಮಕ್ಕಳ ಪಾಠದಲ್ಲಿ ವಕ್ಕಣೆ ; Father is the head of the family. ಏನೊ ಮಾತಿಗೆ ಅಮ್ಮ ತಾನೆ ಮನೆ ನೋಡಿಕೊಳ್ಳುವುದು. ಅವಳು ಈ ಮನೆ head ಕಣೆ ಅಂದರೆ ಮಗಳು ಇಲ್ಲ father is the head of the family; ನಮ್ಮ ಮಿಸ್ ಹೇಳಿದ್ದಾರೆ.

ಅಂದರೆ ಶಾಲೆಯಲ್ಲಿ ಮಿಸ್ ಮನೆಯಲ್ಲಿ ಅಪ್ಪ, ಇದೇ ಮಗಳ ಪ್ರಪಂಚ. ಅಮ್ಮ ಅಡಿಗೆ ಮಾಡೋದಕ್ಕೆ ಮಾತ್ರ ಸೀಮಿತ. ಹೌದು ಮಕ್ಕಳಿಗೆ ಅಪ್ಪ ಅಂದರೆ ಅದೇನೊ ಭಯ,ಭಕ್ತಿ, ಪ್ರೀತಿ,a precious thing ಅನ್ನೊ ತರ ಅವರ ಭಾವನೆ. ಅಪ್ಪ ಹೊರಗಡೆ ಹೋಗುತ್ತಾನೆಂದರೆ ನೂರೆಂಟು ಪ್ರಶ್ನೆಗಳು. ಎಲ್ಲಿಗೆ ಹೋಗ್ತೀಯಾ? ಎಷ್ಟೊತ್ತಿಗೆ ಬರ್ತೀಯಾ? ನಾನೂ ನಿನ್ನ ಜೊತೆ ಬರ್ತೀನಿ. ಬೇಗ ಬರಬೇಕು. ನನಗೇನು ತರ್ತೀಯಾ? ಅಯ್ಯೋ! ಅದೆಷ್ಟು ಪ್ರಶ್ನೆಗಳ ಸುರಿಮಳೆ. ದೂರದಲ್ಲಿ ಅಪ್ಪ ಬರುವಾಗಲೇ ಗುರ್ತಿಸುವ ಅಪ್ಪನ ಬೈಕಿನ ಹಾರನ್, ಓ! ಅಪ್ಪ ಬಂದಾ ಅಂತ ಓಡಿ ಬಂದು ಗೇಟಿನ ಮುಂದೆ ಕಾಯುವ ಕ್ಷಣ, ಒಳಗೆ ಬರಲೂ ಬಿಡದೆ ಅಪ್ಪನ ಕೊರಳ ಸುತ್ತುವ ಎರಡೂ ಕೈಗಳು, ಇರೆ ಚಪ್ಪಲಿ ಬಿಚ್ಚತೀನಿ ತಾಳೆ. ಊಹೂಂ ಮೊದಲು ಮುದ್ದುಗರೆಯಬೇಕು, ಎತ್ತಿಕೊಳ್ಳುವ ವಯಸ್ಸಾದರೆ ಎತ್ತಿಕೊಂಡೆ ಒಳಗಡಿಯಿಡಬೇಕಾಂದಂತಹ ಪರಿಸ್ಥಿತಿ ನಿರ್ಮಾಣ ಮಾಡುವ ಮಗಳೆಂಬ ಅರಗಿಣಿ. ಇದು ಎಷ್ಟು ವಾಸ್ತವವೋ ಅಷ್ಟೆ ಖಟು ಸತ್ಯ ಅಪ್ಪನ ಇರುವಿಕೆ ಮಕ್ಕಳಿಗೆ.

ಬೇಡಿಕೆಗಳು ಏನೇ ಇದ್ದರೂ ಅಪ್ಪನನ್ನೇ ಕೇಳಬೇಕು, ತನ್ನ ಬೇಡಿಕೆಗಳನ್ನು ಈಡೇರಿಸುವ ವ್ಯಕ್ತಿ ಇವನೊಬ್ಬನೇ ಅನ್ನುವಷ್ಟು ಮಕ್ಕಳ ಪುಟ್ಟ ಮನಸ್ಸಿನಲ್ಲಿ ಗಟ್ಟಿ ನೆಲೆಯೂರುವುದು ಈ ಚಿಕ್ಕಂದಿನ ದಿನಗಳಲ್ಲಿ. ಮನೆ ಶಾಲೆ ಆಟ ಪಾಠ ಓದು ಇವುಗಳೊಂದಿಗೆ ದಿನ ಕಳೆದಂತೆ ಮಕ್ಕಳ ಮನಸ್ಸು ವಿಕಾಸವಾದಂತೆಲ್ಲ ಅಲ್ಲಿ ಸಣ್ಣದಾಗಿ ಒಂದು ಹುಡುಕಾಟ ಶುರು. ತನಗೆ ಬೇಕಾದಂತೆ ಅಪ್ಪ ಇದ್ದರೆ ಸರಿ. ಅದಿಲ್ಲವಾದರೆ ನಿಧಾನವಾಗಿ ಅಮ್ಮನತ್ತ ವಾಲುವ ಮಕ್ಕಳ ಮನಸ್ಸು ಅಮ್ಮನ ಮಡಿಲಲ್ಲಿ ತಮ್ಮ ದುಃಖ ಹಂಚಿಕೊಳ್ಳಲು ಶುರು ಮಾಡುತ್ತವೆ. ಹಂತ ಹಂತವಾಗಿ ತಮ್ಮ ಜವಾಬ್ದಾರಿ ಅರಿತು ಓ! ನನಗೆ ಅಪ್ಪಾ ಇಲ್ಲ, ನನ್ನ ಕೆಲಸ ನಾನೇ ಮಾಡಿಕೊಳ್ಳಬೇಕು,ಅಮ್ಮನಿಗೆ ತೊಂದರೆ ಕೊಡಬಾರದು ಹೀಗೆ ಹಲವಾರು ಹಂತಗಳಲ್ಲಿ ಬದಲಾಗುವ ಮಕ್ಕಳು ಕ್ರಮೇಣ ಒಂಟಿತನ, ದೈರ್ಯ ಎರಡನ್ನೂ ಮೈಗೂಡಿಸಿಕೊಳ್ಳಲು ಶುರು ಮಾಡುತ್ತವೆ. ಜವಾಬ್ದಾರಿ ಹೊರುವ ಅಪ್ಪನ ಸ್ಥಾನದಲ್ಲಿ ನಿಂತು ಅಮ್ಮನ ಹೊಣೆ ಹೊರುವಷ್ಟರ ಮಟ್ಟಿಗೆ ಬದಲಾಗಿಬಿಡುತ್ತವೆ ಬೆಳೆದಂತೆ.

ಎಲ್ಲಿಯವರೆಗೆ ಜವಾಬ್ದಾರಿ ಹೊರುವ ಅಪ್ಪ ಇರುತ್ತಾನೊ ಅಂತಹ ಮಕ್ಕಳಿಗೆ ಮನೆಯ ಯಾವ ಕೆಲಸದ ಕಡೆಯೂ ಗಮನವಿರುವುದಿಲ್ಲ, ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಅಮ್ಮ ಏನಾದರೂ ಹೇಳಿದರೆ ಯಾಕೆ ಅಪ್ಪ ಇಲ್ವಾ? ಅವರಿಗೆ ಹೇಳು ಮಾಡಿಕೊಂಡು ಬರುತ್ತಾರೆ. ತಮ್ಮ ಸ್ವಂತ ಕೆಲಸಕ್ಕೂ ಅಪ್ಪನ ಸಹಾಯ ಬೇಕು. ನಿರಾಳ ಮನಸ್ಸು ಅಪ್ಪನಿದ್ದರೆ.

ಇನ್ನು ವಯಸ್ಸಿಗೆ ಬಂದ ಮಕ್ಕಳ ಮದುವೆ ವಿಷಯದಲ್ಲಿ ಸಂಪೂರ್ಣ ಜವಾಬ್ದಾರಿ ಹೊರುವ ಈ ಅಪ್ಪ ಅಲೆದಲೆದು ತನ್ನ ಮಕ್ಕಳಿಗೆ ಯೋಗ್ಯ ಸಂಬಂಧ ಹುಡುಕಿ ಮದುವೆ ಮಾಡಿ ಸರಿಯಾದ ನೆಲೆ ಊರಲು ಅನುವು ಮಾಡಿಕೊಟ್ಟು ಅವರ ಸಂತೋಷದಲ್ಲಿ ತಾನೂ ತನ್ನ ಹೆಂಡತಿಯೊಂದಿಗೆ ಸುಃಖ ಕಾಣಲು ಕಾರಣಕರ್ತ ಈ ಅಪ್ಪನೆಂಬ ಅಭಿವ್ಯಕ್ತಿ. ಮಕ್ಕಳ ವಿಷಯದಲ್ಲಿ ಹೆತ್ತವರದು ನಿಸ್ವಾರ್ಥ ಸೇವೆ, ಕರ್ತವ್ಯ ಕೂಡಾ. ಆದರೆ ಅಪ್ಪನನ್ನು ಕಳೆದುಕೊಂಡ ಮಕ್ಕಳ ಭವಿಷ್ಯ ಅಯೋಮಯ. ಅಲ್ಲಿ ತಾಯಿ ತನ್ನ ಜವಾಬ್ದಾರಿ ಅದೆಷ್ಟು ಸಮರ್ಥವಾಗಿ ನಿಭಾಯಿಸಬಹುದು! ನಿಜಕ್ಕೂ ವಿಚಾರ ಮಾಡಬೇಕಾದ ಸಂಗತಿ. ಸದಾ ಒಂದಿಲ್ಲೊಂದು ಜೀವನದ ಕಷ್ಟ ನಷ್ಟಗಳಿಗೆ, ಬರುವ ಸಮಯ ಸಂದರ್ಭದಲ್ಲಿ ಧೈರ್ಯದಿಂದ ಮುನ್ನುಗ್ಗಿ ಮಕ್ಕಳಿಗೆ ರಕ್ಷಣೆ ಕೊಡುವ ಅಪ್ಪ ಸಮಾಜದಲ್ಲಿ ಗೌರವ ಸ್ಥಾನಕ್ಕೆ ಅಣಿಗೊಳಿಸುವ ಸಿಂಧು.

ಅಪ್ಯಾಯಮಾನವಾದ ಅಪ್ಪ ಎಲ್ಲ ಮಕ್ಕಳಿಗೂ ಬೇಕು. ಆದರೆ ಇಂತಹ ಸ್ಥಾನ ತುಂಬುವ ಅಪ್ಪ ಎಲ್ಲರಿಗೂ ಸಿಗಲು ಸಾಧ್ಯವೆ? ಸಿಕ್ಕರೂ ಅರ್ಧದಲ್ಲೆ ಕಳೆದುಕೊಳ್ಳುವ ಮಕ್ಕಳು ಅನೇಕ. ಆಗ ಅವರ ಮನಸ್ಥಿತಿ ಹೇಗಿರಬಹುದು? ಮುಗ್ಧ ಮನಸ್ಸು ಈ ಆಘಾತ ಹೇಗೆ ತಡೆದುಕೊಳ್ಳಬಹುದು? ಆ ಮಗು ಅದೆಷ್ಟು ಕನಸುಗಳನ್ನು ಅಪ್ಪನ ಸುತ್ತ ಹೆಣೆದುಕೊಂಡಿರುತ್ತೊ ಏನೊ ಪಾಪ! ಹೇಳಿಕೊಳ್ಳಲೂ ಆಗದೆ ದುಃಖವನ್ನು ತನ್ನೊಳಗೇ ಅದುಮಿ ಅದುಮಿ ಕಣ್ಣೀರಿಡುವ ನತದೃಷ್ಟ ಮಕ್ಕಳು ; ಅವುಗಳ ಬೇಗುದಿಗೆ ತಕ್ಕಂತೆ ಸಾಂತ್ವನ ಹೇಳಲಾಗದ ಅಮ್ಮನ ಸ್ಥಿತಿ. ಒಂದಿಲ್ಲೊಂದು ಸಂದರ್ಭದಲ್ಲಿ ಸದಾ ನೆನಪಿಸಿಕೊಂಡು ನನ್ನಪ್ಪಾ ಹಾಗೆ ಹೀಗೆ ಎಂದು ನೆನಪಿಸಿಕೊಂಡು ಹೆಮ್ಮೆ ಪಡುವುದು ದುಃಖ ಪಡುವುದು ನಡೆದೇ ಇರುತ್ತದೆ.

ನಿಜ ಈ ಅಪ್ಪನೆಂಬ ಅಪ್ಯಾಯಮಾನವಾದ ವ್ಯಕ್ತಿ ಎಲ್ಲರಿಗೂ ಬೇಕು. ಮನೆಯ ಜವಾಬ್ದಾರಿ ಹೊತ್ತು ಮಕ್ಕಳ ಜೀವನಕ್ಕೆ ಅಡಿಪಾಯವಾಗಿ ನಿಲ್ಲುವ ಅಪ್ಪ ಅವನ ಸ್ಥಾನ, ಅವನ ಪ್ರೀತಿ, ವಾತ್ಸಲ್ಯ ಬೇರೆ ಯಾರಿಂದಲೂ ಸಿಗಲು ಸಾಧ್ಯವೇ ಇಲ್ಲ. ಅಪ್ಪಾ ಅಂದರೆ ಅಪ್ಪನೆ.

ಈ ದಿನ ವಿಶ್ವ ಅಪ್ಪಂದಿರ ದಿನ. ಇಂತಹ ಪ್ರೀತಿ ಎಲ್ಲ ಮಕ್ಕಳಿಗೂ ಸದಾ ಸಿಗಲೆಂದು ಹಾರೈಸೋಣವೆ?

17-6-2017. 9.53pm