ಧನ್ಯವಾದಗಳು ಅವಧಿ🙏 ಮಸಲತ್ತು ಮಾಡುವ ಕವಿತೆಗಳಿಗೆ.. | ಅವಧಿ । AVADHI

https://avadhimag.com/%e0%b2%ae%e0%b2%b8%e0%b2%b2%e0%b2%a4%e0%b3%8d%e0%b2%a4%e0%b3%81-%e0%b2%ae%e0%b2%be%e0%b2%a1%e0%b3%81%e0%b2%b5-%e0%b2%95%e0%b2%b5%e0%b2%bf%e0%b2%a4%e0%b3%86%e0%b2%97%e0%b2%b3%e0%b2%bf%e0%b2%97%e0%b3%86/

ಇದುವರೆಗೆ “ಅವಧಿ”online ತಾಣದಲ್ಲಿ ನಾನು ಬರೆದ ಅರವತ್ತಕ್ಕೂ ಹೆಚ್ಚು ಬರಹಗಳು ಪ್ರಕಟವಾಗಿದ್ದು ಅತ್ಯಂತ ಹೆಮ್ಮೆಯ ವಿಷಯ ನನಗೆ, ಅಷ್ಟೇ ಖುಷಿ ನನ್ನ ಬರಹಗಳು ಪ್ರಕಟವಾದಾಗ ಕುಣಿದಾಡುವಷ್ಟು. 

ಅವಧಿಯ ರೂವಾರಿ ಶ್ರೀ Gn Mohan  ಸರ್ ಯಾರೆಂಬುದೇ ಗೊತ್ತಿಲ್ಲದ ನನಗೆ ಈ ಬರಹಗಳು ಅವರ ಮೆಚ್ಚುಗೆಯ ಪ್ರೋತ್ಸಾಹದ ನುಡಿಗಳು ” ಪದಗಳನ್ನು ಜೋಡಿಸುವ ಶೈಲಿ ಓದುಗರ ಮೆಚ್ಚುಗೆ ಗಳಿಸುತ್ತದೆ” ಹಿಂದೊಮ್ಮೆ ಮಹಿಳಾ ದಿನಾಚರಣೆಯ ದಿನ ಅವರಿಂದ ಶುಭಾಶಯಗಳೊಂದಿಗೆ ಕೇಳುವಂತೆ ಮಾಡಿತು.

ರಂಗಶಂಕರದಲ್ಲಿ ಮೊದಲ ಭೇಟಿಯಲ್ಲಿ “ಎಷ್ಟು ಕವನ ಬರೆಯುತ್ತಾರೆ ನಿಮ್ಮಮ್ಮ, ನೀವು ಬಚಾವ್. ಆದರೆ ನಾನು ಎಲ್ಲ ಓದುತ್ತೇನೆ” ಮಗಳೊಂದಿಗೆ ಮಾತು.   ಹಾಗೆ “ಕವನದ ಹೊರತಾಗಿ ಬೇರೆ ಬೇರೆ ಬರಹಗಳನ್ನು ಬರೆಯಿರಿ” ಎಂಬ ಪ್ರೋತ್ಸಾಹದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ. 

ನಿಜಕ್ಕೂ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವ ಸರ್ ಗುಣಕ್ಕೆ ನಾನು ಚಿರಋಣಿ.  ಅವಧಿಯಲ್ಲಿ ಪ್ರಕಟವಾಗುವ ಕವನಗಳನ್ನು ಓದುತ್ತಾ ಕವನಗಳನ್ನು ಬರೆದಿದ್ದೂ ಇದೆ.

ಹಾಗೆ ನಿನ್ನೆ ದಿನ ನನ್ನ ಮತ್ತೊಂದು ಕವನ ಅವಧಿಯಲ್ಲಿ ಪ್ರಕಟವಾಗಿದೆ.  ಸರ್ ಅನಂತ ಧನ್ಯವಾದಗಳು ತಮಗೂ ಅವಧಿಯ ಬಳಗಕ್ಕೂ.

ಹದಿನಾಲ್ಕು ವರ್ಷಗಳ ಸುಧೀರ್ಘ ಪಯಣದಲ್ಲಿ ಅನೇಕ ಕವಿಗಳಿಗೆ ಪ್ರೋತ್ಸಾಹ ನೀಡುತ್ತಾ ಡಿಜಿಟಲ್  ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿ ಪಡೆದ ಅವಧಿ ತಮ್ಮ “ಬಹುರೂಪಿ” ಪ್ರಕಾಶನದ ಮೂಲಕ ಅನೇಕ ಕವಿಗಳ ಪುಸ್ತಕ ಪ್ರಕಟಿಸುತ್ತಿರುವುದು ನಿಜಕ್ಕೂ ಅದ್ಭುತ ಸಾಧನೆಯೇ ಸರಿ. 

ಈಗ ಮತ್ತೊಂದು ಸಾಧನೆ “Bahuroopi book hub” ಪುಸ್ತಕಗಳ ಲೋಕ ಅನಾವರಣ ಬೆಂಗಳೂರಿನಲ್ಲಿ! ಬನ್ನಿ , ಓದುಗರಿಗೆ ರಸದೌತಣ ನೀಡುವ ತಾಣವೆಂದು ಕೇಳ್ಪಟ್ಟೆ. ಅಭಿನಂದನೆಗಳು ಸರ್ 🌷

ನಮ್ಮೆಲ್ಲರ ಮೆಚ್ಚಿನ ಅವಧಿ ಇನ್ನಷ್ಟು ಮತ್ತಷ್ಟು ಮೊಗೆವಷ್ಟು ಬರಹಗಳನ್ನು ಪ್ರಕಟಿಸುತ್ತ ಮೇರು ಮಟ್ಟದಲ್ಲಿ ಸದಾ ಮಿನುಗಲಿ, ಎಲ್ಲರ ಮನೆ, ಮನದ ಮಾತಾಗಲಿ ಎಂಬುದು ನನ್ನ ಒಡಲಾಳದ ಆಶಯ, ಹಾರೈಕೆ.  ಸರ್ ನಮಸ್ಕಾರ 🙏🌷

15-2-2021. 3.17pm

ಉದ್ದಂಡ ನಮಸ್ಕಾರ; ಸುಟ್ ಚಾಕ್ಕೆ.. | | ಅವಧಿ । AVADHI

https://avadhimag.com/%e0%b2%89%e0%b2%a6%e0%b3%8d%e0%b2%a6%e0%b2%82%e0%b2%a1-%e0%b2%a8%e0%b2%ae%e0%b2%b8%e0%b3%8d%e0%b2%95%e0%b2%be%e0%b2%b0-%e0%b2%b8%e0%b3%81%e0%b2%9f%e0%b3%8d-%e0%b2%9a%e0%b2%be%e0%b2%95%e0%b3%8d/

ಕಳೆದುದು ಸಿಕ್ಕಿದಾಗ….!!??
ನನ್ನ ಮೊದಲ ಪುಟ್ಟ ಬರಹ “ಅವಧಿ”ಯಲ್ಲಿ ಪ್ರಕಟವಾಗಿದ್ದು ನೆಚ್ಚಿನ ಪ್ರೇಮ ಕವಿ ಜಯಂತ್ ಕಾಯ್ಕಿಣಿಯವರ ” ಪಾರ್ಲರ್ ಕಿಟಕಿ” ಕಥೆಗೆ ನಿಮ್ಮ ಕಲ್ಪನೆಯಲ್ಲಿ ಕಥೆ ಮುಂದುವರೆಸಬಹುದು ಎಂದು ಅವಧಿ ಓದುಗರಿಗೆ ಅವಕಾಶ ಕಲ್ಪಿಸಿಕೊಟ್ಟಾಗ ನಾನೂ ಬರೆದಿದ್ದೆ.


ಈ ಬರಹ ಸಿಗದೇ ಬೇಸರವಾಗಿತ್ತು. ಕಾರಣ “ಮೊದಲು” ಅನ್ನುವುದು ಬಹಳ ವಿಶೇಷತೆ ಪಡೆದಿರುತ್ತದೆ ಪ್ರತಿಯೊಬ್ಬರ ಜೀವನದಲ್ಲಿ. ಅದೂ ಕಾಯ್ಕಿಣಿಯವರ ಬರಹ ಓದಿ ಅಲ್ಲೇ ಕಮೆಂಟಿನಲ್ಲಿ ಆಗಲೇ ಗೀಚಿದ್ದಾಗಿತ್ತು. ಅವರ ಬರಹ ಓದುವುದೇ ಒಂದು ಖುಷಿ ಮನಸ್ಸಿಗೆ. ನೀವೂ ಬರೆಯಿರಿ ಎಂಬ ಅವಧಿಯ ಪ್ರೋತ್ಸಾಹ ಕೂಡಲೇ ಗೀಚುವಂತಾಗಿದ್ದು ಮರುಭೂಮಿಯಲ್ಲಿ ನೀರು ಸಿಕ್ಕಿದಷ್ಟು ಸಂತೋಷ ಆಗಿದ್ದು ಎಲ್ಲವೂ ಅವಧಿಯಿಂದ. ಅನೇಕ ಲೇಖಕರು ಈ ಕಥೆಯನ್ನು ಅವರವರ ಕಲ್ಪನೆಯಲ್ಲಿ ಮುಂದುವರಿಸಿದ್ದು ಅವರಲ್ಲಿ ನಾನೂ ಸೇರಿಕೊಳ್ಳುವೆನೆಂಬ ಕಲ್ಪನೆ ಕೂಡಾ ಇರಲಿಲ್ಲ.


ಅವಧಿಯಿಂದ “ಬರಹ ಪ್ರಕಟಿಸುತ್ತೇವೆ. ನಿಮ್ಮ ಫೋಟೋ ಪರಿಚಯ ಕಳಿಸಿ” ಎಂಬ ಮೇಲ್ ನೋಡಿದಾಗ ಅಂದು ಮೈ ಮನ ಥದಾಂಗು ಥಕಧಿಮಿ ತೋಂ! ಇಂದಿಗೂ ಇದೇ ಸಂತೋಷ ಅವಧಿಯಲ್ಲಿ ನನ್ನ ಬರಹಗಳು ಪ್ರಕಟವಾದಾಗ! ಹೆಜ್ಜೆ ಹಾಕೋದು ಬಿಟ್ಟಿಲ್ಲ.


ಆದರೆ ಈ ಬರಹ ಸಿಗದೇ ನಿರಾಶಳಾಗಿದ್ದೆ. ಏಕೆಂದರೆ ಈಗಿನಂತೆ ಅವಧಿಯಲ್ಲಿ ನನ್ನ ಬರಹಗಳು ಪ್ರಕಟವಾದಾಗ ನನ್ನ ಬ್ಲಾಗಿನಲ್ಲಿ ಲಿಂಕ್ ಸಹ ಸೇರಿಸುತ್ತಿರಲಿಲ್ಲ. ಬರಹವನ್ನೂ Copy ಮಾಡಿಕೊಂಡಿರಲಿಲ್ಲ. ಇಂದು ಅವಧಿಯಲ್ಲಿ ಅದೇ ಬರಹ ಆಕಸ್ಮಿಕವಾಗಿ ಸಿಕ್ಕಾಗ ಮತ್ತದೇ ನೆಗೆತ ಮನಸಿನದು! ಬಹಳ ಬಹಳ ಸಂತೋಷವಾಗುತ್ತಿದೆ.

ಆದರೆ ಒಂದು ಬೇಜಾರು ಅಂದರೆ ಗೋಕರ್ಣದ ಕೋಟಿ ತೀರ್ಥದ ಕಟ್ಟೆಯ ಮೇಲೆ ಕುಳಿತ ಜಯಂತರ ಫೋಟೋ ಎಲ್ಲೂ ಸಿಗ್ತಿಲ್ಲ. ಅವರ ಕಥೆಯ ಜೊತೆಗೆ ಅವಧಿಯಲ್ಲಿ ನೋಡಿದ ಫೋಟೋ ಇಷ್ಟು ವರ್ಷಗಳಾದರೂ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ನೆನಪಿದೆ ಆದರೆ ಆ ಫೋಟೋನೇ ಇಲ್ವಲ್ಲಾ! ಸರಿ ಅವರು ಬರೆದ ಕಥೆಯ ಜೊತೆ ನನ್ನ ಪುಟ್ಟ ಬರಹ ನೆನಪಿಗಾಗಿ ಇಲ್ಲಿ ದಾಖಲಿಸಿದ್ದೇನೆ. ನೀವೂ ಓದಿ.

************


ಪಾರ್ಲರ್ ಕಿಟಕಿಯಿಂದ’ ಜಯಂತ್ ಕಾಯ್ಕಿಣಿ ಇಣುಕಿದರು..

make up kit

ಬಹು ಅಂತಸ್ತಿನ ಕಟ್ಟಡ ಅದು


ಅದರ ನಾಲ್ಕನೆ ಅಂತಸ್ತಿನಲ್ಲಿದೆ ಈ ಬ್ಯೂಟಿಪಾರ್ಲರು.

ಇದಕ್ಕೊಂದೇ ದೊಡ್ಡ ಕಿಟಕಿ.

ಕೆಳಗೆ ರಸ್ತೆಯಲ್ಲಿ ನಡೆವ ಜನ ಹೆಮ್ಮೆಯಿಂದ ಈ ಕಟ್ಟಡದ ಎತ್ತರ ನೋಡುತ್ತ ತಮ್ಮ ವೇಗವನ್ನು ಕಳೆದುಕೊಳ್ಳುತ್ತಿರುವಾಗಲೇ ಇಲ್ಲಿ ಉತ್ಕಂಠಿತ ಪೋರಿಯೊಬ್ಬಳ ಆರ್ತಮುಖಕ್ಕೆ ಬ್ರೈಡಲ್ ಮೇಕಪ್ ನಡೀತಿದೆ.

ಇಲ್ಲಿಂದ ನೇರ ಮದುವೆ ರಿಜಿಸ್ಟ್ರೇಶನ್ ಆಫೀಸಿಗೆ ಓಡಲಿದ್ದಾಳೆ ಅವಳು… ಕೆಳಗೆ ಬೈಕಿನ ಮೇಲೆ ಕೂತೇ ಕಾಯುತ್ತಿರುವ ಹೊಸ ಶರ್ಟಿನ ಉದ್ವಿಗ್ನ ಮದುಮಗನೊಂದಿಗೆ.

ತನ್ನ ಧೈರ್ಯಕ್ಕೆ ತಾನೇ ಹೆದರಿದಂತಿದ್ದಾನೆ ಅವನು. ಅವನನ್ನು ಸಂತೈಸುವ ಶಕ್ತಿ ಗೋಡೆಯ ಯಾವ ಬೃಹತ್ ಪೋಸ್ಟರುಗಳಿಗೂ ಈಗ ಇಲ್ಲ!

ಇದ್ದಲ್ಲೆ ಮತ್ತೆ ಮತ್ತೆ ಹಿಂದಿರುಗಿ ನೋಡುತ್ತಿದ್ದಾರೆ ಇಬ್ಬರೂ, ಅಗೋಚರ ಸೈನ್ಯವೊಂದು ಬೆನ್ನಟ್ಟಿ ಬರುತ್ತಿರುವಂತೆ.

ಅಲ್ಲಾಡಬೇಡಾ ಹಾಳಾಗುತ್ತದೆ!

flying manನಿನ್ನ ಈ ಹುಬ್ಬಿನ ಇರಾದೆಗೆ ಕುಣಿಯಬೇಕು ನಿನ್ನ ಹೀರೋ ನಾಳೆಯಿಂದ.. ಹಾಗೆ ಚೂಪಾಗಿಸುತ್ತೇನೆ. ಅದನ್ನು.. ಅಲ್ಲಾಡಬೇಡಾ-ಬೆದರಿಸುತ್ತಿದ್ದಾಳೆ ಬ್ಯೂಟಿಶಿಯನ್-ಅಶೋಕ ವನದಲ್ಲಿ ಸೀತೆಯ ಪಕ್ಕ ಕೂತ ತಾಟಕಿಯಂತೆ…


ಹೆರಿಗೆ ಕೋಣೆಯಲ್ಲಿ ಹೆರಿಗೆಗೆ ತಳ್ಳುವ ಆಯಾಳಂತೆ ‘ಹೆದರಬೇಡ… ನೋಡು… ನೋಡು ಈ ಕಿಟಕಿಯಿಂದ ದೂರದ ಸಿಟಿ ಮಾರ್ಕೆಟ್ ಕಾಣುತ್ತದೆ. ರಿಲ್ಯಾಕ್ಸ್.. ರಿಲ್ಯಾಕ್ಸ್ …’ ಅನ್ನುತ್ತಾಳೆ.


ಇಂಥದೇ ಒಂದು ಬಿಸಿಲಿನ ಅಪವೇಳೆಯಲ್ಲಿ ಕದ್ದು ಪಿಕ್ಚರಿಗೆ ಹೋದಂತೆ, ಇಂದು ಇನ್ನೇನು ಹದಿನೈದು ನಿಮಿಷದಲ್ಲಿ ತನ್ನ ಹೊಸದೊಂದು ದೈನಿಕ ಧಾರಾವಾಹಿಯಲ್ಲಿ ಕಾಲಿಡಲಿದ್ದಾಳೆ ಇವಳು. ಇಲ್ಲ ಈ ಪಾರ್ಲರಿನ ಈ ಯಾವ ಸಾಲುಗನ್ನಡಿಗಳಿಗೂ ಅವಳನ್ನು ಸಂತೈಸುವ ಶಕ್ತಿ ಇಲ್ಲ. ಅವು ಗ್ಯಾಸ್ಸ್ಟವ್, ಹ್ಯಾಂಗರು, ಬಕೆಟ್, ಹಿಂಡಿಟ್ಟ ಬಟ್ಟೆಗಳನ್ನು ಅಡಗಿಸಿಡುವಲ್ಲೇ ನಿರತವಾಗಿವೆ. ಒಂದೊಂದು ಕನ್ನಡಿಯಲ್ಲೂ ಒಂದೊಂದು ನಸುಗತ್ತಲ ಬಿಡಾರ. ಅಗುಳಿ ನಿಲ್ಲದ ಬಾಗಿಲು. ಪುಟ್ಟ ಪ್ಲಾಸ್ಟಿಕ್ ಕರಂಡಕದಲ್ಲಿ ಸುರುಳಿ ಸುತ್ತಿ ಕೂತಿರುವ ಮಂಗಳಸೂತ್ರದ ತುಂಬ ಸವೆದ ಸೇಫ್ಟಿ ಪಿನ್ನುಗಳು. ಈ ಪಾರ್ಲರ್ನ ಈ ದೊಡ್ಡ ಒಂಟಿ ಕಿಟಕಿಯಿದೆಯಲ್ಲ, ಅಲ್ಲಿಂದ ಬಗ್ಗಿ ನೋಡಿದರೆ, ಬಲ್ಲವರು ‘ಸಮಾಜ’ ಅಂತ ಕರೀತಾರಲ್ಲ, ಅದು ಬೀದಿಯಲ್ಲಿ ಕೆಳಗೆ ಓಡಾಡುವುದನ್ನು ನೋಡಬಹುದು. ಬಲ್ಲವರ ಪ್ರಕಾರ ಇದು ಹೊರಗೇ ಇರುತ್ತದೆ. ಬಾಗಿಲು ಹಾಕಿಕೊಂಡರೆ ನಿಂತೇ ಹೋಗುವ ಟ್ರಾಫಿಕ್ ಸದ್ದಿನಂತೆ.. ಅಥವಾ

‘ಪುಕ್ಕಟೆ ಫೇಶಿಯಲ್ ಮಾಡ್ತೇವೆ ಬಾರೋ…’ ಎಂದರೂ ಎಂದೂ ಒಳಗೆ ಬರದೆ ಬೀದಿಯಲ್ಲೆ ಆಡಿಕೊಂಡಿರುವ ಚಂದ್ರನಂತೆ…


ಅರೇ! ಮನೇನೂ ಅಲ್ಲೆಲ್ಲೋ ದೂರದಲ್ಲಿದೆ. ಕನ್ನಡಿಯಾಚೆಯ ಕನ್ನಡಿಯ ಬೆನ್ನಲ್ಲಿ…ಸಮಾಜವೂ ಹೊರಗಿದೆ ಅಲ್ಲೆಲ್ಲೊ… ಜಿನಸಿ ತರಕಾರಿ ಚೌಕಾಶಿ ಮಾಡುತ್ತ, ವಾರ್ಡುಗಳ ಹೊರಗೆ, ಆಪರೇಶನ್ ಥಿಯೇಟರಿನ ಹೊರಗೆ, ರೇಷನ್ ಅಂಗಡಿಯ ಹೊರಗೆ… ಕಾಯುತ್ತ… ಹಾಗಾದರೆ ಇಲ್ಲೇನಿದೆ? ಕೇವಲ ಪ್ರಸಾದನ ಸಾಮಗ್ರಿ! ಬಣ್ಣದ ಹೇರ್ ಡೈ, ಕರ್ಲಿಂಗ್ ಬ್ರಶ್ಶು, ರೋಮಗಳ ಹೆರೆದು ನಾಜೂಕುಗೊಳಿಸುವ ನಯದ ತಂತ್ರ. ಒಂದು ನಿರಂತರ ಶಾಶ್ವತ ಮಹಾ ದೈನಿಕ ಧಾರಾವಾಹಿಯ ಪಾತ್ರಗಳ ಸಜ್ಜು ಕೋಣೆ ಇದು… ಡೈಲಾಗೇ ಸಿಕ್ಕಿಲ್ಲವಲ್ಲ ಇನ್ನೂ….

‘ಸೊಪ್ಪು, ಸೊಪ್ಪು, ಹರಿವೇ ಸೊಪ್ಪು’-ಯಾರ ಡೈಲಾಗನ್ನು ಯಾರೋ ಕೂಗುತ್ತಿದ್ದಾರೆ ದೂರದಲ್ಲಿ…

‘‘ನಮ್ಮ ಯಜಮಾನ್ರಿಗೆ ಬೆಳಗ್ಗೆ ಮಾಡಿದ ಪಲ್ಯ.. ರಾತ್ರಿ ಆಗೋದೇ ಇಲ್ಲ’’ ಯಾರು ಬರೆದರು ಈ ದಡ್ಡ ಡೈಲಾಗನ್ನು! ತಮ್ಮ ತಮ್ಮ ಮಡದಿಯರಿಂದ ಯಜಮಾನ್ರು ಅಂತ ಕರೆಸಿಕೊಂಡು ಹೆಮ್ಮೆಪಡುವ ಮೂರ್ಖ ಪುರುಷರು. ಅವರನ್ನು ಹಾಗೆ ಕರೆದೇ ತಮ್ಮನ್ನು ಒಡೆತನದ ವಸ್ತುಗಳನ್ನಾಗಿಸಿ ಗಿರವಿಗಿಟ್ಟುಕೊಂಡ ಮೂಕ ಮಹಿಳೆಯರು -ಇರೋತನಕ- ಈ ‘ಪವರ್ ಕಟ್’ ತಪ್ಪಿದ್ದಲ್ಲ ಬಿಡಿ. ಹೀಗಾಗಿ ಲಿಫ್ಟ್ ನಡೀತಿಲ್ಲ ಈಗ.

coinsನಾಲ್ಕು ಮಹಡಿ ಹತ್ತಿ ಬಂದಾಗ, ಬಂದವರ ಕತ್ತಿನ ಮೇಲೆ ಮುಖವೇ ಇರುವುದಿಲ್ಲ. ಇನ್ನು ಬ್ಲೀಚಿಂಗ್ ಎಲ್ಲಿಂದ ಮಾಡೋದು.


ನೋಡಿ, ಈ ನಿತ್ಯ ಕೆಲಸದ ಪುಟ್ಟ ಪೋರ, ಬಾಲ ಕಾರ್ಮಿಕ ಈ ವಿಶಾಲ ಕಿಟಕಿಯ ಗಾಜುಗಳನ್ನು ಹೇಗೆ ಎಚ್ಚರದಿಂದ ಹೊರಗೆ ಬಾಗಿ ಒರೆಸುತ್ತಿದ್ದಾನೆ…


ಈ ರೆಡೀ ಮದುಮಗಳು ‘ಏಯ್ ಬಗ್ಗಬೇಡಾ ಹುಷಾರು’ ಎಂದು ಎಚ್ಚರಿಕೆ ನೀಡುತ್ತಿದ್ದಾಗಲೇ ಒಂದೇ ಕೈಯಿಂದ ಬಿಲ್ಲಿನಂತೆ ಬಾಗಿ ಬಾಗಿ ಬಳುಕಿ ಆತ ಉಜ್ಜುತ್ತಿದ್ದಾಗಲೇ… ‘ಯಪ್ಪಾ! ಅಂಥ ಅವನ ಆರ್ತ ಉದ್ಗಾರಕ್ಕಿಂತ ಹಗುರಾಗಿ ಅವನಿಗರಿವಾಗುವ ಮುನ್ನವೇ… ಅವನ ಜೇಬಿನಿಂದ ಒಂದು ರೂಪಾಯಿಯ ನಾಣ್ಯವು ಜಾರಿ ಸ್ಲೊ ಮೋಶನ್ನಲ್ಲಿ ಕೆಳಗೆ… ಒಂದೊಂದೇ ಅಂತಸ್ತು ದಾಟುತ್ತ… ಕೆಳಗಿನ ಬೀದಿಯಲ್ಲಿ ಚಲಿಸುತ್ತಿರುವ ಸಮಾಜದ ಮೇಲೆ… ಇನ್ನೇನು… ಬೀಳುತ್ತಿದೆ… ಅಷ್ಟರಲ್ಲಿ ಅದನ್ನೇ ದಿಟ್ಟಿಸಿದ ಪೋರ ದಿಗ್ಗೆಂದು ಈ ಕಡೆ ಚಿಮ್ಮಿ, ಒಂದೇ ಉಸುರಿನಲ್ಲಿ ಬಿಟ್ಟ ಬಾಣದಂತೆ.. ನಾಲ್ಕು ಅಂತಸ್ತಿನ ಮೆಟ್ಟಿಲುಗಳನ್ನು ಸೂಪರ್ಮ್ಯಾನ್ನಂತೆ.. ಓಡುತ್ತ ದಾಟಿ ಕಣ್ಣಾಚೆಯ ಆ ಸಮಾಜವೆಂಬ ಸಮುದ್ರದ ಅಲೆಗಳಲ್ಲಿ ಈಜಿ ಆಳದಿಂದ, ಅಪಾರ ಕೌಶಲ್ಯದಿಂದ ಆ ನಾಣ್ಯವನ್ನು ಮುತ್ತಿನಂತೆ ಹೆಕ್ಕಿ ಮತ್ತೆ ನಾಲ್ಕೂ ಅಂತಸ್ತನ್ನು… ಬೆಳಕಿನ ವೇಗದಲ್ಲಿ ಏರಿ ಎದುರು ನಿಂತು ಪುಟ್ಟ ದೇವರಂತೆ ಅಂಗೈ ಚಾಚಿ ನೋಡಿ- ಎಂದು ತೋರಿಸಿ ಏದುಸಿರಲ್ಲಿ ನಗುತ್ತಿದ್ದಾನೆ. ಎಲ್ಲವನ್ನು, ಬಲ್ಲವರೇ, ಅಂದಾಜಿದ್ದರೆ, ಧೈರ್ಯವಿದ್ದರೆ ಹೇಳಿ ನೋಡುವಾ-ಈ ನಾಣ್ಯದ ಬೆಲೆಯೆಷ್ಟು? *************


Sangeeta Kalmane on February 22, 2016 at 3:06 PM


ಆಹಾ!ಅದೆಷ್ಟು ಸುಂದರ ಅವಳ ಅವಸ್ಥೆ. ಓದಿ, ನಡೆದ ಹಳೆ ಸತ್ಯ ಘಟನೆ ನೆನಪಿಗೆ ಬಂತು. ಈ ಕಥೆ ಮುಂದುವರೆಸುವ ಸಣ್ಣ ಪ್ರಯತ್ನ. ————–

ಲಂಗು ಲಗಾಮಿಲ್ಲದ ಯೌವ್ವನದ ಹುಚ್ಚು ಹೊಳೆಯಲ್ಲಿ ಅಂಟಿಕೊಂಡ ಮನದನ್ನನ ವಿಷಯ ಮುಚ್ಚಿಟ್ಟು ಮನೆಯವರ ಒತ್ತಾಯಕ್ಕೆ ಮಣಿದು ಅವರು ತೋರಿದ ಹುಡುಗನ ಜೊತೆ ಎಂಗೇಜಮೆಂಟ ಮಾಡಿಕೊಂಡು ಕಣ್ ತಪ್ಪಿಸಿ ಕಾಲಿಗೆ ಬುದ್ಧಿ ಹೇಳಿ ಸುಯ್ಯ…. ಅಂತ ಇನಿಯನ ಬೈಕ್ ಹತ್ತಿ ಬಂದೆ ಬ್ಯೂಟಿಪಾಲ೯ರ ಮಾಯಾಂಗನೆ ಕೈಯಲ್ಲಿ ತಗಲಾಕೊಂಡೆ.


ಕುಚಿ೯ ಆಕಡೆ ಈ ಕಡೆ ತನಗೆ ಬೇಕಾದಂತೆ ತಿರುಗಿಸುತ್ತಾಳೆ ನನ್ನ ಗಿರಗಿಟ್ಟಿ ಗೊಂಬೆ ಮಾಡ್ತಿದ್ದಾಳೆ. ಮೊನ್ನೆ ತಾನೆ ರೆಡಿ ಮಾಡಿದ್ರಲ್ಲ ಎಲ್ಲ ಸೇರಕಂಡು ಪಟ್ಟದ ಗೊಂಬೆ ಅಂದ್ರು ಕಂಡವರು. ಈಗೇನು ಅನ್ನಬಹುದು. ಎಲ್ಲರ ಮುಖ ಬಾಡಿಹೋದ ಹರಿವೆ ಸೊಪ್ಪಾಗಿರಬೇಕು. ನನಗೊ ಕಾಲೆಲ್ಲ ತರ ತರ ನಡುಗುತ್ತಿದೆ. ಓಡಿ ಹೋಗಿ ರಿಜಿಸ್ಟರ್ ಮ್ಯಾರೇಜು…. ಅಯ್ಯೋ ಅಮ್ಮ, ಇರಮ್ಮ ನಿನ್ನ ಹುಬ್ಬು ಒಳ್ಳೆ ಬಾಣದಾಗೆ ಮಾಡಿ ಇನಿಯನ ಕಣ್ ಸೆಳೆಯೋದು ಬ್ಯಾಡ್ವಾ.


ಕಿರುಗಣ್ಣು ಹಾಯಿಸಿದಾಗೊ ಕಾಣೊ ಆ ಹುಡುಗನ ಕೈನಲ್ಲಿ ಸಿಕ್ಕಿರೋದು ನಾಕಾಣೆ.


ಇಷ್ಟು ಪರದಾಡೊ ಬದುಕಿಗೆ ಮಾಡಿದ ಪಾಪ ತೊಳಿಲಿ ಅಂತ ಕೋಟಿ ತೀಥ೯ದಲ್ಲಿ ಮಿಂದೆದ್ದು ಓಡಿ ಬಂದೆನಲ್ಲ. ನಲ್ಲನ ಬೈಕೇರಿ ನಾ ಬೇಗ ಹೋಗಬೇಕು . ಇವಳ ಕೈಚಳಕಕ್ಕಿಂತ ನನ್ನ ಮನಸ್ಸು ಜೋರಾಗಿ ಓಡ್ತಿದೆ.


ಬಿಟ್ಟಾಕು ಹುಡುಗ ಜೀವದ ಭಯ ಬಿಟ್ಟು ನಾಕಾಣೆ ಹಿಡಿಯೊ ಕಸರತ್ತು. ಇನ್ನ್ಮೇಲೆ ನಾ ಕೊಡುವೆ ಮತ್ತೊಂದಾಣೆ. ಊಹಿಸ್ರೆಲಾ ಇದೆಷ್ಟು ಆಣೆ?
       
                                                 ***********

3-9-2020. 7.26pm

“ಹೀಗೆ ಎಳ್ಳೂ ಇದೆ ಬೆಲ್ಲವೂ ಇದೆ ನನ್ನ ನೆನಪಲ್ಲಿ! – ಅವಧಿ । AVADHI” http://avadhimag.com?p=224569

“ಹೀಗೆ ಎಳ್ಳೂ ಇದೆ ಬೆಲ್ಲವೂ ಇದೆ ನನ್ನ ನೆನಪಲ್ಲಿ! – ಅವಧಿ । AVADHI” http://avadhimag.com?p=224569