ಬಸಿರ ಬಾಗಿನಕೆ ಮೈ ಚೆಲ್ಲಿ.. …..

ನಗುವ ಹೂವಿಗೆ ಬಣ್ಣದ ಚಿತ್ತಾರ ಬಿಡಿಸಿ
ಅಂದಗೊಳಿಸುವ ಇರಾದೆ ಏಕೆ
ಬದುಕ ಬಟ್ಟಲೊಳು ತನ್ನತನದ ಸೌಂದರ್ಯ
ಸೂಸುತಿರುವ ಅಪ್ಪಟ ಚಿನ್ನ
ಬೆಳ್ಳನೆಯ ಬೆಳಗು ಭುವಿಗೆಲ್ಲ ಶೃಂಗಾರ
ತನ್ನೊಡಲ ಒಡ್ಡೋಲಗಕೆ ಅನುಗೊಳಿಸುವ
ವೈಖರಿ ಮಂಜಿನ ಮುತ್ತು ಕೆನ್ನೆ ತಟ್ಟಲು
ಅರಳುವುದ ನಾನೆಂತೂ ಒಂದು ದಿನ ಕಾಣೆ!

ಭಗವಂತ ಈ ಭೃಹ್ಮಾಂಡದ ತುಂಬೆಲ್ಲ
ಎನಿತು ವಿಸ್ಮಯ ಬಚ್ಚಿಟ್ಟೆ
ದಿನಕೊಂದೊಂದು ಲಲನೆಯರಳಸಿ
ಮುದ್ದಾದ ಚೆಲುವು ಕಣ್ತುಂಬಿಕೊಳ್ಳಲು
ಮಾಘಿಯ ಚಳಿ ತುಂತುರು ಹನಿ
ಮುತ್ತಾಗಿ ಕಚಗುಳಿ ಇಡುತಿರುವ
ಆಹಾ! ಆ ಅಂದವ ಆನಂದವ ಎನಿತು ಬಣ್ಣಿಸಲಿ!

ಕಿರುಲತೆಗಳಲಿ ಉಯ್ಯಾಲೆಯ ಓಕುಳಿ
ಬರುತಿರುವ ರವಿಕಿರಣಕೆ ಮುಖ ಮಾಡಿ
ಮೈ ತುಂಬ ಅರಳಿಸುತ ಹೂ ಗೊಂಚಲು
ಅಣಿಯಾಗುತಿವೆ ಬಸಿರ ಬಾಗಿನಕೆ ಮೈ ಚೆಲ್ಲಿ
ಗೆಲ್ಲು ಗೆಲ್ಲುಗಳಲಿ ಹೂ ಮಿಡಿ ಕಾಯಿ ಹಣ್ಣಾಗಲು
ಮತ್ತೆ ಭೂರಮೆಯ ತಬ್ಬಿ ಮೊಳಕೆಯೊಡೆದು ಚಿಗುರಲು
ಅಬ್ಭಾ! ಎಂಥಾ ಹರೆಯ ಕೆಂದಾವರೆಯಷ್ಟು ನಾಚಿಕೆಯವಕೀಗ!
9-1-2019. 10.16am

Advertisements

ಏನಾದರೂ ಹಿಕ್ಮತ್ ಇದ್ದಿದ್ದರೆ…….

ಅನಿರೀಕ್ಷಿತ, ಅವ್ಯಾಹತ
ಮೊನ್ನೆ ನಡೆದ ಭೀಬತ್ಸ ಮಳೆ
ಗುಡ್ಡ ಕಡಿದುರುಳಿ
ನೆಲ ಕೆಂಪು ಮಣ್ಣಿನ ಹಾಸು
ಮನೆ ಮಠ
“ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ”
ಮೊರೆತ ಕೇಳದೆ
ಆ ದೇವನೂ ಕಲ್ಲಾಗಿಬಿಟ್ಟ.

“ಮತ್ತೆ ಮಳೆಯ ಅಬ್ಬರ ಮುಂದುವರೆದಿದೆ
ಭೂಮಿಯಲ್ಲಿ ಕಂಪನ
ಅಲ್ಲಲಿ ಮತ್ತೆ ಗುಡ್ಡ ಕುಸಿತ
ಜನರ ಬವಣೆ ಹೇಳತೀರ”

ಯುದ್ಧೋಪಾದಿಯಲ್ಲಿ
ಆತಂಕ ಹೊತ್ತ ಸಮಾಚಾರ
ಹೃದಯದಾಳಕ್ಕಿಳಿದು
ಉಂಡನ್ನ ಗಂಟಲು ಕಟ್ಟುವ ಸ್ಥಿತಿ
ಮತ್ತೆ ಮತ್ತೆ ಮಳೆಯಾಗುತ್ತಿದೆಯಲ್ಲಾ
ಆಕಾಶಕ್ಕೆ ತೂತು ಬಿದ್ದಂತೆ!

ಚಿತ್ತದಲಿ ರಾಮ ರಾವಣರ ಯುದ್ಧದ
ಸನ್ನಿವೇಶ ನೆನಪಾಯಿತು
ರಾಮಾಯಣದ ಕಥೆ ದಿಟವೋ ಸುಳ್ಳೋ
ಆದರೀಗಿಲ್ಲಿ
ಎಲ್ಲವೂ ಕಣ್ಣ ಮುಂದಿನ ಸತ್ಯ.

ಕೆಟ್ಟ ಮಳೆ
ಜನ ಕಂಗಾಲು
ಲಭೋ ಲಭೋ ಹೊಯ್ಕೊಳ್ಳುವಾಗ
ಈ ಮಳೆ ತಡೆಯಲು
ಏನಾದರೂ ಹಿಕ್ಮತ್ ಇದ್ದಿದ್ದರೆ….?

ಅದೇ ರಾಮ ರಾವಣರ ಯುದ್ಧದಲ್ಲಿ
ರಾವಣನ ತಲೆ ಕಡಿದುರುಳಿಸಿದಷ್ಟೂ
ಮತ್ತೆ ಬೆಳೆಯುತ್ತಿತ್ತು
ರಾವಣನ ಕೊಲ್ಲಲಾಗದೆ
ರಾಮ ಕೈ ಸೋತ
ವಿಭೀಷಣ ದೇಹದತ್ತ ಗುರಿಯಿಡಲು ಸೂಚಿಸಿ
ರಾವಣನ ಜೀವದ ಗುಟ್ಟು ಹೇಳಿಬಿಟ್ಟ
ರಾವಣ ಸತ್ತ
ರಾಮ ಗೆದ್ದ.

ಆಗ ರಾಮ ರಾವಣರ ರಾಜ್ಯ ಸರಿ
ಈಗಿಲ್ಲಿ ನಮ್ಮ ರಾಜ್ಯ
ಯಾವುದಾದರೇನು ಕಣ್ಣಿಗೆ ಕಾಣುವ ದುಷ್ಟನಾಗಿ
ಮಾರಣ ಹೋಮ ನಡೆಸುತ್ತಿರುವ
ಈ ಮಳೆರಾಯನ ಗುಟ್ಟು
ಯಾರಿಂದಲಾದರೂ ಹೇಗಾದರೂ
ಮೂಲ ದೊರಕಿದ್ದರೆ…………
ತಲೆಕೆಟ್ಟಂತೆ ಉಧೋ ಉಧೋ
ಹೊಯ್ಯುವ ಮಳೆ ನಿಲ್ಲಿಸಬಹುದಿತ್ತಲ್ಲಾ
ರಾಮ ರಾವಣನ ಯುದ್ಧ
ಕೊನೆಯಾದಂತೆ!!

29-8-2018. 7.01pm

ವಸಂತಾಗಮನ

ಚಂದ್ರ ಚಕೋರಿಯ ಮೃದು ಕಂಠದೈಸಿರಿಯಲಿ
ಹೊರಹೊಮ್ಮುತಿದೆ ಮೌನದಾಲಾಪನೆಯ
ಸುಶ್ರಾವ್ಯ ಗಾನ.

ಇನಿಯನ ಹೊಸ ಹೆಜ್ಜೆಗೆ ಗೆಜ್ಜೆ ಕಟ್ಟಿ
ಸಜ್ಜಾಗಿದೆ ಮರಿ ಕೋಗಿಲೆಗಳ
ಕುಹೂ ಕುಹೂ ನಿನಾದ.

ಅಭಿಸಾರಿಕೆ ಅರಮನೆಯ ಬಾಗಿಲು
ತಳಿರು ತೋರಣಗಳ ದಿಬ್ಬವನೇರಿ
ಲಕ ಲಕಾ ಹೊಳೆಯುತಿದೆ.

ಬೆಂಗಾಡಿನ ಬಯಲೊಳಗೆಲ್ಲ
ಹಸಿರು ಮುಂಜಾವಿನ ಹೊದಿಕೆ ಹೊದಿಸಿ
ತನು ತಂಪಾಗಿದೆ.

ವಸಂತಾಗಮನಕೆ ಮನ ಮನದೊಳಗೆಲ್ಲ
ಅಂಬುದಿಯ ಮೇಘೋದ್ಗರ್ಷ
ಕವಿ ತಾ ಮೈ ಮರೆತಂತಿದೆ.

ಗುಯ್ ಗುಯ್ ನಾದದ ಜೇನ ಪರದಾಟ
ಹೂಮೊಗವರಳಿ ತಾಯ್ತನಕೆ ಸಜ್ಜಾಗಿವೆ
ನಾಚಿ ನೀರಾಗಿ.

ಬಿಸುಪಿನ ಬಿರು ನಡಿಗೆಯು ಮೈತಳೆದಿದೆ
ಗಿಡಮರ ಹೂ ಬಳ್ಳಿಗಳಲೆಲ್ಲ ಮೊಗ್ಗು ಕಾಯಾಗಿ
ಹಣ್ಣೆವೆಯಿಕ್ಕಿದೆ.

ಕಪೋಲದ ತುಂಬೆಲ್ಲ ಕೆಂಪಡರಿದ ಸೊಗಡು
ಹಸಿರು ಮುಂಜಾವಿನಲಿ ಒಡ್ಡೋಲಗದ ಹುರುಪು
ಅದೋ ವಸಂತ ಕಾಲಿಕ್ಕಿದೆ.

ಜರಿ ತೊರೆಗಳು ಬಣ್ಣ ಕಳೆಯುವ ಮೊದಲು
ಓ ಮೇಘರಾಜಾ ಆಗೊಮ್ಮೆ ಈಗೊಮ್ಮೆ ಇಳೆಯನಪ್ಪು
ರೈತರ ಸಂತಸಕೆ ಇಂಬನಿತ್ತು.

ಪ್ರಕೃತಿ ಪುರುಷನ ಸಮ್ಮಿಲನಕೆ ಸಾಕ್ಷಿ ವಸಂತಮಾಸ
ಸಲ್ಲಾಪದ ಆಲಾಪನೆಯೊಳು ಮುಳುಗೇಳಲಿ ಬಿಡು ಮನುಜಾ
ನೀ ನಾಶ ಮಾಡದಿರು ಸೃಷ್ಟಿಯ ಒಡಲಾ!!

26-3-2018. 7.21pm

ಮರುಕ

ಚಿಗುರು ಚಿಗುರೆಲೆ ಮರವೆ
ಎಲೆ ಉದುರಿಸಿ ಬಟಾಬಯಲಲಿ ನೀ ನಿಂತಿಹೆ ಏಕೆ?

ನಿನ್ನ ಮಾಸಿಕ ಕಳೆದರೂ
ಚಿಗುರೊಡೆಯಲು ಏಕೆ ಈ ಅನುಮಾನ ಹೇಳು?

ಮೋಡದಾ ಮುಗಿಲಲಿ
ಮಳೆ ಕೊಯ್ಲ ಆಗಮನಕೆ ಕಾದು ಕುಳಿತಿಹೆಯೇನು?

ನೀ ಚಿಗುರು ಮರವೆ
ಕೊರಡು ಕೊನರಿಸುವ ಉತ್ಸಾಹ ನಿನಗಿಲ್ಲವೇನು?

ಮ್ಲಾನ ಮುಖವೇಕೆ ಮಾಡಿದೆ
ಮರಕಡಿವ ಮಂದಿಗೆ ನೀ ಹೆದರಿಬಿಟ್ಟೆಯೇನು?

ದಿನ ದಿನವೂ ಬಿಡದಿಹ
ನಿನ್ನ ಬವಣೆಗೆ ಕೊನೆಯಿಲ್ಲವೆಂಬ ಆತಂಕವೇ?

ಎಷ್ಟು ಕ್ರೂರ ಈ ಜನರು
ಎಂದು ಒಳಗೊಳಗೆ ನೀ ಕೊರಗುತಿಹೆಯೇನು?

ದಾಹ ದಾಹವೆಂದು
ಹಪಹಪಿಸುತಿಹೆ ಇಂದು ; ಇದು ನನಗೆ ಗೊತ್ತಿಲ್ಲವೇನು?

ನಿನ್ನ ಅವಸ್ಥೆ ಕಂಡು
ನಾನೂ ನಿತ್ಯ ಮರುಗುತಿಹೆನಿಲ್ಲಿ ನೋಡು!

16-3-2018. 10.58am

ಸಮಾಗಮ

ಅಂಬರದ ಚುಕ್ಕಿಗೆ ಚಂದ್ರಮನು ಬೇಕಿಲ್ಲ
ಬೆಳದಿಂಗಳಂಗು ನನಗಿಲ್ಲವೆಂದುಲಿವ
ತಾರೆಗಳ ತೋರಣ ಕಟ್ಟಿ ಚಂದ್ರನ ಕೂಡಿಸಲಾಗಿ
ಪಳ ಪಳನೊಳೆಯುವ ಮುದ್ದು ಕುವರನ
ಮುಖಾರವಿಂದವದೆಷ್ಟು ಅಂದವೊ ನಾ ಕಾಣೆ!

ಹದಿನಾರು ನವ ತರುಣಿಯರು ಜರತಾರಿ ಸೀರೆಯಲಿ
ಸುತ್ತೆಲ್ಲ ನೆರೆದಿರಲು ಚಂದ್ರವದನೆಯ ಸೊಬಗು
ಲಲನೆಯರಲಿ ಮೇಳೈಸಿರಲು ಲಕ ಲಕ ಮಿನುಗುವ
ನಕ್ಷತ್ರಗಳ ಪಾಡು ಕಂಡಾಗ ಚಂದ್ರಮಗೆ
ಅದೆಷ್ಟು ಇರುಸು ಮುರುಸಾಗುವುದೊ ನಾ ಕಾಣೆ!

ಆಕಾಶದಂಗಳದಿ ಉದ್ಭವಿಸುವ ಮಿಂಚುಗಳು
ಅಲ್ಲಲ್ಲಿ ತೂರಿಬರುವ ಕಿರಣದಕ್ಕರೆಯಂತೆ
ಝಳಪಿಸುವ ಕತ್ತಿಯ ಕೋರೈಸುವ ಬೆಳಕಿನಲಿ
ಚಂದ್ರಮನಿಗಿಡಿದಿಟ್ಟ ಕನ್ನಡಿಯಂತೆ ಪ್ರಜ್ವಲಿಸಲು
ತಾರೆಗಳ ಗೋಳೈಸಿಕೊಳ್ಳುವೀರ್ಶೆದೇಗಿರುತ್ತೊ ನಾ ಕಾಣೆ!

ಮುತ್ತಂತ ಮತ್ತಿನಲಿ ಕಚಗುಳಿಯಿಡುವ ತಾರೆಗಳು
ಲಲನಾಂಗಿಯರ ಮದ್ಯ ಮೇಳೈಸುವ ಗಮ್ಮತ್ತು
ಆಹಾ! ಚಂದ್ರಾ ಏನೊ ನಿನ್ನ ಖರಾಮತ್ತೆಂದುಲಿವ
ಮರೆಯಾದ ಸೂರ್ಯ ಸಟಕ್ಕನೆ ಎದ್ದು ಬಂದಲ್ಲಿ
ಮೂವರ ಸಮಾಗಮ ಅದೇಗಿರುತ್ತೊ ನಾ ಕಾಣೆ!

ಭುವಿಚಕ್ರ ತಿರುತಿರುಗಿ ಉಣಬಡಿಪ ವ್ಯಂಜನಗಳನೆಲ್ಲ
ಸೊಬಗ ಸೂರೆಗೊಳ್ಪ ಭೋಜನವ ಚಪ್ಪರಿಸಿದರೂ
ಮನುಜಾ ಆಕಾಶಕಾಯದ ಸಾಂಗತ್ಯಕ್ಕೆ ಮಿಗಿಲುಂಟೆ?
ಚಿಂತನೆಯ ದಾಸ್ಯಕ್ಕೆ ಶರಣಾಗಿ ಕವಿ ಬರೆವ ಹಾಡು
ಆಕಾಶಕಾಯದಂತೆ ಬದುಕಿನಾಚೆಗೂ ಬದುಕಬಹುದೆ ನಾ ಕಾಣೆ!

7-9-2017. 9.33am

ಮಳೆಗಾಲ

ಬಿಸಿಲ ಭೇಗೆಯ ತೆಕ್ಕೆಗೆ
ಬಸವಳಿದ ತನು
ಮುಗಿಲಾಗಮನದೆಣಿಕೆ
ಹಾಹಾಕಾರ ಎಲ್ಲೆಲ್ಲೂ
ಮನುಜನಿಗದು ನರಕ.

ನಿಸ್ತೇಜವಾಗಿ ಮಲಗಿತು
ಭೂರಮೆಯ ಒಡಲು
ತೀರದಾಹಕ್ಕಾಗಿ
ಹಪಹಪಿಸಿ ಪವಡಿಸಿತು
ಬಾಯ್ಬಿಟ್ಟ ಬಿರುಕು.

ಮುಂಗಾರಿನ ಕರಿ ನೆರಳಿಗೆ
ಬಾಗಿತು ಭಾನು
ಸುತ್ತೆಲ್ಲ ಕಗ್ಗತ್ತಲು
ಬಾಚಿ ತಬ್ಬಿತು
ಭಾಸ್ಕರನೂ ಶರಣು.

ಒಕ್ಕೊರಲ ಆವೇಗ
ಅಣಿಮುತ್ತಿನಾಗಮನಕೆ
ಆಸರವ ತೀರಿಸೆಂಬ
ಉನ್ಮಾದದ ಗೋಗರೆತ
ಇಬ್ಬರ ಮೊರೆತ.

ಸಂಭ್ರಮದ ಸ್ವಾಗತಕೆ
ನವ ಚೈತನ್ಯ ಮಿಡಿತ
ಬಾನಂಗಳದ ಬುತ್ತಿಗೆ
ಗಿಡಮರ ತೂಗುಯ್ಯಾಲೆ
ಕೈ ವಡ್ಡಿದ ಇಳೆ.

ಆಚೀಚಿಟ್ಟವುಗಳೆಲ್ಲ
ಒಪ್ಪ ಓರಣದ ಭರಾಠೆ
ಮಳೆರಾಯನ ಮತ್ತಿಗೆ
ಅಣಿಯಾಗುವ ಜನ
ಎಲ್ಲಿಲ್ಲದ ಧಾವಂತ.

ಅಬ್ಬರದ ಸದ್ದಿನಲಿ
ಇಳೆಯನಪ್ಪುವಬ್ಬರವೊ
ರೈತರನೆದೆಯಲಿ
ಕಾಲಿಕ್ಕುವ ಹುಮ್ಮನಸ್ಸೊ
ಮತ್ತೇರಿದ ಮತ್ತು ಮಳೆಗೆ.

ಹುಯ್ಯೊ ಹುಯ್ಯೊ ಮಳೆರಾಯ
ಎಲ್ಲರ ಕೂಗು ನೀ ಕೇಳೊ
ಅಂದದ ಜಗಕೆ ತಂಪನ್ನೀಯೊ
ಭೂತಾಯ ಕರೆಗೆ ನೀ ಶರಣಾಗೊ
ಮಕ್ಕಳಾನಂದದ ಕುಣಿತ.

6-9-2017. 4.11pm

ಬಾನೊಳಡಗಿದ ಕಡಲು..

ಝಲ್ಲೆಂದು ಚಿಮ್ಮುವ
ಭೋರ್ಗರೆಯುವ ಕಡಲಿನ ಅಲೆಗಳ
ಹಿಡಿದಿಡುವ ಶಕ್ತಿ
ಗಾಳಿಗೆ ವಿಮುಖವಾಗಿ ನಡೆಯಬೇಕಾದ
ಅನಿವಾರ್ಯತೆ
ಕಡಲಿಗೆ ಎಂದೂ ಒದಗಿ ಬಾರದಿರಲಿ
ಅಲ್ಲಿ ಧಿಕ್ಕರಿಸಿ ನಡೆವ ತಾಕತ್ತು ಮೊದಲೇ ಇಲ್ಲ
ಕಡಲಿಗೆ ಅಲೆಗಳ ಕಲರವವೇ ಅದೆಷ್ಟು ಚಂದ.

ದಿಗಂತದಲ್ಲಿ ಬಾಗಿ ತಬ್ಬಿದ ಬಾನು
ನಿಲಮೇಘಶಾಮನಂತೆ ಪ್ರೀತಿ ಮಾಡುವ ಕಡಲಿಗೆ
ತನುಮನವೆಲ್ಲ ಸಂತಸದ ಆಗರದಲಿ ಕೊಚ್ಚಿ
ನೊರೆ ನೊರೆ ಕಲರವದ ನಿನಾದ
ಕಿವಿಗಿಂಪಾಗಿ ಸದಾ ಕೇಳುತಿರಲಿ.

ಬಾನಿಲ್ಲದೆ ಕಡಲಿಲ್ಲ
ಬಚ್ಚಿಡುವ ಉನ್ಮಾದದ ಉದ್ವೇಗದ ಕಚಗುಳಿಗೆ
ಸದಾ ಬೇಕು ಸಿಂಚನದ ಸಾಂಗತ್ಯ
ಆ ಒಂದು ಕ್ಷಣ ಕ್ಷಣದ ನಿರೀಕ್ಷೆ
ಅವಿತ ಕಡಲಾಳದ ತುಂಬ
ಮುಚ್ಚಿಟ್ಟುಕೊಂಡು ಅನುಭವಿಸುವ ಸಂತೋಷ
ಆಗಾಗ ಎದ್ದೇಳುವ
ಸುಂದರ ತೆರೆಗಳೇ ಸಾಕ್ಷಿ!

ಸೃಷ್ಟಿಯ ಸೊಬಗ ಹೀರುತ್ತ
ಗುಪ್ತ ಗಾಮಿನಿಯಾಗಿ
ಬಿಡದೆ ಬೆನ್ನ ಹಿಂದೆ ಮೌನದ ನಿರ್ಲಿಪ್ತ ವಾಸ
ಆಕಾಶದಂಗಳದಲಿ ಹೊಳೆವ ನಕ್ಷತ್ರ
ಕಣ್ತುಂಬಿಕೊಂಡು
ಸೂರ್ಯ ಚಂದ್ರರಿರುವವವರೆಗೆ
ಅಪ್ಪಿಕೊಂಡೇ ಇರಬೇಕೆನ್ನುವ ಹೆಬ್ಬಯಕೆ
ಬಳುಕಿ ತುಳುಕುವ ಕಡಲಿಗೆ
ಅಷ್ಟೊಂದು ಅಕ್ಕರೆ.

ಆಗಸವೆ ನೀ ಎಂದೂ ಕಡಲ ತೊರೆಯದಿರು
ಮರೆತು ನಿರ್ಜೀವ ಮಾಡದಿರು.

7-7-2017. 10.53am