ಊರ್ಮಿಳೆ

ಸಖೀ ಕ್ಷಮಿಸೆನ್ನ ಮನದನ್ನೆ
ಅಂದು ನಿನ್ನಪ್ಪಣೆ ಕೇಳದೆ
ಭಾತೃತ್ವದ ಪಾಶದಲಿ ಸಿಲುಕಿ
ರಾಮನೊಡಗೂಡಿ ಹೊರಟೇ
ಹೋದೆನೆಂಬ ಲವಲೇಷ
ಕೋಪವಿರುವುದು
ನನಗೆ ಗೊತ್ತು ಪ್ರಿಯೆ.

ಆದರೂ. …….
ನೀನೆನ್ನ ತಡೆಯದೆ
ಅವರೆಲ್ಲರೊಡಗೂಡಿ ಅಳುತ
ಸೀರೆಯ ಸೆರಗ ತುದಿ
ಕಣ್ಣು ಒರೆಸುವುದ ಕಂಡ ಮನ
ಮರೆತಿಲ್ಲ
ಹೇಳು ಒಡತಿ
ತಪ್ಪಾಯಿತೆ ನನ್ನಿಂದ!

ಬಿಡು ಬಿಡು
ಆಗಿದ್ದು ಆಗೋಯ್ತು
ಈಗ್ಯಾಕೆ ಆ ಮಾತು
ಸಧ್ಯ ಕ್ಷೇಮದಿಂದ ಬಂದೆಯಲ್ಲ
ನನ್ನ ಸಖಾ!

ಹೀಗಂದು
ಅವಳೇ ಸಂತೈಸಿರಬಹುದು
ಹದಿನಾಲ್ಕು ವರುಷ
ಅರಮನೆಯೆಂಬ ಸೆರೆಮನೆಯಲ್ಲಿ
ತಾ ಬಂಧಿ, ಏಕಾಂಗಿ
ವಿರಹ ವೇದನೆ ನುಂಗಿ.

ಇತಿಹಾಸದ ಉದ್ದಗಲಕ್ಕೂ
ಸ್ತ್ರೀ ಅಂದರೆ
ನಿನಗಿಷ್ಟೇ ಸಾಕು
ಎಂದರಚಿದ
ಗಂಡಿನ ಖಾರುಭಾರೆ
ಮೆರೆದಿರುವಾಗ
ಇನ್ನು ಊರ್ಮಿಳೆ
ಹೇಗೆ ಹೊರತಾದಾಳು!!
18-3-2017. 7.09pm

Advertisements