ಎಚ್ಚರಾ…

(ಕಥಾ ಕವನ- ಸತ್ಯ ಘಟನೆ ಆದರಿಸಿ)

ಅವಳು ಅಸಹಾಯಕಿ
ನಾಲ್ಕು ಹೆಣ್ಣು ಹಡೆದರೂ
ಗಂಡೇ ಹುಟ್ಟಿಲ್ಲವೆಂಬ ಕೊರಗು
ಕಟ್ಟಿಕೊಂಡ ಗಂಡ
ಗಂಡನ ಮನೆಯವರದು
ಆಗಾಗ ಜರಿವ ಮಾತು
ಕಿವಿಗಪ್ಪಳಿಸಿ ಹೃದಯ ಕಾಳ್ಗಿಚ್ಚು.

ಹತ್ತು ಕಳೆದು
ಹನ್ನೊಂದನೇ ದಿನಕ್ಕೆ
ಮುಗೀತು ಬಾಣಂತನದ ಶಾಸ್ತ್ರ
ಅಮ್ಮನಿಲ್ಲದಿರೆ ತಣ್ಣೀರಾದರೇನು
ಹಸಿ ಮೈಯ್ಯಿ ತಲೆ ಬಾಗಿತು
ಬೇಡಾ ಸನ್ನಿ ಆಗಬಹುದೆಂಬ ನುಡಿ
ಬಚ್ಚಲು ನೀರಲ್ಲೇ ಕರಗಿತ್ತು.

ಅವನೋ ಮಹಾ ಬಿಕನಾಸಿ
ಅಂಡಲೆಯುವ ದುರ್ಭುದ್ಧಿ
ಆ ನಾಲ್ಕು ದಿನವೂ ಬಿಡದ
ಕ್ರೂರಿ ಕಾಮ ಪಿಪಾಸಿ
ತೊಟ್ಟಿಕ್ಕಿದ ರಕ್ತದೊಳು
ಕ್ರೂರ ನರ್ತನ
ಇದನರಿಯದವನಮ್ಮನಿಗೆ ಮಾತ್ರ
ಮಗ ಬಲೂ ಸಂಭಾವಿತ.

ಬಂದಲವತ್ತುಕೊಂಡು
ಕಣ್ಣೀರು ಬತ್ತಿ
ಮುಖದಲ್ಲಿ ವಾಟೆ ಕಣ್ಣ
ಅರಸ ಬೇಕು
ಇದ ಕಂಡ ಸಖಿಯರ
ಸಾಂತ್ವನದ ನಿಟ್ಟುಸಿರು
ಅವಳಿಗೆ ತಾಕಿದರೂ
ಏನೂ ಪ್ರಯೋಜನವಿಲ್ಲ.

ಏಕೆಂದರೆ ತಾಳಿ ಬಿಗಿದವನ ಕಾಟ
ಇವಳು ತಾಳಿ ತಾಳಿ ಸಹಿಸ ಬೇಕು
ಗತ್ಯಂತರವಿಲ್ಲ
ಬಿಟ್ಟರೆ ಜನ ಉವಾಚ
‘ಗಂಡ ಬಿಟ್ಟ ರಂಡೆ’
ಅದರಲ್ಲೂ ಹೆಣ್ಣುಗಳ ಮಾತೇ
ಬಲು ಜೋರು
ಇದು ವಾಸ್ತವ.

ಎಲ್ಲರೆದುರು ಹಲ್ಕಿರಿದು
ಮನೆ ಮರ್ಯಾದಿ
ಮಕ್ಕಳ ಭವಿಷ್ಯ
ತನ್ನ ನಾಳಿನ ಗತಿ
ಇತ್ಯಾದಿ ನೆನೆನೆನೆದು
ಮುಚ್ಚಿಟ್ಟುಕೊಳ್ಳುತ್ತಾಳೆ
ಗುಟ್ಟು ಬಿಟ್ಕೊಡದ ಗರತಿ.

ಸ್ರ್ತೀ ಸ್ವಾತಂತ್ರ್ಯ ಬಡಕಬೇಕು
ಎಲ್ಲಿದೆ ಸ್ವಾತಂತ್ರ್ಯ?
ಆ ನಾಲ್ಕು ಗೋಡೆಯ ಮಧ್ಯೆ
ಒಗ್ಗದವ ಹಾದರ ಮಾಡಿದರೂ
ತಾಳಿ ಕಟ್ಟಿಸಿಕೊಂಡ ತಪ್ಪಿಗೆ
ಅವಡು ಗಚ್ಚಿ ಸುಮ್ಮನಿರಬೇಕು
ಇದೆಷ್ಟು ಹೆಣ್ಮನಗಳ ಗುಟ್ಟೋ….
ಇದೇನು ಸಮಾಜದ ಕಟ್ಟು ಪಾಡೊ
ಆ ಪರ ಶಿವನೇ ಬಲ್ಲಾ!

ಇಂದಿಗೂ ಹೆಣ್ಣು ಸೈರೇಂದ್ರಿ
“ಭೂಮಿ ಬಿರಿದು ಬಾಯಿ ಬಿಡಬಾರದೇ
ಆ ಸೀತಾ ಮಾತೆಗೆ ಆಶ್ರಯವಿತ್ತಂತೆ ”
ಅದೆಷ್ಟು ಹೆಣ್ಣುಗಳ
ಹಲುಬಾಟವೋ ಒಳಗೊಳಗೆ
ಮದುವೆ ಎಂಬ ಮೂರಕ್ಷರಕೆ
ಇದೇನಾ ಅರ್ಥ?
ಈಗಲೂ ಯೋಚಿಸಬೇಕಾದ್ದೇ…

ತಾಳಿ ತಾಳಿ ಹೆಣ್ಣುಗಳೇ
ಆಗಿಲ್ಲ ಮದುವೆಯಿನ್ನೂ
ಜನರಾಡುವ ಕೊಂಕಿಗೆ
ಕೊರಗುವುದ ಬಿಡಿ
ಮುನ್ನುಡಿ ಬರೆವ ಮುನ್ನ
ಎಂಥವನೆಂದು ಅರಿಯದೇ
ಹಗಲು ಹಾದರಕೆ
ಹೆಗಲು ಕೊಡದಿರಿ.

ಬದುಕಿನ ಪೂರ್ಣ ವಿರಾಮಕೆ
ಮದುವೆಯೊಂದೇ ಅಂತ್ಯವಲ್ಲ
ಇಹುದು ಹಲವು ದಾರಿ
ಕೊಂಚ ಅದರಾಚೆ ಯೋಚಿಸಿ
ಸ್ವಾವಲಂಬನೆಯಿಂದ
ಬದುಕುವುದ ಕಲಿಯಿರಿ
ದುರುಳರಿಂದ ಕಾಪಿಟ್ಟು ಕೊಳ್ಳಿ
ನಿಮ್ಮ ಹೆಣ್ ತನವನ್ನ…!

23-3-2019. 2.16pm

ಕಥಾ ಕವನ

ದೃಶ್ಯ – ನೊಂದ ಹೆಣ್ಣಿನ ಸ್ಥಿತಿ
*************

ಉಣಲಿಲ್ಲ ಉಡಲಿಲ್ಲ ಬಯಸಿದ್ದು ತೊಡಲಿಲ್ಲ
ಬವಣೆಯಾ ಬದುಕು ನನದಾಯಿತೆಂದು
ಉಳ್ಳವರ ಮಾತಿನ ಮೋಡಿಗೆ ಮರುಳಾಗಿ
ಹಗಲು ಗನಸನು ಹೊತ್ತು ಅವರಿಂದೆ ನಡೆದೆ||

ದೊಡ್ಡ ಮನೆಯಂಗಳದಿ ಕಾಲಿರಿಸಿದಾ ಆ ಗಳಿಗೆ
ಎನೊಂದೂ ಅರಿಯದ ಮುಗ್ಧೆ ನಾನಾಗಿದ್ದೆ
ಹೊಸದರಲ್ಲಿ ಚೆನ್ನಿತ್ತು ತದ ನಂತರ ಅರಿವಾಯಿತು
ನಾನೊಂದು ಪಂಜರದ ಗಿಣಿಯಾದೆ||

ಆರಮನೆಯ ದೊರೆಯಾದರೇನವನ ನೀತಿ
ನಡಾವಳಿ ಒಳಿತಿಲ್ಲದಿರದಾವ ಜನ ಮೆಚ್ಚುವರು
ಕೊಂಚ ವಿರಮಿಸಲೂ ಅವ ಸಮಯ ಕೊಡಲಾರ
ಗಾಣದೆತ್ತಿನ ಜೀತ ಕಂಡರಿಯದ ದೊಡ್ಡ ಷಹರದಲಿ||

ಬಂದು ಮುಕ್ಕುವ ಮಂದಿಗೆ ಸೆರಗಾಸುವ ಗತಿ
ಬೇಡ ನನ್ನ ಶತ್ರುಗಳಿಗೂ ಈ ಪರಿಯ ಶಿಕ್ಷೆ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆನ್ನುವ ನಾಣ್ಣುಡಿ
ಅಕ್ಷರಶಃ ನಿಜವೆಂದು ನಾನಿಂದು ಅರಿತೆ||

ನನ್ನೂರು ನಮ್ಮವರು ನೆನಪಾಗುವರು ಅಡಿಗಡಿಗೆ
ಆದರೇನು ಮಾಡುವುದು ನಾನೀಗ ಇಲ್ಲಿ ಬಂಧಿ
ಎಷ್ಟು ಬಯಸಿದರೂ ಮರುಕಳಿಸದು ಆ ದಿನ
ಒಂದೊತ್ತು ಉಂಡರೂ ನೆಮ್ಮದಿಯಿತ್ತಲ್ಲಿ||

ಬಡತನದ ದಿನಗಳ ಧಿಕ್ಕರಿಸಿ ಹೊರ ನಡೆದ ಪರಿಣಾಮ
ಹೆತ್ತವರ ಕಣ್ಣೊಳಗೂ ಜಿನುಗು ನೀರ ತರಿಸಿ
ಬಲ್ಲವರ ಒಳಿತಿನ ಮಾತಿಗೆ ಒಂದಿನಿತು ಕಿವಿಗೊಟ್ಟಲ್ಲಿ
ಮರು ಮರುಗಿ ಬದುಕುವ ಪಾಡು ತಪ್ಪುತ್ತಿತ್ತೇನೋ||

ಉಳ್ಳವರ ಮಾತಿಗೆ ಮರುಳಾಗಿ ಆತುರದಿ
ಮುಂದಡಿಯಿಟ್ಟ ಪರಿಣಾಮ ಕಹಿ ನೆನಪಲೇ
ಜೀಕುವ ಜೀವವು ಕೈ ಮುಗಿದು ಬೇಡ್ವುದಿಂದು
ಬಲ್ಲವರ ಹಿತ ವಚನಕೆ ದಯವಿಟ್ಟು ಮನ್ನಣೆ ನೀಡಿ||

7-8-2019. 2.35pm

ಕಥಾ ಕವನ

ದೃಶ್ಯ ಕಾವ್ಯ – ಸೀತೆಗೆ ಅರಣ್ಯ ವಾಸ ಲವಕುಶ ಜನನ

ರಾಜನಾಗಿ ಆಳಬೇಕಾಗಿದ್ದ ದೊರೆ ಶ್ರೀ ರಾಮ
ದಶರಥ ಮಹಾರಾಜನ ಹಿರಿಯ ಕುವರ
ಚಿಕ್ಕಮ್ಮ ಕೈಕೇಯಿಯ ಶಪತಕೆ ಮಣಿದು
ಮುಗಿಸಿ ಬಂದ ಹದಿನಾಲ್ಕು ವರ್ಷ ವನವಾಸ ||1||

ಭರತನ ಮಾತಿನಂತೆ ಪ್ರಜಾ ಪರಿಪಾಲಕ ಪಟ್ಟಾಭಿರಾಮ
ಪುರಜನರ ಸಮ್ಮುಖದಲಿ ಅಯೋಧ್ಯೆಯ
ಗದ್ದುಗೆಯನೇರಿ ದಕ್ಷತೆಯಲಿ ರಾಜ್ಯವಾಳುತಿರಲು
ಎದುರಾಯಿತು ಅವಗೆ ಘೋರ ಸನ್ನಿವೇಶ||

“ರಾವಣಾಸುರನಲ್ಲಿದ್ದು ಬಂದ ಸೀತೆಯ
ಸ್ವೀಕರಿಸಿದ ಶ್ರೀ ರಾಮನೇ ನಾನು?”
ಅಕಟಕಟಾ ಮಾತು ಕರ್ಣಕಠೋರ
ಬೆಸ್ತ ತನ್ನ ಹೆಂಡತಿಗೇಳಿದ ಮಾತಿದು||

ಎಣಿಸಿರಲಿಲ್ಲ ಎಂತಹಾ ಆಪಾಧನೆಯಿದು
ಭರ್ಚಿಯಂತೆ ನಾಟಿತವನ ಮಾತು
ಪ್ರಭು ಕೋಪಗೊಳ್ಳಲಿಲ್ಲ, ಎಗರಾಡಲಿಲ್ಲ
ಬದಲಾಗವನ ಮಾತಲಿ ಹುರುಳನು ಕಂಡ||

ಸತಿಯಾದರೇನು ನ್ಯಾಯ ಒಂದೇ
ತುಂಬು ಗರ್ಭಿಣಿ ಸೀತೆ ಬೇರೆಯಲ್ಲ
ಸಹಧರ್ಮಿಣಿಯೆಂಬ ಮೋಹವನು ತೋರೆದು
ಸತಿಯನಟ್ಟಿದ ಕಾಡಿಗೆ ಶ್ರೀರಾಮ||

ಅರಸನಿಗೆ ತನ್ನ ಕರ್ತವ್ಯ ಮುಖ್ಯ
ಪ್ರಜೆಗಳ ಅಭಿಪ್ರಾಯ ಮುಖ್ಯ
ಬೇಡ ಬೇಡವೆಂದರೂ ಕೇಳದ ಹಠ
ಸೀತೆಯ ಕಣ್ಣೀರಿಗೆ ಬೆಲೆಯೆಂತು?||

ಕಾನನದ ತುಂಬೆಲ್ಲ ತರುಲತೆಗಳಾಹ್ವಾನ
ಪುಟಿ ಪುಟಿದು ಬರುವ ಆ ಜಿಂಕೆಗಳೋ
ಅಮ್ಮನ ಸೆರಗ ಪಿಡಿದು ಮುಗಿ ಬೀಳಲು
ಇತ್ತ ಸುಗಂಧ ತುಂಬಿದ ಹಾರ ಹಾಕಿತಾನೆ||

ಜರಿ ತೊರೆಗಳು ವೈಯ್ಯಾರದೊಳಿಳಿತಿರಲು
ಹಕ್ಕಿಗಳ ಕಲರವ ಮರಿದುಂಬಿ ಹಾರಾಡಿ
ಸೀತಾ ಮಾತೆಯ ಕೆನ್ನೆಗೆ ಮುತ್ತಿಕ್ಕಲು
ಪುಳಕಿತಗೊಂಡಳಾ ಸೀತೆ ದುಃಖವ ಮರೆತು||

ಮುನಿವರ್ಯರ ದರುಶನದ ಭಾಗ್ಯ
ಪರ್ಣಕುಠೀರಾಶ್ರಯ ದೊರಕಿತು ಸೀತೆಗೆ
ತುಂಬು ಗರ್ಭಿಣಿ ಮೆಲ್ಲನಡಿಯನಿಟ್ಟು
ಒಳ ಪೋದಳು ನೆಲೆ ಸಿಕ್ಕ ಹರುಷದಲಿ||

ನವ ಮಾಸ ಮುಗಿಯುತಿರಲು
ಹುಣ್ಣಿಮೆ ಚಂದ್ರನ ನಾಚಿಸುವಂದದಲಿ
ಮುದ್ದಾದ ಅವಳಿ ಮಕ್ಕಳ ಹೆತ್ತಳಾ ತಾಯಿ
ನೋವ ನುಂಗಿದ ಅವನಿ ಮಾತೆ||

ಇತ್ತ ಶ್ರೀ ರಾಮನಿಗೆ ಸತಿ ದೂರಾದ
ವಿರಹ ವೇದನೆ ಒಂದು ಕಡೆಯಾದರೆ
ಕರ್ತವ್ಯ ನಿಷ್ಠೆ ಹೆಗಲನೇರಿತ್ತು ಬೆಂಬಿಡದೆ
ಅರಮನೆಯೆಲ್ಲ ಭಣ ಭಣ ಅವಳಿಲ್ಲದೆ||

ದೊಡ್ಡ ತೊಟ್ಟಿಲ ತುಂಬ ಮುದ್ದಾದ ಕೇಕೆ
ಲವ ಕುಶರೆಂಬ ನಾಮಾಂಕಿತ ಹೊಂದಿ
ಆಶ್ರಮದ ತುಂಬೆಲ್ಲ ಗದ್ದಲವೋ ಗದ್ದಲ
ತುಂಡು ಪುರಸತ್ತು ಇಲ್ಲವೆಂಬ ಮಾತು||

ಆಡುತ್ತಾಡುತ್ತ ಬೆಳೆದ ಚಿನ್ಕುರುಳಿಗಳಿಗೆ
ಗುರುವಿನಾಶೀರ್ವಾದದಿ ವಿದ್ಯೆ ಕಲಿಸುತ
ಎದೆ ಮಟ್ಟ ಬೆಳೆದು ನಿಂತ ಕಂದಮ್ಮಗಳ
ನೋಡುವುದತೀ ಚಂದ ಆ ಹೆತ್ತೊಡಲಿಗೆ||

ತುಂಟ ಕುದುರೆಯೊಂದು ಶೃಂಗಾರದಂದದಲಿ
ನೆಗೆ ನೆಗೆದಾಶ್ರಮದತ್ತಿರ ಸುಳಿಯುತಿರಲು
ತಡೆದು ಹಿಡಿದು ಕಟ್ಟಿ ತಮ್ಮ ಅಪ್ರತಿಮ ಸಾಹಸ
ಮೆರೆದರಾ ಇಬ್ಬರು ಕುವರರು ಮುನಿಗಳೂ ಬೆರಗಾಗುವಂತೆ||

ವಿಧಿಯಾಟದ ಮುಂದೆ ಯಾರಾಟ ನಡೆಯದು
ಅದು ಶ್ರೀ ರಾಮ ಬಿಟ್ಟ ಅಶ್ವಮೇಧದ ಕುದುರೆ
ಕಟ್ಟಿ ಹಾಕಿದಿರಲ್ಲೋ ಬಿಟ್ಟು ಬಿಡೆಂದು ಅರುಹಿದರೂ
ಬಿಡಲೊಲ್ಲರು ಪರಾಕ್ರಮಿಯ ಮಕ್ಕಳಲ್ಲವೇ?||

ಸುದ್ದಿ ತಿಳಿದಾ ಶ್ರೀ ರಾಮ ಬಂದು ನೋಡಲು
ನಡೆದ ವಿಚಾರ ಸವಿಸ್ತಾರವಾಗಿ ಮನದಟ್ಟಾಗಲು
ತನ್ನ ತಪ್ಪರಿವಾಗಿ ಗುರು ವರ್ಯರ ಪಾದಕೆ ಪೊಡಮಟ್ಟು
ಸತಿ ಸುತರೊಡಗೂಡಿ ನಡೆದನಾ ತನ್ನರಮನೆಗೆ‌||

1-7-2019. 6.31pm