ಆರೋಗ್ಯವೇ ಭಾಗ್ಯ(ಸಣ್ಣ ಕಥೆ)

ಮನುಷ್ಯನ ಬದುಕು ಹೀಗೆಯೇ ಇರುತ್ತದೆಂದು ಊಹಿಸಲು ಸಾಧ್ಯವಿಲ್ಲ. ಬದುಕಿನಲ್ಲಿ ಆಘಾತಗಳು ಹೇಗೆ ಬಂದು ವಕ್ಕರಿಸುತ್ತವೆ ಎಂಬುದು ಊಹೆಗೂ ನಿಲುಕದು. ಆದರೆ ಬಂದದ್ದೆಲ್ಲ ಅನುಭವಿಸಲೇ ಬೇಕು. ಅವನು ಬಡವ ಆಗಲಿ ಶ್ರೀಮಂತನಾಗಿರಲಿ. ಅದರಲ್ಲೂ ಈ ರೋಗದ ಧಾಳಿಗೆ ಅವರಿವರೆಂಬುವ ತಾರತಮ್ಯ ಇಲ್ಲವೇ ಇಲ್ಲ. ದುಡ್ಡಿದ್ದವನು ದೊಡ್ಡ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಗುಣಮುಖನಾಗಬಹುದು ಅಥವಾ ಅಲ್ಲೇ ಕೊನೆಯುಸಿರೆಳೆಯಲೂಬಹುದು. ಇನ್ನು ಬಡವನ ಪಾಡು ಗೊತ್ತೇ ಇದೆ. ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಕ್ಕರೆ ಬಚಾವು. ಅದಿಲ್ಲವಾದರೆ ಶಿವನ ಪಾದವೇ ಗತಿ.

ಅದೊಂದು ನಾಲ್ಕಾರು ಮನೆಗಳಿರುವ ಚಿಕ್ಕ ಹಳ್ಳಿ. ರೈತಾಪಿ ಜೀವನ ನಡೆಸುವುದು ಅಲ್ಲಿಯವರ ಮೂಲ ಕಸುಬು. ಅಡಿಕೆ, ತೆಂಗು, ಬಾಳೆ,ಏಲಕ್ಕಿ, ವಿಳ್ಯೆದೆಲೆ,ಹಲಸು ಇತ್ಯಾದಿ ಬೆಳೆ ಬೆಳೆದು ಅದರ ಉತ್ಪನ್ನ ಮಾರಿ ಜೀವನ ನಡೆಸುತ್ತಿದ್ದರು. ಮನೆ ಕೆಲಸ,ತೋಟದ ಕೆಲಸಕ್ಕೆ ಮಲೆನಾಡಿನ ಹಳ್ಳಿಯ ಕಡೆ ಕುಂದಾಪುರ, ಬಂಟ್ವಾಳ ಕಡೆಯಿಂದ ಹಲವರು ಬಂದು ಈ ಹಳ್ಳಿಯಲ್ಲಿ ಚಿಕ್ಕ ಚಿಕ್ಕ ಬಿಡಾರ ಕಟ್ಟಿಕೊಂಡು ವಾಸಿಸುತ್ತಿದ್ದರು.

ಇದ್ದಕ್ಕಿದ್ದಂತೆ ಒಂದು ದಿನ ಬೆಳಗ್ಗೆ ಆ ಊರಿನ ಪಟೇಲರು ಹಾಸಿಗೆಯಿಂದ ಎದ್ದೇಳಲಾರದಷ್ಟು ನೋವಿನಿಂದ ನರಳುತ್ತ ಮಲಗಿದ್ದರು. ಊರಿಗೂರೇ ಅವರನ್ನು ನೋಡಲು ಬಂದಿದ್ದರು. ಎಲ್ಲರ ಬಾಯಲ್ಲೂ ಒಂದೇ ಮಾತು ” ಪಟೇಲರಿಗೆ ಏನಾಯ್ತು, ಏನಾಯ್ತು?”

ವೈದ್ಯಕೀಯ ಪರೀಕ್ಷೆಯಲ್ಲಿ ಗೊತ್ತಾಯಿತು ಇದು “ಚಿಕನ್ ಗುನ್ಯಾ” ಎಂಬ ಖಾಯಿಲೆ. ಈ ಕಾಯಿಲೆಗೆ ಮೂಲ ಸೊಳ್ಳೆ. ಸಾಂಕ್ರಾಮಿಕ ರೋಗದಂತೆ ಒಂದೆರಡು ದಿನಗಳಲ್ಲಿ ಆ ಮನೆಯವರನ್ನೆಲ್ಲ ಈ ಖಾಯಿಲೆ ಆವರಿಸಿದ್ದಲ್ಲದೆ ಊರ ತುಂಬ ತನ್ನ ಪ್ರಭಾವ ಬೀರ ತೊಡಗಿತು. ಇದರಿಂದ ಮುಕ್ತಿ ಕಾಣಲು ತಮ್ಮ ಅನುಕೂಲಕ್ಕೆ ತಕ್ಕಂತೆ ಆಸ್ಪತ್ರೆಗೆ ತಡಕಾಡತೊಡಗಿದರು. ಮಹಾ ಮಾರಿ ಈ ರೋಗ ಜನರನ್ನು ತಲ್ಲಣಗೊಳಿಸಿತು.

ಇತ್ತ ದೊಡ್ಡ ಜಗುಲಿಯ ಪಟೇಲರ ಮನೆಯ ಹಜಾರದಲ್ಲಿ ಅವರಜ್ಜಿಯ ಅಡಿಕೆ ಕುಟ್ಟುವ ಕುಠಾಣಿ ಅನಾಥವಾಗಿ ಮಲಗಿತ್ತು. ವಯಸ್ಸಾದ ಅಜ್ಜಿ ಪಕ್ಕದಲ್ಲೇ ಮಲಗಿ ಮೆಲ್ಲನೆ ಉಸುರುತ್ತಿದ್ದರು ನೋವಿನಿಂದ “ವಿಳ್ಯೆದೆಲೆ ಮನೆ ಮಹಾ ಲಕ್ಷ್ಮಿ. ಒಣಗಲೆ ಬಿಡಲಾಗಾ. ಕವಳದ ಬಟ್ಟಲಲ್ಲಿ ವಿಳ್ಳೆದೆಲೆ ಎಲ್ಲಾ ಒಣಗ್ತಾ ಇದ್ದು. ಕವಳಾ ಹಾಕವಿಲ್ದೆ. ಅಯ್ಯ ಯಾವಾಗ ಈ ರೋಗ ಗುಣ ಆಗ್ತ ಏನ? ಶಿವನೆ!” ಅಜ್ಜಿಯ ವಟಗುಟ್ಟುವಿಕೆ ಯಾರ ಕಿವಿಗೂ ಬೀಳಲಿಲ್ಲ.

ಅಜ್ಜಿಯ ಮಾತು ನಿಜವಿರಲೂ ಬಹುದು. ಆದರೆ ಶಾಸ್ತ್ರ, ಸಂಪ್ರದಾಯ ಏನೇ ಇರಬಹುದು ಮನೆ ಮಂದಿಯನ್ನೆಲ್ಲ ಮಹಾರೋಗ ಆವರಿಸಿದಾಗ ಇದ್ಯಾವುದು ಗಣನೆಗೆ ತೆಗೆದುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಎಷ್ಟು ದುಡ್ಡಿದ್ದರೇನು? ಮನುಷ್ಯನಿಗೆ ಆರೋಗ್ಯ ಚೆನ್ನಾಗಿ ಇದ್ದರೆ ಎಲ್ಲವೂ ಇದ್ದಂತೆ. ಪ್ರತಿಯೊಂದು ಪಾಲಿಸುತ್ತ ದುಡಿದಾದರೂ ಬದುಕಬಹುದು. ಅದೇ ಆರೋಗ್ಯ ಕೈ ಕೊಟ್ಟರೆ ಜೀವನ ನಿರ್ವಹಣೆ ಕೂಡಾ ಕಷ್ಟವಾಗಿಬಿಡುತ್ತದೆ. ಆಗ ಯಾವ ಶಾಸ್ತ್ರ, ಸಂಪ್ರದಾಯ ಮನುಷ್ಯ ಅನುಸರಿಸಲೂ ಸಾಧ್ಯ ಇಲ್ಲ ; ಅದರ ಪರಿಣಾಮಗಳ ಬಗ್ಗೆಯೂ ಗಮನ ಹರಿಸಲು ಸಾಧ್ಯ ಇಲ್ಲ. ಆರೋಗ್ಯವೇ ಎಲ್ಲದಕ್ಕೂ ಬುನಾದಿ.
***************

10-4-2018. 1.15pm

Advertisements

ಆಗಂತುಕ (ಸಣ್ಣ ಕಥೆ)

ಆಗತಾನೆ ಊರಿಗೆ ಬಂದಿಳಿದ ನವ್ಯಾ ತನ್ನಜ್ಜನ ಮನೆಯಲ್ಲಿ ಮನಸೋ ಇಚ್ಛೆ ಸುತ್ತಾಡಿ ಕಾಲ ಕಳೆಯ ಬೇಕು, ರಜೆಯ ಮಜಾ ಸವಿಯಬೇಕು ಎನ್ನುವ ಹುಮ್ಮನಸ್ಸು. ನಿಂತಲ್ಲಿ ನಿಲ್ಲಲಾರಳು, ಕುಳಿತಲ್ಲಿ ಕುಳ್ಳಲಾರಳು. ಮಾವನ ಮಕ್ಕಳ ಜೊತೆಯಲ್ಲಿ ಸದಾ ತೋಟ, ಗದ್ದೆ , ಬೆಟ್ಟ ಬ್ಯಾಣ ಎಲ್ಲ ಸುತ್ತಾಡಿ ಕೈಗೆ ಸಿಕ್ಕ ಹಣ್ಣು ಹೂವು ಒಂದಷ್ಟು ಗುಡ್ಡೆ ಹಾಕಿಕೊಂಡು ಅಜ್ಜನ ಮುಂದೆ ಕೂತು “ಅಜಾ ಇಲ್ನೋಡು ಈ ಹಣ್ಣಿಗೆ ಎಂತಾ ಹೇಳ್ತ್ವೋ? ಈ ಹೂವಿಗೆ ಎಂತಾ ಹೇಳ್ತ್ವೋ?” ಅವಳ ಪ್ರಶ್ನೆಗಳ ಸುರಿಮಳೆ ಹಲ್ಲಿಲ್ಲದ ಬೊಚ್ಚು ಬಾಯಲ್ಲಿ ಗಿಕಿ ಗಿಕಿ ನಗುವುದು ಅಜ್ಜನ ಸರದಿಯಾಗಿತ್ತು. ಎಷ್ಟೆಂದರೂ ಸಿಟಿಯಲ್ಲಿ ಬೆಳೆದ ಮುದ್ದಿನ ಮೊಮ್ಮಗಳಲ್ಲವೆ? ಮನೆಯಲ್ಲಿ ಮಗನ ಮಕ್ಕಳು ಇದ್ದರೂ ಅಪರೂಪಕ್ಕೆ ಬರುವ ಮಗಳ ಮಗಳಿಗೆ ಒಂದು ಸೇರು ಪ್ರೀತಿ ಜಾಸ್ತಿನೇ ಅನ್ನಬಹುದು.

ಒಂದು ನಾಲ್ಕು ದಿನ ಕಳೆದಿರಬಹುದು ಇವಳಿಗೆ ಹಳ್ಳಿ ಸುತ್ತಾಡಿ ಸಖತ್ ಧೈರ್ಯ ಬೇರೆ ಬಂದುಬಿಟ್ಟಿತ್ತು. ಒಂದಿನ ಒಬ್ಬಳೇ ಬೆಳ್ಳಂಬೆಳಗ್ಗೆ ಎದ್ದು ಅಡಿಕೆ ತೋಟಕ್ಕೆ ಲಗ್ಗೆ ಇಟ್ಟಳು. ಕೈಯಲ್ಲಿ ಒಂದು ಕೋಲು ಬೇರೆ ಇತ್ತು. ಜೋರಾಗಿ ಹಾಡು ಹೇಳಿಕೊಂಡು ಸಾಗಿತ್ತು ಇವಳ ಸುಪ್ರಭಾತದ ಪೇರಿ ಅಡಿಕೆಯ ಮರಗಳ ಮದ್ಯೆ. ಅಲ್ಲೊಂದು ಸುಂದರ ಕೆರೆ ನೋಡಿದ್ದೇ ತಡ ಹೋ…..ಎಂದು ಇನ್ನಷ್ಟು ಉಮೇದಿಯಲ್ಲಿ ಕೆರೆಯ ಕಟ್ಟೆಯ ಮೇಲೆ ನೀರಿಗೆ ಕಾಲು ಇಳಿಸಿಕೊಂಡು ಕುಳಿತಳು ಆಟವಾಡುತ್ತ.

ಏನೋ ಸರ ಸರ ಸದ್ದು. ಆ ಕಡೆ ಈ ಕಡೆ ನೋಡುತ್ತಾಳೆ. ಯಾರೂ ಕಾಣ್ತಿಲ್ಲ. ಮತ್ತೆ ತನ್ನ ಸಂತೋಷದ ಕ್ಷಣಗಳಲ್ಲಿ ಮಗ್ನವಾದಳು. ಸ್ವಲ್ಪ ಹೊತ್ತಲ್ಲಿ ಮತ್ತದೇ ಸದ್ದು. ಈಗ ತಡ ಮಾಡಲಿಲ್ಲ. ದಿಗ್ಗನೆ ಎದ್ದು ಸೆಟೆದು ನಿಂತು ಕೈಯಲ್ಲಿ ಇರುವ ಕೋಲನ್ನು ಮೇಲಕ್ಕೆತ್ತಿ ಹಿಡಿದು “ಯಾವನೋ ಅವನು? ನಂಗೆ ಹೆದರಸಕೆ ನೋಡ್ತ್ಯ? ನಾ ಹೆದರ್ತ್ನಿಲ್ಲೆ. ಧೈರ್ಯ ಇದ್ದರೆ ಎದುರಿಗೆ ಬಾ ನೋಡನ” ಅಂದಳು.

ಅಲ್ಲೆ ಹತ್ತಿರದ ಬಾಳೆಯ ಹಿಂಡಿನಿಂದ ಇದುವರೆಗೂ ಅವಳನ್ನು ಹಿಂಬಾಲಿಸಿಕೊಂಡು ಬಂದ ಹುಡುಗ ಕೊಂಚ ಬಗ್ಗಿ ನೋಡಿದ. ಮುಖ ಮಾತ್ರ ಕಂಡಿತು. ಕೈ ಉದ್ದ ಮಾಡಿ “ತಗ ನಿಂಗೆ ಹೇಳಿ ತಂಜಿ ಈ ಹಣ್ಣು. ತಿನ್ನು. ರಾಶಿ ರುಚೀ ಇದ್ದು. ಇದು ಸಿಟಿಯಲ್ಲಿ ಸಿಗ್ತಿಲ್ಲೆ.”

ಇವಳು ಹಣ್ಣನ್ನು ಯಾವ ಮುಲಾಜಿಲ್ಲದೆ ಪಡೆದು ಮನೆಗೆ ಬಂದು ಅಜ್ಜನ ಮುಂದೆ ಹಿಡಿದು “ಹೇಳಾ ಅಜಾ, ಇದೆಂತಾ ಹಣ್ಣು. ಆ ಹುಡುಗಾ ಕೊಟ್ಟಾ. ಅವ ಯಾರೋ ಏನೊ. ಆದರೆ ಆ ಮಾಣಿದು ಕಾಜ್ಗಣ್ಣು ನೋಡು”

“ಅಯ್ಯೋ ಕೂಸೆ ಇದು ಬಿಕ್ಕೆ ಹಣ್ಣೆ. ಒಡಕಂಡು ತಿನ್ನವು ಅದರೊಳಗಿನ ಗುಳವಾ. ಇದು ಕಾಯಿ ಇದ್ದಾಗ ಹಸಿರು ಬಣ್ಣದಲ್ಲಿ ಇರ್ತು. ಹಣ್ಣಾಗುತ್ತ ಬಂದ ಹಾಗೆ ಸ್ವಲ್ಪ ಹಳದಿ ಬಣ್ಣಕ್ಕೆ ತಿರಗ್ತು. ಇದು ನಮ್ಮ ಮಲೆನಾಡಿನ ಗುಡ್ಡ ಬೆಟ್ಟಗಳಲ್ಲಿ ಮಾತ್ರ ಬೆಳೆಯುವ ಹಣ್ಣು. ಇದರ ಸಂತತಿ ಈಗ ಅಪರೂಪ ಆಗ್ತಾ ಇದ್ದು. ಈ ಹಣ್ಣು ಏಪ್ರಿಲ್ನ ಮೇ ತಿಂಗಳಿನಲ್ಲಿ ಹಣ್ಣಾಗ್ತು. ನವಿಲುಗಳು ಕಂಡರೆ ಬಿಡ್ತ್ವಿಲ್ಲೆ. ಸಮಾ ಬಾಯಲ್ಲಿ ಅದರ ಕೊಕ್ಕಲ್ಲಿ ಎರಡು ಹೋಳು ಮಾಡಿ ಅದರೊಳಗಿನ ಹಿಟ್ಟಿನಂತ ಗುಳಾ ತಿಂತ. ಆಶ್ಚರ್ಯ ಆಗ್ತು ಅಲ್ದ? ಆದರೆ ಇದು ನಂಗ ಕಣ್ಣಾರೆ ಕಂಡ ದೃಶ್ಯ. ನಾವು ಕೂಡಾ ಈ ಹಣ್ಣು ತಿನ್ನವು ಅಂದರೆ ಬಾಯಲ್ಲಿ ಕಚ್ಚಿ ಎರಡು ಹೋಳು ಮಾಡಿ ನಾಲಿಗೆಯಿಂದ ಅದರೊಳಗಿನ ಗುಳಾ ತೆಕ್ಕಂಡು ತಿನ್ನವು. ಈ ಹಣ್ಣು ತಿನ್ನದೆ ಹೀಂಗೆ.”

“ಈ ಹಣ್ಣು ತಂದುಕೊಟ್ಟ ಅವನ…? ಅವಾ ಯಂಗ್ಳೂರ್ ಮಾಣಿನೆಯಾ. ತಗ ತಿನ್ನು.”

ಎಂದೂ ಕಾಣದ ಪರಿಚಯವೇ ಇಲ್ಲದ ಆ ಆಗಂತುಕನಿಗೆ ಮನಸ್ಸಲ್ಲೇ ಕೃತಜ್ಞತೆ ಸಲ್ಲಿಸಿ ಹಣ್ಣು ಬಾಯಿಗಿಟ್ಟಳು ನವ್ಯಾ. ಅದರ ರುಚಿಗೆ ಅವಳೂ ಮಾರು ಹೋಗುತ್ತಿರುವುದ ಕಂಡು ಅಜ್ಜನ ಮುಖದಲ್ಲಿ ಸಂತೃಪ್ತಿಯ ಭಾವ ಎದ್ದು ಕಾಣುತ್ತಿತ್ತು. ಇದೇ ಅಲ್ಲವೇ ಮೊಮ್ಮಕ್ಕಳ ಬಗೆಗಿರುವ ಅಜ್ಜನ ಪ್ರೀತಿ!!

28-5-2018. 12.39pm

ಮಮತೆ (ಸಣ್ಣ ಕಥೆ)

“ಮಗಾ ಮನೆ ಕಡೆ ಹುಷಾರೋ. ತಂಗಿ ಯಂಗ ಹೋಗ್ ಬರ್ತ್ಯ. ಒಂದು ವಾರ ಮನೆ ಬದಿಗೆ ನೋಡ್ಕಳ ಜವಾಬ್ದಾರಿ ನಿಂದೆಯಾ. ಎಲ್ಲಾ ನಿಂಗೆ ಹೇಳ್ಕೊಟ್ಟಿದ್ನಲೆ. ಮತ್ತೆ ಮರ್ತಿಕಡಾ. ಯಂಗ ಲಗೂನೆ ಬತ್ಯ ಅಕಾ. ಬರ್ಲ…”

ಸರಸಕ್ಕನ ಸವಾರಿ ಚೌತಿ ಮರ್ದಿಸ ಕಾಶಿಯಾತ್ರೆಗೆ ಹೊರಟಿತ್ತು ಹತ್ತಿರದ ಬಳಗದವರ ಜೊತೆ. “ಜೀವನದಲ್ಲಿ ರಾಮಾಶಿವಾ ಹೇಳ ಕಾಲ ಬಂತು ಎಲ್ಲೂ ಹೋಗದೇ ಇದ್ರೂವಾ ಕಾಶಿ ರಾಮೇಶ್ವರ ಯಾತ್ರೆನರೂ ಮಾಡಿದರೆ ಪುಣ್ಯ ಬರ್ತಡಾ” ಹೇಳಿ ಎಲ್ಲರೂ ಹೇಳಿದ್ದು ಹೌದೆಂತನಿಸಿ ಮನೆ ಬದಿಗೆ ತಾಪತ್ರಯ ಇದ್ರೂ ಕಾಶಿ ಯಾತ್ರೆಗೆ ಹೊಂಟಿದ್ದು ಸರಸಕ್ಕ. ಅದೂ ವಿಮಾನದಲ್ಲಿ. ದುಡ್ಡು ಕಾಸಿಗೇನೂ ಕೊರತೆ ಇಲ್ಲೆ. ಗಂಡನ ಅಕಾಲಿಕ ಮರಣದ ನಂತರ ಇರುವ ಆಸ್ತಿ ಮನೆ, ಮಕ್ಕಳ ಪಾಲನೆ ಪೋಷಣೆಯಲ್ಲಿ ಜೀವ ಹೈರಾಣಾದರೂವಾ ಒಂದಿನಿತೂ ಬೇಸರ ಪಟ್ಟುಕೊಳ್ಳದೆ ನೆಂಟರು ಬಂದುಬಳಗದಲ್ಲಿ ಅವಳಿಗೆ ವಿಶೇಷ ಗೌರವ, ಆದರ.

ಅಂದವಾಗಿ ಬೆಳೆದು ನಿಂತ ಮಕ್ಕಳ ಮದುವೆ ಜವಾಬ್ದಾರಿ ನಿಭಾಯಿಸಲು ಕೊಂಚ ಸೋತಂತೆ ಆಗಾಗ ಅವಳಿಗೆ ಅನಿಸಿದರೂವಾ “ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ? ಒಂದ್ ಗಂಡಿಗೆ ಒಂದು ಹೆಣ್ಣು ಇದ್ದೇ ಇದ್ದು. ಎಲ್ಲದಕ್ಕೂ ಕಾಲ ಕೂಡಿ ಬರವು” ಹೇಳಿ ಕೊಂಕು ಮಾತನಾಡುವವರಿಗೆ ಉತ್ತರಿಸುವ ಚಾಣಾಕ್ಷೆ ಅವಳು. ಮನೆವಾರ್ತೆ ಕೆಲಸವೆಲ್ಲ ಕಲಿಸಿ ಓದು ಬರಹ ತಾನು ಕಲಿಯದೇ ಇದ್ದರೂ ಮಕ್ಕಳಿಗೆ ಕಲಿಸಿ ಅವರವರ ಕಾಲ ಮೇಲೆ ನಿಲ್ಲಲು ಅನುವು ಮಾಡಿಕೊಟ್ಟವಳು.

ಇತ್ತ ಮಗಳು ಶಾರದೆ ಆಯಿ ಹೇಳಿಕೊಟ್ಟಂತೆ ಮನೆ ಕಡೆ ನಿಗಾ ವಹಿಸಿದ್ದರೆ ಮಗ ಶಂಭು ತೋಟದ ಕಡೆ ಆಳುಗಳ ಜೊತೆ ತನ್ನ ಕೆಲಸದಲ್ಲಿ ನಿರತನಾಗಿದ್ದ. ಎಷ್ಟೆಂದರೂ ಹಳ್ಳಿ ಅಂದ ಮೇಲೆ ಹಸು ಕರು ಇದ್ದಿದ್ದೆ. ದಿನಾ ಹೆಪ್ಪಾಕಿ ಕಡೆಯುವ ಮೊಸರಲ್ಲಿ ಅಂಗೈಗಲದ ಬೆಣ್ಣೆ ಮುದ್ದೆ ಬರುತ್ತಿತ್ತು. ಪ್ರತೀ ಶುಕ್ರವಾರ ಆ ಬೆಣ್ಣೆಗಳನ್ನೆಲ್ಲ ತೊಳೆದು ತುಪ್ಪ ಕಾಯಿಸುವಂತೆ ತಾನೂ ಅದೇ ಕೆಲಸ ಮಾಡಿ ಒಪ್ಪವಾಗಿ ಸೋಸಿ ತಣ್ಣಗಾದ ಮೇಲೆ ಸ್ಟೀಲ್ ಡಬ್ಬದಲ್ಲಿ ಮುಚ್ಚಿ ಇಟ್ಟಳು.

ಸರಿ ಒಂದು ವಾರದ ನಂತರ ಆಯಿಯ ಆಗಮನ. ಹುಷಾರು ಬೇರೆ ತಪ್ಪಿತ್ತು. ಮಗಳ ಉಸ್ತುವಾರಿ ಮತ್ತಷ್ಟು ದಿನ ಮುಂದುವರೆಯಿತು. ಆರೋಗ್ಯ ಒಂದು ಹಂತಕ್ಕೆ ಬಂದ ಮೇಲೆ ಹೋಗಿ ಮಜ್ಜಿಗೆ ಕಪಾಟಿನ ಬಾಗಿಲು ತೆಗೆದು ತುಪ್ಪದ ಡಬ್ಬಿಯ ಮುಚ್ಚಲ ತೆಗೆದರೆ ಕಮಟು ವಾಸನೆ. ಗೊತ್ತಾಯಿತು ಅವಳಿಗೆ ಮಗಳು ತುಪ್ಪ ಕಾಯಿಸಿದ ಅವಾಂತರ. ಸರಿ ಕಾಯಿಸಿದರೆ ಹೀಂಗ್ ಆಗ್ತಿತ್ತಾ? ಹೇಳಿದರೆ ಮಗಳೆಲ್ಲಿ ನೊಂದುಕೊಳ್ಳುವಳೊ ಎಂಬ ಆತಂಕ. ಪಾಪ! ಇನ್ನೂ ಹೊಸದು. ಇರಲಿ, ಈ ತುಪ್ಪ ಕಂಪಾದರೆ ಏನು? ದೇವರ ದೀಪಕ್ಕೆ ಇರ್ಲಿ. ಈ ವಾರದ್ದು ಸರಿ ಕಾಸಿ ಇಟ್ಟಕಂಡರೆ ಆತು ಅಂತ ಮಗಳಿಗೆ ಒಂದು ಮಾತೂ ಹೇಳದೇ ತನ್ನಲ್ಲೆ ತಾನು ಸಮಾಧಾನ ಪಟ್ಟುಕೊಂಡಳು ಆ ಮಾತೆ!

ಹೆಣ್ಣು ಮಕ್ಕಳಿಗೆ ಈ ರೀತಿ ನಯ ನಾಜೂಕಿನ ಕೆಲಸ ಆಗಾಗ ತಪ್ಪು ಮಾಡಿದರೂ ಸಹನೆ ತಾಳ್ಮೆಯಿಂದ ತಿದ್ದಿ ತೀಡಿ ಅವಳನ್ನು ಕೆಲಸದಲ್ಲಿ ಪಳಗಿಸುವ ಕಲೆ ತಾಯಿಯ ಹೊರತೂ ಇನ್ನಾರೂ ಮಾಡಲು ಸಾಧ್ಯವಿಲ್ಲ. ಅದೆಷ್ಟು ಹೆಣ್ಣು ಮಕ್ಕಳಿಗೆ ಈ ಭಾಗ್ಯ ಇದೆಯೊ ಗೊತ್ತಿಲ್ಲ. ಆ ತಾಯಿಯ ಮನಸ್ಸು ಅರಿತು ಜೀವನದಲ್ಲಿ ತನ್ನನ್ನು ತಾನು ತಿದ್ದುಪಡಿ ಮಾಡಿಕೊಂಡು ಬದುಕಿನ ಅರ್ಥ ಅರಿತು ಒಳ್ಳೆಯ ಗೃಹಿಣಿಯಾಗಿ, ಗಂಡನಿಗೆ ನೆರಳಾಗಿ, ಮಕ್ಕಳಿಗೆ ತಾನೂ ಮುಂದೊಮ್ಮೆ ಒಳ್ಳೆಯ ತಾಯಿಯಾಗಿ ತನ್ನ ತಾಯಿಯ ಸ್ಥಾನ ತುಂಬುವ ಕಲೆ ಮೈಗೂಡಿಸಿಕೊಂಡು ಬೆಳೆಯುವ ಮನಸ್ಸು ಹೆಣ್ಣು ಮಕ್ಕಳಲ್ಲೂ ಇರಬೇಕು. ಆಗ ಮಾತ್ರ ಒಂದು ಉತ್ತಮ ಗೃಹಿಣಿಯಾಗಿ ಬದುಕಲು ಸಾಧ್ಯ.

18-5-2028. 1.17pm

ರುಚಿ (ಸಣ್ಣ ಕಥೆ)

ಹಳ್ಳಿಯಿಂದ ದೂರವಿದ್ದರೂ ಅವಳಿಗೆ ತವರೂರಿನ ಬೆಳಗಿನ ತಿಂಡಿಯ ಮೊಗೆಕಾಯಿ ತೆಳ್ಳೆವು ಮರೆಯಲು ಸಾಧ್ಯ ಆಗಲೇ ಇಲ್ಲ. ಸದಾ ಅದರದೆ ನೆನಪು. ಮನೆಯ ತಿಂಡಿ ಹೇಗೆ ಮಾಡಿದರೂ ತೆಳ್ಳೆವಿನ ರುಚಿ ಸರಿಸಾಠಿ ಯಾವುದೂ ಇಲ್ಲ ಎಂದು ಗಂಡನೊಂದಿಗೆ ಹೊಗಳಿ ಹೊಗಳಿ ಅವನಲ್ಲೂ ಆಸೆ ಹುಟ್ಟಿಸಿದ್ದಳು.

ಒಂದಿನ ನಡಿ ನಿಮ್ಮೂರ ತೆಳ್ಳವು ದೋಸೆ ನಾನೂ ತಿನ್ನಬೇಕು ಎಂದು ಅವಳನ್ನು ಕರೆದುಕೊಂಡು ಬಸ್ಸೇರಿಯೇ ಬಿಟ್ಟ.

ಬೆಳಗಿನ ತಿಂಡಿ ಗರಿ ಗರಿಯಾಗಿ ಅತ್ತಿಗೆ ಎರೆದು ಜೊತೆಗೆ ಚಟ್ನಿ, ನೀರು ಬೆಲ್ಲ ಗಮ ಗಮ ತುಪ್ಪ ನಂಜಿಕೊಳ್ಳಲು ಹಾಕಿದಾಗ ಒಂದು ಹೊಟ್ಟೆ ಎರಡು ಬಾಯಿ ತಿನ್ನುವ ಪರಿ ಬೆರಗಾಗಿ ನೋಡುವ ಸರದಿ ಅವಳದಾಗಿತ್ತು!

ಸಂಜೆ ಗದ್ದೆಯಂಚಿಗೆ ನಡೆದಾಡುವಾಗ ” ಅಲ್ನೋಡಿ ಮಗೆ ಬಳ್ಳಿ ಹ್ಯಾಂಗ್ ನಗೆ ಚೆಲ್ಲಿದ್ದು. ಎಷ್ಟೆಲ್ಲಾ ಕಾಯಿ ಬಿಟ್ಟಿದ್ದು. ಇದು ಯಮ್ಮನೆ ಗದ್ದೆದೆಯಾ” ಹೇಳುತ್ತ ಕುಣಿದಾಡಿಬಿಟ್ಟಳು ಶೃತಿ. ಅವಳ ಕುಣಿತ ಅವನ ಖುಷಿ ಇಮ್ಮಡಿಸಿತ್ತು. ಇವರ ಸಂಭ್ರಮ ಕಂಡು ಮುಸ್ಸಂಜೆಯ ಸೂರ್ಯ ದಿಗಂತದಲ್ಲಿ ತಾನೂ ನಕ್ಕು ಮರೆಯಾದ!

13-5-2018. 7.41pm

ಹೆಣ್ಣು ಜನ್ಮ (ಕಥೆ)

” ಅಲ್ದೆ, ಗೌರಕ್ಕಾ ಆ ಹೇಳದು ಸುಳ್ಯ ಮಳ್ಳ ನೀನೇ ಹೇಳು. ಹುಟ್ಟದಾರಭ್ಯ ಒಂದಿನನರೂ ಪುರಸತ್ತು ಹೇಳದಿದ್ದನೆ ಹೆಂಗಸರಿಗೆ? ಯಾವಾಗ ನೋಡಿದರೂ ಕೆಲಸಾ ಕೆಲಸಾ ಕೆಲಸಾ. ಶಣ್ಣ್ಕಿದ್ದಾಗ ಯನ್ನ ಅಪ್ಪನ ಮನೆಯಲ್ಲಿ ಹೆಣ್ಣುಡ್ರು ಶಣ್ಣ್ಕಿಂದಾನೆ ಮನೆವಾರ್ತೆ ಕಲತ್ಕಂಡ್ರೆ ಚೊಲೋದು. ಕಡಿಗೆ ಗಂಡನ ಮನಿಗೆ ಹೋದಾಗ ಸಸಾರಾಗ್ತು. ಇಲ್ಲೆ ಅಂದ್ರೆ ಅತ್ತೆ, ಮಾವ, ಮೈದುನ,ನಾದಿನಿ ಎಲ್ಲರೂ ಆಡ್ಕತ್ತ ;

“ಇದನ್ ಎಲ್ಲಿಂದಾ ಹೇಳಿ ಹುಡ್ಕಂಡ ಬಂದಿ ನಿಂಗವು? ಇಶಿಶಿ ಒಂದ ಕೆಲಸರೂ ನೆಟ್ಟಗೆ ಬತ್ತನೆ? ಎಂತರು ಮಾಡಲೋಕ್ತು, ಎಂತರೂ ಡಮಾರ್ ಅನಸ್ತು, ಅದರ ಕೈಗೆಂತರು ಕೊಕ್ಕಿದ್ದನೆ…? ಅಯ್ಯೋ ರಾಮನೆ! ಯಂಗಕಗಂತೂ ಅದಕೆ ಅಡಿಗೆ ಮನೆ ಚಾಕ್ರಿ ಹೇಳಲ್ಲೇಯಾ ರಾಶಿ ಹೆದರ್ಕ್ಯತ್ತು. ಅದರಪ್ಪನ ಮನೆಯಲ್ಲಿ ಎಂತಾ ಕೆಲಸನೂ ಹೇಕೋಟ್ಟಿದ್ವೇ ಇಲ್ಯಕ್ಕೆ. ಮದುವೆ ಮಾಡಿ ಯಮ್ಮನಿಗೆ ಸಾಗಾಕಿಗೀದಾ. ಈಗ್ ಯಂಗ್ ಅನುಭವಿಸವು”.

ಹೀಂಗೆಲ್ಲಾ ಆಡ್ಕ್ಯತ್ತ ಹೇಳಿ ಬೆಳಗಿನ ಜಾವ ಐದ್ ಗಂಟೀಗೇಯಾ ಯನ್ನ ಅಜ್ಜಿ ಒಂದಿತ್ತೆ ಮಾಂಕಾಳಕ್ಕಾ ಹೇಳಿ, ಅದಕೆ ಒಂಬತ್ ವರ್ಷಕ್ಕೆ ಮದುವೆ ಮಾಡಿ ಹನ್ನೆರಡು ವರ್ಷಕ್ಕೆ ಮೈ ನೆರತ್ತಡಾ. ಯನ್ನಪ್ಪಯ್ಯಾ ಅದರ ಹದಿನಾಲ್ಕು ವರ್ಷಕ್ಕೆಲ್ಲಾ ಹುಟ್ಟಿದ್ನಡಾ. ಕಡಿಗೆ ಹೇಳ್ತಿ ಕೇಳು ಯನ್ನ ಅಜ್ಜ ಮಗ ಹುಟ್ಟಿ ಆರ್ ತಿಂಗಳೀಗೆಯಾ ರಕ್ತ ಹೊಟ್ಬ್ಯಾನೆ ಬಂದು ಸತ್ತೋದ್ನಡ. ತಲೆ ಬೋಳಸಿ ಕೆಂಪುಸೀರೆ ಉಡಿಸಿ ಹಿತ್ಲಾಕಡೆ ಬದಿಗೆ ನೀನಿರು ಹೇಳ್ಬುಟ್ವಡೆ. ಪಾಪನೆ.

ಅದಕೆ ತನಗ್ ಬಂದ ಕಷ್ಟ ತಮ್ಮನೆ ಹೆಣ್ಮಕ್ಕಗೂ ಬರದು ಬ್ಯಾಡಾ ಹೇಳಿ ಯಂಗ ನಾಲ್ಕು ಜನ ಹೆಣ್ಮಕ್ಕಗೂ ಸರಿಯಾಗಿ ಕೆಲಸ ಗಿಲಸಾ ಕಲಿಸಿ ಒಳ್ಳೆ ಮನೆ ಸೇರಸವು ಹೇಳಿ ಹೆಣಗಾಡ್ತಿತ್ತೆ. ದೊಡ್ಡ ಹೆಗಡೆಪ್ಪನ ಮನೆ ಹೇಳಿ ಯಂಗಿಲ್ಲಿಗೆ ಮದುವೆ ಮಾಡಿ ಕೊಟ್ವೆ.

ಆದ್ರೆ ಯಂಗೆ ಸುಃಖ ಇಲ್ಯೆ. ಒಂದಂದ ಸರ್ತಿ ಸಾಯ್ಲಿ ಒಂದಿನ ತೆರ್ಪಿಲ್ಲೆ, ಎಂತಕ್ ಬೇಕು ಈ ಬದುಕು ಹೇಳಿ ರಾಶಿ ಬೇಜಾರಾಗ್ತು ಗೊತ್ತಿದ್ದ?”

ತಡಿಯೆ ಒಲೆ ಮ್ಯಾಲೆ ಹಾಲಿಟ್ಟಿಕ್ಕೆ ನಿನ್ನ ಹತ್ರ ಸುಃಖ ದುಃಖ ತೋಡ್ಕಂಬಲೆ ಬಂದೀಗೀದಿ. ಆತು ಬತ್ನೆ.

3-4-2018. 12.27pm

ತೃಪ್ತಿ (ಸಣ್ಣ ಕಥೆ)

ಅವರಿನ್ನೂ ಹೊಸದಾಗಿ ಮದುವೆಯಾದ ದಂಪತಿ. ಹೇಳಿಕೊಳ್ಳುವ ಸ್ಥಿತಿವಂತರೇನೂ ಅಲ್ಲ. ಹಳ್ಳಿಯಲ್ಲಿ ಒಂದು ಪುಟ್ಟ ಮನೆ. ತಂದೆ ತಾಯಿ, ಓದುತ್ತಿರುವ ತಂಗಿಯನ್ನು ಸಾಕುವ ಜವಾಬ್ದಾರಿ ಅವನ ಹೆಗಲಿಗಿತ್ತು. ಈಗ ಮದುವೆಯಾದ ತನ್ನ ಹೆಂಡತಿಯ ಜವಾಬ್ದಾರಿ ಬೇರೆ. ಅವಳು ಹೆಚ್ಚು ಕಲಿತವಳಲ್ಲ. ಊರಿನ ಪರಿಚಯದವರ ದೂರದ ನೆಂಟರ ಮಗಳು ; ಇವನ ಗುಣ ನಡತೆ ಕಂಡು ತಾವಾಗೇ ಕೇಳಿಕೊಂಡು ಬಂದ ಸಂಬಂಧ. ಇವನಿಗೋ ಎಲ್ಲಾ ಜವಾಬ್ದಾರಿ ತನಗಿರುವಾಗ ಈಗಲೇ ಮದುವೆ ಏಕೆ ಎಂದು ಗೊಣಗಾಡಿದ, ಹಿರಿಯರ ಒತ್ತಾಸೆಗೆ ಮದುವೆನೂ ಆದ. ವಯಸ್ಸು ಇನ್ನೂ ಅವಳಿಗೆ ಹದಿನೆಂಟು, ಇವನಿಗೆ ಇಪ್ಪತ್ತೈದು. ತಂಗಿಗೆ ಅವಳದೇ ವಯಸ್ಸು. ಹೀಗಿರುವಾಗ ಅತ್ತಿಗೆ ನಾದಿನಿಯರಿಬ್ಬರೂ ಒಂದೇ ವಾರಿಗೆಯವರಾಗಿರುವುದರಿಂದ ಸಂಸಾರದಲ್ಲಿ ಯಾವ ಜಗಳ, ತಕರಾರು ಇರಲಿಲ್ಲ. ಸಂಸಾರ ಸಾಂಗವಾಗಿ ನಡೆಯುತ್ತಿತ್ತು.

ಆದರೆ ಅಷ್ಟು ಚಿಕ್ಕ ಮನೆಯಲ್ಲಿ ಇರುವುದೊಂದೇ ಕೋಣೆ. ಜಗುಲಿ ದೊಡ್ಡದಾಗೇನೋ ಇತ್ತು. ಆದರೆ ಅಪ್ಪ ಅಮ್ಮ ಮದುವೆಯಾದ ಮಗನಿಗೆ ತಮ್ಮ ಕೋಣೆ ಬಿಟ್ಟುಕೊಟ್ಟಾಗ ಇವನ ಮನಸ್ಸಿಗೆ ಸಮಾಧಾನ ಇರಲಿಲ್ಲ. ಸದಾ ಒಳಗೊಳಗೆ ಒಂದು ರೀತಿ ಸಂಕಟ. ಬೆಚ್ಚಗಿನ ಕೊಠಡಿಯಲ್ಲಿ ವಯಸ್ಸಾದ ತಂದೆ ತಾಯಿ ಮಲಗಲು ಬಿಡದೆ ತಾನು ಕಸಿದುಕೊಂಡೆ ಅನ್ನುವ ಭಾವ. ಜೊತೆಗೆ ವಯಸ್ಸಿಗೆ ಬಂದ ತಂಗಿ ಹಜಾರದಲ್ಲಿ ಮಲಗುವುದು ಅಂದರೇನು?

ಹೀಗೆ ಯೋಚಿಸುತ್ತಿದ್ದ ಅವನು ಒಂದು ತೀರ್ಮಾನಕ್ಕೆ ಬಂದ. ತಾನು ಕೆಲಸ ಮಾಡುತ್ತಿದ್ದ ಸೊಸೈಟಿಯಲ್ಲಿ ಸ್ವಲ್ಪ ಸಾಲ ತೆಗೆದುಕೊಂಡು ಇನ್ನೊಂದು ಕೋಣೆ ಕಟ್ಟಿಸಿಬಿಡುವಾ. ಆಗ ಈ ಸಮಸ್ಯೆಗೆ ಪರಿಹಾರ ಕೂಡಾ ಸಿಕ್ಕಂತಾಗುತ್ತದೆ. ಈ ವಿಚಾರವಾಗಿ ತನ್ನ ಅಮ್ಮನಲ್ಲಿ ಹೇಳಿದಾಗ ಅವಳು ಇವನ ಮಾತಿಗೆ ಏನೂ ಹೇಳಲಾಗದೆ ಮೌನವಾಗಿದ್ದಳು. ಆದರೆ ಒಳಗೊಳಗೆ ಬಹಳ ಸಂತೋಷಪಟ್ಟಳು. ಮಗ ಇನ್ನೊಂದು ಕೊಠಡಿ ಕಟ್ಟಿಸುತ್ತಿರುವ ಬಗ್ಗೆ ಅಲ್ಲ ; ಹೆತ್ತವರ ಬಗ್ಗೆ ಅವನಿಗಿರುವ ಕಾಳಜಿ, ಪ್ರೀತಿ ಅವಳ ಹೃದಯ ತುಂಬಿ ಬಂತು. “ನಿನ್ನಭಿಲಾಷೆ ಈಡೇರಲಿ” ಎಂದು ಹರಸಿದಳು.

ಅದೊಂದು ಶುಭದಿನ ಆಫೀಸಿಗೆ ಹೋದವನೆ ತನ್ನ ಮೇಲಧಿಕಾರಿಯ ಹತ್ತಿರ ತನ್ನ ಸಮಸ್ಯೆ ಮುಂದಿಡುತ್ತಾನೆ. ಮತ್ತು “ನನಗೆ ಮನೆ ಇನ್ನಷ್ಟು ದೊಡ್ಡದಾಗಿ ಕಟ್ಟಲು ತಮ್ಮಲ್ಲಿ ಸಾಲ ಸಿಗಬಹುದೇ?” ಎಂದು ಕೇಳುತ್ತಾನೆ. ಅವರು ಇವನಿಗಿರುವ ವ್ಯವಸಾಯದ ಉತ್ಪನ್ನ ಇತ್ಯಾದಿ ತಿಳಿದು “ನೀವು ಕೇಳಿದಷ್ಟು ಸಾಲ ಕೊಡಲು ಕಷ್ಟ. ಸ್ವಲ್ಪ ಬೇಕಾದರೆ ಕೊಡಬಹುದು. ಮಿಕ್ಕಿದ್ದು ನೀವೆ ಹೇಗಾದರೂ ಹೊಂದಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ” ಎಂದು ಹೇಳುತ್ತಾರೆ.

ಮನೆಗೆ ಬಂದ ಮಗನ ಮುಖ ನೋಡಿದ ತಾಯಿ ಅವನಿಗಾದ ನಿರಾಸೆ ಅರ್ಥ ಮಾಡಿಕೊಂಡು “ಬಾ ಮಗಾ ಇಲ್ಲಿ. ಇಷ್ಟಕ್ಕೆಲ್ಲಾ ಚಿಂತೆ ಮಾಡಿದರೆ ಹೇಗೆ? ನಾವು ಇದೇ ಚಿಕ್ಕ ಮನೆಯಲ್ಲಿ ಬಾಳಿ ಬದುಕಿಲ್ಲವೇ? ಈಗ ನಿನ್ನ ಹೆಂಡತಿಯೊಬ್ಬಳು ಮಾತ್ರ ಹೆಚ್ಚಾಗಿದ್ದಾಳೆ. ತಲೆ ಕೆಡಿಸಿಕೊಳ್ಳಬೇಡಾ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ಎಂದಾದರೂ ದಾರಿ ತೋರಿಸೇ ತೋರಿಸುತ್ತಾನೆ. ಒಳ್ಳೆ ಹೆಂಡತಿ, ಪ್ರೀತಿಯ ತಂಗಿ, ಜೊತೆಗೆ ನಾವು ಅನ್ಯೋನ್ಯವಾಗಿ ಇರುವಾಗ ಚಿಕ್ಕ ಮನೆ ಅಂತ ಚಿಂತೆ ಮಾಡಬೇಡಾ ಮಗಾ. ನಮಗಿಂತ ಚಿಕ್ಕ ಮನೆಯಲ್ಲಿ ಅದೆಷ್ಟು ಸಂಸಾರ ಬದುಕುತ್ತಿಲ್ಲ ಹೇಳು. ಯಾವಾಗಲೂ ನಮಗಿಂತ ಮೇಲಿನವರನ್ನು ನೋಡಬಾರದು, ನಮ್ಮ ಕತ್ತು ಯಾವಾಗಲೂ ಬಾಗಿರಬೇಕು. ನಮ್ಮೆದುರಿಗಿರುವ ಜವಾಬ್ದಾರಿಯ ಕಡೆ ನಮ್ಮ ಗಮನವಿರಬೇಕು. ಮನೆ ಎಷ್ಟು ದೊಡ್ಡದಾದರೇನು? ಮಲಗುವುದು ಆರಡಿ ಮೂರಡಿಯಲ್ಲಿ ಮಾತ್ರ. ವಿಶಾಲವಾದ ಮನಸ್ಸು ಮನೆಯನ್ನು ದೊಡ್ಡ ಮಾಡುವುದು. ಇರುವುದರಲ್ಲೇ ಅನುಸರಿಸಿಕೊಂಡು ಹೋಗುವ ನಡೆ ರೂಢಿಸಿಕೊ ಮಗಾ. ಇಲ್ಲಿ ಯಾರಿಗೂ ಇಲ್ಲದ ಚಿಂತೆ ನಿನಗ್ಯಾಕೆ. ಸುಮ್ಮನೇ ಇಲ್ಲದ ಯೋಚನೆ ಮಾಡುವುದು ಬಿಟ್ಟು ಕೈ ಕಾಲು ಮುಖ ತೊಳೆದು ಬಾ. ಮುದ್ದೆ ಉಣ್ಣುವಂತೆ” ಅನ್ನುತ್ತ ಅಡುಗೆ ಮನೆ ಕಡೆ ನಡೆದಳು.

ಅಮ್ಮನ ತಿಳುವಳಿಕೆಯ ನುಡಿ ಅವನ ಕಣ್ಣು ತೆರೆಸಿತು. ಮತ್ತೆಂದೂ ಸಾಲ ಮಾಡಿ ಮನೆ ಬೆಳೆಸಬೇಕೆಂಬ ಚಿಂತೆ ಮಾಡಲೇ ಇಲ್ಲ. ಚಿಕ್ಕ ಮನೆಯಲ್ಲಿ ಚೊಕ್ಕ ಸಂಸಾರ ಅವನದಾಗಿತ್ತು. ಮನೆಯಲ್ಲಿ ಸದಾ ನಗು ತುಂಬಿತ್ತು.
**************
16-2-2018. 7.31pm

ಭೂದಿ ಮುಚ್ಚಿದ ಕೆಂಡ(ಸಣ್ಣ ಕಥೆ)

ಒಂದಾನೊಂದು ಊರು. ಅಲ್ಲಿ ವೃದ್ಧ ದಂಪತಿಗಳಿಬ್ಬರು ಅನ್ನೋನ್ಯವಾಗಿ ವಾಸಿಸುತ್ತಿದ್ದರು. ಯಾವುದೋ ಕೇಂದ್ರ ಸರಕಾರಿ ನೌಕರಿಯಲ್ಲಿರುವ ಅವರು ನಿವೃತ್ತಿಯ ನಂತರ ಪುಟ್ಟದಾದ ಮನೆ ಖರೀದಿಸಿ ತಮ್ಮ ನಿವೃತ್ತಿ ಜೀವನ ಸಾಗಿಸುತ್ತಿದ್ದರು. ಒಬ್ಬರಿಗೊಬ್ಬರು ಎಲ್ಲ ಕೆಲಸದಲ್ಲೂ ಸಹಾಯ ಮಾಡಿಕೊಳ್ಳುತ್ತ ಸಾಯಂಕಾಲವಾದರೆ ಸಾಕು ಹತ್ತಿರದ ಉಧ್ಯಾನವನದಲ್ಲಿ ತಪ್ಪದೇ ವಾಯು ವಿಹಾರ ಮಾಡುವುದು ಪ್ರತಿನಿತ್ಯದ ದಿನಚರಿಯಾಗಿತ್ತು. ಅಲ್ಲೊಂದಿಷ್ಟು ಇವರಂತೆ ಬರುವ ಸಮವಯಸ್ಕರ ಪರಿಚಯ ಒಂದಷ್ಟು ಹರಟೆ,ನಗು,ಹಳೆಯ ನೆನಪುಗಳು ಹೊತ್ತು ಹೋಗಿದ್ದೇ ಗೊತ್ತಾಗುತ್ತಿರಲಿಲ್ಲ. ಆದರೆ ಮನೆಗೆ ಬಂದು ಊಟ ಮಾಡಿ ಮಲಗಿದಾಗ ಆಗಾಗ ಒಂದು ಕೊರಗು ಕಾಡುತ್ತಿತ್ತು. ಛೆ!ನಮಗೊಂದು ಸಂತಾನವಿದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು. ಇದೇ ಯೋಚನೆಯಲ್ಲಿ ಹೆಂಡತಿಯ ಕಣ್ಣಂಚು ಒದ್ದೆಯಾದಾಗಲೆಲ್ಲ ಗಂಡ ಸಮಾಧಾನ ಮಾಡುವುದು, ತಾನು ಮಾತ್ರ ಒಳಗೊಳಗೇ ಅಳುವುದು. ಅದೇ ಉಧ್ಯಾನವನದಲ್ಲಿ ದಿನವೂ ಸಾಯಂಕಾಲ ಅಲ್ಲೇ ಇರುವ ನಿಯಾನ್ ದೀಪದ ಕಂಬದ ಕೆಳಗೆ ಒಬ್ಬ ಚಂದದ ಹುಡುಗ ಪುಸ್ತಕ ಹಿಡಿದು ಓದುತ್ತ ಕುಳಿತಿರುತ್ತಿದ್ದ. ಇವರು ದಿನಾ ನೋಡುತ್ತಿದ್ದರಲ್ಲ ; ಹೀಗೆ ಒಂದು ದಿನ ವಾಕಿಂಗ ಮಾಡುತ್ತಿರುವಾಗ ಹೆಂಡತಿ ಯಾಕೊ ಸ್ವಲ್ಪ ವಾಲಿದಂತಾಗಿ ಇವರನ್ನು ಹಿಡಿದುಕೊಂಡಾಗ ಭಾರಕ್ಕೆ ಇವರೂ ಕೂಡಾ ಆಯ ತಪ್ಪಿ ಅಲ್ಲೇ ಕುಸಿದರು. ಹತ್ತಿರದಲ್ಲೆ ಇರುವ ಆ ಹುಡುಗ ಓಡಿ ಬಂದು ಹಿಡಿದು ಸರಿಯಾಗಿ ಕೂಡಿಸಿ ಇವರ ಚೀಲದಲ್ಲಿದ್ದ ನೀರು ಕುಡಿಸಿ ಸುಧಾರಿಸಿಕೊಳ್ಳಲು ಸಹಾಯ ಮಾಡಿದ. ಒಂದಷ್ಟು ಪರಿಚಯ ತನ್ನದು ಹೇಳಿಕೊಂಡು ನಡಿರಿ ನಿಮ್ಮನ್ನು ಮನೆಗೆ ನಾನೇ ಬಂದು ಬಿಡುತ್ತೇನೆ. ಈ ಸ್ಥಿತಿಯಲ್ಲಿ ನೀವಿಬ್ಬರೇ ಹೋಗುವುದು ಸರಿಯಲ್ಲ ಎಂದು ಹೇಳಿ ಇವರನ್ನು ಮನೆಯವರೆಗೂ ತಂದು ಬಿಟ್ಟ. ಅವನ ಅಪರೂಪದ ಗುಣ ಮಾತು ಈ ದಂಪತಿಗಳಿಗೆ ಮೋಡಿನೇ ಮಾಡಿತು. ಆಗಾಗ ಬಂದು ವಿಚಾರಿಸುವುದು,ಸ್ವಲ್ಪ ಹೊತ್ತು ಇದ್ದು ಹೋಗುವುದು ನಡೆದೇ ಇತ್ತು. ಹೀಗಿರಲಾಗಿ ಒಂದು ದಿನ ಅವರಿಬ್ಬರೂ “ನೀನು ಯಾಕೆ ಒಬ್ಬನೇ ರೂಮು ಮಾಡಿಕೊಂಡಿರಬೇಕು? ಬಂದು ನಮ್ಮ ಜೊತೆ ಇರು. ನಮಗೂ ಮಕ್ಕಳಿಲ್ಲ. ನಿನ್ನ ಓದು ಕೆಲಸ ಸಿಕ್ಕ ಮೇಲೆ ಬೇರೆ ಮನೆ ಮಾಡುವಂತೆ” ಅಂದರು. ಅವರ ಒತ್ತಾಯಕ್ಕೆ ಮಣಿದು ಈ ಹುಡುಗ ಅವರ ಮನೆಯಲ್ಲೇ ಇರಲು ಶುರು ಮಾಡಿದ. ಹೀಗೆ ಕೆಲವು ತಿಂಗಳು ಒಂದೆರಡು ವರ್ಷಗಳೇ ಕಳೆದವು. ಒಂದು ದಿನ ಉಧ್ಯಾನವನದಲ್ಲಿರುವ ಯಾರೊ ಅಪರಿಚಿತರೊಬ್ಬರು ಇವರನ್ನು ಕೇಳುತ್ತಾರೆ “ನಿಮ್ಮ ಮಗನಿಗೆ ಮದುವೆ ಮಾಡುತ್ತೀರಾ? ನನ್ನ ಮಗಳಿದ್ದಾಳೆ. ಹೇಗೂ ಕೆಲಸಕ್ಕೆ ಹೊಸದಾಗಿ ಸೇರಿದ್ದಾನಂತೆ. ಮೊನ್ನೆ ನಾನೇ ಮಾತನಾಡಿಸಿದೆ.” ಅದಕ್ಕವರು “ಇಲ್ಲಾರಿ. ನಮಗೆ ಅಷ್ಟು ಶಕ್ತಿ ಇಲ್ಲ. ಏನೊ ಓದಿಕೊಂಡು ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವವರೆಗೆ ನಮ್ಮ ಕೈಲಾದ ಸಹಾಯ ಮಾಡೋಣವೆಂದು ಅವನಿಗೆ ನಮ್ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದೇವೆ. ಇನ್ನೇನು ಕೆಲಸ ಸಿಕ್ಕಿದೆ. ಬೇರೆ ಮನೆ ಮಾಡಿ ಹೋಗುತ್ತೇನೆ ಎಂದು ಹೇಳಿದ್ದಾನೆ.” “ಅಲ್ಲಾ ಮತ್ತವನು ಇವರು ನನ್ನ ದತ್ತಕ್ಕೆ ತೆಗೆದುಕೊಂಡಿದ್ದಾರೆ. ಈ ಮನೆ ಅವರ ತಂದೆಯವರಿಂದ ಬಂದಿದದ್ದು. ದತ್ತು ತೆಗೆದುಕೊಳ್ಳುವಾಗಲೆ ಈ ಮನೆ ಕೂಡಾ ಅವರಪ್ಪ ನನ್ನ ಹೆಸರಿಗೆ ದಾನ ಪತ್ರ ಮಾಡಿಕೊಟ್ಟಿದ್ದಾರೆ. ಇವರನ್ನು ಕೊನೆವರೆಗೆ ಚೆನ್ನಾಗಿ ನೋಡಿಕೊ ಅಂತ ಹೇಳಿದ್ದಾರೆ “ಅಂದನಲ್ಲಾ. ಯಲಾ ಇವನಾ? ಹೀಗೊ ಸಮಾಚಾರಾ? ಅಂತಂದುಕೊಂಡು ಮನಸ್ಸಿನಲ್ಲೇ ಅವರಿಗೆ ಏನೂ ಹೇಳದೇ ಸೀದಾ ಮನೆಗೆ ಬಂದ ದಂಪತಿಗಳು ಅಕ್ಕ ಪಕ್ಕದವರ ಹತ್ತಿರ ನೆಂಟರಲ್ಲಿ ಈ ವಿಚಾರ ತಿಳಿಸುತ್ತಾರೆ. ನೋಡಿದರೆ ಹಲವರ ಹತ್ತಿರ ಇದು ನನ್ನ ಮನೆ. ನಾನು ಇವರನ್ನು ನೋಡಿಕೊಳ್ಳುತ್ತಾ ಇರೋದು ಅಂತ ಆಗಲೇ ಪ್ರಚಾರ ಬೇರೆ ಮಾಡಿದ್ದಾನೆ!! ನಂತರ ಇವನನ್ನು ಹೊರ ಹಾಕಲು ಪೋಲೀಸರ ಮೊರೆ ಹೋಗುವ ಹಂತಕ್ಕೆ ತಲುಪಿತು. ಇದಕ್ಕೇ ಹೇಳೋದು “ಅಂಗೈ ಕೊಟ್ಟರೆ ಮುಂಗೈ ನುಂಗಿದಾ” ಅಂತ. ಜೀವನದಲ್ಲಿ ಎಷ್ಟು ಎಚ್ಚರಿಕೆ ಇದ್ದರೂ ಸಾಲದು.

ಈ ಕಥೆ “ಸಂಪದ”ನೆಟ್ಟಲ್ಲಿ ಪ್ರಕಟವಾಗಿದೆ

29-12-2017. 1.19pm