
ಈ ಕವನ ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಗೆ ಕಳಿಸಿದ್ದೆ. ಗೋತಾ ಹೊಡಿತು. ಮೊನ್ನೆ ಕವಿವೃಕ್ಷ ಬಳಗದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕವನ ವಾಚನ ಮಾಡೊ ಅವಕಾಶ ಸಿಕ್ಕಿತು. ಇದೇ ಕವನ ಓದಿದೆ. ಕೆಲವರು ಜಾಕ್ಪಾಟ್ ಅಂತ ಖುಷಿ ಪಟ್ಟರು. ಇದೇ ಸಂಘದ WhatsApp groupಲ್ಲಿ ಒಬ್ಬರು “ಅಲ್ಲಿ ಕವಿಗಳು ಅದೇನಂತ ಕವನ ವಾಚನ ಮಾಡಿದರೊ…..ಇತ್ಯಾದಿ “ಚಾಟ್ ಮಾಡಿದ್ದು ಕಂಡೆ. ಅಲ್ಲಿರುವವರಿಗೂ ಗೊತ್ತಿದೆ ಹಾಗೆ ಸಾಕಷ್ಟು ಜನ ಪ್ರತಿಕ್ರಿಯೆ ಕೂಡಾ ವ್ಯಕ್ತಪಡಿಸಿದ್ದಾರೆ
ಅಧ್ಯಕ್ಷತೆ ವಹಿಸಿದ್ದ. ಹಿರಿಯ ಕವಿಗಳಾದ ಶ್ರೀ ರಾಜೇಂದ್ರ ಪ್ರಸಾದ್, ಶ್ರೀ ಜರಗನಹಳ್ಳಿ ಶಿವಶಂಕರ್ ಇವರುಗಳೂ ಕೂಡಾ ಕವನ ವಾಚನ ಮಾಡಿದ್ದಾರೆ. ಹಾಗಾದರೆ ಅವರಿಗಿಂತ ಮೀರಿದ ಪ್ರತಿಭೆ ಇವರದಾ? ಇದು ನನ್ನ ಕಾಡುತ್ತಿತ್ತು. ತಡ ರಾತ್ರಿವರೆಗೂ ನಿನ್ನೆ ನಿದ್ದೆ ಸುಳಿಯಲಿಲ್ಲ. ಹಾಗೆ “ಅವಧಿ”ನೆನಪಾಯಿತು. ಈ ಕವನದ ಗುಣಮಟ್ಟ ತಿಳಿಯುವುದಕ್ಕೋಸ್ಕರ ಮದ್ಯರಾತ್ರಿಯಲ್ಲಿ ಮೇಲ್ ಮೂಲಕ ಪ್ರಕಟಣೆಗೆ ಕಳಿಸಿದೆ.
ಸಾಮಾನ್ಯವಾಗಿ “ಅವಧಿ”ಯಲ್ಲಿ ನಮ್ಮ ಬರಹ ಪ್ರಕಟವಾಗಬೇಕೆಂದರೆ ಕಾಯಬೇಕು. ಇದು ಹಲವರಿಗೆ ತಿಳಿದ ವಿಷಯವೆ!
“I like ur spirit. kavite aashaya Chennagide. innoo 20 per cent fine tune aagabeku” ಸರ್ ರವರ ಮಾತು.
ನವ್ಯ ಕವಿಗಳಿಗೆ ಒಂದಷ್ಟು ಕಿವಿ ಮಾತು ಹೇಳುತ್ತ ಪ್ರೋತ್ಸಾಹಿಸುವ ಇಂತಹ ಹಿರಿಯ ಕವಿಗಳು ಇರುವುದು ನಮ್ಮೆಲ್ಲರ ಭಾಗ್ಯ. ಹಾಗೆ ಇಂದು ಅಲ್ಲಿ ಈ ಕವನ ಪ್ರಕಟವಾಗಿರೋದು Gn Mohan ಸರ್ ಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಏಕೆಂದರೆ ಈ ಕವನ ನನಗೊಂದು ಸವಾಲು ಹಾಕಿದ ಕವನ. ಇದರ ಸ್ಥಾನ ತಿಳಿಸಿಕೊಟ್ಟ “ಅವಧಿ” ಬಳಗಕ್ಕೆ ಧನ್ಯವಾದಗಳು. ಸರ್ ನಿಮಗೂ ಕೂಡಾ.
ಎಷ್ಟೆಂದರೂ ಪ್ರತಿಯೊಬ್ಬ ಬರಹಗಾರರಿಗೂ ಅವರ ಬರಹವೆಂದರೆ ಹೆತ್ತ ಮಕ್ಕಳಿದ್ದಂತೆ. ಏನಾದರೂ ತಪ್ಪುಗಳಿದ್ದರೆ ತಿಳಿದವರು ದಯವಿಟ್ಟು ತಿದ್ದಿ ಬುದ್ಧಿ ಹೇಳಿ. ಅದು ಬಿಟ್ಟು ಮನಸ್ಸಿಗೆ ಬಂದಂತೆ ಹಳಿಯುವುದರಿಂದ ಬರಹಗಾರರಿಗೂ ನೋವಾಗುತ್ತದೆ ಹಾಗೆ ನಿಮ್ಮ ವ್ಯಕ್ತಿತ್ವ ಅನಾವರಣಗೊಂಡು ಗೌರವ ಕಳೆದುಕೊಳ್ಳುತ್ತೀರಾ. ಇದು ನನ್ನ ಮನವಿ.
6-11-2018. 1.00pm
*******************
ಧಿರಿಸು
ಬಿಟ್ಟ ಕಣ್ಣು ಬಿಟ್ಟ ಹಾಗೆ
ನಿಂತು ನೋಡುತಲಿದ್ದೆ ತಲ್ಲೀನಳಾಗಿ
ಪಕಾ ಪಕಾ ಹೊಳೆವ ನಕ್ಷತ್ರದ ಮಿಂಚು
ಲಂಗಾ ದಾವಣಿ ಚೂಡಿದಾರು.
ಎಷ್ಟೊಂದು ಧಿರಿಸು ತೊಡುವ ಬಯಕೆ
ಪೇಟೆಯ ಸುತ್ತಿದಾಗ ಭುಗಿಲೇಳುತಿತ್ತು
ಅಂಗಡಿ ಮುಂದಿನ ಗೊಂಬೆ ಕಂಡಾಗೆಲ್ಲ.
ಆಗೆಲ್ಲಾ ಈ ಬೊಂಬೆಯೇ ನಾನಾಗಿದ್ದರೆ
ದಿನಕ್ಕೊಂದ್ಬಟ್ಟೆ ತೊಟ್ಟುಕೊಂಡು
ಕಂಡವರ ಕಣ್ಣು ಕುಕ್ಕುವ ಹಾಗೆ
ಒಂದಷ್ಟು ಸ್ಟೈಲು ಹೊಡಿಬಹುದಿತ್ತಲ್ಲಾ!
ಇಲ್ಕೇಳಿ ಹೀಗೊಂದಿನ
ಬಟ್ಟೆಯ ಖರೀಧಿಗೆ ನಾನೂ ಹೋದೆ
ಕಣ್ಣಿಗೆ ಬಿತ್ತು
ಸಂಪತ್ತಿಗೆ ಸವಾಲು ಸಿನೇಮಾದಲ್ಲಿ
ಮಂಜುಳಾ ಹಾಕಿದ ಆ ಚಂದದ ಡ್ರೆಸ್ಸು.
ಅಪ್ಪನಿಗೆ ದುಂಬಾಲು ಬಿದ್ದೆ
ಕೊಡಿಸೂ ಕೊಡಿಸೂ ಕೊಡಿಸೂ…
ಆಗಿನ ಕಾಲದ ಪ್ಯಾಷನ್ ದೊಗಳೆ ಪ್ಯಾಂಟು
ಅದಕೊಪ್ಪುವ ಚಂದದ ಟಾಪು
ಅಂಗಡಿ ಟೇಬಲ್ ಮೇಲೆ ಹರಡಿದ ಆ ಸೆಟ್ಟು
ನನಗಿಷ್ಟವಾದ ಕೆಂಪನೆ ಬಣ್ಣ
ಕೈ ನೇವರಿಸಿದ ನೆನಪಿನ ಬೊಟ್ಟು.
“ಅದು ನಮ್ಮಂಥವರು ಹಾಕುವುದಲ್ಲ
ಸುಮ್ನಿರು ನಾವು ಹಳ್ಳಿಯವರು”
ಖಡಕ್ಕಾದ ಅಪ್ಪನ ಮಾತು
ಹೃದಯ ಒದೆ ತಿಂದಂತಿತ್ತು
ನನ್ನ ಹಠ ಸೋತು ಹೋಗಿ
ಕಣ್ಣು ಕೆಂಪು ಗೋಲಿಯಾಯ್ತು.
ಹಿಂದೆಲ್ಲಾ
ವರ್ಷಕ್ಕೊಮ್ಮೆ ಬಟ್ಟೆಯ ಖರೀದಿ
ಸರ್ಕಾರಿ ಶಾಲೆಯ ಯುನಿಫಾರ್ಮು
ನೀಲಿಯ ಬಣ್ಣದ ಒಂದೇ ಥಾನು
ಶಾಲೆಗು ಮನೆಗು ಅದನ್ನೇ ಹಾಕು
ಕಡಿಮೆ ಖರ್ಚಿನ ನನ್ನಪ್ಪನ ಪ್ಲ್ಯಾನು
ಸ್ಕರ್ಟು ಫ್ರಾಕು ಎಲ್ಲರಿಗದರಲ್ಲೊಲೆದು
ಹಾಕಿ ಹೊರಟರೆ ತೇಟ್ ಪಾತ್ರೆ ಸೆಟ್ಟು
ಹಾಕಿದ್ದೇ ಹಾಕಿ ಬಲೂ ಬೇಜಾರು.
ಉರುಳಿತು ವರ್ಷ
ಲಂಗ ಹೋಗಿ ಸೀರೆ ಬಂತು
ಆಗಲೂ ಬರೀ ಇದೇ ಮಾತು
ದೊಡ್ಡ ಜನ ಉಡೊ ವಸ್ತ್ರ
ನಾವಾಸೆ ಪಡಲೇ ಬಾರದು
ಹಿಟ್ಲರ್ನಂತೆ ಕಟ್ ನಿಟ್ ಮಾತು.
ಕೊನೆ ಕೊನೆಗೆ
ಹೌದು ಇದೇ ನಿಜವಿರಬಹುದುದೆಂದು
ನಂಬಿಕೆ ಮಾತುಗಳ ಹಿಂದೆ
ಗಿರಕಿ ಹೊಡೆದೂ ಹೊಡೆದೂ
ಮನಸು ಅಪ್ಪ ನೆಟ್ಟ ಆಲದ ಮರಕೆ
ಜೋತು ಬಿತ್ತು.
ಅಬ್ಬಾ!
ಆ ಕಾಲಕ್ಕೂ ಈ ಕಾಲಕ್ಕೂ ತುಲನೆ ಮಾಡಿ
ಮನಸು ಹೀಂಗೆಲ್ಲಾ ಪೆಚ್ಚಾಗುವುದು ;
ಈಗಿನವರದು
ಸ್ವತಂತ್ರ ವ್ಯಕ್ತಿತ್ವ ಧಿಲ್ದಾರು ಲೈಫು
ಕಂತೆ ಕಂತೆ ತರಾವರಿ ಉಡುಪು
ಬೇಕಾದವರ ಜೊತೆಗೆಲ್ಲ ಸೆಲ್ಫಿ ಗಿಲ್ಫಿ
ಹೋಗಿ ಬರಲಿಕ್ಕಿಲ್ಲ ಯಾವ ಕಟ್ಟು ಪಾಡು
ಝಣ ಝಣ ಕಾಂಚಾಣ ಕೈ ತುಂಬಾ
ಶೋಕಿ ಜೀವನ ಸಖತ್ ಖುಲಾಸು
ಬದುಕೆಂದರೆ ಎಂಜಾಯ್
ಮಾಡಿಬಿಡಬೇಕೆನ್ನುವ ಮಾತು.
ಆದರಾಗ
ಸಂಪ್ರದಾಯದ ಹೆಸರಲ್ಲಿ
ಅದೆಷ್ಟೊಂದು ರಿಸ್ಟ್ರಿಕ್ಷನ್ನು
ಉಡಲು,ತೊಡಲು,ಮಾತಾಡಲು,
ಎಲ್ಲಿ ಹೋಗಲು,ಬರಲು
ಎದ್ದರೆ ತಪ್ಪು ಕುಂತರೆ ತಪ್ಪು
ಹೀಗಿರಬೇಕು ಹಾಗಿರಬೇಕು
ಸದಾ ಕಟ್ಟು ಕಟ್ಟಳೆಯಲ್ಲೆ
ಕಳೆದೋಯ್ತು ಕಾಲವೆಲ್ಲ
ಈಗ ನೆನಪಾಗಿ ಎಷ್ಟೊಂದು ವ್ಯಥೆ!!
3-8-2018. 3.42pm