ಓ ನನ್ನ ಬಾಲೆ..

ನಿದ್ದೆಗಣ್ಣಿನ ಲೋಲಾಕಿನಲಿ
ತೂರಾಡುವ ಈ ದೇಹ
ಭಾವ ಉಕ್ಕುಕ್ಕಿ ಹಿಡಿದಿಡುತ್ತದೆ
ನೀ ಬರಿ ಬರಿ ಎಂದು.

ಕಣ್ಣು ನೆತ್ತರಿನ ರಂಗು
ತಲೆ ತುಂಬ ಕವನದ ಗುಂಗು
ಇನ್ನೇನು ಬಿಚ್ಚಿಡುವ ಮನ
ಸದಾ ಟಿಂಗು ಟಾಂಗು.

ಸೈ ಏನ ಬರೆದೇನು
ಮೆಳ್ಳೆಗಣ್ಣ ಮಾಟಗಾತಿ ಕಿರಿದಾಗಿ
ಅಕ್ಷರ ಮಂಕಾಗಿ
ಪಟ ಪಟ ರೆಪ್ಪೆ ಆಡುವುದು!

ಬೆನ್ನ ಕತ್ತರಿ ಬಾಗಿ
ಹಸೆ ಸೇರ ಬಯಸಿದರೆ
ಇನ್ನಿಲ್ಲದ ಧಾವಂತ
ಲಟಪಟ ಉದುರುವ ಶಬ್ದಕ್ಕೆ.

ಚೆಲುವೆ ಬಲು ಮಾಟಗಾತಿ
ಕಪಿ ಮುಷ್ಟಿ ಹಿಡಿತ
ಕೆಕ್ಕರಿಸಿ ನೋಡಿದರೂ
ನುಣುಚಿಕೊಳ್ಳುವ ಸಂಗಾತಿ.

ಕೈಗೆ ಸಿಗದ ಕಾಜಾಣ
ಮನಸೆಲ್ಲ ದಿಗ್ಭಂದನ
ಒರಟೊರಟು ನೀನೆನಿಸಿದರೂ
ನೀನಿಲ್ಲದೇ ನಾನಿರಲಾರೆ.

ಅದೇನು ಸಾಂಗತ್ಯವೊ
ಜನ್ಮಾಂತರದ ಋಣವೊ
ಸಿಲುಕಿದೆ ನಾ ಮೀನ ಬಲೆಯಲ್ಲಿ
ಜಾರಿಕೊಳುವುದೆಂತು?

ಕಿಚಾಯಿಸಿ ಬಿಡು
ಬೇಡ ಅಂದವರಾರು
ಅಕ್ಕಸಾಲಿಗನ ತಿದಿಯೊಳಗೆ
ಕಕ್ಕಿದಂತಾಗಿಹೆನೀಗ.

ಆರಣತಿ ಇಟ್ಟರೂ
ಜುಟ್ಟು ನಿನ ಕೈಲಿ
ನಾ ಕೊಟ್ಟಾಗಿದೆಯಲ್ಲ
ಆಡಿಸಾಡಿಸು ನಿನ್ನಿಷ್ಟದಂತೆ.

ನನಗೋ ಡಬಡಬ ಹೊಡೆತ
ಹೃದಯ ಮೀಟುವ ಶಬ್ಧ
ಕಿವಿ ನಿಮಿರಿ ನಟನಾಂಗಿ
ಜನ ನಿನ್ನ ಒಪ್ಪುವ ತನಕ.

ಜತನವಾಗಿರು ಓ ನನ್ನ ಬಾಲೆ
ಜನಮನದ ಶಿರದಲ್ಲಿ
ನೀ ಕಣ್ಣು ಕುಕ್ಕುವ
ದೇವ ಕಳಶದಂತೆ!

24-6-2017. 5.27pm

ಕವಿ ಮನ

ಕವಿಯಾಗಲು ಇಷ್ಟ
ಕವಿಯಾಗುವುದು ಬಲು ಕಷ್ಟ
ಇಷ್ಟ ಕಷ್ಟಗಳ ನಡುವೆ ಮನಸು ಡೋಲಾಯಮಾನ
ಚಿಂತಿಸದಿರು ಮನವೆ ಕವಿಯಾಗಬೇಕೆಂಬ ಕನಸ ಕಂಡು
ಕವಿಗೆ ಬೇಕು ಸ್ಪುಟವಾದ ಮನಸ್ಸು
ಬರೆಯಲು ಬೇಕು ದಿಟ್ಟತನದ ಭಾವನೆ
ಓದುಗರ ಮನ ಮುಟ್ಟಬೇಕು
ಇತ್ಯಾದಿ ಇತ್ಯಾದಿ ಹಲವುಂಟು
ಇರಲಿ ಅದರ ಪಾಡಿಗೆ ಅದು ನೀ ಬರಿ ಬರಿ ಬರಿ
ತಂದು ನಿಲ್ಲಿಸುವರು ಓದುಗರೇ ಒಂದು ದಿನ
ನಂಬಿಕೆಯೆ ಬುನಾದಿ ಕವಿ ನೀ ನಂಬು.
26-5-2017. 10.35am

ಕವಿಯ ಅವಸ್ಥೆ

ಭಾವನೆಗಳ ಬುತ್ತಿ
ಶಬ್ದದೋಕುಳಿಯಲ್ಲಿ
ಹಿಡಿದಿಟ್ಟ ಗುಶ್ಚ
ಬರೆದಾಗ ಆಗುವುದು
ಮುಖ ಊರಗಲ.

ಬರೆದಾದ ಮೇಲೆ-

ಮತ್ತೆ ಮತ್ತೆ ಓದಿ
ಖುಷಿ ಗರಿಬಿಚ್ಚಿ
ಎಲ್ಲರೂ ಓದಬೇಕಲ್ಲ
ಒಳಗೊಳಗೆ ಇನ್ನಿಲ್ಲದ
ಒಣ ತುಮುಲ.

ಆಮೇಲೆ?

ಸರಿ ಶುರುವಾಯಿತು
ಮೆಲ್ಲನೆ ತಾಣಗಳ
ಗೂಗಲ್ ಹುಡುಕಾಟ
ಇದನ್ನು ಎಲ್ಲಿಡಲಿ,
ಅದನ್ನು ಇಲ್ಲಿಡಲಾ.

ಯೋಚಿಸಬೇಕಲ್ಲಾ?

ಎಲ್ಲ ಬರಹಗಳೂ
ಪ್ರಕಟಿಸುವ ತರಾತುರಿ
ತಾಣಕ್ಕೆ ತಕ್ಕಂತೆ
ವಿಂಗಡಿಸುವ ಗಜಿಬಿಜಿ
ಒತ್ತಾಯಿತು ಮೇಲ್ ಗುಂಡಿ.

ನಂತರದ ಸರದಿ….

ನನ್ನ ಬರಹ ಬಂದಿದೆಯಾ?
ಲೈಕೆಷ್ಟು,ಕಮೆಂಟೆಷ್ಟು
ಏನಂತ ಉತ್ತರಿಸಲಿ
ಓದುಗರು ಹೆಚ್ಚಾಗಿ
ಮೆಚ್ಚಿದ್ಯಾವುದು?

ಯಪ್ಪಾ ಯಪ್ಪಾ
ಬರೀ^^^
ಇದೇ ಆಗೋಯ್ತು
ಸಮಯ ಎಷ್ಟಿದ್ದರೂ
ಸಾಲದಾಯಿತು!

ನಾನೊಂದಡಿ
ಇಟ್ಟಾಗಿದೆ
ನಿಮ್ಮ ಕಥೆನೂ
ಹೀಗೇನಾ??
ಹೇಳಿ ಮತ್ತೆ☺

15-2-2017. 2.49pm

ವಾವ್! ಈ ದಿನ ನೆನಪಾಗುತಿದೆ ಆ ದಿನಾ…

ಹೌದು. ಇವತ್ತು ನನ್ನ ಬ್ಲಾಗ್ ಹುಟ್ಟಿದ ದಿನ. ಎಷ್ಟು ಬೇಗ ಒಂದು ವರ್ಷ ಕಳೆಯಿತು! ಗೊತ್ತಾಗಲೆ ಇಲ್ಲ. ಮನವೆಲ್ಲ ಸಂಭ್ರಮ. ತುಂಬಾ ಖುಷಿ ಆಗುತ್ತಿದೆ. ಸಾಮಾನ್ಯವಾಗಿ ಒಂದು ಕಾರ್ಯ ಶುರು ಮಾಡುವಾಗ ಮೂಹೂರ್ತ,ಗಳಿಗೆ ಎಲ್ಲ ನೋಡಿ ಶುರು ಮಾಡುತ್ತಾರೆ. ಆದರೆ ಈ ಬ್ಲಾಗ್ ಓಪನ್ ಮಾಡುವಾಗ ಇದ್ಯಾವುದನ್ನೂ ನೋಡಲೆ ಇಲ್ಲ. 31-1-2016 ಆ ದಿನ ಭಾನುವಾರ. ಸಾಯಂಕಾಲದ ಗೋಧೂಳಿ ಮುಹೂರ್ತದಲ್ಲಿ ಮನದ ದೇವನಿಗೆ ದೀಪ ಹಚ್ಚಿ ಬ್ಲಾಗ್ ಬರೆಯೋದು ಶುರು ಮಾಡಿದೆ.

ಮಗಳು ಹೇಳಿದಳು “ಅಮ್ಮಾ ನೋಡು ಹೀಗಿರಲಾ? ಹಾಗಿರಲಾ? ” “ನೋಡು ನನಗದೆಲ್ಲ ಗೊತ್ತಿಲ್ಲ ಛಂದ ಇರಬೇಕು.” ಯಾಕೆಂದರೆ ಆಗಲೆ ಸುಮಾರು ಬ್ಲಾಗ್ ಎಲ್ಲ ನೋಡಿ,ಓದಿ ಬ್ಲಾಗ್ ಹುಚ್ಚು ತಲೆಗೆ ಹತ್ತಿತ್ತು. ಅದೆನೇನೊ ಕಲ್ಪನೆ. ನನ್ನಿಂದ ಬರೆಯೋದು ಬಿಟ್ಟರೆ ಏನು ಮಾಡೋಕೆ ಆಗದೆ ಇದ್ದರೂ ಯೋಚನೆ ಮಾತ್ರ ಮನತುಂಬ ಬರ್ಪೂರವಾಗಿತ್ತು. “ಸರಿ ಹೆಸರೇನಿಡೋಣ? ನೀನೆ ಹೇಳ್ತೀಯಾ ಇಲ್ಲ ನಾನೆ ಹೇಳಲಾ?” “ಇಲ್ಲ ಇಲ್ಲ. ಇದು ನನ್ನ ಬ್ಲಾಗ್ .ನಾನೆ ಹೆಸರಿಡಬೇಕು.” ಸರಿ ಮತ್ತೆ ಬೇಗ ಹೇಳು. ನನಗೆ ಬೇರೆ ಕೆಲಸ ಇದೆ.” “ಅಯ್ಯೋ! ತಡಿಯೆ. ಒಂದೊಳ್ಳೆ ಸಖತ್ತಾಗಿರೊ ಹೆಸರಿಡಬೇಕು.” ಇಲ್ಲೂ ಹುಡುಕಾಡಿ ಬ್ಲಾಗ್ ಹೆಸರು ನನ್ನದೆ ಯೋಚನೆಯಂತಿರಬೇಕು. ಅದು ಒಂದು ನೆನಪಾಗಿ ಉಳಿಯಬೇಕು. ಅದನ್ನು ಹೇಳಿದರೆ ಕೂಗಿ ಕರೆದಂತಿರಬೇಕು. ಯಾರೂ ಇಟ್ಟಿರಬಾರದು. ಅಪರೂಪದ ಹೆಸರಾಗಿರಬೇಕು. ಕಂಡವರು ಯಾಕೆ ಇದೇ ಹೆಸರಿಟ್ಟೆ ಎಂದು ಕೇಳುವಂತಿರಬೇಕು. ಓದುಗರ ಮನ ತಟ್ಟ ಬೇಕು. ಹೀಗೆಲ್ಲ ಮನಸ್ಸಿನಲ್ಲೆ ಮಂಡಿಗೆ ತಿನ್ನುತ್ತಿದ್ದದ್ದು ನನ್ನ ಮಗಳಿಗೆ ಖಂಡಿತಾ ಗೊತ್ತಿರಲಿಲ್ಲ.. ಮಾಡುವ ಕೆಲಸದಲ್ಲಿ ಏನಾದರೂ ಹೊಸತನ ಇರಬೇಕು ಅನ್ನುವ ಜಾಯಮಾನ ನನ್ನದು. ಸರಿ ನೋಡು ” ಸಂಧ್ಯಾದೀಪ ಈ ಹೆಸರಿಡು. ಸೂರ್ಯ ಮುಳುಗುವ ಹೊತ್ತು ದೀಪ ಹಚ್ಚಿದಂತಿರುವ ಒಂದು ಸೊಗಸಾದ ಚಿತ್ರ ಕೆಳಗಡೆ ಈ ಸಾಲುಗಳು ರಾರಾಜಿಸುತ್ತಿರಬೇಕು.” ಇದನ್ನೂ ಬೇರೆಯವರ ಬ್ಲಾಗ್ ನೋಡಿ ನನ್ನದೆ ಒಂದು ಸಾಲುಗಳ ಅಚ್ಚಾಕಿಸಿದೆ. ಅಂತೂ ನನ್ನ ಬೇಡಿಕೆಯಂತೆ ಹುಟ್ಟಿಕೊಂಡ ಈ ಬ್ಲಾಗ್ ಬರಹಗಳು ಇವತ್ತು 450ಕ್ಕೂ ಹೆಚ್ಚು ಬರಹಗಳನ್ನು ಒಳಗೊಂಡಿದೆ. ಅನೇಕ ಬರಹಗಳು ಪ್ರಕಟಣೆಗೊಂಡಿವೆ. ಒದುಗರ ಲೆಕ್ಕ ಸಾವಿರ ದಾಟಿದೆ. ವಿಶೇಷ ಅಂದರೆ ಇತ್ತೀಚೆಗೆ ಕನ್ನಡ ಬ್ಲಾಗ್ ಲೀಸ್ಟಲ್ಲಿ ಸೇರಿದೆ. ಇನ್ನಿತರೆ ಪ್ರಗತಿಯ ವಿವರಗಳನ್ನು ಈ ಬ್ಲಾಗ್ ನಲ್ಲಿ ಕಾಣಬಹುದು.

ಇಲ್ಲಿರುವ ಬರಹಗಳು ಅದೆಷ್ಟು ಗಟ್ಟಿಯೊ, ಅದೆಷ್ಟು ಜೊಳ್ಳೊ ಗೊತ್ತಿಲ್ಲ. ನೆನಪು ಭಾವನೆಗಳ ಸಂಘರ್ಷ ಇಷ್ಟೆಲ್ಲಾ ಬರಹ ಬರೆಯಲು ಕಾರಣವಾಯಿತು. ತಿಳುವಳಿಕೆಯಿಲ್ಲದ ನಾನು ಮನಸಿಗೆ ಅನಿಸಿದ್ದನ್ನು ಬರೆಯುತ್ತ ಪೋಸ್ಟ್ ಮಾಡುತ್ತಿದ್ದೇನೆ. ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ. ಸದಾ ತಮ್ಮ ಪ್ರೋತ್ಸಾಹ, ಬೆಂಬಲ ಬಯಸುತ್ತೇನೆ.

ಈ ಬ್ಲಾಗ್ ತೆರೆದು ಕೊಟ್ಟ ನನ್ನ ಮಗಳಿಗೆ, ಬ್ಲಾಗ್ ನೋಡಿ ಒಂದೊಳ್ಳೆ ಒಕ್ಕಣೆ ಬರೆದ ಶ್ರೀ ಹುಸೇನಿಯವರಿಗೆ, ಹಾಗೂ ಇದುವರೆಗೆ ಬರಹ ಓದಿ ಲೈಕು, ಕಮೆಂಟ ಮೂಲಕ ತಮ್ಮ ಪ್ರೋತ್ಸಾಹ ವ್ಯಕ್ತಪಡಿಸುತ್ತಿರುವ ನನ್ನೆಲ್ಲ ಓದುಗರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಇತ್ತೀಚೆಗೆ ಆತ್ಮೀಯರೊಬ್ಬರು ಉತ್ತಮ ಸಲಹೆ ನೀಡಿ ಬ್ಲಾಗ್ ಇನ್ನಷ್ಟು ಅಂದಗೊಳಿಸಿ ಬರಹಗಳಿಗೆ ಮೆರುಗು ನೀಡಿ ಸಹಾಯ ಮಾಡಿರುತ್ತಾರೆ. ಅವರಿಗೆ ನನ್ನ ಕೃತಜ್ಞತೆಗಳು.

HAPPY BIRTHDAY
“SANDHYADEEPABLOG”💐🎂
31-1-2017. 3.01pm☺☺

(ಬ್ಲಾಗ್ ಪ್ರಗತಿಯ ಚಿತ್ರ 2016 & 2017)

ನನ್ನ ಪಯಣ

ಯೋಜನೆಗಳ ಕಂತೆ ದಿನವೂ ಹೊಸ ರೂಪ
ಕಾಯ೯ರೂಪಕೆ ತರಲು ಇನ್ನಿಲ್ಲದ ಧಾವಂತ.

ಗುರಿ ಮುಟ್ಟುವ ಗಡಿಬಿಡಿಯಲ್ಲಿ
ಎಲ್ಲಿ ಎಡವಿ ಬಿಡುವನೆ ನಾನು.

ಆತಂಕದ ಮಡುವಲ್ಲಿ ಮನ ಜೋಕಾಲಿ
ಸಾಧನೆ ಇನ್ನೂ ದೂರದ ಕಾಣದ ಹಾದಿ.

ಒಂಟಿ ಕಾಲಿನ ಸವೆತ ಗತಿ ನಿಧಾನ
ಏಳುತ್ತ ಬೀಳುತ್ತ ಸಾಗುತಿದೆ ಕಾಲ.

ದೂರದ ಕನಸಿಗೆ ಬಣ್ಣ ಬಣ್ಣದ ಮೆರುಗು
ನೆನೆನೆನೆದು ಮೈ ಪುಳಕ ಹಾರಿ ಹಿಡಿಯುವ ತವಕ.

ಆಸೆಯ ದೋಣಿಯಲ್ಲಿ ಏಕಾಂಗಿ ಪಯಣ
ಅಂತರಂಗದ ಉತ್ಸಾಹಕ್ಕೆ ನೀರೆರೆದ ಜೀವ.

ಚಿತ್ತದ ಯೋಚನೆಗೆ ನನ್ನದೆ ಆಯಾಮ
ಮುಗಿಸಬಲ್ಲೆನೆ ಇರುವ ದಿನಗಳಲ್ಲಿ.

ಅಳಿದುಳಿದ ಆಯುಷ್ಯ ಬೇಕು ಸಾಧನೆಗೆ
ಸಕಲಕೂ ಇರಬೇಕು ಪರಮಾತ್ಮನ ಆಶೀರ್ವಾದ.

14-12-2016. 9.01am.

ಕವಿ ಮನ 

ಕಳೆದು ಹೋಗುವುದಲ್ಲ
ಕವಿ ಹೃದಯ
ಉಪ್ಪಾಕಿ ಮುಚ್ಚಿಟ್ಟರೂ
ಜಿಗುಟಿ ಹೋಗುವುದಿಲ್ಲ
ಎಣ್ಣೆ ಬೆಣ್ಣೆಯ ಆರೈಕೆ
ಅದಕೆ ಬೇಕಿಲ್ಲ
ಹುಳು ಹುಪ್ಫಟೆಯ ಕಾಟ
ಹತ್ತಿರವೂ ಸುಳಿಯುವುದಿಲ್ಲ
ಅಪ್ಪಟ ಕಾಶಿ ಪಿತಾಂಬರದ
ಹೊದಿಕೆ ಮೈ ತುಂಬ
ಮಿರಿ ಮಿಂಚಿ ಗರಿಗೆದರುವುದು
ಭಾವನೆಗಳ ಸೆರಗ ಹೊದ್ದು
ಶಬ್ದಗಳ ಕುಚ್ಚು ಕಟ್ಟಿ
ವೈಯ್ಯಾರದಿ ನಡೆದು ಬರುವುದು
ಕವಿ ಹೃದಯ ಹಾಳೆತುಂಬ.
11-12-2016. 11.37 pm

ಕವಿತೆ

ಕವಿಗಳಿಗೆಲ್ಲಿಯ ಕೊರತೆ
ಇಹರಲ್ಲ ಎಲ್ಲೆಂದರಲ್ಲಿ
ಎರಡು ಕವನ ಬರೆದು
ನಾನೊಬ್ಬ ಕವಿ ಎಂದು
ಎದೆ ಸೆಟೆದು ಬೀಗುವರು.

ಬೇಕು ಎಂಥ ಕವಿತೆ ಬೇಕು?

ಮನ ಮುಟ್ಟುವ
ಮನ ಕಳೆದು ಹೋಗುವ
ಮುದ್ದಾದ ಕವಿತೆ ಬೇಕು.

ಆದರೆ ಕವಿತೆಗಳೀಗ
ದಿಕ್ಕಾಪಾಲಾಗಿ ಓಡಿದೆ
ಕಾಲ್ಕಿತ್ತಿವೆ ಬೆದರಿ
ಸುನಾಮಿಯ ಆಲೆಗಳ
ಬಡಿತಕಂಜಿ.

ಹಳಿ ತಪ್ಪಿದಂತೆ ಬರೆಯುವವರ
ಸವೆದ ಶಬ್ದಗಳ
ಮರು ಬಳಕೆಯ
ವಾಕರಿಕೆಯ ಯಾತನೆಗೆ
ಕವಿತೆಗಳೆಲ್ಲೊ ಮಟಾ ಮಾಯಾ.

ಬೇಕಾದರೆ ಇರೋದೆ ಓದಿ
ಮನ ತಣಿಸಿಕೊಳ್ಳಿ

ಓದುವ ತೆವಲಿಗೆ
ಇಂಥ ಕವಿತೆ ಓದಬೇಕಾ
ಎಂದುಸುರುತ್ತ
ಸುಮ್ಮನೆ ವ್ಯಥೆ ಪಡಬೇಡಿ.

ಆಗಲೇ ಬರೆದಿಟ್ಟು ನಡೆದಿಹರಲ್ಲ
ಹಲವರು ತಮ್ಮ ಜೀವಿತಾವಧಿಯಲ್ಲಿ
ಕೆ.ಎಸ್. ನ.,ಕುವೆಂಪು, ರನ್ನ ಇನ್ನೇನು?
ಗತಕಾಲಕೆ ಕುರುಹನಿರಿಸಿ!

ಸುಮ್ಮನೆ ಪರಿತಪಿಸದಿರಿ
ತಿರುಕನ ಕನಸು ಕಂಡು
ಸೊರಗ ಬೇಡಿ ನೀವೆಂದೂ
ಕವಿಗಳಾರಿಹರಿಲ್ಲಿ
ನಿಮ್ಮ ಮನಸ ಕಟ್ಟಿಹಾಕುವ
ಕೃಷ್ಣನಂಥವರು..!!

12.11.2016. 2.32pm