ಮೌನದಿರುವಿನಲ್ಲಿ….

ನಾನರಸಿಕೊಂಡ ಮೌನದರಮನೆಯ ಹೊಸಿಲ ಸುತ್ತ
ಆಗಾಗ ನನ್ನದೆ ಹಸ್ತಾಕ್ಷರ ಗೀಚಿಬಿಡುವೆ
ಕುಳಿತು ಓದುವೆನು ಕಣ್ಣನಗಲಿಸಿ
ಹುಂಡಿಟ್ಟಿದ್ದು ಸರಿಯಾಗಿದೆಯೆ?
ಎಳೆದ ಗೆರಗಳ ನಡುವು ಬಳುಕಿದೆಯೆ?
ಅಂದ ಚಂದ ಓರೆ ಕೋರೆ
ಹಾಗೂ ಹೀಗೂ ನಿಂತು ಜಳಪಿಸುವ ವೈಖರಿ
ನೋಡಲದು ನನಗೊಂದೇ ಚಂದ
ಅಲ್ಲಿ ನಾನೂ ಅಂದರೆ ನಾನೊಬ್ಬಳೆ
ನಿರವ ಮೌನದ ಮಟಮಟ ಮಧ್ಯಾಹ್ನ
ನೆತ್ತಿಗೇರಿದ ಸೂರ್ಯನೂ ತಂಪಾಗಿ ಕಾಣುವಾ!

ಎಷ್ಟೊಂದು ಸೊಗಸು ಈ ಮನೆ
ಕುಳಿತು ಪಟ್ಟಂಗವಡೆಯಲು ಮನದೊಡನೆ
ಸಿಗುತ್ತೆ ಸಾಕಷ್ಟು ಪುರುಸೊತ್ತು
ಗಡಿಬಿಡಿಯಿಲ್ಲ ಗಲಿಬಿಲಿಯಿಲ್ಲ ಅಡ್ಡಿಯಾತಂಕವಿಲ್ಲವೇ ಇಲ್ಲ
ಆತ್ಮವಿಮರ್ಶೆಯಲಿ ಬಗ್ಗಿ ನನ್ನನೇ ನೋಡುವೆ
ನಡೆ ನುಡಿ ಮಾತು ಕತೆ ಬದುಕಿದ ರೀತಿ ನೀತಿ
ಕುಣಿದು ಕುಪ್ಪಳಿಸಿದ ಗಳಿಗೆ ಇತ್ಯಾದಿ.

ಕೊಂಚ ತಪ್ಪು ಮನ ಕುಟುಕಿದರೆ ಸಾಕು
ಸರಿಪಡಿಸಲಾಗದ ಬೇಗೆಗೆ
ಕೂತಲ್ಲಿ ನಿಂತಲ್ಲಿ ಅದರದೆ ಧ್ಯಾನ
ದಿಕ್ತೋಚದ ಹರಿಣಿಯಾಗಿ ಗದ್ದಕ್ಕೆ ಕೈಕೊಟ್ಟು ವ್ಯಥೆ ಪಡುತ್ತ
ಕುಳಿತ ಭಂಗಿ ನೋವುಂಡು ಸಾಕಾಗಿ ಪೆಚ್ಚು ಮೋರೆಯಿಂದೊರಬರಲು
ಮತ್ತದೆ ಜಗತ್ತಿಗೆ ಕಾಲಿಡುವೆ
ಇರಲು ನಿಮ್ಮೆಲ್ಲರ ನಡುವೆ ಶಪತ ಹೊತ್ತು
ಇದ್ದರೆ ಅಪ್ಪಟ ಬದುಕ ಬದುಕಬೇಕೆನ್ನುವ
ಒಂದೇ ಒಂದು ಸೂತ್ರ ಹಿಡಿದು.

12-10-2017 2.01pm

ನಿದ್ದೆಯಿಲ್ಲದಿದ್ದರೇನಂತೆ…?

ನಿದ್ದೆ
ನೀ ಬರದ ರಾತ್ರಿಯಲಿ ಅಂಗಾತ ಮಲಗಿ
ಮುಚ್ಚಿದ ಕಣ್ಣ ರೆಪ್ಪೆಯಡಿಯಲಿ ಹುಡುಕುತ್ತೇನೆ
ಶಬ್ದಗಳ ತೋರಣ ಕಟ್ಟಲು
ಒಂದೊಂದೇ ಅಕ್ಷರ ಪೊಣಿಸಲು.

ಮನಸು ಕೇಳುವುದಿಲ್ಲ
ಛೆ! ಯಾಕೊ ನಿದ್ದೆ ಬರ್ತಿಲ್ಲ
ಯಾಕೊ ನಿದ್ದೆ ಬರ್ತಿಲ್ಲ
ಹೊರಳಾಡಿ ಸಮಯ ಕಳೆಯುವುದು
ಕಹಿ ಗುಳಿಗೆ ನುಂಗಿದಷ್ಟು ತಡೆಯಲಾಗದ ವಾಕರಿಕೆ.

ಆಗನಿಸುವುದು
ನಭೋ ಮಂಡಲದ ಬಟ್ಟಲು ಬರಿದಾದಂತೆ
ಸೂರ್ಯ ಚಂದ್ರರ ಗಮ್ಮತ್ತು.
ಸುರೆ ಹೊಯ್ದ ನಿಶಾಚರರಂತೆ ಕಾಣುವುದು
ಬಿದ್ದುಕೊಂಡ ಭೂಮಿ.

ಶಿರದಲ್ಲಿ ಹೈರಾಣಾಗಿ
ನಶೆಯೇರಿ ಸೆಟಗೊಂಡು ಕಾಡಿದಂತೆ
ಕಣ್ಣ ಕುಣಿಕೆಗೆ ಜೋತು ಬೀಳುವ ನಿದ್ದೆಯ ಹುಳುಗಳು
ಇಂದೆಲ್ಲಿ ಎಲ್ಲಿ ಎಲ್ಲಿ ಎಂದು
ತಲೆ ಚಕ್ರ ತಿರು ತಿರುಗಿ ಹುಡುಕುತ್ತೇನೆ.

ಕಗ್ಗತ್ತಲ ನಿರವ ಮೌನ ಕಾಂಕ್ರೀಟು ಕಾಡು
ಸದ್ದಡಗಿದ ಸತ್ತವರ ಮನೆಯಂತೆ
ನಿದ್ದೆಯೆಂಬ ಭೂತ ಸ್ಮಶಾನ ಕಾಯಲು ಹೋಗಿರಬಹುದೇ?
ಎಂಬ ಒದ್ದಾಟದ ನಗಾರಿ ಭಾರಿಸುತಿರಲು
ಪಟಕ್ಕನೆ ನೆನಪಾಯಿತು ನನ್ನ ತಲೆಯೆಂಬ ಬುರುಡೆಗೆ
ತತ್ತರಕಿ …….
ಇವತ್ತು ಹೊತ್ತಲ್ಲದ ಹೊತ್ತಲ್ಲಿ
ಕುಡಿದ “ಚಾ”ದ ಪರಿಣಾಮ!

ಛೆ!
ಸೂರ್ಯ, ಚಂದ್ರ, ಕಾಡು,ಸ್ಮಶಾನ, ಸತ್ತವರ ಮನೆ ಇತ್ಯಾದಿ
ಕಂಡವರ ಕಡೆ ಬೊಟ್ಟು ತೋರಿಸಿ
ಒಂದಕ್ಕೊಂದು ಸಂಬಂಧ ಕಲ್ಪಿಸುವ
ನನ್ನ ಹುಚ್ಚು ಮನಸೀಗ ನಿರಂಮಳ.

ಹೌದೌದು
ಯಾರೂ ಕಾರಣರಲ್ಲ
ಕಂಟ್ರೋಲ್ ಇಲ್ಲದ ಮನಸು
ನಿದ್ದೆಗೆ ನಾನೇ ಆದೆ ಶತ್ರು.

ಪರಿಹಾರ ಕಂಡ ಮನಸು ಹಾಯೆಂದು ಹಲುಬಿತು
ನಿದ್ದೆಯಿಲ್ಲದಿದ್ದರೇನಂತೆ
ರಾಶಿ ರಾಶಿ ಶಬ್ದಗಳು ಚಿತ್ತದೊಳೀಗ ಸೆರೆ ಸಿಕ್ಕವಲ್ಲಾ
ಪೊತ ಪೊತನೆ ಉದುರುವ ಮರ ಬಿಟ್ಟ ಹಣ್ಣೆಲೆಯಂತೆ!

ಆಗಲೆ
ಆಯ್ದು ಪೊಣಿಸುವ ಕಸರತ್ತು ಶುರುವಾಯಿತು
ಸರಿ ರಾತ್ರಿಯಲಿ ;

ಹೊಸ ಮದು ಮಗಳು
ಹೊಸದರಲ್ಲಿ ಬೆಳಗೆದ್ದು ಉತ್ಸಾಹದಲ್ಲಿ
ಗಂಡನಿಗೆ ಚಾ ಮಾಡಲು
ಅಣಿಯಾದಂತೆ!
7-8-2017. 12.56am

ಮತ್ತೆ ಮತ್ತೆ ಬುದ್ಧನ ಹಾದಿ….

ಮನಸಿಗೆ ಕಾಲಲ್ಲಿ ಚಕ್ರವಿದೆಯೆ?
ಅಲ್ಲಾ ನೀನ್ಯಾಕೆ ಹೀಗೆ ಸದಾ ಅಲೆಯುತ್ತೀಯೆ?
ಕೇಳುತ್ತೇನೆ ಆಗಾಗ
ಪ್ರೀತಿಯಿಂದ ಓಲೈಸುತ್ತ
ನೀನೇ ನನ್ನ ಸರ್ವಸ್ವ ಬಾ ಒಮ್ಮೆ.

ಊಹೂಂ ಮಣಿಯಲೊಲ್ಲದು
ಎಷ್ಟು ಗೋಗರೆದರೂ
ಬಹಳ ಹಠಮಾರಿ ಘಾಟಿ ಘಠಾಣಿ
ಹಿಂದೆ ಹಿಂದೆ ನಾ ಓಡುತ್ತಲೇ ಇದ್ದೇನೆ
ಬುದ್ಧಿ ಬಂದಾಗಿಂದ
ಅದರ ಮೂಲ ಹುಡುಕಿ
ನನ್ನಣತಿಯಲ್ಲಿಡಲು ಹೆಣಗಾಡುತ್ತೇನೆ
ಹೆಣಗಾಡುತ್ತಲೇ ಇದ್ದೇನೆ

ಅದು ನನ್ನ ಮನಸು
ನನ್ನ ಸ್ವಂತ
ಆದರೆ ವಿಚಿತ್ರ ನೋಡಿ
ನನಗದರ ಮೇಲೆ ಅಧಿಕಾರವೇ ಇಲ್ಲವೆಂಬಂತೆ
ಪದೇ ಪದೇ ಕಳಚಿಕೊಳ್ಳುತ್ತಲೇ ಇದೆ
ಒಂದೆಡೆ ಕಟ್ಟಿ ಹಾಕಲು
ನನ್ನ ಶ್ರಮವೆಲ್ಲ ವ್ಯರ್ಥ ಆಗುತ್ತಲೇ ಇದೆ.

ಮತ್ತೆ ಮತ್ತೆ ಬುದ್ಧನ ಹಾದಿ ಹಿಡಿಯುತ್ತೇನೆ
ಇಡೀ ದೇಹ ಸೆಟೆದು ಮೌನದಲ್ಲಿ
ಹಾಕಿದ ಪದ್ಮಾಸನ ಹೇಳುತ್ತದೆ
ಕಾಲು ತೊಡೆ ನೋವಾಗಿ
ನಿಲ್ಲಿಸು ನಿನ್ನ ವ್ಯರ್ಥ ಪ್ರಲಾಪ
ನಿನ್ನದು ತಿಕಲ್ ಮೈಂಡು
ನಡಿ ನಡಿ
ನನ್ನ ಕಾಲುಜ್ಜು!
22-7-2017. 9.47am

ಓ ನನ್ನ ಬಾಲೆ..

ನಿದ್ದೆಗಣ್ಣಿನ ಲೋಲಾಕಿನಲಿ
ತೂರಾಡುವ ಈ ದೇಹ
ಭಾವ ಉಕ್ಕುಕ್ಕಿ ಹಿಡಿದಿಡುತ್ತದೆ
ನೀ ಬರಿ ಬರಿ ಎಂದು.

ಕಣ್ಣು ನೆತ್ತರಿನ ರಂಗು
ತಲೆ ತುಂಬ ಕವನದ ಗುಂಗು
ಇನ್ನೇನು ಬಿಚ್ಚಿಡುವ ಮನ
ಸದಾ ಟಿಂಗು ಟಾಂಗು.

ಸೈ ಏನ ಬರೆದೇನು
ಮೆಳ್ಳೆಗಣ್ಣ ಮಾಟಗಾತಿ ಕಿರಿದಾಗಿ
ಅಕ್ಷರ ಮಂಕಾಗಿ
ಪಟ ಪಟ ರೆಪ್ಪೆ ಆಡುವುದು!

ಬೆನ್ನ ಕತ್ತರಿ ಬಾಗಿ
ಹಸೆ ಸೇರ ಬಯಸಿದರೆ
ಇನ್ನಿಲ್ಲದ ಧಾವಂತ
ಲಟಪಟ ಉದುರುವ ಶಬ್ದಕ್ಕೆ.

ಚೆಲುವೆ ಬಲು ಮಾಟಗಾತಿ
ಕಪಿ ಮುಷ್ಟಿ ಹಿಡಿತ
ಕೆಕ್ಕರಿಸಿ ನೋಡಿದರೂ
ನುಣುಚಿಕೊಳ್ಳುವ ಸಂಗಾತಿ.

ಕೈಗೆ ಸಿಗದ ಕಾಜಾಣ
ಮನಸೆಲ್ಲ ದಿಗ್ಭಂದನ
ಒರಟೊರಟು ನೀನೆನಿಸಿದರೂ
ನೀನಿಲ್ಲದೇ ನಾನಿರಲಾರೆ.

ಅದೇನು ಸಾಂಗತ್ಯವೊ
ಜನ್ಮಾಂತರದ ಋಣವೊ
ಸಿಲುಕಿದೆ ನಾ ಮೀನ ಬಲೆಯಲ್ಲಿ
ಜಾರಿಕೊಳುವುದೆಂತು?

ಕಿಚಾಯಿಸಿ ಬಿಡು
ಬೇಡ ಅಂದವರಾರು
ಅಕ್ಕಸಾಲಿಗನ ತಿದಿಯೊಳಗೆ
ಕಕ್ಕಿದಂತಾಗಿಹೆನೀಗ.

ಆರಣತಿ ಇಟ್ಟರೂ
ಜುಟ್ಟು ನಿನ ಕೈಲಿ
ನಾ ಕೊಟ್ಟಾಗಿದೆಯಲ್ಲ
ಆಡಿಸಾಡಿಸು ನಿನ್ನಿಷ್ಟದಂತೆ.

ನನಗೋ ಡಬಡಬ ಹೊಡೆತ
ಹೃದಯ ಮೀಟುವ ಶಬ್ಧ
ಕಿವಿ ನಿಮಿರಿ ನಟನಾಂಗಿ
ಜನ ನಿನ್ನ ಒಪ್ಪುವ ತನಕ.

ಜತನವಾಗಿರು ಓ ನನ್ನ ಬಾಲೆ
ಜನಮನದ ಶಿರದಲ್ಲಿ
ನೀ ಕಣ್ಣು ಕುಕ್ಕುವ
ದೇವ ಕಳಶದಂತೆ!

24-6-2017. 5.27pm

ಸಂಜೆಗತ್ತಲ ಅರಿವು..

ನೊರೆಯುಕ್ಕಿದ ಹಾಲೊಳಗೆ
ನನ್ನೇ ನಾ ಕಾಣಲು ಹೋದೆ
ಬದಿಗೊತ್ತಿದ ನೊರೆ ನೊರೆ
ಜೀವ ರಸದೌತಣ ಮೀಯುತ್ತಿತ್ತು.

ತಂಗಾಳಿಯ ಬಿಗಿ ಸ್ಪರ್ಶಕೆ
ಒಂದೆರೆಕ್ಷಣ ಜಡ ಮರೆತ ದೇಹ
ಬಿಡು ಕವಡೆ ಕಾಸಿನ ಹಂಗು
ನಿನಗೇತಕೆಂದು ಅಣುಕಿಸುತ್ತಿತ್ತು.

ಬರಿದಾದ ಬಿಟ್ಟೊಡಲು
ತವಕಿಸುವ ಹುಮ್ಮನಿಸಿನಲಿ
ಎವೆಯಿಕ್ಕದೇ ನೋಡುತ್ತಿತ್ತು
ಹನಿಗಣ್ಣ ತೆವಲು ದಾರಿಯಲ್ಲಿ.

ಹಂಬಲದ ಮನಸಿಗೆ ಇಂಬುಕೊಟ್ಟು
ನಾಳೆಯ ತಾರ್ಕಿಕ ದೌಲತ್ತಿಗೆ
ಎಣೆಯುಂಟೆ ನಿನಗೆ ಸಾಕು ಬಿಡು
ಉರಿದುರಿದ ಬೆಂಕಿ ನೀನಾಗಿಹೆಯಲ್ಲ!

ಜೀಕುವ ಮನ ಜೋಕಾಲಿಗೆ ನೇತು
ತನ್ನತನದ ಹೊಯ್ದಾಟಕೆ ತನಗರಿವಿಲ್ಲದೆ
ಇತಿಹಾಸ ಬರೆದೂ ಬರೆದೂ ಕಮರಿ
ಹಾಲ್ಗೆನ್ನೆಯ ಸವರಿ ಕಂಬನಿ ಮಿಡಿದಿತ್ತು.

ನಾಕು ತಂತಿಯ ವೀಣೆ
ನಲಿವಿನಲಿ ಮಾಧುರ್ಯ ಮೀಟಿ
ಇಂಚಿಂಚು ಪಲ್ಲವಿಗೆ ರಾಗ ಹೊಸೆಯುತ್ತ
ಕವಿ ಮನವ ಸಂತೈಸಲು ನೋಡುತ್ತಿತ್ತು.

ಇಳೆಯ ಮುಟ್ಟಿದ ಭಾನು ಬಾಗುವ ಪರಿಗೆ
ಜಗವೆಲ್ಲ ಸೋಂಪಾಗಿ ಹೊಗಳುತ್ತಿತ್ತು
ಒಳಗೊಳಗೆ ಕಮರಿ ಸುಸ್ತಾದ ಜೀವಕೆ
ಸಂಜೆಗತ್ತಲು ಸವರಿದ್ದು ಗೊತ್ತಾಗಲೇ ಇಲ್ಲ!

3-6-2017. 11.40pm

ಗೊತ್ತಿಲ್ಲ – ಗೊತ್ತು ಮುಂದೆ..??

ನಾನೇನು, ನನದೇನು ಸ್ಥಾನವಿಲ್ಲಿ ಗೊತ್ತಿಲ್ಲ
ಬರೆಯುವುದು ಗೊತ್ತು ಓದುವುದೂ ಗೊತ್ತು
ಬರೆದಾದ ಮೇಲೆ ಅದರಳಿವು ಉಳಿವು ಗೊತ್ತಿಲ್ಲ
ಆದರೆ ಬರೆದದ್ದೆಲ್ಲ ಮೂಲೆ ಸೇರುತ್ತಿರುವುದು ಗೊತ್ತು.

ದಿನವೆಲ್ಲ ಕೂತು ಬರೆಯುತ್ತೇನೆ ಯಾಕಾಗಿ ಗೊತ್ತಿಲ್ಲ
ಒಂದಷ್ಟು ಸಂತೋಷ ಒಂದಷ್ಟು ದುಃಖ ಆಗುವುದು ಗೊತ್ತು
ನನ್ನೊಡಲ ಬರಹಗಳನೇನು ಮಾಡಲಿ ಇಟ್ಟು ಗೊತ್ತಿಲ್ಲ
ಗತಿಸಿದ ಆಗು ಹೋಗುಗಳ ಬರಹವೆಂಬುದು ಮಾತ್ರ ಗೊತ್ತು.

ಜೀವಂತ ಶಿಲೆಯಾಗಿ ನಾಳೆ ಬದುಕಿ ಬಾಳುವವೊ ಗೊತ್ತಿಲ್ಲ
ಕಳಕೊಳ್ಳುವೆನೆಂಬ ಸಂಕಟದುರಿ ಮನ ಕಾಡುವುದು ಗೊತ್ತು
ಅನಾಥ ಪ್ರಜ್ಞೆ ಕಾಡಿದಾಗೆಲ್ಲ ಏನು ಮಾಡಲಿ ಎಂಬುದು ಗೊತ್ತಿಲ್ಲ
ಚಿಕ್ಕದಾಸೆಯು ಬೆಳೆದು ಇಂದು ಹೆಮ್ಮರವಾಗಿಹುದು ಗೊತ್ತು.

ಬರೆಯುವ ಬಲೆಯೊಳಗೆ ನಾನೆಂದು ಹೇಗೆ ಸಿಲುಕಿದೆ ಗೊತ್ತಿಲ್ಲ
ಬರೆದಷ್ಟೂ ಮನಕೆ ಸಂತೃಪ್ತಿ ಆಗದಿರುವುದು ಮಾತ್ರ ಗೊತ್ತು
ಬಿಡಿಸಿಕೊಳ್ಳುವ ದಾರಿ ಎಲ್ಲಿ ಹೇಗೆಂದು ನನಗಿನ್ನೂ ಗೊತ್ತಿಲ್ಲ
ಗೊತ್ತು ಗೊತ್ತಿಲ್ಲದ ಬಲೆಯಲ್ಲಿ ಸಿಲುಕಿ ಅತಂತ್ರವಾಗಿದ್ದು ಗೊತ್ತು.

ನಶೆಯ ಉತ್ಸಾಹ ನಶಿಸುತ್ತಿರುವುದು ನೋವಿನ ಹೊಡೆತವೇ ಗೊತ್ತಿಲ್ಲ
ಯೋಚನೆಯ ತಾಕಲಾಟ ಬಿಡಿಸಿಕೊಳ್ಳಲಾದ ಬಂಧ ಅದೂ ಗೊತ್ತು
ಆರಂಬದ ಹಾದಿ ಅಂತ್ಯ ಕಾಣುವ ಪರಿ ಹೇಗೊ ಏನೊ ಗೊತ್ತಿಲ್ಲ
ನನ್ನುಸಿರುವವರೆಗೆ ಈ ಬ್ಲಾಗಲ್ಲಿ ಜೋಪಾನವಾಗಿರಿಸುವುದು ಮಾತ್ರ ಗೊತ್ತು!!

1-6-2017 11.49pm

ಕವಿ ಮನ

ಕವಿಯಾಗಲು ಇಷ್ಟ
ಕವಿಯಾಗುವುದು ಬಲು ಕಷ್ಟ
ಇಷ್ಟ ಕಷ್ಟಗಳ ನಡುವೆ
ಮನಸು ಡೋಲಾಯಮಾನ
ಚಿಂತಿಸದಿರು ಮನವೆ
ಕವಿಯಾಗಬೇಕೆಂಬ ಕನಸ ಕಂಡು
ಕವಿಗೆ ಬೇಕು ಸ್ಪುಟವಾದ ಮನಸ್ಸು
ಬರೆಯಲು ಬೇಕು ದಿಟ್ಟತನದ ಭಾವನೆ
ಓದುಗರ ಮನ ಮುಟ್ಟಬೇಕು
ಇತ್ಯಾದಿ ಇತ್ಯಾದಿ ಹಲವುಂಟು
ಇರಲಿ ಅದರ ಪಾಡಿಗೆ ಅದು
ನೀ ಬರಿ ಬರಿ ಬರಿ
ತಂದು ನಿಲ್ಲಿಸುವರು
ಓದುಗರೇ ಒಂದು ದಿನ
ಇದೇ ನಂಬಿಕೆಯೆ ಬುನಾದಿ
ಕವಿ ನೀ ನಂಬು.
26-5-2017. 10.35am

ಕವಿಯ ಅವಸ್ಥೆ

ಭಾವನೆಗಳ ಬುತ್ತಿ
ಶಬ್ದದೋಕುಳಿಯಲ್ಲಿ
ಹಿಡಿದಿಟ್ಟ ಗುಚ್ಛ
ಬರೆದಾಗ ಆಗುವುದು
ಮುಖ ಊರಗಲ.

ಬರೆದಾದ ಮೇಲೆ;

ಮತ್ತೆ ಮತ್ತೆ ಓದಿ
ಖುಷಿ ಗರಿಬಿಚ್ಚಿ
ಎಲ್ಲರೂ ಓದಬೇಕಲ್ಲ
ಒಳಗೊಳಗೆ ಇನ್ನಿಲ್ಲದ
ಒಣ ತುಮುಲ.

ಆಮೇಲೆ;

ಸರಿ ಶುರುವಾಯಿತು
ಮೆಲ್ಲನೆ ತಾಣಗಳ
ಗೂಗಲ್ ಹುಡುಕಾಟ
ಇದನ್ನು ಎಲ್ಲಿಡಲಿ,
ಅದನ್ನು ಇಲ್ಲಿಡಲಾ.

ಯೋಚಿಸಬೇಕಲ್ಲಾ ;

ಎಲ್ಲ ಬರಹಗಳೂ
ಪ್ರಕಟಿಸುವ ತರಾತುರಿ
ತಾಣಕ್ಕೆ ತಕ್ಕಂತೆ
ವಿಂಗಡಿಸುವ ಗಜಿಬಿಜಿ
ಒತ್ತಾಯಿತು ಮೇಲ್ ಗುಂಡಿ.

ನಂತರದ ಸರದಿ ;

ನನ್ನ ಬರಹ ಬಂದಿದೆಯಾ?
ಲೈಕೆಷ್ಟು,ಕಮೆಂಟೆಷ್ಟು
ಏನಂತ ಉತ್ತರಿಸಲಿ
ಓದುಗರು ಹೆಚ್ಚಾಗಿ
ಮೆಚ್ಚಿದ್ಯಾವುದು?

ಯಪ್ಪಾ ಯಪ್ಪಾ
ಬರೀ^^^
ಇದೇ ಆಗೋಯ್ತು
ಸಮಯ ಎಷ್ಟಿದ್ದರೂ
ಸಾಲದಾಯಿತು.

ನಾನೊಂದಡಿ
ಇಟ್ಟಾಗಿದೆ
ನಿಮ್ಮ ಕಥೆನೂ
ಹೀಗೇನಾ??
ಹೇಳಿ ಮತ್ತೆ.

15-2-2017. 2.49pm

ಮನಸು ಹಠಮಾರಿ…

ಮನಸೆಲ್ಲೊ ಕಳೆದು ಹೋಗಿದೆ
ಹುಡುಕಾಟದ ಗೊಂದಲದಲ್ಲಿ
ಅಲ್ಲಿ ನೀನಿಲ್ಲದೆ
ಬರೀ ಬೆಂಗಾಡಾಗಿದೆ.

ನಿನ್ನೊಂದು ಮಾತು
ಮರೆತು ಹೋಗುವ ಕ್ಷಣ
ನನಗೆ ಬೇಕಾಗಿದೆ
ನಿನ್ನಿರುವ ಕಾಣಲು.

ಇತ್ತೀಚೆಗೆ
ಅಪರೂಪವಾಗಿದೆ
ಅಂತರಂಗದ ಸ್ವಾದ
ಬರೀ ಮೌನ ಶೋಕ.

ಕುಂಟು ನೆಪವನು ಹೇಳಿ
ಹೃದಯ ಒದ್ದಾಡುತಿದೆ
ನಾ ಹೇಳಲಾರೆ ಏನನ್ನೂ
ನಾ ಬರೆಸಲಾರೆ ಏನನ್ನೂ.

ಹುಡುಕಿ ತಾ ಬೇಗ ಅವನನ್ನು
ಇಲ್ಲವಾದರೆ
ನೀ ಹೀಗೆ ಮೂಲೆ ಹಿಡಿದು
ಮೂಕಜ್ಜಿಯಾಗು ನನಗೇನಂತೆ?

ನಾ ಬರಲಾರೆ ಈಚೆ
ಮನಸೊಳಗಿನ ಮಾತು
ಬರಹಗಳ ಬೊಂತೆ
ಕೊಡಲಾರೆ ನನ್ನೊಳಗಿನ ಗಂಟು.

ಬಿಳಿ ಹಾಳೆ ಉಲಿಯುತಿದೆ
ಮಾತಾಡಿಸು ಬೇಗ
ನೋಡು ನನ್ನೊಡಲೆಲ್ಲ
ಖಾಲಿ,ಖಾಲಿ,ಖಾಲಿ…….!!

25-3-2016. 10.00pm

ಹೀಗಿರಬೇಕು

ಬರೆದರೆ ಕವನ
ಮುತ್ತಿನ ಹಾರದಂತಿರಬೇಕು
ಒಂದೊಂದೆ ಶಬ್ದವೆಕ್ಕಿ
ಸಣ್ಣದು ದೊಡ್ಡದು
ತುಲನೆ ಮಾಡಿ
ಒಂದಕೊಂದು ನೀಟಾಗಿ
ಪೊಣಿಸ ಬೇಕು
ಮನಸೆಂಬ ದಾರ
ಪಕ್ವತೆಯ ಕೊಂಡಿಗೆ
ಸಿಕ್ಕಿಸಿದ ಶಬ್ದಗಳು
ಎಲ್ಲಿಯೂ ಕಳಚದಂತಿರಬೇಕು
ಹಾದಿ ತಪ್ಪದಂತಿರಬೇಕು
ಓದುಗನ ಮನದೊಳಗೆ ಇಟ್ಟ ಹೆಜ್ಜೆ
ಗಟ್ಟಿಯಾಗಿ ತಳ ಊರಬೇಕು
ಲಿರಿಕ್ ಹಾಕಿದ ಕವನದ ಸುಧೆ
ಆಗಾಗ ನೆನೆನೆನೆದು
ಹುಚ್ಚಿಡಿಯುವಷ್ಟು ಕಿಕ್ಕು ಕೊಟ್ಟು
ಗುನುಗುನಿಸುತಿರಬೇಕು
ಸದಾ ಓದುಗನ ಜೊತೆಯಾಗುವ
ಸುಂದರ ಕವನ ನಾ ರಚಿಸ ಬೇಕು!
29-12-20165.42pm.