ಮತ್ತೆ ಕಾಡಿದಳು ಪಾರಿಜಾತ ಏನೀ ವಿಪರ್ಯಾಸ

ಇಳೆಯ ನೆತ್ತಿಗೆ
ಪಾರಿಜಾತದ ಘಮಲು
ತಣ್ಣನೆಯ ಸ್ಪರ್ಶಕ್ಕೆ
ಚಿಮ್ಮಿದ ನಗೆ.

ಬಡಕಲು ಸುಂದರಿ
ಪಕ್ಕನೆ ಹಾದು ಹೋಗಲು
ತನ್ನಂದಕೆ ನಕ್ಕಿತು
ಒಣ ಜಂಬ ತೋರಿ.

ರವಿ ಕಿರಣ
ಭುವಿಯ ಮುತ್ತಿಕ್ಕಲು
ಮುರುಟಿ ಮಲಗಿತು
ದಾಹಕೆ ಬೆಂದು.

ನಗಿಸಿಕೊಂಡ ನಾರಿ
ಮುರುಟಲೇ ಇಲ್ಲ
ಹಿಂತಿರುಗಿ ನಕ್ಕಿತು
ಪೂವ ಗತಿ ಕಂಡು.

21-9-2017. 1.54pm

ಗುಲ್ ಮೊಹರ್

ಅಧಿಕೃತವಾಗಿ ನಾನು
ಅರಸೊತ್ತಿಗೆಯ ರಾಣಿಯಾಗಲಿಲ್ಲ
ಆದರೂ ಹೀಗಾಗಲು ಅಂದುಕೊಂಡಿದ್ದಂತೂ ನಿಜ.

ಗುಲ್ಮೊಹರ್ ಹೂವು ಮೇ ತಿಂಗಳ ರಾಣಿ
ಎಂಬತ್ತರ ದಶಕದಲ್ಲಿ ಬೆಂಗಳೂರಿನ ಬೀದಿಗಳಲ್ಲಿ
ಓಡಾಡುವಾಗ ಹಾಸಿದ ಹೂವು
ಅಣಕಿಸುತ್ತಿತ್ತು ನೀ ಹಾಕಬೇಡ ಆಕಾಶಕ್ಕೆ ಏಣಿ
ಕಿಸಕ್ಕನೆ ನಕ್ಕು.

ಕತ್ತು ಕೊಂಕಿಸಿ ನಡೆದಿದ್ದೆ
ಧಿಮಾಕಿನಲಿ ಅರಳಿ ನಿಂತ
ಭೊಂತೆ ಭೊಂತೆ ಕೆಂಪನೆಯ ಹೂ ಕಂಡು
ನನ್ನ ಕಣ್ಣನ್ನೇ ಕೆಂಪಡರಿಸಿಕೊಂಡು.

ಸಂಜೆಗತ್ತಲ ನೀರಿಳಿಸುವ ಮಳೆ ಗಾಳಿ
ಬುಡ ಸಮೇತ ಅಲ್ಲಾಡಿಸಿ
ಭೃಹತ್ ಮರವೊಂದ ಧರೆಗುರುಳಿಸಿದಾಗ
ಒಳಗೊಳಗೆ ಸಂತಸಪಟ್ಟಿದ್ದೆ
ಹಾಗೆ ಆಗಬೇಕು ನಿನಗೆ.

ಕಾಲ ಉರುಳಿತು
ಇನ್ನೂ ಇಲ್ಲೇ ಅಲೆಯುತ್ತಿದ್ದೇನೆ
ರಾಣಿಯ ಕನಸು ಮಾಸಿ ಕೆಂಪನೆಯ ಕಣ್ಣು ಬಾಡಿ.

ಈಗೆಲ್ಲಿ ಆ ಗುಲ್ಮೊಹರ್ಗಳು?
ನಗರೀಕರಣದ ನೆಪದಲ್ಲಿ ಬುಡಕ್ಕೇ ಬಿತ್ತು ಕೊಡಲಿ
ಹಾವವೂ ಇಲ್ಲ ಭಾವವೂ ಇಲ್ಲ ಬತ್ತಿದ ಬುಡವ ಕಂಡು
ಒಳಗೊಳಗೆ ನೊಂದುಕೊಳ್ಳುವೆ
ಹುಡುಕಿದರೂ ಸಿಗಲಾರದ ಗುಲ್ಮೊಹರ್ ಗತಿ ಕಂಡು.

ಈಗ ನಾನೂ ಅವಳೂ ಒಂದೆ
ಕೊಂಕಿಲ್ಲ, ಧಿಮಾಕಿಲ್ಲ!

13-8-2017. 6.25pm

ಓ ಪಾರಿಜಾತಾ….

ದಿನ ಬೆಳಗಾದರೆ ಈ ಪಾರಿಜಾತ ಪುಷ್ಪ ಕೃಷ್ಣನ ಪೂಜೆಗೆ ಎತ್ತಿಡುವ ನಾನು ಸದಾ ಇದರೊಂದಿಗೆ ಮನಸು ಮಾತನಾಡುವಂತಾಗಿದೆ. ಸುಮಧುರ ಸುವಾಸನೆ ಹೊತ್ತ ಚಂದದ ಪುಷ್ಪಕ್ಕೆ ಒಂದೊಳ್ಳೆ ಕವನ ಬರೆಯುವ ಹಂಬಲ. ಬರೆದೆ ಆದರೆ ಮನಸ್ಸಿಗೆ ತೃಪ್ತಿ ಆಗಿಲ್ಲ. ಯಾಕೊ ಸರಿಗಿಲ್ಲ, ಸ್ವಲ್ಪ ಬದಲಾಯಿಸಬೇಕು. ಇಲ್ಲಿ ಏನೊ ತಪ್ಪಾಗಿದೆ, ಹಾಗೆ ಹೀಗೆ ಒಂದು ರೀತಿ ಗೊಂದಲ. ಮತ್ತೆ ಮತ್ತೆ ಬದಲಾಯಿಸಿದರೂ ಸಮಾಧಾನ ತರದ ನನ್ನ ಕವನದ ರಚನೆಗೆ ಸವಾಲೊಡ್ಡಿದ ಕವನವಿದು. ಮತ್ತೆ ನಿಮ್ಮ ಮುಂದೆ ಬಂದಿದೆ☺
^^^^^^^^^^^^^^^^^^^^^^

ಅಚ್ಚ ಬಿಳಿಯ ಹಾಲುಗಲ್ಲದ
ಮೊಗ್ಗು ಗೆಲ್ಲು ಗೆಲ್ಲುಗಳಲಿ
ತುಟಿ ಹವಳದ ಕೆಂಪು
ಸಂಜೆ ಇಳಿ ಹೊತ್ತಿನ ತಂಪು
ನವಿರಾಗಿ ಸೋಕಿದೊಡೆ
ಮೈ ಮುರಿದು ಸೆಟಗೊಂಡು
ಒಂದೊಂದೇ ಪೊಕಳೆಗಳರಳಿಸುತ
ನಿಧಾನವಾಗಿ ಘಂಮ್ಮೆಂಬ
ಸುಕೋಮಲ ಪರಿಮಳ
ಸುತ್ತೆಲ್ಲ ಪಸರಿಸುವೆಯಲ್ಲ!

ಅರಳುತರಳುತ ಗಾಳಿಗೋ
ಅಥವಾ ಬಿರಿದಾಯಿತಲ್ಲ
ನನ್ನಿರುವ ತಿಳಿಸಾಯಿತಲ್ಲ
ಇನ್ನೇನು ಇಷ್ಟೇ ಸಾಕೆಂಬ ತೃಪ್ತಿಗೊ
ತಟಕ್ಕನೆ ಉದುರಿ
ಮಣ್ಣ ಸೇರುವೆಯಲ್ಲ ನೀನು.

ನಾನಿನ್ನೂ ಪೂರ್ತಿ ಬೀಳಲಿಲ್ಲ
ಕೆಲವಾದರೂ ನೀ ಜೋಪಾನವಾಗಿ ಕಿತ್ತು
ಮಿಂದು ಮಡಿಯುಟ್ಟು
ಶುದ್ಧ ಮನಸಿನ ಪೂಜೆಗೆ ಅಣಿಯಾಗು
ಹೇ…ಮನುಜಾ ಎಷ್ಟು ಮೆರೆದರೇನು
ಗಳಿಸಿ ಕೂಡಿಟ್ಟರೇನು
ನಿನ್ನ ಗತಿ ಇಷ್ಟೇ ಕಣೋ
ನನ್ನಂತೆ ನೀನೊಂದು ದಿನ ಮಣ್ಣ ಸೇರಿ
ಇನ್ನಿಲ್ಲವಾಗುವೆಯಲ್ಲೊ ಎಂದರುಹಲು
ಕೆಲವಾದರೂ ಈಗಲೊ ಆಗಲೊ ಎಂಬಂತೆ
ಟೊಂಗೆ ತುದಿಯಲಿ ತುದಿಕಾಲಲಿ ನಿಲ್ಲುವ
ನನಗಂತೂ ಬಲು ಅಚ್ಚರಿ
ಈ ನಿನ್ನ ತಪೋ ಭಂಗಿ!

ನೀನೊಂದು ಔಷಧಿಯ ಆಗರ
ಜ್ಞಾನದ ಸಂಕೇತ
ಕವಿ ಪಂಪನಿಂದ ವರ್ಣಿತೆ
ಪ್ರಾಣ ಪುಶ್ಪ ಶ್ರೀ ಕೃಷ್ಣನಿಗೆ
ನೆಲಕೆ ಬಿದ್ದ ನಿನಗೆ ಬಕುಳ ಪುಶ್ಪದಂತೆ
ದೇವರ ಮುಡಿಯೇರಲು ವಿನಾಯತಿ ಇದೆಯಂತೆ
ರವಿ ಕಿರಣಕೆ ನಲುಗುವ
ಚಂದ್ರಮಗೆ ತಲೆಬಾಗುವ
ಸಕಲರಿಗೂ ಇಷ್ಟವಾಗುವ ಚಂದದ ಪುಷ್ಪ ನೀನು
ನಿನ್ನಂದಕೆ ಸರಿಸಾಠಿ ಯಾರು?
ಹೇಳೆ ಓ ಪಾರಿಜಾತಾ!

2-7-2017 8.33pm

ಓ ಪಾರಿಜಾತಾ……

ಅಚ್ಚ ಬಿಳಿಯ ಹಾಲುಗಲ್ಲದ
ಮೊಗ್ಗು ಗೆಲ್ಲು ಗೆಲ್ಲುಗಳಲಿ
ತುಟಿ ಹವಳದ ಕೆಂಪು
ಸಂಜೆ ಇಳಿ ಹೊತ್ತಿನ ತಂಪು
ನವಿರಾಗಿ ಸೋಕಿದೊಡೆ
ಮೈ ಮುರಿದು ಸೆಟಗೊಂಡು
ಒಂದೊಂದೇ ಪೊಕಳೆಗಳರಳಿಸುತ
ಈಗಷ್ಟೇ ಹುಟ್ಟಿದ
ಶಿಶುವಿನ ಆಕ್ರಂದನ
ಸುತ್ತೆಲ್ಲ ಕಿವಿಗಪ್ಪಳಿಸುವಂತೆ
ನಿಧಾನವಾಗಿ ಘಂಮ್ಮೆಂಬ
ಸುಕೋಮಲ ಪರಿಮಳ
ಸುತ್ತೆಲ್ಲ ಪಸರಿಸುವ ಕೈಂಕರ್ಯ
ಅದಾವ ಪರಿಯಲಿ
ನೀ ಅರಿತು ಬಂದೆ
ಒಮ್ಮೆ ನನಗೆ
ಹೇಳು ಸಖೀ!

ಬದುಕೆಂಬುದೇ ಕ್ಷಣ ಭಂಗುರ
ನಿನ್ನಿರುವು ಇಲ್ಲಿ
ಅಶಾಶ್ವತವೆಂದುಸುರುವ
ಸೂಕ್ಷ್ಮ ಅರಿವಾಗಿಸಲೆಂಬಂತೆ
ಅರಳುತರಳುತ ಗಾಳಿಗೋ
ಅಥವಾ ಬಿರಿದಾಯಿತಲ್ಲ
ನನ್ನಿರುವ ತಿಳಿಸಾಯಿತಲ್ಲ
ಇನ್ನೇನು ಇಷ್ಟೇ ಸಾಕೆಂಬ ತೃಪ್ತಿಗೊ
ತಟಕ್ಕನೆ ಉದುರಿ
ಮಣ್ಣ ಸೇರುವ ನೀನು
ಜೀವನದ ಅಂತಿಮ ಯಾತ್ರೆಯ
ಕುರುಹು ಬೆಳ್ಳಂಬೆಳಗ್ಗೆಯೇ
ಮನೆ ಮನಗಳ ಬಾಗಿಲ ತಟ್ಟಿ
ಎಚ್ಚರಿಸುವ ಗಂಟೆಯಾದೆ
ಅದು ಹೇಗೆ
ಹೇಳು ಸಖೀ!

ನಾನಿನ್ನೂ ಪೂರ್ತಿ ಬೀಳಲಿಲ್ಲ
ಕೆಲವಾದರೂ ನೀ ಜೋಪಾನವಾಗಿ ಕಿತ್ತು
ಮಿಂದು ಮಡಿಯುಟ್ಟು
ಶುದ್ಧ ಮನಸಿನ ಪೂಜೆಗೆ ಅಣಿಯಾಗು
ಹೇ…ಮನುಜಾ ಎಷ್ಟು ಮೆರೆದರೇನು
ಗಳಿಸಿ ಕೂಡಿಟ್ಟರೇನು
ನಿನ್ನ ಗತಿ ಇಷ್ಟೇ ಕಣೋ
ನನ್ನಂತೆ ನೀನೊಂದು ದಿನ ಮಣ್ಣ ಸೇರಿ
ಇನ್ನಿಲ್ಲವಾಗುವೆಯಲ್ಲೊ ಎಂದರುಹಲು
ಕೆಲವಾದರೂ ಈಗಲೊ ಆಗಲೊ ಎಂಬಂತೆ
ಟೊಂಗೆ ತುದಿಯಲಿ ನಿಂತು
ಜಗತ್ತಿಗೇ ಪಾಠ ಹೇಳುವಂತೆ
ತುದಿಕಾಲಲ್ಲಿ ನಿಲ್ಲುವ
ತಪೋ ಭಂಗಿ
ಅದು ಎಲ್ಲಿಂದ ಕಲಿತೆ
ಹೇಳು ಸಖೀ!

ಕ್ಷೀರ ಸಮುದ್ರ ತನಯೆ ಕಲ್ಪವೃಕ್ಷೆ
ನೀನೊಂದು ಔಷಧಿಯ ಆಗರ
ಜ್ಞಾನದ ಸಂಕೇತ
ಕವಿ ಪಂಪನಿಂದ ವರ್ಣಿತೆ
ಪ್ರಾಣ ಪುಶ್ಪ ಶ್ರೀ ಕೃಷ್ಣನಿಗೆ
ಆದರೂ ನೀ ಷುಶ್ಪವಲ್ಲವಂತೆ
ಸಸ್ಯ ಶಾಸ್ತ್ರಜ್ಞರಿಗೆ
ಸೂರ್ಯನ ಪ್ರೀತಿ ವಂಚಿತೆ ರಾಜಕುವರಿ
ಆತ್ಮಹತ್ಯೆಗೆ ಶರಣಾಗಿಹಳೆಂಬ
ಅದೆಂತುದೊ ದಂತ ಕಥೆ
ಅದಕೆ ರವಿಯಿರುವಾಗ ನೀನರಳಲ್ಲವಂತೆ
ನೆಲಕೆ ಬಿದ್ದ ನಿನಗೆ
ಬಕುಳ ಪುಶ್ಪದಂತೆ
ದೇವರ ಮುಡಿಯೇರಲು
ವಿನಾಯತಿ ಇದೆಯಂತೆ
ಇದು ನಿಜವೇನೆ
ಹೇಳು ಸಖೀ!

27-6-2017 1.45am

ಚಂದದ ಸೋಂಪಿನ ಪಲ್ಲಕ್ಕಿ ನೀನು..

ಹೊಂಗೆಯ ಮರವೆ ಹೊಂಗೆಯ ಮರವೆ
ಚೈತ್ರಕೆ ಚಿಗುರುವ ಹಸಿರೆಲೆ ಸಿರಿಯೆ
ಅಂದದ ಸೊಬಗಲಿ ಚೆಂದದಿ ಬಳುಕುವೆ
ನಿನ್ನಾಗಮನದಿ ಪ್ರಕೃತಿ ಬಣ್ಣಿಸಲರಿಯೆ.

ಬಾಗುತ ಬಳುಕುತ ಉದ್ದನೆ ಟೊಂಗೆಯು
ಪಳ ಪಳ ಹೊಳೆವವು ಮುಂಜಾನೆಯ ಕಿರಣಕೆ
ದಿಕ್ ದಿಗಂತಕೆ ಪಚ್ಚೆಯ ಹಸಿರನು ಹರಡಿ
ಥಟ್ಟನೆ ನಿಲ್ಲಿಸುವೆ ನಿನ್ನಂದವ ತೋರಿ.

ಗೊಂಚಲು ಗೊಂಚಲು ಹೂಗಳ ಒಡಲು
ನಡೆಯುವ ಹಾದಿ ನೋಡಲು ಸೊಗಸು
ದಿಬ್ಬಣ ಸಂಭ್ರಮ ತಂದಿಹೆಯಲ್ಲೆ
ಭೂರಮೆ ಮದುವಣಗಿತ್ತಿ ಮಾಡಿಹೆಯಲ್ಲೆ.

ನಿನ್ನಯ ಘಮಲಿನ ಪರಿಮಳ ಮೋಡಿ
ಜೇನಿನ ಹಿಂಡು ಹಾಡುತಿವೆಯಲ್ಲೆ
ನೋಡಿದ ಮನಕೆ ಮುದವನು ನೀಡಿ
ಪವಡಿಸುವಾಸೆ ಕ್ಷಣ ಹೊತ್ತಾದರಲ್ಲಿ.

ಅನಾದಿ ಕಾಲದ ಸಸ್ಯ ಸಂಕುಲ ನೀನು
ಊರು ಕಾನನವೆಲ್ಲ ನಿನ್ನದೆ ರಾಜ್ಯ
ಎಲ್ಲಾದರು ಸರಿ ಬೆಳೆಯುವೆ ನೀನು
ಹಣ್ಣೆಲೆ ಉದುರಿಸಿ ಆಗುವೆ ತ್ಯಾಜ್ಯ.

ಚಂದದ ಸೋಂಪಿನ ಪಲ್ಲಕ್ಕಿ ನಡೆಯ
ಕೆಲ ಮನುಜರಿಗೆ ಇದರರಿವಿಲ್ಲ ನೋಡು
ಬೀಳಲು ಬಿಟ್ಟಂತಿದೆ ಉದ್ದನೆ ಜಡೆಯ
ಕತ್ತರಿಸಿ ಆಗಾಗ ಬಾಪ್ಕಟ್ ನಿನ್ನಯ ಪಾಡು.

ಮನುಜನ ಸ್ವಾರ್ಥಕೆ ಇತಿ ಮಿತಿ ಇಲ್ಲ
ಮರಗಳ ಕಡಿದು ಆಗುತಿದೆ ಕಾಡು ಬೆಂಗಾಡು
ಬೀಜವೊ ಸಸಿಯೊ ಮುಂದಿನ ದಿನಕಿಲ್ಲ
ಯೋಚಿಸಿ ಬರೆದೆ ನಿನಗೊಂದು ಹತಾಷೆಯ ಹಾಡು.

12-4-2017. 6.08 am

ತೆರೆದ ಕಿಟಕಿಯ ಹೂವುಗಳು

ದಿನಾಂಕ 3-4-2016ರಂದು “ಅವಧಿ”ಯಲ್ಲಿ ಬಂದ ಶ್ರೀ ರಾಜೇಂದ್ರ ಪ್ರಭು ರವರ ಛಾಯಾ ಚಿತ್ರ ಇನ್ನೂ ಮನಸ್ಸಿನಲ್ಲಿ ಕಾಡೋದು ಬಿಟ್ಟಿಲ್ಲ. ಮತ್ತೆ ಕವನ ಬರೆಯುವ ಪ್ರಯತ್ನ. ಮತ್ತೆ ತಿದ್ದಿದೆ, ತೀಡಿದೆ; ಮನದಲ್ಲಿ ಗುಣಗುಣಿಸಿದೆ “ಏಕೆ ಕಾಡುವೆ ಸುಮ್ಮನೆ…..” ಅತ್ಯುತ್ತಮ ಛಾಯಾ ಚಿತ್ರ👌
(ಈ ಚಿತ್ರ ನಾನೆ ತೆಗೆದಿದ್ದು)

image

ಏಕೆ ಕಾಡುವೆ ನನ್ನನೆ?

ಓಹೊ!
ಕಿಟಕಿಯನೇರಿ
ಅಡ್ಡಡ್ಡ ಉದ್ದುದ್ದ ಕುಳಿತು
ಹಣಕಿ ಹಾಕಿ ಕ್ಯಾಮರಾಕ್ಕೆ
ವಯ್ಯಾರದಿ ಪೋಸು ಕೊಟ್ಟ
ಭಂಗಿ ನೋಡು.

ಆಹಾ!
ಕರವೀರದ ಹೂವೆ
ಎದ್ದು ನಿಂತರೆ ಗಂಟೆ
ಅಡ್ಡ ಮಲಗಿದರೆ ಕಾಣುವೆ
ಕಹಳೆಯಂತೆ.

ನಿನ್ನ ಬಣ್ಣವೊ
ಅದೆ ಎಲ್ಲಿ ಬಿಟ್ಟು ಬಂದೆ
ಆ ಬಿಳಿ, ಕಾವಿ?
ಬರಿ ಹಳದಿಯೊಂದೆ ಕಾಣುತಿದೆಯಲ್ಲ!

ಹಮ್ೲೲೲ
ಪೂಸಿದರೆ
ಸೌಮ್ಯ ಸುಗಂಧ ಘಮ
ಪತ್ರೆ, ಗರಿಕೆ, ಪುಷ್ಪಗಳ
ಜೊತೆ ಸೇರಿ ಹೂ ಬುಟ್ಟಿಯಲಿ
ಅಡಗಿ ಕುಳಿತು
ಆಡುವೆ ಕಣ್ಣಾ ಮುಚ್ಚಾಲೆ
ತಡಕಾಡಿ ಹುಡುಕಿ
ಹಿಡಿದು ಕೈಯಲ್ಲಿ
ಉಲಿಯುವರು ಮಂತ್ರದಲ್ಲಿ
“ಕರವೀರ ಪುಷ್ಪಂ ಸಮಪ೯ಯಾಮಿ”
ಬಿಡು ನೀ ಪುಣ್ಯವಂತೆ
ದೇವರ ಪಾದ ಸೇರುವೆ.

ನಿನ್ನ ಬೀಜವೊ
ಆಕಾರದಲಿ ಕಪ್ಪಾದ
ಗಟ್ಟಿ ದೋಣಿ.
ಹೋಗ್
ಯಾರಾರೈಕೆ ಬೇಕಿಲ್ಲ ನನಗೆ
ಎಂದುಸುರುವ
ಗಟ್ಟಿ ಮನಸಿನ ದಿಟ್ಟೆ ನೀನು.

ತಂಪಾದ ಭುವಿಗೆ
ಬೀಜ ಬಿದ್ದರೆ ಸಾಕು
ಹಾದಿ, ಬೀದಿ ಪಕ್ಕದಲ್ಲಾದರೂ
ಎಲ್ಲೆಂದರಲ್ಲಿ
ಮೊಳಕೆಯೊಡೆದು ಪುಟಿದೇಳುವೆ
ನಿತ್ಯ ಹರಿದ್ವರಣದ
ಪೊದರು ಗಿಡವಾಗಿ
ಇಲ್ಲ ಆಳೆತ್ತರದ ಮರವಾಗಿ
ದನ,ಕರು,ದಾರಿ ಹೋಕರಿಗೆ
ತಂಪು ನೆರಳಾಗಿ.

ನಿನ್ನಂಗಾಂಗ
ಸ್ವಲ್ಪಮುಟ್ಟಿ
ಚಿವುಟಿದರೆ ಸಾಕು
ಅಯ್ಯೋ ಎನ್ನದೆ
ಕೊಡುವೆ
ಅಂಟು ಅಂಟಾದ ಹಾಲ್ರಸ
ಔಷಧೀಯ ಸಸ್ಯ
ಸಂಕುಲ ನೀನು
ಆದರೂ
ಮನೆ ಮುಂದೆ
ಬೆಳೆಸಬಾರದೆನ್ನುವ
ವಾಸ್ತುವಿನ
ಸಂಕೋಲೆ ನಿನಗೆ!

ಕಾಲನ ಹಂಗಿಲ್ಲ
ಸದಾ ಕಾಲ
ತಿಳಿ ಹಸಿರು
ಗೊಂಚಲು ಮೊಗ್ಗಾಗಿ
ಭಚಿ೯ಯಾಕಾರ ತಳೆದು
ನಿದಾನವಾಗಿ
ಐದೆಸಳಿನಲ್ಲಿ ಬಿರಿದು
ನಗುವೆ
ಟೊಂಗೆಯ ತುದಿಯಲ್ಲಿ.

ಅರಳಿದ
ಎರಡು ದಿನದಲ್ಲಿ
ಭೂರಮೆಯಲ್ಲಿ
ನಿನ್ನಂದದ
ಚಿತ್ತಾರ ಬಿಡಿಸಿ
ಪೃಕೃತಿಯ ಮಡಿಲು
ಶೃಂಗಾರ ಗೊಳಿಸುವ
ನೀ ದೇವ ಕುಸುಮ.
12-4-2016 12.50pm
(Published un Sampada net.)