ನಾನೂ ಟೀಚರ್ ಆಗ್ಬೇಕು….

ಆಗಿನ್ನೂ ನಾನು ಎಸ್. ಎಸ್. ಎಲ್.ಸಿ. ಪರೀಕ್ಷೆ ಮುಗಿಸಿದ ಸಮಯ. ಕ್ಲಾಸ್ ಟೀಚರ್ ಕ್ಲಾಸಿನಲ್ಲಿ ಒಂದಿನ ಎಲ್ಲರ ಹತ್ತಿರವೂ “ನೀವೆಲ್ಲ ಮುಂದೆ ಏನು ಓದಬೇಕಂತಿದ್ದೀರಾ? ಏನಾಗಬೇಕಂತಿದ್ದೀರಾ?” ಅಂತ ಕೇಳಿದರು. ” ನಾನು ಮುಂದೆ ನಿಮ್ಮ ಹಾಗೆ ಟೀಚರ್ ಆಗಬೇಕು. ಆದರೆ ಹೈಸ್ಕೂಲಿನಲ್ಲಿ ಅಲ್ಲ. ಕನ್ನಡ ಪ್ರಾಥಮಿಕ ಶಾಲೆಯಲ್ಲಿ “ಅಂದೆ. ಅದಕ್ಕೆ ಅವರು ಜೋರಾಗಿ ನಕ್ಕು “ಯಾಕೆ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಆಗಬೇಕು” ಅಂದಾಗ “ಇಲ್ಲ ಸರ್ ಅಲ್ಲಿ ಚಿಕ್ಕ ಮಕ್ಕಳು ಇರ್ತಾರೆ. ಭಯ ಇರಲ್ಲ. ಅವರೊಂದಿಗೆ ಆಡಬಹುದು”ಅಂದಿದ್ದೆ. ನನ್ನ ಮಾತು ಕೇಳಿ ಇಡೀ ಕ್ಲಾಸಿನವರೆಲ್ಲ ನಕ್ಕಿದ್ದರು.

ಆದರೆ ಅಂದಿನಿಂದ ನನ್ನ ತಲೆಯಲ್ಲಿ ಟೀಚರ್ ಆಗೊ ಕನಸು ಬಿಡಲೇ ಇಲ್ಲ. ಸರಿ ರಿಸಲ್ಟ್ ಬಂತು. ಗಾಂಧಿ ಕ್ಲಾಸಿನಲ್ಲಿ ಪಾಸಾದೆ. ಏಕೆಂದರೆ ನಾನು ಪಾಸಾಗೋದೇ ಮನೆಯವರಿಗೆಲ್ಲ ಡೌಟಿತ್ತು. ಒಂಬತ್ತನೇ ಕ್ಲಾಸಿನಲ್ಲಿ ನಾನು ಶಾಲೆಗೆ ಹೋಗೋದಿಲ್ಲ ಅಂತ ಮೂರು ದಿನ ಹಠ ಹೊತ್ತು ಕೂತಿದ್ದೆ. ಅಪ್ಪ ಊರಲ್ಲಿ ಇರಲಿಲ್ಲ. ಮನೆಗೆ ಬಂದವರೆ ನಾಲ್ಕು ಚಡಿ ಏಟು ಕೊಟ್ಟು ಮತ್ತೆ ಶಾಲೆಗೆ ಹೋಗುವಂತೆ ಮಾಡಿದ್ದರು. ಹೀಗಿರುವಾಗ ಡೌಟು ಪಡೋದು ಸ್ವಾಭಾವಿಕ ಅಲ್ವಾ?

ಆದರೆ ನನ್ನ ಕ್ಲಾಸ್ ಟೀಚರ್ ಮಾತ್ರ ಕ್ಲಾಸಲ್ಲಿ ಯಾರ್ಯಾರು ಪಾಸಾಗ್ತಾರೆ ಎಂಬ ಲೀಸ್ಟ್ ಮಾಡಿದಾಗ ಅದರಲ್ಲಿ ನನ್ನ ಹೆಸರೂ ಸೇರಿಸಿದ್ದರು. ಅದೇನು ನಂಬಿಕೆಯೋ ಏನೋ! ಅಂತೂ ಅವರ ನಂಬಿಕೆ ಉಳಿಸಿಕೊಂಡೆ ಹಾಗೆ ರಿಸಲ್ಟ್ ಕೇಳಿ ಇಡೀ ಶಾಲೆ ಮಕ್ಕಳಿಗೆಲ್ಲ ಸ್ವೀಟ್ ಹಂಚಿದ್ದೆ. ಪಾಸಾಗಿದ್ದಕ್ಕಲ್ಲ ಓದೊ ಕಾಟ ತಪ್ಪಿತಲ್ಲ ಅಂತ.

ಕಾರಣ ಇಷ್ಟೇ; ನನಗೆ ಓದೋದು,ಶಾಲೆಗೆ ಹೋಗೋದು ಅಂದರೆ ಬಹಳ ಕಷ್ಟ. ಇಡೀ ದಿನ ಆಟ ಆಟ ಆಟ. ಪಿಇ ಟೀಚರಿಗೆ ನನ್ನೀ ಆಟದ ಹುಚ್ಚು ಸದಾ ಕಿಂಡಲ್ ಮಾಡ್ತಾ ಜಿಜಿ ಅಂತ ಕರೆಯುವವರು ಸ್ವೀಟ್ ಕೊಡಲು ಹೋದ ದಿನವೂ “ಬಾ ಹೈಜಂಪ್ ಮಾಡು” ಅಂತ ಅಲ್ಲಿ ಆಟ ಆಡುತ್ತಿರುವವರ ಜೊತೆಗೆ ನನ್ನನ್ನೂ ಸೇರಿಸಿಕೊಂಡು ಆಡಿಸಿ ಸಖತ್ ನಗಿಸಿ ವಿಷ್ ಮಾಡಿ ಕಳಿಸಿದ್ದು ಎಲ್ಲಾ ಜಮಾನಾ.

1975ನೇ ಇಸವಿ. ಆಗೆಲ್ಲಾ ಟೀಚರ್ ಆಗಬೇಕೆಂದರೆ ಎಸ್. ಎಸ್. ಎಲ್.ಸಿ. + ಟಿಸಿಎಚ್ ಟ್ರೇನಿಂಗ್ ಆಗಬೇಕಿತ್ತು. ನನ್ನ ಕನಸು ನಿಚ್ಚಳವಾಗಿ ಅಷ್ಟೊತ್ತಿಗೆ ಸ್ವಲ್ಪ ತಲೆಯಲ್ಲಿ ಬುದ್ಧಿನೂ ಚುರುಕುಗೊಂಡಿತ್ತು. ಮನೆಯಲ್ಲಿ ” ಟ್ರೇನಿಂಗ್ಗೆ ಕಳಿಸಿ,ನಾನು ಟೀಚರ್ ಆಗಬೇಕು. ಅಂಕೋಲಾದಲ್ಲಿ ಟಿಸಿಎಚ್ ಕಾಲೇಜು ಇದೆಯಂತೆ. ಅಲ್ಲೇ ಉಳಿಯಲು ಹಾಸ್ಟೆಲ್ ಇದೆಯಂತೆ” ಅಂತ ಹೇಳಿದಾಗ ಅಪ್ಪ ಸುತಾರಾಂ ಒಪ್ಪಲಿಲ್ಲ. ಕಾರಣ ಆರ್ಥಿಕ ತೊಂದರೆ. ಮಲೆನಾಡಿನ ಪುಟ್ಟ ಹಳ್ಳಿಯ ಸಣ್ಣ ಹಿಡಿವಳಿದಾರರ ಕುಟುಂಬ ನಮ್ಮದು. ಮನೆಯಲ್ಲಿ ನಾಲ್ಕು ಜನ ಮಕ್ಕಳು ಓದುವವರು. ವ್ಯವಸಾಯ ಅಡಿಕೆ ಬೆಳೆಯೋದು. ಆ ವರ್ಷ ಅಡಿಕೆ ರೇಟು ಪಾತಾಳ ಕಂಡಿತ್ತು. ನಿರಾಸೆಯಿಂದ ಅಳುತ್ತ ಕೂತಿದ್ದೆ. ಮುಂದೆ ಮತ್ತೆ ಓದಿ ಬ್ಯಾಂಕ್ ಕೆಲಸಕ್ಕೆ ಸೇರಿದ್ದು ಎಲ್ಲಾ ವಿಧಿ ಲಿಖಿತ.

ಇಷ್ಟೆಲ್ಲಾ ನೆನಪುಗಳು ಮರುಕಳಿಸಿದ್ದು ದಿನಾಂಕ 20-11-2019ರಂದು ಬೆಂಗಳೂರಿನ New millennium schoolನಲ್ಲಿ ಮಕ್ಕಳೊಂದಿಗೆ ಬೆರೆತಾಗ. ಈ ಶಾಲೆಯ 5ರಿಂದ 10ನೇ ತರಗತಿಯ ಮಕ್ಕಳಿಂದ ಕವನ ಕಂಠಪಾಠ ವಾಚನ ಹಾಗೂ ಚರ್ಚಾ ಸ್ಪರ್ಧೆ ಏರ್ಪಡಿಸಿದ್ದರು. ಈ ಸ್ಪರ್ಧೆಯ ತೀರ್ಪುಗಾರಳಾಗಿ ನನಗೂ ಆಹ್ವಾನಿಸಿದ್ದರು. ಒಟ್ಟೂ ಮೂರು ಮಂದಿ ತೀರ್ಪುಗಾರಿದ್ದೆವು. ಕಾರ್ಯಕ್ರಮಕ್ಕೆ ತೀರ್ಪುಗಾರಳಾಗಿ ಆಹ್ವಾನಿಸಿದ್ದಲ್ಲದೇ ಅವರೇ ನಿಯೋಜಿಸಿದ ವಾಹನದಲ್ಲಿ ನಾವು ಮೂರು ಮಂದಿ ಶಾಲೆಯನ್ನು ತಲುಪಿದಾಗ ಇನ್ನೂ ಬೆಳಗಿನ ಎಂಟು ಗಂಟೆ.

“ಈ ಶಾಲೆ ಶುರುವಾಗಿ ಇಪ್ಪತ್ತು ವರ್ಷ ಕಳೆದಿದೆ. ಬೆಂಗಳೂರಿನ ಹೊರಮಾವು, ಅಗರ ಸ್ಥಳದಲ್ಲಿರುವ ಶಾಲೆ ಮೂರು ಅಂತಸ್ಥಿನ ಕಟ್ಟಡ ಹೊಂದಿದ್ದು 500 ಮಕ್ಕಳು ಓದುತ್ತಿದ್ದಾರೆ. ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಪಠ್ಯಕ್ರಮ ಇದೆ. ಪ್ರತಿ ವರ್ಷ ಡಿಫ್ಟಿಂಗಷನ್ ನಲ್ಲಿ ಮಕ್ಕಳು ಪಾಸಾಗುತ್ತಿದ್ದಾರೆ. ಪ್ರತಿ ತರಗತಿಯಲ್ಲಿ ಮೂವತ್ತು ಮಕ್ಕಳಿಗೆ ಮಾತ್ರ ಅವಕಾಶ. ಪ್ರತಿ ವರ್ಷ ಹಿರಿಯ ಕವಿಗಳ ಕನ್ನಡ ಕವನಗಳ ಕಂಠಪಾಠ ವಾಚನ ಸ್ಪರ್ಧೆ ಏರ್ಪಡಿಸುತ್ತಿದ್ದು ಮೂರು ಜನ ತೀರ್ಪುಗಾರರಿಂದ ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಹಾಗೂ ಈ ಶಾಲೆ ಶುರುವಾಗಿದ್ದು ಮೊದಲು ಒಬ್ಬ ತಾಯಿಯ ಪರಿಶ್ರಮ ಪುಟ್ಟ ನರ್ಸರಿಯಿಂದ. ಮುಂದೆ ಅವರ ಮಗ Dr.Rajeev Kishen ಇವರ ಮುಂದಾಳತ್ವದಲ್ಲಿ ಟ್ರಸ್ಟ್ ವತಿಯಿಂದ ಇಷ್ಟು ಮಕ್ಕಳಿರುವ ದೊಡ್ಡ ಶಾಲೆಯಾಗಿ ಉನ್ನತಿಯತ್ತ ಸಾಗುತ್ತಿದೆ. ಇವರದೇ ಆದ ವೆಬ್ಸೈಟ್ ಇದ್ದು ಅಲ್ಲಿ ಶಾಲೆಯ ಕುರಿತಾದ ಮಾಹಿತಿ ಇದೆ” ಎಂದು ಈ ಶಾಲೆಯ ಪ್ರಿನ್ಸಿಪಾಲರಾದ ಶ್ರೀ ಕೃಷ್ಣಮೂರ್ತಿಯವರಿಂದ ಸಿಕ್ಕ ಮಾಹಿತಿ ತಿಳಿದು ಬಹಳ ಸಂತೋಷವಾಯಿತು.

ಹಾಗೆ ಆಗ ತಾನೇ ಬಂದ ರಾಜೀವ್ ಅವರ ಪರಿಚಯವನ್ನೂ ಮಾಡಿಕೊಟ್ಟರು. ದೇಶ ವಿದೇಶಗಳಲ್ಲಿ ಕಲಿತು ಅಲ್ಲಿ ಇಲ್ಲಿ ಎರಡೂ ಕಡೆ ತಮ್ಮ ಪಾಂಡಿತ್ಯ ಮಕ್ಕಳಿಗೂ ಕಲಿಸುತ್ತ ಮಕ್ಕಳ ಅಪಾರ ಪ್ರೀತಿ ಗಳಿಸಿದ ವ್ಯಕ್ತಿ ಎಂಬುದನ್ನು ತಿಳಿಸಿದರು. ಅವರು ಬರೆದ ಪುಸ್ತಕ ಹಾಗೂ ಶಾಲಾ ವಾರ್ಷಿಕೋತ್ಸವದ ಮ್ಯಾಕ್ಸಿನ್ ನಮಗೂ ಕೊಟ್ಟರು.

ಶಾಲೆಯ ಮಕ್ಕಳಿಂದ ಕನ್ನಡ ಗೀತೆಯೊಂದಿಗೆ ಕಾರ್ಯಕ್ರಮ ಶುರುವಾದಾಗ ಒಂಬತ್ತು ಗಂಟೆ. ಹತ್ತನೇ ಕ್ಲಾಸಿನ ಇಬ್ಬರು ಮಕ್ಕಳೇ ಕಾರ್ಯಕ್ರಮ ನಡೆಸಿಕೊಡುವವರು. ತುಂಬಾ ಚೂಟಿಯಾಗಿದ್ದರು. ಶಾಲೆಯ ಪ್ರಿನ್ಸಿಪಾಲರಿಂದ ಮಕ್ಕಳಿಗೆ ನಮ್ಮ ಪರಿಚಯ ಹಾಗೂ ಮಕ್ಕಳಿಂದ ನೆನಪಿನ ಕಾಣಿಕೆ ಪುಟ್ಟ ಹೂ ಕುಂಡವಿತ್ತು ಸ್ವಾಗತ ಕೋರಿ ಕವನ ವಾಚನ ಮತ್ತು ಚರ್ಚಾ ಸ್ಪರ್ಧೆಗೆ ಮಕ್ಕಳಿಗೆ ಆಹ್ವಾನವಿತ್ತರು.

ನಾಲ್ಕು ಗುಂಪುಗಳಾಗಿ ವಿಂಗಡಿಸಿದ ಮಕ್ಕಳಿಗೆ ಹಿರಿಯ ಕವಿಗಳ ಕವನಗಳನ್ನು ಕಂಠಪಾಠ ಮಾಡಿ ಸಭೆಯಲ್ಲಿ ಹೇಳಬೇಕಿತ್ತು. ಅವರ ಚಾಕಚಕ್ಯತೆ ಗುರುತಿಸಿ ತದ ನಂತರ ಅವರ ಪ್ರತಿಭೆಗೆ ತಕ್ಕಂತೆ ಅಂಕಗಳನ್ನು ಅವರೇ ಒದಗಿಸಿದ ಫಾರಂಲ್ಲಿ ಬರೆಯಬೇಕಿತ್ತು. ಇದು ನನಗೆ ಮೊದಲ ಅನುಭವ. ನಾವು ಕಲಿಯುವಾಗ ಈ ರೀತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಷ್ಟೇ. ಇಲ್ಲಿ ತೀರ್ಪುಗಾರಳಾಗಿ ಅಂಕ ಕೊಡೋದು ಸ್ವಲ್ಪ ಗೊಂದಲ. ಏಕೆಂದರೆ ಇಲ್ಲಿ ಎಲ್ಲರೂ ಪ್ರತಿಭಾನ್ವಿತರೆ! ಎಲ್ಲಾ ಭಾಷೆ ಮಾತನಾಡುವ ಮಕ್ಕಳು ಇದ್ದರೂ ಕೆಲವರ ಕನ್ನಡ ಉಚ್ಚಾರಣೆ ಆಶ್ಚರ್ಯಪಡುವಂತಿತ್ತು. ಎಲ್ಲಾ ಮಕ್ಕಳ ಮುಖದಲ್ಲೂ ತಾನು ಬಹುಮಾನ ತೆಗೆದುಕೊಳ್ಳಬೇಕೆಂಬ ಹುಮ್ಮಸ್ಸು. ಆ ಕಣ್ಣುಗಳಲ್ಲಿ ಎದ್ದು ಕಾಣುವ ಆತಂಕ,ಹೆದರಿಕೆ ಒಮ್ಮೊಮ್ಮೆ ಪಾಪ ಅನಿಸಿಬಿಡ್ತಾ ಇತ್ತು. ಒಬ್ಬ ಚಿಕ್ಕ ಹುಡುಗ ಪಟಪಟನೆ ಹೇಳುತ್ತಾ ಕವನಕ್ಕೆ ತಕ್ಕಂತೆ ಅಭಿನಯ ವಾವ್! ಅನಿಸದೇ ಇರಲಿಲ್ಲ. ಇನ್ನೊಬ್ಬಳು ನಾಲ್ಕು ಸಾಲು ಹೇಳಿ ತಡವರಿಸಿದಾಗ “ಮತ್ತೆ ಮೊದಲಿಂದ ಹೇಳಮ್ಮಾ” ಅಂದಾಗ ಅವಳು “ನಮಸ್ಕಾರ………” ಹೀಗೆ ಶುರುಮಾಡಿದಾಗ ನಗು ಬಂತು. ಕಂಠಪಾಠ ಪಾಪ ಇಲ್ಲಿಂದಲೇ ಮಾಡಿದ್ದಾಳೆ. ಪೂರ್ತಿ ಸರಾಗವಾಗಿ ಹೇಳಿ ಮುಗಿಸಿದ್ದು ಮಕ್ಕಳಲ್ಲಿ ಅಂಜಿಕೆ ಎಲ್ಲವನ್ನೂ ಮರೆಸುತ್ತದೆ ಎಂಬುದು ಸುಳ್ಳಲ್ಲ.

ತದ ನಂತರ ಒಂಬತ್ತು ಮತ್ತು ಹತ್ತನೇ ತರಗತಿಯ ಮಕ್ಕಳಿಂದ ಚರ್ಚಾ ಸ್ಪರ್ಧೆ. ಇಲ್ಲೂ ಅಷ್ಟೆ. ಸುಲಲಿತವಾಗಿ ತಮ್ಮ ಅನಿಸಿಕೆಗಳನ್ನು ಮಂಡನೆ ಮಾಡಿ ಆಯ್ಕೆ ಪ್ರಕ್ರಿಯೆಗೆ ಸವಾಲೆಸೆದರು. ಎರಡೂ ಸ್ಪರ್ಧೆ ಸೇರಿ ಒಟ್ಟೂ 44 ಮಕ್ಕಳು ಭಾಗವಹಿಸಿದ್ದು ನಾವುಗಳು ನೀಡಿದ ಒಟ್ಟಾರೆ ಅಂಕಗಳನ್ನು ಕೂಡಸಿ ಆಯಾ ಗುಂಪಿಗೆ ಒಬ್ಬರಂತೆ ಮೂರು ಬಹುಮಾನಗಳು ಹಾಗೂ ಒಂದು ಸಮಾಧಾನಕ ಬಹುಮಾನಕ್ಕೆ ಆಯ್ಕೆ ಮಾಡಿದರು.

ಮಕ್ಕಳ ಪ್ರತಿಭೆಯ ಕುರಿತು ನಮ್ಮನ್ನು ಮಾತನಾಡಲು ಆಹ್ವಾನಿಸಿದಾಗ ಆಗಲೇ ತೀರ್ಮಾನಿಸಿದ್ದೆ; ಇವರಿಗೆಲ್ಲಾ ಇವತ್ತು ಒಂದು ಕಥೆ ಹೇಳಿಬಿಡೋಣ. ಮಕ್ಕಳನ್ನು ಖುಷಿ ಪಡಿಸೋದು ಮುಖ್ಯ ಅಲ್ವಾ? ಮಕ್ಕಳನ್ನು ಕೇಳಿದರೆ ಅವರ ಆಯ್ಕೆಯೂ ಕಥೆನೇ ಆಗಿತ್ತು. ನಾನೇ ಬರೆದ ಮಕ್ಕಳ ಕಥೆಯೊಂದನ್ನು ಹೇಳಿದಾಗ ಮಕ್ಕಳ ಮುಖದಲ್ಲಿ ಕಂಡ ಸಂತೋಷ ಕರತಾಡನ ವರ್ಣನಾತೀತ. ನನ್ನ ಮನಸ್ಸು ಹಿಂದೆ ಹಿಂದೆ ಎಲ್ಲೋ ಕಳೆದುಹೋಯಿತು. ಬಾಲ್ಯ ಮರುಕಳಿಸಿತು. ನಿಜಕ್ಕೂ ಈ ಮಕ್ಕಳ ಜೊತೆ ಕಳೆಯೊ ಸಮಯ ಇದೆಯಲ್ವಾ ನಮ್ಮನ್ನೇ ನಾವು ಮರೆಯುವಂತಾಗುತ್ತದೆ.

ಕೊನೆಯಲ್ಲಿ ಪ್ರಿನ್ಸಿಪಾಲರಿಂದ ಕಾರ್ಯಕ್ರಮ ಕುರಿತಾಗಿ ಒಂದೆರಡು ಮಾತು ನಮ್ಮಿಂದ ಆಯ್ಕೆಯಾದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಮಕ್ಕಳಿಂದಲೇ ವಂದನಾರ್ಪಣೆ ಮತ್ತು ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಹೊರಗೆ ಬರುವಾಗ ಮಕ್ಕಳು ಕಥೆ ಚೆನ್ನಾಗಿತ್ತು ಮೇಡಂ. ಮತ್ತೆ ಬನ್ನಿ ಎನ್ನುತ್ತ ಸುತ್ತುವರಿದಾಗ ಅವರನ್ನೆಲ್ಲ ಆಲಿಂಗಿಸಿ ಪ್ರೀತಿಯಿಂದ ಮೈದಡವಿ ಬಂದೆ.

ಅತ್ಯಂತ ಚಂದವಾಗಿ ಕಾರ್ಯಕ್ರಮ ನಿಯೋಜಿಸಿದ್ದು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮನಸ್ಸಿಗೆ ಬಹಳ ಸಂತೋಷ ನೀಡಿತು. ಕನ್ನಡ ಕಲಿಸಲೇ ಹಿಂದೇಟು ಹಾಕುವ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಕನ್ನಡಕ್ಕೆ ಇಷ್ಟು ಗೌರವ ಸಿಗುತ್ತಿರುವುದು ನಿಜಕ್ಕೂ ಆಶ್ಚರ್ಯ ಮತ್ತು ವಿಸ್ಮಯ. ಹಿರಿಯ ವಚನಕಾರರು ಕವಿಗಳನ್ನು ಮಕ್ಕಳು ಗುರುತಿಸುವಂತೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಶಾಲೆ ಇನ್ನೂ ಅಭಿವೃದ್ಧಿ ಪಥದತ್ತ ಸಾಗಿ ಇನ್ನೂ ಹೆಚ್ಚಿನ ಮಕ್ಕಳಿಗೆ ಭವಿಷ್ಯ ರೂಪಿಸಿಕೊಡುವಂತಾಗಲಿ ಎಂಬುದು ನನ್ನ ಆಶಯ ಹಾರೈಕೆ.🌷

26-11-2019. 8.52pm

ಬೆಳಕು ಸಾಹಿತ್ಯ ಸಂಸ್ಥೆಯ ಕಾರ್ಯಕ್ರಮ

ದಿನಾಂಕ 13-10-2019ರಂದು ಬೆಂಗಳೂರಿನ ಗುಪ್ತಾ ಕಾಲೇಜಿನ ಆವರಣದಲ್ಲಿ ಬೆಳಕು ಸಾಹಿತ್ಯ ಸಂಸ್ಥೆಯವರು ಬಹಳ ಅದ್ಧೂರಿಯಾಗಿ ಸಾಹಿತ್ಯ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಸುಮಾರು ಆರುನೂರಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಶ್ರೀಮತಿ ರಜನಿ ಅಶೋಕ್ ಜೀರಗ್ಯಾಳ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಅನೇಕ ಗಣ್ಯರಿಂದ ಮಾತು, ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಸಮಾರಂಭ, ಚರ್ಚೆ ಹಾಗೂ ಸುಮಾರು 210 ಕವಿಗಳಿಂದ ಕವಿಗೋಷ್ಠಿ ಕೂಡಾ ಏರ್ಪಡಿಸಿದ್ದರು.

ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಣ್ಣಪ್ಪ ಮೇಟಿಗೌಡ ಎಂದಿನಂತೆ ತಮ್ಮ ಚಿನಕುರುಳಿ ಮಾತಿನಲ್ಲಿ ಸಂಸ್ಥೆ ಇದುವರೆಗೂ ಮಾಡಿದ ಸಾಧನೆ, ಸಾಹಿತ್ಯ ಕ್ಷೇತ್ರದಲ್ಲಿ ಕವಿಗಳನ್ನು ಗುರುತಿಸುವಿಕೆ ಇತ್ಯಾದಿ ಸವಿಸ್ತಾರವಾಗಿ ವಿವರಿಸುತ್ತ ನೆರೆದಿದ್ದ ಕವಿ ಮನಗಳಿಗೆ ಶುಭ ಹಾರೈಸಿದರು.

ಸಂಜೆ ನಾಲ್ಕು ಗಂಟೆಗೆ ಮೂರು ವೇದಿಕೆಗಳಲ್ಲಿ ಕವಿಗೋಷ್ಠಿ ಪ್ರಾರಂಭಗೊಂಡಿತು. ಮಾಸ್ಟರ್ ಹಿರಣಯ್ಯ ವೇದಿಕೆಯಲ್ಲಿ ಅಧ್ಯಕ್ಷತೆ ಶ್ರೀ ಎಸ್.ಡಿ.ದೊಡ್ಡ ಚಿಕ್ಕಣ್ಣನವರ್ ಹಾಗೂ ಆಶಯ ನುಡಿ ಶ್ರೀಮತಿ ವಿಭಾ ಪುರೋಹಿತ್ ವಹಿಸಿದ್ದರು.

ಈ ವೇದಿಕೆಯಲ್ಲಿ ನನಗೂ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದು ವಿಶೇಷ. ಸಾಹಿತ್ಯದ ಕುರಿತು ನನ್ನ ಅನಿಸಿಕೆಗಳನ್ನು ಇಲ್ಲಿ ಎಲ್ಲರೆದುರು ಹಂಚಿಕೊಂಡೆ. ಈಗೆರಡು ವರ್ಷಗಳ ಹಿಂದೆ ಇದೇ ಸಂಸ್ಥೆಯವರು ಏರ್ಪಡಿಸಿದ್ದ ಕವಿ ಗೋಷ್ಠಿಯಲ್ಲಿ ನಾನೂ ಭಾಗಿಯಾಗಿದ್ದೆ. ಆದರೆ ಇಂದು ನನ್ನ ಸಾಹಿತ್ಯವನ್ನು ಗುರುತಿಸಿ ವೇದಿಕೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದು ನನ್ನ ಬರಹದ ಕುರಿತು ಬಹಳ ಹೆಮ್ಮೆ ನನಗೆ. ಸಂಸ್ಥೆಗೆ ಚಿರಋಣಿ🙏

ಈ ಕವಿಗೋಷ್ಠಿಯಲ್ಲಿ ಸುಮಾರು ನಲವತ್ತು ಕವಿಗಳು ಭಾಗವಹಿಸಿ ತಮ್ಮ ತಮ್ಮ ಕವನವನ್ನು ವಾಚಿಸಿದರು. ಆಶಯ ನುಡಿ, ಅಧ್ಯಕ್ಷರ ಭಾಷಣ ಎಲ್ಲರಿಗೂ ಗೌರವ ಸಮರ್ಪಣೆಯೊಂದಿಗೆ ಕವಿಗೋಷ್ಠಿ ಮುಗಿದಾಗ ಕತ್ತಲೆಯಾಗಿತ್ತು.

ಬೆಳಗಿಂದ ಸಂಜೆಯವರೆಗೂ ಸಮಾನ ಮನಸ್ಕರೊಂದಿಗೆ ಬೆರೆತು ಕಳೆದ ಈ ದಿನ ನೆನಪಿನಲ್ಲಿಡುವಂತಹುದು!
ಹಾಗೆ ಕವನ ವಾಚನ ಕೇಳುತ್ತ ವೇದಿಕೆಯ ಮೇಲೇ ನನ್ನ ಅನಿಸಿಕೆ ಗೀಚಿದೆ.

# ಅನಿಸಿಕೆ #

ಕುಳಿತಿರುವ ನೀವೆಲ್ಲರೂ
ನನ್ನ ಭಾವನೆಗಳ ಮೇಲ್ಪಂಕ್ತಿ
ಕಟ್ಟಿ ಕೊಟ್ಟಿರಿ ನೀವು
ಮಾತಿನಾ ಪಂಕ್ತಿ
ಏನ ಹೇಳಲಿ ನಿಮ್ಮೆಲ್ಲರ
ಕವನ ಕೇಳಿ?
ವಿಷಯ ಹಲವಾರು
ಕವಿ ಮನಗಳ ತವರೂರು
ಹೀಗೆಯೇ ಇರಲಿ
ನಿಮ್ಮೆಲ್ಲರ ಉತ್ಸಾಹ
ಬರೆದು ಭಾಗವಹಿಸಿ
ಮತ್ತೊಂದು ಕವಿಗೋಷ್ಠಿಯಲ್ಲಿ!

13-10-2019 5.32pm

15-10-2019. 9.18pm