ಒಂದು, ಎರಡು, ಮೂರು, ನಾಲ್ಕು ಆಮೇಲೆ ಏನು? ಐದಲ್ವಾ?

ಬರೆಯುತ್ತ ಬರೆಯುತ್ತ ಬರಹಗಳನ್ನು ಈ ನನ್ನ ಬ್ಲಾಗಲ್ಲಿ ದಾಖಲಿಸುತ್ತ ಇವತ್ತಿಗೆ ಐದು ವರ್ಷಗಳನ್ನು ಪೂರೈಸಿದ್ದು ನಿಜಕ್ಕೂ ನನಗೆ ಖುಷಿಯಾಗುತ್ತಿದೆ. ಜೊತೆಗೆ ಚೆಂದದ ಹಾಡೂ ನೆನಪಾಗಿ ಗುನುಗುನಿಸುವಂತಾಯಿತು.

2016 ಜನವರಿ 31ರಲ್ಲಿ ಶುರುವಾದ ದಾಖಲಾತಿ ಪಯಣ ಇದುವರೆಗೆ ಎಷ್ಟೆಂಬುದು ಲೆಕ್ಕ ಇಟ್ಟಿಲ್ಲ. ಬಹುಶಃ ಲೆಕ್ಕ ಇಟ್ಟಿದ್ದರೆ ನನಗೆ ಅಹಂಕಾರ ಬರುತ್ತಿತ್ತೊ ಏನೊ. ಕಾರಣ ಇಷ್ಟೇ…..ನನಗೆ ಅನಿಸಿದ್ದು ಬರೆಯುತ್ತೇನೆ. ಹಾಗೆ ಇಲ್ಲಿ ಪೋಸ್ಟ್ ಮಾಡುವಾಗ ಓದುಗರಲ್ಲಿ ಕೆಲವರಿಗಾದರೂ ನನ್ನ ಬರಹಗಳು ಇಷ್ಟವಾಗಬಹುದೆಂಬ ಅನಿಸಿಕೆ. ಕಥೆ, ಕವನ, ಹನಿಗವನ, ಲೇಖನ, ಚುಟುಕುಗಳು, ಪ್ರವಾಸಿ ಕಥನ, ಇತ್ಯಾದಿ ಬರೆಯುವಾಗ ಇರುವ ಉಮೇದಿ ಶಾಂತವಾಗುವುದು ಇಲ್ಲಿ ಪೋಸ್ಟ್ ಮಾಡಿದಾಗ ಮಾತ್ರ. ಮನಸ್ಸಿಗೆ ಒಂದು ರೀತಿ ಸಮಾಧಾನ.

ಆದರೆ ಬರೆಯುವ ಕೆಲವು ಬರಹಗಳು ಆಯಾಯಾ ಸಂದರ್ಭದಕ್ಕೆ ತಕ್ಕಂತೆ ಬರೆಯುವಾಗ ನಾನಂತೂ ಒಂದಿನಿತೂ ಅಂಜುವುದಿಲ್ಲ,ಅಳುಕುವುದಿಲ್ಲ. ಉದಾ: ಚಳಿ, ಮಳೆ,ಕೊರೋನಾ, ಪ್ರೇಮ, ಪ್ರೀತಿ,ವಿರಹ ಇತ್ಯಾದಿ ಬರೆಯುವಾಗ ನನ್ನಿರುವು ವಯಸ್ಸು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಬರೆದು ಪೋಸ್ಟ್ ಮಾಡಿಬಿಡುತ್ತೇನೆ. ಕೆಲವು Facebookನಲ್ಲಿ ಹಾಕಿದಾಗ ಬರುವ ಕಮೆಂಟುಗಳನ್ನು ಓದಿ ನಕ್ಕು ಸುಮ್ಮನಾಗುತ್ತೇನೆ. ಓದುಗ ನಿಜವೆಂಬಂತೆ ಪರಿಗಣಿಸುವಾಗ ನಾನು ಬರೆದಿದ್ದು ಸಾರ್ಥಕವಾಯಿತೆಂದು ಸಮಾಧಾನಪಟ್ಟುಕೊಳ್ಳುತ್ತೇನೆ.

ಕಾಲ್ಪನಿಕ ಬರಹಗಳು ಕವಿಯ ಸೊತ್ತಾದಷ್ಟೂ ಓದುಗ ಭ್ರಮೆಗೊಳಗಾಗುವುದು ನಿಶ್ಚಿತ. ಬರೆಯುವಾಗ ಅಷ್ಟು ಪರಕಾಯ ಪ್ರವೇಶ ಕವಿಯಾದವನಿಗಿರಬೇಕು. ಹೊಗಳಿಕೆಯಲ್ಲ ನನ್ನ ಅನಿಸಿಕೆ ; ಇಲ್ಲದ್ದನ್ನು ಇದೆಯೆಂಬಂತೆ ಬಿಂಬಿಸುವುದು ಅದು ಹೇಗೆ ರೂಢಿಸಿಕೊಂಡೆನೊ ಗೊತ್ತಿಲ್ಲ. ಒಟ್ಟಿನಲ್ಲಿ ಇಂತಹ ಅನುಭವಗಳು ಕಥೆ, ಕವನಗಳನ್ನು ಬರೆಯುವಾಗ ದಕ್ಕುತ್ತಿದೆ.

ಇದುವರೆಗೆ ಈ ತಾಣಕ್ಕೆ ಭೇಟಿ ಕೊಟ್ಟವರ ಸಂಖ್ಯೆ ಎಂಬತ್ಮೂರು ಸಾವಿರ ದಾಟಿದೆ. ಈಗಾಗಲೇ ನನ್ನ ಬ್ಲಾಗ್ ” ಕನ್ನಡ ಬ್ಲಾಗ್ ಲೀಸ್ಟ” ಗೆ ಸೇರ್ಪಡೆಯಾಗಿದ್ದು ಈ ವರ್ಷ ” ಕನ್ನಡಿಗರ ತಾಣ” ( Kannadigara blog list) ದಲ್ಲೂ ಸೇರ್ಪಡೆಯಾಗಿದೆ. ಎಲ್ಲವೂ ಗೂಗಲ್ ಮಹಿಮೆ. ಓದುಗರ ಕೃಪೆ. ಅಂದುಕೊಂಡಿರಲಿಲ್ಲ, ಆದರೂ ಇದು ಸತ್ಯ, ಎಲ್ಲವೂ ದೇವರ ಚಿತ್ತ. ಆಶಿರ್ವಾದ ಅಂದುಕೊಂಡು ಮುಂದುವರೆಯುತ್ತಿದ್ದೇನೆ.

2020 ಕೊರೋನಾ ವರ್ಷ. ನೋವಿನ ವರ್ಷ. ಆತಂಕದ ವರ್ಷ. ಈಗ ನಿಧಾನವಾಗಿ ಜನ ಮೊದಲಿನ ಜೀವನಕ್ಕೆ ಮರಳುತ್ತಿದ್ದರೂ ಕಳಕೊಂಡಿದ್ದು, ನಷ್ಟ ಹೊಂದಿದ್ದು ಮತ್ತೆ ಪಡೆಯುವುದು ದುಸ್ತರ, ಕಷ್ಟವಿದೆ. ಹಾಗೆಯೆ ಈ ಬರಹದ ಹಾದಿ ಕೂಡಾ ಏರುಪೇರು. ಮೊದಲಿನಂತೆ ತೀವ್ರತೆ ಇಲ್ಲ. ಉತ್ಸಾಹ ದಿನದಿನಕ್ಕೂ ಕಡಿಮೆಯಾಗುತ್ತಿದೆ. ಬರೆದೇನು ಮಾಡಲಿ ಎಂಬ ಪ್ರಶ್ನೆ ಒಮ್ಮೊಮ್ಮೆ ಕಾಡಿದಾಗ ಬದಿಗಿಟ್ಟ ಪ್ರಸಂಗವೂ ಇದೆ. ಆದರೆ ಬರೆಯುವಾಗಿನ ನೆಮ್ಮದಿ ಇನ್ನೆಲ್ಲೂ ಸಿಗಲು ಸಾಧ್ಯವಿಲ್ಲ.

ಈ ವರ್ಷ ಪೂರ್ತಿ ಕಾಡಿದ್ದು ಹೆಚ್ಚು “ಚುಟುಕುಗಳು.” ಸರಿಯಾಗಿ ಗಜಲ್ ಬರೆಯುವುದರಲ್ಲಿ ಸೋತೆ. ವರ್ಷ ಪೂರ್ತಿ ಮಾಡಿದ್ದು ಅಂದರೆ ಹೊರಹೋಗಲಾಗದ ಕೊರೋನಾ ಪರಿಸ್ಥಿತಿಯಲ್ಲಿ ನೂರಾರು ಹಳೆಯ ಹೊಸ ಸಿನೇಮಾ ನೋಡುತ್ತ ಸಮಯ ಕಳೆದಿದ್ದು ಅಷ್ಟೇ. ಮೊದಲಿನ ಹುಚ್ಚು ಮತ್ತೆ ಮರುಕಳಿಸಿತ್ತು.

ಇದರ ಮದ್ಯೆ ಪ್ರಕಾಶಕರ ಪ್ರೋತ್ಸಾಹ ಸಿಕ್ಕಿದ್ದು ನನ್ನ ಬರಹಗಳು ನೆಲೆ ಸಿಗುವತ್ತ ದಾಪುಗಾಲು ಹಾಕುತ್ತಿವೆ. ಜೊತೆಗೆ ದುಡ್ಡು ಕಾಸಿಲ್ಲದೇ ಕರೆಕ್ಷನ್ ಮಾಡಿಕೊಡುವವರ ಸಹಕಾರ ಸಿಕ್ಕಿದ್ದು ನನ್ನ ಬರಹಗಳ ಅದೃಷ್ಟ. ಇದು ಅತ್ಯಂತ ಸಮಾಧಾನಕರ ಸಂಗತಿ. ಆದರೆ ಅವುಗಳನ್ನು ಪ್ರಿಂಟ್ ತೆಗೆಸಿ,ಕರೆಕ್ಷನ್ ಆಗಿದ್ದು ಮತ್ತೆಲ್ಲಾ ಸರಿಪಡಿಸಿ, ಬಂದ ಪ್ರೂಫ್ ಕಾಪಿ ಮತ್ತೊಮ್ಮೆ ಓದಿ, ಮುನ್ನುಡಿ ಬೆನ್ನುಡಿ,ನನ್ನುಡಿ ಇಷ್ಟೆಲ್ಲಾ ಮಾಡುವಷ್ಟರಲ್ಲಿ ಯಾಕಪ್ಪಾ ಬೇಕಿತ್ತು ಇದರ ಸಹವಾಸ ಅಂತ ಅನಿಸುತ್ತಿರೋದು ಸುಳ್ಳಲ್ಲ. ಇದರ ತಯಾರಿಯಲ್ಲಿ ತೊಡಗಿಸಿಕೊಂಡು ಬರೆಯುವುದನ್ನು ನಿಲ್ಲಿಸುವ ಮನಸ್ಥಿತಿಗೆ ಬಂದರೂ ತೀವ್ರ ಕಾಡಿದಾಗ ಬರೆಯದಿರಲಾಗದು.
ಹೊತ್ತಿಲ್ಲ ಗೊತ್ತಿಲ್ಲ ಗೀಚುವುದಕ್ಕೆ ಅಂತಾಗಿದೆ.

ಹಾಗೆ ಈ ಬ್ಲಾಗ್ ಬರಹಗಳನ್ನು ಸರಿಪಡಿಸುವತ್ತ, follwers ಬರಹಗಳನ್ನು ಓದುವುದರತ್ತ ಹಾಗೂ ಒಂದಿಷ್ಟು ಪುಸ್ತಕಗಳನ್ನು ಓದುವುದರಲ್ಲಿ ನನ್ನನ್ನು ತೊಡಗಿಸಿಕೊಳ್ಳಬೇಕಾಗಿದೆ. ಆಗೆಲ್ಲ ಅನಿಸುವುದು “ದೇವರೆ ಈಗ ಕೊಟ್ಟಿರುವ ಆಯುಷ್ಯಕ್ಕಿಂತ ಹೆಚ್ಚು ಆಯುಷ್ಯ ಕೊಡು” ಅಂತ ಪ್ರಾರ್ಥಿಸುತ್ತೇನೆ. ಇತ್ತೀಚೆಗೆ ಕೇಂದ್ರ ಗ್ರಂಥಾಲಯ, ಬೆಂಗಳೂರು ಇಲ್ಲಿಗೆ ಹೋದಾಗ ಆ ಪುಸ್ತದ ರಾಶಿ ಕಂಡು ನನ್ನ ಆಯುಷ್ಯ ಮುಗಿತಾ ಬಂತಲ್ಲಾ, ಇನ್ನೆಲ್ಲಿ? ಸಂಕಟದಿಂದ ನಿಟ್ಟುಸಿರು ಬಿಟ್ಟೆ.

ಅಂತೂ ಈ ವರ್ಷದ ಸಾಧನೆ ಶೂನ್ಯವೆಂದೇ ಹೇಳಬಹುದು. ಕರ್ಮವೀರದಲ್ಲಿ ಕವನಕ್ಕೆ ಪ್ರಶಸ್ತಿ, ಸುಧೀರ್ಘ ವಾರಣಾಸಿ ಪ್ರವಾಸಿ ಕಥನ ಪೂರ್ತಿಗೊಳಿಸಿದ್ದು, ಅವಧಿ, ಪಂಜು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿದ್ದು ಬಿಟ್ಟರೆ ವರ್ಷ ಪೂರ್ತಿ ಮನೆಯಲ್ಲಿ ಬಂಧಿ. ಇದರ ಲಾಭ ಅಂದರೆ 2020ರ ಪೂರ್ತಿ ವರ್ಷ ಆಸ್ಪತ್ರೆ ಮೆಟ್ಟಿಲು ತುಳಿಯದೆ ಆಗಾಗ ಟೀ, ಕಷಾಯ ಕುಡಿದುಕೊಂಡು ಆರೋಗ್ಯದಿಂದ ಇದ್ದದ್ದು.

ಹಾಗೆ ಇದುವರೆಗೂ ನನ್ನ ಬರಹಗಳನ್ನು ಪ್ರಕಟಿಸಲು WordPressನವರು ಎಷ್ಟೊಂದು ಅನುಕೂಲ ಮಾಡಿಕೊಟ್ಟಿದ್ದಾರೆ. ಬಳಗಕ್ಕೆ ನಾನು ಸದಾ ಚಿರಋಣಿ. ಹಾಗೆ ಓದುಗರೆಲ್ಲರಿಗೂ ಧನ್ಯವಾದಗಳು.

5TH YEAR HAPPY ANNIVERSARY “SANDHYADEEPA” . THANK YOU💜🌷🌷

31-1-2021. 12.45am

ಅವಧಿಯಿಂದ ಮೇಲ್

ಈ ದಿನ ಅವಧಿಯವರಿಂದ ನನ್ನ ಬರವಣಿಗೆ ಕುರಿತು ಹೊಗಳಿಕೆ. ಆಹಾ! ಅದೆಷ್ಟು ಖುಷಿ.
“ನಿಮ್ಮ ಶೈಲಿ ಚೆನ್ನಾಗಿದೆ. ಹವ್ಯಕ ಭಾಷೆಯಲ್ಲಿ ಕವನ ಬರೆದರೆ ಹೆಚ್ಚಿನ ಛಾಪು ಮೂಡುತ್ತದೆ. ನಿಮ್ಮ ಫೇಸ್ ಬುಕ್ ನಂಬರ ಕಳಿಸಿ. ಒಂದಷ್ಟು ಫೋಟೊ ಕಳಿಸಿ.”

ಒಬ್ಬ ಬರಹಗಾರನಿಗೆ ಇನ್ನೇನು ಬೇಕು. ನನ್ನ ಬರಹ ಹೇಗಿದೆ, ಜನ ಓದಬಹುದಾ? ಬರೆಯಲು ಯೋಗ್ಯಳಾ? ಏನಾದರೂ ತಪ್ಪು ಬರೆದೆನಾ? ಹೀಗೆ ಹಲವಾರು ಆತಂಕ. ಏಕೆಂದರೆ ಈ ಕ್ಷೇತ್ರಕ್ಕೆ ನಾನು ಹೊಸಬಳು. ನಾನು ಬರೆದಿದ್ದು ಯಾರೂ ಪರಿಶೀಲನೆ ಮಾಡುವವರೂ ಇಲ್ಲ. ಏನೊ ಧೈರ್ಯವಾಗಿ ಹೆಜ್ಜೆ ಇಡುತ್ತಿದ್ದೇನೆ.

ಆ ದೇವರ ಆಶೀರ್ವಾದ, ಓದುಗರ ಪ್ರೋತ್ಸಾಹ, ಆ ಕಾಣದ ಕೈ ಮುನ್ನಡೆಸುತ್ತಿದೆ.

ಇದೇ ಉತ್ಸಾಹದಲ್ಲಿ “ಹವ್ಯಕ ಸತ್ಕಾರ” ಅಂತ ಕವನ ಬರೆದೆ. ಅವಧಿ accept ಮಾಡಿದೆ.
THANKS GOD
Thank you AVADHI.
21-4-2016 10.56pm