ನನ್ನರಸಿ (ಗಝಲ್ ರೂಪದಲ್ಲಿ ಬರೆಯುವ ಪ್ರಯತ್ನ)

ಹೇಗೆ ಬಣ್ಣಿಸಲವಳ ಉತ್ತುಂಗದ ಸೊಬಗ ಹುಡುಕಾಡಿದೆ ತಡಕಾಡಿದೆ ಶಬ್ದಕೋಶಗಳಲ್ಲಿ
ಸಿಗದೆನಗೆ ಅವಳ ವರ್ಣಿಸತಕ್ಕ ಮಣಿಗಳು ನನ್ನಂತೆ ಪದಗಳು ಸೋತಿವೆ ಅವಳ ಕಾಲಡಿಯಲ್ಲಿ .

ಮೊಗ್ಗು ಮಲ್ಲಿಗೆ ಜಾಜಿ ಸೇವಂತಿ ಎಸಳವಳು ಹೊನ್ನ ಜೊಲ್ಲನು ಸುರಿಸುತಿಹಳಿಲ್ಲಿ
ಬೆಂಬಿಡದೆ ಕಾಡಿ ಬಿಗಿದಪ್ಪುಗೆಯಲಿ ಮೀಯಿಸಿ ಹುಚ್ಚೆಬ್ಬಿಸುತಿಹಳು ಎನ್ನ ಮನದಲ್ಲಿ.

ಮಟ ಮಟ ಮಧ್ಯಾಹ್ನದುರಿಬಿಸಿಲು ತಂಪಾಗಿ ಶಿಖರವೇರಿದ ತಂಪು ಹೆಪ್ಪಾಗಿಹುದಿಲ್ಲಿ
ಬಿಟ್ಟ ಕಣ್ಣಲಿ ಮಿಂಚಿನಾ ತುಂಟ ನಗು ತುಂಬಿಹುದು ಕಿಚ್ಚೆಬ್ಬಿಸುತಿಹಳು ಎನ್ನೆದೆಯ ಬಿಂಬದಲ್ಲಿ.

ಸಂಜೆಗೆಂಪಿನ ಸೂರ್ಯ ತಾ ನಾಚಿ ಓಡುವನು ನನ್ನರಗಿಣಿಯ ಅಂದ ಅಷ್ಟೊಂದು ಸೊಗಸಿಲ್ಲಿ
ಕಬ್ಬು ಜಲ್ಲೆಯ ಮೀಟಿ ರಸಪಾನಳವಳದರ ಕೆಂಪು ಸಿಂಧೂರ ನೊಸಲ ಬಾಗಿನದಲ್ಲಿ.

ಬಳುಕು ಕುಲುಕಿನ ನಡಿಗೆ ವೈಯ್ಯಾರಿಯವಳು ನಗುವುಕ್ಕಿ ಸೆಳೆಯುವಳು ಕಣ್ಣ ಕುಡಿಯಲ್ಲಿ
ಕನವರಿಕೆಯ ಅಮಲು ಕೀಲು ಗೊಂಬೆಯ ತೆರದಿ ನಾನಾದೆನವಳ ಕೈಗೊಂಬೆ ಸಂಭ್ರಮದ ಸುಃಖದಲ್ಲಿ.

ಮನಸು ಹಾಡುತಿದೆ ಸದಾ ಸಖಿ ಗೀತ ಬಿಟ್ಟಿರಲಾಗದ ಪದ ಗುಚ್ಛ ನಖಶಿಕಾಂತದಲ್ಲಿ
ಬಾರೆ ಬಾರೆ ನನ್ನರಸಿ ಬದುಕಿನುದ್ದಕು ನೀನು ಕಾಪಿಡುವೆ ಅನವರತ ಕಣ್ಣ ರೆಪ್ಪೆಯಲ್ಲಿ.

ನೀನಿರಲು ನನ್ನೊಡನೆ ಪ್ರತಿ ಗಳಿಗೆ ಹೊಸತು ಬೆರೆತು ನಾವಿರುವ ನವೋಲ್ಲಾಸದಲ್ಲಿ
ನವೋಲ್ಲಾಸಕೆ ಸಾಕ್ಷಿ ನಿನ್ನ ಕಾಲಂದುಗೆಯ ನಾದ ನಾದದ ಉನ್ಮಾದಕೆ ನಾ ಕಳೆದು ಹೋಗುವೆ ನಿನ್ನಲ್ಲಿ.

ಬದುಕೆಂದರೆ ಇಷ್ಟೆನೇ ಎಂದನಿಸದು ಎಂದೆಂದೂ ಎಂದೆನಿಸಲು ಅದಾವ ಅವಕಾಶ ನಾ ಕೊಡಲಾರೆ ನಿನಗಿಲ್ಲಿ
ನಿನಗೆ ನಾನು ನನಗೆ ನೀನು ಈ ಜಗವೆಲ್ಲ ಸುಂದರ ಆ ಗಳಿಗೆ ಆಗುವುದು ನೀನಡಿಯಲು ಮಾತ್ರ ನನ್ನಲ್ಲಿ.

19-1-2018. 11.02pm

Advertisements

ನನ್ನರಸಾ (ಗಝಲ್ ರೂಪದಲ್ಲಿ ಬರೆಯುವ ಪ್ರಯತ್ನ)

ಮನದ ಮಾತು ಮೌನವಾಗಿ ನೆನಪಿನ ಸಾಂಗತ್ಯ ಬಯಸಿ
ಉದ್ವೇಗದ ಅಮಲು ಕಣ್ಣ ತುಂಬಿ ಜಿನುಗುತಿದೆ ಇಂದೇಕೊ
ಹೆಬ್ಬಯಕೆಯಲಿ ನಿನ್ನನೇ ಕಾಣುವ ಹಂಬಲವದೇಕೆ?

ಹೃದಯ ಬಡಿತದ ಸದ್ದು ಮೆಲ್ಲಗೆ ಮೈ ಬಿಸಿಯೇರುತಿದೆ
ಕಾತರದ ನಿರೀಕ್ಷೆ ಮನಕೆ ಮತ್ತದೆ ಕನವರಿಕೆ ಆವರಿಸಿ
ಕೇಳುತಿದೆ ಮತ್ತೊಮ್ಮೆ ಮಗದೊಮ್ಮೆ ಸಿಗಲಾರದೇಕೆ?

ಕವಲೊಡೆದ ಮಂಜಿನ ದಾರಿ ಸಾಗಿದೆ ಬಲು ದೂರ ದೂರ
ಹಿಂತಿರುಗಿ ಬರಲಾಗದಷ್ಟು ಹತಾಷೆಯ ಪತಾಕೆಯ ಕುಣಿತ
ಒಮ್ಮೆ ಅದನು ತಡೆದು ನಿಲ್ಲಿಸಲು ನೀನೇ ಬರಬಾರದೇಕೆ?

ತಲ್ಲಣದ ತುಡಿತ ಹದ ಮೀರಿ ನಶಿಸಿ ಹೋಗುವ ಮೊದಲು
ಸಾಂಗತ್ಯದ ಸಾಂತ್ವನ ಮೊಗಮ್ಮಾಗಿ ಹೀರಿ ಕಾಪಿಡುವ ನೆನಪ
ಜೀವನದುಸಿರಾಗಿ ಮತ್ತಲ್ಲಿ ತೇಲಾಡುತ ಕಾಲ ಕಳೆಯಬಾರದೇಕೆ?

ಅಂಜಿಕೆಯ ಉಸಿರು ಬಸಿರಾಗಿ ಕರು ಚಿವುಟಿ ಕೊನರುವ ಮೊದಲು
ಅರಿವಿನ ಗಂಧ ನೀವಿ ನಿನ್ನೆದೆಯ ತುಂಬ ಹೂವ ಹೊದಿಸಿಬಿಡುವೆ
ಇನಿಯಾ ನನಗಾಗಿ ಬದುಕುವ ಛಲ ನೀ ತೊಡಬಾರದೇಕೆ?

ಕಣ್ಣ ಕಾಡಿಗೆಯ ಕಪ್ಪು ಜೊಲ್ಲ ಸುರಿಸುತಿದೆ ಬಣ್ಣ ಕಳೆದುಕೊಂಡು
ಹೆಣದ ಮಾಯೆ ಮೇಲ್ನೋಟದ ಮುಖದ ಮೇಲಿನ ಛಾಯೆ
ಬದುಕು ಸತ್ತಂತಾಗುವ ಬದಲು ಬಂದು ಬದಲಿಸಬಾರದೇಕೆ?

ನಟ್ಟಿರುಳ ಹಗಲು ನಮ್ಮ ಮುಂದಡಿಯಿಡುತಿದೆ ಹೃದಯ ಬಾಗಿ
ನಮ್ಮೀರ್ವರ ಮಿಲನಕೆ ಭಾವ ತೋರಣ ಪತ್ರಿಕೆಯ ಆಹ್ವಾನ
ನೀನಡಿಯಿಡಲು ಸೈರಣೆಯ ಸೈಲೇಂದ್ರಿ ನಾನೇ ಆಗಿಬಿಡಬಾರದೇಕೆ?

ಸಾವು ಬದುಕಿನ ಮರ್ಮ ತಿಳಿದವರು ಯಾರಿಹರಿಲ್ಲಿ ಹೇಳಿನಿಯಾ
ಪದ ಕಮಲಕೆ ಒಮ್ಮೆ ಪುಷ್ಪವನಿತ್ತು ಕೊನೆ ಪುಟವ ಬರೆದು ಬಿಡುವೆ
ನಿನ್ನಾಗಮನದ ನಿರೀಕ್ಷೆ ಒಮ್ಮೆ ನನಸು ಮಾಡಿಬಿಡಬಾರದೇಕೆ?

“ಗಜಲ್”ಬರೆಯುವ ಮೊದಲ ಪ್ರಯತ್ನ

28-1-2018. 9.38am