ಬೇಜಾರು…!!(ಭಾಗ-6)

ನಿತ್ಯ ಜೀವನದಲ್ಲಿ ಎದುರಾಗುವ ಅನೇಕ ಘಟನೆಗಳು ಅಥವಾ ಇನ್ನಾವುದೆ ರೀತಿಯ ಕಾರಣದಿಂದಾಗಿ ಮನಸ್ಸು ಘಾಸಿಗೊಳ್ಳುವುದು ಸ್ವಾಭಾವಿಕ. ಆದರೆ ಇದು ನಡೆದು ಹೋಗಿರುತ್ತದೆ. ಇದರ ಪರಿಣಾಮ ಅನುಭವಿಸದೆ ಗತಿ ಇಲ್ಲ. ಆನಂತರದ ದಿನಗಳಲ್ಲಿ ಆಗಾಗ ಕಾಡುವ, ಮನಸ್ಸನ್ನು ಕುಟುಕುವ ಕ್ರಿಯೆಯಿಂದ ಬಿಡಿಸಿಕೊಳ್ಳುವುದಕ್ಕೆ ತುಂಬಾ ದಿನಗಳೇ ಬೇಕಾಗುತ್ತದೆ. ಎಷ್ಟು ಮರಿಬೇಕು ಅಂದರೂ ಮರೆಯೋಕೆ ಆಗುವುದಿಲ್ಲ. ಇದರಿಂದಾಗಿ ಉತ್ಸಾಹ ಕಡಿಮೆಯಾಗಿ ಯಾವುದರಲ್ಲೂ ಆಸಕ್ತಿ ಇಲ್ಲದೆ ಯಾಂತ್ರಿಕವಾಗಿ ನಿತ್ಯದ ಕೆಲಸವೇನೊ ಮಾಡುತ್ತಿರುತ್ತೇವೆ. ಆದರೆ ಈ ಕೆಲಸಗಳು ಕೆಲವೊಮ್ಮೆ ಏರುಪೇರಾಗುವುದು ಗ್ಯಾರಂಟಿ. ಏಕೆಂದರೆ ಮಾಡುವ ಕೆಲಸದ ಬಗ್ಗೆ ಆಸಕ್ತಿ ಇರುವುದಿಲ್ಲ.

“Face is the index of mind” ಅನ್ನುವಂತೆ ನಮ್ಮ ಮುಖದಲ್ಲಿ ಆ ಬೇಜಾರದ ಛಾಯೆ ನೋಡಿದವರು ಗುರುತಿಸುವಷ್ಟು ಮಟ್ಟಿಗೆ ಎದ್ದು ಕಾಣುತ್ತದೆ. ಇಡೀ ದಿನ ಕೆಲಸದ ಒತ್ತಡದಿಂದ ಬಸವಳಿದ ದೇಹ ರಾತ್ರಿ ಹಾಸಿಗೆ ಕಂಡಾಗ ನಿದ್ದೆಯೇನೊ ಬರುತ್ತದೆ. ಆದರೆ ಮದ್ಯ ರಾತ್ರಿ ಎಚ್ಚರಾಗಿ ನಿದ್ದೆಯಿಲ್ಲದೆ ಹೊರಳಾಡುವಂತಾಗುತ್ತದೆ. ಇಲ್ಲಾ ಮಲಗಿದಾಗ ಈ ಘಟನೆಗಳ ನೆನಪು ಹೊಸತರಲ್ಲಿ ಇನ್ನಷ್ಟು ತೀವ್ರವಾಗಿ ಕಾಡುವುದರಿಂದ ದೇಹ ದಣಿದರೂ ನಿದ್ದೆ ಬಾರದೆ ಸರಿ ರಾತ್ರಿಯವರೆಗೂ ಒದ್ದಾಡುವಂತಾಗುತ್ತದೆ. ಪರಿಣಾಮ ಇದರಿಂದಾಗಿ ಆರೋಗ್ಯ ಹದಗೆಡಲು ಶುರುವಾಗುತ್ತದೆ. ಮೊದಲನೆಯದಾಗಿ ತಲೆ ನೋವು ಸಣ್ಣದಾಗಿ, ಕಣ್ಣುರಿ,ಹಗಲಲ್ಲಿ ನಿದ್ದೆಯ ಮಂಪರು ಅಥವಾ ಹಗಲು ನಿದ್ದೆ ಮಾಡಿ ಎಚ್ಚರಾದ ಮೇಲೆ ಇನ್ನಷ್ಟು ತಲೆ ನೋವು ತೀವ್ರವಾಗುತ್ತದೆ. ಈ ಎಲ್ಲದಕ್ಕೂ ಕಾರಣ ಎಸಿಡಿಟಿ ಜಾಸ್ತಿ ಆಗಿರೋದು. ಇದು ಅರಿಯದೆ ನಾವು ಮಾಡುವ ಪ್ರಥಮ ಚಿಕಿತ್ಸೆ ಸ್ವಲ್ಪ ಬಿಸಿ ಚಾ ಅಥವಾ ಕಾಫಿ ಕುಡಿಯುವುದು. ಯಾವುದಾದರೂ ತಲೆ ನೋವಿನ ಮಾತ್ರೆ ನುಂಗುವುದು. ಇದು ಒಳಗೊಳಗೆ ಇನ್ನಷ್ಟು ಎಸಿಡಿಟಿ ಹೆಚ್ಚಾಗಲು ಕಾರಣವಾಗುತ್ತದೆ. ಮುಂದಿನ ಸರದಿ ಆಗಾಗ ವಾಂತಿ, ಲೂಸ್ ಮೋಷನ್. ದೇಹದಲ್ಲಿಯ ನೀರು ಕಡಿಮೆ ಆಗುತ್ತ ದೇಹ ನಿತ್ರಾಣವಾಗುತ್ತ ನಡೆಯುತ್ತದೆ. ಯಾವ ಮಾತ್ರೆಗಳು ಪರಿಣಾಮ ಬೀರದೆ ಆಸ್ಪತ್ರೆಯಲ್ಲಿ ಡ್ರಿಪ್ಸ್ ಮೂಲಕ ಇಂಜಕ್ಷನ್ ತೆಗೆದುಕೊಳ್ಳುವ ಮಟ್ಟ ತಲುಪುತ್ತದೆ. ಕೆಲವೊಮ್ಮೆ ಈ ಇಂಜಕ್ಷನ್ ದೇಹ ತಿರಸ್ಕರಿಸಲು ಶುರು ಮಾಡುತ್ತದೆ. ಡಾಕ್ಟರ್ಗೆ ಇದೊಂದು ತಲೆ ನೋವು.

ಇದು ಎಸಿಡಿಟಿಯ ಮೊದಲ ಹಂತದ ಪರಿಣಾಮ. ನಂತರ ಮುಂದಿನ ಸರದಿ ಕರುಳಿಗೆ ಸಂಬಂಧಪಟ್ಟ ಕಾಯಿಲೆ ಶುರುವಾಗುತ್ತದೆ. ತಿಂದ ಆಹಾರ ಜೀರ್ಣವಾಗದೆ ಆಗಾಗ ವಾಂತಿ. ಉಪ್ಪು ಹುಳಿ ಖಾರ ಯಾವುದೂ ತಿನ್ನಬೇಡಿ. ಬರಿ ಸಪ್ಪೆ ಸಪ್ಪೆ ತಿನ್ನಿ. ಆದರೆ ಈ ರೀತಿ ಇರಲು ಎಷ್ಟು ದಿನ ಸಾಧ್ಯ? ಲೆಪ್ರೋಸ್ಕೋಪಿ ಟೆಸ್ಟ್ ಮಾಡಬೇಕು ಅಂತಾರೆ. ಕರುಳಲ್ಲಿ ಏನಾಗಿದೆ ನೋಡಬೇಕು. ಅದೋ ರಾಮ ರಾಮಾ! ಗಂಟಲಲ್ಲಿ ಟ್ಯೂಬ್ ಇಳಿಸಿ ಮಾಡುವ ಟೆಸ್ಟ್. ಉರಿ ಕಿರಿ ಕಿರಿ ಅನುಭವಿಸಬೇಕು. ಅಲ್ಲೇನಾದರೂ ತೀವ್ರ ಪರಿಣಾಮ ಆಗಿದ್ದರೆ ಆಪರೇಷನ್ಗೆ ಮೊರೆ ಹೋಗಲೇ ಬೇಕಾಗುತ್ತದೆ. ತೀವ್ರ ನೋವು. ಆನಂತರವೂ ಆಹಾರದಲ್ಲಿ ಪತ್ಯ ಬಿಟ್ಟಿದ್ದಲ್ಲ. ದೇಹ ಕೃಷವಾಗುತ್ತದೆ. ಹಣ ಸಂಪತ್ತು ಎಷ್ಟಿದ್ದರೇನು ತಿನ್ನಬೇಕೆನ್ನುವ ಆಹಾರ ತಿನ್ನಲಾಗದೆ ಯಾಕೀ ಬದುಕು ಅನ್ನುವಷ್ಟು ಬೇಜಾರು ಮನ ತುಂಬ.

ಇವೆಲ್ಲ ಪರಿಣಾಮಗಳ ಅನುಭವ ಕೆಲವು ಸ್ವತಃ ನಾನು ಅನುಭವಿಸಿದ್ದರೆ ಇನ್ನು ಕೆಲವು ಅನುಭವಿಸುತ್ತಿರುವವರಿಂದ ಕೇಳಿದ ಮಾತುಗಳು. ಆದರೆ ಇದಕ್ಕೆ ಮೊದಲ ಹಂತದಲ್ಲೆ ನಾವು ಹೆಚ್ಚು ಕಾಳಜಿವಹಿಸಿದರೆ ಖಂಡಿತಾ ಎಂತಹುದೆ ಯೋಚನೆ ಇರಲಿ ಅದರಿಂದ ಬರುವ ಎಸಿಡಿಟಿಯನ್ನು ಮೂಲದಲ್ಲೇ ತಡೆಗಟ್ಟಬಹುದು.

ಹಲವು ವರ್ಷಗಳಿಂದ ಆಗಾಗ ಕಾಡುತ್ತಿದ್ದ ಕೊನೆಗೆ ತೀವ್ರಗೊಂಡು ಕುಡಿದ ನೀರೂ ಕೂಡಾ ಕಕ್ಕುವ ಹಂತದಲ್ಲಿ ನಾಲ್ಕು ದಿನ ಆಸ್ಪತ್ರೆ ವಾಸದಲ್ಲಿ ಇಂಜಕ್ಷನ್ ಕೂಡಾ ಒಗ್ಗದಾಗ ಡ್ರಿಪ್ಸ್ ಹಾಕಿ ಮಲಗಿಸಿದ್ದ ಅಂತ ವೇಳೆಯಲ್ಲಿ ಮನಸ್ಸು ಕಲ್ಲು ಮಾಡಿಕೊಂಡು ಕೇವಲ ಚಿರೋಟಿ ರವೆ ಗಂಜಿ ಎರಡೆರಡೇ ಸ್ಪೂನ್ ಕುಡಿದು ನಿದಾನವಾಗಿ ಚೇತರಿಸಿಕೊಳ್ಳುತ್ತ ಬಂದೆ. ಆ ನಂತರದ ದಿನಗಳಲ್ಲಿ ಬರೀ ಸಪ್ಪೆ ಯಾದ ಸ್ವಲ್ಪೇ ಸ್ವಲ್ಪ ಊಟ ಟೀ ಕಾಫಿ ಪೂರ್ತಿ ಬಿಟ್ಟು ಹಸಿವಾದಾಗ ರವೆ ಗಂಜಿ. ಹೀಗೆ ತಿಂಗಳಾನುಗಟ್ಟಲೆ ಇದ್ದು ಇದುವರೆಗೂ ಎಸಿಡಿಟಿ ಕಾಡದಂತೆ ಕಾಳಜಿ ನನ್ನದು. ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತಾದರೂ ಈಗಲೂ ಯಾವತ್ತಾದರೂ ಅಕಸ್ಮಾತ್ ಕಾಡಿದರೆ ಮಾತ್ರೆಗಳ ಮೊರೆ ಹೋಗುವುದಿಲ್ಲ. ಚೆನ್ನಾಗಿ ಬೆಚ್ಚಗಿನ ನೀರು ಕುಡಿಯೋದು, ನಿಯಮಿತವಾಗಿ ಸ್ವಲ್ಪ ಸ್ವಲ್ಪ ಸಪ್ಪೆ ಊಟ,ಟೀ ಕಾಫಿ ಬಂದ್,ಯೋಗ,ವಾಕಿಂಗ್ ಇತ್ಯಾದಿ.

ಹೀಗೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ ಎಂಬುದನ್ನು ತಿಳಿದು ಮನಸ್ಸು ಬೇಜಾರಿನಿಂದ ಹೊರಬರಲು, ಉಲ್ಲಾಸದ ದಿನಗಳನ್ನು ಮೈಗೂಡಿಸಿಕೊಳ್ಳಲು, ರೋಗ ನಿಯಂತ್ರಣದಲ್ಲಿಡಲು ನಾನೇ ಕಂಡುಕೊಂಡ ದಾರಿ.

ಮುಂದುವರಿಯುವುದು.
14-11-2017. 10.41am

Advertisements

ಅನುಮಾನ

ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.  ಸದಾ ನಲಿಯುವ ಕ್ಷಣ ನಿಮ್ಮದಾಗಲಿ💐********************************************************************

ರಾಜ್ಯದಲ್ಲಿ ಸರಕಾರಿ ಕನ್ನಡ ಶಾಲೆಗಳನ್ನು ಅಲ್ಲಲ್ಲಿ ಮಕ್ಕಳ ಸಂಖ್ಯೆಗನುಗುಣವಾಗಿ ಮುಚ್ಚುವ ತೀರ್ಮಾನ ಈಗಿನ  ಸರಕಾರ ತೆಗೆದುಕೊಂಡಿರುವುದು ನಿಜಕ್ಕೂ ಶೋಚನೀಯ.  ಇದಕ್ಕೆ ಬಲಿಯಾಗುವುದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇರುವ ಶಾಲೆಗಳು.
ಬಹಳ ಬಹಳ ದುಃಖವಾಗುತ್ತಿದೆ. 

ಕಾರಣ ನಾನೂ ಕೂಡಾ ಸರಕಾರಿ ಕನ್ನಡ ಶಾಲೆಯಲ್ಲಿ ಓದಿದವಳೆ.  ಒಂದು ಕಾಲದಲ್ಲಿ ಅಂದರೆ ನಾನು ನಾಲ್ಕನೇ ಕ್ಲಾಸು ಮುಗಿಸಿದ ವರ್ಷ ನಾನು ಓದುತ್ತಿರುವ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ, ಟೀಚರ್ ಕೂಡಾ ಕಡಿಮೆ ಇದ್ದಾರೆ ಎಂದು ಆ ಶಾಲೆಯಲ್ಲಿ ಕೇವಲ ನಾಲ್ಕನೇ ಈಯತ್ತೆಯವರೆಗೆ ಮಾತ್ರ ಈ ಶಾಲೆಯಲ್ಲಿ ಕಲಿಯಬಹುದು.  ನಂತರ ಓದುವ ಮಕ್ಕಳು ಈ ಶಾಲೆಯಿಂದ ಸುಮಾರು ಎರಡು ಮೈಲಿ ದೂರದಲ್ಲಿರುವ ಇನ್ನೊಂದು ಕನ್ನಡ ಶಾಲೆಯಲ್ಲಿ ಕಲಿಯಬಹುದೆಂಬ ಸರಕಾದ ಆದೇಶದನ್ವಯ ನಮ್ಮ ಹಳ್ಳಿಯ ಹತ್ತಿರವಿರುವ ಶಾಲೆಯಲ್ಲಿ ಓದುವ ಭಾಗ್ಯ ಕಳೆದುಕೊಂಡೆ.  

ಐದನೆಯ ಈಯತ್ತೆ ಮುಗಿಸಿದ ನನ್ನಕ್ಕ ಮತ್ತು ನಾಲ್ಕನೆ ಈಯತ್ತೆ ಮುಗಿಸಿದ ನಾನು ಇವರನ್ನು ಯಾವ ಶಾಲೆಗೆ ಕಳಿಸುವುದು? ಎಂಬ ಚಿಂತೆ ಹೆತ್ತವರದ್ದಾಯಿತು.  ಎರಡು ಮೈಲಿ ನಡೆದು ಈ ಮಕ್ಕಳು ಕಲಿಯುವುದುಂಟೆ?  ಕಾರಣ ಹೋಗುವ ದಾರಿ ಕಾಲು ಹಾದಿ.  ಇನ್ನು ಬಳಸಿಕೊಂಡು ದಾರಿಯಲ್ಲಿ ನಡೆದು ಹೋಗಲು ಮೂರೂವರೆ ಮೈಲಿ.  ಬಸ್ಸಿನ ಸೌಲಭ್ಯ ಇಲ್ಲವೇ ಇಲ್ಲ.  ಕಾಲು ಹಾದಿನೊ, ಅದು ನಿರ್ಜನ ಪ್ರದೇಶ.  ಅರ್ಧ ಕಿ.ಮೀ. ಹಳ್ಳದಲ್ಲಿ (ಹೊಳೆ) ನಡೆಯಬೇಕು.  ಬೆಟ್ಟ, ಬೇಣದಲ್ಲಿ ಸಾಗುವಾಗ ಹೆದರಿಕೆ ಆಗುವುದು ಸಹಜ.  ಇವೆಲ್ಲ ಯೋಚಿಸಿ ಹತ್ತಿರದ ಸಂಬಂಧಿಕರ ಮನೆಯಲ್ಲಿ ವಿಚಾರಿಸಿ ಅವರ ಒಪ್ಪಿಗೆಯ ಮೇರೆಗೆ ನಮ್ಮಿಬ್ಬರನ್ನೂ ಬೇರೆ ಬೇರೆ ಮನೆಯಲ್ಲಿ ಇರುವ ವ್ಯವಸ್ಥೆ ಮಾಡಿ ಬೇರೆ ಬೇರೆ ಶಾಲೆಗೆ ಸೇರಿಸಲಾಯಿತು.   

ಸಾಮಾನ್ಯ ಸಣ್ಣ ಸಿಟಿಯಾಗಿತ್ತು.  ಶಾಲೆನೂ ದೊಡ್ಡದಾಗೇ ಇತ್ತು.  ಅದರಲ್ಲೂ ನಾನು ಸೇರಿದ ಶಾಲೆಯಲ್ಲಿ ತುಂಬಾ ಮಕ್ಕಳಿದ್ದರು.  ಹಾಗೆ ಟೀಚರ್ಗಳೂ ತುಂಬಾ ಇದ್ದರು.  ಆಟ ಪಾಠ ಎಲ್ಲಾ ಜೋರಾಗೇ ಇತ್ತು.  ಹಳ್ಳಿಯಿಂದ ದಿಲ್ಲಿಗೆ ಬಂದಷ್ಟು ಸಂತೋಷ.  ನಮ್ಮ ಹವ್ಯಕ ಭಾಷೆ ಮಾತಾಡುವವರು ಬೆರಳೆಣಿಕೆಯಷ್ಟು.  ಪೇಟೆಯ ಮಾತು.  ಬಹಳ ಹೆದರಿಕೆ ಹೊಸ ವಾತಾವರಣ.  ಹೊಂದಿಕೊಳ್ಳದೆ ಬೇರೆ ದಾರಿ ಇರಲಿಲ್ಲ.   ಹೊಸದರಲ್ಲಿರುವ ಸಂತೋಷ  ಬರ್ತಾ ಬರ್ತಾ ನನಗಿನ್ನೂ ನೆನಪಿದೆ ಮನೆ ವಾತಾವರಣ ಬಂಧನದಂತೆ ಭಾಸವಾಗತೊಡಗಿತು.  ಆಯಿ ಅಪ್ಪನ ಜೊತೆ ಅಕ್ಕ ಅಣ್ಣ ತಂಗಿಯರ ಜೊತೆ ಆಟ ಆಡ್ತಾ, ಜಗಳ ಆಡ್ತಾ ಬಯ್ಸಿಕೊಳ್ತಾ ಊರ ಮಕ್ಕಳೊಂದಿಗೆ ಬೆಟ್ಟ ಗುಡ್ಡ ತಿರುಗಿಕೊಂಡು ಇರೊ ದಿನಗಳ ನೆನಪು ಬಹಳ ಬಹಳ ಕಾಡಲು ಶುರುವಾಯಿತು.  ನಾನಿರುವ ದೂರದ ಸಂಬಂಧಿ ಅಜ್ಜಿಯ ಮನೆ ಬಹಳ ಶ್ರೀಮಂತ ಕುಟುಂಬ.  ದೊಡ್ಡ ಮನೆ,ಆಳು ಕಾಳು,ಬೇಕಾದಷ್ಟು ಪ್ರೀತಿ ಮಾಡಿಕೊಳ್ಳುವ ಅಜ್ಜ ಅಜ್ಜಿ, ಮಾವಂದಿರು,ಹಾಲು ಮೊಸರು ತುಪ್ಪ ಏನಿಲ್ಲಾ?  ಎಲ್ಲವೂ ಇತ್ತು.  ಆದರೆ ನನ್ನ ಮನಸ್ಸು ಆಯಿ ಅಪ್ಪನನ್ನು ಸದಾ ಬಯಸುತ್ತಿತ್ತು.  ನನಗೆ ನೆನಪಾದಾಗಲೆಲ್ಲ ಅವರಲ್ಲಿಗೆ ಓಡಿ ಹೋಗಿ ಬಿಡಲೆ ಅನಿಸುತ್ತಿತ್ತು.  ಕಾರಣ ಅಲ್ಲಿ ನನಗೆ ಸ್ವಾತಂತ್ರ್ಯ ಇತ್ತು.  ನನ್ನದು, ನಂದು ಅನ್ನುವ ವಾಂಚಲ್ಯ ಇತ್ತು.  ಎಲ್ಲಿ ನಂದೇ ಅನ್ನುವ ಭಾವನೆ ಇರುತ್ತದೊ ಅಲ್ಲಿ ಸುಃಖ ಜಾಸ್ತಿ.  ಈ ಅರಿವು ಅಷ್ಟು ಚಿಕ್ಕಂದಿನಲ್ಲೆ ಮನೆ ಮಾಡಿತ್ತು ಅನಿಸುತ್ತದೆ.  ಒಂಬತ್ತು ವರ್ಷ ನನಗೆ.  ತಿಳುವಳಿಕೆ ಏನೂ ಇರಲಿಲ್ಲ.  ಬರೀ ತಿನ್ನೋದು, ಆಡೋದು, ಶಾಲೆಯಲ್ಲಿ ಹೇಳಿಕೊಟ್ಟಿದ್ದು ಮನೆಗೆ ಬಂದು ವರದಿ ಒಪ್ಪಿಸೋದು.   ಮನೆ ಪಾಠ ಕಲಿಯೋದು.  ಬೇರೆ ಯಾವ ಚಿಂತೆನೆ ಇರಲಿಲ್ಲ.  ಆದರೆ ಬೇರೆಯವರ ಮನೆಯಲ್ಲಿ ಹಾಗಾಗೋದಿಲ್ಲ.  ಏನೊ ಒಂದು ರೀತಿ ಬಂಧನ.  ಮಕ್ಕಳ ಮನಸ್ಸು ಅತೀ ಸೂಕ್ಷ್ಮ.  ಚಿಕ್ಕ ವಯಸ್ಸಿನಲ್ಲಿ ಹೆತ್ತವರನ್ನು ಅಗಲಿರುವುದು ತುಂಬಾ ತುಂಬಾ ಕಷ್ಟ.  ಆಗೆಲ್ಲ ಮೌನವಾಗಿ ಅಳುವುದೊಂದೆ ಸಂಗಾತಿ.  ಅದರಲ್ಲೂ ಹಬ್ಬಗಳಲ್ಲಿ ಪರೀಕ್ಷೆ ಕಾರಣಕ್ಕೆ ಹೆತ್ತವರ ಹತ್ತಿರ ಹೋಗಲಾಗದ್ದು ಇನ್ನೂ ಮನಸ್ಸು ಘಾಸಿಗೊಳಿಸುತ್ತಿತ್ತು.  ಸ್ವಲ್ಪ ಹುಷಾರಿಲ್ಲದಿದ್ದರೂ ಅಮ್ಮ ಬೇಕು ನನಗೆ ಎಂದು ಹೇಳಿಕೊಳ್ಳಲಾಗದು.  ಬೇಕೆಂದರೂ ಸಿಗುತ್ತಿರಲಿಲ್ಲ.  ಇಂಥ ಪರಿಸ್ಥಿತಿ ಈಗ ಶಾಲೆ ಮುಚ್ಚುತ್ತಿರುವುದರಿಂದ ಯಾವ ಮಕ್ಕಳಿಗೂ ಬಾರದಿರಲಿ!!

ಈಗ ಹಳ್ಳಿಯ ಶಾಲೆಗಳಲ್ಲಿ ಗಣನೀಯವಾಗಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿರುವುದು ನಿಜ.  ಏಕೆಂದರೆ ಉತ್ತರ ಕನ್ನಡದ ಎಷ್ಟೋ ಹಳ್ಳಿಗಳಲ್ಲಿ ಜನ ಸಂಖ್ಯೆ ಸಾಕಷ್ಟು ಕಡಿಮೆ ಆಗುತ್ತಿದೆ.  ಕಲಿತು ಪಟ್ಟಣ ಸೇರಿದವರು ಅಲ್ಲಿಯೆ ಕೆಲಸಕ್ಕೆ ಸೇರಿ ಮದುವೆ ಮಕ್ಕಳು ಅಂತ ನಗರದಲ್ಲಿಯೆ ವಾಸ್ತವ್ಯ ಹೂಡಿದ್ದಾರೆ.  ಇನ್ನು ಹಳ್ಳಿಯಲ್ಲಿ ಇರುವ ಗಂಡು ಮಕ್ಕಳಿಗೆ ಎಷ್ಟೇ ಶ್ರೀಮಂತರಾಗಿರಲಿ, ಸೌಲಭ್ಯಗಳು ಇರಲಿ ಮದುವೆಗೆ ಹೆಣ್ಣು ಸಿಗದೆ ಸಂಸಾರ ಸಂತಾನವಿಲ್ಲದೆ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ.  ಇರುವ ನಾಲ್ಕಾರು ಮಕ್ಕಳಿದ್ದರೂ ಈ ರೀತಿ ಶಾಲೆಗಳನ್ನು ಮುಚ್ಚುವುದರಿಂದ ಗತ್ಯಂತರವಿಲ್ಲದೆ ನನ್ನಂತೆ ಬೇರೆಯವರ ಮನೆಯಲ್ಲಿ ಇದ್ದು ಓದಬೇಕು.  ಇಲ್ಲಿ ಬಾಲ್ಯದ ತಮ್ಮ ಸ್ವಾತಂತ್ರ್ಯ ಕಳೆದುಕೊಂಡು ಬರಬರುತ್ತಾ ಒಬ್ಬಂಟಿ ವ್ಯಕ್ತಿತ್ವ ಬೆಳೆಯುವುದು ಖಂಡಿತಾ.  

ಮಕ್ಕಳಿಗೆ ಆಯಾ ವಯಸ್ಸಿನಲ್ಲಿ ಸಿಗುವ ಸೌಲಭ್ಯ, ಸ್ವಾತಂತ್ರ್ಯ ಸಿಗದಾಗ ಅವರ ವರ್ತನೆ ಬದಲಾಗಿ ಓದಿನಲ್ಲೂ ಗಮನ ಕೊಡಲಾಗದೆ ಉತ್ತಮ ಪ್ರಜೆಯಾಗಿ ಬೆಳೆಯುವುದಾದರೂ ಹೇಗೆ?  ಈಗಲೂ ಹಳ್ಳಿಗಳಲ್ಲಿ ಸರಕಾರಿ ಶಾಲೆ ಬಿಟ್ಟರೆ ಬೇರೆ ಶಾಲೆಗಳಿಲ್ಲ.  ಅಲ್ಲಿ ಆಚಾರ್ಯ ದೇವೋ ಭವ ಅನ್ನುವ ಮಾತು ಅಕ್ಷರಶಃ ಎದ್ದು ಕಾಣುತ್ತದೆ.  ಅಲ್ಲಿ ಕಲಿಸುವ ಮಾಸ್ತರು, ಅಕ್ಕೋರು(ಟೀಚರ್) ಎಲ್ಲರಿಗೂ ಅಚ್ಚು ಮೆಚ್ಚು.  ತುಂಬಾ ಸಲುಗೆಯಿಂದ ತಮ್ಮ ಮನೆ ಊರಿನ ಸಮಾಚಾರ ಎಲ್ಲ ಹೇಳಿಕೊಂಡು ನಲಿಯುವ ವಾತಾವರಣ ಅಲ್ಲಿಯ ಶಾಲೆಗಳ ಮಕ್ಕಳಲ್ಲಿ.  ಊರಿನಲ್ಲಿ ಆಗುವ ವಿಶೇಷ ಸಮಾರಂಭಗಳಲ್ಲಿ ಒಮ್ಮೊಮ್ಮೆ ಶಾಲೆಗೆ ರಜಾ ಕೊಟ್ಟು ತಾವೂ ಭಾಗವಹಿಸುವ ಪರಿ ಕಲಿಸುವ ವರ್ಗದವರಲ್ಲಿ ಕಾಣಬಹುದು.  ಅವರ ಮನೆಗಳು ದೂರವಿದ್ದಲ್ಲಿ ಪ್ರತಿ ನಿತ್ಯ ಮಧ್ಯಾಹ್ನದ ಊಟ  ವ್ಯವಸ್ಥೆ ಊರಿನ ಒಬ್ಬರ ಮನೆಯಲ್ಲಿ ಮಾಡುತ್ತಿದ್ದರು.  ಇದು ಈಗಲೂ ಇದೆ.  ಹಳ್ಳಿಯ ಜನರೂ ಅಷ್ಟೆ ತಮ್ಮ ಸಮಸ್ಯೆ ಮಕ್ಕಳ ಓದಿನ ಕುರಿತು ಸಾಕಷ್ಟು ಚರ್ಚೆ, ಶಾಲೆಯಲ್ಲಿ ಏನಾದರೂ ಕೊರತೆ ಇದ್ದರೆ ತಮ್ಮ ಕೈಲಾದ ಸಹಾಯ ಮಾಡುವುದು ಹೀಗೆ ಒಬ್ಬರನ್ನೊಬ್ಬರು ಅರಿತು ಒಂದು ರೀತಿ ಕುಟುಂಬದ ವಾತಾವರಣ ಅಲ್ಲಿ ಸೃಷ್ಟಿಯಾಗಿರುತ್ತದೆ.  

ತದನಂತರದ ದಿನಗಳಲ್ಲಿ ನಾನು ಓದಿದ್ದ ಶಾಲೆಯನ್ನು  ಊರಿನ ಮುಖಂಡರು ಸ್ಥಳೀಯ ಅಧಿಕಾರಿಗಳ ಮನವೊಲಿಸಿ ಮತ್ತೆ ಆ ಶಾಲೆಯಲ್ಲಿ ಏಳನೇ ತರಗತಿಯವರೆಗೆ ಶುರುವಾದರೂ ನಾವು ಮಾತ್ರ ಆ ಶಾಲೆಯಲ್ಲಿ ಓದಲೇ ಇಲ್ಲ.  ಈಗೊಂದು ನಾಲ್ಕಾರು ವರ್ಷಗಳ ಹಿಂದೆ ಈಗಿರುವ ಸರಕಾರಿ ಸೌಲತ್ತುಗಳನ್ನೆಲ್ಲ ಉಪಯೋಗಿಸಿಕೊಂಡು ಹೊಸದಾಗಿ ಬಂದ ಮಾಸ್ತರೊಬ್ಬರು ಆ ಶಾಲೆಯನ್ನು ಸುತ್ತಮುತ್ತಲಿನ ಶಾಲೆಗಳಿಗೆ ಮಾದರಿ ಶಾಲೆಯಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.   ಕಟ್ಟಡ ನವೀಕರಣ,  ಟೀಚರಿಗೊಂದು ಶಾಲೆಯ ಪಕ್ಕದಲ್ಲಿ ಮನೆ, ಭಾವಿ, ಸುತ್ತ ಕೈತೋಟ ಎಲ್ಲಾ ನಿರ್ಮಾಣಗೊಂಡವು.  ಆಗಾಗ ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ನಡೆಯುತ್ತಿದ್ದವು.  ಮಕ್ಕಳ ಸಂಖ್ಯೆಯೂ ಜಾಸ್ತಿ ಆಗುತ್ತ ಬಂದಿತು.  ಇದು ಆ ದೇವರಿಗೂ ಇಷ್ಟ ಆಗಲಿಲ್ಲವೊ ಏನೊ! ಒಂದಿನ ಆಕ್ಸಿಡೆಂಟಲ್ಲಿ ಮಾಸ್ತರು ತೀರಿಕೊಂಡರು ಎಂಬ ಸುದ್ದಿ ಬಂದಾಗ ಮಕ್ಕಳೇನು ಊರಿಗೆ ಊರೇ ಕಣ್ಣೀರಿಟ್ಟಿತು.    ಇದನ್ನು ಬರೆಯಲು ಕಾರಣ ಇವರು ಪ್ರತಿನಿತ್ಯ ನನ್ನಪ್ಪನ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ಬರುತ್ತಿದ್ದರು.  ಮನೆಯ ಒಬ್ಬ ಸದಸ್ಯರಂತಿದ್ದ ಅವರನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಒಂದು ಶಾಲೆಗೆ ಮಕ್ಕಳು ಬಂದು ಓದಲು ಮೊದಲು ಶಾಲೆಯ ವಾತಾವರಣ ಸರಿಯಾಗಿರಬೇಕು.  ಸ್ವಚ್ಛತೆ, ಕಲಿಸುವ ವರ್ಗ, ವ್ಯವಸ್ಥೆ ಎಲ್ಲವೂ ಸರಿಯಾಗಿದ್ದಲ್ಲಿ ಆ ಶಾಲೆಗೆ ಪಾಲಕರು ತಮ್ಮ ಮಕ್ಕಳನ್ನು ಸೇರಿಸುವ ಮನಸ್ಸು ಮಾಡುತ್ತಾರೆ.  ಇಂದಿಗೂ ನಾನು ಕಲಿತ ಹೈಸ್ಕೂಲ್ ಸರಕಾರಿ ಶಾಲೆಯಾದರೂ ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ನನಗೆ ಹೆಮ್ಮೆಯ ವಿಷಯ.   ಹಳೆಯ ಕಟ್ಟಡ ದುರಸ್ತಿ ಮಾಡಲೆಂದು ಸ್ಥಳೀಯರೊಂದಿಗೆ ನಾವು ಹಳೆಯ ವಿದ್ಯಾರ್ಥಿಗಳು ಕೈ ಜೋಡಿಸಿದ್ದೇವೆ.  ಹಾಗೂ ಸ್ಥಳೀಯ ಜನರ ಸಹಕಾರದೊಂದಿಗೆ ನಿವೃತ್ತ ಶಿಕ್ಷಕರು ಎಲ್ಲ ಸೇರಿ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಸಹಿತ ಈಗ ಐದು ವರ್ಷಗಳಿಂದ  ಶುರು ಮಾಡಿದ್ದಾರೆ. ಅದೂ ಕೂಡ ಚೆನ್ನಾಗಿ ನಡೆಯುತ್ತಿದೆ.  ಇಲ್ಲಿ ಕೂಡಾ ನಮ್ಮ ಸಹ ಭಾಗಿತ್ವವಿದೆ.  

ಆದರೆ ಇದೆ ವಾತಾವರಣ ಸಿಟಿಗಳಲ್ಲಿ ನಿರ್ಮಾಣವಾಗುತ್ತಿಲ್ಲ.  ಕಾರಣ ಇಲ್ಲಿ ಸಾಕಷ್ಟು ಇಂಗ್ಲೀಷ್ ಮೀಡಿಯಂ ಶಾಲೆಳು ತಲೆಯೆತ್ತಿವೆ.  ಸರಕಾರಿ ಶಾಲೆಗಳಲ್ಲಿ ಸರಿಯಾದ ಸೌಲತ್ತುಗಳಿಲ್ಲವೆಂಬ ದೂರು.  ಹೀಗೆ ಮುಂದುವರೆಯುತ್ತ ಹೋದರೆ ಒಂದಿನ ಕನ್ನಡ ಸರ್ಕಾರಿ ಶಾಲೆಗಳೆ ಇಲ್ಲದಂತಾಗಬಹುದೆ??

13-10-2017. 10.27pm

ಬೇಜಾರು….!!(ಭಾಗ-5)

ರಾತ್ರಿ 10.55pm. ಕನ್ನಡ ರಾಜ್ಯೋತ್ಸವದ ನಿಮಿತ್ತ ಒಂದು ಕವನ ಬರೆದು ಬ್ಲಾಗಲ್ಲಿ ಪೋಸ್ಟ್ ಮಾಡಿ ಇನ್ನೇನು ಮಲಗೋಣ ಅನ್ನುವಾಗ ಗಮನಕ್ಕೆ ಬಂತು ಬೆನ್ನು ನೋವು, ಮೈಯ್ಯೆಲ್ಲ ಚಳಿ ಚಳಿ. ಕುತ್ತಿಗೆಯ ಮೂಲದಿಂದ ಹಾಗೆ ಬೆನ್ನೆಲ್ಲ ಆವರಿಸಿ ನಡುವಿನುದ್ದಕ್ಕೂ ಪಸರಿಸಿ ಸಾವರಿಸಿಕೊಂಡು ಕುಳಿತುಕೊಳ್ಳಲಾಗದಷ್ಟು ನೋವು, ನಿಶ್ಯಕ್ತಿ. ಹಾಸಿಗೆಯಲ್ಲಿ ಬೋರಲಾದಾಗ ಚಳಿ ಹೆಚ್ಚಾಗಿ ಇನ್ನೊಂದು ರಗ್ಗು ಹೊದೆಸುವವರಿದ್ದರೆ ಅನಿಸುವುದು ಸಹಜ. ಆದರೆ ಯಾರೂ ಇಲ್ಲದಾಗ ಎದ್ದೇಳಲೂ ಆಗದೆ ಹಾಗೆ ಮುದುಡಿ ಮಲಗಿ ನರಳುತ್ತ ಜ್ವರದ ತಾಪದಲ್ಲಿ ನಿದ್ರೆ ಆವರಿಸಿಬಿಡುತ್ತದೆ. ಮದ್ಯ ರಾತ್ರಿ ಇದ್ದಕ್ಕಿದ್ದಂತೆ ಎಚ್ಚರ. ಮೈಯ್ಯೆಲ್ಲ ಬೆವತಿದೆ. ಅದು ಎಷ್ಟೆಂದರೆ ತಲೆ ಕೂದಲ ಬುಡ ಒದ್ದೆಯಾಗಿದ್ದು ಗಮನಕ್ಕೆ ಬರುವಷ್ಟು. ಹಾಗೆ ಆ ಕಡೆ ಈ ಕಡೆ ಹೊರಳಾಟ. ಒಮ್ಮೆ ಏಳಬೇಕು ಅನಿಸುತ್ತದೆ. ಏಳಲು ಆಗುತ್ತಿಲ್ಲ. ಒಂದು ರೀತಿ ಸೋಂಬೇರಿತನ. ಸುತ್ತೆಲ್ಲ ಕಣ್ಣಾಡಿಸಿದರೆ ಮಿಣುಕು ಬೆಳಕು ಬೀದಿಯ ಕಂಬದಿಂದ ಕಿಟಕಿ ತೂರಿ ನಾನಿದ್ದೀನಲ್ಲಾ, ಪರವಾಗಿಲ್ಲ ನೀನೆ ಏಳು ಅಂದಂತಾಯಿತು. ಎದ್ದು ಕೂತೆ. ಕುತ್ತಿಗೆ ತುಂಬಾ ನೋಯುತ್ತಿದೆ. ಬೆನ್ನು ಕೂಡಾ. ಮುಲಾಮು ಹಚ್ಚಿ ಯಾರಾದರೂ ಸ್ವಲ್ಪ ನೀಯುವಂತಿದ್ದರೆ ಹಾಯ್ ಅನಿಸುತ್ತಿತ್ತು. ತುಂಬಾ ತುಂಬಾ ಬೇಕು ಅನಿಸುತ್ತಿದೆ ಯಾರಾದರೂ. ಆದರೆ ಯಾರೂ ಇಲ್ಲ.

ಮೆಲ್ಲಗೆ ಎದ್ದು ಸಾವರಿಸಿಕೊಂಡು ಬಾತ್ ರೂಮಿಗೆ ಹೋಗಿ ಬಂದೆ. ಹಸಿವಾದ ಅನುಭವ. ಏನು ತಿನ್ನಲಿ? ಮೂಸುಂಬಿ ಹಣ್ಣು, ಎರಡು ರಸ್ಕು ತಟ್ಟೆಯಲ್ಲಿ ಇಟ್ಟುಕೊಂಡು ಬಂದು ಕೂತೆ ಮತ್ತದೆ ಹಾಸಿಗೆಯಲ್ಲಿ. ಕೈ ಬಾಯಿ ತನ್ನ ಕೆಲಸ ಮಾಡುತ್ತಿದ್ದರೂ ತಲೆ ತನ್ನದೆ ಯೋಚನೆಯಲ್ಲಿ ಮುಳುಗಿತು. “ಅಲ್ಲಾ ಯಾಕೆ ನನಗೆ ಇತ್ತೀಚೆಗೆ ಆಗಾಗ ಜ್ವರ ಬರುತ್ತಿದೆ? ಏನಾಗಿದೆ ನನಗೆ?” ಮನಸ್ಸು ಮ್ಲಾನವಾಯಿತು. ಹಾಗೆ ಬಿದ್ದುಕೊಂಡೆ ಕಣ್ಣು ಮುಚ್ಚಿ.

“ಛೆ! ಇಷ್ಟಕ್ಕೆಲ್ಲ ಹೆದರಿದರೆ ಹೇಗೆ? ಬೆಳಗ್ಗೆ ಒಂದು ಕಾಲ್ಪೋಲ್ ತಗೊಂಡರೆ ಎಲ್ಲಾ ಸರಿಹೋಗುತ್ತದೆ ಬಿಡು”. ಮನಸು ಹೇಳಿತು. ಅದ್ಯಾವಾಗ ನಿದ್ದೆ ಬಂತೊ ಗೊತ್ತಾಗಲಿಲ್ಲ. ಬೆಳಗ್ಗೆ ಮಾಮೂಲಿಯಂತೆ ಎದ್ದರೂ ಉತ್ಸಾಹ ಇರಲಿಲ್ಲ. ಆದರೂ ಕೆಲವೊಂದು ಕಾರ್ಯ ಮಾಡಲೆ ಬೇಕು. ಗತಿ ಇಲ್ಲ. ಸಾಕಿಕೊಂಡಾಗಿದೆಯಲ್ಲ ನಾಲ್ಕು ಕಾಲಿನ ಮರಿ. ಅದಕ್ಕೆ ಅವಸರ. ಸುತ್ತಾಡಿಸಿಕೊಂಡು ಬಂದು ಒಂದಷ್ಟು ಹಾಲು ಬಿಸಿ ಮಾಡಿ ಅದಕ್ಕೂ ಹಾಕಿ ಬ್ರೆಡ್ ಬಿಸಿಮಾಡಿ ನಾನೂ ತಿಂದು ಗುಳಿಗೆ ನುಂಗಿ ಮಲಗಿದ್ದಾಯ್ತು ಮತ್ತೆ. ಎಷ್ಟೋ ಹೊತ್ತಿಗೆ ಎಚ್ಚರ. ಗಂಟೆ ಹನ್ನೆರಡು ಮೂವತ್ತು ತೋರಿಸುತ್ತಿತ್ತು. ತಲೆ ತುಂಬ ಹಸಿವೆಗೆ ಏನು ಮಾಡಲಿ? ಫ್ರಿಡ್ಜ್ ಬಾಗಿಲು ತೆಗೆದಾಗ ಕಾಣಿಸಿತು ಒಂದು ಪಾತ್ರೆಲಿ ದೋಸೆ ಹಿಟ್ಟು ಸ್ವಲ್ಪ , ಸ್ವಲ್ಪ ಇಡ್ಲಿ ಹಿಟ್ಟು. ಎರಡೂ ಸೇರಿಸಿ ಮಿಕ್ಸಿ ಮಾಡಿ ದೋಸೆ ಎರಡು ಮಾಡಿ ತಿಂದು ಬಿಸಿ ಹಾಲು ಕುಡಿದೆ. ಇನ್ನೊಂದು ಗುಳಿಗೆ ಗಂಟಲಲ್ಲಿ ಇಳಿಸಿದೆ. ಮತ್ತೆ ಬೋರಲಾದೆ. ಎದ್ದಾಗ ಐದೂವರೆ. ಕತ್ತಲಾಗುತ್ತಿದೆ. ವಾತಾವರಣ ತುಂಬಾ ಥಂಡಿ ಥಂಡಿ. ಎಲ್ಲೊ ಮಳೆಯಾಗುತ್ತಿರಬೇಕು.

ಇನ್ನು ತಡ ಮಾಡೋದಲ್ಲ, ಡಾಕ್ಟರ್ ಭೇಟಿ ಆಗೋದೆ. ಹೊರಟೆ ಕಾಲೆಳೆದುಕೊಂಡು. ಮನಸ್ಸು ಬಯಸುತ್ತಿತ್ತು. ಯಾರಾದರೂ ಕರೆದುಕೊಂಡು ಹೋಗುವವರಿದ್ದಿದ್ದರೆ! 104° ಜ್ವರ ಇದೆ. ಬರೀ ಇಂಜಕ್ಷನ್ ಹಾಕಲಾ ಅಥವಾ ಡ್ರಿಪ್ಸ್ ಸ್ಟಾರ್ಟ ಮಾಡಲಾ? Better ಡ್ರಿಪ್ಸ್ ಹಾಕೋದು. ಮತ್ತವರದೆ ಉತ್ತರ. ಆಯಿತು ಅಂದೆ. ಹೋಗಿ ಮಲಗಿದೆ. ಬಹಳ ಸುಸ್ತಾಗಿದ್ದೆ. Blood report ಬರಲಿ ಗೊತ್ತಾಗುತ್ತದೆ ಏನಾಗಿದೆ confirm ಆಗಿ. ಐದು ಇಂಜಕ್ಷನ್ ಕೋರ್ಸ ಬೆಳಗ್ಗೆ ಸಾಯಂಕಾಲ ಬರಬೇಕು. ಆಗಲಿ ಬರುತ್ತೇನೆ. ಮನೆಗೆ ಬಂದಾಗ ರಾತ್ರಿ ಎಂಟು ಮೂವತ್ತು ದಾಟಿತ್ತು.

ಮಾರನೆ ದಿನ ರಿಪೋರ್ಟ ನೋಡಿದರೆ ನಾರ್ಮಲ್. ವೈರಲ್ ಜ್ವರವಂತೆ. ಈ ಜ್ವರವೊ ಪಕ್ಕನೆ ಬಿಡೋದಲ್ಲ. ಗೊತ್ತಾಯಿತು. ದಿನಾ ಬರುತ್ತಿರೊ ಜ್ವರ ಆಟ ಆಡಲು ಶುರುವಾಯಿತು. ಮೊದಲ ದಿನವಿದ್ದ ಜ್ವರ ಮಾರನೆ ದಿನದಿಂದ ಬೆಳಿಗ್ಗೆ 99.5° ಡ್ಯೂಟಿ ಡಾಕ್ಟರ್ ನೋಡುವಾಗ. ಅದೇ ಸಾಯಂಕಾಲ ಡಾಕ್ಟರ್ ನೋಡುವಾಗ ಜ್ವರ ನಾಪತ್ತೆ. “ನೋಡಿಯಮ್ಮ ನಾಳೆ ಬೆಳಿಗ್ಗೆ ಜ್ವರ ಇದ್ದರೆ ಇಂಜಕ್ಷನ್ ತಗೊಳಿ ಆಯ್ತಾ.” ಮತ್ತೆ ಸಾಯಂಕಾಲ ನಾ ಅವರ ಮುಂದೆ ಹಾಜರ್. ಈ ನಡುವೆ ಅಲ್ಲಿರುವ ಆಯಾಗಳ ಪರಿಚಯ ಒಂದಷ್ಟು ದಿನಾ ಮಾತು ಅಲ್ಲಿ ಬರುವ ರೋಗಿಗಳ ಅವಸ್ಥೆ ಕಂಡು ನಂದೇನಲ್ಲ ಅನ್ನುವ ಸಮಾಧಾನ.

ಸರಿ, ಇಂದೂ ಕೂಡಾ ಮಾಮೂಲಿಯಂತೆ ಬೆಳಿಗ್ಗೆ ಹಾಸ್ಪಿಟಲ್ಗೆ ಹೋದೆ. ಸದ್ಯ ಟೆಂಪರೇಚರ್ ನಾರ್ಮಲ್ ಅಂದರು. ಒಂದಷ್ಟು ಟ್ಯಾಬಲೆಟ್(ತಿನ್ನಲು ವಾಕರಿಕೆ) ಬರೆದುಕೊಟ್ಟರು ತಂದೆ. ಅಂತೂ ಆರು ದಿನ ಕಾಡಿದ ಜ್ವರ ಇಂದು ಬಿಟ್ಟೋಡೋಯ್ತು. ಬಿಲ್ ಕ್ಲಿಯರ್ ಮಾಡಿ ಜಮ್ಮಂತ ಮನೆ ಸೇರಿಕೊಂಡೆ.

ಅಂದಿನಿಂದ ಇಂದಿನವರೆಗೆ ಜ್ವರ ಬರಲಿ,ಸುಸ್ತಾಗಲಿ ಒಬ್ಬಳೇ ಹಠ ಹೊತ್ತು ನಿಭಾಯಿಸಿದೆ. ಯಾರ ಹತ್ತಿರ ದೇಹೀ ಅನ್ನಲಿಲ್ಲ. ಅದೆ ನನಗೆ ಖುಷಿ. ಯಾಕೆ ಗೊತ್ತಾ? ಸದಾ ನಮ್ಮ ಜೊತೆಗೆ ಯಾರು ಇರುತ್ತಾರೆ? ಇಂತಹ ಸಂದರ್ಭದಲ್ಲಿ ಯಾಕೆ ಯಾರ ಸಹಾಯ ಕೇಳಬೇಕು. ಹತ್ತಿರ ಆಸ್ಪತ್ರೆ ಇಲ್ವಾ? ಡಾಕ್ಟರ್ ಇಲ್ವಾ? ನರ್ಸಗಳು ಇಲ್ವಾ? ಕೈಲಾಗೋದಿಲ್ಲ ಅಂದರೆ ಹೋಗಿ ಅಡ್ಮಿಟ್ ಆದರೆ ಆಯಿತು. ಇಲ್ಲಾ ಫೋನ್ ಮಾಡಿದರೆ ಮನೆಗೆ ಬಂದು ಕರೆದುಕೊಂಡು ಹೋಗುತ್ತಾರೆ. ಅಂತಹ ಸೌಲಭ್ಯ ಈಗಿನ ಕಾಲದಲ್ಲಿ ಇರುವಾಗ ಎಲ್ಲದಕ್ಕೂ ಇನ್ನೊಬ್ಬರನ್ನು ಅವಲಂಭಿಸೋದು ಎಷ್ಟು ಸರಿ? ಹಿಂದೆಲ್ಲ ಏನಾದರೂ ಇಷ್ಟು ಸಣ್ಣದಾದರೂ ಹತ್ತಿರದವರಿಗೆ ಫೋನ್ ಮಾಡಿ ಕರೆಸ್ಕೋತಿದ್ದೆ. ಆದರೆ ಈ ಸಾರಿ ಯಾಕೊ ಯಾರಿಗೂ ಹೇಳೋದೆ ಬೇಡಾ. ನಾನ್ಯಾಕೆ ಅಧೀರಳಾಗಬೇಕು ಅನ್ನುವ ಪ್ರಶ್ನೆ ನನ್ನ ಕಾಡಿತು. ಎದುರಿಸಿ ನನಗೇ ನಾ ಸೈ ಅನಿಸಿಕೊಂಡೆ. ತುಂಬಾ ಖುಷಿ ಆಗುತ್ತಿದೆ.

ಅಕ್ಕ ಪಕ್ಕದವರು ಯೋಗಕ್ಷೇಮ ವಿಚಾರಿಸಿ ಸಾಂತ್ವನ ಹೇಳಿದರು. ಪಕ್ಕದಲ್ಲಿರುವ ಆತ್ಮೀಯ ಗೆಳತಿಗೆ ವಿಷಯ ಗೊತ್ತಾಗಿ ಒಂದೆರಡು ಹೊತ್ತಿನ ತಿಂಡಿ ತಂದು ಕೊಟ್ಟಳು. ಮತ್ತೆಲ್ಲಾ ದಿನಗಳೂ ನಾನೆ ಚಪಾತಿ, ಬೇಳೆ ಕಟ್ಟು, ರವೆ ದೋಸೆ ಮಾಡಿಕೊಂಡು ತಿಂದೆ. ಆಗೀಗಷ್ಟು ಸಿಕ್ಕಾಗ ಮಾತನಾಡುವ ಎಂದೊ ಪರಿಚಯವಾದ ಹೆಂಗಸೊಬ್ಬಳು ಬಂದು ಮನೆ ಕೆಲಸ ಮಾಡಿದಳು. ಒಂದಷ್ಟು ಹಣ ಕೊಟ್ಟೆ.

ದೂರದೂರಿಗೆ ಪ್ರವಾಸಕ್ಕೆಂದು ಹೋದ ಮಗಳಿಗೆ ನನ್ನ ಆರೋಗ್ಯದ ವಿಷಯ ನಾನೇ ಹೇಳಿ ಗಾಬರಿಪಡಿಸಿದೆನಾ? ಒಳಗೊಳಗೆ ಆತಂಕ. ಆಗಾಗ ದೂರವಾಣಿಯಲ್ಲಿ “ಅಮ್ಮಾ ನಾ ವಾಪಸ್ಸು ಬಂದುಬಿಡ್ಲಾ? ನಿಂಗೂಷಾರಿಲ್ಲ, ಹೇಗೆ ಒಬ್ಬಳೆ ಇರ್ತೀಯಾ….”ಮಾತನಾಡುತ್ತಿದ್ದ ಅವಳಿಗೆ “ಆರಾಮಾಗ್ತಿದ್ದೇನೆ,ಏನೂ ತೊಂದರೆ ಇಲ್ಲ, ಇಲ್ಲಿ ಎಲ್ಲ ಸಹಾಯಕ್ಕೆ ಇದ್ದಾರೆ,ನಿನ್ನ ವಿದೇಶ ಪ್ರವಾಸ ಯಶಸ್ವಿಯಾಗಿ ಮುಗಿಸಿ ಬಾ ” ಎಂದು ಹೇಳುತ್ತಲೆ ಬಂದೆ.

“Ega, I am flying to Hanoi” ಇಂದು ಬೆಳಗಿನ 5.54ಕ್ಕೆ WhatsApp chat. ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ. ಅಮ್ಮ ಹುಷಾರಾಗಿದ್ದು ಬಹುಶಃ ಪುಷ್ಪಕ ವಿಮಾನ ಏರಿದಷ್ಟು ಖುಷಿ ಆಗಬಹುದು ಅವಳಿಗೆ!!😊

ಮನುಷ್ಯನಿಗೆ ಇನ್ನೊಬ್ಬರ ಅಗತ್ಯ ಎಷ್ಟು ಅನ್ನುವುದು ಯಾವುದಾದರೂ ಕಾಯಿಲೆ ಬಂದಾಗಲೆ ಗೊತ್ತಾಗೋದು. ನನಗ್ಯಾರೂ ಈ ಸಮಯದಲ್ಲಿ ಇಲ್ವಲ್ಲಾ ಅಂತ ದುಃಖ ಆಗುತ್ತದೆ ಒಮ್ಮೆ. ಬೇಸರ ಆಗುತ್ತದೆ. ಆದರೆ ಅಧೈರ್ಯ ಪಡದೆ ನಮ್ಮನ್ನು ನಾವೇ ನಿಭಾಯಿಸಿಕೊಳ್ಳಬೇಕೆಂಬ ಮನಸ್ಸು ಧೈರ್ಯ ತಂದುಕೊಂಡಲ್ಲಿ ಕಷ್ಟ ಅಂತ ಅನಿಸುವುದಿಲ್ಲ. ಬೇಜಾರೂ ಆಗುವುದಿಲ್ಲ. ಎಲ್ಲರಿಗೂ ಅವರವರದೆ ಆದ ಕೆಲಸ ಕಾರ್ಯ ಇರುತ್ತದೆ. ಸುಮ್ಮನೆ ನಮ್ಮಿಂದ ಅವರಿಗ್ಯಾಕೆ ತೊಂದರೆ. ಯಾರಿಗೂ ನಾವು ಹೊರೆಯಾಗದೆ ಆದಷ್ಟು ನಮ್ಮ ಕೆಲಸ ನಾವೆ ಮಾಡಿಕೊಳ್ಳುತ್ತ ಒಬ್ಬಂಟಿಯಾಗಿ ಎದುರಿಸಬೇಕು ಎಂಬ ಮನಸ್ಸು ಬೆಳೆಸಿಕೊಂಡಷ್ಟೂ ಮನುಷ್ಯ ಸ್ವತಂತ್ರವಾಗಿ, ಸ್ವಾವಲಂಬನೆಯಿಂದ ಬದುಕಲು ಸಾಧ್ಯ.

ಮುಂದುವರಿಯುವುದು.
5-11-2017. 12.54pm

ಬೇಜಾರು….!!(ಭಾಗ-4)

ಮನಸ್ಸಿಗೆ ಒಂದು ವಿಷಯ ತಲೆಗೆ ಹೊಕ್ಕಿತು ಆಂದರೆ ಅದರ ಬಗ್ಗೆಯೇ ಸದಾ ಯೋಚಿಸುವಂತಾಗುತ್ತದೆ. ಕೂತಲ್ಲಿ ನಿಂತಲ್ಲಿ ಅದೆ ವಿಚಾರ ತಲೆ ಕೊರಿತಾ ಇರುತ್ತದೆ. ಅದು ಎಷ್ಟು ಮನಸ್ಸನ್ನು ಆವರಿಸಲು ಶುರು ಮಾಡುತ್ತದೆ ಅಂದರೆ ಯಾವ ಕೆಲಸ ಮಾಡಲೂ ಮನಸ್ಸಿಲ್ಲ. ಯಾವ ರೀತಿ ಇದನ್ನು ಮನಸ್ಸಿಂದ ಹೊರಗೆ ಹಾಕಲಿ? ಏನು ಮಾಡಲಿ? ಮನಸ್ಸಿಗೆ ಸಮಾಧಾನ ಇಲ್ಲ. ನಿದ್ದೆ ಇಲ್ಲ. ಅಡಿಗೆ ಮಾಡೋದು ಬೇಡಾ. ಹಸಿವಾದರೆ ಇರೋದರಲ್ಲೆ ಏನೊ ಒಂದು ತಿಂದು ಹಸಿವಿಂಗಿಸಿಕೊಳ್ಳುವಂತಾಗುತ್ತದೆ. ಮಾಡಲು ಒಂದಷ್ಟು ಕೆಲಸ ಇದೆ. ಒಂದೊಂದೇ ದಿನಾ ಒಂದಷ್ಟು ಮಾಡಿ ಎಲ್ಲಾ ಮುಗಿಸಬೇಕು. ಎಷ್ಟು ಕಾಲಹರಣ ಮಾಡ್ತಿದ್ದೇನೆ. ಛೆ! ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಹೀಗೆ ಮಾಡಿದ ತೀರ್ಮಾನ ಎಲ್ಲಾ ಎಕ್ಕುಟ್ಟೋಯ್ತು.

ನಿಜ. ಈಗೊಂದು ಮೂರು ದಿನಗಳಿಂದ ತಲೆ ಎಲ್ಲಾ ಹಾಳಾಗೋಗಿತ್ತು. ಚಿಕ್ಕ ವಿಚಾರ. ಅದು ಸಂಶಯದ ರೂಪ ತಾಳಿತು ಯೋಚಿಸುತ್ತ. ಅದಕ್ಕೆ ಸಂಬಂಧಪಟ್ಟವರ ಹತ್ತಿರ ನೇರವಾಗಿ ಕೇಳಿ ಬಿಡಲೆ? ಕೇಳಿದರೆ ಅವರೇನಂದುಕೊಳ್ಳಬಹುದು. ಆರು ತಿಂಗಳಾಯಿತಲ್ಲ. ನೆನೆನೆನೆದು ಒಳಗೊಳಗೆ ಸಂಕಟ. ರಾತ್ರಿಯ ನಿದ್ದೆ ಸುಮಾರು ಮೂರು ಗಂಟೆಯವರೆಗೂ ತಿಂದಾಕಿತು. ಬೆಳಿಗ್ಗೆ ಸಡನ್ನಾಗಿ ಬೇಗ ಇದೇ ವಿಚಾರದಿಂದ ಎಚ್ಚರಾಗಿ ಮತ್ತದೆ ಅವಸ್ಥೆ. ಮಾಮೂಲಿ ವಾಡಿಕೆಯಂತೆ ದಿನ ನಿತ್ಯದ ಕಾರ್ಯ ಮಾಡುತ್ತ ಬಂದೆ. ಎಲ್ಲ ಮುಗಿಸಿ ಸರಿ ಇವತ್ತು ಏನಾದರಾಗಲಿ ಎಲ್ಲಾ ತಡಕಾಡಿ ಈ ವಿಚಾರಕ್ಕೆ ಸಂಬಂಧಪಟ್ಟ ಯಾವುದಾದರೂ ದಾಖಲೆ ಸಿಗಬಹುದೆ? ಅದನ್ನೂ ನೋಡಿದ್ದಾಯಿತು. ಮತ್ತೆ ಏನೊ ಸಿಕ್ಕಿತು. ಸರಿ. ಆದರೆ ಅಲ್ಲೂ ಒಂದು ಸಂಶಯ ಕಾಡುವುದು ಬಿಡಲಿಲ್ಲ. ಮತ್ತೆ ಮತ್ತೆ ಆ ಸಂದರ್ಭ ನೆನಪಿಸಿಕೊಳ್ಳುತ್ತ ರಾತ್ರಿ ಮಲಗಿದಾಗ ಸ್ವಲ್ಪ ಸ್ವಲ್ಪ ಅರ್ಥ ಆಗುತ್ತ ಹೋಯಿತು. ನಿದ್ದೆ ಯಾವಾಗ ಬಂತೊ ಗೊತ್ತಾಗಲಿಲ್ಲ. ಬೆಳಿಗ್ಗೆ ಬೇಗ ಎದ್ದು ಮನಸ್ಸಲ್ಲೆ ತೀರ್ಮಾನಿಸಿದೆ.

ಇವತ್ತು ಕಾರ್ತೀಕ ಸೋಮವಾರ. ಬೇಗ ಎಲ್ಲಾ ಮುಗಿಸಿ ಒಂದಷ್ಟು ಪರಮಾತ್ಮನ ಧ್ಯಾನ ಮಾಡೋಣ. ಮನಸ್ಸಿಗೊಂದಿಷ್ಟು ಸಮಾಧಾನ ಸಿಗಬಹುದು. ಒಂದಷ್ಟು ತಲೆಗೆ ಎಣ್ಣೆ ಸವರಿದಾಗ ತಲೆ ತಂಪೆನಿಸಿದರೂ ಮನಸ್ಸು ಕಾದೆ ಇತ್ತು. ಬಹಳ ಬಹಳ ಕಷ್ಟ ಆಗುತ್ತಿತ್ತು. ದೇಹ ಶುದ್ಧಿಯೊಂದಿಗೆ ದೇವರ ಮನೆಯಲ್ಲಿ ಒಂದಷ್ಟು ಹೊತ್ತು ಪೂಜೆನೂ ಆಯಿತು. ಸಾಯಂಕಾಲ ದೇವಸ್ಥಾನದಲ್ಲಿ ದೀಪ ಹಚ್ಚಿ ಬರುವ ತೀರ್ಮಾನ ಸಾಯಂಕಾಲವಾಗುತ್ತಿದ್ದಂತೆ ಮಕ ಅಡಿಯಾಯಿತು. ಬೇಡಾ ಏನೂ ಬೇಡಾ. ಮತ್ತದೆ ನಿರಾಸಕ್ತಿ. ನಿತ್ಯದಂತೆ ಮಾಮೂಲಿ ದೀಪ ಬೆಳಗಿ ಕೂತೆ.

ಯಾವುದಾದರೂ ಮನಸ್ಸಿಗೆ ಹಿತ ನೀಡುವ ಪುಸ್ತಕ ಓದೋಣ. ಆಧ್ಯಾತ್ಮಿಕಕ್ಕೆ ಸಂಬಂಧಿಸಿದ್ದು. ಕಪಾಟಿಂದ ತೆಗೆದು ಎರಡು ಪುಟ ಓದೋದರಲ್ಲೆ ಬೇಡಾ. ಟೀವಿ ಬೇಡಾ. ಬರೆದೆ ಒಂದು ನಾಲ್ಕು ಸಾಲು ಯಾವುದೋ ಸ್ಪರ್ಧೆಯಲ್ಲಿ ಭಾಗವಹಿಸಲು ಕನಿಷ್ಟ ಐದು ಬರಹ ಕಳಿಸಿ ಅಂದಿದ್ದಾರೆ. ಈ ತಿಂಗಳು ಕೊನೆ ಅಂದುಕೊಂಡಿದ್ದೆ. ಮೇಲ್ ನೋಡಿದಾಗ ಗೊತ್ತಾಯಿತು ನವೆಂಬರ್ ಐದರವರೆಗೂ ಸಮಯವಿದೆ. ಸರಿ ಅದಲ್ಲಿಗೆ ಬಿಟ್ಟೆ. ಏನು ಮಾಡಲಿ? ಏನು ಮಾಡಲಿ?

ಯಾರತ್ರಾದರೂ ಮಾತನಾಡಿದರೆ. ಫೋನ್ ರಿಂಗಾಯಿತು ಅದ್ಯಾವ ಕೆಲಸದಲ್ಲಿರುವರೊ. ಉತ್ತರವಿಲ್ಲ. ಚಾಟ್ ಮಾಡಿದರೂ ಪ್ರತಿಕ್ರಿಯೆ ಇಲ್ಲ. ಪಕ್ಕದ ಮನೆಯವರ ಹತ್ತಿರ ಒಂದಷ್ಟು ಬೇಡಾಗಿದ್ದು ಹರಟಿದ್ದೂ ಆಯಿತು. ಊಹೂಂ ತಲೆ ಸರಿಯಾಗ್ತಿಲ್ಲ. ಮನಸ್ಸು ಹೇಳಿದ ಮಾತು ಕೇಳ್ತಿಲ್ಲ. ಬಹಳ ಹಠ ಮಾಡ್ತಿದೆ. ಎರಡು ದಿನಗಳಿಂದ ಬಿದ್ದಲ್ಲೆ ಇದ್ದ ಪೇಪರ್ ಕಾಟಾಚಾರಕ್ಕೆ ಓದಿ ಮುಗಿಸಿದೆ. ಓದಿ ಆಗೋದೇನಿದೆ? ಮನಸ್ಸು ಹೇಳಿತು. ಸುಮ್ಮನೆ ಕುಳಿತೆ.

ಮತ್ತೆ? ….!!!!  ನಿದ್ದೆ ಗೆಟ್ಟು ಎರಡು ದಿನದಿಂದ ನಿದ್ದೆ ಎಳೀತಾ ಇತ್ತು. ಒಂದಷ್ಟು ತಿಂದು ಬೇಗ ಮಲಗಿದೆ.

ಅಲ್ಲಾ ಮನಸೆ ಬಿಟ್ಟಾಕು ಬಂದ ವಿಚಾರ. ದುಡ್ಡು ತಾನೆ. ಕೊಟ್ಟಿದಾರೊ ಬಿಟ್ಟಿದ್ದಾರೊ. ಹೋದರೆ ಹೋಗಲಿ. ಕೊಟ್ಟಿದ್ದಾರೆ ಅಂತ positive ಆಗೆ ಯೋಚಿಸು. ಬರಬೇಕು ಅಂತಿದ್ದರೆ ಹೇಗಾದರೂ ಬರುತ್ತದೆ. ಅಷ್ಟಕ್ಕೂ ಈ ದುಡ್ಡು ಸಾಯೋತನಕ ಸಾಕಾ? ನಿನ್ನದೇ ತಪ್ಪು. ಆ ಸಂದರ್ಭದಲ್ಲಿ ಕಾಳಜಿವಹಿಸಿ ಸರಿಯಾಗಿ ಬರೆದಿಟ್ಟುಕೊಳ್ಳಬೇಕಿತ್ತು. ನೋಟ್ ಮಾಡಿಕೊಂಡಿದ್ದೀಯಾ. ಸರಿ. ಅದೂ ನೆಟ್ಟಗೆ ಬರದಿಲ್ಲ. ನೀ ಬರಕೊಂಡಿದ್ದೆ ನಿನಗೆ ಸಂಶಯ ಬರೋ ಹಾಗೆ ಆಗಿದೆ. ಇದು ನಿನ್ನದೆ ತಪ್ಪಲ್ವಾ? ಸರಿ ಕೇಳಿದೆ ಅಂತಿಟ್ಟುಕೊ. ಅವರು ನಾನು ಕೊಟ್ಟಿದ್ದೇನೆ ಅಂದರೆ ಏನು ಮಾಡ್ತೀಯಾ? ಇದರಿಂದ ಅವಮಾನ ಆಗೋದು ನಿನಗೇ ಅಲ್ವಾ? ಸರಿಯಾದ ಪ್ರೂಪ್ ಇಲ್ಲದೆ ಬೇರೆಯವರ ಮೇಲೆ ಸಂಶಯ ಪಡೋದು ತಪ್ಪು. ಅರ್ಥ ಮಾಡಿಕೊ.

ಹೀಗೆ ನನ್ನ ಮನಸ್ಸಿಗೆ ನಾನೆ ಸಮಾಧಾನ ಮಾಡ್ತಾ ಬಂದೆ ಮಲಗಿದಲ್ಲೆ. ಒಂದು ಹಂತದಲ್ಲಿ ಮನಸ್ಸಿಗೆ ಸ್ವಲ್ಪ ಸ್ವಲ್ಪ ಸಮಾಧಾನ ಆಗುತ್ತ ಬಂತು. ಅವರ ಬಗ್ಗೆ positive think ಮಾಡಲು ಶುರುಮಾಡಿತು. ನಿದ್ದೆ ಕಣ್ಣು ಮುಚ್ಚಿದ್ದು ಗೊತ್ತಾಗಲಿಲ್ಲ. ಬೆಳಿಗ್ಗೆ ಅವರನ್ನು ಭೇಟಿಯಾಗಿ ಸ್ವಲ್ಪ ಹೊತ್ತು ಅದೂ ಇದೂ ಕುಷಲೋಪರಿ ಮಾತಾಡಿ ಬಂದೆ. ಮನಸ್ಸು ತಿಳಿಯಾಯ್ತು. ಆದರೆ ದುಡ್ಡಿನ ವಿಚಾರ ಕೇಳಲಿಲ್ಲ.

ಈ ಧನಾತ್ಮಕ ಯೋಚನೆ, ಭೇಟಿ, ಮಾತು ಮನಸ್ಸು ಎಷ್ಟು ತಿಳಿಯಾಯಿತು ಅಂದರೆ ಕೂಡಲೇ ಎಲ್ಲಾ ಬರಿಬೇಕೆಂಬ ಮನಸ್ಸಿನ ಮಾತಿಗೆ ಮಣಿದು ಬರೆಯಲು ಕೂತೆ. ಬೇಜಾರಿಗೆ ಕಾರಣಗಳನ್ನು ನಾವೇ ಸೃಷ್ಟಿ ಮಾಡಿಕೊಂಡು ಮತ್ತೆ ಮತ್ತೆ ಒದ್ದಾಡೋದು. ತಿಳಿಯಾದ ಮೇಲೆ ನಮ್ಮ ನಡತೆಗೆ ನಾವೇ ವ್ಯಥೆ ಪಡೋದು. ಇದೆಲ್ಲ ಬೇಕಾ??

ಅರ್ಥವಿಲ್ಲದ ರಾತ್ರಿಗಳು
ಆಕಾರ ತಳೆಯುತ್ತವೆ
ಆಗಾಗ ಕದಂಬ ಬಾಹು ಬಾಚಿ
ಕಣ್ಣ ರೆಪ್ಪೆ ಬಿಚ್ಚಲೂ ಆಗದೆ
ಮುಚ್ಚಲೂ ಆಗದೆ
ನಾವೇ ಸೃಷ್ಟಿಸಿಕೊಂಡ
ಹುಚ್ಚು ಯೋಚನೆ
ಮನಸ್ಸು ಮುತ್ತಲು
ಮತ್ತದೆ ಪರದಾಟ
ಯಾಕೊ ನಿದ್ದೆ ಬರ್ತಿಲ್ಲ
ಯಾಕೊಷ ನಿದ್ದೆ ಬರ್ತಿಲ್ಲ.

ಹಳಿಯುವುದು ಪರರ
ತನ್ನ ತಪ್ಪ ತಾ ತಿಳಿಯದೆ
ಸಂಶಯದ ತಾಕಲಾಟ
ಒಳಗೊಳಗೆ ತಿಣುಕಾಟ
ಕೇಳಲು ಹಿಂದೇಟು
ಸಾಕ್ಷಿ ಪುರಾವೆಯಿಲ್ಲ
ಮತ್ಯಾಕೀ ಒಣ ವಿಚಾರ
ಬಿಟ್ಟಾಕು ಮನಸೆ
ಮನಸ ಮನಸ ಅರಿ
ಮನುಜರೊಳಗೊಂದಾಗಿ ನಡೆ
ಹಣ ಐಶ್ವರ್ಯ ಶಾಶ್ವತವಲ್ಲ
ಋಣಾತ್ಮಕ ಯೋಜನೆ
ನೆಮ್ಮದಿಯ ಬುನಾದಿ
ಅದಿಲ್ಲದಿದ್ದರೆ ಸಂಬಂಧ ಸಮಾಧಿ!

ಮುಂದುವರಿಯುವುದು.
31-10-2017. 10.17am.

ಬೇಜಾರು….!!(ಭಾಗ-3)

ಬೆಳಂಬೆಳಗ್ಗೆ ನನ್ನ ದಿನಚರಿ ಮುಗಿಸಿ ಅಡಿಗೆ ಮನೆಗೆ ಕಾಲಿಕ್ಕಿಲ್ಲ ಆಗಲೆ ಮಗಳೆದ್ದು “ಅಮ್ಮಾ ನನಗೆ ಅದು ಬೇಕು ಇದು ರೆಡಿಯಾಗಿದೆಯಾ” ಪ್ರಶ್ನೆಗಳು ಕಿವಿ ತಟ್ಟಿದವು. ತಿಳಿದಿರುವ ಮನಸಿಗೆ ಆಗಲೆ ಒಂದೆರಡು ದಿನದಿಂದ ಸಣ್ಣದಾಗಿ ಆತಂಕ ಶುರುವಾಗಿತ್ತು. ಸೂಕ್ಷ್ಮವಾಗಿ ಮಗಳೊಂದಿಗೆ ಹೇಳಿಕೊಂಡರೂ ಅದವಳ ಕಿವಿಗೆ ನಾಟಲೇ ಇಲ್ಲ. ಇನ್ನೇನು ಇದ್ದಾನಲ್ಲ ಆಪದ್ಭಾಂದವ!

ಸರಿ ಇವತ್ತೇಗಿದ್ರೂ ಮಂಗಳವಾರ. ಗಣೇಶ ದೇವಸ್ಥಾನಕ್ಕೆ ಹೋಗಿ ಕಾಪಾಡಪ್ಪಾ ಮಗಳನ್ನು ಅಂತ ಒಂದು ಹಣ್ಣುಕಾಯಿ ಅರ್ಚನೆ ಮಾಡಿಸಿಕೊಂಡು ಬರೋದೆ ಎಂದು ನಿರ್ಧರಿಸಿದೆ. ಎಲ್ಲಾ ತಯಾರಿಯೊಂದಿಗೆ ಮುಕ್ಕಾಲು ಕೀ.ಮೀ. ಇರುವ ದೇವಸ್ಥಾನಕ್ಕೆ ನಡೆದೆ ಹೋಗುವಾ. ಸ್ವಲ್ಪ ನಡೆದಂತಾಗುತ್ತದೆ ಎಂದು ಹೋದೆ.

ದೇವನ ದರ್ಶನ ಮಾಡಿ ಹಣ್ಣು ಕಾಯಿ ಬುಟ್ಟಿ ದೇವರ ಮುಂದೆ ಇಟ್ಟು ಅರ್ಚನೆ ಚೀಟಿ ತರುವಷ್ಕರಲ್ಲಿನ್ನೂ ಭಟ್ಟರು ಅವರ ಕೆಲಸದಲ್ಲಿ ಮಗ್ನವಾಗಿದ್ದು ಕಂಡೆ. ಹತ್ತು ನಿಮಿಷದಲ್ಲಿ ಮತ್ತೊಂದಷ್ಟು ಜನರ ಆಗಮನ ಅರ್ಚನೆ ಚೀಟಿಯೊಂದಿಗೆ. ಈ ನಡುವೆ ಬೆಳಗಿನ ಅಭಿಷೇಕಕ್ಕೆ ಕೊಟ್ಟ ಚೀಟಿಯವರಿಗೆ ಮೊದಲ ಆಧ್ಯತೆ ಒಂದೆರಡು ಜನಕ್ಕಾಯಿತು. ಮತ್ತದೇ ಅಭಿಷೇಕ ಚೀಟಿಯವರದೊಂದು ಸಂಸಾರ ಆಗಮನ. ಆಯಿತು ಅವರಿಗೆ ಮೊದಲ ಆಧ್ಯತೆ ಪರಿಣಾಮ ಮತ್ತೆ ಕಾಯುವ ಸರಧಿ. ಕಾರಣ ಅಲ್ಲೆಲ್ಲೊ ಇದ್ದ ಪ್ರಸಾದ ಡಬ್ಬಿಗೆ ತುಂಬಿ ಒಂದ ಕಾಯಿ ಜುಟ್ಟೆಲ್ಲ ತೆಗೆದು ಒಡೆದು ದೇವರ ಮುಂದಿಟ್ಟು ಅವರಿಗೆ ಸಂಕಲ್ಪ ಮೊದಲು ಮಾಡಿ ನಂತರ ಉಳಿದ ನಮ್ಮೆಲ್ಲರ ಸಂಕಲ್ಪ ಆಯಿತು.

ಆದರೆ ನಾನಿಟ್ಟ ಹಣ್ಣು ಕಾಯಿ ಬುಟ್ಟಿ ಮಾತ್ರ ಕದಲಲಿಲ್ಲ. ಹಿಂದೊಮ್ಮೆ ಇದೇ ಅನುಭವ. ಸರಿ ಇವರದ್ದೆಲ್ಲ ಮುಗಿಲಿ ಗರ್ಭಗುಡಿಯ ಪ್ರದಕ್ಷಿಣೆ ಐದಾಕಿ ಮತ್ತೆ ನಿಂತೆ ದೇವನ ಮುಂದೆ. ಮತ್ತದೆ ಅರ್ಚನೆ ಮಂಗಳಾರತಿ ತಟ್ಟೆ ನನ್ನ ಮುಂದೆ ತಂದಾಗ ಅಂದೆ ” ಹಣ್ಣು ಕಾಯಿ ನೈವೇಧ್ಯ ಮಾಡಿ. ಆಮೇಲೆ ಆರತಿ ತಗೋತೇನೆ.”

“ಅದೆಲ್ಲ ಮನೆಯಲ್ಲಿ ಕ್ರಮ. ಇಲ್ಲಿ ಒಬ್ಬೊಬ್ಬರದು ಮಾಡೋಕೆ ಆಗೋದಿಲ್ಲ. ಕಾಯಬೇಕು.”

ಆಗಲೆ ಮುಕ್ಕಾಲು ಗಂಟೆ ಆಗಿದೆ ಬಂದು. ಇನ್ನೇನು? ” ಸರಿ ಕಾಯ್ತೇನೆ. ನೀವು ನಿಮ್ಮ ಕ್ರಮ ಮಾಡಿ. ನಾನು ಕೂತಿರುತ್ತೇನೆ. ನನಗೆ ನನ್ನ ಕ್ರಮ ಮುಖ್ಯ. ಸದಾ ಬರುವವಳಲ್ಲ. ಇಂದು ಮಂಗಳವಾರ. ಒಂದು ಉದ್ದೇಶ ಇದ್ದಿದ್ದರಿಂದ ಪೂಜೆ ಮಾಡಿಸಲು ಬಂದಿರುವುದು.” ಅಂದೆ.

ಅವರಿಗೆ ಸ್ವಲ್ಪ ಕಸಿವಿಸಿಯಾಯಿತು ಅನಿಸುತ್ತದೆ ನನ್ನ ಮಾತು ಕೇಳಿ. ಕಾರಣ ಸುಮಾರು ಹದಿನಾರು ವರ್ಷಗಳಿಂದ ಏನಿದ್ದರೂ ಇದೇ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರೋದು. ಸುಮಾರು ಹತ್ತು ವರ್ಷಗಳಿಂದ ಪರಿಚಯ ಇವರದ್ದು. ಕೇವಲ ಚಿಕ್ಕ ಗುಡಿಯಂತಿದ್ದ ದೇವಸ್ಥಾನ ಇವತ್ತು ಸಕಲ ಅಭಿವೃದ್ಧಿ ಹೊಂದಿ ಸುತ್ತಮುತ್ತಲಿನ ಜನರನ್ನು ಸೆಳೆಯುತ್ತಿದೆ. ಬೆಳೆದಿದೆ??

“ಹಾಗಂದರೆ ಹೇಗೆ? ಮಾಡಿಕೊಡುತ್ತೇನೆ. ಅದಕ್ಕಲ್ಲ. ದೇವಸ್ಥಾನ ತೆರೆದು ಅರ್ಚನೆ ಮಂಗಳಾರತಿ ಒಮ್ಮೆ ಮಾಡಿದರೆ ಆಯಿತು. ಆಮೇಲೆ ಒಬ್ಬೊಬ್ಬರಿಗೂ ಮಾಡುವುದಿಲ್ಲ.” ಅಂತಂದು ಕುಂಕುಮಾರ್ಚನೆ ಹಣ್ಣು ಕಾಯಿ ನೈವೇದ್ಯ ಮಾಡಿ ಮಂಗಳಾರತಿ ಕೊಟ್ಟರು. “ಸಂಕಲ್ಪ ಸಿದ್ಧಿರಸ್ತು. ಇಷ್ಟ ಸಂಕಲ್ಪ ಪ್ರಾಪ್ತಿರಸ್ತು.” ಬಾಯಿ ಮಂತ್ರ ಹೇಳುತ್ತಿತ್ತು. ಆದರೆ ಅವರ ಮನಸ್ಸು ಏನು ಹೇಳುತ್ತಿತ್ತೊ ಗೊತ್ತಿಲ್ಲ!

ಇಲ್ಲಿ ನನಗೊಂದು ಅರ್ಥ ಆಗುವುದಿಲ್ಲ. ಅಭಿಷೇಕ ಮಾಡಿಸಿದವರಿಗೆ ಎಲ್ಲೊ ಇದ್ದ ತೆಂಗಿನಕಾಯಿ ತಂದು ಒಡೆಯಲು ಸಾಧ್ಯವಾಗುತ್ತಿರುವಾಗ ಮುಂದಿಟ್ಟ ಭಕ್ತರ ಹಣ್ಣು ಕಾಯಿ ನೈವೇದ್ಯ ಯಾಕೆ ಮಾಡಲು ಸಮಯವಿಲ್ಲ, ಮನಸ್ಸಿಲ್ಲ. ಯಾವತ್ತೊ ಒಮ್ಮೆ ದೇವಸ್ಥಾನಕ್ಕೆ ಹೋಗುವ ನನಗೆ ಮನಸ್ಸು ಹೋಗು ಇವತ್ತು ಅಂತು. ಹೋದೆ ಏನೇನೊ ಒಂದಷ್ಟು ಸಂಕಲ್ಪ ಹೊತ್ತು ಅವನ ಸನ್ನಿಧಿಯಲ್ಲಿ ಸ್ವಲ್ಪ ಹೊತ್ತು ಇದ್ದು ಬರಲು. ಆದರೀಗಾಗಿ ಮನಸ್ಸೆಲ್ಲಾ ಮ್ಲಾನವಾಯಿತು. ಖಿನ್ನನಾದೆ.

ಇದಕ್ಕೆ ಹೇಳೋದಾ “ದೇವರು ಕೊಟ್ಟರೂ ಪೂಜಾರಿ ಕೊಡಾ”.

ನನ್ನ ಕಾಲುಗಳು ಸ್ವಲ್ಪ ನೋವಿನಲ್ಲಿ ಮನೆಯತ್ತ ಹೆಜ್ಜೆ ಹಾಕಿದರೂ ಮನಸ್ಸು ಇನ್ನೂ ದೇವಸ್ಥಾನದ ಸುತ್ತಮುತ್ತಲೆ ಅಲೆದಾಡುತ್ತಿತ್ತು. ಕುಳಿತ ಮುದ್ದಾದ ಪುಟ್ಟ ಗಣೇಶನ ಅಂದಿನ ಚಿತ್ರ ಕಣ್ಣ ಮುಂದೆ, ಶಾಸ್ತ್ರೋಕ್ತವಾಗಿ ಮಾಡುವ ಅಂದಿನ ಪೂಜೆ. ಇದೇ ಮಗಳು ಚಿಕ್ಕವಳಂದು. ಅದೆಷ್ಟು ಭಕ್ತಿಯಿಂದ ಬರ್ತಾ ಇದ್ಲು ಹೋಗೋಣ ಅಂದಾಗೆಲ್ಲ. ಬೆಳಿತಾ ಬೆಳಿತಾ ಸಾಕಷ್ಟು ಕಹಿ ಅನುಭವ ದೇವಸ್ಥಾನಗಳ ವಾತಾವರಣ. ಬಾರೆ ಅಂದರೀಗ ನೀ ಹೋಗು.

ಮನೆ ದೇವರ ಮುಂದೆ ಪ್ರಸಾದದೊಂದಿಗಿನ ಬುಟ್ಟಿ ಇಟ್ಟು ಒಂದು ಉದ್ದಂಡ ನಮಸ್ಕಾರ ಹಾಕಿದೆ. “ಪರಮಾತ್ಮ ನನ್ನ ಮಗಳ ಕಾಪಾಡು. ದೂರದ ದೇಶಕ್ಕೆ ಹೋಗುತ್ತಿದ್ದಾಳೆ. ಸುರಕ್ಷಿತವಾಗಿ ಮನೆಗೆ ವಾಪಸ್ಸು ಬರುವಂತೆ ಮಾಡು. ನಿನ್ನನ್ನೇ ನಂಬಿದ್ದೇನೆ.”

ಕಾರಣ ದೇವಸ್ಥಾನದಲ್ಲಿ ಎಲ್ಲಾ ಮರೆತೆ ಈ ಅವಾಂತರದಲ್ಲಿ. ಈ ಮನಸ್ಸಿಗೆ ಬೇಸರ ಬೇಜಾರು ಎರಡೂ ಒಟ್ಟೊಟ್ಟಿಗೆ ಆಗಿ ಬೇಜಾರಿಗೆ ಕಾರಣ ಇನ್ನೊಂದು ವಿಷಯ ಸಿಕ್ಕು ಮತ್ತೆ ಬರೆಯುವಂತಾಯಿತು.

ದೇವರ ಗುಡಿಯನೊಮ್ಮೆನಾ ಸುತ್ತಾಡಿ ಬರುವೆ
ಅರಿಯದ ಕಂದನ ತೆರದಿ ಪಿಳಿ ಪಿಳಿ ಕಣ್ಣ ಬಿಟ್ಟು
ಮನದೊಳಗಿನ ಮಂತ್ರ ನೆನಪಿಸಿಕೊಳ್ಳಲಾಗದೆ
ಜನರ ನೋಡ ನೋಡುತ್ತಿದ್ದಂತೆ ಮಂಗ ಮಾಯವಾಗಿ.

ಅಂಗೈ ಅಗಲದ ಹೃದಯದ ತುಂಬ ಕೊಂಚಹೊತ್ತಿರಬೇಕೆಂಬಾಸೆ
ಸ್ಪುಟಿಸಿದ ಭಕ್ತಿ ಭಾವ ಬೇಡಿಕೆಯೆಲ್ಲ ಮರೆತು ಬರುವೆ
ಜಗಮಗಿಸುವ ಬೆಳಕ ಮಾಲೆ, ಆಡಂಬರದಲಂಕಾರ,ಓಡಾಟ
ಗಡಚಿಕ್ಕುವ ಮೈಕಿನಾರ್ಭಟ ಪೂಜಾರಿಯ ಗಡಿಬಿಡಿಗೆ ಸೋತು.

ಗುಡಿ ಸುತ್ತುವ ಕಾಲ್ಗಳು ಹರಕೆ ಕುರಿಯಂತಾಗಿ
ಲೆಕ್ಕದ ಪ್ರದಕ್ಷಿಣೆ ಒಟ್ಟಾರೆ ಶಾಸ್ತ್ರಕ್ಕೆ ಮಣಿದು ಸರಿದೂಗಿಸಿ
ಅಡ್ಡ ಬಿದ್ದ ದೇಹ ಮನಸ್ಸು ಮನೆ ಸೇರಿ ಕೇಳುತ್ತದೆ
ಮನದ ಮೂಲೆಯ ಭಕ್ತಿಗೆ ಪೂಜೆಗೆ ಗುಡಿನೇ ಬೇಕಾ?

ಮನದೊಳಗಿನ ಅಳುಕು ಗುಡಿಯತ್ತ ನಡೆದು
ಸಮಾಜಕ್ಕೊ ಸೋಗಿಗೊ ಅಪ್ಪ ನೆಟ್ಟಾಲದಮರಕೆ ಜೋತೊ
ಒಟ್ಟಿನಲ್ಲಿ ಆವರಣದ ಬಾಗಿಲಲ್ಲೇ ಎಲ್ಲ ಮರೆತು
ಅರ್ಥವಿಲ್ಲದ ಪೂಜೆಯೆಸರ ಅನಾವರಣ ಪ್ರತಿ ಭೇಟಿ.

ದೇವಾಲಯದೊಳಗೊಕ್ಕು ಮನದಾಲಯದ ಪ್ರಶಾಂತತೆಯಲಿ
ಪರಾಕಾಷ್ಠೆಯ ಭಕ್ತಿಯ ಪೂಜೆ ಮಾಡಬೇಕೆನ್ನುವ ಮನಕೆ
ನಿರಾಸೆಯ ಕಂಡುಂಡ ಜಡತ್ವವೇ ಪತಾಕೆ ಹಾರಿಸುತಿರಲು
ಅನಿಸುವುದು ಅದಾವಾಲಯ ಬೇಕು ಮನೆಯೆಂಬ ಆಲಯವಿರಲು!

ಮುಂದುವರಿಯುವುದು.

26-10-2017. 12.46pm

ಬೇಜಾರು…!!(ಭಾಗ-2)

ರಾತ್ರಿಯ ನಿರವ ಮೌನ. ದಿಂಬಿಗೆ ತಲೆ ಕೊಟ್ಟು ಅದೆಷ್ಟು ಹೊತ್ತಾಯಿತು. ನಿದ್ದೆ ಹತ್ತಿರ ಸುಳಿಯವಲ್ಲದು. ಮನಸ್ಸು ಏನೇನೊ ತಿವೀಕ್ರಮ ಸಾಧಿಸುವ ಯೋಚನೆಯಲ್ಲಿ ನನ್ನ ಬೇಗ ಮಲಗು ಬೇಗ ಎದ್ದೇಳು ಅಂತ ಮಾಮೂಲಿ ದಿನಕ್ಕಿಂತ ಕೊಂಚ ಏನು ಸುಮಾರು ಬೇಗನೆ ಮಲಗಿಸಿತ್ತು. ತಲೆ ತುಂಬಾ ಹಾಳಾದ್ದು ಯೋಚನೆಗಳು ಬೇಡ ಬೇಡಾ ಎಂದರೂ ಮಲಗಿದಾಗಲೆ ಬಂದು ವಕ್ಕರಿಸಿಕೊಳ್ಳುವುದು. ಒಂದಕ್ಕೊಂದು ಕೊಂಡಿ. ಸಮಸ್ಯೆಗಳು ನಾ ಮೊದಲು ಬರ್ಲಾ ನೀ ಮೊದಲು ಹೋಗ್ತೀಯಾ ಎಂದು ತಮ್ಮ ತಮ್ಮಲ್ಲೆ ಕಿಚಾಯಿಸಿಕೊಳ್ಳುತ್ತವೆ. ಅಚ್ಚಿಗೊಳ್ಳಿ ಇಚ್ಚಿಗೊಳ್ಳಿ ಕತ್ತು ನೋವು ಬಂದು ದಿಂಬು ತೆಗೆದು ಪಕ್ಕಕ್ಕೆ ಬಿಸಾಕಿದ್ದು ಇವತ್ತೊಂದೆ ಅಲ್ಲ ಸಾಕಷ್ಟು ದಿನ ಮಾಡಿಯಾಗಿದೆ. ಲೆಕ್ಕ ಇಟ್ಟಿಲ್ಲ. ಇದೆಲ್ಲ ಮಾಮೂಲು ಈ ಅವಸ್ಥೆಯಲ್ಲಿ. ಆದರೆ ಇವತ್ತು ಸ್ಪೆಷಲ್ ಅಂತ ನನ್ನ ಭಾವನೆ.

ಬರಿತಾ ಬರಿತಾ ಶ್ರೀ ಕೃಷ್ಣ ಪರಮಾತ್ಮನ ಮಾತು ನಾನೂ ಜಾರಿಗೆ ತರಬೇಕು ಅನ್ನೋ ನಿರ್ಧಾರ ಮನಸ್ಸು ಹೇಳಿದ್ದೇನೊ ಸರಿ. ಅದರ ಹಿಂದೆ ಹಿಂದೆ ಮಕ ಅಡಿಯಾಗೊ ಲಕ್ಷಣ ಒದ್ದೋಡಿಸಿಕೊಂಡು ಬರುತ್ತಿದೆ. ಯಾಕೆಂದರೆ ಕಡ್ಡಿ ಗುಡ್ಡ ಮಾಡಿ ಅದೇ ಚಿಂತೆಯಲ್ಲಿ ಒದ್ದಾಡಿ ಬರೊ ನಿದ್ದೆನೂ ಹಾಳ್ ಮಾಡಿ ಕೊನೆಗೆ ಉರಿ ಕಣ್ಣಲ್ಲಿ ಓದೋಕೂ ಆಗದೆ ರಾತ್ರಿ ತಿಂದ ಚಪಾತಿನೊ ಮುದ್ದೆನೊ ಎಂತದೊ ಒಂದು ಎಲ್ಲಾ ಜಾಗರಣೆಯಲ್ಲಿ ಸೊರಗಿ ಹಸಿವು ಲಭೊ ಲಭೊ ಅಂದು ಮತ್ತದೆ ಅಡಿಗೆ ಮನೆಗೆ ಬೆಕ್ಕಿನಂತೆ ಸೇರಿ ಮೆಲ್ಲಗೆ ಡಬ್ಬಾ ಮುಚ್ಚಲಾ ತೆಗಿವಾಗೆಲ್ಲ ಮಗಳ ಮಾತು ಜ್ಞಾಪಕಕ್ಕೆ ಬಂದು ಕಿಸಕ್ಕನೆ ನಕ್ಕು ಥ್ಯಾಂಕ್ಸ್ ಮಗಳೆ ನೀ ಅಂದಿದ್ದು ನಿಜಾ.

“ಅಮ್ಮಾ ಮನೆಯಲ್ಲಿ ಯಾವಾಗಲೂ ತಿಂಡಿ ಏನಾದರೂ ಇಟ್ಕೊಂಡಿರು, ಆಮೇಲೆ ಏನೂ ಸಿಕ್ಕಲಿಲ್ಲ ರಾತ್ರಿ ನಿದ್ದೆ ಬರದೆ ಹಸಿವಾದಾಗ. ಅದಕ್ಕೆ ಚಾಕಲೆಟ್ ತಿಂದೆ ಅಂತ ಸುಳ್ಳು ನೆಪ ಹೇಳ್ಬೇಡಾ. ನೀ ಹಿಂಗೆಲ್ಲಾ ಮಾಡಿದರೆ ಮನೆಗೆ ಚಾಕ್ಲೆಟ್ ತರೋದೆ ಇಲ್ಲ. ಆಫೀಸ್ನಲ್ಲಿ ಸಿಗೋದೆಲ್ಲ ಅಲ್ಲೆ ಹಂಚಿ ಬಂದ್ಬಿಡ್ತೀನಿ ನೋಡು. ಕಳ್ಳೀ…” ಹಂಗೂ ಕದ್ದು ತಿಂದಿದ್ದು ಅವಳಿಗೆ ಗೊತ್ತೇ ಆಗೋಲ್ಲ. ಹಿ… ಹಿ…

ನಿಶಾಚರಳಂತೆ ರಾತ್ರಿ ಪಯಣ ತನ್ನಷ್ಟಕ್ಕೆ ನಡೀತಾ ಇದ್ರೂ ಈ ಮನಸಿಗೆ ಮಾತ್ರ ಬೇಜಾರು ಹೇಳೋದೆ ಇಲ್ಲ. ಈಗೊಂದು ಎರಡು ಮೂರು ವರ್ಷಗಳಿಂದ ಇರಬಹುದು. ಬರೆಯೊ ಹುಚ್ಚು ಹಿಡಿದು ಹೊತ್ತಿಲ್ಲ ಗೊತ್ತಿಲ್ಲ. ಗೀಚತಾ ಗೀಚತಾ ಗಂಟೆ ಏನು ನಿದ್ದೆನೂ ಮರೆತು ಹೊತ್ತೊತ್ತಿಗೆ ನಿದ್ದೆ ಮಾಡೋದು ಎಕ್ಕುಟ್ಟೋಗಿದೆ. ಅದು ರೂಢಿನೂ ಆಗಿ ರಾತ್ರಿ ಒಬ್ಬಳೆ ಕಳೆಯೋದು ನಂಗೇನು ಬೇಜಾರಿಲ್ಲಪ್ಪಾ ಅನ್ನುತ್ತೆ ಮನಸ್ಸು.  ಸರಿ ಹೋಯ್ತು.  ರೋಗಿ ಬಯಸಿದ್ದೂ ಹಾಲು ವೈದ್ಯ ಹೇಳಿದ್ದೂ ಹಾಲು. ಖಂಡಿತಾ ಈ ಅವಸ್ಥೆ ನನಗೆ ಫೆವಿಕಾಲಂತೆ ಅಂಟಿಕೊಂಡು ಬಿಟ್ಟಿದೆ.  ತಲೆಗೆ ಬಂದ ವಿಷಯ ಅದೇನೆ ಇರಲಿ, ಎಷ್ಟೊತ್ತಾದರೂ ಆಗಲಿ ಬರೆದು ಮುಗಿಸಲೇ ಬೇಕು. ಕೊನೆಯಲ್ಲಿ ದಿನಾಂಕ, ಸಮಯ ಅಚ್ಚೊತ್ತಿ ಮತ್ತೊಮ್ಮೆ ಮಗದೊಮ್ಮೆ ಓದಿ, ಖುಷಿಯಾಗಿ, ಮುಗುಳ್ನಕ್ಕು ಅದಕ್ಕೆ ತಕ್ಕ ಚಿತ್ರ ಗೂಗಲ್ಲೆಲ್ಲಾ ಹುಡಕಿ ಬ್ಲಾಗಾಯಣದಲ್ಲಿ ಹಾಕಿ ಮತ್ತಲ್ಲಿ ಬಂದು ನೋಡಿ ನನ್ನ ಬೆನ್ನು ನಾನೆ ತಟ್ಟ್ಕೊಂಡೂ^^^^^^! ಇಷ್ಟೆಲ್ಲಾ ಮಾಡುವುದು ಈ ಮನಸಿಗದೆಷ್ಟು ಆತುರ,ತಾಳ್ಮೆ, ಗಡಿಬಿಡಿ,ಸಂತಸ,ಸಂಭ್ರಮ. ಏನ್ ಕೇಳ್ತೀರಾ? ಆಹಾ! ಜೀವನ ನಂದನವನವಂತೆ!😊

ಆಗೆಲ್ಲಾ ನನಗೆ ಮಲಗಿದಾಗ ಯೋಚನೆ ಬೆಳಗ್ಗೆ ಹೇಗಪ್ಪಾ ಬೇಗ ಏಳೋದೂ? ಕಣ್ಣು ಕೂಡ್ತಾ ಕೂಡ್ತಾ ಹಂಗಂಗೆ ಹೇಳುವ ಮಾತು ಮನಸಿನದು ” ಸ್ವಲ್ಪ ಲೇಟಾಗಿ ಎದ್ದರಾಯ್ತಪ್ಪಾ. ಅದರಲ್ಲೇನು? ಇಡೀ ದಿನ ಮನೆಯಲ್ಲಿ ತಾನೆ ಇರೋದು. ಮಾಡ್ಕೊ ನಿಂಗೆ ಬೇಕಾಗಿದ್ದೆಲ್ಲ.. ಅದೆ ವಾಕಿಂಗೂ, ಯೋಗ ಅದೂ ಇದೂ.” ಹೀಂಗಂದಿದ್ದೆ ತಡ ಹಾರೊ ಮಂಗನಿಗೆ ಏಣಿ ಹಾಕೊಟ್ಟಂತಾಗಿ ಪೊಗದಸ್ತಾಗಿ ಢಣ್ ಅನ್ನದ ಗಂಟೆ ಎಬ್ಬಿಸೋರು ಯಾರಿಲ್ಲದಾಗ ಹಗಲೆಂಟಾದರೂ ನಿದ್ದೆ ಹೋದ ದಿನ ಎಷ್ಟಿವೆಯೊ! ಆದರೆ ನನ್ನ ಬಂಟಾ ಕುಯ್ ಕುಯ್ ಅಂದ ದಿನ ಹಗಲೆಲ್ಲ ಮೆಳ್ಳೆ ಗಣ್ಣು ಮತ್ತದೆ ಬೇಜಾರು ಸೋಂಬೇರಿತನ.

ಹಾಂ, ಈಗ ಸಿಕ್ಕಿತು ಬೇಜಾರಿಗೆ ಇನ್ನೊಂದು ಕಾರಣ. ನಿದ್ದೆ ಸರಿಯಾಗಿ ಇಲ್ಲದಿದ್ದರೂ ನಾವು ದಿನದ ಕೆಲಸದಲ್ಲಿ ಉತ್ಸಾಹ ಕಳೆದುಕೊಂಡು ಬಿಡುತ್ತೇವೆ. ನಿಜ ತಾನೆ? ಹೌದು ಅನ್ನಲೇ ಬೇಕು. ಯಾಕೆಂದರೆ ದೇಹಕ್ಕೆ ನಿದ್ದೆ ತುಂಬಾ ತುಂಬಾ ಮುಖ್ಯ. ರಾತ್ರಿಯ ನಿದ್ದೆ ಸರಿಯಾಗಿ ಆದರೆ ಹಗಲೆಲ್ಲ ದೇಹ ಉತ್ಸಾಹದಿಂದ ಇರುತ್ತದೆ. ಇದೂ ಕೂಡ ಎಲ್ಲರ ಅನುಭವಕ್ಕೆ ಬಂದಿರೋದೆ. ನಾನಂತೂ ಸಖತ್ ಅನುಭವಿಸಿಬಿಟ್ಟಿದ್ದೇನೆ ಇಷ್ಟು ವರ್ಷದಲ್ಲಿ. ಆಗೆಲ್ಲ ಒಂದೇ ದುಃಖ ಛೆ! ರಾತ್ರಿನೂ ಸಮಯ ಹಾಳಾಯ್ತು ಹಗಲಿನ ಸಮಯವೂ ಎಕ್ಕುಟ್ಟೋಯ್ತು. ಯಾವಾಗ ನಾನೇನೂ ಬರೆಯಲಾಗದೆ ಅಥವಾ ಓದಲೂ ಆಗದೇ ಕಳೆದ ರಾತ್ರಿಯ ದಿನಗಳಲ್ಲಿ ಹೀಗೆ ಅಂದುಕೊಂಡಿದ್ದೂ ಇದೆ.

ಈಗ ಹೇಳಿ ; ಎಷ್ಟು ಜಿದ್ದಿಗೆ ಬಿದ್ದರೂ ನಿದ್ದೆ ಮಾತ್ರ ಬಲೂ ಸೂಕ್ಷ್ಮ ಅಲ್ವಾ? ಸ್ವಲ್ಪ ಅಡೆತಡೆ ಆದರೂ ಅದೆಲ್ಲಿ ಮಂಗ ಮಾಯ ಆಗುತ್ತೊ ನಾ ಕಾಣೆ. ಹಗಲಲ್ಲಿ ತೆಗೆದುಕೊಂಡ ನಿರ್ಧಾರ ರಾತ್ರಿ ನಿದ್ದೆ ನುಂಗಾಕಿದರೆ ನಾನೇನು ಮಾಡಲಿ? ಮನಸ್ಸನ್ನು ಕೇಳಿದರೆ ಹೇಳುತ್ತೆ ಇನ್ನೂ ಇದೆಯಲ್ಲಾ ಕಾಲ, ಬಿಟ್ಟಾಕು!

ಅದಕ್ಕೆ ಶ್ರೀ ಕೃಷ್ಣ ಪರಮಾತ್ಮನ ಉಪದೇಶ ಪಾಲಿಸೊ ವಿಷಯದಲ್ಲಿ. ಇನ್ನೂ ಕುಂಟತಾ ಇರೋದು.😊

(ಮತ್ತೆ ಬರಿಬೇಕಂತ ಮನಸಿಗೆ ಅನ್ನಿಸಿದರೆ ಬರಿತಿನಿ.)
24-10-2017. 3.29pm

ಬೇಜಾರು…!!(ಭಾಗ-1)

ಈ ಪದ ಬಹುಶಃ ಹೇಳದ ಮನುಷ್ಯನೇ ಇಲ್ಲ ಎಂಬುದು ನನ್ನ ಅನಿಸಿಕೆ. ಏಕೆಂದರೆ ಬೇಜಾರು ಎಂಬುದು ಮನಸ್ಸಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದೆ. ಈ ಅನಿಸಿಕೆಯ ಸಂದರ್ಭದಲ್ಲಿ ಮನಸ್ಸು ಇರೊ ವಾತಾವರಣದಿಂದ ಬೇರೊಂದು ಏನೊ ಬಯಸುತ್ತಿರುತ್ತದೆ. ಅದು ಏನು ಎತ್ತಾ ಎಂದು ನಿರ್ಧರಿಸುವುದು ಕಷ್ಟ. ಅವರವರ ಅಂತರಂಗದ ಇಶ್ಚೆಗೆ ಒಳಪಟ್ಟಿರುತ್ತದೆ. ಕೆಲವರಿಗೆ ಈ ಸಂದರ್ಭದಲ್ಲಿ ಒಂದಷ್ಟು ಸುತ್ತಾಡೋದು ಇಷ್ಟ. ಇನ್ನು ಕೆಲವರಿಗೆ ಯಾರ ಜೊತಯಾದರೂ ಒಂದಷ್ಟೊತ್ತು ಮಾತನಾಡೋಣ ಅನ್ನಿಸಿದರೆ ಇನ್ನು ಕೆಲವರಿರುತ್ತಾರೆ ; ಹೊದ್ದುಕೊಂಡು ಮಲಗೋದು.

ಆದರೆ ಇವೆಲ್ಲಕ್ಕೂ ಭಿನ್ನ ಇನ್ನೊಂದು ರೀತಿ ಬೇಜಾರು. ಈ ಬೇಜಾರಿಗೆ ಏನೂ ಮಾಡಲು ಮನಸ್ಸಿಲ್ಲ. ಓದು, ಬರಹ, ತಿರುಗೋದು,ಮಲಗೋದು ಅಥವಾ ಮನೆಯಲ್ಲಿಯ ಡಬ್ಬಾ ಎಲ್ಲಾ ಹುಡುಕಿ ಸಿಕ್ಕಿದ್ದು ತಿನ್ನೋದು. ಇದೊಂತರಾ ವಿಚಿತ್ರ. ಇದಕ್ಕೆ ಬೇಜಾರು ಅನ್ನಬೇಕೊ ಅಥವಾ ಹಪಹಪಿ ಅನ್ನಬೇಕೊ ತಿಳಿತಿಲ್ಲ. ಕೂತಲ್ಲಿಂದ ಏಳೋದೂ ಬೇಡಾ. ಏನೂ ಮಾಡೋದೂ ಬೇಡಾ. ಸುಮ್ಮನೆ online ನಲ್ಲಿ ಒಂದಷ್ಟು ಕುಟಕತಾ ಕೂತರೂ ಸಮಾಧಾನ ಇಲ್ಲ. Fb ನೋಡಲೂ, ಅಲ್ಲಿ ಒಂದಷ್ಟು ಕಮೆಂಟು, ಲೈಕು ಹಾಕಲೂ ಮನಸ್ಸು ಒಪ್ಪೋಲ್ಲ. ಮತ್ತಿನ್ನೇನು ಬೇಕಪ್ಪಾ ನಿನಗೆ? ಮನಸ್ಸನ್ನು ಕೇಳಿದರೆ ಯಾರ್ಯಾರದ್ದೊ ನೆನಪುಗಳು ತಲೆ ತುಂಬಾ ಸುತ್ತಕೊಳ್ಳೋದು ಗ್ಯಾರಂಟಿ. ಹಂಗೆ WhatsApp ಕಡೆ ಗಮನ ಹೋಗುತ್ತದೆ. ಅಲ್ಲಿ ಬಂದಿರೊ ಅವನು ಇವನಿಗೆ ಕಳಿಸಿದ್ದು ಇವಳು ಅವನಿಗೆ ಕಳಿಸಿದ್ದು ಅದೇ ರಾಗ ಅದೇ ಹಾಡು. ತತ್ತರಕಿ ಇದೂ ಬೇಡ. ಎಲ್ಲಾ ಡಿಲೀಟೋ ಡಿಲೀಟು. ಮತ್ತೆ?

ನೋಡೋಣ ಯರಾದರೂ onlineನಲ್ಲಿ ಇದ್ದಾರಾ? ಇದ್ದಾರೆ. But ಇವರತ್ರ ಮಾತಾಡಬೇಕು ಅನಿಸ್ತಿಲ್ವೆ! ಹಂಗೆ ನೋಡ್ತಾ ನೋಡ್ತಾ ಪುಕ್ಕಟೆ call ಇದೆಯಲ್ಲಾ ಮಾಡೋಣ. ತಗೋತಾರಾ ಅಂತ. ಹಂಗೆ Hello ಅಂತೀವಿ ಚಾಟಲ್ಲಿ. ಬಂತು ಡಬ್ಬಲ್ ಗೀಟು. ಸರಿ ಪರವಾಗಿಲ್ಲ. ಹೊಡಿ call ಮನಸ್ಸಿನ ಮಾತು. ಹೋಗಿ ಹೋಗಿ ನಮ್ಮ ಕೈಲಿದೆಯೆ? ಅದರ ತಾಳಕ್ಕೆ ತಕ್ಕಂತೆ ಕುಣಿಯೋದೆ ನಮ್ಮ ಕರ್ಮ ಆಗಿರುವಾಗ ಶಿರಸಾವಹಿಸಿ ಅದರ ಮಾತು ಕೇಳದೆ ಗತಿ ಇಲ್ಲ. *

ಶ್ರೀ ಕೃಷ್ಣ ಪರಮಾತ್ಮ ಭಗವತ್ಗೀತೆಯಲ್ಲಿ ಏನೋ ಆರಾಮಾಗಿ ಹೇಳಬಿಟ್ಟಾ. “ಇಂದ್ರಿಯ ನಿಗ್ರಹ ಮಾಡಬೇಕು” ಅದು ಹೆಂಗೆ? ಸಾಧ್ಯ ಆಗ್ತಿಲ್ವೆ. ಹೇಳೋಕೆ ನನ್ನ ದೇಹದ ಇಂದ್ರಿಯಗಳು. ಯಾವತ್ತಾದರೂ ನಾವು ಹೇಳಿದಂತೆ ಕೇಳುತ್ತಾ? ಕೇಳಿದರೂ ಒಂದು ದಿನ ಅಥವಾ ಎರಡು ದಿನ. ಪುನಃ ಎಲ್ಲ ಮರೆತು ಮತ್ತದಕ್ಕೆ ದಾಸರಾಗಿ ಬಿಡುತ್ತೇವೆ.

ಉದಾ : ದೇಹಕ್ಕೆ ರೋಗ ಬಂದ ಹೊಸದರಲ್ಲಿ ಕಟ್ಟ್ನಿಟ್ಟೊ ಕಟ್ಟ್ನಿಟ್ಟ್ . ಒಂದಷ್ಟು ದಿನವಷ್ಟೆ. ಬಂದ ರೋಗ ತಿನ್ನಬೇಡಾ ಅದೂ ಇದೂ ಅಂತಂದ್ರೂ ಡಾಕ್ಟರ್ ಮಾತು ಕಿವಿಯಲ್ಲಿ ಎಚ್ಚರಿಸುತ್ತಾ ಇದ್ರೂ ಚಪಲದ ಬಾಯಿ ಇದೊಂದು ಸಾರಿ,ಚೂರೇ ಚೂರು ಅಂತ ಇನ್ನೇಲ್ಲೊ ಹೇಳಿದ “ಒಂದು ಚೂರು ತಿಂದರೆ ಏನೂ ಆಗೋಲ್ಲ” ಅಂದ ಮಾತನ್ನೇ ಪ್ರತಿಪಾಧಿಸಿಕೊಂಡು ಯಾರೂ ಇಲ್ಲದಾಗ ತಿಂದು ಸಂತೃಪ್ತಿಪಟ್ಟುಕೊಳ್ಳೋಲ್ವೆ ಸಂಭಾವಿತರ ಸೋಗು ಹಾಕಿ! ಇನ್ನಿತರ ಇಂದ್ರಿಯಗಳ ವಿಷಯಗಳಲ್ಲೂ ಇದೇ ಗತಿ. ಹೀಗೆ ಅಂದುಕೊಂಡು ಅಂದುಕೊಂಡೆ ಈ ನಿಗ್ರಹ ಎಂಬುದನ್ನು ಮರೆತು ಬದುಕುವ ಬದುಕಲ್ಲಿ ಪರಮಾತ್ಮ ಹೇಳಿದಂತೆ ನಡೆದುಕೊಳ್ಳೋದು ಅಥವಾ ಸಾಧಿಸೋದು ಕಠಿಣದ ಮಾತು. ಅದೆಷ್ಟು ಸಾಧನೆ ಬೇಕು ಸಂತನಾಗಲು!

*ಟ್ರಿಂಗ್ ಟ್ರಿಂಗ್ online ಕಣ್ಣು ಕಂಡರೂ call ತಗೋತಿಲ್ವೆ. “Please call me” ಅಂತ ಮತ್ತೆ ಚಾಟ್ ಮಾಡಿದ್ರೆ ” Why? ” ಅಂತೆ. ಸಿಟ್ಟು ನೆತ್ತಿ ಹತ್ತಿ ಬರೋದು ಸ್ವಾಭಾವಿಕ ತಾನೆ? ಅದೂ ಆತ್ಮೀಯರಲ್ಲಿ ಈ ಸಲುಗೆ ತಗೋಳೋದು. ಅರ್ಥ ಮಾಡ್ಕೊಳಲ್ವೆ. ಸರಿ “Bye” ಅಂತಂದು ಮೊಬೈಲ್ ಬಿಸಾಕಿ ಅದರ ಮೇಲೆ ಸಿಟ್ಟು ತೀರಿಸಿಕೊಂಡಿದ್ದು ಯಾರು ತಾನೆ ಮಾಡಿರದೆ ಇರಲಿಕ್ಕಿಲ್ಲ!

ಹ…ಹ.. ಈ ಅನುಭವ ನೋಡಿ ಈ ಬೇಜಾರು ಅನ್ನುವ ಪದ ಬಿಸಾಕಿ ಮನಸ್ಸು ಇನ್ನೊಂದು ವಿಷಯಕ್ಕೆ ಅಂಟಾಕಿಕೊಂಡುಬಿಡುತ್ತದೆ. ಅದೆ ಏನು ಗೊತ್ತಾ ನಾವು ಯಾರಿಗೆ call ಮಾಡಿ ಮಾತಾಡಬೇಕು ಅಂದುಕೊಂಡಿರುತ್ತೇವೊ ಅವರೊಂದಿಗೆ ಇದುವರೆಗೆ ನಡೆದುಕೊಂಡು ಬಂದ ನೆನಪು, ದಿನಚರಿ, ಅವರ ಸ್ವಭಾವ ಇತ್ಯಾದಿ. ಹೋಗ್ತಾ ಹೋಗ್ತಾ ಮನಸ್ಸು ತಿಳಿಯಾಗಿ ನಮ್ಮ ಬುದ್ಧಿಗೆ ನಾವೆ ನಗೋದು ಗ್ಯಾರಂಟಿ. ಏಕೆಂದರೆ ಆ ವ್ಯಕ್ತಿಯ ಬಗ್ಗೆ ನಮಗಷ್ಟು ನಂಬಿಕೆ ಇರುತ್ತದೆ. ಅದಕ್ಕೆ ಈ ಮನಸ್ಸಿಗೆ ಅವರ ಹತ್ತಿರವೆ ಮಾತಾಡಬೇಕು ಅನಿಸಿರುತ್ತದೆ. ಮನಸ್ಸು ತಪ್ಪು ಹುಡುಕುವುದು ಬಿಟ್ಟು ರಾಜಿಯಾಗಿ ಬಿಡುತ್ತದೆ. ಹ್ಯಾಗೆ ಅಂತೀರಾ?

ಅಯ್ಯೋ! ದೇವರೆ ಎಂತಾ ಹುಚ್ಚು ಯೋಚನೆ. ನಮಗೇನೊ ಬೇರೆ ಕೆಲಸ ಇಲ್ಲ ಸುಮ್ಮನೆ ಮನಸ್ಸು ಕೆಡಿಸಿಕೊಂಡು ಬೇಜಾರು ಅಂತ ಇನ್ನೊಬ್ಬರಿಗೆ ತೊಂದರೆ ಕೊಡೋದು ಎಷ್ಟು ಸರಿ? ದೂರದಲ್ಲಿ ಇರುವವರಿಗೆ ನಮ್ಮ ಮನಸ್ಸನ್ನು ತಿಳದುಕೊಳ್ಳಲು ಅವರೇನು ಸಂಜಯನೆ ಮಹಾಭಾರತ ಯುದ್ಧ ನಡೆಯುವಾಗ ದೃತರಾಷ್ಟ್ರನಿಗೆ ತನ್ನ ದಿವ್ಯ ದೃಷ್ಟಿಯಿಂದ ಅಲ್ಲಿಯ ವರದಿಗಳೆಲ್ಲ ಕೂತಲ್ಲಿಂದಲೆ ತಿಳಿದು ಹೇಳುವಂತೆ!

ಅಷ್ಟಕ್ಕೂ ಒಂದೊಮ್ಮೆ call ತಗೊಂಡರೂ ಏನು ಮಾತಾಡುತ್ತಿದ್ದೆ? ಅಂತ ಅಗತ್ಯ ವಿಷಯ ಏನಿತ್ತು? ಸರಿ ” ಬೇಜಾರು ಬಂತು ಅದಕ್ಕೆ call ಮಾಡಿ ಅಂದೆ “ಅಂದರೆ ಅವರಾದರೂ ಏನು ಹೇಳೋಕೆ ಸಾಧ್ಯ? “ಮನೆಯಲ್ಲಿ ಯಾರೂ ಇಲ್ವಾ? ಸ್ವಲ್ಪ ಎಲ್ಲಾದರೂ ಹೋಗಿ ಬಾ. ಇಲ್ಲಾ ಏನಾದರೂ ಬರಿ, ಓದು. ಟೀವಿ ನೋಡು ಅದೂ ಇದೂ.” ಇಷ್ಟೇ ತಾನೆ ಹೇಳೋದು. ಇದಕ್ಯಾಕೆ call ಮಾಡಿ ಇನ್ನೊಬ್ಬರ ತಲೆ ತಿನ್ನೋದು? ತೆಪ್ಪಗೆ ನಿನ್ನಷ್ಟಕ್ಕೆ ನೀನಿರೋದು ಕಲತ್ಕೊ.

ಈ ತಿಳುವಳಿಕೆ ತಲೆಲಿ ಹೊಕ್ಕಿದ್ದೇ ತಡ ಮನಸ್ಸು ಹಗುರವಾಗಿ ಒಂದು ದೀರ್ಘ ನಿಟ್ಟುಸಿರಿನೊಂದಿಗೆ ನನ್ನದೇನೂ ನಡೆಯೋದಿಲ್ಲ ಅನಿಸಿಯೊ ಏನೊ ಅಲ್ಲಿಂದ ದೇಹ ಮೆಲ್ಲಗೆದ್ದು ಮಾಮೂಲಿ ಸ್ಥಿತಿಗೆ ಬಂದು ಇನ್ನಿತರ ಕೆಲಸದಲ್ಲಿ ಮಗ್ನವಾಗುತ್ತದೆ. ಇದು ಎಷ್ಟು ಸೋಜಿಗ! ಮಂಕು ಭೂದಿ ಎರಚಿಕೊಂಡು ತಾನು ಅಂದುಕೊಂಡಿದ್ದೆ ಸರಿ ಅಂತ ಒಂದು ಹಂತದಲ್ಲಿ ಪ್ರತಿಪಾಧಿಸುವದು. ಮತ್ತರೆಕ್ಷಣ ಸಾಕು ಸರಿ ತಪ್ಪುಗಳನ್ನು ವಿಶ್ಲೇಷಿಸಿ ಸಮಾಧಾನಗೊಳ್ಳಲು. ಅಯ್ಯೋ! ಮನಸ್ಸೆ ಎಂತಾ ವಿಚಿತ್ರ ನೀನು.!!

ಬೇಕಿತ್ತಾ ಇದೆಲ್ಲಾ. ಮಾಡೋಕೆ ಬೇಕಾದಷ್ಟು ಕೆಲಸ ಇತ್ತು. ಓದೋಕೆ ಬೇಕಾದಷ್ಟು ಪುಸ್ತಕಗಳು ಇತ್ತು. ಇನ್ನು ಮಾತಾಡಬೇಕು ಅಂದರೆ ಬೇರೆಯವರ್ಯಾರೂ ಸಿಗಲಿಲ್ವಾ? ಎಲ್ಲಾ ಇದ್ದರೂ ಯಾಕೆ ಈ ಹಠ? ನೋಡು ಎಷ್ಟು ಸಮಯ ಹಾಳು. ಕಳೆದ ಸಮಯ ಮತ್ತೆ ಸಿಗಲು ಸಾಧ್ಯವಾ? ಎಂತೆಲ್ಲಾ ವಿಚಾರ ಮತ್ತದೇ ಮನಸ್ಸಿಗೆ. ಪರಿತಪಿಸೋದೂ ತಾನೆ ಹಠ ಮಾಡೋದೂ ತಾನೆ. ಬಲೂ ಚೆನ್ನಾಗಿ ಏಕಪಾತ್ರಾಭಿನಯ ಮಾಡೋದರಲ್ಲಿ ನಿಸ್ಸೀಮ.

ಅಬ್ಬಾ! ಬೇಜಾರೆಂಬ ಪದ ಆಗಾಗ ಸುತ್ತಿಕೊಳ್ಳುವ ಮನಸ್ಸೆ ನಿನ್ನ ನಿಗ್ರಹದಲ್ಲಿರಿಸಿಕೊಂಡು ಇರುವ ಸಮಯ ವ್ಯರ್ಥಗೊಳಿಸಿಕೊಳ್ಳದೆ ಬದುಕೋದೆ ನಿಜವಾದ ಬದುಕು. ಇದು ಸತ್ಯ. ಗುರಿ ಮುಟ್ಟುವ ಛಲ ಮುಕ್ತಗೊಳಿಸಿಕೊಳ್ಳಬೇಕು. ಹಿರಿಯರ ನಾಣ್ಣುಡಿಯಂತೆ “ಈಜ ಬೇಕು ಇದ್ದು ಜಯಿಸಬೇಕು.”

ಮುಂದುವರೆಯುವುದು.
23-10-2017. 2.48pm