ಚಿರ ಯೌವ್ವನೆ

ಬಹು ಅಂತಸ್ತಿನ ಮಹಲು
ಕೈ ಬೀಸಿ ಕರೆಯುತ್ತಿತ್ತು
ಹಸಿರ ಮೆದ್ದೆಯ ಹೊದ್ದು
ಸನಿಹಕೆ ಬಾ ಎಂದು.

ಸುಳಿ ಗಾಳಿಯ ತಂಗಾಳಿಗೆ
ಬಳುಕಾಡುವ ಮುಂಗುರುಳ
ಇಳಿಬಿಟ್ಟಂತಿರುವ ಯೌವ್ವನೆ
ಆ ಮಹಲಿನ ಸೌಂದರ್ಯ.

ಗಗನ ಚುಂಬಿಯ ಕಟ್ಟಡ
ಅಡಿಯಿಂದ ಮುಡಿಯವರೆಗೆ
ನೋಡಲು ಏರುತ್ತ ಏರುತ್ತ
ಮೈಮರೆತು ಧಂಗಾಗಿ ನಿಂತೆ.

ಹರ್ಷೋದ್ಗಾರದ ಕುಣಿತಕ್ಕೆ
ಮಸ್ತಕದ ತುಂಬೆಲ್ಲ
ಪಕಪಕನೆ ಉದುರುವ
ಪದಗಳಾಯ್ದು ಜೋಡಿಸಿಟ್ಟೆ.

(ಚಿತ್ರ ಕವನ)

8-9-2021 1.05pm

ಆಘಾತ (ಚಿತ್ರ ಕವನ)

ಹೇಳ್ತೀನಿ ಕಥೆಯೊಂದ ಕೇಳಿರಿ ನೀವೆಲ್ಲಾ
ಇದನರಿತು ನೀವೆಲ್ಲಾ ಬಾಳೀರಿ//
ಇದನರಿತು ನೀವೆಲ್ಲಾ ಬಾಳಿರಿ ಬಂಧುಗಳೆ
ನಮ್ಮಂತೆ ನಂಬಿ ನೀವೂ ದುಃಖಪಡದೀರಿ/೧//

ಹೆತ್ತ ಮಕ್ಕಳಿಗೆಲ್ಲ ಓದು ಕಲಿಸಿದೆವು
ಮದುವೆನೂ ಮಾಡಿ ಕರ್ತವ್ಯ ಪೂರೈಸಿದೆವು//
ಮದುವೆನೂ ಮಾಡಿ ಕರ್ತವ್ಯ ಪೂರೈಸಿದೆವು ಕೊನೆಗಾಲದಿ
ನಮ್ಮ ಸಾಕುವುದು ಅವರಿಗೆ ಬೇಡವಾಯಿತು/೨//

ಜನ್ಮಕಂಟಿದ ಬಾಳು ದುಃಖಮಯವಾಯಿತು
ಹೆತ್ತ ಮಕ್ಕಳೇ  ಕೈ ಬಿಟ್ಟ ಮೇಲೆ//
ಹೆತ್ತ ಮಕ್ಕಳೇ ಕೈ ಬಿಟ್ಟ ಮೇಲೆ ಬೀದಿಪಾಲಾದೆವು
ನಮ್ಮ ಗತಿ ಯಾರಿಗೂ ಬರುವುದು ಬೇಡಾ//೩//

ಜೀವನದ ಪಥದಲ್ಲಿ ಜೊತೆಯಾಗಿ ಬಂದವಳು
ಅಗಲಿಕೆ ಎಂಬುದು ಸಹಿಸದ ಮಾತು//
ಅಗಲಿಕೆ ಎಂಬುದು ಸಹಿಸದ ಮಾತು ಗೆಳತಿಯೊಡನೆ
ಕಷ್ಟ ಬಂದರೂ ಅವಳಿಗಾಸರೆಯಾಗಿ ಬದುಕಬೇಕು//೪//

ಕೊನೆಗಾಲಕೆ ಒಂದಿಷ್ಟು ಹಣವಿರಲೇಬೇಕು
ಸ್ವತಂತ್ರ ಜೀವನ ಎದುರಿಸಲು//
ಸ್ವತಂತ್ರ ಜೀವನ ಎದುರಿಸಲು ದಿಕ್ಕಾಗುವುದು
ನಮ್ಮವರೆಂದು ಯಾರನ್ನೂ ನಂಬದೀರಿ//೫//

ಬಿನ್ನವಿಸಿಕೊಳ್ಳುವೆ ಭಗವಂತಾ ನಿನ್ನಲ್ಲಿ
ಶಿರಬಾಗಿ ಕೈ ಮುಗಿದು ಬೇಡುವೆನು//
ಶಿರಬಾಗಿ ಕೈ ಮುಗಿದು ಬೇಡುವೆನು ಅಡಿಗೆರಗಿ
ಮುಪ್ಪಲ್ಲಿ ಕಷ್ಟವ ಕೊಡದೀರು//೬//

೨೦-೪-೨೦೨೦.  ೯.೧೧pm

ಗೆಜ್ಜೆ ಗತಿ

ಅಂದದ ಚಂದದ
ಮುತ್ತಿನ ಗೆಜ್ಜೆ
ಲಕ ಲಕ ಹೊಳೆಯುವ
ಬೆಳ್ಳಿಯ ಗೆಜ್ಜೆ॥

ಜಿಣಿ ಜಿಣಿ ನಾದವ
ಉಲಿಯುವ ಗೆಜ್ಜೆ
ತಕಥೈ ತಾಳಗೆ
ಕುಣಿಯುವ ಗೆಜ್ಜೆ॥

ಕೆಂಪಿನ ಹಸಿರಿನ
ಚುಕ್ಕೆಯ ಗೆಜ್ಜೆ
ಅಕ್ಕಸಾಲಿಗನ
ಕೈಲರಳಿದ ಗೆಜ್ಜೆ॥

ಅಂಗಡಿ ಕಪಾಟಲಿ
ನೇತಾಡುವ ಗೆಜ್ಜೆ
ಕಣ್ಣಿಗೆ ಕಾಣಲು
ಖರೀದಿಸಿದ ಗೆಜ್ಜೆ॥

ಮುದ್ದು ಮಗಳಿಗೆ
ಕೊಡಿಸಿದ ಗೆಜ್ಜೆ
ಕಂಡವರನೆಲ್ಲ
ಸೇಳೆಯುವ ಗೆಜ್ಜೆ॥

ಕಾಲ ಸರಿದಂತೆ
ಹಾಕದ ಗೆಜ್ಜೆ
ಲಾಕರ್ ಬಂಧಿ
ಆಯಿತೀ ಗೆಜ್ಜೆ॥

ಬದುಕಿನ ಸ್ಥಿತಿಗತಿ
ಸಾರುವ ಗೆಜ್ಜೆ
ಕೊನೆಯಲ್ಲಿನ ಕ್ಷಣ
ಉಲಿಯುವ ಗೆಜ್ಜೆ॥

26-9-2018 2.36pm

ಹಕ್ಕಿಯ ಕೂಗು

ಸಂಜೆಗೆಂಪು ಮೂಡುತಿರಲು
ಹಕ್ಕಿ ತಾಣ ಹುಡುಕುತಿರಲು
ಬೋಳು ಮರದ ಎದೆಯ ನೋವ
ಒಂಟಿ ಹಕ್ಕಿ ಹಾಡುತ್ತಿತ್ತು.

ಗೂಡು ಕಟ್ಟಲೆಂದು ಬರುವ
ಹಕ್ಕಿಗಿಲ್ಲಿ ಜಾಗವೆಲ್ಲಿ
ಎಲೆಗಳೆಲ್ಲ ಉದುರಿ ಉದುರಿ
ಬರಡಾಗಿದೆಯಲ್ಲ ನನ್ನ ದೇಹ.

ಪಾಪ ಅವು ಪಡುವ ಪಾಡು
ನಾನೆಂತೂ ನೋಡಲಾರೆ
ಬೇಗ ಬಾರೊ ಮಳೆರಾಯ
ಇಳೆಯ ನೀನು ತಂಪು ಮಾಡು.

ನೀರನೆಲ್ಲ ಹೀರಿ ಬೇಗ
ಚಿಗುರೊಡೆಯಬೇಕು ನಾನೀಗ
ಹಕ್ಕಿ ಗೂಡು ಕಟ್ಟಲೆಂದು
ಕಾಯುತೀರುವೆನೀಗ ನೋಡು.

ಹೂ,ಹಣ್ಣು,, ಕಾಯಿ ನೀಡಿ
ಅವುಗಳ ಕಲರವ ಕೇಳಬೇಕು
ಹಕ್ಕಿ ಸಂಕುಲ ನಶಿಸುತಿಹುದು
ಅದನು ತಡೆಯಲಿಂಬು ನೀಡು.

ಬತ್ತದಿರಲಿ ಭೂಮಿಯೆಂದು
ಕಾಡನುಳಿಸಿ ನಾಡ ಬೆಳೆಸಿ
ಪ್ರಾಣಿ ಪಕ್ಷಿ ಪೋಷಿಸಿರೆಂದು
ಮನುಜ ನಿನ್ನ ಬೇಡುತಿರುವೆ.

23-7-2018. 10.55pm

ನಾ ಶಬರಿ

ಚಿತ್ರ ಕವನ ಹವಿ-ಸವಿ ತಾಣದಲ್ಲಿ ತೃತೀಯ ಬಹುಮಾನ

**********

ಪಿಸು ಮಾತಿನ ಪಲ್ಲಕ್ಕಿಯ
ಜೋಡಿ ಹಕ್ಕಿಗಳಿಗಾಗಿ
ತಟಸ್ಥವಾಗಿ ನಿಂತಿರುವೆ
ಏರ ಬನ್ನಿ ಬೇಗಾ.

ಚಿಲಿ ಪಿಲಿ ಗುಟ್ಟುವ
ಹಕ್ಕಿಗಳ ಕಲರವ
ವನಸಿರಿಯ ಮಡಿಲಲ್ಲಿ
ಹೊತ್ತೊಯ್ಯುವೆ ನಿಮ್ಮ.

ತರುಲತೆಗಳ ಹೊಂಬಣ್ಣ
ರವಿಕಿರಣದಲಿ ಮಿಂಚಿಹುದು
ನನ್ನಾಂಗಕೂ ಅವನದೇ
ಬಂಗಾರದ ಸ್ಪರ್ಶ.

ನಾವಿಕನಿಲ್ಲದಿರೆ ಏನಂತೆ
ಮಜವಾಗಿ ನೀರೊಳೊಂದಷ್ಟು
ಕೊಂಚ ಕೈ ಬಡಿದು ಸಹಕರಿಸಿ
ಆತಂಕ ನಿಮಗ್ಯಾಕೆ.

ಕಪಟವ ನಾನರಿಯೆ
ನನ್ನ ಪ್ರತಿಬಿಂಬದಷ್ಟೇ ಸತ್ಯ
ನಿಮಗಾಗಿ ಕಾದಿರುವೆ
ರಾಮನ ಕಾದ ಶಬರಿಯಂತೆ!

8-7-2018. 5.47pm

ಚಿಗುರ ಸಂದೇಶ

ಅದುಮದಿರು ನನ್ನ
ನಾನಿನ್ನೂ ಚಿಗುರು.

ಹೆಬ್ಬೆರಳ ತಾಗಿಸದಿರು
ಮುರಿದಾವು ಚಿಗುರು.

ಈಗಷ್ಟೇ ಬಂದಿರುವೆ
ಮೊಳೆತಿದೆ ಚಿಗುರು.

ಪುಟ್ಟ ಅಂಗೈಯಗಲ
ನೋಡು ನನ್ನ ಚಿಗುರು.

ಚಪ್ಪಲಿ ತೆಗೆದಿಡು
ತಾಗಿ ಹರಿದಾವು ಚಿಗುರು.

ಒಡನೆ ನೆಲವನಗೆದು ನೆಡು
ಮೈತುಂಬ ಬೆಳೆದಾವು ಚಿಗುರು.

ಹೂ,ಮಿಡಿ,ಕಾಯಿ
ಹೊತ್ತು ಬರುವವು ಚಿಗುರು.

ನೆಟ್ಟು ಗಿಡಗಳ ಸಲಹು
ಬದುಕಾಗುವುದು ಚಿಗುರು.

ಚಿಗುರು ಚಿಗುರಲಿ ಜೀವ
ಉಸಿರಿರುವದ ನೀ ಕಾಣು.

ಗಿಡ, ಪಕ್ಷಿ, ಪ್ರಾಣಿಗಳ ಪೋಷಿಸಿ
ಸಾರ್ಥಕತೆ ನೀ ಹೊಂದು.

14-6-2018. 3.23pm

ಭಾವ ಶರಧಿ

ತುಂಬಿದಾಗಸದೊಳು
ಅರಳಿದ ಚಂದ್ರಮ
ಹುಣ್ಣಿಮೆಯ ಹಾಲ್ಗೆನ್ನೆ
ದುಂಡು ಮುಖದ ಅರಸ
ಆಹಾ! ಅವನಂದವ ನೋಡುತ
ಮೈ ಮರೆತಳು ಶರಧಿ॥

ಬಿಸು ಸುಯ್ದೆದೆಯೊಳು
ಪಕ್ಕನೆ ಅವನಿಟ್ಟ ಬಾಣ
ಒಡಲೆಲ್ಲ ಬೆಳ್ಳನ ಬೆಳಕು
ಎವೆಯಿಕ್ಕುವವನ ನೋಟಕೆ
ಮೈ ಪುಳಕಗೊಂಡು
ತನುವೆಲ್ಲ ತನನನ॥

ಭೋರ್ಗರೆದು ಧುಮ್ಮಿಕ್ಕುವಲೆ
ತಟಸ್ಥ ಮೌನ
ತನ್ನನೇ ತಾ ಮರೆತು
ಮನ್ಮಥನ ಬಾಣದಲಿ ಲೀನ
ಕಡಲಾಗಿಹಳು ಅಪ್ಸರೆ॥

ಸುತ್ತ ಯಾರಿಲ್ಲ ನೋಡು ಸಖೀ
ಬಾ ಬಡಿವಾರವೇಕೆ
ಕಗ್ಗತ್ತಲು ನಭೋಮಂಡಲ
ಬೆಳಕೆಲ್ಲ ನಿನ್ನೆಡೆಗೆ ಚೆಲ್ಲಿರುವೆ
ಎಷ್ಟು ಚಂದವೆ ನೀನು॥

ಏಯ್! ಹೋಗೊ ಚಂದ್ರಾ
ನಿನ್ನಂದದ ಮುಂದೆ
ನಂದೇನಿಲ್ಲಾ ಓಳು ಬಿಡಬೇಡಾ
ಅದೇನದು ಮುಖದಲ್ಲಿ
ಅದಾವ ಕಪ್ಪು ಚಿತ್ತಾರ?॥

ಇಬ್ಬರಲೂ ಮಾತು ಮಂಥನ
ಪುಟಿದೇಳುವ ಉತ್ಸಾಹಕೆ
ಸರಿದ ಕಾಲದ ಪರಿವಿಲ್ಲ
ಕೆಂಗಣ್ಣು ಬಿಟ್ಟ ಸೂರ್ಯ
ಗತಿಯಿಲ್ಲದೇ ದೂರಾದ ಚಂದ್ರ॥

30-6-2018. 5.04pm

ಹರೆಯ

ಹವಿ-ಸವಿ ತಾಣದಲ್ಲಿ ಈ ವಾರದ ಚಿತ್ರ ಕವನ ಸ್ಪರ್ಧೆ – ಸಮಾಧಾನಕರ ಬಹುಮಾನ

*************

ಜೊತೆ ಜೊತೆಯಾಗಿ
ಹೋಗುವ ಬನ್ನಿ
ಇಳೆಯನಪ್ಪುವ ಮೊದಲೆ॥

ಬಿಂಕ ಬಿನ್ನಾಣವೇಕೆ
ವಯ್ಯಾರದ ನಡಿಗೆಯೇಕೆ
ಚಂದದ ಬಣ್ಣವೆಂದೇ॥

ಪಳ ಪಳನೆ ಹೊಳೆಯುವ
ನಕ್ಷತ್ರದ ಮಿಂಚಂತೆ
ಆಹಾ! ನೀವೆಷ್ಟು ಚಂದ॥

ಇರಿ ಇರಿ ಪುಟಿದೇಳದಿರಿ
ನಿಂತಲ್ಲಿ ನಿಲಲಾರದ
ಯೌವನೆಯರೆ ನೀವು॥

ಅದು ಹಾಗೆ
ಹರೆಯದ ವಯಸು
ಲಂಗು ಲಗಾಮಿಲ್ಲದ ಕನಸು॥

ಏರಿ ಏರಿ ಜೌವ್ವನ
ಬಿಸಿ ರಕ್ತದ ಅಮಲು
ನೆಲ ಕಾಣದ ಹಗಲು॥

ನೀರ ಗುಳ್ಳೆಯ ತೆರದಿ
ಮುಟ್ಟಿದರೆ ಒಡೆಯುವ
ಬದುಕಲಿ ಹರೆಯವದು॥

ಶೃತಿ ತಪ್ಪಿದ ಅಹಮಿಕೆಯ
ಒಂದು ಕ್ಷಣದ ಬದುಕಾಗದಿರಲಿ
ಇರಲಿ ಕೊಂಚ ತಾಳ್ಮೆ॥

21.-6-2018. 8.08pm

ನೆನಪು

ಹವಿ-ಸವಿ ತಾಣದಲ್ಲಿ ಪ್ರಥಮ ಬಹುಮಾನ ಪಡೆದ ಕವನ

ಒಂದು ಕಾಲ್ದಲ್ಲಿ ಯಂಗ್ಳೂರ್
ಮಳೆಗಾಲದಲ್ಲಿ ಕಂಬ್ಳಿಕೊಪ್ಪೆ
ಆನೂ ಹೀಂಗೆ ಹಾಕ್ಯಂಡೋಗಿದ್ದಿ.

ಸಿಕ್ಕಾಪಟ್ಟೆ ಜೋರು ಮಳೆ
ಹೊಳೆಯೆಲ್ಲ ತುಂಬರಿತಿದ್ದು
ಬತ್ಯನೆ ನೋಡಲ್ಲೋಪನ?

ಮೋತಿ ಮೋತಿ ಮದ್ವೆಗ್ ಬತ್ತ್ಯ
ಮೂರ್ಕಾಲು ನೆಕ್ಕಂಡೆ ಇದ್ದಿ
ಇದು ಗಾದೆಮಾತು ಸರಿ.

ಹೊಂಟಿದ್ದೆಯಾ ಬರಿಗಾಲಲ್ಲಿ
ಹುಡುಗರ ಗುಂಪಲ್ಲಿ ಆನೂ ಒಂದಾಗಿ
ತತ್ತರಕಿ ಅದೆಲ್ಲಿತ್ತೊ ಹುಚ್ಚು ಧೈರ್ಯ.

ಗಡಚಿಕ್ಕುವ ಗುಡುಗು
ಭರೋ ಸುರಿಯ ಗಾಳಿ ಮಳೆ
ಧರೆಗಿಳಿಯ ಚಂದವಾ ಇಲ್ಕೇಳು.

ಆಹಾ!ಏನ್ ಕೇಳ್ತೆ ಆ ಮಜಾವಾ
ಮೈಯ್ಯೆಲ್ಲ ತೊಪ್ಪೆ ತಲೆ ಮೇಲೆ ಕಂಬ್ಳಿ ಕೊಪ್ಪೆ
ಜೊತೆಗುಂಬುಳದ ಕಾಟಾ ಬೇರೆ.

ಗಮನ ತಪ್ಪಿದರೆ ಜಾರುಬಂಡೆ
ಬಿದ್ದರೆ ಒಂದು ಮೂಳೆ ಸಿಕ್ಕಾ
ದುಮ್ಮಿಕ್ಕುವ ಹೊಳೆ ನೀರೋ ಕೆಂಬಣ್ಣ.

ಹಸಿರೊದ್ದ ಕಾನನ ದಟ್ಟ ಮಂಜು
ದೂರದಿಂದ ನೋಡುತ್ತ ಕುಳಿತರೆ
ಜಗತ್ತು ಮರೆಯುವ ಕ್ಷಣ.

ಈಗೆಂತೂ ಕೈಲಾಗ್ತಿಲ್ಲೆ
ನೆನಪು ಮಾಡ್ಕ್ಯಂಡು ಮಳೆಗಾಲ್ದಲ್ಲಿ
ಮಂಡಿಗೆ ತಿನ್ನದು ತಪ್ತಿಲ್ಲೆ.

ಗೀತಾ ಜಿ.ಹೆಗಡೆ,ಕಲ್ಮನೆ
15-6-2018 4.10pm

ಅರಿಕೆ

ಹವಿ-ಸವಿ ತಾಣದಲ್ಲಿ ತೃತೀಯ ಬಹುಮಾನ ಪಡೆದ ಚಿತ್ರ ಕವನ:

ನೆಡು ನೆಡು ಗಿಡ ನೆಡು
ನೀ ಗಿಡಾ ನೆಡು॥

ಮಾವು, ಹಲಸು
ಹೊನ್ನೆ,ಹೊಂಗೆ
ಯಾವುದಾದರೂ ಒಂದು
ನೆಲ ತಂಪು ಕಾಣಲೆಂದು ಗಿಡಾ ನೆಡು॥

ಪಚ್ಚೆ ಪೈರು
ಹೊನ್ನ ತೇರು
ಭೂಮಿ ತಾಯಿ ಒಡಲು ಹಸಿರು
ಸದಾ ಆಗಲೆಂದು ಗಿಡಾ ನೆಡು॥

ಪುಟ್ಟ ಜೀವ
ಕಂದ ನೀನು
ನಿನ್ನಂತೆ ನಾನೊಂದು ಚಿಗುರು ನೋಡು
ಸೋಂಪಾಗಿ ಬೆಳೆಯಬೇಕು ಗಿಡಾ ನೆಡು॥

ಬಿಸಿಲ ಬೇಗೆ
ಅಳಿಸಿಬಿಡುವೆ
ಹೂವು ಹಣ್ಣು ಕಾಯಿ ಕೊಡುವೆ
ನಿನ್ನ ಋಣವ ತಿರಿಸುವೆ ಗಿಡಾ ನೆಡು॥

ಸೃಷ್ಟಿ ಸಂಕುಲ
ಬದುಕೊ ಜೀವ
ಹಿಚುಕಿ ಕತ್ತು ಕೊಯ್ಯ ಬೇಡ
ಇರಲಿ ಕರುಣೆ ಗಿಡಾ ನೆಡು॥

8-6-2018. 3.53pm