ಚುಟುಕುಗಳು “ಅವನು”

ನೀನಿದ್ದಾಗ ಹೆದರಿಕೆಯೆಂಬುದು
ಹತ್ತಿರವೂ ಸುಳಿಯಲಿಲ್ಲ
ನೀನಿಲ್ಲದಾಗ ಚಿಂತೆಯುಂಬುದು
ಬೆನ್ನು ಬಿಡುತ್ತಿಲ್ಲವಲ್ಲ.
**********

ನವಿರು ಭಾಷ್ಯವ ಬರೆದು
ನೀ ಹೋಗಿದ್ದಾದರೂ ಎಲ್ಲಿಗೆ
ಕುಟುಕು ಮಂದಿಯ ಮುಂದೆ
ಸತ್ತು ಹೋಗುತ್ತಿದೆ ಜೀವನ.
*********

ಸಮರಸವೇ ಜೀವನ
ಸವಿ ಬಾಳ್ವೆಯ ಹೂರಣ
ಸರಿಗಮಪದನಿಸ ಊದಿದವನ
ಪಲಾಯನಕ್ಕೆ ತಿಳಿಯಲಿಲ್ಲ ಕಾರಣ.
*********

ಎಲ್ಲೋ ಇದ್ದ ನಿನ್ನ
ಹೀಗಿರಬಹುದೆಂದು ಬಣ್ಣ ಬಳಿದೆ
ನೋಡನೋಡುತ್ತ ಅದು ಚಿತ್ರವಾಯಿತು
ಗೋಡೆಗೆ ತಗುಲಿಸಿ ಹಾರ ಹಾಕಿದೆ.
**********

ಸಲೀಸಾಗಿ ನಿಭಾಯಿಸುತ್ತಿದ್ದೆ
ಸಂಸಾರದ ಜಂಜಾಟವನೆಲ್ಲ
ಬದುಕು ದಿಕ್ಕಾಪಾಲಾಯಿತು
ಮಸಣ ನಿನ್ನ ನುಂಗಿದ ಮೇಲೆ.
***********

ನಿನ್ನ ಕಣ್ಣಿನ ಕಾಂತಿಗೆ
ಶರಣಾದೆ ನಾನು
ನನ್ನ ಮನಸಿನ ಭ್ರಾಂತಿ
ಹುಸಿಯಾಗಿಸಿದೆ ನೀನು.
*********

ಹೋಗಿ ಬರುವೆನೆಂದವನು
ಇದ್ದಲ್ಲೇ ಇರುವೆಯಲ್ಲಾ
ಹೀಗೆ ಆದರೆ ಮುಂದೆ
ಹೇಗೆ ನಂಬುವುದು ನಿನ್ನ.
*********

11-10-2021. 2.55pm

ಚುಟುಕುಗಳು “ಕಾವ್ಯ”

ಕಾವ್ಯದ ಕೊಳದಲ್ಲಿ
ಖನಿಜದ ಲಾವಣಿ
ಅಗೆದಷ್ಟೂ ಬಗೆದಷ್ಟೂ
ಮುಗಿಯದು ಚಾವಣಿ.
************

ಪ್ರತಿಭಾನ್ವಿತ ಲೇಖಕರ
ಒಂದು ಲೈಕು
ದಿಢೀರನೆ ಆಗುವುದು
ಮನಸು ಹೈಕು.
**********

ಕೆಂಪಿಂಕಿನ ಬಣ್ಣದಲ್ಲಿ
ಕಳೆ ಕಳೆಯಾಗಿ
ಕಾಣುವುದೇ ಇಲ್ಲ ನೀನು
ಅದೇನಷ್ಟೊಂದು ಆಸೆ
ಕಪ್ಪು ಕೊಳದಲ್ಲಿ ಮಿಂದೇಳಲು?
***********

ಕೆಲವರಿಗೇ ಮಾತ್ರ ದಕ್ಕುವ ಪ್ರಶಸ್ತಿ
ಎಲ್ಲರಿಗೂ ದಕ್ಕುವುದಿಲ್ಲ ಏಕೆ?
ಹೀಗೊಂದು ಪ್ರಶ್ನೆ ಕಾಡಿದಾಗ
ಅಂದುಕೊಂಡುಬಿಡಿ
ಅದು ಪ್ರಶಸ್ತಿ ಅಲ್ಲ ವಶೀಲಿ!
***********

ಖುಷಿಗೆ ಕವಿತೆಗಳು ಅರಳುತ್ತವೆ
ವಿಧವಿಧವಾದ ಭಂಗಿ, ಬಣ್ಣಗಳಲ್ಲಿ
ನಮ್ಮೂರ ಹಿತ್ತಲ ಡೇರೆ ಹೂಗಳಂತೆ
ಥೇಟ್ ಅಮ್ಮ ಮಡಿಚಿಟ್ಟ ಸೀರೆಗಳಂತೆ
ಕಪಾಟಿನ ತುಂಬ ಒಪ್ಪವಾಗಿ ಜೋಡಿಸಿ
ಆಗಾಗ ಮೈದಡವುತ್ತೇನೆ ಅವಳ ಕಂಡಂತೆ.

24-8-2021. 9.45pm

ಚುಟುಕುಗಳು “ವಾಸ್ತವ”

ನೀನು ತಂದ ಸೀರೆ
ಉಡಲುನೋಡಿದೆ
ನೆರಿಗೆ ಹಿಂಜಿ
ಬಣ್ಣ ಕಳೆದುಕೊಂಡಿತ್ತು
ನೀನಿಲ್ಲದ ಬದುಕಂತೆ.
**********

ಬದುಕಿನ್ನು ನಿಂತ ನೀರೆಂದು
ಮುಳುಗಲು ಹೋದೆ
ಅಲ್ಲಿ ನಿನ್ನ ಪ್ರತಿಬಿಂಬ ಕಂಡು
ಅನಾಮತ್ತಾಗಿ ಎದ್ದು ಬಂದೆ.
*********

ಹೆಚ್ಚು ಹೊತ್ತು ನಿನ್ನೊಂದಿಗಿರಲು
ಮನ ಬಯಸುತ್ತಿತ್ತು ಅಂದು
ಎಷ್ಟು ಬೇಗ ಜಾಗ ಖಾಲಿ ಮಾಡುತ್ತಿ
ಮನ ಬಯಸುವುದು ಇಂದು.
***********

ಮತ್ತೇನಿಲ್ಲ ನೀನು ಆಗ
ಸದಾ ಮುಳುಗಿರುತ್ತಿದ್ದಿ
ನನ್ನ ಗುಂಗಿನಲ್ಲಿ
ಈಗದು ಬದಲಾಗಿ
ಮೊಬೈಲ್ ಮಾಡಿತು
ನಮ್ಮ ಸ್ನೇಹ ಚಿಂದಿ.
**********

ಕರೆದಾಗ ಬರುವೆನೆಂದು
ಕರೆದಲ್ಲಿಗೆ ಬಾರದಿರುವ ನೀನು
ಕಂಜೂಸು ನೀನು ಎಂಬುದು
ಕೂಡಿಟ್ಟ ನಿನ್ನ ಸಂಪತ್ತು ಖಚಿತಪಡಿಸಿತು.
************

ಇರುವೆನೆಂದು ಬಂದ ನೀನು
ಬಾಂಧವ್ಯ ಕಳಚಿಕೊಂಡು ಹೋದೆಯಲ್ಲ
ನೀನಿರದುದಕೆ ನನಗೇನೂ ಚಿಂತೆಯಿಲ್ಲ ಬಿಡು
ಆದರೆ ಮಕ್ಕಳು ಹೇಳುತಾವೆ
ನಮಗೂ ಅಪ್ಪ ಇರಬೇಕಿತ್ತು.
***********

ನವಿಲುಗರಿಯ ಅಂದವನ್ನು
ನಿನ್ನ ವದನದಲ್ಲಿ ಕಂಡೆ
ನರಿಯ ಬುದ್ಧಿಯನ್ನು
ನಿನ್ನ ಕಟ್ಟಿಕೊಂಡು ಉಂಡೆ.

************

ಎಲ್ಲೋ ಏನೋ ಕೊರತೆಯಿದೆ
ಎಂದೆನಿಸುವುದು ಸಹಜ ಎಂದಾದರೊಮ್ಮೆ
ಹೇಳಿಕೊಳ್ಳಲು ಸಾಂತ್ವನ ನೀಡಬಲ್ಲ
ಒಂದು ಮನಸ್ಸು ಜೊತೆಗಿದ್ದರೆ ಸಾಕು ನಿರಾಳ.
************

ಹೀಗೆಯೇ ಇದ್ದು ನಿನ್ನೊಂದಿಗೆ
ಸವೆದ ದಾರಿ ಈಗ ಶೂನ್ಯ
ನೆನಪುಗಳು ಮರುಕಳಿಸುತಾವೆ
ಬೆನ್ನಟ್ಟಿ ಬರುವ ನೆರಳಿನಂತೆ.
*********

ಆಗ ಮಾತಿತ್ತು
ಈಗ ಮೌನ ಸುಡುಗಾಡು ಸಂತೆ
ಬಳಿ ನೀನಿದ್ದಷ್ಟೂ ಹೊತ್ತು
ಗೊತ್ತಾಗಲೇ ಇಲ್ಲ ಅದರ ಕಿಮ್ಮತ್ತು.
***********

ಇದ್ದಾಗ ಇಲ್ಲದ ಚಿಂತೆ
ಈಗ್ಯಾಕೆ ನಿನಗೆ ಎಂದು ಕೇಳುವುದಾದರೆ
ಯಮನಿಯಮ ಮೀರಿದವರಾರು
ಹಾಗಂದುಕೊಂಡು ತೆಪ್ಪಗಿರಬೇಕಷ್ಟೇ.
***********

ಆಗ ಮೌನಕ್ಕಿತ್ತು ಬೆಲೆ
ಮನಸ್ಸನ್ನೇ ಮರೆಯುವಷ್ಟು
ಈಗ ಮಾತಿಗೂ ಇಲ್ಲ ನೆಲೆ
ಮಸಣದಷ್ಟು ವಿಕಾರ.
**********

ಚಂಚಲ ಚಿತ್ತ ಗಡಬಡಿಸಿ
ಸೆಟೆದು ನಿಲ್ಲುತ್ತದೆ ಒಮ್ಮೆ ಕಾಣಲು
ನೆನಪು ಚಾಟಿ ಬೀಸಿ ಎಳೆಯುತ್ತದೆ
ಗುಂಗಿನಿಂದ ಹೊರಬರಲು.
***********

16-8-2021. 1.00pm

ಚುಟುಕುಗಳು “ನೀನು”


ನಿನ್ನ ನೆನಪು ಇರಲೆಂದು
Onlineನಲ್ಲಿ ಬರೆದೆ ಒಂದು ಹನಿಗವನ
App install ಮಾಡಲು ಹೋಗಿ
ಅಳಿಸಿ ಮಂಜಾಯಿತು ನಯನ.
**********

ಬಿಟ್ಟಿರಲಾರದ ಮೋಹಕ್ಕೆ
ನಿನ್ನನ್ನು ಕಟ್ಟಿಕೊಂಡೆ
ಈಗ ನುಂಗಲಾರದ ತುತ್ತಾಗಿ
ನನ್ನೇ ನಾನು ಬಲಿಪಶು ಮಾಡಿಕೊಂಡೆ.
*********

ಕಲಿಕೆಗೊಂದು ಕಾರಣ ಬೇಕು
ಕಾರಣಕರ್ತ ನೀನು ಮರೆಯಾದರೂ
ಕಲಿತ ವಿದ್ಯೆ ಗಟ್ಟಿಯಾಯಿತು
ಬದುಕಿಗೆ ಆಸರೆಯಾಯಿತು.
**********

ಎಲ್ಲೋ ಇದ್ದ ನಿನ್ನ
ಈ ಲೆವೆಲ್ಲಿಗೆ ತಂದವಳು ನಾನು
ಈಗ ಈ ಕೆಲಸ ಮಾಡೋದಿಲ್ಲ ಅಂದ್ರೆ ಹೇಗೆ?
ಹೋಗ್ ಹೋಗು ಭಿಕ್ಷೆ ಎತ್ತು!
*********

ನನಗೆ ನೀನು ಬೇಕು
ಎನ್ನುವುದರಲ್ಲಿರುವ ಸಂತೋಷ
ಮಂಜಿನಂತೆ ಕರಗಿ ಹೋಯಿತು
ನಾಣ್ಯಕ್ಕೆ ಎರಡು ಮುಖ ಇದೆ
ಎಂಬ ಸತ್ಯ ನಿನ್ನಲ್ಲೂ ಕಂಡಾಗ.
***********

ಮೌನ ಭಾಷೆಗೆ
ಮಾಲಿಕನು ನೀನು
ಮಾತಿನಲಿ ಮುಳುಗಿಸುವ
ಮಂತ್ರವಾದಿ ನೀನು.
*********

ಅಡರಿಕೊಂಡ ಆಸೆಗಳು ಗರಿಗೆದರುತ್ತವೆ
ನಿನ್ನ ನೆನಪಾದಾಗಲೆಲ್ಲ
ಅಷ್ಟೇ ವೇಗದಲಿ ಅಮರಿಕೊಳ್ಳುತ್ತವೆ
ನೀನಿಲ್ಲವೆಂಬ ಸತ್ಯ ಚಿತೆ ರಾಚಿದಾಗ.
***********

13-7-2021. 7.20pm

ಚುಟುಕುಗಳು “ಅವಸ್ಥೆ”

ಬರಹಗಾರರಿಗೆ ಆತುರ ಇರಬಾರದು
ಬರೆದಿರುವುದನ್ನು ಪುನಃ ಪುನಃ
ಪರಿಶೀಲಿಸುವ ತಾಳ್ಮೆಯಿರಬೇಕು
ತಿದ್ದಿ ತೀಡುವ ಮಾರ್ಗದರ್ಶಕರಿರಬೇಕು
ತಪ್ಪು ಒಪ್ಪುಗಳನ್ನು ಸ್ವೀಕರಿಸುವ
ವಿಶಾಲ ಮನಸ್ಥಿತಿಯಿರಬೇಕು
ಆಗಲೇ ಬರಹಗಳು ಸಾಹಿತ್ಯ ಕ್ಷೇತ್ರದಲ್ಲಿ
ಸರಿಯಾದ ನೆಲೆ ಕಾಣಲು ಸಾಧ್ಯ.
**************

ಹೀಗೆಯೇ ಬರೆಯಬೇಕೆಂಬ
ಹಂಬಲ ನನಗಿರಲಿಲ್ಲ
ಭರವಸೆಯ ಬರಹಗಳು
ಹೇಗೆ ಹುಟ್ಟಿತೆಂಬುದು
ನನಗೆ ಗೊತ್ತೇ ಆಗಲಿಲ್ಲ.
**************

ಮನಸ್ಸಿನ ಮಾತುಗಳನ್ನೆಲ್ಲಾ
ಅಕ್ಷರಗಳಲ್ಲಿ ಕೊರೆಯಲು ಹೋದೆ
ಕೈ ಬೆರಳುಗಳು ಸೋತು ಹೇಳಿತು
ಸಾಕು ಮಾಡು ನಿನ್ನ ಪ್ರತಾಪ.

ನೋಡಿ ಅವಳೂ ಈಗ
ಸಿಡಿಮಿಡಿ ಗುಂಡು.
************

ನೀನೆಂದೂ ನನ್ನ ಕೈಗೆಟುಕದ ಬಿಂದು
ಹೀಗೆಂದು ಭಾವಿಸಿಕೊಂಡೇ ಬೆನ್ನಟ್ಟಿದೆ
ಇನ್ನೇನು ಸೀಕ್ಕೇಬಿಟ್ಟೆ ಎಂತಂದುಕೊಳ್ಳುವಷ್ಟರಲ್ಲೇ
ಮತ್ತೆ ದೂರ ಹೋಗಿ ಓಯಾಸಿಸ್ ಆಗಿದ್ದೇಕೆ?
ಇದು ಇಂದಿಗೂ ಅರ್ಥವಾಗದ ಪ್ರಶ್ನೆ
ನೀನೆಂದರೆ ಹೀಗೇನಾ?
ನಿನ್ನ ಮುಟ್ಟುವ ಪರಿ ಎಂತು????
**********

ಗೊತ್ತಿರಲಿಲ್ಲ ಬರೆಯುವಾಗ
ಕವನಕ್ಕೆ ದಿಕ್ಕಾಗಬೇಕಾದವರು ನಾವೇ ಎಂದು
ಹೇಳುವರು ಪ್ರಕಾಶಕರು
ಅದೊಂದು ಬಿಟ್ಟು ಬೇರೆನಾದರೂ ಇದ್ದರೆ ಕೊಡಿರೆಂದು.

*********

ಅಂಡು ಸುಟ್ಟ ಬೆಕ್ಕಿನಂತೆ
ಮುದುಡಿ ಕುಳಿತ ಕವನಗಳು ಹೇಳಿದವು
ಮತ್ತೆ ಈಗ ನೀನು ಮಾಡುತ್ತಿರುವುದಾದರೂ ಏನು?
ಎಲ್ಲ ಗೊತ್ತಾದ ಮೇಲೂ ಬರೆದೂ ಬರೆದೂ
ಗುಡ್ಡೆ ಹಾಕು.
*****************

10-4-2021. 9.02am
ಚುಟುಕುಗಳು “ಬರಹ”


ಅಂತರಂಗವನು ಅಲುಗಾಡಿಸಿದ
ಅಭ್ಯುದಯದ ಹರಿಕಾರ
ಈಗಲೂ ನೀನಿರುವುದೆನಗೆ
ಬಲೂ ಸೋಜಿಗ.
****************

ನಿನ್ನೊಂದಿಗೆ ಸದಾ ಖುಷಿಯಲ್ಲಿ
ಇರಬಹುದೆಂದು ಅಂದುಕೊಂಡಿರಲಿಲ್ಲ
ಇದೇ ಸತ್ಯವೆಂದು ಅರಿವಾಗಿ ಈಗ
ಮತ್ತೆಂದೂ ದೂರವಾಗುವ ಮನಸು
ಖಂಡಿತಾ ಕನಸಿನಲ್ಲೂ ಮಾಡುವುದಿಲ್ಲ.
****************

ನೀನೊಂದು ಹೂವಿನ ಘಮಲು
ಆಗ್ರಾಣಿಸಿದಷ್ಟೂ ಮತ್ತೆ ಮತ್ತೆ ಬೇಕೆನಿಸುವುದಲ್ಲ
ಈ ವಾಂಛೆಯ ಜಾಲಕ್ಕೆ ಸಿಲುಕಿ ನರಳಾಡಿದಷ್ಟೂ
ಬೇಸರದ ಛಾಯೆ ಹತ್ತಿರವೂ ಸುಳಿಯದಾಯಿತಲ್ಲ
ಅದೇನು ಮೋಡಿ ಮಾಡಿದೆ ಹೇಳು
ನಾನಾಗಿಹೆ ನಿನಗಾಗಲೇ ಶರಣು!
*************

ನಿನ್ನ ಅರಿಯಲು
ಪಟ್ಟ ಬವಣೆಯೆಷ್ಟು
ಈಗ ನಿನ್ನೊಂದಿಗೆ
ಹಾಯಾಗಿರುವೆ
ಆದರೆ ನಿನ್ನ ಬಂಧಿಸಿಟ್ಟು
ಜನರ ಮುಂದಿಡುವಲ್ಲಿ
ಎಷ್ಟು ಹೆಣಗಾಡುತ್ತಿರುವೆ
ಇದು ನಿನಗೇನಾದರೂ ಗೊತ್ತಾ?
****************

ನಿನ್ನಷ್ಟು ನೆಮ್ಮದಿ
ಕೊಡುವವರು ಇನ್ನಾರಿಲ್ಲ
ಅದಕೆ ನಿನ್ನ ಸಹವಾಸದಿಂದ
ದೂರವಾಗುವ ಮನಸು
ನಾನಂತೂ ಮಾಡುವುದಿಲ್ಲ.
*************

ಅನೂಹ್ಯ ಬರಹದಲ್ಲೊಂದು
ಹೇಳಲಾಗದ ಸಂತಸವಡಗಿದೆ
ಗರಿಬಿಚ್ಚಿ ಹಾರಾಡಿದಾಗಲೆಲ್ಲ
ಮೈಮರೆಸುವ ಗುಂಗಿದೆ.
**********

5-3-2021. 4.10am

ಚುಟುಕುಗಳು “ಪ್ರೀತಿ”

ಮನಸ್ಸುಗಳು ಒಂದಾಗುವುದೇ ಪ್ರೀತಿ
ಆಮೇಲೆ ಶುರುವಾಗುವುದು ಪಜೀತಿ
ನೀನು ನಾನು ಒಂದೊಂದಕ್ಕೂ ಜಟಾಪಟಿ
ಇದುವೇ ಪ್ರೀತಿಯ ಕಿತಾಪತಿ.
**********

ಪ್ರೀತಿಯಲಿ ಕಣ್ಣೀರು ಸಹಜ
ಹಾಗಂತ ಕಣ್ಣೀರೆ ಜೀವನವಾಗಬಾರದು
ಸರಸ ವಿರಸಗಳ ಸಾಂಗತ್ಯದಲ್ಲಿ
ಹೊಂದಾಣಿಕೆ, ನಂಬಿಕೆ ಪರಸ್ಪರ
ಇದ್ದರೇನೇ ಬದುಕು ಸುಗಮ
ಪ್ರೀತಿ ಶಾಶ್ವತ.
************

ಪ್ರೀತಿಯ ನೆನಪುಗಳೆಂದೂ ಸಾಯಲ್ಲ
ಪ್ರೀತಿಯಿಲ್ಲದೇ ಉಳಿಗಾಲವಿಲ್ಲ
ಪ್ರೀತಿಗಾಗಿಯೇ ಇರಲಿ ಜೀವನವೆಲ್ಲ.
************

ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ
ಸದಾ ಜುಳು ಜುಳು ಹರಿಯುವ
ನೀನೊಂದು ಒರತೆ.
***************

ನಿನ್ನ ನಗುವೇ ಅತಿ ಸುಂದರ ಹೀಗೆ ಹೇಳುತ್ತ ಬಲೆಯ ಬೀಸಿ
ಜಾರಿಕೊಂಡವರೆಷ್ಟೋ….
ಆದರೂ
ಇಂತಹ ಮಾತಿಗೆ ಕೆಲವರು
ಮರುಳಾಗುವರಲ್ಲಾ
ಅಕಟಕಟಾ….. ಶ್ರೀ ಹರಿ…

************

ನಿನಗೊಂದು ಪ್ರೇಮ ಪತ್ರ
ಬರೆಯಬೇಕೆಂದಿದ್ದೆ
ಆದರೆ ಕನಸಲ್ಲೂ ಬಂದು ಜಗಳವಾಡಿದ್ದಕ್ಕೆ
ತೀರ್ಮಾನ ಬದಲಾಯಿಸಿದೆ
ಈಗ ಉಳಿದಿರುವುದು
ಬಂದು ಆಶೀರ್ವಾದ ಮಾಡುವುದು
ಮಂಗಲ ವಾದ್ಯ ಮೊಳಗುವಾಗ
ಮನಸ್ಸು ಗಟ್ಟಿಮಾಡಿಕೊ ಅಷ್ಟೇ.
************

3-3-2021. 6.00pm

ಚುಟುಕುಗಳು “ಆಲಾಪನೆ”

ನಿನ್ನ ಸಾಂಗತ್ಯದಲ್ಲಿ
ಎಷ್ಟೊಂದು ಖುಷಿಯಿದೆ
ಬೆನ್ನಟ್ಟಿ ಬರುವ
ನೂರೆಂಟು ಸಮಸ್ಯೆಗಳಿಗೆ
ಸಾಂತ್ವನದ ಮಾತಿದೆ
ಅರೆಕ್ಷಣ ಅಗಲಿಕೆಗೆ
ಮನ ಒಲ್ಲೆ ಎಂದಿದೆ
ದಿನಗಳುರುಳಿದಂತೆ
ಮನ ಕಂಗೆಟ್ಟು ಕೂತಿದೆ.
************

ಮಾತಿಂದು ಮೌನವಾಗಿದೆ
ಮನಸು ಬೇಸರಗೊಂಡಿದೆ
ಮಸ್ತಕದ ತುಂಬೆಲ್ಲ ಬಿಡದೆ
ಅವನ ನೆನಪೇ ಕಾಡಿದೆ.
*************

ಮನಸ್ಸು ಚಿಗುರೆಯಂತೆ ಕುಣಿಯಿತು
ಖುಷಿಯಿಂದ ಕಣ್ಣಂಚಲಿ ನೀರು ಜಿನುಗಿತು
ತನು ಹೃದಯದೆಬ್ಬಾಗಿಲಿಗೆ ತೋರಣ ಕಟ್ಟಿತು
ಶೃಂಗಾರದಿ ಮಿಂದೆದ್ದ ಕೋಮಲ ಮನಸ್ಸು
ನಾಚಿಕೆಯಿಂದ ಭುವಿಯಲ್ಲಿ ರಂಗೋಲಿ ಬಿಡಿಸಿತು.
*************

ನಗುವ ಹೂವಾದರೆ
ದುಂಬಿಯು ನಾನಾಗಿ ಬರುವೆ
ಮಕರಂದ ಹೀರುತ್ತಾ
ಬಳಿಯಲ್ಲೇ ಗೂಡು ಕಟ್ಟುವೆ
ದುಷ್ಟರು ಕೀಳುವಾಗ ಅಳುತ್ತಾ
ಪುರ್.. ಎಂದು ಹಾರಿ ಹೋಗುವೆ.
************

14-2-2021. 12.15pm

ಚುಟುಕುಗಳು “ಅಂತ್ಯ ಪ್ರಾಸಾ”

ನೆಂಟ ಬಲು ತುಂಟ
ಮೆಲ್ಲಗೆ ಬರುವ ಬಂಟ
ಒಬ್ಬಟ್ಟು ಏರಿಸುವ ಎಂಟ
ಮಲಗೆದ್ದು ಸದ್ದಿಲ್ಲದೆ ಹೊಂಟ.
***************

ಟ್ವೆಂಟಿ ಟ್ವೆಂಟಿ ವರ್ಷ
ಕೊರೋನಾ ಕೇಕೆ ವರ್ಷ
ಟ್ವೆಂಟಿ ಟ್ವೆಂಟಿಒನ್ ವರ್ಷ
ಮತ್ತೇನಾಗುತ್ತೋ ಈ ವರ್ಷ
****************

ಕೊವ್ಯಾಕ್ಸಿನ್ ಬಂದಿದೆಯಂತೆ
ಹಾಕಿಸಿಕೊಳ್ಳುವವರಿಗೆ ಧೈರ್ಯ ಬೇಕಂತೆ
ಇಲ್ಲೂ ರಾಜಕೀಯ ಬೆರಳಾಡಿಸಿದೆಯಂತೆ
ಅಂತೆ ಕಂತೆಗಳ ಸಂತೆಯಲಿ ಬೆನ್ನಟ್ಟಿದೆ ಚಿಂತೆ.
************

ಕೋವಿಡ್ ಕಾಲ ಬೀದಿಯೆಲ್ಲ ಭಣ ಭಣ
ಅಡಿಗೆ ಮನೆಯಲ್ಲಿ ಪಾತ್ರೆಗಳ ಟಣಟಣ
ದಿಕ್ಕೆಟ್ಟ ಬದುಕಿನ ಪಯಣ
ಪೊಲ್ಯೂಷನ್ ಮುಕ್ತ ವಾತಾವರಣ.
****************

ಕೆಲಸ ಆಗಬೇಕಾದ ಕಾಲಕ್ಕೇ ಆಗುವುದು
ನೀವೆಷ್ಟು ಪ್ರಯತ್ನಿಸಿದರೂ ಕೂಡಿ ಬರದು
ಕಾಲ ಕೂಡಿ ಬರಬೇಕೆಂದು ಇದಕ್ಕೇ ಹೇಳುವುದು
ಸುಮ್ಮನಿದ್ದು ಬಿಡಿ ಸಾಕು ಅದರಷ್ಟಕ್ಕೇ ನಡೆಯುವುದು.
*****************

ರಾಜಕೀಯವೆಂಬುದು ದುಡ್ಡು ಮಾಡುವ ತಾಣ
ಆಮಿಷಕ್ಕೆ ಬಲಿಯಾಗದಿರುವವರು ಯಾರೂ ಕಾಣಾ
ಕಂತೆ ಕಂತೆ ನೋಟು ತಂದು ಮನೆಯೆಲ್ಲ ಝಣಝಣ
ಸಿಬಿಐ ಕಣ್ಣಿಗೆ ಬಿದ್ದರೆ ಮನೆ ಗುಡಿಸಿ ಗುಡಾಣ.
*************
11-1-2021. 8.54am

ಚುಟುಕುಗಳು “ಅವಸ್ಥೆ”

ಇರುವುದೇನೋ ತಟ್ಟಿ ಬಿಡಾರ
ಹೊತ್ತು ಕೂಳಿಗಿರಲಿಲ್ಲ ತತ್ವಾರ
ದುಡಿವ ಕೈಗಳಿಗೆ ಕೆಲಸವಿತ್ತು ಆಗ
ಕೊರೋನಾ ಮಾಡಿದ ಆವಾಂತರ
ಬದುಕಾಗಿದೆ ಈಗ ಯಪರಾ ತಪರಾ.
****************

ಕೋವಿಡ್ಡು ಬಂದು ಬಾಡಿಗೆ ಮನೆ
ಆಗುತ್ತಿದೆ ಒಂದೊಂದೇ ಖಾಲಿ
ಹೀಗೆಯೇ ಮುಂದುವರಿದರೆ
ಇದನ್ನೇ ನಂಬಿಕೊಂಡವರ ಬದುಕು
ಆಗುವುದು ಯಡಬಿಡಂಗಿ.
****************

ಕಿಮ್ಮತ್ತೆಲ್ಲಿದೆ ಸಾವಿಗೆ
ನಿಲ್ಲದ ಕೋವಿಡ್ ಹಾವಳಿಗೆ
ಹೀಗೆಯೇ ಮುಂದುವರೆದರೆ ಗತಿ?
ಯೋಚನೆ ಶುರುವಾಗಿದೆ.
****************

ಪಕ್ಕನೆ ನೀನು ಹೋಗುವುದಿಲ್ಲ
ಆಗಿದೆ ಮನದಟ್ಟು ನಮಗೀಗ
ವಿಜ್ಞಾನ ಎಷ್ಟು ಮುಂದುವರಿದರೇನು
ಮಂಡಿಯೂರಿ ಕುಳಿತಿಹರು ಶರಣಾಗಿ.
****************

ದಿಢೀರನೆ ಬಂದು ನಿದ್ದೆಗೆಡಿಸಿ
ಜಂಗಾಲವನ್ನೇ ಅಲುಗಿಸಿಬಿಟ್ಟೆ
ಬದುಕು ಮೂರಾಬಟ್ಟೆ ಮಾಡುವ ಬದಲು
ಒಮ್ಮೆಲೆ ತಿಂದು ಹಾಕಿಬಿಡು ಸಾಕು.
*****************

ಕೋವಿಡ್ ಕಾಲ ಕಲಿಸಿತು
ಮನೆಯಲ್ಲಿ ಮಾಡಿ ತಿನ್ನುವುದು
ಕಸ ಮುಸುರೆ ತೊಳೆದು
ಅಚ್ಚುಕಟ್ಟಾಗಿ ಮನೆಯಲ್ಲೇ ಇರುವುದು
ಕಷಾಯ ಮಾಡಿ ಕುಡಿಯುವುದು.
*****************

ಸುಖಾಸುಮ್ಮನೆ ಅಂಡಲೆಯುವ
ಮಂದಿ ಕಂಡರೆ ಅನಿಸುವುದು
ಇವರಿಗೆಲ್ಲ ಮೂಗುದಾರ ಹಾಕಲು
ಕೋವಿಡ್ ಕಾಲಿಟ್ಟಿರಬಹುದೇನೋ!
****************

ಕೋವಿಡ್ ಲಸಿಕೆ ಬಂದಾಯ್ತು
ಶೀಘ್ರವಾಗಿ ಜನರಿಗೆ ತಲುಪಲು
ಡೆಲಿವರಿ ಬಾಯ್ಸ್ ಗಳಿಗೆ
ಟ್ರೇನಿಂಗ್ ಕೊಟ್ಟಿದ್ದರೆ
ಚೆನ್ನಾಗಿರ್ತಿತ್ತೇನೋ ಅಲ್ವಾ?

4-1-2021. 5.15pm