ಕಿಂದರ್ ಜೋಗಿ

ನಾಲ್ಕು ಗಂಟೆಯ ಸಮಯ. ಚಾಪೆಯ ಮೇಲೆ ಅಡ್ಡಲಾಗಿ ಒಂದಷ್ಟು ಹರಟೆ ನಡಿತಾ ಇತ್ತು ಅಣ್ಣನ ಮಗನ ಜೊತೆ ಕಲ್ಮನೆಯ ತವರೂರ ಮನೆಯಲ್ಲಿ. ಕಿಂದರ ಜೋಗಿಯ ಸುಶ್ರಾವ್ಯ ಹಾಡು ಕಿವಿಗೆ ಬಿದ್ದಿದ್ದೇ ತಡ ಕೈಗೆತ್ತಿಕೊಂಡೆ Mi pad. ಮೊಬೈಲ್ ತೆಗೆದುಕೊಳ್ಳೋದೂ ಮರಿಲಿಲ್ಲ ಗಡಿಬಿಡಿಯ ಧಾವಂತದಲ್ಲಿ ನಾ ಹೋಗುವುದ ಕಂಡು “ಹೋಯ್ಯ ಬಬ್ಬತ್ತೆ ನಿಧಾನ. ಎಂತಕ್ಕೆ ಇಷ್ಟ ಗಡಿಬಿಡಿಯ ನಡಿಗೆ?”

ಅವನಿಗೆ ಉತ್ತರಿಸುವ ಕಷ್ಟ ತಗೊಳ್ಳದೇ ಅದಾಗಲೇ ಮುಂಬಾಗಿಲ ಕಟ್ಟೆಯಲ್ಲಿ ಕುಳಿತ ಅವರೊಂದಿಗೆ ನನ್ನ ಚರ್ಚೆ ಶುರುವಾಯಿತು. ಅವರುಗಳೂ ಅಷ್ಟೇ ಉತ್ಸಾಹದಲ್ಲಿ ನನ್ನೊಂದಿಗೆ ತಮ್ಮ ಜೀವನಾನುಭವ ಹಂಚಿಕೊಂಡರು. ಮೊಬೈಲ್ ಡೈರಿಯಲ್ಲಿ ನೋಟ್ ಮಾಡಿಕೊಂಡೆ ಅವರ ಮಾತು ಅನುಭವ.

” ನನ್ನ ಹೆಸರು ಗುಡ್ಡಪ್ಪ ಜೋಗಿ. ಇವರು ನನ್ನ ಸೋದರ ಮಾವ. ಹೆಸರು ರಾಮಪ್ಪ ಜೋಗಿ. ವಯಸ್ಸು ಅರವತ್ತು ವರ್ಷ. ಊರು ತಿಳವಳ್ಳಿ. ಶಾಲೆಯ ಮೆಟ್ಟಿಲು ನಾವ್ಯಾರು ತುಳಿದವರಲ್ಲ. ಕಿಂಚಿತ್ತೂ ಅಕ್ಷರ ಜ್ಞಾನವಂತೂ ಇಲ್ಲವೇ ಇಲ್ಲ. ಮೂವತ್ತು ವರ್ಷಗಳಿಂದ ಹೀಗೆ ಊರೂರು ಅಲೆಯುತ್ತ ಅಜ್ಜನವರ ಸಂಪ್ರದಾಯ ನಡೆಸಿಕೊಂಡು ಬರುತ್ತಿದ್ದೇವೆ. ವರ್ಷಕ್ಕೆ ಒಂದು ನಾಲ್ಕು ದಿನ ಮನೆ ಮನೆ ತಿರುಗಿ ಸಂಭಾವನೆ ಮಾಡುವುದು. ಹೇರೂರು, ತಟ್ಟಿಕೈ ಹೀಗೆ ಸುತ್ತಮುತ್ತಲ ಹಳ್ಳಿಗಳಿಗೆ ಭೇಟಿ ಮಾಡಿ ಹಿರಿಯರಿಂದ ಕೇಳಿ ಕಲಿತ ಜಾನಪದ ಹಾಡುಗಳನ್ನು ಹಾಡುತ್ತೇವೆ.

ಬನವಾಸಿಯಲ್ಲಿ ನೆಂಟರ ಮನೆಯಲ್ಲಿ ಇರುವುದು. ಮುಂಜಾನೆ ಬೇಗ ಎದ್ದು ಹೊರಟು ಸಾಧ್ಯವಾದಷ್ಟು ಮನೆಗಳಿಗೆ ಭೇಟಿ ಕೊಡುತ್ತೇವೆ. ಸಂಪಾದನೆ ಲೆಕ್ಕಕ್ಕೆ ಬರುವುದಿಲ್ಲ. ಸಂಭಾವನೆಯಿಂದ ಬಂದ ಅಡಿಕೆ ಕವಳಕ್ಕೆ. ವರ್ಷಕ್ಕೆ ಒಂದು ಸಾರಿ ಬರೋದು. ಇದು ನಮ್ಮ ಮನೆತನದ ಸಂಪ್ರದಾಯ. ಕುಲದೇವರಿಗೂ ಶಾಂತಿ ನಮಗೂ ಸಮಾಧಾನ.

ಮಂಗಳೂರಿನ ಕದರಿಯ ಕಾಳಭೈರೇಶ್ವರ ನಮ್ಮ ಕುಲದೇವರು. ಇಲ್ಲಿ ಹತ್ತಿರವಿರುವ ಚಂದ್ರಗುತ್ತಿ ದೇವರಿಗೆ ನಡಕೋತೀವಿ.

ಊರಲ್ಲಿ ಗದ್ದೆ ಕೆಲಸ ಮಾಡೋದು. ಒಂದುವರೆ ಎಕರೆ ಹೊಲ ಇದೆ. ಯಾರದಾರೂ ಕೆಲಸಕ್ಕೆ ಕರೆದರೆ ಹೋಗೋದು. ಬೇರೆಯವರು ಹಳೆಜನ ಹಾಡು ಹೇಳಿರುವುದು ಕೇಳಿ ಕಲಿತಿರೋದು.

ನಮಗೆ ಸರಕಾರದಿಂದ ಯಾವ ಸಹಾಯವೂ ಸಿಗುತ್ತಿಲ್ಲ.
ನಾವು ಜೋಗಿ ಜನಾಂಗದವರು. ಜೋಗಿ ಸಮಾವೇಶ ಮಾಡಿದ್ದೇವೆ. ಜೋಗಿ ಪದ ಜಾನಪದ ಪದ್ಯ ಗಳನ್ನು ಹಾಡುತ್ತೇವೆ. ಕಿಂದರ್ ಜೋಗಿ ಅಂತ ನಮ್ಮನ್ನು ಕರೆಯುತ್ತಾರೆ.

“ಮತ್ತೆ ನೀವು ಭಾರಿಸುವ ಈ ಸಾಧನಕ್ಕೆ ಏನಂತ ಕರಿತಿರಿ?”

“ಇದಕ್ರೀ? ಕಿನ್ನೂರಿ ಅಂತಾರಿ.”

“ಇದು ಯಾವುದರಿಂದ ಮಾಡುತ್ತಾರೆ?”

” ಹಾಲುಗುಂಬಳಕಾಯಿ, ಸೋರೆಕಾಯಿ ಅಂತಾರಲ್ಲರಿ? ಅದರಿಂದ ಮಾಡತಾರಿ. ನಿಮಗೆ ಸ್ವಲ್ಪ ಬೀಜ ಕೊಡಲೇನ್ರಿ?” ಅನ್ನುತ್ತ ಜೋಗಿಯು ಚೀಲದೊಳಗಿಂತ ಒಂದು ಮುಷ್ಟಿ ಸೋರೆಕಾಯಿ ಬೀಜ ತೆಗೆದು ಕೊಟ್ಟ.

ನಾನು ಬೆರಗಾಗಿ ನೋಡುವುದ ನೋಡಿ “ನಮಗೆ ಗೊತ್ರಿ. ಹಳ್ಳಿ ಮಂದಿ ಹೋದಲ್ಲೆಲ್ಲ ಬೀಜ ತಂದಿರೇನ್ರಿ ಅಂತ ಕೇಳ್ತಾರ. ಅದಕ ಯಾವಾಗಲೂ ಜೋಳಿಗೆಯೊಳಗ ಬೀಜ ಇಟ್ಟುಕೊಂಡು ಬರ್ತೀವ್ರಿ. ನಿಮ್ಮ ಅಜ್ಜಿ ಕಾಲದಿಂದಲೂ ಬರ್ತೀವಲ್ರೀ. ಪ್ರತೀ ವರ್ಷ ಇಲ್ಲ ಅಂದರೆ ಇನ್ನೊಂದು ವರ್ಷ ಬಂದೇ ಬರ್ತೀವ್ರಿ. ಹಾಂಗಂತ ನಾವ್ ಎಲ್ಲರ ಮನಿಗೆ ಹೋಗೋದಿಲ್ಲರಿ. ಎಲ್ಲಿ ನಮ್ಮ ಹಾಡಿಗೆ ಆದರ ಸಿಗ್ತದೊ, ಗೌರವಿಸ್ತಾರೊ ಅವರ ಮನಿಗೆ ಮಾತ್ರ ಹೋಗ್ತೀವ್ರಿ. ಅಜ್ಜಿ, ನಿಮ್ಮವ್ವಾ ಭಾಳ್ ಚೋಲೋರ್ವದಾರಿ. ಅವರೀಗಿಲ್ಲ ಅನ್ನೂದು ನಮಗೆ ಬ್ಯಾಸರ” ಎಂದು ಹಿರಿಯ ಜೀವ ಅರವತ್ತು ವರ್ಷದ ರಾಮಪ್ಪ ಜೋಗಿಯವರು ಹೇಳಿದಾಗ ನನಗೆ ಕಣ್ಣು ತುಂಬಿ ಬಂತು, ಹೆಮ್ಮೆ ಆಯಿತು.

ನನ್ನ ಕೈಗೆ ಕಿನ್ನೂರಿ ಕೊಟ್ಟು” ನೀವೂ ಒಮ್ಮೆ ಭಾರಸರಿ, ಹೀಂಗ ಹಿಡಕಬೇಕರಿ” ಅಂತ ಹೇಳಿಕೊಟ್ಟರೂ ಸಾಧ್ಯ ಆಗಲಿಲ್ಲ.

ಇಬ್ಬರೂ ಆ ಕಿನ್ನರಿ ಮೀಟಿ ಮೀಟಿ ಸ್ವರ ಹೊಮ್ಮುವ ಏಕತಾನತೆಯ ಕುರಿತು ಒಂದಷ್ಟು ಮಾಹಿತಿ ನೀಡಿದಾಗ ಒಂದು ಚಂದದ ಜಾನಪದ ಶೈಲಿಯ ಹಾಡು ಹಾಡಿರೆಂದು ಕೇಳಿಕೊಂಡು ವಿಡಿಯೋ ಮಾಡುವ ಸ್ಟೈಲಲ್ಲಿ ಕೂತೆ. ಸುತ್ತೆಲ್ಲ ಕುಳಿತ ಮನೆ ಮಂದಿಗೆ ಶಾಂತವಾಗಿರಿ ಅಂದೆ.

ಅವರಿಗೋ ಬಲೂ ಸಂಭ್ರಮ. ನೀಟಾಗಿ ಪೋಸ್ ಕೊಟ್ರು ಕ್ಲಿಕ್ಕಿಸಲು. ಬಹಳ ಖುಷಿಯಿಂದ ಚಂದದ ಜಾನಪದ ಹಾಡು ಹಾಡಿದರು.

ಅವರಿಗೆ ಅಡಿಕೆ ಮತ್ತು ದುಡ್ಡು ಸಂಭಾವನೆಯಾಗಿ ಕೊಟ್ಟಾಗ ” ಅಕ್ಕಾವರೆ ಒಂದು ವರ್ಷದ ಹಿಂದೆ ಟೀವಿಯವರು ನಮ್ಮ ಫೋಟೋ ತೆಗೆದು ಹಾಡು ಹಾಡಿಸಿದ್ರಿ. ಈಗ ನೀವ ನೋಡಿ ನಮ್ಮ ಫೋಟೋ ತೆಗೆದು ಹಾಡಿಸಿದ್ರಿ. ಬಹಳ ಖುಷಿ ಆತು. ಪೇಪರಿನಾಗ ನಮ್ಮ ಫೋಟೋ ಬಂದರ ತಿಳಿಸ್ರಿ ” ಅಂದು ತಮ್ಮ ದೂರವಾಣಿ ನಂ. ಕೊಡುವುದು ಮರೆಯಲಿಲ್ಲ.

“ಆಗಲಿ, ಬರೆದು ಪೇಪರಿಗೂ ಕಳಿಸ್ತೇನೆ. ಅದರಿಂದ ಬಂದ ಹಣ ನಿಮಗೇ ಕೊಡುತ್ತೇನೆ ” ಎಂಬ ಆಶ್ವಾಸನೆಯೊಂದಿಗೆ ಬೀಳ್ಕೊಟ್ಟೆ.

ಜಾನಪದದ ಸುಂದರ ಸುಶ್ರಾವ್ಯ ಹಾಡುಗಳನ್ನು ಹಿರಿಯರಿಂದ ಕೇಳಿ ಕಲಿತು ಜನರ ಮುಂದೆ ಹಾಡಿ ಹಿರಿಯರಿಗೆ ಗೌರವ ಸಲ್ಲಿಸುವ ಪರಿ, ಕುಲ ದೇವರಿಗೆ ನಡೆದುಕೊಳ್ಳುವ ಅವರ ಭಕ್ತಿ, ಆ ಕಂಠ ಸಿರಿಗೆ ನನ್ನದೊಂದು ಸಲಾಂ. ಈ ಕಲೆ ಉಳಿಯಲಿ, ಬೆಳೆಯಲಿ ಎಂಬುದೇ ನನ್ನ ಆಶಯ.

ನಾ ಕೇಳಿದ ಹಾಡು ನೀವೂ ಕೇಳಿ‌ ಈ ಕೆಳಗಿನ ಲಿಂಕಲ್ಲಿ.

12-5-2018. 9.33pm

https://photos.app.goo.gl/BQbs24l4b23ZNVN63

ಕೌದಿ ಅಮ್ಮಾ ಕೌದಿ^^^^^^

ಅಂದು ಶನಿವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಇರಬಹುದು. ಹೆಂಗಸೊಬ್ಬಳು “ಕೌದಿ ಅಮ್ಮ ಕೌದಿ” ಎಂದು ಕೂಗುತ್ತ ಸಾಗುತ್ತಿದ್ದಳು ಮನೆ ಮುಂದಿನ ರಸ್ತೆಯಲ್ಲಿ. ಅಡಿಗೆ ಮನೆಯಲ್ಲಿ ಇದ್ದ ನನ್ನ ಕಿವಿ ನೆಟ್ಟಗಾಯಿತು. ಉರಿಯುವ ಒಲೆ ಪಟಕ್ಕೆಂದು ಆರಿಸಿ ಒಂದೇ ನೆಗೆತಕೆ ಗೇಟಿನ ಹತ್ತಿರ ಓಡಿ ಬಂದೆ. ಮನಸಲ್ಲಿ ಅವಳೆಲ್ಲಿ ಹೋಗಿಬಿಟ್ಟರೆ ಅನ್ನುವ ಆತಂಕ. ಕೌದಿ ನನಗಷ್ಟು ಇಷ್ಟ ಹಲವು ವರ್ಷಗಳ ಹಿಂದೆ ಕಂಡ ನನ್ನ ಕಣ್ಣುಗಳು ಇನ್ನೂ ಮರೆತಿಲ್ಲ. ಅದೇ ಘಾಶಿ, ರಜಾಯಿ ಎಂದು ಕೆಲವರು ಕರೆದರೆ ಸಾಮಾನ್ಯವಾಗಿ ವಾಡಿಕೆಯಲ್ಲಿ ಇರುವುದು ಕೌದಿ ಎಂದೇ ಕರೆಯುವುದು.

“ಏಯ್ ಕೌದಿ ಬಾಮ್ಮ ಇಲ್ಲಿ ” ಕರೆದೆ ಜೋರಾಗಿ. ಅವಳೊ ನನ್ನ ನೋಡಿದವಳೆ ಖುಷಿಯಿಂದ “ಕೌದಿ ಹೊಲಿಸ್ತೀರಾ ಅವ್ವಾ?. ಕೊಡಿ ಹಳೆ ಸೀರೆ ಬೆಡ್ಶೀಟ್.” ಹೇಳುತ್ತ ಬಂದೇ ಬಿಟ್ಟಳು ಗೇಟಿನ ಮುಂದೆ. ನನನಗೊ ಇತ್ತ ಅಡಿಗೆ ಬೇರೆ ಮಾಡೋದಿದೆ ; ಮನಸಲ್ಲೆ ಚಕಚಕನೆ ಗುಣಾಕಾರ ಭಾಗಾಕಾರ ಹಾಕಿ ಹೇಳಿದೆ “ನೋಡು ನನಗೀಗ ಟೈಮಿಲ್ಲ. ನೀನೊಂದು ಎರಡು ಎರಡೂವರೆ ಗಂಟೆಗೆ ಬರೋದಾದರೆ ನಾನು ಹೊಲಿಸುತ್ತೇನೆ. ಬಟ್ಟೆ ತೆಗೆದಿರಿಸುತ್ತೇನೆ. ಚಂದವಾಗಿ ಹೊಲಿಬೇಕು ಆಯ್ತಾ?”
ಏಕೆಂದರೆ ಅವಳು ಮತ್ತೆ ಬರದಿದ್ದರೆ! ಗಟ್ಟಿ ಆಸೆ ಹುಟ್ಟಿಸಿದೆ☺

” ನೋಡಿ ಅವ್ವಾ ಒಂದು ತಾಸು ಬಿಟ್ಟು ಬರುತೀನವ್ವ. ಎಲ್ಲಾ ತೆಗೆದಿಡ್ರಿ” ಅಂತಂದು ಹೋದಳು. ನನಗೊ ಇತ್ತ ಸಡಗರ ಹೊಸ ಸೀರೆ ಮನೆಗೆ ತರುವಾಗಿನ ಗಳಿಗೆಯಂತೆ. ಪಟಪಟ ಅಡಿಗೆ ಮಾಡಿ ಉಂಡುಟ್ಟು ಇರೊ ಬರೊ ಬೆಡ್ಶೀಟ್ ಸೀರೆ ಎಲ್ಲ ಒಂದು ಕಡೆ ಪೇರಿಸಿಟ್ಟೆ.

ಕೈನಲ್ಲಿ ಪೆನ್ನು ಪುಸ್ತಕ ಮರೆಯಲಿಲ್ಲ. ಅದು ಇತ್ತೀಚೆಗೆ ಬರೆಯೊ ಚಾಳಿ ತಗಲಾಕ್ಕೊಂಡ ಮೇಲೆ ರೂಢಿಯಾಗಿಬಿಟ್ಟಿದೆ. ಎಲ್ಲಿ ಹೋದರೂ ಅಲ್ಲೊಂದು ವಿಷಯ ಕಣ್ಣಿಗೆ ಬಿದ್ದರೆ ಹಾಗೆ ಗೀಟಾಕೋದು, ಮನೆಗೆ ಬಂದು ಟ್ಯಾಬಲ್ಲಿ ಜಮಾಯಿಸೋದು. ಆದರಂತೆ ಇಲ್ಲಿ ಕೂಡಾ ನೋಟ್ ಮಾಡಿಕೊಳ್ಳಬೇಕಲ್ಲ ಅವರ ಜೀವನ ಶೈಲಿಯ ಮಾಹಿತಿ ಹೀಗೆ ಏನೇನೋ ಲೆಕ್ಕಾಚಾರ.

ಅಂತೂ ನಿರೀಕ್ಷೆಯಂತೆ ಇಬ್ಬರು ಹೆಂಗಸರು ಬಂದರು. ಪಾರ್ಕಿಂಗ್ ಜಾಗದಲ್ಲಿ ಜಾಗ ಮಾಡಿಕೊಟ್ಟು ಬಟ್ಟೆಗಳನ್ನು ಮುಂದಿಟ್ಟೆ. “ಅವ್ವಾವ್ರೆ ನೋಡಿ ಒಂದೊಳ್ಳೆ ಸೀರೆ ಕೊಡ್ರಿ ದಿವಾನದ ಮೇಲೆ ಹಾಕಲು ಚಂದ ಇರ್ತವ್ರಿ. ಸಿಂಗಲ್ ಕೌದಿಗೆ ಮುನ್ನೂರು ರೂಪಾಯಿ ಆಕತ್ರಿ. ಡಬ್ಬಲ್ ಕೌದಿ ಹೊಲಿಯಾಕ ನಾನೂರೈವತ್ತು ಕೊಡ್ಲಬೇಕ ಮತ್ತ ; ನಾವು ಮೊದಲ ರೇಟು ಫಿಕ್ಸ ಮಾಡ್ಬುತ್ತೀವ್ರಿ. ಆಮೇಲ ನಮಗೂ ನಿಮಗೂ ಮಾತು ಬ್ಯಾಡಾ ನೋಡ್ರಿ.” ಕಟ್ನಿಟ್ ವ್ಯವಹಾರ!

ನನಗೋ ಒಳಗೊಳಗೆ ಖುಷಿ. ಇಷ್ಟು ಕಡಿಮೆ ಕೇಳ್ತಾರಾ? ಅಷ್ಟೊಂದು ನೇಯ್ಗೆ ಹಾಕಿ ಹೊಲಿಯಲು! ಆದ್ರೂ ಸಣ್ಣ ಕಂಜೂಸ್ತನ ; “ಸ್ವಲ್ಪ ಕಡಿಮೆ ಮಾಡಮ್ಮಾ, ಅದೇನು ಇಷ್ಟೊಂದು ಹೇಳ್ತೀರಲ್ಲಾ”

” ಇಲ್ಲ ತಾಯಿ, ನಮಗೆ ಗಿಟ್ಟೋದಿಲ್ಲ.”

“ಸರಿ ಹೊಲಿರಿ, ಛಂದ ಹೊಲೀಬೇಕಾ ಮತ್, ನೋಡದವರು ನಾವೂ ಹೊಲಿಸ್ತೀವಿ ಅನ್ಬೇಕಾ ಮತ್ತೆ” ಬ್ಯಾಡ್ ಬ್ಯಾಡಾ ಅಂದರೂ ಭಾಷೆ ಅವರಂತಾಯಿತು ನನಗೇ ಗೊತ್ತಿಲ್ದೆ. ಆಯ್ತು ಬೀರುವಿನಿಂದ ಒಂದೊಳ್ಳೆ ಬಣ್ಣದ ಸೀರೆನೂ ಹೊರ ಬಂತು.

ಮೊಬೈಲು, ಪೆನ್ನು,ಪುಸ್ತಕ ನೋಡಿದ ಒಬ್ಬಳು “ಇದೇನು ಬರ್ಕತ್ತೀರಿ. ಫೋಟೊ ತೆಗಿತೀರಾ?” ಖುಷಿಯಿಂದ ರೆಡಿ ಆದಂತಿತ್ತು ಅವರುಗಳ ಹಾವ ಭಾವ. ಎಷ್ಟು ಸೂಕ್ಷ್ಮ ಮತಿಗಳು ಅಂದರೆ ಆಗಲೆ ಎಲ್ಲೋ ನಡೆದ ಪುರಾಣ ಬಿಚ್ಚಿಟ್ಟರು ಹೆಮ್ಮೆಯಿಂದ ತಮಗೇನು ಇದು ಹೊಸತಲ್ಲ ಎನ್ನುವಂತೆ! ಬಲು ಘಾಟಿ ಅಂದುಕೊಂಡೆ.

” ಅವರು ಟೀವಿಯಲ್ಲಿ ಕೆಲಸ ಮಾಡುವವರು,ನಮ್ಮ ಫೋಟೊ ತೆಗೆದು, ನಮ್ಮ ಹತ್ತಿರ ಊರು, ಕೇರಿ ಅದೂ ಇದೂ ಎಲ್ಲ ವಿಚಾರಿಸಿ ಟೀವಿಯಲ್ಲಿ ಹಾಕ್ತೀನಿ ಅಂದವ್ರೆ. ಅವ್ವಾ ನೀವೂ ಟೀವಿಯವರಾ?”

“ಅಲ್ಲಾ ನಾ ಬರೆಯೋದಷ್ಟೆ.”

“ಮತ್ತೆ ಮೊಬೈಲ್ ಯಾಕೆ? ”

ಪಾಪ! ನಿರಾಸೆಯಾದಂತಂತಿತ್ತು ಮುಖ. ” ನಿಮ್ಮ ಫೋಟೊ ತೆಗೆಯೋಕೆ” ಮತ್ತದೆ ಸಡಗರ. ಒಂದೊಂದೇ ಮಾಹಿತಿ ಮಾತುಗಾತಿಯರಿಂದ ಪಡೆದೆ.

“ಊರು ಹೊಸದುರ್ಗ ತಾಲ್ಲೂಕು ಅಂತರ್ಗಟ್ಟಿ. ಹೆಸರು ಗಂಗಮ್ಮ ಇನ್ನೊಬ್ಬಳ ಹೆಸರು ಹುಲುಗೆಮ್ಮ.. ಮನೆಯಲ್ಲಿ ನಾಲ್ಕು ಐದು ಜನ ಇರೋದು. ಮಕ್ಕಳು ಗೌರ್ನಮೆಂಟ್ ಶಾಲೆಗೆ ಹೋಗ್ತಾರೆ. ಮನೆಯ ಹಿರಿಯರು ಅತ್ತಿ ಮಾವ ಅವರನ್ನು ನೋಡ್ಕೋತಾರೆ. ನಾವು 15 ರಿಂದ 20 ಜನ ಬೆಂಗಳೂರಿನ ಒಂದು ಕಡೆ ಬಂದು ಟೆಂಟ್ ಹಾಕೋದು. ಬೇಸಿಗೆಯಲ್ಲಿ ಮಾತ್ರ ಈ ಕೆಲಸ. ಬೆಳಗ್ಗೆ ಎದ್ದು ರೊಟ್ಟಿ ಮಾಡ್ತೀವಿ ಮನೆಯಲ್ಲಿ ಇದ್ದರೆ. ಈಗ ಇಲ್ಲಿ ಮುದ್ದೆ ಸಾರು ಮಾಡೋದು. ಬೆಳಿಗ್ಗೆ ಏಳಕ್ಕೆಲ್ಲ ಮನೆ ಬಿಡ್ತೀವಿ. ನಾವಿಲ್ಲಿ ಟೆಂಟಲ್ಲಿ ವಾಸ ಮಾಡೋದು. ಸೀರೆಯಿಂದ ತಾಡಪಾಲ್ ತರ ಹೊಲಿದು ಟೆಂಟ್ ಮಾಡ್ಕಂತೀವಿ. ಮಧ್ಯಾಹ್ನದ ಊಟ ಕೌದಿ ಹೊಲಿಸುವವರ ಮನೆಯಲ್ಲಿ ಏನಾರು ಸಿಕ್ಕರೆ ಸಂಜೆ ನಾಲ್ಕಕ್ಕೆಲ್ಲ ಟೆಂಟ್ ಸೇರ್ಕತ್ತೀವಿ. ಕತ್ತಲಾಗೋದರೊಳಗೆ ಅಡಿಗೆ ಮಾಡಬೇಕು. ದೀಪ ಇಲ್ಲರಿ. ಕುಣಿಗಲ್ ಬೈಪಾಸ್ ನೆಲಮಂಗಲದಲ್ಲಿ ನಾಲ್ಕು ಇದೆರಿ ನಮ್ಮ ಟೆಂಟು.”

“ಕೌದಿ ಹೊಲಿಯುವ ದಾರ ಅಂಗಡೀಲಿ ಎಂಟುನೂರು ರೂಪಾಯಿ ಕೇಜಿಗೆ. 2 – 3 ಉಂಡೆ ಒಂದು ತಿಂಗಳು ಬರುತ್ತದ್ರಿ. ಮ್ಯಾಚಿಂಗ್ ಕಲರ್ ದಾರ ಹಾಕಿ ಹೊಲಿಯೋದ್ರಿ. ಎರಡೆಳೆ ದಾರದಲ್ಲಿ ಕಿರಿ ಹೊಲಿಗೆ ಹೇಳೋದು. ಹುಟ್ಟಿ ಬೆಳೆದಿದ್ದೇ ಈ ಹೊಲಿಗೆಯಲ್ಲಿ. ನಮ್ಮ ಜೀವನವೇ ಇದು. ನಮ್ಮ ಹೆರಿಗೆಯೆಲ್ಲ ನಮ್ಮ ಮನೆಯಲ್ಲಿ ಆಗಿರೋದು. ಈಗ ಎಲ್ಲ ಆಸ್ಪತ್ರೆಯಲ್ಲಿ. 20-21ಕ್ಕೆಲ್ಲ ಮದುವೆಯಾಗಿ ಇಬ್ಬರಿಗೂ ನಾಲ್ಕು ಜನ ಮಕ್ಕಳಿದ್ದಾರಿ. ಗರ್ಭಕೋಶ ತೆಗೆಸ್ಬಿಟ್ವಿ. ಹೊಟ್ಟೆ ನೋವಿತ್ರಿ. ನಾವು ಸ್ಕೂಲಿಗೆ ಹೋಗಿಲ್ರಿ. ಇಲ್ಲಿ ನಮಗೆ ಒಗ್ಗಿ ಬರೋದಿಲ್ರಿ, ನಮ್ಮೂರೇ ನಮಗೆ ಚೊಲೊ. ಮರಾಠಿ ನಮ್ಮ ಕಡೆ ಜಾಸ್ತಿ ಇರೋದು. ಬೆಳಗಾಂ ಹಿಂದೀ ಭಾಷೆ ಅಡ್ಜೆಸ್ಟ ಆಗಲ್ಲ. ದಿನಕ್ಕೆ ಐನೂರು ಸಿಗುತ್ತದ್ರಿ. ಎಲ್ಲಾ ಖರ್ಚು ಕಳೆದು ಎರಡು ನೂರು ಉಳೀತದ್ರಿ. ತಿಂಗಳಿಗೊಮ್ಮೆ ಊರಿಗೆ ಹೋಗಿ ಮಕ್ಕಳು ವಯಸ್ಸಾದವರನ್ನು ಮಾತಾಡಿಸಿಕೊಂಡು ದುಡ್ಡು ಕೊಟ್ಟು ಬರ್ತೀವ್ರಿ. ಗ್ಯಾಸ್ ಒಲಿ ಅಡಿಗಿ ಹಿಡಿಸೋದಿಲ್ರಿ. ಸೌದಿ ಒಲಿ ಅಡಿಗೇನೆ ಮಾಡೋದ್ರಿ. ಕಾಡಿಗೆ ಹೋಗಿ ಜಾಲಿ ಮುಳ್ಳು ತರೋದು. ತೆಂಗಿನ ಮರದ ಸೌದೆ ಉಪಯೋಗಿಸಿ ಅಡಿಗೆ ಮಾಡೋದ್ರಿ ಊರಾಗ.”

“ಮಳೆಗಾಲದಲ್ಲಿ ಊರಲ್ಲೆ ಇದ್ದು ಕೆಲಸ ಮಾಡೋದ್ರಿ. ನಮ್ಮ ಕಡೆ ರಗಡ್ ಹಳಿ ಸೀರೆ ಸಿಗ್ತಾವ್ರಿ. ಆಶ್ರಮದವರು ದೊಡ್ಡ ದೊಡ್ಡ ಸಂತೆಯಲ್ಲಿ ಹರಾಜಾಕ್ತಾರಿ ; ಅಲ್ಲಿ ಬಟ್ಟೆ ತಗೊಂಡು ಮಳೆಗಾಲದಲ್ಲಿ ಊರಲ್ಲಿ ಕೌದಿ ಹೊಲಿತೀವ್ರಿ. ಐನೂರಕ್ಕೆಲ್ಲ ರಗಡ್ ಬಟ್ಟಿ ಸಿಗ್ತಾವ್ರಿ. ಪಗಡೆ ಕೌದಿ ಹೊಲಿಯೋದರಿ. ಐದು ತಿಂಗಳು ಆಗುತ್ರಿ ಒಂದು ಕೌದಿ ಹೊಲಿತೀವ್ರಿ. ಪೀಸ್ ಪೀಸ್ ಹಚ್ಚಿ ಹೊಲಿಬೇಕ್ರಿ. ಇನ್ನೊಂದು ದಟ್ಟ ಕೌದಿ. ಹಳೆ ಸೀರೆ ಬೆಡ್ಶೀಟ್ ಸೇರಿಸಿ ಹೊಲಿಯೋದ್ರಿ.”

“ಮತ್ತೆ ಅಂತರ್ಗಟ್ಟಿ, ಹಿರಿಯೂರು,ಪೀರಾಪುರ ಇಲ್ಲೆಲ್ಲ ಜಮೀನಿನಾಗ ಕೂಲಿ ಮಾಡಲು ಹೋಗ್ತೀವ್ರಿ. ದಿನಕ್ಕೆ ಇನ್ನೂರು ಉಟ ತಿಂಡಿ ಕೊಟ್ಟ ಕೊಡ್ತಾರಿ. ಗೌರ್ನಮೆಂಟನವರು ಮನಿ ಕಟ್ಕೊಟ್ಟಿದಾರ್, ಹಂಚಿನ ಮನೆ. ಹಾಲು,ಅಡಿಗೆ ಮನಿ. ಎಕ್ಸಟೆಂಡ್ ಮಾಡಿವ್ರಿ. ಮಕ್ಕಳು ದೊಡ್ಡೋರಾದ ಮೇಲೆ ದೊಡ್ಡ ಮನಿ ಕಟ್ಬೌದು. ನಮ್ಮೂರಲ್ಲಿ ಎಸ್ಎಸ್ಏಲ್ಸಿ, ಬಿಎ, ಎಂಎ ಆದವರೆಲ್ಲ ಕೆಲಸ ಸಿಗಲಿಲ್ಲ ಅಂತ ಊರಲ್ಲಿ ಸಾಲ ಮಾಡಿ ಅಂಗಡಿ ಇಟ್ಟವರು ಇದ್ದಾರಿ. ಸಾಲಿ ಕಲಿಲಾರದವರು ಸ್ಟೋವ್ ರಿಪೇರಿ ಅದೂ ಇದೂ ಕಲಿತು ಜೀವನ ಮಾಡ್ತಾರಿ.”

“ಅಲ್ಲಾ ಈಗ ಮೋದಿ ಎಲ್ಲರಿಗೂ ಗ್ಯಾಸು ಕೊಡ್ತಾರಂತೆ ತಗಳಲ್ವಾ?”

“ಅವರ್ಯಾರು ನಮಗೊತ್ತಿಲ್ಲ ತಾಯಿ. ನಮ್ಮೂರ ಸಾಹೇಬರು ಮಾತ್ರ ಗೊತ್ತು ತಾಯಿ.” (ಅಂತೂ ಮೋದೀಜಿ ಯಾರಂತ ಗೊತ್ತಿಲ್ಲದವರು ಇದ್ದಾರೆ ಅಂತಾಯಿತು!) ನಮಗೇನಿದ್ರೂ ಅವರೆ ಮಾಡೋದು ತಾಯಿ.”

“ಕೌದಿ ಹೊಲಿಸ್ತೀರಾ ಅಂತ ಬೀದಿ ಬೀದಿ ಓಡಾಡೋದು. ಸಿಟಿಗೆ ಬರೋದು. ರಾತ್ರಿ ಆಯ್ತಂದ್ರ ಗುಂಪುಗಳಿಗೆ ಹೇಳಾಕ ಬೇಕು ಮೊಬೈಲಲ್ಲಿ ಒಬ್ಬರಿಗೊಬ್ಬರು ಕಂಟಾಕ್ಟನಲ್ಲಿ ಇರ್ತೀವಿ. ಕಾಲ ಕೆಟ್ಟೋಗೈತಿ ತಾಯಿ. ಒಬ್ಬರೇ ಓಡಾಡೋದು ಭಯ ತಾಯಿ. ನಮಗೆ ಒತ್ತೋಕೆ ಬರಲ್ಲ, ಅವರು ಮಾತಾಡಿದರೆ ಮಾತಾಡ್ತೀವಿ. ಕುಡಿತ ಏನೂ ಇಲ್ಲ. ಹೊಟ್ಟೆ ತುಂಬ ಎರಡೊತ್ತು ಊಟ ಇದ್ದರೆ ಸಾಕು. ಕೂಲಿ ಮಾಡಿ ಜೀವನ ಸಾಗಿಸೋದು ಸಾಕಾಗಿದೆ ತಾಯಿ. ಮದುವೆಗಳಿಗೆ ಕೈ ಸಾಲ ಮಾಡಿ ತಿಂಗಳು ತಿಂಗಳು ಕಟ್ಟಿ ತೀರಿಸ್ತೀವಿ. ಇನ್ನು ಬ್ಯಾಂಕಲ್ಲಿ ಎಲ್ಲಿ ಇಡನ ತಾಯಿ. ಕಾಲ್ ಲೀಟರ್ ಎಣ್ಣೆ ಹತ್ತೊಂಬತ್ತು ರೂಪಾಯಿ, ಅಕ್ಕಿ ಮೂವತ್ತು ರೂಪಾಯಿಗೆ ಕೇಜಿ ಇಲ್ಲಿ ಖರ್ಚು. ಇನ್ನು ಟೀ ಕುಡಿಯೋಣ ಅಂದರೆ ಹತ್ತು ರೂಪಾಯಿ ಅಂತಾರೆ. ಏನ್ಮಾಡೋದು ತಾಯಿ ಮನಷಾ ಅನ್ಮೇಲೆ ಬದುಕಿನಾಗ ಕಷ್ಟ ಬರಲಿ ಸುಃಖ ಬರಲಿ ಒಟ್ಟ ಸಹಿಸ್ಕೊಂಡು ಅನುಸರಿಸಿಕೊಂಡು ಹೋಗಲೆ ಬೇಕಲ್ರಿ.”

“ಮಾತಾಡ್ತಾ ಮಾತಾಡ್ತಾ ಆಗಲೇ ಕೌದೀನೂ ರೆಡಿಯಾಗ್ತಾ ಬಂತು ನೋಡಿ. ಇನ್ನೇನು ಸ್ವಲ್ಪ ಇದೇರಿ”

“ಇದೇನ್ರೆ ಹೀಗ ಇಷ್ಟಿಟ್ಟು ದೂರ ದೂರ ಹೊಲಿಗೆ ಹಾಕಿದ್ದೀರಾ? ಕೌದಿ ಅಂದರೆ ತುಂಬಾ ಹತ್ತಿರ ಹತ್ತಿರ ಹೊಲಿಗೆ ಹಾಕಬೇಕಲ್ವಾ? ”

“ನಾವು ಹೊಲಿಯಾದೆ ಹೀಗರಿ. ನೀವು ಹೇಳೊ ಹೊಲಿಗೆ ಹಾಕದ್ರ ಪಗಡೆ ಕೌದಿ ಆಗತ್ತರಿ. ಅದಕೆ ಬಹಳ ಠೈಮು ಬೇಕ, ರೊಕ್ಕನೂ ಭಾಳಾ ಅಗ್ತದ್ರಿ. ”

“ಅಯ್ಯೋ ಶಿವನೆ! ಬರೀ ಮನಸಲ್ಲಿ ಮಂಡಿಗೆ ತಿಂದಿದ್ದೇ ಬಂತು. ನೆಟ್ಟಗೆ ಹತ್ತು ಹೊಲಿಗೆ ಹಾಕದೆ ಸುತ್ತ ಬಟ್ಟೆ ಸೇರಿಸಿ ಹೊಲಿದು ಮದ್ಯ ಮದ್ಯ ಅಡ್ಡ ಉದ್ದ ಗೀಟಾಕಿದಂತೆ ಹೊಲಿದು ಆಯ್ತು ಕೌದಿ ಹೊಲಿದಿದ್ದು ಅಂತೀರಲ್ಲಾ?” ಅಂತಂದು ಸುಮ್ಮನಾದೆ.

ಆದರೆ ನಾ ನೋಡಿದ ಕೌದಿಯೆಲ್ಲಿ ; ಇದೆಲ್ಲಿ. ನನ್ನ ಕಲ್ಪನೆಯ ಕೌದಿ ಇದಾಗಿರಲಿಲ್ಲ. ಇದನ್ನು ನೋಡಿ ತುಂಬಾ ನಿರಾಸೆ ಆಗಿದ್ದಂತೂ ನಿಜ. ಮತ್ತೆ ನಾನು ಏನೂ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಕಾರಣ ನನ್ನಂತೆ ಹೆಣ್ಣಾದ ಅವರ ದುಡಿಯುವ ವೈಖರಿ, ಅವರ ಕಷ್ಟದ ಜೀವನ ಮನಸ್ಸು ಮಂತ್ರ ಮುಗ್ಧವಾಗುವಂತೆ ಮಾಡಿತ್ತು.

ಏನೂ ಹೇಳದೆ ಅವರು ಕೇಳಿದಷ್ಟು ದುಡ್ಡು ಕೊಟ್ಟು, ಟೀ ಜೊತೆಗೆ ಬಿಸ್ಕತ್ತು ಕೊಟ್ಟೆ. ಹೊರಡುವಾಗ ಜೊತೆಗೆ ಮಕ್ಕಳಿಗೆ ಒಂದಷ್ಟು ಹಳೆಯ ಬಟ್ಟೆ ಅವರಿಬ್ಬರಿಗೂ ಒಂದೊಂದು ಸೀರೆ ಕೊಟ್ಟೆ. ಖುಷಿಯಿಂದ ಹೊರಟ ಅವರು ” ನಿಮ್ಮ ಹತ್ತಿರ ಮಾತಾಡ್ತಾ ಠೈಮು ಹೋಗಿದ್ದೇ ಗೊತ್ತಾಗ್ಲಿಲ್ರೀ, ಹೋಗ್ತಾ ಅಲ್ಲಿ ಇಲ್ಲಿ ಸೌದಿ ಒಟ್ಟಾಂಕ್ಕಂಡು ಕತ್ತಲಾಗೋದ್ರೊಳಗ ಅಡಿಗಿ ಮಾಡ್ಬೇಕ್ರಿ. ಬಹಾಳ್ ತಡ ಆಯ್ತ್ರಿ. ಅಮ್ಮ ಬರ್ತೀವಿ, ನಿಮ್ಮ ಹೊಟ್ಟೆ ತಣ್ಣಗಿರಲಿ ಕಂಡ್ರವ್ವಾ. ಸಂದಾಕಿರಿ.”

ಅವರ ಮಾತು ಕೇಳಿ ಕಣ್ಣು ತುಂಬಿ ಬಂತು. ಮತ್ತೆ ಬಂದರೆ ಕೌದಿ ಹೊಲಿಸುವ ಮನಸ್ಸು, ನನ್ನ ಕಲ್ಪನೆಯ ಕೌದಿಯ ಆಸೆಗಲ್ಲ , ನನ್ನಿಂದ ಅವರಿಗೆ ಕಿಂಚಿತ್ತು ಜೀವನಕ್ಕೆ ಸಹಾಯ ಆಗಬಹುದಲ್ಲಾ ಅನ್ನುವ ಯೋಚನೆಯಲ್ಲಿ!

23-6-2017 1.49pm

ನನ್ನದೊಂದು ಸಲಾಂ..!

ಹೆಗಲೇರಿದ ಬೆನ್ನಿಗೆ ಜೋತು ಬಿದ್ದಿದೆ
ಬೀದಿ ಬದಿ ಆಯ್ದ ದೊಡ್ಡ ಚೀಲ
ತನಗಿಂತ ದೊಡ್ಡದೆಂಬ ಪರಿವೆ
ಎಂದೂ ಕಂಡಿಲ್ಲ ಅವರಿಗಿಲ್ಲದರ ಚಿಂತೆ.

ರಣ ಹದ್ದಿನ ತೆರದಿ ಬಿಟ್ಟ ಕಣ್ಣೆರಡು
ಬೀದಿ ಬದಿ ಹುಡುಕುತ್ತ ಸಾಗುವುದು
ನಾಳಿನ ಆಗು ಹೋಗುಗಳ ಮರೆತು
ದಿಕ್ಕು ದೆಸೆಯಿಲ್ಲದೆ ನಡೆಯುವವರು.

ಹೊತ್ತು ಮೂಡುವ ಮುಂಚೆ
ಕಣ್ಣುಜ್ಜುತ್ತ ಸಾಗುವುದು ನಡಿಗೆ
ಬದುಕ ಬಂಡಿ ಎಳೆಯುವ
ಭುವಿಯ ನಾವಿಕನಿವರು.

ಮಡಿಕೆಯಾಕಾರದ ಗುಡಿಸಲೊ
ಇಲ್ಲಾ ರಸ್ತೆ ಬದಿ ಬಿಟ್ಟಿರುವ ಸವಕಲು ಹಾದಿಯೊ
ಅಥವಾ ಬಟಾ ಬಯಲಾದರೂ ಸರಿ
ಒಕ್ಕಲೆಬ್ಬಿಸುವವರೆಗೆ ಇವರಿಗಲ್ಲೆ ತೇಪೆ ಮನೆ.

ತುತ್ತಿಗೂ ತತ್ವಾರ ಹಡೆದವ್ವ ಹೇಳ್ಯಾಳು
ನಡಿ ಮಗ ಹೊತಾರೆ ಅಲ್ಲಿ ಇಲ್ಲಿ
ಆಯ್ಕಂಡು ಹೊಟ್ಟೆ ತುಂಬಿಸಿಕೊ
ಹೆತ್ತ ಜೀವ ನೊಂದೀತೇನೊ ಪಾಪ!

ಬೇಡವೆಂದು ಎತ್ತಿ ಬಿಸಾಕಿದ ಕಸ
ಆಯ್ವ ಕೈಗಳಿಗದೆ ಸಿರಿ ಸಂಪತ್ತು
ಜೋತ ಚೀಲ ಗುಡಾಣವಾಗುವುದು
ಹೊರೆ ಹೊರುವುದು ಬಾಗಿದ ದೇಹ.

ಎಳೆಯುತ್ತಿಡುವ ಬರಿಗಾಲ ಒಂದೊಂದು ಹೆಜ್ಜೆ
ಕಾಲು ನೋವೆ ನಿನಗೆ ಕೇಳುವವರಾರಿಲ್ಲ
ನೋವ ನುಂಗಿ ನಡೆವ ಗತಿ ಇಲ್ಲದ ಜೀವನ
ಹೊತ್ತು ಗೊತ್ತಿಲ್ಲದ ಕರಾಳ ಬದುಕು.

ದಿಕ್ಕು ದೆಸೆಯಿಲ್ಲದೆ ಒಪ್ಪೊತ್ತಿನ ಊಟಕ್ಕೆ
ಪರದಾಡುವ ದೇಶದ ಬಡ ನಾಗರಿಕರಿವರು
ಎಲೆ ಮರೆಯ ಕಾಯಂತೆ ನಮ್ಮ ನಡುವೆ
ಪರಿಸರ ಸಂರಕ್ಷಿಸುವ ಸೇವಕರಿವರು.

ಅಪ್ರಾಪ್ತ ವಯಸ್ಸು ಕನಸು ಕಾಣುವ ಕಣ್ಣು
ಅವರಲ್ಲೂ ಇರಬಹುದೆ ಸುಪ್ತವಾಗಿ
ಹುದುಗಿದ ನಾಳೆಯ ಬದುಕಿನ ಸುಂದರ ಚಿತ್ರಣ
ಮನ ಕರಗಿ ಅನಿಸುವುದು ಕಂಡಾಗಲೆಲ್ಲ!

ನಾವ್ಯಾರೂ ಗೃಹಿಸುವುದಿಲ್ಲ ದಿಕ್ಕಿಲ್ಲದ ನಡಿಗೆ
ಐಷಾರಾಮಿ ಜೀವನ ನಮಗಂಟಿದ ಸ್ವಾರ್ಥ
ಬರಿ ಮೋಜು ಮಸ್ತಿಯಲ್ಲಿ ಕಳೆವ ಓ ಮನುಜಾ
ಇಂಥವರ ಬದುಕಿನತ್ತ ಒಮ್ಮೆ ನೀ ತಿರುಗಿ ನೋಡಾ.

23-3-2017. 2.48pm

ಅಪರೂಪದ ಸಾಹಸಿ

image

ಅವನಿನ್ನೂ ಪ್ರಥಮ ಪಿ ಯೂ ಸಿ ಮುಗಿಸಿರುವ ಪವನ್ ಕುಮಾರ್. ಹುಟ್ಟೂರು ಸಾಗರ ತಾಲ್ಲೂಕಿನ ಯಡಜಿಗಳೆಮನೆಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೆಟ್ಟರ ಗ್ರಾಮದಲ್ಲಿ ಹುಟ್ಟಿ ಬೆಳದವನು. ತಂದೆ ಅಡುಗೆ ಕೆಲಸದ ಗುತ್ತಿಗೆದಾರ. ತಾಯಿಗೆ ಖಾಸಗಿ ಮುದ್ರಣಾಲಯದಲ್ಲಿ ಕೆಲಸ. ಇದರಲ್ಲೇನು ವಿಶೇಷ? ಎಲ್ಲರಂತೆ ಇವನೂ ಒಬ್ಬ ತಕ್ಷಣ ಕೇಳಿದವರು ಮೂಗು ಮುರಿಯಬಹುದು.

ಆದರೆ ಎಲ್ಲರಂಥವನಲ್ಲ ನನ್ನ ಮಗ ಎಂದು ಹೆತ್ತಮ್ಮ ಅಪ್ಪ ಹೆಮ್ಮೆಯಿಂದ ಹೇಳಿಕೊಳ್ಳುವಷ್ಟು ದೊಡ್ಡ ಬಹುದೊಡ್ಡ ಕೆಲಸ ಮಾಡಿ ತಾಲ್ಲೂಕಿನಲ್ಲೇನು ಇಡೀ ರಾಜ್ಯದ ಜನತೆ ಕೊಂಡಾಡುವಷ್ಟು ಸಾಹಸದ ಕೆಲಸ ಮಾಡಿದ್ದಾನೆ. ಗುದ್ದಲಿ ಹಿಡಿದು ಎರಡು ಬುಟ್ಟಿ ಮಣ್ಣು ಅಗೆಯುವುದು ಅದರಲ್ಲೂ ಮಳೆ ಕಾಣದ ಗಟ್ಟಿ ನೆಲದಲ್ಲಿ. ಎಷ್ಟು ಕಷ್ಟ ಅನ್ನುವುದು ರೈತಾಪಿ ಕಾಯಕ ಮಾಡುವವರಿಗೆ ಮಾತ್ರ ಗೊತ್ತು. ಆದರೆ ಈ ಹುಡುಗ ಐವತ್ತು ಅಡಿ ಬಾವಿ ತೋಡಿದ್ದಾನೆ. ಮೊದಲು ಇವನಿಗೆ ಭೇಷ್ ಹೇಳಬೇಕು.

ಎಲ್ಲರ ಮನೆಯಲ್ಲಿ ಬಾವಿ ಇದೆ. ನಮ್ಮನೆಯಲ್ಲೂ ಇದ್ದಿದ್ದರೆ! ಈ ರೆ…….ಅನ್ನುವ ಹಂಬಲ ಯಾವಾಗ ಮನದಲ್ಲಿ ಹುಟ್ಟು ಹಾಕಿತೊ ಅದರಲ್ಲೂ ಅಮ್ಮ ಅಂದರೆ ಪಂಚ ಪ್ರಾಣ. ಅಕ್ಕಪಕ್ಕದವರಲ್ಲಿ ನೀರು ತರಲು ಹೋದಾಗ ಅಲ್ಲಿ ಆಗುತ್ತಿರುವ ಜಗಳ, ಅವಮಾನ, ಅಮ್ಮನಿಗೆ ಆಗುತ್ತಿರುವ ಕಷ್ಟ ನೋಡಿ ತಾನೆ ಖುದ್ಧಾಗಿ ಯಾಕೆ ನಮ್ಮನೆ ಜಾಗದಲ್ಲಿ ಬಾವಿ ತೆಗೀಬಾರದು ಯೋಚನೆ ದೃಡ ಸಂಕಲ್ಪ ತಳೆಯಲು ಹೆಚ್ಚು ದಿನ ಬೇಕಾಗಲಿಲ್ಲ. ಅಮ್ಮನ ಮುಂದೆ ತನ್ನ ಹಂಬಲ ವ್ಯಕ್ತಪಡಿಸಿದ. ಮಗಾ ಇದೆಲ್ಲ ನಿನ್ನೊಬ್ಬನಿಂದ ಸಾಧ್ಯ ಇಲ್ಲ. ಅಪ್ಪನಿಂದ ಕೂಡ ಇದೆ ಮಾತು. ತನ್ನ ಇಬ್ಬರು ಸ್ನೇಹಿತರ ಸಣ್ಣ ಪ್ರೇರಣೆ ಅಳುಕಿಲ್ಲದೆ ಬಾವಿ ತೋಡುವ ದೃಡ ಸಂಕಲ್ಪದೊಂದಿಗೆ ಜಲ ಪರೀಕ್ಷಕರ ನೆರವಿನೊಂದಿಗೆ ಜಲ ಮೂಲ ಹುಡುಕಿದ್ದಾಯಿತು.

ಒಂದು ಒಳ್ಳೆಯ ಮಹೂತ೯ದಲ್ಲಿ ಬಾವಿ ತೋಡುವ ಕಾಯ೯ ಶುರುವಾಯಿತು ಅದೂ ಯಾರ ನೆರವಿಲ್ಲದೆ ಒಬ್ಬನೆ. ಮೊದಲ ದಿನ ಐದು ಅಡಿ ತೆಗೆದ. ದಿನ ಸ್ಕೂಲಿಂದ ಹನ್ನೆರಡು ಗಂಟೆಗೆ ಬರೋದು, ಸಾಯಂಕಾಲ ಆರು ಗಂಟೆಯವರೆಗೂ ಬಾವಿ ತೋಡೋದು. ಹೀಗೆ ಮೂವತ್ತು ಅಡಿ ತೆಗೆದರೂ ನೀರಿಲ್ಲ. ನಿರಾಸೆಗೊಂಡ ಪವನ್ ಬಾವಿ ತೋಡುವುದನ್ನು ನಿಲ್ಲಿಸಿಬಿಡೋಣ ಅನ್ನುವ ತೀಮಾ೯ನ ಕ್ಕೆ ಬಂದಾಗ ಊರಿನ ಹಿರಿಯರೊಬ್ಬರು ಕೆಲಸ ಮುಂದುವರಿಸು ಎಂದು ಪ್ರೇರೇಪಿಸಿದಾಗ ಪುನಃ ಟೊಂಕ ಕಟ್ಟಿ ಬಾವಿ ತೆಗೆಯುವ ಕಸರತ್ತು.

ಸರಿಯಾಗಿ ಒಂದು ತಿಂಗಳು ಎಂಟು ದಿನಕ್ಕೆ ಗಂಗಾ ಮಾತೆಯ ಒರತೆ ಕಂಡಾಗ ಕುಟುಂಬದಲ್ಲೇನು ಊರವರೆಲ್ಲರ ಮೊಗದಲ್ಲಿ ಬಿಸಿಲ ಬೇಗೆಯ ದಗೆಯಲ್ಲಿ ಕರಿ ಮೋಡ ಕಟ್ಟಿ ತುಂತುರು ಮಳೆಯ ಸ್ಪರ್ಶದ ಸೊಗಸು. ಊರಿಗೆ ಊರೇ ಕೊಂಡಾಡಿತು. ಎಲ್ಲರ ಬಾಯಲ್ಲೂ ಪವನ್ ಪವನ್. ಹೆತ್ತ ಕರುಳಿಗೆ ನೂರು ಮಕ್ಕಳು ಹಡೆದರೂ ಇಷ್ಟು ಸಂತೋಷವಾಗುತ್ತಿತ್ತೊ ಇಲ್ಲವೊ. ಬಡ ಕುಟುಂಬದ ತಂದೆಗೆ ಅಡಿಗೆ ಕೆಲಸ ಸಿಕ್ಕರೆ ಸಿಕ್ಕಿತು ಇಲ್ಲವೆಂದರೆ ಇಲ್ಲ. ಬಾವಿ ತೆಗೆಸುವಷ್ಟು ಆಥಿ೯ಕ ಪರಿಸ್ಥಿತಿ ಇರಲಿಲ್ಲ.. ಇಂತಿರುವಾಗ ಮಗನ ಸಾಹಸ ಅದೆಷ್ಟು ಖುಷಿ ತಂದಿರಲಿಕ್ಕಿಲ್ಲ!

ನಿಜಕ್ಕೂ ಮಕ್ಕಳು ಬೇಕು. ಎಂಥ ಮಕ್ಕಳು ಬೇಕು? ಇಂಥ ಮಕ್ಕಳು ಬೇಕು. ಹೆತ್ತವರ ಕಷ್ಟಕ್ಕೆ ಭಾಗಿಯಾಗಿ, ಸಮಾಜಕ್ಕೆ ಮಾದರಿಯಾಗಿ ಬದುಕಬಲ್ಲ ಒಂದೇ ಒಂದು ಗಂಡಾಗಲಿ ಅಥವಾ ಹೆಣ್ಣಾಗಲಿ ಒಂದಿದ್ದರೆ ಸಾಕು ಎಂದು ಅನಿಸುವುದಿಲ್ಲವೆ?
2.5.2016.   2.25pm