ಜಾನಪದ ಹಾಡು

ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ
ವಂಚನೆಯ ಮಾತು ತರವಲ್ಲ||
ವಂಚನೆಯ ಮಾತು ತರವಲ್ಲ ಮನುಜಗೆ
ಮೋಸ ಎಂಬೂದು ಸ್ಥಿರವಲ್ಲ||1||

ಹಾವಿಗೆ ಹಾಲೆರೆದರೆ ವಿಷ ಕಕ್ಕದಿರದುಂಟೆ
ಹಾವ ನಂಬುವುದು ಒಳಿತಲ್ಲ||
ಹಾವ ನಂಬುವುದು ಒಳಿತಲ್ಲ ಮನುಜಗೆ
ಹಾವಿನಂತಹರಿಲ್ಲಿ ಮರಿಬೇಡಾ||2||

ಜನರಾಡುವ ಮಾತಿಗೆ ಎಷ್ಟು ಕೊರಗಿದರೇನು
ಎಲುವಿಲ್ಲದ ನಾಲಿಗೆ ಹೊರಳುವುದು
ಎಲುವಿಲ್ಲದ ನಾಲಿಗೆ ಹೊರಳುವುದು ಮನುಜಾ
ಅದವರ ಚಾಳಿ ಮರಿಬೇಡಾ||3||

ಕಾಸಿದ್ದಂತೆ ಕಜ್ಜಾಯ ಕಾಸಿಗೊಂದು ಕಿರೀಟ
ಇದು ಈಗಿನ ಜಮಾನಾ ಕೇಳವ್ವ
ಇದು ಈಗಿನ ಜಮಾನಾ ಕೇಳವ್ವ ನನ ತಂಗಿ
ನಿನಗೆ ದಕ್ಕದ್ದಕ್ಕೆ ಅಳಬೇಡಾ||4||

ಊರಿದ್ದಲ್ಲಿ ಹೊಲಗೇರಿ ಇಹುದು ಎಂಬುವರು
ಕಣ್ಣಿದ್ದು ಕುರುಡರಂತೆ ಇರಬೇಕು
ಕಣ್ಣಿದ್ದು ಕುರುಡರಂತ ಇರಬೇಕು ತಂಗ್ಯವ್ವಾ
ಇದನರಿತು ಬದುಕು ನನ್ನವ್ವಾ||5||

18-7-2019  1.01pm