ಚಿತೆ ಚಿಂತೆ

ಚಿತೆಗೂ
ಚಿಂತೆಗೂ
ಇರುವ ವ್ಯತ್ಯಾಸ ಸೊನ್ನೆ.

ಚಿತೆ
ಹೊರ ನೋಟಕೆ ಕಾಣುವ ಬೆಂಕಿ
ಚಿಂತೆ
ಒಳಗೊಳಗೇ ಸುಡುವ ಕೆಂಡ.

ಚಿತೆ
ಸುಟ್ಟು ಬೂದಿ ಮಾಡಿದರೆ
ಚಿಂತೆ
ದೇಹವನ್ನು ಕೃಶ ಮಾಡುತ್ತದೆ.

ಚಿತೆ
ಉರಿಯ ಕಾವು
ಚಿಂತೆ
ಸಂಕಟದ ನೋವು.

ಚಿತೆ
ಉರಿದು ಬೂದಿಯಾಗುವುದು
ಚಿಂತೆ
ಪಕ್ಕನೆ ಆರುವ ಬೆಂಕಿಯಲ್ಲ.

ಚಿತೆ
ಉರಿಯದ ಮನೆಯಿಲ್ಲ
ಚಿಂತೆ
ಇಲ್ಲದ ಮನುಷ್ಯನಿಲ್ಲ.

ಚಿತೆ
ಹೇಳಿತು ಭಸ್ಮ ಮಾಡಿಬಿಡುವೆ
ಚಿಂತೆ
ಹೇಳೀತು ಜೀವಂತ ಶವ ಮಾಡಿಬಿಡುವೆ.

ಚಿತೆ
ನಿರ್ಜೀವ ಆದರೂ ಪ್ರಖರ ಬೆಳಕು
ಚಿಂತೆ
ಬೆನ್ನಟ್ಟಿ ಬರುವ ಭೂತ.

18-1-2021. 9.00am

ತತ್ವಪದ

ಇರಬೇಕು ಬದುಕಲ್ಲಿ ಇದ್ದರೂ ಇಲ್ಲದಂತೆ
ಯಾರಡಿಯಿಟ್ಟರೂ ನೀ ವಿರಾಗಿಯಂತೆ.

ಜನರಾಡುವ ಮಾತಿಗೆ ಕಿವಿಯಾಗಿ ಆಲಿಸಬೇಡ
ಕೆಟ್ಟ ಜನರ ಹುಸಿ ನುಡಿಗೆ ನೀ ಆಸ್ಪದ ಕೊಡಬೇಡ.

ಎಲುವಿಲ್ಲದ ನಾಲಿಗೆ ಅತ್ತಿತ್ತ ಹೊರಳುವುದು
ಕತ್ತಿಯ ಮೊನೆಯಂತೆ ಅದರಾಟ ನಡೆಯುವುದು.

ಸತ್ಯವೆಂಬ ನುಡಿಗೆ ಕವಡೆ ಕಾಸು ಬೆಲೆ ಇಲ್ಲ
ಸುಳ್ಳು ಮಾತು ನಂಬಿ ಕುಣಿಯುವವರೆ ಇಲ್ಲೆಲ್ಲ.

ನಂಬಿಕೆಯ ನಂಟನು ಬೆಸೆದು ನಂಬಿಸುವರೆಲ್ಲ
ತಮ್ಮ ಬೇಳೆ ಬೇಯದೆಂದರಿತರೆ ತರಿದು ನೂಕುವರೆಲ್ಲ.

ಅವರವರ ತಾಳಕ್ಕೆ ಕುಣಿದರಿಲ್ಲಿ ಸ್ಥಾನವುಂಟು
ನಿನ್ನ ತನ ಮರೆತು ಬದುಕಿದರಿಲ್ಲಿ ಬೆಲೆಯುಂಟು.

ಸ್ವಾಭಿಮಾನಕ್ಕೆ ಕಿಚ್ಚಚ್ಚುವ ಈ ಜನರ ನಡೆ ಹೊಲಸು
ಸೇರಿ ಬದುಕುವುದಕ್ಕಿಂತ ಒಬ್ಬಂಟಿತನ ಬಲೂ ಲೇಸು.

ಎಲ್ಲ ಬಲ್ಲವರೆಂದು ನಂಬಿ ಸಹವಾಸವ ಮಾಡೆ
ಉಂಡೆಲೆ ಎತ್ತಿ ಒಗೆದಂತೆ ತಮ್ಮತನ ತೋರುವರಲ್ಲ ಶಿವನೆ!

2-8-2019  12.14am

ತತ್ವಪದ

ಬಣ್ಣಿಸ ಬೇಡ ಮನವೆ
ತಣ್ಣಗಿರುವುದು ಮನಸು
ಇಂಗಿತವನರಿಯದ ಮನುಜಗೆ
ಸಲ್ಲದು ಸಲಾಮು ಗಿಲಾಮು॥

ಕೆರೆದು ಕುರಿಯಾಗುವ ಬದಲು
ಕರ ಮುಗಿದು ದೂರ ಸರಿ
ನಿನ್ನಲ್ಲಡಗಿದ ಮೌನಕೆ ದಾಸನಾಗಿ
ತೆಪ್ಪಗಿರುವುದೆ ವಾಸಿ॥

ಋಣವಿರಲು ಜನ್ಮಕೆ
ತಾನಾಗೆ ಬಂದು ಸೇರುವುದು
ಆರು ಬಲ್ಲರು ಹೇಳು
ಜಗದೊಡೆಯ ಬರೆದ ಹಣೆ ಬರಹ॥

ಹಗಲು ಗನಸನು ಮರೆತು
ಇರುವುದರಲ್ಲೇ ತೃಪ್ತಿ ಪಡು
ನೊಂದು ಸಿಗದ ವಸ್ತುವಿಗೆ
ಪರಿತಪಿಸದಿರು ಮರುಳೆ॥

ಇರುವ ಮೂರು ದಿನ
ಕೊರಗಿ ಸಾಯಲು ಬೇಡ
ಮಾಡಿರುವ ಕರ್ಮವ
ಅನುಭವಿಸದೆ ಗತಿ ಇಲ್ಲ॥

ಮುನ್ನ ಮಾಡಿದ ಪಾಪ
ಇಂದು ಕಾಡುತಿರಬಹುದು
ಇನ್ನಾದರೂ ಮುಂದಡಿಯಿಡು
ಕರ್ಮ ಸುತ್ತಿಕೊಳ್ಳದಂತೆ॥

ಇರುವನಲ್ಲವೆ ಜಗದೊಡೆಯ
ಹುಲ್ಲು ಕಡ್ಡಿಯ ನೆಪ ಸಾಕು
ಹುಟ್ಟಿಸಿದ ದೇವನವ
ಹುಲ್ಲು ಮೇಯಿಸದಿರ॥

ನಂಬಿಕೆಯೆ ಜೀವಾಳ
ನಂಬಿ ಕೆಟ್ಟವರಿಲ್ಲ
ನಂಬಿಕೆಯಲಿ ಬದುಕಿದರೆ
ಇಂಬು ಕಾಣುವೆನೆಂದ ದೇವ॥

12-4-2017. 8.21pm

ತತ್ವಪದ

ಚಂಚಲ ಮನಸಿಗೆ
ತಾಳ್ಮೆ ಇರಬೇಕು
ಬೇಕೆನಿಸುವುದೆಲ್ಲ
ಬಯಸದಂತಿರಬೇಕು॥ದೇಹಕ್ಕೆ ಆಸೆ
ಚಿತ್ತ ವಿಕಾರ
ನಿನ್ನಂಕೆಯಲಿದ್ದರೆ
ಬದುಕು ಇಂಚರ॥ಇಷ್ಟದ ಬದುಕಿಗೆ
ಛಲವಿರಲೇ ಬೇಕು
ಅಷ್ಟಿಷ್ಟು ಪಡೆಯಲು
ಕಷ್ಟ ಪಡಬೇಕು॥ನಿನ್ನೆ ಕಳೆಯಿತು
ನಾಳೆ ಗೊತ್ತಿಲ್ಲ
ಇಂದಿನ ಗಳಿಗೆ
ಚಂದದಿ ಬದುಕು॥ಕಾಸಿದ್ದರೆ ಕೈಲಾಸ
ಇಲ್ಲದಿರೆ ವನವಾಸ
ಇರುವವರೆಗೂ ದುಡಿ
ನಿನ್ನನ್ನವ ನೀನುಣ್ಣು॥ಒಳ್ಳೆತನಕಿಲ್ಲ ಬೆಲೆ
ತೃಪ್ತಿ ಇಲ್ಲ ಜನಕೆ
ಎಲುವಿಲ್ಲದ ನಾಲಿಗೆ
ಹರಿದಾಡಲಿ ಬಿಡು॥ಮೂರು ದಿನದ ಬಾಳು
ಜೀವವಿರುವ ದೇಹ
ಎಷ್ಟು ಪೋಶಿಸಿದರೇನು
ಚಿಗುರೊಡೆಯವುದಿಲ್ಲ॥ನಾನು ನನದೆಂಬ
ಮಮಕಾರ ಬೇಡ
ಬಿದ್ದು ಹೋಗುವ ಜೀವ
ಅಡಿಗಡಿಗೆ ನೆನಪಿರಲಿ॥ಮೂರಡಿ ಆರಡಿ
ಸುತ್ತ ನಾಲ್ಕು ಜನ
ಸುಡಲು ಬರುವರಷ್ಟೆ
ಜೊತೆಗೆ ಬಾರರಾರು॥ಇದು ಜೀವನ
ಇದು ಬದುಕು
ಸತ್ಯವಂತನಾಗಿರು
ಸನ್ಮಾರ್ಗಿಯಾಗಿರೆಂದ ದೇವ॥1-3-2017. 6.19pm

ತತ್ವಪದ

ಮನುಷ್ಯನ ಜನ್ಮ
ಅತಿ ಶ್ರೇಷ್ಠ
ಪೂವ೯ಜನ್ಮದ ಸುಕೃತ॥

ಅರಿವಿರಲಿ
ಮಾಡುವ ಕೆಲಸದಲ್ಲಿ
ದೋಷ ಹುಡುಕ ಬೇಡ॥

ತಪ್ಪು ಮಾಡುವುದು
ಮನುಷ್ಯನ ಸಹಜ ಗುಣ
ತಿಳಿದು ದೊಡ್ಡತನ ಮೆರೆ॥

ಇನ್ನೊಬ್ಬರ ಸ್ವತ್ತಿಗೆ
ಆಸೆ ಪಡಬೇಡ
ಪರರ ವಸ್ತು ಸದಾ ವಿಷ॥

ಗೆದ್ದೆನೆಂಬ
ಅಹಂಕಾರ ಬೇಡ
ಸೋಲು ಹಿಂದೆ ಇಹುದು॥

ನೀರು ಹರಿಯುವುದು
ಮೇಲಿಂದ ಕೆಳಗೆ
ಇದೇ ರೀತಿ ಜೀವನ ಚಕ್ರ॥

ನಾನೂ ಎಂಬುದ ಮರೆತು
ನಾವೂ ಎಂದೆನ್ನುವುದ ಕಲಿ
ಆಗ ನೀ ಕಾಣುವೆ ಸ್ವಗ೯॥

ಮೂರು ದಿನದ ಬಾಳು
ಎಲ್ಲರೊಳೊಂದಾಗಿ ಬದುಕು
ಇಹದಲ್ಲಿ ಪರದಲ್ಲಿ ಕಾಣುವೆ ಸದ್ಗತಿ||

10-10-2016. 10.19am

ತತ್ವಪದ

ಚಿಂತೆ ಇಲ್ಲದವನು
ಸಂತೆಯಲೂ
ನಿದ್ದೆ ಮಾಡುವನಂತೆ॥

ಚಿಂತೆಗಿಲ್ಲ ಮುಕ್ತಿ
ದೇಹ ಚಿತೆ ಏರಿ
ಭಸ್ಮವಾಗುವವರೆಗೆ॥

ಚಿಂತೆಯಲಿ
ಬೆಂದ ದೇಹ ಸದಾ
ರೋಗದ ಗೂಡು॥

ಚಿಂತೆ ಮನ ಸುಟ್ಟರೆ
ಚಿತೆ ದೇಹ ಸುಡುವುದು
ಇದೇ ಚಿತೆ – ಚಿಂತೆಗೆ ವ್ಯತ್ಯಾಸ॥

ಚಿಂತೆ ಮಾಡುವವರಿಗೆ
ಎಲ್ಲ ತಿಳಿದಿದ್ದರೂ
ಚಿಂತಿಸದೆ ಗತಿ ಇಲ್ಲ॥

ಚಿಂತಿಸಿ ಚಿಂತಿಸಿ
ಕೊನೆಗೆ ಚಿಂತೆಯಲಿ
ಮಾನವನ ಸಮಾಪ್ತಿ ॥

ಚಿಂತಿಸುತ್ತ ಕಾಲ ಹರಣ
ಮೂರು ದಿನದ
ಈ ದೀನ ಬದುಕು॥

ಚಿಂತಿಸುವವರೆ ಹೇಳುವರು
ಮತ್ತೊಬ್ಬರ ಚಿಂತೆ
ನಮಗ್ಯಾಕೆ||

3-8-2016. 7.49pm