ನಾನು – ನನ್ನದು

ಪ್ರತಿಯೊಬ್ಬರ ಮನದಲ್ಲೂ ಅಡಗಿಕೊಂಡಿರುವ ಆತ್ಮಾಭಿಮಾನವೊ ಅಥವಾ ನನ್ನದು ಅನ್ನುವ ಅಹಂಕಾರವೊ ಗೊತ್ತಿಲ್ಲ. ಆದರೆ ಯಾವುದು ನನ್ನದು ಎಂಬ ಭ್ರಮೆ ಎಲ್ಲಿಯವರೆ ನಮ್ಮ ಮನಸ್ಸಿನಲ್ಲಿ ಮನೆ ಮಾಡಿರುತ್ತೊ ಅಲ್ಲಿಯವರೆಗೆ ಅದರ ಹುಳುಕು ನಮಗೆ ಗೊತ್ತಾಗೋದೆ ಇಲ್ಲ. ಒಂದಾ ಶಾಂತವಾಗಿ ಕುಳಿತು ಯಾವ ತಾರತಮ್ಯವಿಲ್ಲದೆ ವಿಮಷಿ೯ಸುವ ಬುದ್ಧಿ ಹೊಂದಿರಬೇಕು. ಇಲ್ಲ ಬೇರೆಯವರು ಬೊಟ್ಟು ಮಾಡಿ ತೋರಿಸಿದಾಗ ಇದು ಸರಿಯಿಲ್ಲ ಅಥವಾ ನಿನ್ನಲ್ಲಿ ದೋಷವಿದೆ ಎಂದೆನ್ನುವ ಮಾತು ಕೇಳಿಸಿಕೊಂಡು ಅಥ೯ ಮಾಡಿಕೊಳ್ಳುವ ಒಳ್ಳೆಯ ಮನಸ್ಸಿರಬೇಕು. ನಮ್ಮನ್ನು ಉತ್ತುಂಗದತ್ತತ್ತ ಏರಲು ಹಾಕಿ ಕೊಟ್ಟ ಮೆಟ್ಟಿಲು ಎಂದು ಭಾವಿಸಬೇಕು. ಇನ್ನೂ ಹೆಚ್ಚಿನ ಉತ್ಸಾಹದಲ್ಲಿ ಗುರಿ ಮುಟ್ಟುವತ್ತ ನಮ್ಮ ನಡೆ ಬದಲಾಯಿಸಿಕೊಳ್ಳಬೇಕು. ಇವ್ಯಾವುದೂ ಇಲ್ಲದ ಜನರು ” ನಾನು, ಇದು ನನ್ನದು, ಯಾವೋನಾದರೂ ಬೊಟ್ಟು ಮಾಡಿ ತೋರಿಸಲಿ ನೋಡ್ತೀನಿ” ಅನ್ನುವ ಮೂಖ೯ತನದ ಮಾತು ಹೇಳುತ್ತಿರುತ್ತಾರೆ. ಆದರೆ ಈ ನಡೆ ಒಳ್ಳೆಯ ನಡೆಯಲ್ಲ ; ಇದು ಖಂಡಿತಾ ನಮ್ಮನ್ನು ಅದಃಪತನಕ್ಕೆ ಕರೆದೊಯ್ಯುತ್ತದೆ. ಕೊನೆಯಲ್ಲಿ ಪಶ್ಚಾತ್ತಾಪವೇ ಕಟ್ಟಿಟ್ಟ ಬುತ್ತಿ.

ಈ ಜಗತ್ತು ಕೋಟಿ ಕೋಟಿ ಜನರ ಕಣಜ. ಇಲ್ಲಿ ಓದಿದ ಹಲವು ಪುಸ್ತಕ ಭಂಡಾರಗಳನ್ನೆಲ್ಲ ಅರಗಿಸಿಕೊಂಡ ಅತೀ ಬುದ್ಧಿವಂತರೂ ಇದ್ದಾರೆ. ಓದದೆ ಇರುವ ಜೀವನದ ರಸಾನುಭವದಲ್ಲಿ ಹಲವು ಮಜಲುಗಳ ಮೆಟ್ಟಿಲು ಎದ್ದು ಬಿದ್ದು ಏರಿರುವ ಅನುಭವದ ಗುಡ್ಡೆಯನ್ನೆ ಹೃದಯದ ಕವಾಟದಲ್ಲಿ ಬಚ್ಚಿಟ್ಟು ಎದುರಿಗೆ ಸಂತೋಷದ ಮುಖವಾಡ ಹೊತ್ತ ಅನುಭವಸ್ತ ಶಿಖಾಮಣಿಗಳೂ ಇದ್ದಾರೆ. ಇವರಿಬ್ಬರನ್ನೂ ತುಲನೆ ಮಾಡಿ ನೋಡಿದಾಗ ಅನನ್ಯ ಅನುಭವದ ಮನುಷ್ಯನ ನಿಷ್ಕಲ್ಮಶ ವ್ಯಕ್ತಿತ್ವ ಹೆಚ್ಚು ಮನ್ನಣೆಯನ್ನು ಪಡೆಯುತ್ತದೆ. ಯಾಕೆ? ಜನ ಅಂಥವರನ್ನೇ ಯಾಕೆ ಮೆಚ್ಚುತ್ತಾರೆ? ಅಂಥದ್ದೇನಿದೆ ಅವರಲ್ಲಿ? ಅವರ ಮಾತು ಅಂದರೆ ವೇದ ವಾಖ್ಯವಪ್ಪಾ ನನಗೆ; ಅವರು ಹೇಳಿದ ಮೇಲೆ ಮುಗೀತು, ಬೇರೆ ಮಾತೇ ಇಲ್ಲ ಅಂಥ ಅಷ್ಟು ಗೌರವ ನಂಬಿಕೆ, ವಿಶ್ವಾಸ.

ಇವೆಲ್ಲ ಯಾರೂ ಕೊಟ್ಟ ಕಾಣಿಕೆಯಲ್ಲ ಅಥವಾ ಬಿರುದು ಬಾವಲಿಗಳೂ ಅಲ್ಲ. ಎಲ್ಲ ಕಾಲ ಸರಿದಂತೆ ಅವರಾಗೇ ಜನರಿಂದ ಗಳಿಸಿದ ವಿಶ್ವಾಸ, ಪ್ರೀತಿ, ನಂಬಿಕೆ. ಆ ಮಟ್ಟಕ್ಕೆ ಏರಬೇಕಂದರೆ ಮನುಷ್ಯ ಯಾವ ಪಾಠ ಶಾಲೆಗೂ ಹೋಗಬೇಕಾಗಿಲ್ಲ. ಯಾವ ಡಿಗ್ರಿಯೂ ಬೇಕಾಗಿಲ್ಲ. ಯಾವ ಗುರುವಿನ ಮಾಗ೯ದಶ೯ನದ ಅಗತ್ಯವೂ ಇಲ್ಲ. ಏಕೆಂದರೆ ಈ ಜೀವನವೇ ಒಂದು ಪಾಠ ಶಾಲೆ. ಇಲ್ಲಿ ಬದುಕಿನುದ್ದಕ್ಕೂ ಸಿಗುವ ಸಾವಿರಾರು ಮಂದಿಯೊಂದಿಗಿನ ಒಡನಾಟ, ಬದುಕಲ್ಲಿ ಎದುರಾಗುವ ಘಟನೆಗಳು, ಹೋರಾಡಿದ ಕ್ಷಣಗಳು ಪ್ರತಿಯೊಬ್ಬರಿಗೂ ಪಾಠ ಕಲಿಸುತ್ತದೆ. ನಾನು ಯಾರು? ಇದಕ್ಕೆ ಸರಿಯಾದ ಉತ್ತರ ಕಂಡು ಕೊಳ್ಳುವ ಹೋರಾಟದತ್ತ ಚಿತ್ತ ಇಟ್ಟ ವ್ಯಕ್ತಿ ಬಹುಶಃ ಬದುಕಲ್ಲಿ ಯಾವತ್ತೂ ಹಿಂದೆ ಬೀಳೋದಿಲ್ಲ. ಏಕೆಂದರೆ ಅವನಿಗೆ ಅಹಂಕಾರ ಇರುವುದಿಲ್ಲ. ತನ್ನನ್ನು ತಾನು ತಿಳಿದು ಕೊಳ್ಳುವ ಹವಣಿಕೆ ಜನರು ಅವನ ಹತ್ತಿರ ಹತ್ತಿರ ಬರುತ್ತಾರೆ಼. ಅಂಥವರ ಜೊತೆ ಸುಃಖ ಇದೆ. ಸಾಂತ್ವನ ಇದೆ. ಸಮಾಧಾನದ ಹಿತ ನುಡಿಗಳಿವೆ. ಅಲ್ಲಿ ವೈಭವ ಇಲ್ಲ, ವೈಭೋಗವೂ ಇಲ್ಲ, ತನ್ನಂತೆ ಪರರು ಅನ್ನುವ ಪ್ರೀತಿಯ ಮಹಾಪೂರವೇ ಇದೆ.

ಗಂಗಾಜಲ ಬಾಯಿಗೆ ಬಿಟ್ಟಾಗ ಮನುಷ್ಯನ ದಿನಗಳು ಮುಗಿತು ಅಂತ ಅಲ್ಲ. ಆ ನಂತರವೆ ಆತ್ಮ ಬಿಟ್ಟ ದೇಹ ಮಣ್ಣಲ್ಲಿ ಮಣ್ಣಾದರೂ ಇರುವ ಜನರ ಬಾಯಲ್ಲಿ ಅವನ ಗುಣಗಾನ ನಡೆಯುತ್ತಲೆ ಇರುತ್ತದಲ್ಲ; ಸತ್ತ ದೇಹದ ಹೆಸರಿನೊಂದಿಗೆ ಇದ್ದವರು ನೆನಪಿಸಿ ನಡೆದುಕೊಳ್ಳುವ ಬದುಕು. ನಿಜ, ಬದುಕಿನಾಚೆಗೂ ಬದುಕುವ ಬದುಕಿದೆಯಲ್ಲ ಅದೇ ನಿಜವಾದ ಬದುಕು.

ಇತಿಹಾಸದ ಪುಟಗಳನ್ನು ತಿರುವಿದಾಗ ಅನೇಕ ಮಹಾತ್ಮರು ನಮ್ಮ ಕಣ್ಣ ಮುಂದೆ ಬರುತ್ತಾರೆ. ಅವರೂ ನಮ್ಮಂತೆ ಮನುಷ್ಯರೆ ಆಗಿದ್ದರು ಅಲ್ಲವೆ? ಆದರೆ ಆ ಉನ್ನತವಾದ ಸ್ಥಾನಕ್ಕೆ ಎರಿದ್ದು ಮಾತ್ರ ಯಾವ ಪದವಿಯಿಂದಲ್ಲ ಅಥವಾ ಯಾರು ಹೇಳಿ ಕೊಟ್ಟು ಗಳಿಸಿದ್ದಲ್ಲ. ಅವರಾಗೆ ಗಳಿಸಿಕೊಂಡಿದ್ದು. ಅವರು ಅಮರರು. ಸೂರ್ಯ ಚಂದ್ರ ಇರುವವರೆಗೂ ಅವರು ರಾರಾಜಿಸುತ್ತಿರುತ್ತಾರೆ. ಜಗತ್ತಿನಲ್ಲಿ ಒಬ್ಬರಲ್ಲಾ ಒಬ್ಬರು ನೆನಪಿಸಿಕೊಳ್ತಾನೆ ಇರುತ್ತಾರೆ. ಇದು ಎಂಥ ಹಿತ ಮನಸ್ಸಿಗೆ. ಅವರಂತಾಗದಿದ್ದರೂ ನಾನು ಎನ್ನುವುದು ಮರೆತು ನಾವು ಎಂದು ಬದುಕಿದರೆ? ನನಗಾಗಿ ಸಮಾಜ ಅಲ್ಲ; ಸಮಾಜಕ್ಕಾಗಿ ನಾನು.

ಯಾರು ನನಗೇನು ಕೊಟ್ಟರು? ಯಾರು ನನ್ನ ಇಷ್ಪ ಪಡುತ್ತಾರೆ? ಯಾರಿಂದ ನನಗೇನು ಆಗಬೇಕಾಗಿಲ್ಲ. ನನಗೆ ಬೇಕಾದಷ್ಟಿದೆ. ಅಧಿಕಾರ ಇದೆ. ಈ ಧುರಹಂಕಾರ ಬಿಟ್ಟು ಸತ್ಯದ ಕಡೆ ಸಾಗುವುದರಲ್ಲಿ ಶ್ರೇಯಸ್ಸಿದೆ. ನಮಗೆ ನಾವೇ ಶತ್ರು, ನಮಗೆ ನಾವೇ ಮಿತ್ರ. ಮಿತ್ರತ್ವದ ಭಾವನೆ ನಮ್ಮದಾಗಲಿ. ದುಡ್ಡು ಅಧಿಕಾರ ಶಾಶ್ವತ ಅಲ್ಲ. ಅರಿವು ಶಾಶ್ವತ.

ಆದ್ದರಿಂದ ನಾನು, ನನ್ನದು ಎಂಬ ಮಮಕಾರದಿಂದ ಹೊರಬಂದು ಸತ್ಯಾ ಸತ್ಯತೆಯ ಕಡೆ ನಮ್ಮ ಸಂಪೂರ್ಣ ಗಮನ ಹರಿಸಿದರೆ ಉತ್ತಮ. ನಮ್ಮ ಬದುಕಿನಲ್ಲಿ ಇನ್ನೊಬ್ಬರ ನಡೆ ಕೆಲವೊಮ್ಮೆ ನಮ್ಮ ತಪ್ಪು ಒಪ್ಪುಗಳನ್ನು ತೊರಿಸಿ ಕೊಡುತ್ತದೆ. ಅದು ಸಣ್ಣವರಿಂದ ಆಗಿರಬಹುದು ಅಥವಾ ಏನೂ ಓದದೇ ಇರುವ ವ್ಯಕ್ತಿಯಿಂದಲಾದರೂ ಆಗಿರಬಹುದು. ಬಂದ ಸಲಹೆ ಸೂಚನೆ ಪರಾಮಷಿ೯ಸಿ ಪ್ರೀತಿಯಿಂದ ಸ್ವೀಕರಿಸುವ ಬುದ್ದಿ ನಮ್ಮದಾಗಿರಬೇಕಷ್ಟೆ. ಸುತ್ತಲ ಆತ್ಮೀಯರ ಅಭಿಮಾನ ನಮ್ಮನ್ನು ಮೇಲಕ್ಕೆರಿಸುವುದಂತೂ ದಿಟ. ಆದರೆ ನಾವಿಡುವ ಹೆಜ್ಜೆಯತ್ತ ನಮ್ಮ ಚಿತ್ತ ನೆಟ್ಞಿರಬೇಕಷ್ಟೆ. ತಿರಸ್ಕಾರದ ಮನೋಭಾವ ಬೆಳೆಸಿಕೊಂಡಲ್ಲಿ ಅದು ನಮ್ಮನ್ನೆ ನಾಳೆ ಜನ ತಿರಸ್ಕರಿಸುವಂತೆ ಮಾಡುತ್ತದೆ.

ಬದುಕುವ ಕಲೆ ತಿಳಿದಷ್ಟೂ ನಿಗೂಢ. ಆ ಪರಮಾತ್ಮನ ಲೀಲೆಯೆ ವಿಚಿತ್ರ. ಎಷ್ಟು ಅರಿತರೂ ಇನ್ನೂ ಮುಗಿಯದು ದಾರಿ. ದಾರಿ ಸವಕಲು ಆಗುವುದೆ ಇಲ್ಲ. ನಡೆದಷ್ಟೂ ಅಂತ್ಯ ಕಾಣದು ತನ್ಮಯತೆಯತ್ತ ಮುಗಿಯದ ಪಯಣ.
22-9-2016. 11.48pm

Advertisements

ಗುರು – ಶಿಷ್ಯ

ಅರಿವು ಅಂದರೆ ತಿಳುವಳಿಕೆ.  ಇದು ನಮಗೆ ಹುಟ್ಟಿನಿಂದ ಬರಲು ಸಾಧ್ಯವಿಲ್ಲ. ಇದಕ್ಕೆ ಒಬ್ಬ ಗುರುವಿನ ಅಗತ್ಯ ಇದೆ.  ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿದ ತಾಯಿ ಮೊದಲ ಗುರು.  ಎಳೆ ಕಂದಮ್ಮನಿಗೆ ಹಾಲುಣಿಸುವ ತರಬೇತಿಯಿಂದ ಹಿಡಿದು ತನ್ನ ಜೀವಿತಾವಧಿಯ ಕೊನೆಯವರೆಗೂ ಒಂದಲ್ಲಾ ಒಂದು ಗಳಿಗೆಗಳ ಸಂದರ್ಭದಲ್ಲಿ ಜೊತೆಯಾಗಿ ನಿಂತು ಸಲಹುವ ಗುರು ರಕ್ಷೆ ಅವಳು.

ಹಾಗಾದರೆ ತಂದೆ? ಮುದ್ದು ಮಾಡಿ ಎತ್ತಿ ಹಾರಿಸಿ ಕಂದನ ಲಾಲನೆ ಪಾಲನೆ ಕಡೆ ಕಣ್ಣಿಟ್ಟು ಬೇಕಾದ್ದೆಲ್ಲ ತನ್ನ ಶಕ್ತ್ಯಾನುಸಾರ ತಂದು ಕೊಡುವ ; ತರಲಾರದ್ದಕ್ಕೆ ಸಂಕಟ ಪಡುತ್ತ ಹಪಹಪಿಸಿ ಮರೆಯಲ್ಲಿ ಕಣ್ಣೊರೆಸಿಕೊಂಡು ಜವಾಬ್ದಾರಿ ಹೊತ್ತು ಮಕ್ಕಳಿಗೆ ಶ್ರೀ ರಕ್ಷೆ ನೀಡಿ ಬೆಳೆಯುವ ಮಕ್ಕಳ ಏಳಿಗೆಯ ನೋಡಿ ಬೀಗುವ ಕಣ್ಣಿಗೆ ಕಾಣದ ಗುರು ಎಂದರೂ ತಪ್ಪಾಗಲಾರದು.  ಏಕೆಂದರೆ ಸಂಸಾರದಲ್ಲಿ ಮಕ್ಕಳಿಂದ ಏನೆ ತಪ್ಪು ಒಪ್ಪಿದ್ದರೂ ಸಾಮಾನ್ಯವಾಗಿ ತಾಯಿ ಕಲಿಸಿದ ಬುದ್ಧಿ ಹೇಳೋದೆ ಜಾಸ್ತಿ.  ತಂದೆ ತಾಯಿ ಕಲಿಸಿದ ಬುದ್ಧಿ ಹೇಳೋದು ಅಪರೂಪ. ತಂದೆ ತಾಯಿಯಾದವರೂ ಹೇಳುವುದೂ ಹಾಗೆ ಒಳ್ಳೆದಾದರೆ ನಾ ಕಲಿಸಿದ್ದು ಅದೆ ತಪ್ಪಾದರೆ ಅವರಮ್ಮ ಕಲಿಸಿದ ಬುದ್ಧಿ. ಎಷ್ಟು ವಿಪಯಾ೯ಸ!

ಸಮಾಜದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ರೀತಿ, ಮಾತು ಸಮಾಜ ಎಷ್ಟೇ ಮುಂದುವರೆದರೂ ಕೆಲವು ನಡೆ ರಕ್ತಗತವಾಗಿ ಸೇರಿಕೊಂಡಿರುತ್ತದೆ. ಬಿಡೋದೆ ಇಲ್ಲ.

ನಂತರದ ದಿನಗಳಲ್ಲಿ ಮಗುವಿನ ಬೆಳವಣಿಗೆ ಆದಂತೆಲ್ಲ ಸುತ್ತ ಮುತ್ತಲ ಮಕ್ಕಳ ಜೊತೆ ಸೇರಿ ಅನೇಕ ಬೇಕಾದ್ದು ಬೇಡಾದ್ದು ನಿಧಾನವಾಗಿ ಒಂದೊಂದೆ ಕಲಿಯುವ ಮಗು ಹೆತ್ತವರನ್ನೆ ಪ್ರಶ್ನೆ ಮಾಡುವ ಮಟ್ಟಕ್ಕೆ ಬೆಳೆದುಬಿಡುತ್ತವೆ.  ಅದರಲ್ಲೂ ಈಗಿನ ಮಕ್ಕಳು ಅಸಾಧ್ಯ.  ಅವುಗಳಿಗೆ ಉತ್ತರ ಕೊಡಲು ಕಲಿತ ವಿದ್ಯೆ ಎಲ್ಲ ಉಪಯೋಗಿಸ ಬೇಕು.  ಸಮಯಕ್ಕೆ ತಕ್ಕಂತೆ ಮಾತಾಡುವ ಜಾಣ್ಮೆ ಈಗಿನ ಮಕ್ಕಳಲ್ಲಿ ಜಾಸ್ತಿ.  ಅವರು ಹೇಳುವ ಸುಳ್ಳು ಸತ್ಯದ ಮೇಲೆ ಹೊಡೆದಂತಿರುತ್ತದೆ.

ಒಮ್ಮೆ ಬಸವನಗುಡಿಯಲ್ಲಿ ಒಬ್ಬ ಹುಡುಗ ” ಆಂಟಿ ನನಗೆ ಬಸ್ಸಿಗೆ ಹೋಗಲು ಕಾಸಿಲ್ಲ; ನೀವು ಸಹಾಯ ಮಾಡ್ತೀರಾ?”  “ಯಾಕೋ ಮನೆಯಿಂದ ಬರುವಾಗ ತಂದಿಲ್ವಾ?”  “ಇಲ್ಲ ಆಂಟಿ ದಿನಾ ನನ್ನ ಅಂಕಲ್ ಬಂದು ಕರೆದುಕೊಂಡು ಹೋಗ್ತಾ ಇದ್ರು. ಇವತ್ತು ಬಂದಿಲ್ಲ.  ಟ್ಯೂಷನ್ಗೆ ಹೋಗಬೇಕು” ಅವನ ನೋಟ ನನಗೆ ಪಾಪ ಅನ್ನಿಸಿ ಕಾಸು ಕೊಟ್ಟು ಮುನ್ನಡೆದೆ.  ಸ್ವಲ್ಪ ದೂರ ಹೋಗುವಷ್ಟರಲ್ಲಿ ಯಾಕೆ ನನ್ನ ಸ್ಕೂಟಿಯಲ್ಲಿ ಇಲ್ಲೆ ಹತ್ತಿರ ಮನೆ ಇದ್ದರೆ ಬಿಡಬಾರದು?  ಒಂದೊಮ್ಮೆ ನಾನು ಹೋಗುವ ದಾರಿಯಲ್ಲಿ ಅವನ ಮನೆ ಇದ್ದರೆ?  ಅವನು ಸಿಕ್ಕಲ್ಲಿಗೆ ವಾಪಸ್ಸು ಬಂದರೆ ಪಕ್ಕದಲ್ಲಿರೊ ಪಾನಿ ಪುರಿ ಅಂಗಡಿಯಲ್ಲಿ ತಿನ್ನುತ್ತ ನಿಂತಿರೋದು ನೋಡಿ ದಂಗಾದೆ.  ಕೋಪ ಬಂದರೂ ಛೆ! ಪಾಪ, ತಿನ್ನೊ ಆಸೆ ಅಂತ ಸುಮ್ಮನಾಗಿ ವಾಪಸ್ ಬಂದೆ. ಇಂತಹ ಬುದ್ಧಿ ಅದೇಗೆ ಕಲಿತಾರೆ ಮಕ್ಕಳು?  ಯಾವ ಗುರುವೂ ಬೇಡ ಅಲ್ಲವೆ?

ಮುಂದಿನ ಮೆಟ್ಟಿಲು ಶಾಲೆ.  ಹಲವಾರು ಶಿಕ್ಷಕರ ಹೆಣಗಾಟದಲ್ಲಿ ಒಂದೊಂದೆ ಮೆಟ್ಟಿಲು ಹತ್ತುತ್ತ ಶಿಕ್ಷಣ ಮುಗಿಸುವ ಮಕ್ಕಳಲ್ಲಿ ನೆನಪಿಗೆ ಇರುವ ಶಿಕ್ಷಕರು ಬೆರಳೆಣಿಕೆಯಷ್ಟು ಮಾತ್ರ.  ಒಂದೊ ಆ ಮಾಸ್ತರು ಸ್ಟಿಕ್ಟು.  ನನಗೆ ಅವರ ಕಂಡರೆ ಆಗ್ತಿರಲಿಲ್ಲ.  ಬರೀ ಪಾಶಾ೯ಲಿಟಿ. ಹಾಗೆ ಹೀಗೆ ಅಂತ ಗುಣಗಾನ ಮಾಡುವ ನಡೆ ಮೊದಲಿಂದ ಇಂದಿನವರೆಗೂ ನಡೆದುಕೊಂಡು ಬಂದ ರೀತಿ.  ಆದರೆ ಕಲಿಕೆಯ ದಿನಗಳಲ್ಲಿ ಕಳೆದ ದಿನಗಳನ್ನು ಯಾವ ವಿದ್ಯಾರ್ಥಿಯೂ ಮರೆಯಲಾರ.  ದೊಡ್ಡವರಾಗಿ ಶಿಕ್ಷಣ ಮುಗಿಸಿ ಕೆಲಸಕ್ಕೆ ಸೇರಿ ದೇಶ ವಿದೇಶದಲ್ಲಿ ನೆಲೆಸಿದ್ದರೂ ತನ್ನ ಶಾಲೆ ತನ್ನ ಗುರು ಅನ್ನುವ ಅಭಿಮಾನ ಎಲ್ಲರಲ್ಲೂ ಉಳಿದಿರುತ್ತದೆ.  ದಿನ ನಿತ್ಯ ನೆನೆಯದೇ ಇದ್ದರೂ ಮಹತ್ವದ ದಿನಗಳಲ್ಲಿ ನೆನಪಿಸಿಕೊಳ್ಳುವುದು ಗ್ಯಾರಂಟಿ.

ಮುಂದಿನ ಹಂತ ಸಂಸಾರ.  ಇಲ್ಲಿ ಯಾರು ಗುರು ಯಾರು ಶಿಷ್ಯ ಹೇಳುವುದು ಕಷ್ಟ. ಗಂಡನಿಗೆ ಗೊತ್ತಿಲ್ಲದ್ದು ಹೆಂಡತಿ ಕಲಿಸುತ್ತಾಳೆ. ಹೆಂಡತಿಗೆ ಗೊತ್ತಿಲ್ಲದ್ದು ಗಂಡ ಹೇಳಿಕೊಡುತ್ತಾನೆ.  ಇಬ್ಬರಿಗೂ ಗೊತ್ತಿಲ್ಲದ್ದು ಮಕ್ಕಳಿಂದಲೂ ಅರಿತುಕೊಳ್ಳುತ್ತೇವೆ.  ಏಕೆಂದರೆ ಇದು ತಂತ್ರಜ್ಞಾನ ಯುಗ.  ಹೊಸ ಹೊಸ ಆವಿಷ್ಕಾರಗಳ ಅರಿವು ನಮಗಿಂತ ನಮ್ಮ ಮಕ್ಕಳಿಗೆ ಚೆನ್ನಾಗಿ ಗೊತ್ತಿರುತ್ತದೆ.  ಏನಾದರೂ ತೆಗೆದುಕೊಳ್ಳಬೇಕೆಂದರೆ ಊರು ಸುತ್ತಿ ಶ್ರಮ ಪಟ್ಟು ತರೊ ರಿತಿ ನಮ್ಮದಾದರೆ ಕ್ಷಣ ಮಾತ್ರದಲ್ಲಿ online ಮಾಯಾಂಗನೆ ಮೂಲಕ ತರಿಸುವ ಜಾಣ್ಣೆ ಈಗಿನವರದ್ದು.  ಇವೆಲ್ಲದರ ಕುರಿತು ವಿವರಣೆ ನೀಡಿ ಹೆತ್ತವರಿಗೆ ಈಗಿನ ಮಕ್ಕಳೆ ಗುರುವಾಗುತ್ತಿದ್ದಾರೆ.

ಇವೆಲ್ಲವುಗಳ ಮದ್ಯ ಜೀವನದಲ್ಲಿ ಸಿಗುವ ಹಲವಾರು ಜನಗಳ ಒಡನಾಟದಲ್ಲಿ ನಮಗೆ ಅರಿವಿಲ್ಲದಂತೆ ಅನೇಕ ವಿಷಯಗಳ ಅರಿವು ನಮಗಾಗಿರುತ್ತದೆ. ಜೀವನದಲ್ಲಿ ಘಟಿಸುವ ಘಟನೆಗಳು ನಮ್ಮನ್ನೆ ನಾವು ಒರೆಗೆ ಹಚ್ಚಿ ಅನೇಕ ರೀತಿಯ ಪಾಠ ಕಲಿತು ನಮಗೆ ನಾವೇ ಗುರುವಾಗಿರುತ್ತೇವೆ. ನೆಂಟರು ಮತ್ತು ರಕ್ತ ಸಂಬಂಧಿಗಳಿಂದ ಕಷ್ಟದ ದಿನಗಳಲ್ಲಿ ಮನದಟ್ಟಾಗುವ ದೊಡ್ಡ ಪಾಠ. ಮುಖವಾಡ ಹೊತ್ತ ಎಷ್ಟೋ ಜನಗಳ ಒಳ ಮನಸ್ಸು ಇಂಥ ದಿನಗಲ್ಲಿ ಚೆನ್ನಾಗಿ ಅರಿವಾಗಿ ಜನರ ಮದ್ಯ ಹೇಗೆ ಬದುಕಬೇಕೆನ್ನುವ ಶಿಕ್ಷಣವಿದು. ಶಿಲ್ಪಿ ಶಿಲೆಯಲ್ಲೂ ಕಲೆ ಮೂಡಿಸಿ ಕಡೆದಿಟ್ಟ ಸುಂದರ ಮೂತಿ೯ ಕೆತ್ತುವಂತೆ ಉಳಿಯ ಪೆಟ್ಟು ಬಿದ್ದಷ್ಟೂ ದೇಹ ಸೋತರೂ ಮನಸ್ಸು ಪಕ್ವವಾಗುವ ಹಂತ!

ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಏನಾದರೂ ಕಲಿತಾನೆ ಇರ್ತಾನೆ ಅದಕ್ಕೆ ಕೊನೆ ಇಲ್ಲ.  ಯಾರು ಗುರು ಯಾರು ಶಿಷ್ಯ ಅನ್ನುವುದಕ್ಕಿಂತ ಆಯಾ ಸಂದರ್ಭದಲ್ಲಿ ಕಲಿಯುವ ವಿಷಯಕ್ಕೆ ಸಂಬಂಧ ಪಟ್ಟಂತೆ ಗುರು ಶಿಷ್ಯರ ಸಮಾಗಮ ಜೀವನದ ಪ್ರತಿ ಕ್ಷಣ ನಡೆಯುತ್ತಲೆ ಇರುತ್ತದೆ ಅಲ್ಲವೆ? ಕಲಿತಷ್ಟೂ ಮುಗಿಯುವುದಿಲ್ಲ ಕಲಿಕೆ ; ಕಲಿಕೆಗೆ ಕಾರಣರಾದ ಪ್ರತಿಯೊಬ್ಬರೂ ಗುರುವಿನ ಸ್ಥಾನಕ್ಕೆ ಅಹ೯ರಾಗಿರುತ್ತಾರೆ. ಜಗತ್ತೇ ಒಂದು ಪಾಠ ಶಾಲೆ ಇಲ್ಲಿ ಪ್ರತಿಯೊಬ್ಬರೂ ಗುರುಗಳು ; ಪ್ರತಿಯೊಬ್ಬರೂ ವಿದ್ಯಾರ್ಥಿಗಳು. ವಯಸ್ಸಿನ ತಾರತಮ್ಯ ಇಲ್ಲ, ಜಾತಿ ಮತ ಭೇದವಿಲ್ಲ. ಕಲಿಕೆಗೆ ಎಲ್ಲರೂ ಒಂದೆ. ಗುರು ಸ್ಥಾನ ಶ್ರೇಷ್ಠ!

5-9-2016. 5.49 pm

ಭಾವನೆಗಳ ತಿಕ್ಕಾಟ

ಮನಸ್ಸಿನ ಭಾವನೆಗಳನ್ನು ಒಮ್ಮೊಮ್ಮೆ ನಿಗ್ರಹಿಸುವುದು ಬಲು ಕಷ್ಟ. ಇದು ವಯಸ್ಸಿನ ಅಸಹಾಯಕತೆಯೊ ಅಥವಾ ಇಷ್ಟು ದಿನದ ಬದುಕಿನಲ್ಲಿ ತಾ ಬಯಸಿದ ಬದುಕು ತನ್ನದಾಗಿಲ್ಲವೆಂಬ ಹತಾಶೆಯ ಮಾನಸಿಕ ತೊಳಲಾಟವೊ. ಒಟ್ಟಿನಲ್ಲಿ ಭಾವನೆಗಳ ತೀವ್ರತೆ ಮನಸ್ಸನ್ನು ಘಾಸಿಗೊಳಿಸುವುದಂತೂ ನಿಜ. ಬದುಕನ್ನೇ ಹಿಂಡಿ ಹಿಪ್ಪೆ ಮಾಡುವ ಕೆಲವು ನೆನಪುಗಳನ್ನು ಈಡೇರದ ಬಯಕೆಗಳನ್ನು ಮರೆಯುವ ಪ್ರಯತ್ನ ಪ್ರತಿಯೊಬ್ಬ ಮನುಷ್ಯ ಇನ್ನಿತರ ಕೆಲಸ ಕಾಯಕದಲ್ಲಿ ತೊಡಗಿಸಿಕೊಳ್ಳಲು ಶ್ರಮ ಪಡುತ್ತಾನೆ. ಗುರಿ ತಲುಪುವವರೆಗೂ ಹೋರಾಟದ ಮನೋಭಾವ ಮುಂದುವರೆಯುತ್ತಲೆ ಇರುತ್ತದೆ. ಕುಳಿತಲ್ಲಿ ನಿಂತಲ್ಲಿ ಮನಸ್ಸನ್ನು ಕಾಡುವ ಮಹಾ ಗುದ್ದಾಟದ ಸಂದರ್ಭ ಎಂದರೂ ತಪ್ಪಾಗಲಾರದು. ಬದುಕನ್ನು ಊಜಿ೯ತಗೊಳಿಸಿಕೊಳ್ಳಲು ತನ್ನನ್ನು ತಾನೇ ಉದ್ಧರಿಸಿಕೊಳ್ಳಲು ಇರುವುದೊಂದೆ ಮಾಗ೯. ಇದು ಇಂದ್ರಿಯಗಳಿಗೆ ಉತ್ತೇಜನ ನೀಡಿ ಹೊಸ ಉತ್ಸಾಹದಲ್ಲಿ, ಹೊಸ ಯೋಚನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಸುಲಭ ಮಾಗ೯. ಇದು ಯಾವ ಮನುಷ್ಯನಿಗೆ ಸಾಧ್ಯವಾಗಿಸಿಕೊಳ್ಳಲು ತಾಕತ್ತು ಆ ಮನುಷ್ಯನಲ್ಲಿ ಉದ್ಭವಿಸುತ್ತೊ ಅಂದು ಅವನೊಬ್ಬ ಹೊಸ ಮನುಷ್ಯನಾಗುತ್ತಾನೆ. ಆಗ ಬದುಕಿನಲ್ಲಿ ನಡೆದ ಘಟನೆಗಳೆಲ್ಲ  ಈಡೇರದ ಬಯಕೆಗಳೆಲ್ಲ ಕ್ಷುಲ್ಲಕವಾಗಿ ಕಾಣಲು ಶುರುವಾಗುತ್ತದೆ.
ವಯಸ್ಸಾದಂತೆಲ್ಲ ಬದುಕಿನ ಅನುಭವಗಳು ತಿಳುವಳಿಕೆ ಹೆಚ್ಚಿಸಿ ತಪ್ಪು ನಡೆ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ. ಒಮ್ಮೆ ಹಿಂತಿರುಗಿ ನೋಡಿದ ಮನುಷ್ಯ ತನ್ನ ತಪ್ಪನ್ನೆ ತಾನೆ ಕ್ಷಮಿಸಿ ವಿಮಶಿ೯ಸುವ ಹಂತಕ್ಕೆ ತಲುಪುತ್ತಾನೆ. ಹೌದು, ನಾನ್ಯಾಕೆ ಹೀಗೆ ತಪ್ಪು ಮಾಡಿದ್ದೆ? ಏನಾಗಿತ್ತು ನನಗೆ? ಈ ರೀತಿ ಯೋಚನೆ ಕೊನೆಯಲ್ಲಿ ಅರಿವಿನ ಕೊರತೆ, ಅಜ್ಞಾನಿಯಾದ ನಾನು ಸಹಜವಾಗಿ ಈ ನಡೆ ನನ್ನದಾಯಿತು. ಈ ರೀತಿ ಸಮಾಧಾನ ಅವನನ್ನು ಹೊಸ ಮನುಷ್ಯನನ್ನಾಗಿ ರೂಪಿಸುತ್ತದೆ. ಸಂಕುಚಿತ ಮನೋಭಾವದಿಂದ ಹೊರ ಬರುತ್ತಾನೆ. ಇದೇ ಅಲ್ಲವೆ “ಅರಿವೆ ಗುರು”.

“ನಮಗೆ ನಾವೇ ಮಿತ್ರ ನಮಗೆ ನಾವೇ ಶತ್ರು” ಎಂಬ ನಾನ್ನುಡಿಯಂತೆ ಮೊದಲು ನಮ್ಮನ್ನು ನಾವು ವಿಮಶೆ೯ಗೆ ಒಳಪಡಿಸಿಕೊಳ್ಳಬೇಕು. ಜೀವನ ಅನ್ನುವುದು ಕೆಲವರಿಗೆ ಕಷ್ಟದ ಕೂಪವಾಗಿ ಪರಿಣಮಿಸುತ್ತದೆ. ಯಾವ ದಾರಿ ಕಾಣದೆ ಇಂತಹ ಮನುಷ್ಯ ಕತ್ತಲೆಯಲ್ಲೂ ಕಣ್ಣು ಕಟ್ಟಿ ಬಿಟ್ಟಂತೆ ಒದ್ದಾಡುತ್ತಾನೆ. ಇಂತಹ ಸಮಯದಲ್ಲಿ ಯಾರೂ ನಮಗಾಗಿ ಒದಗಿ ಬರೋದಿಲ್ಲ. ಎಲ್ಲದಕ್ಕೂ ನಾವೇ ಹೊಣೆಗಾರರಾಗಿ ಇರಬೇಕಾಗುತ್ತದೆ. ಕಣ್ಣ ಮುಂದೆ ಜವಾಬ್ದಾರಿಯ ಮೂಟೆ ಸೊಟ್ಟ ಮೂತಿ ಹಾಕಿ ಚೇಡಿಸಿದಂತೆ ಭಾಸವಾಗುತ್ತದೆ. ಮನಸ್ಸಿನ ನೋವು ಹತಾಷೆ ದೇಹದ ಅಂಗಾಂಗ ತಿನ್ನಲು ಶುರು ಮಾಡುತ್ತದೆ. ಕೈ ಕಾಲು ಸ್ವಾದೀನ ಕಳೆದುಕೊಳ್ಳುತ್ತಿರುವ ಅನುಭವ. ಹೊಟ್ಟೆಯೊಳಗಿನ ಪಿತ್ತ ಅನ್ನ ಆಹಾರದ ಕೊರತೆ ಕಂಡು ನಿದ್ದೆಯಿಲ್ಲದ ರಾತ್ರಿಯ ಪರಿಣಾಮ ಎತ್ತಿ ತೋರಿಸಲು ಪ್ರಾರಂಭಿಸುತ್ತವೆ. ನೆತ್ತಿಯಲ್ಲಿ ಏನೊ ಒಂದು ರೀತಿ ಶಳತ ನನಗೆ ಅಂತ ಆಪ್ತರಲ್ಲಿ ಹೇಳಿಕೊಳ್ಳುವ ಸಮಯ ಕಣ್ಣು ಮಂಜಾಗಿಸುತ್ತದೆ. ಇಷ್ಟೆಲ್ಲಾ ಕೊರತೆಗಳ ಕೂಪ ಮುತ್ತಿಕೊಂಡಿರುವಾಗ ಜೀವಕ್ಕೆ ಬದುಕುವ ಆಸೆ ಕಮರದೆ ಇರಲು ಸಾಧ್ಯವೆ?

ಇಂತಹ ಸಮಯದಲ್ಲಿ ತನ್ನವರು ಅಂತ ಯಾರಾದರೂ ಇದ್ದಿದ್ದರೆ ಅನ್ನುವ ದೂರದ ಆಸೆ ಹೆಡೆಯೆತ್ತಿ ನಿಲ್ಲುತ್ತದೆ. ನಿಜ. ಆದರೆ ನಮ್ಮ ಕಷ್ಟ ನೋವುಗಳಿಗೆ ನಾವೆ ಜವಾಬ್ದಾರರು. ಬದುಕಿನ ಬಗ್ಗೆ ಭರವಸೆ ಯಾವತ್ತೂ ಕಳೆದುಕೊಳ್ಳಬಾರದು. ಸೂಕ್ಷ್ಮ ಮನಸಿನ ವ್ಯಕ್ತಿ ಇಂತಹ ಸಮಯದಲ್ಲಿ ಅಧೀರನಾಗದೆ ಧೈರ್ಯ ತಂದುಕೊಳ್ಳಬೇಕು. ದೇವರು ಕೊಟ್ಟ ಈ ಮಾನವ ಜನ್ಮ ಇಲ್ಲಿಗೆ ಮುಗಿಯಬಾರದು. ಕಾಲನ ಕೋಲು ಬೀಸುತ್ತಿರುತ್ತದೆ. ಇದಕ್ಕೆ ಬಲಿಯಾಗುವ ಕಾಲ ಸನ್ನಿಹಿತವಾಗುವವರೆಗೂ ಜೀವನ ಮುಂದುವರಿಯಬೇಕು.

ಇಷ್ಟೆಲ್ಲಾ ತಿಳುವಳಿಕೆಯ ಬುದ್ಧಿ ಮನುಷ್ಯನಿಗೆ ಉಂಟಾದರೂ ಮನಸ್ಸನ್ನು ಕಾಡುವ ಭೂತ ಯಾವತ್ತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಒಬ್ಬರೆ ಕೂತು ಕಣ್ಣೀರಿಡೋದು, ದುಃಖ ಪಡೋದು ನಡಿತಾನೆ ಇರುತ್ತದೆ. ಪ್ರತಿಯೊಂದಕ್ಕೂ ಪೂತಿ೯ ಮುಕ್ತಿ ಬೇಕು ಅಂದರೆ ಅದು ಸಾವಿನಲ್ಲಿ ಮಾತ್ರ ಅನಿಸುತ್ತದೆ. ಎಷ್ಟು ವಿಚಿತ್ರ ಅಲ್ಲವೆ? ಬದುಕಿರುವಾಗ ಎಲ್ಲದರಿಂದ ಮುಕ್ತಿ ಸಿಕ್ಕರೆ ಆ ದೇವರನ್ನು ಖಂಡಿತ ಯಾರೂ ನೆನಪಿಸಿಕೊಳ್ಳುವುದಿಲ್ಲ. ಇದು ಆ ದೇವರು ನಮಗಿಟ್ಟ ವರವೊ ಅಥವಾ ನೀ ಹೀಗೆ ಆಗಾಗ ನೆನೆದು ಅನುಭವಿಸುತ್ತಿರು ಅನ್ನುವ ಶಿಕ್ಷೆಯೊ?
4-7-2016 10.57am

ಸ್ಕೂಲ್ ಕಂಡೀಶನ್

image

ನನ್ನ ಪಾಡಿಗೆ ಮನೆಗೆ ಬೇಕಾದ ಸಾಮಾನುಗಳ ಪಟ್ಟಿ ಹೇಳುತ್ತಿದ್ದೆ. ಅದೊಂದು ನಮ್ಮನೆ ಹತ್ತಿರ ಇರುವ ಕಿರಾಣಿ ಅಂಗಡಿ. ಸ್ವಲ್ಪ ಜನ ಇದ್ದರು ಅಲ್ಲಿ. ನಾಲ್ಕು ಗಂಟೆಯ ಸಮಯ. ಹೆಚ್ಚಿನ ಮಹಿಳೆಯರು ಮನೆ ಸಾಮಾನು ಕೊಳ್ಳಲು ಇದೆ ಸಮಯವಲ್ಲವೆ ಬರುವುದು.
ಅಂಗಡಿಯವಳು ಮಹಿಳೆ. ಗಂಡ ಊಟಕ್ಕೆ ಹೋದವನು ಇನ್ನೂ ಬಂದಿಲ್ಲ. ಎರಡು ಜನ ಹುಡುಗರು ಸಾಮಾನು ಕೊಡುವುದಕ್ಕೆ.
ನನ್ನ ಹಿಂದಿನಿಂದ ಬಂದ ಸ್ವರ.

“ಅಮ್ಮ ನಿಮ್ಮಲ್ಲಿ ಡ್ರೈ ಫುಡ್ ಅಂತೆ ಇದೆಯಾ?”
” ಹೂಂ ಇದೆ ಏನು ಬೇಕಿತ್ತು?”
” ಅದೆ ಪಿಸ್ತಾ ಅಂತೆ”
“ಎಷ್ಟು ಬೇಕು. 50 ಗ್ರಾಮ್ ಕೊಡ್ಲಾ 100ಗ್ರಾಂ ಕೊಡ್ಲಾ?”
” ಒಂದು ಕೆ.ಜಿ. ಕೊಡಮ್ಮ.. ಮೊಮ್ಮಗಳಿಗೆ ಸ್ಕೂಲಲ್ಲಿ ತಿನ್ನಲು ಬರೆದು ಕಳಿಸಿದ್ದಾರೆ.”
” ಅಧ೯ ಕೆ.ಜಿ.ಗೆ ₹900/- ಆಗುತ್ತೆ. ನೋಡಿ ಅಧ೯ ಕೆ.ಜಿ. ಪ್ಯಾಕೆಟ್.”
” ಆಯ್ತು ಕೊಡಮ್ಮ ಅದೆಷ್ಟರೂ ಆಗಲಿ. ಮೊಮ್ಮಗಳು ತಿನ್ನಲಿ. ಹಂಗೆ ಗುಂಡಗಿರೊ ಗೋಡಂಬಿ ಒಂದು ಕೆ.ಜಿ. ಕೊಡಮ್ಮ. ಆಮೇಲೆ ಖಜೂ೯ರ ಡ್ರೈಫುಡ್ ಹೌದಾ?”
“ಹೂಂ ಹೌದು.”
“ಅದನ್ನೂ ಒಂದು ಕೆ.ಜಿ. ಕೊಡಮ್ಮ.”
“ಅಲ್ಲಮ್ಮ ಮೊಮ್ಮಗಳ ಸ್ಕೂಲಲ್ಲಿ ಬರೆದು ಕಳಿಸಿದ್ದಾರೆ. ದಿನಾ ಡ್ರೈ ಫುಡ್ ನೂರು ಗ್ರಾಂ. ಶಾಲೆಯಲ್ಲಿ ತಿನ್ನಲು ಕಳಿಸಿ. ಹಂಗರೆ ನೂರು ಗ್ರಾಂ ಅಂದರೆ ಎಷ್ಟು ಕೊಡಬೇಕಮ್ಮ.”

ಅವಳ ಮುಖದಲ್ಲಿ ಖುಷಿ, ಆಶ್ಚರ್ಯ. ಅದೇನು ಅನಿಸಿತೊ ಗೊತ್ತಿಲ್ಲ.

“ಅವರನ್ನೆ ಕೇಳಿ.”

ಆಗಲೆ ನಾನು ಆ ವ್ಯಕ್ತಿಯನ್ನು ದೃಷ್ಟಿಸಿ ಸರಿಯಾಗಿ ಅಡಿಯಿಂದ ಮುಡಿಯವರೆಗೆ ನೋಡಿದ್ದೆ.

ಮಾಸಲು ಅಂಗಿ, ಹಳೆಯ ಲುಂಗಿ, ಸವೆದ ಚಪ್ಪಲಿ, ಕುರುಚಲು ಗಡ್ಡ. ವಯಸ್ಸು ಸುಮಾರು ಅರವತ್ತು ದಾಟಿರಬಹುದು. ಹೋಗುವಾಗ ನೋಡಿದೆ ನಿಧಾನ ನಡಿಗೆ. ಆದರೆ ಅವರ ಮಾತು “ನನ್ನ ಮೊಮ್ಮಗಳಿಗೆ ” ಹೇಳುವ ಮಾತಿನಲ್ಲಿ ಗತ್ತಿತ್ತು. ಮಮತೆಯ ಮಹಾಪೂರವೆ ಹರಿದಿತ್ತು. ಎಷ್ಟಾದರೂ ಪರವಾಗಿಲ್ಲ ಕೊಡಿ. ಎಂಥ ಅಜ್ಜನ ಪ್ರೀತಿ. ತನಗೇನು ಕಡಿಮೆ ಆದರೂ ಪರವಾಗಿಲ್ಲ. ಮೊಮ್ಮಗಳು ಚೆನ್ನಾಗಿ ಇರಬೇಕು. ಅವಳಿಗೇನು ಕಡಿಮೆ ಆಗಬಾರದು. ಬಹುಶಃ ಡ್ರೈಫುಡ್ ಯಾವುದಕ್ಕೆ ಹೇಳುತ್ತಾರೆ ಎಂಬುದು ಆ ವ್ಯಕ್ತಿಗೆ ಗೊತ್ತ೦ತಿಲ್ಲ.

ಆದರೆ ಅದ್ಯಾವ ಶಾಲೆ ಡ್ರೈಫುಡ್ ತರಲು ಗ್ರಾಂ. ಲೆಕ್ಕದಲ್ಲಿ ಕಂಡೀಷನ್ ಹಾಕಿರೋದು ಅಂತ ತಲೆ ಒಮ್ಮೆ ಗಿರ್ ಅಂತು. ಮನೆಯಲ್ಲಿ ಬಾಯಿಗೆ ಹಾಕಿ ಕಲಿತ ವಿದ್ಯೆಯೆಲ್ಲ ಉಪಯೋಗಿಸಿ ತಿಂಡಿ ತಿನ್ನಿಸಬೇಕಾದ ಪರಿಸ್ಥಿತಿ ಹೆತ್ತವರದು. ಹೀಗಿರುವಾಗ ಈ ಪುಟ್ಟ ಮಕ್ಕಳು ಇಷ್ಟು ಬೆಲೆಯ ಡ್ರೈ ಫುಡ್ ಅದೆಷ್ಟು ಸರಿಯಾಗಿ ತಿನ್ನಬಲ್ಲರು? ಇನ್ನುಳಿದಿದ್ದಕ್ಕೆ ಪೋಶಕರು ಅದೆಷ್ಟು ಖಚು೯ ಮಾಡಬೇಕಾದೀತು!

24-6-2016. 8.47pm

ಅನಾಥ ಪ್ರಜ್ಞೆಯ ಸ್ಥಿತಿ

image

ಇದೊಂದು ಮನಸಿನ ಭಾವನೆ ವಿಚಿತ್ರವಾದರೂ ಸತ್ಯ. ಅದೆಷ್ಟು ಮನಸ್ಸನ್ನು ಕಾಡುವ ಹಿಂಸೆ ಕೊಟ್ಟು ಸಾಯಿಸಿಬಿಡುವ ದುಬ೯ಲ ಮನಸ್ಸಿನ ಹಪಹಪಿಸುವ ಕ್ಷಣ. ಆ ಒಂದು ಸಂದರ್ಭ ನಾನು ಒಂಟಿ, ನನಗ್ಯಾರು ಇಲ್ಲ, ನಾನು ಯಾಕೆ ಬದುಕಿರಬೇಕು, ಯಾರಿಗಾಗಿ ಬದುಕಬೇಕು, ನಾನಿಲ್ಲದಿದ್ದರೆ ಏನಂತೆ, ನಾನು ಯಾರಿಗೂ ಬೇಡಾದವಳು/ನು. ಹೀಗೆ ದುಭ೯ಲ ಮನಸ್ಸು ಹೇಳಿಕೊಳ್ಳುತ್ತದೆ. ಯಾಕೆ ಹೀಗೆ ಮನಸ್ಸು. ಇದಕ್ಕಿನ್ನೇನು ಬೇಕು. ಸುತ್ತ ಎಲ್ಲರೂ ಇದ್ದಾರಲ್ಲ. ಇನ್ನೂ ಯಾಕೆ ಈ ಕೊರಗು. ಹೀಗೆ ಎಷ್ಟು ಬುದ್ಧಿ ಹೇಳಿದರೂ ಕೇಳಲಾರದ ಮನಸ್ಸು ಪದೆ ಪದೆ ಈ ಸ್ಥಿತಿಗೆ ಬರುತ್ತದೆ. ಯೋಚಿಸಿ ಯೋಚಿಸಿ ಕಣ್ಣೀರು ಹೆಣ್ಣಾದರೆ, ಅದೆ ಗಂಡಾದರೆ ಸಾಮಾನ್ಯವಾಗಿ ದುಶ್ಚಟಕ್ಕೆ ದಾಸ. ಯಾಕೆ ಹೀಗೆ? ಯಾಕೆ? ಯಾಕೆ? ಯಾಕೆ?

ಕಾರಣ ಮನಸ್ಸು ಸದಾ ಪ್ರೀತಿಯನ್ನು ಬಯಸುತ್ತದೆ. ಹೃದಯ ತಂಪಾಗಿರಲು ಈ ಪ್ರೀತಿ ಬೇಕು. ಈ ಹೃದಯ ತಂಪಾಗಿದ್ದರೆ ಮನಸ್ಸು ಖುಷಿಯಿಂದ ಇರುತ್ತದೆ. ಹಾಗಾದರೆ ಈ ಪ್ರೀತಿ ಹೇಗಿರಬೇಕು. ನಿಷ್ಕಲ್ಮಶವಾಗಿರಬೇಕು. ಜಡ ದೇಹವಾದರೂ ಸರಿ. ಸಾಯುವ ಕೊನೆ ಗಳಿಗೆಯಲ್ಲೂ ಮನಸ್ಸು ಹೃದಯ ಈ ಪ್ರೀತಿಯೊಂದಲ್ಲದೆ ಮತ್ತೇನನ್ನೂ ಬಯಸೋದಿಲ್ಲ. ನಿಜವಾದ ಪ್ರೀತಿಯಿಂದ ಅಗಾಧ ಶಕ್ತಿ ಉಂಟಾಗುತ್ತದೆ. ಅದೆ ಮನಸ್ಸಿಗೆ ನಾಟಿದಾಗ. ಐವತ್ತರ ವಯಸ್ಸಿನವನು ಮೂವತ್ತರ ತರುಣನಂತೆ ಮಾಡುವ ಕೆಲಸ ಕಾಯ೯ ಮಾತು, ನಡೆ ಎಲ್ಲವೂ ಬದಲಾಗುತ್ತದೆ.

ಉತ್ಸಾಹಕ್ಕೆ ಮನಸ್ಸಿನ ಖುಷಿಗೆ ಇನ್ನೂ ಒಂದು ಕಾರಣ ಮನಸ್ಸಿನ ಆಸೆಗಳು ಈಡೇರಿದ ಸಂದರ್ಭಗಳಲ್ಲಿ. ಆಗಲೂ ಮನುಷ್ಯನ ವಯಸ್ಸು ಕಡಿಮೆಯಾಗಬಿಡುತ್ತದೆ. ಲವಲವಿಕೆಯಿಂದ ಹೆಜ್ಜೆ ಇಡುವ ಗತ್ತೆ ಬದಲಾಗಿಬಿಡುತ್ತದೆ. ಒಂದು ರೀತಿ ಗೆದ್ದೆ ಅನ್ನುವ ಅಹಂಕಾರ ಸಣ್ಣದಾಗಿ ಮನೆ ಮಾಡುತ್ತದೆ. ಆದರೆ ಇದು ಕ್ಷಣಿಕ.

ಇದ್ಯಾವುದೂ ದಕ್ಕದೆ ಬದುಕಿಗೆ ಯಾವ ಭರವಸೆಯ ದಾರಿ ಕಾಣದೆ ಇರುವಾಗ ನಾನು ಒಂಟಿ ಅನ್ನುವ ಭಾವನೆ ಕಾಡಲು ಶುರುವಾಗುತ್ತದೆ. ಕಾಡುವ ಮನಸ್ಸಿನ ತುಡಿತ ಅದೆಷ್ಟು ತೀವ೯ವಾಗಿರುತ್ತದೆ ಅಂದರೆ ಸಾಯುವ ಮಟ್ಟಕ್ಕೆ ತಲುಪಿಸುತ್ತದೆ. ಆದರೆ ಯಾರ ಜೀವನವೂ ಹೀಗಾಗಬಾರದು. ಎಲ್ಲರೂ ಸಂತೋಷವಾಗಿರಬೇಕು ಅಂತ ಬಯಸೋದೂ ಇಂಥ ಜನರೆ. ಕಾರಣ ಅನುಭವ ಈ ರೀತಿ ಹಾರೈಸುತ್ತದೆ.

ಎಷ್ಟೋ ಅನಾಥಾಶ್ರಮ ನಡೆಸುವವರು, ಅಲ್ಲಿರುವವರು , ಸ್ವ ಇಶ್ಚೆಯಿಂದ ಆ ಒಂದು ದೇವ ಮಂದಿರದ ದೀಪ ಬೆಳಗುತ್ತಿರುತ್ತಾರೆ. ಅವರೆಲ್ಲರ ಜೀವನದಲ್ಲಿ ಒಂದಲ್ಲಾ ಒಂದು ರೀತಿ ನಿರಾಶೆ, ದುಃಖ ಮನೆ ಮಾಡಿರುತ್ತದೆ. ವಯಸ್ಸಾದಂತೆ ಅನುಭವಗಳು ಮನಸ್ಸನ್ನು ಒಂಟಿತನದತ್ತ ದೂಡುತ್ತದೆ. ಏಕೆಂದರೆ ಅನುಭವಕ್ಕೆ ಇವನು ನನ್ನ ತಮ್ಮ ಅಥವಾ ತಂಗಿ ಅನ್ನುವ ಬೇದ ಭಾವವಿಲ್ಲ. ಮನಸ್ಸಿನ ಮಾತು ಹೃದಯ ಕೇಳುತ್ತದೆ. ಮಿದುಳು ಗೃಹಿಸುತ್ತದೆ.

ಒಟ್ಟಿನಲ್ಲಿ ಎಲ್ಲದಕ್ಕೂ ಪ್ರೀತಿಯೇ ನಿಜವಾದ ಮೂಲ ಮಂತ್ರ. ಅದಿಲ್ಲದೆ ಮನುಷ್ಯ ಖುಷಿಯಿಂದ ಬಾಳಲಾರ. ಅನಾಥ ಪ್ರಜ್ಞೆ ನಿಧಾನವಾಗಿ ಮುಚ್ಚಿಕೊಳ್ಳುತ್ತ ಬರುತ್ತದೆ. ಒಂಟಿ ಎಂಬ ಕೊರಗು ಕಾಡಲು ಶುರುವಾಗುತ್ತದೆ. ಪ್ರೀತಿಯ ವ್ಯಕ್ತಿ ನನ್ನವನಾಗಿ/ಳಾಗಿ ಎಲ್ಲೊ ಒಂದು ಕಡೆ ಇದ್ದಾನೆ/ಳೆ. ನನ್ನನ್ನು ಜ್ಞಾಪಿಸಿಕೊಳ್ಳುತ್ತಿದ್ದಾನೆ/ಳೆ. ನಾನು ಒಂಟಿಯಲ್ಲ. ನನ್ನ ಕಷ್ಟ ಸುಃಖ ಹೇಳಿಕೊಳ್ಳಲು ನನಗೊಬ್ಬ/ಒಬ್ಬಳು ಇದ್ದಾನೆ/ಳೆ. ನನ್ನೆಲ್ಲಾ ಮನಸ್ಸಿನ ಭಾವನೆಗಳಿಗೆ ಸ್ಪಂಧಿಸುವ ವ್ಯಕ್ತಿ ಒಡನೆ ಇದ್ದಾನೆ/ಳೆ ಅನ್ನುವ ಭಾವವೇ ಮನಸ್ಸಿನ ನೆಮ್ಮದಿಗೆ ಕಾರಣ. ಏಕೆಂದರೆ ಮನುಷ್ಯ ಒಂಟಿಯಾಗಿ ಬದುಕಲು ಇಷ್ಟ ಪಡುವುದಿಲ್ಲ. ತನ್ನವರು ಅನ್ನುವವರು ಯಾರಾದರೂ ಬೇಕೆ ಬೇಕು. ಹೆತ್ತವರು, ಒಡಹುಟ್ಟಿದವರು. ಸಂಗಾತಿ, ಗೆಳೆಯ ಗೆಳತಿ ಇತ್ಯಾದಿ ಯಾರೆ ಆಗಿರಬಹುದು. ಒಬ್ಬರಿಗೊಬ್ಬರು ಇರಬೇಕು.

ಪ್ರಪಂಚದಲ್ಲಿ ಮದುವೆ ಎಂಬ ಬಂಧನ ಹುಟ್ಟಿಕೊಳ್ಳಲು ಇದೂ ಒಂದು ಬಲವಾದ ಕಾರಣ. ಸಂಗಾತಿಯ ಅಗಲಿಕೆಯ ಸಂದರ್ಭ ಹೆಚ್ಚಿನ ಜನ ಈ ಒಂಟಿತನದ ಅನಾಥ ಪ್ರಜ್ಞೆಯ ಭಾವನೆ ಅನುಭವಿಸುವುದು ಜಾಸ್ತಿ. ಕಾರಣ ಅನೇಕ ವಷ೯ಗಳಿಂದ ಜೊತೆಯಾಗಿ ಬದುಕಿದವರು. ಬದುಕಿನ ಎಲ್ಲ ಕ್ಷಣಗಳನ್ನೂ ಒಂದಾಗಿ ಅನುಭವಿಸಿದವರು. ಅಗಲಿಕೆ ಅನುಭವಿಸಲಾಗದ ನರಕವಾಗಿ ಕಾಣುತ್ತದೆ. ಅದಕ್ಕೆ ಎಷ್ಟೊ ಜನ ಡಿಪ್ರೆಷನ್ಗೆ ಅಡಿಯಾಗುತ್ತಾರೆ. ಇನ್ನು ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ. ಗಟ್ಟಿ ಮನಸಿನವರು ಕೊರಗುತ್ತ ಮುಖವಾಡ ಹೊತ್ತು ಬದುಕುತ್ತಾರೆ.

ಮನಸ್ಸಿನ ಗಟ್ಟಿತನಕ್ಕೆ ಹಲವಾರು ಹಾದಿಗಳಿವೆ. ಧ್ಯಾನ, ಯೋಗ, ಸಮಾರಂಭದಲ್ಲಿ ಭಾಗಿಯಾಗುವುದು, ದೇಶ ಸುತ್ತುವುದು ಹೀಗೆ ಹಲವಾರು. ಯಾವುದರಲ್ಲೆ ಭಾಗಿಯಾಗಿ ಎಲ್ಲವೂ ತಾತ್ಕಾಲಿಕ. ಕೊನೆಯಲ್ಲಿ ಒಂದರಗಳಿಗೆ ಒಂಟಿತನ ಕಾಡದೆ ಇರದು. ಮತ್ತೆ ಮನಸ್ಸು ನಾನು ಒಂಟಿ ಎಂದು ಕೊರಗುವುದು ತಪ್ಪುವುದಿಲ್ಲ.

ಆದುದರಿಂದ ಮನುಷ್ಯ ಸಂಘ ಜೀವಿ. ಒಂಟಿಯಾಗಿರಲಾರ. ತನ್ನವರೆನ್ನುವ ವ್ಯಕ್ತಿ ದೂರದಲ್ಲಿ ಇರಲಿ ಅಥವಾ ಹತ್ತಿರದಲ್ಲಿರಲಿ, ಯಾವತ್ತಾದರೂ ಒಮ್ಮೆ ಸಂಪರ್ಕಕ್ಕೆ ಸಿಕ್ಕರೂ ಸಾಕು, ಒಂದೆರಡು ಪ್ರೀತಿಯ ಸಾಂತ್ವನದ ಮಾತು ಆಡಿದರೆ ಸಾಕು ಅನ್ನುವ ಮನಸ್ಸು ಈ ಅನಾಥ ಪ್ರಜ್ಞೆಯಲ್ಲಿರುವವರ ಮನದಿಂಗಿತ. ಅದೆಷ್ಟು ನಿಶ್ಕಲ್ಮಷ ಮನಸ್ಸಲ್ಲವೆ? ಇಂಥವರಿಗೆ ಜಾತಿಯ ಹಂಗಿಲ್ಲ. ವಯಸ್ಸಿನ ಹಂಗಿಲ್ಲ. ಬಡವ ಶ್ರೀಮಂತ ಎಂಬ ಬೇದ ಭಾವವಿಲ್ಲ. ಓದಿರುವನಾ/ಳಾ? ಅದರ ಬಗ್ಗೆಯೂ ಗಮನ ಇಲ್ಲ. ಅವನು/ಳು ಯಾರೆಂಬ ಆತಂಕವೂ ಇಲ್ಲ. ನೋಡಬೇಕು , ಸುತ್ತಾಡಬೇಕು, ಏನಾದರೂ ಪಡೆಯಬೇಕು ಅಥವಾ ಇನ್ಯಾವುದೆ ಆಸೆ ಆಕಾಂಕ್ಷೆಯೂ ಇರುವುದಿಲ್ಲ. ಕೇವಲ ಬಯಸೋದು ಹೃದಯ ತಂಪಾಗಿಸುವ ಬದುಕಲು ಆಸರೆಯಾಗಬಲ್ಲ ಒಂದೆರಡು ಪ್ರೀತಿಯ ಮಾತುಗಳು. ಸಾಕು. ಇರುವಷ್ಟು ದಿನ ನೆಮ್ಮದಿಯ ಬಾಳು ಕಾಣುವುದು ನಿಶ್ಚಿತ!

7-6-2016. 12.05 pm

ಹುಟ್ಟು – ಸಾವು

image

ಹುಟ್ಟು. – ಬೃಹ್ಮನ ಸೃಷ್ಟಿ.
ತಾಯ ಗಭ೯ದಿಂದ ಜೀವ ತಳೆದು ಭೂಮಿಗೆ ಬಂದ ಸುದಿನ.

ಬಾಲ್ಯ – ಸ್ವತಂತ್ರ ಪ್ರವೃತ್ತಿ.
ಯಾವ ಯೋಚನೆ ಜವಾಬ್ದಾರಿ ಇಲ್ಲದೆ ನಕ್ಕು ನಲಿಯುವ ಕಾಲ.

ಯೌವ್ವನ – ಕನಸುಗಳ ಮೆರವಣಿಗೆ.
ದೇಹ ಮನಸ್ಸು ಬೆಳೆದು ವಯಸ್ಸು ಕಾಲಿಡುವ ಸಮಯ ಕನಸುಗಳದೆ ಮೆರವಣಿಗೆ.

ಪ್ರೇಮ. – ಹೃದಯದ ಹಸಿವು.
ಮನಸ್ಸು ಸಂಗಾತಿಯ ಹುಡುಕಾಟದ ಕಡೆ ವಾಲುವ ಕಾಲ.

ಪ್ರೀತಿ. – ಜೀವ ಜೀವಗಳ ಅರಿವು.
ಇಷ್ಟವಾದವರಲ್ಲಿ ಹೃದಯಾಂತರಾಳದಿಂದ ತಾನಾಗಿ ಹೊರಹೊಮ್ಮುವ ಇದೊಂದು ತುಡಿತ.

ಬಯಕೆ – ಮನಸ್ಸಿನ ಹಂಬಲ.
ಅದು ಬೇಕು ಇದು ಬೇಕು ಇನ್ನೂ ಬೇಕು ಎಲ್ಲ ನನಗೆ ಬೇಕು ಅನ್ನುವ ಆಸೆ.

ಮದುವೆ. – ಒಂದಾಗಿ ಬಾಳಲು ಕಂಡುಕೊಂಡ ದಾರಿ.
ಹಿರಿಯರು ನಿಮಿ೯ಸಿದ ಸಂಪ್ರದಾಯ ಗಂಡು ಹೆಣ್ಣು ಸಮಾಜದಲ್ಲಿ ಒಟ್ಟಾಗಿ ಬಾಳಲು ಅನುಮತಿ.

ಸಂಬಂಧ – ಇಬ್ಬರ ಮಧ್ಯೆ ತಿಳುವಳಿಕೆ.
ಒಬ್ಬರನ್ನೊಬ್ಬರು ಅಥ೯ ಮಾಡಿಕೊಂಡು ತಿಳಿದು ಬದುಕುವ ಕಲೆ.

ಸಾಥ೯ಕ – ಕನಸು ಈಡೇರುವ ಗಳಿಗೆ.
ಜೀವನವೆಂಬ ದೋಣಿಯಲ್ಲಿ ಕಂಡ ಕನಸೆಲ್ಲ ಈಡೇರಿದಾಗ ಮನಸ್ಸಿಗಾದ ಸಮಾಧಾನ.

ದಾಂಪತ್ಯ – ಮನಸ್ಸು ದೇಹಗಳ ಮಿಲನ.
ಮದುವೆಯೆಂಬ ಬಂದನದಲ್ಲಿ ಸಿಲುಕಿ ಒಟ್ಟಾಗಿ ಅನ್ಯೋನ್ಯತೆಯಿಂದ ಕಳೆಯುವ ಕಾಲ.

ಸಂಸಾರ – ಒಟ್ಟಾಗಿ ಬಾಳುವುದು.
ಮನೆ, ಮಕ್ಕಳು, ತಂದೆ, ತಾಯಿ, ಒಡಹುಟ್ಟಿದವರೊಂದಿಗೆ ಕಷ್ಟವೊ ಸುಃಖವೊ ಒಟ್ಟಾಗಿ ಕಳೆಯುವ ಕಾಲ.

ಜೀವನ – ಇದೇ ಆರಂಭ.
ಬದುಕಿನ ನೊಗ ಹೊತ್ತು ಎಲ್ಲ ಜವಾಬ್ದಾರಿ ಮುಗಿದಾಗ ಅಥ೯ವಾಗುವ ಕಾಲ.

ವೃದ್ದಾಪ್ಯ. – ನೆನಪಿಸಿ ಕಳೆವ ದಿನ.
ದೇಹ ಶಕ್ತಿ ಕಳೆದುಕೊಂಡು ಅದುವರೆಗೂ ನಡೆದುಕೊಂಡು ಬಂದಿರುವ ದಿನಗಳ ನೆನಪಿಸಿಕೊಳ್ಳುವ ಕಾಲ.

ಸಾವು. – ಕಾಲ ನಿಣ೯ಯ.
ಯಾರಿಗು ಸೂಚನೆ ಕೊಡದೆ ದಿಢೀರನೆ ಬಂದು ದೇಹದಿಂದ ಆತ್ಮ ಬೇಪ೯ಡಿಸುವ ಸಮಯ.

19-5-2016. 7.31pm

ಮನುಷ್ಯನ ಅಂತರಂಗ-ಬಹಿರಂಗ

image

ಪ್ರತಿಯೊಬ್ಬ ಮನುಷ್ಯನಲ್ಲೂ ಅವರವರ ಭಾವನೆಗೆ ತಕ್ಕಂತೆ ಅಂತರಾಳದಲ್ಲಿ ಮಾತು, ಯೋಚನೆ ಅಡಕವಾಗಿರುತ್ತದೆ. ಯಾರಾದರು ಮಾತನಾಡುವಾಗ “ನಿಜವಾಗಿಯೂ ನನ್ನಂತರಾಳದಿಂದ ಬಂದ ಮಾತಿದು” ಅನ್ನುವುದು ಕೇಳಿರಬಹುದು.

ಹಾಗಾದರೆ ಅಂತರಂಗದಲ್ಲೊಂದು ಮಾತು ಬಹಿರಂಗದಲ್ಲೊಂದು ಮಾತು ಆಡುವರೆ? ಯಾಕೆ ಹೀಗೆ ಮಾತನಾಡುತ್ತಾರೆ? ಯಾಕೆ ಹೀಗೆ ಮಾತನಾಡಬೇಕು? ಯಾವ ಸಂದರ್ಭದಲ್ಲಿ ಹೀಗೆ ಮಾತನಾಡಬೇಕು? ಈ ರೀತಿ ಮಾತನಾಡುವುದು ತಪ್ಪಲ್ಲವೆ? ಇಂಥವರೂ ಇದ್ದಾರಾ? ಹೇಗೆ ಕಂಡುಹಿಡಿಯುವುದು? ಇಂಥವರ ಸಹವಾಸದಿಂದ ಆಗುವ ಪ್ರಯೋಜನವೇನು? ಇಂಥವರಿಂದ ಆಗುವ ನಷ್ಟವೇನು? ಹೀಗೆ ಹಲವಾರು ಪ್ರಶ್ನೆಗಳು ಮನಸ್ಸನ್ನು ಕಲಕುತ್ತದೆ. ಆದರೆ ಇವರು ಮೋಸಗಾರರಲ್ಲ. ಅದೆ ” ಬೇಳೆ ಬೇಯಿಸಿಕೊಳ್ಳುವವರು, ಎಲ್ಲರ ಹತ್ತಿರ ಒಳ್ಳೆಯವರಾಗಿರುವವರು‌”.

ಆದರೆ ಒಂದಂತೂ ನಿಜ. ಕ್ರಮೇಣ ಇವರ ಸಹವಾಸದಲ್ಲಿ ಅವರ ನಿಜವಾದ ಬಣ್ಣ ಗೊತ್ತಾದಾಗ ಮನಸ್ಸಿಗೆ ವಿಪರೀತ ಬೇಸರವಾಗುತ್ತದೆ. ಇಂಥವರು ಸ್ನೇಹಿತರಾಗಿರಬೇಕಂತೇನಿಲ್ಲ. ಒಡಹುಟ್ಟಿದವರು, ಬಂಧು ಬಾಂಧವರು, ಪರಿಚಯದವರು ಯಾರೇ ಆಗಿರಬಹುದು. ನಿಮ್ಮ ಹತ್ತಿರ ಮಾತನಾಡುವಾಗ ಓ, ಹೌದಾ ಹಾಗಾ.; ಮತ್ತೆ ನಿಮ್ಮ ಎದುರಾಳಿಯವರ ಹತ್ತಿರವೂ ಹೀಗೇ ಮಾತನಾಡುವವರು. ಎಲ್ಲೂ ಮಾತಿಗೆ ಸಿಕ್ಕಿ ಹಾಕಿಕೊಳ್ಳದೆ ಜಾರಿಕೊಳ್ಳುವವರು ಮತ್ತು ಯಾರಿಂದ ಏನೇನು ಅನುಕೂಲ, ಸವಲತ್ತು ಸಿಗುವುದೊ ಅದನ್ನೆಲ್ಲ ತಮ್ಮ ಮಾತಿನ ಚಾಕಚಕ್ಯತೆಯಲ್ಲಿ ಪಡೆದು ಸುಃಖಪಡುವ ಜನ. ಒಂದು ರೀತಿ commercial mind ಗುಂಪಿನವರು. ಅಂತರಂಗದಲ್ಲಿ ಇವರ ವ್ಯಕ್ತಿತ್ವವೆ ಬೇರೆ ಬಹಿರಂಗದಲ್ಲಿ ಇವರ ವ್ಯಕ್ತಿತ್ವವೆ ಬೇರೆ.

ಹಾಗಾದರೆ ಇವರು ಯಾರ ಹತ್ತಿರ ಅಂತರಂಗದ ನಿಜವಾದ ಮಾತು ಆಡುತ್ತಾರೆ? ಇಲ್ಲ ಇವರು ಈ ರೀತಿ ಮಾತಿನ ಜಾಲದ ರುಚಿ ಕಂಡು ತೇಗಿದ ಜನ. ನಿಜ ಹೇಳುವುದು ಅವರ ಜಾಯಮಾನಕ್ಕೇ ಗೊತ್ತಿಲ್ಲ. ಸುಳ್ಳಿನ ಕಂತೆ ಹೊತ್ತ ಜನ. ಈಗಿನ ದಿನಮಾನದಲ್ಲಿ ಬೇಕಾದಷ್ಟು ಜನ ಇದ್ದಾರೆ. ಅವರ ಮಾತಿಗೆ ಮರುಳಾಗಿ ಹೊಗಳುವ ಜನನೂ ಇದ್ದಾರೆ. ಇಂಥಹವರು ಒಳ್ಳೆ ಮಾತುಗಾರರು. ಅಭಿನಯ ಚತುರರು. ಸಂದರ್ಭಕ್ಕೆ ತಕ್ಕಂತೆ ಮಾತನಾಡುವ ಕಲೆಯಲ್ಲಿ ಪಳಗಿದವರು. ಅಮಾಯಕರ ಕಣ್ಣಿಗೆ ಮಣ್ಣೆರಚಿ ತಮ್ಮ ಕೆಲಸ ಸಾಧಿಸಿಕೊಳ್ಳುವವರು. ಪಕ್ಕಾ ಸ್ವಾತಿ೯ಗಳು.

ಆದರೆ ಈ ರೀತಿ ಮಾತು ಕೆಲವು ಸಾರಿ ಆಡಬೇಕಾಗುತ್ತದೆ. ಕಾರಣ ಇಂಥಹ ಮಾತಿನಿಂದ ಬೇರೆಯವರಿಗೆ ಒಳ್ಳೆಯದಾಗುವುದಾದರೆ ಮಾತ್ರ. ಉದಾ: ನಿಮ್ಮ ಪಕ್ಕದವರ ಮನೆಯವರ ಹುಡುಗಿನೊ, ಹುಡುಗನದೊ ಮದುವೆ ನಿಶ್ಚಯ ಆಗೋದರಲ್ಲಿರುತ್ತದೆ. ಆಗ ಹೇಗೆ ಅಂತ ಅಕ್ಕ ಪಕ್ಕ ವಿಚಾರಿಸುವ ಪರಿಪಾಟ ಕೆಲವರಿಗಿರುತ್ತದೆ. ಇಂಥ ಸಂದರ್ಭದಲ್ಲಿ ಎನೊ ಸಣ್ಣ ಪುಟ್ಟ ವಿಷಯ ಗೊತ್ತಿದ್ದರೂ ಅವರಿಗೆ ಒಳ್ಳೆಯದಾಗುವದಾದರೆ ಗೊತ್ತಿಲ್ಲದವರಂತೆ ಕೇಳಿದವರ ಭಾವನೆಗೆ ತಕ್ಕಂತೆ ಉತ್ತರಿಸುವುದರಲ್ಲಿ ತಪ್ಪಿಲ್ಲ ಅಲ್ಲವೆ? ಸಂಸಾರದಲ್ಲಿ ತಪ್ಪು ಒಪ್ಪು ಎಲ್ಲರ ಮನೆಯಲ್ಲೂ ಇದ್ದಿದ್ದೆ. ಅದು ಹೆತ್ತವರದಾಗಿರಬಹುದು ಇಲ್ಲ ಮಕ್ಕಳದ್ದೆ ಇರಬಹುದು. ತಿಳಿದೂ ತಿಳಿದೂ ಯಾರೂ ತಪ್ಪು ಮಾಡುವುದಿಲ್ಲ.   ಕೆಲವೊಮ್ಮೆ ಸಮಯ ಸಂದರ್ಭ, ತಿಳುವಳಿಕೆಯ ಕೊರತೆ, ಸಹವಾಸ ದೋಷ, ಅಸಹಾಯಕತೆ ಹೀಗೆ ಹಲವಾರು ಇರಬಹುದು. ಬೇರೆಯವರಿಗೆ ನಷ್ಟ ಆಗುವುದಿದ್ದರೆ ಮಾತ್ರ ಗೊತ್ತಿರುವ ವಿಷ‌ಯ ಹೇಳುವುದರಲ್ಲಿ ತಪ್ಪಿಲ್ಲ.

ಆದರೆ ನಿಜವಾದ ಪ್ರಾಮಾಣಿಕ ಮನುಷ್ಯನಿಗೆ ಈ ರೀತಿ ವತಿ೯ಸಲು ಸಾಧ್ಯವಾಗುವುದಿಲ್ಲ. ಅವನಿಗೆ ಏನಿದ್ದರೂ ಇರುವುದು ಇದ್ದ ಹಾಗೆ ಹೇಳುವ ರೂಢಿ. ಏನದ್ದರೂ ನೇರವಾಗಿ ಮಾತನಾಡುವ ಜನ. ಒಂದು ಗಾದೆ ಇದೆ “ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೇ ಒದ್ದ ಹಾಗೆ.” ಇವರ ನೇರ ನುಡಿಗೆ ಸಿಟ್ಟಾಗುವ ಜನರೆ ಹೆಚ್ಚು. ಆದರೆ ಇವರಾಡುವ ಮಾತಿನಲ್ಲಿ ಯಾವ ಕಲ್ಮಶವೂ ಇರುವುದಿಲ್ಲ. ನೇರವಾಗಿ ಸತ್ಯವನ್ನೇ ನುಡಿಯುವ ಜನ. ಇವರಿಗೆ ಜನರ ಒಡನಾಟ ಕಡಿಮೆ. ಆದರೆ ಇವರೂ ಕೂಡ ಮೇಲ್ಕಂಡ ಇಂಥ ಸಂದರ್ಭದಲ್ಲಿ ಈ ರೀತಿ ಮಾತನಾಡುವ ಪರಿಜ್ಞಾನ ಬೆಳೆಸಿಕೊಳ್ಳಬೇಕು.

ಇನ್ನು ಬತ್ತಿ ಹಚ್ಚುವ ಜನ ಇರುತ್ತಾರೆ ಬಿಡಿ. ಅಂಥವರಿಗೆ ಅದೇ ಉಧ್ಯೋಗ. ತಾವು ಮಾತ್ರ ಚೆನ್ನಾಗಿ ಇರಬೇಕು. ಕಂಡವರ ಕಷ್ಟ ನೋಡಿ ಖುಷಿ ಪಡುವ ಜನ. “ದೀಪದ ಕೆಳಗೆ ಕತ್ತಲೆ” ಈ ಗಾದೆಗೆ ಸರಿಯಾದ ಉದಾಹರಣೆ. ಸರಿಯಾಗಿ ಮಾತನಾಡುವ ಎದುರಾಳಿ ಇಂಥವರಿಗೆ ಸಿಕ್ಕರೆ “ಏಯ್ ನಿನ್ನ ಕಾಲುಬುಡಕ್ಕೆ ಲದ್ದಿ ಬಿದ್ದಿದೆ, ಪಕ್ಕದವರಿಗೆ ಸಗಣಿ ತೋರಿಸ್ತೀಯನಲೇ” ಅಂತ ನಿವಾಳಿಸಿಬಿಡುತ್ತಾರೆ. ಆದುದರಿಂದ ಯಾರ ಮನೆಯ ವಿಷಯಕ್ಕೂ ತಲೆ ಹಾಕದೆ ಅವರಿಗೆ ನಮ್ಮಿಂದ ಒಳ್ಳೆಯದು ಬಯಸುವ ಪರಿಜ್ಞಾನ ಅಳವಡಿಸಿಕೊಂಡರೆ ಉತ್ತಮ.

ಜೀವನದಲ್ಲಿ ಎಷ್ಟು ಕಲಿತರೂ ಸಾಲದು. ಜೀವನ ಪೂತಿ೯ ಕಲಿಯುತ್ತಲೆ ಇರುವ ಪರಿಸ್ಥಿತಿ ಈ ಕಲಿಗಾಲ. ಎಲ್ಲಿ ನೋಡಿದರೂ ಮೋಸ, ವಂಚನೆ ಯಾರನ್ನು ನಂಬುವುದು ಯಾರನ್ನು ಬಿಡುವುದು. ಕೆಲವೊಮ್ಮೆ ಇಂಥ ಜನ ಇವರು ಅಂತ ಗೊತ್ತಿದ್ದು ಅವರಿಂದ ದೂರ ಇರುವುದಕ್ಕೂ ಆಗುವುದಿಲ್ಲ.. ಇವರು ಹೀಗೆ ಅಂತ ನಾಲ್ಕು ಜನರೆದುರು ಬೊಟ್ಟು ಮಾಡಿ ತೋರಿಸುವುದಕ್ಕೂ ಆಗುವುದಿಲ್ಲ. ಏಕೆಂದರೆ ಇವರು ಒಡಹುಟ್ಟಿದವರಾಗಿದ್ದರೆ ಅಥವಾ ಕಟ್ಟಿಕೊಂಡ ಗಂಡನಾಗಿದ್ದರೆ ಏನು ಮಾಡ್ತೀರಾ? ವಿಧಿಯಿಲ್ಲ ಮೌನವಾಗಿರಬೇಕು.

ಅದಕ್ಕೇ ಇರಬೇಕು ದೇವರು ಪ್ರತಿಯೊಬ್ಬರಿಗೂ ತಾಳ್ಮೆ,, ಸಹನೆ, ಕಣ್ಣಿದ್ದೂ ಕುರುಡಾಗಿರೊ ಬುದ್ದಿ,, ಒಳಗೊಳಗೆ ಸಂಕಟ ಅನುಭವಿಸುತ್ತ ಮೇಲ್ನೋಟಕ್ಕೆ ನಗುವಿನ ಮುಖವಾಡದ ಅಂಗಿ ತೊಡಿಸಿರೋದು. ಎಷ್ಟು ವಿಚಿತ್ರ ಜಗತ್ತಿನ ಜನರು. ಒಬ್ಬರ ರೂಪ ಇದ್ದ ಹಾಗೆ ಮತ್ತೊಬ್ಬರದಿಲ್ಲ;  ಒಬ್ಬರ ಗುಣ ಇದ್ದ ಹಾಗೆ ಇನ್ನೊಬ್ಬರದಿಲ್ಲ.
16-5-2016. 4.50pm