ಬರೀ ಲೆಕ್ಕಾಚಾರ (ಹಾಸ್ಯ ಬರಹ)

ಯಾವುದೋ ಕೆಲಸದ ನಿಮಿತ್ತ ಅತ್ತಿಂದಿತ್ತ ಇತ್ತಿಂದತ್ತ ನಾಲ್ಕಾರು ಕಿ.ಮೀ. ಗಾಡಿ ಓಡಿಸಿ ಕೊನೆಗೆ ಈ ಬಿಲ್ಡಿಂಗ್ ಪಕ್ಕದಲ್ಲೇ ಇರುವ ಕಛೇರಿಗೂ ಭೇಟಿ ಕೊಟ್ಟು ಇನ್ನೇನು ಮನೆ ಕಡೆ ಮುಖ ಮಾಡೋಣ ಅನ್ನುವಷ್ಟರಲ್ಲಿ ಪಕ್ಕನೆ ಕಣ್ಣಿಗೆ ಬಿತ್ತು

ಅರೆ! ಬಾಗಿಲು ತೆಗೆದಿದೆ! ಇನ್ನೂ ನಾಲ್ಕು ಗಂಟೆ. ನಾಲ್ಕೂವರೆಗಲ್ವಾ ಓಪನ್ ಆಗೋದು? ಎಲ್ಲೋ ಈಗಿತ್ತಲಾಗಿ ಬೇಗ ಬಾಗಿಲು ತೆಗಿಬಹುದು ಅಂತ ನನ್ನಲ್ಲೆ ಪ್ರಶ್ನೆ ಉತ್ತರ ಎಲ್ಲ ಹೇಳಿಕೊಂಡು ತಲೆ ಕವಚ ಕೈಯಲ್ಲಿ ನೇತಾಡಿಸಿಕೊಂಡು ನಾನೂ ಎಂಟ್ರಿ ಕೊಟ್ಟೆ ಸ್ವಲ್ಪ ಖುಷಿ ಲವಲವಿಕೆಯಿಂದ. ನಾನೇನು ಅಷ್ಟೆಲ್ಲಾ ಓದುವವಳಲ್ಲ. ಆದರೂ ಎಲ್ಲಾ ಪತ್ರಿಕೆ ಪೇಪರು ಕಣ್ಣಾಡಿಸುವ ಕುತೂಹಲ ಆಗಾಗ. ಹಂಗಾಗಿ ಇಲ್ಲಿಗೆ ಮನಸ್ಸು ಬಂದಾಗ ಬಿಡುವು ಮಾಡಿಕೊಂಡು “ಹೋಗಿ ಓದೆ “ಅಂತ ಮನಸ್ಸು ಹೇಳಿದಾಗೆಲ್ಲ ಬರ್ತಾ ಇದ್ದೇನೆ.

ಅದೊಂದು ಸರಕಾರಿ ವಾಚನಾಲಯ. ಆಲಯ ಅಂದರೆ ದೇವಸ್ಥಾನ. ಇದು ನಿಮಗೂ ಗೊತ್ತು. ಇಲ್ಲಿ ಕೂಡಾ ನಿಶ್ಯಬ್ಧವಾದ ವಾತಾವರಣ ಇತ್ತು. ಐದಾರು ಮೇಜಿನ ಮೇಲೆ ಏಳೆಂಟು ದಿನನಿತ್ಯದ ಕನ್ನಡ ಇಂಗ್ಲೀಷ್ ಪೇಪರುಗಳು ಹರಡಿತ್ತು. ಕನ್ನಡ ಇಂಗ್ಲೀಷ್ ಮಾಸ ಪತ್ರಿಕೆಗಳು ಕೂಡಾ ಒಪ್ಪವಾಗಿ ಮೂಲೆಯ ಸ್ಟ್ಯಾಂಡ್ ಅಲಂಕರಿಸಿತ್ತು. ಒಬ್ಬರು ಮುಖನೇ ಕಾಣದಂತೆ ಪೇಪರು ಮೇಲೆತ್ತಿ ಓದುತ್ತಿದ್ದರು. ನನ್ನ ಎಂಟ್ರಿ ಆಗ್ತಿದ್ದಂತೆ ಪಕ್ಕಕ್ಕೆ ಪೇಪರ್ ಸ್ವಲ್ಪವೇ ಸ್ವಲ್ಪ ಸರಿಸಿ ಕನ್ನಡಕದ ಗಾಜಿಂದ ಇಣುಕಿದರು. ನಾನಂತೂ ಅವರ ಮುಖ ನೋಡಲಾಗಲೇ ಇಲ್ಲ. ಶರೀರ ದರ್ಶನ ಆಯ್ತು. ಕುತೂಹಲವೇನು ಇರಲಿಲ್ಲ, ಯಾಕಂದ್ರೆ ಅವರು ವಯಸ್ಸಾದವರು ಬಿಡಿ!

ಬಾಗಿಲ ಬಲಗಡೆ ಮೇಜಿನ ಪಕ್ಕದ ಖುರ್ಚಿಯಲ್ಲಿ ಸ್ವಲ್ಪ ಜಾಸ್ತಿನೇ ವಯಸ್ಸಾದ ತಾತಪ್ಪ ಕನ್ನಡಕ ಇಲ್ದೇನೆ ಕಣ್ಣಿಗೆ ಅತ್ಯಂತ ಹತ್ತಿರದಲ್ಲಿ ಪೇಪರು ಹಿಡಿದು ಓದುತ್ತಿದ್ದರು. ” ಯಾಕೀಗೆ ಓದೋದು? ” “ತತ್ತರಕಿ ಆಗಲೇ ಶುರುವಾಯಿತಾ ನಿನ್ನ ಲೆಕ್ಕಾಚಾರ? ನಡಿಯೆ ಸಾಕು, ನೀನಾಕ್ಕೊ ಕನ್ನಡಿ” ಮನಸ್ಸು ಅಣಕಿಸಿತು. ನಾನು ಸುತ್ತ ಮುತ್ತ ಕಣ್ಣಾಯಿಸಿದೆ. ಇರೋದೇ ಇಬ್ಬರು ಜೊತೆಗೆ ನಾನು ಮೂರನೆಯವಳು.

ಎದುರುಗಡೆ ಮೇಜಿನ ಮೇಲಿರುವ ಪುಸ್ತಕದಲ್ಲಿ ನನ್ನ ಹೆಸರು ಕುಲ ಗೋತ್ರ ಅದೇರಿ ಹೆಸರಿನೊಂದಿಗೆ ಉಧ್ಯೋಗ, ವಯಸ್ಸು, ವಿಳಾಸ ಇತ್ಯಾದಿ ಬರೆದು ಸಹಿ ಮಾಡಿ ಯಾರೂ ಇಲ್ಲದ ಪೇಪರು ಮಾತ್ರ ಇರುವ ಟೇಬಲ್ ಮುಂದೆ ಖುರ್ಚಿಯಲ್ಲಿ ಆಸೀನನಾದೆ. ಮೂಲೆ ಸ್ಟ್ಯಾಂಡಲ್ಲಿ ಜೋಡಿಸಿಟ್ಟಿದ್ರಲ್ಲ ಒಂದಷ್ಟು ಮಾಸಿಕ ಕನ್ನಡ ಇಂಗ್ಲೀಷ್ ಮಾಗ್ಝಿನ್ ಅದರಲ್ಲಿ ನಾಲ್ಕಾರು ಕನ್ನಡ ಮ್ಯಾಗ್ಝಿನ್ ಮಾತ್ರ ಎತ್ತಿ ಕೊಂಡೆ. ಇಂಗ್ಲೀಷ್ ಬರದಿದ್ದರೂ ತೋರುಗಾಣಿಕೆಗೆ ಇಂಗ್ಲೀಷ್ ಪುಸ್ತಕ ಹಿಡ್ಕೊಂಡು ಸ್ಟೈಲಾಗಿ ಕೂತು ಓದುವವರೂ ಇದ್ದಾರೆ ಅಂತ ಎಂದೋ ಯಾರೋ ಹೇಳಿದ್ದು ನೆನಪಾಯಿತು.

ಅದೇನು ಇಂಗ್ಲೀಷ್ ವ್ಯಾಮೋಹವೋ ಏನೋ! ನಾನು ಅಚ್ಚ ಕನ್ನಡತಿ. ಓದೊ ವಯಸ್ಸಿನಲ್ಲಿ ಯಾವಾಗಲೂ ಇಂಗ್ಲೀಷು ಗಾಂಧಿ ಕ್ಲಾಸಾದರೆ ಇನ್ನೇನು? ಆರಕ್ಕೆ ಏಳೋಲ್ಲ ಮೂರಕ್ಕೆ ಇಳಿಯೋಲ್ಲ. ಲಟಾಸ್ ನನ್ನ ಇಂಗ್ಲೀಷ್ ಗತ್ಯಂತರವಿಲ್ಲದೇ ಮಾತಾಡುವಾಗ ಇರೊ ಬರೊ ವರ್ಡ ಎಲ್ಲಾ ಉಪಯೋಗಿಸಿ ಮಾತಾಡಿದ್ದು ಅರ್ಥ ಮಾಡ್ಕೋಳೋದು ಕೇಳುಗರಿಗೇ ಬಿಟ್ಟಿದ್ದು. ನಾನಂತೂ ತಲೆ ಕೆಡಿಸಿಕೊಳ್ಳದೇ ಒದರಿ ಬಿಡೋದೆ. ಅರ್ಥ ಆಗಿಲ್ಲ What ? What? ಅಂತ ಅಭಿನಯಿಸಿ ಕೈ ಅಲ್ಲಾಡಿಸಿದರೆ “ಕಲಿಬೇಕಿತ್ತು ಕನ್ನಡ, ಅದಕೆ ಬರೋಲ್ಲ ಅಂದರೆ ನಾನೇನು ಮಾಡ್ಲಿ? ಗೊತ್ತಿರೋದೆ ನನಗೆ ಇದೊಂದೇ ಭಾಷೆ. ಈಗ ನಾನು ಕಲಿತಿಲ್ವಾ ಅಲ್ಪ ಸ್ವಲ್ಪ ಇಂಗ್ಲೀಷೂ… ಹಂಗೆ ನೀವು ಕಲಿರಿ ಕನ್ನಡ!” ಅಂತ ಜಡಾಯಿಸಿದ್ದೂ ಇದೆ. ಆಗೆಲ್ಲ ಕೆಟ್ಟ ಕೋಪ ನನಗೆ.

ಇದೇ ತರ ಹಿಂದಿನೂ ಕಾ,ಕೋ,ಹೈ, ತೋ …ಹೀಂಗೆಲ್ಲ ಅಕ್ಷರ ಜೋಡಿಸಿ ಕನ್ನಡ ಬರದ ಹಿಂದಿಯವರ ಹತ್ತಿರವೂ ಮಾತಾಡಿ ಸೈ ಅನಿಸ್ಕೊಂಡು ಬಿಡ್ತೀನಿ. ಹಾಂಗನ್ನದೆ ಗತಿ ಇಲ್ಲ ಅವರಿಗೆ ಪಾಪ!

ಇಂತವರ ಜೊತೆ ಆಗೀಗ ಮಾತಾಡಿ ಇಂಗ್ಲೀಷು ಹಿಂದಿ ಸ್ವಲ್ಪ ಸರಿಯಾಗಿ ಮಾತಾಡ್ತೀನಿ ಅಂತ ಮಗಳ ಶಹಭಾಸ್ ಗಿರಿ ಅಪರೂಪಕ್ಕೊಮ್ಮೆ ಅವಳ ಗಲ ಗಲ ಗೆಳತಿಯರು ಮನೆಗೆ ಬಂದಾಗ ಕನ್ನಡ ಬಾರದ ಉತ್ತರ ದೇಶದವರತ್ತಿರ ಮಾತಾಡೊ ಚಪಲ. ಅವರ ಕುಲ ಗೊತ್ರ ಜಾಲಾಡೊ ಹುಚ್ಚು, ಕುತೂಹಲ ಬರದ ಭಾಷೆ ಅಯ್ಯೋ!ನನ್ನ ಅವಸ್ಥೆ ಏನು ಕೇಳ್ತೀರಾ? ಅವರೆಲ್ಲ ನನ್ನೆದುರೇ ನಕ್ಕರೂ ನಾನಂತೂ ಒಂದಿನಿತೂ ಬೇಜಾರು ಮಾಡಿಕೊಳ್ಳದೇ ಹೊಟ್ಟೆ ತುಂಬ ಉಣಬಡಿಸಿ ಕಳಿಸ್ತೀನಲ್ಲಾ ಬಗೆ ಬಗೆ ಬೃಷ್ಟಾನ್ನ ಭೋಜನವಾ? ಹಿಂದಿಂದ ಹೇಳ್ತಾರಂತೆ ” your Mom is sooo cute!” “ಬೆಂಕಿ ಬಿತ್ತು ನನ್ನ ಭಾಷೆಗೆ ಆ ಹುಡುಗಿಯರ ಹತ್ತಿರ ಏನೆಲ್ಲಾ ಕೇಳಬೇಕಿತ್ತು. ಛೆ! ಏನೆ ನೀನು ಕನ್ನಡ ಬಾರದವರ ಹತ್ತಿರ friendship” ಅಂತ ಹೇಳಿದರೆ “ಅಮ್ಮಾ ಇನ್ಮೇಲೆ ನಿನ್ನ ಹತ್ತಿರ ಇಂಗ್ಲೀಷನಲ್ಲೇ ಮಾತಾಡೋದು. ಮಾತಾಡ್ತಾ ಮಾತಾಡ್ತಾ ಕಲಿಬಹುದು. ಕಷ್ಟ ಇಲ್ವೆ…” ಈ ಉಮೇದಿ ಎರಡು ದಿನ. ಮತ್ತದೇ ನಾಯಿ ಬಾಲ ಡೊಂಕೆ.

ಇಲ್ಕೇಳಿ ನಾನು ಹಾಂಗೆಲ್ಲ ಮಾಡಲ್ಲಪ್ಪಾ ಇಂಗ್ಲೀಷ್ ಬರೋ ತರ ನಟನೆನೂ ಮಾಡಲ್ಲಪ್ಪಾ. ಅಂದ್ಕೊಂಡು ಉತ್ಕೃಷ್ಟ ಸಂಭಾವಿತರ ಸಾಲಿಗೆ ಸೇರಿ ನಾಲ್ಕಾರು ಕನ್ನಡದ್ದೇ ಮಾಗ್ಝಿನ್ ಆರಿಸಿಕೊಂಡರೆ ಮನಸ್ಸು “ಸರಿ ಹೋಗಿ ಕೂಡು ಸಾಕು” ಅಂತು. ಕೂಡುವ ಮೊದಲೇ ನನ್ನ ಟೇಬಲ್ “ಆಹಾ! ನನ್ನ ಟೇಬಲ್ ಅಂತೆ. ಆಗಲೆ ನಿನ್ನದು ಅಂದ್ಬಿಟ್ಯಾ? ಮಂಕೆ ಇದು ಲೈಬ್ರರಿ ಟೇಬಲ್ಲು” ಗೊತ್ತು ಮಾತಿಗಂದೆ ಹಾಗೆ. ನೋಡಿ ನನ್ನದು ಅನ್ನುವುದು ಮನುಷ್ಯನ ಮೆದುಳು ಎಷ್ಟು ಬೇಗ ಪ್ರತಿಷ್ಠಾಪಿಸಿಬಿಡುತ್ತದೆ! ವಿಚಿತ್ರ ಅಲ್ವಾ?

ಸರಿ ಎಲ್ಲಾ ಮಾಗ್ಝಿನ್ ಟೇಬಲ್ ಮೇಲೆ ಅಲಂಕರಿಸಿಟ್ಟುಕೊಂಡೆ ; ಏನೋ ಗನಂಧಾರಿ ಓದುವವರಂತೆ. ನಗು ಬಂತು. ನನ್ನದೂ ಒಂಥರಾ ಶೋಕಿ ರೀಡಿಂಗಾ ಅಂತ. ಛೆ ಛೆ! ಹಾಗೆನಿಲ್ಲ ಬಿಡಿ. ನಾನು ಓದಿದಷ್ಟು ಗಮನವಿಟ್ಟು ಓದುವ ಅಪ್ಪಟ ಓದುಗಾರ್ತಿ. ಓದೋದೆ ಹಬ್ಬಕ್ಕೊಮ್ಮೆ ಹಾಡಿಗೊಮ್ಮೆ. ಅದು ಬೇರೆ ವಿಷಯ!

ಮೂಲೆ ಸ್ಟ್ಯಾಂಡ್ ಹತ್ತಿರ ನಿಂತು ಮ್ಯಾಗ್ಝಿನ್ ಆರಿಸಿಕೊಳ್ಳುವಾಗ ” ಅಲ್ಲಾ ಒಂದೇ ಸಾರಿ ಇಷ್ಟೊಂದು ಮಾಗ್ಝಿನ್ ಎತ್ತಿಕೊಂಡರೆ ಬೇರೆಯವರಿಗೂ ಬೇಕಾದರೆ? ಹೀಗೆ ಮಾಡುವುದು ತಪ್ಪಲ್ವಾ?” ಎಂದಿತು ಮನಸ್ಸು. ಹಿಂದೊಮ್ಮೆ ಮದುವೆಯ ಮಂಗಲಧಾಮದಲ್ಲಿ ಮಗಳಿಗೆ ಗಂಡು ನೋಡೊ ಅಬ್ಬರದಲ್ಲಿ ಎರಡು ಮೂರು ಫೈಲು ಪೇರಿಸಿಕೊಂಡಾಗ ಅಲ್ಲಿರೊ ಕ್ಲರ್ಕಮ್ಮ “ಅಯ್ಯೋ, ಹೀಗೆ ಫೈಲು ಎತ್ತಿಕೊಂಡು ಹೋದರೆ ಹೇಗೆ? ಬೇರೆಯವರೂ ನೋಡಬೇಕಲ್ವಾ? ಒಂದು ಫೈಲು ತಗೊಂಡು ನೋಡಿ ಅದೇ ಜಾಗದಲ್ಲಿ ತಂದಿಟ್ಟು ಮತ್ತೆ ಇನ್ನೊಂದು ಫೈಲು ತಗೊಂಡು ನೋಡಬೇಕು ಆಯ್ತಾ” ಅಂತ ಬೆಣ್ಣೆ ಮಾತಂದು ಅದೆಷ್ಟು ಸರ್ತಿ ಕೂತು ಎದ್ದು ಮಾಡುವಂತೆ ಮಾಡಿದ್ಲು. ಸಾಕಪ್ಪಾ, ಸೊಂಟ ಎಲ್ಲಾ ನೋವು ಬಂದು ಸರಿ ಮಾಡಿಕೊಂಡು ಮನೆ ಸೇರುವಾಗ ಅದೆಷ್ಟು ಅವಸ್ಥೆ ಪಟ್ಟಿದ್ದೆ ಗೊತ್ತಾ? ಮತ್ತೆ ಆ ಕಡೆ ತಲೆ ಹಾಕಲೂ ಇಲ್ಲ. ಇಂತಹ ಅನುಭವ ಹೇಗೆ ಮರೆಯುತ್ತೆ. ಅಷ್ಟು ಪಕ್ಕನೆ ಮರೆಯುವ ವಿಷಯವೇ ಇದು? ಇಲ್ಲೂ ನೆನಪಾಯಿತು. ಆದರೆ ಇದು ಸೋಂಬೇರಿ ಚಾಳಿ ಅಂತೂ ಅಲ್ಲ. ಮತ್ತೆ? ಪದೇ ಪದೇ ಎದ್ದು ಕೂತು ಮಾಡಲು ಕೈಲಾಗಲ್ಲ ಏನ್ಮಾಡ್ಲಿ? ಅದಕೆ ಹೀಂಗ್ ಮಾಡದ್ನಪ. ತಪ್ಪಾ? ಅಲ್ಲ ಅಲ್ವಾ?

ಈಗ ವಿಷಯಕ್ಕೆ ಬರ್ತೀನಿ ; ಒಂದೊಂದೇ ಮ್ಯಾಗ್ಝಿನ್ ಹಾಳೆ ತಿರುವಾಗ್ತಾ ಇದ್ದೆ ಮನಸ್ಸು ಮಾತ್ರ ಆ ತಾತಪ್ಪನ ಕಡೆಯೇ ಇತ್ತು. ಆಗಾಗ ನೋಡ್ತಾ ಇವರು ಯಾಕೆ ಇಷ್ಟು ಕಷ್ಟ ಪಟ್ಟು ಓದುತ್ತಿದ್ದಾರೆ? ಒಂದು ಕನ್ನಡಕ ತೆಗೆದುಕೊಳ್ಳೋಕಾಗಲ್ವೆ? ಕಣ್ಣು ಹೋಗಿ ಟೆಸ್ಟ್ ಮಾಡಿಸ್ಕೋಬೇಕಪ್ಪಾ? ಛೆ! ಏನು ಕಷ್ಟನೊ ಏನೋ? ಪಾಪ! ಒಮ್ಮೆ ವಿಚಾರಿಸಲಾ? ಏನು ಅಂತ ಕೇಳಿಬಿಡಲೆ? ಬನ್ನಿ ತಾತಪ್ಪಾ ನಾನೇ ಕರೆದುಕೊಂಡು ಹೋಗುತ್ತೇನೆ. ಟೆಸ್ಟ್ ಮಾಡಿಸೋಣಾ ಅಂತ ಹೇಳಿದರೆ? ಇಂತಾ ಉಸಾಪರಿ ಚಿಕ್ಕ ಪುಟ್ಟದ್ದು ಅಲ್ಪ ಸ್ವಲ್ಪ ಮಾಡಿದೀನಿ.

ಒಮ್ಮೆ ಏನಾಯ್ತು ಗೊತ್ತಾ? ಅದೆ ಬಸವನ ಗುಡಿ ರಾಮಕೃಷ್ಣ ಆಶ್ರಮ ಹತ್ತಿರ ಒಬ್ಬರು ಕಣ್ಣಿಲ್ಲದವರು ಕೋಲು ಹಿಡಕೊಂಡು ಕಪ್ಪು ಕನ್ನಡಕ ಧರಿಸಿ ರಸ್ತೆ ದಾಟಲು ನಿಂತಿದ್ದರು. ಅಂತಾ ವಯಸ್ಸಾದವರೇನು ಅಲ್ಲ. ನಾನೂ ಅಲ್ಲೆ ಆ ಕಡೆ ಕ್ರಾಸ್ ಮಾಡಬೇಕಿತ್ತು. ಪಾಪ!ಇವರು ಕ್ರಾಸ್ ಮಾಡೋಕೋಗಿ ಆಮೇಲೆ ಗಾಡಿ ಅಡಿಗಾದರೆ ಅಂತ ” ಬನ್ನಿ ನಾನೂ ಆ ಕಡೆ ಹೋಗಬೇಕು, ನಾನೇ ಕ್ರಾಸ್ ಮಾಡಸ್ತೀನಿ ಭಯ ಪಡಬೇಡಿ ” ಅಂತ ಅವರ ಕೈ ಹಿಡಿದುಕೊಂಡು ಕರೆದುಕೊಂಡು ಹೋದೆ. ಸರಿ ನೀವಿನ್ನು ಹೋಗಬಹುದು ಈ ಕಡೆ ಬಂದಾಯ್ತು ಅಂತ ಕೈ ಬಿಡಲು ಹೋದರೆ ಆ ಯಪ್ಪ ನನ್ನ ಕೈ ಗಟ್ಟಿಯಾಗಿ ಅದುಮುತ್ತಿದ್ದಾನೆ. ಎಲ್ಲಿತ್ತೊ ಕೋಪಾ ಬಂತು ನೋಡಿ ಆದರೂ ತಡಕೊಂಡು ಏನೂ ಮಾತನಾಡದೆ ಕೊಸರಿಕೊಂಡು ಕೈ ಬಿಡಿಸಿಕೊಂಡು ಬಂದಿದ್ದೆ. ಬ್ಯಾಡ್ ಎಕ್ಸಪೀರಿಯನ್ಸ!

ಅದಕೆ ಸಿಕ್ತ ಸೆನ್ಸು ಯಾವಾಗಲೂ ಎಚ್ಚರಿಸುತ್ತೆ ; “ಇದೊಂತರಾ ಉಸಾಪರಿ ಕೆಲಸ ನಿನಗ್ಯಾಕೆ ಸುಮ್ನಿರು ಅಂತ ” ಆದರೂ ಬಯ್ಕೋತಿನಿ ಥೊ^^^^ ಈ ಒಳ ಮನಸ್ಸಿನ ಕಾಟಾ ಯಾವಾಗಲೂ ಹೀಗೆ, ಬ್ಯಾಡಾ ಬ್ಯಾಡಾ ಅಂತ ಅಡ್ಡಗಾಲು ಹಾಕೋದೆ ಆಯ್ತು.

ಇಷ್ಟೆಲ್ಲಾ ಯೋಚನೆ ಬ್ಯಾಡಾಗಿದ್ದು ಮನಸ್ಸು ಮಾಡ್ತಾ ಇದ್ರೂ ಕಣ್ಣು ಮಾತ್ರ ತಾತಪ್ಪನ್ನೂ ನೋಡೋದು ಅಕ್ಷರದ ಮೇಲೂ ಕಣ್ಣಾಯ್ಸ್ಕೋತಾ ಜೊತೆ ಜೊತೆಗೆ ಎಲ್ಲಾ ಮಾಗ್ಝಿನ್ ತಿರುವಾಕಿದ್ದು ಮುಗಿಸಿತ್ತು. ನಾಲ್ಕಾರು ಬರಹನೂ ಓದಿ ಬೇಕಾದ email ವಿಳಾಸ ಕೂಡಾ ಕ್ಲಿಕ್ಕಿಸಿಕೊಂಡ್ತು. ತಾತಪ್ಪ ಹಾಗೆ ಓದ್ತಾ ಇದ್ರಾ. ಈ ಯಪ್ಪ ಉಸ್ ಅಂದ್ಕೊಂಡು ಓದಿ ಬಹಳ ಸುಸ್ತಾದವರಂತೆ ಎದ್ದು ಸೊಂಟ ಸರಿ ಮಾಡಿಕೊಳ್ತಾ ತಮ್ಮಷ್ಟಕ್ಕೇ ಜಾಗಾ ಖಾಲಿ ಮಾಡಿದರು. ಹೋಗೊ ಸ್ಟೈಲು ಚೆನ್ನಾಗಿತ್ತು.

ಎಷ್ಟು ನಿಶ್ಯಬ್ಧ ವಾತಾವರಣ ಅಂದ್ರೆ ಮನಸ್ಸು ಪೇಪರಿನ ಒಳ ಹೊಕ್ಕು ವೇಗವಾಗಿ ಓದುತ್ತಿತ್ತು.

“ಇದೇ ಏನ್ರೀ ಲೈಬ್ರರಿ? ”

ಅವರ ಧ್ವನಿ ಇನ್ನೂ ನಿಂತಿಲ್ಲ ತಾತಪ್ಪ “ಹೌದ್ರೀ ಇದೇ ಲೈಬ್ರರಿ ಬನ್ನಿ” ಅಂದ್ರು.

” ನೋಡ್ರೀ ನಾ ಲೈಬ್ರರಿ ಬಾಗಲಲ್ಲಿ ನಿಂತಿದೀನಿ. ಇಲ್ಲಿಂದ ನಿಮ್ಮನೆಗೆ ಹೇಗೆ ಬರಬೇಕು ರೂಟ್ ಹೇಳಿ, ಓ.. ಪಕ್ಕದ ಗೇಟಲ್ಲಾ? ಸರಿ ಸರಿ ಕಾಣ್ತಿದೆ. ಬರ್ತೀನಿ ಬರ್ತೀನಿ”

ಮೊಬೈಲ್ ಮಾತಾಯಣ ಒಂದು ಕ್ಷಣ ಸಿಡಿಲಿನ ಅಬ್ಬರದಂತೆ ಜೋರಾಗಿ ಮೊಳಗಿ ಕಟ್ ಆಯ್ತು. ಯಾವುದೋ ಮನೆಗೋಗೊ ಅಡ್ರೆಸ್ ತಿಳಿಯೊ ಅವಸರ ಅವರದ್ದೇನೂ ತಪ್ಪಿಲ್ಲ ಬಿಡಿ, ಬಹಳ ಟೆನ್ಷನ್ ನಲ್ಲಿ ಮಾತು ಜೋರಾಗಿತ್ತು. ಆದರೂ ಲೈಬ್ರರಿ ಬಾಗಲಲ್ಲಿ^^^^

ಅವರ ಜಾಗದಲ್ಲಿ ನಾನಿದ್ರೂ ಅಲ್ಲಲ್ಲಾ ನಾವಿದ್ರೂ ಹೀಗೆ ಮಾಡ್ತಿದ್ವೇನೊ? ಇದು ಕಲ್ಪನೆ ಅಷ್ಟೆ. ನಿಜವಾಗಲೂ ಹೇಳ್ದೆ ಅಂತ ಕೋಪ ಮಾಡಿಕೊಬೇಡಿ ನನ್ಮೇಲೆ ಆಯ್ತಾ? ಮನುಷ್ಯನ ಸ್ವಭಾವ ವಿಶ್ಲೇಷಣೆ ಮಾಡಿದೆ ಅಷ್ಟೆ.

ಮತ್ತದೇ ಶಾಂತ ವಾತಾವರಣ. ಯೋಚನೆ ಶುರುವಾಯಿತು. ಅಲ್ಲಾ ಲೈಬ್ರರಿ ಪಕ್ಕದಲ್ಲಿ ಹಿಂದಿನ ರಸ್ತೆಗೆ ಯಾಕೆ ಗೇಟು ಇಟ್ಟಿರೋದು? ಅಗತ್ಯ ಇದ್ದರೂ ಗೇಟು ಇಡುವಂತಿರಲಿಲ್ಲ ಅಲ್ಲಿ. ಇದು ಸರಕಾರಿ ಜಾಗ. ಅಲ್ಲದೇ ಭದ್ರತೆಯ ದೃಷ್ಟಿಯಿಂದ ತಪ್ಪು ಅನಿಸುತ್ತಿದೆ. ಆದರೆ ಇಟ್ಟುಕೊಂಡಿದ್ದಾರೆ ಶಾರ್ಟ ಕಟ್ ಹಾದಿ. ಅವರವರ ಅನುಕೂಲಕ್ಕೆ ಸರಕಾರಿ ಕಛೇರಿ ಉಸ್ತುವಾರಿ ಓಡಾಡೋಕೆ, ಸಾರ್ವಜನಿಕರೂ ಕೆಲವರು ಬಳಸಿ ಹೋಗುವ ಹಾದಿ ಬಿಟ್ಟು ಇಲ್ಲೆ ಸಂಧಿಯಲ್ಲಿ ನುಗ್ಗೋ ಚಾಳಿ ರೂಢಿಸಿಕೊಂಡುಬಿಟ್ಟಿದ್ದಾರೆ. ಹೊರಗಿಂದ ಬರುವವರ ನೋಡಿದರೆ ಅಲ್ಲಿರೊ ಯಾವುದಾದರೂ ಆಫೀಸಿಗೊ ಲೈಬ್ರರಿಗೊ ಬಂದಿರಬೇಕು ಅಂತ ಸುಮ್ಮನಿರಬೇಕು. ಆದರೆ ಬಂದು ಹೋಗುವವರ ಉದ್ದೇಶ ಬಂದವರಿಗಷ್ಟೇ ಗೊತ್ತು ಹೋಗುವವರಿಗಷ್ಟೇ ಗೊತ್ತು. ಮಿಡ್ಲಲ್ಲಿ ಇರುವವರು ಅವರಾಡುವ ಮಾತು ಕೇಳಿಸಿಕೊಂಡು ಪಿಕಿ ಪಿಕಿ ನೋಡಬೇಕು. ನೋಡಿ ಹೇಗಿದೆ ಸಮಾಚಾರ. ಇರಲಿ ಪಾಪ! ಮನಸಿನ ಸಮೀಕ್ಷೆ ಗೂಢಚರ್ಯೆ ಕೊನೆಗೆ ಅನುಕಂಪ.

ಸರಿ ಪೇಪರ್ ಒಂದೆರಡು ತಿರುವಾಕುವಷ್ಟರಲ್ಲಿ ತಾತಪ್ಪನ ಸವಾರಿನೂ ಎತ್ತು. ನಿಧಾನವಾಗಿ ಹೋಗುವ ಅವರನ್ನೇ ದಿಟ್ಟಿಸಿದೆ. ಯಾಕೋ ಮಾತಾಡಿಸಬೇಕು ಅಂದರೂ ತಡಕೊಂಡೆ. ಮಗಳು ಯಾವಾಗಲೂ ಹೇಳ್ತಾಳೆ “ಅಮ್ಮ ನೀ ಯಾರ್ ಕಂಡರೂ ಮಾತಾಡಿ ಗುರ್ತಾ ಮಾಡ್ಕೊತಿಯಾ. ಅದೆಷ್ಟು ಮಾತಾಡ್ತೀಯೆ. ಸುಮ್ನಿರೆ. ಹಂಗೆಲ್ಲ ಗೊತ್ತಿಲ್ಲದವರನ್ನೆಲ್ಲ ಪರಿಚಯ ಮಾಡ್ಕೊಂಡು ಮಾತಾಡಬೇಡಾ. ಯಾರು ಹ್ಯಾಂಗೊ ಏನೋ.” ನೆನಪಾಯಿತು. ಅವಳೂ ಹೇಳೋದೂ ಸರಿನೆ ಇದೆ. ಚಿಕ್ಕವರ ಬಾಯಲ್ಲಿ ದೊಡ್ಡ ಮಾತು ಬಂದಾಗ ತಲೆಬಾಗೋದು ನನ್ನ ರೂಢಿ. ತೆಪ್ಪಗೆ ಕೂತೆ. ಆದರೆ ಅವಳ ಮಾತು ಎಲ್ಲಾ ಕಡೆ ಪರಿಪಾಲಿಸಲು ಸಾಧ್ಯ ಇಲ್ಲ. ಕೆಲವು ಕಡೆ ಮೇಲು ಬಿದ್ದು ಮಾತಾಡಿಸಿ ಗುರುತು ಪರಿಚಯ ಮಾಡಿಕೊಂಡಿದ್ದರೇನೆ ನಮ್ಮ ಕೆಲಸ ಸಲೀಸಾಗಿ ಆಗೋದು. ಅದೇ ಇನ್ನೆಲ್ಲೂ ಅಲ್ಲ ಕಛೇರಿ ಬ್ಯಾಂಕುಗಳಲ್ಲಿ ನಾನೇ ಕಂಡುಕೊಂಡ ಶಾರ್ಟ ಕಟ್ ದಾರಿ.

ವಾತಾವರಣ ಇನ್ನಷ್ಟು ಶಾಂತವಾದಂತೆನಿಸಿತು. ಓದೊ ಕಡೆ ಗಮನ ಮಾಯವಾಯಿತು. ಯಾರೂ ಇಲ್ಲ. ಅವಳೊಬ್ಬಳು ಕ್ಲರ್ಕ ಇರ್ತಾ ಇದ್ಲು. ಏನೊ ಸೀರೆ ಫಾಲ್ ಹಚ್ಚೋದೊ ಸಣ್ಣದಾಗಿ ಮಡಚಿಟ್ಟುಕೊಂಡು ಅಥವಾ ಇನ್ನೇನೊ ತನ್ನ ಸ್ವಂತ ಕೆಲಸದಲ್ಲಿ ಮಗ್ನಳಾಗಿ ಕೂತಿರೋದು ಇಲ್ಲಿಗೆ ಬಂದಾಗೆಲ್ಲ ಗಮನಿಸಿದ್ದೆ. ಆಗೆಲ್ಲ ನನಗನಿಸೋದು ಇಂದಹ ಜಾಗದಲ್ಲಿ ನನಗೂ ಪಾರ್ಟ ಟೈಮ್ ಈ ಕೆಲಸ ಸಿಕ್ಕಿದ್ದರೆ ಇಲ್ಲಿರೊ ಪೇಪರು ಮಾಗ್ಝಿನ್ ದಿನಾ ಓದಬಹುದಿತ್ತಲ್ಲ.

“ಶುದ್ಧ ಸೋಂಬೇರಿ ನೀನು ದಿನಾ ಬಂದು ಕೂತು ಓದು ಯಾರು ಬೇಡಾ ಹೇಳ್ತಾರೆ” ಮತ್ತದೇ ಮನಸ್ಸು ಕುಟುಕಿದ್ದೂ ಇದೆ. ನಮಗೆ ನಾವೇ ಬೇಲಿ ಹಾಕೊ ಬೇಕು ಅಂದರೆ ಒಂದಾ ದೃಢ ಮನಸ್ಸಿರಬೇಕು,ಇಲ್ಲಾ ಬಂಧನ ಇರಬೇಕು. ಎರಡೂ ಇಲ್ಲಾ ಅಂದರೆ ಹೀಗೆ ಅಂದುಕೊಳ್ಳೋದು, ಅನಿಸಿಕೊಳ್ಳೋದು ನಮಗ ನಾವೆ. ದೇವರೆ ದೇವರೆ.

ವಾಸ್ತವಕ್ಕೆ ಬನ್ನಾ. ಕೆಟ್ಟ ಕೆಟ್ಟ ಯೋಚನೆ, ಆತಂಕ ಸುಳಿದಾಡೋದು ಇಂಥಾ ಒಬ್ಬಂಟಿ ಸಮಯದಲ್ಲೇ. ಸ್ವಲ್ಪ ಭಯ ಶುರುವಾಯಿತು. ಸಾಕಪ್ಪ ನಾನೊಬ್ಬಳೇ ಇಲ್ಲಿರೋದು,ಯಾರಾದರೂ ಬರೋದು, ಇಲ್ಲಿ ಎಷ್ಟೊಂದು ಪತ್ರಿಕೆ ಬೇರೆ ಇದೆ. ಯಾಕೊ ನಾನೊಬ್ಬಳೇ ಇರೋದು ಸರಿ ಅಲ್ಲ ಅಂತ ಅನಿಸಿಕೆಯ ಬಾವುಟ ನಿಗರಿ ನಿಂತಾ, ಎಲ್ಲಾ ನೀಟಾಗಿ ಲಗುಬಗೆಯಿಂದ ಜೋಡಿಸಿ ಸೀದಾ ಹೊರಟೆ. ಗಾಡಿ ಹತ್ತಿರ ಬಂದೆ, ಓಹ್! ತಲೆ ಕವಚ ಮರತಿದ್ದು ನೆನಪಾಯಿತು, ಹೋಗಿ ನೋಡ್ತೀನಿ ಅಲ್ಲೊಬ್ಬರು ಬಂದು ಪೇಪರು ಓದುತ್ತ ಕೂತಿದ್ದಾರೆ! ಅರೆ ಇಸ್ಕಿ, ಹಾದಿ ಇರೋದು ಇದೊಂದೇ. ಎದುರಿಗೆ ಯಾರೂ ಸಿಕ್ಕಲಿಲ್ಲ. ಇವರೆಲ್ಲಿಂದ ಬಂದಿದ್ದೂ… ಪಟಕ್ಕನೆ ನೆನಪಾಯಿತು ಓಹೋ..ಪಕ್ಕದ ಶಾರ್ಟ ರೂಟ್ ಗೇಟ್ ಬರಲಿದ್ದದ್ದು.

ಸರಿ ಯಾರೆಲ್ಲಿಂದಲಾದರೂ ಬರಲಿ. ಹೊಟ್ಟೆ ತಾಳ ಹಾಕ್ತಿದೆ. ರೊಯ್ಯ^^^ ಅಂತ ಗಾಡಿಯಲ್ಲಿ ಬರ್ತಾ ಇದ್ನಾ ಮಾಮೂಲಿ ರಸ್ತೆ ಪಕ್ಕದ ಅನ್ನಪೂರ್ಣೇಶ್ವರಿ ಬಾರೆ ಬಾರೆ ಅಂತ ಕರೀತು. ಏನೊ ಒಂದಷ್ಟು ಆಸೆಯಾದಾಗ ಅಪರೂಪಕ್ಕೊಮ್ಮೆ ಹೋಗಿ ರವೆ ಇಡ್ಲಿ ಮೆಂದು ಬರ್ತಿದ್ದೆ. ಮೊನ್ನೆ ತಾನೆ ಹೋಗಿದ್ದೆ. ಇವತ್ತು ಮತ್ತೆ ಕರಿತಾಳೆ! ಅದು ಹಾಗೆ ಅಲ್ಲೂ ಒಂದು ಹಾಸ್ಯ ಚಟಾಕಿ ನಡೆದು ಅಲ್ಲಿರುವವರು ಗೊಳ್ಳೆಂದು ನಕ್ಕಿದ್ದು ; ಅದೇರಿ ಮಂಗಳೂರು ಬಜ್ಜಿ ತಿನ್ನೊ ಹೆಬ್ಬಯಕೆಯಲ್ಲಿ ಆರ್ಡರ್ ಮಾಡಿ ಕೊನೆಗೆ ಮೆಯ್ಯುವಾಗ “ಇದೇನ್ರಿ ಬಿಸಿನೇ ಇಲ್ಲಾ, ತಣ್ಣಗಾಗಿಬಿಟ್ಟಿದೆ” ಅಂತ ಸೊಟ್ಟ ಮೂತಿ ಮಾಡಿದ್ದು ನೋಡಿ ಅಲ್ಲಿ ಬಂದ ಗಿರಾಕಿಯೊಬ್ಬರು “ಮಾಡುವಾಗ ಬಿಸಿ ಬಿಸಿ ಇತ್ತು” ಅಂದಿದ್ದು ಅವರ ಅರ್ಧ ಮಾತಿಗೆ ನಾನೂ ಪೂರ್ತಿ ಮುಕ ಮಾಡಿ ಹಲ್ಕಿರಿದಿದ್ದು ಎಜಮಾನನಿಗೆ ಸ್ವಲ್ಪ ಸಮಾಧಾನ ಆಯ್ತೆನೋ. ಅವನ ನಗು ನನ್ನ ನೋಡಿದಾಗ ಅವಳಿಗೂ ನೆನಪಾಗಿರಬೇಕು.

ಆದ್ರೂ ನಾ ಜಗ್ಗಲಿಲ್ಲ. ಡಾಕ್ಟರ್ ಮಾತು ನೆನಪಿಸಿಕೊಂಡು ಜಾಣ ಮರಿ ಆಗಿ ಮನೆ ಸೇರಿಕೊಂಡ್ನಪ್ಪಾ. ತಣ್ಣಗಾದ ಅಡಿಗೆನೇ ಬಿಸಿ ಮಾಡಿಕೊಂಡು ಅಚ್ಕಟ್ಟಾಗಿ ತಿಂದೆ. ಅದೇರಿ ಸಕ್ಕರೆ ಬಂದ ಮೇಲೆ ನನ್ನ ಸಮಾಧಾನಕ್ಕೋಸ್ಕರ ಕಂಡವರ ಮುಂದೆ ನನ್ನಷ್ಟಕ್ಕೇ ಅಡಿಗೆ ಅಂತ ಕರಿಯೊ ಬರೀ ವೋಟ್ಸೂ…….!!

15-4-2018. 9.7pm

Advertisements

ಅಯ್ಯೋ ಗ್ಯಾಸೆ..!!(ನಗೆ ಬರಹ)

ಇನ್ನೇನು ನಾಲ್ಕೇ ನಾಲ್ಕು ಬಾರಿ ತಾಳಿಸೋದಿತ್ತು. ಅಷ್ಟರಲ್ಲಿ ನೀ ಕೈಕೊಟ್ಯಲ್ಲೆ. ಇನ್ನೊಂದು ಸ್ವಲ್ಪ ಹೊತ್ತು ಇದ್ದಿದ್ದರೆ ನಿನ್ನ ಗಂಟೇನು ಹೋಗುತ್ತಿತ್ತು? ಈಗ ನೋಡು ಮಡಿಯಲ್ಲಿ ಬೇರೆ ಇದ್ದೇನೆ. ಆ ಓಣಿಯಲ್ಲಿ ಹೋಗಿ ನಿನ್ನ ಮುಖ ಕಳಚಿ ರೆಗ್ಯೂಲೇಟರ್ ಹಾಕಬೇಕಾ? ಮನಸ್ಸಲ್ಲೇ ಬೈಕೊಂಡೆ. ಅದೇರಿ, ಹಬ್ಬದ ದಿನವೇ ಗ್ಯಾಸು ಅರ್ಧದಲ್ಲಿ ಖಾಲಿ ಆಯಿತು ಅಡಿಗೆ ಮಾಡುವಾಗ.

ಪರವಾಗಿಲ್ಲ ದಿನಾ ಅಲ್ಲಿ ನೀರಾಕಿ ತೊಳಿತೀನಲ್ಲಾ. ದೇಹದ ಮಡಿಗೆ ಹಂಗಂಗೆ ಸಮಾಧಾನ ಮಾಡಿ ಹೋಗಿ ಸಿಲಿಂಡರ್ ನಾಬ್ ತೆಗೆದು ರೆಗ್ಯೂಲೇಟರ್ ಕೂಡಿಸೋಕೆ ನೋಡ್ತೀನಿ, ಊಹೂಂ ಸುತಾರಾಂ ಕೂಡವಲ್ಲದು. ಅಮುಕಿ ಅಮುಕಿ ಕೈಯ್ಯೆಲ್ಲ ನೋವು ಬಂತು. ಅಯ್ಯೋ ದೇವರೆ ಈ ಹಬ್ಬದ ದಿನ ಯಾರನ್ನು ಕರೀಲಿ. ಆಯ್ತು ಪಟಕ್ಕಂತ ಹೋಗಿ ಪಕ್ಕದ ಮನೆ ಹುಡುಗನ್ನೂ ಕರೆದು ಕೂಡ್ಸಪ್ಪಾ ಅಂದಿದ್ದಾಯಿತು. ಇಲ್ಲವೇ ಇಲ್ಲ. “ಆಂಟಿ ರೆಗ್ಯೂಲೇಟರ್ ಹಾಳಾಗಿರಬೇಕು” “ಇಲ್ಲ ಕಣೊ, ಹಳೆ ಸಿಲಿಂಡರ್ಗೆ ಕೂಡುತ್ತೆ.” “ಆಂಟಿ ಪೋನ್ ಮಾಡಿ. ಕೂಡಲೇ ಬರುತ್ತಾರೆ.”

ಇರೊ ಬರೊ ನಂಬರೆಲ್ಲ ಹುಡುಕಿ ಏಜನ್ಸಿಯ ಯಾವ ನಂಬರಿಗೆ ಮಾಡಿದರೂ ಉತ್ತರ ಇಲ್ಲ. ಎಮರ್ಜನ್ಸಿಗೆ ಈ ನಂಬರಿಗೆ ಟೋಲ್ ಫ್ರೀ ಕಾಲ್ ಮಾಡಿ. ಇವರ ಮನೆ ಕಾಯಾ. ಬರಿ ಎಲ್ಲ ಮುದ್ರಿಕೆಯಲ್ಲಿ ನಂಬರ್. ಪೋನ್ ಮಾಡಿದರೆ ತಗೋಳರೆ ಗತಿ ಇಲ್ಲ. ಸರಿ ಹೊಸ ಗ್ಯಾಸಿಗೆ ಬುಕ್ ಮಾಡೆಂದು ಮಗಳಿಗೆ ಹೇಳಿ ಹೊರಟೆ ಮುಂದಿನ ತಯಾರಿಗೆ.

ಪಕ್ಕದ ಮನೆ ಆಂಟಿ ವಿಚಾರಿಸಲಾಗಿ “ನಮ್ಮಲ್ಲಿ ತುಂಬಿದ ಸಿಲೀಂಡರ್ ಇಲ್ಲಾ ಕಂಡ್ರೀ,ಇದ್ದರೆ ಕೊಡ್ತಿದ್ದೆ” ಸಂದರ್ಭಕ್ಕೆ ತಕ್ಕಂತೆ ಕೊಡುವ ಜಾಣ ಉತ್ತರ ಗೊತ್ತಿದ್ದರೂ ಆ ಸಂದರ್ಭದಲ್ಲಿ ಮರೆತು ಹೋಗಿತ್ತು ನನಗಾದ ಟೆನ್ಸನ್ನಲ್ಲಿ. ಕಷ್ಟಕ್ಕೆ ಆಗದವರ ಸಾಲಿನಲ್ಲಿ ದಾಖಲಿಸಿರೋದು ನಂತರ ನೆನಪಾಯಿತು. ಇನ್ನೊಬ್ಬರು “ಈಗ ಬಂದೆ,ಸ್ನಾನ ಮಾಡಿ” ಪತ್ತೆ ಇಲ್ಲ ಆಸಾಮಿ. ಬಹುಶಃ ಇನ್ನೂ ಸ್ನಾನ ಮುಗಿದಿಲ್ಲ ಅನಿಸುತ್ತದೆ ಪಾಪ!

ಗಣೇಶನಿಗೆ ಅದೆಷ್ಟು ಬಗೆ ತಿಂಡಿ ತೀರ್ಥ ಮಾಡಿದರೂ ಸಾಲದು ಅಂತ ನನ್ನಪ್ಪನ ಮನೆಯಲ್ಲಿ ಇದನ್ನೇ ಅನುಸರಿಸಿ ಹಲವು ಬಗೆ ತಿಂಡಿಗಳು ನೈವೇದ್ಯಕ್ಕೆ ಮಾಡುತ್ತಿದ್ದರು. ನಾನೂ ಕೂಡಾ ಇದೇ ಪದ್ದತಿಯಲ್ಲಿ ಒಂದಷ್ಟು ಬಗೆ ಮಾಡೋದು ರೂಢಿ ಮಾಡಿಕೊಂಡಿದ್ದೆ. ಏನೆ ತೊಂದರೆ ಬಂದರೂ ತಪ್ಪಿಸುತ್ತಿರಲಿಲ್ಲ. ಆದರೆ ಇತ್ತೀಚೆಗೆ ಯಾಕೊ ಮನಸ್ಸು ಎಲ್ಲದಕ್ಕೂ ಹಿಂದೇಟು ಹಾಕುತ್ತಿದೆ. ಬರಿ ಪಂಚಕಜ್ಜಾಯ,ಚಕ್ಕುಲಿ,ಮೋದಕ, ಕರ್ಜೀಕಾಯಿ, ಶಂಕರಪೊಳೆ,ಎಳ್ಳುಂಡೆ,ಬಾಳೆ ಹಣ್ಣಿನ ಶೀಕರಣೆ ಒಂದಷ್ಟು ಹಣ್ಣುಗಳು. ಇವಿಷ್ಟೇ ನೈವೇದ್ಯಕ್ಕೆ ತಯಾರಾಗಿದ್ದು. ಕಡಬು ಮಾಡಿಲ್ಲ ಅನ್ನುವ ಕೋಪಕ್ಕಿರಬೇಕು ಗಣೇಶ ಊಟಕ್ಕೆ ಮೂರು ನಾಮ ಹಾಕಿದ ಅಂತ ಮನಸಲ್ಲೆ ನನ್ನನ್ನೇ ನಾ ಶಪಿಸಿಕೊಂಡೆ. ಏನೆ ಮಾಡಿದರೂ ತಿನ್ನೋದು ನಾವೇ ಆದರೂ ಸಾಲದ್ದಕ್ಕೆ ಡಾಕ್ಟರ್ ಬೇರೆ ಕಡಿವಾಣ ಹಾಕಿರುತ್ತಾರೆ ಅದು ತಿನ್ನಬೇಡಿ ಇದು ತಿನ್ನಬೇಡಿ. ಇನ್ನು ಮಾಡಿದ್ದೆಲ್ಲ ನೋಡ್ತಾ ಕೂರೋಕ್ಕೆ ಆಗುತ್ತಾ? ಬಾಯಿ ಚಪಲ ಎಲ್ಲಿ ಕೇಳುತ್ತೆ. ತಿಂದೋಗುತ್ತೆ. ಬೇಡ್ ಬೇಡಾ ಅಂದರೂ ಆಗುವ ಬೇಜಾರಿಗೆ ಇಷ್ಟು ವರ್ಷ ಮೆಂದ ಬಾಯಿಗೆ ಹಬ್ಬ ಹುಣ್ಣಿಮೆ ಅದೂ ಇದೂ ಅಂತ ದೇವರ ಹೆಸರಲ್ಲಿ ಮಾಡುವ ತಿಂಡಿಗಳಿಗೆ ಕಡಿವಾಣ ಹಾಕಿ ಹಾಕಿ ಈ ಸಾರಿ ಗಣೇಶನಿಗೂ ಸಂಚಕಾರ ಮಾಡಿದ್ದು ಎಲ್ಲೋ ತಪ್ಪಾಯಿತೇನೊ ಅನ್ನುವ ಕುರ್ ಕುರಿ ಮನಸ್ಸು ಕಾಡಲು ಶುರುವಾಯಿತು. ಮಾಡಿದ್ದಷ್ಟೇ ತಿಂಡೀನ ಅವನ ಮುಂದಿಟ್ಟು ತಪ್ಪಾಯಿತು ಕಣಪ್ಪಾ, ಕಡಬಿನ ನೈವೇದ್ಯ ಮಾಡೇ ಮಾಡ್ತೀನಿ ಅನ್ನುವ ಭಾಷೆ ಇಟ್ಟು ಮಂಗಳಾರತಿ ಬೆಳಗಿ ಅಡ್ಡಬಿದ್ದೆ. ಅದವನಿಗೆ ಕೇಳಿಸಿತೊ ಇಲ್ಲವೊ ಗೊತ್ತಿಲ್ಲ, ನಾನಂತೂ ಪಾಪ ಪ್ರಜ್ಞೆಯಿಂದ ಹೊರ ಬಂದೆ.

ಮತ್ತೆ ಅಡಿಗೆ ಮಾಡುವ ಯೋಚನೆಗೆ ತಿಲಾಂಜಲಿ ಇಟ್ಟು ಹೆಚ್ಚಿಟ್ಟ ತರಕಾರಿ ಫ್ರಿಜ್ ಸೇರಿಸಿ ಮೊದಲೇ ಮಾಡಿಟ್ಟುಕೊಂಡಿದ್ದ ಅನ್ನಕ್ಕೆ ಒಂದಷ್ಟು ಸೌತೇಕಾಯಿ ಸಲಾಡ್ ಮಾಡಿ ಗಣೇಶ ಹಬ್ಬದ ಊಟ ಮುಕ್ತಾಯವಾಯಿತು.

ಹಾಂ, ಪಕ್ಕನೆ ನೆನಪಾಯಿತು ಅಟ್ಟದ ಮೇಲಿನ ಮೂವತ್ತು ವರ್ಷದ ಸಂಗಾತಿ. ಅದೇರಿ, ಹಳೆ ಕಾಲದ ಕರೆಂಟ್ ಸ್ಟೋವ್ ಅತ್ತೆ ಬಿಟ್ಟುಕೊಟ್ಟಿದ್ದು ನಮ್ಮವರು ತಂದಿರುವುದೆಂದು. ಅದಿನ್ನೂ ಜೋಪಾನವಾಗಿ ಎತ್ತಿಟ್ಟಿದ್ದೆ . ಎಷ್ಟೇ ಹಳೆಯ ಸಾಮಾನಾದರೂ ಬಿಸಾಕುವ ಬುದ್ಧಿಯಿಲ್ಲದ ನನ್ನ ಸ್ವಭಾವ ಈಗ ಉಪಯೋಗಕ್ಕೆ ಬಂತು. “ಮಗಳೆ ಹತ್ತು ಅಟ್ಟ ತೆಗಿ ಕರೆಂಟ್ ಸ್ವೋವ್” ಅಂದೆ. “ಏನಮ್ಮಾ ಅದಿನ್ನೂ ಇಟ್ಕೊಂಡಿದೀಯಾ? ಅದೇನು ಸರಿಗಿದೆಯೊ ಇಲ್ಲವೊ?” ಪ್ಲಗ್ ಹಾಕಿ ನೋಡಿದರೆ ಸರಿಯಾಗಿದೆ! ತದಾಂಗು ತಕಧಿಮಿ ತೋಂ. ಮನಸ್ಸು ಅದುವರೆಗಿನ ಟೆನ್ಷನ್ ಮರೆತು ಖುಷಿಯಿಂದ ಕುಣಿಯಿತು. ಹಳೇ ಸ್ಟೋವಲ್ಲಿ ಮಾಡಿದ ಬಿಸಿ ಬಿಸಿ ಕಾಫಿ ಹೊಟ್ಟೆ ಸೇರುತ್ತಿದ್ದಂತೆ ಉತ್ಸಾಹ ಉಕ್ಕಿ ಬಂತು. ತಾಣಕ್ಕೆ ಈ ದಿನವೇ ಕಳಿಸಬೇಕಾಗಿದ್ದ ಬರಹದ ಹುಡುಕಾಟದಲ್ಲಿ ತಲ್ಲೀನಳಾದೆ. ಎಲ್ಲವನ್ನೂ ಬ್ಲಾಗಲ್ಲಿ ಹುಡುಕಿ ಸರಿಪಡಿಸಿ ಕಳಿಸುವಷ್ಟರಲ್ಲಿ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ರಾತ್ರಿಯ ಊಟ ಗುರುಗಳ ಉಪವಾಸವಾಯಿತು ಚಿಂತೆಯಿಲ್ಲದೆ. ಮಾಡಿದ ತಿಂಡಿಗಳನ್ನು ಹೋಗ್ತಾ ಬರ್ತಾ ತಿಂದು ಮಗಳಾಗಲೇ “ಅಮ್ಮಾ ರಾತ್ರಿಗೇನು ಬೇಡಾ ನನಗೆ” ಅಂದಾಗಿತ್ತು.

ಮಾರನೇ ದಿನ ಪಂಚಮಿ. ಮತ್ತದೆ ಪೂಜೆಯ ಸಡಗರ ಬೇಗ ಎಲ್ಲ ಮುಗಿಸುವ ಧಾವಂತ. ಪೊಪಾಯಾ ಹಣ್ಣು ಹಸಿದ ಹೊಟ್ಟೆಯಲ್ಲಿ ತಿನ್ನಬೇಕು ಡಾಕ್ಟರ್ ಉವಾಚ! ಪಾಲಿಸಿದೆ. ಮನೆಗೆಲಸ ಎಲ್ಲ ಮುಗಿಸಿ ಬೇಗ ಪೂಜೆನೂ ಮಾಡಿದ್ದಾಯಿತು. ನೈವೇದ್ಯಕ್ಕೆ ಇಟ್ಟ ಹಾಲು ಬಿಸಿ ಮಾಡಲು ಇಟ್ಟಾಗ ಸ್ವಲ್ಪ ಚಾ ಪುಡಿ ಹಾಕು ಹೇಳ್ತಿತ್ತು. ಸರಿ ಇಬ್ಬರಿಗೂ ಆಗುತ್ತೆ ಅಂತ ಇನ್ನೊಂದಷ್ಟು ಹಾಲು ಪಾತ್ರೆಗೆ ಹಾಕಲು ಹೋದೆ. ಕರೆಂಟು ಎಳೀತು ನೋಡಿ. ಮೈಯ್ಯೆಲ್ಲ ಅದುರಿತು, ಹಾಲೊಂದಷ್ಟು ಚೆಲ್ಲಿತು, ಕೈ ಹಾಲಿನ ಪಾತ್ರೆ ಬಿಡಲಿಲ್ಲ. ಸ್ವಲ್ಪ ಕಿರುಚಿದ್ದೆ, ಅನಿಸುತ್ತೆ. ಸಾಕಿದ ನಾಲ್ಕು ಕಾಲಿನ ನಮ್ಮನೆ ಪುಟ್ಟಾ ಓಡಿ ಬಂದು ಭೌ ಭೌ ಅಂತು. ಇತ್ತ ಮಗಳು ಅಮ್ಮಾ ಏನಾಯಿತು? ಅಂತ ತನ್ನ ರೂಮಿಂದ ಓಡಿ ಬಂದ್ಲು, ಸ್ಟೋವ್ ಉರಿತಾನೆ ಇತ್ತು. ಕಾಲಿಡಲು ಜಾಗವಿಲ್ಲ, ಹೇಗೊ ಸ್ವಿಚ್ ಬಂದು ಮಾಡಿ ಸುಧಾರಿಸಿಕೊಂಡು ಸ್ವಶ್ಚ ಮಾಡುವಷ್ಟರಲ್ಲಿ ಸಾಕಾಯಿತು. ಹಾಗಂತ ಟೀ ಕುಡಿಯದಿರಲು ಸಾಧ್ಯವೆ? ಖಂಡಿತಾ ಇಲ್ಲ. ಮತ್ತೆ ಗೊಟಾಯಿಸಲು ಇಟ್ಟು ಇನ್ನೇನು ಬಗ್ಗಿಸಬೇಕು ಕಪ್ಪಿಗೆ ಕೈ ತಪ್ಪಿ ಸಿಂಕು ಟೀಯೆಲ್ಲ ಕುಡಿಬೇಕಾ? ಥೊ^^^^^ ಇದ್ಯಾಕೊ ಗಣೇಶಾ ಏನೇನೊ ಅವಾಂತರ ಮಾಡುತ್ತಿದ್ದಾನೆ. ಯಾಕೆ? ಯಾಕೆ? ಅಂತ ತಲೆ ಕೆಡೋಕೆ ಶುರುವಾಯಿತು. ಇದೇ ಯೋಚನೆಯಲ್ಲಿ ಮತ್ತೆ ಟೀಗಿಟ್ಟಾಗ ಪಕ್ಕನೆ ನೆನಪಾಯಿತು ಚಂದನ ತೇಯಿದು ಹಚ್ಚಿ ನಾನು ಪೂಜೆ ಮಾಡೋದು ಮರೆತೆ. ಆಯಿತು ಗಣೇಶಾ ಅದನ್ನೂ ಪೂರೈಸುತ್ತೇನೆ. ಇನ್ನೇನು ಅವಾಂತರ ಮಾಡಬೇಡಾ. ಸಧ್ಯ ಟೀ ಸುರಕ್ಷಿತವಾಗಿ ಕುಡಿಯಲು ಬಿಡು ಮಾರಾಯಾ. ತಪ್ಪಾಯಿತು ನನ್ನಪ್ಪಾ ಅಂತ ಬೇಡಿಕೊಂಡ ಮೇಲೆ ಇಲ್ಲಿಯವರೆಗಿನ ಗಳಿಗೆಗಳು ಸುರಕ್ಷಿತವಾಗಿ ಇವೆ. ಟೀ ಕುಡಿದು ಅಡಿಗೆಗೆ ತೊಡಗಿದೆ.

ಎಲ್ಲಿ ಕರೆಂಟು ಗೋತಾ ಆದರೆ ಅಂತ ಹಿಂದಿನ ದಿನ ಫ್ರಿಡ್ಜಲ್ಲಿ ಪೇರಿಸಿಟ್ಟ ತರಕಾರಿ ಎಲ್ಲ ಬೇಯಿಸಿದ್ದಾಯಿತು. “ನೋಡೆ ಗ್ಯಾಸಿಲ್ಲ. ಸಾಯಂಕಾಲಕ್ಕೂ ಸೇರಿಸಿ ಅನ್ನ ಮಾಡ್ತೀನಿ” ಹೇಳಿ ಅನ್ನವನ್ನೂ ಮಾಡಿದ್ದಾಯಿತು. ಪಲ್ಯವೂ ರೆಡಿ,ಇನ್ನೇನು ಸಾಂಬಾರ್ ಒಗ್ಗರಣೆ ಹಾಕಿ ಬೇಯೋಕಿಟ್ಟರೆ ರೋಡಲ್ಲಿ ಗ್ಯಾಸ್ ಮೂರ್ಗಾಲಿನ ಆಟೋ ನಿಂತ ಸೌಂಡೂ^^^.. ಪಟಕ್ಕಂತ ಕರೆಂಟ್ ಸ್ಟೋವ್ ಆರಿಸಿ ಗ್ಯಾಸನವನ ಎಳ್ಕಂಬಂದೆ ಬಾರಪ್ಪಾ, ಸ್ವಲ್ಪ ನೋಡಪ್ಪಾ ಅಂದೆ. “ಮೇಡಂವರೆ ಇದು ನಾಬ್ ದೊಡ್ಡದಿದೆ ಸಿಲೀಂಡರ್ ಬದಲಾಯಿಸಬೇಕು” ತತ್ತರಿಕೆ ಇನ್ನು ಗ್ಯಾಸ್ ಬರೋದು ಕಾಯಬೇಕಾ? ಮೂವತ್ತು ವರ್ಷದ ಸಂಸಾರದಲ್ಲಿ ಯಾವತ್ತೂ ಈ ಗ್ಯಾಸ್ ಮಾತ್ರ ಕೈ ಕೊಟ್ಟಿರಲಿಲ್ಲ, ಈ ಹಬ್ಬದಲ್ಲೇ ಹೀಗಾಗಬೇಕಾ? ಹೇಳ್ಕೊಂಡೆ. ಅವನಿಗೇನು ಕೇಳ್ಕಂಡು ಹೋದಾ. ಮತ್ತೆ ಬಂದು ಸ್ಟೋವ್ ಸ್ವಿಚ್ ಹಾಕಿದರೆ ಢಮಾರ್! ಉರಿತಿಲ್ಲ. ಅದಕ್ಕೂ ನನ್ನ ಮೇಲೆ ಕೋಪ ಬಂತು ಅನಿಸಿತು. ಬೇಜಾರಾಯಿತು ನನಗೆ. ಹೋಳು ರುಬ್ಬಿದ ಮಸಾಲೆ ಎಲ್ಲ ತಪ್ಪಲೆಗೆ ಹಾಕಿ ಫ್ರಿಜ್ಜಲ್ಲಿ ಪೇರಿಸಿದೆ. ಮತ್ತದೆ ಸೌತೇಕಾಯಿ ಸಲಾಡು ಪಲ್ಯ ಮೊಸರು ಮಗಳ ಮೂತಿ ವಾರೆಯಾಯಿತು ನಾನೇನು ಮಾಡಲಿ? ಪಾಪ! ಮಂಗಳೂರು ಸೌತೇಕಾಯಿ ಸಾಂಬಾರು ಬೆಳಗಿನ ಉಪವಾಸದ ಅವಳ ಹೊಟ್ಟೆ ಕಾಯ್ತಿತ್ತು!

ಊಟ ಮಾಡಿ ಇನ್ನೇನು ಸ್ವಲ್ಪ ವಿರಮಿಸಬೇಕು ಅಷ್ಟರಲ್ಲಿ ಗ್ಯಾಸ್, ಗ್ಯಾಸ್ ಗೇಟು ಬಡಿತ. ಸಡಗರದಿಂದ ಹೆಣ್ಣು ಇನಿಯನ ನೋಡಲು ಓಡುವಂತೆ ನಾನೂ ಅವಸರದಲ್ಲಿ ಬಾಗಿಲು ತೆಗೆದು ಬರಮಾಡಿಕೊಂಡೆ ಅವನನ್ನು ಅಲ್ಲ ಗ್ಯಾಸನ್ನು! ಅದುವರೆಗಿನ ಗ್ಯಾಸ್ ವೃತ್ತಾಂತ ಎಲ್ಲ ಊದಿ. ಎಷ್ಟೆಂದರೂ ಅವನು ಪರಿಚಯದವನು ಅಲ್ಲವೆ? ಹೇಳಿಕೊಳ್ಳದಿದ್ದರೆ ಸಮಾಧಾನ ಇಲ್ಲ. ಅದಲ್ಲದೆ ಆ ನಾಬ್ ಹಾಕಲು ಬರದೇ ಇರೊ ಸಿಲೀಂಡರ್ ಸಾಗಾಕಬೇಕಲ್ಲಾ. ಏನಾದರೂ ಸಭೂಬು ಹೇಳಿದರೆ? ಒಳಗೊಳಗೆ ಈ ಕಾಯ್ದೆ ಕಾನೂನಿನ ಅಳುಕು ನನಗೆ. ಅವನು ಎಲ್ಲಾ ಕೇಳಿಸಿಕೊಂಡು ಏನೂ ಮಾತಾಡದೆ ಎರಡೂ ಸಿಲೀಂಡರ್ ಬದಲಾಯಿಸಿ ತನ್ನ ಕೆಲಸ ಮುಗಿಸಿ ಹಣ ಪಡೆದು ಹೊರಟ. ಅಬ್ಬಾ! ಸಧ್ಯ ಅಂತೂ ಎಲ್ಲಾ ಒಂದು ಹಂತಕ್ಕೆ ಬಂತು.

ಅಯ್ಯೋ! ಈ ಬರೆಯೋದರಲ್ಲಿ ಮರೆತಿದ್ದೆ, ಗ್ಯಾಸ್ ಬಂತಲ್ಲಾ ಚಕ್ಲಿ ಹಿಟ್ಟು ತಾಳಿಸಬೇಕು ಫ್ರಿಜ್ಜಲ್ಲಿ ಇಟ್ಟಿದ್ದು ಅದೇನು ಬರುತ್ತೊ ಇಲ್ಲವೊ ನೋಡಬೇಕು. ಬರ್ತೀನಿ ಇರಿ.

26-8-2017. 3.22pm

ಗುಂಡನ ಹಿಕ್ಮತ್ತು(ನಗೆ ಬರಹ)

ಗೆಳೆಯ – ಏನೋ ಗುಂಡಾ, ಎಲ್ಲೂ ಕಾಣ್ತಿಲ್ಲ?  ಅದಕೆ ಮನೆಗೇ ಬಂದೆ ಮಾತಾಡಿಸಿಕೊಂಡು ಹೋಗೋಣಾಂತ.

ಗುಂಡ – ಇಲ್ಲ ಕಣೋ, ನಿನ್ನೆ ಊರ ಕಡೆ ಹೋಗಿದ್ನಾ.  ತೋಟದಲ್ಲಿ ಓಡಾಡುವಾಗ ಜಾರಿ ಬಿದ್ದೆ.  ನೋಡು ಕಾಲು ಹೇಗೆ ಊದಿಕೊಂಡಿದೆ!

ಗೆಳೆಯ – ಹೌದಲ್ಲೊ, ಡಾಕ್ಟರ್ಗೆ ತೋರಿಸಬೇಕಿತ್ತು?

ಗುಂಡ – ಛೆ, ಇದಕ್ಯಾಕೊ ಡಾಕ್ಟರ್ ಹತ್ತಿರ ಹೋಗಬೇಕು?  ನನ್ನ ಫ್ರೆಂಡೂ ಇದೇ ತರ ಜಾರಿ ಬಿದ್ದು ಕೈಗೆ ಏಟು ಮಾಡಿಕೊಂಡಿದ್ದಾನೆ.  ಹೇಗಿದ್ರೂ ಅವನು ಡಾಕ್ಟರ್ ಹತ್ತಿರ ಹೋಗಿ ಔಷಧಿ ತಂದೂಕೊಂಡಿದ್ದಾನೆ.  ಅದೇ ಔಷಧನ ನಂಗೂ  ಸ್ವಲ್ಪ ಕೊಡು ಅಂತ ಕೇಳ್ತೀನಿ.  ಅವನಿಗೆ ಕೈಗೆ, ನನಗೆ ಕಾಲಿಗೆ ಏಟಾಗಿರೋದು.  ಎರಡೂ ಬಿದ್ದಿದ್ದೇ ತಾನೆ.  ಸುಮ್ನೇ ಡಾಕ್ಟರ್ಗೆ ದುಡ್ಡು ಬೇರೆ ದಂಡ!

ಗೆಳೆಯ – ಅಪ್ಪಾ ಶಿವನೆ.  ನಮಸ್ಕಾರ ಕಣೋ, ಬರ್ತೀನಿ.

ಕಳೆದು ಹೋದ ಚಟ್ನೀಪುಡಿ(ನಗೆ ಬರಹ)

ಅಲ್ಲ ಎಲ್ಲಿಟ್ಟೆ ಚಟ್ನೀಪುಡಿ ಬಾಟ್ಲೀನ? ಎಷ್ಟು ಹುಡುಕಿದ್ರೂ ಸಿಗುತ್ತಿಲ್ವಲ್ಲ? ಏನ್ಮಾಡ್ಲಿ ಈಗ? ಕಳ್ಳೆಕಾಯಿ,ಕೊಬ್ಬರಿ,ಒಂದಷ್ಟು ಕರಿಬೇವಿನ ಸೊಪ್ಪು, ಬೆಳ್ಳುಳ್ಳಿ ಏನೆಲ್ಲಾ ಹಾಕಿ ಅದೆಷ್ಟು ಮುತುವಜಿ೯ಯಿಂದ ಮಾಡಿದ್ದೆ!

ಇವತ್ತೇನಾದ್ರು ಆಗ್ಲಿ, ಎಲ್ಲ ಕೆಲಸ ಬಿಟ್ಟು ಹುಡುಕೋದೆ. 

ಅಮ್ಮ ಅದೇನ ಗೊಣಗ್ತಿದಿಯಾ ಆಗಿಂದ?

ಇಲ್ಲ ಕಣೆ ಚಟ್ನೀಪುಡಿ ಸಿಗ್ತಿಲ್ಲ.

ಅಯ್ಯೋ ಅದೆಷ್ಟು ದಿನ ಆಯ್ತು ಹುಡುಕೊಕೆ ಹತ್ತಿ, ಇನ್ನೂ ಸಿಕ್ಕಿಲ್ವ?

ಸಿಕ್ಕಿದ್ರೆ ಹುಡುಕ್ತಿದ್ನ? ಇವಳದ್ದೊಂದು.  ಏಯ್ ಹೋಗೊ ಆಚೆ,ಬಂದಬಿಟ್ಟ ನಂದೆಲ್ಲಿ ಇಡ್ಲಿ ಅಂತ, ಭೌ ಭೌ ಅಂತೆ. ಏಯ್ ಪೆಡಿಕ್ರಿ ಹಾಕೆ ಅವನಿಗೆ, ನಾ ಚಟ್ನೀ ಪುಡಿ ಹುಡುಕಬೇಕು.

ಬೆಳಗಿಂದ ಸಾಯಂಕಾಲದವರೆಗೂ ಇಡೀ ಮನೆ ತಡಕಾಡಿದ್ರೂ ಸಿಕ್ಕಿಲ್ವಲ್ಲ, ಎಲ್ಲೋಯ್ತು? ಸುಸ್ತಾಯ್ತು, ಏನಾದ್ರಾಗ್ಲಿ ನಾಳೆ ಇನ್ನೊಂದು ಕೈ ನೋಡೇ ಬಿಡೋದು.

ಅಮ್ಮಾ ಇಲ್ಲಿ ನೋಡಿಲ್ಲಿ ನಿನ್ನ ಚಟ್ನೀಪುಡಿ!

ನಿಂಗೆಲ್ಲೆ ಸಿಕ್ತು.

ದೇವರ ಮನೆಯಲ್ಲಿ ಕುಂಕುಮ ಬಾಟ್ಲಿ ಜೊತೆ ಇಟ್ಟಿದ್ದೆ. 

ಅಯ್ಯೋ ರಾಮನೆ! ಅದ್ಯಾವ ಮಾಯದಲ್ಲಿ ಅಲ್ಲಿಟ್ಟೆ?

ಹೀಗೂ ಉಂಟೆ???

(ಯಾಕ್ರೀ ನನ್ನ ಅವಸ್ಥೆ ನೋಡಿ ನಗ್ತಿದಿರಾ? ಪರವಾಗಿಲ್ಲ ಜೋರಾಗಿ ನಗಿ, ಆರೋಗ್ಯಕ್ಕೆ ಒಳ್ಳೆಯದು, ಅದಕೆ ಬರೆದಿರೋದು)

ಹೋಗಮ್ಮೋ(ನಗೆ ಬರಹ)

ಅಮ್ಮ – ಮಗಳೆ ಇವತ್ತೊಂದು ಸಂಬಂಧ ಬಂದಿದೆ, ಹುಡುಗ

           . ಅಮೇರಿಕಾದಲ್ಲಿ ಇದ್ದಾನಂತೆ, ಒಳ್ಳೆ ಕೆಲಸ,ಚೆನ್ನಾಗಿ 

              ಇದ್ದಾನೆ ಆಗಬಹುದಾ. ಮದುವೆಗೆ ಹೂ ಅನ್ನು.

ಮಗಳು – ಹೋಗಮ್ಮೋ, ಯಾಕೆ ಇಲ್ಲೇನು ಇಂಜನಿಯರಗಳು

               ಇಲ್ವಾ? ಇಷ್ಟೊಳ್ಳೆ ಕೆಲಸ ಬಿಟ್ಟು ಅಲ್ಲಿ ಹೋಗಿ

                ಕೆಲಸನೂ ಇಲ್ಲದೆ ಉಪ್ಪಿಟ್ಟು ಮಾಡಿ WhatsApp

                ನಲ್ಲಿ pic ಹಾಕಲಾ? ಈಗೆಲ್ಲ ನನ್ನ friends ಅವಸ್ಥೆ

                ನೋಡದೀನಿ.  ಹೋಗಮ್ಮೋ ಸುಮ್ನಿರು.  ದೂರದ

                ಬೆಟ್ಟ ಕಣ್ಣಿಗೆ ನುಣ್ಣಗೆ.  ಇಂಡಿಯಾನೇ ಬೆಸ್ಟ್

ಪಾಕಡಾ ಹೆಂಡತಿ(ನಗೆ ಬರಹ)

ಗಂಡ-  ಯಾಕೆ ನಿದ್ದೆ ಬರ್ತಿಲ್ವಾ? ಹೊರಳಾಡ್ತಾ ಇದಿಯಾ!

ಹೆಂಡತಿ- ಇಲ್ಲ ಕಂಡ್ರಿ, ಕಸದ್ದೆ ಯೋಚನೆಯಾಗಿ ಬಿಟ್ಟಿದೆ.

ಗಂಡ- ಯಾಕೆ ದಿನಾ ಬೆಳಿಗ್ಗೆ ವಾಕಿಂಗ ಹೋಗುವಾಗ ತಗೊಂಡು ಹೋಗಿ ಅದೆಲ್ಲೊ ಬಿಸಾಕಿ ಬರ್ತಿದ್ದೆ.

ಹೆಂಡತಿ- ಹಂಗಲ್ಲರಿ, ಈಗ ಕಸ ಹಾಕೊ ಜಾಗ ಕ್ಲೀನ ಮಾಡಿ

ರಂಗೋಲಿ ಬೇರೆ ಹಾಕಿಡ್ತಾರೆ, ಹ್ಯಾಂಗರಿ ರಂಗೋಲಿ ಮೇಲೆ

ಕಸ ಹಾಕೋದು?

ಗಂಡ-ಅಷ್ಷೇನಾ, ಕಸದ ಗಾಡಿಗೇ ಹಾಕಿದ್ರಾಯ್ತು ಬಿಡು.

ಹೆಂಡತಿ- ಅದಲ್ಲ ಕಂಡ್ರಿ.

ಗಂಡ- ಮತ್ತಿನ್ನೇನೆ?

ಹೆಂಡತಿ -ಬೆಳಗ್ಗೆ ನಿಮಗೊಂದು ಕೆಲಸ ಹೇಳೋಣ ಅಂತಿದ್ದೆ.

ಗಂಡ – ಏನೇ ಅದೂ!

ಹೆಂಡತಿ – ಮತ್ತೆ, ಮತ್ತೆ ಮಹಾನಗರ ಪಾಲಿಕೆಯವರು ಕಸನ 

ಮೂರು ತರ ವಿಂಗಡಿಸಿ ಕೊಡಬೇಕು ಹೇಳ್ತಾರಿ, ಇಲ್ಲ ಅಂದ್ರೆ

ಕಸ ತಗಳಲ್ವಂತೆ.  ಪಾಂಪ್ಲೆಟ್ ಬೇರೆ ಕೊಟ್ಟಿದ್ದಾರೆ, ಓದಿಕೊಂಡು ವಿಂಗಡಿಸಿ, ಹಾಗೆ ಕಸದ ಗಾಡಿ ಬಂದಾಗ ತಗೊಂಡೋಗಿ ಹಾಕಿಬಿಡ್ರಿ.  ಹೇಗಿದ್ರೂ ರಿಟೈರ್ಡ ಆಗಿದಿರಾ,

ಫ್ಫೀಯಾಗಿದ್ದೀರಲ್ಲ.

(ಹೆಂಡತಿ ನಿರಾಳವಾಗಿ ನಿದ್ದೆಗೆ ಜಾರಿದ್ಲು, ಗಂಡನಿಗೆ ನಿದ್ದೆ ಹಾರೋಯ್ತ)☺

ಲೆಕ್ಕಾಚಾರದ ಗಂಡ(ನಗೆ ಬರಹ)   14 / Dec / 2015

ಹೆಂಡತಿ –  ರೀ, ಬ್ಯಾಂಕಲ್ಲಿ ಒಂದು ಲಾಕರ್ ಓಪನ್ ಮಾಡ್ರಿ, 

                ಬಂಗಾರ, ಬೆಳ್ಳಿ ಎಲ್ಲ ಇಡಬೇಕು.

ಗಂಡ –      ಸಮ್ನೆ ಯಾಕೆ ದುಡ್ಡು ವೇಸ್ಟ, ಆಫೀಸಲ್ಲೇ ಫೈಲ್

                 ಇಡೋಕೆ ಲಾಕರ್ ಕೊಟ್ಟಿದ್ದಾರೆ, ಅಲ್ಲೇ

                 ಇಟ್ರಾಯಿತು ಬಿಡು!☺

– See more at: http://vismayanagari.com/node/24590#sthash.XbiYoszG.dpuf