ನುಡಿಮುತ್ತುಗಳು ” ಮನಸ್ಸು”

ಕುಪಿತಗೊಂಡ ಮನಸ್ಸು
ಯಾವಾಗಲೂ ಕಲ್ಮಶದ ಆಗರ
ಸಮಾಧಾನಗೊಂಡ ಮನಸ್ಸು
ಸದಾ ಚೈತನ್ಯದ ಸಾಗರ.
**********

ಮನಸ್ಸನ್ನು ಯಾವಾಗಲೂ
ಮುಗ್ಧವಾಗಿರಿಸುವ ಹಂಬಲ ಬೇಡಾ
ಮನಸ್ಸಿನ ಮುಗ್ದತೆ ಮುಂದೊಂದು ದಿನ
ಮುಳ್ಳಾದೀತು, ಎಚ್ಚರ!
************

ಕಾಡುವ ಮನಸಿನೊಳಗೊಂದು
ಹುತ್ತವಿರಬಹುದು
ಆಗಾಗ ಬಂದು ಕಾಡಿ
ಪುಸಕ್ಕನೆ ಮಾಯವಾಗುವ
ತಲೆ ತಿನ್ನುವ ಚಿಂತೆಗಳು
ಇನ್ನೆಲ್ಲಿ ತೂರಿಕೊಳ್ಳಲು ಸಾಧ್ಯ?
*************

ನಮ್ಮನ್ನು ನಾವು ಹೊಗಳಿಕೊಂಡಷ್ಟು
ಬೇರೆ ಯಾರನ್ನೂ ಹೋಗಳಲು ಸಾಧ್ಯವಿಲ್ಲ
ಯಾಕೀಗೆ?
ಮನುಷ್ಯ ಎಷ್ಟು ಸ್ವಾರ್ಥಿ ಎಂಬುದಕ್ಕೆ
ಇದು ಸ್ಪಷ್ಟ ನಿದರ್ಶನ.
***********

ಮನಸ್ಸಿನ ಮಾತು
ಕೇವಲ ಮನಸ್ಸಿನಲ್ಲಿ ಇದ್ದರೇನೇ ಚೆನ್ನ
ಕೆಲವೊಂದು ಮಾತು
ಮನಸು ಮನಸುಗಳ ನಡುವೆ
ವೈಮನಸ್ಸು ತಂದೀತು.
***********

ಹತ್ತಿರವಿದ್ದಾಗ ಇಲ್ಲದ ಕಾಳಜಿ
ದೂರವಿದ್ದಾಗ ಹೆಚ್ಚು
ಬರೆಯೋದೇನು,
ಬಡಬಡಿಸೊದೇನು
ಅಬ್ಬಬ್ಬಾ! ಎಲೈ ಮನಸೇ
ಅದ್ಯಾಕೆ ನೀ ಹೀಂಗೆ?
************

30-6-2021. 5.48pm

ನುಡಿಮುತ್ತುಗಳು

ನಿನ್ನ ನೀ ಅರಿಯದೇ
ಅನ್ಯರನು ದೂರದಿರು
ನಿನ್ನ ನಿಯತ್ತು
ಅನ್ಯರಿಗೂ ವರವಾಗುವುದು.
**********

ಬದುಕು ಸೂತ್ರವಿಲ್ಲದ ಗಾಳಿಪಟದಂತೆ
ನಂಬಿಕೆಯೇ ಜೀವನಕೆ ಅಡಿಪಾಯ
ನಂಬಿಕೆ ಭದ್ರವಾಗಿ ಇದ್ದಷ್ಟೂ ಒಳಿತು
ಅದಿಲ್ಲವಾದರೆ ಬದುಕಾಗುವುದು
ಡೋಲಾಯಮಾನ.
****************

ನಮ್ಮ ಕಷ್ಟಗಳ ತಿಳಿದು
ಭರವಸೆಯ ಮಾತನಾಡುವವರು
ಬಹಳಷ್ಟು ಜನ ಸಿಗುತ್ತಾರೆ
ಆದರೆ ಕಷ್ಟಕ್ಕಾಗುವವರು
ಬೆರಳೆಣಿಕೆಯಷ್ಟೂ ಇರುವುದಿಲ್ಲ.
************

ಎಲ್ಲವನ್ನೂ ನುಂಗಿ
ನೀರು ಕುಡಿಯುವ
ಕಲೆ ರೂಢಿಸಿಕೊಳ್ಳಬೇಕು
ಆಗ ಬದುಕು
ಕಬ್ಬಿಣದ ಕಡಲೆ ಅನಿಸುವುದಿಲ್ಲ.
***********

ಇನ್ನೊಬ್ಬರ ನಗುವಿನಲ್ಲಿ
ನಾವೂ ಪಾಲ್ಗೊಳ್ಳೋಣ
ಅವರ ಕಷ್ಟ ಸುಖ ವಿಚಾರಿಸಿ
ಅವರ ನಗು ಶಾಶ್ವತವಾಗಿರಿಸೋಣ.
************

ಆಧಾರ ರಹಿತ ಗಾಳಿಮಾತುಗಳು
ಮನಸ್ಸನ್ನು ಚುಚ್ಚುವ ಭರ್ಚಿಯಂತೆ
ವಿನಾಕಾರಣ ಮಾತಿಗೆ ಬಲಿಯಾದ ನೋವು
ಆಗಾಗ ಎದೆ ಕುಟುಕದೆ ಇರದು.
***************

ಆಸೆಯೇ ಹಣವಾದರೆ
ಜೀವನವೇ ಹೆಣವಾಗುವುದು
ಹಣದ ಬೆನ್ನು ಬಿದ್ದ ಮನಸು ದೇಹ
ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡು
ಕೊನೆಗೆ ಮಸಣ ಸೇರುವುದು.
***************

ಬದುಕು ಕಲಿಸುವ ಪಾಠ
ಒಂದೆರಡಲ್ಲ
ಕಲಿತಷ್ಟೂ ಮುಗಿಯುವುದಿಲ್ಲ
ಅದರ ಇತಿಮಿತಿಗೆ
ಕೊನೆಯೆಂಬುದೇ ಇಲ್ಲ.
************

ಮನುಷ್ಯ ಮೊದಲ ಹಂತದಲ್ಲಿ
ತನ್ನದೇ ಯೋಚನೆ ಇತಿಮಿತಿಯಲ್ಲಿ ಬದುಕಿಬಿಡುತ್ತಾನೆ
ಇದರಾಚೆಯ ಬದುಕು ಜ್ಞಾನೋದಯವಾಗುವಷ್ಟರಲ್ಲಿ
ವೃದ್ಧಾಪ್ಯ ಅಣಕಿಸುತ್ತದೆ;
ಇಷ್ಟು ದಿನ ನೀನೇನು ಕಡಿದು ಗುಡ್ಡೆ ಹಾಕಿದ್ದು?
ಪರೀತಪಿಸುತ್ತಿರು ಸಾಕು.

15-3-2021. 12.29pm

ನುಡಿಮುತ್ತುಗಳು

ಕ್ಷಮೆ ಕೇಳಲು ಹಿಂಜರಿಯದಿರಿ
ಕ್ಷಮೆ ಕೇಳಿ ಮುಂದುವರೆಯಿರಿ

ಗೊತ್ತಿಲ್ಲದೆ ತಪ್ಪು ಮಾಡಿದಾಗ
ಗೊತ್ತಿಲ್ಲದಂತೆ ಸುಮ್ಮನಿರದಿರಿ.

ತಪ್ಪು ಮಾಡದವರು ಯಾರೂ ಇಲ್ಲ
ತಪ್ಪನ್ನು ಒಪ್ಪಿಕೊಳ್ಳದವ ಅಹಂಕಾರಿ

ತಪ್ಪನ್ನು ತಪ್ಪಲ್ಲಾ ಎಂದು ವಾದಿಸುವವ
ತಪ್ಪನ್ನು ಪ್ರತಿಪಾದಿಸುವ ದುರಹಂಕಾರಿ.
***************

ಹೆಣ್ಣಾಗಿ ಹುಟ್ಟಬೇಡ
ಗಂಡಿನ ಅಡಿಯಾಳಾಗಿರಬೇಡ
ಬದುಕಿಗೆ ಹೆದರಿ ಕುಗ್ಗಬೇಡ
ಹುಟ್ಟಿಸಿದ ದೇವರು ಹುಲ್ಲಾದರೂ
ಮೇಯಿಸುವನೆಂಬ ಗಾದೆ ಮರೆಯಬೇಡ.

************

ಹೆಣ್ಣಾಗಿ ಹುಟ್ಟಿದರೆ
ಗಂಡಿಗೇನು ಕಮ್ಮಿ ನಾನೆಂಬ ಅಹಂಕಾರ
ನಿನ್ನನ್ನೇ ನೀನು ಸಮಾಜದೆದುರು ಕೆಡವಿಕೊಂಡಂತೆ
ಇದ್ದರೆ ಇರಬೇಕು ಸ್ವಾಭಿಮಾನಿಯಾಗಿ
ಎಂಬ ಗಾದೆ ಸುಳ್ಳಾಗಿಸಬೇಡ.
***************

ಕನ್ನಡಿಯ ಮುಂದೆ ಕೂತು
ತನ್ನನ್ನೇ ನೋಡಿಕೊಂಡು ಬೀಗುತ್ತಿದ್ದರೆ
ಏನು ಪ್ರಯೋಜನ?
ಕಂಡವರು ನಿನ್ನಂದವ ಹೊಗಳಿ
ಹೂಂಗುಟ್ಟಿದರೆ ಸೌಂದರ್ಯಕ್ಕೆ ಬೆಲೆಯುಂಟು.
**************

ದುಡ್ಡುಕಾಸಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ
ಬಯಸಿದಾಗ ಸಿಗುವುದೂ ಇಲ್ಲ
ಅದಾಗೇ ಒಲಿದು ಬಂದರೆ
ಎಷ್ಟು ಚೆಂದ ಗೌರವ, ಪ್ರೀತಿ.
*************

ದಾನದಲ್ಲಿ ಲಾಭ ಹುಡುಕಬಾರದು
ಲೋಭಿಯಿಂದ ಸಹಾಯ ಪಡೆಯಬಾರದು
ದಾನ ಮಾಡಿದ್ದು ಪರರಿಗೆ ಗೊತ್ತಾಗಬಾರದು
ಹಾರೈಕೆಯಲ್ಲಿ ಕೇಡು ಬಯಸಬಾರದು.
*************

ಬದುಕು ಕಡಲಿನಂತೆ
ಬಂದು ಹೋಗುವವರು ಅಲೆಗಳಂತೆ
ಅಪ್ಪಳಿಸಿದ ರಭಸಕ್ಕೆ ನೋವು ನಲಿವು ತಾತ್ಕಾಲಿಕ
ಕೊನೆಗೆ ಉಳಿಯುವುದು ಶೇಷ ಮಾತ್ರ.
***************
4-1-2021. 7.40pm

ನುಡಿಮುತ್ತುಗಳು


ಬದುಕಲಿ ಎದುರಾಗುವರು
ತರಾವರಿ ಜನರು
ಕೆಲವರ ಮಾತಿಗೆ ಮರುಳಾಗಿ
ನಾವಾಗುವೆವು ಹುಂಬರು.
**********

ಸತ್ಯವನ್ನು ಇದ್ದಂತೆ
ಒಪ್ಪಿಕೊಳ್ಳುವುದು ಕಷ್ಟ
ಸತ್ಯವನ್ನು ಸುಳ್ಳಂತೆ
ಭಾವಿಸುವುದು ಇಷ್ಟ.
***********

ಕೂಡಿಟ್ಟ ಧನ ಕನಕ ಇರುವತನಕ
ಕಟ್ಟಿದ ಮನೆ ಬದುಕಿರುವತನಕ
ಗಳಿಸಿದ ಹೆಸರು ಕೊನೆಯತನಕ.
************

ಬುದ್ಧಿಯ ಮಾತು ಮನಸು ಕೇಳುವುದಿಲ್ಲ
ಮನಸಿನ ಹಿಡಿತ ಬುದ್ಧಿಗೊಂದು ಸವಾಲು
ಇಬ್ಬರ ಜಟಾಪಟಿಯಲ್ಲಿ ಹೃದಯ ಹೈರಾಣ!
*************

ನೀನು ನೀನಾಗಿರು
ನಿನ್ನೊಳಗಿನವನ ಸದಾ ಜಾಗೃತಗೊಳಿಸುತ್ತಿರು
ಅಲ್ಲಿರುವ ಪ್ರತಿಭೆ ಗುರುತಿಸು
ಅದನರಿತು ಮುನ್ನಡೆದಲ್ಲಿ
ಕಾಣುವೆ ಬದುಕಿನಲ್ಲಿ ಬೆಳಕು.
************

ಇರಬೇಕು ನಂಬಿಕೆ
ಅವರಿವರ ಮೇಲಲ್ಲ
ಅರ್ಹರ ಮೇಲಿಡಿ
ತೊಂದರೆ ಏನಾಗಲ್ಲ.
***********

ಬೇರೆಯವರ ತಪ್ಪುಗಳು
ನಮ್ಮನ್ನು ಆಳುತ್ತವೆ
ಮತ್ತೆ ಅಂಥಹ ತಪ್ಪು
ಮಾಡದಂತೆ ಎಚ್ಚರಿಸುತ್ತದೆ.
***********

ಕಣ್ಣಿನ ರೆಪ್ಪೆಯ ಕೆಳಗೆ
ಬದುಕುವುದ  ಕಲಿತರೆ
ಜೀವನದಲ್ಲಿ ಅರ್ಧದಷ್ಟು
ದುಃಖ ಕಡಿಮೆಯಾದಂತೆ.
***********

ಸಂದೇಹ ಬಂದ ಮೇಲೆ
ಸಂಬಂಧಗಳು ಕೆಡುತ್ತವೆ.
ನಂಬಿಕೆ ಕಳಕೊಂಡ ಮೇಲೆ
ಸಂಬಂಧಗಳು ದೂರವಾಗುತ್ತವೆ.
************

ಸೂರೇ ಇಲ್ಲದ ಮೇಲೆ
ನೆಲೆ ಇರುವುದಾದರೂ ಎಲ್ಲಿ?
ಹಸಿವೂ ಇಂಗದ ಮೇಲೆ
ಬದುಕುವುದೇಗಿಲ್ಲಿ?
***********

ಆಶ್ವಾಸನೆಯೆಂಬುದು ಮನುಷ್ಯನಿಗೆ
ಸಂಜೀವಿನಿ ಇದ್ದಂತೆ
ಪಡೆಯುವ ಭರವಸೆಯಲ್ಲಿ
ಆಯುಷ್ಯ ಮುಪ್ಪಾಗಬಹುದೇ ಹೊರತೂ
ಸಂಜೀವಿನಿ ಸಿಗುವುದು ಕಷ್ಟ.
**************

ನಿತ್ಯದ ಶ್ರಮ ಜೀವಿ
ಅಡುಗೆ ಮನೆಯ ಸಂಗಾತಿ
ಚೌಕಾಸಿ ಮಾಡದಿರಿ
ಒಗ್ಗರಣೆ ಘಾಟು ತಾಗೀತು!
**************

ಪಕ್ಕೆ ಹಿಡಿದರೆ ಬಿಡು ಅದ್ಯಾವ ಲೆಕ್ಕ
ಅಪರೂಪದ ನೆಂಟ ಎಷ್ಟು ದಿನ ಇದ್ದಾನು?
ಒಂದಷ್ಟು ಮುಲಾಮು ಬಳಿದುಬಿಡು
ಎರಡು ದಿನ ಇದ್ದು ತಾನಾಗೆ ತೆರಳುವುದು.
************

ದುಃಖವಾದಾಗ ಬಿಕ್ಕಿ ಬಿಕ್ಕಿ ಅತ್ತುಬಿಡು
ಹೃದಯ ಹಗುರಾಗುವವರೆಗೂ
ಮತ್ತೊಬ್ಬರಲ್ಲಿ ಹೇಳಿಕೊಳ್ಳುವುದಕ್ಕಿಂತ
ಇದೆಷ್ಟೋ ವಾಸಿ.
************

ನಿರಂತರ ಕಲಿಯುತ್ತಲೇ ಇರಬೇಕು
ಕಲಿಕೆಗೆ ಕೊನೆಯೆಂಬುದೇ ಇಲ್ಲ
ಅದರ ಅಗಾಧತೆ ಅಪಾರ
ಕಳೆದಿರುವ ಆಯುಷ್ಯ ಮತ್ತೆ ದೊರಕಿದರೂ
ಮುಗಿಸುವೆನೆಂಬುದು ಸುಳ್ಳು
ಅದರ ವ್ಯಾಪ್ತಿ ಅಸೀಮ!
*************

7-11-2020. 7.15am

ನುಡಿಮುತ್ತುಗಳು


ಅಗ್ನಿಯೆಂಬುದು
ಕೇವಲ ಅಗ್ಗಿಷ್ಟಿಕೆಯಲ್ಲಷ್ಟೇ ಇಲ್ಲ
ಪ್ರೀತಿಸುವ ಪ್ರತೀ
ಹೃದಯದಲ್ಲೂ ಅಡಗಿದೆ.
***********

ಕಲ್ಲು ಹೊಡೆದು
ಕೊಳದ ನೀರನ್ನು
ಅಲುಗಾಡಿಸಬಹುದು
ಆದರೆ ಮನಸ್ಸನ್ನಲ್ಲ
ಅದು ಮಾ…. ಹಠಮಾರಿ
ತನಗೆ ಒಗ್ಗದ ಹೊರತೂ
ಅಲುಗಾಡದು.
*************

ಮನಸಿನ ಕೂಗು
ಕೇಳುವವರಿಲ್ಲವಾದಾಗ
ಹೃದಯದಕಾಗುವ ನೋವು
ದಿಕ್ಕಿಲ್ಲದ ಪರದೇಶಿಯಂತೆ.
************

ಯಾರಿಗೂ ಯಾರಿಲ್ಲ
ಯಾರಿಗಾಗಿ ಯಾರಾಗೋಲ್ಲ
ಯಾವ ದಾರಿಲೋದ್ರೂ
ಯಾರನ್ನು ನಂಬಿದರೂ
ಯಾಮಾರ್ಸೋವರೆ ಎಲ್ಲ.
************

ಒಳ್ಳೆಯದಕ್ಕೆ ಬೆಲೆ ಇಲ್ಲ
ಒಳ್ಳಯವರಿಗೆ ಕಾಲವಲ್ಲ
ಒಳ್ಳೆಯದಾಗುವುದ ಕಂಡರೆ
ಒಪ್ಪುವ ಮನಸ್ಸು ಜನಕಿಲ್ಲ
***********

ಸಾವೆಂಬುದು ಇದ್ದವರ
ಒಳಗೊಳಗೇ ಕೊರೆಯುವ ಬರ್ಚಿ
ರಕ್ತ ಸೊರೋದಿಲ್ಲ ಕಣ್ಣಿಗೆ ಕಾಣೋದಿಲ್ಲ
ಎದೆ ತಿವಿಯುವುದು ಬಿಡೋದಿಲ್ಲ.
*************

ಉನ್ಮಾದದ ಕ್ಷಣಗಳು
ಮನಸ್ಸಿನ ಭಾವನೆಗಳನ್ನು ಕೆರಳಿಸಬಹುದು
ಆದರೆ ಅದು ಶಾಶ್ವತವಲ್ಲ.

ಕೆರಳಿದ ಮನಸ್ಸು
ತಹಬಂದಿಗೆ ಬಂದಾಗ ಅರಿವಾಗುವುದು
ತನ್ನ ವರ್ತನೆ ಎಷ್ಟು ಸರಿ?

ಆದುದರಿಂದ ಮನಸ್ಸು
ಕೆರಳಿದಾಗ ಶಾಂತವಾಗಿರಬೇಕು
ಬುದ್ಧಿಯ ಹಿಡಿತದಲ್ಲಿ ಮನಸ್ಸು ಬಂಧಿಯಾಗಿರಬೇಕು.
************

ಇನ್ನೊಬ್ಬರಿಗೆ ಉಪದೇಶ ಮಾಡುವುದು ಸುಲಭ
ಇನ್ನೊಬ್ಬರನ್ನು ಹೊಗಳುವುದೂ ಸುಲಭ
ಆದರೆ ಉಪದೇಶ ಅಳವಡಿಸಿಕೊಂಡು
ಅವರಂತೆ ಆಗುವುದು ಬಹಳ ಕಷ್ಟ.
************

ಬದುಕಿನ ದಾರಿ ಕ್ರಮಿಸುವುದು
ನಾವಂದುಕೊಂಡಷ್ಟು ಸುಲಭದಲ್ಲಿಲ್ಲ
ಅಕ್ಕಪಕ್ಕ ಕಾಲೆಳೆಯುವವರ ದಂಡೇ ಇದೆ
ಎಷ್ಟು ಹುಷಾರಾಗಿದ್ದರೂ ಸಾಲದು.
************

ಬಡವರ ಕಣ್ಣಲ್ಲಿ
ಬೆಳಗುವುದು ಜ್ಯೋತಿ
ಭರವಸೆ ಈಡೇರಿದಾಗ.

ಶ್ರೀಮಂತರ ಕಣ್ಣಲ್ಲಿ
ಆರುವುದು ಜ್ಯೋತಿ
ದುಡ್ಡು ಕಳೆದುಕೊಂಡಾಗ.
**********

ಕೊಡುವವರು ಇರುವರೆಂದು
ಬೇಕಾಬಿಟ್ಟಿಯಾಗಿ ಬೇಡುವುದು ಸರಿಯಲ್ಲ
ದುಡಿದು ಬದುಕುವುದು
ಸಾರ್ಥಕವಾದ ಬದುಕು.
**************

ನಮ್ಮ ಸರ್ವತೋಮುಖ ಬೆಳವಣಿಗೆಗೆ
ಮುಂದೆ ನಾವೇನು ಮಾಡಬೇಕು ಎಂದು
ಸಮಗ್ರವಾಗಿ ಶಾಂತವಾಗಿ ಯೋಚಿಸಿ
ಗುರಿ ತಲುಪುವೆನೆಂಬ ನಂಬಿಕೆ ಛಲದೊಂದಿಗೆ
ನಿಧಾನವಾಗಿ ಮುನ್ನಡೆದಲ್ಲಿ
ಬರುವ ಏಳುಬೀಳುಗಳನ್ನು
ಸದೃಢವಾಗಿ ಎದುರಿಸುತ್ತಾ ಗುರಿ
ತಲುಪುವುದು ನಿಶ್ಚಿತ.
************

13-8-2020. 3.44pm