ಬೋಲೊ ಭಾರತ್ ಮಾತಾಕಿ….

“ಜೈ ಹಿಂದ್”

ಆಗಿನ ಪ್ರಧಾನಿ ದಿ|| ಇಂದಿರಾ ಗಾಂಧಿಯವರು ಆಗಸ್ಟ 15ರಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ದೇಶವನ್ನು ಕುರಿತು ಮಾಡಿದ ಭಾಷಣ ಆಕಾಶವಾಣಿ ವಿವಿಧ ಭಾರತಿಯಲ್ಲಿ ಭಿತ್ತರವಾಗುತ್ತಿತ್ತು. ಅದು ಟೀವಿ ಇಲ್ಲದ ಕಾಲ. ಅವರ ಜೈ ಜೈ ಕಾರದ ಘೋಷ, ಆ ಧ್ವನಿ ಕಿವಿಯಲ್ಲಿನ್ನೂ ಮೊಳಗುತ್ತಿದೆ. ಆ ಒಂದು ಕಂಠದ ಗತ್ತು ಮತ್ಯಾರ ಧ್ವನಿಯಲ್ಲಿ ಕೇಳಲು ಸಾಧ್ಯ?

ಸ್ವಾತಂತ್ರ್ಯ ದಿನಾಚರಣೆ ಅಂದರೆ ಹಾಗೆ ಕೆಂಪು ಕೋಟೆ ಏನು ಹಳ್ಳಿ ಹಳ್ಳಿಗಳಲ್ಲಿ ಹಬ್ಬದ ವಾತಾವರಣ. ನಮ್ಮ ಹಳ್ಳಿ ಹಾಗೂ ಸುತ್ತಮುತ್ತ ಸ್ವಾತಂತ್ರ್ಯದ ಕಿಚ್ಚು ಕಂಡ ಅನೇಕ ವಯಸ್ಸಾದ ಹಿರಿಯರು ಇದ್ದರು ಇಂದಿರಾ ಗಾಂಧಿ ಕಾಲದಲ್ಲಿ.

ನಾನಿನ್ನೂ ಚಿಕ್ಕವಳು. ಹಳ್ಳಿಯ ಸರ್ಕಾರಿ ಪುಟ್ಟ ಶಾಲೆಯಲ್ಲಿ ಸ್ವಾತಂತ್ರ ದಿನೋತ್ಸವದ ಸಂಭ್ರಮ ವರ್ಣನಾತೀತ. ನಾಲ್ಕಾರು ದಿನಗಳಿಂದಲೆ ಈ ದಿನಕ್ಕಾಗಿ ಎಷ್ಟೊಂದು ತಯಾರಿ!

ಮಲೆನಾಡಿನಲ್ಲಿ ಮಳೆಗಾಲ ಬಂತೆಂದರೆ ತರಾವರಿ ಹೂವುಗಳನ್ನು ಬೆಳೆಯುವುದು ಎಲ್ಲರ ಮನೆಯ ಹೆಂಗಳೆಯರ ಪೈಪೋಟಿ. ಯಾರ ಮನೆಯಲ್ಲೇ ನೋಡಲಿ ಹಿತ್ಲಾಕಡೆ(ಮನೆಹಿಂದೆ) ಮನೆ ಮುಂದೆ ಅಂಗಳದಲ್ಲಿ ಡೇರೆ ಹೂವು ಸೇವಂತಿಗೆ ಹೂವುಗಳು ಈ ಸ್ವಾತಂತ್ರದ ಹಬ್ಬಕ್ಕೆ ನಳನಳಿಸುತ್ತಿರುತ್ತವೆ. ಶ್ರಾವಣದಲ್ಲಿ ಬರುವ ಹಬ್ಬಕ್ಕೆ ಬೇಕೆಂದು ಮೊದಲೇ ಹೂ ಬೆಳೆಯುವ ಪೂರ್ವ ತಯಾರಿ ಕೂಡಾ ಹೌದು.

ಆಗೆಲ್ಲ ಶಾಲೆಯ ಯುನಿಫಾರ್ಮ ನೀಲಿ ಬಣ್ಣದ್ದು. ಶೂ ಅಂತೂ ಇಲ್ಲವೇ ಇಲ್ಲ. ಬರಿಗಾಲ ನಡಿಗೆ. ಬಳೆ, ರಿಬ್ಬನ್ನು, ಹೂ ಮುಡಿಬಾರದು,ಕುಂಕುಮ ಇಡಬಾರದು ಎಂಬ ಕಾಯ್ದೆನೂ ಇಲ್ಲ. ಪಾಟೀಚೀಲ ಅಂದರೆ ಬಟ್ಟೆಯಲ್ಲಿ ಹೊಲಿದ ಈಗಿನ ಸಾಮಾನು ತರುವ ಚೀಲದಂತಿರುತ್ತಿದ್ದವು ಸಾಮಾನ್ಯವಾಗಿ.

ಮತ್ತೆ ಈ ಸ್ವಾತಂತ್ರದ ತಯಾರಿ ಉಗುರಿಗೆ ಬಣ್ಣ ಅಂದರೆ ಮನೆಯಲ್ಲಿ ಬೆಳೆದ ಮದರಂಗಿ ಸೊಪ್ಪನ್ನು ರುಬ್ಬಿ ರಾತ್ರಿ ಉಗುರಿನ ಮೇಲಿಟ್ಟು ಎಲೆಯಿಂದ ಕಟ್ಟಿ ಬೆಳ್ಳಂಬೆಳಗ್ಗೆ ಕೆಂಪಾಜ? ನೋಡುವ ಆತುರ. ನೀಲಿ ಫ್ರಾಕ್ ಇಸ್ತ್ರಿ ಅಂದರೆ ಒಪ್ಪವಾಗಿ ಮಡಚಿ ಅಪ್ಪ ಮಲಗುವ ದಿಂಬಿನ ಕೆಳಗೆ ಇಡುವುದು. ಅವರ ತಲೆ ಭಾರ ಇರುತ್ತಲ್ಲ!

ಇಂಥದ್ದೇ ಹೂ ಈ ದಿನಕ್ಕೆ ಮುಡಿಬೇಕು ಅಂತ ಮೊದಲೇ ಗಿಡದ ಮೊಗ್ಗನ್ನು ಆರಿಸೋದು. ದೇವರೆ ದೇವರೆ ಆ ದಿನಕ್ಕೆ ಅರಳಿಸು, ಮೊದಲೆ ಅರಳೋದು ಬೇಡಾ ಎಂಬ ಪ್ರಾರ್ಥನೆ. ಕಡ್ಠಿ,ಡೇರೆ, ಬಿಂಜರುಕಾಲು ಸೇವಂತಿಗೆ ಹೀಗೆ ಆಯ್ಕೆ. ಹಾಗೆ ಶಾಲೆಗೆ ತರಾವರಿ ಹೂವೆಲ್ಲ ಕೊಯ್ದು ಒಯ್ಯೋದು, ಅಕ್ಕೋರಿಗೆ ಗಿಡದಲ್ಲಿ ಮೊದಲು ಬಿಟ್ಟ ಡೇರೆ ಹೂ ಕೊಟ್ಟು ಸಂಭ್ರಮಿಸೋದು ಮಿಕ್ಕ ದಿನಗಳಲ್ಲಿ.

ರಾತ್ರಿ ಅರೆಬರೆ ನಿದ್ದೆ, ಎಷ್ಟೊತ್ತಿಗೆ ಬೆಳಗಾಗುತ್ತೊ ಅದೆಷ್ಟು ಬೇಗ ಶಾಲೆಗೆ ಹೋಗ್ತೀನೊ ಎಲ್ಲ ಅಲಂಕಾರ ಮಾಡಿಕೊಂಡು : ಸಿರ್ಸಿ ಜಾತ್ರೆ ರಿಬ್ಬನ್ನು, ಬಳೆ, ಇಸ್ತ್ರಿ ಅಂಗಿ, ಹೂವು ಎಲ್ಲ ಇರುಳುಗಣ್ಣಿನ ರಾತ್ರಿಯ ಕನಸು. ಪ್ರತೀ ವರ್ಷದ ಗಡಿಬಿಡಿ ಅವತಾರ ಅಮ್ಮನಿಗೆ ಗೊತ್ತು. ಆದರೂ ತಲೆ ಬಾಚಿಕೊಡುವಾಗ ಹಾಂಗೆ ಒಂದೆರಡು ವಟವಟಾ “ಥೊ….ಕೂಸೆ ಎಂತಕ್ಕೀನಮನಿ ಗಡಿಬಿಡಿ ಮಾಡ್ತೆ. ಸಮಾ ಕೂತಕ. ಜಡೆ ಹಣಿಯದು ಹ್ಯಾಂಗೆ ಈ ನಮನಿ ಮಾಡಿದ್ರೆ?” ಆದರೆ ನನ್ನ ಗಮನವೆಲ್ಲ ಶಾಲೆಯ ಕಡೆ.

ಮೊದಲಿನ ದಿನವೆ ಸಗಣಿ ಹಾಕಿ ಶಾಲೆಯ ಆವರಣ ತೊಡೆದು ರಂಗೋಲಿ ಹಾಕಿ ಶೃಂಗಾರಗೊಂಡದ್ದು ಒಮ್ಮೊಮ್ಮೆ ಈ ಮಳೆ ಬಂದು ಹಾಳು ಮಾಡಿದರೆ ಎಷ್ಟು ಬಯ್ಕೊತಾ ಇದ್ವಿ. ” ಗಣೇಶನಿಗೆ ಕಾಯಿಟ್ಟು ಮಳೆ ಬರದೇ ಇರಲಿ ಅಂತ ಬೇಡಿಕೊಂಡಿದ್ದು ಅವನಿಗೆ ಕೇಳಿದ್ದೇ ಇಲ್ಲೆ ಹದಾ?” ನಮ್ಮನಮ್ಮಲ್ಲೇ ಮಾತು.

ಊರ ಗಣ್ಯರು ಬಂದು ದ್ವಜಾರೋಹಣ ಮಾಡುತ್ತಿದ್ದದ್ದು ಬೆಳಗ್ಗೆ ಎಂಟು ಗಂಟೆಯ ಒಳಗಾದರೂ ನಾವೆಲ್ಲ ಮಕ್ಕಳು ಶಾಲೆಯಲ್ಲಿ ಜಮಾಯಿಸುತ್ತಿದ್ದು ಏಳು ಗಂಟೆಯ ಒಳಗೇ. ಅದೇನು ಸಂಭ್ರಮ, ಅದೇನು ಓಡಾಟ!!

ದ್ವಜಾರೋಹಣದ ನಂತರ ರಾಷ್ಟ್ರ ಗೀತೆ ಹೇಳಿ ಮಾಸ್ತರು, ಗಣ್ಯರಿಂದಲ್ಲದೆ ಒಂದೆರಡು ಮಕ್ಕಳಿಂದಲೂ ಭಾಷಣ ಜೈ ಜೈ ಕಾರ ಜೋರಾಗಿ ಇರ್ತಾ ಇತ್ತು. ಮಕ್ಕಳಿಗೆಲ್ಲ ಚಾಕ್ಲೇಟು, ಪೆಪ್ಪರ್ಮೆಂಟು ಹಂಚಿ ಅಂತ ಮಾಸ್ತರು ಕೊಡುವಾಗ ಅಲ್ಲೂ ನಾನು ನಾನು ಅಂತ ಪೈಪೋಟಿ.

ಆಗೆಲ್ಲ ಕ್ಲಾಸ್ ಮೊನಿಟರು ಪಿನಿಟರು ಇಲ್ಲ ಬಿಡಿ. ಇದ್ದಿದ್ದೇ ಒಂದೊಂದು ಕ್ಲಾಸಲ್ಲಿ ಐದರಿಂದ ಆರು ಎಂಟು ಹತ್ತು ಮಕ್ಕಳು ಒಂದರಿಂದ ಏಳನೇ ಕ್ಲಾಸಿನವರೆಗಿದ್ದ ಶಾಲೆ ಒಟ್ಟೂ ಮಕ್ಕಳ ಸಂಖ್ಯೆ ಒಂದೈವತ್ತು ಇರಬಹುದು. ಇರೋದೆರಡು ಕ್ಲಾಸ್ ರೂಮು. ಮಧ್ಯೆ ಬಟ್ಟೆ ಪಾರ್ಟೀಷನ್ ಮಾಡಿ ನಾಲ್ಕು ರೂಮು. ಇಂಥ ಸಂದರ್ಭದಲ್ಲಿ ಕರ್ಟನ್ ತೆಗೆದು ದೊಡ್ಡ ಹಾಲ್.

ಆದರೆ ಈಗ ಶಾಲೆ ತುಂಬಾ ಸುಧಾರಣೆ ಕಂಡಿದೆ. ಇನ್ನೂ ಎರಡು ಕೋಣೆ ಕಟ್ಟಿದ್ದು ಅಂಗನವಾಡಿ ಶಾಲೆ ಪಕ್ಕದಲ್ಲಿ ಅಡಿಗೆ ಕೋಣೆ, ಶೌಚಾಲಯ, ಶಿಕ್ಷಕರಿಗೆ ಉಳಿಯಲು ಪುಟ್ಟ ಮನೆ ಎಲ್ಲಾ ನಿರ್ಮಾಣವಾಗಿದೆ.

ಮಕ್ಕಳೆಲ್ಲ ಪೂರ್ವ ತಯಾರಿಯಲ್ಲಿ ನಡೆಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಊರ ಮಂದಿಯೆಲ್ಲ ಜಮಾಯಿಸುತ್ತಿದ್ದರು. ಸುಮಾರು ಹತ್ತು ಗಂಟೆಗೆ ಕಾರ್ಯಕ್ರಮ ಶುರುವಾಗಿ ಎರಡು ಗಂಟೆಗೆಲ್ಲ ಮುಗಿದು ಮನೆ ಸೇರಿ ಬೆಳಗಿನ ತಿಂಡಿನೂ ತಿನ್ನದೆ ಶಾಲೆಗೆ ಓಡಿ ಹೋದ ಹೊಟ್ಟೆ ಹಸಿವು ಆಗ ನೆನಪಾಗಿ ಅಮ್ಮ ಮಾಡಿದ ಸಿಹಿ ಪೊಗದಸ್ತಾದ ಅಡಿಗೆ ಊಟ ಮಾಡಿ ಮಲಗ್ತಿದ್ವಾ? ಇಲ್ಲಪ್ಪಾ ಇಲ್ಲ. ಅಪ್ಪ ಮಲಗೋದೆ ಕಾಯ್ತಾ ಇದ್ದು ಪಕ್ಕದ ಮನೆಗೆ ಓಟ. ಊರ ಮಕ್ಕಳೆಲ್ಲ ಸೇರಿ ಆ ದಿನದ ಬಗ್ಗೆ ಭಯಂಕರ ಚರ್ಚೆ. ಜೊತೆಗೆ ನೀ ಎಷ್ಟು ಚಾಕ್ಲೆಟ್,ಪೇಪರ್ಮೆಂಟು ತಿಂದೆ? ಅದೂ ಇದೂ ಎಲ್ಲ ಒಬ್ಬರನ್ನೊಬ್ಬರು ತನೀಖೆ ಆಗಲೇಬೇಕಿತ್ತು.

ಸಾಯಂಕಾಲ ಮನೆ ಜಗುಲಿಯಲ್ಲಿ ಕೂತು ಮನೆ ಮಂದಿಯೆಲ್ಲ ಶಾಲೆಯ ಕಾರ್ಯಕ್ರಮದ ಬಗ್ಗೆ ಮಾತಾಡುತ್ತಿರುವಾಗ ಅಪ್ಪ ” ಸ್ವಲ್ಪ ಸುಮ್ನಿರ್ರೆ. ಇಂದಿರಾ ಗಾಂಧಿ ಭಾಷಣ ಕೇಳಿ” ಅಂತ ರೆಡಿಯೊ ಸೌಂಡ್ ಜೋರಾಗಿ ಮಾಡಿ ಬೆಳಿಗ್ಗೆ ಕೇಳಿದ್ದು ಸಾಕಾಗದೆ ಮರು ಪ್ರಸಾರವಾಗಿದ್ದು ನಮಗೂ ಕೇಳಿಸುವ ಗತ್ತು. ಎಲ್ಲರೂ ಕದಂಕೋಲ್. ಅಪ್ಪ ಮಾತ್ರ ಮಧ್ಯೆ ಮಧ್ಯೆ ಭಾಷಣದ ಮಾತಿನ ವರ್ಣನೆ ಮಾಡಿದಾಗ ಅಜ್ಜಿ “ಈಗ ನೀ ಮಾತಾಡಿದರೆ ಅಡ್ಡಿಲ್ಯನಾ? ಕೂಸು ಎಂತದೊ ಹೇಳ್ತಾ ಇತ್ತು ಶಾಲೆ ಸುದ್ದಿ.” ತಕಳಪ್ಪ ಅಪ್ಪ ಹಿ…ಹಿ.. ಸೈಲೆಂಟು. ಆಗೆಲ್ಲ ನಾವು ಮಕ್ಕಳು ಅಜ್ಜಿ ಪಕ್ಷ.

ಆದರೆ ಇಂದಿರಾ ಗಾಂಧಿಯವರು ಹಿಂದಿಯಲ್ಲಿ ಮಾತಾಡಿದ್ದು ಅಲ್ಲಿ ಇರೊ ಯಾರಿಗೂ ಅರ್ಥ ಆಗದೇ ಇದ್ದರೂ ಅವರ ಭಾಷಣ ಕೇಳೋದು ಎಲ್ಲರಿಗೂ ಖುಷಿ. “ಎಷ್ಟು ಚಂದ ಮಾತಾಡ್ತು ನೋಡ್ರ” ಫುಲ್ ವಾಲ್ಯೂಮ್ ಊರೆಲ್ಲ ಕೇಳಬೇಕು ಹಾಗೆ.

ಆಹಾ! ಆ ವಾಯ್ಸ ಮರೆಯೋಕೆ ಸಾಧ್ಯವೇ?

14-8-2018. 2.33pm

Advertisements

ಏಪ್ರಿಲ್ ಫೂಲ್

ಇನ್ನೂ ಸೂರ್ಯ ಕಣ್ಣು ಬಿಟ್ಟಿದ್ದನೋ ಇಲ್ಲವೋ, ನನಗೆ ಮಾತ್ರ ಪಟಕ್ ಅಂತ ಬೇಗ ಎಚ್ಚರವಾಯಿತು. ಅತ್ತ ಇತ್ತ ಹೊರಳಾಡಿ ನಿದ್ದೆ ಬಾರದೇ ಎದ್ದು ಕೂತೆ. ಇದು ಬಹಳ ಏಕಾಂತದ ಸಮಯವಲ್ಲವೆ? ತಲೆಯಲ್ಲಿ ಹೊಸ ಹೊಸ ಯೋಚನೆ, ಆವಿಷ್ಕಾರಗಳು ಈ ದಿನವೆಲ್ಲ ಏನು ಮಾಡಲಿ? ಒಂದಷ್ಟು ದಿನ ನಿತ್ಯದ ಕೆಲಸ ಯಾವಾಗಲೂ ಇದ್ದಿದ್ದೇ. ಆದರೆ ಏನಾದರೂ ವಿಶೇಷ ದಿನಗಳಲ್ಲಿ ಇನ್ನೊಂದಷ್ಟು ತರಾವರಿ ಯೋಚನೆಗಳು ಮುತ್ತಿಕೊಳ್ಳುವುದು ಸ್ವಾಭಾವಿಕ. ವರ್ಷ ಎಷ್ಟಾದರೇನು? ಈ ಉತ್ಸಾಹ ಅನ್ನೋದು ನನಗೆ ಸ್ವಲ್ಪ ಹೆಚ್ಚೇ ಅನ್ನಬಹುದು. ಅದ್ಯಾಕೋ ಗೊತ್ತಿಲ್ಲ ; ಒಮ್ಮೊಮ್ಮೆ ನನ್ನ ಬಗ್ಗೆಯೇ ಆಶ್ಚರ್ಯ ಪಟ್ಟಿದ್ದೂ ಇದೆ. ಇದು ಹೊಗಳಿಕೆಗಾಗಿ ಅಲ್ಲ ಮತ್ತೆ.

ಈಗಿನ ಕೆಲವು ಮಕ್ಕಳ ಸೋಂಬೇರಿತನ ನೋಡಿ ” ಏನ್ರೇ ನನಗಿಷ್ಟು ವಯಸ್ಸಾದರೂ ಇನ್ನೂ ನನಗೆ ಉತ್ಸಾಹ ಕಡಿಮೆ ಆಗಿಲ್ಲ, ನೀವುಗಳು ಇಷ್ಟು ಚಿಕ್ಕ ವಯಸ್ಸಿನಲ್ಲೇ ಅಯ್ಯೋ ಯಾರು ಮಾಡ್ತಾರೆ? ಯಾರು ಹೋಗ್ತಾರೆ ಅಂತ ಆಲಸ್ಯತನ ತೋರಿಸ್ತೀರಲ್ಲಾ, ಸೋಂಬೇರಿಗಳು. ಹದಿ ವಯಸ್ಸಲ್ಲಿ ಹೇಗಿರಬೇಕು ಗೊತ್ತಾ? ಒಳ್ಳೆ ಜಿಂಕೆ ಮರಿ ತರ ಇರಬೇಕಪ್ಪಾ. ಥೋ..ನಿಮ್ಮ. ಎದ್ದೇಳಿ ” ಅಂತ ಬಯ್ದು ಹುರಿದುಂಬಿಸಿದಾಗೆಲ್ಲ ಒಳಗೊಳಗೇ ನನ್ನ ಬಗ್ಗೆ ಹೆಮ್ಮೆ ಪಡ್ತೀನಿ. ಹೀಗೊಂದು ಘಟನೆ ಈ ಏಪ್ರಿಲ್ ಒಂದು ಬಂದಾಗೆಲ್ಲ ನೆನಪಿಸುತ್ತದೆ.

ಅದೊಂದು ಚಾಳದ ಮನೆ. ಒಟ್ಟೂ ಐದು ಮನೆ. ಮೇಲ್ಗಡೆ ಎರಡು ದೊಡ್ಡ ಮನೆ, ಕೆಳಗಡೆ ಮೂರು ಚಿಕ್ಕ ಮನೆಗಳು. ಅಲ್ಲೇ ಒಂದು ಬ್ಯಾಚುಲರ್ ರೂಮು ಬೇರೆ ಇತ್ತು. ಕಂಪೌಂಡಲ್ಲಿ ನಾಲ್ಕಾರು ಚಿಕ್ಕ ಮಕ್ಕಳು, ಸ್ವಲ್ಪ ದೊಡ್ಡವರು ಒಂದಿಬ್ಬರು. ಜೊತೆಗೆ ಬ್ಯಾಚುಲರ್ ರೂಮಿನ ಇಬ್ಬರು ಹುಡುಗರು ನಮ್ಮನೆಯ ಆಗಾಗ ಊಟದ ನೆಂಟರು. ಪಾಪ! ಅದೇನು ಬೇಯಿಸಿಕೊಳ್ತಾರೋ ಏನೋ ಅಂತ ನಾನೇ ಬನ್ರೋ ನಮ್ಮನೆಗೆ ಊಟಕ್ಕೆ ಅಂತ ಕರಿತಿದ್ದೆ.

ಇಷ್ಟು ವರ್ಷವಾದರೂ ಇನ್ನೂ ನಮ್ಮ ಅವರ ಫ್ಯಾಮಿಲಿ ನಂಟು ಬಿಟ್ಟಿಲ್ಲ. ಹೀಗಿರುವಾಗ ಅದೇ ಕಂಪೌಂಡಿನಲ್ಲಿರುವ ಒಬ್ಬರು ಮಕ್ಕಳೆಲ್ಲ ಕರೆಯುವ ಅಂಕಲ್ಲು ತಾವೂ ಮಕ್ಕಳೊಂದಿಗೆ ಮಕ್ಕಳಾಗಿ ಆಟ ಆಡುತ್ತಿದ್ದರು. ಚಿಕ್ಕ ಚಿಕ್ಕ ವಿಷಯಕ್ಕೂ ಗಾಭರಿಪಡುವ ಆಸಾಮಿ. ಅಷ್ಟೇ ಟೆನ್ಸಷನ್ ಮನುಷ್ಯ.

ಅವರಿಗೊಬ್ಬ ಚಿಕ್ಕ ಮಗನೂ ಇದ್ದು ಅವನು ಒಂದು ಕ್ಷಣ ಆಚೀಚೆ ಆಗಲಿಕ್ಕಿಲ್ಲ “ಚೇಚೀ ಎಲ್ಲೋದ್ಯೋ” ಅಂತ ಇಡೀ ಕಂಪೌಂಡೆಲ್ಲ ಹುಡುಕಾಡಿಬಿಡೋರು. ಅದೇನೊ ಗಾದೆ ಇದೆಯಲ್ಲ “ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಾಡಿದ್ನಂತೆ” ಅಂತ ಹಾಗೆ. ಕಡೆಗೆ ನೋಡಿದರೆ ಅವರ ಮನೆಯಲ್ಲೇ ಇದ್ದದ್ದು ಕಂಡು “ಅಯ್ಯೋ ಮಗನೆ ನಾ ಎಷ್ಟು ಗಾಬರಿ ಆಗಿಬಿಟ್ಟಿದ್ದೆ ಗೊತ್ತಾ? ” ಅಂತ ಡೈಲಾಗ್ ಬಿಡೋರು.

ನನಗೆ ಇವರ ರೀತಿ ಸದಾ ನಗು ಬರ್ತಿತ್ತು. ಇವರ ವಿಷಯ ಹೇಳಿಕೊಂಡು ಮನೆಯಲ್ಲಿ ಎಷ್ಟು ಸಾರಿ ನಕ್ಕಿದ್ದೇನೊ ಗೊತ್ತಿಲ್ಲ. ಒಂತರಾ ವಿಚಿತ್ರ ಮನುಷ್ಯ. ಒಂದಿನ ಅವರಿಲ್ಲ ಅಂದರೆ ಕಂಪೌಂಡಲ್ಲಿ ಸ್ಮಶಾನ ಮೌನ. ಎಲ್ಲ ಮನೆಯವರು ಅಷ್ಟೇ ಅನ್ಯೋನ್ಯವಾಗೂ ಇದ್ವಿ. ಚೆನ್ನಾಗಿ ಇತ್ತು ಆ ದಿನಗಳು.

ಇದ್ದಕ್ಕಿದ್ದಂತೆ ಒಂದು ಐಡಿಯಾ ಬಂತು ನನ್ನ ತಲೆಗೆ. ಅಲ್ಲಿರುವ ಸ್ವಲ್ಪ ದೊಡ್ಡ ಮಕ್ಕಳನ್ನೆಲ್ಲ ಸೇರಿಸಿಕೊಂಡು ” ಒಂದು ಐಡಿಯಾ ; ” ಅಂಕಲ್ಲಿಗೆ ಈ ಏಪ್ರಿಲ್ ಒಂದಕ್ಕೆ ಸಖತ್ತಾಗಿ ಫೂಲ್ ಮಾಡೋಣ. ಬೆಳಿಗ್ಗೆ ಬೇಗ ಎದ್ದೇಳ್ತೀರಾ? ಮನೆಯಲ್ಲಿ ಯಾರಿಗೂ ಕ್ಲೂ ಕೊಡಬೇಡಿ. ಸೈಲೆಂಟಾಗಿ ನೀವೆಲ್ಲಾ ಮನೆಯಿಂದ ಆರು ಗಂಟೆ ಒಳಗಡೆ ಕಂಪೌಂಡಿಗೆ ಬರಬೇಕು ಆಯ್ತಾ? ಆಮೇಲೆ ಹೇಳ್ತೀನಿ ಏನು ಅಂತಾ” ಅಂದೆ. ಈ ಸೋಂಬೇರಿ ನನ್ಮಕ್ಕಳು ” ಅಯ್ಯೋ ಯಾರು ಅಷ್ಟು ಬೇಗ ಏಳ್ತಾರೆ, ಬೇಜಾರು ಆಂಟಿ ಸ್ವಲ್ಪ ಲೇಟಾಗಿ ಎದ್ದರೆ ಆಗೋಲ್ವಾ? ” ಅಂತ ಮೂತಿ ಊದಿಸಿದರು. ನನಗೋ ಕೋಪ ಬಂದು ಆಗ ಬಯ್ದಿದ್ದೆ ಶುದ್ಧ ಸೋಂಬೇರಿಗಳು ನೀವೆಲ್ಲಾ ಅಂತ.

ನನ್ನ ಐಡಿಯಾಗೆ ಬೆಳಗಿನ ಮೂಹೂರ್ತವೇ ಆಗಬೇಕಿತ್ತು. ಸರಿ ಅಂತ ಅವರೆಲ್ಲ ಹೊರಟೋದರೂ ನನ್ನ ತಲೆಲಿ ಗುಂಗು ಇಳಿದಿರಲಿಲ್ಲ. ಅದಕ್ಕೆ ಬೇಳಿಗ್ಗೆ ಬೇಗ ಎಚ್ಚರವೂ ಆಗಬೇಕಾ?

ಮೆಲ್ಲಗೆ ಎದ್ದು ಬೆಳಗಿನ ಕಾರ್ಯಕ್ರಮ ಮುಗಿಸಿದೆ. ಓನರ್ ಮನೆ ಸೈಡಿಂದ ರಸ್ತೆಗೆ ಬರುವ ಹಾದಿ. ಒಮ್ಮೆ ಬಂದು ಕಣ್ಣಾಡಿಸಿದೆ. ವಾಪಸ್ ಬಂದು ಸೀದಾ ಅಂಕಲ್ ಮಹಾಷಯರ ಮನೆ ಬಾಗಿಲು ಬಡಿದೆ. ಅವರೇ ಎದ್ದು ಕಿಟಕಿಯಲ್ಲಿ ಬಗ್ಗಿದರು. “ನೋಡ್ರೀ ನಾನು ಹಾಲು ತರಲು ಹೋಗಿದ್ದೆ, ಓನರ್ ಮನೆ ಕಂಪೌಂಡಲ್ಲಿ ನೀವು ದಿನಾ ಗಾಡಿ ನಿಲ್ಲಿಸ್ತಾ ಇದ್ರಿ ಅಲ್ವಾ? ಅಲ್ಲಿ ಕಾಣ್ತಾ ಇಲ್ಲಾ. ಗೇಟು ಬೇರೆ ತೆಗೆದಿದೆ. ಯಾಕೋ ಡೌಟು ಬಂತು, ಅದಕ್ಕೆ ಬಂದು ಹೇಳಿದೆ. ಪಾಪ, ಮಲಗಿದ್ರೇನೋ, Sorry”.

ಚಟಾಪಟಾ ಅಂತ ಲಗುಬಗೆಯಲ್ಲಿ ಬಾಗಿಲ ಚಿಲಕ ತೆಗೆದು ಹೆಂಡತಿಗೆ ಜೋರಾಗಿ “ನನ್ನ ಗಾಡಿ ಕಾಣ್ತಿಲ್ವಂತೆ ಬಾರೆ ಏನಾಯ್ತು ನೋಡೋಣ ನಡಿಯೆ, ವೆಂಕಟ್ರಮಣ ಸ್ವಾಮಿ ಕಾಪಾಡಪ್ಪಾ, ಯಾರು ಕದ್ದುಕೊಂಡು ಹೋದ್ರೋ ಏನೋ. ಅವರಿಗೆ ನನ್ನ ಗಾಡೀನೇ ಬೇಕಿತ್ತಾ? ..‌….ಬಡಬಡಿಸ್ತಾ” ಗಾಬರಿಯಲ್ಲಿ ಸುತ್ತಿಕೊಂಡ ಟವೆಲ್ಲಲ್ಲೇ ಓಡಿಕೊಂಡು ಗಾಡಿ ನಿಲ್ಲಿಸಿದಲ್ಲಿಗೆ ಹೋದ್ರು. ಅವರ ಹೆಂಡತಿ ಒಂದು ಲುಂಗಿ ಹಿಡಿದು ” ಉಟ್ಟುಕೋಪ್ಪಾ ಅಯ್ಯೋ ದೇವರೆ ಟವೆಲ್ಲು, ಟವೆಲ್ಲು, ನಿಂತ್ಕೊಳ್ರೀ..” ಅಂತ ಅವರಿಂದೆನೇ ಇವರೂ ಓಡಿದರು.

ನಾನು ಉಕ್ಕಿ ಬಂದ ನಗು ತಡಕೊಂಡು ಮನೆ ಸೇರಿಕೊಂಡೆ. ಮನೆಯಲ್ಲಿ ಎಲ್ಲಾ ಎದ್ದಿದ್ದರು. ವಿಷಯ ತಿಳಿದು ನನ್ನ ಜೊತೆಗೆ ಅವರೂ ನಗಲು ಶುರುಮಾಡಿದರು.

ಅಂಕಲ್ ಮಗ ನನ್ನ ಮಗಳು ಇಬ್ಬರೂ ಗಳಸ್ಯ ಫ್ರೆಂಡ್ಸ್ ಆಟ ಆಡೋದರಲ್ಲಿ. ಒಂದು ನಿಮಿಷ ಬಿಟ್ಟಿರ್ತಿರಲಿಲ್ಲ. ಇಬ್ಬರೂ ಒಂದೇ ವಾರಿಗೆಯವರು ವಯಸ್ಸಿನ್ನೂ ಮೂರು ವರ್ಷ. ಅವನು ನಮ್ಮನೆಗೆ ಬಂದವನೆ ” ಬಾಯೆ, ಪಪ್ಪನ ಗಾಡಿ ಗಾಡಿ” ಅಂತ ಹೇಳ್ತಾ ಇವಳನ್ನೂ ತನ್ನ ಜೊತೆ ಕರೆದುಕೊಂಡು ಇಬ್ಬರೂ ಓಡಿದರು.

ಅಂಕಲ್ ಸವಾರಿ ಬಂತು ನೋಡಿ : ಕೆಟ್ಟ ಕೋಪ ಮುಖ ತುಂಬ. ಅಂಕಲ್ ರೌದ್ರಾವತಾರ ಕಂಡು ನಾವೆಲ್ಲ ಗಾಭರಿ ಆಗೋದರ ಬದಲು ಎಲ್ಲರೂ ಒಂದೇ ಸಾರಿ “ಏಪ್ರಿಲ್ ಫೂಲ್” ಅಂತ ಜೋರಾಗಿ ಕಿರುಚಿದಾಗ ಇಡೀ ಕಂಪೌಂಡ್ ಜನರೆಲ್ಲ ನಮ್ಮನೆ ಮುಂದೆ ಹಾಜರು. ಈ ನನ್ನ ಶಿಷ್ಯರೆಲ್ಲ ನನ್ನ ಪಕ್ಕ ಜಮಾಯಿಸಿ ” ಆಂಟೀ ನೀವ್ ಸಖತ್” ಎಂದು ಕ್ಲಾಪ್ಸ ಬಿಗಿದಾಗ ಅಂಕಲ್ ಮುಖದಲ್ಲೂ ನಗು ಮೂಡಿತು.

“ಅಯ್ಯೋ! ಸಂಗೀತಾವರೆ ನೀವ್ ಏನ್ರಿ ಎಷ್ಟೊಂದು ಗಾಬರಿಪಡಿಸಿಬಿಟ್ರಿ‌ ಎಷ್ಟು ಹೆದರಿಕೊಂಡಿದ್ದೆ ಗೊತ್ತಾ? ಹೀಂಗಾ ಮಾಡೋದು? ಇವತ್ತು ಏಪ್ರಿಲ್ ಒಂದು ಅನ್ನೋದು ಮರೆತುಬಿಟ್ಟಿದ್ದೆ. ಇನ್ಯಾವತ್ತೂ ಮರೆಯೊಲ್ಲ ಕಂಣ್ರೀ, ಈ ದಿನ ತಪ್ಪದೆ ನಿಮ್ಮ ಜ್ಞಾಪಕ ಬೇಡಾ ಅಂದರೂ ಬರೋದು ಗ್ಯಾರಂಟಿ. ಉಸ್ಸಪ್ಪಾ. ಕೈ ಕಾಲೆಲ್ಲಾ ಬಿದ್ದೋಯ್ತು ” ಅಂತ ನಮ್ಮನೆಯಲ್ಲೇ ಕೂತರು.

ಇದ್ದೇ ಇದೆಯಲ್ಲ. ಹೇಗಿದ್ದರೂ ಹಾಲು ತಂದಾಗಿತ್ತು. ಒಂದಷ್ಟು ಚಾ ಕಾಯಿಸಿ ಎಲ್ಲರೂ ಸೇರಿ ಕುಡಿದು ನಗುತ್ತ ಅವರವರ ಮನೆ ಸೇರಿಕೊಂಡರೂ ನಗುವಿನ ಅಲೆ ಕೇಳಿಸುತ್ತಾ ಇತ್ತು. ಯಾರಿಗೂ ಧಾವಂತ ಇರಲಿಲ್ಲ. ಆದಿನ ಕೂಡಾ ಈ ದಿನದಂತೆ ಭಾನುವಾರವಾಗಿತ್ತು.

ಇತ್ತ ನನ್ನ ಮಗಳು ಅದುವರೆಗೂ ಸುಮ್ಮನಿದ್ದವಳು ರೊಯ್…ಅಂತ ಅಳಲು ಶುರುಮಾಡಿದಳು‌. “ಯಾಕೆ? ಏನಾಯಿತೆ? ಅಳೋದ್ಯಾಕೆ?” ಅಂದರೆ ಅವಳು ಹೇಳ್ತಾಳೆ ; ” ಅಂಕಲ್ ನನ್ನ ಬೆರಳು ಕಚ್ಚಿ ಬಿಟ್ಟರು ಅಮ್ಮಾ” ಅಂತ ತೋರಿಸ್ತಾಳೆ! “ಏಯ್ ಸುಳ್ಳೇಳಬೇಡಾ, ನಿಜ ಬೊಗಳೆ “ಅಂತ ಜೋರು ಮಾಡಿಬಿಟ್ಟಿದ್ದೆ.

ಮಕ್ಕಳು ಯಾವತ್ತೂ ಸುಳ್ಳು ಹೇಳೋದಿಲ್ಲ, ಅದು ನನಗೂ ಚೆನ್ನಾಗಿ ಗೊತ್ತಿತ್ತು. ಆದರೆ ಆ ಕ್ಷಣ ಅಂಕಲ್ ಹೀಗೆ ಮಾಡಿರಲಿಕ್ಕಿಲ್ಲ, ನನ್ನ ಮಗಳೇ ಸುಳ್ಳು ಹೇಳುತ್ತಾಳೆ ಅನ್ನುವಷ್ಟು ಅಂಕಲ್ ಬಗ್ಗೆ ಪಾಪ ಎಂಬ ಭಾವವಿತ್ತು ಅನಿಸುತ್ತದೆ. ಬೆರಳಲ್ಲಿ ಗಾಯವಿರುವುದು ಕಂಡು ಬೇಜಾರಾದರೂ ಆ ವಿಷಯದ ಬಗ್ಗೆ ಕೇಣಕದೇ ಒಂದಷ್ಟು ಮುಲಾಮು ಹಚ್ಚಿ ಸಮಾಧಾನ ಮಾಡಿದ್ದೆ.

ಎಲ್ಲರ ಸಂತೋಷ, ನಗು ಹೀಗೆ ಇರಲೆಂಬ ಹಾರೈಕೆ ನನದಾಗಿತ್ತು. ಮಕ್ಕಳು ಬೆಳೆದು ದೊಡ್ಡವರಾದರೂ ಎಲ್ಲರ ಬಾಂಧವ್ಯ ಮಾತ್ರ ಇಂದಿಗೂ ಹಾಗೆಯೇ ಇದೆ‌.
ನಿಜಕ್ಕೂ ಈ ದಿನ ಒಂದು ಖುಷಿಯ ದಿನ. ಮರೆಯಲಾಗದ ದಿನ.

1-4-2018. 4.29pm

ಗುಬ್ಬಿಯ ಪಾಡು

ನನ್ನಪ್ಪನ ಮನೆಯ ಬಾಗಿಲಲ್ಲೇ
ಗುಬ್ಬಚ್ಚಿ ಗೂಡಲಿ ಮಾತಾಡುತ್ತಿತ್ತು
ಚಿಕ್ಕಕ್ಕೂ ಚಿಕ್ಕಕ್ಕೂ ಮರಿಗಳ ಹಿಂಡು
ಚಂದದಿ ರಾಗವ ಪಾಡುತ್ತಿತ್ತು.

“ಬಾ ಬಾ, ತಗೊ ತಗೊ, ಹಿಡಿ ಹಿಡಿ”
ಇನ್ನೂ ಲಂಗವ ಹಾಕುವ ವಯಸಲಿ
ಕಾಳನು ತಿನಿಸುವ ಜೋರಿತ್ತು
ಕೇ ಕೇ ಹಾಕುವ ಖುಷಿ ಇತ್ತು.

ದೇವರ ಪಟಗಳ ಹಿಂದೆಯೆ ಗೂಡು
ದೇವರೇನೂ ಅಡ್ಡಿಪಡಿಸಲಿಲ್ಲ ಎಂದೂ
ಭತ್ತದ ಗೊಣಬೆಯ ಹುಲ್ಲನು ತಂದು
ಅದುವೆ ಗುಬ್ಬಿಗೆ ಮೆತ್ತನೆ ಹಾಸಿಗೆಯಂದು.

ಕಡ್ಡಿಯ ತಂದು ಗುಡ್ಡೆಯ ಮಾಡಿ
ಹುಳು ಹುಪ್ಪಟೆಗಳಿಗೂ ತಾಣವಾಯ್ತು
ಹೀಗೊಂದು ದಿನ ಅಪ್ಪನ ಕ್ಲೀನು
ಮರಿಗಳ ಕರಕೊಂಡು ಹಾರೋಯ್ತು.

ಚಂಡಿಯಂತೆ ಹಟ ಹಿಡಿದು ಕೂತೆ ನಾನು
ಗುಬ್ಬಿಯ ಕಾಣದೆ ಗುಲ್ಲೋ ಗುಲ್ಲು
ಅಂದು ಅಪ್ಪನ ಬಯ್ಗುಳ ತಾಗಲಿಲ್ಲ
ಕಣ್ಣ ಮುಂದಿನ ಗುಬ್ಬಿಯಿನ್ನೂ ಮರೆಯಾಗಿಲ್ಲ!

20-3-2018. 4.33pm

ಚರ್ಮಾಯಿ…..

ಹೋದೆ, ಹೋದೆ, ಹೋಗೇಬಿಟ್ಟೆ. ಎಲ್ಲಿಗೆ ಅಂತೀರಾ? ಅದೇ 1974ರ ಶಿವರಾತ್ರಿ ಹಬ್ಬದಲ್ಲಿನ ನನ್ನ ಸಾಹಸಕ್ಕೆ.

ನಿಜ. ಅವಧಿಯಲ್ಲಿ ಶ್ರೀದೇವಿ ಕೆರೆಮನೆಯವರು ಬರೆದ “ಚರ್ಮಾಯಿ” ಈ ಪುಸ್ತಕದ ವಿಮರ್ಶಾತ್ಮಕ ಲೇಖನ ಓದುತ್ತಿದ್ದಂತೆ ಇದುವರೆಗೂ ನನ್ನೊಳಗಿನ ಗುಟ್ಟೊಂದು ಇದ್ದಕ್ಕಿದ್ದಂತೆ ನೆನಪಿಗೆ ಬಂದಿತು. ಘಟನೆಗಳು ನೆನಪಾದಾಗಲೆಲ್ಲ ಕೈ ತನ್ನಷ್ಟಕ್ಕೇ ಬರೆಯುವ ರೂಢಿ ಇಂದೂ ಕೂಡಾ ಬಿಡಲಿಲ್ಲ.

ನಮ್ಮ ಹಳ್ಳಿಯಲ್ಲಿ ಪ್ರತೀ ವರ್ಷ ಶಿವರಾತ್ರಿ ಹಬ್ಬಕ್ಕೆ ಹತ್ತಿರದ ಯಾವುದಾದರೂ ಕ್ಷೇತ್ರಕ್ಕೆ ಊರ ಹಿರಿ ಕಿರಿಯರೆಲ್ಲ ಸೇರಿ ಒಂದು ವಾಹನ ಮಾಡಿಕೊಂಡು ಬೆಳ್ಳಂಬೆಳಗ್ಗೆ ಹೋಗುವುದು ರೂಢಿ. ಆದರೆ ಆ ವರ್ಷ ಮಾತ್ರ ನನ್ನ ಅಣ್ಣ “ಸಂಗೀತಾ ಯಾಣಕ್ಕೆ ಹೋಪನ ಬತ್ಯನೆ. ಅವೆಲ್ಲ ಸಹಸ್ರ ಲಿಂಗಕ್ಕೆ ಹೋಗ್ತ್ವಡಾ. ನಾ ಆಗ್ಲೇ ನೋಡಿದ್ದಿ. ಬಾರೆ, ಹೋಪನ.”

“ಹೂಂ ಅಡ್ಡಿಲ್ಲೆ , ಹೋಪನ, ನಾನೂ ನೋಡಿದ್ನಿಲ್ಲೆ.” ಸರಿ, ನಮ್ಮಿಬ್ಬರ ಸವಾರಿ ಹೊರಟಿತು ಬಸ್ಸಲ್ಲಿ ಯಾಣಕ್ಕೆ.

ಇನ್ನೇನು ಯಾಣಕ್ಕೆ ನಾಲ್ಕು ಕಿ.ಮೀ.ಇರುವಾಗಲೇ ಬಸ್ಸು ಅಲ್ಲಿಗೇ ನಿಂತಿತು. ದಾರಿಗೆ ಅಡ್ಡಲಾಗಿ ಒಂದು ದೊಡ್ಡ ಬಂಡೆ. ಬಸ್ಸು ಅಲ್ಲಿ ನುಗ್ಗಿಸಲಾಗದಷ್ಟು ಇಕ್ಕಟ್ಟು. ಚಿಕ್ಕ ವಾಹನಗಳು ಮಾತ್ರ ಹೋಗುವಂತಿತ್ತು. ಮಣ್ಣಿನ ಹಾದಿ. ಒಂದು ಕೀ.ಮೀ. ಈ ಹಾದಿಯಲ್ಲಿ ನಡೆದು ನಂತರ ಸಿಗುವುದು ಕಾಡಿನಲ್ಲಿ ಕಾಲಾದಿ. ಎತ್ತರವಾದ ದೊಡ್ಡ ದೊಡ್ಡ ಮರಗಳು, ಬೆತ್ತದ ಗಿಡದ ಗುಂಪು, ಅಲ್ಲಲ್ಲಿ ಸಣ್ಣ ಸಣ್ಣ ತೊರೆ. ಹೋಗುವಾಗಿನ ಆ ಖುಷಿ ವರ್ಣಿಸಲಸಾಧ್ಯ.

ಅಂತೂ ಯಾಣ ತಲುಪಿದ್ದೇ ತಡ ಯಾಕೋ ಅನುಮಾನ. ಹೌದು, ನಿಜ. ಅರೆ ಇಸ್ಕೀ. ಏನು ಮಾಡೋದು ಈಗಾ? ಅಣ್ಣನಲ್ಲಿ ಹೇಳೊ ಹಾಗಿಲ್ಲ, ವಾಪಸ್ ಹಾಗೇ ಹೋಗಲು ಸಾಧ್ಯ ಇಲ್ಲ, ಮನಸ್ಸು ಮೊದಲೇ ಇಲ್ಲ. ಒಳಗೊಳಗೇ ನನ್ನದೇ ಥಿಯರಿಯಲ್ಲಿ ಲೆಕ್ಕಾಚಾರ ಹಾಕಿ ಅಣ್ಣನ ಜೊತೆ ಆ ಕಡಿದಾದ ಮೆಟ್ಟಿಲಿರದ ಹಾದಿಯಲ್ಲಿ ಹಳ್ಳದವರೆಗೂ ಜೊತೆಗೆ ಹೋದೆ. ಅಲ್ಲಿಗೆ ಹೋದವರೆಲ್ಲ ಈ ತೊರೆಯಲ್ಲಿ ಸ್ನಾನ ಮಾಡಿ ದೇವರ ದರ್ಶನಕ್ಕೆ ಹೋಗಬೇಕು. ಎಲ್ಲರೂ ಹೋಗುವಾಗಲೇ ಒಂದು ಜೊತೆ ಮಡಿ ಬಟ್ಟೆ ಜೊತೆಗೆ ಒಯ್ಯುತ್ತಾರೆ.

“ಓಂ ನಮಃ ಶಿವಾಯ” ಹೇಳುತ್ತ ಮೈಲಿಗೆಯಲ್ಲಿ ಮಡಿ ಸ್ನಾನ ಮುಗಿಸಿ ದೇವರ ದರ್ಶನ, ಪೂಜೆ ಎಲ್ಲಾ ಮಾಡಿ ಅಲ್ಲೇ ಸಂಜೆಯವರೆಗೂ ಸುತ್ತಾಡಿ ಊರು ಸೇರಿದಾಗ ರಾತ್ರಿಯಾಗಿತ್ತು. ಮನೆಗೆ ಬಂದು ಹೊರಗೆ ಕುಳಿತೆ ಅದೇ ದಿಂಬಿಲ್ಲದ ಒಂಟಿ ಕಂಬಳಿ
ತಂಬಿಗೆಯೊಂದಿಗೆ.

ಅಮ್ಮ ಹೋಗುವಾಗಲೇ ಹಾಕಿದ ಲೆಕ್ಕಾಚಾರ ತಲೆ ಕೆಳಗಾಗಿ ಈ ಅವಾಂತರವಾದರೂ ಅವಳು ಕೇಳಿದಾಗ “ಈಗ ಬರಕರೆ ಆಜ್ಞೆ!
ನೀ ಎಂತಕ್ಕೆ ತಲೆ ಕೆಡಸ್ಕತ್ತೆ?”

“ಅಲ್ದೆ ಅಲ್ಲಿರಕಾದರೆ ಹೆಜ್ಜೇನು ಅಟ್ಟಿಸ್ಕಂಡು ಬರ್ತಿತ್ತಲೆ. ಮೈಲಿಗೆ ಆಗಲಾಗ್ದಡ. ಸಧ್ಯ ದೇವರು ದೊಡ್ಡವನು!”

ನನಗೆ ಈ ವಿಷಯ ಗೊತ್ತಿರಲಿಲ್ಲ. ಮೈಲಿಗೆಯಲ್ಲಿ ದೇವರ ದರ್ಶನಕ್ಕೆ ಹೋಗಬಾರದು ಎಂಬುದನ್ನು ನಂಬಿದ್ದೆ ಅಷ್ಟೆ. ಆದರೆ ನನಗೆ ಯಾಣ ಎಲ್ಲಾ ಸುತ್ತಾಡಲೇ ಬೇಕೆಂಬ ಹಠ, ಮೊಂಡು ಧೈರ್ಯ, ಉತ್ಸಾಹ, ಶಾಸ್ತ್ರವನ್ನು ಮನಸ್ಸು ಮೂಲೆಗೆ ತಳ್ಳಿತ್ತು ಅನಿಸುತ್ತದೆ. ಅಲ್ಲಿ ಬೇಕಾದಷ್ಟು ಜೇನು ಗೂಡುಗಳು ನೇತಾಡುತ್ತಿದ್ದರೂ ಒಂದೇ ಒಂದು ಜೇನೂ ನನ್ನ ಹತ್ತಿರವೂ ಸುಳಿಯಲಿಲ್ಲ. ಬಹುಶಃ ಜೇನಿಗೆ ಮೈಲಿಗೆಯ ಶಾಸ್ತ್ರ ಸುತ್ತಿಕೊಂಡಿರಬಹುದೇ? ಅನುಮಾನ ಈಗಲೂ ಕಾಡುತ್ತದೆ.

ಪುಸ್ತಕ ಓದುವ ಗೀಳಿಲ್ಲದ ಎಂಥವರಿಗಾದರೂ ಈ ಪುಸ್ತಕ ಓದಲೇಬೇಕು ಅನ್ನುವಷ್ಟು ಕುತೂಹಲ ಹುಟ್ಟಿಸುವ ಅತ್ಯುತ್ತಮ ಶೈಲಿಯ ಬರಹ ಶ್ರೀದೇವಿಯವರದು. ಕಣ್ಣು ಒಮ್ಮೆ ಓದಲು ಶುರುಮಾಡಿದರೆ ಮನಸ್ಸು ನಿಲ್ಲುವುದಿಲ್ಲ. ಸರಾಗವಾಗಿ ಓದಿಸಿಕೊಂಡು ಪುಸ್ತಕದ ಕಥೆ ತಲೆಯಲ್ಲಿ ಗಟ್ಟಿಯಾಗಿ ಬೇರೂರುವುದಂತೂ ದಿಟ.

ಸಮಾಜದಲ್ಲಿ ಮೂಢ ನಂಬಿಕೆಗಳನ್ನು ನಿರ್ಮೂಲ ಮಾಡಲು ಇನ್ನಷ್ಟು “ಚರ್ಮಾಯಿ” ಅಂತಹ ಪುಸ್ತಕಗಳು ಹೊರಬರಲಿ. ಲೇಖಕರಿಗೂ ಹಾಗೂ ಈ ಅಂಕಣ ಶುರುಮಾಡಿದ ಅವಧಿಗೂ ಧನ್ಯವಾದಗಳು.

6-3-2018. 1.51pm

ಓಂ ನಮಃಶಿವಾಯ!!

ನಮ್ಮ ಹಿಂದೂಗಳಲ್ಲಿ ಹಬ್ಬಕ್ಕೇನೂ ಕೊರತೆ ಇಲ್ಲ. ಎಷ್ಟು ಹಬ್ಬಗಳು! ಪ್ರತೀ ಹಬ್ಬದ ಸಡಗರ ಬಹುಶಃ ಬಾಲ್ಯದಲ್ಲಿ ಸಂಭ್ರಮಿಸಿದಷ್ಟು, ಅನುಭವಿಸಿದಷ್ಟು ವಯಸ್ಸಾದಂತೆ ಆಸಕ್ತಿ ಕಳೆದುಕೊಳ್ಳುತ್ತ ಸಾಗುತ್ತದೆ. ಒಮ್ಮೆ ಕೂತು ಯೋಚಿಸಿದರೆ ಇರುವ ತಾಪತ್ರಯಗಳು, ಸಂಸಾರದ ಜಂಜಾಟ ಇಲ್ಲಾ ಅನಾರೋಗ್ಯ ಇತ್ಯಾದಿ ಕಾರಣಗಳು ಗಾಚರವಾಗುತ್ತವೆ. ಏನೇ ಆದರೂ ಹಬ್ಬದ ಆಚರಣೆ ಬಿಡೋದಕ್ಕೆ ಆಗೋದಿಲ್ಲ ಅಲ್ವಾ? ಆದರೂ ಈ ಹಬ್ಬಗಳು ಬಂದಾಗೆಲ್ಲ ಕಳೆದ ದಿನಗಳ ನೆನಪು ಮಾತ್ರ ಜಪ್ಪಯ್ಯಾ ಅಂದರೂ ಮಾಸೋದಿಲ್ಲ. ಆ ನೆನಪುಗಳು ಒಬ್ಳರೇ ಕುಳಿತು ಅನುಭವಿಸುವಷ್ಟು ಮುದ ಕೊಡುತ್ತದೆ.

ಆಗಿನ್ನೂ ಸರಕಾರಿ ಕನ್ನಡ ಶಾಲೆಯಲ್ಲಿ ಐದನೇ ಕ್ಲಾಸಲ್ಲಿ ಓದುತ್ತಿದ್ದೆ. ಅದೂ ನನ್ನ ಅಜ್ಜಿ ಮನೆಯಲ್ಲಿ. ಹಳ್ಳಿ ಮನೆ. ಈ ಶಿವರಾತ್ರಿ ಹಬ್ಬ ಬಲೂ ಮೋಜು ಹಳ್ಳಿ ಕಡೆ. ಹೇಗಪ್ಪಾ ಅಂದರೆ ಸಮ ವಯಸ್ಕರೆಲ್ಲ ಸೇರಿ ಶಿವರಾತ್ರಿಗೆ ಅಂತ ನಿಗದಿಯಾಗಿರುವ ಶಿವನಿರುವ ತಾಣಗಳ ಹುಡುಕಾಟ. ನಾವುಗಳು ಇನ್ನೂ ಚಿಕ್ಕವರಲ್ವಾ? ಅದಕ್ಕೆ ಕಾಲ್ನಡಿಗೆಯಲ್ಲಿ ಹೋಗುವ ಹತ್ತಿರದ ಸ್ಥಳ ಮಾತ್ರ ಆರಿಸಿಕೊಳ್ಳಬೇಕಿತ್ತು. ಸರಿ ನಮ್ಮ ಹಳ್ಳಿಯಿಂದ ಎರಡೂವರೆ ಕಿ.ಮೀ ದೂರದಲ್ಲಿರುವ ಶಿವನ ದೇವಾಲಯಕ್ಕೆ ನಾವೆಲ್ಲ ಚೋಟೂಗಳು ಸೇರಿ ಹೋಗೋದು ಅಂತ ನಿಕ್ಕಿ ಆಯಿತು.

ಅದೇನು ಸಂಭ್ರಮ ಏನ್ ತಾನು. ಶಿವರಾತ್ರಿ ದಿನ ಜಾಗರಣೆ ಮಾಡಬೇಕಾದ ನಾವುಗಳು ಮೊದಲಿನ ರಾತ್ರಿನೇ ಜಾಗರಣೆ ಮಾಡಿದ್ವಿ. ಮಾರನೇ ದಿನ ಎಲ್ಲರಿಗಿಂತ ಮೊದಲು ನಾವಲ್ಲಿ ಇರಬೇಕು. ಶಿವನಿಗೆ ಅಭಿಷೇಕ ಬಿಲ್ವಪತ್ರೆ ಅರ್ಪಿಸಬೇಕು, ನಾವೇ ಫಸ್ಟ್ ಆಗಿರಬೇಕು. ಇಂತಹ ಚರ್ಚೆ ಮಾಡಿದ್ದು ಮನಸ್ಸು ತುಂಬಿಕೊಂಡಿತ್ತಲ್ಲ ಇನ್ನು ನಿದ್ದೆ ಎಲ್ಲಿ? ನಾಲ್ಕಕ್ಕೆಲ್ಲ ಎದ್ದು ಸ್ನಾನ ಮಾಡಿ ನಮ್ಮ ಪೇರಿ ದೇವಸ್ಥಾನದ ಕಡೆ ಮುಖ ಮಾಡಿತು. ಹೋಗುವಾಗ ಮೊದಲನೆ ದಿನವೇ ಸಂಗ್ರಹಿಸಿಟ್ಟುಕೊಂಡ ಬಿಲ್ವ ಪತ್ರೆ, ಒಂದು ತಾಮ್ರದ ಗಿಂಡಿ ಜೊತೆಗೆ ಒಯ್ಯೋದು ಮರಿಲಿಲ್ಲ.

ಅದೊಂದು ಹಳೆಯ ಕಾಲದ ದೇವಸ್ಥಾನ. ಸುತ್ತ ಪ್ರಾಂಗಣ. ಮಧ್ಯೆ ಗರ್ಭಗುಡಿ. ಆ ಗುಡಿಯ ನೇರಕ್ಕೆ ಒಂದಷ್ಟು ಮೆಟ್ಟಿಲು ಇಳಿದು ಹೋದರೆ ದೊಡ್ಡ ಪುಷ್ಕರಣಿ. ಇಳಿಯಲು ಸುತ್ತ ಮೆಟ್ಟಿಲು. ನಿಧಾನವಾಗಿ ಎಲ್ಲರೂ ಇಳಿದು ನೀರಲ್ಲಿ ಮುಳಕ ಹೊಡಿಬೇಕಲ್ಲಾ. ಶಿವನ ಪೂಜೆ ಮಾಡಬೇಕು ಅಂದರೆ ಅದೂ ಶಿವರಾತ್ರಿ ದಿನ ಸುಮ್ನೇನಾ? ಉಳಿದವರೆಲ್ಲ ಸಲೀಸಾಗಿ ಮುಳಕ ಹೊಡಿತಿದ್ದಾರೆ. ನನಗೋ ಬಗ್ಗಿದ ತಲೆ ಇನ್ನೇನು ನೀರಿಗೆ ತಾಗ ಬೇಕು ಸಖತ್ ಭಯ ಆಗ್ತಿತ್ತು. ಉಸಿರು ಕಟ್ಟಿದ ಅನುಭವ. ತಗಂಡೋಗಿದ್ದ ಗಿಂಡಿ ಇತ್ತಲ್ಲ ಅದರಲ್ಲೇ ಉಟ್ಟ ಬಟ್ಟಯಲ್ಲೆ ತಲೆ ಮೇಲೆ ನೀರಾಕಿಕೊಂಡಿದ್ದೆ. ಉಳಿದವರೆಲ್ಲ “ಹೇ..ಅದನ್ನೋಡು ಮುಳಕ ಹಾಕಲ್ಲೆ ಹೆದರ್ಕಂಡು ಮಿಂದ್ಕತ್ತ ಇದ್ದು” ಅಂತ ನಗೋದು ನನಗೆ ಬಹಳ ದುಃಖ ಆಗ್ತಿತ್ತು. ಅಳುಮುಂಜಿ ಮುಖ ನೋಡಿ ಅವರಲ್ಲೊಬ್ಬಳು ಪಾಪ ಸುಮ್ನಿರ್ರೊ ಹೆದರಿಕೆಯಡಾ, ಹಬ್ಬ ಆಗಿ ಅಳಸ್ತ್ರನ” ಅಂತ ನನ್ನ ಪರ ವಹಿಸಿಕೊಂಡಾಗ ಕೊಂಚ ಸಮಾಧಾನ. ಮುಳಕ ಹಾಕೋದು ಎಷ್ಟು ಕಲಿಬೇಕಂದರೂ ಇದುವರೆಗೂ ಸಾಧ್ಯ ಆಗಲೇ ಇಲ್ಲ. ದಸರಾದಲ್ಲಿ ಕಾಶಿಗೆ ಹೋದಾಗ ಗಂಗಾ ನದಿಯಲ್ಲಿ ಮುಳಕ ಹಾಕಲಾಗದೆ ಹಂಗಂಗೆ ನೀರು ಸೋಕಿಸಿಕೊಂಡು ಬಂದೆ. ನಾನೆಷ್ಟು ಪುಕ್ಲಿ ಅನಿಸ್ತಿದೆ.

ಹೀಗೆ ದೊಡ್ಡವಳಾಗ್ತಾ ನಮ್ಮ ಹಳ್ಳಿಯ ಸ್ನೇಹಿತರ ಜೊತೆ ಇಲ್ಲಾ ಬಂಧುಗಳ ಜೊತೆ ಈ ಶಿವರಾತ್ರಿ ಹಬ್ಬಕ್ಕೆ ಸಿರ್ಸಿ ಸುತ್ತಮುತ್ತ ಇರುವ ಗೋಕರ್ಣ, ಯಾಣ, ಬನವಾಸಿ, ಸಹಸ್ರಲಿಂಗ ಇತ್ಯಾದಿ ಎಲ್ಲಾ ಕಡೆ ಹೋಗಿ ಶಿವನಿಗೆ ಅಭಿಷೇಕ ಮಾಡುವುದು ರೂಢಿಯಲ್ಲಿ ಇತ್ತು. ಅಲ್ಲಿಯ ದೇವಸ್ಥಾನಗಳಲ್ಲಿ ನಾವೇ ಸ್ವತಃ ಅಭಿಷೇಕ ಮಾಡುವುದು ಇನ್ನೊಂದು ವಿಶೇಷ. ಆ ಪರಶಿವನ ನುಣುಪಾದ ತಲೆ ಸವರಿ ಪ್ರೀತಿಯಿಂದ ಭಕ್ತಿಯ ಪರಾಕಾಷ್ಟೆಯಲ್ಲಿ ಮಾಡುವ ಪೂಜೆ ಇತ್ತಲ್ಲಾ ನೆನಪಿಸಿಕೊಂಡರೆ ಈಗಲೂ ಮೈ ಝುಂ ಎನ್ನದೆ ಇರಲಾರದು. ಆದರೆ ಈಗ ಅವೆಲ್ಲ ಬರೀ ನೆನಪು ಅಷ್ಟೆ.

14-2-2018. 2.51pm

ಶೆಟ್ಲಿ ಬೇಕಾ ಶೆಟ್ಲಿ

ಬಹುದಿನಗಳ ನೆನಪು.

ನಮ್ಮ ರೇಣುಕಾ ರಮಾನಂದ ಹಾಗೂ ಶ್ರೀದೇವಿ ಕೆರೆಮನೆ ಇವರಿಬ್ಬರ ಕವನಗಳನ್ನು ಓದಿದಾಗೆಲ್ಲ ಮೀನಿನ ವಾಸನೆ ಮೂಗಿಗೆ ಬಡಿದ ನೆನಪು ಮರುಕಳಿಸುತ್ತದೆ. ಇವರ ಬರಹಗಳನ್ನು ಎಷ್ಟು ಇಷ್ಟ ಪಡ್ತೀನೊ ಅಷ್ಟೇ ಈ ಮೀನಿನ ವಾಸನೆಯಿಂದ ಕಷ್ಟ ಪಟ್ಟಿದ್ದೇನೆ. ಆ ಊರಿಗೆ ಹೋಗದೇ ಇದ್ದರೆ ಗತಿ ಇರಲಿಲ್ಲ. ಹೋಗಬೇಕಾದ ಊರು ಹುಟ್ಟಾಪರಿ ನೋಡಿರಲಿಲ್ಲ. ಜನ, ಊರು, ದೂರ ಎಲ್ಲ ಹ್ಯಾಂಗೊ ಏನೊ ಅಂತ ಒಳಗೊಳಗೆ ಲೆಕ್ಕ ಹಾಕುತ್ತ ಹೆದರಿಕೊಳ್ಳುತ್ತ ಅಂತೂ ಕೊನೆಯ ದಿನ ಆಫೀಸಿಗೆ ಹಾಜರಾಗಲು ಕೊಟ್ಟ ಏಳನೇ ದಿನ ಆ ಊರಿಗೆ ಕಾಲಿಟ್ಟೆ.

ಅಬ್ಬಾ! ಅದೇನು ವಾಸನೆ ಅಂತೀರಾ. ತರಕಾರಿ ರಸ್ತೆ ಅಕ್ಕ ಪಕ್ಕ ಇಟ್ಟು ಮಾರೋದು ನೋಡಿದ್ದೆ. ನೋಡಿದರೆ ಇಲ್ಲಿ ಎಲ್ಲಂದರಲ್ಲಿ ಮೀನುಗಳ ರಾಶಿ ರಾಶಿ. ನಿಜಕ್ಕೂ ಧಂಗಾಗಿ ಹೋಗಿದ್ದೆ. ಸದಾ ದಾರಿಗೆ ಎಂಟ್ರಿ ಆದೆ ಅಂದರೆ ಮೂಗಿಗೆ ಹಿಡಿದ ಖರ್ಚೀಪ್ ತೆಗಿತಾ ಇರಲಿಲ್ಲ. ಆದರೆ ಅನುಭವಿಸದೆ ಗತ್ಯಂತರವಿರಲಿಲ್ಲ. ಬರಬರುತ್ತ ಈ ವಾಸನೆ ನನ್ನ ಮೂಗು ಒಗ್ಗಿಸಿಕೊಳ್ತೋ ಅಥವಾ ನನ್ನ ಮನಸ್ಸು ಸ್ವೀಕರಿಸಿತೊ ಗೊತ್ತಿಲ್ಲ ನಾನೂ ಸ್ವಲ್ಪ ಗುಂಡ ಗುಂಡಗೆ ಆದೆ. ಊರಿಗೆ ಹೋದಾಗ ಕೆಲವರು “ಏನೆ ನೀನೂ ಮೀನ್ ತಿಂತ್ಯನೆ? ದಪ್ಪಗಾಜೆ” ” ಇಲ್ಲ ದಿನಾ ಮೀನಿನ ಗಾಳಿ ಕುಡಿತಿ” ನಗುತ್ತ ನನ್ನ ಉತ್ತರ.

ಇಷ್ಟ ಪಟ್ಟು ತಿನ್ನುವವರ ಮಧ್ಯೆ ನಾನಿರೋದಾಗಿತ್ತು. ಬಹುಶಃ ಮೀನಿನ ವಾಸನೆ ಇಲ್ಲದ ಜಾಗವೇ ಇರಲಿಕ್ಕಿಲ್ಲ ಅಲ್ಲಿ. ಅಲ್ಲಿಯವರ ಕುಲ ಕಸುಬೇ ಅದಾಗಿತ್ತು. ಆಮೇಲೆ ಆಮೇಲೆ ಸ್ವಲ್ಪ ನಿರಾಳವಾಗುತ್ತ ಬಂದೆ. ಆದರೆ ಆ ನೆನಪು ಹಾಗೆ ಉಳೀತು.

ಶೆಟ್ಲಿ ಬೇಕಾ ಶೆಟ್ಲಿ ಎಂದು ರಸ್ತೆಯಲ್ಲಿ ಒಂದು ಹೆಂಗಸು ಕೂಗಿಕೊಂಡು ಹೋಗ್ತಾ ಇದ್ಲು ಪ್ರತೀ ದಿನ. ಆದರೆ ಅದು ಏನು ಅಂತ ಅವಳ ತಲೆ ಮೇಲಿರೊ ಬುಟ್ಟಿ ನೋಡಿದರೆ ಗೊತ್ತಾಗುತ್ತಿತ್ತು. ಅಡಿಗೆ ಮನೆಯಲ್ಲಿ ಏನೊ ಮಾಡ್ತಾ ಇದ್ದೆ. ನನ್ನ ತಂಗಿ ಊರಿಂದ ಮೊದಲ ಬಾರಿ ಅಕ್ಕನ ಜೊತೆ ಒಂದಷ್ಟು ದಿನ ಠಿಕಾಣಿ ಹೂಡಲು ಬಂದಿದ್ಲು. ಅವಳು ಈ ಹೆಂಗಸಿನ ಕೂಗಿಗೆ “ಸ್ವಲ್ಪ ಇರು ನನಗೆ ಬೇಕು” ಕೂಗಿ ಹೇಳಿದಳು. ಅವಳೊ “ಅಮ್ಮ ತಗಂತ್ರಾ?” ಲಗುಬಗೆಯಿಂದ ಹೋದ ನನ್ನ ತಂಗಿ ಸರ್…ಅಂತ ವಾಪಸ್ಸು ಬಂದು ಒಮ್ಮೆ ಮುಖ ಸಿಂಡರಿಸಿಕೊಂಡು ಜೋರಾಗಿ ನಗಲು ಶುರು ಮಾಡಿದಳು. ” ಅಕ್ಯಾ ಅದು ಮೀನಡೆ, ಒಣಗಿದ್ದೂ. ಥೋ^^^^^”

ಮತ್ತೆಂದೂ ನನ್ನ ಕೇಳದೆ ದಾರಿಯಲ್ಲಿ ಹೋಗುವ ವ್ಯಾಪಾರಿಗಳನ್ನು ಕರೆದು ನಿಲ್ಲಿಸುತ್ತಿರಲಿಲ್ಲ. ತನ್ನ ಬೆಸ್ತು ತನಕ್ಕೆ ಇಂದಿಗೂ ಇಬ್ಬರೂ ಸೇರಿದಾಗ ಜ್ಞಾಪಕ ಮಾಡಿಕೊಂಡು ನಗೋದು ಬಿಟ್ಟಿಲ್ಲ.

ಅಂಕೋಲಾದಲ್ಲಿ ಒಣ ಮೀನು ಮಾರುವವರು ಅವುಗಳನ್ನು ಒಂದು ಬುಟ್ಟಿಯಲ್ಲಿ ತುಂಬಿಸಿಕೊಂಡು ತಲೆಯ ಮೇಲಿರಿಸಿಕೊಂಡು ರಸ್ತೆಯಲ್ಲಿ ಸಾಗುವಾಗ “ಶೆಟ್ಲಿ ಬೇಕಾ ಶೆಟ್ಲಿ ” ಎಂದು ಕೂಗಿಕೊಂಡು ಹೋಗುವ ವಾಡಿಕೆ. ಇದು ಗೊತ್ತಿಲ್ಲದೆ ಆದ ಅವಾಂತರವಿದು. ಕೊನೆಗೆ ಅವಳು ಬಯ್ಕಂಡು ಹೋದಳೊ ಏನೊ ಗೊತ್ತಾಗಲೇ ಇಲ್ಲ ನಮ್ಮ ನಗುವಿನಲ್ಲಿ ಅವಳ ಮಾತು ಉಡುಗಿತ್ತು.

ಅವಧಿಯಲ್ಲಿ ಪ್ರಕಟವಾದ ರೇಣುಕಾ ರಮಾನಂದರವರ ಬಿಡುಗಡೆಯಾಗಲಿರುವ ಪುಸ್ತಕದ ಐದು ಮುಖಪುಟದ ಆಯ್ಕೆಯಲ್ಲಿ ಮೀನು ಹೊತ್ತ ಹೆಂಗಸು ಐದನೇ ಪಟ ಬಹಳ ಮನಸ್ಸಿಗೆ ಹಿಡಿಸಿ ನಡೆದ ಘಟನೆ ಮತ್ತೆ ನೆನಪಿಸಿಕೊಂಡು ಬರೆಯುವಂತಾಯಿತು.

12-2-2018. 3.32pm

ಮರೆಯಾಗದ ಮೂರು ನೆನಪುಗಳು

ಕೆಲವು ಘಟನೆಗಳ ನೆನಪುಗಳು ಅದೇಃಗೆ ಮನಸ್ಸಿನಲ್ಲಿ ಎಷ್ಟೇ ವರ್ಷವಾದರೂ ಮರೆಯಾಗದೆ ಉಳಿದು ಬಿಡುತ್ತದೆ? ನಿಜಕ್ಕೂ ನನಗೆ ಬಹಳ ಬಹಳ ಆಶ್ಚರ್ಯವಾಗುತ್ತದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಕೇಳಿದ ಒಂದು ರೆಡಿಯೊ ವಾರ್ತೆ ಇಂದಿಗೂ ಕಿವಿಯಲ್ಲಿ ಉಳಿದು ಬಿಟ್ಟಿದೆ.

1) ಆಗಿನ್ನೂ ನನಗೆ ಏಳು ವರ್ಷ ಏಳು ತಿಂಗಳು. ಭಾರತದ ಮೊದಲ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರೂರವರು ಕಾಲವಾದ ದಿನ. ದಿನಾಂಕ 27-5-1964. ಆ ದಿನ ಸಿರ್ಸಿಯ ಸಿಂಪಿಗರ ಗಲ್ಲಿಯ ನನ್ನ ಮಾವನ ಮನೆಯಲ್ಲಿ ಇದ್ದೆ. ಮನೆಯ ಹೊರಗೆ ಬಾಗಿಲಲ್ಲಿ ನಿಂತಿದ್ದೆ. ಜೋರಾಗಿ ಪಕ್ಕದ ಮನೆಯ ರೆಡಿಯೋದಲ್ಲಿ ನೆಹರೂರವರು ಕಾಲವಾದ ಸುದ್ದಿ ಹಿಂದಿ ಭಾಷೆಯಲ್ಲಿ ಭಿತ್ತರವಾಗುತ್ತಿತ್ತು. ಆ ವಾರ್ತೆಯ ಧ್ವನಿ ಈಗ ಕೇಳಿದಂತೆ ಅಷ್ಟು ನಿಖರವಾಗಿ ಆ ಗಂಡಸಿನ ಧ್ವನಿ ನೆನಪಿದೆ. ಆಗಾಗ ನೆನಪಾಗುತ್ತಲೂ ಇರುತ್ತದೆ. ಇದು ಹೇಗೆ?

2) 1984 ಸೆಪ್ಟೆಂಬರ್ 29 ನಾನು ಕೆಲಸಕ್ಕೆ ಸೇರಿದ ಮೊದಲ ದಿನ. ಸೆಪ್ಟೆಂಬರ್ 30 ದಿವಂಗತ ಇಂದಿರಾ ಗಾಂಧಿಯವರ ಹತ್ಯೆಯಾದ ದಿನ. ರಜೆ ಘೋಷಿಸಿದ್ದರು. ದೀಪಾವಳಿ ಹಬ್ಬ,ಶನಿವಾರ, ಭಾನುವಾರ ಸೇರಿ ಒಟ್ಟಿನಲ್ಲಿ ಬ್ಯಾಂಕಿಗೆ ನಾಲ್ಕು ದಿನ ರಜೆ ಬಂದಿತ್ತು. ದೂರದ ಊರು. ಒಬ್ಬಳೆ ಮನೆ ಮಾಡಿ ಇರುವುದು ಅನಿವಾರ್ಯವಾಗಿತ್ತು. ಊರಿಗೂ ಹೋಗಲಾಗದೆ ಹಬ್ಬದ ದಿನ ಒಬ್ಬಳೆ ಮನೆ ಮುಂದೆ ಯೋಚಿಸುತ್ತ ಕೂತಿದ್ದೆ. ಇಂದಿರಾ ಗಾಂಧಿ ನನಗೆ ತುಂಬಾ ತುಂಬಾ ಇಷ್ಟವಾಗುತ್ತಿದ್ದರು. ಅವರ ನಿಲುವು, ವ್ಯಕ್ತಿತ್ವ, ಧೈರ್ಯ, ಅವರ ಭಾಷಣ ರೆಡಿಯೋದಲ್ಲಿ ತಪ್ಪದೆ ಕೇಳುತ್ತಿದ್ದೆ. ಅವರ ಹತ್ಯೆ ಮನಸ್ಸಿಗೆ ತುಂಬಾ ಹಿಂಸೆ ಉಂಟುಮಾಡಿತ್ತು. ನೆನಪು ಮರೆಯಲಾಗದು.

3)ಬೆಂಗಳೂರಿನ ಹನುಮಂತ ನಗರದಲ್ಲಿ ವಠಾರದ ಚಿಕ್ಕ ಮನೆಯಲ್ಲಿ ನಮ್ಮ ಸಂಸಾರ. 21-5-1991ರ ಸರಿ ರಾತ್ರಿಯಲ್ಲಿ ಪಕ್ಕದ ಮನೆಯಲ್ಲಿದ್ದ ಬ್ಯಾಚುಲರ್ ಇಂಜಿನಿಯರ್ ಒಬ್ಬರು ದಿವಂಗತ ರಾಜೀವ್ ಗಾಂಧಿಯವರ ಹತ್ಯೆಯ ವಿಷಯ ತಿಳಿದಿದ್ದೆ ತಡ ನಮ್ಮ ಮನೆ ಕಿಟಕಿ ಬಡಿದು ಎಜಮಾನರ ಹೆಸರು ಕೂಗುತ್ತ ಹತ್ಯೆಯಾದ ವಿಷಯ ಹೇಳಿದಾಗ ಧಿಗ್ಗನೆ ಹಾಸಿಗೆಯಿಂದ ಎದ್ದು ಕೂತಿದ್ದೆ. ಇಲ್ಲೂ ಕೂಡ ಅವರ ಧ್ವನಿ ಮರೆಯಲಾಗುತ್ತಿಲ್ಲ. ವಿಚಿತ್ರ!

20-11-2017. 12.10am