ರೈಲು ರಂಭೆ..

ಜಗಮಗಿಸುವ ಬೆಳಕಲ್ಲಿ
ನಡುರಾತ್ರಿಯ ದಿಬ್ಬಣಕೆ
ಅಣಿಯಾಗಿ ಬಂದಿತೊಂದು ರೈಲು.

ಹಿಂದೆ ಹತ್ತು ನೀ ಮುಂದೆ ಹತ್ತು ನೀ
ತಂಡೋಪ ತಂಡ ಜನ
ರೈಲೊ ಬಖಾಸುರನಹೊಟ್ಟೆ.

ತಮ್ಮ ಜಾಗಕ್ಕೆ ಹಕ್ಕೊತ್ತಿದ ಜನ
ಟೀಟಿ ರಾಜನ ತಾಕೀತು ತೀರಿಸಿ
ನಿಶ್ಚಿಂತೆಯಲಿ ಹೊರಟಿತ್ತು ರೈಲು ಪ್ರಯಾಣ.

ಹಿಂದೆ ಕುಂತವನಿಗೆ
ಮುಂದೆ ಬಗ್ಗಿ ಬಗ್ಗಿ ನೋಡುವ ತವಕ
ಭೋಗಿಗಳ ನವಿಲ ಸೀರೆ ಸೆರಗ.

ಹೊಗೆಯನುಗುಳುವ ಭರದಿ
ಜೋರಾಗಿ ಊದುವ ಸೀಟಿಗೆ
ಒಪ್ಪವಾಗಿ ಬಳುಕುತ್ತಿತ್ತು ರೈಲು ರಂಭೆ.

ಕೊಂಡಿಗೆ ಕೊಂಡಿ ಸೇರಿಸಿ
ಮಾರುದ್ದ ಜಡೆ ಹೆಣೆದು ಓಲಾಡುವ ಪರಿಗೆ
ಮೇಣದಂತೆ ಕರಗುತ್ತಿತ್ತು ಮಲಗಿದವರ ನಿದ್ದೆ.

ಕಿಟಕಿಯಾಚೆಯ ಧರೆಯು
ಸೆಟಕೊಂಡು ಮಲಗಿತ್ತು
ಬಗೆದ ಹೊಟ್ಟೆಯ ಮನುಜರಿವರನು ಕಂಡು.

ಚುಕುಬುಕು ರೈಲಿನ ಓಟ
ಮನುಜನ ಸ್ವಾರ್ಥ ನರ್ತನಕೆ
ಕಾಡು ಕಣಿವೆಗೆ ಸಂಕಟದ ನೋವು!!

5-6-2017 8.29pm

Advertisements

ವಿಶ್ವ ಪರಿಸರ ದಿನ

ವಿಶ್ವ ಪರಿಸರ ದಿನಕ್ಕಾಗಿ ಮುಂದೆ ನಾವೇನು ಮಾಡಬಹುದು?

ಜೂನ್ 5, ವಿಶ್ವ ಪರಿಸರ ದಿನವೆಂದು 1972ರಲ್ಲಿ ವಿಶ್ವ ಸಂಸ್ಥೆ ಘೋಷಿಸಿತು. ಈ ದಿನ ಈಗಂತೂ ಅತ್ಯಂತ ಮಹತ್ವದ ದಿನವನ್ನಾಗಿ ಆಚರಿಸುವ ಹಾಗೂ ಈ ಕಾಳಜಿ ಪ್ರತಿಯೊಬ್ಬರ ಮನೆ ಮನಗಳಲ್ಲಿ ಉಳಿಸುವ ಒಂದು ಆಂದೋಲನವೆ ನಡೆಯಬೇಕಾದ್ದು ಅವಶ್ಯಕತೆ ಎದ್ದು ಕಾಣುತ್ತಿದೆ. ಕಾರಣ ಏರುತ್ತಿರುವ ತಾಪ ಮಾನ, ಮಾನವ ತನ್ನ ಅನುಕೂಲಕ್ಕೆ ತಕ್ಕಂತೆ ಪ್ರಕೃತಿಯನ್ನೇ ಬದಲಾವಣೆ ಮಾಡಲು ಹೊರರಟಿದ್ದಾನೆ. ನಶಿಸುವತ್ತ ಕಾಡಿನ ಪಯಣ, ಹಸಿವ ನೀಗಲಾಗದೆ ಹಠಕ್ಕೆ ಬಿದ್ದ ಕಾಡು ಪ್ರಾಣಿಗಳ ವರ್ತನೆ ಕಾಡ ಬಿಟ್ಟು ಊರ ಕಡೆ ಮುಖ ಮಾಡುತ್ತಿರುವುದೆಲ್ಲ ನೋಡಿದರೆ ವಿಶ್ವ ಪರಿಸರ ದಿನದ ನೆಪದಲ್ಲಾದರೂ ಒಂದಷ್ಟು ಪರಿಸರ ಕಾಳಜಿ ಮನುಷ್ಯ ತನ್ನಲ್ಲಿ ಬೆಳೆಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ದಂಡವನ್ನೇ ಎದುರಿಸಬೇಕಾಗುವ ಸಂದರ್ಭ ಬರುವುದು ನಿಶ್ಚಿತ.

ಈಗಾಗಲೇ ಬಿಬಿಎಂಪಿಯವರು, ಅನೇಕ ಸಂಘ ಸಂಸ್ಥೆಗಳು ಕೋಟಿ ಗಿಡ ನೆಡುವತ್ತ ತಮ್ಮ ಕೈಕಂರ್ಯ ಹಮ್ಮಿಕೊಂಡಿರುತ್ತಾರೆ. ನಿಜಕ್ಕೂ ಸಂತೋಷದ ವಿಷಯ. ಈ ಹಿಂದೆಯೂ ಸಾಕಷ್ಟು ಬಾರಿ ಕಂಡಿದ್ದೇವೆ. ಆದರೆ ಈ ಸಸಿ ನೆಡುವ, ಬೀದಿ ಬೀದಿಗಳಲ್ಲಿ ಮರ ಬೆಳೆಸುವ ಕಾರ್ಯ ಅದೆಷ್ಟು ಮಟ್ಟಿಗೆ ಜಯ ಕಂಡಿದೆ! ಇದು ಮಾತ್ರ ಅನುಮಾನ. ಕಾರಣ ಈ ದಿನದಿಂದ ನೆಡಲು ಹೊರಟ ಗಿಡಗಳ ಗತಿ ಮುಂದೇನಾಯಿತು ಎಂದು ನೋಡುವ ರೂಢಿಯಿಲ್ಲ. ಗಿಡ ನೆಡುವಾಗಲೆ ಶಹರದ ಬೀದಿಗಳಲ್ಲಿ ಹಲವರ ವಿರೋಧ.

“ನಮ್ಮನೆ ಮುಂದೆ ಬೇಡಪ್ಪಾ. ಅದು ದೊಡ್ಡ ಮರವಾಗುತ್ತದೆ. ಮನೆ ಮುಂದೆ ಕಸ ಬೀಳುತ್ತದೆ, ಗುಡಿಸುವವರು ಯಾರು? ಇಲ್ಲಪ್ಪಾ ನಮ್ಮ ಕಾರು, ಗಾಡಿಗಳನ್ನು ನಿಲ್ಲಿಸೋಕೆ ಜಾಗ ಸಾಕಾಗೋಲ್ಲ “ಇತ್ಯಾದಿ.

ಆಸಕ್ತಿ ಇರುವವರಿಗೆ ಅಕ್ಕ ಪಕ್ಕದವರ ಕಾಟ. “ನೀವೇನೊ ಇರಲಿ ನೆಡಿ ಅಂತೀರಾ. ಆಮೇಲೆ ಕಸ ಬಿದ್ದಾಗ ನೀವು ಬಂದು ಗುಡಿಸ್ತೀರಾ?” ಇದೊಳ್ಳೆ ಕಥೆಯಾಯಿತು.

ಆದರೆ ಇದಕ್ಕೂ ಒಂದು ಕಾರಣ ಹೇಳುತ್ತಾರೆ ಜನ ; ಬಿಬಿಎಂಪಿಯವರು ಆಮೇಲೆ ಗಿಡ ದೊಡ್ಡ ಮರವಾದಾಗ ಅದನ್ನು ತೆಗೆಸಿ ಅಥವಾ ರೆಂಬೆ ಕಡಿರಿ ಅಂದರೆ ಅದಕ್ಕೂ ನಾವೆ ಹಣ ಸಂದಾಯ ಮಾಡಬೇಕು,ಬಿಬಿಎಂಪಿಗೆ ಆರು ತಿಂಗಳುಗಟ್ಟಲೆ ಅಲಿಬೇಕು ಗೊತ್ತಾ? ಅವರುಗಳು ಹೇಳುವುದೂ ಸರಿಯಾಗಿಯೇ ಇದೆ. ಈ ಧೋರಣೆ ಬದಲಾಗಬೇಕು. ಆಗಲಾದರೂ ಗಿಡ ನೆಡಲು ಬೆಳೆಸಲು ಜನ ಸಹಕಾರ ಕೊಡಬಹುದು.

ಇನ್ನು ಗಿಡ ಒತ್ತಾಯ ಪೂರ್ವಕವಾಗಿ ನೆಟ್ಟರು ಅನ್ನಿ ಒಂದು ವಾರನೊ ಎರಡು ವಾರನೊ ಅದಕೆ ಉಳಿವು. ನಂತರದ ದಿನಗಳಲ್ಲಿ ನಿಧಾನವಾಗಿ ಅದರ ಅಂತ್ಯ ಕಾಣಿಸುವವರು ಹಲವು ಮುಂದಿ. ಇನ್ನು ಬಿಬಿಎಂಪಿಯವರು ಉತ್ತಮವಾದ ಕಬ್ಬಿಣದ ಸ್ಪೆನ್ಸಗೆ ಹಸಿರು ಬಣ್ಣ ಬಳಿದು ಗಿಡ ನೆಡಿ ಪರಿಸರ ಉಳಿಸಿ ಅಥವಾ ಇನ್ನೇನೊ ಪರಿಸರದ ಶ್ಲೋಗನ್ ಬರೆದು ನೆಟ್ಟ ಗಿಡಕ್ಕೆ ರಕ್ಷಣೆಯನ್ನೂ ಹಾಕಿರುತ್ತಾರೆ. ಆದರೆ ಗಿಡ ನಾಶ ಮಾಡಿದ ಮೇಲೆ ಅದನ್ನು ಬಿಡುತ್ತಾರೆಯೆ? ಅದೂ ಮಂಗ ಮಾಯ. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವಂತಾಗುತ್ತಿದೆ. ಅಬ್ಬಾ! ಅಂತೂ ನಮ್ಮ ಬೀದಿ ನಮ್ಮ ಏರಿಯಾ ಹಸಿರು ಗಿಡ ಮರಗಳ ತೌರು ಆಗುತ್ತದಲ್ಲ ಅಂತ ನನ್ನಂಥವರ ಖುಷಿಗೆ ತಣ್ಣೀರು ಎರಚಿದ್ದು ಮಾತ್ರ ಸತ್ಯ.

ಹಿಂದೆಲ್ಲ ಕಾರು, ಟೂ ವೀಲರ್ ತಗೊಬೇಕಂದರೆ ಎರಡೆರಡು ಬಾರಿ ಯೋಚನೆ ಮಾಡುತ್ತಿದ್ದರು. ತಂದರೆ ಎಲ್ಲಿ ನಿಲ್ಲಿಸುವುದು? ಈಗ ಹಾಗಲ್ಲ ದುಡ್ಡಿನ ಬಗ್ಗೆ ಯೋಚನೆ ಮಾಡಬಹುದು ಗಾಡಿ ಇಡುವ ಬಗ್ಗೆ ಅಲ್ಲ. ಬೀದಿ ಬದಿ ನಿಲ್ಲಿಸಬಹುದಲ್ಲ! ಇದಕ್ಕೆ ಯಾರೂ ಅಡ್ಡಿ ಪಡಿಸುತ್ತಿಲ್ಲ. ಯಾವ ಕಾಯಿದೆ ಕಾನೂನು ಇದೆಯೊ ನನಗಂತೂ ಗೊತ್ತಿಲ್ಲ. ಈ ಪಾಟಿ ವಾಹನಗಳು ರಸ್ತೆ ಕಾಯುತ್ತಿರುವಾಗ ಇಲ್ಲ ಅಂದುಕೊಳ್ಳುತ್ತೇನೆ. ಇನ್ನು ಈಗ ನಿಯಾನ್ ದೀಪಗಳು ಪ್ರಕರವಾಗಿ ರಸ್ತೆಯ ಉದ್ದಗಲಕ್ಕೂ ಬಿಂಬಿಸುತ್ತಿವೆ. ಆಯಾ ಏರಿಯಾದವರು,ಅಥವಾ ಸರಕಾರದವರು, ಇಲ್ಲಾ ಸ್ವಂತ ಮನೆ ಕಟ್ಟಿಕೊಂಡವರ ರಕ್ಷಣೆಗಾಗಿ ಸಿಸಿ ಟೀವಿ ಕಣ್ಗಾವಲಾಗಿ ನಿಂತಿವೆ. ಕಳ್ಳ ಕಾಕರ ಭಯ ಅಷ್ಟಿಲ್ಲ. ಗಿಡ ಬೆಳೆಯಲು ಜಾಗವಿಲ್ಲ. ಮೈ ಬಗ್ಗಿ ಗುಡಿಸುವ ಮನಸ್ಸು, ಶಕ್ತಿ ಮೊದಲೇ ಇಲ್ಲ. ಇನ್ನು ನೆಟ್ಟ ಗಿಡದ ಗತಿ?

ನಮ್ಮಲ್ಲಿ ಶಂಖದಿಂದ ಬಂದರೇ ತೀರ್ಥ ಅನ್ನುವ ಹಾಗೆ ಇದಕ್ಕೆಲ್ಲ ಕಟ್ಟು ನಿಟ್ಟಿನ ಕಾನೂನು ಕ್ರಮ ಬರಲೇ ಬೇಕು. ಆಗ ಒಂದಷ್ಟು ವಾಹನಗಳ ಭರಾಟೆ ಕಡಿಮೆ ಆಗಿ ವಾಯು ಮಾಲಿನ್ಯ ಕಡಿಮೆ ಆಗಬಹುದು. ಗಿಡಗಳನ್ನು ನೆಡಲು ಅಡ್ಡಿ ಪಡಿಸುವವರ ಸಂಖ್ಯೆ ಕಡಿಮೆ ಆಗಬಹುದು. ಪಾರ್ಕಿಂಗ್ ಜಾಗವಿದ್ದವರು ಅಲ್ಲಿಯೇ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ರಸ್ತೆ ಬದಿ ನಿಲ್ಲಿಸುವುದು ತಪ್ಪಬಹುದು. ಎಲ್ಲೆಲ್ಲಿ ಗಿಡ ನೆಡಬೇಕೆನ್ನುವ ತೀರ್ಮಾನ ನೆಡಲು ಹೊರಟಿರುವವರೆ ವಹಿಸಿಕೊಂಡು, ಅದಕ್ಕೆ ಯಾರೂ ಅಡ್ಡಿ ಪಡಿಸದಂತೆ ಮತ್ತು ಆಯಾ ಏರಿಯಾ ಮನೆಯವರಿಗೆ ಗಿಡಕ್ಕೆ ನೀರುಣಿಸುವ ಬೆಳೆಸುವತ್ತ ಜವಾಬ್ದಾರಿ ವಹಿಸುವ ಅಗತ್ಯ ಕೂಡಾ ಇದೆ. ಹಾಗೆ ಒಂದಷ್ಟು ಪರಿಸರ ಕಾಳಜಿ ಇರುವವರನ್ನು ಗುರುತಿಸಿ ಇದರ ನಿರ್ವಹಣೆಯ ಬಗ್ಗೆ ನಿಗಾ ಇಡುವ ಜವಾಬ್ದಾರಿ ವಹಿಸುವುದು ಉತ್ತಮ. ಏಕೆಂದರೆ ಜನರ ಸಹಕಾರ ಅತೀ ಮುಖ್ಯ ಇಲ್ಲಿ. ಜನರ ಮನವೊಲಿಸುವ ಕಾರ್ಯ ಗಿಡ ನೆಡುವಾಗಲೂ ಒಟ್ಟಾದಲ್ಲಿ ನೆಟ್ಟ ಗಿಡಗಳಲ್ಲಿ ಒಂದಷ್ಟು ಗಿಡಗಳಾದರೂ ಬದುಕಿಯಾವು!!

ಪರಿ ಅಂದರೆ ಪದೆ ಪದೆ,ಹಲವು,ವಿಧ ವಿಧ ,ಆಗಾಗ,ಹೀಗೆ ಹಲವಾರು ಅರ್ಥ ಕೊಡುವ ಶಬ್ದ. ಸರ ಅಂದರೆ ಹಾರ, ಮಾಲೆ, ಒಂದು ಬೊಂತೆ, ಹಲವಾರು ಸೇರಿದರೆ ಇತ್ಯಾದಿ ಅಂತ ನಾನಂತೂ ನನ್ನಷ್ಟಕ್ಕೇ ಹೀಗೆ ಅರ್ಥೈಸಿಕೊಂಡಿದ್ದೇನೆ. ಆಗೆಲ್ಲ ಈ “ಪರಿಸರ” ಅದೆಷ್ಟು ಅರ್ಥಗಳನ್ನು ಒಳಗೊಂಡಿದೆ. ಯಾರಿಟ್ಟರು ಈ ಹೆಸರು? ಎಷ್ಟು ಚಂದ ಚಂದ. ಹೆಸರಿಗೆ ತಕ್ಕಂತೆ ಸುತ್ತ ಮುತ್ತಲಿನ ವಾತಾವರಣ ಇದ್ದರೆ ಅದೆಷ್ಟು ಚೆನ್ನ. ಹೀಗಂದುಕೊಂಡೆ ಪರಿಸರದ ಬಗ್ಗೆ ಕಾಳಜಿ ಮೊದಲಿನಿಂದಲೂ ನನ್ನಲ್ಲಿ ಮಿಳಿತವಾಗಿದೆ.

ಮಲೆನಾಡಿನ ಇಕ್ಕೆಲಗಳಲ್ಲಿ ಎಲ್ಲಂದರಲ್ಲಿ ಕಾಡು ಮೇಡುಗಳ ತವರು ನನ್ನೂರು. ಇಲ್ಲಿ ಒಂದಷ್ಟು ಕೊರತೆ ನಾನು ಊರಿಗೆ ಹೋದಾಗಲೆಲ್ಲ ಅನುಭವಿಸುತ್ತೇನೆ. ಅಲ್ಲಿಯ ಮೂಲ ಖಸುಬು ಅಡಿಕೆ ತೋಟ, ಭತ್ತದ ಗದ್ದೆಯಲ್ಲಿ ವ್ಯವಸಾಯ. ಊರ ಹೊರಗೆ ತೋಟದ ಕೆಲಸಕ್ಕೆ ಬರುವ ಆಳುಗಳ ಸಣ್ಣ ಸಣ್ಣ ಬಿಡಾರ. ಇವಿಷ್ಟೆ ಹಳ್ಳಿ ಅಂದರೆ ಆಗ. ಈಗ ಪರಿಸ್ಥಿತಿ ಹೀಗಿಲ್ಲ. ಮೊದಲು ತಲೆ ಎತ್ತಿದ್ದು. ಊರಿಂದ ಸ್ವಲ್ಪ ದೂರದಲ್ಲಿ ಸರಕಾರ ಅವರಿಗೆಲ್ಲ “ಜನತಾ ಮನೆ”ಗಳನ್ನು ನಿರ್ಮಾಣ ಮಾಡಿ ಅವರವರಿಗೆ ಹಕ್ಕು ಪತ್ರ ಕೊಟ್ಟು ವಾಸಕ್ಕೆ ಅನುವು ಮಾಡಿಕೊಟ್ಟಿತು. ಜನತಾ ದೀಪ, ಸಾರ್ವಜನಿಕ ನಲ್ಲಿ ನೀರು ಬೀದಿ ಬದಿಯಲ್ಲಿ. ಎಲ್ಲಾ ಸೌಕರ್ಯ
ಮಾಡಿಕೊಟ್ಟಿದೆ. ಆದರೆ ಇಲ್ಲಿರುವ ಜನರು ತಮ್ಮ ಮನೆಯ ಸುತ್ತ ಮುತ್ತ ಒಂದಷ್ಟು ಜಾಗ ವಡಾಯಿಸಿ ಬೇಲಿ ಹಾಕಲು ಶುರು ಮಾಡಿದರು. ತರಕಾರಿ, ಹಣ್ಣು ಹಂಪಲು ಗಿಡ,ಕಟ್ಟಿಗೆ ಕೂಡಿ ಹಾಕಲೊಂದು ಸೂರು,ಬಚ್ಚಲು ಮನೆ ಹೀಗೆ ಒಂದೊಂದು ಮನೆಗೆ ಅರ್ಧ ಒಂದು ಎಕರೆ ಜಾಗ ಮಾಯವಾಯಿತು. ನಿಜವಾಗಿಯೂ ಮೊದಲು ಈ ಜಾಗವನ್ನು ಸರಕಾರ ಗೋಮಾಳ ಜಾಗ (ಹಸುಗಳಿಗೆ ಮೇಯಲು)ವೆಂದು ಆಯಾಯಾ ಊರಿಗೆ ಮೀಸಲಾಗಿಟ್ಟಿತ್ತು. ಆದರೆ ಈಗ ಎಲ್ಲೆಂದರಲ್ಲಿ ಹೆಂಚಿನ ಮನೆಗಳು ಆವರಿಸಿಕೊಳ್ಳುತ್ತಿವೆ. ಹಸುಗಳಿಗೆ ಮೇಯಲು ಜಾಗವಿಲ್ಲ, ಅಲ್ಲೊಂದಷ್ಟು ಇದ್ದ ಮರ ಗಿಡಗಳೂ ಮಾಯವಾಗಿವೆ.

ಬೆಂಗಳೂರಿನಂತೆ ಹಳ್ಳಿಯ ದಾರಿಗಳ ಅಕ್ಕ ಪಕ್ಕದ ಗಿಡಗಳು ಅವನತಿ ಹೊಂದಿ ಬಿಸಿಲ ಬೇಗೆಯಲಿ ನೆರಳನ್ನೂ ಹುಡುಕಲಾಗದಷ್ಟು ಗತಿಗೆಟ್ಟು ಮನೆ ತಲುಪಿದಾಗ ಸಾಕಪ್ಪಾ ಈ ಬಿಸಿಲು ಉಸ್! ಅನ್ನುವಂತಾಗಿದೆ. ಮೊದಲಾದರೆ ನೆರಳಿನ ರಕ್ಷಣೆ ಬಿಸಿಲಿಗೆ ಮಳೆಯ ನೀರಿಗೆ ಕೊಡೆಗಳಾಗಿದ್ದವು ಅಕಸ್ಮಾತ್ ಮಳೆ ಬಂದಾಗ. ಟಾರ್ ರಸ್ತೆ, ಇಕ್ಕೆಲಗಳ ಬೀದಿ ದೀಪ , ಕಾರು ಬಾರು ನೋಡಿದರೆ ಸಣ್ಣ ಸಿಟಿಗೆ ಬಂದೆನೆ ಎನ್ನುವಂತಾಗಿದೆ. ಆದರೆ ಅಲ್ಲಿಯೂ ಒಂದಷ್ಟು ಪರಿಸರವಾದಿಗಳು ಇದ್ದಾರೆ. ವನಮಹೋತ್ಸವ ಆಚರಣೆ ಮೊದಲಿನಂತೆ ಈಗಲೂ ಜೀವಂತವಾಗಿದೆ. ಆದರೆ ಮೊದಲಿನ ಸೌಂದರ್ಯ ಈಗಿಲ್ಲ. ಆಳು ಕಾಳುಗಳ ಕೊರತೆ ಅಪಾರ. ಜನ ಅಗತ್ಯ ತೋಟದ ಕೆಲಸಕ್ಕೂ ಆಳುಗಳು ಸಿಗದೆ ಹೈರಾಣಾಗುತ್ತಿದ್ದಾರೆ. ಇಲ್ಲಿ ಸಿಟಿಯಲ್ಲಿ ಸರಕಾರ ಸಂಘ ಸಂಸ್ಥೆಗಳ ವತಿಯಿಂದ ಗಿಡ ನೆಡುವ ಪೋಷಿಸುವ ಕಾರ್ಯವಾದರೂ ನಡೆಯುತ್ತದೆ. ಆದರೆ ಹಳ್ಳಿಗಳಲ್ಲಿ ಹಾಗಲ್ಲ. ಎಲ್ಲಾ ಹಳ್ಳಿಗಳ ಜನರೇ ನಿರ್ವಹಿಸಬೇಕು. ಸಾಕಷ್ಟು ನೀರಿನ ಕೊರತೆ ಇತ್ತೀಚೆಗೆ ಕಾಡುತ್ತಿದೆ. ಜಲ ಸಂರಕ್ಷಣೆ ಅಲ್ಲಿಯ ಜನರೇ ಮಾಡುತ್ತಿರುವುದಾಗಿ ಹಾಗೂ ಇತ್ತೀಚೆಗೆ ಚಿತ್ರ ನಟ ಯಶ್ ರವರು ಜಲಸಂರಕ್ಷಣೆ ಕಾರ್ಯ ಸಿರ್ಸಿಯಲ್ಲಿ ಉದ್ಗಾಟಿಸಿ ಶ್ಲಾಗಿಸಿದರೆಂಬ ವರದಿ ಓದಿ ನಮ್ಮೂರ ಬಗ್ಗೆ ಹೆಮ್ಮೆ ಸಂತೋಷವಾಯಿತು.

ಇನ್ನು ಪರಿಸರಕ್ಕೆ ಮಾರಕ ಎಲ್ಲೆಂದರಲ್ಲಿ ಕಸ ಬಿಸಾಕುವುದು,ಪ್ಲಾಸ್ಟಿಕ್ ತಿಂದ ಹಸುಗಳ ಅವಸ್ಥೆ ಇವೆಲ್ಲ ಕೊನೆಯಾಗುವುದೆಂತೊ! ಬೆಂಗಳೂರು ವಿಶ್ವ ವಿಧ್ಯಾಲಯದ ಸುತ್ತ ಮುತ್ತ ಒಂದಷ್ಟು ಗಿಡಮರಗಳ ತಾಣ ಕಾಣಬಹುದು. ಬೆಳಗಿನ ವಾಯು ವಿಹಾರಕ್ಕೆ ಹೇಳಿ ಮಾಡಿಸಿದ ತಾಣ. ಈಗ ಹದಿನೈದು ವರ್ಷಗಳಿಂದ ನೋಡುತ್ತಿದ್ದೇನೆ. ಆಗಿನ ಸ್ವಚ್ಛ ಪರಿಸರ ಈ ಅ-ಪರಿಸರವಾದಿಗಳಿಂದ ಕೊಚ್ಚೆಯ ತಾಣವಾಗುತ್ತಿದೆ. ಇದರ ತಡೆಗಾಗಿ ಬಿತ್ತಿ ಪತ್ರ ಹಂಚಿ ಎಷ್ಟೋ ಕಾಳಜಿ ತೋರಿಸುವ ನವ ಯುವಕರ ಧ್ವನಿ ಇಂತಹ ಜನರಿಗೆ ಇನ್ನೂ ನಾಟಿಲ್ಲ. ಮನೆಯ ಕಸ ಅಲ್ಲಿಯ ತಗ್ಗು ಪ್ರದೇಶ ಗಿಡ ಮರಗಳ ಬುಡ ಬೀದಿ ಬದಿಯ ಇಕ್ಕೆಲಗಳಲ್ಲಿ ಕಾಣಬಹುದು. ಬೆಳ್ಳಂಬೆಳಿಗ್ಗೆ ಅಥವಾ ರಾತ್ರಿಯ ನಿರವತೆ ಕಸ ಬಿಸಾಕುವ ಸಮಯವಿರಬೇಕು. ಎತ್ತು ಏರಿಗೆ ಎಳೀತು ಅಂದರೆ ಕೋಣ ನೀರಿಗೆ ಎಳೆದಂತಾಗುತ್ತಿದೆ ಇಂತಹ ಜನರಿಂದ. ಎಲ್ಲಾ ಅವರವರೆ ತಿಳಿದು ನಡೆಯಬೇಕಷ್ಟೆ!

ಒಟ್ಟಿನಲ್ಲಿ ಇಂದಿನ ಈ ದಿನದ ಕುರಿತು ಬರೆಯುತ್ತ ಹೋದಂತೆ ಮನಸ್ಸು ಹತಾಷೆಯ ಅಂಚಿಗೆ ಬಂದು ನಿಂತಿರುವುದು ದಿಟ. ಇನ್ನಾದರೂ ಜನ ಎಚ್ಚೆತ್ತುಕೊಂಡು ಸರಕಾರ, ಸಂಘ ಸಂಸ್ಥೆಗಳು, ಪರಿಸರವಾದಿಗಳ ಶ್ರಮಕ್ಕೆ ಬೆಲೆ ಕೊಟ್ಟು ಎಲ್ಲರೂ ಕೈ ಜೋಡಿಸುವಂತಾಗಲಿ. ನಮ್ಮ ಪರಿಸರ,ನಮ್ಮ ನಾಡು,ನಮ್ಮ ದೇಶ ,ನಮ್ಮ ಜಗತ್ತು ಇದು ನಮ್ಮದು ಅನ್ನುವ ಭಾವನೆ ಬೆಳೆದು ದೇಶದ ಉದ್ದಗಲಕ್ಕೂ ಹಸಿರು ವನಗಳ ತಾಯ್ನಾಡಾಗಲಿ. ಈ ತೀರ್ಮಾನ ಈ ದಿನವೊಂದಕ್ಕೇ ಮುಗಿಯದೇ ಪ್ರತೀ ದಿನವೂ ನಮ್ಮಲ್ಲಿ ಎಚ್ಚೆತ್ತು ನಮ್ಮ ಕೈಲಾದಷ್ಟು ಪರಿಸರದ ಸೇವೆ ಮಾಡುವಂತಾಗಲಿ. ನಿರ್ಮಲ ಪರಿಸರ ನಿರ್ಮಾಣ ಮಾಡುವತ್ತ ಎಲ್ಲರ ಚಿತ್ತವಿರಲೆಂದು ನನ್ನ ಕಳಕಳಿಯ ಆಶಯ!!
4-6-2017. 3.39pm

ವಿಶ್ವ ಭೂ ದಿನಾಚರಣೆ

ಇಂದು ವಿಶ್ವ ಭೂ ದಿನಾಚರಣೆ. ಈ ವಿಶ್ವ ಭೂ ದಿನಾಚರಣೆಯನ್ನು 90ರ ದಶಕದಲ್ಲಿ ಕೇವಲ ಅಮೇರಿಕಾ ದೇಶದವರು ಮಾತ್ರ ಆಚರಿಸುತ್ತಿದ್ದರು. ಕ್ರಮೇಣ ಇನ್ನಿತರ ದೇಶಗಳು ಈ ನಿಟ್ಟಿನಲ್ಲಿ ತಮ್ಮ ತಮ್ಮ ಪ್ರದೇಶದಲ್ಲಿ ಪ್ರಚಾರ ಪಡಿಸುತ್ತ 1970ರಿಂದ 192 ರಾಷ್ಟ್ರಗಳು ವಿಶ್ವ ಭೂ ದಿನಾಚರಣೆಯನ್ನು ಏಪ್ರಿಲ್ 22 ರಂದು ಆಚರಿಸುತ್ತ ಬಂದಿವೆ. ಆದರೆ ಈ ಕಾಳಜಿ ಕೇವಲ.ಒಂದು ದಿನಕ್ಕೆ ಮುಗಿಯದೆ ಪ್ರತಿ ದಿನ ಪ್ರತಿಯೊಬ್ಬರಲ್ಲೂ ಪ್ರತಿ ಮನೆ ಮನೆಗಳಲ್ಲೂ ಜಾಗ್ರತವಾಗಿರಬೇಕು. ಅನೇಕ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ ಕೂಡ ಈ ದಿನ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಅನೇಕ ಕಾರ್ಯ ಕ್ರಮ ಹಮ್ಮಿಕೊಳ್ಳುತ್ತಿರುವುದು ‌ಸಂತೋಷದ ಸಂಗತಿ. ಮಕ್ಕಳಿಗೆ ಮನೆಯೆ ಮೊದಲ ಪಾಠ ಶಾಲೆ ಅನ್ನುವಂತೆ ಚಿಕ್ಕಂದಿನಿಂದಲೆ ಅವರಲ್ಲಿ ಭೂಮಿ ಅಂದರೆ ಏನು, ಅದನ್ನು ಸ್ವಶ್ಚವಾಗಿರಿಸಿಕೊಳ್ಳುವ ಬಗ್ಗೆ, ಪರಿಸರ ಕಾಳಜಿ, ಗಿಡ ಮರಗಳ ಬಗ್ಗೆ ಪ್ರೀತಿಯ ಭಾವನೆ ಬೆಳೆಸುವುದು ಹೆತ್ತವರ ಕರ್ತವ್ಯ ಕೂಡಾ.

“ಭೂಮಿ” ಈ ಶಬ್ದವನ್ನು ಒಂದತ್ತು ಸಾರಿ ಕಣ್ಣು ಮುಚ್ಚಿಕೊಂಡು ಮನಸ್ಸಿನಲ್ಲಿ ಹೇಳಿಕೊಳ್ಳಿ. ಏನನ್ನಿಸುತ್ತದೆ ನೋಡಿ. ನಮಗರಿವಿಲ್ಲದಂತೆ ಇಡೀ ಬ್ರಹ್ಮಾಂಡದ ಕಲ್ಪನೆ ಚಿತ್ರ ತನ್ನಷ್ಟಕ್ಕೆ ಹಾದು ಹೋದಂತೆ ಅನಿಸುತ್ತದೆ. ಯಾಕೆ ಹೀಗೆ ಎಂದು ಹಲವಾರು ಬಾರಿ ನನಗೇ ನಾನು ಪ್ರಶ್ನೆ ಮಾಡಿಕೊಂಡಿದ್ದಿದೆ. ಆದರೆ ಎಷ್ಟು ಯೋಚಿಸಿದರೂ ಉತ್ತರ ಸಿಗದೆ ಒದ್ದಾಡಿದ್ದಿದೆ. ಕಾರಣ ಈ ಮೊದಲು ನನಗೆ ಈ ಭೂಮಿಯ ಬಗ್ಗೆ ಅಷ್ಟೊಂದು ಕಾಳಜಿ ಇರಲಿಲ್ಲವೆ? ಪ್ರೀತಿ ಇರಲಿಲ್ಲವೆ? ಯಾಕೆ ನನಗೆ ಉತ್ತರ ಹೊಳೆಯುತ್ತಿಲ್ಲ? ಬರೀ ಚಿತ್ರ ಮಾತ್ರ ಕಾಣುತ್ತಿದೆಯಲ್ಲ? ಇದರ ಸ್ಪಷ್ಟತೆ ಏನು?

ನಿಜ ನನ್ನಲ್ಲಿರುವ ಈ ತಿಳುವಳಿಕೆಯ ಕೊರತೆ ಹೀಗಾಗಲು ಕಾರಣ. ಇದು ನನ್ನ ವಾದ. ಎದುರಾಳಿ ಏನೆ ಹೇಳಿದರೂ ಕೇಳುವಷ್ಟು ತಾಳ್ಮೆ ಈಗ ನನಗಿಲ್ಲ. ಕಾರಣ ನಾನು ಈ ಭೂಮಿ ಜೊತೆ ಈ ಪರಿಸರದ ಜೊತೆ ಅಷ್ಟು ಬೆರೆತು ಹೋಗಿದ್ದೇನೆ. ನನಗೆ ಯಾವಾಗಿಂದ ಈ ಭೂಮಿಯ ಬಗ್ಗೆ ಇಷ್ಟು ವಾತ್ಸಲ್ಯ ಬಂದಿತೊ ಗೊತ್ತಿಲ್ಲ. ಆದರೆ ನನಗರಿವಿಲ್ಲದಂತೆ ಪರಕಾಯ ಪ್ರವೇಶ ಮಾಡಿದ ಈ ಭೂಮಿಯ ನಂಟು ಗಿಡ ಮರಗಳ ಬಗ್ಗೆ ಪ್ರೀತಿ ಪ್ರತಿ ದಿನ ಒಂದಿಲ್ಲೊಂದು ರೀತಿಯಲ್ಲಿ ಸೇವೆ ಮಾಡುವ ತವಕ ಉಂಟು ಮಾಡಿದೆ.

ಅದೇನೊ ಹೇಳುತ್ತಾರಲ್ಲ ; ” ಬರಗಾಲದಲ್ಲಿ ಮಗ ಊಟ ಮಾಡೋದು ಕಲಿತಿದ್ದನಂತೆ” ” ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಕ್ಕೆ ಮಲ್ಲಿಗೆ ಕೇಳಿದಂತೆ” ಅಲ್ವೆ ಮತ್ತೆ ಈ ಸಿಟಿಯಲ್ಲಿ ನೀರಿಲ್ಲದ ಕಾಲದಲ್ಲಿ! ನಮ್ಮ ಹಿರಿಯರು ಸುಮ್ಮನೆ ಗಾದೆ ಮಾಡಿಟ್ಟಿದ್ದಾರಾ? ನನ್ನಂಥವರನ್ನು ನೋಡೆ ಮಾಡಿರಬೆಕು. ಆದರೆ ನನಗೆ ಹೇಳಿಕೊಳ್ಳಲು ಸ್ವಲ್ಪವೂ ಬೇಜಾರಿಲ್ಲ. ಏಕೆಂದರೆ ನನ್ನ ಕೈಲಾದಷ್ಟು ಈ ಭೂಮಿಯ ಸೇವೆ ಮಾಡುವ ಉತ್ಸಾಹ ನನ್ನದು. ದೇಹದಲ್ಲಿ ಶಕ್ತಿ ಇರುವವರೆಗೂ ಈ ತಾಯಿಯ ಸೇವೆ ಮಾಡಬೇಕು‌ ಹೇಗೆ? ಇದು ನನ್ನಷ್ಟಕ್ಕೆ ನಾನೇ ಕಂಡುಕೊಂಡ ದಾರಿ.

ಕಡಲ ತಡಿಯಲ್ಲಿ ಅಡಗಿದ ಸೂರ್ಯ ಜಗತ್ತನ್ನೆಲ್ಲ ಮಲಗಿಸಿ ಯಾರಂಕುಶವಿಟ್ಟರೊ ಕಾಣೆ ನಿಯತ್ತಾಗಿ ತನ್ನ ದಿಕ್ಕು ಕಿಂಚಿತ್ತೂ ಬದಲಾಯಿಸದೆ ತನ್ನ ದಿನ ನಿತ್ಯದ ಕಾಯಕ ಶುರು ಮಾಡುವ ಹೊತ್ತು. ನಾನೂ ಏಳುವುದು ಅದೇ ಹೊತ್ತು. ತಣ್ಣನೆಯ ಭುವಿಯ ಸ್ಪರ್ಶ ಮಾಡಿ ಕೈ ಮುಗಿದು ಮೇಲೆಳುವಾಗೆಲ್ಲ ದೇಹದಲ್ಲಿ ನವ ಚೈತನ್ಯ. ಈ ಚೈತನ್ಯ ಕೊಟ್ಟು ಈ ಭೂಮಿಯ ಮೇಲೆ ನನ್ನ ಈ ದಿನದ ಬೆಳಗು ನೋಡುವಂತೆ ಮಾಡಿದ ಆ ಭಗವಂತನಿಗೆ ಅಂದರೆ ಪ್ರತ್ಯಕ್ಷ ದೇವರೇ ಈ ಉದಯದ ಸೂರ್ಯ, ಅವನ ಶ್ಲೋಕ “ಆದಿದೇವ ನಮಸ್ತುಭ್ಯಂ| ಪ್ರಸೀದ ಮಮ ಭಾಸ್ಕರ…….” ನಾಮ ಸ್ಮರಣೆ ಮಾಡಿ ಮುಂದಿನ ಕೆಲಸಕ್ಕೆ ಅಣಿ.

ತಂಗಾಳಿಗೆ ತರಗೆಲೆಗಳ ಚೆಲ್ಲಾ ಪಿಲ್ಲಿ ಮನೆ ಮುಂದಿನ ಅಂಗಳದ ತುಂಬಾ. ನನಗೊ ಇದೊಂದು ರೀತಿ ಖುಷಿ. ಏಕೆ ಗೊತ್ತಾ, ಪೊರಕೆ ಹಿಡಿದು ಗುಡಿಸುವಾಗೆಲ್ಲ ಅದೊಂದು ರೀತಿ ಶಬ್ದ ನನ್ನೂರಿಗೆ ಎಳೆದೊಯ್ಯುತ್ತದೆ ಮನಸ್ಸನ್ನು. ಊರು ಅಂದರೆ ನಮ್ಮಳ್ಳಿ ಮಲೆನಾಡು. ಅಲ್ಲಿ ಅಡಿಕೆ ತೋಟದ ಸುತ್ತ ಗಿಡ ಮರಗಳಿರುವ ಬೆಟ್ಟ. ಬೇಸಿಗೆ ಮುಗಿಯುತ್ತ ಬಂದಂತೆ ಕೆಲಸದ ಹೆಣ್ಣಾಳುಗಳು ಗಿಡದ ಟೊಂಗೆಯಿಂದ ಮಾಡಿದ ವಿಶಿಷ್ಟ ಪೊರಕೆಯಲ್ಲಿ ಬೆಟ್ಟವನ್ನೆಲ್ಲ ಗುಡಿಸುತ್ತಿದ್ದರು. ಈ ಗುಡಿಸುವಿಕೆ ಚಿಕ್ಕವಳಿದ್ದಾಗ ತೋಟದಲ್ಲಿ ಅಪ್ಪನ ಜೊತೆ ಕುಳಿತು ಆಲಿಸುತ್ತಿದ್ದೆ. ಅಲ್ಲಿಂದ ಒಂದು ರೀತಿ ಸರಪರ ಶಬ್ಧ ನನ್ನ ಕಿವಿಯಲ್ಲಿನ್ನು ಇದೆ. ಈ ನಂಟು ನನಗೆ ಖುಷಿ ತರಿಸುತ್ತದೆ ಪ್ರತಿ ದಿನ. ಇರುವ ಜಾಗದಲ್ಲೆ ಒಂದಷ್ಟು ಗಿಡಗಳ ನಿರ್ವಹಣೆ ಮನೆ ಮುಂದಿನ ಪುಟ್ಪಾತು ಆವರಿಸಿದೆ.

ಬಿಬಿಎಂಪಿಯವರು ರಸ್ತೆ ಸರಿ ಮಾಡುವಾಗ ಎಲ್ಲಿ ಎಲ್ಲವನ್ನೂ ಕಿತ್ತಾಕುತ್ತಾರಾ? ಅಕ್ಕ ಪಕ್ಕದ ಕೆಲವರ ಕೆಂಗಣ್ಣು, ಅಸಹನೆ ಇವೆಲ್ಲ ನಾಶವಾದರೆ ಅಂತ ಒಳಗೊಳಗೆ ಆತಂಕ. ” ಸರ್ ತೊಂದರೆಯಾದರೆ ಎಲ್ಲ ಕಿತ್ತಾಕಿ” ಅಂತ ತುದಿ ಬಾಯಲ್ಲಿ ನಾನೆ ಹೇಳಿದರೂ “ಛೆ! ಮೇಡಮ್ಮವರೆ ಎಷ್ಟು ಮುತವರ್ಜಿಯಿಂದ ಬೆಳೆಸಿದ್ದೀರಾ, ಇದೇನು ಮೇನ್ ರೋಡ್ ಅಲ್ಲ, ಇರಲಿ ಬಿಡಿ, ತಂಪಾಗಿರುತ್ತದೆ” ಎಂದನ್ನಬೇಕಾ! ನನಗೊ ಆಶ್ಚರ್ಯ ಸಂತೋಷ ಒಟ್ಟಿಗೆ. ಅವರೂ ಕೂಡಾ ಗಿಡಮರಗಳ ಪ್ರೇಮಿಗಳಾಗಿರುವುದು ಈಗ ಹದಿನೇಳು ವರ್ಷಗಳಿಂದ ತಂಗಾಳಿ ಬೀಸುತ್ತಿವೆ ನಾ ಬೆಳೆದ ಗಿಡಗಳು. ರೆಂಬೆ ಕೊಯ್ಯಲು ಬಂದ ಕೆಇಬಿಯವರು ಇದು ಯಾವ ಮರವೆಂದು ಗೊತ್ತಿಲ್ಲದೆ ಹೆಚ್ಚಿನ ರೆಂಬೆ ಕಟ್ ಮಾಡಿ ಆಮೇಲೆ ನನ್ನ ನೋಡಿ “ಮೇಡಮ್ಮವರೆ ಇದು ಎಂಥಾ ಮರ,ಮನೆ ಗೋಡೆ ಪಕ್ಕನೆ ಕಂಪೌಂಡೊಳಗೆ ಬೆಳೆಸಿದ್ದೀರಲ್ಲಾ?” “ಇದು ಬಟರ್ ಫ್ರೂಟ್(ಬೆಣ್ಣೆ ಹಣ್ಣು) ಗಿಡ ಅಂದಾಗ “ಅಯ್ಯೋ ಎಷ್ಟೆಲ್ಲಾ ರೆಂಬೆ ಕಡಿದು ಬಿಟ್ವಿ ಪಕ್ಕದವರು ಕಂಪ್ಲೇಂಟು ಮಾಡಿದರು ಅಂತಾ . ಛೆ! ” ಎಂದು ಪರಿತಪಿಸಿದಾಗ “ಯೋಚಿಸಬೇಡಿ, ಚಿಗುರುತ್ತದೆ ಮತ್ತೆ” ಅಂದ ದಿನದಿಂದ ಇವತ್ತಿನವರೆಗೂ ಈ ಮರ ಅವರ ಪ್ರೀತಿಗೂ ಪಾತ್ರವಾಗಿದೆ. ಇದ್ಯಾವ ಗೊಡವೆ ಬೇಡವೆಂದೊ ಏನೊ ಈ ಮರ ತಂತಿ ಬಿಟ್ಟು ಮೇಲೆ ಮೇಲೆ ಬೆಳೆಯುತ್ತಿದೆ. ವರ್ಷಕ್ಕೆ ತಿಂದು ಮಾರುವಷ್ಟು ಹಣ್ಣು ಕೊಟ್ಟು ಋಣ ತೀರಿಸುತ್ತಿದೆ.

ಇನ್ನು ಇಷ್ಟೆಲ್ಲಾ ಗಿಡಗಳ ನಿರ್ವಹಣೆಗೆ ನೀರು ಗೊಬ್ಬರ ಒದಗಿಸುವ ಪಾಳಿ ಮುಂಜಾನೆಯ ಎದ್ದ ಗಳಿಗೆಯಲ್ಲಿ. ಬೀಡಾಡಿ ಹಸುಗಳು ಮನೆ ಮುಂದಿನ ಹಾದಿಯಲ್ಲಿ ಬಂದಾಗ ಸಿಗುವ ಸಗಣಿ ಉತ್ತಮ ಆಹಾರ ಹೂ ಬಿಡುವ ಗಿಡಗಳಿಗೆ. ಬಕೆಟ್ ನೀರಲ್ಲಿ ಕರಡಿ ಅದಕ್ಕೊಂದಿಷ್ಟು ಮನೆಯ ತ್ಯಾಜ್ಯವಾದ ತರಕಾರಿ ಸಿಪ್ಪೆ, ತೊಳೆದ ಅಕ್ಕಿ ನೀರು,ಮಾಡಿದ ಚಹಾ ಕಾಫಿ ಗಸಟು, ಉಳಿದ ಅಡಿಗೆ ಪದಾರ್ಥ ಇತ್ಯಾದಿ ಒಂದು ವಾರ ಕೊಳೆಯಲು ಬಿಟ್ಟು ಎಲ್ಲವನ್ನೂ ಸೇರಿಸಿ ಪ್ರತಿ ಗಿಡಕ್ಕೆ ಹಾಕುವುದು ವಾರಕ್ಕೊಮ್ಮೆ. ಈ ಗೊಬ್ಬರದಲ್ಲೆ ದಾಳಿಂಬೆ ಗಿಡದಲ್ಲಿ ನಳನಳಿಸಿದ ಹಣ್ಣುಗಳು ನನ್ನ ಕಲ್ಪನೆಗೂ ಮೀರಿದ್ದು.

ಮಿಕ್ಕಿದ ದಿನಗಳಲ್ಲಿ ತರಕಾರಿ ತೊಳೆದ ನೀರು, ವಾಷಿಂಗ್ ಮೆಷಿನ್ ನೀರು, ನೆಲ ಒರೆಸಿದ ನೀರು ಇತ್ಯಾದಿ ತೊಳೆದ ನೀರೆಲ್ಲ ಗಿಡಗಳಿಗೆ ಹಾಕುವ ನೆವದಲ್ಲಿ ಭೂಮಿ ಸೇರಿ ಭೂಮಿಯನ್ನು ತಂಪು ಮಾಡುವ ಕಸರತ್ತು ನನ್ನದು. ಸ್ವಲ್ಪ ಸಮಯ ವ್ಯರ್ಥ ಮಾಡಬೇಕು ಎಲ್ಲವನ್ನೂ ಸಂಗ್ರಹಿಸಿಡಲು. ಆದರೂ ಚಿಂತೆಯಿಲ್ಲ. ದೇಹಕ್ಕೆ ಒಳ್ಳೆಯ ವ್ಯಾಯಾಮ ಇದರಿಂದ ಸಿಗುತ್ತಿದೆ. ಚಿಮುಕಿಸಿದ ನೀರು ಮನೆಮುಂದೆ ರಂಗೋಲಿ ಇಕ್ಕಿ ಪೂಜೆಗೆ ಹೂ ಕೊಯ್ದು ಒಳ ಬರುವಾಗ ಮತ್ತೆ ಒಮ್ಮೆ ನಿಂತು ನೋಡುತ್ತೇನೆ. ಮನಸ್ಸಿಗೆ ಹಾಯ್ ಎನಿಸುತ್ತದೆ ನೀರ ಕುಡಿದ ಭೂತಾಯ ಮಡಿಲಲ್ಲಿ ಓಲಾಡುವ ಗಿಡಗಳ ಕಂಡು. ಇದೇ ಭಾವ ಉಕ್ಕಿ ಉತ್ಸಾಹದಲ್ಲಿ ಬೆಳಗಿನಲ್ಲೆ ಹೆಚ್ಚಿನ ಬರಹಗಳು ಹೊರ ಹೊಮ್ಮುವುದು. ಅವುಗಳಲ್ಲಿ ಈ ಕವನವೂ ಒಂದು.

ಬಿಳಿ ಮುತ್ತಿನ ಸಾಲಲ್ಲಿ
ಅಡಗಿ ಕುಳಿತ ನನ್ನ ಮನೆ
ಮುಂದಿನ ರಂಗೋಲಿ ನೀನು.

ಮುಂಜಾನೆಯ ಚಳಿಯಲ್ಲಿ
ತೊಟ್ಟಿಕ್ಕುವ ಮುದ್ದಾದ
ಇಬ್ಬನಿಯ ಹನಿ ನೀನು.

ಹೂ ಗಿಡಗಳ ಮರೆಯಲ್ಲಿ
ಇಣುಕಿ ಹಾಕುವ
ಮರಿ ಗುಬ್ಬಚ್ಚಿ ನೀನು.

ಸ್ವಾತಿ ಮಳೆ ಚಳಿಯಲ್ಲಿ
ಬೆಚ್ಚನೆಯ ಕಾವು ಕೊಡುವ
ನನ್ನ ಕಂಬಳಿ ನೀನು.

ಹೊತ್ತಿಲ್ಲದ ಹೊತ್ತಲ್ಲಿ
ಬೆನ್ನತ್ತಿ ಬರುವ
ನನ್ನೊಳಗಿನ ಮನಸ್ಸು ನೀನು.

ದಿನವೆಲ್ಲ ತಲೆ ಕೊರೆದು
ವಿಷಯಾಸಕ್ತಿಗೆ ತಳ್ಳುವ
ಅಪರೂಪದ ಗೆಳತಿ ನೀನು.

ಹಗಲಲ್ಲು ಇರುಳಲ್ಲು
ನನ್ನೊಂದಿಗೆ ಹೆಜ್ಜೆ ಹಾಕುತ್ತಿರುವ
ನನ್ನೊಳಗಿನ ಕವನವಲ್ಲವೆ ನೀನು?

ಈ ಬುಗಿಲೇಳುವ ಬರಹಗಳ ಸಂಗಾತಿ ಈ ಪರಿಸರ. ಎಲ್ಲವನ್ನೂ ಹೊತ್ತು ನಿಂತ ಈ ಭೂತಾಯಿ ಮಡಿಲಿಗೆ ಬದುಕಿರುವ ನಾವು ಏನು ಕೊಟ್ಟೇವು? ಸದಾ ಗಲೀಜು ಮಾಡುತ್ತ ಪರಿಸರವನ್ನೆ ಹಾಳು ಮಾಡುತ್ತಿರುವ ಎಲ್ಲೆಂದರಲ್ಲಿ ಕಸ ಬಿಸಾಕುವ ಅನೇಕ ಜನರನ್ನು ಕಂಡಾಗ “ಯಾಕೆ ಕಸ ತಂದು ಹೀಗೆ ಬಿಸಾಕುತ್ತೀರಾ? ಹಾಕಬೇಡಿ ದಯವಿಟ್ಟು” ” ನಿಮಗ್ಯಾಕ್ರಿ, ನಾನೇನು ನಿಮ್ಮನೆ ಮುಂದೆ ಹಾಕಿದ್ನಾ” ಅವರ ಹತ್ತಿರ ಬಾಯಿಗೆ ಬಂದಾಗೆ ಉಗಿಸಿಕೊಂಡು ಮನಸ್ಸು ಕೆಡಿಸಿಕೊಂಡ ಸಂದರ್ಭ ಹಲವಾರಿದೆ.

ಕಾರಣ ಈ ಶ್ವಾನವನ್ನು ಸಾಕಿಕೊಂಡು ಬೆಳಗ್ಗೆನೆ ಮೆರವಣಿಗೆ ಹೊರಡಲೇ ಬೇಕು ಇವರುಗಳು ಕಸ ಬಿಸಾಕೋದು ಅದೇ ವೇಳೆ, ಕಣ್ಣಿಗೆ ಕಂಡ ಮೇಲೆ ಹೇಳದೆ ಇರೋಕಾಗದೆ ಒದ್ದಾಡೋದು. ಬೇಕಿತ್ತಾ ನಿನಗೆ ಈ ಉಸಾಪರಿ ಅಂತ ಒಳ ಮನಸ್ಸು ಉಗಿದರೂ ಹೇಳೋದು ಬಿಟ್ಟಿಲ್ಲ. ಸಧ್ಯಕ್ಕೆ ನನ್ನ ಕಂಡರೆ ಮಾಮೂಲಿ ಗಿರಾಕಿಗಳು ಸ್ವಲ್ಪ ಮುಂದೆ ಅಂತೂ ಹೋಗುತ್ತಿದ್ದಾರೆ ಕೈಯ್ಯಲ್ಲಿರೊ ಕಸದ ಚೀಲದೊಂದಿಗೆ. ಮನಸ್ಸಲ್ಲಿ ಅದೆಷ್ಟು ಬೈಕೋತಾರೊ ಕಾಣೆ. ಇರಲಿ, ಇದು ನನ್ನ ಅಳಿಲು ಸೇವೆ ಎಂದು ನಕ್ಕು ಬಿಡುತ್ತೇನೆ.

ಇನ್ನೊಂದು ರೀತಿಯ ಕಾಳಜಿ ಈಗೆರಡು ವರ್ಷದಲ್ಲಿ ಹುಟ್ಟಿಕೊಂಡಿದ್ದು. ಅದೆ ಬೀಜಗಳನ್ನು ಸಂಗ್ರಹಿಸಿಡೋದು. ದಿನ ನಿತ್ಯ ಉಪಯೋಗಿಸುವ ಯಾವುದೆ ಹಣ್ಣು, ತರಕಾರಿ, ಹೂಗಳ ಬೀಜಗಳನ್ನು ಮುತುವರ್ಜಿಯಿಂದ ತೊಳೆದು ನೆರಳಲ್ಲಿ ಒಣಗಿಸಿ ಬೇರೆ ಬೇರೆ ಪೇಪರ್ ಕವರಿನಲ್ಲಿ ಕೂಡಿಟ್ಟು ಊರಿಗೆ ಹೋದಾಗ ಅಲ್ಲಿ ಅಣ್ಣನಿಗೆ ಕೊಟ್ಟು ಇಂಥಿಂತಾ ಬೀಜ ನೋಡು ಎಂದಾಗ ಆಶ್ಚರ್ಯದಿಂದ ಕಣ್ಣರಳಿಸಿ “ಇದೇನೆ ಇದು ಬೆಂಗಳೂರಲ್ಲಿ ಇದ್ದು ಇಷ್ಟೊಂದು ಬೀಜ ಸಂಗ್ರಹ ಮಾಡಿದ್ಯಲ್ಲೆ” ಅಂದಾಗ ಖುಷಿಯಿಂದ ಬೀಗುತ್ತೇನೆ. ಅಷ್ಟೆ ಆಸಕ್ತಿಯಿಂದ ಅವುಗಳನ್ನು ಎಲ್ಲೆಲ್ಲಿ ಹಾಕಬೇಕೆನ್ನುವ ಮುತುವರ್ಜಿ ವಹಿಸುವುದು ಅವರ ಕೆಲಸ.

ಇತ್ತೀಚೆಗೆ ದಕ್ಷಿಣ ಕನ್ನಡದ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಪರಿಸರ ಬೆಳೆಸುವ ಕಾರ್ಯಕ್ರಮ ಟೀವಿಯಲ್ಲಿ ನೋಡಿ ನನ್ನಲ್ಲಿ ಇನ್ನೂ ಹೆಚ್ಚಿನ ಬೀಜ ಸಂಗ್ರಹಿಸಿ ಬೆಳೆಯುವ ಭೂಮಿಗೆ ಹಾಕುವ ಆಸಕ್ತಿ ಹೆಚ್ಚಾಗಿದೆ‌. ಅದರಲ್ಲೂ ನಾವು ತಿನ್ನುವ ನೇರಳೆ , ಹಲಸು,ಮಾವು ಇವುಗಳು ದೊಡ್ಡ ಮರವಾಗಿ ಬೆಳೆಯುವುದರಿಂದ ಯಾವುದಾದರೂ ಊರಿಗೆ ಹೋಗುವಾಗ ಕೊಂಡೊಯ್ದು ದಾರಿಯಲ್ಲಿ ಸಿಗುವ ವನಗಳಲ್ಲಿ ಎಸೆದರೆ ಮಳೆ ಬಂದಾಗ ಮೊಳಕೆಯೊಡೆದು ಮೇಲೆ ಬರಬಹುದೆನ್ನುವ ದೂರದ ನಂಬಿಕೆ.

ಇಂತಹ ಅನೇಕ ರೀತಿಯ ಪ್ರಯತ್ನ ಪರಿಸರ ಸಂರಕ್ಷಣೆ ಭೂಮಿಯನ್ನು ತಂಪಾಗಿಸುವತ್ತ ಎಲ್ಲರೂ ಕಾಳಜಿ ವಹಿಸಿದರೆ ಏರುತ್ತಿರುವ ತಾಪ ಮಾನ ಸ್ವಲ್ಪವಾದರೂ ಕಡಿಮೆ ಮಾಡಬಹುದೆ? ಆದರೆ ಎಲ್ಲರೂ ಈ ಕುರಿತು ಮನಸ್ಸು ಮಾಡಬೇಕು ಅಷ್ಟೆ.
ಹಿಂದೆ ನಮ್ಮ ಹಳ್ಳಿಯಲ್ಲಿ ಊರವರು ಅಕ್ಕಪಕ್ಕದ ಹಳ್ಳಿಯವರೆಲ್ಲ ಸೇರಿ ವನ ಮಹೋತ್ಸವ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೆವು. ಹತ್ತಿರದಲ್ಲೆ ಇರುವ ಹೊಳೆಯ ಪಕ್ಕದಲ್ಲಿ ಈ ಆಚರಣೆ. ಇದನ್ನು ಹೊಳೆ ಊಟ ಅಂತಲೂ ಕರೆಯುತ್ತಿದ್ದೆವು. ಕಾರಣ ಈ ದಿನ ಹಿರಿಯ ಕಿರಿಯರೆನ್ನದೆ ಹೆಂಗಸರು ಗಂಡಸರು ಅನ್ನುವ ಭೇದ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಮಾಡುವ ಅಡಿಗೆಯ ಕೆಲಸ ಅದೂ ಹೊಳೆಯಂಚಿನಲ್ಲಿ. ಪಾತ್ರೆ, ಅಡಿಗೆ ಸಾಮಾನು ಇನ್ನಿತರ ಪರಿಕರಗಳೊಂದಿಗೆ ಬೆಳಗ್ಗೆ ಬೇಗನೆ ಎಲ್ಲರೂ ಹೊಳೆಗೆ ಹೋಗಿ ಅಲ್ಲೆ ಎಲ್ಲರ ಸ್ನಾನ. ಈಜುವವರ ಕೇಕೇ ಮೋಜಿನ ಕ್ಷಣ ಸಖತ್ ಗಲಾಟೆ. ನಂತರ ಒಂದಷ್ಟು ಜನರೆಲ್ಲ ಸೇರಿ ಅಡಿಗೆ ತಯಾರಿ ನಡೆಸುತ್ತಿದ್ದರೆ ಈ ಕಡೆ ಉರುವಲಿಗೆ ಅಕ್ಕ ಪಕ್ಕ ಸಿಗುವ ಒಣ ಕಟ್ಟಿಗೆ ಎರಡು ದೊಡ್ಡ ಕಲ್ಲು ಇಟ್ಟು ಒಲೆಯ ಆಕಾರ ನೀಡಿ ಉರಿ ಹೊತ್ತಿಸುವುದು ಇನ್ನೊಂದು ತಂಡ. ಸ್ವಲ್ಪ ವಯಸ್ಸಾದವರು ತಮ್ಮ ಹಳೆಯ ಅನುಭವದ ಹೊಳೆ ಊಟದ ವರ್ಣನೆ. ಹೀಗೆ ಅಂತೂ ಸಿಹಿ ಪಾಯಸದ ಅಡುಗೆಯೊಂದಿಗೆ ಊಟ ಮುಗಿದ ಮೇಲೆ ಮನರಂಜನೆ ಕಾರ್ಯಕ್ರಮ. ಏಕ ಪಾತ್ರಾಭಿನಯ, ಯಕ್ಷಗಾನದ ಹಾಡು, ಹಾಸ್ಯ ಚಟಾಕಿ ಇತ್ಯಾದಿಗಳ ಸಂಭ್ರಮದಲ್ಲಿ ಹೊತ್ತು ಮುಳುಗುತ್ತಿರುವ ಸೂರ್ಯ ಮರೆಯಾಗುವ ಸೂಚನೆ ಕಂಡಾಗ ಎಲ್ಲರೂ ಮನೆಯತ್ತ ಪಯಣ ದಾರಿಯುದ್ದಕ್ಕೂ ಮಾತು ಮಾತು ಮಾತು. ಎಂತಹ ಚಂದದ ದಿನ. ಅಂದರೆ ಇಲ್ಲಿ ವರ್ಷವೆಲ್ಲ ತೋಟ ಬೆಟ್ಟ ಅಂತ ದುಡಿದ ಜೀವಗಳ ಒಂದು ದಿನದ ಸಂತೋಷದ ಕ್ಷಣ ಎಲ್ಲರೂ ಒಟ್ಟಿಗೆ ಸವಿಯುವುದು. ಮೈ ಮನವೆಲ್ಲ ಹಗುರ. ಇಂದಿಗೂ ಹಲವು ಹಳ್ಳಿಗಳಲ್ಲಿ ರೂಢಿಯಿದೆ.

ಇವೆಲ್ಲ ಅನುಭವ, ಸ್ವ ಪ್ರಯತ್ನದ ಕಸರತ್ತು ಹೇಳಿದ ಉದ್ದೇಶ ಇಷ್ಟೆ. ಈ ದಿನವನ್ನು ಎಲ್ಲರೂ ಅರ್ಥ ಪೂರ್ಣವಾಗಿ ಆಚರಿಸುವಂತಾಗಲಿ. ಎಲ್ಲರ ಚಿತ್ತ ಪರಿಸರದ ಕಾಳಜಿಯತ್ತ ಸದಾ ಇರಲಿ. ಸರಕಾರದ ಸ್ವಶ್ಚತಾ ಕಾರ್ಯಕ್ರಮಕ್ಕೆ ನಾವೂ ಕೈ ಜೋಡಿಸೋಣ. ಭೂ ತಾಯಿಯ ಒಡಲು ಧಗ ಧಗ ಉರಿಯುತ್ತಲಿದೆ. ದಿನ ದಿನ ಭೂಮಿಯ ಶಾಖ ಹೆಚ್ಚುತ್ತಿದೆ. ಒಂದಿನಿತೂ ನೀರು ಪೋಲು ಮಾಡದೆ ಆದಷ್ಟು ಗಿಡ ಮರ ಬೆಳೆಸಿ ಪರಿಸರ ಉಳಿಸೋಣ. ಭೂಮಿ ತಂಪಾಗಿರುವಂತೆ ನೋಡಿಕೊಳ್ಳೋಣ. ಇದೆ ನನ್ನ ಆಶಯ, ಕನಸು.

20-4-2017. 1.19am

ಸಾವಿನ ಕೂಗು..

ಇಂದು ವಿಶ್ವ ಜಲ ದಿನ. ಮನುಷ್ಯ ಪ್ರಕೃತಿಯ ಸರ್ವಸ್ವವನ್ನೂ ಧ್ವಂಸ ಮಾಡಲು ಹೊರಟಿದ್ದಾನೆ. ಎಲ್ಲೆಲ್ಲೂ ನೀರಿನ ಹಾಹಾಕಾರ ಕೇಳುತ್ತಿದ್ದರೂ ಒಂದಿನಿತೂ ಕಾಳಜಿ ತೋರದೆ ತನ್ನದೆ ಹಾದಿಯಲ್ಲಿ ಮುಂದುವರಿಯುತ್ತಿದ್ದಾನೆ. ಜಲಧಾರೆಯ ಒಡಲು ಬರಿದಾಗುತ್ತಿದೆ. ಪ್ರಕೃತಿ ಉಳಿಯಬೇಕೆಂದರೆ ಸಾವು ಮನುಷ್ಯನ ಬೆನ್ನಟ್ಟಬೇಕು. ಆಗಲೆ ಮುಕ್ತಿ.

ಈ ಒಂದು ಯೋಚನೆಯಲ್ಲಿ ಬರೆದ ಕವನವಿದು.

ಋಣಮುಕ್ತಳಾಗು ಜಲ್ದಿ
ಪರದೆಯ ಹಿಂದಿರುವ ಮುಂದಿರುವ
ಆಗಿರುವ, ಆಗುವ,ಆಗಿಹೋದ
ಒಂದೊಂದು ಗಳಿಗೆಯನು
ಹುಡುಕಿ ಹುಡುಕಿ
ತಪ್ಪಿಲ್ಲದೆ ಲೆಕ್ಕ ಹಾಕು.

ಇಂಚಿಂಚು ಮೆಟ್ಟಿಲುಗಳ
ತುತ್ತ ತುದಿಯ ಕೊನೆವರೆಗೂ
ಚಠೀರೆಂದು ಜಾಡಿಸಿ
ಸುಪ್ತ ಮನದ
ಹೊತ್ತತ್ತಿ ಉರಿವ ಗಾಯಗಳಿಗೆಲ್ಲ
ವಾಸಿಯಾಗುವ ಮುಲಾಮು ಸವರಿ
ನೋಡುತ್ತ ಜಾತಕ ಪಕ್ಷಿಯಂತೆ
ಕಾದು ಎಲ್ಲ ಸರಿಹೊಂದಿಸಬೇಕು.

ಇರುವ ಗಳಿಗೆಗಳು
ಬೊಟ್ಟು ತೋರಿಸಿ ಗಹಗಹಿಸಿ ನಗುತ್ತಿವೆ
ಇಷ್ಟೇನಾ ಜೀವಕ್ಕೆ ಹೊದ್ದ ಕಂಬಳಿ
ಲಡ್ಡು ಹಿಡಿದು ತುಕ್ಕಾಗುತಿವೆ
ಜಾರುವ ದಿನಗಳ
ಬೇಗ ಬೇಗ ಲೆಕ್ಕಹಾಕು
ಬರೆದಿಟ್ಟಿನ್ನೇನು ಮಾಡುವೆ
ಯಾರಿಗಾಗಿ ಮುಚ್ಚಿಡುವೆ.

ತಾಳ ತಪ್ಪಿ
ಉಪ್ಪುಪ್ಪಾದ ಈ ದೇಹ
ಒಣಗಿಸಿಡಬಹುದೆ
ಸಾಕು ನೀನಿದ್ದೇನು ಪ್ರಯೋಜನ
ಸಾಕು ನಂಜು ನುಂಗಿ
ನೀರು ಕುಡಿದ ದಿನಗಳ ತೇಜಸ್ಸು
ಅದೆಷ್ಟು ದಿನ ನೀ ಹಿಡಿದಿಡುವೆ?

ಆತ್ಮವೆ ಬಾ ಬಾ
ಅಲ್ಲೊಂದು ಲೋಕವುಂಟು
ಸ್ವಚ್ಛಂಧವಾಗಿ ವಿಹರಿಸು
ನಡಿ ನಡಿ ಹೊರಡು
ಮರು ಜನ್ಮದ ಆಸೆ ತೊರೆದು.

ಹೆದರಬೇಡಾ ನಾನಿಲ್ಲವೆ
ಈ ದೇಹದ ವ್ಯಾಮೋಹವೇಕೆ?

ನಿನ್ನಡಿಯಿಂದ ಮುಡಿಯವರೆಗೂ
ಪಸರಿಸಿ ಮಣ್ಣ ಮಜ್ಜನ ಮಾಡಿ
ನನ್ನುದರದೊಳಗೆ ಸೇರಿಸಿಕೊಳ್ಳುವೆ.

ಹುಳು ಹುಪ್ಪಟೆಗಳಾದರೂ ತಿಂದಾವು
ಕೊಳೆತು ಗೊಬ್ಬರವಾಗಿ
ಗಿಡ ಮರಗಳು ಬೆಳೆದಾವು
ಜನ್ಮ ಪೂರ್ತಿ ನೀ ಸುರಿದ ನೀರ
ಹೀರಿ ಲೆಕ್ಕ ಚುಕ್ತ ಮಾಡಾವು
ಪ್ರಕೃತಿಯ ವಿನಾಶ ಕೊನೆ ಕಂಡಾವು!

22-3-2017. 11.40pm