ಪುಟ್ಕಥೆಗಳು

# ಪರಿಣಾಮ #

ಸತೀಶ್ ಹಾಡುತ್ತಾ ಸೈಕಲ್ ತುಳಿಯುತ್ತಿದ್ದ
ಸೋಮ ಕ್ಯಾರಿಯರ್ ಮೇಲೆ ಉಲ್ಟಾ ಕೂತಿದ್ದ
ಸೈಕಲ್ ಇಳಿಜಾರಿನಲ್ಲಿ ಜೋರಾಗಿ ಸಾಗುತ್ತಿತ್ತು
ಬ್ರೇಕ್ ಹಾಕಲು ಪ್ರಯತ್ನಿಸಿದಷ್ಟೂ ಸೈಕಲ್ ನಿಯಂತ್ರಣ ತಪ್ಪಿತ್ತು ರಸ್ತೆ ಬದಿಯ ತಡೆಗೋಡೆಗೆ ರಪ್ ಎಂದು ಬಡಿದಿತ್ತು ಸತೀಶ್ ಎಗರಿ ಒಂದು ಕಡೆ ಬಿದ್ದ ಇತ್ತ ಉಲ್ಟಾ ಕೂತ ಸೋಮ ಮುಗ್ಗರಿಸಿ ಬಿದ್ದ ಹೊಡೆತಕ್ಕೆ ಮುಂದಿನ ಮೂರು ಹಲ್ಲು ಕಾಣೆಯಾಗಿತ್ತು.
***********

#ನಮ್ಮ ರೈತ #

ರಾಮಣ್ಣ ಐನೂರರ ನೋಟು ಎಣಿಸುತ್ತಿದ್ದ
ಕೊನೆಯಲ್ಲಿ ಒಂದು ನೋಟು ಕಡಿಮೆಯಾಗಿತ್ತು.
ಆದರೆ ಇದರ ಬಗ್ಗೆ ಚಿಂತಿಸುತ್ತ ಕೂಡಲಿಲ್ಲ.  ರಟ್ಟೆಯಲ್ಲಿ ಶಕ್ತಿಯಿರುವ ತನಕ ಮನಸ್ಸಿಟ್ಟು ದುಡಿದರೆ ಒಂದೇನು ಇಂತಹ ಹತ್ತಾರು ನೋಟು ಸಂಪಾದಿಸಬಹುದು. ವಿಶಾಲ ಅವನ ಮನಸ್ಸು. ಏಕೆಂದರೆ ರಾಮಣ್ಣ ಈ ದೇಶಕ್ಕೆ ಅನ್ನ ಕೊಡುವ ರೈತನಾಗಿದ್ದ.  ಕಳೆದುಕೊಳ್ಳುವುದು ಅವನಿಗೆ ರೂಢಿಯಾಗಿಬಿಟ್ಟಿತ್ತು!
***********

# ಕನಸು #

ಹಳೆ ತೋಟದ ಮನೆ, ಗೆದ್ದಲತ್ತಿದ್ದ ಬಾಗಿಲಲ್ಲಿ
ಒಂದಿಷ್ಟು ತೂತುಗಳು, ಕಷ್ಟಪಟ್ಟು ಚಿಲಕ ತೆಗೆದೆ,
ಬಾವಲಿಗಳು ಮುಖಕ್ಕೆ ರಾಚಿದವು.  ಅವುಗಳ ಹಾರಾಟ ಎಗ್ಗಿಲ್ಲದೆ ನಡೆದಿತ್ತು.  ಮಿಣುಕು ದೀಪದ ಕಂದೀಲು ಕಿಟಕಿಯಾಚೆಯಿರುವುದು ಹಣುಕಿ ಬಂದ ಕಿರು ಬೆಳಕು ಹೇಳಿತು,  ಆ ಮನೆಯ ಅವ್ಯವಸ್ಥೆ ಸಾರಿತ್ತು.  ಭಯದಲ್ಲಿ ಇನ್ನೇನು ಬಾಗಿಲು ಮೊದಲಿನಂತೆ ಮುಚ್ಚಿ ಹೊರಡಬೇಕೆನ್ನುವಷ್ಟರಲ್ಲಿ ಅನಾಮತ್ತಾಗಿ ಯಾರೋ ನನ್ನನ್ನು ಎತ್ತಿ ಕುಕ್ಕಿದ ಅನುಭವ!  ಮೈಯೆಲ್ಲಾ ಬೆವೆತು ಎದ್ದು ಕೂತೆ; ಓಹ್ ಇದು ಕನಸು ಎಂದರಿವಾಗಿ ಸಾವರಿಸಿಕೊಂಡಾಗ ಗಮನಕ್ಕೆ ಬಂತು ಬಿದ್ದಿದ್ದು ಮಂಚದಿಂದ!
********** 

3-6-2021. 20.45pm

ಕೋವಿಡ್ ಕಥೆಗಳು


1) ಅವಳಿಗೆ ಮದುವೆಯಾಗಿ ಎರಡು ತಿಂಗಳಿಗೆ ಅವನನ್ನು ಕೊರೋನಾ ಬಲಿ ತೆಗೆದುಕೊಂಡಿತು.  ಉಸಿರಾಟದ ತೊಂದರೆಗೆ ಆಕ್ಸಿಜನ್ ಸಿಗದಿರುವುದಕ್ಕೆ ಸರ್ಕಾರ ಹೇಳಿತು ಸಬೂಬು ಇದು ತಡವಾಗಿ ಆಸ್ಪತ್ರೆಗೆ ಬಂದ ಪರಿಣಾಮ ಷರಾ ಬರೆಯಿತು, ತನೀಖೆ ಮುಗಿಯಿತು. 

2) ಮೂರು ಮಕ್ಕಳು ಅನಾಥವಾದವು ಬೆಳಗಿನ ಹೊತ್ತು ಅಪ್ಪ, ಸಂಜೆ ಅಮ್ಮ. ನಾನು ಗೆದ್ದೆ ಎಂದು  ಕೊರೋನಾ ಕೇಕೆ ಹಾಕಿ ನಕ್ಕಿತು ಮಕ್ಕಳ ಕಣ್ಣೀರು ಕಾಣಲೇ ಇಲ್ಲ.  ಜೊತೆಗಿದ್ದವರು ಅವರ ತಿಜೋರಿ ಮೇಲೆ ಕಣ್ಣಾಕಿ ಮಕ್ಕಳು ದಿಕ್ಕಾಪಾಲಾಗದಿದ್ದರೆ ಸಾಕು ಎಂದು ಟೀವಿ ನೋಡುಗರು ಪಶ್ಚಾತ್ತಾಪದಿಂದ ಹಲುಬಿಕೊಂಡರು.

3) ದಿನವೆಲ್ಲಾ ಕೊರೋನಾ ಸಮಾಚಾರ ಟೀವಿಯಲ್ಲಿ ನೋಡಿ ನೋಡಿ ತನಗೂ ಕೊರೋನಾ ಬಂದಿರಬಹುದೆಂದು ಟೆಸ್ಟ್ ಮಾಡಿಸಿದ.  ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗದೇ ನರಳಾಡಿ ನರಳಾಡಿ ಸಾಯುತ್ತಿರುವ ದೃಶ್ಯ ನೆನೆದು ತನಗೂ ಪಾಸಿಟಿವ್ ಬಂದು ಉಲ್ಬಣಿಸಿ ಕೊನೆಗೆ ಇವರ ಸಾಲಿನಲ್ಲಿ ನಾನೂ ಓಬ್ಬನಾದರೆ ಎಂಬ ಭಯ  ಕಾಡಿ ನೇಣಿಗೆ ಶರಣಾದ.  ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿತ್ತು.  ಅನ್ಯಾಯವಾಗಿ ಸತ್ನಲ್ಲೋ ಎಂದು ಕುಟುಂಬಸ್ಥರು ಗೋಳಾಡಿಕೊಂಡರು.

4) ಹಣದ ದುರಾಸೆಗೆ ಕಣ್ಣು ಕುರುಡಾಯಿತು ಆಸ್ಪತ್ರೆಯ ಬೆಡ್ ಗಳು ಬಲಿಯಾದವು, ಆಕ್ಸಿಜನ್ ಸಿಲೀಂಡರ್ ಥಕಥೈ ಕುಣಿದವು, ರೆಮಡಿಸಿವಿರ್ ಇಂಜೆಕ್ಷನ್ ಗಗನಕ್ಕೇರಿದ್ದು, ಪರಿಣಾಮ ಸ್ಮಶಾನಗಳು ಭರ್ತಿಯಾಗಿವೆಯೆಂದು ಬೋರ್ಡ್ ತಗಲಾಕಿಕೊಂಡವು ಕ್ಯೂ ಸಿಸ್ಟಮ್ ನಲ್ಲಿ ಟೋಕನ್ ವಿತರಿಸಿ ಹೊಸ ಭಾಷ್ಯ ಬರೆದವು.

5) ಐಪಿಎಲ್ ಪಂದ್ಯಾವಳಿಯಲ್ಲಿ ಮಗ್ನವಾಗಿ ಕೆಲವರು ಕೇಕೆ ಹಾಕಿದರು ಹೊರಗಡೆ ಕೊರೋನಾದಿಂದ ನರಳುತ್ತ ಜೀವನ್ಮರಣದ ಹೋರಾಟದ ದಯನೀಯ ಸಂದರ್ಭದಲ್ಲೂ  ಇದೇ ಕೊರೋನಾ ಆಟಗಾರರಿಗೆ ವಕ್ಕರಿಸಿ ಪಂದ್ಯಾವಳಿಯನ್ನೇ ರದ್ದು ಮಾಡಿಸಿತು.

4-5-2021. 9.55pm

ಗೌರಿಯ ಗಡಿಬಿಡಿ (ಪುಟ್ಕಥೆ)

ಅದೊಂದು ಸಂಜೆ.  ಹಿತ್ತಲಲ್ಲಿ ಡೇರೆ ಗಿಡಕ್ಕೆ ಗೊಬ್ಬರ ಹಾಕುತ್ತಾ ಗಿಡಗಳ ಸೇವೆಯಲ್ಲಿ ಮಗ್ನಳಾಗಿದ್ದಳು ಗೌರಿ.

ಇದ್ದಕ್ಕಿದ್ದಂತೆ ಫೋನ್ ರಿಂಗಣಿಸಿದಾಗ   ಮನಸ್ಸಿಲ್ಲದ ಮನಸ್ಸಿನಿಂದ ಎದ್ದು ಹೋಗಿ ರಿಸೀವ್ ಮಾಡಿದಾಗ ಮಗಳ ಫೋನು!

“ಹಲ್ಲೋ….ಮಗಳೆ ಎಲ್ಲಿದ್ದೆ? ಯಾವಾಗ ಹೊರಡೋದು? ಆರಾಮಿದ್ಯ?” ಪ್ರಶ್ನೆಗಳ ಸುರಿಮಳೆ ಸಂತೋಷದಲ್ಲಿ.

“ಇರು ಆಯಿ.  ಬರ್ತಾ ಇದ್ದಿ.  ಪಾಸ್ ಸಿಕ್ತು. ರಾತ್ರಿಯ ಬಸ್ಸಿಗೇ ಹೊರಟು ಬರ್ತಿದ್ದಿ.  ಬೆಳಗಾಗುವಷ್ಟರಲ್ಲಿ ನಾನು ಮನೆಯಲ್ಲಿ ಇರ್ತಿ. ನೀ ಆರಾಮಿದ್ಯ? …..”ಆ ಕಡೆಯಿಂದ ಮಗಳ ಮಾತೂ ನಿಲ್ಲುತ್ತಿಲ್ಲ. ಒಟ್ಟಿನಲ್ಲಿ ಇಬ್ಬರಿಗೂ ತಡೆಯಲಾಗದಷ್ಟು ಖುಷಿ. 

“ರೀ…ಇಲ್ಕೇಳಿ ನಾಳೆ ಬೆಳಿಗ್ಗೆ ಮಗಳು ಬತ್ತಾ ಇದ್ದು.”

“ಓಹೋ…ಅಮ್ಮ ಮಗಳ ದರ್ಬಾರು ಜೋರು ನಾಳಿಂದ.  ಹೌದು ಕೂಸು ಬತ್ತಾ ಇದ್ದು ಹೇಳಿ ಈಗಲೇ ಅಡಿಗೆ ಮನೆ ಸೇರ್ಕಂಡ್ಯ ಹ್ಯಾಂಗೆ? ಎಂತಾ ಸ್ಪೆಷಲ್ಲು ಸ್ವಲ್ಪ ಯಂಗೂ ಹೇಳೆ”

“ಥೊ….ಯಂತಾ ಇಲ್ರ… ಕೂಸಿಗೆ ಸ್ವಲ್ಪ ಬಾಯ್ಬೆಡಿಗೆಗೆ ಚಕ್ಲೀನರು ಮಾಡನ ಹೇಳಿ”

ಗೌರಿ ನಾಗಂದಿಗೆ ಮೇಲಿನ ಡಬ್ಬಿ ತೆಗೆಯುತ್ತಾ ಅಯ್ಯೋ… ಹೇಳುತ್ತ ಕುಸಿದು ಕುಳಿತಳು.

“ಇದೆಂತಾ ಮಾಡ್ಕಂಡ್ಯೆ.  ಯಂಗೆ ಹೇಳಿದ್ದಿದ್ರೆ ತೆಕ್ಕೊಡ್ತಿದ್ನಿಲ್ಲ್ಯ? ಶಿವನೆ ಸೊಂಟನೆ ಉಳಸ್ಕಂಬುಟ್ಯಲೆ?  ಕೊರೋನಾ ಬಂಜು. ಯಾವ ಆಸ್ಪತ್ರೆಗೆ ಹೋಗವ ಎಂತನ.  ಪಾಪ ಕೂಸು ಹ್ಯಾಂಗೊ ಪಾಸ್ ಗಿಟ್ಟಿಸ್ಕಂಡು ಬಸ್ಸಲ್ಲಿ ಬರ್ತಾ ಇದ್ದು. ನೀ ನೋಡಿದರೆ ಹೀಂಗ ಮಾಡ್ಕಂಡೆ.  ಬಾ ಮಲಕ್ಕ.”

ಕಾಯಂಗಡಿ ಪಾಪಣ್ಣನತ್ತಿರ ತನ್ನ ಕಾಲು ನೋವಿಗೆ ತಂದ ನೋವಿನ ಎಣ್ಣೆಯನ್ನೇ ಹೆಂಡತಿ ಸೊಂಟಕ್ಕೆ ನೀವಿ ಬೆಳಿಗ್ಗೆ ಬರುವ ಮಗಳ ಬರುವಿಕೆಯ ನಿರೀಕ್ಷೆಯಲ್ಲಿ ಯಾಕೊ ಸಮಯ ಸಾಗುತ್ತಲೇ ಇಲ್ಲ, ಯಾಕೊ ಸಮಯ ಸಾಗುತ್ತಲೇ ಇಲ್ಲ ಎಂಬ ಅವನ ಗೊಣಗಾಟ ಮಲಗಿದ್ದ ಹೆಂಡತಿಗೂ ಎಚ್ಚರವಾಯಿತು.  ಇಬ್ಬರೂ ಮಗಳು ಬರುವಿಕೆಯ ನಿರೀಕ್ಷೆಯಲ್ಲಿ.

ಬೆಳಗಿನ ಎಂಟೂವರೆ ಗಂಟೆ.  ನಿರೀಕ್ಷೆಯಂತೆ ಮಗಳ ಆಗಮನ ತಡವಾಗಿ.

“ಕಾದು ಕಾದು ಹೈರಾಣಾಗೋದಿ” ಮಗಳೆ.  ಎಂತಕ್ಕಿಷ್ಟೊತ್ತಾತೂ?  ಬಾರೆ ಇಲ್ಲಿ.  ಯಂಗೆ ಎದ್ದು ಬರಲ್ಲಾಗ್ತಿಲ್ಯೆ.  ಸುಡುಗಾಡು ಸೊಂಟಿಡ್ಕಂಡಿಗೀದೆ….”

“ಆಯಿ ಅಪ್ಯಾ ನಿಂಗ ದೂರನೆ ಇರಿ.  ಹತ್ರಕ್ಕೆ ಬರಡಿ. ನಾ ಹೋಗಿ ಮಿಂದಕಂಬತ್ತಿ.   ಯನ್ನ ಬ್ಯಾಗ್ ಗೀಗ್ ಮುಟ್ಟಿಕ್ಕಡಿ….” ಹೇಳುತ್ತ ಬಚ್ಚಲ ಮನೆಗೆ ಹೋದ ಮಗಳ ಕಂಡು ಇಬ್ಬರೂ ….

” ಎಲ್ಲೊ ಹೊರಗಾಜಾಂಕಾಣ್ತು.  ಎಷ್ಟೆಂದರೂ ನಮ್ಮ ಮಗಳಲ್ದ?  ಪ್ಯಾಟೆಲ್ಲಿದ್ರೂ ಶಾಸ್ತ್ರ ಸಂಪ್ರದಾಯ ಮರೆತಿದ್ದಿಲ್ಲೆ.”

“ಹೌದ್ರೀ…ಆದ್ರೆ ಅದೆಂತದೊ ಬಾಯಿ ಮೂಗಿಗೆ ಎಂತದೊ ಹಾಕ್ಕಂಜಲೀ…ಎಂತದ್ರ…?”

” ಅದ…. ಟೀವಿಯಲ್ಲಿ ನೋಡಿದ್ದಿಲ್ಯನೆ….ಕೊರೋನಾ ಬಂಜು ಹೇಳಿ ಹಾಕ್ಯಳವಡಾ.  ಮಾಸ್ಕೂ ಹೇಳ್ತ.  ನಿಂಗೋ ಬರೀ ಧಾರಾವಾಹಿ ನೋಡದ್ರಲ್ಲೆ ಆಗೋತು.  ದೇಶದಲ್ಲಿ ಎಂತಾ ಆದ್ರೂ ಗೊತ್ತಿಲ್ಲೆ.”

“ಅಲ್ದ್ರ….”

“ನೀ ಮಾತಾಡಡಾ. ತಿಂಡಿ ಚಾನರೂ ಮಾಡ್ತಿ.” ಎದ್ದು ಅಡಿಗೆ ಮನೆ ಕಡೆ ಹೋಗೊ ಸರದಿ ಗೌರಿಯ ಗಂಡನದಾಯಿತು!

12-5-2020. 2.41pm

ಅಜ್ಜಿ ಮನೆ (ಪುಟ್ಕಥೆ)

ಅವಳಿನ್ನೂ ಚಿಕ್ಕವಳು.  ಮಲೆನಾಡಿನ ಹಳ್ಳಿಯಲ್ಲಿರುವ ತನ್ನ ಅಜ್ಜಿಯ ಮನೆಗೆ ಹೋಗುವ ಕಾತುರ ಸದಾ.

“ಈ ಬಾರಿ ಅಜ್ಜಿ ಮನೆಗೆ ಪರೀಕ್ಷೆ ಮುಗಿದ ತಕ್ಷಣ ನಾನು ಹೋಗಲೇಬೇಕು” ಆಗಲೇ ಅಮ್ಮನಿಗೆ ಹೇಳಿಯೂ ಆಗಿತ್ತು.

“ಆಯಿತು ಹೋಗೋಣ, ಮೊದಲು ಪರೀಕ್ಷೆಗೆ ಚೆನ್ನಾಗಿ ಓದು.  ನಾನು ಕರೆದುಕೊಂಡು ಹೋಗುತ್ತೇನೆ.” ಎಂಬ ಉತ್ತರ ಅಮ್ಮನಿಂದ ಬಂದಿದ್ದೇ ತಡ ತದಾಂಗು ತಕಧಿಮಿ ತೋಂ ಕುಣಿದೇ ಬಿಟ್ಟಳು ಝಂಗನೆ ಎಗರಿ ತಡೆಯಲಾಗದ ಸಂತೋಷದಲ್ಲಿ.  ಇವಳ ಖುಷಿಯ ಅವತಾರಕ್ಕೆ ನಗುವ ಸರದಿ ಹೆತ್ತವರದು.

ಸರಿ ಪರೀಕ್ಷೆ ವೇಳಾಪಟ್ಟಿ ಬಂತು.  ಕ್ಯಾಲೆಂಡರ್ ಮೇಲೆ ನೋಟ್ ಮಾಡಿಕೊಂಡಿದ್ದೂ ಆಯಿತು ಜೋರು ಓದುವ ಅಬ್ಬರ.  ಇವಳ ಓದಿನ ದೆಶೆಯಿಂದ ಅವಳಮ್ಮನಿಗೆ ಧಾರಾವಾಹಿ ನೋಡೋದಕ್ಕೂ ಕತ್ತರಿ ಬಿತ್ತು.  ಏಳನೇ ಕ್ಲಾಸ್ ಪಬ್ಲಿಕ್ ಪರೀಕ್ಷೆ ಬೇರೆ ಮಗಳು ರಾಜ್ಯಕ್ಕೆ ರಾಂಕಿಂಗ್ ಲೀಸ್ಟಲ್ಲಿ ಇರಬೇಕೆನ್ನುವ ಆಸೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಅವಳ ಹಿಂದೆ. ಏಕೆಂದರೆ ಅವಳು ಓದಿನಲ್ಲಿ ಸದಾ ಮುಂದೆ.

ಇನ್ನೇನು ಎರಡು ದಿನ ಇದೆ ಪರೀಕ್ಷೆಗೆ ಊರಿನಿಂದ ಫೋನು ; “ಅಜ್ಜಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.  ಗಾಬರಿ ಪಡುವುದು ಬೇಡ.  ಮೈಲ್ಡ್ ಹಾರ್ಟ್ ಎಟ್ಯಾಕ್ ಆಗಿದೆ. ಆಸ್ಪತ್ರೆಗೆ ಸೇರೀಸಿದ್ದೇವೆ.”

ತಮ್ಮನಿಂದ ಬಂದ ಸುದ್ದಿ ಕೇಳಿ ತಕ್ಷಣ ಹೊರಟು ನಿಂತ ಅಪ್ಪನ ಹಿಂದೆ ಮಗಳದೊಂದೇ ಹಟ “ನಾನೂ ಬರುತ್ತೇನೆ. ಅಜ್ಜಿ ನೋಡಬೇಕು.  ನಾಳೆ ವಾಪಸ್ ಬಂದು ಬಿಡೋಣ.  ನನ್ನನ್ನೂ ಕರೆದುಕೊಂಡು ಹೋಗು.”

ಬೇಡವೆಂದರೂ ಕೇಳದ ಮಗಳನ್ನು ಕರೆದುಕೊಂಡು ಮೂವರು ಊರ ಬಸ್ಸು ಏರಿ ಊರು ತಲುಪಿದಾಗ ರವಿ ತನ್ನ ಮನೆ ಹಾದಿ ಹಿಡಿಯುವ ಸಮಯ.  ನಸು ಬೆಳಕಿನಲ್ಲಿ  ಕಾಲು ದಾರಿಯಲ್ಲಿ ಅಜ್ಜಿಯ ಮನೆಗೆ ಹೋಗುವ ದಾರಿ ಮರೆಯದ ಅವಳು ಅಮ್ಮನಿಗೆ”ಕಳ್ದ ಸಲ ಹಿಂಗೆ ಅಲ್ದ ಬಂದಿದ್ದು!” ಎಂದು ಕೇಳುತ್ತಿದ್ದಂತೆ ಅವಳಮ್ಮ “ಹೌದು ಮಾರಾಯ್ತಿ.  ಕತ್ತಲೆ ಆಗುವುದರೊಳಗೆ ಮನೆ ಸೇರೋಣ.‌ ಮತ್ತೆ ನಾಳೆ ಹೊರಡಬೇಕು.  ಪರೀಕ್ಷೆ ಇದೆ ನೆನಪಿದೆಯಾ?  ಬೇಗ ಬೇಗ ಹೆಜ್ಜೆ ಹಾಕು” ಎನ್ನುತ್ತಾ ಮುಂದೆ ಸಾಗುತ್ತಾಳೆ. 

ಅಜ್ಜಿಯ ಮನೆಗೆ ಕಾಲಿಡುತ್ತಿದ್ದಂತೆ ಅಜ್ಜಿಯಿಲ್ಲದ ಆ ಮನೆ ಭಣಗುಡುತ್ತಿತ್ತು.  ಅಜ್ಜಿಯ ಪಾತ್ರ ಆ ಮನೆಯ ಅಡಿಪಾಯವಾಗಿತ್ತು.  ಮಕ್ಕಳು ಮೊಮ್ಮಕ್ಕಳ ಸಂತೋಷದ ಗೂಡು ಶೋಕ ಛಾಯೆಯಲ್ಲಿ ಮುಳುಗಿತ್ತು.  ಸದ್ಯ ಅಜ್ಜಿ ಆಸ್ಪತ್ರೆಯಿಂದ ಹುಷಾರಾಗಿರಿ ಮನೆಗೆ ವಾಪಸ್ಸು ಬಂದರೆ ಸಾಕೆಂಬ ಪ್ರಾರ್ಥನೆ ಎಲ್ಲರದಾಗಿತ್ತು!

22-5-2020. 10.15pm

ದೇವರೇ ದಿಕ್ಕು (ಪುಟ್ಕಥೆ)

ಇನ್ನೂ ಚುಮು ಚುಮು ಬೆಳಗು. ಹಕ್ಕಿಗಳ ಕಲವರ ಕಿವಿಗೆ ಬಿದ್ದಂತೆ ಎಚ್ಚರಾಗಿಬಿಟ್ಟಿತ್ತು.  ಆದರೆ ಇವತ್ತು ಭಾನುವಾರ.  ಇಷ್ಟು ಬೆಳಗ್ಗೆ ಎದ್ದು ಏನು ಮಾಡೋದು.  ಈ ಕೊರೋನಾದಿಂದಾಗಿ ಆಫೀಸು ಶಾಲೆ ಎಲ್ಲ ಬಂದ್ ಅಂದ ಮೇಲೆ ಗಂಡ ಮಗಳ ಗೊರಕೆ ಮುಂದುವರೆದಿತ್ತು ನಿರಾಳವಾಗಿ. 

ನವ್ಯ ಮಲಗಿದಲ್ಲೇ ಯೋಚಿಸುತ್ತಾಳೆ ; ಅಲ್ಲಾ ನನಗೆ ಮಾತ್ರ ಯಾಕೆ ಇವರಂತೆ ಇಷ್ಟು ನಿರಾಳವಾಗಿ ನಿದ್ದೆ ಮಾಡಲು ಸಾಧ್ಯ ಆಗುತ್ತಿಲ್ಲ?  ಮಾಮೂಲಿನಂತೆ ಬೆಳಿಗ್ಗೆ ಐದು ಗಂಟೆಗೆಲ್ಲ ಎಚ್ಚರಾಗಿ ಬಿಡುತ್ತಲ್ಲಾ?  ಒಡನೆ ಸಾಕಿದ ಬೆಕ್ಕು ನಾಯಿಗಳ ಬಗ್ಗೆ ಯೋಚನೆ ಬೇರೆ. ಮೊದಲು ಅವುಗಳಿಗೆ ಹಾಲು ಹಾಕದೇ ಕೆಲಸ ಮುಂದುವರಿಸಿದ ದಾಖಲೆನೇ ಇಲ್ಲ.  ಅವುಗಳಿಗೂ ತಮ್ಮ ಅಮ್ಮ ಯಾವಾಗ ಹಾಲು ಹಾಕ್ತಾಳೆ ಅಂತ ಕಾದು ಕೂತಿರುತ್ತವೆ. 

ಆದರೆ ಮನೆಯ ಉಳಿದವರಿಗೆ ಇದ್ಯಾವುದರ ಯೋಚನೆನೆ ಇಲ್ಲ.  ತಾವಾಯಿತು ತಮ್ಮ ಕೆಲಸವಾಯಿತು.  ಪ್ರೀತಿ ಉಕ್ಕಿ ಹರಿದಾಗ ಟಾಮಿ,ಲಿಲ್ಲಿ ಅಂತ ಅವುಗಳನ್ನು ಮುದ್ದುಗರೆಯಲು ಬರುವುದು ಕಂಡಾಗ ನವ್ಯಾ ಒಮ್ಮೊಮ್ಮೆ ಕೋಪಗೊಂಡು “ಓಹೋ…. ಭಾರಿ…. ಪ್ರೀತಿ ನಿಮ್ಮಗಳಿಗೆ.  ಒಂದಿನ ಹಾಲಕಲ್ಲ , ವಾಕಿಂಗ್ ಕರೆದುಕೊಂಡು ಹೋಗಿದ್ದಂತೂ ನಾ ಕಾಣೆ.  ಈಗ ನೋಡಿದ್ರೆ ಬಂದ್ಬಿಟ್ರಿ.  ಪ್ರೀತಿ ಉಕ್ಕಿ ಹರಿದೋಯ್ತು…

“ಹೌದಮ್ಮಾ ನೀನೆ ಎಲ್ಲಾ ಮಾಡುವುದು.  ನಮಗೇನು ಅವುಗಳ ಬಗ್ಗೆ ಪ್ರೀತಿ,ಕರುಣೆ ಇಲ್ಲ. ” ಕಿತ್ತಾಟ ಮಗಳಿನದು.  ಜೊತೆಗೆ ಎಜಮಾನರ ಧ್ವನಿ ಸೇರಿ….

“ಹೋಗಿ ಏನಾದರೂ ಮಾಡ್ಕೊಳಿ. ನನಗೆ ಅಡಿಗೆ ಮನೆಯಲ್ಲಿ ಬಂಡಿ ಕೆಲಸ ಇದ್ದೇ ಇದೆ ಯಾವಾಗಲೂ.” ದಬದಬ ಹೋಗುವ ಅವಳ ನಡಿಗೆ ನೋಡಿ ಹಿಂದಿನಿಂದ ಗೊಳ್ಳೆಂದು ನಗುವ ಅಪ್ಪ ಮಗಳು!

ನಗುತ್ತ ಯೋಚನಾಲಹರಿಯಿಂದ ಹೊರ ಬಂದ ನವ್ಯಾ ದಿಢೀರನೆ ಏನೋ ನೆನಪಾದಂತಾಗಿ ಎದ್ದು ಏಣಿ ಮೆಟ್ಟಿಲು ಕೆಳಗೆ ಬಗ್ಗಿ ನೋಡುತ್ತಾಳೆ.  ಖುಷಿ ತಡೆಯೋಕಾಗದೆ…”ರೀ…. ಎದ್ದು ಬನ್ನಿ ಬೇಗಾ… ಸುಮೀ… ಎದ್ದು ಬಾರೆ ಇಲ್ಲಿ.  ಇಲ್ನೋಡಿಇಇಇ…ನಮ್ಮನೆ ಚಿಂಟಿ ಎರಡು ಮರಿ ಹಾಕಿದೆ. ಎಷ್ಟು ಚಂದ ಇದೆ……”

ಹಿಂದಿನ ದಿನವೇ ಆಗಾಗ ಕೂಗುತ್ತಿರುವ ಚಿಂಟಿಗೆ ಇವತ್ತು ರಾತ್ರಿ ಮನೆ ಒಳಗೇ ಇರಲಿ. ಹೊರಗೆ ಮಾಳನ ಕಾಟ ಅಂತ  ಒಂದು ರಟ್ಟಿನ ಬಾಕ್ಸಲ್ಲಿ ಬಟ್ಟೆ ಹಾಕಿ ಮಲಗಲು ವ್ಯವಸ್ಥೆ ಮಾಡಿದಾಗ ಖುಷಿಯಿಂದ ಅಲ್ಲಿ ಮಲಗಿತ್ತು.  ಬೆಳಿಗ್ಗೆ ನೋಡಿದರೆ ಮರಿ ಹಾಕಿ ನೆಕ್ಕುತ್ತಿದೆ! ಎಲ್ಲಾ ಆ ದೇವರೇ ದಿಕ್ಕು ಈ ಬೆಕ್ಕುಗಳಿಗೆ‌.  ನಿಟ್ಟುಸಿರು ಬಿಡುತ್ತಿದ್ದಂತೆ ಬಂದ ಮಗಳು ” ಅಯ್ಯಿ… ಎಷ್ಟು ಮುದ್ದಾಗಿದೆ.  ನಾನು ಎತ್ತಿಕೊಳ್ಳಲಾ? “….ಅನ್ನುತ್ತಿದ್ದಂತೆ ” ನಿನ್ನೆನೆ ಹೇಳಿದ್ದು ಮರೆತುಬಿಟ್ಯಾ? ಬೆಕ್ಕು ಹರಕತ್ತೆ.  ಮುಟ್ಟಬೇಡಾ.  ನಾಲ್ಕು ದಿನ ಆಗಲಿ.  ದೂರ ನಿಂತು ನೋಡು”.

ಕಣ್ಣು ಬಿಡದ ಮುದ್ದಾದ ಮರಿಗಳನ್ನು ನೋಡುತ್ತಾ ಮಗಳು ಅಲ್ಲೇ ಕುಳಿತಿದ್ದಳು.  ಜೊತೆಗೆ ಅಪ್ಪನನ್ನೂ ಕೂಗಿ ಎಬ್ಬಿಸಿ ಬರುವಂತೆ ಮಾಡಿದ್ದಲ್ಲದೇ ಹೆಸರೇನಿಡಲಿ ಎಂಬ ಪ್ರಶ್ನೆ ಬೇರೆ.

“ಅಮ್ಮಾ ಗಂಡೋ ಹೆಣ್ಣೋ ಹೇಳೆ…  ಹೆಸರಿಡಬೇಕು.” ಪದೆ ಪದೆ ಕೇಳುತ್ತಿದ್ದಂತೆ “ಅದೆಷ್ಟು ಸಾರಿ ಕೇಳುತ್ತಿ?  ಅಪ್ಪ ಮಗಳು ಇಬ್ಬರೂ.
ಮುಟ್ಟಲು ಬಿಡುವುದಿಲ್ಲ ಅದು.  ಗಂಡಾ ಹೆಣ್ಣಾ.  ನಡಿರಿ ಎದ್ದು ಸಾಕು.  ಪಾಪ ಅದಕ್ಕೆಷ್ಟು ಸಂಕಟ ಆಯಿತೋ  ಏನೋ.  ಮನುಷ್ಯರಿಗಾದರೆ ಅದೆಷ್ಟು ಸೇವೆ.  ಈ ಪ್ರಾಣಿಗಳಿಗೆ ಯಾವ ಸೇವೆಯೂ ಇಲ್ಲ …..”

ನವ್ಯಾಳ ಮಾತು ಮುಂದುವರೆದಿತ್ತು.  ಅಪ್ಪ ಮಗಳಿಬ್ಬರೂ ಇವಳ ಗದರುವಿಕೆಗೆ ಅಲ್ಲಿಂದ ಆಗಲೇ ಎದ್ದು ಮತ್ತೆ ಹಾಸಿಗೆ ಸೇರಿಕೊಂಡಾಗಿತ್ತು.  ಚಿಂಟಿ ಮ್ಯಾವ್ ಮ್ಯಾವ್ ಎಂದು ಹಾಲು ಕೊಡೆಂದು ಅಮ್ಮನನ್ನು ಕರೆಯುತ್ತಿತ್ತು.  ಪುಟ್ಟ ಬೆಕ್ಕಿನ ಮರಿಗಳ ಆಗಮನ ಕೊರೋನಾ ಲಾಕ್ ಡೌನ್ ಬೇಸರ ಓಡಿಸಿತ್ತು.

                   ****************

31-5-2020. 5.04pm