(7) ಈ ದಿನದ ಓದು

(1) ಕಡಮ್ಮಕಲ್ಲು

(2) ಜಲಪ್ರಳಯ

ಲೇಖಕರು – ಶ್ರೀ ನೌಶಾದ್ ಜನ್ನತ್

ಕೊಡಗಿನ ಲೇಖಕರಾದ ಶ್ರೀ ನೌಶಾದ್ ಜನ್ನತ್ ರವರ “ಕಡಮ್ಮಕಲ್ಲು ಎಸ್ಟೇಟ್”ಕಾದಂಬರಿ ಮತ್ತು  “ಜಲಪ್ರಳಯ” ಈಗೆರಡು ವರ್ಷಗಳ ಹಿಂದೆ ಕೊಡಗಿನಲ್ಲಿ ಮಳೆಯಿಂದ ಸಂಭವಿಸಿದ ಪ್ರಳಯದ ಅನಾಹುತಗಳ ಸತ್ಯವನ್ನು ಬಿಚ್ಚಿಟ್ಟ ಪುಸ್ತಕಗಳನ್ನು ನನಗೆ ಕಳಿಸಿದ್ದು ಓದುತ್ತ ಮನಸ್ಸು ಸ್ಥಬ್ಧವಾದ ಅನುಭವ ನೀಡಿತು. 

“ಕಡಮ್ಮಕಲ್ಲು” ಕಾದಂಬರಿಯಲ್ಲಿ ಕೇರಳದಿಂದ ವಲಸೆ ಬಂದ ಒಂದು ಕಾರ್ಮಿಕ ಮುಸ್ಲಿಂ ಕುಟುಂಬದ ತಾಯಿ ಮಗಳು ಅಸಹಾಯಕ ಸ್ಥಿತಿಯಲ್ಲಿ ಇರುವಾಗ ಅದೇ ಊರಿನ ಇಬ್ಬರು ಅವಕಾಶವಾದಿಗಳು ಹೇಗೆ ಅವರ ಆಸ್ತಿಯನ್ನು ಹೆದರಿಸಿ, ಬೆದರಿಸಿ, ಇಲ್ಲಸಲ್ಲದ ಆರೋಪ ಹೊರಿಸಿ ನಯವಂಚಕ ಮಾತುಗಳಿಂದ ತಮ್ಮ ಆಸ್ತಿಯನ್ನು ಕಡಿಮೆ ಬೆಲೆಗೆ ಮಾರಿ ಹೋಗುವಂತೆ ಮಾಡಿ ಮುಂದಿನ ದಿನಗಳಲ್ಲಿ ಅವರವರಲ್ಲೇ ವೈಮನಸ್ಸು ಬೆಳೆದ ಚಿತ್ರಣವನ್ನು ತಮ್ಮ ಬರವಣಿಗೆಯಲ್ಲಿ ನಮೂದಿಸುವ ಪ್ರಯತ್ನ ಮಾಡಿದ್ದಾರೆ.  ವಾಸ್ತವದಲ್ಲಿ ನಮ್ಮ ಸುತ್ತಮುತ್ತಲಿನ ಅನೇಕ ಕುಟುಂಬಗಳು ಈ ರೀತಿ ಶೋಷಣೆಗೆ ಒಳಗಾಗಿರುವುದು ನಾವು ಕಾಣುತ್ತಲೇ ಇದ್ದೇವೆ.  ಆದರೆ ಇಂತಹ ಘಟನೆಗಳನ್ನು ಓದುಗರ ಮನಮುಟ್ಟುವಂತೆ
ಬರೆಯುವುದು ಅಷ್ಟು ಸುಲಭವೂ ಅಲ್ಲ.  ಶ್ರೀ ನೌಶಾದ್ ರವರು ತಮ್ಮ ಮೊದಲ ಕಾದಂಬರಿಯಲ್ಲೇ ಯಶಸ್ಸು ಸಾಧಿಸಿರುವುದು ಅವರೇ ಹೇಳಿದಂತೆ ಪುಸ್ತಕ ಪ್ರಕಟಗೊಂಡ ಎರಡೇ ದಿನದಲ್ಲಿ ಮರು ಮುದ್ರಣಗೊಂಡಿರುವುದೇ ಸಾಕ್ಷಿ. 

ಓದಲು ಹಿಡಿದ  ಕಾದಂಬರಿ ಮುಚ್ಚಿಡುವುದು ಪೂರ್ತಿ ಮುಗಿದ ನಂತರವೇ.  ಕಾರಣ ಕಾದಂಬರಿಯಲ್ಲಿ ಬರುವ ಫಾತಿಮಾ ಅಸಹಾಯಕಳಾಗಿ ತನ್ನ ಆಸ್ತಿಯನ್ನು ಮಾರುವಾಗಿನ ಪುಟಗಳನ್ನು ಓದುವಾಗ ನಾನಂತೂ ಒಂದು ರೀತಿ ಉದ್ವೇಗಕ್ಕೆ ಒಳಗಾಗಿ “ಬೇಡಾ ಮಾರಬೇಡಿ. ನಿಮಗೆ ಮೋಸ ಮಾಡುತ್ತಿದ್ದಾರೆ.  ಬೇಡಾ ಬೇಡಾ…..” ಅಂದುಕೊಳ್ಳುತ್ತ ಅಲವತ್ತಕೊಂಡು ಕಣ್ಣು ಮಂಜಾಗಿಸಿಕೊಂಡೆ.  ತೀವ್ರವಾದ ಆತಂಕ, ಸಂಕಟ. ಓದುತ್ತಿರುವುದು ಕಥೆ ಎಂಬುದನ್ನೂ ಮರೆತು ಅಷ್ಟು involved ಆಗುವಂತೆ ಬರೆದಿರುವುದಕ್ಕೆ ಲೇಖಕರಿಗೆ ಭೇಷ್ ಅನ್ನಲೇ ಬೇಕು.  ಓದಿ ಮುಗಿಸಿದಾಗ ಇನ್ನಷ್ಟು ಮುಂದುವರೆಸಬಹುದಿತ್ತು. ಯಾಕೆ ಹೀಗೆ ಮಾಡಿದರು ಎಂಬ ನಿರಾಶೆ ಕಾಡಿತು. 

” ಜಲಪ್ರಳಯ ” ನಡೆದ ಸತ್ಯ ಘಟನೆಗಳ ಸುತ್ತ ಇಂಚಿಂಚಾಗಿ ಮಾಹಿತಿಗಳನ್ನು ಸಂಗ್ರಹಿಸಿ, ಸ್ವತಃ ಲೇಖಕರು ‘ನಮ್ಮ ಕೊಡಗು’ ತಂಡ ಕಟ್ಟಿಕೊಂಡು ಸಂತೃಸ್ತರಿಗೆ ಶಕ್ತಿ ಮೀರಿ ನೆರವಾಗಿದ್ದಲ್ಲದೇ ಅನೇಕ ಅಪವಾದಗಳನ್ನು ಎದುರಿಸಿ ಸಹಾಯ ಮಾಡುವ ಸೋಗಿನಲ್ಲಿ ನಿರಾಶ್ರಿತರಿಗೆ ಆದ ವಂಚನೆ, ಮೋಸ, ಸಂತೃಸ್ತರ ಕಣ್ಣೀರ ಕಥೆ, ಕೊಡಗಿನಲ್ಲಾದ ಜಲಪ್ರಳಯದ ಅನಾಹುತ, ಹಣವಂತರ, ರಾಜಕೀಯ ಪಕ್ಷಗಳ ಮಾತಿನ ಸೋಗು, ಕೊಡಗಿನ ದುರಂತಕ್ಕೆ ವೈಜ್ಞಾನಿಕ ಹಾಗೂ ಮಾನವನ ದುರಾಸೆಯ ಕಾರಣಗಳನ್ನು ಚಿತ್ರಗಳ ಸಮೇತ ತಮ್ಮ ಲೇಖನಗಳಲ್ಲಿ ಬರೆದಿದ್ದಾರೆ.

ತಲೆತಲಾಂತರದಿಂದ ಬದುಕು ನಡೆಸಿದ ಮನೆಗಳಲ್ಲಿ ಸ್ಟೇ ಹೋಂ ನಿರ್ಮಾಣ ಮಾಡಿ ಷಹರದ ಜನ ಬಂದು ಉಳಿದು ಮೋಜು ಮಸ್ತಿಯಲ್ಲಿ ತೊಡಗಿದಾಗ ಅವರು ಕೊಡುವ ಹಣಕ್ಕೆ ಹೇಗೆ ಅಲ್ಲಿಯ ಜನರು ಕುರುಡಾಗಿ ಧನದಾಹಿಗಳಾದರು ಇತ್ಯಾದಿ ಇತ್ಯಾದಿ ಬರೆಯುತ್ತ ಪರೋಕ್ಷವಾಗಿ ಕೊಡಗಿನ ಜನರೂ ಕಾರಣಕರ್ತರು ಎಂಬುದನ್ನು ಒಪ್ಪಿಕೊಂಡಿದ್ದಾರೆ.  ಈ ಪುಸ್ತಕದ ಬಗ್ಗೆ ಬರೆಯುತ್ತ ಹೋದರೆ ಪುಟಗಳು ಬೆಳೆಯುತ್ತವೆ. ಅಷ್ಟಿವೆ ಕಣ್ಣೀರ ಕಥೆಗಳು, ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದ ಜನರ ಸಂಕಷ್ಟಗಳು.   ಕೊಡಗಿನಲ್ಲಿ ಹೀಗೂ ಆಗಿತ್ತು ಎಂದು ಮುಂದಿನ ಜನಾಂಗಕ್ಕೆ ಓದಿ ತಿಳಿಯಲು ಕಾದಿರಿಸಬೇಕಾದಂತ ಪುಸ್ತಕವಿದು. 

ಟೀವಿ ಹಾಗೂ ಪೇಪರುಗಳಲ್ಲಿ ಪ್ರಳಯದ ಬಗ್ಗೆ ಸಾಕಷ್ಟು ಓದಿರುತ್ತೇವೆ.  ಆದರೆ ನಾವು ನೋಡಿದ್ದು ಕೇಳಿದ್ದು ಎಷ್ಟು ಸತ್ಯ ಎಂಬುದು ಈ ಪುಸ್ತಕ ಓದಿದಾಗಲೇ ತಿಳಿಯುತ್ತದೆ.  ಹೊರನೋಟಕ್ಕೆ ಕೊಡಗು ರುದ್ರರಮಣೀಯ.  ನಿಜ.  ಆದರೆ ಅಲ್ಲಿಯ ಒಳಗುಟ್ಟು ಆ ಪ್ರದೇಶದ ಜನರಿಗಷ್ಟೇ ಗೊತ್ತಾಗಲು ಸಾಧ್ಯ.  ಗೊತ್ತಿದ್ದವರು ತಮ್ಮ ಬರವಣಿಗೆಯಲ್ಲಿ ಬರೆಯಲು ಎದೆಗಾರಿಕೆ ಇರಬೇಕು. ಲೇಖಕರು ಧೈರ್ಯದಿಂದ ಸವಿಸ್ತಾರವಾಗಿ ಎಲ್ಲವನ್ನೂ ಬರೆದಿದ್ದಾರೆ.  ಮುಂದಿನ ಆಗುಹೋಗುಗಳನ್ನು ಎದುರಿಸುವ ಕೆಚ್ಚೆದೆಯ ವ್ಯಕ್ತಿ ಶ್ರೀ ನೌಶಾದ್ ರವರು. ಎರಡು ಮಾತಿಲ್ಲ.

ಮೇಲ್ಕಂಡ ಎರಡೂ ಪುಸ್ತಕಗಳಲ್ಲಿ ವಸ್ತುಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.  ಹೀಗೂ ಉಂಟೆ? ಎಂದು ಹುಬ್ಬೇರಿಸಬೇಡಿ; ಬದಲಾಗಿ ಒಮ್ಮೆ ಕೊಂಡು ಓದಿ.  ಮುಂದಿನ ಬರವಣಿಗೆಗೆ ಪ್ರೋತ್ಸಾಹ ನೀಡಿ. 

ಕೊನೆಯಲ್ಲಿ ಲೇಖಕರಿಗೆ ನನ್ನದೊಂದು ಬಿನ್ನಹ ; ದಯವಿಟ್ಟು ಎಷ್ಟೇ ಅವಕಾಶ ಒದಗಿ ಬಂದರೂ ನೀವು ಮಾತ್ರ ರಾಜಕಾರಣಿ ಆಗಬೇಡಿ.  ನೀವು ಬದಲಾಗಿಬಿಡುತ್ತೀರಾ.  ಹೀಗೆ ನಿಮ್ಮ ತಂಡದೊಂದಿಗೆ ಮಾರ್ಗದರ್ಶಕರಾಗಿ ಸಂತೃಸ್ತರ,ಅಸಹಾಯಕರ ನೆರಳಾಗಿ ಕೊನೆಯವರೆಗೂ ಅವರ ಉಸಿರಾಗಿ ಇರಿ.
ನಿಮ್ಮಂತಹವರ ಅಗತ್ಯ ಈ ಸಮಾಜಕ್ಕೆ ತುಂಬಾ ಅಗತ್ಯ ಇದೆ.   ಇನ್ನೂ ಹೆಚ್ಚಿನ ಕೃತಿ ತಮ್ಮಿಂದ ಹೊರಬಂದು ಸಾಹಿತ್ಯ ಲೋಕ ಬೆಳಗಲಿ. ಒಳ್ಳೆಯದಾಗಲಿ.  ಶುಭವಾಗಲಿ.

24-9-2021. 1.30pm

(6) ಈ ದಿನದ ಓದು


ಪುಸ್ತಕ : ಅಘೋರಿಗಳ ಲೋಕದಲ್ಲಿ
ಲೇಖಕರು : ಶ್ರೀ ಸಂತೋಷ್ ಕುಮಾರ್ ಮೆಹಂದಾಳೆ.

ಇವರ  “ಅಘೋರಿಗಳ ಲೋಕದಲ್ಲಿ” ಎಂಬ ಪುಸ್ತಕ ಅಂಕಿತ ಪ್ರಕಾಶನದವರು ಬಿಡುಗಡೆ ಮಾಡಿ ಆಗಲೇ ಮೂರು ವರ್ಷ ಆಯಿತು.  ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರನ್ನು ಮುಖತಃ ಭೇಟಿಯಾಗಿದ್ದು ಮಾತ್ರ ಅವರ ಇನ್ನೊಂದು ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ.  ಕಾರಣ ಒಬ್ಬ ಬರಹಗಾರನ ಬರೆಯುವ ಶೈಲಿ, ಅದರಲ್ಲಿಯ ಆಳವಾದ ವಿಷಯ, ಓದುಗರನ್ನು ತನ್ಮಯಗೊಳಿಸಿ ಪುಸ್ತಕ ಓದಿ ಮುಚ್ಚಿಟ್ಟರೂ ಮತ್ತೆ ಮತ್ತೆ ಓದುವಂತೆ ಮಾಡುವ ಸಾಹಿತಿಗಳನ್ನು ಭೇಟಿಯಾಗಬೇಕು ಎಂಬ ಕುತೂಹಲ ಎಲ್ಲರಲ್ಲೂ ಇರುವುದು ಸಹಜ.  ಹಾಗೇ ನಾನೂ ನನ್ನನ್ನು ಪರಿಚಯ ಮಾಡಿಕೊಂಡು “ಎಂಟೆಬೆ” ಕೊಂಡುಕೊಂಡು ಬಂದೆ. ಓದುತ್ತ ಹೆಚ್ಚು ನನ್ನ ಕಾಡಿದ್ದು “ಅಘೋರಿಗಳ ಲೋಕದಲ್ಲಿ” ಪುಸ್ತಕ.

ಅಘೋರಿಗಳ ಬಗ್ಗೆ ನನಗೆ ಸರಿಯಾದ ಮಾಹಿತಿ, ನನ್ನಲ್ಲಿದ್ದ ಕುತೂಹಲ, ಅವರ್ಯಾಕೆ ಹೀಗೆ, ಹೇಗೆ ಬದುಕುತ್ತಾರೆ,  ಅವರು ಕ್ರೂರಿಗಳಾ, ನಮ್ಮಂಥವರು ಅವರನ್ನು ಭೇಟಿ ಮಾಡಬಾರದಾ ಇತ್ಯಾದಿ ಹಲವು ವಿಷಯಗಳಿಗೆ ಸಮಂಜಸವಾದ ಉತ್ತರ ಸಿಕ್ಕಿದ್ದು ಇವರ ಈ ಪುಸ್ತಕ ಓದಿದಾಗ.  ನಡೆದ ಘಟನಾವಳಿಗಳ ಬಗ್ಗೆ, ಅವರ ಸಾಧನೆ, ನಿತ್ಯ ಬದುಕಿನ ಬಗ್ಗೆ ವೈಜ್ಞಾನಿಕ ತಳಹದಿಯಲ್ಲಿ ತರ್ಕಿಸಿ ಉದಾಹರಣೆಗಳೊಂದಿಗೆ ವಿಶ್ಲೇಷಣೆ ಮಾಡಿದ್ದಾರೆ.   ಎಷ್ಟೆಲ್ಲಾ ವರ್ಷ ಅಘೋರಿಗಳು,ನಾಗಾಸಾಧುಗಳ ಒಡನಾಟದಲ್ಲಿ ಇದ್ದು ಅವರನ್ನು ಹತ್ತಿರದಿಂದ ಕಂಡು ಅವರ ಸತ್ಯದರ್ಶನದ ಪರಿಚಯ ಮಾಡಿದ್ದು ನಿಜಕ್ಕೂ ಹೆಮ್ಮೆಯ ವಿಷಯ. 


ಏಕೆಂದರೆ ಇಲ್ಲಿ ಅನುಭವದ ಬರಹವಿದೆ, ಕುತೂಹಲ, ಆಶ್ಚರ್ಯ, ಅಸಹ್ಯ, ವಾಕರಿಕೆ,ತಲೆ ಗಿರ್ರನೆ ಸುತ್ತುವ, ನಿದ್ದೆಯಲ್ಲೂ ಬೆಚ್ಚಿ ಬೀಳಿಸುವ, ಶವ, ಸ್ಮಶಾನ, ಮಾಟಮಂತ್ರ, ತರ್ಕಕ್ಕೆ ಸಿಗದ ಹೀಗೆ ಇತ್ಯಾದಿ ಎಲ್ಲವೂ ಇದೆ.  ಒಬ್ಬ ಎದೆಗಾರಿಕೆ, ಧೈರ್ಯ ಇರುವ ಬರಹಗಾರ ತನ್ನ ಜೀವದ ಹಂಗು ತೊರೆದು ಸತ್ಯಾಸತ್ಯತೆಯನ್ನು ತಿಳಿದು ಬರೆದು ಓದುಗರಿಗೆ ನೀಡುವುದೆಂದರೆ ಸಾಮಾನ್ಯ ವಿಷಯವಲ್ಲ.    ಈಗಾಗಲೇ ತುಂಬಾ ಜನ ಓದಿರುತ್ತೀರಿ.  ಪುಸ್ತಕದ ಬಗ್ಗೆ ಅನೇಕರು ನಿರೂಪಣೆ ಬರೆದಿದ್ದಾರೆ.  ಮತ್ತೆ ಮತ್ತೆ ಮರುಮುದ್ರಣ ಪಡೆದ ಈ ಪುಸ್ತಕ ಎಲ್ಲರೂ ಓದುವಂತಾಗಬೇಕು.  ಇದು ಕಥೆಯಲ್ಲ, ನಮ್ಮ ಸಮಾಜದಿಂದ ಹೊರಗಿದ್ದು ಸಾಧನೆಯ ದಾರಿಯಲ್ಲಿ ಮುನ್ನುಗ್ಗುತ್ತಿರುವ, ಅಮಾನುಷವಾಗಿ ತಮ್ಮನ್ನೇ ತಾವು ಪಂತಕ್ಕೊಡ್ಡಿ ವಿಚಿತ್ರವಾಗಿ ಬದುಕುತ್ತಿರುವ ನಮ್ಮಂತೆ ಇರುವ ಮನುಷ್ಯರ ಬದುಕಿನ ಚಿತ್ರಣದ ಹಂದರವಿದು.  ಶಿವನಲ್ಲಿ ಮುಕ್ತಿ ಕಾಣುವ, ಅವನನ್ನು ಒಲಿಸಿಕೊಳ್ಳುವ ಹಂಬಲ ಅದೆಷ್ಟು ತೀವ್ರವಾಗಿದೆ ಇವರಲ್ಲಿ.  ತಮ್ಮದೇ ಸಮಾಜ ನಿರ್ಮಾಣ ಮಾಡಿಕೊಂಡು ಬದುಕುತ್ತಿರುವ ಇವರು ನಮ್ಮಗಳ ಮಧ್ಯೆ ಯಾಕೆ ಬೆರೆಯುತ್ತಿಲ್ಲ  ಎಂಬ ಮಾಹಿತಿ, ಕುಂಭಮೇಳ, ಕಾಶಿಯ ಸುತ್ತಮುತ್ತಲಿನ ನಿಗೂಢ ಪರಿಚಯ ಎಲ್ಲವೂ ಒಳಗೊಂಡಿದೆ.

ಈ ಹಿಂದೆ 2019 ಸೆಪ್ಟೆಂಬರ್ ನಲ್ಲಿ ನಾನು ಕಾಶಿಗೆ ಹೋಗುವಾಗ ಅಂಕಿತದಿಂದ ಪುಸ್ತಕ ತರಿಸಿಕೊಂಡು ಸುಧೀರ್ಘ 54 ತಾಸಿನ ರೈಲು ಪ್ರಯಾಣದಲ್ಲಿ ಓದಿ ಮುಗಿಸಿ ಕೊನೆಗೆ ಬೇಡಪ್ಪಾ ಕಾಶಿಯಲ್ಲಿ ಕಂಡರೆ ಇವರನ್ನು ಮಾತಾಡಿಸೋದಿರಲಿ, ನೋಡೋದೂ ಬೇಡಾ ಎಂಬ ತೀರ್ಮಾನಕ್ಕೆ ಬಂದಿದ್ದೆ ಅವರ ರೀತಿ ನೀತಿ ಬದುಕು ತಿಳಿದು.  ಆದರೂ ಅಲ್ಲಿ ಕಂಡಾಗ ಒಮ್ಮೆ ಕ್ಲಿಕ್ಕಿಸಿದ್ದೆ ಕುತೂಹಲದಿಂದ. 

ನಾನು ಇದುವರೆಗೆ ಈ ಪುಸ್ತಕ ಮೂರು ಬಾರಿ ಓದಿದರೂ ನಿಗೂಢ ಜಗತ್ತಿನ ಬಗ್ಗೆ ಕುತೂಹಲ ಮೂಡಿದಾಗೆಲ್ಲ ಪುಟ ತಿರುವಿ ಹಾಕೋದು ಇನ್ನೂ ನಿಂತಿಲ್ಲ.   ಅಘೋರಿಗಳ ಲೋಕ ಸಾರಾಸಗಟಾಗಿ  ಪರಿಚಯ ಮಾಡಿಕೊಟ್ಟ ಲೇಖಕರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.   ಇವರು ಅದ್ಭುತವಾದ ಇನ್ನಷ್ಟು ಮತ್ತಷ್ಟು ಪುಸ್ತಕ ಬರೆಯುವಂತಾಗಲಿ, ದೇವರು ಸದಾ ಬರೆಯುವ ಚೈತನ್ಯ ಕೊಡಲಿ ಎಂಬುದು ನನ್ನ ಹಾರೈಕೆ, ಆಶಯ.


5-7-2021. 6.59pm

(5) ಈ ದಿನದ ಓದು

ಪುಸ್ತಕ – ನೀಲಮ್ಮನ ಬಳಗದ ವಚನಗಳು
ಸಂಪಾದಕರು – ಶ್ರೀ ರಮೇಶ್ ಬಿರಾದಾರ್

ಬಸವ ಸೇವಾ ಪ್ರತಿಷ್ಠಾನದ ಅಂಗ ಸಂಸ್ಥೆಯಾಗಿ ಬೆಳೆಯುತ್ತಿರುವ ನೀಲಮ್ಮನ ಬಳಗ, ಬೀದರ ಜಿಲ್ಲೆಯ ಹನ್ನೆರಡು ಜನ ವಚನಕಾರರು ಶ್ರೀ ರಮೇಶ್ ಬಿರಾದಾರ್ ಇವರ ಸಂಪಾದಕತ್ವದಲ್ಲಿ ಹೊರ ತಂದಿರುವ ವಚನಾಮೃತ ಪುಸ್ತಕವಿದು.  ಈ ಪುಸ್ತಕದಲ್ಲಿ ಒಟ್ಟೂ 311 ವಚನಗಳಿದ್ದು ಪ್ರತಿಯೊಬ್ಬರೂ ತಮ್ಮ ಅನುಭವಾಮೃತಗಳನ್ನು, ಅನಿಸಿಕೆಗಳನ್ನು ವಚನದಲ್ಲಿ ಬರೆದು ವ್ಯಕ್ತಪಡಿಸಿದ್ದಾರೆ.  ಹಾಗೂ ಇವರೆಲ್ಲರ ಪರಿಚಯ ಸಂಪಾದಕರು ಸುದೀರ್ಘವಾಗಿ ಬರೆದಿರುತ್ತಾರೆ. 

ಬಸವಣ್ಣನವರು 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣನವರು ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು. ಇಷ್ಟಲಿಂಗ ಹಾರವನ್ನು ಎಲ್ಲರು ಧರಿಸಿ ಪೂಜಿಸಬಹುದು.  ಅನುಭವ ಮಂಟಪದ ಮೂಲಕ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿದರು. ಅವರ ವಚನಗಳು ಇಂದಿಗೂ ಜನಮನದಲ್ಲಿ ಜನಜನಿತ, ಬದುಕಿಗೊಂದು ಪ್ರೇರಣೆ, ಮಾರ್ಗದರ್ಶನ ನೀಡುತ್ತಿವೆ.  ಇಂತಹ ಮಹನೀಯರ ವಚನಗಳು ತಮ್ಮ ವಚನ ಕೃತಿಗೆ ಪ್ರೇರಣೆ ಎಂದು ಇಲ್ಲಿನ ವಚನಕಾರರು ಹೇಳಿಕೊಂಡಿದ್ದಾರೆ.

ಇಲ್ಲಿ ಕೆಲಸದಿಂದ ನಿವೃತ್ತಿ ನಂತರದ ದಿನಗಳಲ್ಲಿ ವಚನ ಬರೆದವರು, 22 ವರ್ಷಗಳ ಹಿಂದೆ ಅತ್ತೆ ಬರೆದಿರುವ ವಚನಗಳನ್ನು ಸಂಗ್ರಹಿಸಿ ಸೊಸೆಯಾದವಳು ಕೃತಿ ರೂಪಕ್ಕೆ ಅಣಿಗೊಳಿಸಿದವಳು, ನೀಲಮ್ಮನ ಬಳಗದೊಡನಾಟದಲ್ಲಿ ತಾವೂ ವಚನ ಬರೆಯುವಂತಾದೆ ಎಂದು ಹೆಮ್ಮೆ ಪಡುವವರೂ ಇತ್ಯಾದಿ ಇತ್ಯಾದಿ ಕಾಣಬಹುದು.

ಇವರೆಲ್ಲರ ಹೆಗಲಾಗಿ ಸಂಪಾದಕತ್ವ ವಹಿಸಿಕೊಂಡ ಶ್ರೀ ರಮೇಶ್ ಬಿರಾದಾರ್ ಇವರನ್ನು ಎಷ್ಟು ಹೊಗಳಿದರೂ ಸಾಲದು.  ಎಷ್ಟೋ ಲೇಖಕರ ಬರಹಗಳು ಅಲ್ಲಲ್ಲೇ ಎಲೆ ಮರೆಯ ಕಾಯಿಯಂತೆ ನಶಿಸಿ ಹೋಗುತ್ತಿರುವಾಗ  ಇದಕ್ಕೆಲ್ಲ ಅವಕಾಶ ಕೊಡದೇ ಜವಾಬ್ದಾರಿಯಿಂದ ಸತತ ನಾಲ್ಕು ವರ್ಷಗಳ ಪರಿಶ್ರಮದಿಂದ ಇವರೆಲ್ಲರ ವಚನಗಳಿಗೆ ಪುಸ್ತಕ ರೂಪ ಕೊಟ್ಟಿದ್ದಾರೆ.  ಹಾಗೆ ತಾವು ಬರೆದ ವಚನಗಳನ್ನೂ ಈ ಪುಸ್ತಕದಲ್ಲಿ ಸೇರಿಸಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ.

ಇನ್ನು ಇವರೆಲ್ಲರ ವಚನಗಳನ್ನು ಓದುತ್ತಿದ್ದಂತೆ ಬಸವಣ್ಣನವರ ವಚನಗಳು ನೆನಪಿಗೆ ಬಾರದಿರದು.  ಶಾಲಾ ದಿನಗಳಲ್ಲಿ ಪಠ್ಯ ಪುಸ್ತಕಗಳಲ್ಲಿ ಬಸವಣ್ಣನವರ ವಚನಗಳನ್ನು ಕಂಠಪಾಠ ಮಾಡಿ ಗುರುಗಳಿಗೆ ಒಪ್ಪಿಸುತ್ತಿದ್ದದ್ದು ಮುಂದಿನ ದಿನಗಳಲ್ಲಿ ನನ್ನ ಸೋದರತ್ತೆಯೊಬ್ಬರು ಶಾಸ್ತ್ರೀಯ ಸಂಗೀತ ಕಲಿತಿದ್ದು ಅವರು ಬಸವಣ್ಣನವರ ಅನೇಕ ವಚನಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು.  ಎಷ್ಟೊಂದು ಬಾರಿ ಆಸಕ್ತಿಯಿಂದ ಕೇಳುತ್ತಿದ್ದೆ ನಾನು. ಹಾಗೆ ಅವರೊಂದಿಗೆ ನಾನೂ ಮಾಡಬೇಕೆನ್ನುವ ಉಮೇದಿ ಬಂದಿದ್ದೂ ಇದೆ.  ಕಾರಣ ವಚನಗಳಲ್ಲಿ ಅಷ್ಟೊಂದು ತಲ್ಲೀನತೆ ಇದೆ,ಅರ್ಥ ಇದೆ, ಬದುಕಿಗೊಂದು ಸೂತ್ರ ಇದೆ. 

“ಈ ಪುಸ್ತಕ ಓದಿ ಅಕ್ಕಾ” ಎಂದು ರಮೇಶ್ ಬಿರಾದಾರ್ ರವರು ಪುಸ್ತಕ ಕೊಟ್ಟು ವಚನಗಳನ್ನು ಓದುವ ಅವಕಾಶ ಮಾಡಿಕೊಟ್ಟಿದ್ದಾರೆ.  ಅವರಿಗೂ ಹಾಗೂ ವಚನ ಬರೆದ ನೀಲಮ್ಮನ ಬಳಗದ ಒಡನಾಡಿಗಳಿಗೂ ಕೃತಜ್ಞತೆಗಳು.  ಇನ್ನೂ ಹೆಚ್ಚಿನ ರೀತಿಯಲ್ಲಿ ವಚನಾಮೃತ ಬರೆಯುವಂತಾಗಲಿ ಕೃತಿ ಲೋಕಾರ್ಪಣೆ ಆಗಲಿ ಎಂದು ಆಶಿಸುತ್ತೇನೆ.  ಧನ್ಯವಾದಗಳು.

8-6-2021. 8.20pm

(4) ಈ ದಿನದ ಓದು

ಪ್ರವಾಸ ಕಥನ – “ನನ್ನೊಳಗಿನ ಹಾಡು ಕ್ಯೂಬಾ”
ಲೇಖಕರು – Sri Gn Mohan

“ಕ್ಯೂಬಾ ನಿರಾಭರಣ ಸುಂದರಿ. ಇಲ್ಲಿ ಉತ್ಸಾಹ ನೋಡಿಯೇ ಉತ್ಸವ ನಿರ್ಧರಿಸಬೇಕು.  ಎಲ್ಲೆಂದರಲ್ಲಿ ತೋರಣ, ಕಮಾನು,ಗೋಡೆಬರಹ, ಭಿತ್ತಿಪತ್ರ, ಬ್ಯಾನರ್… ಉಹುಂ ಬರುವವರೆಲ್ಲರೂ ನೆಂಟರೇ ಆಗಿರುವಾಗ ಬ್ಯಾನರ್ ಏಕೆ ಬೇಕು.  ಕ್ಯೂಬಾದಲ್ಲಿ ನಡೆಯುತ್ತಿರುವ ಐತಿಹಾಸಿಕ ಸಮ್ಮೇಳನ ‘ಉನ್ ಫೆಸ್ಟಿವಲ್’ಗಾಗಿ ನಾವು ಬಂದು ಇಳಿದಿದ್ದೆವು.  50 ವರ್ಷಗಳ ಹಿಂದೆ ಸಾಮ್ರಾಜ್ಯಶಾಹಿಯ ಯುದ್ಧ ಪಿಪಾಸುತನ, ಜಗತ್ತನ್ನು ಕೊಳ್ಳೆ ಹೊಡೆಯುವ ಆಸೆಬುರುಕುತನ, ತನ್ನ ಮಾತನ್ನೇ ಎಲ್ಲರೂ ಕೇಳಬೇಕೆಂಬ ಅಹಂಕಾರದ ವಿರುದ್ಧ ಸೆಡ್ಡು ಹೊಡೆದಿದ್ದ 
ವಿದ್ಯಾರ್ಥಿ ಯುವಜನರು ಆರಂಭಿಸಿದ ಜಗತ್ತಿನ ಜನರ ಮಿಲನ ಇದು.  ಸಾಮ್ರಾಜ್ಯಶಾಹಿ ವಿರೋಧಿ ಹೋರಾಟ, ಸೌಹಾರ್ದತೆ, ಶಾಂತಿ ಮತ್ತು ಸ್ನೇಹಕ್ಕಾಗಿ ನಡೆಯುತ್ತಿರುವ ಜಗತ್ತಿನ ಜಾತ್ರೆ.  ಪ್ರತೀ ಬಾರಿಯ ಸಮ್ಮೇಳನ ಅಮೇರಿಕ ಹಾಗೂ ಅದರ ಮಿತ್ರ ಕೂಟದಿಂದ ನೂರಾರು ಕಿರುಕುಳಗಳನ್ನು ಎದುರಿಸುತ್ತಲೇ ‘ ನಡೆ ಮುಂದೆ ನಡೆ ಮುಂದೆ’ಎಂಬ ಹುಮ್ಮಸ್ಸು ಉಳಿಸಿಕೊಂಡಿದೆ.”

ಹೀಗೆ ಸಾಹಿತಿಗಳು, ಪತ್ರಕರ್ತರು ಮತ್ತು ಅವಧಿಯ ಪ್ರಧಾನ ಸಂಪಾದಕರಾಗಿರುವ Sri Gn Mohan ಸರ್ ರವರು ಸಕ್ಕರೆಯ ಕಣಜವಾದ ಪುಟ್ಟ ದೇಶ “ಕ್ಯೂಬಾ”ವನ್ನು ಶಾರದಾ ಅಟ್ಲಾಸ್ ನಲ್ಲಿ ತಡಕಾಡಿ ಅಲ್ಲಿ ಅಂತಾರಾಷ್ಟ್ರೀಯ ಯುವಜನ ಉತ್ಸವದಲ್ಲಿ ಮೊತ್ತ ಮೊದಲ ಬಾರಿಗೆ ನಡೆದ ಯುವ ಪತ್ರಕರ್ತರ ಸಮಾವೇಶದಲ್ಲಿ ಭಾರತವನ್ನು ಪ್ರತಿನಿಧಿಸಿ ತಮ್ಮ ಅನುಭವ, ಅನಿಸಿಕೆಗಳನ್ನು ಮತ್ತು 400 ವರ್ಷಗಳ ಕಾಲ ಆಳಿದ ಸ್ಪೇನ್ ದೇಶದ ವಿರುದ್ಧ ರಕ್ತಸಿಕ್ತ ಹೋರಾಟ ನಡೆಸಿ ಇನ್ನೇನು ಕ್ಯೂಬಾ ತನ್ನ ದೇಶದ ಧ್ವಜ ಮೇಲೆರುತ್ತದೆ ಎನ್ನುವಷ್ಟರಲ್ಲಿ ಕ್ಯೂಬಾ ದೇಶ ಅಮೇರಿಕಾದ ಪಾಲಾದ ಸನ್ನಿವೇಶ, ಈ ಎರಡೂ ದೇಶಗಳ ದಾಸ್ಯದಲ್ಲಿ ಕ್ಯೂಬಾ ದೇಶದ ಜನರು ಪಟ್ಟ ಬವಣೆ, ಪಾಡು,ಸತ್ತು ಸತ್ತು ಬದುಕಿದ ಹೋರಾಟದ ಬದುಕನ್ನು ಇಂಚಿಂಚಾಗಿ ತಮ್ಮ ಬರವಣಿಗೆಯಲ್ಲಿ ಬಿಂಬಿಸಿದ್ದಾರೆ.  ನಿಜಕ್ಕೂ ಎಂತಹವರಿಗೂ ಕಣ್ಣು ಮಂಜಾಗದಿರದು.
ಓದಿ ಮುಗಿಸಿದಾಗ ಮನಸ್ಸು ತಟಸ್ಥವಾಗುವಂತೆ ಮಾಡಿತು. 

ಹಾಗೆ ಓದುತ್ತ ನಮ್ಮ ಭಾರತ ದೇಶದ ಜನ ಬ್ರೀಟಿಷರ ಸಂಕೋಲೆಯಲ್ಲಿ ವಿಲ ವಿಲ ಒದ್ದಾಡಿದ ದೃಶ್ಯಗಳು, ಸ್ವಾತಂತ್ರ್ಯ ಹೋರಾಟಗಾರರ ಕಿಚ್ಚು ಮನಃಪಟಲದಲ್ಲಿ ಹರಿದಾಡಿತು.

ಅತ್ಯಂತ ಆಳವಾದ ಅಧ್ಯಯನ ನಡೆಸಿ ಕ್ಯೂಬಾ ದೇಶದ ಬಗ್ಗೆ ಬರೆದ ಪುಸ್ತಕವಿದು.  ವಿದೇಶ ಪ್ರವಾಸ ಕೇವಲ ಪ್ರವಾಸಿ ಕಥನವಾಗಿರದೇ ಹೋಗಿರುವ ದೇಶದ ಬಗ್ಗೆ ಅಭಿಮಾನ, ಪ್ರೀತಿ, ಅಲ್ಲಿನ ಜನರ ಬಗ್ಗೆ ತಿಳಿದುಕೊಂಡು
ತಾವೂ ಕಂಬನಿ ಮಿಡಿದಿದ್ದಾರೆ ತಮ್ಮ ಬರವಣಿಗೆಯಲ್ಲಿ.  ನಿಜಕ್ಕೂ ಒಮ್ಮೆ ಓದಲೇಬೇಕಾದ ಪುಟ್ಟ ಪುಸ್ತಕ ಇದು.  ಆದರೆ ಅದರೊಳಗಿನ ವಿಷಯ ಅಗಾಧ.

ಈ ಎರಡು ದೇಶಗಳ ನಡುವೆ ನಲುಗಿದ ಕ್ಯೂಬಾ ದೇಶದ ಬಗ್ಗೆ ಬರೆದು ಓದುಗರಿಗೆ ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದೀರಿ ಸರ್.  ತಮಗೆ ಅನಂತಾನಂತ ಧನ್ಯವಾದಗಳು ಸರ್.


4-6-2021. 7.48pm

(3) ಈ ದಿನದ ಓದು


ಕಾದಂಬರಿ – ಕೇರಿ ಮುಟ್ಟಿದ ಮಾವು
ಲೇಖಕರು – ಶೆಲ್ಲಿ ಕೂಡ್ಲಗಿ ಶಿಕ್ಷಕರು


ಇವರ “ಕೇರಿ ಮುಟ್ಟಿದ ಮಾವು ಮತ್ತು ಎರಡು ಲೋಟದ ಹುಡುಗಿ” ಇವೆರಡೂ ಕಾದಂಬರಿಗಳು ನನ್ನ ಕೈ ಸೇರಿ ಆಗಲೇ ಒಂದು ವರ್ಷ ಆಗುತ್ತಾ ಬಂತು.  ಕಾರಣಾಂತರಗಳಿಂದ ಇದುವರೆಗೂ ಓದದೆ ನನ್ನ ಪುಸ್ತಕ ಸಂಗ್ರಹದಲ್ಲಿ ಭದ್ರವಾಗಿ ಇತ್ತು.  ಇದರೊಂದಿಗೆ ಇನ್ನೂ ಅನೇಕ ಲೇಖಕರ ಪುಸ್ತಕಗಳು ಓದಿಗಾಗಿ ಕಾಯುತ್ತಿವೆ.  ಓದುವ ಹುಚ್ಚು ಕಾಲು ಕೆದರಿಕೊಂಡು ಬಂದಾಗ ಓದುವ ಹಪಾಹಪಿ ನಿರಂತರ ಮುಂದುವರಿಯುತ್ತಿರುತ್ತದೆ.  ಇದು ನನಗೆ ಮೊದಲಿನಿಂದಲೂ ಆದ ಅನುಭವ.   ಈ ಲಾಕ್ ಡೌನ್ ಒಂದು ನೆಪ ಮಾತ್ರ ಅಷ್ಟೇ.

“ಕೇರಿ ಮುಟ್ಟಿದ ಮಾವು” ಈ ಕಾದಂಬರಿ ಶೆಲ್ಲಿಯವರ ಮೊದಲ ಕಾದಂಬರಿ.  ಇಸ್ಲಾಂ ಧರ್ಮದಲ್ಲಿ ಹುಟ್ಟಿ ಇಷ್ಟು ಸ್ಪಷ್ಟವಾಗಿ, ಸುಲಲಿತವಾಗಿ ಕನ್ನಡ ಬರೆಯುತ್ತಿರುವುದು ನನಗಂತೂ ಹೆಮ್ಮೆಯ ವಿಷಯ.  ಹಾಗೆ ಇವರೊಬ್ಬ ಆದರ್ಶ ಶಿಕ್ಷಕ ಎಂದರೂ ತಪ್ಪಾಗಲಾರದು.  ಮುಖಪುಟದಲ್ಲಿ ಆಗಾಗ ಬರುವ ಅವರ ಪೋಸ್ಟ್, ವೃತ್ತಿಯಲ್ಲಿ ಅವರಿಗಿರುವ ಜವಾಬ್ದಾರಿ, ಅವರು ಶಿಕ್ಷಣ ಕ್ಷೇತ್ರದಲ್ಲಿ ಕೈಗೊಳ್ಳುವ ಕಾರ್ಯ ಚಟುವಟಿಕೆಗಳು ಸ್ಪಷ್ಟ ಸಾಕ್ಷಿ.  ಹಾಗೆ ಅವರೊಬ್ಬ ಪ್ರಕೃತಿ ಪ್ರೇಮಿ, ಸುಂದರ ಹೂ ಗಿಡ ಮರಗಳ ದಾಸ.  ಅಪರೂಪದ ಹೂ ಗಿಡಗಳನ್ನು onlineನಲ್ಲಿ ಖರೀದಿಸಿ ಬೆಳೆಸಿ ನಮ್ಮ ಮನೆಯಲ್ಲಿ ಅರಳಿದ ಹೂವು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಾಗ ಪ್ರತಿಕ್ರಿಯಿಸದೇ ಇರಲಾಗದು.

ಇವರ ಕಾದಂಬರಿಯಲ್ಲಿ ಸಮಾಜದಲ್ಲಿ ಬಹಿಷ್ಕಾರಕ್ಕೆ ತುತ್ತಾದವರು, ಸಂಬಂಧಗಳಿಂದ ವಂಚಿತರಾದರು ಪ್ರಕೃತಿ ಪ್ರೇಮ, ಮೂಕ ಪ್ರಾಣಿಗಳ ಒಡನಾಟ, ತಮ್ಮ ಭಾವನೆಗಳಿಗೆ ನೆಲೆ, ಮಾವು ಕೇವಲ ಒಂದು ಹಣ್ಣು ಆಗಿರದೇ ದಲಿತ ಕೇರಿಯಲ್ಲಿ ಪೇತುವಿನ ಮೂಲಕ ಹಂಚಿ ಅಲ್ಲೊಂದು ನಿರ್ಮಲ ಸಂಬಂಧ, ಅರಿವು, ವಿಷಾದ, ಖಾಲಿತನ, ಕಳಕೊಂಡ ಸಂಕಟ, ಅಳು, ಆಪ್ತತೆ, ಹೀಗೆ ಒಂದಾ ಎರಡಾ ಎಲ್ಲ ಎಲ್ಲವನ್ನೂ ತಮ್ಮ ಬರವಣಿಗೆಯಲ್ಲಿ ಹಿಡಿದಿಟ್ಟಿದ್ದಾರೆ. 

ಪುಸ್ತಕ ಓದಿ ಮುಗಿಸಿದಾಗ ಅಲ್ಲಿ ಬರುವ ಒಂದೊಂದು ಪಾತ್ರಗಳೂ ಕಾಡುತ್ತವೆ.  ಕಾರಣ ಮೇಲ್ಜಾತಿ ಕೀಳ್ಜಾತಿ ಎಂಬ ತಾರತಮ್ಯ ನಮ್ಮ ಕಾಲದ ಅನೇಕ ಘಟನೆಗಳನ್ನು ನೆನಪಿಸುತ್ತದೆ.  ಹಾಗೆ ಅಂದಿಗೂ ಇಂದಿಗೂ ಎಷ್ಟು ಸುಧಾರಣೆ ಕಂಡಿದೆ ಈ ವಿಷಯದಲ್ಲಿ ಎಂದನಿಸದಿರದು. 

ಒಂದೊಳ್ಳೆ ಪುಸ್ತಕ ಓದಿದ ಅನುಭವವಾಯಿತು.  ಲೇಖಕರು ಹೀಗೆ ಬರೆಯುತ್ತ ಇನ್ನೂ ಹೆಚ್ಚಿನ ಕೊಡುಗೆ ಸಾಹಿತ್ಯ ಕ್ಷೇತ್ರಕ್ಕೆ ನೀಡುವಂತಾಗಲಿ ಎಂಬುದು ನನ್ನ ಹಾರೈಕೆ,ಆಶಯ.  ಶುಭವಾಗಲಿ.

26-5-2021. 8.45pm

(2) ಈ ದಿನದ ಓದು


ಕಾದಂಬರಿ – ನೂಲಿನ ಬೇಲಿ
ಲೇಖಕರು – ಶ್ರೀ ಮುದಲ್ ವಿಜಯ್
***********

ನಾವಂದುಕೊಂಡಂತೆ ಬದುಕು ಇರೋದಿಲ್ಲ, ಯಾವಾಗ ಯಾರ ಬದುಕಲ್ಲಿ ಏನು ನಡೆಯುತ್ತದೆ ಯಾರಿಗೂ ಗೊತ್ತಾಗುವುದಿಲ್ಲ ಇದು ಎಷ್ಟು ನಿಜ ಅಲ್ವಾ?

ಹೌದು, ಶ್ರೀ ಮುದಲ್ ವಿಜಯ್ ರವರ ಮೂರನೆಯ ಕಾದಂಬರಿ “ನೂಲಿನ ಬೇಲಿ” ಓದುತ್ತಿದ್ದರೆ ಅಕ್ಷರಶಃ ನಿಜವೆನಿಸದಿರದು.  ಅವರೇ ಹೇಳುವಂತೆ ; ಈ ಕಾದಂಬರಿಯಲ್ಲಿ ಬರುವ ಸನ್ನಿವೇಶಗಳು ಅವರ ಬಾಲ್ಯದ ನೆನಪುಗಳೊಂದಿಗೆ ಒಂದಿಷ್ಟು ಕಥಾನಕ ಕಲ್ಪನೆ
ವಾಸ್ತವದ ನೆಲೆಗಟ್ಟಿನಲ್ಲಿ ರೂಪುಗೊಂಡ ಕಾದಂಬರಿ ಇದು.

ಮೊದಮೊದಲು ಓದುವಾಗ ಪುಸ್ತಕ ಓದುತ್ತಿರುವೆನೆಂಬ ಅನಿಸಿಕೆ ಹುಟ್ಟುಹಾಕುವುದಿಲ್ಲ.  ಅವರ ಒಡನಾಟದಲ್ಲಿ ಇರುವವರ ಜೊತೆಗಿನ ಮಾತು ನಾವು ಕೇಳುತ್ತಿದ್ದೇವೆ ಎಂದೆನಿಸಿತು.  ಎಲ್ಲಿಂದ ಕಥೆ ಶುರುವಾಗುವುದೆಂದು ಆಚೆ ಈಚೆ ಪುಟ ತಿರುಗಿಸಿದ್ದು ನಿಜ.  ಒಟ್ಟೂ ಇಪ್ಪತ್ತು ಭಾಗಗಳಲ್ಲಿ ಕೊನೆ ಕೊನೆಗೆ ಓದುತ್ತ ಹೋದಂತೆ ಮನಸ್ಸನ್ನು ಓದಿನಲ್ಲಿ ತಲ್ಲೀನಗೊಳಿಸಿಬಿಡುತ್ತದೆ.

ಅಕಸ್ಮಾತಾಗಿ ಆತ್ಮೀಯ ಗೆಳೆಯ ಶಂಕರನ ಮಗ ರಮೇಶನ  ಭೇಟಿಯಾಗುತ್ತದೆ.  ಅವನ ಪರಿಚಯವೇ ಸಿಗದಷ್ಟು ವರ್ಷಗಳು ಕಳೆದು ಹೋಗಿದ್ದರೂ ನೆನಪುಗಳು ಮಾತ್ರ ನಶಿಸಿರುವುದಿಲ್ಲ.    ತನ್ನ ಗೆಳೆಯನ ಅಕಾಲಿಕ ಮರಣ, ಅವನ ಹೆಂಡತಿ ಭವಾನಿ ಅಸಹಾಯಕಳಾಗಿ ಪಡುವ ಪಾಡು ಈ ಮಧ್ಯೆ
ಹುಟ್ಟಿ ಬೆಳೆದ ಕಮಲಾಪುರ,  ನಡೆದ ಘಟನಾವಳಿಗಳ ಚಿತ್ರಣವೇ ಈ ಕಾದಂಬರಿಯ ಕಥಾ ವಸ್ತು.  ಈ ಮಧ್ಯೆ ಅಲ್ಲಲ್ಲಿ ಹಳ್ಳಿಯ ಜಗಳ, ಸ್ಲಂ ಭಾಷೆಗಳು ಹುಬೇ ಹೂಬಾಗಿ ಬರೆದಿದ್ದು ಓದುವಾಗ ನಮ್ಮ ಸುತ್ತ ಮುತ್ತಲಿನ ಇಂತಹ ಘಟನಾವಳಿಗಳು ನೆನಪಾಗದಿರದು.

ಒಟ್ಟಿನಲ್ಲಿ ಒಂದು ಹೆಣ್ಣು ಅಸಹಾಯಕತೆಗೆ ತಲುಪಿದಾಗ ಸಮಾಜ ನಡೆಸಿಕೊಳ್ಳುವ ರೀತಿ, ಮೋಸ, ವಂಚನೆಗೆ ಒಳಗಾಗಿ ಪಡುವ ಪಾಡು ಬಿಡಿಸಿಕೊಳ್ಳಲಾಗದೇ ಅವಳು ತೆಗೆದುಕೊಳ್ಳುವ ನಿರ್ಧಾರ ಎಲ್ಲವನ್ನೂ ಎಳೆ ಎಳೆಯಾಗಿ ಬರೆದಿದ್ದಾರೆ.  ಹೆಣ್ಣಿಗೆ ಎಂತಹುದೇ ಪರಿಸ್ಥಿತಿ ಎದುರಾದಾಗ ಸ್ವಂತ ದುಡಿಮೆಯೊಂದಿದ್ದರೆ ಸ್ವತಂತ್ರವಾಗಿ ಬದುಕಬಹುದು ಎಂಬುದನ್ನು ನಿರೂಪಿಸಿದ್ದಾರೆ.  ಇದು ಇಂದಿನ ದಿನಮಾನದಲ್ಲಿ ಸತ್ಯವೂ ಹೌದು.

ಸರಾಗವಾಗಿ ಓದಿಸಿಕೊಂಡು ಹೋಗುವ ಕಾದಂಬರಿ ಇದಾಗಿದ್ದು ಲೇಖಕರಾದ ಶ್ರೀ ಮುದಲ್ ವಿಜಯ್ ರವರಿಗೆ ಅಭಿನಂದನೆ ಸಲ್ಲಿಸುತ್ತಾ ತಮ್ಮಿಂದ ಇನ್ನೂ ಹೆಚ್ಚಿನ ಕೃತಿ ಲೋಕಾರ್ಪಣೆಯಾಗಲಿ ಎಂದು ಆಶಿಸುತ್ತೇನೆ. ಹಾಗೂ ತಾವುಗಳೂ ಕೊಂಡು ಓದಿ ಲೇಖಕರಿಗೆ ಪ್ರೋತ್ಸಾಹ ನೀಡಬೇಕಾಗಿ ಕೋರುತ್ತೇನೆ.

20-5-2021. 9.55pm

(1) ಈ ದಿನದ ಓದು

ಸಾಮಾಜಿಕ ಕಾದಂಬರಿ – ಮೌನಸೆರೆ
ಲೇಖಕರು – Sri Ganapathi Hegde

ಆಗಾಗ ಬೆನ್ನು ನೋವು ಕಾಡಿದಾಗಲೆಲ್ಲ ಪವಡಿಸದೇ ಗತಿ ಇಲ್ಲ. ಸುಮ್ಮನೆ ಮಲಗಿ ಕಾಲಹರಣ ಮಾಡಬೇಕಲ್ಲಾ ಛೆ! ಎಷ್ಟು ಸಮಯ ಹಾಳು ಅಂತ ಮನಸ್ಸು ಕಾಡಿದಾಗ ಪಕ್ಕನೆ ಒಂದು ಪುಸ್ತಕ  ಕೈಗೆತ್ತಿಕೊಂಡು ಓದಲು ಶುರು ಮಾಡುತ್ತೇನೆ.

ಇವತ್ತು ಮಾಡಿದ್ದೂ ಇದೇ ; ಪ್ರೀತಿಯ ತಮ್ಮ Ganapathi Hegde ಯವರ “ಮೌನಸೆರೆ” ಸಾಮಾಜಿಕ ಕಾದಂಬರಿ ಓದುತ್ತಾ ವಾಸ್ತವಕ್ಕೆ ಬಂದಿದ್ದು ಕೊನೆಯ ಪುಟ ಮಗುಚಿದಾಗ.

ಕಾದಂಬರಿಯ ಉದ್ದಕ್ಕೂ ಓದುಗರೊಂದಿಗೆ ಮಾತನಾಡುತ್ತಾರೆ, ಮನಸ್ಸಿನ ಭಾವನೆಗಳನ್ನು ಬಿಚ್ಚಿಡುತ್ತಾರೆ, ಕಣ್ಣು ಮಂಜಾಗಿಸುತ್ತಾರೆ, ಕೊನೆಯಲ್ಲಿ ಓದುಗ ದೀರ್ಘ ನಿಟ್ಟುಸಿರು ಬಿಟ್ಟು ಮನಸ್ಸು ತಟಸ್ಥವಾಗುವಂತೆ ಮಾಡುತ್ತಾರೆ.  ಅಬ್ಭಾ! ಪರಕಾಯ ಪ್ರವೇಶ ಮಾಡಿದಂತೆ ತಾವೇ ಪಾತ್ರಧಾರಿಯಾಗಿ ಕಾದಂಬರಿಯಲ್ಲಿ ಬರುವ ಪ್ರತಿ ವ್ಯಕ್ತಿಯ ಚಿತ್ರಣ ಅಚ್ಚುಕಟ್ಟಾಗಿ ಎಲ್ಲಿಯೂ ಬೇಸರ ಬರದಂತೆ ಓದಿಸಿಕೊಂಡು ಹೋಗುವ ಅವರ ಬರವಣಿಗೆಯ ಶೈಲಿ ಮೆಚ್ಚಲೇಬೇಕು.

ಅದರಲ್ಲೂ ಮನೆಯ ಜವಾಬ್ದಾರಿ ಹೊತ್ತ ಚಿಕ್ಕ ವಯಸ್ಸಿನ ಹೆಣ್ಣು ಮಗಳು ವೈಶಾಲಿಯ ಬದುಕಿನ ಚಿತ್ರಣ ವಾಸ್ತವಕ್ಕೆ ಹಿಡಿದ ಕನ್ನಡಿ.  ನಮ್ಮ ಸುತ್ತಲಿನ ನೈಜ ಚಿತ್ರಣ ಕಥೆಯ ಹಂದರ. 

ಕೆಲವೊಮ್ಮೆ ಕೃತಿಗಳು ಕಾಡುವುದುಂಟು ಹಾಗೆ ನಮ್ಮ ಜೀವನಕ್ಕೂ ಹತ್ತಿರವಾದ ಸನ್ನಿವೇಶ ಬಿಚ್ಚಿಕೊಳ್ಳುವುದೂ ಇದೆ. 

ಅಂದಹಾಗೆ ಈ ಕಾದಂಬರಿಯಲ್ಲಿ ಬರುವ ಕಥಾನಾಯಕಿ ವೈಶಾಲಿಯ ಪ್ರಾರಂಭದ ಜೀವನದಂತೆ ನನ್ನನು ಅಮ್ಮಾ ಎಂದು ಕರೆಯುವ ಅಕಸ್ಮಾತ್ ಪರಿಚಯವಾದ  ಒಬ್ಬ ಹೆಣ್ಣುಮಗಳು ತನ್ನ ಹೆತ್ತವರಿಗಾಗಿ, ಒಡಹುಟ್ಟಿದವರಿಗಾಗಿ ಪಟ್ಟ ಕಷ್ಟ, ಈಗೆಲ್ಲಾ ಅವರೆಲ್ಲರ ಜೀವನ ಒಂದು ಹಂತಕ್ಕೆ ಬಂದು ಇವಳು ಮಾತ್ರ ಮದುವೆಯಾಗದೆ ಉಳಿದಿದ್ದು ಸತ್ಯವಾದರೂ ಅವಳ ಮುಂದಿನ ಜೀವನ ವೈಶಾಲಿಯ ಜೀವನದಂತಾಗದಿರಲಿ ಎಂದು ಬೇಡಿಕೊಳ್ಳುವಂತಾಯಿತು.

ಕುತೂಹಲ ಉಂಟಾಗುತ್ತಿದೆಯಾ ಏನಿದು ಕಥೆ? ಪುಸ್ತಕದ ಬಗ್ಗೆ ಹೆಚ್ಚು ವಿಮರ್ಶೆ ಮಾಡುವುದಿಲ್ಲ.  ಒಮ್ಮೆ ಪುಸ್ತಕವನ್ನು ಕೊಂಡು ಓದಿ.  ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುವ ಅಷ್ಟೂ ಸಮಯ ಮೈಮರೆಸುವ ತಾಕತ್ತಿದೆ ಹೆಗಡೆಯವರ ಬರವಣಿಗೆಯಲ್ಲಿ. 

ಇವರಿಂದ ಇನ್ನೂ ಹೆಚ್ಚಿನ ಎಲ್ಲಾ ಪ್ರಕಾರದ ಬರಹಗಳ ಪುಸ್ತಕಗಳು ಅಚ್ಚಾಗಿ ಓದುಗರ ಕೈ ಸೇರಲಿ, ಮೆಚ್ಚುಗೆ ಪಡೆಯಲಿ ಎಂಬುದು ನನ್ನ ಹಾರೈಕೆ.  ಶುಭವಾಗಲಿ ತಮ್ಮಾ

15-5-2021 8.21pm

“ಸೂಜಿ” ಕಾದಂಬರಿ

ಇತ್ತೀಚೆಗೆ ಪ್ರಕಟವಾದ ದಾವಣಗೆರೆಯ Paapu Guruರವರ ಕಾದಂಬರಿ  “ಸೂಜಿ ” ಮುಖ ಪುಟದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರಚಾರವಾಗುತ್ತಿದ್ದಂತೆ ನನಗೂ ಓದುವ ಕುತೂಹಲವಿತ್ತು.  ಲೇಖಕರು ಆತ್ಮೀಯತೆಯಿಂದ ಕಳಿಸಿಕೊಟ್ಟ ಪುಸ್ತಕ ನಿನ್ನೆ ತಾನೇ ತಲುಪಿದ್ದು ಓದಿ ಮುಗಿಸಿದಾಗ ನನ್ನ ಒಂದೆರಡು ಅನಿಸಿಕೆ ಅಭಿಪ್ರಾಯ ಬರೆಯುವಂತೆ ಮನಸ್ಸು ಪ್ರೇರೇಪಿಸಿತು.

ಕಾದಂಬರಿಯಲ್ಲಿ ಬರುವ ಗಂಡು ಹೆಣ್ಣಿನ ಪಾತ್ರಗಳು  ಪ್ರೇಮ, ಪ್ರೀತಿ, ದೈಹಿಕ ಸಂಬಂಧಗಳ ಸುತ್ತವೇ ಗಿರಕಿ ಹೊಡೆಯುತ್ತವೆ. ಜೊತೆಗೆ ಅಸಹಾಯಕ ಹೆಣ್ಣನ್ನು ಬಳಸಿಕೊಳ್ಳುವ ಗಂಡಿನ ದೈತ್ಯ ರೂಪ ಲೇಖಕರು ವಾಸ್ತವದಲ್ಲಿ ನಡೆಯುತ್ತಿರುವ ಸತ್ಯ ಘಟನೆಗಳನ್ನು ಆಧರಿಸಿ ಎಳೆಎಳೆಯಾಗಿ ಬಿಚ್ಚಿಟ್ಟಂತಿದೆ.

ಯಾವತ್ತು ಇಬ್ಬರ ನಡುವಿನ ಸಂಬಂಧಗಳು ದೂರವಾಗುತ್ತೋ ಆಗ ಮಾನಸಿಕವಾಗಿ ಕುಗ್ಗಿದ ಮನುಷ್ಯ ಚಿಂತನೆಯಲ್ಲಿ ತೊಡಗುತ್ತಾನೆ.  ಮುಂದೆ ಬರಬಹುದಾದ ಸಮಯ, ಸಂದರ್ಭ, ಭವಿಷ್ಯದ ಕಡೆಗೆ ಕಾಳಜಿ ಶುರುವಾಗುವುದು.  ಈ ಹಂತದಲ್ಲಿ ಹೆಣ್ಣಾಗಲಿ,ಗಂಡಾಗಲಿ ಅದುವರೆಗೂ ನಡೆದಿರುವುದನ್ನು ಮರೆತು ಇನ್ನೊಂದು ಜೀವನ ಪ್ರವೇಶಿಸುವ ಅನಿವಾರ್ಯತೆ ಎಷ್ಟು ಎಂಬುದನ್ನು ಕಥೆಯಲ್ಲಿ ಹಂತ ಹಂತವಾಗಿ ಮುಂದುವರಿಯುತ್ತದೆ. 

ಕೊನೆಯಲ್ಲಿ ನಿಜವಾದ ಪ್ರೇಮಿಗಳ ಮಾನಸಿಕ ತೊಳಲಾಟ ಏನೆಂಬುದು ಕಾದಂಬರಿ ಓದಿಯೇ ಅರಿಯಿರಿ.

ಲೇಖಕರ ಬರೆಯುವ ಶೈಲಿ, ಪದ ಬಳಕೆ, ವರ್ಣನೆ ಇವೆಲ್ಲ ಅವರದೇ ರೀತಿಯಲ್ಲಿ ಮುಂದುವರಿಯುವುದು ಸ್ವಾಭಾವಿಕ. ಎರಡು ಮಾತಿಲ್ಲ.  ಆದರೆ ಓದುಗರನ್ನು ಚಿಂತನೆಗೆ ಹಚ್ಚುವ, ಸರಾಗವಾಗಿ ಓದಿಸಿಕೊಂಡು ಹೋಗುವ ಅಷ್ಟೇ ಆಳವಾದ ವಿಚಾರಗಳನ್ನು ಹಂಚಿಕೊಳ್ಳಲು ಪ್ರಯತ್ನ ಮಾಡಿರುವುದು ಈ ಕಾದಂಬರಿಯ ವಿಶೇಷ.  ಓಶೋ ರಜನೀಶರ ವಿಚಾರ ಧಾರೆ, ಸಂದರ್ಭಕ್ಕೆ ತಕ್ಕಂತೆ ಚಿತ್ರ ಗೀತೆಗಳು ಇತ್ಯಾದಿ ಕಾದಂಬರಿಯಲ್ಲಿ ಬಳಕೆಯಾಗಿದೆ.

ಒಟ್ಟಿನಲ್ಲಿ ಪಾಪುರವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಬರಹದ ಮೂಲಕ ಬೆಳಕಿಗೆ ಬರುತ್ತಿರುವುದು ಬಹಳ ಸಂತೋಷದ ವಿಷಯ. ಇನ್ನೂ ಹೆಚ್ಚಿನ ಪುಸ್ತಕಗಳು ಅವರು ಬರೆಯುವಂತಾಗಲಿ ಎಂಬುದು ನನ್ನ ಆಶಯ ಕೂಡಾ.  ಧನ್ಯವಾದಗಳು ಪಾಪು. ಶುಭವಾಗಲಿ 

23-10-2020.  5.45pm

ಅಂಕಿತ ಪುಸ್ತಕದವರಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮ

ದಿನಾಂಕ 3-11-2019 ಭಾನುವಾರ ಅಂಕಿತ ಪುಸ್ತಕದವರಿಂದ ಬೆಂಗಳೂರಿನ ಬಸವನಗುಡಿಯಲ್ಲಿರುವ ಬಿಪಿ ವಾಡಿಯಾ ಸಭಾಂಗಣದಲ್ಲಿ ಒಟ್ಟೂ ನಾಲ್ಕು ಪುಸ್ತಕ ಬಿಡುಗಡೆ ಸಮಾರಂಭ. ನಾನು ಹೋಗುವಷ್ಟರಲ್ಲಿ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಪುಸ್ತಕ ಬಿಡುಗಡೆ ಗಣ್ಯರ ಮಾತು ರಸದೌತಣ. “ಅಘೋರಿಗಳ ಲೋಕದಲ್ಲಿ” ಪುಸ್ತಕ ಬರೆದು ಈ ನಾಗಾ ಸಾದುಗಳ ಬಗ್ಗೆ ಇರುವ ನನ್ನಂತ ಕುತೂಹಲವಿರುವವರಿಗೆ ಅದ್ಬುತ ಮಾಹಿತಿ ಒದಗಿಸಿಕೊಟ್ಟ ಲೇಖಕರು Santoshkumar Mehandale ಇವರನ್ನು ಮುಖತಃ ಭೇಟಿಯಾಗಿ ಅವರಿಗೆ ಅಭಿನಂದನೆ ಹೇಳುವ ಕಾತುರ. ಹಾಗೆ ಅವರ ಇನ್ನೊಂದು ಪುಸ್ತಕ “ಎಂಟೆಬೆ…”ಬಿಡುಗಡೆ ಕೂಡಾ ಈ ದಿನವಿತ್ತು. Inboxನಲ್ಲಿ “Pl.ಬನ್ನಿ” ಈ ಕರೆ ಪುಷ್ಟಿ ನೀಡಿತು. ಇನ್ಯಾಕೆ ತಡ, ಹೋದೆ.

ನನ್ನ ಪರಿಚಯ ಮಾಡಿಕೊಂಡು ಅವರ ಪುಸ್ತಕದ ಬಗ್ಗೆ ನನ್ನ ಅಭಿಪ್ರಾಯ ಹಂಚಿಕೊಂಡಿದ್ದು ಅವರೊಂದಿಗೆ ಕ್ಲಿಕ್, ಅವರ ಮಗಳು ಚಂದನದ ಬೊಂಬೆ! ಅವರ ಮನೆಯವರೊಂದಿಗೆ ಒಂದಷ್ಟು ಮಾತು ಹಾಗೆ ಮತ್ತೆ ಅಂಕಿತ ಪುಸ್ತಕದಂಗಡಿಯಲ್ಲಿ ಸಿಕ್ಕಾಗ ಎಲ್ಲವೂ ಸಖತ್ ಖುಷಿ. ಬಹಳ ಸಿಂಪಲ್ ಮನುಷ್ಯ. ನೇರ,ದಿಟ್ಟ, ಕಡಕ್ ಅವರ ಮಾತುಗಳು ವೇದಿಕೆಯ ಮೇಲೆ. ಹಾಗೆ ಅವರ ಬರಹದಲ್ಲೂ ಕಾಣಬಹುದು. ತಮ್ಮದೇ ಕೆಲಸದ ಒತ್ತಡದಲ್ಲಿದ್ದರೂ ಯಾವ ಅಹಂ ಇಲ್ಲದೇ ನಮ್ಮಂತ ಚಿಕ್ಕ ಬರಹಗಾರರನ್ನೂ ಆತ್ಮೀಯವಾಗಿ ಕಾಣುವ ಗುಣ ಗ್ರೇಟ್. ಬಹಳ ಬಹಳ ಸಂತೋಷವಾಯಿತು ಅವರನ್ನೆಲ್ಲಾ ಮುಖತಃ ಭೇಟಿಯಾಗಿದ್ದು.

ಹಾಗೆ ಜೋಗಿ ಸರ್ ನನ್ನ ಮೆಚ್ಚಿನ ಸಾಹಿತಿ ಪಟಕ್ಕಂತ ಕ್ಲಿಕ್ ಪಟಾಯಿಸಿದೆ. ಜಯಶ್ರೀಯವರು,ಪ್ರವೀಣ್ ಹೊಸ ಪರಿಚಯ ಒಂದಷ್ಟು ಮಾತು.

ಹೊಟ್ಟೆ ತಾಳ ಹಾಕ್ತಾ ಇತ್ತು. ಅಡಿಗಾಸ್ ರವೆ ಇಡ್ಲಿ, ಕಾದೂ ಕಾದೂ ವಿದ್ಯಾರ್ಥಿ ಭವನ್ ದೋಸೆ ವಡೆ!!😊 ಗಾಂಧಿ ಬಜಾರ್ ಒಬ್ಬಳೇ ಸುತ್ತಾಟ ನನಗಿಷ್ಟ ಮೊದಲಿಂದ. ಅಲ್ಲಿನ ಕ್ಲಿಕ್ ಚಂದ ಚಂದ ಹೂ ಮಾಲೆಗಳ ಸುತ್ತ ಹಾಗೆ ಅವರೊಂದಿಗೆ ಮಾತು ಖರೀದಿ ಜೀರೊ😉 ಇನ್ನೂ ಸುತ್ತಾಡೊ ಉಮೇದಿ ಇತ್ತು. ಆದರೆ ಕಾಲುಸೋತು ಹೇಳಿತು ನಡಿ ಮನೆಗೆ.

“ಎಂಟೆಬೆ…”ಪುಸ್ತಕ ಕೈಯಲ್ಲಿ ಇದೆ ಅವರ ಹಸ್ತಾಕ್ಷರದೊಂದಿಗೆ!! 😊 ಇನ್ನೂ “ಅಘೋರಿಗಳ ಲೋಕದಲ್ಲಿ” ಪೂರ್ತಿ ಓದಿಲ್ಲ. ಏಕೆಂದರೆ ನಾ ಓದೋದು ನಿಧಾನವಾಗಿ ಚಪ್ಪರಿಸಿಕೊಂಡು, ಮನನವಾಗುವಂತೆ,ಮನಸ್ಸಿಂದ ಮರೆಯಾಗದಂತೆ,ಲೇಖಕರು ಬರೆಯುವ ಶೈಲಿ, ಪದ ಸಾಲುಗಳ ಜೋಡಣೆ ಎಲ್ಲವನ್ನೂ ಗಮನಿಸುತ್ತ ಓದಿದರೇನೆ ನನಗೆ ಸಮಾಧಾನ. ಅದರಲ್ಲೂ “ಅಘೋರಿಗಳ ಲೋಕದಲ್ಲಿ “ಕಾಶಿಗೆ ಹೊರಡುವಾಗ ಅಂಕಿತದಿಂದ online ಖರೀದಿ ಮಾಡಿ ಹೋಗ್ತಾ ಬರ್ತಾ ಓದಿಕೊಂಡು ಬಂದೆ. ನಿಜವಾಗಿಯೂ ಲೇಖಕರ ಧೈರ್ಯ ಮೆಚ್ಚಬೇಕು. ಬರೋಬ್ಬರಿ ಹತ್ತು ವರ್ಷ ಅವರ ಜೊತೆ ಒಡನಾಡಿ ಅವರ ಪ್ರತಿಯೊಂದು ಚಲನ ವಲನ,ಸಾಧನೆ,ಚಮತ್ಕಾರ, ಮಾತು,ಅವರ ಬದುಕು, ಆಹಾರ ಎಲ್ಲ, ಎಲ್ಲವನ್ನೂ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದೊಂದು ಪೇಜೂ ಮತ್ತೆ ಮತ್ತೆ ಓದುವಂತಾಗುತ್ತದೆ. ಇಲ್ಲಿ ಹೇಳಲು ಸಾದ್ಯ ಇಲ್ಲ ಕೊಂಡು ಓದಿ ಅನುಭವಿಸಬೇಕು ಪುಸ್ತಕದ ಒಳ ಮರ್ಮ. ಇಂತಹ ಪುಸ್ತಕ ಹೊರ ತಂದ ಇವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು🙏💐👏👏

ಸ್ವತಃ ಒಂದು ವಿಷಯ, ಘಟನೆ, ವಸ್ತುಸ್ಥಿತಿ, ಜನಜೀವನ ಕುರಿತಾಗಿ ಸಂಪೂರ್ಣ ಅಧ್ಯಯನ ಮಾಡಿ ಪುಸ್ತಕ ಬರಿಬೇಕು ಅಂದರೆ ಆ ಲೇಖಕ ಎಷ್ಟು ಹಣ, ಪರಿಶ್ರಮ ವ್ಯಯಿಸಿರಲಿಕ್ಕಿಲ್ಲ. ಅಂತಹ ಒಂದು ಮಹತ್ಸಾಧನೆ ಈ ಲೇಖಕರು ಈ ಎರಡೂ ಪುಸ್ತಕಕ್ಕೆ ಮಾಡಿದ್ದಾರೆ. ಅವರೇ ಹೇಳುವಂತೆ “ನನ್ನ ಪುಸ್ತಕ ನೀವು ನನ್ನ ಹತ್ತಿರ ತೆಗೆದುಕೊಳ್ಳಿ ಇಲ್ಲಾ ಬೇರೆ ಎಲ್ಲೇ ತೆಗೆದುಕೊಳ್ಳಿ ನಿಮಗೆ ಇಷ್ಟ ಆಗಿಲ್ಲ ಅಂದರೆ ಆ ಪುಸ್ತಕದ ಸಂಪೂರ್ಣ ದುಡ್ಡು ನಿಮಗೆ ವಾಪಸ್ಸು ನಾನೇ ವಾಪಸ್ಸು ಮಾಡುತ್ತೇನೆ ಎಂಬ ಸವಾಲಾಕುತ್ತಾರೆ. ಹಾಗೆ ನನ್ನ ಪುಸ್ತಕದ ಕುರಿತು ಯಾರೂ ಈ ವೇದಿಕೆಯಲ್ಲಿ ಮಾತಾಡುವ ಆಶಯ ನಾನಿಟ್ಟುಕೊಂಡಿಲ್ಲ. ನಾನು ಬರೆದ ಪುಸ್ತಕದ ಬಗ್ಗೆ ಓದುಗರಾದ ನೀವು ಮಾತಾಡಬೇಕು. ಯಾವೊಬ್ಬ ಬರಹಗಾರನಿಗೆ ತನ್ನ ಕೃತಿ ಜನ ಒಪ್ಪೋದಿಲ್ಲ, ಅಥವಾ ತನ್ನ ಬರಹ ಜನ ಓದೋದಿಲ್ಲ ಅನ್ನುವ ಡೌಟಿರುವವರು ದಯವಿಟ್ಟು ಬರಿಬೇಡಿ. ಓದಿ ಸಾಕು ” ಅಂತ ಕಿವಿ ಮಾತು ಹೇಳಿ ಬರಹಗಾರರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚುತ್ತಾರೆ.

ನಿಜಕ್ಕೂ ಇಂತಹ ನುಡಿಗಳು ಮನಸ್ಸು ತಟ್ಟದೇ ಇರದು. ಬದುಕನ್ನು ಬಂದಂತೆ ಎದುರಿಸಬೇಕೆನ್ನುವ ಅವರ ನಿಲುವು ನಾನೂ ಎಷ್ಟೋ ಬಾರಿ ಹೇಳಿಕೊಂಡಿದ್ದಿದೆ. ಅದಕ್ಕೇ ಏನೊ ಅವರಾಡುವ ಪ್ರತಿಯೊಂದು ಮಾತುಗಳು ಎಷ್ಟು ನಿಜ ಅಂತ ಅನಿಸುತ್ತದೆ. ಬರೆದೂ ಬರೆದೂ ಬೃಹತ್ ಭಂಡಾರವನ್ನೇ ಓದುಗರಿಗೆ ನೀಡುತ್ತಿರುವ ಸಂತೋಷವರಿಗೆ ಆಯುಷ್ಯ ಆರೋಗ್ಯ ಸಂಮೃದ್ಧಿಯಾಗಿ ಕೊಟ್ಟು ಇನ್ನಷ್ಟು ಬರೆಯುವಂತಾಗಲಿ ಇನ್ನೂ ಉತ್ತಮ ಪುಸ್ತಕ ಓದುಗರ ಕೈ ಸೇರುವಂತಾಗಲಿ ಎಂಬುದು ಆ ದೇವನಲ್ಲಿ ನನ್ನ ಪ್ರಾರ್ಥನೆ🙏಼

6-11-2019. 4.27pm

ಚಿಟ್ಟೆ ಹಿಡಿವ ಅಜ್ಜಿ

ಮನುಷ್ಯನಲ್ಲಿರೊ ಕಲೆ ಎಷ್ಟೆಲ್ಲಾ ಜನರನ್ನು ಪರಿಚಯ ಮಾಡಿಸುತ್ತದೆ! ಮುಖತಃ ನೋಡದೇ, ಮಾತಾಡದೇ ಕೆವಲ ನಮ್ಮಲ್ಲಿರುವ ಪ್ರತಿಭೆಯ ಮೂಲಕ ಮನಸ್ಸು ಪರಿಚಯ ಮಾಡಿಕೊಂಡು ಹತ್ತಿರವಾಗಿಸಿಬಿಡುತ್ತದೆ. ಎಂಥಾ ವಿಚಿತ್ರ ಅಲ್ವಾ?

ಶ್ರೀ ಅನಂತ ರಮೇಶರವರೂ ಕೂಡಾ ಈಗ ಮೂರು ವರ್ಷಗಳಿಂದ ಬರಹದ ಮೂಲಕವೇ ಹೆಚ್ಚು ಆತ್ಮೀಯರಾಗಿದ್ದಂತೂ ದಿಟ. ನನ್ನ ಬ್ಲಾಗ್ ಮೂಲಕ ಪರಿಚಯರಾದವರು. ನನ್ನ ಬರಹಗಳನ್ನು ಪ್ರೋತ್ಸಾಹಿಸುತ್ತ ಇಂದಿನವರೆಗೂ ಜೊತೆಯಾಗಿ ಉಳಿದವರು. ಈ ಪುಸ್ತಕದ ಬಿಡುಗಡೆ ದಿನ ಅವರನ್ನು ಖುದ್ದಾಗಿ ಕಾಣಬೇಕು, ಶುಭಕೋರಬೇಕು ಎಂದು ಹೋದಾಗ ಸಿಕ್ಕ ಆತ್ಮೀಯತೆ ಅಪಾರ.

ಸಂಕ್ಷಿಪ್ತವಾಗಿ ಹೇಳುವುದಾದರೆ ಈ ಕಥಾ ಸಂಕಲನದಲ್ಲಿಯ ಕೆಲವು ಕಥೆಗಳನ್ನು ಅವರ ಬ್ಲಾಗಲ್ಲಿ ಓದಿದರೂ ಮತ್ತೆ ಎಲ್ಲಾ ಕಥೆಗಳನ್ನು ಓದಲು ಹಿಡಿದು ಕುಳಿತೆ. ಅವರು ಬರೆಯುವ ಶೈಲಿ ಓದುತ್ತ ಹೋದಂತೆ ಕೆಲವು ಕಡೆ ನಮ್ಮ ಜೊತೆಗೆ ಯಾವುದೋ ಸುದ್ದಿ ಹೇಳುತ್ತಿರುವಂತೆ ಭಾಸವಾಯಿತು. ಒಂದು ರೀತಿ ಆಪ್ತವಾಗಿದೆ ಅವರ ಬರಹ. ‘ ಓಹ್! ಇದು ಕಥೆ ನಾ ಓದುತ್ತಿರುವುದು’ ಅಂತ ಮನಸ್ಸು ಎಚ್ಚರಿಸುತ್ತದೆ. ತುಂಬಾ ಸರಳವಾಗಿ ಬರೆದ ಕಥೆಗಳು ಓದುಗನ ಮನಸ್ಸಿನಲ್ಲಿ ನಿಲ್ಲುತ್ತವೆ. ಕೆಲವು ಕಥೆಗಳು ವಾಸ್ತವದಲ್ಲಿ ನಡೆಯುವ ಚಿತ್ರಣ ಕಥೆಯ ರೂಪ ತಳೆದರೆ ಮತ್ತೆ ಕೆಲವು ಅತೀ ಸಾಮಾನ್ಯವೆನಿಸುವ ವಿಷಯ ಕಥೆಯಾಗಿ ಹೆಣೆದಿದ್ದು ವಿಶೇಷ.

ಹದಿನೈದು ಕಥೆಗಳಿರುವ ಈ ಕಥಾ ಸಂಕಲನದಲ್ಲಿ “ಎರಡನೇ ಪ್ರೇಮ ಪತ್ರ”, “ಚಿಟ್ಟೆ ಹಿಡಿವ ಅಜ್ಜಿ” “ಪೊರೆ” ” ಹೊಸ ಸ್ನೇಹ” ಕಥೆಗಳು ವಿಭಿನ್ನವಾಗಿ ಮೂಡಿ ಬಂದಿವೆ. ಕವಿಯ ಕಲ್ಪನೆಯಲ್ಲಿ ಅರಳಿದ ಈ ಕಥಾ ಸಂಕಲನ ಒಮ್ಮೆ ಓದಿಯೇ ಅನುಭವಿಸಬೇಕು ಇದರ ಒಳ ಹರಿವು. ಅವರ ಚೊಚ್ಚಲ ಈ ಕಥಾಸಂಕಲನ ಅವರ ಮುಂದಿನ ಸಾಹಿತ್ಯ ಸೇವೆಗೆ ಮೈಲುಗಲ್ಲಾಗಲಿ, ಅವರಿಂದ ಇನ್ನೂ ಹೆಚ್ಚಿನ ಕೃತಿ ಹೊರ ಬರಲಿ, ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಲಿ ಎಂಬುದು ನನ್ನ ಆಶಯ. ಉತ್ತಮ ಕಥಾಸಂಕಲನ ಹೊರ ತಂದಿರುವ ಕವಿಗೆ ಅನಂತ ಧನ್ಯವಾದಗಳು.

15-12-2018. 11.29pm