ಹೊನಲು ತಾಣದಲ್ಲಿ ಪ್ರಕಟ”ಸೀರೆಗಳ ಅಳಲು”ಕವನ🙏

https://honalu.net/2021/08/29/%e0%b2%95%e0%b2%b5%e0%b2%bf%e0%b2%a4%e0%b3%86-%e0%b2%b8%e0%b3%80%e0%b2%b0%e0%b3%86%e0%b2%97%e0%b2%b3-%e0%b2%85%e0%b2%b3%e0%b2%b2%e0%b3%81/

ವಿಜಯ ಕರ್ನಾಟಕ ಬೋಧಿವೃಕ್ಷದಲ್ಲಿ ಪ್ರಕಟ

ದಿನಾಂಕ 20-3-2021ರ ವಿಜಯ ಕರ್ನಾಟಕ ಬೋಧಿವೃಕ್ಷ ಪುರವಣಿಯಲ್ಲಿ ಪ್ರಕಟವಾದ ಲೇಖನವಿದು. ಧನ್ಯವಾದಗಳು ಪತ್ರಿಕಾ ಬಳಗಕ್ಕೆ 🙏

20-3-2021. 1.20pm

ಧನ್ಯವಾದಗಳು ಅವಧಿ🙏 ಮಸಲತ್ತು ಮಾಡುವ ಕವಿತೆಗಳಿಗೆ.. | ಅವಧಿ । AVADHI

https://avadhimag.com/%e0%b2%ae%e0%b2%b8%e0%b2%b2%e0%b2%a4%e0%b3%8d%e0%b2%a4%e0%b3%81-%e0%b2%ae%e0%b2%be%e0%b2%a1%e0%b3%81%e0%b2%b5-%e0%b2%95%e0%b2%b5%e0%b2%bf%e0%b2%a4%e0%b3%86%e0%b2%97%e0%b2%b3%e0%b2%bf%e0%b2%97%e0%b3%86/

ಇದುವರೆಗೆ “ಅವಧಿ”online ತಾಣದಲ್ಲಿ ನಾನು ಬರೆದ ಅರವತ್ತಕ್ಕೂ ಹೆಚ್ಚು ಬರಹಗಳು ಪ್ರಕಟವಾಗಿದ್ದು ಅತ್ಯಂತ ಹೆಮ್ಮೆಯ ವಿಷಯ ನನಗೆ, ಅಷ್ಟೇ ಖುಷಿ ನನ್ನ ಬರಹಗಳು ಪ್ರಕಟವಾದಾಗ ಕುಣಿದಾಡುವಷ್ಟು. 

ಅವಧಿಯ ರೂವಾರಿ ಶ್ರೀ Gn Mohan  ಸರ್ ಯಾರೆಂಬುದೇ ಗೊತ್ತಿಲ್ಲದ ನನಗೆ ಈ ಬರಹಗಳು ಅವರ ಮೆಚ್ಚುಗೆಯ ಪ್ರೋತ್ಸಾಹದ ನುಡಿಗಳು ” ಪದಗಳನ್ನು ಜೋಡಿಸುವ ಶೈಲಿ ಓದುಗರ ಮೆಚ್ಚುಗೆ ಗಳಿಸುತ್ತದೆ” ಹಿಂದೊಮ್ಮೆ ಮಹಿಳಾ ದಿನಾಚರಣೆಯ ದಿನ ಅವರಿಂದ ಶುಭಾಶಯಗಳೊಂದಿಗೆ ಕೇಳುವಂತೆ ಮಾಡಿತು.

ರಂಗಶಂಕರದಲ್ಲಿ ಮೊದಲ ಭೇಟಿಯಲ್ಲಿ “ಎಷ್ಟು ಕವನ ಬರೆಯುತ್ತಾರೆ ನಿಮ್ಮಮ್ಮ, ನೀವು ಬಚಾವ್. ಆದರೆ ನಾನು ಎಲ್ಲ ಓದುತ್ತೇನೆ” ಮಗಳೊಂದಿಗೆ ಮಾತು.   ಹಾಗೆ “ಕವನದ ಹೊರತಾಗಿ ಬೇರೆ ಬೇರೆ ಬರಹಗಳನ್ನು ಬರೆಯಿರಿ” ಎಂಬ ಪ್ರೋತ್ಸಾಹದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ. 

ನಿಜಕ್ಕೂ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವ ಸರ್ ಗುಣಕ್ಕೆ ನಾನು ಚಿರಋಣಿ.  ಅವಧಿಯಲ್ಲಿ ಪ್ರಕಟವಾಗುವ ಕವನಗಳನ್ನು ಓದುತ್ತಾ ಕವನಗಳನ್ನು ಬರೆದಿದ್ದೂ ಇದೆ.

ಹಾಗೆ ನಿನ್ನೆ ದಿನ ನನ್ನ ಮತ್ತೊಂದು ಕವನ ಅವಧಿಯಲ್ಲಿ ಪ್ರಕಟವಾಗಿದೆ.  ಸರ್ ಅನಂತ ಧನ್ಯವಾದಗಳು ತಮಗೂ ಅವಧಿಯ ಬಳಗಕ್ಕೂ.

ಹದಿನಾಲ್ಕು ವರ್ಷಗಳ ಸುಧೀರ್ಘ ಪಯಣದಲ್ಲಿ ಅನೇಕ ಕವಿಗಳಿಗೆ ಪ್ರೋತ್ಸಾಹ ನೀಡುತ್ತಾ ಡಿಜಿಟಲ್  ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿ ಪಡೆದ ಅವಧಿ ತಮ್ಮ “ಬಹುರೂಪಿ” ಪ್ರಕಾಶನದ ಮೂಲಕ ಅನೇಕ ಕವಿಗಳ ಪುಸ್ತಕ ಪ್ರಕಟಿಸುತ್ತಿರುವುದು ನಿಜಕ್ಕೂ ಅದ್ಭುತ ಸಾಧನೆಯೇ ಸರಿ. 

ಈಗ ಮತ್ತೊಂದು ಸಾಧನೆ “Bahuroopi book hub” ಪುಸ್ತಕಗಳ ಲೋಕ ಅನಾವರಣ ಬೆಂಗಳೂರಿನಲ್ಲಿ! ಬನ್ನಿ , ಓದುಗರಿಗೆ ರಸದೌತಣ ನೀಡುವ ತಾಣವೆಂದು ಕೇಳ್ಪಟ್ಟೆ. ಅಭಿನಂದನೆಗಳು ಸರ್ 🌷

ನಮ್ಮೆಲ್ಲರ ಮೆಚ್ಚಿನ ಅವಧಿ ಇನ್ನಷ್ಟು ಮತ್ತಷ್ಟು ಮೊಗೆವಷ್ಟು ಬರಹಗಳನ್ನು ಪ್ರಕಟಿಸುತ್ತ ಮೇರು ಮಟ್ಟದಲ್ಲಿ ಸದಾ ಮಿನುಗಲಿ, ಎಲ್ಲರ ಮನೆ, ಮನದ ಮಾತಾಗಲಿ ಎಂಬುದು ನನ್ನ ಒಡಲಾಳದ ಆಶಯ, ಹಾರೈಕೆ.  ಸರ್ ನಮಸ್ಕಾರ 🙏🌷

15-2-2021. 3.17pm

ವಿಜಯ ಕರ್ನಾಟಕ ಬೋಧಿವೃಕ್ಷದಲ್ಲಿ ಪ್ರಕಟ

ತುಂಬಾ ದಿನಗಳ ನಂತರ ಮತ್ತೆ ಇಂದು 6-2-2021ರ ವಿಜಯ ಕರ್ನಾಟಕ ಬೋಧಿವೃಕ್ಷ ಪುರವಣಿಯಲ್ಲಿ ನಾನು ಬರೆದ ಲೇಖನ ಪ್ರಕಟಗೊಂಡಿದ್ದು ಬಹಳ ಸಂತೋಷವಾಗುತ್ತಿದೆ. ಧನ್ಯವಾದಗಳು ಪತ್ರಿಕಾ ಬಳಗಕ್ಕೆ.

6-2-2021. 2.58pm

ಪ್ರತಿಲಿಪಿಯಲ್ಲಿ ಓದಿರಿ – “ಅನಾಥೆ (ಕಥೆ)”

“ಅನಾಥೆ (ಕಥೆ)”, ಪ್ರತಿಲಿಪಿಯಲ್ಲಿ ಓದಿರಿ : https://kannada.pratilipi.com/story/%E0%B2%85%E0%B2%A8%E0%B2%BE%E0%B2%A5%E0%B3%86-%E0%B2%95%E0%B2%A5%E0%B3%86-wmwe5dmjcqx8?utm_source=android&utm_campaign=content_share ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ
********

“ಇಂದು ನಿನ್ನ ನೆನಪಲ್ಲಿ ಕಾದ ಮನಸ್ಸು ನಿರಾಶೆಯಲ್ಲಿ ಹಪಹಪಿಸುತ್ತಿದೆ.  ತಲ್ಲಣದ ಗೂಡಿನಂತಿರುವ ಮನಕ್ಕೆ ಸಾಂತ್ವನದ ಬಯಕೆಯೋ ಏನೋ ಯಾರಿಗೆ ಗೊತ್ತು?  ಅನಿಯಂತ್ರಿತ ಬದುಕು ಮೂರಾಬಟ್ಟೆಯಾದಾಗ ನೆನಪುಗಳು ಗರಿಬಿಚ್ಚುತ್ತವೆ ಸನಿಹ ನೀನಿದ್ದರೆ ಎಂಬ ಕೊರಗಿನಲ್ಲಿ.  ಯಾವ ಕಲ್ಲು ದೇವರಿಗೂ ಕೇಳದ ನನ್ನ ಕೂಗು ಎದೆ ಗೂಡಿನಲ್ಲೇ ಮಾರ್ಧನಿಸುವುದು ನನಗಷ್ಟೇ ಸೀಮಿತವಾಯಿತಲ್ಲಾ. ಒಂಟಿತನ ಎಷ್ಟು ಕ್ರೂರಿ!”

ಸುಜಾತಾ ಮಲಗಿದಲ್ಲೇ ಯೋಚಿಸುತ್ತ ಸುರಿವ ಕಣ್ಣೀರಲ್ಲಿ ದಿಂಬು ಒದ್ದೆಯಾಗಿದ್ದು ಕತ್ತಿಗೆ ರಾಚಿದಾಗ ವಾಸ್ತವಕ್ಕೆ ಬರುತ್ತಾಳೆ.  ಎದ್ದು ಮುಖ ತೊಳೆದು ಲಗುಬಗೆಯಲ್ಲಿ ಅಡುಗೆಮನೆಯಲ್ಲಿ ಬೆಳಿಗ್ಗೆ ತೊಳೆದ ಪಾತ್ರೆ ಹರಡಿಕೊಂಡು ಬಿದ್ದ ಸಾಮಗ್ರಿಗಳನ್ನು ಜೋಡಿಸಿ ಹಾಲು ಕಾಯಿಸಲು ಗ್ಯಾಸ್ ಹಚ್ಚಲು ಹೋದರೆ ಗ್ಯಾಸೂ ಖಾಲಿ. 

ಥತ್ತರಕಿ ತನ್ನದೇನು ಅವಸ್ಥೆ.   “ರೀ… ಬನ್ನಿ ಇಲ್ಲಿ.  ಗ್ಯಾಸ್ ಖಾಲಿ ಆಗಿದೆ,ಸಿಲೀಂಡರ್ ಜೋಡಿಸಿ, ಸ್ವಲ್ಪ ಬೇಗ ಬರ್ತೀರಾ?  ಬೇಗ ಬನ್ನಿ.  ನಾನು ಟೀ ಕುಡಿಯಬೇಕು.  ಕೇಳ್ತಾ…?”

ಗಂಡನನ್ನು ಕೂಗಿ ಕರೆಯುತ್ತಿದ್ದ ಆ ದಿನಗಳೆಲ್ಲಿ?  ಈಗ ಎಲ್ಲದಕ್ಕೂ ನಾನೇ ಹೆಗಲು ಕೊಡಬೇಕು.  ಈ ಹೆಗಲು ಇನ್ನೇನೇನು ಹೊರಬೇಕೋ.  ಭಗವಂತಾ ಏಕೀ ಬವಣೆಯ ಬದುಕು?  ಬೇಡ ಬೇಡವೆಂದರೂ ಮತ್ತದೇ ನೆನಪುಗಳತ್ತ ಜಾರುವ, ಕಣ್ಣೀರಿಡುವ ಪ್ರಸಂಗಗಳು ಕ್ಷಣ ಕ್ಷಣಕ್ಕೂ.

ಎಲ್ಲವೂ ವಿಧಿಲಿಖಿತವೆಂದು ಸುಮ್ಮನೆ ಇರಲೂ ಆಗದೆ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಹೈರಾಣಾಗುತ್ತಿದೆ ಆ ಹೆಣ್ಣು ಜೀವ.

ಎಲ್ಲಾ ಜವಾಬ್ದಾರಿಗಳನ್ನು ಹೊರುವ ಒಬ್ಬ ಸಂಗಾತಿ ಹೆಣ್ಣಿಗೆ ದೊರಕಿದಾಗ ಬದುಕಿನ ಕಷ್ಟಗಳ ಬಗ್ಗೆ ಮುಖ ಮಾಡುವ ಪರಿಸ್ಥಿತಿ ಬರುವುದೇ ಇಲ್ಲ.  ಬದುಕು ಎಷ್ಟು ಸುಂದರ.  ನಾನೆಷ್ಟು ಸೌಭಾಗ್ಯವಂತೆ ಎಂದು ಬೀಗುತ್ತಾಳೆ.  ಸಂಸಾರದಲ್ಲಿ ಎಲ್ಲಿಲ್ಲದ ಆಸಕ್ತಿ.  ಪ್ರತಿಯೊಂದರಲ್ಲೂ ಶಿಸ್ತು ಎದ್ದು ಕಾಣುತ್ತದೆ.  ಗೃಹಿಣಿ ಮನೆ ಬೆಳಗುವ ಜ್ಯೋತಿ ಎಂಬ ಮಾತಿನಂತೆ ಅಕ್ಷರಶಃ ಆಸ್ಥೆ ವಹಿಸಿ ಸಂಸಾರ ಮಾಡುತ್ತಾಳೆ.  ತನ್ನ ಮನೆ, ತನ್ನ ಗಂಡ,ತನ್ನ ಮಕ್ಕಳು,ಈ ಸಂಸಾರ ನನ್ನದು,ಬಂದು ಬಳಗ ಎಲ್ಲರೂ ನಮ್ಮವರು.  ಇವರೆಲ್ಲರನ್ನೂ ಗೌರವದಿಂದ ಚೆನ್ನಾಗಿ ನೋಡಿಕೊಂಡು ಎಲ್ಲರ ಪ್ರಿತಿಗೆ ಪಾತ್ರಳಾಗಬೇಕು ಎಂಬ ಆಸ್ತೆ ಸದಾ ಅವಳಲ್ಲಿ.  ಆದುದರಿಂದ ಎಲ್ಲದಕ್ಕೂ ಮುಖ್ಯ ಕಾರಣ ಹೆಣ್ಣಿಗೆ  ಗಂಡನ ಪ್ರೀತಿ ಆಸರೆ ಮುಖ್ಯ.

ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಒಂದು ದಿನ ಸಂಜೆ ಕೆಲಸ ಮುಗಿಸಿ ಸುಸ್ತಾಗಿ ಬಂದ ಶ್ರೀಕರ “ಊಟವೂ ಬೇಡ ಕಣೆ.  ಇವತ್ಯಾಕೊ ತುಂಬಾ ತಲೆ ಸಿಡಿತಾ ಇದೆ.  ಸ್ವಲ್ಪ ಕುಡಿಯಲು ಏನಾದರೂ ಮಾಡಿ ಕೊಡು ಸಾಕು” ಎಂದು ಸೋಫಾದಲ್ಲಿ ಕುಸಿದು ಕುಳಿತ ಗಂಡನಿಗೆ ಹಣೆಗೆ ಅಮೃತಾಂಜನ ನೀವಿ ಬಿಸಿ ಬಿಸಿ ಕಾಫಿ ಕುಡಿಸಿ ತಾನೇ ಹೆಗಲಿಗೆ ಅವನನ್ನು ಆನಿಸಿಕೊಂಡು ಕರೆದುಕೊಂಡು ಹೋಗಿ ಹಾಸಿಗೆಯಲ್ಲಿ ಮಲಗಿಸಿದ್ಧಳು. 
ರಾತ್ರಿ ಆಗಾಗ ಎದ್ದು ನೋಡಿ ಗಂಡ ನಿದ್ರಿಸುತ್ತಿರುವುದನ್ನು ಕಂಡು ತಾನೂ ಕಣ್ಣು ಎಳೆಯುತ್ತಿರುವುದನ್ನು ತಡೆಯಲಾಗದೇ ಮಲಗಿದ್ದಳು.  ಬೆಳಗಿನ ಜಾವ ಆಗಲೇ ನಾಲ್ಕು ಗಂಟೆಯಾಗಿತ್ತು ಅವಳು ಮಲಗಿದಾಗ.

ಏಳು ಗಂಟೆಗೆಲ್ಲ ಎಚ್ಚರವಾಗಿ ನೋಡುತ್ತಾಳೆ ಗಂಡ ಪಕ್ಕದಲ್ಲಿ ಇಲ್ಲ.  ಗಡಬಡಿಸಿ ಎದ್ದು ರೀ….ರೀ…. ಎಂದು ಮನೆಯೆಲ್ಲ ಹುಡುಕಾಡಿದರೂ ಗಂಡನ ಪತ್ತೆಯಿಲ್ಲ.  ಏನಾಯ್ತಪ್ಪಾ, ಎಲ್ಲಿ ಹೋದರು ಇವರು ಎಂದು ಗಾಬರಿಯಲ್ಲಿ ಜೋರಾಗಿ ಕೂಗುತ್ತಾ ಮತ್ತೊಮ್ಮೆ ಅಡಿಗೆಮನೆ ಕಡೆ ಬರುವಾಗ ಕಕ್ಕಸು ಮನೆಯಲ್ಲಿ ನೀರಿನ ಸದ್ದು. 

ಸಧ್ಯ ಇವರಿಲ್ಲಿದ್ದಾರೆ ಎಂದು ತನ್ನಷ್ಟಕ್ಕೆ ಸಮಾಧಾನ ಮಾಡಿಕೊಂಡು ಬಚ್ಚಲಲ್ಲಿ ಮುಖ ತೊಳೆದು ದೇವರಿಗೆ ದೀಪ ಹಚ್ಚಿ ಇಬ್ಬರಿಗೂ ಕಾಫಿ ಮಾಡಲು ಅಡಿಗೆ ಮನೆಯ ಕಡೆ ಬರುತ್ತಿರುವಂತೆ ದಡ್ ಎಂದು ಬಿದ್ದ ಸದ್ದು.  ಓಡೋಡಿ ಬಂದು ನೋಡುತ್ತಾಳೆ ಶ್ರೀಕರ ನೆಲದಲ್ಲಿ  ಕಾಲು ಜಾರಿ ಬಿದ್ದ ಹೊಡೆತಕ್ಕೆ ನಲ್ಲಿಗೆ ಬಡಿದ ಪರಿಣಾಮ ತಲೆಯಿಂದ ಬಳಬಳನೆ  ರಕ್ತ ಸೋರುತ್ತಿತ್ತು.  ಕೈಗೆ ಸಿಕ್ಕ ಬಟ್ಟೆಯನ್ನು ಗಟ್ಟಿಯಾಗಿ ತಲೆಗೆ ಸುತ್ತಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದಳು. 

ಪರಿಶೀಲಿಸಿದ ಡಾಕ್ಟರ್ ” ನೋಡಮ್ಮ ತಲೆಗೆ ಏಟು ಬಿದ್ದಾಗ ಈಗಲೇ ಏನೂ ಹೇಳುವುದಕ್ಕೆ ಆಗುವುದಿಲ್ಲ.  ನಲವತ್ತೆಂಟು ಗಂಟೆ ಟೈಮ್ ನಲ್ಲಿ ಇವರಿಗೆ ವಾಂತಿ, ತಲೆಸುತ್ತು ಏನೂ ಬಾರದೇ ಇದ್ದರೆ ಓಕೆ.  ಏನಾದರೂ ನಾನು ಹೇಳಿದ ಸಿಂಟೆಮ್ಸ ಬಂದರೆ ಸ್ಕ್ಯಾನಿಂಗ್ ಮಾಡಿಸಬೇಕಾಗುತ್ತದೆ.  ಮೇಲ್ನೋಟಕ್ಕೆ ಗಾಯ ಸಣ್ಣದಾಗಿ ಕಂಡರೂ ಅದು ಆಳವಾಗಿ ಆಗಿದ್ದರೆ ಒಳಗಡೆ ಡ್ಯಾಮೇಜ್ ಆಗುವ ಸಾಧ್ಯತೆಗಳೂ ಇರುತ್ತವೆ.  ಯಾವುದಕ್ಕೂ ಸ್ಕ್ಯಾನಿಂಗ್ ಸೆಂಟರಿಗೆ ಲೇಟರ್ ಬರೆದು ಕೊಡುತ್ತೇನೆ.  ಸ್ವಲ್ಪ ಅನುಮಾನ ಬಂದರೂ ಕೂಡಲೇ ಕರೆದುಕೊಂಡು ಹೋಗಿ.  ರಿಪೋರ್ಟ್ ತಂದು ತೋರಿಸಿ.
ಸಧ್ಯಕ್ಕೆ ಬ್ಯಾಂಡೇಜ್ ಕಟ್ಟಿ ಟ್ಯಾಬ್ಲೆಟ್ ಬರೆದುಕೊಡುತ್ತೇನೆ. ಹಾಗೆ ಸೆಪ್ಟಿಕ್ ಆಗದೇ ಇರಲು ಇಂಜೆಕ್ಷನ್ ಕೊಡುತ್ತೇನೆ.  ಯಾವುದಕ್ಕೂ ಹುಷಾರಾಗಿರಿ.”

ಸುಜಾತಾಳಿಗೆ ಕೈಕಾಲೆಲ್ಲ ಬಿದ್ದೋದ ಅನುಭವ.  ಏನು ಮಾಡಲಿ ನಾನೀಗ?  ತಲೆಗೆ ನಲ್ಲಿ ಬಡಿದರೆ ಇಷ್ಟೆಲ್ಲಾ ಅವಾಂತರ ಆಗುತ್ತಾ?  ಎಲ್ಲಾ ನಂದೇ ತಪ್ಪು.  ಅವರು ಕಕ್ಕಸು ರೂಮಿನಲ್ಲಿ ಇರೋದು ಗೊತ್ತಾದಾಗ ನಾನು ಸ್ವಲ್ಪ ಎಚ್ಚರಿಕೆ ಮಾತನಾಡಿ ಅಲ್ಲೇ ಹೊರಗಡೆ ನಿಂತಿರಬೇಕಿತ್ತು.   ಒಬ್ಬರನ್ನೆ ಬಿಟ್ಟು ತಪ್ಪು ಮಾಡಿದೆ.  ಆ ಸಮಯದಲ್ಲಿ ನನ್ನನ್ನು ಕೂಗಿಕೊಂಡರೊ ಎನೋ.  ಡಾಕ್ಟರ್ ಹೇಳಿದಂತೆ ಏನಾದರೂ ಆಗಿಬಿಟ್ಟರೆ?  ಶಿವನೇ!  ಕಾಪಾಡಪ್ಪಾ.  ಸ್ವಾಮಿ ಮಂಜುನಾಥಾ ಏನೂ ಆಗದಿರುವಂತೆ ನೋಡಿಕೋ ತಂದೆ.  ಇವರನ್ನು ನಿನ್ನ ಸನ್ನಿಧಿಗೆ ಕರೆದುಕೊಂಡು ಬಂದು ಉರುಳುಸೇವೆ ಮಾಡಿಸ್ತೀನಿ.  ವೆಂಕಟ್ರಮಣಾ…..

ಮೇಡಂ, ಮೇಡಂ…. ನರ್ಸ್ ಪದೆ ಪದೇ ಕರೆದಾಗಲೇ ವಾಸ್ತವಕ್ಕೆ ಬಂದ ಸುಜಾತಾ ಗಡಬಡಿಸಿ “ಏನು ಹೇಳಿ ಏನಾಯ್ತು ಅವರಿಗೆ, ಯಾಕೆ ಇನ್ನೂ ಮಲಗೇ ಇದ್ದಾರೆ? ಇಂಜೆಕ್ಷನ್ ಆಯ್ತಾ?”

ನೀವು ಮೊದಲು ಯೋಚಿಸೋದು ಬಿಡಿ.  ಡಾಕ್ಟರ್ ಹೇಳಿದ ಮಾತ್ರಕ್ಕೆ ಆಗೇಬಿಟ್ಟಿತು ಅನ್ನೋ ಹಾಗೆ ಯೋಚಿಸುತ್ತಿದ್ದೀರಾ.  ಧೈರ್ಯ ತೆಗೆದುಕೊಳ್ಳಿ.  ಹೋಗಿ ಈ ಮಾತ್ರೆಗಳನ್ನು ತೆಗೆದುಕೊಂಡು ಬನ್ನಿ.  ಡಾಕ್ಟರ್ ಗೆ ಒಮ್ಮೆ ತೋರಿಸಿ ನಿಮ್ಮ ಎಜಮಾನರನ್ನು ಕರೆದುಕೊಂಡು ಹೋಗಿ.  ನಾವೇ ಮಲಗಿ ಸ್ವಲ್ಪ ಹೊತ್ತು ಅಂತ ಹೇಳಿದ್ದರಿಂದ ಮಲಗಿದ್ದಾರೆ ಅಷ್ಟೇ.  ಗಾಬರಿ ಆಗುವ ಅವಶ್ಯಕತೆ ಇಲ್ಲ.

ಮೊದಲಿನಿಂದಲೂ ಪರಿಚಯವಿದ್ದ ನರ್ಸ್ ಅವಳು.  ಕಾಳಜಿಯಿಂದ ಸಮಾಧಾನ ಮಾಡಿದ ಅವಳ ಮಾತಿಗೆ ಒಂದು ದೀರ್ಘ ನಿಟ್ಟುಸಿರು ಬಿಟ್ಟ ಸುಜಾತಾ ಹತ್ತಿರದ ಮೆಡಿಕಲ್ ಸ್ಟೋರ್ ಗೆ ಮಾತ್ರೆ ತರಲು ಹೋಗುತ್ತಾಳೆ. 
ಅಲ್ಲಿ ಮಾತ್ರೆ ಸಿಗದ ಕಾರಣ ಇನ್ನೊಂದು ಮತ್ತೊಂದು ಅಂತ ಮೂರು ನಾಲ್ಕು ಅಂಗಡಿ ಸುತ್ತಿ ಬರುವಷ್ಟರಲ್ಲಿ ಅರ್ಧ ಗಂಟೆ ಸರಿದಿತ್ತು.  ಅವಳ ಗಂಡ  ಹೊರಗಿನ ವಿಸಿಟರ್ ರೂಮಿನಲ್ಲಿ ಕಾಯುತ್ತಾ ಕುಳಿತಿರುವುದು ಕಂಡಾಗ ಅಯ್ಯೋ! ಎಷ್ಟು ಹೊತ್ತಾಗಿಹೋಯಿತು. ಪಾಪ ಕಾಯಿಸಿಬಿಟ್ಟೆ……

ಹತ್ತಿರ ಬಂದವಳೆ ” ರೀ…ಹೇಗಿದ್ದೀರಾ? ಇರಿ ಬಂದೆ.  ಮಾತ್ರೆ ತೋರಿಸಿ ಬರ್ತೀನಿ.  ಲೇಟಾಗಿಹೋಯ್ತು.  ಮಾತ್ರೆ ಸಿಗಲಿಲ್ಲ…”ಹೇಳುತ್ತಲೇ ಡಾಕ್ಟರ್ ಹತ್ತಿರ ಹೋದರೆ ಅಲ್ಲಿ ಪೇಷಂಟ್ ನೋಡುತ್ತಿದ್ದಾರೆ.  ಮತ್ತಷ್ಟು ಹೊತ್ತು ಕಾದು ತೋರಿಸಿ ಅವರ ಎಚ್ಚರಿಕೆ ನೆನಪಿಸಿಕೊಳ್ಳುತ್ತ ಗಂಡನನ್ನು ಮನೆಗೆ ಕರೆದುಕೊಂಡು ಬರುತ್ತಾಳೆ. 

ಏನೂ ಆಹಾರ ತೆಗೆದುಕೊಳ್ಳದೇ ಬಂದವನೇ ಮಲಗಿಬಿಟ್ಟಿದ್ದು ಸ್ವಲ್ಪ ಕೋಪ, ದುಃಖ ಮನಸ್ಸು ಕಾಡಿದರೂ …ಮಲಗಲಿ, ಆಮೇಲೆ ಎದ್ದು ತಿನ್ನಿಸಬಹುದೆಂಬ ನಿರೀಕ್ಷೆಯಲ್ಲಿ ಮನೆಗೆಲಸದಲ್ಲಿ ತೊಡಗುತ್ತಾಳೆ. 

ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಶ್ರೀಕರ ವಾಂತಿ ಮಾಡಿಕೊಳ್ಳುವ ಸೌಂಡ್ ಹೊರ ಹಾಕುತ್ತಿದ್ದಂತೆ ಸುಜಾತಾಳಿಗೆ ಜಂಘಾಬಲವೇ ಉಡುಗಿಹೋಯಿತು.  ಆದರೂ ಸಾವರಿಸಿಕೊಂಡು ರಾತ್ರಿಯಿಂದ ಏನೂ ಹೊಟ್ಟೆಗೆ ತಿಂದಿಲ್ಲ.  ಸ್ವಲ್ಪ ಎಸಿಡಿಟಿ ಆಗಿರಲಿಕ್ಕೂ ಸಾಕು.  ನರ್ಸ್ ಹೇಳಿದ್ದಾಳೆ ಅಲ್ವಾ?  ನೋಡೋಣ ಎಂದು ಮಾತ್ರೆ ಕೊಟ್ಟು ಸಮಾಧಾನ ಮಾಡಿ ಮಲಗಿಸುತ್ತಾಳೆ.

ಆದರೆ ಏನೂ ಪ್ರಯೋಜನವಿಲ್ಲ.  ಮತ್ತದೇ ತಲೆ ಸುತ್ತು ಒಮಿಟಿಂಗ್ ಒದ್ದಾಟ.  ಸ್ಕ್ಯಾನಿಂಗ್ ಸೆಂಟರಿಗೆ ಫೋನ್ ಮಾಡಿದವಳೇ ಕೂಡಲೇ ಟ್ಯಾಕ್ಸಿ ಬುಕ್ ಮಾಡಿ ಕರೆದುಕೊಂಡು ಹೋಗಿ ಸ್ಕ್ಯಾನಿಂಗ್ ಮಾಡಿಸಿ ರಿಪೋರ್ಟಲ್ಲಿ ನೋಡಿದರೆ ಏನೂ ತೊಂದರೆ ಇಲ್ಲ.  ಮತ್ಯಾಕೆ ಹೀಗೆ ಆಗುತ್ತಿದೆ? ಖಾಲಿ ಹೊಟ್ಟೆಯಲ್ಲಿ ಇದ್ದ ಪರಿಣಾಮವೇ ಇರಬೇಕು. 

ಮನೆಗೆ ಬಂದವಳೆ ಬೇಡ ಬೇಡವೆಂದರೂ ಕೇಳದೆ ಒತ್ತಾಯ ಮಾಡಿ ಶ್ರೀಕರನಿಗೆ ಸ್ವಲ್ಪ ತಿಂಡಿಯನ್ನು ತಿನ್ನಿಸಿ ಮಾತ್ರೆ ಕೊಟ್ಟು ಮಲಗಿಸಿ ತನ್ನ ಕೆಲಸದಲ್ಲಿ ನಿರತರಾಗಿದ್ದಳು.  ನಿದ್ರೆಗೆ ಜಾರಿದ ಗಂಡನನ್ನು ನೋಡಿ ಸಧ್ಯ ಕಡಿಮೆ ಆಯ್ತಲ್ಲಾ.  ಯಾವುದಕ್ಕೂ ನಾಳೆ ಮತ್ತೆ ಡಾಕ್ಟರ್ ಹತ್ತಿರ ಕರೆದುಕೊಂಡು ಹೋದರೆ ಆಯ್ತು.  ದೇವರೆ ದೇವರೇ…ಕಾಪಾಡಪ್ಪಾ….

ಅದು ಹಾಗೆ ; ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಸುಜಾತಾ ಮೊದಲು ನೆನೆಯುವುದು ಆ ಪರಮಾತ್ಮನನ್ನು.  ಇದಕ್ಕೆ ಸರಿಯಾಗಿ ಹಲವು ಸಂದರ್ಭಗಳಲ್ಲಿ ತನಗೆ ನೆರವಿಗೆ ಬಂದಿದ್ದು,  ತಾನು ಪಾರಾಗುತ್ತಿದ್ದದ್ದು ಅವನಿಂದಲೇ ಎಂಬ ಗಾಢವಾದ ನಂಬಿಕೆ.  ಆದರೆ ಈ ನಂಬಿಕೆ ಕೈಕೊಟ್ಟಿದ್ದು ಈ ಒಂದು ಘಟನೆಯಲ್ಲಿ ಮಾತ್ರ.  ಜೀವ ಹಿಂಡುವ ಅಗಲಿಕೆ ಊಹಿಸಿಯೂ ಇರಲಿಲ್ಲ.

ಮಧ್ಯರಾತ್ರಿ ಹನ್ನೆರಡು ಗಂಟೆ.  ಎಚ್ಚರಾದಾಗ ನರಳುವ ಶ್ರೀಕರನನ್ನು ಕಂಡು ಹೌಹಾರಿದ್ದಳು.  ಏನೋ ಸಂಕಟ ಕಣೆ ತಡೆಯೋಕೆ ಆಗ್ತಿಲ್ಲ.  ಏನಾದರೂ ತಂಪಾಗಿ ಕೊಡು ಕೊಡು…
ಗಡಿಬಿಡಿಯಲ್ಲಿ ಲಿಂಬೂ ಜೂಸ್ ಮಾಡಿ ತಂದು ಮಲಗಿದ ಶ್ರೀಕರನ ತಲೆ ತನ್ನ ತೊಡೆಯ ಮೇಲೆ ಇರಿಸಿಕೊಂಡು ಒಂದು ಚಮಚದಲ್ಲಿ ಹಾಕಿದ್ದಷ್ಟೇ …ಗೊಟಕ್ ಎಂಬ ಸಣ್ಣ ಶಬ್ಧ.  ಬಿಟ್ಟ ಕಣ್ಣು ಬಿಟ್ಟಂತೆ ಇತ್ತು.  ರೀ…ರೀ… ಎಂದು ಕರೆದರೂ ಹಂದಾಡದ ಶ್ರೀಕರ ನಿಧಾನವಾಗಿ ಕಣ್ಣು ಮುಚ್ಚಿದ.

ಸಾವೆಂಬುದು ಆವರಿಸಿದ ಕ್ಷಣ ಕಣ್ಣಿಗೆ ಇಂದಿಗೂ ಕಟ್ಟಿದಂತಿದೆ.  ನೆನಪಿಸಿಕೊಂಡು ಆದ್ರವಾಗುವ ಅವಳ ಕಂಗಳಲ್ಲಿ ಒಂಟಿತನಕ್ಕೆ ಶ್ರೀಕರನ ನೆನಪೊಂದೇ ಊರುಗೋಲು. 

ಅಂದು ದಿಕ್ಕು ದೆಸೆ ಇಲ್ಲದೆ ಪಾರ್ಕಿನ ಒಂದು ಕಲ್ಲು ಬೇಂಚಿನ ಮೇಲೆ ಅನಾಥವಾಗಿ ಅಳುತ್ತಾ ಮಲಗಿದ್ದ ತಾನು ಇನ್ನೂ ಹಸುಗೂಸಾಗಿದ್ದೆ.  ಯಾರೋ ಪುಣ್ಯಾತ್ಮರು ಪೋಲೀಸರಿಗೆ ಸುದ್ದಿ ಮುಟ್ಟಿಸಿದಾಗ ಅವರ ಮೂಲಕ ಒಂದು ಅನಾಥಾಶ್ರಮ ಸೇರಿದ್ದೆ.  ಮುಂದೆ ಅದೇ ಆಶ್ರಮದಲ್ಲೇ ಬೆಳೆಯುತ್ತಿದ್ದ ಶ್ರೀಕರ ತನ್ನನ್ನು ಮೆಚ್ಚಿದಾಗ ಎಲ್ಲರ ಸಮಕ್ಷಮದಲ್ಲಿ  ಮದುವೆಯೂ ಆಗಿ ಬಾಡಿಗೆ ಮನೆಯಲ್ಲಿ ಸಂಸಾರ ಹೂಡಿದ್ದು , ಹತ್ತು ವರ್ಷಗಳಿಂದ ದಾಂಪತ್ಯ ಸುಗಮವಾಗಿ ಸಾಗಿದ್ದು, ಮಕ್ಕಳಿಲ್ಲವೆಂಬ ಕೊರಗು ಇಬ್ಬರನ್ನು ಕಾಡುತ್ತಿದ್ದರೂ ಒಬ್ಬರಿಗೊಬ್ಬರು ಸಾಂತ್ವನ ಮಾಡಿಕೊಳ್ಳುತ್ತಲೇ ಡಾಕ್ಟರ್  ನೀಡಿದ ಭರವಸೆಯ ದಿನಕ್ಕಾಗಿ ಎದುರು ನೋಡುತ್ತಾ ಅವಳ ಸಂಸಾರ ನೌಕೆ ಚಂದದಿಂದಲೇ ಸಾಗಿತ್ತು.

ಹುಲ್ಲು ಕಡ್ಡಿಯ ನೆಪ ಸಾಕು ಸಾವು ಬಂದೆರಗಲು ಹೇಳುತ್ತಾರೆ.  ಇದು ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ ಶ್ರೀಕರನ ಕೊನೆಯುಸಿರು ನಿಲ್ಲಲು ಬಿದ್ದ ನೆವವೊಂದೇ ಸಾಕಾಯಿತು.   ಪ್ರೀತಿಯ ಜೀವ, ತನ್ನ ಬಾಳು ಬೆಳಗಿಸಿದ ಜೀವ, ಒಂಟಿತನಕ್ಕೆ ಹೆಗಲಾದ ಜೀವ, ಕೊನೆಯವರೆಗೂ ಜೊತೆಯಾಗಿಯೇ ಇರುವೆನೆಂದು ಭಾಷೆ ಕೊಟ್ಟು ಸಪ್ತಪದಿ ತುಳಿದ ಜೀವ ಸಾವೆಂಬ ಕರಿನೆರಳು ಬಲಿ ಪಡೆದಿದ್ದು ಎಲ್ಲವೂ ವಿಧಿಲಿಖಿತಕ್ಕೆ ಸಾಕ್ಷಿಯಾಯಿತು. 

ದಿಕ್ಕು ದೆಸೆಯಿಲ್ಲದಂತಾಗಿ ಹೋಯಿತು ಸುಜಾತಾಳ ಬಾಳು.  ಮತ್ತದೇ ಅನಾಥಾಶ್ರಮದ ಮೆಟ್ಟಿಲು ಏರಿ ಬಂದಾಗ ತಾಯಿಯ ಸಾಂತ್ವನ ಪೋಷಿಸಿದ ಅಮ್ಮನಿಂದ ಸಿಕ್ಕಾಗ ಗೊಳೋ ಎಂದು ಅತ್ತು ಸಮಾಧಾನ ಮಾಡಿಕೊಂಡು ಒಂದಿಷ್ಟು ದಿನ ಅಲ್ಲಿಯೇ ಉಳಿದುಬಿಟ್ಟಳು.  ಆದರೆ ಅಲ್ಲಿ ಎಷ್ಟು ದಿನ ಇರಲು ಸಾಧ್ಯ?  ಸಾಕಿ,ಸಲಹಿ, ವಿದ್ಯೆ ಬುದ್ಧಿ ಕೊಟ್ಟು ಸ್ವತಂತ್ರವಾಗಿ ಬದುಕಲು ದಾರಿ ಮಾಡಿಕೊಟ್ಟ ಮೇಲೆ ಅಲ್ಲಿರಲು ಸಾಧ್ಯವಿಲ್ಲ.

ಕೈಯಲ್ಲಿ ಕೆಲಸ ಇದೆ.  ತಾನೂ ಸಂಪಾಧಿಸುತ್ತಿದ್ದೇನೆ.  ಇಲ್ಲಿರುವ ಅನಾಥ ಮಕ್ಕಳಿಗೆ ತನ್ನಿಂದಾದ ನೆರವು ನೀಡಬೇಕು.  ತನ್ನ ಜೀವನ ಏನಿದ್ದರೂ ಇಲ್ಲಿರುವ ಮಕ್ಕಳಿಗಾಗಿ.  ಹೀಗೆ ಚಿಂತಿಸುತ್ತ ಕೂರುವುದು ಸರಿಯಲ್ಲ.  ಒಂದು ನಿರ್ಧಾರಕ್ಕೆ ಬಂದ ಸುಜಾತಾ ಅಮ್ಮನಿಗೆ ಹೇಳಿ ತನ್ನ ಬಾಡಿಗೆ ಮನೆಗೆ ಬರುತ್ತಾಳೆ.  ಮನೆಯ ತುಂಬ ಶ್ರೀಕರನೇ ಇರುವಂತೆ ಭಾಸವಾಗುತ್ತದೆ.  ಆದರೆ ಇಷ್ಟು ದೊಡ್ಡ ಮನೆ ಬಿಡುವುದು ಅನಿವಾರ್ಯ. ಕೆಲವು ತಿಂಗಳುಗಳ ನಂತರ ತನ್ನ ವಾಸಿ ಸ್ಥಳವನ್ನು ಅದೇ ಕಾಂಪೌಂಡಿನಲ್ಲಿರುವ ಚಿಕ್ಕ ಮನೆಗೆ ಬದಲಾಯಿಸುತ್ತಾಳೆ. 

ದಿನ ಕಳೆದಂತೆ ಏಕಾಂಗಿಯ ಬದುಕಿಗೆ ಹೊಂದಿಕೊಳ್ಳುತ್ತಾಳೆ.  ಎಷ್ಟೋ ಸಾರಿ ಕಳೆದಿದ್ದೆಲ್ಲ ನೆನಪಿಸಿಕೊಂಡು ಕಣ್ಣೀರಿಡುವುದು ಮಾತ್ರ ಅವಳಿಂದ ದೂರ ತಳ್ಳಲು ಸಾಧ್ಯವಾಗದೇ ಒದ್ದಾಡುತ್ತಾಳೆ.  ಕೊನೆಗೂ ತಾನೊಬ್ಬ ಅನಾಥೆಯಾಗಿಬಿಟ್ಟೆ. ಈ ಕೊರಗು ಆಗಾಗ ಅವಳನ್ನು ಕಾಡುವುದು, ಕಾಡಿದಾಗಲೆಲ್ಲ ಮತ್ತದೇ ಅನಾಥಾಶ್ರಮದ ಮಕ್ಕಳಲ್ಲಿ ಬೆರೆತು ಹೌದು ನನಗಿವರೆಲ್ಲರೂ ಇದ್ದಾರೆ ಎಂದು ತನಗೆ ತಾನೇ ಸಾಂತ್ವನ ಮಾಡಿಕೊಳ್ಳುವುದು ನಿರಂತರವಾಗಿ ನಡೆಯುತ್ತಲೇ ಇದೆ.

ಹೀಗಿರುವ ಸುಜಾತಾರಂತವರು ಎಷ್ಟು ಜನ ಇರಲೀಕ್ಕಿಲ್ಲ ಈ ಜಗತ್ತಿನಲ್ಲಿ.  ದೇವರ ಆಟ ಎಷ್ಟು ವಿಚಿತ್ರ!

17-12-2020. 3.25pmಉದ್ದಂಡ ನಮಸ್ಕಾರ; ಸುಟ್ ಚಾಕ್ಕೆ.. | | ಅವಧಿ । AVADHI

https://avadhimag.com/%e0%b2%89%e0%b2%a6%e0%b3%8d%e0%b2%a6%e0%b2%82%e0%b2%a1-%e0%b2%a8%e0%b2%ae%e0%b2%b8%e0%b3%8d%e0%b2%95%e0%b2%be%e0%b2%b0-%e0%b2%b8%e0%b3%81%e0%b2%9f%e0%b3%8d-%e0%b2%9a%e0%b2%be%e0%b2%95%e0%b3%8d/

ನವೆಂಬರ್ 2020ರ ಕರ್ಮವೀರ ರಾಜ್ಯೋತ್ಸವ ಕನ್ನಡ ಕಾವ್ಯ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕವನವಿದು.

ಒಸರು

ಹೃದಯದ ಮಾತುಗಳು ಚಿತ್ತಕ್ಕಪ್ಪಳಿಸಿ
ಬುದ್ಧಿಯನ್ನೇ ತೂತಾಗಿಸುತ್ತವೆ ಇಲಿ ಕೊರೆವ ಬಿಲದಂತೆ

ಆಳ ಅಗಲವೊಂದೂ ಗೊತ್ತಾಗದಂತೆ
ಸದ್ದೂ ಕೂಡಾ ಮಾಡದಂತೆ.

ಹನಿ ಒಸರುತ್ತದೆ ಬೇರು ಬೇರುಗಳಲೆಲ್ಲ
ಅತ್ತಿಮರದ ರಸ ಗಡಿಗೆ ತುಂಬಲು ರಾತ್ರಿ ಹಗಲಾಗಬೇಕು.

ಆದರಿಲ್ಲಿ ಹಾಗಿಲ್ಲ
ದಿಂಬು ಒದ್ದೆಯಾಗಿ
ಬೆಳಗಾಗುವುದರೊಳಗೆ ಚಿತ್ತಾರ ಬಿಡಿಸಿಬಿಡುತ್ತವೆ
ಯಾರಿಗೂ ಕಾಣದಂತೆ
ಮೇಲ್ನೋಟಕೆ ಹಾಕಿದ ಕವರು ನಗುತ್ತಲೇ ಇರುತ್ತದೆ.

ಸೂರ್ಯೋದಯದ ಶೃಂಗಾರದ ರಂಗಿಗೆ
ಹೆಣ್ಣು ನವಿಲನ್ನು ಆಕರ್ಷಿಸಲು ಗಂಡು ಕುಣಿಯುತ್ತದೆ
ಬಿಚ್ಚಿದ ಗರಿಗಳುದುರಿದ್ದಷ್ಟೇ ಬಂತು
ದಕ್ಕಿತೋ ಇಲ್ಲವೋ ಯಾರಿಗೆ ಗೊತ್ತು?

ಒಳ ಮನಸಿನ ತೊಳಲಾಟವನೆಲ್ಲ ಹುದುಗಿಸಿಕೊಂಡು
ನರಳಿ ಮೇಲ್ತೇಪೆ ಹಾಕಿದ ಮೊಗ
ಹಲ್ಕಿರಿಯುತ್ತದೆ ತನಗೇನೂ ಆಗಿಲ್ಲವೆಂಬಂತೆ
ಥೇಟ್ ಮರದೆಲೆಗಳು ಹಸಿರು ಕಳೆದುಕೊಂಡು ತರೆಗೆಲೆಗಳಾಗಿ ಉದುರಿದರೂ
ಹಾರಾಡುತ್ತ ಸರಪರ ಸದ್ದು ಮಾಡುವಂತೆ.

ಪಾಪ ಪ್ರಜ್ಞೆ ಕಾಡುವುದೇ ಇಲ್ಲ ರಸ ಹೀರಿದ ದಳ್ಳುರಿಗೆ
ದೋಸೆ ಮುಸುರೆಯಾಗುವುದಿಲ್ಲವಂತೆ
ಗೊಡ್ಡು ನಂಬಿಕೆ ಅದೆಷ್ಟು ಆಳ ಅಗಲ ಇಂದಿಗೂ
ಗೊತ್ತಿದ್ದೂ ನಂಬುವರಲ್ಲ ಅಲ್ಲೊಂದು ಇಲ್ಲೊಂದು
ಕತ್ತಲೆಯ ಕೋಣೆಯಲಿ ಬಿಕ್ಕಳಿಸಿದ ಸದ್ದು
ದಿಂಬಿಗಷ್ಟೇ ಸೀಮಿತವಾಗಿರಬೇಕೆ?
ಪ್ರಶ್ನೆ ಮೇಲೆ ಪ್ರಶ್ನೆ ಅನವರತ.

ನಿಗಿ ನಿಗಿ ಕುದಿವ ಮನಸು
ಕ್ರಮೇಣ ಬೂದಿ ಮುಚ್ಚಿದ ಕೆಂಡ ನೋಡಲಾಗದು
ಉರಿದುರಿದು ನಂದಿ ಹೋಗುವ ಬೇಗುದಿಯ ಬದುಕು
ಕೊನೆಗೊಂದು ದಿನ ಕಾಣುವುದು ಬರಿಯ ಬೂದಿಯ ರಾಶಿ
ಹೆಣ್ಣಿನ ಬದುಕೆಂದರೆ ಇಷ್ಟೇ….
ನಿಂತ ನೀರು!

8-10-2020. 7.55pm