ಶ್ರೀ ರಾಮಲಿಂಗೇಶ್ವರ ಕ್ಷೇತ್ರ

ಆವಣಿ ಇದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮ.

ಈ ಗ್ರಾಮದ ಪರಿಸರದಲ್ಲಿಯೂ ಸಮೀಪದ ಬೆಟ್ಟದ ಮೇಲೆಯೂ ಇರುವ ಅನೇಕ ದೇವಾಲಯಗಳು ಮತ್ತು ಶಿಲಾಶಾಸನಗಳು ಇದರ ಪ್ರಾಚೀನ ಪ್ರಾಮುಖ್ಯತೆಯನ್ನು ಸಾರುತ್ತವೆ.

ಊರಿನ ಪೂರ್ವದ ಹೆಸರು ಅಹವನೀಯ, ಆವಣ್ಯ, ಆವಣೆ ಇತ್ಯಾದಿಯಾಗಿದ್ದಿತೆಂದು ಶಾಸನಗಳಿಂದ ತಿಳಿದುಬರುತ್ತದೆ.

ಹಿಂದೆ ಸೀತಾದೇವಿ ಗಂಡನಿಂದ ಕಾಡಿಗೆ ಕಳುಹಿಸಲ್ಪಟ್ಟಾಗ ಇಲ್ಲಿರುವ ವಾಲ್ಮೀಕಿ ಆಶ್ರಮದಲ್ಲಿ ತಂಗಿ ಲವಕುಶರಿಗೆ ಜನ್ಮವಿತ್ತಳೆಂದೂ ಲವಕುಶರು ರಾಮನ ಯಜ್ಞಾಶ್ವವನ್ನು ಕಟ್ಟಿ ರಾಮನೊಡನೆ ಇಲ್ಲಿಯೇ ಯುದ್ಧಮಾಡಿದರೆಂದೂ ಇತಿಹಾಸವಿದೆ.

ವಾಲ್ಮೀಕಿ ಬೆಟ್ಟದ ಬುಡದಲ್ಲಿ 9ನೇ ಶತಮಾನಕ್ಕೆ ಸೇರಿದ ದೇವಾಲಯವಿದೆ.  ಅದುವೇ ಶ್ರೀ ರಾಮಲಿಂಗೇಶ್ವರ ದೇವಾಲಯ.  ವಾಸ್ತುಶೈಲಿಯಿಂದ ಮತ್ತು ಸ್ಥಳೀಯ ಶಾಸನಗಳ ಮಾಹಿತಿಗಳಿಂದ ಕ್ರಿ.ಶ. ಹತ್ತನೆಯ ಶತಮಾನದಲ್ಲಿ ಕಟ್ಟಿದ ಪುರಾತನ ದೇವಾಲಯವಿದು.

10-12 ದೇವಾಲಯಗಳಿರುವ ಈ ಸಮುಚ್ಚಯದ ನಿರ್ಮಾಣ ಕಾಲದ ಬಗ್ಗೆ ನಿಖರತೆ ಇಲ್ಲದಿದ್ದರೂ ನೊಳಂಬರು,ಚೋಳರು, ಚಾಳುಕ್ಯರು, ಗಂಗರು, ವಿಜಯನಗರದ ಅರಸರಿಂದ ಹಿಡಿದು ಇತ್ತಿಚಿನ ಮೈಸೂರರಸರವರೆಗೆ ಎಲ್ಲ ರಾಜಮನೆತನಗಳ ಕೆತ್ತನೆ ಶೈಲಿಗಳು ಇಲ್ಲಿವೆ.

ದಕ್ಷಿಣಕ್ಕೆ ಹಾಗು ಪೂರ್ವಕ್ಕೆ ಬಾಗಿಲಿದ್ದು ಎತ್ತರದ ಪ್ರಾಕಾರದಿಂದ ಈ ಸಮುಚ್ಚಯ ಸುರಕ್ಷಿತವಾಗಿದೆ. ಮಧ್ಯದಲ್ಲಿ ಪಾರ್ವತಿ ಅಮ್ಮನವರ ದೇವಾಲಯವಿದ್ದು ಅದರ ಪಶ್ಚಿಮಕ್ಕೆ ರಾಮೇಶ್ವರ,ಲಕ್ಷ್ಮಣೇಶ್ವರ ಹಾಗು ಭರತೇಶ್ವರ ದೇವಾಲಯಗಳಿವೆ.

ಹಾಗೇ ಪೂರ್ವಕ್ಕೆ ಶತೃಘ್ನೇಶ್ವರ,ಅಂಜನೇಶ್ವರ ಹಾಗು ಚಿಕ್ಕದಾದ ಸುಗ್ರೀವೇಶ್ವರ ಮತ್ತು ಅಂಗದೇಶ್ವರ ದೇವಾಲಯಗಳಿವೆ. ದೇವಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಎತ್ತರದ ಗರುಡಗಂಬವಿದೆ.

ಆದಿ ಶಂಕರರು ಸ್ಥಾಪಿಸಿರುವ ಶೃಂಗೇರಿ ಪೀಠದ ಜಗದ್ಗುರುಳಾದ ನಾಲ್ಕನೇ ನೃಸಿಂಹಭಾರತಿಯವರು ನಿಂತ ಭಂಗಿಯಲ್ಲಿರುವ ಶಾರದಾ ಮಾತೆಯ ಮೂರ್ತಿ  ಪ್ರತಿಷ್ಠಾಪಿಸಿರುವುದನ್ನು ಕಾಣಬಹುದು.

ಬೆಂಗಳೂರಿನಿಂದ 95km ದೂರದಲ್ಲಿರುವ ಈ ಕ್ಷೇತ್ರದಲ್ಲಿ ಕೈಕಾಲು ಗಟ್ಟಿಯಾಗಿದ್ದರೆ ಸುತ್ತಮುತ್ತಲಿನ ಸ್ಥಳಗಳಲ್ಲಿ ಟ್ರೆಕ್ಕಿಂಗ್ ಕೂಡಾ ಮಾಡಬಹುದು.

ಬಂಡೆ ಮೇಲೆ ಬಂಡೆ ಇಟ್ಟಂತಿರುವ ಸ್ಥಳಗಳು ಬೇಕಾದಷ್ಟು ಕಾಣಬಹುದು.
ಬೆಳ್ಳಂಬೆಳಿಗ್ಗೆ ಹೋಗೋರೆಲ್ಲಾ ಹೊರಡಿ
ಈ ಕೋವಿಡ್ ಸಮಯದಲ್ಲಿ ಹೇಳಿ ಮಾಡಿಸಿದ  ಜನರಿಲ್ಲದ ಪ್ರಶಾಂತವಾದ ಜಾಗವಿದು. 

ಒಂದಿಷ್ಟು ಸುತ್ತಾಡಿ ದಣಿದು ವಾರದ ಬೇಜಾರೆಲ್ಲ ಕಳೆದು ರಿಲಾಕ್ಸ್ ಆಗಿ ಖುಷಿ ಖುಷಿಯಾಗಿ ಬರಬಹುದು.

ಊಟ ತಿಂಡಿಗೆ ಹೊಟೆಲ್ “ವುಡ್ಡೀಸ್ ಅಂಡ್ ರೆಸ್ಟೋರೆಂಟ್”NH 75 ಸಾಗುವ ದಾರಿಯ ಪಕ್ಕದಲ್ಲೇ ಇದೆ.  ಬೊಂಬಾಟ್ ಟೀ ಮತ್ತು ಕಾಫಿ ಕೂಡಾ ಸಿಗುತ್ತದೆ.  ನಾನಂತೂ ಟೀಗೆ ಫಿದಾ ಆಗಿದ್ದು ಸತ್ಯ.

7-8-2021. 10.15am

ಭಂ ಭಂ ಬೋಲೆನಾಥ್

ಭಾಗ -17

ಕಾಶಿಯ ಘಾಟ್ ಗಳು ;

ಕಾಶಿಯಲ್ಲಿ ಗಂಗಾನದಿಯ ಉದ್ದಕ್ಕೂ 84 ಘಾಟ್ ಗಳು ಇವೆ. ಇವುಗಳಲ್ಲಿ ಅನೇಕ ದೇವತೆಗಳ ಗುಡಿಗಳು ಇವೆ. ಕಲ್ಲಿನಿಂದ ಗಟ್ಟಿಯಾಗಿ ಶಾಶ್ವತವಾಗಿ ಅಳಿಯದಂತೆ ಕಟ್ಟಲಾಗಿದೆ. ಗಂಗೆ ದಕ್ಷಿಣದಿಂದ ಉತ್ತರಕ್ಕೆ ಹರಿಯುತ್ತಾಳೆ. ಹನ್ನೆರಡು ತಿಂಗಳೂ ನೀರು ತುಂಬಿರುತ್ತದೆ. ಇಲ್ಲಿಯ ಪ್ರಸಿದ್ಧ ಘಾಟ್ ಗಳು ಇಂತಿವೆ ; ಮಣಿಕರ್ಣಿಕಾ ಘಾಟ್, ಪಂಚಗಂಗಾ ಘಾಟ್, ಹರಿಶ್ಚಂದ್ರ ಘಾಟ್, ಅಸ್ಸಿ ಘಾಟ್, ಕೇದಾರ ಘಾಟ್,ಸಿಂಧಿಯಾ ಘಾಟ್, ದಶಾಶ್ವಮೇಧ ಘಾಟ್, ಬೊಸ್ಲ ಘಾಟ್, ಮೀರಾ ಘಾಟ್, ರಾಮ ಘಾಟ್, ಬ್ರಹ್ಮ ಘಾಟ್, ರಾಜ ಘಾಟ್ ಇತ್ಯಾದಿ. ಇವುಗಳಲ್ಲಿ ಮಣಿಕರ್ಣಿಕಾ ಘಾಟ್, ದಶಾಶ್ವಮೇಧ ಘಾಟ್, ಹರಿಶ್ಚಂದ್ರ ಘಾಟ್ ಹಾಗೂ ಕೇದಾರ್ ಘಾಟ್ ಗಳು ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವವನ್ನು ಹೊಂದಿವೆ.

ದಶಾಶ್ವಮೇಧ ಘಾಟ್ ಎಂದರೆ ಅದರಲ್ಲಿ ಬ್ರಹ್ಮನು ಹತ್ತು ಅಶ್ವಮೇದ ಯಜ್ಞವನ್ನು ಮಾಡಿದ್ದಾನೆ. ಮಾತ್ರವಲ್ಲ ಕಾಶಿಯ ಮುಖ್ಯ ಜನಸಂದಣಿ ತುಂಬಿರುವ ಮಾರ್ಕೆಟ್ ಪಕ್ಕದಲ್ಲಿಯೇ ಇದೆ. ಹರಿಶ್ಚಂದ್ರ ಘಾಟ್ ಸತ್ಯ ಹರಿಶ್ಚಂದ್ರನಿಂದ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಈಗಲೂ ಸ್ಮಶಾನ ಇದೆ. ಅಸ್ಸಿ ಘಾಟ್ ನಲ್ಲಿ ಗೋಸ್ವಾಮಿ ತುಳಸೀಲಾಸರು ತಮ್ಮ ಶರೀರವನ್ನು ತ್ಯಜಿಸಿದರು.

ಕಾಶಿಯ ಘಾಟ್ ಗಳು ಸೂರ್ಯೋದಯ ಮತ್ತು ಸೂರ್ಯಾಸ್ತಮಾನದ ಸಮಯದಲ್ಲಿ ಅತ್ಯಂತ ಸುಂದರವಾಗಿ ಕಾಣುತ್ತವೆ. ಗಂಗಾ ನದಿಯ ಉದ್ದಕ್ಕೂ ಎಲ್ಲಾ ಘಾಟ್ ಗಳಲ್ಲೂ ದೋಣಿಗಳು ನಿಂತಿರುತ್ತವೆ. ಅವರು ಕೇಳಿದಷ್ಟು ಹಣ ಕೊಟ್ಟು ಗಂಗಾ ನದಿಯಲ್ಲಿ ವಿಹಾರ ಮಾಡುತ್ತ ಘಾಟ್ಗಳನ್ನು ದೂರದಿಂದಲೇ ವೀಕ್ಷಿಸುತ್ತ ರುದ್ರರಮಣೀಯ ಸೌಂದರ್ಯ ಮನಸಾರೆ ಅನುಭವಿಸಬಹುದು. ಹಾಗೂ ಬೆಳ್ಳಂಬೆಳಗ್ಗೆ ಗಂಗಾ ನದಿಯ ಉದ್ದಕ್ಕೂ ಕಾಲ್ನಡಿಗೆಯಲ್ಲೇ ಹೋಗಿ ಪ್ರತಿಯೊಂದು ಘಾಟ್ ವೀಕ್ಷಿಸಲೂಬಹುದು. ಕಳೆದ ಬಾರಿ ಈ ಅವಕಾಶ ಒದಗಿತ್ತು. ಆದರೆ ಈ ಸಲ ಮಳೆಯಿಂದಾಗಿ ಗಂಗೆ ಮಿತಿ ಮೀರಿ ತುಂಬಿ ಯಾವುದೂ ಸಾಧ್ಯವೇ ಇಲ್ಲದಂತಾಗಿತ್ತು. ತೇಲಿ ಬರುವ ಹೆಣಗಳು,ಪ್ರಾಣಿಗಳು, ಕಸಕಡ್ಡಿಗಳ ಹೊತ್ತು ಬರುವ ಗಂಗೆ ಕದಡಿದ ಕೆಂಪು ಕೆಸರು ನೀರು ನೋಡುವಂತಾಯಿತು.

ದಿನಾಂಕ 20-9-2019 ರಂದು ಸಂಜೆ ಪುನಃ ನಾವಿರುವ ಸ್ಥಳದಿಂದ ಒಂದೂವರೆ ಕಿ.ಮೀ.ದೂರದಲ್ಲಿರುವ ಕಾಳಭೈರವೇಶ್ವರ ಮಂದಿರಕ್ಕೆ ಕಾಲ್ನಡಿಗೆಯಲ್ಲಿ ಹೊರಟೆವು. ಬೆಳಗಿನಿಂದ ಎಲ್ಲೂ ಹೋಗದೆ ವಿಶ್ರಾಂತಿ ತೆಗೆದುಕೊಂಡ ದೇಹ ಉತ್ಸಾಹದಲ್ಲೂ ಇತ್ತು.

ಮಂದಿರದ ಸಮೀಪ ಹೋಗುತ್ತಿದ್ದಂತೆ ಎದುರುಗಡೆಯಿಂದ ಪ್ರವೇಶದ್ವಾರ ಬಂದು ಮಾಡಲಾಗಿತ್ತು. ಕಾರಣ ಪಕ್ಕದಲ್ಲೇ ಇರುವ ಕಟ್ಟಡ ಮಳೆಯಿಂದಾಗಿ ಶಿಥಿಲವಾಗಿ ಒಂದು ಭಾಗದ ಗೋಡೆ ಕುಸಿದು ಬಿದ್ದಿತ್ತು. ಮಂದಿರದ ಹಿಂದಿನ ಬಾಗಿಲಿನಿಂದ ಪ್ರವೇಶಿಸಲು ಅನುವು ಮಾಡಿಕೊಟ್ಟಿದ್ದರು.

ಸ್ವಾಮಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಹಿಂದಿರುಗುವಾಗ ಅಲ್ಲೇ ಕಟ್ಟೆಯ ಮೇಲೆ ಕುಳಿತು ಸುಶ್ರಾವ್ಯವಾಗಿ ಹಾಡುತ್ತ ಕುಳಿತ ಒಬ್ಬ ಸಂತನನ್ನು ಕಂಡೆ. ರೆಕಾರ್ಡ್ ಮಾಡಲು ಮೊಬೈಲ್ ತೆಗೆದರೆ ಬೇಡವೆಂದು ಹೇಳಿ ಫೋಟೋ ತೆಗೆಯಲೂ ಬಿಟ್ಟಿಲ್ಲ. “ಮೈಸೂರು ಅನಂತ ಸ್ವಾಮಿಯವರು ಹಾಡಿದ ಸಂದ್ಯಾರಾಗದ ಹಾಡಿದು. ಎಷ್ಟು ಬಾರಿ ಹಾಡಿದರೂ ತೃಪ್ತಿಯಾಗದು. ಎಂತಹಾ ಕಂಠ ಅವರದು” ಎಂದು ಮತ್ತೆ ಹಾಡಲು ಶುರು ಮಾಡಿದ. ಅವನ ಪಕ್ಕದಲ್ಲಿ ಒಂದು ಪೇಪರ್. ಅದರ ಮೇಲೆ ಒಂದಷ್ಟು ಹಣ ದೇವಸ್ಥಾನಕ್ಕೆ ಬಂದವರು ಹಾಕಿದ್ದು ಅನಿಸುತ್ತದೆ. ನೋಡ ನೋಡುತ್ತಿದ್ದಂತೆ ಒಬ್ಬ ಮನುಷ್ಯ ಬಂದು ಆ ಹಣವನ್ನೆಲ್ಲ ತನ್ನ ಜೋಬಿಗೆ ಹಾಕಿಕೊಂಡ. ಸಂತ ತೆಗೆದುಕೋ ಎಂಬಂತೆ ಕೈ ಸನ್ನೆ ಮಾಡಿದ. ಆದರೆ ನಾನು ಸಂತನಿಗೆ ಹಣ ಕೊಡಲು ಹೋದರೆ ಬೇಡವೆಂದು ಕೈ ಅಡ್ಡ ಹಿಡಿದ. ನನಗೆ ಏನೊಂದೂ ಅರ್ಥ ಆಗಲಿಲ್ಲ.

ಮಂದಿರದ ಪ್ರಾಂಗಣದೊಳಗೆ ಹೊರಗಿನ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳಲ್ಲಿ ಖರೀದಿಯ ಭರಾಟೆ ಜೊತೆಗೆ ಬಂದವರದ್ದು. ಆದರೆ ನನಗೆ ಅಲ್ಲಿಯ ತಿಂಡಿಗಳ ರುಚಿ ನೋಡುವ ಹಂಬಲ. ಒಂದೆರಡು ಕಡೆ ಅಲ್ಲಿಯ ವಿಶೇಷ ತಿಂಡಿಗಳ ಬಗ್ಗೆ ಮಾಹಿತಿ ಪಡೆಯುತ್ತ ಅವುಗಳ ರುಚಿ ನೋಡಿದ್ದೂ ಆಯಿತು. ಕಾಶಿಯಲ್ಲಿ ಕುರುಕುಲು ತಿಂಡಿ, ಸಿಹಿ ತಿಂಡಿಗಳು ಯಥೇಚ್ಛವಾಗಿ ಸಿಗುತ್ತವೆ. ಹಾಗೆ ರುಚಿಯೂ ಹೆಚ್ಚು. ಎಲ್ಲರೂ ಮನೆಗೆ ಒಯ್ಯಲು ಒಂದಿಷ್ಟು ಖರೀದಿಸಿ ಪೇಟೆ ಸುತ್ತಾಡಲು ಹೊರಟೆವು. ಅವರೆಲ್ಲ ಅಂಗಡಿ ಮುಂದೆ ಜಮಾಯಿಸಿ ಬಟ್ಟೆ ಅದು ಇದೂ ಖರೀದಿಸುತ್ತಿದ್ದರೆ ನಾನೋ ಅಲ್ಲಿಯ ಜನರ ಚಲನ ವಲನ, ಪೇಟೆ ನೋಡುವತ್ತ ನನ್ನ ಗಮನ.

ವಾಸ ಸ್ಥಳಕ್ಕೆ ಹಿಂತಿರುಗುತ್ತಿದ್ದಂತೆ ನನ್ನ ಆರೋಗ್ಯದಲ್ಲಿ ಏರುಪೇರು. ಕಾಶಿಗೆ ಬಂದ ದಿನಗಳಿಂದ ಭಟ್ಟರ ಮನೆಯ ಊಟ, ಅಲ್ಲಿಯ ಮಸಾಲೆ ತಿಂಡಿಗಳು ಅಲ್ಲಿ ಇಲ್ಲಿ ಸುತ್ತಾಡುವಾಗೆಲ್ಲ ಹೊರಗೆ ತಿಂದ ತಿಂಡಿಗಳು, ಸರಿಯಾಗಿ ನಿದ್ದೆಯಿಲ್ಲ ಇವೆಲ್ಲವುಗಳ ಪರಿಣಾಮ ಎಸಿಡಿಟಿ ಕಾಡಲು ಶುರುವಾಯಿತು. ತಂದ ಮಾತ್ರೆಗಳು ಹೊಟ್ಟೆ ಸೇರಿದರೂ ಸಮಾಧಾನ ಆಗುತ್ತಿಲ್ಲ. ಊಟ ಮಾಡದೇ ಹಾಗೆ ಮಲಗಿದೆ.

21-9-2010ರಂದು ಬೆಳಗಿನಜಾವ ನಾಲ್ಕು ಗಂಟೆಗೆ ಅವರೆಲ್ಲ ಮತ್ತೆ ಶ್ರೀ ವಿಶ್ವನಾಥನ ದರ್ಶನಕ್ಕೆ ಹೊರಟರೂ ನನಗೆ ಅನಾರೋಗ್ಯದ ಕಾರಣ ಅಷ್ಟು ಬೇಗ ಎದ್ದು ಹೋಗಲಾಗಲಿಲ್ಲ.

ಬಂದ ಮೇಲೆ ಅವರೆಲ್ಲ ರಾಮಕೃಷ್ಣ ಮಠ ಮತ್ತು ಘಾಟ್ ಗಳನ್ನು ನೋಡಲು ಹೊರಟಿದ್ದರು. ಅವರುಗಳು ಅತ್ತ ಹೋದಂತೆ ನಾನು ಈ ಹಿಂದೆ ಸಾರಾನಾಥ್ ಕ್ಷೇತ್ರಕ್ಕೆ ಭೇಟಿಯಿತ್ತಾಗ ಖರೀದಿಸಿದ ಬನಾರಸ್ ಸೀರೆ ಬದಲಾಯಿಸಲು ಅನಿವಾರ್ಯವಾಗಿ ಮತ್ತೆ ನಾನೊಬ್ಬಳೇ ಭಟ್ಟರು ಗುರುತು ಮಾಡಿಕೊಟ್ಟ ಆಟೋದಲ್ಲಿ ಹೊರಟೆ.

ರಸ್ತೆಯ ಅಕ್ಕಪಕ್ಕದ ಜೋಪಡಿಗಳು, ಅಲ್ಲಿಯ ಅವ್ಯವಸ್ಥೆ , ಜನರ ಪರದಾಟ, ಅಲ್ಲೇ ಜೀವನ ಎಲ್ಲಾ ನೋಡಿ ಈ ಕಾಶಿ ಯಾವತ್ತು ಉದ್ಧಾರವಾಗುವುದೋ….ಜನಜೀವನ ಯಾವತ್ತು ಸರಿ ಹೋಗುವುದೋ… ಇವುಗಳಿಗೆಲ್ಲ ಮುಕ್ತಿ ಎಂದು ಅನ್ನಿಸುತ್ತಿತ್ತು. ನಿಜಕ್ಕೂ ಕಾಶಿಯಲ್ಲಿ ಬಡತನ ಎಷ್ಟು ತಾಂಡವವಾಡುತ್ತಿದೆಯೆಂದರೆ ಒಂದು ದಿನದ ತುತ್ತಿಗಾಗಿ ಅವರು ಕಷ್ಟ ಪಡುವುದನ್ನು ನೋಡಿದರೆ ಸಂಕಟವಾಗುತ್ತದೆ. ಬಿಕ್ಷುಕರು ದೇವಸ್ಥಾನದ ಗಲ್ಲಿ ಗಲ್ಲಿಗಳಲ್ಲಿ ತಂಡೋಪತಂಡವಾಗಿ ಸಾಲಾಗಿ ಕುಳಿತಿರುತ್ತಾರೆ.

ಮಳೆಯಿಂದಾಗಿ ಗಂಗಾ ನದಿಯ ತೀರದ ಪ್ರದೇಶಗಳೆಲ್ಲ ನೀರಿನಿಂದ ಆವೃತವಾಗಿದೆ. ಮನೆಗಳು ಅರ್ಧ ನೀರಿನಲ್ಲಿ ಮುಳುಗಿರುವಂತೆ ದೂರದಿಂದ ಗೋಚರವಾಗುತ್ತಿತ್ತು.

ದಾರಿಯುದ್ದಕ್ಕೂ ಜೊತೆಗೆ ಮಾತಿಗೆ ಸಾಥ್ ನೀಡಿದವರು ಆಟೋ ಡ್ರೈವರ್; ಕಾಶಿಯಲ್ಲಿ ಯಾತ್ರಾರ್ಥಿಗಳನ್ನು ಗೊತ್ತಾಗದಂತೆ ಮೋಸಗೊಳಿಸುವ ಕಾರ್ಯ ಅವಿರತವಾಗಿ ನಡೆಯುತ್ತಿದೆ. ಆಟೋದವರು, ಗೈಡ್, ಭಟ್ಟರು, ಅಂಗಡಿಯವರು ಎಲ್ಲರೂ ಬಂತು. ಒಟ್ಟಿನಲ್ಲಿ ಹಣ ಸಂಪಾದನೆಯಾಗಬೇಕು. ನೀವು ಏನೇ ಖರೀದಿ ಮಾಡಿ ಕರೆದುಕೊಂಡು ಹೋದವರಿಗೆ ಇಂತಿಷ್ಟು ಪರ್ಸೆಂಟ್ ಕಮೀಷನ್. ಈ ಸೀರೆ ವಿಷಯದಲ್ಲಿಯೂ ಅಷ್ಟೇ. ಇವೆಲ್ಲ ಮಾಹಿತಿ ಒಂದೊಂದಾಗಿ ಆಟೋದವನು ಬಿಚ್ಚಿಡುತ್ತ ಬಂದ. ಹಾಗಂತ ಇವನೇನೂ ಸಂಭಾವಿತನಂತೆ ಕಾಣಲಿಲ್ಲ. ಬನ್ನಿ ಬೇರೆ ಅಂಗಡಿಗೆ ಹೋಗೋಣವೆಂದು ನನ್ನ ಸಮ್ಮತಿಗೆ ಕಾಯದೇ ಅವನಿಗೆ ಗೊತ್ತಿರೊ ಅಂಗಡಿ ಮುಂದೆ ಆಟೋ ನಿಲ್ಲಿಸಿದಾಗ ನಾನು ಇಳಿಯದೇ ಮೊದಲು ತಂದ ಅಂಗಡಿಗೇ ಕರೆದುಕೊಂಡು ಬಂದು ಸೀರೆ ಬದಲಾಯಿಸಿ ಮತ್ತೆರಡು ಸೀರೆ ಖರೀದಿಸಿದೆ. ಕಮೀಷನ್ ವಿಷಯದಲ್ಲಿ ಅಂಗಡಿಯವನಿಗೂ ಆಟೋದವನಿಗೂ ಸ್ವಲ್ಪ ಮಾತಿನ ಚಕಮಕಿ ನಡೆಯಿತು.

ನಾನು ವಾಪಸ್ ಆಗುತ್ತಿದ್ದಂತೆ ಘಾಟ್ ಗಳನ್ನು ನೋಡಲು ಹೋದವರು “ಆಟೋಗೆ ಹಣ ತೆತ್ತಿದ್ದಷ್ಟೇ ಬಂತು ಏನೂ ನೋಡಲು ಸಾಧ್ಯವಾಗಲಿಲ್ಲ “ಎಂದು ಹೇಳುತ್ತ ವಾಪಸ್ ಬಂದರು. ಆದರೆ ನನಗೆ ಮಾತ್ರ ಮತ್ತೊಮ್ಮೆ ಸಾರಾನಾಥ್ ಹೋಗಿ ಬಂದಿದ್ದು ಸ್ವಲ್ಪ ಖುಷಿ ಆಗಿತ್ತು. ಅನೇಕ ವಿಷಯ ಕಲೆಹಾಕಿದೆ. ಒಂಟಿ ಪಯಣವೇ ಹಾಗೆ ನೋಡಿ ; ಸ್ವತಂತ್ರ ಹೆಚ್ಚು. ಆರೋಗ್ಯ ಕೂಡಾ ಸ್ವಲ್ಪ ತಹಬದಿಗೆ ಬಂದಿತ್ತು.

ಸಂಜೆ “ಈ ದಿನ ಶನಿವಾರವಾದದ್ದರಿಂದ ನಾವಿರುವ ಗಾಯ್ ಘಾಟ್ ಪಕ್ಕದಲ್ಲೇ ಹನುಮಾನ್ ಘಾಟಿರುವುದು,ನೋಡಿ ಬನ್ನಿ” ಎಂಬ ಭಟ್ಟರ ಆದೇಶದ ಮೇರೆಗೆ ಎಲ್ಲರೂ ಹೊರಟೆವು. ಅತ್ಯಂತ ಚಿಕ್ಕದಾದ ಓಣಿಯ ತಿರುವಿನಲ್ಲಿ ಸಿಕ್ಕವರ ಹತ್ತಿರ ದಾರಿ ಕೇಳುತ್ತ ಒಳ ದಾರಿಯಲ್ಲಿ ಹನುಮಾನ ಘಾಟ್ ತಲುಪಿದೆವು. ದೇವಸ್ಥಾನದ ಮೆಟ್ಟಿಲುವರೆಗೆ ಪಾದ ಬೆಳೆಸಿದ ಗಂಗಾ ನದಿಯ ಕೆಂಪು ನೀರಿನಲ್ಲೇ ಪ್ರೋಕ್ಷಣೆ ಮಾಡಿಕೊಂಡು ಪುಟ್ಟ ಆಂಜನೇಯನ ದೇವಸ್ಥಾನದ ಒಳ ಹೊಕ್ಕೆವು.

ಅಲ್ಲಿ ಕುಳಿತು ಹನುಮಾನ್ ಚಾಲೀಸ್ ಹೇಳಿ ಪ್ರದಕ್ಷಿಣ ನಮಸ್ಕಾರ ಮಾಡಿ ಸುತ್ತೆಲ್ಲ ಕಣ್ಣಾಡಿಸಿದಾಗ ಮೂಲ ಆಂಜನೆಯನ ಫೋಟೋ ಇದು ಎಂದು ಅಲ್ಲಿರುವ ಭಟ್ಟರು ಮಾಹಿತಿ ಕೊಟ್ಟರು. ಈ ಪುಟ್ಟ ದೇವಸ್ಥಾನ ಪ್ರಶಾಂತವಾಗಿತ್ತು. ಯಾರೂ ಜನರಿರಲಿಲ್ಲ. ಸುಮಾರು ಹೊತ್ತು ಅಲ್ಲಿಯೇ ಕುಳಿತು ವಾಪಸ್ಸಾದೆವು.

ಮರಳಿ ಗೂಡಿಗೆ ;

ದಿನಾಂಕ 22-9-2019ರಂದು ನಾವು ವಾಪಸ್ಸು ಬೆಂಗಳೂರಿಗೆ ಹೊರಡುವ ದಿನ. ರಾತ್ರಿ 9ಗಂಟೆಗೆ ರೈಲಿನಲ್ಲಿ. ಆದುದರಿಂದ ಬಟ್ಟೆಗಳನ್ನು ಪ್ಯಾಕ್ ಮಾಡಿ ಅವರೆಲ್ಲರೂ ಗಂಗಾ ಪೂಜೆ ಮಾಡಿ ಬರಲು ಹತ್ತಿರದ ಗಾಯ್ ಘಾಟ್ ಕಡೆ ಹೋದರೂ ನನಗೆ ಉತ್ಸಾಹ ಇರಲಿಲ್ಲ. ಮೊದಲ ದಿನದಿಂದ ಬರೀ ರವೆ ಗಂಜಿ ಹಾಗೂ ಮಾತ್ರೆಗಳಲ್ಲೇ ಎಸಿಡಿಟಿ ನಿಯಂತ್ರಿಸುತ್ತಿದ್ದೆ. ಮತ್ತೊಮ್ಮೆ ವಿಶ್ವನಾಥನ ದರ್ಶನಕ್ಕೆ ಮತ್ತು ಗಂಗಾ ಪೂಜೆಗೆ ಅವರೊಂದಿಗೆ ಹೋಗಲಾಗದಕ್ಕೆ ಬೇಜಾರೂ ಆಯಿತು.

ಏಳು ಕಿ.ಮೀ.ದೂರದಲ್ಲಿರುವ ರೈಲ್ವೆ ಸ್ಟೇಷನ್ ತಲುಪಲು ನಾವು ಆರು ಗಂಟೆಗೆಲ್ಲ ಹೊರಟೆವು ಎರಡು ಆಟೋಗಳಲ್ಲಿ.. ಏಕೆಂದರೆ ಅಷ್ಟು ಟ್ರಾಫಿಕ್ ಈ ಸಮಯದಲ್ಲಿ. ಸಿಕ್ಕಾಪಟ್ಟೆ ಜನ ಸ್ಟೇಷನ್ ನಲ್ಲಿ. ನಾವು ಕುಳಿತಿದ್ದು ಒಂದು ಕಡೆಯಾದರೆ ನಮ್ಮ ಬೋಗಿ ಇರುವುದೇ ಒಂದು ಕಡೆ. ಅಲ್ಲಿ ಅಲ್ಲಲ್ಲಿ ಸಿಮೆಂಟ್ ಕೆಲಸ ಬೇರೆ ನಡೆಯುತ್ತಿದ್ದು ಸರಾಗವಾಗಿ ನಡೆದಾಡಲೂ ಅಡ್ಡಿ. ಲಗೇಜ್ ಹೊತ್ತು ಬೋಗಿ ತಲುಪುವಷ್ಟರಲ್ಲಿ ಸಾಕುಸಾಕಾಯಿತು.

ನನಗೊಬ್ಬಳಿಗೆ ಮಾತ್ರ ಬೇರೆ ಬೋಗಿಯಲ್ಲಿ ಸೀಟು ರಿಸರ್ವ್ ಆಗಿದ್ದು ಬೋಗಿಯ ತುಂಬ ಮದ್ಯಪ್ರದಶಕ್ಕೆ ಹೋಗುವ ಹುಡುಗರ ದಂಡು. ಒಳಗೊಳಗೇ ಭಯ ಹೇಗಪ್ಪಾ ರಾತ್ರಿ ಕಳೆಯೋದು? ತಂದ ರವೆ ಗಂಜಿ ಕುಡಿದು ತೆಪ್ಪಗೆ ಮಲಗಿದೆ. ಪಕ್ಕದ ಕಂಪಾರ್ಟಮೆಂಟಲ್ಲಿರುವ ಅವರ ಸೀಟಿಗೆ ನನ್ನ ಬದಲಾಯಿಸುವ ಅವರ ಯೋಚನೆ ವಿಫಲವಾಯಿತು. ಕಾರಣ ಅಲ್ಲಿರುವ ಹೆಂಗಸು ಇವರ ಸೀಟ್ ಬಿಟ್ಟುಕೊಡಲು ರೆಡಿ ಇಲ್ಲ. ಹಾಗೆ ತಮ್ಮ ಪರಿಚಯ ಹೇಳಿಕೊಂಡ ಅವರುಗಳು ನಾವು ಬೆಳಗಿನ ಜಾವ ಇಳಿದು ಹೋಗುತ್ತೇವೆ ಎಂದರು. ಬೆಳಿಗ್ಗೆ ಎಚ್ಚರಾದಾಗ ಅವರ್ಯಾರೂ ಇರಲಿಲ್ಲ ಇನ್ಯಾರಾರೋ ಬಂದು ಕೂತಿದ್ದರು.

ಬರೋಬ್ಬರಿ 54 ಗಂಟೆಗಳ ಪ್ರಯಾಣ ನಮ್ಮದು. ಎಷ್ಟೋ ಜನ ಹತ್ತಿದರು ಇಳಿದರು. ಅವರಿರುವವರೆಗೆ ಅವರ ಪರಿಚಯ ಮಾತು. ಈ ಪರಿಚಯ ಆತ್ಮೀಯತೆಯಲ್ಲಿ ಒಂದಿಬ್ಬರು ಊಟ ತಿಂಡಿ ತರಿಸಿಕೊಟ್ಟು ಒಂದಿಷ್ಟು ಹರಟೆಯಲ್ಲಿ ಭಾಗಿಯಾದರು. ಪ್ರಯಾಣದ ಅನುಭವ ಬಿಚ್ಚಿಕೊಂಡಾಗ ಅದರಲ್ಲಿ ತುಮಕೂರಿನ ಒಬ್ಬ ಹುಡುಗ ಮಿಲಿಟರಿಯಲ್ಲಿದ್ದು ಅಯೋದ್ಯೆಯ ವಿಷಯ ಕೇಳಿ ಸಿಟ್ಟಿಗೆದ್ದು “ಕಂಪ್ಲೇಂಟ್ ಮಾಡಬೇಕಿತ್ತು, ಕೈ ಎತ್ತುವ ಅಧಿಕಾರ ಇಲ್ಲ ಅವರಿಗೆ” ಎಂದು ವಿರೋಧ ವ್ಯಕ್ತಪಡಿಸಿದ. ರೈಲು ಇಳಿಯುವವರೆಗೂ ಜೊತೆಗಿದ್ದು ವಿದಾಯ ಹೇಳಿ ಕಳಿಸಿದ. ಹಾಗೆ ಲಖನೌ ಹುಡುಗನೊಬ್ಬ ನಾನು ಒಬ್ಬಳೇ ಇರುವುದು ಕಂಡು ಬೆಂಗಳೂರಿನವರೆಗೂ ಜೊತೆಗಿದ್ದು ಮಗನಂತೆ ಕಾಳಜಿವಹಿಸಿ ನನ್ನ ಬರಹಗಳನ್ನು ಹಿಂದಿ ಭಾಷೆಗೆ ತುರ್ಜುಮೆ ಮಾಡಿ ಓದುವೆನೆಂದು ಫೇಸ್ ಬುಕ್ಕಿನ ಸ್ನೇಹಿತರ ಲೀಸ್ಟಿನಲ್ಲಿ ಸೇರಿಕೊಂಡ. ಅವರ್ಯಾರೋ ನಾನ್ಯಾರೋ ಆದರೆ ಈ ಸುಧೀರ್ಘ ರೈಲು ಪ್ರಯಾಣದಲ್ಲಿ ಎಲ್ಲೂ ಏನೂ ತೊಂದರೆಯಾಗದೆ ಸುರುಕ್ಷಿತವಾಗಿ ರೈಲಿಳಿದು ವಿಪರೀತ ಸುರಿಯುತ್ತಿರುವ ಮಳೆಯಲ್ಲಿ ಬೆಂಗಳೂರು ಮನೆ ಸೇರಿಕೊಂಡಾಗ ರಾತ್ರಿ ಹನ್ನೆರಡು ಗಂಟೆ ದಾಟಿತ್ತು.

ನನ್ನನುಭವದ ಮಾತು ;

ಕಾಶಿ ಒಂದು ಪುಣ್ಯ ಕ್ಷೇತ್ರ. ಪುಣ್ಯ ಸಂಪಾದಿಸಲು ಜನ ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿ ಪ್ರತಿಯೊಬ್ಬರೂ ಭಕ್ತರ ಜೋಬು ನೋಡುವುದು ವಿಪರ್ಯಾಸ. ಆದರೆ ಗತಿ ಇಲ್ಲ. ಪಿತೃಕಾರ್ಯ ಮಾಡಲು ಬಂದು ಅವರೇಳಿದಷ್ಟು ಹಣ ಕೊಟ್ಟು ಹೋಗಬೇಕು. ಇತಿಹಾಸ, ಪುರಾಣ, ಶಾಸ್ತ್ರ ಏನೇ ಇರಬಹುದು. ಆದರೆ ಯಾರೇ ಇಲ್ಲಿಗೆ ಬರಲಿ ಅಲ್ಲಿಯ ರೀತಿ ರಿವಾಜುಗಳಿಗೆ ತಲೆಬಾಗಿ ಜೀ…ಹುಜೂರ್ ಅನ್ನದೇ ಬೇರೆ ದಾರಿ ಇಲ್ಲ. ಕಾಶಿ ಒಂದು ಸುಲಿಗೆಯ ತಾಣ! ಹಾಗೆ ಪರಿವರ್ತನೆ ಆಗಿದೆ ಕಾಶಿ. ಆದರೂ ಕಾಶಿ ಕ್ಷೇತ್ರಕ್ಕೆ ಮತ್ತೆ ಮತ್ತೆ ಹೋಗಬೇಕೆನಿಸುವುದು. ಏಕೆಂದರೆ ಅಲ್ಲಿಯ ಇತಿಹಾಸ, ವಿಶ್ವನಾಥ ಮಂದಿರ,ನೋಡುವ ತಾಣಗಳು, ರುಚಿಯಾದ ವಗೈರೆ ತಿಂಡಿಗಳು, ಆ ಗಂಗಾ ನದಿ. ವಾವ್ ರುದ್ರರಮಣೀಯ! ಹಾಗೆ ಒಬ್ಬ ಬರಹಗಾರನಿಗೆ ಮೊಗೆದಷ್ಟೂ ಮುಗಿಯದ ವಿಷಗಳು ಬೇಕಾದಷ್ಟು ಸಿಗುತ್ತವೆ. ತಿರುಗಾಡಿದಷ್ಟೂ ಭಾವನೆಗಳ ಮಹಾಪೂರವೇ ಹರಿದು ಬರುತ್ತದೆ. ಇನ್ನೂ ಇನ್ನೂ ಬರೆಯಬೇಕೆನ್ನುವ ತುಡಿತ ಮನಸ್ಸನ್ನು ಕಾಡುತ್ತದೆ. ಈ ಕಾರಣಕ್ಕಾಗಿಯೇ ನಾನು ಮತ್ತೊಮ್ಮೆ ಕಾಶಿಗೆ ಹೋಗಿದ್ದು, ನನಗನಿಸಿದ, ನಾನು ನೋಡಿದ, ಅರಿತುಕೊಂಡ ವಿಷಯ ಆದಷ್ಟೂ ಬರೆಯಲು ಪ್ರಯತ್ನಿಸಿದೆ. ಬರೆಯುತ್ತ ಹೋದರೆ ಕಾಶಿ ಮುಗಿಯದ ಕಡಲು!

ಮುಗಿಯಿತು.

6-8-2020. 8.29pm

ಭಂ ಭಂ ಬೋಲೆನಾಥ್

ಭಾಗ – 16

ಸಾರಾನಾಥ್ ;

ಉತ್ತರ ಪ್ರದೇಶ ರಾಜ್ಯದ ವಾರಾಣಸಿ ಜಿಲ್ಲೆಯಲ್ಲಿರುವ ಒಂದು ಪವಿತ್ರ ಸ್ಥಳ ಸಾರಾನಾಥ್. ಸಾರ ಎಂದರೆ ಉಪದೇಶ, ನಾಥ್ ಎಂದರೆ ದೇವರು ಎಂದರ್ಥ. ಭಗವಾನ್ ಬುದ್ಧ ಬೌದ್ಧ ಧರ್ಮವನ್ನು ಪ್ರಥಮ ಬೋಧನೆ ಮಾಡಿದ ಬೌದ್ಧಧರ್ಮಾನುಯಾಯಿಗಳ ಪುಣ್ಯ ಕ್ಷೇತ್ರವಿದು. ಮೂರನೇ ಇಂಟರ್ನ್ಯಾಷನಲ್ ಸ್ಥಳವಿದು.

ಮೊದಲು ಋಷಿಪಟ್ಟಣ, ಮೃಗದಾವ, ಮಾಹಾತ್ಮ್ಯ, ಶ್ರೀ ಪತಂಗ ಎಂದು ಕರೆಯುತ್ತಿದ್ದು ನಂತರದಲ್ಲಿ ಸಾರಾನಾಥ್ ಎಂದು ಕರೆಯಲ್ಪಟ್ಟಿತು. 1939ರಲ್ಲಿ ಚೈನಾ ದೇಶದವರು ಈ ಮಂದಿರವನ್ನು ಕಟ್ಟಿ ಅಲ್ಲಿಯ ಸರ್ಕಾರವೇ ನೋಡಿಕೊಳ್ಳುತ್ತಿತ್ತು. ತದನಂತರ ಭಾರತ ಮತ್ತು ಚೈನಾ ಯುದ್ಧಾನಂತರ ಈ ಮಂದಿರವನ್ನು ಥೈಲ್ಯಾಂಡ್ ದೇಶಕ್ಕೆ ಹಸ್ತಾಂತರಿಸಿದರು. ಈಗ ಈ ಮಂದಿರವನ್ನು ಥೈಲ್ಯಾಂಡ್ ದೇಶದ ಸರ್ಕಾರ ನೋಡಿಕೊಳ್ಳುತ್ತಿದೆ.

ಇಲ್ಲಿ ಬುದ್ಧನ ಅವಶೇಷಗಳಿರುವ ಸ್ತೂಪ, ಬೌದ್ಧ ದೇವಾಲಯ ಮತ್ತು ಸಂಘಾರಾಮಗಳಿಂದ ಈ ಸ್ಥಾನ ಬೌದ್ಧರ ಧರ್ಮಕ್ಷೇತ್ರವಾಗಿದೆ. 11ನೆಯ ಜೈನ ತೀರ್ಥಂಕರ ಶ್ರೇಯಾಂಕನಾಥ ತಪಸ್ಸನ್ನಾಚರಿಸಿ ದೇಹವಿಟ್ಟದ್ದು ಇಲ್ಲಿಯೇ ಎಂದು ಜೈನಗ್ರಂಥಗಳಲ್ಲಿ ಉಲ್ಲೇಖಿಸಿದೆ.

ಸಾರನಾಥದ ಸುವರ್ಣಯುಗ ಗುಪ್ತ ಅರಸರ ಕಾಲದಲ್ಲಾಗಿತ್ತು. ಶುಂಗ ಅರಸ, ಕುಷಾಣರ ಕಾಲದಲ್ಲಿ, ಕ್ಷತ್ರಪ ಖರಪಲ್ಲನ ಮತ್ತು ವನಸ್ಫರ ಕಾಲದಲ್ಲಿ, ಕನೋಜದ ಶ್ರೀಹರ್ಷ, ಬಂಗಾಲದ ಪಾಲ ಅರಸರ ಹಾಗೂ ಬೌದ್ಧ ಭಿಕ್ಷುಗಳು ಹೀಗೆ ಹಲವರು ಸಾರಾನಾಥ್ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ಹೂಣರ ಧಾಳಿಯಿಂದ ಹಾಗೂ ಘಸ್ನಿ ಮಹಮದ್ ಕಾಶಿಯ ಮೇಲೆ ದಾಳಿ ಮಾಡಿದಾಗ ಸಮೀಪದಲ್ಲಿದ್ದ ಸಾರನಾಥದ ಮಂದಿರಗಳಿಗೂ ಧಕ್ಕೆಯಾಯಿತು. ಹೀಗೆ ಧಾಳಿಗೊಳಗಾದ ಸಾರಾನಾಥ್ ಮಂದಿರಗಳು, ಕಟ್ಟಡಗಳು ಆಗಾಗ ಪುನರುಜ್ಜೀವನಗೊಳ್ಳುತ್ತಲೇ ಇದ್ದು ಈಗ ಇಲ್ಲಿ ಜಪಾನ್ ಮತ್ತು ಚೀನ ದೇಶದ ಬೌದ್ಧ ಭಕ್ತರು ಕಟ್ಟಿಸಿರುವ ಅಂದವಾದ ದೇವಾಲಯ ಮತ್ತು ವಿಹಾರಗಳು ಇವೆ ಅಷ್ಟೇ.

ದಿನಾಂಕ 19-10-2019ರ ಬೆಳಿಗ್ಗೆ ಒಂದು ಆಟೋದಲ್ಲಿ ಕಾಶಿಯಿಂದ ಏಳು ಕಿ.ಮೀ.ದೂರದಲ್ಲಿರುವ ಬೌದ್ಧರ ಪವಿತ್ರ ಕ್ಷೇತ್ರ ಸಾರಾನಾಥ್ ವೀಕ್ಷಣೆಗೆ ಹೊರಟೆವು. ಎರಡು ಮೂರು ಕಿ.ಮೀ.ಸಾಗುತ್ತಿದ್ದಂತೆ ಇಲ್ಲಿಯ ರಸ್ತೆಯ ಅವ್ಯವಸ್ಥೆ ಹೇಗಿದೆಯೆಂದರೆ ಬೆನ್ನು ಸೊಂಟ ಗಟ್ಟಿ ಇದ್ದವರು ಮಾತ್ರ ಈ ರಸ್ತೆಯಲ್ಲಿ ಪ್ರಯಾಣಿಸಬೇಕು! ಹಾಗಿದೆ ರಸ್ತೆಯ ಅವ್ಯವಸ್ಥೆ.

ಅಲ್ಲಲ್ಲಿ ಕಿತ್ತು ಹೋದ ರಸ್ತೆ ನಿರಂತರ ವಾಹನಗಳ ಓಡಾಟ, ವಿಪರೀತ ಮಳೆಯಿಂದಾಗಿ ದೊಡ್ಡ ದೊಡ್ಡ ಹೊಂಡ ನಿರ್ಮಿಸಿದೆ. ಅಕ್ಕ ಪಕ್ಕ ಪುಟ್ಪಾತುಗಳೂ ಅವ್ಯವಸ್ಥೆಯ ಆಗರ. ಈಗೆರಡು ವರ್ಷಗಳ ಹಿಂದೆ ಹೋದಾಗಲೂ ಹೀಗೆಯೇ ಇದ್ದಿತ್ತು. ಈಗಲೂ ಹಾಗೆಯೇ ಇದೆ. ದುರಸ್ಥಿ ಕಾಮಗಾರಿ ಯಾಕೆ ಕೈಗೊಂಡಿಲ್ಲವೋ ಗೊತ್ತಿಲ್ಲ.

ಒಟ್ಟಿನಲ್ಲಿ ಸಾರಾನಾಥ್ ಹೋಗಬೇಕೆಂದರೆ ಯಾತ್ರಿಕರು ಹಿಂಸೆ ಅನುಭವಿಸಬೇಕು. ಮುಂದೆ ಸಾರಾನಾಥ್ ಎರಡು ಕಿ.ಮೀ ಇರುವಾಗ ಈ ತೊಂದರೆ ಇಲ್ಲ. ವಿಶಾಲವಾದ ರಸ್ತೆ ಅಂದವಾದ ಪಟ್ಟಣ ಗೋಚರಿಸುತ್ತದೆ.

ಒಂದು ದೊಡ್ಡ ಸರ್ಕಲ್ ನಲ್ಲಿ ಆಟೋ ಇಳಿದು ಒಬ್ಬ ಗೈಡ್ ಗೊತ್ತುಮಾಡಿಕೊಂಡು ಸಾರಾನಾಥ್ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೊರಟೆವು.

ಬೌದ್ಧರ ನಾಲ್ಕು ಪವಿತ್ರ ಕ್ಷೇತ್ರಗಳೆಂದರೆ ;

1) ನೇಪಾಳದಲ್ಲಿರುವ ಲುಂಬಿನಿ ಕ್ಷೇತ್ರ. ಭಗವಾನ್ ಬುದ್ಧನ ಜನ್ಮ ಸ್ಥಳ.
2) ಬಿಹಾರದಲ್ಲಿರುವ ಭೋದಗಯಾ. ಬುದ್ಧನು ಜ್ಞಾನೋದಯ ಪಡೆದ ಸ್ಥಳ.
3) ಬೌದ್ಧ ಧರ್ಮವನ್ನು ಮೊದಲ ಸಾರಿ ಉಪದೇಶವನ್ನು ನೀಡಿದ ಸ್ಥಳ ಸಾರಾನಾಥ್.
4) ಹಾಗೂ ಗೋರಕ್ ಪುರದಲ್ಲಿರುವ ಬುಷಿನಗರ. ಭಗವಾನ್ ಬುದ್ಧ ತನ್ನ ಎಂಬತ್ತನೇ ವಯಸ್ಸಿನಲ್ಲಿ ದೇಹ ತ್ಯಾಗ ಮಾಡಿದ ಸ್ಥಳ.

ಮಗಧ ಸಾಮ್ರಾಜ್ಯದ ಅರಸ ಅಶೋಕ ಕಳಿಂಗ ಯುದ್ಧದಲ್ಲಿ ನಡೆದ ರಕ್ತಪಾತದಿಂದ ಮನಪರಿವರ್ತನೆ ಹೊಂದಿ ಅಹಿಂಸಾ ಪ್ರಧಾನವಾದ ಬೌದ್ಧಧರ್ಮ ಅನುಸರಿಸಿದ.

ಅಲ್ಲದೆ ಬೌದ್ಧಧರ್ಮಕ್ಷೇತ್ರಗಳ ಪರ್ಯಟನ ಮಾಡಿ ಸಾರನಾಥದಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿದ.

ಅವುಗಳಲ್ಲಿ ಸುಮಾರು 30 ಮೀಟರ್ ಎತ್ತರದ ಧರ್ಮರಾಜಿಕ ಸ್ತೂಪ ಮತ್ತು ಅಶೋಕನ ಧರ್ಮೋಪದೇಶಗಳನ್ನೊಳಗೊಂಡ ಶಿಲಾಸ್ತಂಭ ಇವು ಪ್ರಸಿದ್ಧವಾದವು. ಧರ್ಮರಾಜಿಕ ಸ್ತೂಪ ಬಹುಕಾಲ ಸಾರನಾಥದ ಪ್ರಮುಖ ಕಟ್ಟಡವಾಗಿದ್ದು 1794ರಲ್ಲಿ ಕಾಶಿಯ ಜಗತ್ಸಿಂಹನೆಂಬುವನು ಇದನ್ನು ಕೆಡವಿಸಿದನೆನ್ನುವರು. ಅಶೋಕನ ಶಿಲಾಸ್ತಂಭ ಸುಮಾರು 21 ಮೀಟರ್ ಎತ್ತರವಿದ್ದು, ತುದಿಯಲ್ಲಿ ಸಿಂಹ-ಶಿಖರವಿರುವುದು. ನಾಲ್ಕು ಸಿಂಹಗಳು ಜಗತ್ತನ್ನು ಅವಲೋಕಿಸುವಂತಿದ್ದು, ಅವುಗಳ ಕೆಳಗೆ ಪದ್ಮವೊಂದಿರುವುದು.

ಈ ಪದ್ಮದ ಕೆಳಗೆ ನಾಲ್ಕು ಕಡೆಗಳಲ್ಲಿ ಆನೆ, ಕುದುರೆ, ಎತ್ತು, ಸಿಂಹ ಈ ನಾಲ್ಕು ಪ್ರಾಣಿಗಳು ಚಿತ್ರಿತವಾಗಿವೆ. ಧರ್ಮಚಕ್ರವನ್ನೊಳಗೊಂಡ ಈ ಸಿಂಹ ಶಿಖರ ಆಧುನಿಕ ಭಾರತದ ರಾಷ್ಟ್ರಮುದ್ರೆಯಾಗಿದೆ.

ಬುದ್ಧನ ಕಾಲದಲ್ಲಿ ಈ ಸ್ಥಳ ಪ್ರಸಿದ್ಧಿಯನ್ನು ಪಡೆದಿತ್ತು. ಸಿದ್ಧಾರ್ಥ ಬುದ್ಧನಾಗಿ ಮೊದಲು ತನ್ನನ್ನು ತೊರೆದು ಹೋಗಿದ್ದ ಐದು ಜನ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಇಲ್ಲಿ ಸಂಧಿಸಿ ತನ್ನ ಪ್ರಥಮ ಧರ್ಮೋಪದೇಶವನ್ನು ಮಾಡಿದ. ಬುದ್ಧ ತನ್ನ ಶಿಷ್ಯಸಂಘದ ಅಡಿಗಲ್ಲನ್ನಿಟ್ಟಿದ್ದು ಇಲ್ಲಿಯೇ. ಕಾಶಿಯ ಶ್ರೀಮಂತ ಗೃಹಸ್ಥ ಯಶ ಮತ್ತು ಅವನ 54 ಜನ ಸ್ನೇಹಿತರು ಬೌದ್ಧಧರ್ಮದ ದೀಕ್ಷೆಯನ್ನು ಹೊಂದಿದ ಅನಂತರ ಅವರನ್ನೂ ತನ್ನ ಮೊದಲಿನ 5 ಜನ ಶಿಷ್ಯರನ್ನೂ ಕೂಡಿಸಿ 60 ಜನರ ಪ್ರಥಮ ಭಿಕ್ಷು ಸಂಘವನ್ನು ಬುದ್ಧ ಇಲ್ಲಿ ಸ್ಥಾಪಿಸಿದ.

ಇಲ್ಲಿ ಸ್ವಲ್ಪ ಹೊತ್ತು ಕುಳಿತು ಧ್ಯಾನ ಮಾಡಲು ಅವಕಾಶ ಕಲ್ಪಿಸಿದ್ದಾರೆ. ದೊಡ್ಡ ದೊಡ್ಡ ಗ್ರಾನೈಟ್ ಕಲ್ಲುಗಳಲ್ಲಿ ಇಲ್ಲಿಯ ಇತಿಹಾಸ ಕೆತ್ತಿ ಸಾಲಾಗಿ ಜೋಡಿಸಿದ್ದು ಭೇಟಿ ನೀಡುವವರಿಗೆ ಮಾಹಿತಿ ಒದಗಿಸುತ್ತವೆ. ಎತ್ತ ನೋಡಿದರೂ ಸ್ವಚ್ಛತೆಗೆ ಶಾಂತತೆಗೆ ಹೆಚ್ಚು ಮಹತ್ವ ಕೊಟ್ಟಿದ್ದು ಮನಸ್ಸನ್ನು ಕ್ಷೇತ್ರ ವೀಕ್ಷಣೆಯಲ್ಲಿ ತಲ್ಲೀನಗೊಳಿಸುತ್ತದೆ.

ಈ ಆವರಣದ ಸುತ್ತಲೂ ಬೌದ್ಧರ ತಿರುಗುವ ಪ್ರೇಯರ್ ಬೆಲ್ ಸಾಲಾಗಿ ಅಳವಡಿಸಿದ್ದು ನೋಡಲು ನಯನಮನೋಹರವಾಗಿದೆ. ಎಲ್ಲಿ ನೋಡಿದರೂ ಕೆಂಪು ಬಣ್ಣ ಎದ್ದು ಕಾಣುತ್ತದೆ. ಇಲ್ಲಿ ಒಂದು ಬೃಹದಾಕಾರದ ಅಶೋಕ ವೃಕ್ಷವಿದೆ. ನಾನು ಈ ವೃಕ್ಷದ ಒಂದು ಎಲೆ ಕೀಳುವಷ್ಟರಲ್ಲಿ ಸೆಕ್ಯೂರಿಟಿ ಅದೆಲ್ಲಿದ್ದನೊ ಬಂದು “ನಹಿ ನಹಿ”ಅನ್ನುವಷ್ಟರಲ್ಲೇ ನಾ ಅಡಗಿಸಿಯಾಗಿತ್ತು. ನೆನಪಿಗೆ ಭದ್ರವಾಗಿ ಪುಸ್ತಕದಲ್ಲಿ ಇಟ್ಟುಕೊಂಡಿದ್ದೇನೆ. ಬಾಲ್ಯದಲ್ಲಿ ಪುಸ್ತಕದಲ್ಲಿ ಈ ಗಿಡದ ಎಲೆ ಇಟ್ಟುಕೊಂಡರೆ ಮರಿ ಹಾಕುತ್ತದೆ ಎಂಬ ನಂಬಿಕೆಯಲ್ಲಿ ಇಟ್ಟು ಆಗಾಗ ತೆಗೆದು ನೋಡುತ್ತಿದ್ದೆ.

ಆದರೆ ಈಗಲೂ ಈ ಎಲೆ ಪುಸ್ತಕದಲ್ಲಿಟ್ಟು ನೋಡುತ್ತಿರುತ್ತೇನೆ ; ಬುದ್ಧಾ ಭಗವಾನ್ ನಿನ್ನಲ್ಲಿರುವಷ್ಟು ಜ್ಞಾನದಲ್ಲಿ ಅಣುವಿನಷ್ಟಾದರೂ ನನಗೆ ಜ್ಞಾನ ಕೊಡು ಎಂದು ಪ್ರಾರ್ಥನೆ! ಆಸೆಗಳ ದಾಸರು ನಾವು. ಮೋಹ ಮಾಯೆಯ ಅಡಿಯಾಳಾದ ಈ ಜೀವಕ್ಕೆ ಕಿಂಚಿತ್ತಾದರೂ ನಿರಾಸಕ್ತಿ ಬಂದು ಮೋಹದಿಂದ ಬಿಡುಗಡೆಗೊಂಡು ಭಗವಂತನನ್ನು ಧ್ಯಾನಿಸುವ ಶಕ್ತಿ ಕೊಡಪ್ಪಾ ಎಂಬ ಬೇಡಿಕೆ ಅಷ್ಟೇ.

ಕಾಲುಗಳು ಸೋಲುವಷ್ಟು ತಿರುಗಿದರೂ ಮುಗಿಯದಷ್ಟು ನೋಡುವ ಸ್ಥಳಗಳು ಇಲ್ಲಿವೆ. ಎಲ್ಲಿಂದೆಲ್ಲಿಗೂ ನಡೆದೇ ಸಾಗಬೇಕು ದಾರಿ. ವಿಶಾಲವಾದ ಅಂದದ ಪಾರ್ಕ್ ಮಂದಿರಗಳ ಸುತ್ತಮುತ್ತಲೂ ಇವೆ.

ಭಗವಾನ್ ಬುದ್ಧನ ದೇವಾಲಯದ ಆವರಣದ ಪಾರ್ಕಿನಲ್ಲಿ ಬೃಹದಾಕಾರದ ಒಂದು ಗಂಟೆಯಿದೆ. ಬೌದ್ಧ ಧರ್ಮದ ಸೂಕ್ಷ್ಮ ಕೆತ್ತನೆಯಿದ್ದು ಇದನ್ನು ಭಾರಿಸಿದರೆ ಎರಡು ಕಿ.ಮೀ.ದೂರದವರೆಗೆ ಇದರ ನಾದ ಕೇಳುವುದಂತೆ.

ಹಾಗೆ ಸ್ವಲ್ಪ ದೂರದಲ್ಲಿ ದೊಡ್ಡ ಮ್ಮೂಸಿಯಂ ಕೂಡಾ ಇದೆ.

ಎಲ್ಲವನ್ನೂ ಕಾಲ್ನಡಿಗೆಯಲ್ಲೇ ಸುತ್ತಿ ಸುಸ್ತಾಗಿ ಎಲ್ಲಿ ನೋಡಿದರಲ್ಲಿ ದಾರಿಯ ಪಕ್ಕ ಸಿಕ್ಕ ತರಾವರಿ ಅಂಗಡಿಗಳ ಸಾಲುಗಳಿಗೆ ನುಗ್ಗಿ ಒಂದಿಷ್ಟು ಖರೀದಿಯೊಂದಿಗೆ ವಾಸ ಸ್ಥಳಕ್ಕೆ ಹಿಂದಿರುಗಿದಾಗ ಕತ್ತಲಾವರಿಸಿತ್ತು.

ಮುಂದುವರಿಯುವುದು ಭಾಗ -17ರಲ್ಲಿ.

30-7-2020. 8.25pm

ಭಂ ಭಂ ಬೋಲೆನಾಥ್

ಭಾಗ -15

ಅಯೋಧ್ಯೆ ;

ವಿಷ್ಣುವಿನ ಏಳನೇ ಅವತಾರ ಶ್ರೀರಾಮ. ಅಯೋಧ್ಯೆಯ ಚಕ್ರವರ್ಥಿ ದಶರಥ ಮತ್ತು ಕೌಸಲ್ಯರ ಹಿರಿಯ ಪುತ್ರನಾಗಿದ್ದ ಶ್ರೀ ರಾಮ ರಾಜ್ಯಭಾರ ಮಾಡಿದ್ದು ಕೋಸಲ ರಾಜ್ಯದಲ್ಲಿ. ಇದು ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯ ಅಯೋದ್ಯೆಯಲ್ಲಿರುವ ಸರಯೂ ನದಿಯ ತೀರದಲ್ಲಿದೆ. ಕೋಟ್ಯಂತರ ಹಿಂದೂಗಳು ನಂಬಿಕೊಂಡಿರುವ ಪ್ರಕಾರ ರಾಮ ಹುಟ್ಟಿದ್ದು ಅಯೋಧ್ಯೆಯಲ್ಲೇ. ಋಗ್ವೇದದ ಕ್ರಿ.ಪೂ. 1450ರ ಆಸುಪಾಸಿನಲ್ಲಿ ರಾಮ ಅವತಾರ ತಾಳಿದನಂತೆ.

ಇದಲ್ಲದೇ 14-15ನೇ ಶತಮಾನದಲ್ಲಿ ರಾಜ ವಿಕ್ರಮಾದಿತ್ಯನು 7 ಅಂತಸ್ತಿನ ಭವ್ಯ ಶ್ರೀರಾಮ ಮಂದಿರವನ್ನು ಅಯೋಧ್ಯೆಯಲ್ಲಿ ಕಟ್ಟಿಸಿ ಸಮಾಜಕ್ಕೆ ಅರ್ಪಿಸಿ ಪ್ರಭು ಶ್ರೀರಾಮನ ನೆನಪನ್ನು ಶಾಶ್ವತವಾಗಿಸಿದನಂತೆ.

ಇನ್ನೊಂದು ಮೂಲದ ಪ್ರಕಾರ ಪ್ರಸಿದ್ಧ ಪುರಾತತ್ವ ಶಾಸ್ತ್ರಕಾರರಾದ ಜೆಸ್ಸುರಾಮ ತನ್ನ ಸಿದ್ಧಾಂತ ಗ್ರಂಥದಲ್ಲಿ. ಅಯೋಧ್ಯೆ ಇದು ಅಲ್ಲವೆಂದೂ, ರಾಮ ಆಳ್ವಿಕೆ ಮಾಡಿದ ಅಯೋಧ್ಯೆಯು ಪಾಕಿಸ್ತಾನದಲ್ಲಿದೆ ಎಂದು ಬರೆದಿದ್ದಾರೆ. ಅಲ್ಲಿಯೇ ಶ್ರೀ ರಾಮನು ಜನಿಸಿದನಂತೆ.

ಪ್ರಯಾಗದಿಂದ ಕಾಶಿಗೆ NH2 ಹೈವೇಯಲ್ಲಿ ಬರುವಾಗ 20 ಕಿ.ಮೀ. ಒಳಗಡೆ ಸಾಗಿದರೆ ಸೀತಾದೇವಿ ಮಂದಿರ ಸಿಗುತ್ತದೆ.

ಇಲ್ಲಿ ಮಂದಿರದ ತಳ ಮಹಡಿಯಲ್ಲಿ ಸೀತಾದೇವಿ ಭೂತಾಯಿಯ ಮಡಿಲು ಸೇರುವ ದೃಶ್ಯದ ಚಂದದ ಮೂರ್ತಿ ನಿರ್ಮಾಣ ಮಾಡಿದ್ದಾರೆ.

ಈ ಮೂರ್ತಿಯ ಎದುರುಗಡೆ ಗೋಡೆಯ ಮೇಲೆ ಒಂದು ಪಟ ತಗಲಾಕಿದ್ದು ನಮ್ಮನ್ನು ಕರೆದುಕೊಂಡು ಹೋದ ಭಟ್ಟರು ಸ್ಥಳ ಪರಿಚಯ ಮಾಡಿಸುವಾಗ “ಇದು ಸೀತಾದೇವಿ ಭೂಮಿಯೊಳಗೆ ಇಳಿದ ಜಾಗ. ಇದು ಪಾಕಿಸ್ತಾನದಲ್ಲಿ ಇದೆ”ಎಂದು ಈ ಪಟ ತೋರಿಸಿದಾಗ ನಾನು ನನ್ನ ಮೊಬೈಲ್ ನಲ್ಲಿ ಕ್ಲಿಕ್ಕಿಸಿದೆ. ಎಲ್ಲಿಯ ಅಯೋಧ್ಯೆ ಎಲ್ಲಿಯ ಪಾಕಿಸ್ತಾನ? ಒಂದಕ್ಕೊಂದು ಸಂಬಂಧವೇ ಇಲ್ಲ ಅನಿಸಿತು.

1528ರಲ್ಲಿ ಮೊಘಲ್ ರಾಜವಂಶದ ಸಂಸ್ಥಾಪಕ ಬಾಬರ್‌ನಿಂದ ತನ್ನ ದಂಡನಾಯಕ ಮೀರ್ ಬಕಿಗೆ ಶ್ರೀರಾಮನ ಮಂದಿರವನ್ನು ಕೆಡವಿ ಅಲ್ಲಿ ಮಸೀದಿ ನಿರ್ಮಿಸಲು ಸೂಚಿಸಿದನು. ಬಾಬರ ನೀಡಿದ ಆದೇಶದಂತೆ ಅಯೋಧ್ಯೆಯಲ್ಲಿದ್ದ ರಾಮಮಂದಿರವನ್ನು ಧ್ವಂಸ ಮಾಡಿ ಬಾಬ್ರಿ ಮಸೀದಿಯನ್ನು ನಿರ್ಮಿಸಿದನಂತೆ.

1857ರಲ್ಲಿ ಹಿಂದೂಗಳು ಅಯೋಧ್ಯೆಯಲ್ಲಿದ್ದ ಮಸೀದಿಯ ಒಂದು ಭಾಗದಲ್ಲಿ ಪೂಜಾ ಸ್ಥಳ ಮಾಡಿಕೊಂಡರು.

1859ರಲ್ಲಿ ಹಿಂದೂ-ಮುಸ್ಲಿಮರ ನಡುವೆ ಪೂಜಾ ಸ್ಥಳ ತೀವ್ರ ವಿವಾದಕ್ಕೆ ಕಾರಣವಾಗುತ್ತಿರುವುದನ್ನು ಮನಗಂಡ ಬ್ರಿಟೀಷರು, ಎರಡು ಗೋಡೆಗಳನ್ನು ಕಟ್ಟುವ ಮೂಲಕ ಪ್ರತ್ಯೇಕವಾಗಿ ಎರಡೂ ಧರ್ಮೀಯರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿದರು.

1949ರಲ್ಲಿ ಮಸೀದಿಯ ಒಳಗಡೆ ರಾಮನ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು. ಸಿವಿಲ್ ಕೇಸ್ ದಾಖಲಾದ ಕಾರಣ ಸರಕಾರವು ಮಧ್ಯ ಪ್ರವೇಶಿಸಿತು. ಅಲ್ಲದೆ ಇದನ್ನು ವಿವಾದಿತ ಸ್ಥಳ ಎಂದು ಘೋಷಿಸಿ, ಸರಕಾರವು ಬೀಗ ಜಡಿಯಿತು. ವಿಶ್ವ ಹಿಂದೂ ಪರಿಷತ್ ಭಾರೀ ಪ್ರತಿಭಟನೆಗಳನ್ನು ನಡೆಸಿತು. ಇದಕ್ಕೆ ಮಣಿದ ರಾಜೀವ್ ಗಾಂಧಿ 1985ರಲ್ಲಿ ಬೀಗ ತೆಗೆಸಿದರು.

1992 ಡಿಸೆಂಬರ 6ರಂದು ಬೆಳಿಗ್ಗೆ 10.30ಕ್ಕೆ ಮಸೀದಿಯ ಗುಮ್ಮಟದ ಮೇಲ್ಭಾಗಕ್ಕೆ ಹತ್ತಿದ ಕರಸೇವಕರು ಗರ್ಭಗೃಹಕ್ಕೆ ತೆರಳಿ ಅಲ್ಲಿನ ಶ್ರೀ ರಾಮನ ವಿಗ್ರಹ ಮತ್ತು ಕಾಣಿಕೆ ಡಬ್ಬವನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದುರು. ಹಾಗೂ ಮೊದಲ ಗುಮ್ಮಟ ನೆಲಸಮ ಮಾಡಿದರು. ವಿವಾದಿತ ಸ್ಥಳದಲ್ಲಿ ತಾತ್ಕಾಲಿಕ ಮಂದಿರ ನಿರ್ಮಾಣ ಕಾರ್ಯ ತ್ವರಿತವಾಗಿ ಆರಂಭಿಸಿದ್ದರು. ಹಾಗೂ 1994ರ ಡಿಸೆಂಬರ 23ರ ಮಧ್ಯರಾತ್ರಿ ಹಿಂದೂಗಳಿಂದ ವಿಗ್ರಹಗಳನ್ನು ತಂದಿಟ್ಟದ್ದು ಸ್ಥಾಪಿಸಲಾಗಿದೆ. ಅಲ್ಲದೆ ಹೊರ ಒಳ ಆವರಣದಲ್ಲಿಯೂ ಅವರು ಪೂಜಾ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ದೀರ್ಘಕಾಲದ ನಂತರ ಬಿಗಿ ಭದ್ರತೆಯಲ್ಲಿ ಭಕ್ತರಿಗೆ ಶ್ರೀ ರಾಮನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಇಷ್ಟೆಲ್ಲಾ ಇತಿಹಾಸ ಹೊಂದಿದ ಶ್ರೀ ರಾಮ ಜನ್ಮ ಭೂಮಿ ನೋಡಲೇಬೇಕೆಂದು ತೀರ್ಮಾನಿಸಿ ಕಾಶಿಗೆ ಹೊರಡುವಾಗಲೇ ಹೆಚ್ಚಿನ ದಿನ ಪ್ರಯಾಣಕ್ಕೆ ನಾವು ಮೀಸಲಿಟ್ಟಿದ್ದೆವು.

ಅಯೋಧ್ಯೆಗೆ ಭೇಟಿ ;

ದಿನಾಂಕ 18-10-2019ರಂದು ನಮ್ಮ ಆರು ಜನರ ತಂಡ ಕಾಶಿಯಿಂದ 250 ಕಿ.ಮೀ.ದೂರದಲ್ಲಿರುವ ಶ್ರೀ ರಾಮಚಂದ್ರನ ಜನ್ಮ ಭೂಮಿ ಅಯೋಧ್ಯೆ ನಗರಕ್ಕೆ ಹೊರಟಿತು. ಬೆಳಿಗ್ಗೆ ಐದು ಗಂಟೆಗೆ ಇನೋವಾ ಕಾರಿನಲ್ಲಿ ಹೊರಟ ಪಯಣ NH3 ಹೈವೇಯಲ್ಲಿ ಸಾಗುತ್ತಿದ್ದಂತೆ ಮಳೆಯೂ ಅವಿರತವಾಗಿ ಬರುತ್ತಿತ್ತು. ಎಷ್ಟೋ ವರ್ಷಗಳ ಕನಸು ರಾಮ ಜನ್ಮ ಭೂಮಿ ವೀಕ್ಷಿಸಲು.

ರಸ್ತೆ ಅತ್ಯಂತ ಹಾಳಾಗಿದೆ, ಆಗಾಗ ಪತ ಬದಲಾಯಿಸುತ್ತ ಡ್ರೈವರ್ ಕಾರು ಚಲಾಯಿಸುತ್ತಿದ್ದರೆ ಅಲ್ಲಲ್ಲಿ ದುರಸ್ತಿ ಕಾರ್ಯ ಕೂಡಾ ನಡೆಯುತ್ತಿದೆ. ಎಷ್ಟು ಹೊತ್ತಿಗೆ ಅಯೋಧ್ಯೆ ತಲುಪುವುದು ಎಂಬ ಆತಂಕ. ಕಾರಣ ಮಳೆ ರಸ್ತೆಯ ಅವ್ಯವಸ್ಥೆ ಅಲ್ಲಲ್ಲಿ ಪ್ರಯಾಣ ನಿಧಾನವಾಗಿ ಸಾಗುತ್ತಿತ್ತು.

ಮುಂದೆ ಹೋದಂತೆ ಸುತ್ತಮುತ್ತಲಿನ ಹಸಿರು ಕಂಗೊಳಿಸುವ ಸಮತಟ್ಟಾದ ಪ್ರದೇಶ. ಎಲ್ಲಿ ನೋಡಿದರಲ್ಲಿ ವ್ಯವಸಾಯದ ಭೂಮಿ. ಮಳೆ ಕೂಡಾ ಕಡಿಮೆ ಆಗಿದೆ. ಹೊಟ್ಟೆ ತಾಳ ಹಾಕುತ್ತಿತ್ತು. ಹೈವೇಯಿಂದ ಡೀವಿಯೇಷನ್ ತೆಗೆದುಕೊಂಡ ಕಾರು ಡ್ರೈವರ್ ಒಂದು ಡಾಬಾದ ಹತ್ತಿರ ನಿಲ್ಲಿಸಿದರು. ಆಗಲೇ ಒಂಬತ್ತು ಗಂಟೆ ಆಗಿಬಿಟ್ಟಿದೆ. ಹನ್ನೊಂದು ಗಂಟೆಗೆ ಅಯೋಧ್ಯೆ ಆಯಕಟ್ಟಿನ ಗೇಟ್ ಬಂದು ಮಾಡುತ್ತಾರೆಂಬ ಮಾಹಿತಿ ನಮಗೆ ಗೊತ್ತಿರುವ ಪ್ರಕಾರ. ಆದರೆ ಡ್ರೈವರ್ ಇಲ್ಲಾ ಹನ್ನೆರಡು ಗಂಟೆವರೆಗೆ ಅಂದಿದ್ದು ನಾವೂ ನಂಬಿದೆವು. ಉಪಹಾರ ಮುಗಿಸಿ ಹೊರಟು ಅಯೋಧ್ಯೆ ತಲುಪಿದಾಗ ಹನ್ನೊಂದು ಗಂಟೆ ಆಗಿಬಿಟ್ಟಿದೆ.

ಈ ಮೊದಲು ಅಯೋಧ್ಯೆಯ ಬಸ್ ನಿಲ್ದಾಣ ಇರುವುದನ್ನು ಈ ಗಲಾಟೆ ಕೋರ್ಟ್ ಕೇಸು ಶುರುವಾದ ಮೇಲೆ ಈ ಬಸ್ ನಿಲ್ದಾಣವನ್ನು ಪಾರ್ಕಿಂಗ್ ಜಾಗವಾಗಿ ಬದಲಾಯಿಸಿದ್ದಲ್ಲದೇ ಇಂತಿಷ್ಟು ಹಣ ಗಂಟೆಗೆ ಅಂತಲೂ ನಿಡಧಿಪಡಿಸಿದ್ದಾರೆ. ಮಳೆ ಮತ್ತೆ ಶುರುವಾಗಿತ್ತು . ಈ ಜಾಗದಲ್ಲಿ ಏನೂ ವ್ಯವಸ್ಥೆ ಇಲ್ಲ. ಆಟೋಗಳು, ಸೈಕಲ್ ರಿಕ್ಷಾ, ಹಸುಗಳು ಇತ್ಯಾದಿ ಜನವೋ ಜನ ಜೊತೆಗೆ ಮಳೆಯ ನೀರು ಅಲ್ಲಲ್ಲಿ ನಿಂತು ಕೊಚ್ಚೆ ಎಬ್ಬಿಸಿದೆ.

ಕಾರಿಳಿದವರೆ ಜಿಟಿ ಜಿಟಿ ಮಳೆಯಲ್ಲೇ ರಾಮಲಲ್ಲಾನ ನೋಡಲು ದೌಡಾಯಿಸಿದೆವು. ಹೋಗುವಾಗ ಬರಿಗೈಯಲ್ಲಿ ಹೋಗಬೇಕು. ಮೊಬೈಲ್ ಇನ್ನಿತರ ವಸ್ತುಗಳನ್ನು ಗೇಟಿನ ಹತ್ತಿರ ಇರುವ ಲಾಕರ್ ನಲ್ಲಿ ಇಟ್ಟು ಹೋಗಬೇಕು. ಸ್ವಲ್ಪ ದೂರ ಸೈಕಲ್ ರಿಕ್ಷಾದಲ್ಲಿ ಸಾಗಿ ಸುಮಾರು ಒಂದು ಕೀ.ಮೀ. ಬಿರು ನಡಿಗೆಯಲ್ಲಿ ಸಾಗಿದಾಗ “ಗೇಟ್ ಬಂದಾಗಿದೆ ಮಧ್ಯಾಹ್ನ ಎರಡು ಗಂಟೆಗೆಯಿಂದ ಸಾಯಂಕಾಲ ಆರು ಗಂಟೆಯವರೆಗೆ ತೆರೆದಿರುತ್ತದೆ” ಎಂಬ ಮಾಹಿತಿ ಕೊಟ್ಟರು ಅಲ್ಲಿಯ ಪೋಲಿಸ್ ಸಿಬ್ಬಂದಿ. ತುಂಬಾ ತುಂಬಾ ನಿರಾಸೆಯಾಯಿತು. ಸರಿ ಇಲ್ಲಿ ಅಷ್ಟು ಹೊತ್ತು ಕಾಯೋದ್ಯಾಕೆ? ಸುತ್ತಮುತ್ತಲಿನ ಪ್ರದೇಶ ವೀಕ್ಷಣೆ ಮಾಡಿ ಪುನಃ ಇಲ್ಲಿಗೆ ಬರೋಣವೆಂದು ನಮ್ಮ ಕಾರು ನಿಂತಲ್ಲಿಗೆ ಬಂದು ಡ್ರೈವರ್ ಮೇಲೆ ಸ್ವಲ್ಪ ರೇಗಾಡಿದ್ದೂ ಆಯಿತು. ಇನ್ನು ಎರಡು ಗಂಟೆ ಸಮಯವಿದೆ. ಇಲ್ಲಿ ನೋಡುವಂತಹ ಸ್ಥಳ ವೀಕ್ಷಣೆ ಮಾಡಿ ಬರೋಣವೆಂದು ಡ್ರೈವರ್ಗೆ ಹೇಳಿದೆವು.

ಮೊದಲು ಸರಯೂ ನದಿಗೆ ಹೋಗೋಣ ಎಂದು ನಮ್ಮನ್ನು ಕರೆದುಕೊಂಡು ಹೊರಟರು. ಸುಮಾರು ನೂರು ಅಡಿ ಹಿಂದೆಯೇ ನಿಲ್ಲಿಸಿ ಹೋಗಿ ಬನ್ನಿ ಎಂದಾಗ ಮಳೆಯಲ್ಲಿ ಆಗಲೇ ಒದ್ದೆಯಾದ ನಾವು ಮತ್ತೆ ನೆನೆಯುತ್ತ ನದಿ ದಡಕ್ಕೆ ಬಂದರೆ ಜೋರಾಯಿತು ಮಳೆ.

ಅಲ್ಲಲ್ಲಿ ನಿಂತ ತರಾವರಿ ತಿಂಡಿಯ ಗಾಡಿಗಳು ಟಾರ್ಪಾಲ್ ರಕ್ಷಣೆ ಪಡೆದಿದ್ದವು. ನಾವೂ ಅಲ್ಲೇ ಸಂದಿಯಲ್ಲಿ ತೂರಿಕೊಂಡು ನಿಂತು ನದಿಯನ್ನು ದೂರದಿಂದಲೇ ನೋಡುತ್ತಿರುವಾಗ ದಡದಲ್ಲಿ ಒಂದಷ್ಟು ಕೆಂಪು ಟಾರ್ಪಾಲ್ ಹೊದ್ದ ಚಿಕ್ಕ ಚಿಕ್ಕ ಟೆಂಟಗಳಲ್ಲಿ ಪಿತೃ ಕಾರ್ಯ ನಡೆಯುತ್ತಿತ್ತು ಮರದ ಬೇಂಚ್ಗಳು ಟೇಬಲ್ಗಳು ಆ ನೀರಲ್ಲಿ. ಗಂಗಾ ನದಿ ಅಷ್ಟು ತುಂಬಿ ಹರಿಯುತ್ತಿದ್ದರೂ ಈ ನದಿ ಮಾತ್ರ ಶಾಂತವಾಗಿ ದಡದ ಮೆಟ್ಟಿಲುಗಳ ಮೇಲೆ ಬಂದಿರಲಿಲ್ಲ.

ದಡದಲ್ಲಿ ಜನರನ್ನು ವಿಹಾರಕ್ಕೆ ಕರೆದೊಯ್ಯುವ ದೋಣಿಗಳು ಅಂದವಾಗಿ ಶೃಂಗಾರಗೊಂಡು ನಿಂತಿದ್ದನ್ನು ನೋಡಿ ಹತ್ತಿರದಿಂದ ನೋಡಲು ಆ ಮಳೆಯಲ್ಲಿಯೇ ದೋಣಿಯತ್ತ ಸಾಗಿದೆ . ದೋಣಿಯವನು ವಿಹರಿಸಲು ಬಂದೆ ಎಂದು ತಪ್ಪಾಗಿ ಭಾವಿಸಿ ಕಟ್ಟಿದ ಹಗ್ಗ ಬಿಚ್ಚಲು ಅಣಿಯಾದ. ನಾನು ಬೇಡಾ ಅಂದಿದ್ದು ನಿರಾಸೆಯಾದರೂ ಕ್ಲಿಕ್ ತೆಗೆಯಲು ಖುಷಿಯಿಂದ ಒಪ್ಪಿದ. ಆ ಮಳೆಯಲ್ಲಿ ಆ ನೀರಲ್ಲಿ ನಿಂತು ಇಡೀ ದಿನ ಜನರನ್ನು ನಿರೀಕ್ಷೆ ಮಾಡೋದು ಎಷ್ಟು ಕಷ್ಟ ಪಾಪ ಅನ್ನಿಸಿತು. ಆದರೆ ದೋಣಿ ಏರಲು ಧೈರ್ಯ ಬರಲಿಲ್ಲ. ಜೊತೆಗಿದ್ದವರೂ ಬೇಡಾ ಬೇಡಾ ಎಂದಿದ್ದರಿಂದ ಶೃಂಗಾರದ ದೋಣಿ ಕ್ಲಿಕ್ಕಿಸಿಕೊಂಡು ಬಂದೆ.

ಬರುವಾಗ ಟಾರ್ಪಾಲ್ ನೆರಳಲ್ಲಿ ಪಿತೃಕಾರ್ಯ ಮಾಡುತ್ತಿದ್ದವರನ್ನು ಗಮನಿಸಲಾಗಿ ಒಂದೆರಡು ಹಸುಗಳೂ ಆ ಮಳೆಯಲ್ಲಿ ಆ ನೀರಲ್ಲಿ ಎಜಮಾನನ ಅಣತಿಯಂತೆ ನಡುಗುತ್ತ ಗತಿಯಿಲ್ಲದೇ ನಿಂತಿದ್ದು ಯಾಕಪ್ಪಾ ಇವುಗಳಿಗೆ ಈ ಶಿಕ್ಷೆ? ಮಾನವಾ ನಿನಗೆ ಬೇಕಾಗಿದ್ದು ನೀ ಮಾಡಿಕೊ,ಈ ಮೂಕ ಪ್ರಾಣಿಗಳನ್ನೇಕೆ ಬಳಸಿಕೊಳ್ಳುತ್ತಿರುವೆ?ಎಂದು ಕೇಳಿತು ಮನಸ್ಸು. ಆದರೆ ನನ್ನ ಮಾತೂ ಆ ಮೂಕ ಪ್ರಾಣಿಗಳಂತೆ ಮೂಕವಾಯಿತು.

ದಡದಲ್ಲಿರುವ ಮುಚ್ಚಿದ ತಿಂಡಿ ಗಾಡಿ ಟಾರ್ಪಾಲ್ ತೆಗೆಸಿ ಎಲ್ಲರೂ ಒಂದಷ್ಟು ಅರಳು ಹಲವಾ,ಕಳ್ಳೆಕಾಯಿ ಚಿಕ್ಕಿ ಖರೀದಿಸಿದ್ದಾಯ್ತು. ಥಂಡಿಯಾದ ದೇಹಕ್ಕೆ ಬಿಸಿ ಬಿಸಿ ಚಹಾ ಬೇಕೆನಿಸಿ ಜೊತೆಗಿದ್ದವರು ಯಾರೂ ಬಾರದಾಗ ನಾನೊಬ್ಬಳೇ ಹೋಗಿ ಹತ್ತಿರದಲ್ಲಿರೊ ಚಾ ಅಂಗಡಿಯಲ್ಲಿ ಅಲ್ಲಿಯ ಕರಿದ ತಿಂಡಿ ಜೊತೆಗೆ ಚಾ ಕುಡಿದು ಉಳಿದ ಸ್ಥಳಗಳನ್ನು ವೀಕ್ಷಿಸಲು ಹೊರಟೆ ಅವರೊಂದಿಗೆ. ಸದ್ಯ ಮಳೆ ನಿಂತಿತ್ತು.

ಕನಕ ಭವನ ;

ಸೋನೆ-ಕಾ-ಘರ್ ಎಂದು ಕರೆಯಲ್ಪಡುವ ಕನಕ ಭವನ, ರಾಮ ಮತ್ತು ಸೀತೆ ದೇವಿಯ ಚಿನ್ನದ ಕಿರೀಟಗಳನ್ನು ಧರಿಸಿರುವ ಮೂರ್ತಿಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದೆ.

ಹನುಮಾನ್ ಗರ್ಹಿ ;

ಹನುಮಾನ್ ಗರ್ಹಿ ಹನುಮನಿಗೆ ಅರ್ಪಿತವಾದ ದೇವಾಲಯವಾಗಿದೆ. 70 ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ಮುಖ್ಯ ಹನುಮಾನ್ ದೇವಸ್ಥಾನವನ್ನು ತಲುಪಬಹುದು. ರಾಮ ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಶ್ರೀ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಈ ದೇವಾಲಯದ ಭೂಮಿ ಅವಧ್ ನವಾಬನಿಗೆ ಸೇರಿತ್ತು, ಅವರು ದೇವಾಲಯವನ್ನು ನಿರ್ಮಿಸಲು ದಾನ ಮಾಡಿದರು. ಈ ದೇವಾಲಯವನ್ನು ನವಾಬ್ 10 ನೇ ಶತಮಾನದಲ್ಲಿ ನಿರ್ಮಿಸಿದ.

ಗುಲಾಬ್ ಬರಿ ;

ಗುಲಾಬ್ ಬರಿಯು ಶುಜಾ-ಉದ್-ದೌಲಾ ಸಮಾಧಿಯ ಸುತ್ತಲೂ ವ್ಯಾಪಿಸಿರುವ ಗುಲಾಬಿ ಉದ್ಯಾನವನವು ವಿವಿಧ ವಿಲಕ್ಷಣ ಗುಲಾಬಿಗಳನ್ನು ಆಯೋಜಿಸುತ್ತದೆ. ಗುಲಾಬ್ ಬರಿಯು ಆವರಣ ಗೋಡೆಯಿಂದ ಆವೃತವಾಗಿದೆ, ಇದನ್ನು ಲಖೌರಿ ಇಟ್ಟಿಗೆಗಳಿಂದ ಸುಣ್ಣದಿಂದ ಪ್ಲ್ಯಾಸ್ಟೆಡ್ ಮಾಡಲಾಗಿದೆ ಮತ್ತು ಪ್ಲ್ಯಾಸ್ಟರ್ ಮೋಲ್ಡಿಂಗ್‌ಗಳಿಂದ ಅಲಂಕರಿಸಲಾಗಿದೆ. ಈ ಆವರಣದಲ್ಲಿ ಶುಜಾ-ಉದ್-ದೌಲಾ ಸಮಾಧಿ ಜೊತೆಗೆ ಮಸೀದಿ ಇಮಾಂಬರಾ, ಶಾಹಿ ಹಮ್ಮಾಮ್, ಬಾರದಾರಿ ಮತ್ತು ತ್ರಿವಳಿ ಕಮಾನಿನ ಗೇಟ್‌ವೇಗಳ ಮೂಲಕ ಸಮೀಪವಿರುವ ಬಾವಿ ಇದೆ.

ತ್ರೇತ ಕೆ ಠಾಕೂರ್;

ಈ ಸ್ಥಳದಲ್ಲಿ ಭಗವಾನ್ ರಾಮನು ಅಶ್ವಗಂಧ ಯಜ್ಞವನ್ನು ಮಾಡಿದನೆಂದು ದಂತಕಥೆ ಹೇಳುತ್ತದೆ. ಈ ಸ್ಥಳದಲ್ಲಿ ರಾಮ, ಲಕ್ಷ್ಮಣ, ಸೀತಾ, ಭರತ, ಶತ್ರುಘ್ನ ಮುಂತಾದ ವಿಗ್ರಹಗಳೊಂದಿಗೆ ಹೊಸ ದೇವಾಲಯವನ್ನು ನಿರ್ಮಿಸಲಾಗಿದೆ. ಏಕ ಕಪ್ಪು ಮರಳುಗಲ್ಲಿನಿಂದ ಕೆತ್ತಿದ ಮೂಲ ವಿಗ್ರಹಗಳನ್ನು ದೇವಾಲಯವು ಪುನಃಸ್ಥಾಪಿಸಿತು, ಅವುಗಳು ಕಾಲಾನಂತರದಲ್ಲಿ ನಾಶವಾಗಿದ್ದವು.

ಸೀತಾ ಕಿ ರಸೋಯಿ ;

ಅಯೋಧ್ಯೆಯ ರಾಜ್‌ಕೋಟ್‌ನಲ್ಲಿರುವ ರಾಮ ಜನ್ಮಸ್ಥಳದ ವಾಯುವ್ಯ ದಿಕ್ಕಿನಲ್ಲಿರುವ ಸೀತಾ ಕಿ ರಸೋಯಿ ಸೀತಾ ದೇವಿಯ ರಾಜಮನೆತನದ ಅಡಿಗೆಮನೆಯಾಗಿದೆ. ದೇವಾಲಯವು ಪ್ರಾಚೀನ ಅಡುಗೆಮನೆಯ ಮಾದರಿ ಆವೃತ್ತಿಯನ್ನು ಒಂದು ಮೂಲೆಯಲ್ಲಿ ಪುನರಾವರ್ತಿಸುತ್ತದೆ, ಅಣಕು ಪಾತ್ರೆಗಳು, ರೋಲಿಂಗ್ ಪ್ಲೇಟ್ ಮತ್ತು ರೋಲಿಂಗ್ ಪಿನ್ ಇದೆ. ದೇವಾಲಯದ ಆವರಣದ ಇನ್ನೊಂದು ತುದಿಯಲ್ಲಿ ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನ ಈ ನಾಲ್ಕು ಸಹೋದರರ ವಿಗ್ರಹಗಳಿವೆ, ಮತ್ತು ಅವರ ಪತ್ನಿಯರಾದ ಸೀತಾ, ಊರ್ಮಿಳಾ, ಮಾಂಡವಿ ಮತ್ತು ಶ್ರುತಾಕೀರ್ತಿಯ ವಿಗ್ರಹವಿದೆ. ಸೀತೆಯನ್ನು ದೇವತೆ ಅನ್ನಪೂರ್ಣ ಅಥವಾ ಆಹಾರ ದೇವತೆ ಎಂದೂ ಕರೆಯುತ್ತಾರೆ, ಆದ್ದರಿಂದ, ಅಡಿಗೆ ಸಾಂಕೇತಿಕ ಮೌಲ್ಯವನ್ನು ಹೊಂದಿದೆ.

ರಾಮ ಕಥಾ ಪಾರ್ಕ್ ;

ತೆರೆದ ಗಾಳಿ ಮಂದಿರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕ ಆಸ್ತಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ರಾಮ ಕಥಾ ಪಾರ್ಕ್ ಅನ್ನು ಒಂದೆರಡು ವರ್ಷಗಳ ಹಿಂದೆ ನಿರ್ಮಿಸಲಾಯಿತು. ಸುಂದರವಾದ ಉದ್ಯಾನವನವು ವಿಶಾಲವಾದ ಭೂಮಿಯಲ್ಲಿ ವ್ಯಾಪಿಸಿದೆ ಮತ್ತು ಭಕ್ತಿ ಕಾರ್ಯಕ್ರಮಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳಿಗೆ ಹೆಚ್ಚು ಪ್ರಿಯವಾದ ಸ್ಥಳವಾಗಿದೆ.

ಪರ್ಲ್ ಪ್ಯಾಲೇಸ್ ;

‘ಪರ್ಲ್ ಪ್ಯಾಲೇಸ್’ ಎಂದು ಜನಪ್ರಿಯವಾಗಿರುವ ಮೋತಿ ಮಹಲ್ ಫೈಜಾಬಾದ್‌ನ ಅಯೋಧ್ಯೆ ಪಟ್ಟಣದಿಂದ ಕೆಲವು ಕಿಲೋಮೀಟರ್ ದೂರದಲ್ಲಿದೆ. ಕ್ರಿ.ಶ 1743 ರಲ್ಲಿ ನಿರ್ಮಿಸಲಾದ ಈ ಅರಮನೆಯು ಅಂದಿನ ನವಾಬ್ ಶುಜಾ-ಉದ್-ದೌಲಾ ಅವರ ಪತ್ನಿ ರಾಣಿ ಉನ್ಮಾತ್‌ಜೋಹರಾ ಬಾನು ಅವರ ನಿವಾಸವಾಗಿತ್ತು.

ಗುಪ್ತಾರ್ ಘಾಟ್ ;

ಅಯೋಧ್ಯೆಯ ಬಳಿಯ ಫೈಜಾಬಾದ್‌ನಲ್ಲಿ ಸರಯು ನದಿಯ ದಡದಲ್ಲಿರುವ ಗುಪ್ತಾರ್ ಘಾಟ್ ಹಿಂದೂಗಳಲ್ಲಿ ಪೂಜ್ಯ ತಾಣವಾಗಿದೆ. ಹಿಂದೂ ದೇವರು ಶ್ರೀ ರಾಮ್ ಇಲ್ಲಿ ಧ್ಯಾನ ಮಾಡಿ ಈ ನದಿಗಳ ನೀರಿನಲ್ಲಿ ‘ಜಲ ಸಮಾಧಿ’ ತೆಗೆದುಕೊಂಡರು ಎಂದು ನಂಬಲಾಗಿದೆ.

ದಶರಥ ಭವನ ;

ನಗರದ ಹೃದಯಭಾಗದಲ್ಲಿ, ಅಯೋಧ್ಯೆಯ ಫೈಜಾಬಾದ್‌ನ ರಾಮ್‌ಕೋಟ್‌ನಲ್ಲಿದೆ; ದಶರಥ ಭವನವು ರಾಜ ದಶರಥ ಅವರ ಮೂಲ ನಿವಾಸ- ಅಯೋಧ್ಯೆಯ ಆಡಳಿತಗಾರ ಮತ್ತು ಭಗವಾನ್ ಶ್ರೀ ರಾಮನ ತಂದೆ ದಶರಥ ಮಹಲ್‌ನಲ್ಲಿ ರಾಜ ರಾಮನ ಭವ್ಯ ದೇವಾಲಯಗಳನ್ನು ಹೊಂದಿದೆ.

ರಾಮ ಜನ್ಮಭೂಮಿ ಟ್ರಸ್ಟ್ ;

ಇಲ್ಲಿಗೆ ತಲುಪಿದಾಗ ಮಳೆಯೂ ಕಡಿಮೆ ಆಗಿತ್ತು ಹಾಗೂ ಅಷ್ಟೇ ಜನಸಂದಣಿಯೂ ಇತ್ತು. ಇಲ್ಲಿ ರಾಮ ಮಂದಿರದ ಪ್ರತಿಕೃತಿಯನ್ನು ನಿರ್ಮಿಸಿ ಇಟ್ಟಿದ್ದಾರೆ.

ಒಳಗಡೆ ಹೋಗುತ್ತಿದ್ದಂತೆ ರಾಮ,ಲಕ್ಷ್ಮಣ,ಸೀತೆಯರ ಸುಂದರ ಮೂರ್ತಿ ಎದುರುಗಡೆ ರಾರಾಜಿಸುತ್ತದೆ. ಭಕ್ತಿಪೂರ್ವಕ ನಮನ ತಾನಾಗೆ ಉಕ್ಕುತ್ತದೆ. ಅಷ್ಟು ಚಂದದ ಮೂರ್ತಿಗಳು ಹಾಗೆ ದ್ವಾರದ ಪಕ್ಕದಲ್ಲೇ ಇರುವ ಕನಸಿನ ರಾಮಲಲ್ಲಾನ ದಿವ್ಯ ದೇಗುಲದ ಪ್ರತಿಕೃತಿ ಎಲ್ಲರ ಬಾಯಲ್ಲೂ ಜೈ ಶ್ರೀ ರಾಮ್ ಮಂತ್ರ.

ಅಲ್ಲಿಯೇ ಕುಳಿತ ರಾಮಭಕ್ತರ ಭಜನೆ ನಾವೂ ಅವರೊಂದಿಗೆ ತಾಳ ಹಾಕುವಂತೆ ಮಾಡುತ್ತದೆ. ಪಕ್ಕದ ರೂಮಲ್ಲಿ ಕುಳಿತ ಒಬ್ಬ ಸಾಧು ಮೌನವಹಿಸಿ ಕಣ್ಮುಚ್ಚಿ ಕುಳಿತಿದ್ದು ಬಂದವರೆಲ್ಲ ಪಾದ ಮುಟ್ಟಿ ನಮಸ್ಕರಿಸುತ್ತಿದ್ದು ನಾನೂ ಹೋಗಿ ನಮಸ್ಕರಿಸಿದೆ. ಇವರು ರಾಮ ಮಂದಿರ ಕಟ್ಟಲು ಅನುಮತಿ ಸಿಗುವವರೆಗೂ ಮೌನವೃತದಿಂದಿರುವುದಾಗಿ ಪಣತೊಟ್ಟ ವಿಷಯ ಆಮೇಲೆ ಗೊತ್ತಾಯಿತು.

ಅಯೋಧ್ಯೆಯಲ್ಲಿ ಎಲ್ಲಿ ನೋಡಿದರಲ್ಲಿ ಹನುಮಾನ್ ದೇವಾಸ್ಥನಗಳು ಕಾಣ ಸಿಗುತ್ತವೆ. ಈ ಸ್ಥಳ ನೋಡಲು ಒಂದು ದಿನ ಪೂರ್ತಿ ಬೇಕು. ನಮಗೆ ಸಮಯಾವಕಾಶ ಕಡಿಮೆ ಇದ್ದಿದ್ದರಿಂದ ಕೆಲವು ಸ್ಥಳಗಳನ್ನು ಮಾತ್ರ ನೋಡಲು ಸಾಧ್ಯವಾಯಿತು.

ಹೊಟ್ಟೆ ತಾಳ ಹಾಕುತ್ತಿದ್ದರೂ ರಾಮಲಲ್ಲಾನ ನೋಡಲು ಮಳೆಯಲ್ಲೇ ಸುಮಾರು ಒಂದೂವರೆ ಕಿ.ಮೀ.ದೂರದವರೆಗೂ ನಡೆದುಕೊಂಡು ಹೋಗಿ ಗೇಟಿನ ಮುಂದೆ ನಿಂತೆವು. ಆಗಲೇ ಒಂದಷ್ಟು ಜನ ಸೇರಿದ್ದರು. ರಸ್ತೆಯಲ್ಲೇ ನಿರ್ಮಿಸಿರುವ ಗೇಟಲ್ಲಿ ಎರಡು ಬಾಗಿಲಿರುವ ಒಂದು ಕಬ್ಬಿಣದ ಟೆಂಟ್. ಎರಡು ಗಂಟೆಗೆ ಒಳಗೆ ಬಿಡೋದು. ನಾಲ್ಕು ಜನ ಮಹಿಳಾ ಪೋಲೀಸರ ಕಾವಲಿತ್ತು. ಮಹಿಳೆಯರಿಗೆ ಮಾತ್ರ ಇಲ್ಲಿ ಪ್ರವೇಶವಕಾಶ. ಪುರುಷರಿಗೆ ಅನತಿ ದೂರದಲ್ಲಿ ಇನ್ನೊಂದು ಗೇಟ್. ಸಮಯ ಹತ್ತಿರವಾಗುತ್ತಿದ್ದಂತೆ ನೂಕುನುಗ್ಗಲು. ಯಾವೋಬ್ಬ ಮಹಿಳಾ ಪೋಲಿಸ್ ಟೆಂಟಿಂದ ಹೊರಗೆ ಬಂದಿಲ್ಲ. ಸೇರಿದ್ದ ಮಹಿಳೆಯರಲ್ಲೇ ಒಬ್ಬರು ಎಲ್ಲರನ್ನೂ ಕ್ಯೂನಲ್ಲಿ ನಿಲ್ಲಿಸಲು ಹರಸಾಹಸ ಪಡುತ್ತಿದ್ದರು. ಈ ಗಲಾಟೆ ನೋಡಿ ನಾನು ಟೆಂಟಿನ ಪಕ್ಕದ ಬಾಗಿಲಲ್ಲಿ ನಿಂತೆ. ಬಾಗಿಲು ತೆಗೆದಿದ್ದು ಮೊದಲು ನಾನು ನಿಂತಿರುವ ಕಡೆ. ಮಹಿಳೆಯರು ನುಗ್ಗುತ್ತಿದ್ದಂತೆ ನಾನು ಮುಂದೆ ತಳ್ಳಲ್ಪಟ್ಟೆ. ಇದನ್ನು ಕಂಡ ಮಹಿಳಾ ಪೋಲೀಸ್ “ಆಗೆ ಮತ್ ಆವೋ. ತಪ್ಪಡ್ ಮಾರ್ತಾ” ಎಂದು ಗದರಿಸಿದಾಗ ಕೋಪ ಬಂದರೂ ಸೈರಿಸಿಕೊಂಡು ಇರುವ ವಿಷಯ ಹೇಳಿದೆ. ಇನ್ನೊಬ್ಬಳು ತನ್ನ ಮೊಬೈಲ್ ನಲ್ಲಿ ಹೊರಗಿರುವ ಜನರ ಫೋಟೋ ತೆಗೆಯುತ್ತ ನಗುತ್ತಿರುವುದನ್ನು ಕಂಡು ಮೈಯೆಲ್ಲಾ ಉರಿದೋಯ್ತು.

ಸರಿಯಾದ ಸಮಯಕ್ಕೆ ಬಾಗಿಲು ತೆಗೆದು ಒಬ್ಬೊಬ್ಬರನ್ನೇ ಪೂರ್ತಿ ಪರಿಶೀಲಿಸಿದ ನಂತರ ಇನ್ನೊಂದು ಗೇಟಿಗೆ ಕಳಿಸುತ್ತಾರೆ. ಮೊದಲು ಪರಿಶೀಲನೆಗೆ ಒಳಪಟ್ಟು ಹೊರಬಂದ ನಾನು ಸಿಕ್ಕಿದ್ದೇ ಚಾನ್ಸ್ ನಾನೊಬ್ಬಳೇ ಹೊರಟೆ ರಾಮಲಲ್ಲಾನ ನೋಡಲು. ಮಳೆ ಸುರಿತಾನೇ ಇತ್ತು. ಅಲ್ಲಿ ನಿಂತ ಪೋಲೀಸರು ದಾರಿ ತೋರಿಸುತ್ತಿದ್ದರು. ಅವರಿಗೆ ವಂದನೆ ಸಲ್ಲಿಸುತ್ತ ದೊಡ್ಡ ಮುಖ್ಯ ದ್ವಾರದ ಒಳಗೆ ಪ್ರವೇಶಿಸುತ್ತಿದ್ದಂತೆ ಇನ್ನೊಂದು ಚೆಕಿಂಗ್ ಪಾಯಿಂಟ್ ಎದುರಾಯಿತು. ಇಲ್ಲಿ ಅಡಿಯಿಂದ ಮುಡಿಯವರೆಗೂ ಮಹಿಳಾ ಪೋಲೀಸರು ಪರಿಶೀಲಿಸಿದ್ದಲ್ಲದೆ ಮುಡಿದ ದೇವರ ಪ್ರಸಾದದ ಹೂವನ್ನೂ ಕಿತ್ತು ಹಾಕಿದರು. ಅಕ್ಕ ಪಕ್ಕ ಬಲವಾದ ಗ್ರಿಲ್ ಮದ್ಯೆ ಸಾಗುತ್ತಿದ್ದಂತೆ ಇನ್ನೂ ಎಷ್ಟು ದೂರ ರಾಮನ ಗುಡಿ ಅನಿಸಿತು. ಒಟ್ಟೂ ನಾಲ್ಕು ಕಡೆ ಭದ್ರತಾ ಸಿಬ್ಬಂದಿಗಳ ಪರಿಶೀಲನೆ ನಡೆಯಿತು. ಸಶಸ್ತ್ರ ಕಮಾಂಡೋಗಳು ಒಳಗಡೆ ಅಲ್ಲಲ್ಲಿ ಗಿಡಗಳ ಮೇಲೆ ಬಂಡೆಗಳ ಮೇಲೆ ಹತ್ತಿ ಗನ್ ಹಿಡಿದು ಪಹರೆ ಕಾಯುತ್ತಿದ್ದರು.

“ಯೆಹೀ ರಾಮ್ ಲಲ್ಲಾ, ಠೆಹೆರೋ…ದೇಕೋ ಜೀ…” ಈ ಧ್ವನಿಗೆ ಗಕ್ಕನೆ ನಿಂತೆ. ಸುತ್ತಲೂ ಕಣ್ಣಾಯಿಸಿದರೆ ಏನೂ ಕಾಣದು. ಸುಮಾರು ಹದಿನೈದು ಅಡಿ ದೂರದಲ್ಲಿ ಪೇಲವ ಬಣ್ಣದ ಹಳೆಯ ಟಾರ್ಪಾಲ್ ಟೆಂಟ್. ಒಳಗೆ ಒಂದು ಪುಟ್ಟದಾದ ಮೂರ್ತಿ ಲೈಟಿನ ಬೆಳಕಲ್ಲಿ ಜಗಮಗಿಸುತ್ತಿದೆ! ಇದಾ…..!!??? ಒಮ್ಮೆ ದಂಗಾದೆ ಶ್ರೀ ರಾಮನಿಗಾದ ಸ್ಥಿತಿ ಕಂಡು. ನಿಜಕ್ಕೂ ಒಂದು ಕ್ಷಣ ಅತ್ತುಬಿಟ್ಟೆ. ಜೋರಾಗಿ ರಾಮರಕ್ಷಾ ಸ್ತೋತ್ರ ಜಪಿಸುತ್ತ ಪ್ರದಕ್ಷಿಣೆ ನಮಸ್ಕಾರ ಹಾಕಿ ಸುಮಾರು ಹದಿನೈದು ನಿಮಿಷ ಅಲ್ಲೇ ಇದ್ದೆ. ಭಕ್ತರ ಸಾಲು ಬರಲು ಶುರುವಾಯಿತು. ಪ್ರಸಾದ ಸ್ವೀಕರಿಸಿ ಕಾಣಿಕೆ ಹಾಕಿ ದುಃಖತಪ್ತ ಮನಸ್ಸಿನಿಂದ ಹೊರಟೆ. ಹೋಗುವಾಗ ಇರುವ ಕಾತರ,ಉತ್ಸಾಹ ಜರ್ರೆಂದು ಇಳಿದೋಗಿತ್ತು. ಶ್ರೀರಾಮಚಂದ್ರನಿಗೆ ಇಂತಹ ಜೋಪಡಿಯಾ? ಅಯ್ಯೋ ದೇವರೆ….ನಾವೆಂತಹ ಮನೆಯಲ್ಲಿ ವಾಸಿಸುತ್ತಿದ್ದೇವೆ. ಪ್ರಭು ಶ್ರೀ ರಾಮಚಂದ್ರನಿಗೆ?? ನಿಜವಾಗಿಯೂ ಈ ಸ್ಥಳದಲ್ಲಿ ಒಂದು ಮಂದಿರ ನಿರ್ಮಾಣ ಆಗಲೇ ಬೇಕು. ಎಂತಹಾ ಅನ್ಯಾಯವಿದು. ಇಷ್ಟೊಂದು ಕಳಪೆ ಅವನಿರುವ ಜಾಗ ಅಂತ ಕನಸಿನಲ್ಲಿಯೂ ಊಹಿಸಿರಲಿಲ್ಲ. ಬಹಳ ಬಹಳ ಬೇಜಾರಾಗಿತ್ತು. ಆದಷ್ಟು ಬೇಗ ಸಮಸ್ಯೆ ಬಗೆಹರಿದು ಮಂದಿರ ನಿರ್ಮಾಣ ಆಗಲಿ. ಮತ್ತೊಮ್ಮೆ ಅಯೋಧ್ಯೆಗೆ ಬರಲೇಬೇಕು. ಗದ್ದುಗೆಯೇರಿ ಭವ್ಯವಾದ ಮಂದಿರದಲ್ಲಿ ಕುಳಿತ ಶ್ರೀರಾಮನನ್ನು ನೋಡಲೇಬೇಕು ಎಂದು ಮನಸ್ಸಿನಲ್ಲಿ ನಿರ್ಧರಿಸಿದೆ.

ಸ್ವಲ್ಪ ದೂರ ನಡೆಯುವಷ್ಟರಲ್ಲಿ ನಿರ್ಗಮನದ ಗೇಟ್ ಸಿಗುತ್ತದೆ. ಅದು ಒಂದು ರಸ್ತೆಗೆ ಸೇರುವ ಜಾಗ. ಅಲ್ಲಿ ಕುಳಿತುಕೊಳ್ಳಲು ಕಲ್ಲಿನ ಬೇಂಚ್ ಗಳು ಇವೆ. ಮಂಗಗಳು ತುಂಬಾ ಇವೆ. ಅಕ್ಕಪಕ್ಕ ಚಂದದ ಹೂವಿನ ಗಿಡಗಳು ಬೆಳೆದಿವೆ. ಒಂದು ಹೂವುನ್ನು ಹತ್ತಿರದಿಂದ ನೋಡಲು ಹೋದೆ. ಆಗಲೇ ಪೋಲೀಸ್ ಹಾಜರ್. ಕಲ್ಲು ಬೇಂಚಿನ ಮೇಲೆ ನಮ್ಮವರೆಲ್ಲರೂ ಬರುವವರೆಗೆ ಕಾಯುತ್ತ ಕೂತಿದ್ದೆ. ಜೊತೆಗೆ ಬಂದವರಲ್ಲೊಬ್ಬರು ” ಎಲ್ಲಿದೆ ಇಲ್ಲಿ ಶ್ರೀರಾಮ ಚಂದ್ರನ ಮಂದಿರ ?”ಅಂದಾಗ ಗೊತ್ತಾಯಿತು ಬೆಸ್ತು ಬಿದ್ದಿದ್ದು.

ಹೋಗುವಾಗ ಒಂದು ದಾರಿ ಬರುವಾಗ ಇನ್ನೊಂದು ದಾರಿ. ಒಟ್ಟಾರೆ ಸುಮಾರು ಮೂರು ಕಿ.ಮೀ. ನಡೆಯಲೇಬೇಕು ರಾಮನ ದರ್ಶನಕ್ಕೆ. ಆಯಕಟ್ಟಿನ ಸ್ಥಳದಿಂದ ಹೊರಗೆ ಬಂದ ಮೇಲೆ ಇನ್ನೊಂದು ದಾರಿಯ ಮೂಲಕ ಬಂದ ದಾರಿಯನ್ನು ಸೇರಿಕೊಂಡೆವು. ಇಲ್ಲಿಂದ ಮೂರು ಕಿ.ಮೀ.ದೂರದಲ್ಲಿರುವ ಕರಸೇವಕಪುರಲ್ಲಿ ಕಳೆದ ಮೂವತ್ತು ವರ್ಷಗಳಿಂದ ಶ್ರೀ ರಾಮ ಮಂದಿರ ಕಟ್ಟಲು ಕಲ್ಲಿನ ಕೆತ್ತನೆಗಳ ತಯಾರಿ ನಡೆಯುತ್ತಿರುವ ದೃಶ್ಯ ಮತ್ತು ಭಕ್ತರಿಂದ ದೇಣಿಗೆಯಾಗಿ ಬಂದ ಇಟ್ಟಿಗೆಗಳು ನೋಡಿಕೊಂಡು ಬರಲು ಸಾಧ್ಯವಾಗದೇ ನಿರಾಶೆಯಾಯಿತು. ದಾರಿಯ ಅಕ್ಕ ಪಕ್ಕದಲ್ಲಿ ಇರುವ ಫ್ಯಾನ್ಸಿ ಅಂಗಡಿಗಳಲ್ಲಿ ಒಂದಷ್ಟು ಸಾಮಾನು ಖರೀದಿಸಿ ಕಾರು ಏರಿ ದಾರಿಯ ಪಕ್ಕದಲ್ಲಿ ಸಿಕ್ಕ ಡಾಬಾದಲ್ಲಿ ಟೀ ಕುಡಿದು ಹೊರಟೆವು.

ಈ ದಿನದ ಪ್ರಯಾಣ ನಮಗೆಲ್ಲರಿಗೂ ನಿರೀಕ್ಷೆ ಹುಸಿ ಮಾಡಿತ್ತು ಅಷ್ಟೇ ಬೇಸರವೂ ಮನೆ ಮಾಡಿತ್ತು. ಕಾರಣ ವಾಪಸ್ ಬರುವಾಗ ಜೊತೆಗೆ ಬಂದವರಿಂದ ತಿಳಿದ ವಿಷಯ ರಾಮ ಜನ್ಮ ಭೂಮಿಗೆ ಹೋಗುವಾಗ ಮೊದಲ ಗೇಟಿನ ಕ್ಯೂನಲ್ಲಿ ಹಿಂದಿನಿಂದ ತಳ್ಳಿದ ನುಗ್ಗಾಟದಲ್ಲಿ ಆ ಮಹಿಳಾ ಪೋಲಿಸ್ ನಮ್ಮಲ್ಲೊಬ್ಬರಿಗೆ ವಿನಾಕಾರಣ ಕೆನ್ನೆಗೆ ಭಾರಿಸಿದ್ದು. ಹಾಗೂ ಇನ್ನೂ ಇಬ್ಬರಿಗೆ ಹೀಗೆ ಮಾಡಿದ್ದು ಎಷ್ಟು ಸರಿ? ಪರಸ್ಥಳದಿಂದ ಅದರಲ್ಲೂ ಭಾಷೆ ಬರದ ಅಮಾಯಕರ ಮೇಲೆ ಈ ರೀತಿ ದೌರ್ಜನ್ಯ! ಅಲ್ಲಿ ಬಂದ ಪ್ರತಿಯೊಬ್ಬರ ಬಾಯಲ್ಲೂ “ರಾಮ್ ಲಲ್ಲಾಕೀ ಜೈ! ಜೈ ಶ್ರೀ ರಾಮ್” ಇವಿಷ್ಟೇ ಮೊಳಗುತ್ತಿತ್ತು. ಅವನ ದರ್ಶನಕ್ಕೆ ತುದಿಗಾಲಿನಲ್ಲಿ ನಿಂತ ಭಕ್ತರದೇ ದಂಡು. ಆದರೆ ಬಂದ ಭಕ್ತರ ಬಗ್ಗೆ ಗೌರವೇ ಇರಲಿಲ್ಲ ಮೊದಲ ಗೇಟಿನ ಮಹಿಳಾ ಪೋಲೀಸರಲ್ಲಿ. ಇದು ನಿಜಕ್ಕೂ ಬಹಳ ಖೇದದ ಸಂಗತಿ.

ವಾಸ ಸ್ಥಳಕ್ಕೆ ಹಿಂದಿರುಗುವಾಗ ಕಾರು ನಿರ್ಮಾಣವಾಗುತ್ತಿರುವ ನಯಾಕಾಶಿಯನ್ನು ಪ್ರವೇಶಿಸಿತು.

ವಿಶಾಲವಾದ ಬೆಂಗಳೂರಿನ ರಿಂಗ್ ರೋಡನ್ನೂ ಮೀರಿಸುವ ಸುಸಜ್ಜಿತವಾದ ರಸ್ತೆಗಳು, ಸಾಲು ಸಾಲು ಬೀದಿ ದೀಪಗಳು ಸಮತಟ್ಟಾದ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಅಣಿಗೊಳ್ಳುತ್ತಿರುವ ಭೂಮಿ, ಇಡೀ ಕಾಶಿಯ ಚರಂಡಿ ನೀರಿನ ಶುದ್ಧೀಕರಣ ಘಟಕ ಇತ್ಯಾದಿ ನೋಡುತ್ತ ಬಂದೆವು. ಈಗಾಗಲೇ ಕಾಶಿ ವಿಶ್ವನಾಥ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು ಅಲ್ಲಿ ಭೂಮಿ ಕಳೆದುಕೊಂಡ ನಾಗರಿಕರಿಗೆ ಅವರ ಭೂಮಿಯ ಮೂರು ಪಟ್ಟು ಹಣ ಪರಿಹಾರ ರೂಪದಲ್ಲಿ ಕೊಟ್ಟು ಮನೆಗೊಬ್ಬರಿಗಂತೆ ಸರ್ಕಾರಿ ಕೆಲಸ ಕೊಡುವ ಕಾನೂನು ಜಾರಿಗೊಳಿಸಿರುವುದಾಗಿ ಮಾಹಿತಿ ದೊರೆಯಿತು. ಹಾಗೂ ಈಗ ಕಾಶಿಯಲ್ಲಿರುವ ವ್ಯಾಪಾರ ವಹಿವಾಟುಗಳನ್ನು ಈ ಸ್ಥಳಕ್ಕೆ ವರ್ಗಾಯಿಸುತ್ತಾರೆಂಬ ಮಾಹಿತಿಯೂ ದೊರೆಯಿತು. ಒಟ್ಟಿನಲ್ಲಿ ಕಾಶಿಯ ಸಂಪೂರ್ಣ ಚಿತ್ರಣ ಇನ್ನು ಕೆಲವು ವರ್ಷಗಳಲ್ಲಿ ಬದಲಾಗುತ್ತಿರುವುದು ಸಮಾಧಾನದ ವಿಷಯ. ಏಕೆಂದರೆ ಕಾಶಿ ಅವ್ಯವಸ್ಥೆಯ ಆಗರ ಅಂದರೂ ತಪ್ಪಾಗಲಾರದು.

ಮುಂದುವರಿಯುವುದು ಭಾಗ – 16ರಲ್ಲಿ.
12-7-2020. 8.21pm

ಭಂ ಭಂ ಬೋಲೆನಾಥ್

ಭಾಗ – 14

ಕಾಶಿಯ ಸುತ್ತಮುತ್ತಲಿನ ಸ್ಥಳ ವೀಕ್ಷಣೆ ;

ಬೆಳಗಿನ ತಿಂಡಿ ಮುಗಿಸಿ ಭಟ್ಟರು ಗೊತ್ತು ಮಾಡಿದ ಒಂದು ಆಟೋದಲ್ಲಿ ಕಾಶಿಯ ಸುತ್ತಮುತ್ತಲಿನ ಪ್ರಮುಖ ಸ್ಥಳಗಳನ್ನು ನೋಡಲು ಹತ್ತು ಗಂಟೆಗೆ ಹೊರಟೆವು. ಈ ಹಿಂದೆ ಕಾಶಿಗೆ ಬಂದಾಗ ಎಲ್ಲಾ ಸ್ಥಳಗಳನ್ನೂ ನೋಡಿದ್ದರೂ ಮತ್ತೆ ಮತ್ತೆ ನೋಡುವ ಕಾತುರವಂತೂ ಕಡಿಮೆ ಆಗುವುದೇ ಇಲ್ಲ ನೋಡಿ. ಹಾಗಿದೆ ಕಾಶಿ!

ಹೋಗುವ ದಾರಿಯುದ್ದಕ್ಕೂ ಕಾಶಿಯ ಇತಿಹಾಸ ಓದಿದ್ದು ಮನಸ್ಸನ್ನು ಕಾಡಲು ಶುರುವಾಯಿತು, ಅಷ್ಟೇ ಸಂಕಟವೂ ಆಯಿತು. ಜೊತೆಗಿರುವವರೊಂದಿಗೆ ಇದೇ ವಿಷಯ ಮಾತಾನಾಡುತ್ತ ದಾರಿ ಸಾಗುತ್ತಿತ್ತು.

ಇತಿಹಾಸ ಹೇಳುತ್ತದೆ ; ಕಾಶಿ 3500 ವರ್ಷಗಳ ಲಿಖಿತ ಇತಿಹಾಸವಿರುವ ಏಕಮಾತ್ರ ಪಟ್ಟಣವಾಗಿದೆ. ರಾಜಾ ಹರಿಶ್ಚಂದ್ರನು ತನ್ನ ಸಂಪೂರ್ಣ ರಾಜ್ಯವನ್ನು ವಿಶ್ವಾಮಿತ್ರರಿಗೆ ದಾನ ಮಾಡಿ, ಶಿವನ ನಾಡಾದ ಕಾಶಿಯಲ್ಲಿ ಆಶ್ರಯ ಪಡೆದನು.

ಕಾಶಿಯನ್ನು ವಿಷ್ಣು ಕಾಶಿ ಮತ್ತು ಶಿವ ಕಾಶಿ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮಣಿಕರ್ಣಿಕಾ ಘಾಟ್‌ನಿಂದ ಹಿಡಿದು ಆದಿ ಕೇಶವ ಘಾಟ್‌ವರೆಗೆ ವಿಷ್ಣು ಕಾಶಿ ಮತ್ತು ಮಣಿಕರ್ಣಿಕಾ ಘಾಟ್‌ನಿಂದ ಹಿಡಿದು ಅಸ್ಸಿ ಘಾಟ್‌ವರೆಗೆ ಶಿವ ಕಾಶಿ ಎಂದು ಹೇಳಲಾಗುತ್ತದೆ. ಗ್ರಂಥಗಳ ಪ್ರಕಾರ ಶಿವನ ವಿನಂತಿಯ ಮೇರೆಗೆ ವಿಷ್ಣು ಕಾಶಿಯನ್ನು ಶಿವನಿಗೆ ದಾನವಾಗಿ ನೀಡಿದ. ವಿಷ್ಣುವಿನಿಂದ ಶಿವನು ಕಾಶಿಯನ್ನು ಸ್ವೀಕರಿಸಿದ ನಂತರ ಅರ್ಧ ಭಾಗವನ್ನು ವಿಷ್ಣುವಿಗೇ ಹಿಂತಿರುಗಿ ದಾನವಾಗಿ ನೀಡಿದ ಎಂದು ಹೇಳಲಾಗುತ್ತದೆ.

ಮಹಾಭಾರತ ಕಾಲದಿಂದಲೇ ಇದ್ದ ಕಾಶಿ ಪದೇ ಪದೇ ಮುಸ್ಲಿಂ ದೊರೆಗಳ ದಾಳಿಗೆ ತುತ್ತಾಗಿದೆ. 1033ರಿಂದ 1669ವರರೆಗೆ ಈ ನಗರದ ಮೇಲೆ ಮುಸ್ಲಿಂ ದೊರೆಗಳ ಸತತ ದಾಳಿಗಳು ನಡೆದವು. 1211ರಲ್ಲಿ ಗುಜರಾತ್‍ನ ವ್ಯಾಪಾರಿಯು ಕಾಶಿಯನ್ನು ಪುನರ್ನಿಮಾಣಗೊಳಿಸಿದ. ಅಕ್ಬರ್‍ನ ಕಾಲದಲ್ಲಿ ರಾಜಾ ಮಾನ್ ಸಿಂಗ್ ಕಾಶಿಯನ್ನು ಮತ್ತೊಮ್ಮೆ ಕಟ್ಟಿದ. ರಾಜಾ ತೋದಾರ್ ಮಾಲ್ ಎಂಬಾತ ಅಕ್ಬರ್‍ನ ನಿಧಿಯಿಂದ 1585ರಲ್ಲಿ ಕಾಶಿಯನ್ನು ಮೊದಲೇ ಇದ್ದ ಸ್ಥಳದಲ್ಲಿ ನಿರ್ಮಿಸಿದನು. ಹೀಗೆ ಧ್ವಂಸವಾದಾಗಲೆಲ್ಲ ನಿರ್ಮಾಣವಾದ ಕಾಶಿ ಈಗ ತನ್ನ ಮೂಲ ಸ್ಥಳ ಕಳೆದುಕೊಂಡಿದೆ.

ಇದಲ್ಲದೇ ಔರಂಗಜೇಬನ ಕಾಲದಲ್ಲಿ ಹಿಂದೂ ಅರ್ಚಕರನ್ನು ಮತ್ತು ಮತಾಂತರಕ್ಕೆ ಒಪ್ಪದ ಹಿಂದೂ ನಾಗರಿಕರನ್ನು ಅತ್ಯಂತ ಹಿಂಸೆ ಕೊಟ್ಟು ಕೊಲ್ಲುತ್ತಿದ್ದರು. ದೇಗುಲದ ಮುಖ್ಯ ಅರ್ಚಕ ಕಾಶಿಯ ವಿಶ್ವನಾಥನ ಜ್ಯೋತಿರ್ಲಿಂಗವನ್ನು ಹಿಡಿದು ಬಾವಿಗೆ ಹಾರಿ ತಮ್ಮ ಪ್ರಾಣವನ್ನೇ ಬಲಿ ಕೊಟ್ಟು ಲಿಂಗ ರಕ್ಷಿಸಿದರು. ದೇವಾಲಯದ ಆವರಣದಲ್ಲಿ ಇಂದಿಗೂ ಪುರೋಹಿತರ ಮನೆಗಳಿದ್ದ ಕುರುಹುಗಳನ್ನು ಕಾಣಬಹುದು.

ಕಾಶೀ ವಿಶ್ವನಾಥ ದೇಗುಲದ ಸಮೀಪ ಇರುವ ಮಸೀದಿಯಿರುವ ಸ್ಥಳವು ವಿಶ್ವನಾಥನ ಮೂಲ ದೇಗುಲವಿರುದ ಸ್ಥಳವಾಗಿದೆ. ಮೂಲ ವಿಶ್ವನಾಥ ದೇವಸ್ಥಾನದ ಅವಶೇಷಗಳ ಮೇಲೆ ’ ಗ್ಯಾನವಾಪಿ ಮಸೀದಿಯನ್ನು’ ಔರಂಗಜೇಬನು ಕಟ್ಟಿಸಿದನು.
ಔರಂಗಜೇಬನ ನಂತರ ಮರಾಠ ರಾಜ ಮಲ್ಹರ್ ರಾವ್ ಹೋಲ್ಕರ್ (1693-1766) ಮಸೀದಿಯನ್ನು ಕೆಡವಿ ಮತ್ತೆ ಕಾಶಿ ವಿಶ್ವನಾಥನ ದೇಗುಲವನ್ನು ನಿರ್ಮಿಸಲು ಮುಂದಾಗಿದ್ದನು. ಆದರೆ 1780ರಲ್ಲಿ ಮಲ್ಹರ್‍ನ ಸೊಸೆ ಅಹಲ್ಯಾ ಬಾಯಿ ಹೋಲ್ಕರ್ ಮಸೀದಿಯ ಪಕ್ಕದಲ್ಲೇ ಕಾಶಿ ವಿಶ್ವನಾಥ ದೇಗುಲವನ್ನು ನಿರ್ಮಿಸಿದಳು.

ಮಸೀದಿಗೂ ದೇವಸ್ಥಾನಕ್ಕೂ ಮದ್ಯ ಬೃಹದಾಕಾರದ ದಪ್ಪ ದಪ್ಪ ಕಬ್ಬಿಣದ ಗ್ರಿಲ್ ನಿರ್ಮಾಣವಾಗಿದೆ. ಸುತ್ತಲೂ ಪೋಲೀಸರ ಸರ್ಪಗಾವಲು. ಎಂತಾ ವಿಪರ್ಯಾಸ ನೋಡಿ. ನಮ್ಮ ಹಿಂದೂ ದೇವಾಲಯ ಕೆಡವಿ ಅಲ್ಲಿ ಮಸೀದಿ ನಿರ್ಮಿಸಿ ತಮ್ಮ ಹಕ್ಕನ್ನು ಅಂದೇ ಚಲಾಯಿಸಿದ್ದು, ಹಿಂದೂಗಳ ಮೇಲೆ ನಡೆದ ಕ್ರೂರತನ, ಕಾಶಯಿ ಪ್ರತೀ ಗಲ್ಲಿ ಗಲ್ಲಿಗಳಲ್ಲೂ ಇನ್ನಿತರ ಸಿಕ್ಕ ಸಿಕ್ಕ ದೇವಸ್ಥಾನಗಳನ್ನು ದ್ವಂಸಗೊಳಿಸಿ ಮಸೀದಿ ಕಟ್ಟಿರುವುದನ್ನು ಕಾಣಬಹುದು. ನಿಜಕ್ಕೂ ಇತಿಹಾಸ ಪ್ರತ್ಯಕ್ಷವಾಗಿ ತಿಳಿಯಬೇಕೆಂದರೆ ಇಡೀ ಕಾಶಿಯನ್ನು ಕಾಲ್ನಡಿಗೆಯಲ್ಲೇ ತಿರುಗಾಡಬೇಕು.

ಕವಡಿ ಮಾತಾ ಮಂದಿರ ;

ಸಾಗುತ್ತಿರುವ ನಮ್ಮ ಆಟೋ ಮೂಲ ಕಾಶಿ ಎಂದು ಕರೆಯಲ್ಪಡುವ ಕವಡಿ ಮಾತಾ ಮಂದಿರದ ಅನತಿ ದೂರದಲ್ಲಿ ನಿಂತಿತು. ಇಕ್ಕಟ್ಟಾದ ಓಣಿ. ನಡೆದುಕೊಂಡೆ ಹೋಗಬೇಕು.

ಪುಟ್ಟದಾದ ದೇವಸ್ಥಾನ. ಹೋಗುವಾಗ ಕೈಯಲ್ಲಿ ಅಲ್ಲೆ ರೆಡಿಯಾಗಿಟ್ಟಿರುವ ಚಿಕ್ಕ ಬ್ಲೌಸ್ ಪೀಸ್ ಜೊತೆಗೆ ಅರಿಶಿನ ಕುಂಕುಮ ಹೂವು ಐದು ಕವಡೆಗಳಿರುವ ಪೂಜಾ ಸಾಮಗ್ರಿಗಳನ್ನು ಹಣ ಪಾವತಿಸಿ ಒಯ್ಯಬೇಕು ಮೆಟ್ಟಿಲೇರಿ.

ಅಲ್ಲಿರುವ ಅರ್ಚಕ ಪೂಜೆ ಮಾಡಿ ಸ್ಥಳ ಪುರಾಣ ಹೇಳಲು ಹಣ ಕೇಳುತ್ತಾರೆ. ಇಷ್ಟ ಇದ್ದವರು ಸಂದಾಯ ಮಾಡಬಹುದು. ಅದಿಲ್ಲವಾದರೆ ದೇವಿಯ ಮುಂದೆ ಇಟ್ಟು ನಮಸ್ಕಾರ ಮಾಡಿ ಹೊರಡಬಹುದು.

ವಿಷ್ಣು ಕುಂಡ ;

ವಿಷ್ಣುವಿಗೆ ಕೃತಜ್ಞತಾಪೂರ್ವವಾಗಿ ಶಿವನು ವಿಷ್ಣು ಕುಂಡವನ್ನು ರಚಿಸಿದನೆಂದು ಹೇಳಲಾಗುತ್ತದೆ. ಈ ಕುಂಡದಲ್ಲಿ ಭಕ್ತಾದಿಗಳು ಮಧ್ಯಾಹ್ನ 12 ಗಂಟೆಗೆ ಸ್ನಾನ ಮಾಡಿದರೆ ಅವರು ಹುಟ್ಟು ಮತ್ತು ಸಾವಿನಿಂದ ಮುಕ್ತಿ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಈ ವಿಷ್ಣು ಕುಂಡದಲ್ಲಿ ಒಮ್ಮೆ ಶಿವನ ಕಿವಿಯ ಆಭರಣದ ರತ್ನವು ಬಿದ್ದ ಕಾರಣ ಇದನ್ನು ಮಣಿಕರ್ಣಿಕಾ ಕುಂಡ ಎಂದೂ ಕರೆಯುತ್ತಾರೆ.

ದುರ್ಗಾ ಮಂದಿರ ;

ಕಾಶಿಯಲ್ಲಿ ನೋಡಲೇಬೇಕಾದ ಅತ್ಯಂತ ಮಹತ್ವ ಪಡೆದ ಹದಿನೆಂಟನೇ ಶತಮಾನದ ದುರ್ಗಾ ದೇವಿ ಮಂದಿರವಿದು.

ಕೆಂಪು ಬಣ್ಣದಿಂದ ಬೃಹದಾಕಾರದ ಎತ್ತರದ ಗೋಪುರವಿರುವ ಈ ಮಂದಿರದಲ್ಲಿ ದೇವಿ ವಿರಾಜಮಾನವಾಗಿದ್ದಾಳೆ. ದರ್ಗಾಷ್ಟಮಿಯ ಸಮಯದಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ನಾವು ಹೋಗಿದ್ದು ಪಿತೃಪಕ್ಷದಲ್ಲಾದರೂ ಭಕ್ತರ ನೂಕು ನುಗಲು ಜೋರಾತ್ತು‌.

ದೇವಿಗೆ ಅರ್ಪಿಸಲು ಕೆಂಪು ವಸ್ತ್ರ,ಕೆಂಪು ದಾಸವಾಳದ ಹೂವಿನ ಮಾಲೆ, ಗುಲಾಬಿ ಹೂವಿನ ಮಾಲೆಗಳು ಮಂದಿರದ ಮುಂಬಾಗದಲ್ಲೇ ಸಿಗುತ್ತವೆ.

ಸಂಕಟ ಮೋಚನ ಮಂದಿರ;

ಹೆಸರೆ ಸೂಚಿಸುವ ಹಾಗೆ ಸಂಕಟಗಳನ್ನು ಹೋಗಲಾಡಿಸುವ ಆಂಜನೇಯನಿಗೆ ಮುಡಿಪಾದ ವಾರಣಾಸಿಯ ಪ್ರಸಿದ್ಧ ದೇವಾಲಯ ಇದಾಗಿದೆ. ಸ್ಥಳೀಯವಾಗಿ ಸಾಕಷ್ಟು ಜನಪ್ರೀಯತೆ ಗಳಿಸಿರುವ ಈ ದೇವಾಲಯಕ್ಕೆ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ. ಹಿಂದೊಮ್ಮೆ ಬಾಂಬ ದಾಳಿಗೆ ತುತ್ತಾದ ಈ ಮಂದಿರಕ್ಕೆ ಬಿಗಿ ಭದ್ರತೆ ಇದೆ. ಮೊಬೈಲ್ ಅಥವಾ ಇನ್ನಿತರೆ ಯಾವ ವಸ್ತುಗಳನ್ನು ಒಳಗೆ ಒಯ್ಯಲು ಬಿಡುವುದಿಲ್ಲ.

ಬೃಹದಾಕಾರದ ದ್ವಾರದ ಮೂಲಕ ಒಳಗೆ ಹೋಗುತ್ತಿದ್ದಂತೆ ವಿಶಾಲವಾದ ಜಾಗದಲ್ಲಿ ಗಿಡಮರಗಳನ್ನು ಬೆಳೆಸಿದ್ದಾರೆ. ಸುಮಾರು ಅರ್ಧ ಕಿ.ಮೀ.ನಡೆದು ಮಂದಿರ ತಲುಪಬೇಕು. ಆಗಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಹನುಮಾನ್ ಚಾಲೀಸ್ ಪಠಣ ಹಲವರು ಅಲ್ಲಲ್ಲಿ ಕುಳಿತು ಮಾಡುತ್ತಿದ್ದರು. ಯಾರಿಗೆ ಪಠಣ ಮಾಡಬೇಕೆನಿಸುತ್ತದೋ ಅವರೆಲ್ಲ ಅಲ್ಲಲ್ಲಿ ಸಂಗ್ರಹಿಸಿಟ್ಟ ಪುಸ್ತಕ ತೆಗೆದುಕೊಂಡು ಓದಿ ಮತ್ತೆ ಅಲ್ಲಿಯೇ ಇಟ್ಟು ಹೋಗುವ ಪದ್ಧತಿ ಇಲ್ಲಿ ನಡೆದುಕೊಂಡು ಬಂದಿದೆ. ಆಗಾಗ ಮಂಗಳಾರತಿ ಹನುಮನಿಗೆ ನಡೆಯುತ್ತಲೇ ಇರುತ್ತದೆ. ಅಪಾರ ಸಂಖ್ಯೆಯ ಭಕ್ತರನ್ನು ಕಂಡು ದಂಗಾದೆ. ಕಾಣಿಕೆಯಂತೂ ಜನ ಹಾಕುತ್ತಲೇ ಇರುತ್ತಾರೆ. ಮಂದಿರದ ಪಕ್ಕದಲ್ಲಿ ದೊಡ್ಡದಾದ ತರಾವರಿ ಸಿಹಿ ಖ್ಯಾಧ್ಯ ಮಾಡುವ ಅಂಗಡಿಯಿದೆ. ಸಾಮಾನ್ಯವಾಗಿ ಎಲ್ಲ ಭಕ್ತರೂ ಇಲ್ಲಿ ಸಿಹಿ ತಿಂಡಿ ಖರೀದಿಸಿ ಹನುಮನಿಗೆ ನೈವೇದ್ಯಕ್ಕೆ ಅರ್ಪಿಸುತ್ತಾರೆ. ತದನಂತರ ಪ್ರಸಾದದ ರೂಪದಲ್ಲಿ ಸ್ವೀಕರಿಸುತ್ತಾರೆ.

ಬಹಳ ಪ್ರಶಾಂತವಾದ ಪರಿಸರ. ಸುತ್ತಮುತ್ತ ಇನ್ನೂ ಹಲವು ಪುಟ್ಟ ದೇವರ ಗುಡಿಗಳಿವೆ. ಎಲ್ಲವನ್ನೂ ನೋಡಿಕೊಂಡು ಹಿಂತಿರುಗುವಾಗ ಮತ್ತೆ ನಾನೊಬ್ಬಳೇ ಆಗಿಬಿಟ್ಟೆ. ಖುಷಿ ಆಯಿತು. ನಿಧಾನವಾಗಿ ಕಾಲಾಡಿಸುತ್ತ ಆ ಗಿಡಗಳ ಸಮೂಹದಲ್ಲಿ ಬರುವ ತಂಗಾಳಿಗೆ ಹನುಮಾನ್ ಚಾಲೀಸ್ ಹೇಳುತ್ತ ನಾವು ಬಂದ ಆಟೋ ಏರಿ ಕುಳಿತೆ. ಹೊಟ್ಟೆ ಚುರುಗುಟ್ಟುತ್ತಿತ್ತು. ಜೊತೆಗೊಯ್ದ ಡ್ರೈಫುಡ್ ತತ್ಕಾಲಕ್ಕೆ ನೆರವಾಯಿತು.

ದೈವ ಮಂದಿರ ;

ಸಂಕಟಾ ದೇವಿಗೆ ಮುಡಿಪಾದ ಜಗತ್ತಿನ ಏಕೈಕ ದೇವಾಲಯ ಇದಾಗಿದೆ. ನವ ದುರ್ಗೆಯರಲ್ಲಿ ಒಬ್ಬಳಾದ ಈ ದೇವಿಯನ್ನು ನವರಾತ್ರಿ ಸಂದರ್ಭದಲ್ಲಿ ಎಂಟನೇಯ ದಿನದಲ್ಲಿ ಪೂಜಿಸುತ್ತಾರೆ. ಈ ದೇವಿಯನ್ನು ಪರಿಹಾರ ದೇವಿ ಎಂದು ಕರೆಯಲಾಗುತ್ತದೆ. ಯಾವುದೆ ಅಪಾಯದ ಸುಳಿವು ದೊರೆತರೆ ಅಥವಾ ಸಂಭವಿಸಿದರೆ ಈ ದೇವಿಯನ್ನು ಭಕ್ತಿಯಿಂದ ಪೂಜಿಸುವುದರ ಮೂಲಕ ಅದರಿಂದ ಪರಿಹಾರ ಪಡೆದುಕೊಳ್ಳಬಹುದೆಂದು ಹೇಳಲಾಗಿದೆ.

ತುಲಸಿ ಮಾನಸ ಮಂದಿರ ;

ವಾಲ್ಮಿಕಿಯು ಬರೆದ ರಾಮಾಯಣವು ಸಂಸ್ಕೃತ ಭಾಷೆಯಲ್ಲಿದ್ದುದರಿಂದ ಸಾಕಷ್ಟು ಜನರಿಗೆ ಅರ್ಥವಾಗಲು ಕಷ್ಟವಾಗಿದ್ದುದರಿಂದ ಹದಿನಾರನೇಯ ಶತಮಾನದಲ್ಲಿ ಪ್ರಖ್ಯಾತ ಗೋಸ್ವಾಮಿ ತುಳಸಿದಾಸರು ಹಿಂದಿಯ ಉಪಭಾಷೆಯಾದ ಅವಧಿ ಭಾಷೆಯಲ್ಲಿ ರಾಮಾಯಣವನ್ನು ಭಾಷಾಂತರಿಸಿದರು.

ಇದು ರಾಮಚರಿತಮಾನಸ ಎಂದೆ ಪ್ರಸಿದ್ಧವಾಯಿತು. ಇವರಿಗೆ ಮುಡಿಪಾದ ವಾರಣಾಸಿಯಲ್ಲಿರುವ ದೇವಾಲಯ ಇದಾಗಿದ್ದು ಸಾಕಷ್ಟು ಜನರಿಂದ ಭೇಟಿ ನೀಡಲ್ಪಡುತ್ತದೆ. ಈ ಲಿಪಿ ಇಲ್ಲಿಯ ಗೋಡೆಗಳ ಮೇಲೆ ರಾರಾಜಿಸುತ್ತಿವೆ.

ಹಾಗೂ ಒಳಾಂಗಣದ ಮೆಟ್ಟಿಲೇರಿದರೆ ಸಂಪೂರ್ಣ ರಾಮಾವತಾರ ಮತ್ತು ಕೃಷ್ಣಾವತಾರದ ಚಿತ್ರಣ ಬಣ್ಣ ಬಣ್ಣದ ಗೊಂಬೆಗಳನ್ನು ಜೋಡಿಸಿ ಅದೆಷ್ಟು ಚಂದವಾಗಿ ವರ್ಣಿಸಿದ್ದಾರೆಂದರೆ ಪುಟ್ಟ ಮಕ್ಕಳನ್ನು ಕರೆದುಕೊಂಡು ಹೋದರೆ ಪಕ್ಕನೆ ಹೊರ ಬರಲು ಒಪ್ಪುವುದೇ ಇಲ್ಲ. ಬೇಕಾದಷ್ಟು ಫೋಟೋ ತೆಗೆಯಬಹುದು. ನಾನೂ ಕ್ಲಿಕ್ಕಿಸಿದೆ. ಎಲ್ಲವನ್ನೂ ನೋಡಲು ಕನಿಷ್ಟ ಒಂದು ಗಂಟೆ ಬೇಕಾಗಬಹುದು.

ಅನತಿ ದೂರದಲ್ಲಿ ಶೃಂಗಾರಗೊಂಡ ಇನ್ನೊಂದು ದೇವಿ ಮಂದಿರ ಅಲಂಕಾರ ಕಂಡೇ ನಾವೆಲ್ಲರೂ ನೋಡಲು ನುಗ್ಗಿದೆವು. ಮಂಗಳಾರತಿ ನಡೆಯುತ್ತಿತ್ತು. ದೇವಿ ಪ್ರಸಾದವೂ ಸಿಕ್ಕಿತು.

ಬಿಂದು ಮಾಧವ ದೇವಾಲಯ;

ಈ ಬಿಂದು ಮಾಧವ ದೇವಾಲಯವು ಪಂಚಗಂಗಾ ಘಾಟ್ ಬಳಿ ನೆಲೆಸಿದೆ. ಒಂದು ನಂಬಿಕೆಯ ಪ್ರಕಾರ ಮಹಾವಿಷ್ಣು ಪಂಚಗಂಗಾ ಘಾಟ್‌ನಲ್ಲಿ ಸ್ನಾನ ಮಾಡಿ, ಇಲ್ಲಿಯೇ ಬಿಂದು ಮಾಧವ ಮಂದಿರವನ್ನು ಸ್ಥಾಪಿಸಿದನೆಂದು ಹೇಳಲಾಗುತ್ತದೆ.

ಮಹಾವಿಷ್ಣುವು ತನ್ನ ಭಕ್ತರಿಗೆ ಕಾಶಿಯಲ್ಲಿ ಬಿಂದು ಮಾಧವನಾಗಿ, ಪ್ರಯಾಗದಲ್ಲಿ ವೇಣಿ ಮಾಧವನಾಗಿ, ರಾಮೇಶ್ವರದಲ್ಲಿ ಸೇತು ಮಾಧವನಾಗಿ, ಕಾಕಿನಾಡಾ ಹತ್ತಿರವಿರುವ ಪಿತಾಪುರಂನಲ್ಲಿ ಕುಂತಿ ಮಾಧವನಾಗಿ ಹಾಗೂ ತಿರುವನಂತಪುರದಲ್ಲಿ ಸುಂದರ ಮಾಧವನಾಗಿ ದರ್ಶನ ನೀಡುತ್ತಾನೆ. ಆದ್ದರಿಂದಾಗಿ ಈ ಐದು ಕ್ಷೇತ್ರಗಳನ್ನು ಪಂಚ ಮಾಧವ ಕ್ಷೇತ್ರಗಳು ಎಂದು ಕರೆಯಲಾಗುತ್ತದೆ. ಅಲ್ಲದೆ ಈ ಐದು ದೇವರುಗಳನ್ನು ಇಂದ್ರದೇವನು ತನ್ನ ಶಾಪ ವಿಮೋಚನೆಗಾಗಿ ಸ್ಥಾಪಿಸಿದನು ಎಂಬ ನಂಬಿಕೆಯೂ ಇದೆ.

ಇವುಗಳಲ್ಲದೆ ಇನ್ನೂ ಅನೇಕ ನೋಡಲೇಬೇಕಾದ ಸ್ಥಳಗಳು ಹಲವಾರಿದೆ ಕಾಶಿಯಲ್ಲಿ. ನಾವು ಹೋದ ಈ ದಿನ ಕಾಶಿ ಯುನಿವರ್ಸಿಟಿಯ ಕ್ಯಾಂಪಸ್ ಒಳಗಡೆ ಕಲ್ಲು ತೂರಾಟದೊಂದಿಗೆ ಬಹಳ ಗಲಾಟೆ ನಡೆಯುತ್ತಿತ್ತು. ಅರ್ಧ ದಾರಿಗೆ ಹೋದವರು ವಾಪಸ್ ಬರಬೇಕಾಯಿತು. ಬಿರ್ಲಾ ಮಂದಿರ, ಭಾರತ್ ಮಾತಾ ಮಂದಿರ ಇತ್ಯಾದಿ ಈ ಕ್ಯಾಂಪಸ್ ಒಳಗಡೆಯೆ ಇದೆ. ಆದರೆ ಕಳೆದ ಬಾರಿ ಬಂದಾಗ ಎಲ್ಲವನ್ನೂ ನೋಡಿರುವುದರಿಂದ ಅಷ್ಟೊಂದು ನಿರಾಸೆ ಆಗಲಿಲ್ಲ.

ಸುಮಾರು ಮೂರು ಗಂಟೆಗೆ ವಾಪಸ್ಸು ವಾಸ ಸ್ಥಳಕ್ಕೆ ಹಿಂತಿರುಗಿದೆವು. ಸುತ್ತಾಡಿ ಸಿಕ್ಕಾಪಟ್ಟೆ ಎಲ್ಲರಿಗೂ ದಣಿವಾಗಿದ್ದರಿಂದ ಉಂಡು ಮಲಗೋಣ. ಈ ದಿನ ಮತ್ತೆಲ್ಲೂ ಹೋಗುವುದು ಬೇಡವೆಂದು ತೀರ್ಮಾನಿಸಿದೆವು. ಆದರೆ ನೋಡಿದ ಸ್ಥಳಗಳ ವರ್ಣನೆ ಮಾತಿನ ಚಕಮಕಿ, ಕ್ಲಿಕ್ಕಿಸಿದ ಫೋಟೋ ನೋಡುವುದರಲ್ಲಿ ಹೊತ್ತು ಕಳೆದಿದ್ದು ಗೊತ್ತಾಗಲೇ ಇಲ್ಲ.

ಮುಂದುವರಿಯುವುದು ಭಾಗ – 15ರಲ್ಲಿ.

ಭಂ ಭಂ ಬೋಲೆನಾಥ್

ಭಾಗ -13

ವಿಸ್ಮಯ ಗಳಿಗೆ ;(ಚಿತ್ರ – ಕಾಳಭೈರೇಶ್ವರ ದೇವಸ್ಥಾನ, ಕಾಶಿ)

ದಿನಾಂಕ 17-9-2019ರ ಬೆಳಗಿನ ಜಾವ ನಾಲ್ಕು ಗಂಟೆಗೆಲ್ಲ ರೆಡಿಯಾಗಿ ಪುನಃ ವಿಶ್ವೇಶ್ವರನ ದರ್ಶನಕ್ಕೆ ಹೊರಟೆವು. ಕಾರಣ ಮೊದಲಿನ ದಿನ ಭಟ್ಟರ ಜೊತೆ ಹೋಗಿದ್ದು ಯಾಕೋ ಗಡಿಬಿಡಿಯಲ್ಲಿ ದರ್ಶನ ಮಾಡಿ ಬಂದಂತೆನಿಸಿದ್ದು. ಇನ್ನೊಂದು ನಮ್ಮಲ್ಲಿ ಒಬ್ಬರಿಗೆ ಹುಷಾರಿಲ್ಲದೆ ದರ್ಶನಕ್ಕೆ ಬರಲಾಗಿರಲಿಲ್ಲ. ಹಾಗಾಗಿ ಭಟ್ಟರಿಗೆ ಮೊದಲೇ ತಾಕೀತು ಮಾಡಿದ್ವಿ ; ನಮ್ಮಷ್ಟಕ್ಕೇ ನಾವು ನಿಧಾನವಾಗಿ ಹೋಗಿ ಬರುತ್ತೇವೆ, ನೀವು ಬರುವುದು ಬೇಡಾ. ಆದರೆ ಭಟ್ಟರ ಅನುಯಾಯಿ ಆಗಲೇ ನಮ್ಮನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಲು ಇನ್ನೊಂದಷ್ಟು ಜನರೊಂದಿಗೆ ರೆಡಿಯಾಗಿ ನಿಂತಿದ್ದರು. ಉಪಾಯವಿಲ್ಲದೆ ಅವರೊಂದಿಗೆ ಹೋದರೂ ಬರುವಾಗ ನಮ್ಮಷ್ಟಕ್ಕೇ ನಾವು ಬರುತ್ತೇವೆ ಎಂದು ವಿಶ್ವನಾಥ್ ದೇವಸ್ಥಾನದಿಂದಲೇ ನಾವು ಬೇರೆಯಾದೆವು.

ವಿಶ್ವನಾಥನಿಗೆ ಪೂಜೆ ಸಲ್ಲಿಸಿ ಮಂದಿರದಲ್ಲಿ ಕೂತು ವಿಷ್ಣು ಸಹಸ್ರನಾಮ ಪಠಣ ಮಾಡಿ ನಮಸ್ಕರಿಸಿದೆವು. ಒಳಾಂಗಣದಲ್ಲಿರುವ ಪ್ರತಿಯೊಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಹಾಗೆ ಕಾಶಿ ವಿಶಾಲಾಕ್ಷಿ ದೇವಿಯ ಆವರಣದಲ್ಲಿ ಕೂತು ಶ್ರೀ ಲಲಿತಾ ಸಹಸ್ರನಾಮ ಪಠಣ ಮಾಡೋಣವೆಂದು ತೀರ್ಮಾನಿಸಿದಾಗ ಪಕ್ಕನೆ ನನಗೆ ನೆನಪಾಗಿದ್ದು ಗಣೇಶ ವಿಗ್ರಹ. ನಿನ್ನೆ ಬಂದಾಗ ಈ ವಿಗ್ರಹದ ದರ್ಶನ ಮಾಡದೇ ಇರುವುದು.

ದುಂಡಿರಾಜ ಗಣಪನೆಂದು ಕರೆಸಿಕೊಳ್ಳುವ ಈತ ಕಾಶಿ ಕ್ಷೇತ್ರದ ರಕ್ಷಕ. ಆವರಣದೊಳಗೇ ಇರುವ ಈ ವಿಗ್ರಹ ದರ್ಶನ ಮಾಡಿಕೊಂಡೇ ಹೋಗಬೇಕು, ಅದಿಲ್ಲವಾದರೆ ಕಾಶಿಯಾತ್ರೆಯ ಫಲ ಸಿಗೋದಿಲ್ಲ ಎಂಬ ನಂಬಿಕೆಯಿದೆ. ಅತ್ತಿತ್ತ ಕಣ್ಣಾಯಿಸಲಾಗಿ ಈ ವಿಗ್ರಹ ಆವರಣದ ಒಂದು ಮೂಲೆಯಲ್ಲಿ ವಿಶ್ವನಾಥ ಗರ್ಭಗುಡಿಯ ಬಲ ಪಾಶ್ವದಲ್ಲಿದೆ. ಮೊದಲು ಇವನ ದರ್ಶನ ಮಾಡೋಣವೆಂದು ಎಲ್ಲರೂ ಬನ್ನಿ ಹೇಳುತ್ತ ನಾನು ಮುಂದೆ ಹೋದರೆ ಉಳಿದವರು ಬರದೇ ಇರುವುದು ಆಮೇಲೆ ಗೊತ್ತಾಯಿತು. ಎತ್ತ ನೋಡಿದರೂ ಯಾರೂ ಕಾಣಿಸುತ್ತಿಲ್ಲ. ಒಮ್ಮೆ ಗಾಬರಿಯಾದರೂ ಮುಂದೆ ಸಿಗುತ್ತಾರೆ ಎಂದು ನಾನೊಬ್ಬಳೇ ಇಡೀ ಪ್ರಾಂಗಣ ಸುತ್ತಾಡಿದೆ. ಇಂಚಿಂಚೂ ಬಿಡದೇ ವೀಕ್ಷಿಸುತ್ತ ನಮಸ್ಕಾರ ಮಾಡುತ್ತ ಮುಂದೆ ಸಿಗುವ ಅನ್ನಪೂರ್ಣೇಶ್ವರಿ ಮಂದಿರಕ್ಕೆ ಹೋಗುವ ಹಾದಿಯನ್ನು ಉಳಿದ ಭಕ್ತರನ್ನು ಕೇಳಿಕೊಂಡು ನಿಧಾನವಾಗಿ ನಡೆದೆ. ಏಕೆಂದರೆ ಕಾಶಿಯ ಓಣಿಯಲ್ಲಿ ದಿಕ್ಕು ತಪ್ಪಿದರೆ ಅದೆಲ್ಲೆಲ್ಲಿ ಹೋಗಿ ತಲುಪುವುದೋ ಗೊತ್ತಿಲ್ಲ. ಎರಡು ಮೂರು ಬಾರಿ ಈ ಹಿಂದೆ ಓಣಿಗಳಲ್ಲಿ ಓಡಾಡಿದ ಅನುಭವ ಹೆಚ್ಚು ಕಾಳಜಿಯಿಂದ ಇರುವಂತೆ ಮಾಡಿತ್ತು.

ನಾನಾ ರತ್ನಗಳಿಂದ ಅಲಂಕೃತಳಾದ ಸುಂದರ ವಿಗ್ರಹ ತಾಯಿ ಅನ್ನಪೂರ್ಣೇಶ್ವರಿ. ಗುಡಿಯ ನಾಲ್ಕೂ ದಿಕ್ಕಿಗೆ ಗೌರಿಶಂಕರ,ಸೂರ್ಯ, ಗಣಪತಿ ಮತ್ತು ಹನುಮಂತನ ವಿಗ್ರಹಗಳಿವೆ. ಇಲ್ಲಿ ಕುಂಕುಮಾರ್ಚನೆ ನಡೆಯುತ್ತಲೇ ಇರುತ್ತದೆ. ತಾಯಿಗೆ ನಮಸ್ಕಾರ ಮಾಡಿ ಅಲ್ಲಿಂದ ಮುಂದೆ ಕಾಶಿ ವಿಶಾಲಾಕ್ಷಿ ಮಂದಿರದಲ್ಲಿ ಕೈ ಮುಗಿದು ಮುಖ್ಯ ರಸ್ತೆ ಸೇರಿಕೊಂಡೆ. ಇಲ್ಲಿಂದ ಕಾಳಭೈರೇಶ್ವರ ಮಂದಿರ ಒಂದೂವರೆ ಕಿ.ಮೀ. ತಲುಪಲು ಟಾಂಗಾ ಅಟೋಗಳು ಸಿಗುತ್ತವೆ. ಅಪರಿಚಿತ ಹುಡುಗಿಯೊಬ್ಬಳು ಜೊತೆಯಾದಳು. ಬಹುಶಃ ಕಾಳಭೈರವನಲ್ಲಿ ಅರ್ಧ ಗಂಟೆಗಿಂತಲೂ ಹೆಚ್ಚು ಸಮಯವಿದ್ದೆ ಅನಿಸುತ್ತದೆ. ಇಡೀ ಕಾಶಿಯನ್ನು ಕಾಪಾಡುವ ದೈವ ಅವನು. ಹಿಂದಿನ ದಿನ ರಾತ್ರಿ ನಿದ್ದೆಯಲ್ಲಿ ಕಿರುಚಿದ್ದು ಬೆಳಿಗ್ಗೆ ಎದ್ದಾಗ ಗೊತ್ತಾಗಿ ಗಮನಕ್ಕೆ ಬಂದಿದ್ದು ಕಣ್ಣ ಮುಂದೆ ಗಂಗಾ ನದಿಯಲ್ಲಿ ತೇಲುತ್ತಿರುವ ಹೆಣ ಮತ್ತು ಆ ಕಾಳಭೈರವನ ಮುಖ ಇವೆರಡೇ ಹೆಚ್ಚು ಕಾಣುತ್ತಿದ್ದು ಆಗಲೇ ಪ್ರಾರ್ಥನೆಯನ್ನೂ ಮಾಡಿಕೊಂಡಿದ್ದೆ.

ಗರ್ಭಗುಡಿಯೊಳಗೆ ಅತ್ಯಂತ ಹತ್ತಿರದಿಂದ ದರ್ಶನವಾಗಿದ್ದು ಪ್ರಸಾದ ಸಿಕ್ಕಿದ್ದು ಒಬ್ಬಳೇ ನಿರಾತಂಕವಾಗಿ ಎಲ್ಲಾ ಕಡೆ ಓಡಾಡಿದ್ದು ಎಲ್ಲವೂ ಒಂದು ವಿಸ್ಮಯ ಅನಿಸಿತು. ಇದೇ ಯೋಚನೆಯಲ್ಲಿ ಒಂದಿಷ್ಟು ಹೊತ್ತು ಪರಶಿವನ ಧ್ಯಾನದಲ್ಲಿ ಕಣ್ಮುಚ್ಚಿ ಕೂತಿದ್ದೆ. ಹೊರಗಡೆ ಬಿಸಿ ಬಿಸಿ ಚಹಾ ಕುಡಿದು ಒಂದಷ್ಟು ದೂರ ನಡೆಯುತ್ತ ಅಂಗಡಿ ಮುಂಗಟ್ಟಿನಲ್ಲಿ ಬೇಕಾದ ಸಾಮಾನಿಗೆ ತಡಕಾಡಿ ಕೊಂಡು ಬಿಸಿ ಬಿಸಿ ಜಿಲೇಬಿ ಮೆದ್ದು ಒಂದು ಆಟೋದಲ್ಲಿ ನಾನುಳಿದ ತಾಣಕ್ಕೆ ಬಂದೆ. ಎಷ್ಟು ಖುಷಿಯಾಗಿತ್ತು ಅಂದರೆ ಒಬ್ಬಳೇ ಸುತ್ತುವ ಅವಕಾಶ ಅನಾಯಾಸವಾಗಿ ಸಿಕ್ಕಿದ್ದು ಒಳ್ಳೆಯದೇ ಆಯಿತು ಅನಿಸಿತು. ಇದು ನಂಗಿಷ್ಟವೂ ಕೂಡಾ! ಮುಂದುವರಿಯುವುದು ಭಾಗ – 14ರಲ್ಲಿ.

22-6-2020. 10.51pm

ಭಂ ಭಂ ಬೋಲೆನಾಥ್

ಭಾಗ – 12

ರುದ್ರಾಭಿಷೇಕ ;

ವಿಶ್ವನಾಥನ ದರ್ಶನ ಮುಗಿಸಿ ಹೊರ ಬಂದಾಗ ದೇವಸ್ಥಾನದ ಒಂದು ಪಾಶ್ವದಲ್ಲಿ ಇದ್ದೆವು. ಕಟ್ಟಡ ಕೆಡವಿದ ಮಣ್ಣಿನ ರಾಶಿ ನೇರವಾಗಿ ರಸ್ತೆಯಿಂದ ವಿಶ್ವನಾಥ ಮಂದಿರಕ್ಕೆ ರಸ್ತೆ ನಿರ್ಮಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಅಲ್ಲಿಂದ ಉಳಿದ ದೇವಸ್ಥಾನಗಳ ದರ್ಶನ ಪಡೆದು ಬರುವಾಗ ಹಲವು ಸಂದಿ ಗೊಂದಿಯಲ್ಲಿ ಹಾದು ಬರುವಾಗ ಅಲ್ಲಲ್ಲಿ ಹಳೆಯ ಕಟ್ಟಡ ಚಿಕ್ಕ ಚಿಕ್ಕ ದೇವಸ್ಥಾನಗಳನ್ನು ಕೆಡವಿದ ಕುರುಹು ಕಾಣುತ್ತಿತ್ತು. ಆದರೆ ರಸ್ತೆಗೆ ಬಂದಾಗ ಆಳವಾಗಿ ಮಣ್ಣು ತೆಗೆಯುತ್ತಿದ್ದು, ಬೃಹತ್ ಯೋಜನೆ ಕೈಗೊಂಡಿದ್ದು ಸ್ಪಷ್ಟವಾಯಿತು. ಮಣ್ಣು ಸಾಗಿಸಲು ಟ್ರ್ಯಾಕ್ಟರ್ ಬರಲೂ ಅವಕಾಶ ಇಲ್ಲದ ಕಾರಣಕ್ಕೋ ಏನೋ ಮಣ್ಣು ಹೊರ ಹಾಕಲು ಕತ್ತೆಯನ್ನು ಬಳಸುತ್ತಿದ್ದರು. ಚೀಲಗಳಲ್ಲಿ ಮಣ್ಣು ತುಂಬಿ ಕತ್ತೆಯ ಬೆನ್ನಿಗೆ ಹೇರಿ ಹೊರ ಹಾಕುತ್ತಿದ್ದರು. ಎಷ್ಟೋ ದಿನಗಳಿಂದ ಕೂಳನ್ನೇ ಕಾಣದಂತಿದ್ದ ಬಡಕಲು ಕತ್ತೆಗಳು ಬಹಳ ಪ್ರಯಾಸದಿಂದ ಹೊರುವಂತೆ ಕಂಡು ಹೊಟ್ಟೆ ಚುರ್ ಎಂದಿತು. ಮೂಕ ಪ್ರಾಣಿಗಳ ಶೋಷಣೆ ಎಗ್ಗಿಲ್ಲದೆ ನಡೆಯುತ್ತಿರುವುದು ಕಂಡು ಸ್ವಲ್ಪ ಹೊತ್ತು ನೋಡುತ್ತ ನಿಂತೆ. ಕಲ್ಲು ದೇವರಿಗೆ ಮೊಗೆ ಮೊಗೆದು ಹಾಲಭಿಷೇಕ! ಇಲ್ಲಿ ನೋಡಿದರೆ ಅವುಗಳ ಜೊತೆಗಿದ್ದವರಿಗೂ ಕೂಡಾ ಬಡತನದ ಹೊಗೆ ಆವರಿಸಿದ್ದು ಕಂಡೆ. ಇವೆಲ್ಲ ಕಾಮಗಾರಿಯ ಬಗ್ಗೆ ಭಟ್ಟರಲ್ಲಿ ವಿಚಾರಿಸಲಾಗಿ ಕಾಶಿಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವತ್ತ ಕಾಮಗಾರಿ ನಡೆಯುತ್ತಿದೆಯೆಂಬ ಮಾಹಿತಿ ಸಿಕ್ಕಿತು. ಮಳೆ ಬಂದ ಕಾರಣ ಕೆಸರು ರಾಡಿಯಲ್ಲಿ ಬರಿಗಾಲಲ್ಲಿ ನಡೆಯಲೂ ಕಷ್ಟವಾಗುತ್ತಿತ್ತು. ಭಟ್ಟರು ಒಳ ದಾರಿಯಲ್ಲಿ ಹತ್ತಿರದ ದಾರಿಯೆಂದು ಪಟಪಟ ನಡೆಯುವಾಗ ನಾವು ನಡಿಗೆಯಲ್ಲಿ ನಿಧಾನವಾಗಿ ಸಾಗುತ್ತಿದ್ದೆವು. ಹೊರಗೆ ಬಂದು ಒಂದೊಂದು ಕುದುರೆ ಗಾಡಿಯಲ್ಲಿ ನಾವುಳಿದಲ್ಲಿಗೆ ಬಂದಾಗ ಎಂಟು ಗಂಟೆ ದಾಟಿತ್ತು. ಬೆಳಗಿನ ತಿಂಡಿ ಒಗ್ಗರಣೆ ಅವಲಕ್ಕಿ,ಉಪ್ಪಿಟ್ಟು ಜೊತೆಗೆ ಗಟ್ಟಿ ಮೊಸರು. ರುಚಿಯಾಗಿ ಹದಗೊಳಿಸಿದ ಮಂದ ಚಹಾ, ಕಾಫಿ, ಕಷಾಯ! ಆದರೆ ಕಂಡ ದೃಶ್ಯ ಇನ್ನೂ ಮನದಲ್ಲಿ ಹಾಗೆ ಇತ್ತು. ಹಸಿವಿನ ಕಿಚ್ಚಿಗೆ ಚೂರು ತಿಂದು ಎದ್ದೆ.

ಅಂದಹಾಗೆ ಕಾಶಿಯಲ್ಲಿ ಯಥೇಚ್ಚವಾಗಿ ಹೈನುಗಾರಿಕೆ ಇದೆ. ಅಲ್ಲಿ ಹಾಲು, ಮೊಸರು, ತುಪ್ಪಕ್ಕೆ ಕೊರತೆಯಿಲ್ಲ. ಕೇಸರಿ, ಸಕ್ಕರೆ ಹಾಕಿ ರುಚಿಕಟ್ಟಾಗಿ ಮಾಡುವ ಲಸ್ಸಿ ಬಹಳ ಫೇಮಸ್. ಹೀರಲು ಮಣ್ಣಿನ ಕುಡಿಕೆಯಲ್ಲಿ, ಬಟ್ಟಲಲ್ಲಿ ಹಾಕಿ ಕೊಡುತ್ತಾರೆ. ಅಲ್ಲಿ ಮಾಡುವ ಸಿಹಿ ತಿಂಡಿಗಳು ಹೆಚ್ಚಿನಂಶ ತುಪ್ಪದಲ್ಲೇ ಮಾಡಿರುತ್ತಾರೆ. ಸಿಹಿ ತಿಂಡಿಗಳೆಂದರೆ ಜಿಲೇಬಿ, ಜಾಮೂನು ಹೆಚ್ಚಾಗಿ ಮಾಡುವ ಖ್ಯಾದ್ಯ. ಬೆಳಗಿನ ತಿಂಡಿ ಪೂರಿಯೊಂದಿಗೆ ಇವೆರಡರಲ್ಲಿ ಒಂದು ಇರಲೇಬೇಕು ಅಲ್ಲಿಯ ಜನರಿಗೆ. ನಾವೂ ಭಟ್ಟರ ಮನೆಯ ಆಥಿತ್ಯ ಸ್ವೀಕರಿಸಿ ಹತ್ತು ಗಂಟೆಗೆಲ್ಲ ಸ್ವಾಮಿ ನಾರಾಯಣ ಮಂದಿರದ ಮುಂಭಾಗದ ದೊಡ್ಡ ಹಜಾರದಲ್ಲಿ ಮೊದಲೇ ನಿಗದಿಪಡಿಸಿದಂತೆ ಆಸೀನರಾದೆವು‌. ಸೂಮಾರು ಹತ್ತು ಜನ ಭಟ್ಟರ ಸಮ್ಮುಖದಲ್ಲಿ ಸಾಮೂಹಿಕ “ರುದ್ರಾಭಿಷೇಕ” ಪ್ರಾರಂಭಗೊಂಡಿತು. ಆರೇಳು ಜೋಡಿಗಳು ಈ ಪೂಜೆಯಲ್ಲಿ ತೊಡಗಿಸಿಕೊಂಡರು. ಬುಟ್ಟಿಯ ತುಂಬ ಬಿಳಿ ಹೂಗಳು,ನಳನಳಿಸುವ ಬಿಲ್ವ ಪತ್ರೆ,ಬಕೆಟ್ಟುಗಳ ತುಂಬ ಹಾಲು, ಪಂಚಾಮೃತಭಿಷೇಕಕ್ಕೆ ಬೇಕಾದ ಸಾಮಗ್ರಿಗಳು ಪ್ರತಿಯೊಂದನ್ನೂ ಅಣಿಗೊಳಿಸಲಾಗಿತ್ತು. ಅಲ್ಲಿ ನೆರೆದಿದ್ದ ಪ್ರತಿಯೊಬ್ಬರಿಂದಲೂ ಅಭಿಷೇಕ ಮಾಡಿಸಿ ಮಂತ್ರಘೋಶಗಳಿಂದ ಪೂಜೆ ಮಾಡಿಸುವಾಗ ಮನಸ್ಸಿಗೆ ಎಲ್ಲಿಲ್ಲದ ಶಾಂತಿ, ಆ ಪರಶಿವನದೇ ಧ್ಯಾನ! ಏರು ಧ್ವನಿಯಲ್ಲಿ ರುದ್ರ ಹೇಳುವಾಗಲಂತೂ ನಮ್ಮನ್ನೇ ನಾವು ಮರೆತು ತಲ್ಲೀನರಾಗಿಬಿಟ್ಟೆವು. ಹೆಚ್ಚಿನ ಭಕ್ತರು ವಿಶ್ವನಾಥ ದೇವಸ್ಥಾನದ ಆವರಣದಲ್ಲಿ ಈ ಪೂಜೆ ಮಾಡಿಸುತ್ತಾರೆ. ಆದರೆ ಅಲ್ಲಿ ಇಷ್ಟೊಂದು ವಿಧಿವತ್ತಾಗಿ ಪೂಜೆ ಮಾಡಿಸುವುದು ಕಷ್ಟ. ಇಲ್ಲಾದರೆ ದೊಡ್ಡ ಹರಿವಾಣದಲ್ಲಿ ಸ್ಪಟಿಕ ಲಿಂಗ ಇಟ್ಟು ಮಂತ್ರ ಹೇಳುತ್ತ ಶಿವನನ್ನು ಆಹ್ವಾನಿಸಿ ಸಕಲ ಪೂಜೆ ಅಭಿಷೇಕ ಶಾಸ್ತ್ರೋಕ್ತವಾಗಿ ನಮ್ಮಿಂದಲೇ ಕೈಂಕರ್ಯ ಮಾಡಿಸಿ ಕೊನೆಯಲ್ಲಿ ಮಹಾ ಮಂಗಳಾರತಿ ಮಾಡಿಸಿರುವುದು ಅದ್ಭುತವಾಗಿತ್ತು. ಪೂಜೆ ಮಂಗಳಾರತಿ ನಮಸ್ಕಾರ ಪ್ರಸಾದ ಸ್ವೀಕರಿಸಿ ಭಟ್ಟರಿಗೆ ಅವರವರ ಶಕ್ತ್ಯಾನುಸಾರ ದಕ್ಷಿಣೆ ಕೊಟ್ಟು ಆಶೀರ್ವಾದ ಪಡೆದು ಹೊರ ಬಂದಾಗ ಮಧ್ಯಾಹ್ನ ಎರಡು ಗಂಟೆ ದಾಟಿತ್ತು. ಆಗಲೇ ಅಡಿಗೆ ಭಟ್ಟರು ಊಟಕ್ಕೆ ಬನ್ನಿ ಬನ್ನಿ ಎಂಬ ಆಹ್ವಾನ. ಇಲ್ಲಿ ಒಂದು ಮಾತು ಹೇಳಲೇ ಬೇಕು. ನಾವುಳಿದಿದ್ದು ಗೋಕರ್ಣ ಭಟ್ಟರ ಮನೆಯಲ್ಲಿ. ಸಾಧಾರಣವಾಗಿ ಗೋಕರ್ಣಕ್ಕೆ ಹೋದವರಿಗೆಲ್ಲ ಗೊತ್ತು ಅಲ್ಲಿಯ ಭಟ್ಟರ ಮನೆಯ ಊಟೋಪಚಾರ. ಇಲ್ಲೂ ಅಷ್ಟೇ. ನಾವು ನಮ್ಮ ಮನೆಯಲ್ಲಿ ಖಂಡಿತಾ ಬಂದವರಿಗೆ ಇಷ್ಟು ಉಪಚಾರ ಮಾಡುತ್ತೀವೋ ಇಲ್ಲವೋ! ಆದರೆ ಇಲ್ಲಿ ನಾವು ಉಳಿದ ಎಂಟು ದಿನಗಳೂ ಒಂದು ಚೂರೂ ಹಸಿವೆ ಅನ್ನೋದು ಗಮನಕ್ಕೆ ಬಂದೇ ಇಲ್ಲ. ಪಿತೃ ಪಕ್ಷ, ಭಕ್ತರ ಸಂಖ್ಯೆ ಹೆಚ್ಚು. ಆದರೂ ಒಂದು ಚೂರೂ ಲೋಪ ಬರದಂತೆ ಆಯಾ ಸಮಯಕ್ಕೆ ಸರಿಯಾಗಿ ಎಲ್ಲರಿಗೂ ಪ್ರೀತಿಯಿಂದ ಬಡಿಸುತ್ತಿದ್ದರು. ಬೆಳಗ್ಗೆ ಎರಡೆರಡು ತಿಂಡಿ, ಸ್ವೀಟು, ಮಧ್ಯಾಹ್ನ ಬಗೆ ಬಗೆಯ ಅಡಿಗೆ ಏನಾದರೊಂದು ಪಾಯಸ ವಗೈರೆ,ಸಂಜೆ ಮತ್ತೆ ತಿಂಡಿ ಊಟ ಎಲ್ಲಾ ರೆಡಿ. ಈ ದಿನ ವಿಶೇಷ ದಿನ, ಪೂಜೆ ಅಲ್ಲವೇ? ಊಟವೂ ಅಷ್ಟೇ ವಿಶೇಷವಾಗಿತ್ತು. ಉಂಡು ರೂಮು ಸೇರಿ ವಿಶ್ರಾಂತಿ ತೆಗೆದುಕೊಂಡೆವು.


ಸಂಜೆ ಆರು ಗಂಟೆಗೆ ಕಾಶಿಯ ಪೇಟೆ ಸುತ್ತಲು ನಾವು ಹೆಂಗಸರಷ್ಟೇ ಕಾಲ್ನಡಿಗೆಯಲ್ಲಿ ಹೊರಟೆವು. ದಾರಿ ಯಾರಿಗೂ ಗೊತ್ತಿಲ್ಲ. ಹೀಗೆ ಹೋಗ್ತಾ ಇರೋದು. ಬರುವಾಗ ಒಂದು ಆಟೋದಲ್ಲಿ ಸ್ವಾಮಿನಾರಾಯಣ ದೇವಸ್ಥಾನ ಅಂದರೆ ಯಾರು ಬೇಕಾದರೂ ಬಿಡುತ್ತಾರೆ ಎಂಬ ಧೈರ್ಯ. ನನ್ನ ಜೊತೆಗಿದ್ದವರಿಗೆಲ್ಲ ಏನಾದರೂ ಖರೀದಿಸುವ ಯೋಚನೆ. ನನಗೋ ಪ್ರತಿಯೊಂದೂ ಕೂಲಂಕುಷವಾಗಿ ನೋಡುವುದು ಒಂದಷ್ಟು ಕ್ಲಿಕ್ಕಿಸುವುದು ಹಾಗೆ ಅಲ್ಲಿಯ ತಿಂಡಿಗಳ ರುಚಿ ನೋಡುವ ಚಪಲ. ಈ ಇಬ್ಬದಿಯ ಆಸಕ್ತಿ ಇರುವವರ ಜೊತೆಯಾಗಿ ಖಂಡಿತಾ ಪ್ರವಾಸಕ್ಕೆ ಹೋಗಬಾರದು. ಸಮಾನ ಮನಸ್ಕರ ಜೊತೆ ಇಲ್ಲಾ ಒಬ್ಬರೇ ಪ್ರವಾಸ ಹೋಗುವುದರಲ್ಲಿ ಹೆಚ್ಚು ತೃಪ್ತಿ ಕಾಣಬಹುದು ಎಂಬುದು ನನ್ನ ಅನುಭವಕ್ಕೆ ಬಂದ ವಿಷಯ. ಆಗಲೇ ತಾಕೀತು ಮಾಡಿದ್ದೆ ; ನಿಮ್ಮಷ್ಟಕ್ಕೇ ಮುಂದೆ ಮುಂದೆ ಹೋಗಬೇಡಿ, ಆಮೇಲೆ ನಾನೆಲ್ಲೋ ನೀವೆಲ್ಲೋ ಆಗ್ತೀವಿ.


ಕಾಶಿಯಲ್ಲಿ ದೇವಸ್ಥಾನಗಳು ಇರುವ ಸುತ್ತಮುತ್ತಲೂ ಇಕ್ಕಟ್ಟಾದ ರಸ್ತೆಗಳು ಚಿಕ್ಕ ಚಿಕ್ಕ ಓಣಿಗಳು ಅಂಗಡಿಗಳ ಸಾಲು ಸಾಲು. ಆಟೋ ಟಾಂಗಾ ಭರಾಟೆ, ದ್ವಿಚಕ್ರ ವಾಹನಗಳ ಓಡಾಟ,ಜನಸಂದಣಿ ಇಷ್ಟೇ. ಬಸ್ಸು, ಕಾರು ಗಳು ಕಾಣ ಸಿಗದು. ಬದುಕಿಗಾಗಿ ತರಾವರಿ ವ್ಯಾಪಾರಸ್ಥರ ಹೋರಾಟ. ತುಂಬಾ ತುಂಬಾ ಕಷ್ಟ ಸಹಿಷ್ಣುಗಳು. ಚಿಕ್ಕ ಚಿಕ್ಕ ಜಾಗದಲ್ಲೇ ಅಂಗಡಿಗಳು. ಅಲ್ಲಲ್ಲಿ ಕಾಣ ಸಿಗುವ ಪುಟ್ಟ ಪುಟ್ಟ ದೇವಸ್ಥಾನಗಳು. ದುರ್ಗಾಮಾತೆಯ ಪುಟ್ಟ ದೇಗುಲ ರಸ್ತೆಯ ಅಂಚಿನಲ್ಲಿ ಚಂದದ ಮೂರ್ತಿಗಳಿವು. ಹಾಗೆ ಇಲ್ಲಿ ಬರೀ ಆಂಜನೇಯ ದೇವಸ್ಥಾನಗಳೇ ಹೆಚ್ಚು. ಎಲ್ಲವನ್ನೂ ವೀಕ್ಷಿಸುತ್ತ ಸಾಗುತ್ತಿತ್ತು ನಮ್ಮ ದಾರಿ. ಅಂತೂ ಜೊತೆ ಜೊತೆಗೆ ಸಾಗುತ್ತಿರುವಾಗ ತರಾವರಿ ತಿಂಡಿಗಳು ರಸ್ತೆ ಪಕ್ಕ ಒಂದು ಸರ್ಕಲ್ ಹತ್ತಿರ. ತಿನ್ನಲು ಅಷ್ಟೇನೂ ರುಚಿ ಅನಿಸಲಿಲ್ಲ. ಅರ್ಧಂಬರ್ಧ ತಿಂದು ಎಲ್ಲರೂ ಚಹಾ ಕುಡಿದು ಕಾಲು ಸೋಲುವವರೆಗೂ ಸುತ್ತಾಡಿ ಅದೂ ಇದೂ ಖರೀದಿಸಿ ವಾಸ ಸ್ಥಾನಕ್ಕೆ ಮರಳಿದಾಗ ಭಟ್ಟರ ಮನೆ ಊಟ ಕಾಯುತ್ತಿತ್ತು. ಮುಂದುವರಿಯುವುದು ಭಾಗ -13ರಲ್ಲಿ‌.

ಭಂ ಭಂ ಬೋಲೆನಾಥ್

ಭಾಗ -11

ಶ್ರೀ ವಿಶ್ವೇಶ್ವರ ಜ್ಯೋತಿರ್ಲಿಂಗ ;


ಕಾಶಿಯ ಶ್ರೀ ವಿಶ್ವೇಶ್ವರ ಲಿಂಗವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಪದ್ಧತಿ ಪ್ರಕಾರ ಕಾಶಿ ವಿಶ್ವೇಶ್ವರನ ಜ್ಯೋತಿರ್ಲಿಂಗ ದರ್ಶನಕ್ಕೆ ಹೋಗುವವರು ಪಕ್ಕದಲ್ಲಿ ಹರಿಯುವ ಅತ್ಯಂತ ಪವಿತ್ರ ನದಿಯೆಂದು ಹೆಸರು ಪಡೆದಿರುವ ಗಂಗಾ ನದಿಯಲ್ಲಿ ಮುಳುಗೆದ್ದು ಹೋಗಬೇಕು .ಆದರೆ ನಾವು ಭಟ್ಟರ ಜೊತೆ ಹೋಗಿದ್ದರಿಂದ ಸೀದಾ ದೇವಾಲಯಕ್ಕೆ ಹೋಗುವಂತಾಯಿತು. ಗಂಗಾ ನದಿ ಉಕ್ಕೇರಿ ಹರಿಯುತ್ತಿದ್ದರಿಂದ ನದಿಗೆ ಕಾಲಿಡುವುದು ಆಗದ ಮಾತು. ಕೆಂಪನೆಯ ಕಡೆದಿಟ್ಟ ಓಕುಳಿಯ ಬಣ್ಣ. ಈ ಬಗ್ಗೆ ಭಟ್ಟರು ಮೊದಲೇ ತಾಕೀತು ಮಾಡಿದ್ದರು ; ಏನಿದ್ದರೂ ಈ ಬಾರಿ ದರ್ಶನವೊಂದೇ. ಕಳೆದ ಬಾರಿ ಹೋದಾಗ ಗಂಗಾ ನದಿಯಲ್ಲಿ ನಾಲ್ಕಾರು ಬಾರಿ ಮುಳುಗೇಳಿದ್ದು ಜ್ಞಾಪಿಸಿಕೊಂಡೆ.

ನದಿಯಿಂದ ವಿಶ್ವೇಶ್ವರನ ದರ್ಶನಕ್ಕೆ ಹೋಗುವ ದಾರಿ ಇಕ್ಕಟ್ಟಾಗಿದೆ. ದಾರಿಯ ಎಡ ಬಲಗಳಲ್ಲಿ ನೂರಾರು ಅಂಗಡಿಗಳಿವೆ . ಅವು ಪೂಜಾಸಾಮಗ್ರಿಗಳು , ತಿಂಡಿಯ ಅಂಗಡಿಗಳು, ಬಟ್ಟೆ ಪಾತ್ರೆಯ ಅಂಗಡಿಗಳು ಮೊದಲಾದ ಎಲ್ಲಾ ಬಗೆಯ ಅಂಗಡಿಗಳಿವೆ . ಅದು ಭಕ್ತರ ,ಪ್ರವಾಸಿಗರಿಂದ ತುಂಬಿಹೋಗಿರುತ್ತದೆ. ಶಿವನ ಲಿಂಗ ದರ್ಶನಕ್ಕೆ ಹೋಗುವವರು ಈ ಅಂಗಡಿಗಳಲ್ಲಿ ಅಭಿಷೇಕಕ್ಕೆ ಹಾಲಿನ ಮತ್ತು ನೀರಿನ ಗಿಂಡಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಸದಾ ಜನರಿಂದ ತುಂಬಿರುವ ದೇವಸ್ಥಾನಕ್ಕೆ ಸರತಿಯಲ್ಲಿ ಸಾಗಬೇಕು. ಸಣ್ಣದಾದ ಗರ್ಭಗುಡಿಯಲ್ಲಿರುವ ಶ್ರೀ ವಿಶ್ವೇಶ್ವರ ಜೋತಿರ್ಲಿಂಗ ದರ್ಶನ ಮಾತ್ರದಿಂದಲೇ ಮನಸ್ಸು ಮುದಗೊಳ್ಳುವುದಲ್ಲದೇ ಸರ್ವ ಪಾಪಗಳೂ ಕ್ಷಯವಾಗುವುದೆಂಬ ನಂಬುಗೆ ಇದೆ. ಅಲ್ಲದೆ ಸವ೯ ಅಭೀಷ್ಟಗಳೂ ನೆರವೇರುತ್ತವೆ, ಜೀವನ ಸಾರ್ಥಕವಾಗುತ್ತದೆ, ಜೀವನ್ಮುಕ್ತಿ ದೊರೆಯುತ್ತದೆ ಎಂಬ ಬಲವಾದ ನಂಬುಗೆ ಭಕ್ತರಲ್ಲಿ ಇದೆ.

ಇನ್ನು ಈ ದೇವಸ್ಥಾನ ಆವರಣದೊಳಗೆ ಎದುರುಗಡೆ ಗಣಪತಿ ವಿಗ್ರಹವಿದೆ. ಇಲ್ಲಿ ಎದುರು ಇರಬೇಕಾದ ನಂದಿ ವಿಗ್ರಹ ಹೊರಗಡೆ ಇದ್ದು , ಪಕ್ಕದಲ್ಲಿರುವ ಮಸೀದಿಯ ಕಡೆ ನೋಡುತ್ತಿದ್ದಾನೆ. ಮಂದಿರದ ಗೋಡೆ ಮತ್ತು ಮುಸ್ಲಿಂರ ಪ್ರಾರ್ಥನಾ ಮಂದಿರದ ಗೋಡೆ ಒಂದನ್ನೊಂದು ಹೊಂದಿಕೊಂಡಿವೆ. ಇಲ್ಲಿ ಬಲವಾದ ಪೋಲೀಸ್ ಪಡೆಯನ್ನು ಕಾವಲು ಹಾಕಲಾಗಿದೆ. ಜಗದ್ ರಕ್ಷಕ ವಿಶ್ವೇಶ್ವರ ಜ್ಯೋತಿರ್ಲಿಂಗ ರಕ್ಷಣೆಗಾಗಿ ಪೋಲಿಸರು ಹಗಲು ರಾತ್ರಿ ಕಾಯುತ್ತಾರೆ. ಮುಸ್ಲಿಂ ದೊರೆ ಔರಂಗಜೇಬನು ದೇವಾಲಯವನ್ನು ನಾಶಮಾಡಿ ಲಿಂಗವನ್ನು ದೇವಾಲಯದ ಬಾವಿಯಲ್ಲಿ ಹಾಕಿದ್ದನಂತೆ. ನಂತರ ರಾಣಿ ಅಹಲ್ಯಾಬಾಯಿಯು ದೇವಾಲಯವನ್ನು ಹೊಸದಾಗಿ ಕಟ್ಟಿಸಿ ಲಿಂಗವನ್ನು ಪ್ರತಿಷ್ಟಾಪಿಸಿದಳೆಂದು ಇತಿಹಾಸ ಹೇಳುತ್ತದೆ.

ದೇವಾಲಯದ ಆವರಣದ ಸುತ್ತಲೂ ಆಂಜನೇಯ, ಗಣಪತಿ, ದುರ್ಗಾ, ಹಾಗೂ ನೂರಾರು ಶಿವಲಿಂಗಗಳಿವೆ. ಆವರಣದಲ್ಲಿ ಒಂದು ಪುರಾತನ ವಟವೃಕ್ಷವಿದೆ. ಮನಸ್ಸಿನಲ್ಲಿ ಬೇಕಾದ ಕೋರಿಕೆಯನ್ನು ಸಂಕಲ್ಪಸಿಕೊಂಡು ಅದಕ್ಕೆ ದಾರ ಕಟ್ಟಿದರೆ ಆಸೆ ಕೈಗೂಡುವುದೆಂದು ಹೇಳುತ್ತಾರೆ . ಹಾಗಾಗಿ ಲಕ್ಷಾಂತರ ದಾರಗಳು ವೃಕ್ಷವನ್ನು ಸುತ್ತಿಕೊಂಡಿವೆ. ನಾವು ಹೋಗಿದ್ದು ಭಟ್ಟರ ಜೊತೆಗಲ್ಲವೇ? ಸ್ವಲ್ಪ ಗಡಿಬಿಡಿಯಾಯಿತು. ಇವೆಲ್ಲವನ್ನೂ ಅವಸರವಸರವಾಗಿ ದರ್ಶನ ಮಾಡಿಕೊಂಡು ಭಕ್ತಿಯಿಂದ ಪ್ರದಕ್ಷಿಣೆ ನಮಸ್ಕಾರ ದೂರದಿಂದಲೆ ಹಾಕಿ ಮತ್ತೊಮ್ಮೆ ನಮ್ಮಷ್ಟಕ್ಕೇ ಬರೋಣವೆಂದು ಮಾತಾಡಿಕೊಂಡೆವು.

ನಂತರ ತಾಯಿ ವಿಶಾಲಾಕ್ಷಿಯ ದರ್ಶನ , ಮತ್ತು ಅನ್ನಪೂರ್ಣೇಶ್ವರಿ ಹಾಗೂ ಕಾಳ ಭೈರವನ ದರ್ಶನ ಮಾಡಲೇಬೇಕು. ಇಲ್ಲದಿದ್ದರೆ ವಿಶ್ವನಾಥನ ದರ್ಶನ ಮಾಡಿದ ಪುಣ್ಯ ಲಭಿಸುವುದಿಲ್ಲವೆಂಬ ಮಾತಿದೆ. ಆದ್ದರಿಂದ ಅವುಗಳ ದರ್ಶನಕ್ಕೆ ನಮ್ಮನ್ನು ಕರೆದುಕೊಂಡು ಹೊರಟರು.

ವಿಶಾಲಾಕ್ಷಿ ಮತ್ತು ಅನ್ನಪೂರ್ಣೇಶ್ವರೀ ದೇವಾಲಯ;

ಸಣ್ಣ ಸಣ್ಣ ಗಲ್ಲಿಗಳಲ್ಲಿ ಸುತ್ತಿಕೊಂಡು ಹೋದರೆ ದೇವಾಲಯ ಸಿಗುವುದು. ಸಣ್ಣದಾದ ದೇವಾಲಯ, ಸರಳ ಅಲಂಕಾರ. ಆಗಲೇ ಜನರ ನೂಕು ನುಗ್ಗಲು ಶುರುವಾಗಿತ್ತು. ತಾಯಿಯ ದರ್ಶನ ಪಡೆದು ನಮಸ್ಕಾರ ಮಾಡಿ ಪ್ರಸಾದ ಪಡೆದು ಮುಂದೆ ಹೊರಟೆವು.

ಅನ್ನಪೂರ್ಣೇಶ್ವರೀ ದೇವಾಲಯ;

ಈ ದೇವಾಲಯ ಸ್ವಲ್ಪ ವಿಶಾಲವಾಗಿದೆ. ನಗುಮುಖದ ಅನ್ನಪೂರ್ಣೇಶ್ವರಿ ಅಭಯ ಹಸ್ತ ಹೊಂದಿದ್ದು ಭಕ್ತರಿಗೆ ಬೇಡಿದ್ದನ್ನೆಲ್ಲಾ ಕೊಡುವಳೆಂಬ ನಂಬುಗೆ ಇದೆ. ಭಕ್ತರು ದೇವಿಗೆ ಉಡಿ ತುಂಬುತ್ತಿರುತ್ತಾರೆ. ಇಲ್ಲಿಂದ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಹೋಗಿ ಮನೆ ಅಕ್ಕಿ ಡಬ್ಬಕ್ಕೆ ಹಾಕಿದರೆ ಶುಭವುಂಟಾಗುವುದೆಂದು ಹೇಳುತ್ತಾರೆ. ಹಾಗೂ ಈ ದೇವಿಯ ದರ್ಶನಕ್ಕೆ ಹೋಗುವಾಗ ಹೊರಗಡೆ ಸಿಗುವ ಕೆಂಪು ಬಳೆಗಳನ್ನು ಖರೀದಿಸಿ ಅಮ್ಮನಿಗೆ ಅರ್ಪಿಸುತ್ತಿದ್ದರು. ನಾವೂ ಹಾಗೆ ಮಾಡಿದೆವು. ಪ್ರಸಾದದ ರೂಪದಲ್ಲಿ ಈ ಬಳೆ ಕುಂಕುಮ ಇಲ್ಲಿ ಕೊಡುತ್ತಾರೆ.

ಕಾಳ ಭೈರವನ ದೇವಾಲಯ;

ಕಾಳಭೈರವ ಭವ್ಯ ಮೂರ್ತಿ . ಅತ್ಯಂತ ಚಿಕ್ಕದಾದ ಗರ್ಭಗುಡಿ. ಒಳಗೆ ಹೋಗಿ ಹತ್ತಿರದಿಂದ ದರ್ಶನ ಮಾಡಬಹುದು. ದೊಡ್ಡದಾದ ಕಣ್ಣು ಮೈತುಂಬ ತರಾವರಿ ಮಾಲೆಗಳು ರುದ್ರಾಕ್ಷಿ ಸುತ್ತಿ ಮೂಲ ಮೂರ್ತಿ ಹೇಗಿದೆಯೋ ಗೊತ್ತಿಲ್ಲ. ಆದರೆ ಎದೆ ಝಲ್ ಎನ್ನುವುದು ಸುಳ್ಳಲ್ಲ. ಕೇವಲ ದರ್ಶನ ಭಾಗ್ಯದಿಂದಲೆ ಸಂತೃಪ್ತಿಗೊಳಿಸುವ ಮಾಂತ್ರಿಕ ಶಕ್ತಿ ಇದೆ ಎಂಬುದು ನನ್ನ ಅರಿವಿಗೆ ಬಂದಿದ್ದು ಕೂಡಾ ಇಲ್ಲೆ. ಇಲ್ಲಿ ಸುತ್ತಲೂ ಚಿಕ್ಕ ಪ್ರಾಂಗಣವಿದ್ದು ಅಲ್ಲೆಲ್ಲ ಕಟ್ಟೆಯ ಮೇಲೆ ವಿವಿಧ ಬಗೆಯ ಪೂಜಾ ಸಾಮಗ್ರಿಗಳು,ಯಂತ್ರ, ತಂತ್ರದ ಸಾಮಗ್ರಿ,ದಾರ ಶಂಖ,ದೃಷ್ಟಿ ದೋಷದ ಸಾಮಗ್ರಿ ಅದು ಇದೂ ಅಂತ ಪೇರಿಸಿಟ್ಟುಕೊಂಡು ಇಲ್ಲಿ ಬರುವ ಭಕ್ತರನ್ನು ಕರೆಕರೆದು ಅದೇನೊ ಮಂತ್ರ ಹೇಳುತ್ತ ನವಿಲು ಗರಿಯಿಂದ ಬಗ್ಗಿಸಿದ ತಲೆಯ ಮೇಲೆ ಬಡಿಯುತ್ತ ಮರುಳು ಮಾಡುವುದು ಕಾಣ ಬರುತ್ತದೆ. ಕ್ಷೇತ್ರವಲ್ಲವೇ? ಭಕ್ತರೂ ನಂಬುವುದು ಸಾಮಾನ್ಯವಾಗಿದೆ. ಅಷ್ಟೇ ಚಾಲಾಕಿ ಹಣ ಲಪಟಾಯಿಸುವ ಗಿಮಿಕ್ಕಿನವರಿರುವುದು ನನ್ನ ಅನುಭವಕ್ಕೆ ಬಂತು. ಇಲ್ಲಿ ಬಹಳ ಹುಷಾರಾಗಿ ಇರಬೇಕು. ಕಾಶಿಯ ಕಪ್ಪು ದಾರವನ್ನು ಕೊಂಡು ತಂದು ಅದು ಅವನ ಪ್ರಸಾದವೆಂದು ಎಲ್ಲಾ ದೋಷ ನಿವಾರಣೆಗಾಗಿ ಕೈಗೆ ಕಟ್ಟಿಕೊಳ್ಳುತ್ತಾರೆ. ಆ ದಾರಗಳನ್ನು ಮನೆಗೆ ತಂದು ಗಂಗಾ ಸಮಾರಾಧನೆ ಮಾಡಿ , ನೆಂಟರು ಇಷ್ಟರಿಗೆ ಆ ದಾರವನ್ನೂ ,ಗಂಗಾಜಲವನ್ನೂ ಕೊಟ್ಟು ಆಶೀರ್ವಾದ ಪಡೆಯುವ ಪದ್ಧತಿ ಇದೆ. ಇದು ಕಾಶೀಯಾತ್ರೆಯ ಕೊನೆಯ ಕಾರ್ಯಕ್ರಮ.

ಮುಂದುವರಿಯುವುದು ಭಾಗ -12ರಲ್ಲಿ.
30-4-2020. 10.19pm

ಭಂ ಭಂ ಬೋಲೆನಾಥ್

ಭಾಗ -10

ಕಾಶಿ ಶ್ರೀ ವಿಶ್ವನಾಥನ ದರ್ಶನ ;


ದಿನಾಂಕ 16-9-2019 ಈ ದಿನ ಸೋಮವಾರ. ಶಿವನ ವಾರ. “ಬೆಳಗಿನ ಜಾವ ಐದು ಗಂಟೆಗೆಲ್ಲ ಕಾಶಿ ಶ್ರೀ ವಿಶ್ವನಾಥನ ದರ್ಶನಕ್ಕೆ ಕರೆದುಕೊಂಡು ಹೋಗುತ್ತೇವೆ.  ಬೇಗ ಎದ್ದು ರೆಡಿಯಾಗಿ. ತಡವಾದಂತೆ ಭಕ್ತರ ಕ್ಯೂ ಜಾಸ್ತಿ ಆಗುತ್ತ ಹೋಗುತ್ತದೆ. ದರ್ಶನ ಬೇಗ ಆಗೋದಿಲ್ಲ ಎಷ್ಟು ಬೇಗ ಹೋಗುತ್ತೇವೊ ಅಷ್ಟು ಸುಲಭ ದರ್ಶನಕ್ಕೆ”ಎಂದು ಹಿರಿಯ ಭಟ್ಟರು ಮೊದಲಿನ ದಿನ ರಾತ್ರಿ ಸುಮಾರು ಹತ್ತು ಗಂಟೆಗೆಲ್ಲ ಗಯಾದಿಂದ ಕಾಶಿಗೆ ತಲುಪಿ ದಣಿವಾರಿಸಿಕೊಂಡು ಊಟಕ್ಕೆ ಕುಳಿತಾಗ ಹೇಳಿದರು.

ನನಗಂತೂ ಈಗಾಗಲೇ ಈ ದಿನ ಎಷ್ಟೊಂದು ಸುತ್ತಾಡಿದ್ದೇವೆ. ಮತ್ತೆ ಮಾರನೆ ದಿನ ಅಷ್ಟು ಬೇಗ ಎದ್ದು ರೆಡಿಯಾಗೋದಾ? ಬಹಳ ಆತಂಕ ಶುರುವಾಯಿತು. ಆದರೆ ಬೇರೆ ದಾರಿ ಇಲ್ಲ. ಕ್ಷೇತ್ರಕ್ಕೆ ಎಲ್ಲರೊಟ್ಟಿಗೆ ಹೋದಾಗ ಸಮಯ ಸಂದರ್ಭ ಹೇಗೆ ಬರುತ್ತೋ ಹಾಗೆ ಹೊಂದಿಕೊಳ್ಳಲೇ ಬೇಕು. ಅದರಲ್ಲೂ ಸೋಮವಾರ ಕಾಶಿ ವಿಶ್ವನಾಥನ ದರ್ಶನ ಭಾಗ್ಯ! ಮನಸಲ್ಲಿ ಅದೆಲ್ಲಿತ್ತೊ ಉಮೇದಿ. ಕ್ಷೇತ್ರ ದರ್ಶನಕ್ಕೆ ಹೋದಾಗೆಲ್ಲ ಅನೇಕ ಬಾರಿ ಅನುಭವಕ್ಕೆ ಬಂದ ಸಂಗತಿ ಅಂದರೆ ಆಯಾಸ,ಸುಸ್ತು ಎಲ್ಲಾ ಮಂಗ ಮಾಯಾ. ಅದೇ ಮನೆಯಲ್ಲಿ ಇದ್ದಾಗ ಒಂದಲ್ಲಾ ಒಂದು ಆರೋಗ್ಯದಲ್ಲಿ ಸದಾ ಏರುಪೇರು. ಬಹುಶಃ ಕ್ಷೇತ್ರ ಸ್ಥಳದಲ್ಲಿ ನಮ್ಮ ಮೇಲಾಗುವ ಪೊಸಿಟೀವ್ ಎನರ್ಜಿ ದೇಹಕ್ಕೆ ಉತ್ಸಾಹ ತುಂಬಬಹುದೆಂಬುದು ನನ್ನ ನಂಬಿಕೆ. ಅನುಭವ ಕೂಡಾ. ಸರಿ ಇನ್ನೇನು ಆಯಾಸವಾದ ದೇಹಕ್ಕೆ ಪೊಗದಸ್ತಾದ ಊಟ ಸಿಕ್ಕರೆ ಹಾಸಿಗೆಯಲ್ಲಿ ಪವಡಿಸಿದಂತೆ ಸೋಂಪಾಗಿ ನಿದ್ದೆಯೂ ಬಂದುಬಿಡುತ್ತದೆ . ಬೆಳಗ್ಗೆ ಜೊತೆಗಿದ್ದವರೆಲ್ಲರ ಸ್ನಾನ ಮುಗಿಯುತ್ತಿದ್ದಂತೆ ನಾನೂ ಮುಗಿಸಿ ಜರಿ ಸೀರೆಯುಟ್ಟು ಲಗುಬಗೆಯಲ್ಲಿ ರೆಡಿಯಾದೆ ಭಂ ಭಂ ಬೋಲೆನಾಥ್ ಆಲಯಕ್ಕೆ ಹೊರಡಲು.
ಆಗಲೇ ಸಾಲಾಗಿ ನಾಲ್ಕಾರು ಆಟೋಗಳು ರಸ್ತೆಯ ಬದಿಯಲ್ಲಿ ನಮಗಾಗಿ ನಿಯೋಜಿಸಲಾಗಿತ್ತು. ಎರಡು ಕಿ.ಮೀ.ದೂರದಲ್ಲಿರುವ ಮಂದಿರ ತಲುಪಲು ನಾವಿರುವಲ್ಲಿಂದ ಒಂದೇ ನೇರವಾದ ಹಾದಿ ಮದ್ಯದಲ್ಲಿ ಸಿಗುವ ಒಂದು ಸರ್ಕಲ್ ಹತ್ತಿರ ತಿರುವು ತೆಗೆದುಕೊಂಡರೆ ಬಂದೇ ಬಿಟ್ಟಿತು ಇತ್ತೀಚೆಗೆ ಪ್ರಧಾನ ಮಂತ್ರಿ ಮೋದೀಜಿಯವರು ಭೇಟಿ ಕೊಟ್ಟಾಗ ನಿರ್ಮಿಸಿದ ಬೃಹದಾಕಾರದ ದೊಡ್ಡ ಕೃತಕ ದ್ವಾರ. ಇಲ್ಲಿಂದಲೇ ಮಂದಿರಕ್ಕೆ ಭಕ್ತರು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಜಾಗ ಶುರು. ಹಾಕಿದ ಬಟ್ಟೆ ಕೈಯಲ್ಲಿ ಕೇವಲ ಹಣ ಇರುವ ಪರ್ಸ್ ಬಿಟ್ಟರೆ ಮಂದಿರದೊಳಗೆ ಒಯ್ಯಲು ಯಾವುದಕ್ಕೂ ಅವಕಾಶವಿಲ್ಲ. ಎರಡು ಕಡೆ ನಮ್ಮನ್ನು ಪರಿಶೀಲಿಸಲಾಗುತ್ತದೆ. ಸ್ವಯಂ ಸೇವಕರು,ಪೋಲಿಸ್ ಹಾಗೂ ಗನ್ ಮ್ಯಾನ್ ಗಳು ಸದಾ ಸಿದ್ದರಾಗೇ ಇರುತ್ತಾರೆ. ಟೈಟ್ ಸೆಕ್ಯುರಿಟಿ ಇದೆ ಇಲ್ಲಿ. ನಾವು ಬೇರೆ ಬೇರೆ ತಂಡದವರೆಲ್ಲ ಸೇರಿ ಸುಮಾರು ಮೂವತ್ತು ಜನ ಭಟ್ಟರ ಹಿಂದೆ ಬಾಲದಂತೆ ಸಾಲಾಗಿ ಹೊರಟೆವು. ಆದರೆ ಕ್ಯೂ ಇರಲೇ ಇಲ್ಲ.

ಮಂದಿರದ ಪ್ರಾಂಗಣದಲ್ಲಿ ನಮ್ಮನ್ನೆಲ್ಲ ಸಾಲಾಗಿ ನಿಲ್ಲಿಸಿ ಅಭಿಶೇಕಕ್ಕೆ ಬೇಕಾದ ಹಾಲು, ಎಕ್ಕದ ಮಾಲೆ ಮತ್ತು ಬಿಲ್ವ ಪತ್ರೆ ಎಲ್ಲರ ಕೈಯಲ್ಲಿ ಹಿಡಿಸಿ ಸ್ವಾಮಿಯ ದರ್ಶನಕ್ಕೆ ಕರೆದುಕೊಂಡು ಹೊರಟರು. ಕೇವಲ ಹತ್ತು ನಿಮಿಷದಲ್ಲಿ ಅದೆಷ್ಟು ಜನ ಸೇರಿಬಿಟ್ಟರು ಅಂದರೆ ಆಗಲೇ ದೊಡ್ಡ ಕ್ಯೂ. ಭಟ್ಟರು ಅರ್ಧದಲ್ಲೆ ಕ್ಯೂ ಸರಿಸಿ ನಮ್ಮನ್ನು ಮುಂದೆ ಹೋಗಲು ಅನುವು ಮಾಡಿಕೊಟ್ಟರು.

ಗರ್ಭಗುಡಿಯ ಬಾಗಿಲಲ್ಲಿ ನಿಂತು ದೂರದಿಂದಲೇ ವಿಶ್ವನಾಥನ ದರ್ಶನ ಮಾಡಬೇಕು. ಒಂದು ಅಡಿ ಆಳದಲ್ಲಿ ಕೂತ ಆ ಪರಶಿವನಿಗೆ ಅಭಿಷೇಕ ಮಾಡಲು ನಾಲ್ಕೂ ಕಡೆ ಬೆಳ್ಳಿಯ ಹರಣಿಯಾಕಾರದಲ್ಲಿ ನಿರ್ಮಿಸಿದ ಜಾಗದಲ್ಲಿ ಹಾಲು ಹಾಕಬೇಕು. ಪತ್ರೆ ಪುಷ್ಪ ದೂರದಿಂದಲೆ ಹಾಕಬೇಕು. ನಿಂತಲ್ಲೆ ಕೈ ಮುಗಿದು ಬರದೇ ಗತಿ ಇಲ್ಲ. ಪೋಲೀಸರು ಹೆಚ್ಚು ಹೊತ್ತು ನಿಲ್ಲಲು ಬಿಡುವುದಿಲ್ಲ. ಒಬ್ಬರು ಭಟ್ಟರು ಸದಾ ಭಕ್ತರು ಹಾಕಿದ ಪುಷ್ಪ ಪತ್ರೆಗಳನ್ನು ಬುಟ್ಟಿಗೆ ತುಂಬುತ್ತಲೇ ಇರುತ್ತಾರೆ. ಹಾಕಿದ ಹಾಲು ಸರಾಗವಾಗಿ ಪಾಣಿಪೀಠದ ತಳದಲ್ಲಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ. ಸಂಪೂರ್ಣ ಬೆಳ್ಳಿ ಮಯ ಶಿವನ ಲಿಂಗವೊಂದನ್ನು ಬಿಟ್ಟು. ಇಲ್ಲಿ ಗೋಕರ್ಣದಂತೆ ಲಿಂಗ ಮುಟ್ಟಿ ಪೂಜೆಯಿಲ್ಲ. ಆದರೆ onlineನಲ್ಲಿ ಬುಕ್ ಮಾಡಿ ಮೊದಲೇ ಅನುಮತಿ ಪಡೆದವರಿಗೆ ಮಾತ್ರ ಲಿಂಗ ಮುಟ್ಟಿ ನಮಸ್ಕಾರ ಮಾಡಲು ಸಾಧ್ಯ ಎಂದು ಕೇಳಲ್ಪಟ್ಟೆ. ನಾನು ಹೋದಾಗ ಈ ರೀತಿ ಒಬ್ಬರು ದರ್ಶನ ಮಾಡಿದ್ದು ಕಂಡು ಆಮೇಲೆ ಈ ಬಗ್ಗೆ ತಿಳಿಯಲ್ಪಟ್ಟೆ.


ಶಿವನ ಗರ್ಭಗುಡಿಯ ಎದುರಲ್ಲೇ ಇನ್ನೊಂದು ಗರ್ಭಗುಡಿಯಿದೆ. ಶಿವನ ಲಿಂಗದ ಪ್ರತಿರೂಪ. ಅಲ್ಲಿ ಅರ್ಚನೆ ಲಿಂಗ ಮುಟ್ಟಿ ನಮಸ್ಕಾರ ಮಾಡಬಹುದು. ಸುತ್ತ ಪ್ರಾಂಗಣದಲ್ಲಿ ಆಯಾ ಪೂಜೆಗೆ ತಕ್ಕಂತೆ ಭಕ್ತರನ್ನು ಕೂಡಿಸಿಕೊಂಡು ಪುರೋಹಿತರು ರುದ್ರಾಭಿಷೇಕ, ಕುಂಕುಮಾರ್ಚನೆ ಇತ್ಯಾದಿ ಮಾಡಿಸಿ ತದನಂತರ ಶಿವನ ದರ್ಶನ ಮಾಡಿಸುತ್ತಾರೆ. ಆಯಾ ಪೂಜೆಗೆ ಇಂತಿಷ್ಟು ಹಣ ಮೊದಲೇ ಪಡೆಯುತ್ತಾರೆ.

ಪಕ್ಕದಲ್ಲೇ ಮಸೀದಿ ಇದೆ. ಬೃಹದಾಕಾರವಾಗಿ ಕಬ್ಬಿಣದ ಕಂಬಿಗಳಿಂದ ತಡೆಗೋಡೆ ನಿರ್ಮಿಸಿದ್ದಾರೆ. ಇಲ್ಲಿ ಮಂಗಗಳ ಹಾವಳಿ ಜೋರು. ದೊಡ್ಡ ದೊಡ್ಡ ಆಲದ ಮರ ಕಟ್ಟಡದ ಮೇಲೆಲ್ಲ ಆಟ ಆಡಿಕೊಂಡು ಭಕ್ತರು ಕೊಂಚ ಕಣ್ತಪ್ಪಿದರೂ ಇರುವುದನ್ನು ಎಗರಿಸಿಕೊಂಡು ಹೋಗುತ್ತವೆ. ಸಾಕ್ಷಾತ್ ಹನುಮಂತನೆಂದೇ ಭಾವಿಸುವ ಇಲ್ಲಿಯ ಜನ ಕಾಶಿಯೇನು ಈ ಪ್ರದೇಶದ ಸುತ್ತ ಮುತ್ತ ಬೇಕಾದಷ್ಟು ಮಂಗಗಳನ್ನು ಕಾಣಬಹುದು.

ಮುಂದುವರಿಯುವುದು ಭಾಗ -11ರಲ್ಲಿ.
29-4-2020. 6.29pm

ಭಂ ಭಂ ಬೋಲೆನಾಥ್

ಭಾಗ – 9

ಬೋದಗಯಾ;

ಗಯಾ ಕ್ಷೇತ್ರದಿಂದ ವಾಪಸ್ ವಾರಣಾಸಿಗೆ ಬರುವ ಹಾದಿಯಲ್ಲಿ 9 ಕೀ.ಮೀ. ದೂರದಲ್ಲಿ ಈ ಸ್ಥಳ ಸಿಗುತ್ತದೆ. ಅದ್ಬುತವಾದ ಮಹಾಬೋಧಿ ದೇವಾಲಯವಿದೆ. ಹಾಗೆ ವಿಶಾಲವಾಗಿ ತನ್ನ ರೆಂಬೆಗಳನ್ನು ಹರಡಿಕೊಂಡು ಸೋಂಪಾಗಿ ಬೆಳೆದು ನಿಂತ ಬೃಹದಾಕಾರದ ಒಂದು ಬೋಧಿವೃಕ್ಷವಿದೆ. ಇಲ್ಲಿಯೇ ಶಾಕ್ಯವಂಶದ ಸಿದ್ದಾರ್ಥ ಆರು ವರ್ಷಗಳ ಕಾಲ ಕಠಿಣ ತಪಸ್ಸನ್ನಾಚರಿಸಿ ತನ್ನ 35ನೆಯ ವಯಸ್ಸಿನಲ್ಲಿ ಜ್ಞಾನೋದಯ ಪಡೆದು ಬುದ್ಧನಾದದ್ದು. ಬೋಧಗಯ ಪ್ರಪಂಚದ ಬೌದ್ಧರ ಯಾತ್ರಾಸ್ಥಳವಾಗಿದೆ.

ಮೌರ್ಯ ಅಶೋಕ ಈ ವೃಕ್ಷದ ಹಿಂದೆ ಏಕಶಿಲಾಸ್ತಂಭವೊಂದನ್ನು ನಿಲ್ಲಿಸಿ, ಮರದ ಸುತ್ತಲೂ ಚೌಕಾಕಾರದ ಕಟಾಂಜನವನ್ನು ಕಟ್ಟಿಸಿದ. ಇಲ್ಲಿನ ಬೋಧಿವೃಕ್ಷ ಸುಮಾರು 2400 ವರ್ಷಗಳ ಇತಿಹಾಸ ಹೊಂದಿದ್ದು ಕಾಲ ಕ್ರಮೇಣ ಒಣಗಿದಂತೆಲ್ಲ ಇದೇ ವೃಕ್ಷದ ಬೀಜವನ್ನೇ ಗಿಡವಾಗಿ ಬೆಳೆಸಿದರು ಎಂಬ ಪ್ರತೀತಿ ಇದೆ. ಇಂದಿನವರೆಗೂ ನೆನಪಿನ ಕುರುವಾಗಿ ಸೋಂಪಾಗಿ ಬೆಳೆದು ನಿಂತಿದೆ.

ಭಗವಾನ್ ಬುದ್ಧನ ಮಂದಿರದ ಒಳಗಡೆ ಹೋಗಲು ಕಟ್ಟು ನಿಟ್ಟಿನ ಕಾನೂನು ಕ್ರಮ ಇಲ್ಲಿ ಜಾರಿಯಲ್ಲಿದೆ. ಮಂದಿರದ ಆವರಣದ ಪ್ರವೇಶದ ಗೇಟಿನ ಸನಿಹದಲ್ಲೇ ನಮ್ಮೆಲ್ಲಾ ಸಾಮಾನುಗಳನ್ನಿಡಲು ಹಾಗೂ ಟಿಕೆಟ್ ಪಡೆಯಲು ಕೌಂಟರ್ ಇದೆ. ಒಳಗಡೆ ಮೊಬೈಲ್ ಕೂಡಾ ತೆಗೆದುಕೊಂಡು ಹೋಗುವಂತಿಲ್ಲ. ಈ ಮಂದಿರದ ಆವರಣ ಎಕರೆಗಟ್ಟಲೆ ವಿಸ್ತೀರ್ಣ ಹೊಂದಿದ್ದು ಎಲ್ಲಾ ಕಡೆ ಅಂದವಾಗಿ ಗಿಡಗಳನ್ನು ಬೆಳೆಸಿದ್ದಾರೆ.

ಆವರಣದಿಂದ ಮಂದಿರದ ಎಂಟ್ರೆನ್ಸನಲ್ಲಿರುವ ಬಲವಾದ ದೊಡ್ಡ ಗೇಟಿಂದ ಸ್ವಲ್ಪ ಒಳಗೆ ನಡೆದು ಹೋದರೆ ಬೃಹದಾಕಾರದ ಎತ್ತರದ ಗೋಪುರವಿರುವ ಕಟ್ಟಡದಲ್ಲಿ ಶಾಂತವಾಗಿ ಕುಳಿತ ಭವ್ಯ ಬುದ್ಧನ ಪ್ರತಿಮೆ ಸಂಪೂರ್ಣ ಬಂಗಾರ ಮಯ. ತದೇಕ ಚಿತ್ತದಿಂದ ನೋಡುತ್ತಿದ್ದರೆ ಅವನ ಚರಿತ್ರೆ ಮಸ್ತಕದಲ್ಲಿ ತೂರಿ ನಾವೂ ಅಲ್ಲೇ ಕುಳಿತು ಕ್ಷಣ ಕಾಲ ಧ್ಯಾನಿಸುವಂತಾಗುತ್ತದೆ. ಇದಕ್ಕೂ ಅವಕಾಶವಿದೆ ಅಲ್ಲಿ. ಜನ ಮನಸ್ಸಿನಲ್ಲೇ ನಮಿಸಿ ಅವನ ಪಾದ ಸ್ಪರ್ಶ ಮಾಡಿ ಕಾಣಿಕೆ ಹಾಕಿ ಹೊರಡುವವರೆಗೂ ಸಂಪೂರ್ಣ ನಿಶ್ಯಬ್ದ ಮೌನ.

ನಾವು ಹೋದಾಗ ಉದ್ದನೆ ಕ್ಯೂ ಇತ್ತು. ಆದರೆ ಮಾತು ಮೌನ ತಾಳಿತ್ತು. ಸುತ್ತಲಿನ ಆವರಣದ ಅಲ್ಲಲ್ಲಿ ಪಿತೃಪಕ್ಷದ ಕಾರ್ಯ ಮಾಡಲು ಬಂದವರ ಗುಂಪು ದಂಡಿಯಾಗಿತ್ತು. ಆಗಲೇ ಕತ್ತಲಾವರಿಸತೊಡಗಿತ್ತು. ಆವರಣದಿಂದ ಹೊರ ಬಂದ ನಾವು ಇನ್ನೂ ಸ್ಥಳ ವೀಕ್ಷಿಸುವ ಇರಾದೆ ಇದ್ದರೂ ಗತಿ ಇಲ್ಲದೆ ನಮ್ಮ ವಾಹನ ಏರಬೇಕಾಯಿತು.

ಸನಿಹದಲ್ಲೇ ಇರುವ ಬೃಹದಾಕಾರದ ಬುದ್ಧನ ಪ್ರತಿಮೆ, ಚಿಕ್ಕ ಪುಟ್ಟ ಹಲವು ಪ್ರತಿಮೆಗಳಿರುವ ದೊಡ್ಡ ಪಾರ್ಕ್ ಕಾರಿನಲ್ಲಿ ಕುಳಿತೇ ವೀಕ್ಷಿಸುತ್ತ ವಾರಣಾಸಿಯ ಕಡೆಗೆ ಪ್ರಯಾಣ ಬೆಳೆಸಿದೆವು.

ಮುಂದುವರಿಯುವುದು ಭಾಗ -10ರಲ್ಲಿ.
11-1-2019. 5.17pm