ಜೀವನ

ಅಣುಕಿಸುವ ಜನರ ಮಧ್ಯೆ ಬದುಕಲೇ ಬೇಕು
ಅಷ್ಟು ಅನಿವಾರ್ಯ ಈ ಬದುಕು.

ಬೆನ್ನಿಗಂಟಿದ ಹೊರೆ ಹೊರಲೇ ಬೇಕು
ಎಷ್ಟು ಮನ ನೊಂದರೂ ಬಿಡದೆ.

ಅಂಜಿಕೆಯ ಮನಕೆ ಧೈರ್ಯ ತುಂಬಲೇ ಬೇಕು
ಬೇರೆ ಗತ್ಯಂತರವಿಲ್ಲ ಅದಕೆ.

ದುಃಖತಪ್ತ ಮನ ಸಂತೈಸಿಕೊಳ್ಳಲೇ ಬೇಕು
ನಮಗೆ ನಾವೇ ಅದಕೆ.

ಒಂಟಿ ಬದುಕಿನ ಯಾನ ಅನುಭವಿಸಲೇ ಬೇಕು
ಕಾಲನ ಕೋಲು ಬೀಸುವ ತನಕ.

ಕ್ಷಣ ಕ್ಷಣ ಹತಾಷೆಗೆ ಹೃದಯವಡ್ಡಲೇ ಬೇಕು
ಕಾಲ ಕೂಡಿ ಬರುವವರೆಗೆ.

ಚಿಂತಿಸುವ ಮನ ಹೈರಾಣಾಗದಂತೆ ತಡೆಯಲೇ ಬೇಕು
ನಮ್ಮ ನಂಬಿದ ಕರುಳ ಬಳ್ಳಿಗೆ.

ಅಪವಾದ ನಿಂದನೆಗಳಿಗೆ ಕಿವುಡಾಗಲೇ ಬೇಕು
ನಮ್ಮ ನಾವು ಉಳಿಸಿಕೊಳ್ಳಲು.

ಸಹಿಸಿಕೊಳ್ಳುವ ತಾಳ್ಮೆ ಮನುಜಗೆ ಇರಲೇ ಬೇಕು
ಮನಸಲಿ ಶಾಂತಿ ನೆಲೆಗೊಳ್ಳಲು.

ನಾನು ನನದೆಂಬ ಆಸೆ ತೊರೆದು ಬದುಕಲೇ ಬೇಕು
ಆಗಾಗ ಮೌನಕೆ ಶರಣಾಗಿ.

ಬರುವ ಜಂಜಾಟಕೆ ತಲೆ ಕೊಡಲೇ ಬೇಕು
ಜೀವನವೇ ಹೀಗಲ್ಲವೆ??

12-6-2017. 8.31am

ವ್ಯತ್ಯಾಸ

ಓಡುವ ರೈಲಿಗೆ
ಸಾಗುವ ಬದುಕಿಗೆ
ಕೊನೆಯೆಂಬುದು
ರೈಲು ಕೆಟ್ಟಾಗ
ಸಾವು ಬಂದಾಗ.

ಕೆಟ್ಟರೆ
ದುರಸ್ತಿ ಮಾಡಿ ಓಡಿಸುವವರು
ಜನರು.

ಋಣತೀರಲು
ಹೊತ್ತೊಯ್ಯಲು ಬರುವವರು
ಯಮಧೂತರು.

ದುರಸ್ತಿ ಆಗದಿದ್ದರೆ
ಹಾಕುವರು ಗುಜರಿಗೆ.

ಪ್ರಾಣ ಇರದಿದ್ದರೆ
ಸಾಗಿಸುವರು ಸ್ಮಶಾನಕೆ.

11-6-2017. 5.45am