ನವೆಂಬರ್ 2020ರ ಕರ್ಮವೀರ ರಾಜ್ಯೋತ್ಸವ ಕನ್ನಡ ಕಾವ್ಯ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕವನವಿದು.

ಒಸರು

ಹೃದಯದ ಮಾತುಗಳು ಚಿತ್ತಕ್ಕಪ್ಪಳಿಸಿ
ಬುದ್ಧಿಯನ್ನೇ ತೂತಾಗಿಸುತ್ತವೆ ಇಲಿ ಕೊರೆವ ಬಿಲದಂತೆ

ಆಳ ಅಗಲವೊಂದೂ ಗೊತ್ತಾಗದಂತೆ
ಸದ್ದೂ ಕೂಡಾ ಮಾಡದಂತೆ.

ಹನಿ ಒಸರುತ್ತದೆ ಬೇರು ಬೇರುಗಳಲೆಲ್ಲ
ಅತ್ತಿಮರದ ರಸ ಗಡಿಗೆ ತುಂಬಲು ರಾತ್ರಿ ಹಗಲಾಗಬೇಕು.

ಆದರಿಲ್ಲಿ ಹಾಗಿಲ್ಲ
ದಿಂಬು ಒದ್ದೆಯಾಗಿ
ಬೆಳಗಾಗುವುದರೊಳಗೆ ಚಿತ್ತಾರ ಬಿಡಿಸಿಬಿಡುತ್ತವೆ
ಯಾರಿಗೂ ಕಾಣದಂತೆ
ಮೇಲ್ನೋಟಕೆ ಹಾಕಿದ ಕವರು ನಗುತ್ತಲೇ ಇರುತ್ತದೆ.

ಸೂರ್ಯೋದಯದ ಶೃಂಗಾರದ ರಂಗಿಗೆ
ಹೆಣ್ಣು ನವಿಲನ್ನು ಆಕರ್ಷಿಸಲು ಗಂಡು ಕುಣಿಯುತ್ತದೆ
ಬಿಚ್ಚಿದ ಗರಿಗಳುದುರಿದ್ದಷ್ಟೇ ಬಂತು
ದಕ್ಕಿತೋ ಇಲ್ಲವೋ ಯಾರಿಗೆ ಗೊತ್ತು?

ಒಳ ಮನಸಿನ ತೊಳಲಾಟವನೆಲ್ಲ ಹುದುಗಿಸಿಕೊಂಡು
ನರಳಿ ಮೇಲ್ತೇಪೆ ಹಾಕಿದ ಮೊಗ
ಹಲ್ಕಿರಿಯುತ್ತದೆ ತನಗೇನೂ ಆಗಿಲ್ಲವೆಂಬಂತೆ
ಥೇಟ್ ಮರದೆಲೆಗಳು ಹಸಿರು ಕಳೆದುಕೊಂಡು ತರೆಗೆಲೆಗಳಾಗಿ ಉದುರಿದರೂ
ಹಾರಾಡುತ್ತ ಸರಪರ ಸದ್ದು ಮಾಡುವಂತೆ.

ಪಾಪ ಪ್ರಜ್ಞೆ ಕಾಡುವುದೇ ಇಲ್ಲ ರಸ ಹೀರಿದ ದಳ್ಳುರಿಗೆ
ದೋಸೆ ಮುಸುರೆಯಾಗುವುದಿಲ್ಲವಂತೆ
ಗೊಡ್ಡು ನಂಬಿಕೆ ಅದೆಷ್ಟು ಆಳ ಅಗಲ ಇಂದಿಗೂ
ಗೊತ್ತಿದ್ದೂ ನಂಬುವರಲ್ಲ ಅಲ್ಲೊಂದು ಇಲ್ಲೊಂದು
ಕತ್ತಲೆಯ ಕೋಣೆಯಲಿ ಬಿಕ್ಕಳಿಸಿದ ಸದ್ದು
ದಿಂಬಿಗಷ್ಟೇ ಸೀಮಿತವಾಗಿರಬೇಕೆ?
ಪ್ರಶ್ನೆ ಮೇಲೆ ಪ್ರಶ್ನೆ ಅನವರತ.

ನಿಗಿ ನಿಗಿ ಕುದಿವ ಮನಸು
ಕ್ರಮೇಣ ಬೂದಿ ಮುಚ್ಚಿದ ಕೆಂಡ ನೋಡಲಾಗದು
ಉರಿದುರಿದು ನಂದಿ ಹೋಗುವ ಬೇಗುದಿಯ ಬದುಕು
ಕೊನೆಗೊಂದು ದಿನ ಕಾಣುವುದು ಬರಿಯ ಬೂದಿಯ ರಾಶಿ
ಹೆಣ್ಣಿನ ಬದುಕೆಂದರೆ ಇಷ್ಟೇ….
ನಿಂತ ನೀರು!

8-10-2020. 7.55pm

                            

ಕಾಡಿನಲ್ಲೊಂದು ದಿನ (ಮಕ್ಕಳ ಕಥೆ)

(ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು(ರಿ) ಜಿಲ್ಲಾ ಘಟಕ,ರಾಯಚೂರು ಇವರು ನವೆಂಬರ್ 2019ರಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಮಕ್ಕಳ ಕಥಾ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ ಮೂರನೆಯ ಬಹುಮಾನ ಪಡೆದ ಕಥೆಯಿದು. ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಒಟ್ಟೂ 34 ಕಥೆಗಳನ್ನೊಳಗೊಂಡ “ನವಿಲು ಕುಣಿದಾವ” ಎಂಬ ಅಂದವಾದ ಹೆಸರನ್ನಿಟ್ಟು ಅರಣ್ಯ ರಕ್ಷಕರೂ ಹಾಗೂ ಘಟಕದ ಅಧ್ಯಕರೂ ಆದ ಶ್ರೀ ಯಲ್ಲಪ್ಪ ಎಮ್.ಮರ್ಚೇಡ್ ರವರು ಮಕ್ಕಳ ಕಥಾ ಪುಸ್ತಕವನ್ನು ಹೊರ ತಂದಿದ್ದಾರೆ) ಅದೊಂದು ದೊಡ್ಡ ಕಾಡು. ಯಾವೊಬ್ಬ ನರ ಪಿಳ್ಳೆಯೂ ಅಲ್ಲಿಗೆ ಕಾಲಿಡಲೂ ಹೆದರುತ್ತಿದ್ದನು. ಆಗಸಕ್ಕೆ ಮುಖ ಮಾಡಿ ನಿಂತ ಎತ್ತರವಾದ ಮರಗಳು ಅಜಾನುಬಾಹುವಾಗಿ ತಮ್ಮ ಟೊಂಗೆಗಳನ್ನು ಊರಗಲ ಚಾಚಿ ಸೂರ್ಯನ ಕಿರಣಕ್ಕೆ ಚಪ್ಪರ ಹಾಸಿಬಿಟ್ಟಿದ್ದವು. ಅಲ್ಲಲ್ಲಿ ಹರಿಯುವ ಜರಿ ತೊರೆಗಳು ಗಿಡ ಮರ ಪಕ್ಷಿ ಪ್ರಾಣಿಗಳಿಗೆ ಯಥೇಚ್ಚವಾಗಿ ನೀರುಣಿಸುತ್ತ ಜುಳು ಜುಳು ನಾದ ಆ ಪಕ್ಷಿಗಳ ನಿನಾದ ಕಾಡು ಮೃಗಗಳ ಗರ್ಜನೆ ಇಡೀ ಕಾಡೂ ಭಯಾನಕ ಅಷ್ಟೇ ರೋಮಾಂಚಕ ವಾತಾವರಣ ಸೃಷ್ಟಿ ಮಾಡಿತ್ತು. ಜನರೇ ಪ್ರವೇಶಿಸುತ್ತಿರಲಿಲ್ಲ ಅಂದ ಮೇಲೆ ಇನ್ನೇನು? ಕಾಡು ಸದಾ ಸಮೃದ್ದಿ! ಮರ ಕಡಿಯುವವರಿಲ್ಲ, ಪ್ರಾಣಿ ಭೇಟೆಯಾಡುವವರಿಲ್ಲ. ಮನಸೋ ಇಚ್ಛೆ ಪ್ರಾಣಿಗಳ ಓಡಾಟ. ಜೇನು ಗೂಡುಗಳಂತೂ ಜೇನು ತುಂಬಿ ಸುತ್ತೆಲ್ಲ ಮಕರಂದದ ಸುವಾಸನೆ ಜೊತೆಗೆ ಕಾಡು ಹೂವುಗಳು ತಾವೇನು ಕಮ್ಮಿ ಎಂಬಂತೆ ಪಂದ್ಯಕ್ಕೆ ನಿಂತಿದ್ದವು. ಅಂತೂ ಆ ಕಾಡಿನ ದೃಶ್ಯ ವರ್ಣನಾತೀತ.

ಒಮ್ಮೆ ಒಬ್ಬ ವಿಜ್ಞಾನಿ ಈ ಕಾಡಿನ ಬಗ್ಗೆ ವಿಷಯ ತಿಳಿದು ಹೇಗಾದರೂ ಸರಿ ಈ ಕಾಡನ್ನು ನೋಡಲೇ ಬೇಕೆಂದು ಒಂದು ದಿನ ಬೆಳ್ಳಂಬೆಳಗ್ಗೆ ಹೊರಡುತ್ತಾನೆ. ಹೋಗುವಾಗ ತನ್ನ ರಕ್ಷಣೆಗೆ ಏನೆಲ್ಲಾ ಬೇಕು ಎಲ್ಲವನ್ನೂ ವ್ಯವಸ್ಥೆ ಮಾಡಿಕೊಳ್ಳುತ್ತಾನೆ. ದಟ್ಟಾರಣ್ಯ ಪ್ರವೇಶಿಸುತ್ತಿದ್ದಂತೆ ಅವನ ಜಂಗಾಲವೇ ಉಡುಗಿ ಹೋದ ಅನುಭವ. ಎತ್ತರದ ಮರದಿಂದ ಇಳಿ ಬಿಟ್ಟ ಹೆಬ್ಬಾವೊಂದು ಬಾಯಿ ತೆರೆದು ಇವನತ್ತ ನುಗ್ಗುತ್ತದೆ. ಇವನೋ ಎಲ್ಲಿ ಕಾಲಿಟ್ಟರೆ ಹೇಗೋ ಎಂಬ ಯೋಚನೆಯಲ್ಲಿ ನೆಲ ನೋಡುತ್ತ ಹೆಜ್ಜೆ ಹಾಕುತ್ತಿದ್ದ. ಒಣಗಿದ ಎಲೆಗಳ ನಡುವೆ ಒಂದೊಂದೇ ಹೆಜ್ಜೆ ಹಾಕಿದಾಗಲೆಲ್ಲ ಸರ್ ಪರ್ ಶಬ್ದ ಬೇಡ ಬೇಡವೆಂದರೂ ಬರುತ್ತಿತ್ತು ಎಷ್ಟೇ ನಿಧಾನವಾಗಿ ಹೆಜ್ಜೆ ಹಾಕಿದರೂ. ಈ ಶಬ್ದ ಹಾವಿನ ಕಿವಿಗೆ ತಾಗಿತ್ತೋ ಅಥವಾ ಭೇಟೆಗಾಗಿ ಕಾದಿತ್ತೊ ಏಕ್ದಂ ಇವನತ್ತ ನುಗ್ಗಿ ಬಂದಿತ್ತು. ಅದು ಬರುವ ವೇಗಕ್ಕೆ ಇವನೂ ಜಾಗೃತಗೊಂಡು ಸತ್ತೆನೊ ಬಿದ್ದೆನೊ ಎನ್ನುತ್ತ ಕಾಲು ಹೋದ ಕಡೆ ಓಡಲು ಶುರು ಮಾಡಿದ. ಓಡುತ್ತಿದ್ದಾನೆ ಜೀವದ ಹಂಗು ತೊರೆದು‌. ಎಷ್ಟೇ ರಕ್ಷಾ ಕವಚದ ಗಂಬೂಟು ಹಾಕಿದ್ದರೂ ಅಲ್ಲಿ ಬೆಳೆದ ಮುಳ್ಳು ಕಂಟಿಗಳು ಇವನ ಕೈ ಕಾಲು ಮುಖ ಮೈಯ್ಯೆಲ್ಲಾ ತರಚಿಬಿಟ್ಟಿದ್ದವು. ಅಂದರೂ ಜೀವ ರಕ್ಷಣೆಗಾಗಿ ಓಡುತ್ತಲೇ ಇದ್ದಾನೆ. ಹಾವು ಎಷ್ಟು ದೂರ ಓಡಿದರೂ ಇವನ ಬೆನ್ನು ಬಿಡುತ್ತಿಲ್ಲ. ಓಡಿ ಹೋಗುವ ರಭಸದಲ್ಲಿ ಹಾವು ಬೆನ್ನಟ್ಟಿದ ಗಾಬರಿಯಲ್ಲಿ ಅವನು ಜೊತೆಗೆ ತಂದಿದ್ದ ಸಾಮಾನುಗಳೆಲ್ಲ ಒಂದೊಂದೇ ಉದುರಿ ಕೊನೆಗೆ ಅದ್ಯಾವುದೊ ಮುಳ್ಳು ಕಂಟಿ ಕೋಲು ಮಾತ್ರ ಅವನು ಕೈ ಬಿಟ್ಟಿರಲಿಲ್ಲ.

ದೂರದಲ್ಲೊಂದು ನದಿ ಕಾಣುತ್ತಿದೆ. ಇವನಿಗೋ ಭಯಂಕರ ದಾಹ. ಅತ್ತ ಕಡೆಯೇ ಓಡುತ್ತಾನೆ. ಒಮ್ಮೆ ಹಿಂತಿರುಗಿ ನೋಡುತ್ತಾನೆ; ಕಾಡು ಬಿಟ್ಟು ನದಿಯ ಬಯಲಿಗೆ ಬಂದಿದ್ದಾನೆ. ಹಾವೂ ಇಲ್ಲ ಕಾಡೂ ಇಲ್ಲ. ಅಯ್ಯಪ್ಪಾ! ಸಾಕಪ್ಪಾ ಈ ಕಾಡಿನ ಸಹವಾಸ. ನಾನೆಲ್ಲಿದ್ದೀನೊ. ನನ್ನೂರು ಯಾವ ಕಡೆಯೋ. ಒಂದೂ ಗೊತ್ತಾಗುತ್ತಿಲ್ಲ ಇಲ್ಲಿ. ಸದ್ಯ ಬದುಕಿದೆಯಾ ಬಡ ಜೀವವವೇ ಅಂತಂದುಕೊಂಡು ದೀರ್ಘ ನಿಟ್ಟುಸಿರು ಬಿಟ್ಟು ನದಿಯ ಅಂಚಿನಲ್ಲಿ ಕೂತು ಸಂತೃಪ್ತಿಯಾಗುವಷ್ಟು ನೀರು ಕುಡಿದು ದಣಿವಾರಿಸಿಕೊಳ್ಳಲು ಅಲ್ಲೆ ಉದ್ದಂಡ ಮಲಗಿ ಬಿಟ್ಟ. ಕಣ್ಣು ಮುಚ್ಚಿದ್ದೊಂದೇ ಗೊತ್ತು. ಬಿಸಿಲ ಜಳ ಕಾವೇರಿದಂತೆ ಎಚ್ಚರಗೊಂಡು ನದಿ ನೀರಲ್ಲಿ ಮುಳುಗೆದ್ದು ಹೊರಟ ತನ್ನೂರು ಅರಸುತ್ತ. ಎಷ್ಟು ದೂರ ಹೋದರೂ ನದಿದಂಡೆ ಜನವಸತಿ ಪ್ರದೇಶ ಕಾಣಿಸುತ್ತಿಲ್ಲ. ಕತ್ತಲಾವರಿಸತೊಡಗಿತು. ಜೊತೆಗೆ ಭಯನೂ ಶುರುವಾಯಿತು‌. ಅಲ್ಲಾ ಇಷ್ಟು ಪುಕ್ಕಲಾ ನಾನು? ಮತ್ಯಾಕೆ ಕಾಡು ಪ್ರವೇಶಿಸುವ ಪ್ರಯತ್ನ ಮಾಡಿದೆ? ಛೆ ಛೆ, ನಾನು ಅಧೈರ್ಯಗೆಡಬಾರದು. ನಾನು ಬಂದ ಉದ್ದೇಶ ಈ ಕಾಡು ನೋಡಲು. ಒಂದಷ್ಟು ಸಂಶೋಧನೆ ಮಾಡಲು. ಆದರೆ ನನ್ನ ಹತ್ತಿರ ಇದ್ದ ಸಾಮಾನೆಲ್ಲ ಎಲ್ಲೆಲ್ಲಿ ಬಿತ್ತೊ ಏನೊ. ಈಗ ಈ ಕೆಲಸ ಕಷ್ಟ ಸಾದ್ಯ‌. ಕತ್ತಲಾದರೂ ಪರವಾಗಿಲ್ಲ. ಮುಂದೆ ಹೋಗುತ್ತಿರುವುದೇ ಸರಿ. ಎಲ್ಲಾದರೂ ಮಿಣುಕು ದೀಪ ಕಾಣಬಹುದು ಎಂಬ ಆಸೆಯಿಂದ ಹೊರಟ.

ಪೂರ್ತಿ ಅಮಾವಾಸ್ಯೆಯ ಕಗ್ಗತ್ತಲು. ಚುಕ್ಕೆಗಳು ಆಕಾಶವೆಲ್ಲ ಆವರಿಸಿದೆ. ನಭೋ ಮಂಡಲ ಅತ್ಯಂತ ರಮಣೀಯವಾಗಿ ಕಾಣುತ್ತಿದೆ. ನದಿಯಿಂದ ಬರುವ ತಂಪಾದ ಗಾಳಿ ಚಂದಿರನಿಲ್ಲದ ಆ ರಾತ್ರಿ ಅವನು ತಾನೆಲ್ಲಿರುವೆನೆಂದು ಮರೆಯುವಷ್ಟು ಖುಷಿ ಕೊಟ್ಟಿವೆ‌. ನಡೆಯುವ ನಡಿಗೆ ನಿಧಾನವಾಗುತ್ತಿದೆ. ಚಂದ ಚಂದ ಈ ಸೃಷ್ಟಿಯೇ ಚಂದ. ಈ ರಾತ್ರಿ ಹೀಗೆಯೇ ಇದ್ದುಬಿಡಲಿ, ಈ ತಾರೆಗಳು ಹೀಗೆಯೇ ಬೆಳಗುತ್ತಿರಲಿ, ಈ ನಡಿಗೆ ಹೀಗೆ ನಿರಂತರವಾಗಿರಲಿ ಎಂದು ತನ್ನಷ್ಟಕ್ಕೆ ಮಾತಾಡಿಕೊಳ್ಳುತ್ತಿದ್ದಾನೆ!

” ಸುರೇಶಾ ಸುರೇಶಾ ಎದ್ದೇಳೊ. ಸ್ಕೂಲಿಗೆ ಹೋಗುವುದಿಲ್ಲವೆನೊ? ” ಅವರಮ್ಮ ತಟ್ಟಿ ತಟ್ಟಿ ಎಬ್ಬಿಸುತ್ತಿದ್ದಾರೆ. ನಿಧಾನವಾಗಿ ಕಣ್ಣು ಬಿಟ್ಟ ಸುರೇಶ ಓಹ್! ಇದುವರೆಗೂ ನಾನು ಕಂಡಿದ್ದು ಕನಸು. ಛೆ! ಈ ಅಮ್ಮ ಬೇರೆ ಈಗಲೇ ಬಂದು ಎಬ್ಬಿಸಬೇಕಾ? ಎಷ್ಟೊಳ್ಳೆ ಕನಸು. ಸಖತ್ತಾಗಿತ್ತು. ಇನ್ನೂ ಏನೇನು ನೋಡುತ್ತಿದ್ದೆನೊ ಏನೊ‌. ಎಲ್ಲಾ ಹಾಳಾಯಿತು ಎಂದು ಮುಖ ಪೆಚ್ಚು ಮಾಡಿಕೊಂಡು ಎದ್ದವನು ನಿತ್ಯಕರ್ಮ ಮುಗಿಸಿ ಶಾಲೆಗೆ ಹೋಗಲು ಅಣಿಯಾದ. ಆದರೂ ತನ್ನಲ್ಲೇನೊ ಖುಷಿ ಆವರಿಸಿದ ಭಾವಕ್ಕೆ ತನ್ನಷ್ಟಕ್ಕೇ ಮುಗುಳ್ನಕ್ಕ. ಸುರೇಶ ತನ್ನೂರಿನ ಸರ್ಕಾರಿ ಕನ್ನಡ ಶಾಲೆಯ ಮಾಸ್ತರಾಗಿದ್ದ. ಎಂದಿನಂತೆ ಇವತ್ತೂ ಶಾಲೆಗೆ ಹೊರಟಿದ್ದರೂ ದಿನಕ್ಕಿಂತ ಅದೇನೊ ಉಮೇದಿ. ನೆನಪಿಸಿಕೊಂಡು ತನ್ನ ಬಳಿ ಇದ್ದ ಬಣ್ಣದ ಬಳಪಗಳನ್ನು ಎತ್ತಿಟ್ಟುಕೊಳ್ಳುತ್ತಾನೆ. ಸರಿಯಾಗಿ ಒಂಬತ್ತು ಗಂಟೆಗೆ ಪ್ರಾರ್ಥನೆ ಮುಗಿದು ನಿತ್ಯದ ತರಗತಿ ಶುರುವಾಗುತ್ತದೆ.

ಸುರೇಶ ತನ್ನ ತರಗತಿಯ ಮಕ್ಕಳಿಗೆ ನಿತ್ಯದ ಪಾಠಗಳನ್ನು ಹೇಳಿಕೊಟ್ಟಿದ್ದಲ್ಲದೇ ಮಕ್ಕಳನ್ನು ತನ್ನ ಸುತ್ತಲೂ ಪೇರಿಸಿಕೊಂಡು ಹೇಳುತ್ತಾನೆ “ಇವತ್ತೊಂದು ಕಥೆ ಹೇಳ್ತೀನಿ ಬನ್ನಿ ” ;

“ಅದೊಂದು ಕಾಡು. ಒಬ್ಬ ವಿಜ್ಞಾನಿ…‌‌…” ಹೀಗೆ ತನ್ನ ಕನಸಿನ ವೃತ್ತಾಂತ ಮಕ್ಕಳಿಗೆ ಹೇಳುತ್ತ ಅದಕ್ಕೆ ತಕ್ಕಂತೆ ತಾನು ಕಂಡ ದೃಶ್ಯಾವಳಿಗಳನ್ನು ಬಣ್ಣ ಬಣ್ಣದ ಚಾಕ್ಪೀಸಲ್ಲಿ ಬಿಡಿಸುತ್ತ ಮಕ್ಕಳಿಗೆ ಮನದಟ್ಟಾಗುವಂತೆ ಹೇಳುತ್ತಿದ್ದಾನೆ. ಮಕ್ಕಳೂ ಅಷ್ಟೇ ತದೇಕ ಚಿತ್ತದಿಂದ ಕಿವಿಗೊಟ್ಟು ಕೇಳುತ್ತಿದ್ದಾರೆ. ಅವರ್ಯಾರಿಗೂ ಸುತ್ತಲಿನ ಪರಿವೇ ಇಲ್ಲ. ಚಿತ್ರ ಬಿಡಿಸುತ್ತ ಬಿಡಿಸುತ್ತ ಆ ಕಪ್ಪು ಬೋರ್ಡ್ ಅಂದವಾದ ಕಾಡಿನ ಚಿತ್ರ, ನದಿ, ನಕ್ಷತ್ರಗಳಿಂದ ಆ ರಾತ್ರಿಯ ಸನ್ನಿವೇಶವೆಲ್ಲವುಗಳಿಂದ ತುಂಬಿ ಹೋಗಿದೆ‌. ಇತ್ತ ಮುಖ್ಯ ಶಿಕ್ಷಕರು ಕಾರಿಡಾರಿನಲ್ಲಿ ಬರುತ್ತಿರುವಾಗ ಇವರ ತರಗತಿಯಲ್ಲಿ ನಡೆಯುತ್ತಿರುವ ಕಥಾ ಸರಣಿ ಕೇಳುತ್ತ ಅಲ್ಲೇ ನಿಂತುಬಿಡುತ್ತಾರೆ‌. ಇವರು ನಿಂತದ್ದು ಕಂಡ ಉಳಿದ ಶಿಕ್ಷಕರು ಅವರೊಂದಿಗೆ ಇಡೀ ಶಾಲೆ ಮಕ್ಕಳೂ ಸೇರಿ ಬಿಟ್ಟಿದ್ದಾರೆ. ಏನೊಂದೂ ಗಮನಿಸದ ಸುರೇಶ ತಾನು ಕಂಡ ಕನಸಿನ ಕಥೆ ಮುಗಿಸಿದಾಗ ಜೋರಾದ ಚಪ್ಪಾಳೆ ಮೊಳಗುತ್ತದೆ. ಎಲ್ಲರ ಹೊಗಳಿಕೆ ಬೋರ್ಡ್ ಮೇಲೆ ರಾರಾಜಿಸುತ್ತಿದ್ದ ಆ ಚಿತ್ರಗಳು ಸುರೇಶನಿಗೆ ಶಾಲೆಯ ವಾರ್ಷಿಕೋತ್ಸವದಲ್ಲಿ ” ಉತ್ತಮ ಶಿಕ್ಷಕ” ಎಂಬ ಬಹುಮಾನ ತಂದುಕೊಡುತ್ತದೆ.

ಈ ಕಥೆಯ ತಾತ್ಪರ್ಯ “ಕಾಡನ್ನು ಉಳಿಸಿ, ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿ, ಉತ್ತಮ ಶಿಕ್ಷಕ ಮಕ್ಕಳಿಗೆ  ಉತ್ತೇಜನ.” 
                    
4-11-2019. 6.04pm

ಬರಹಕ್ಕೆ ಸಂದ ಉಡುಗೊರೆ

ಜನಪ್ರಿಯ online ತಾಣವಾದ “ಪ್ರತಿಲಿಪಿ ಕನ್ನಡ” ಇಲ್ಲಿ ಈಗೊಂದು ವರ್ಷದಿಂದ ನನ್ನ ಬರಹಗಳನ್ನು ಪ್ರಕಟಿಸುತ್ತಿದ್ದು ಓದುಗರ ಮೆಚ್ಚುಗೆಗೆ ಪಾತ್ರವಾಗಿದ್ದು ಬಹಳ ಹೆಮ್ಮೆಯ ವಿಷಯ. ಕೆಲವು ದಿನಗಳ ಹಿಂದೆ ಅವರಿಂದ ಬಂದ ಬಹುಮಾನ ಕಂಡು ಬೆರಗಾದೆ. ಈ ಮಟ್ಟದಲ್ಲಿ ಓದುಗರು ನನ್ನ ಬರಹಗಳನ್ನು ಸ್ವೀಕರಿಸಬಹುದೆಂಬ ಕಲ್ಪನೆ ಕೂಡಾ ಮಾಡಿರಲಿಲ್ಲ. ಈಗ ಇನ್ನಷ್ಟು ನಾನು ಬರೆಯುವ ಬಗ್ಗೆ ಜವಾಬ್ದಾರಿ, ನಂಬಿಕೆ ಬಂದಂತಾಗಿದೆ.

ಓದುಗರಿಗೂ ಹಾಗೂ ಪ್ರತಿಲಿಪಿ ತಾಣದವರಿಗೂ ನನ್ನ ಅನಂತ ಧನ್ಯವಾದಗಳು🙏

25-6-2019 4.49pm

ಕೃತಿ ಬಿಡುಗಡೆ, ಕವಿಗೋಷ್ಠಿ ಹಾಗೂ ಬಹುಮಾನ

ದಿನಾಂಕ 22-5-2019ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ರತ್ನಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಹೆಗಡೆ ಕಲ್ಚರಲ್ ಸೋಷಿಯಲ್ ಅಕಾಡಮಿ(ರಿ)ಬೆಂಗಳೂರು ಸಹಯೋಗದೊಂದಿಗೆ ಶ್ರೀಮತಿ ರತ್ನಸಾಹಿತ್ಯರವರ “ಮುಳ್ಳ ಬೇಲಿಯ ಹೂವು(ಕಾದಂಬರಿ) ಮತ್ತು ಹನಿಧಾರೆ(ಹನಿಗವನಗಳು)” ಕೃತಿ ಬಿಡುಗಡೆ ಸಮಾರಂಭ ಹಾಗೂ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ಸುಮಾರು ಮಧ್ಯಾಹ್ನ ಮೂರು ಗಂಟೆಗೆಲ್ಲ ಕವಿಗೋಷ್ಠಿ ಶುರುವಾಯಿತು. ಉಪಸ್ಥಿತರಿದ್ದ ಅತಿಥಿಗಳೊಂದಿಗೆ ಶ್ರೀ ಗುರುನಾಥ್ ಎಂ.ಬಡಿಗೇರ್ ಬೋರಗಿಯವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿ ಬಹಳ ಚಂದವಾಗಿ ಸಾಯಂಕಾಲ ಐದು ಗಂಟೆಯವರೆಗೂ ಸಾಂಗವಾಗಿ ನೆರವೇರಿತು. ಅತಿಥಿಗಳಾದ ಶ್ರೀ Mudal Vijay ಮತ್ತು Sri Ramesh Biradhar ರವರು ತಮ್ಮ ಅನುಭವಗಳೊಂದಿಗೆ ಕವಿಗಳಿಗೆ ಅನೇಕ ಕಿವಿ ಮಾತು ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ತದ ನಂತರ ಲಘು ಉಪಹಾರದೊಂದಿಗೆ ಮತ್ತೆ ಕೃತಿ ಬಿಡುಗಡೆ ಕಾರ್ಯಕ್ರಮ ಸಂಜೆ 5.45ಕ್ಕೆಲ್ಲ ಶ್ರೀಯುತ ನೀಲಾವರ ಸುರೇಂದ್ರ ಅಡಿಗ ಇವರ ಅಧ್ಯಕ್ಷತೆಯಲ್ಲಿ ಶುರುವಾಯಿತು. ಶ್ರೀಮತಿ ಸುಶೀಲ( ಲೇಖಕಿಯವರ ತಾಯಿ)ಇವರ ಸ್ವ ಹಸ್ತದಿಂದ ಕೃತಿ ಬಿಡುಗಡೆ ಮಾಡಲಾಯಿತು.

ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಾಯಣ್ಣರವರು ಅಲ್ಲಿ ಉಪಸ್ಥಿತರಿದ್ದ ಈಗಾಗಲೇ ಕೃತಿ ಬಿಡುಗಡೆ ಮಾಡಿದ ಲೇಖಕರಿಗೆ ಭರವಸೆಯ ಮಾತು ಹೇಳುತ್ತ ಲೇಖಕಿ ಶ್ರೀಮತಿ ರತ್ನಸಾಹಿತ್ಯರವರ ಸಾಧನೆಯ ಬಗ್ಗೆ ಅವರ ಕೃತಿಯ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಡಾ॥ವಿ.ಎನ್.ಹೆಗಡೆಯವರ ಪ್ರಾಸ್ತಾವಿಕ ನುಡಿ ಲೇಖಕಿಯವರ ಸಾಧನೆಯ ಪರಿಚಯ ಮಾಡಿಕೊಟ್ಟಿತು.

ನಿಯೋಜನೆಗೊಂಡ ವಿಮರ್ಶಕರಿಂದ ಕೃತಿಯ ಕುರಿತಾದ ಸುದೀರ್ಘವಾದ ವಿಮರ್ಶೆ, ಅತಿಥಿಗಳ ಮನದ ಮಾತು ಕೊನೆಯಲ್ಲಿ ಅಧ್ಯಕ್ಷರು ತಮ್ಮ ಸುದೀರ್ಘ ಜೀವನದ ಸಾಧನೆ,ಅನುಭವ, ಕಾವ್ಯದ ಕುರಿತಾದ ಮಾತುಗಳು ನಿಜಕ್ಕೂ ಅಚ್ಚರಿ ತಂದಿತು. ಬದುಕಿದರೆ ಏನಾದರೂ ಸಮಾಜಕ್ಕೆ ಮಾದರಿಯಾಗಿ ಬದುಕು ಎಂಬ ಹಿರಿಯರ ಮಾತು ನೆನಪಾಯಿತು.

ಕಾರ್ಯಕ್ರಮದಲ್ಲಿ ಲೇಖಕಿ ಒಂದೆರಡು ಮಾತುಗಳನ್ನು ಆಡಬಹುದಿತ್ತಲ್ಲಾ ಅಂತ ಅನಿಸಿದ್ದು ಸುಳ್ಳಲ್ಲ. ಬಹುಶಃ ಸಮಯದ ಅಭಾವದಿಂದ ಹಿಂದೇಟು ಹಾಕಿರಬಹುದು. ಅವರಿಂದ ಇನ್ನಷ್ಟು ಕೃತಿ ಹೊರಬರಲಿ ಎಂಬುದು ನನ್ನ ಆಶಯ,ಹಾರೈಕೆ.

ಆಗಲೇ ರಾತ್ರಿ ಎಂಟು ಗಂಟೆ ದಾಟಿತ್ತು. ಕಾರ್ಯಕ್ರಮ ಬಹಳ ಚೆನ್ನಾಗಿ ಅಚ್ಚುಕಟ್ಟಾಗಿ ನೆರವೇರಿತು. ಅನೇಕ ಹೊಸಬರ ಪರಿಚಯ, ಮಿತ್ರರ ಸಮಾಗಮ ಇನ್ನಷ್ಟು ಖುಷಿ ಕೊಟ್ಟಿತು. ಫೋಟೋ ಸೆಲ್ಫಿಗಳ ಭರಾಟೆ ಖುಷಿ ಖುಷಿ ಮಾತು ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ಮಗಳಂತಿರುವ ಪಾರ್ವತಿ ಸಪ್ನಾ ನನ್ನ ಜೊತೆಗಿದ್ದದ್ದರಿಂದ ನಾನಂತೂ ನಿರಾಳವಾಗಿದ್ದೆ😊

ಅಂದಾಃಗೆ ಅದಾಗಲೇ ಕೆಲವು ದಿನಗಳ ಹಿಂದೆ ಭಾಗವಹಿಸುವ ಕವಿಗಳಿಂದ ತಲಾ ಮೂರು ಕವನಗಳನ್ನು ಆಹ್ವಾನಿಸಿದ್ದು ಅದರಲ್ಲಿ ಆಯ್ಕೆಯಾದ ಇಪ್ಪತ್ತೈದು ಕವಿಗಳನ್ನು ಮಾತ್ರ ಕಾವ್ಯ ವಾಚನಕ್ಕೆ ಆಹ್ವಾನಿಸಿದ್ದರು. ಹಾಗೂ ಮೂರು ಕವನಕ್ಕೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಮತ್ತು ಇನ್ನೂ ಮೂರು ಕವನಗಳಿಗೆ ಸಮಾಧಾನಕರ ಬಹುಮಾನ ಎಂದು ಆಯ್ಕೆ ಕೂಡಾ ಮಾಡಿದ್ದರು.

ಭಾಗವಹಿಸಿದ ಪ್ರತಿಯೊಬ್ಬ ಕವಿಗಳಿಗೂ ಸರ್ಟಿಫಿಕೇಟ್ ಮತ್ತು ಪುಸ್ತಕ ನೀಡಿ ಗೌರವಿಸಿದರು. ಹಾಗೂ ಬಹುಮಾನ ಪಡೆದ ಕವಿಗಳಿಗೆ ರತ್ನ ಸಾಹಿತ್ಯರವರ ಎರಡೂ ಕೃತಿ, ನೆನಪಿನ ಕಾಣಿಕೆ ಮತ್ತು ಸರ್ಟಿಫಿಕೇಟ್ ನೀಡಿ ಗೌರವಿಸಿದರು. ಕವಿಗೋಷ್ಠಿಯಲ್ಲಿ ಭಾಗವಹಿಸಿ ನನ್ನ ಕವನಕ್ಕೆ ಮೂರನೇ ಬಹುಮಾನ ದೊರೆತಾಗ ಬಹಳ ಸಂತೋಷವಾಯಿತು. ಇನ್ನಷ್ಟು ಜವಾಬ್ದಾರಿಯೂ ಹೆಚ್ಚಿತು. ಭಾಗವಹಿಸಲು ಅನುವು ಮಾಡಿಕೊಟ್ಟ ಎಲ್ಲ ಮಹನೀಯರಿಗೂ ಆತ್ಮೀಯ ಧನ್ಯವಾದಗಳು.

# ವಾಸ್ತವ #

ಹೆಜ್ಜೆ ಮೂಡದ ಹಾದಿಯಲ್ಲಿ
ಸತ್ತು ಮಲಗಿದ ಬಿಕ್ಕುಗಳೆಷ್ಟೋ
ಲೆಕ್ಕ ಇಟ್ಟವರಾರು?

ಜನಜಂಗುಳಿಯ ನಡುವೆ
ಅಂಗೈಯ್ಯಗಲ ಹೊಟ್ಟೆಗಾಗಿ
ಪರದಾಡುವ ಹಸಿದವರೆಷ್ಟೋ.

ಜೀವದ ಹಂಗು ತೊರೆದು
ಊರಗಲ ಕಣ್ಣನಿಟ್ಟು
ದೇಶ ಕಾಯುವ ಸೈನಿಕರೆಷ್ಟೋ.

ಅಧಿಕಾರದ ಲಾಲಸೆಗಾಗಿ
ಮಾತು ಮರೆತು ಮೌನ ಮುರಿದು
ಇಲ್ಲಿ ಅನುದಿನವೂ ಕಾದಾಟ,ಬಡಿದಾಟ.

ಪದೋನ್ನತಿಯ ಗದ್ದುಗೆಯೇರಲು
ಇನ್ನಿಲ್ಲದ ಧಾವಂತ ಖರಾಮತ್ತು
ನ್ಯಾಯ ದೇವತೆಗೆ ಕಪ್ಪು ಪಟ್ಟಿಯೇ ಗತಿ.

ಯಾರು ಆಳಿದರೇನು ರಾಜ್ಯ
ಸುಂಕದವನ ಹತ್ತಿರ ಸುಃಖ ದುಃಖ ಹೇಳಿಕೊಂಡರೆ
ಸುಂಕ ಕೊಡದಿರೆ ಬಿಡುವನೇ??

***********
(ಬಹುಮಾನ ಪಡೆದ ಕವನ )
24-5-2019. 1.15pm

ರಾಜ್ಯ ಮಟ್ಟದ ಯುಗಾದಿ ಕವಿ ಗೋಷ್ಠಿ

ದಿನಾಂಕ 14-4-2019ರಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 30 ಜಿಲ್ಲೆಗಳ ಪ್ರಾತಿನಿಧಿಕ ಕವಿಗಳ ಸಮ್ಮಿಲನ “ರಾಜ್ಯ ಮಟ್ಟದ ಯುಗಾದಿ ಕವಿ ಗೋಷ್ಠಿ” ಹಾಗೂ “ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ” ಮತ್ತು “ಎರಡು ಕೃತಿಗಳ ಲೋಕಾರ್ಪಣೆ” ಕಾರ್ಯಕ್ರಮ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ಏರ್ಪಡಿಸಿತ್ತು. ಮತ್ತು ವೇದಿಕೆ ಮೇಲಿನ ಎಲ್ಲಾ ಗಣ್ಯರಿಗೆ ಮತ್ತು ಭಾಗವಹಿಸಿದ ಕವಿ-ಕವಯಿತ್ರಿಯರಿಗೆ “ಕನ್ನಡ ಸೇವಾ ರತ್ನ ಪ್ರಶಸ್ತಿ ಪ್ರದಾನ” ಸಮಾರಂಭ ಹಮ್ಮಿಕೊಂಡಿತ್ತು.

ಪರಮ ಪೂಜ್ಯ ಡಾ॥ಶ್ರೀ ಶ್ರೀ ಶ್ರೀ ಶಾಂತವೀರ ಮಹಾಸ್ವಾಮಿಗಳು, ಕೊಳದ ಮಠ ಮಹಾ ಸಂಸ್ಥಾನ, ಬೆಂಗಳೂರು ಇವರಿಂದ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ನೆರವೇರಿತು. ಕಾರ್ಯಕ್ರಮದ ರೂವಾರಿ ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಾಯಣ್ಣರವರ ಉಪಸ್ಥಿತಿಯಲ್ಲಿ ಅಕಾಡಮಿ ಸದಸ್ಯರಾದ ಡಾ॥ ಬೈರಮಂಗಲ ರಾಮೇಗೌಡರು ಹಾಗೂ ಆಹ್ವಾನಿತ ಅನೇಕ ಗಣ್ಯರು ತಮ್ಮ ಭಾಷಣಗಳಲ್ಲಿ ಅಂಬೇಡ್ಕರ್ ಕುರಿತಾಗಿ ಹಾಗೂ ಸಾಹಿತ್ಯದ ಕುರಿತಾಗಿ ಅನೇಕ ವಿಚಾರಗಳನ್ನು ಮಂಡಿಸುತ್ತ ನೆರೆದ ಸಾಹಿತ್ಯಾಸಕ್ತರನ್ನು ಕಾರ್ಯಕ್ರಮದಲ್ಲಿ ತಲ್ಲೀನವಾಗುವಂತೆ ಮಾಡಿದರು. ಕೊನೆಯಲ್ಲಿ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಸಬಾ ಸಮಾರಂಭ ಮುಗಿದಾಗ ಸಮಯ ಮಧ್ಯಾಹ್ನ ಒಂದು ಗಂಟೆ ಆಗಿದ್ದೇ ಗೊತ್ತಾಗಲಿಲ್ಲ!

ತದ ನಂತರ ವಿವಿಧ ಜಿಲ್ಲೆಗಳಿಂದ ಬಂದ ಒಟ್ಟೂ 85 ಕವಿಗಳಿಂದ ಕಾವ್ಯ ವಾಚನ ನಡೆಯುತ್ತಿತ್ತು. ಎರಡು ಹಂತದಲ್ಲಿ ಕವಿ ಗೋಷ್ಠಿ ಏರ್ಪಡಿಸಲಾಗಿತ್ತು. ನಿಯೋಜನೆಗೊಂಡ ಅತಿಥಿಗಳಿಂದ ಕವನಗಳ ಕುರಿತಾದ ಮಾತು, ವಿಮರ್ಶೆ ಕೊನೆಯಲ್ಲಿ. ಹಾಗೂ ವಾಚನ ಮಾಡಿದ ಪ್ರತಿಯೊಬ್ಬ ಕವಿಗಳಿಗೂ ಮತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರಿಗೂ ಶ್ರೀ ಮಾಯಣ್ಣನವರೇ ಸ್ವತಃ ಪ್ರಶಸ್ತಿ ನೀಡಿದ್ದು ವಿಶೇಷವಾಗಿತ್ತು. ಅವರು ” ಈ ಪ್ರಶಸ್ತಿ ಕೊಡುವ ಉದ್ದೇಶ ನಿಮ್ಮನ್ನೆಲ್ಲ ಸಾಹಿತ್ಯ ಪರಿಷತ್ತಿಗೆ ಕರೆ ತಂದು ಈ ಪ್ರಶಸ್ತಿ ಕೊಟ್ಟು ನಮ್ಮ ಸಾಹಿತ್ಯ ಪರಿಷತ್ತು ಪ್ರತಿಯೊಬ್ಬ ಕಲಾವಿದರು, ಬರಹಗಾರರ ಮನೆಯಲ್ಲಿ ಇರಬೇಕು. ಕನ್ನಡ ಎಲ್ಲರ ಮನೆಯಲ್ಲೂ ಬೆಳಗಬೇಕು. ಪ್ರತಿಯೊಬ್ಬರೂ ಕವಿಗಳೆ. ಆದರೆ ಭಾವನೆಗಳನ್ನು ಹೊರ ಚೆಲ್ಲಿ ಅಕ್ಷರ ರೂಪದಲ್ಲಿ ಕಟ್ಟಿ ಕೊಡುವುದು ಕೆಲವರಿಗೆ ಮಾತ್ರ ಸಾಧ್ಯ. ಇದು ಮುಂದಿನ ತಲೆ ಮಾರಿಗೂ ಬೆಳೆಯಲಿ ಎಂಬುದು ನಮ್ಮ ಉದ್ದೇಶ. ನಾಳೆ ಅವರೆಲ್ಲ ಈ ಪ್ರಶಸ್ತಿ ಕಂಡು ನಿಮ್ಮನ್ನು ನೆನಪಿಸಿಕೊಳ್ಳುವಂತಾಗಲಿ ” ಎಂದು ಗೌರವ ಪೂರ್ವಕವಾಗಿ ಹರಸಿದರು.

ಅದರಲ್ಲೂ ದೂರದ ಊರಿಂದ ಬಂದವರಿಗೆ ವಸತಿ ವ್ಯವಸ್ಥೆ, ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆಲ್ಲ ಬೆಳಗಿನ ಉಪಹಾರ ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಿದ್ದರು. ಕಾವ್ಯ ವಾಚನ ಮಾಡಿ ದೂರದ ಊರಿಗೆ ತೆರಳುವವರಿಗೆ ಮದ್ಯೆ ಮದ್ಯೆ ಪ್ರಶಸ್ತಿ ಕೊಡುತ್ತ ತಮ್ಮ ಆತ್ಮೀಯ ಮಾತುಗಳಿಂದ ನಮಗೆಲ್ಲ ಮುದ ನೀಡುತ್ತಿದ್ದರು. ರಾತ್ರಿ ಸುಮಾರು 8.30ರವರೆಗೂ ಅತ್ಯಂತ ಸಾಂಗವಾಗಿ ಕಾರ್ಯಕ್ರಮ ನೆರವೇರಿತೆಂದು ತಿಳಿಯಲ್ಪಟ್ಟೆ. ಇಂತಹ ಅವಕಾಶ ಒದಗಿಸಿಕೊಟ್ಟ ಅವರಿಗೂ ಹಾಗೂ ಅಲ್ಲಿ ಉಪಸ್ಥಿತರಿದ್ದ ಗಣ್ಯರಿಗೂ ಮತ್ತು ಸಂಘಟಿಕರಿಗೂ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.

ನಾನು ಉತ್ತರ ಕನ್ನಡ ಜಿಲ್ಲೆಯಿಂದ ಈ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದು ಸಾಹಿತ್ಯದ ಸುಧೆ ಕುಡಿಯುತ್ತ ಆತ್ಮೀಯ ಸ್ನೇಹಿತರ ಒಡನಾಟದಲ್ಲಿ ಸಮಯ ರಾತ್ರಿ ಎಂಟು ಗಂಟೆ ಆಗಿದ್ದೇ ಗೊತ್ತಾಗಲಿಲ್ಲ. ಮಧ್ಯಾಹ್ನ ಕೊನೆಯಲ್ಲಿ ಉಳಿದ ಊಟ ಚೂರೇ ಚೂರು ಸಿಕ್ಕರೂ ಹೊಟ್ಟೆ ಕೂಡಾ ತಕರಾರು ಮಾಡದೇ ಸಾಹಿತ್ಯದಲ್ಲಿ ಭಾಗಿಯಾಗಿತ್ತು.

ಕಾರ್ಯಕ್ರಮದ ಕೊನೆಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ. ಅತ್ಯಂತ ಲವಲವಿಕೆಯಿಂದ ಎಲ್ಲರಿಗೂ ಶ್ರೀ ಮಾಯಣ್ಣರವರು ಟೋಪಿ ತೊಡಿಸಿ,ಶಾಲು,ಹಾರ ನೆನಪಿನ ಕಾಣಿಕೆ ಇತ್ಯಾದಿ ಕೊಡುತ್ತ ತಮ್ಮ ಹಾಸ್ಯ ಭರಿತ ಮಾತುಗಳಿಂದ ನಗೆಗಡಲಲ್ಲಿ ತೇಲಿಸುತ್ತ ಕ್ಲಿಕ್ಕಿಗೆ ಎಲ್ಲರನ್ನೂ ಅಣಿಗೊಳಿಸುತ್ತಿದ್ದರು. ಅವರ ಲವಲವಿಕೆ, ಸಿಂಪಲಿಸಿಟಿ, ಆ ಉತ್ಸಾಹ, ಮದ್ಯೆ ಮದ್ಯೆ ಕವಿಗಳಿಗೆ ಕಿವಿ ಮಾತು ಇತ್ಯಾದಿ ನೋಡೋದೇ ನನಗಂತೂ ಒಂದು ಖುಷಿ ಸಂಭ್ರಮವಾಗಿತ್ತು.

ಹಾಗೆ ನನಗೆ ಪ್ರಶಸ್ತಿ ಕೊಡುವಾಗ ಮಾಯಣ್ಣರವರು “ನಿಮಗೆ ಮದುವೆಯಲ್ಲಿ ಟೋಪಿ ಹಾಕಿಲ್ಲ ಅಲ್ವಾ? ಈಗ ನಾನು ಹಾಕುತ್ತಿದ್ದೇನೆ ನೋಡಿ”ಅಂತ ಹಾಸ್ಯ ಮಾಡಿ ನಗಿಸಿದ್ದು ಮರೆಯಲಾರೆ. ಮೊದಲ ಬಾರಿ ಶ್ರೀ ಮಾಯಣ್ಣರವರು ಮತ್ತು ಡಾ॥ಬೈರಮಂಗಲ ರಾಮೇಗೌಡರವರೊಂದಿಗೆ ಮಾತನಾಡುವ ಅವಕಾಶ ದೊರಕಿತ್ತು ಈ ಸಮಾರಂಭದಲ್ಲಿ. ಬರಹದ ಕುರಿತಾದ ವಿವರಣೆ ಅವರೊಂದಿಗೆ ಹಂಚಿಕೊಂಡೆ.

ಇದೊಂದು ಸಾಹಿತ್ಯ ಜಾತ್ರೆಯಂತೆ ಭಾಸವಾಯಿತು. ಎಲ್ಲಾ ಕವಿ ಮನಗಳ ದಂಡು,ಸ್ನೇಹ, ಪ್ರೀತಿ, ಕ್ಲಿಕ್ ಗಳ ಭರಾಟೆ. ಕಿವಿಗಳಿಗೆ ಬೆಳಗಿಂದ ಸಾಯಂಕಾಲದವರೆಗೂ ಗೋಷ್ಠಿಯನ್ನು ಆಲಿಸುತ್ತ ಮೊಗಮ್ಮಾಗಿ ಸಾಹಿತ್ಯ ಸುರೆ ಕುಡಿದು ಮನ ಸಂತೃಪ್ತಿಗೊಂಡಿತು. ಪ್ರಶಸ್ತಿಗಿಂತ ಈ ಕಾರ್ಯಕ್ರಮ ಮತ್ತು ಹಲವು ಸ್ನೇಹಿತರ ಭೇಟಿ ಅವರೊಂದಿಗೆ ಕ್ಲಿಕ್ ಹೆಚ್ಚು ಸಂತೋಷ ತರಿಸಿದ್ದು ದಿಟ.

ಇನ್ನೂ ಪ್ರಶಸ್ತಿಗಳನ್ನು ಕೊಡುತ್ತಲೇ ಇದ್ದರು. ತಡ ರಾತ್ರಿಯಾಗುತ್ತಿದೆಯೆಂದು ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟಾಗ ರಾತ್ರಿ ಎಂಟು ಗಂಟೆ ದಾಟಿತ್ತು.

*****************

#ಸಂವತ್ಸರ#

ಹೊಸ ಶಖೆಗೆ ಹೊಸದೊಂದು ಸಂವತ್ಸರ
ಹೊತ್ತು ಬರುವುದು ಮತ್ತೆ ಯುಗಾದಿ
ಸಂಭ್ರಮ ಸಂತಸ ಸಿಹಿಕಹಿ ಎಲ್ಲವ
ತನ್ನೊಡಲಲ್ಲಿ ತರುವ ಯುಗಾದಿ||

ಮಾಮರ ಚಿಗುರಿಸಿ ಕೋಗಿಲೆ ಹಾಡಿಸಿ
ವಸಂತನ ಹೊಳಹು ಎಲ್ಲೆಡೆ ಪಸರಿಸಿ
ಬಿಸಿಲ ಚೆಲ್ಲಾಟಕೆ ಪ್ರಕೃತಿ ನೊಂದಾಯಿಸಿ
ಬಂತಿದೋ ನವ ಉಲ್ಲಾಸದ ಯುಗಾದಿ||

ಭೂಮಿಯ ಬದುಕಿಗೆ ಚೇತನ ತುಂಬಿಸಿ
ಬೆಳೆದ ಬೆಳೆಯಲಿ ನಗುವನುಹುದುಗಿಸಿ
ಜನಗಳ ಕಣ್ಣಲಿ ಸಂತಸ ಅರಳಿಸಿ
ಬಂತಿದೋ ಚಂದದ ಹೊಸ ಯುಗಾದಿ||

ಬೇವಿನ ಕಹಿಯೊಳು ಬೆಲ್ಲವ ಸೇರಿಸಿ
ಬದುಕಿನ ದುಃಖವ ಸುಃಖದಲಿ ತೋಯಿಸಿ
ಮನುಜನ ಮನದಲಿ ಜ್ಞಾನವ ಲೇಪಿಸಿ
ಬಂತಿದೋ ನಮ್ಮಯ ನವ ಯುಗಾದಿ||

ಸರಿಯುವ ಕಾಲನ ಲೆಕ್ಕವ ನೆನಪಿಸಿ
ವಿಖಾರಿಯೆಂಬ ಹೆಸರನು ಬದಲಿಸಿ
ಸರ್ವರಿಗೂ ಸದಾ ಶುಭವನು ಹರಸಿ
ಬಂದಿತೋ ನಾವೆಲ್ಲಾ ನಲಿವ ಯುಗಾದಿ||

(ಕವಿಗೋಷ್ಠಿಯಲ್ಲಿ ನಾನು ಓದಿದ ಕವನ)
16-4-2019. 3.30pm

ಕೊನೆಯ ಕ್ಷಣ

ಪ್ರತಿಲಿಪಿಯಲ್ಲಿ ಓದುಗರ ಆಯ್ಕೆಯಲ್ಲಿ ಪ್ರಕಟಿಸಿದ ಮೂರು ಕೃತಿಗಳ ನಂತರದ 20 ಸ್ಥಾನ ಪಡೆದ ಕೃತಿಗಳಲ್ಲಿ ನನ್ನ ಲೇಖನ.

ಇದು 27 ವಷ೯ಗಳ ಹಿಂದೆ ನಡೆದ ಕ್ಷಣ. ಅಮ್ಮನ ಇಡೀ ದೇಹಕ್ಕೆ ರೊಮೈಟೆಡ್ ಅರ್ಥೈಟೀಸ್ ಕಾಯಿಲೆ ಆವರಿಸಿ ನೋವಿನಿಂದ ನರಳುತ್ತ ಹಾಸಿಗೆಯಿಂದ ಏಳಲಾರದ ಪರಿಸ್ಥಿತಿಯಲ್ಲಿ ಮಲಗಿದ್ದರು. ರಾತ್ರಿ 8ಕ್ಕೆ ನಾನೇ ಊಟ ಮಾಡಿಸಿ ಮಲಗಿಸಿದ್ದೆ. ಮಗಳ ಬಾಳಂತನಕ್ಕೆ ಊರಿಗೆ ಹೋದವಳು ಅಮ್ಮ ಇಹಲೋಕದ ಯಾತ್ರೆ ಮುಗಿಸಿದ್ದು ನೋಡುವ ಹಾಗಾಯಿತು. ಅದು ಉತ್ತರಾಯನ ಪುಣ್ಯ ಕಾಲ, ಜನವರಿ ಇಪ್ಪತ್ತು, ಮುತ್ತೈದೆ ಸಾವು. ವಯಸ್ಸು ಕೇವಲ ಐವತ್ತೆರಡು ವರ್ಷ ಇರಬಹುದು. ಏಕೆಂದರೆ ಅಮ್ಮನ ಜನ್ಮ ದಿನ ಇದುವರೆಗೂ ಯಾರಿಗೂ ಗೊತ್ತಿಲ್ಲ.

ಗಂಡನ ಮನೆಯಿಂದ ತವರು ಮನೆಗೆ ಕರೆದುಕೊಂಡು ಹೋಗುವಾಗಲೇ ಅದಾವ ದೈವ ಅವರ ಬಾಯಲ್ಲಿ ಹೇಳಿಸಿತ್ತೊ “ಮಗಳೆ ಐದು ತಿಂಗಳು ಬಾಳಂತನ ಮುಗಿಸಿಕೊಂಡು ಹೋಗು.” ರಾತ್ರಿ 12ಗಂಟೆ ಐದು ತಿಂಗಳು ಮುಗಿದ ವೇಳೆ ನನ್ನ ಕೈಯ್ಯಾರೆ ಗಂಗಾ ಜಲ ಅರೆಬರೆ ಕುಡಿದು, ಗಂಟಲಲ್ಲಿ ಗೊಟಕ್ ಅನ್ನುವ ಶಬ್ದ, ಕಣ್ಣು ನಿದಾನವಾಗಿ ಮುಚ್ಚಿತು. ಪ್ರಾಣ ಹೋಗುವ ಸಮಯ ಕಣ್ಣಾರೆ ಕಂಡೆ. ಆ ಸಂಕಟ ಅಳು ಮುಗಿಲು ಮುಟ್ಟಿತು ಕರುಳು ಕಿತ್ತು ಬರುವ ಹಾಗೆ. ಊಹಿಸಿರಲಿಲ್ಲ ಸಾವು!

ಅದುವರೆಗೂ ಓಡಾಡಿಕೊಂಡಿದ್ದವರು ಐದು ತಿಂಗಳು ಮುಗಿಯುವ ನಾಲ್ಕು ದಿನ ಮೊದಲು ಸಂಕ್ರಾಂತಿ ದಿನದ ಸಾಯಂಕಾಲ ಹಾಸಿಗೆ ಹಿಡಿದಿರೋದು ಸಾಯಲು ಹುಲ್ಲು ಕಡ್ಡಿ ನೆವ ಬೇಕು ಎಂಬ ಮಾತು ಅಕ್ಷರ ಸಹ ನಿಜ ಆಗೋಯ್ತು. ಎಂಥ ಕಾಕತಾಳೀಯ!

“ಸಾವಿನ ನಿಜವಾದ ದುಃಖದ ತೀವ್ರತೆ ನಮ್ಮ ಹತ್ತಿರದವರ ಮರಣದಲ್ಲಿ ತಿಳಿಯುವುದು” ಎಲ್ಲೊ ಓದಿದ ನೆನಪು. ನಿಜಕ್ಕೂ ಹೌದು. ಸ್ವತಃ ಅನುಭವಿಸಿದೆ. ಹುಟ್ಟಿನಿಂದ ಅಮ್ಮನಿಲ್ಲದ ಪ್ರಪಂಚಕ್ಕೆ ಹೊಂದಿಕೊಳ್ಳಲು ವಷ೯ಗಳೇ ಬೇಕಾಯಿತು. ಆ ದಿನಗಳು ಯಾವತ್ತೂ ಮಾಸೋದಿಲ್ಲ. ಅಮ್ಮನಿಲ್ಲದ ತವರಿಗೆ ಹೋಗುವ ಕಾತರ ಈಗಿಲ್ಲ.

ದಿನ ಕಾಯ೯ ಮುಗಸಿ ವಾಪಸ್ಸು ಬರುವಾಗ ಮಗಳು ಕೈಯಲ್ಲಿ ಹಸು ಗೂಸು ನೆನಪಿಸುತ್ತಾಳೆ ಅಮ್ಮ ನಾನಿದಿನಿ.

1997ರಲ್ಲಿ ಇದೇ ಕಾಯಿಲೆ ನನಗೂ ಬಂತು. 2007 ರವರೆಗೆ ಹೋಮಿಯೊಪತಿ,ಅಲೋಪತಿ, ಆಯುವೆ೯ದಿಕ ಎಲ್ಲ ಔಷಧಿ ತೆಗೆದುಕೊಂಡೆ. ಕಡಿಮೆ ಆಗಲಿಲ್ಲ. ಚಿಕನ್ಗುನ್ಯಾ,ಸಯಾಟಿಕ(ಸೊಂಟ ನೋವು)ಬಂತು. ಕೆಲಸ ಬಿಟ್ಟೆ. ಕೊನೆಗೊಂದು ದಿನ ಯೋಗಕ್ಕೆ ಸೇರಿದೆ. ನಡೆಯೋಕೆ ಆಗದಿದ್ದವಳು ಕೇವಲ 15ದಿನದಲ್ಲಿ ಮಡಿಕೇರಿ’ಬ್ರಹ್ಮಗಿರಿ’ ಬೆಟ್ಟ ಹತ್ತಿ ಬಂದೆ. ಈಗ ಶುಗರ ಬಂದಿದೆ. ಯೋಗದಲ್ಲೇ ಎಲ್ಲ ಕಂಟ್ರೋಲ್ ಇದೆ‌ ಯಾವ ಮಾತ್ರೆ ಇಲ್ಲದೆ.

ನನ್ನ ಸ್ವಂತ ಅನುಭವದಲ್ಲಿ ಪ್ರತಿಯೊಬ್ಬರಿಗೂ ಹೇಳುವುದಿಷ್ಟೆ, ಕಾಯಿಲೆ ಮನುಷ್ಯನಾದವನನ್ನು ಯಾರನ್ನೂ ಬಿಟ್ಟಿಲ್ಲ. ಅದು ಬಂದಾಗ ದೃತಿಗೆಡದೆ ಸ್ವ ಮನಸ್ಸನಿಂದ ಅದರ ಪರಿಹಾರಕ್ಕಾಗಿ ಛಲ ತೊಡಬೇಕು. ನಮ್ಮಲ್ಲಿರುವ Willpower ಅಧ೯ ಕಾಯಿಲೆ ಗುಣ ಮಾಡುತ್ತದೆ. ಆರು ತಿಂಗಳು ಹಾಸಿಗೆ ಹಿಡಿದ ನನ್ನನ್ನು ‘ಇವಳೂ ಅಮ್ಮನ ದಾರೀನೆ ಹಿಡಿಯೋದು’ ಅಂತ ಆಡಿಕೊಂಡಾಗ ನನ್ನಲ್ಲಿ ಒಂದು ರೀತಿ ಛಲ ,ಈಗ ನಿಮ್ಮ ಮುಂದೆ ಬದುಕಿದ್ದೇನೆ.

ಬಹುಶಃ ಅಮ್ಮನಿಗೂ ಯೋಗದ ಶ್ರೀ ರಕ್ಷೆ ಸಿಕ್ಕಿದ್ದರೆ ಅಕಾಲಿಕ ಮರಣ ಹೊಂದುತ್ತಿರಲಿಲ್ಲವೇನೊ! ನೆನೆದಾಗ ಕಣ್ಣು ಮಂಜಾಗುತ್ತದೆ. ಕೊನೆಯ ಕ್ಷಣ ನೆನಪಾಗುತ್ತದೆ.

ಇವತ್ತು ಅಮ್ಮನ 27ನೇ ವರ್ಷದ ತಿಥಿ ಶಾಸ್ತ್ರ ಊರಲ್ಲಿ ನಡೆಯುತ್ತಿದೆ. ಅಣ್ಣ ಕರೆದರೂ ಹೋಗುವ ಮನಸ್ಸಿಲ್ಲ. ಅಮ್ಮನಿಲ್ಲದ ಆ ಮನೆ ಪ್ರೀತಿ ಇಲ್ಲದ ತವರಂತೆ ಭಾವ. ಮಕ್ಕಳ ಏಳ್ಗೆಯನ್ನೆ ಬಯಸುವ ಜೀವ, ಬರುವ ದಾರಿ ತುದಿಗಾಲಲ್ಲಿ ನಿಂತು ಗೋಣುದ್ದ ಮಾಡಿ ಕಾಯುವ ರೀತಿ, ಬರಲು ತಡವಾದರೆ ಏನೊ ಆಗಿಹೋಗಿದೆಯೆಂಬಂತೆ ಒದ್ದಾಡುವ ಪರಿ, ಆ ಮನೆಯಿಂದ ಹೊರಡುವಾಗ ಕಣ್ಣಲ್ಲಿ ನೀರು ತುಂಬಿಕೊಂಡು ಊರ ತುದಿಯವರೆಗೂ ಬಂದು ಬೀಳ್ಕೊಡುವ ದೃಶ್ಯ, ಇರುವಷ್ಟು ದಿನ ಊರಗಲದ ಸುದ್ದಿ ಬಿಚ್ಚಿಟ್ಟು ಕಷ್ಟ ಸುಃಖ ತನ್ನದೆಂಬಂತೆ ವರದಿ ಒಪ್ಪಿಸುವದು, ಮಾತ್ರೆಗಳ ಒಡನಾಟದಲ್ಲಿ ತನ್ನ ನೋವು ಶಮನಕ್ಕಾಗಿ ಪಟ್ಟ ಪಾಡು ಎಲ್ಲವೂ ಸುರುಳಿ ಬಿಚ್ಚಿದಂತೆ ನೆನಪಾಗುತ್ತಿದೆ. ಯಾರು ಎಷ್ಟೇ ಕರೆದರೂ, ಆದರಿಸಿದರೂ ಆ ಅಮ್ಮನ ಪ್ರೀತಿಗೆ ಯಾರೂ ಸಮಾನರಾಗೋಕೆ ಸಾಧ್ಯವೇ ಇಲ್ಲ. ಆ ಪ್ರೀತಿಯ ನೆನಪುಗಳೇ ನನಗೆ ಶ್ರೀ ರಕ್ಷೆ. ಕೋಟಿ ನಮಸ್ಕಾರ ಮಾಡಿದರೂ ಮುಗಿಯದು ನಿನ್ನ ಋಣ. ಅಮ್ಮಾ…..

7-2-2017. 5.43pm.

ಪ್ರತಿಲಿಪಿ ತಾಣದಲ್ಲಿ ಸಂದ ಬಹುಮಾನ

ಪಾಕಡಾ ಹೆಂಡತಿ (ನಗೆ ಬರಹ)

ಗಂಡ- ಯಾಕೆ ಏನಾಯ್ತೆ? ನಿದ್ದೆ ಬರ್ತಿಲ್ವಾ? ಹೊರಳಾಡ್ತಾ ಇದಿಯಾ?

ಹೆಂಡತಿ- ಇಲ್ಲ ಕಂಡ್ರಿ, ಕಸದ್ದೆ ಯೋಚನೆಯಾಗಿ ಬಿಟ್ಟಿದೆ.

ಗಂಡ- ಯಾಕೆ ದಿನಾ ಬೆಳಿಗ್ಗೆ ವಾಕಿಂಗ ಹೋಗುವಾಗ ತಗೊಂಡು ಹೋಗಿ ಅದೆಲ್ಲೊ ಬಿಸಾಕಿ ಬರ್ತಿದ್ದೆ.

ಹೆಂಡತಿ- ಹಂಗಲ್ಲರಿ, ಈಗ ಕಸ ಹಾಕೊ ಜಾಗ ಕ್ಲೀನ ಮಾಡಿ ರಂಗೋಲಿ ಬೇರೆ ಹಾಕಿಡ್ತಾರೆ, ಹ್ಯಾಂಗರಿ ರಂಗೋಲಿ ಮೇಲೆ ಕಸ ಹಾಕೋದು?

ಗಂಡ-ಅಷ್ಷೇನಾ, ಕಸದ ಗಾಡಿಗೇ ಹಾಕಿದ್ರಾಯ್ತು ಬಿಡು.

ಹೆಂಡತಿ- ಅದಲ್ಲ ಕಂಡ್ರಿ.

ಗಂಡ- ಮತ್ತಿನ್ನೇನೆ?

ಹೆಂಡತಿ -ಬೆಳಗ್ಗೆ ನಿಮಗೊಂದು ಕೆಲಸ ಹೇಳೋಣ ಅಂತಿದ್ದೆ.

ಗಂಡ – ಏನೇ ಅದೂ? ಈಗ್ಲೇ ಹೇಳು. ಕುತೂಹಲ ಬೆಳಗಿನವರೆಗೆ ಕಾಯೋಕಾಗಲ್ಲ. ನನ್ನ ಜಾಣ ಮರಿ ಅಲ್ವಾ ನೀನು. ಹೇಳು ಪುಟ್ಟಾ.

ಹೆಂಡತಿ – ಥೂ…ಹೋಗ್ರಿ. ಏನ್ರೀ ಈ ವಯಸ್ಸಿನಲ್ಲಿ …. ನನಗೆ ನಾಚಿಕೆ ಆಗುತ್ತೆ. ಹಂಗಲ್ಲ ಅನ್ಬೇಡಿ.

ಗಂಡ – ಮತ್ತೆ ಹೇಳು ಬೇಗಾ…

ಹೆಂಡತಿ – ಮತ್ತೆ, ಮತ್ತೆ ಮಹಾನಗರ ಪಾಲಿಕೆಯವರು ಕಸನ ಮೂರು ತರ ವಿಂಗಡಿಸಿ ಕೊಡಬೇಕು ಹೇಳ್ತಾರಿ, ಇಲ್ಲ ಅಂದ್ರೆ ಕಸ ತಗಳಲ್ವಂತೆ. ಪಾಂಪ್ಲೆಟ್ ಬೇರೆ ಕೊಟ್ಟಿದ್ದಾರೆ, ಓದಿಕೊಂಡು ವಿಂಗಡಿಸಿ, ಹಾಗೆ ಕಸದ ಗಾಡಿ ಬಂದಾಗ ತಗೊಂಡೋಗಿ ಹಾಕಿಬಿಡ್ರಿ. ಹೇಗಿದ್ರೂ ರಿಟೈರ್ಡ ಆಗಿದಿರಾ. ಬೇಕಾದಷ್ಟು ಟೈಮಿರುತ್ತೆ ನಿಮಗೆ ಫ್ಫೀಯಾಗಿದ್ದೀರಲ್ವಾ?

ಗಂಡ – ಅವಕ್ಕಾಗಿ ಹೆಂಡತಿಯನ್ನೇ ನೋಡ್ತಾ ಇದ್ದಾ. ಅವಳೋ.. ನಿರಾಳವಾಗಿ ನಿದ್ದೆಗೆ ಜಾರಿದ್ಲು, ಗಂಡನಿಗೆ ನಿದ್ದೆ ಹಾರೋಯ್ತ ಹೆಂಡತಿ ಮಾತು ಕೇಳಿ!

ಇದೇ ಅಲ್ವೆ ಸಂಸಾರದಲ್ಲಿ ಸರಿ ಸರಿ….ಘಮ ಘಮಾ….!!

**************

https://kannada.pratilipi.com/blog/nagunagutaa-nalee-nli-april-tingala-spardheya-phalitaamsha

12-6-2018. 5.51pm

ಪ್ರತಿಲಿಪಿಯಲ್ಲಿ “ಶಾಯಿ ಸಾಲು” ಕವನ ಸ್ಪರ್ಧೆ ಫಲಿತಾಂಶ

ಅತೀ ಹೆಚ್ಚು ಓದಲ್ಪಟ್ಟ ಮೊದಲ 20 ಬರಹಗಳು ಮತ್ತು ಆಯ್ಕೆ ಮಾಡಿದ ವಿಧಾನ :

ನಂಬಿಕೆ

ಬಣ್ಣಿಸ ಬೇಡ ಮನವೆ
ತಣ್ಣಗಿರುವುದು ಮನಸು
ಇಂಗಿತವನರಿಯದ ಮನುಜಗೆ
ಸಲ್ಲದು ಸಲಾಮು ಗಿಲಾಮು॥

ಕೆರೆದು ಕುರಿಯಾಗುವ ಬದಲು
ಕರ ಮುಗಿದು ದೂರ ಸರಿ
ನಿನ್ನಲ್ಲಡಗಿದ ಮೌನಕೆ ದಾಸನಾಗಿ
ತೆಪ್ಪಗಿರುವುದೆ ವಾಸಿ॥

ಋಣವಿರಲು ಜನ್ಮಕೆ
ತಾನಾಗೆ ಬಂದು ಸೇರುವುದು
ಆರು ಬಲ್ಲರು ಹೇಳು
ಜಗದೊಡೆಯ ಬರೆದ ಹಣೆ ಬರಹ॥

ಹಗಲು ಗನಸನು ಮರೆತು
ಇರುವುದರಲ್ಲೇ ತೃಪ್ತಿ ಪಡು
ನೊಂದು ಸಿಗದ ವಸ್ತುವಿಗೆ
ಪರಿತಪಿಸದಿರು ಮರುಳೆ॥

ಇರುವ ಮೂರು ದಿನ
ಕೊರಗಿ ಸಾಯಲು ಬೇಡ
ಮಾಡಿರುವ ಕರ್ಮವ
ಅನುಭವಿಸದೆ ಗತಿ ಇಲ್ಲ॥

ಮುನ್ನ ಮಾಡಿದ ಪಾಪ
ಇಂದು ಕಾಡುತಿರಬಹುದು
ಇನ್ನಾದರೂ ಮುಂದಡಿಯಿಡು
ಕರ್ಮ ಸುತ್ತಿಕೊಳ್ಳದಂತೆ॥

ಇರುವನಲ್ಲವೆ ಜಗದೊಡೆಯ
ಹುಲ್ಲು ಕಡ್ಡಿಯ ನೆಪ ಸಾಕು
ಹುಟ್ಟಿಸಿದ ದೇವನವ
ಹುಲ್ಲು ಮೇಯಿಸದಿರ॥

ನಂಬಿಕೆಯೆ ಜೀವಾಳ
ನಂಬಿ ಕೆಟ್ಟವರಿಲ್ಲ
ನಂಬಿಕೆಯಲಿ ಬದುಕಿದರೆ
ಇಂಬು ಕಾಣುವೆ ನೀನು॥

12-4-2017. 8.21pm

4-3-2018 4.50pm