ಪೊರೆಯೆನ್ನ ತಾಯೆ…🙏

ಸರಸಿಜನಯನೆ ಸುಕೋಮಲೆ
ಸರ್ವಗುಣ ಸಂಪನ್ನೆ ಮಂದಗಮನೆ
ಸದಾ ಪ್ರಸನ್ನವದನೆ ಸದ್ಭಕ್ತಿಯಲಿ ಪೂಜಿಸುವ
ಸರ್ವರನೂ ಅಭಯ ಹಸ್ತ ನೀಡಿ ಪೊರೆವ
ಸನ್ಮಂಗಳೆ ಅವಳೇ ಜಗದ ದೇವಿ ಸೃಷ್ಟಿ||1||

ಸಿರಿ ಮೊಗದೊಳು ಸೆಳೆವ ಪರಿಗೆ
ಸದ್ಗತಿ ನೀಡೆಂದು ಕರವೆತ್ತಿ ಪೇಳಿದೊಡೆ
ಸರಸರನೆ ಬಳಿ ಸರಿದು ಅಭಯ ನೀಡುವ
ಸಂತೃಪ್ತಿಯ ಸಂಜಾತೆ ಮಹಾಮಾಯೆ ನಿನ್ನ
ಸಂಗವೇ ಸಫಲತೆಗೆ ಸುಶಾಂತ||2||

ಸಾರವಿಲ್ಲದ ಬದುಕಲೊಂದು ಕಿರಣ
ಸಂತಸದಲೀವ ಲೋಕ ಪೊರೆವ ಮಾತೆ
ಸತಿಸುತರೊಡಗೂಡಿ ಅವಳ ಪಾದ ಪಿಡಿದೊಡೆ
ಸಕಲವೂ ಕಲ್ಯಾಣವಾಗಲೆಂದು ಹರಸಿ
ಸಂತೈಸುವ ಅವಳ ಕಂಠವೇ ಸುಮಧುರ||3||

ಸುರಲೋಕವೇ ನಿಬ್ಬೆರಗಾಗಿ ನೋಡ್ವ
ಸೌಂದರ್ಯದ ಖನಿ ಈ ನಮ್ಮಮ್ಮ
ಸಾಟಿ ಯಾರು ಅವಳ ಸಮಾನಕೆ
ಸತಿಯಾದರೂ ಶಿವನಿಗೆ ಅವಳು ಶಕ್ತಿ ಮಾತೆ
ಸಾಲದೆರಡು ಕಣ್ಣು ನೋಡಳವಳ ಸೌರಭ||4||

ಸಾಹಸದಲಿ ಮೂರ್ಲೋಕ ನಡುಗಿಸಿದ
ಸಾವರಿಸಿ ಕಣ್ಬಿಡುವಷ್ಟರಲ್ಲೇ ರಕ್ಕಸರ ಚಂಡಾಡಿದ
ಸುರಾ ಸುರರನು ಬೆದರಿಸಿ ಕಂಗೆಡಿಸಿದ
ಸರಾಗವಾಗಿ ಯಜ್ಞ ಯಾಗಾದಿ ನಡೆಯಲು ಕಾರಣಳಾದ
ಸಾಹಸ ನೋಡಿ ಋಷಿ ಮುನಿಗಳ ಮನ ಸಂಪನ್ನ||5||

ಸರ್ವ ಮಂಗಳ ಮಾಂಗಲ್ಯೆ ಹೇ ಜಗಜ್ಜನನಿ ದೇವಿ
ಸಿಗದ ಪದಗಳ ಹುಡು ಹುಡುಕಿ ಬಣ್ಣಿಪೆ ತಾಯೆ
ಸಂತೋಷದಿಂದಲಿ ಬರೆ ಬರೆದು ಪೊಡ ಮಡುವೆ
ಸಿರಿ ಸಂಪತ್ತು ಬೇಡೆನಗೆ ಈ ಜೀವವಿರುವರೆಗೆ
ಸಂಪ್ರೀತಿಯಿಂದಲಿ ಕೊಡು ಎನಗೆ ನಿನ್ನ ಸಾಮಿಪ್ಯ||6||

6-9-2019. 3.49pm

ಬನಶಂಕರಿ ತಾಯಿ

ಬಾರೆ ಭಾಗ್ಯದ ಸಿರಿಯೆ
ನಮ್ಮಮ್ಮ ಬನಶಂಕರಿ ತಾಯಿ||

ನಿನ್ನಯ ನಾಮವ ಜಪಿಸುತಲಿರುವೆ
ಭಕ್ತಿಯಿಂದಲಿ ಗಂಧಾಕ್ಷತೆ ಇಡುವೆ
ಕುಂಕುಮಾರ್ಚನೆ ತಪ್ಪದೆ ಮಾಡುವೆ
ತುಪ್ಪದ ದೀಪವ ಬೆಳಗುವೆ ತಾಯೆ||

ಅಡಿಗಡಿಗಿದೊ ಮಾಡುವೆ ಹೆಜ್ಜೆ ನಮಸ್ಕಾರ
ಗುಡಿಯ ಸುತ್ತ ಉರುಳು ಸೇವೆಯ ಗೈವೆ
ಲಲಿತ ನಾಮಾರ್ಚನೆ ಉಲಿಯುತ ನಾಲಿಗೆ
ಹರಕೆಯ ದೀಪವ ಹಚ್ಚುವೆ ತಾಯೆ||

ಭಕ್ತರ ಸಲಹುವ ಶಕ್ತಿಯು ನೀನು
ಶಿಷ್ಟರ ಪೊರೆಯುವ ದೇವತೆ ನೀನು
ನಿನ್ನಡಿಗೆರಗಿಯೆ ಬೇಡುವೆ ತಾಯೆ
ಭಕ್ತಳ ಮೊರೆಯನು ಆಲಿಸು ಮಾಯೆ||

ಭವ ಬಂಧನದೊಳು ನಲುಗಿಹೆ ನಾನು
ಇಹಪರ ಗತಿಯನು ಅರಿಯೆನು ನಾನು
ಅನುದಿನ ಕಾಣುವ ಹಂಬಲವೆನಗೆ
ದರುಷನ ಭಾಗ್ಯವ ನೀ ಕರುಣಿಸಮ್ಮಾ||

1-4-2018. 5.40pm

ಭುವನಗಿರಿ ಅಮ್ಮ..

ನೋಡಬನ್ನಿ ನೋಡಬನ್ನಿ
ನಮ್ಮೂರಾ ನಮ್ಮೂರಾ॥

ಕಣ್ತಣಿಸುವ ಪ್ರಕೃತಿಯ ಮಡಿಲು
ಬೆಟ್ಟ ಗುಡ್ಡಗಳ ತವರೂರು
ಸಿರಿ ಗಂಧದ ಮಲೆನಾಡೊಳು
ಕನ್ನಡಮ್ಮ ನೆಲೆಸಿಹಳು॥

ನೋಡಬನ್ನಿ ನೋಡಬನ್ನಿ
ನಮ್ಮೂರಾ ನಮ್ಮೂರಾ॥

ಪಚ್ಚೆ ಪೈರಿನ ಸೀರೆಯನುಟ್ಟು
ತೆಂಗು ಅಡಿಕೆಗಳ ಸೆರಗನು ಹೊದ್ದು
ಸುಂದರ ಶಿಲೆಗಳ ಗುಡಿಯಲ್ಲಿಹಳು
ಅವಳೆ ತಾಯಿ ನಮ್ಮಮ್ಮ॥

ನೋಡಬನ್ನಿ ನೋಡಬನ್ನಿ
ನಮ್ಮೂರಾ ನಮ್ಮೂರಾ॥

ಭುವನಾಸುರನ ಸಂಹರಿಸಿ
ಉದ್ಭವ ಮೂರ್ತಿ ತಾನಾಗಿ
ಭುವನಗಿರಿಯಲಿ ನೆಲೆಸಿಹಳು
ಇದುವೆ ಅಮ್ಮನ ನೆಲೆವೀಡು॥

ನೋಡಬನ್ನಿ ನೋಡಬನ್ನಿ
ನಮ್ಮೂರಾ ನಮ್ಮೂರಾ॥

ಕನ್ನಡದ ಭಕ್ತರಿಗೆ ದರ್ಶನ ನೀಡಿ
ಮಾಡುವ ಪೂಜೆಯ ಸ್ವೀಕರಿಸಿ
ಹೊಟ್ಟೆ ತುಂಬಾ ಉಣಬಡಿಸಿ
ಹರಸಿ ಕಳಿಸುವವಳು ನಮ್ಮಮ್ಮ॥

ನೋಡಬನ್ನಿ ನೋಡಬನ್ನಿ
ನಮ್ಮೂರಾ ನಮ್ಮೂರಾ॥

ಭುವನಗಿರಿ ಅಮ್ಮನೆಂದು
ಸಿದ್ದಾಪೂರ ಸೀಮೆಗೆ ಹೆಸರಾಗಿ
ಬಿಳಗಿ ಅರಸರು ನಿರ್ಮಿಸಿದ
ಐತಿಹ್ಯದ ಪುಣ್ಯ ಕ್ಷೇತ್ರವಿದು॥

ನೋಡಬನ್ನಿ ನೋಡಬನ್ನಿ
ನಮ್ಮೂರಾ ನಮ್ಮೂರಾ॥

31-10-2017. 10.55pm

ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಜೈ ಭುವನೇಶ್ವರಿ॥

(ಈ ಕವನ ಶಶಿಗಿರಿವನ ಆಡಿಯೊದವರ ಸಾಹಿತ್ಯದಲ್ಲಿ ಭಾಗ್ಯಶ್ರೀ ಕಾಂಚನಾರವರು ಹಾಡಿದ್ದಾರೆ)

ಹೇ ಕೃಷ್ಣಾ…….

ಜಯ ಜಯ ಕೃಷ್ಣಾ ಮುಕುಂದಾ ಮುರಾರೆ
ಭವ ಭಯ ಬಂಧು ಕರುಣಾ ಸಿಂಧು
ಯಶೋದೆ ಕಂದಾ ಹೇ ಮುರಳಿ ಲೋಲಾ
ಭಕ್ತರ ಮೊರೆಯನು ಆಲಿಸೊ ಬಂದು॥

ಎಲ್ಲಿಯ ನೀನು ಎಲ್ಲಿಯ ನಾನು
ನಿನ್ನಲಿ ನಾನು ಪರವಶಳಾದೆನೊ ಹರಿಯೆ
ಹೇ ಕರುಣಾಮಯಿಯೆ ನೀ ಆಪದ್ಭಾಂಧವಾ
ಎನ್ನ ಕರುಣದಿ ಪೊರೆಯೊ ಅನಾಥ ಬಂಧು॥

ಏನೂ ಅರಿಯದ ಶತ ಮೂಢ ನಾನು
ಮಾಡಿದ ತಪ್ಪನು ಕ್ಷಮಿಸೆನ್ನ ಭವದೊಳು
ಮುನ್ನ ಮಾಡಿದ ಪಾಪ ಇಂದೆನ್ನ ಕಾಡದಿರಲಿ
ಶಕ್ತಿ ಉಡುಗಿ ಉಸಿರೊಂದೆ ಇಹುದಯ್ಯ ಇಂದು॥

ಜಗದಗಲ ನೀನಿರಲು ದಯಾಮಯ ದೇವಾ
ಅಹುದು ಅಂಜಿಕೆ ಜನರಿಗೆ ಇನ್ನೇತಕಯ್ಯ
ಪರಿತಪಿಸುವ ಭಾವ ಮನ ಕಲಕಿರಲು
ಕಾಪಾಡು ಬಿಡದೆ ಹೇ ಕೃಪಾ ಸಿಂಧು॥

ನಂಬಿಹೆ ನಿನ್ನನೆ ತನು ಮನ ನಿನಗರ್ಪಿಸಿ
ಶರಣು ಬಂದೆನು ನಿನ್ನಡಿಯೊಳು ಶಿರವಿರಿಸಿ
ಕರ್ಮ ಫಲಗಳನುಂಡು ನೊಂದು ಬೆಂದಿಹೆ ದೇವಾ
ಸಾಕೆನಗೆ ಈ ಬದುಕು ಮುಕ್ತಿಯನು ನೀಡಯ್ಯ ತಂದೆ॥

16-5-2017. 10.33am.

ಏನಯ್ಯ ಶಿವ ನಿನ್ನ ಲೀಲೆ….!!

ಮೂರ್ಲೋಕವನಾಳುವ
ಮುಕ್ಕಣ್ಣ ಶಿವನಿಗೆ
ಮೂರನೆಯ ಕಣ್ಣು
ಹಣೆಯ ಮೇಲೆ
ಅವನ ದಿವ್ಯ ದೃಷ್ಟಿ
ಭೂಮಂಡಲದ ಮೇಲೆ.

ತಾರೆಗಳ ಮೇಳದಲಿ
ಚಂದಿರನ ಬೆಳಕಿನಲಿ
ಈ ನಿನ್ನ ದಿವ್ಯ ನೋಟ
ದೇದಿಪ್ಯ ಮಾನ
ಕಂಡೂ ಕಾಣದಂತಿರುವೆ
ಏನಯ್ಯ ಶಿವ ನಿನ್ನ ಲೀಲೆ!

ನಾದಮಯ ಈ ಲೋಕ
ನೀನಿರಲು ಎಲ್ಲೆಲ್ಲು
“ಓಂ ನಮಃ ಶಿವಾಯ”
ನಾಭಿಯಿಂದುಸುರುತಿಹರು
ಧ್ಯಾನಾಸಕ್ತರಾದ ಭಕ್ತರು
ಬಿರಿದ ಕಣ್ಣು ಮುಚ್ಚಿ.

ಹೇ ಜಗದೊಡೆಯ,ಕರುಣಾಳು
ಒಮ್ಮೆ ನಿನ್ನ ಭಕ್ತರ ಕೂಗ ಕೇಳು
ಬಸವಳಿದು ಬೆಂಡಾಗಿ
ಅಡಿಗಡಿಗೆ ಎರಗುತಿಹರು
ತತ್ತರಿಸುತ್ತಿರುವ ಬದುಕನ್ನು
ಹಸನಾಗಿ ಮಾಡು.

1-3-2017. 8.15pm

(ಮುಖ ಪುಸ್ತಕದ ಸ್ನೇಹಿತರಾದ
Shashigirivana adio naloor
ಇವರು ಈ ಕವನ ಮೆಚ್ಚಿ
ಸಾಹಿತ್ಯ ರಚಿಸಿ ರಾಗ ಸಂಯೋಜನೆ ಮಾಡಿದ್ದಾರೆ.
ಶ್ರೀಮತಿ ಭಾಗ್ಯಶ್ರೀ ಕಾಂಚನ ಇವರು ಹಾಡಿದ್ದಾರೆ.
ರೆಕಾರ್ಡಿಂಗ್ ಹಂತದಲ್ಲಿದೆ.)

ಥೈ ಥಕ ಥೈ…..

ಓ ಕೃಷ್ಣಕನಯ್ಯಾ
ನಿನ್ನ ಬೆರಳ ತುದಿಯಲ್ಲಿ
ಆಡುವ ಬೊಂಬೆ
ನಾನಾಗಿಹೆನಯ್ಯ.

ಕಾಲಿಗೆ ಗೆಜ್ಜೆ ಕಟ್ಟಿ
ನಿನ್ನ ಕೊಳಲಿನ ನಾದಕೆ
ಹೆಜ್ಜೆ ಇಡಲು ನನಗೇಕಯ್ಯ
ಬೇಕು ತಾಳ ತಂಬೂರಿ ಮದ್ದಳೆ?

ನಿನ್ನಲ್ಲೆ ಇಹುದಯ್ಯ
ನನ್ನ ಕಾಲ ಕುಣಿತಕೆ ಆಡಿಸುವ
ನಾದಮಯ ಲಯ ಬದ್ದ ತಾಳ
ನನ್ನದೇನಿಲ್ಲ, ನಿನ್ನದೇಯೆಲ್ಲ.

ಅಲ್ಲಿ ಗುಂಗುಡುವ ಹಿಮ್ಮೇಳಕೆ
ಸಪ್ತ ಸ್ವರದ ರಂಗೋಲಿ ಇಕ್ಕಿ
ಇಡುವ ಒಂದೊಂದು ಹೆಜ್ಜೆಯಲಿ
ಪುಟಿದೇಳಿಸುವೆ ನಿನ್ನ ನಾಮದ ಜಯಭೇರಿ.

ಥೈ ಥಕ ಥೈ ಥಕ, ಥೈ ಥೈ ಥಕ ಥಕ
ಕೇಳಿಸಿಕೊಂಡ ಕಿವಿಯೆರಡೂ
ನಾಭಿಯಿಂದ ಉಲಿಯುವುವು
ಜೈ ಕೃಷ್ಣ ಜೈ ಕೃಷ್ಣ, ಜೈ ಜೈ ಕೃಷ್ಣ.

ರಾಧೆಯ ಪ್ರೀತಿ ಕೃಷ್ಣನಿಗಾಗಿ
ರುಕ್ಣಿಣಿಯ ಪ್ರೇಮ ಕೃಷ್ಣನಿಗಾಗಿ
ನನ್ನ ನಿರೀಕ್ಷೆ ಸದಾ ನಿನಗಾಗಿ
ಕೃಷ್ಣಾ ಮರೆತೆಯಾ ನಾ ನಿನ್ನ ತುಳಸಿ.

6-11-2016. 11.55am

ಮುಕ್ತಿ ಕೊಡು ತಂದೆ

ಪುಟಿದೇಳುವ ಪುಂಗವರ
ದಾಸಾನು ದಾಸ ನಾನಲ್ಲ
ಮೆಟ್ಟಿ ನಿಲ್ಲುವ ಕೆಚ್ಚೆದೆಯ
ನೀನೆ ಕೊಟ್ಟಿಹೆಯಲ್ಲ ಹರಿಯೆ.

ಭವ ಸಾಗರವ ಈಜಿ ಈಜಿ
ದಡ ಸೇರಿದ ಹರಿಣಿ ನಾನು
ನನಗಿಲ್ಲಿ ಸಾವೆ ಒಂದು
ವರದಾನವಾಗಿ ಕರುಣಿಸು ನೀನು.

ಜಗದ ಜಂಜಡದಲ್ಲಿ ಬಿದ್ದು
ಬೆಂದೂ ಬೆಂದು ನಲುಗಿ ಹೋಗಿದೆ ಜೀವ
ಇನ್ನೂ ತಾಳುವೆನೆಂಬ ನಂಬಿಕೆ
ನೀ ನನ್ನಲ್ಲಿ ಇಡಬೇಡ.

ಭವ ಸಾಗರ ಈಜುವ ಕೈ
ಸೋತು ಸುಣ್ಣವಾಗುಹುತಿಹುದಿಲ್ಲಿ
ಕೃಷ್ಣ ಕೃಷ್ಣಾ ಎಂದು
ಜೀವ ತುಡಿಯುತಿದೆ ನಾಭಿಯಿಂದ.

ಕೂಗುವ ಧ್ವನಿ ಕೂಡಾ
ಉಡುಗಿ ಹೋಗುತಿದೆ ದೊರೆಯೆ
ಕಮ೯ದೊಳೆನ್ನ ಅದ್ದಿ ಮೈ ತೊಳೆದು
ಮುಕ್ತಿ ದಾರಿಯ ಕರುಣಿಸು ತಂದೆ.

8-10-2016. 6.18pm

ಗುರು ಬ್ರಹ್ಮ ಗುರು ವಿಷ್ಣುಃ ಗುರು ದೇವೊ ಮಹೇಶ್ವರಃ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೆ ನಮಃ

ಮನು ಕುಲದ
ದೀನ ದಲಿತರಿಗೆ
ದಾರಿ ದೀಪವಾಗಿ
ಸಚ್ಛಾರಿತ್ರದಲ್ಲಿ ಬದುಕಲು
ತಮ್ಮನ್ನು ತಾವೆ
ಸದಾ ತೇದು ತೇದು
ಬರಿದಾಗುತ್ತಿರುವ
ಶ್ರೀ ಗಂಧದ ಕೊರಡು!

ಕಾಮ ಕ್ರೋದವನಳಿಸಿ
ನೇಮ ನಿಷ್ಠೆಯ ಬೆಳೆಸಿ
ಜ್ಞಾನ ಮಾಗ೯ದಿ ನಡೆಸಿ
ಬಾಳ ಬೆಳಗಿಸುವ
ದಿವ್ಯ ಜ್ಯೋತಿ!

ಜೈ ಗುರುದೇವ್
22-1-2011