ಒಂದೇ ಒಂದು ಮಾತು..!

ನಿನ್ನೊಂದಿಗೆ ನನಗೊಂದು ಮಾತು ಬೇಕು
ಅದು ಅಂತಿಂಥ ಮಾತಲ್ಲ ಮರೆತು ಹೋಗುವುದಲ್ಲ
ನಿದ್ದೆಯ ಮಂಪರಿನಲ್ಲಿ ದಿಂಬಿಗೆ ತಲೆ ಕೊಟ್ಟರೂ
ನೆನಪಿಸಿಕೊಂಡು ಗೆಜ್ಜೆಯ ಝಲ್ ಝಲ್ ಎನ್ನುವ
ನಿನಾದದ ಮಂಪಿನಲಿ ಕಳೆದ ಸಂವತ್ಸರಗಳ ಆಗಾಗ ಜಾಲಾಡಿಸುವ
ಸುಮಧುರವಾದ ಸವಿ ಗಳಿಗೆಗಳ ಬುತ್ತಿ ಹೊತ್ತೊಯ್ದು ಬರುವ
ನನಗಾಗಿ ಅಲ್ಲದಿದ್ದರೂ ನಿನಗಾಗಿ ಕಪ್ಪಕ್ಷರದಲಿ ಇಷ್ಟುದ್ದ ಕೆತ್ತುವ
ಮಂದಾರ ಕುಸುಮದಂತಿರುವ ನಿನ್ನ ಸುಕೋಮಲ ಮನಸ್ಸು
ನಲಿನಲಿದು ಸದಾ ಬಿರಿಯುವ ಹೂವಂತೆ ಅರಳಿ
ಘಮಲು ಸೂಸುವಷ್ಟು ಚಂದದ ಕವಿತೆ ನಾ ಬರೆಯುವಷ್ಟು.

ಅದನೋದಿದ ಮರುಗಳಿಗೆ ಓಡೋಡಿ ಬರುವ ಭಾವನೆಗಳು
ದೇಹದ ನರನಾಡಿಗಳಲ್ಲೂ ಪಸರಿಸಿ ಉಕ್ಕಿ ಬರುವ ಉತ್ಸಾಹ
ಬೆಳದಿಂಗಳಂತಿರುವ ಕಣ್ಣು ಅದರೊಳಗಣ ಬೆಳಕಿನ ಪ್ರತಿಭೆ
ಹರಿದಾಡುವ ಹೃದಯದ ಮಾತುಗಳು ಉಕ್ತಿ ಪಥವ ದಾಟಿ
ಕಿರು ನಗೆಯ ಲಾಸ್ಯ ತುಟಿಯಂಚಿನ ಮೆರುಗ ಹೆಚ್ಚಿಸಿ
ಕಳೆ ಕಳೆಯಾದ ಮುಖ ಇಷ್ಟಗಲವಾದಾಗುವ ಖುಷಿ
ನಾ ಇರಲಿ ಇಲ್ಲದಿರಲಿ ಆ ನಂತರದ ದಿನಗಳಿಗೂ
ನನ್ನ ನಿನ್ನ ಪ್ರೀತಿಯ ದ್ಯೋತಕವಾಗಿ ಚಿರಸ್ಥಾಯಿಯಾಗಿ
ನಿನ್ನ ಮನಃಪಟಲದ ತುಂಬಾ ಹರಿದಾಡುತಿರಬೇಕು
ಅಮ್ಮ ಬರೆದ ಉಕ್ತಿಗೆ ಚಿನ್ನದ ಕಳಶವಿಟ್ಟಂತಿರಬೇಕು.

ಕವಿ ಮನದ ತುಂಬಾ ಹರಿದಾಡುವ ನೂರೆಂಟು ಭಾವನೆಗಳಿಗೆ
ಭಾಷ್ಯ ಬರೆದವರು ಯಾರಿರಬಹುದೊ ಗೊತ್ತಿಲ್ಲ
ಆದರೆ ನನ್ನಲ್ಲಿ ನೀ ಬರೆದೆ ಅದಾರಿಗೂ ಕಾಣದಷ್ಟು ನಿಗೂಢ
ಬೆಚ್ಚನೆಯ ಸವಿಗನಸಿಗೆ ತರುಲತೆಯ ಜೀವ ತುಂಬಿ
ಅರಿವಿನ ಗಂಧ ಲೇಪಿಸುವ ಕೈಂಕರ್ಯ ಅದೆಲ್ಲಿಂದ ಬಂತು
ಬಿಡಿಸಲಾಗದ ಒಗಟಾದರೂ ದಿಟ್ಟ ನಿಲುವಿದೆಯೆಂಬ ಹೆಮ್ಮೆ ನನಗೆ
ಅದರೊಳಗಣ ಹೂರಣ ಇಂಚಿಂಚು ಸವಿಯುವ ಭಾಗ್ಯ ನಿನದಾಗಲಿ
ಬರುವ ನಾಳೆಗಳ ಕಳೆದ ನಿನ್ನೆಗಳ ಇಂದಿನ ದಿನಕೆ ಎಚ್ಚರಿಸುತಿರಲಿ
ಹರಸುವೆ ಮಗಳೆ ನಾ ನಿನ್ನ ಅಮ್ಮನಾಗಿ ನಿನ್ನ ಜನ್ಮ ದಿನಕ್ಕಾಗಿ.

(20-8-2017ರ ಮಗಳ ಜನ್ಮ ದಿನದ ನೆನಪಿನಲ್ಲಿ ಬರೆದ ಕವಿತೆಯಿದು)
23-8-2017. 7.19pm

Advertisements

ಹೊನ್ನ ಶೂಲ….

ಅವಳು ಅವಳಾಗಿಲ್ಲ
ಅವಳೆದೆಯೊಳಗಿನ ತೊಳಲಾಟಕೆ
ಕೊನೆಯೆಂಬುದಿಲ್ಲ.

ದಿಕ್ಕೆಟ್ಟ ಮನಕೆ
ಸಂಜೆಗತ್ತಲ ತಂಪಿಲ್ಲ
ಸಾಂತ್ವನದ ಮಾತಿಗೂ ಬಗ್ಗುತ್ತಿಲ್ಲ.

ಯಾರಿಟ್ಟರೊ ಈ ಬದುಕೆಂಬ ನಂಟು
ದಿನ ಕಳೆದಂತೆ ಆಗುತಿದೆ ಕಗ್ಗಂಟು
ಕಾಡುವ ಮನಕಿದು ಹೊನ್ನ ಶೂಲ.

ಪರಿಹಾರ ಕಾಣದ ತೀರ
ಮನ ಯೋಚನೆಯ ಆಗರ
ಕರ್ತವ್ಯ ಸದಾ ನೆನಪಿಸುವ ಮಾಮರ.

ಮೌನದೊಳಗದೆಷ್ಟು ಮಾತು
ಗಮನ ಕಸಿದುಕೊಂಡ ವ್ಯರ್ಥ ದಿನ
ಅರಿವಾಗದ ಅಯೋಮಯ ಕ್ಷಣ.

ಯೋಚನೆಯೆಂಬುದು ಚಿತೆ
ನಿದ್ದೆಗಣ್ಣ ಸವರಿ ತನ್ನಿರುವ ಛಾಪಿಸಿ
ಹಗಲಿರುಳು ಕಾಡುವ ಭೂತ.

ನೀರೆ ಕಪೋಲದ ಗುಂಟ ಇಳಿ ನೀನು
ನಿನಗಾವ ಹಂಗಿಲ್ಲ ಕೊನೆಯಿಲ್ಲ
ಮನಕಚ್ಚುವ ಕಾಸಿಲ್ಲದ ಮುಲಾಮು.

ವ್ಯರ್ಥ ಕಳೆವ ಆಯಸ್ಸು ಕೇಳುವುದು
“ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ”
ಆದರೆ ಇದೆಷ್ಟು ಸತ್ಯ????

22-6-2017 11.01am

ಸಾವಿನ ಕೂಗು..

ಇಂದು ವಿಶ್ವ ಜಲ ದಿನ. ಮನುಷ್ಯ ಪ್ರಕೃತಿಯ ಸರ್ವಸ್ವವನ್ನೂ ಧ್ವಂಸ ಮಾಡಲು ಹೊರಟಿದ್ದಾನೆ. ಎಲ್ಲೆಲ್ಲೂ ನೀರಿನ ಹಾಹಾಕಾರ ಕೇಳುತ್ತಿದ್ದರೂ ಒಂದಿನಿತೂ ಕಾಳಜಿ ತೋರದೆ ತನ್ನದೆ ಹಾದಿಯಲ್ಲಿ ಮುಂದುವರಿಯುತ್ತಿದ್ದಾನೆ. ಜಲಧಾರೆಯ ಒಡಲು ಬರಿದಾಗುತ್ತಿದೆ. ಪ್ರಕೃತಿ ಉಳಿಯಬೇಕೆಂದರೆ ಸಾವು ಮನುಷ್ಯನ ಬೆನ್ನಟ್ಟಬೇಕು. ಆಗಲೆ ಮುಕ್ತಿ.

ಈ ಒಂದು ಯೋಚನೆಯಲ್ಲಿ ಬರೆದ ಕವನವಿದು.

ಋಣಮುಕ್ತಳಾಗು ಜಲ್ದಿ
ಪರದೆಯ ಹಿಂದಿರುವ ಮುಂದಿರುವ
ಆಗಿರುವ, ಆಗುವ,ಆಗಿಹೋದ
ಒಂದೊಂದು ಗಳಿಗೆಯನು
ಹುಡುಕಿ ಹುಡುಕಿ
ತಪ್ಪಿಲ್ಲದೆ ಲೆಕ್ಕ ಹಾಕು.

ಇಂಚಿಂಚು ಮೆಟ್ಟಿಲುಗಳ
ತುತ್ತ ತುದಿಯ ಕೊನೆವರೆಗೂ
ಚಠೀರೆಂದು ಜಾಡಿಸಿ
ಸುಪ್ತ ಮನದ
ಹೊತ್ತತ್ತಿ ಉರಿವ ಗಾಯಗಳಿಗೆಲ್ಲ
ವಾಸಿಯಾಗುವ ಮುಲಾಮು ಸವರಿ
ನೋಡುತ್ತ ಜಾತಕ ಪಕ್ಷಿಯಂತೆ
ಕಾದು ಎಲ್ಲ ಸರಿಹೊಂದಿಸಬೇಕು.

ಇರುವ ಗಳಿಗೆಗಳು
ಬೊಟ್ಟು ತೋರಿಸಿ ಗಹಗಹಿಸಿ ನಗುತ್ತಿವೆ
ಇಷ್ಟೇನಾ ಜೀವಕ್ಕೆ ಹೊದ್ದ ಕಂಬಳಿ
ಲಡ್ಡು ಹಿಡಿದು ತುಕ್ಕಾಗುತಿವೆ
ಜಾರುವ ದಿನಗಳ
ಬೇಗ ಬೇಗ ಲೆಕ್ಕಹಾಕು
ಬರೆದಿಟ್ಟಿನ್ನೇನು ಮಾಡುವೆ
ಯಾರಿಗಾಗಿ ಮುಚ್ಚಿಡುವೆ.

ತಾಳ ತಪ್ಪಿ
ಉಪ್ಪುಪ್ಪಾದ ಈ ದೇಹ
ಒಣಗಿಸಿಡಬಹುದೆ
ಸಾಕು ನೀನಿದ್ದೇನು ಪ್ರಯೋಜನ
ಸಾಕು ನಂಜು ನುಂಗಿ
ನೀರು ಕುಡಿದ ದಿನಗಳ ತೇಜಸ್ಸು
ಅದೆಷ್ಟು ದಿನ ನೀ ಹಿಡಿದಿಡುವೆ?

ಆತ್ಮವೆ ಬಾ ಬಾ
ಅಲ್ಲೊಂದು ಲೋಕವುಂಟು
ಸ್ವಚ್ಛಂಧವಾಗಿ ವಿಹರಿಸು
ನಡಿ ನಡಿ ಹೊರಡು
ಮರು ಜನ್ಮದ ಆಸೆ ತೊರೆದು.

ಹೆದರಬೇಡಾ ನಾನಿಲ್ಲವೆ
ಈ ದೇಹದ ವ್ಯಾಮೋಹವೇಕೆ?

ನಿನ್ನಡಿಯಿಂದ ಮುಡಿಯವರೆಗೂ
ಪಸರಿಸಿ ಮಣ್ಣ ಮಜ್ಜನ ಮಾಡಿ
ನನ್ನುದರದೊಳಗೆ ಸೇರಿಸಿಕೊಳ್ಳುವೆ.

ಹುಳು ಹುಪ್ಪಟೆಗಳಾದರೂ ತಿಂದಾವು
ಕೊಳೆತು ಗೊಬ್ಬರವಾಗಿ
ಗಿಡ ಮರಗಳು ಬೆಳೆದಾವು
ಜನ್ಮ ಪೂರ್ತಿ ನೀ ಸುರಿದ ನೀರ
ಹೀರಿ ಲೆಕ್ಕ ಚುಕ್ತ ಮಾಡಾವು
ಪ್ರಕೃತಿಯ ವಿನಾಶ ಕೊನೆ ಕಂಡಾವು!

22-3-2017. 11.40pm

ಕಕ್ಕುಲತೆ

ನನ್ನ ಸೀರೆಯ ಸೆರಗು
ಅಪರೂಪದ ಕರುಳ ಬಳ್ಳಿ
ಮಡಿಲ ಆಸರೆಯಾಗಿ
ಬಿಡದೆ ಹಿಂದಿಂದೆ ಬರುವವಳು.

ಕೊರಳ ಹಾರ ನನಗವಳು
ಅಮ್ಮಾ ಎಂದು ಸುತ್ತಿಕೊಳುವವಳು
ಮುತ್ತಿಕ್ಕಿ ನನಗೊಂದು
ಸಿಹಿ ಕನಸು ಹುಟ್ಟಿಸುವವಳು.

ಚಿಮ್ಮುವ ನೆರಿಗೆಯ ಅಂದಕ್ಕೆ
ಆಗಾಗ ಸಾಕ್ಷಿಯಾಗುವವಳು
ಚಿಂತೆಯು ಮನವನಾವರಿಸಿರಲು
ಚಿಂತನೆಯ ಮಾತಾಡಿ ಮರೆಸುವವಳು.

ಕಡು ಕೋಪ ತಾಪ ನಮ್ಮಿಬ್ಬರ ನಡುವೆ
ಗುದ್ದಾಡುವ ಮನ ಕ್ಷಣಬಂಗುರವಷ್ಟೆ
ಮತ್ತದೆ ಮಮತೆ ಪ್ರೀತಿ ಬಾಂಧವ್ಯ
ಬಿಟ್ಟಿರಲಾಗದಷ್ಟು ಕರುಳ ಒಡನಾಟ.

ಕಳಿಸಿ ಕೊಡಲಿ ನಾ ಹೇಗೆ
ಕಂಡರಿಯದ ಪರರ ಮನೆಗೆ
ಬಿಟ್ಟಿರಲಾಗದ ಕಕ್ಕುಲತೆಗನಿಸುವುದು
ಇಟ್ಟುಕೊಳ್ಳಲಾಗದು ಮಡಿಲ ಕೆಂಡ.

ಹೀಗೆಲ್ಲಾ ಉಸುರಿದ ಒಂದರೆಕ್ಷಣ
ಮೌನಕ್ಕೆ ಶರಣಾಗಿ ಉಲಿಯುವವಳು
ಚಿಂತೆ ಬಿಡಮ್ಮ ಹೋಗುವುದಿಲ್ಲ ನಾನೆಲ್ಲೂ
ನಿನ್ನೊಂದಿಗಿನ ಕ್ಷಣ ಹೀಗೆ ಇದ್ದು ಬಿಡಲಿ!

9-3-2017. 10.34am

ನಂಜಿನ ಮುಳ್ಳು…

ಅನುಭವಗಳು ಮಾತಾದಾಗ
ಹಿಡಿದು ಕಟ್ಟಿ ಹಾಕಲು
ಅದೆಷ್ಟು ಕಾತುರ
ಬರವಣಿಗೆಯ ಮೇರು ಧ್ವನಿ
ಆಳಕ್ಕಿಳಿದು
ಅಂತರಾಳದ ತಿವಿತ
ಭರ್ಚಿಯಷ್ಟು ಹರಿತ.

ನೆನಪುಗಳ ಸರಮಾಲೆ
ಬಿಚ್ಚಿಕೊಂಡಂತೆಲ್ಲ
ಬದುಕಿನ ಕಟು ಸತ್ಯದ ಅರಿವು
ಅಂದುಕೊಂಡಿದ್ದಕ್ಕಿಂತ ಅಗಾಧ
ಜೀವ ಹೈರಾಣಾದ ಘಳಿಗೆಗಳಿಗೆ
ಮೇರು ಶಿಖರದಲಿ ಮನ
ಬಿಡಿಸುತ್ತದೆ ಬಿಳಿ ಹಾಳೆಯಲಿ
ಕಪ್ಪು ವರ್ಣದ ರಂಗೋಲಿ.

ಅಪ್ಪ ನೆಟ್ಟ ಆಲಕ್ಕೆ
ಜೋತು ಬೀಳದೆ
ಅಜ್ಜಿ ಹರಹಿದ
ಕಟ್ಟು ಕಥೆಯಲ್ಲೇನೊ ಹುಡುಕುತ್ತ
ಅಮ್ಮನ ಕರುಳಂಚಿನ ಮಾತು
ಈಡೇರದ ಬತ್ತಳಿಕೆಯಲಿ
ಒಂದೊಂದೇ ಶೇಖರಣೆಯಾದ ಬಗೆ
ಬಗೆದಷ್ಟೂ ನಿಗೂಢ
ಅಮ್ಮನ ಮಾತೆ ಹಾಗೆ
ಮತ್ತೆ ನಾ ಅಮ್ಮನಾಗಿದ್ದರೂ
ಉಸುರಲಾರೆ ಆ ಪರಿ.

ಒಮ್ಮೊಮ್ಮೆ
ಬದುಕು ನಿಗಿ ನಿಗಿ ಕೆಂಡ
ಮಗದೊಮ್ಮೆ
ಬರೀ ತಂಪು ತಂಪು
ಏರಿಳಿತದ ತೊಯ್ದಾಟದಲ್ಲಿ
ಬಿಟ್ಟಿರಲಾಗದ ಬದುಕಿನ ಗುಂಟ
ಕಣ್ಣು ಕಟ್ಟಿ ಎಳೆದೊಯ್ಯುತಿದೆ
ಸದ್ದಿಲ್ಲದೆ ಹೆಗಲೇರಿದ ವಯಸ್ಸು
ಆಗಾಗ ಬಂದಪ್ಪಳಿಸುವ ಜಡತ್ವ
ಸಾಧನೆಗೆ ಚುಚ್ಚುವ
ಚೂಪಾದ ನಂಜಿನ ಮುಳ್ಳು.

18-2-2017. 3.35pm

ಕನ್ಯೆಯ ಅಳಲು

ನಿನ್ನೊಂದಿಗೆ ನಾ
ನೂರು ಗಾವುದ ಹೋಗಿ ಬರಲೆ?
ಬೆಟ್ಟ ಗುಡ್ಡ, ಊರು ಕೇರಿ ಸುತ್ತಾಡಿ
ತನುವಿನಂಗಳದ ತುಂಬಾ ನಲಿ ನಲಿದು
ಬರಿ ತಿರುತಿರುಗಿ ಓಲೈಸುವ ಮನಕೆ
ನೀನಾಗಿರಬೇಕು ಮನದ ಕನ್ನಡಿ.

ಸುಸ್ತು ಸುಸ್ತಾಗಿ
ಮನ ಬಾಗಿ ಬೆಂಡಾಗಿ
ಹಗಲಿರುಳೆನ್ನದೆ ತಡಕಾಡಿದ ದೇಹ
ಧರೆಗುರುಳುವವರೆಗೂ ತನ್ನದೆ
ಸಾಮ್ರಾಜ್ಯ ಕಟ್ಟಿ ಮೆರೆದರೆ
ಶಖುನಿಯಂತವರ ಶಿರವೂ ಬಾಗಿ
ನೆಲ ಕಚ್ಚುವುದೇನೊ
ಯಾರಿಗೆ ಗೊತ್ತು?

ಹೀಗೊಂದು ಕಲ್ಪನೆ ಬೆಟ್ಟ ಹತ್ತಿಸಿ ಮತ್ತೆ
ವಾಸ್ತವದ ಅವಶೇಷದ ಕಡೆ ನಡೆದಾಗಲೆಲ್ಲ
ಛೆ! ನಾನೂ ಆಗಬಾರದಿತ್ತೆ
ನಿನ್ನಂತೆ ಗಂಡು!

ಹುಟ್ಟಿದಾಗಿನಿಂದ ಹೆಣ್ಣೆಂಬ ಹಣೆ ಪಟ್ಟಿ
ಬಿಚ್ಚಿಡಲಾಗದು
ಲಂಗು ಲಗಾಮಿಲ್ಲ ಇವಳಿಗೆ
ಎಂಬುವಂಥಹ ಮಂತ್ರ
ಬರೆದಿಟ್ಟು ನಡೆದರಲ್ಲ
ಅವರ ಜುಟ್ಟು ಹಿಡಿದು
ಜಗ್ಗಿ ಕೇಳಬೇಕೆಂಬ ಹಠ
ಬೇಡವೆಂದರೂ ಆಗಾಗ ಧಾಳಿ ಇಡುವುದಲ್ಲ
ಈ ಹೆಣ್ಣು ಜನ್ಮಕೆ!

ಹಾಗಾದರೆ
ಹೆಣ್ಣೆಂದರೆ ಇಷ್ಟು ಕೇವಲವೆ?
ಕಷ್ಟ ಕೋಟಲೆಗಳಿಗೆ ಮಾತ್ರ ಸೀಮಿತವೆ?
ಅವಳಿಗೊಂದು ಮನಸ್ಸಿಲ್ಲವೆ?
ಹೆರುವ ಯಂತ್ರವೆ?
ಹೆಣ್ಣಿಗೆ ಮಾತ್ರ ಏಕೆ ಈ ಜವಾಬ್ದಾರಿ?

ಗಾಂಧಿ ಕಂಡ ಸ್ವಾತಂತ್ರ್ಯ
ಕನಸಿನ ಮಾತು ಬಿಡಿ
ಈಗಿಹರಲ್ಲ ಊರೆಲ್ಲ ಸಂಭಾವಿತರು
ಒಮ್ಮೆ ಯೋಚಿಸಿರಣ್ಣ
ನಿಮ್ಮನೆಯಲ್ಲೂ ಇಹರು ಹೆಣ್ಣು
ತಾಯಿ, ಮಗಳು,ಸೊಸೆ ನನ್ನಂತೆ.

ಕೊಡಿ ನಿಮ್ಮಂತೆ ಬಿಚ್ಚು ಬದುಕು
ಕಲಿಸಿರಿ ಸ್ವತಂತ್ರ ನಡೆ, ನುಡಿ ಧಾರಾಳತನದಿ
ಹಕ್ಕಿಯಂತಾದರೂ ಹಾರಾಡಿ ಬರಲಿ
ಆಗದಿರುವ ಕನಸಿನ ಸಂಕೋಲೆಗೆ
ಜೋತು ಬಿದ್ದು ವ್ಯರ್ಥ ದಿನಗಳ ಕಳೆವ
ಜನರಾಡುವ ಮಾತಿನ ಚಾಟಿ ತಪ್ಪಿಸಿಕೊಳ್ಳಲಿ
ಜೀವ ಹೊತ್ತ ಪಾಪದ ಜನುಮ !!

19-1-2017. 5.41pm

ನಾನೊಂದು ಅಣಿ ಮುತ್ತು

​ಅವಧಿಯಲ್ಲಿ  ಪ್ರಕಟವಾದ ಕವಿ ಶ್ರೀ ಸಂಧೀಪ್ ಈಶಾನ್ಯ ಅವರ ಕವಿತೆ “ರಾತ್ರಿ ಯಾರೊ ಬಿಟ್ಟು ನಡೆದ ಮುತ್ತಿನ ಗುರುತು” ಓದಿ ಭಾವೋದ್ವೇಗದಲ್ಲಿ ಬರೆದ ಕವನವಿದು.

ಚೊಕ್ಕ ಚಿನ್ನದಂತೆ
ಬೆಳೆಸಿದಳು ಹಡೆದವ್ವ
ದೇಹ ಬೆಳೆದು ಸೊಂಪಾಗಿ
ಕಂಡವರ ಕಣ್ಣು ಕುಕ್ಕುವ ಹಾಗಾದೆ
ನಡೆದಾಡುವ ದಾರಿ ಬೀದಿಗಳ
ಹಾದು ಹೋಗುವ ಹುಡುಗಳ ಮಾತು
ಹಾಯ್ ಸ್ವೀಟಿ,
ಹಾಯ್ ಬ್ಯೂಟಿ
ಹೌ ಬ್ಯೂಟಿಫುಲ್ ಯು ಆರ್
ಅಂದಾಗ ಯೌವ್ವನದ ಮಜಲು
ತುಂಬು ಅಂಗಾಂಗ
ಝಲ್ಲೆಂದು ಒಳಗೊಳಗೆ
ಕುಣಿದು ಕುಪ್ಪಳಿಸಿದ ಮನಕೆ
ಏನು ಗೊತ್ತು ಗಂಡಸರ ಒಳಗುಟ್ಟು.

ಬಣ್ಣನೆಯ ಮಾತಿಗೆ ಕರಗಿದೆ
ನೂರು ಕನಸುಗಳ ಹೊತ್ತು
ತಲೆ ಗಿರಗಿಟ್ಟಿ ಅವನ ಮಾತಿಗೆ
ಆತ ಅವಕಾಶವಾದಿ
ತಿಂದುಂಡು ತೇಗಿ ತನ್ನ ತೆವಲಿಗೆ
ನನ್ನ ತಿಥಿ ಹಾಡಿ
ಮಾರಿಬಿಟ್ಟ ಮೂರು ಕಾಸಿಗೆ
ಅದೇ ಮಂಚದ ಕಾಲಿಗೆ ಕಟ್ಟಿ.

ಇಂದು ತೆವಲು ತೀರಿಸಿಕೊಂಡವರದೆಷ್ಟೊ
ನನಗೇ ಗೊತ್ತಿಲ್ಲ
ಯಾರೂ ನನಗೆ ಲೆಕ್ಕಕ್ಕಿಲ್ಲ
ನನ್ನ ನೋವಿಗೆ ಯಾರೂ ಕಿವಿಗೊಟ್ಟಿಲ್ಲ
ನಾನೇಕೆ ಲೆಕ್ಕವಿಡಲಿ?
ಇಂದು ಮಂಡೂಕ ಕೂಪದಲ್ಲಿ
ಹುಳ ನೆಣಗಳ ಜುಯ್ಯಗುಟ್ಟುವ
ನರಕ ಕೂಪದಲ್ಲಿ ಒದ್ದಾಡುತಿದೆ
ಸುಃಖ ಕೊಟ್ಟ, ಮನ ತಣಿಸಿದ ಈ ದೇಹ
ಯಾರಾದರೂ ಚಿಕಿತ್ಸೆ ಕೊಡಿಸುವಿರಾ?
ಏಕೆಂದರೆ ನನ್ನ ಕೈ
ಖಾಲಿ, ಖಾಲಿ ಖಾಲಿ!

ಸಮಾಜದಲ್ಲಿ ವೇಶ್ಯೆರಿಗೊಂದು ಸ್ಥಾನ ಕಲ್ಪಿಸಿ ಕೊಡಬೇಕು. ಅವರನ್ನು ಈ ಕೂಪದಿಂದ ಹೊರಗೆ ತರಭೇಕು. ಇದೇ ತರ ಅದೆಷ್ಟು ವೆಶ್ಯೆಯರ ಕಥೆಯಿರಬಹುದು ಊಹಿಸಿ.
24-5-2016. 9.21am