ಪುಟ್ಟನ ಆಸೆ

ಅಕ್ಕ ಹೇಳು
ರೆಕ್ಕೆ ಪುಕ್ಕ
ಹಕ್ಕಿಗೇಗೆ ಬಂತು?

ನನಗು ನಿನಗು
ಮಾತ್ರ ಯಾಕೆ ಇಲ್ಲ
ಬೇಗ ನೀನು ಹೇಳು.

ಹಕ್ಕಿ ಕಂಡ
ನನ್ನ ಮನಸು
ಹಾರಲಣಿಯಾಗಿದೆ.

ಕೂತು ಕೂತು
ಮರಗೆಟ್ಟ ಕಾಲು
ಓಡಾಡಬೇಕೆಂದಿದೆ.

ನಾನೂ ಹಾರಿ
ಅವರೊಂದಿಗೆ ಸೇರಿ
ಕಿಚಿ ಕಿಚಿ ಅನ್ನಬೇಕಿದೆ.

ಹೇಳು ಅಕ್ಕ
ಬೇಗ ಹೇಳು
ಹೇಗೆ ನಾನು ರೆಕ್ಕೆ ಪಡೆವುದು.

ಹಕ್ಕಿಯಂತೆ
ಮೇಲೆ ಹಾರಿ
ಎಂದು ಸಂತಸಪಡುವುದು?

12-9-2020. 6.54pm

ಕಂದನ ತೊದಲು

ಅಮ್ಮಾ ನೋಡೆ
ನಾ ಇಟೇ ಇಟುದ್ದ
ನೀನ್ಯಾಕೆ ಅಷ್ಟುದ್ದ?

ನಿನ್ನಂತ ಜಡೆ
ನನಗೇಕಿಲ್ಲಮ್ಮಾ
ನೋಡು ಕೂದಲು ಮೋಟುದ್ದ.

ತೆಳ್ಳಗೆ ಬೆಳ್ಳಗೆ
ಎಷ್ಟು ಚಂದ ನೀನು
ನಾನ್ಯಾಕೆ ಇಷ್ಟು ಕಪ್ಪು?

ಓದಲು ಬರೆಯಲು
ಬರದ ನಾನು
ಶಾಲೆಗೆ ಹೋಗುವುದ್ಯಾವಾಗ ಹೇಳು.

ನಿನ್ನಂತೆ
ನಾನಾಗಲೇ ಬೇಕು
ಚಂದ ಚಂದ ನನ್ನಮ್ಮಾ.

ಬಾ ಬಾ ಅಮ್ಮಾ
ಎತ್ತಿಕೊ ಒಮ್ಮೆ ನನ್ನ
ಮುದ್ದುಗರೆಯಬೇಕು ನಿನ್ನ.

ನಿನ್ನಯ ತೋಳಲಿ
ಖುಷಿ ಖುಷಿಯಾಗಿರುವೆ
ಇಂತಹ ತಾಣ ಎಲ್ಲಿಹುದಮ್ಮಾ.

ನನ್ನೊಂದಿಗೆ ಸದಾ
ನೀನಿರಲೇಬೇಕು
ಮತ್ತಿನ್ನೇನು ಕೇಳೆನು ನಾನು.

ನಾನು ಕಂಡ
ಪ್ರತ್ಯಕ್ಷ ದೇವರು ನೀನು
ನಿನ್ನಾಶಿರ್ವಾದವೊಂದಿರೆ ಸಾಕು.

11-5-2020  7.09am

ನಿಯತ್ತು (ಮಕ್ಕಳ ಕಥೆ)

(ಈ ಮಕ್ಕಳ ಕಥೆ ನವೆಂಬರ್ 14,2019ರ ಮಕ್ಕಳ ದಿನಾಚರಣೆ ಪ್ರಯುಕ್ತ Facebookಲ್ಲಿ ಗ್ರೂಪ್ ಸ್ಪರ್ಧೆಗಾಗಿ ಬರೆದಿದ್ದು ಆಯ್ಕೆಯಾದ ಕಥೆಯಿದು. ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುವಷ್ಟರಲ್ಲಿ ಕೊರೋನಾ ಬಂದು ತಡೆಯಾಗಿದೆ. ಮುಂದಿನ ದಿನಗಳಲ್ಲಿ ಪ್ರಕಟಗೊಳ್ಳಬಹುದೆಂಬ ಆಶಯ!)

*********

ಒಂದಾನೊಂದು ಊರಿನಲ್ಲಿ ಒಬ್ಬ ಅಗಸನಿದ್ದನು. ಅವನ ಹೆಸರು ಶೀನು. ಅವನು ತನ್ನ ಕಸುಬನ್ನು ನಿಯತ್ತಾಗಿ ಮಾಡುತ್ತ ತನ್ನ ಹೆಂಡತಿ ಮಕ್ಕಳೊಂದಿಗೆ ಸುಖವಾಗಿ ವಾಸಿಸುತ್ತಿದ್ದನು. ಹೀಗಿರಲಾಗಿ ಒಂದು ದಿನ ಶೀನು ಕೆಲಸ ಮಾಡುತ್ತಿದ್ದ ಲಾಂಡ್ರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟಿನಿಂದಾಗಿ ಬೆಂಕಿ ಹೊತ್ತಿಕೊಂಡಿತು. ಬೆಂಕಿ ನಂದಿಸಲಾಗದೆ ಲಾಂಡ್ರಿ ಸುಟ್ಟು ಭಸ್ಮವಾಗಿದ್ದಲ್ಲದೇ ಕೆಲಸವನ್ನೂ ಕಳೆದುಕೊಳ್ಳುವಂತಾಯಿತು. ಎರಡು ಮಕ್ಕಳು ಇನ್ನೂ ಚಿಕ್ಕವರು. ಹೆಂಡತಿ ಮನೆ ಕೆಲಸಕ್ಕೆ ಹೋಗಿ ಅಷ್ಟೊ ಇಷ್ಟೊ ಸಂಪಾದಿಸಿ ತರುವುದರಲ್ಲೇ ಜೀವನ ನಡೆಯುವಂತಾಯಿತು.

ಶೀನೂಗೆ ಇಸ್ತ್ರಿ ಕೆಲಸ ಬಿಟ್ಟರೆ ಬೇರೆ ಕೆಲಸ ಬರುತ್ತಿರಲಿಲ್ಲ. .ಅದೇ ಊರಿನ ಪಟೇಲನಲ್ಲಿ ಹೋಗಿ ತನ್ನ ಕಷ್ಟ ಹೇಳಿಕೊಂಡನು. ಇವನ ಕಷ್ಟ ತಿಳಿದ ಪಟೇಲರು ” ಒಂದು ಕೆಲಸ ಮಾಡು. ನನಗೂ ಎರಡು ಮಕ್ಕಳಿದ್ದಾರೆ. ಅವರನ್ನು ದಿನವೂ ಶಾಲೆಗೆ ಕರೆದುಕೊಂಡು ಹೋಗಿ ಬರುವುದು ನಿನ್ನ ಕೆಲಸ. ಶಾಲೆ ಮುಗಿಯುವವರೆಗೂ ಅಲ್ಲಿಯೇ ಇದ್ದು ಮಕ್ಕಳನ್ನು ಜೋಪಾನವಾಗಿ ಕರೆದುಕೊಂಡು ಬರುವ ಜವಾಬ್ದಾರಿ ನಿನ್ನದು. ಕಾಲ ಸರಿ ಇಲ್ಲ ಈಗ. ಮಕ್ಕಳ ಕಳ್ಳರು ಹೆಚ್ಚಾಗಿದ್ದಾರೆ” ಎಂದು ಎಚ್ಚರಿಕೆ ನೀಡಿದ್ದಲ್ಲದೇ ಉತ್ತಮ ಸಂಬಳವನ್ನೂ ಕೊಡುವುದಾಗಿ ಭರವಸೆ ನೀಡಿದರು.ಶೀನೂಗೆ ತುಂಬಾ ಸಂತೋಷವಾಗಿ ಒಪ್ಪಿಕೊಂಡು ಪಟೇಲರು ಹೇಳಿದ ಕೆಲಸವನ್ನು ಚ್ಯುತಿ ಬಾರದಂತೆ ಸಮರ್ಪಕವಾಗಿ ಮಾಡುತ್ತಿದ್ದ.

ದಿನವೂ ಶಾಲೆಗೆ ಬರುವ ಮಕ್ಕಳನ್ನು ನೋಡಿ ನೋಡಿ ಅವನಲ್ಲೂ ಆಸೆ ಚಿಗುರಿತು. ತಾನು ಯಾಕೆ ತನ್ನ ಮಕ್ಕಳನ್ನು ಓದಿಸಬಾರದು? ಇನ್ನೂ ಚಿಕ್ಕವರು. ತಾನು ತನ್ನ ಹೆಂಡತಿಯಂತೂ ಓದಿಲ್ಲ. ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡಬೇಕು. ಈ ವಿಚಾರ ಬಂದಿದ್ದೇ ತಡ ಮನೆಗೆ ಬಂದವನೇ ಮನೆಯಲ್ಲಿ ಹೆಂಡತಿಯ ಹತ್ತಿರ ಮಾತನಾಡಿ ತನ್ನ ಮನೆಗೆ ಹತ್ತಿರವಿರುವ ಸರ್ಕಾರಿ ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸುತ್ತಾನೆ.ಶಾಲೆಗೆ ಸೇರಿಸಲು ಒಂದು ವರ್ಷ ತಡವಾದರೂ ಮಕ್ಕಳಿಬ್ಬರೂ ಚೂಟಿ. ಬೇಗ ಬೇಗ ಹೇಳಿಕೊಟ್ಟಿದ್ದನ್ನು ಕಲಿಯುವ ಜಾಣರು. ಪ್ರತೀ ದಿನ ಬಂದು ಶಾಲೆಯಲ್ಲಿ ಹೇಳಿಕೊಟ್ಟಿದ್ದನ್ನು ಮನೆಯಲ್ಲಿ ಉರು ಹೊಡೆವಾಗ ಹೆತ್ತವರಿಗೋ ಬಲೂ ಸಂಭ್ರಮ.

ಅದು ಹಾಗೆ ಗೊತ್ತಿಲ್ಲದ ವಿಚಾರ ತಿಳಿಯುತ್ತ ಬಂದ ಹಾಗೆ ಮನುಷ್ಯನ ಮಿದುಳು ಚುರುಕಾಗುತ್ತದೆ. ಮಕ್ಕಳೋ “ಅಪ್ಪ ಅಮ್ಮಾ ನೀವಿಬ್ಬರೂ ದಡ್ಡರು ಏನೂ ಬರಲ್ಲ” ಅಂತ ರೇಗಿಸುವಾಗ ಹೆತ್ತವರು “ಆಗಲಿ ಮಕ್ಕಳಿರಾ. ನೀವಿಬ್ಬರೂ ಕಲಿತು ಬುದ್ಧಿವಂತರಾಗಿ”ಎಂದು ಅಪ್ಪಿ ಮುದ್ದಾಡುತ್ತಿದ್ದರು. ಹೆತ್ತವರ ಸಾಧ್ವಿ ಸ್ವಭಾವ ಮಕ್ಕಳಲ್ಲೂ ಮನೆ ಮಾಡಿತ್ತು. ಮನೆ ನಗುವಿನಲ್ಲಿ ನಂದನವನವಾಗಿತ್ತು.ಶೀನು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದನಲ್ಲಾ ಆ ಶಾಲೆ ಇಂಗ್ಲಿಷ್ ಮೀಡಿಯಂ ಶಾಲೆಯಾಗಿತ್ತು. ಶಿಸ್ತಿನ ಶಾಲೆ. ಸುತ್ತಮುತ್ತಲಿನ ವಾತಾವರಣ ಸ್ವಚ್ಛವೇನೊ ಇತ್ತು. ಆದರೆ ಸಾಕಷ್ಟು ಜಾಗವಿದ್ದರೂ ಗಾರ್ಡನ್ ಏನೂ ಇರಲಿಲ್ಲ. ಭಣ ಭಣ ಅಂತಿತ್ತು. ಆದರೆ ಅವನ ಮಕ್ಕಳು ಹೋಗುತ್ತಿದ್ದ ಸರ್ಕಾರಿ ಶಾಲೆಯಲ್ಲಿ ಮಕ್ಕಳೇ ಸಾಕಷ್ಟು ಗಿಡಗಳನ್ನು ನೆಟ್ಟು ಚಂದಗೊಳಿಸಿದ್ದರು. ಆ ಶಾಲೆಯಲ್ಲಿ ಒಂದು ತರಗತಿ ತೋಟ ಬೆಳೆಸಲೆಂದೇ ಮೀಸಲಿಟ್ಟಿದ್ದರು.

ಒಂದು ದಿನ ಇದ್ದಕ್ಕಿದ್ದಂತೆ ಶೀನೂ ತಾನ್ಯಾಕೆ ಈ ಶಾಲೆಯಲ್ಲಿ ಗಿಡಗಳನ್ನು ಬೆಳೆಸುವ ಕುರಿತು ಪಟೇಲರಲ್ಲಿ ಪ್ರಸ್ಥಾವನೆ ಮಾಡಬಾರದು. ಹೇಗಿದ್ದರೂ ಪಟೇಲರ ಮಾತು ಇಲ್ಲಿ ನಡೆಯುತ್ತದೆ. ದೊಡ್ಡ ಮನುಷ್ಯರು. ಶಾಲೆ ಮುಗಿಯುವವರೆಗೂ ಸುಮ್ಮನೆ ಕೂತು ಕೂತು ಬೇಜಾರಾಗುತ್ತದೆ. ಒಂದಷ್ಟು ಮೈ ಬಗ್ಗಿಸಿ ದುಡಿದರೆ ಕಳಕೊಳ್ಳೋದೇನು. ಶಾಲೆಯೂ ಚಂದ ಕಾಣುತ್ತದೆ. ದಿನವೂ ಶಾಲೆ ನೋಡುವ ಅವನ ಮನದಲ್ಲಿ ಒಂದು ರೀತಿ ಅಭಿಮಾನ ಬೆಳೆದಿತ್ತೊ ಏನೊ! ಆಗಲೇ ಅಲ್ಲಿಯ ಸಿಬ್ಬಂದಿ ಚೂರು ಪಾರು ಅದೂ ಇದೂ ಕೆಲಸ ಹೇಳುತ್ತಿದ್ದರು. ಅವನೂ ಅಷ್ಟೆ ಅವರೆಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದ.ಪಟೇಲರಿಂದ ಎಲ್ಲ ವಿಚಾರ ತಿಳಿದ ಪ್ರಿನ್ಸಿಪಾಲರು ಅಲ್ಲಿಯ ಆಡಳಿತ ವರ್ಗದವರೊಂದಿಗೆ ಮಾತನಾಡಿ ತೋಟ ಬೆಳೆಸುವ ಬಗ್ಗೆ ಒಪ್ಪಿಗೆ ಸಿಕ್ಕಿದ್ದಲ್ಲದೇ ಅದಕ್ಕೆ ಬೇಕಾದ ಸಲಕರಣೆಗಳನ್ನೂ ಸಹ ತರಿಸಿಕೊಟ್ಟರು.

ಮಾರನೇ ದಿನದಿಂದ ಶೀನೂನ ತೋಟಗಾರಿಕೆ ಕೆಲಸ ಶುರುವಾಯಿತು.ನೆಲವನ್ನು ಹಸನ ಮಾಡಿ ವಿಧ ವಿಧವಾದ ಹೂವಿನ ಗಿಡಗಳನ್ನು ನೆಟ್ಟು ನೀರು ಹಾಕಿ ಪೋಷಿಸುತ್ತ ಬಂದ. ಆದರೆ ಅವನಿಗೆ ತೋಟಗಾರಿಕೆಯ ಬಗ್ಗೆ ಮಾಹಿತಿ ಇಲ್ಲದ್ದರಿಂದ ತನಗೆ ಅನಿಸಿದ್ದಂತೆ ಹೇಗೆ ಹೇಗೊ ಗಿಡ ನೆಟ್ಟು ಬಿಟ್ಟಿದ್ದ.ಶಾಲೆಯ ವಾರ್ಷಿಕೋತ್ಸವ ಸಮಾರಂಭಕ್ಕೆ ಬಂದ ಆಡಳಿತ ಮುಖ್ಯಸ್ಥರು ಇವನ ಕೆಲಸವನ್ನು ಶ್ಲಾಘಿಸಿದ್ದಲ್ಲದೆ ಇವನಿಗೆ ಪ್ರತೀ ತಿಂಗಳೂ ಸ್ವಲ್ಪ ಹಣವನ್ನು ಸಂಬಳ ರೂಪದಲ್ಲಿ ಕೊಡಿ ಎಂದು ಆಜ್ಞಾಪಿಸಿದ್ದಲ್ಲದೇ ತೋಟಗಾರಿಕೆ ಇಲಾಖೆಯಿಂದ ಸಿಬ್ಬಂದಿಯನ್ನು ಕರೆಸಿ ಅವರ ಸಲಹೆಯಂತೆ ಗಿಡ ಬೇಳೆಸಲು ಆಜ್ಞಾಪಿಸಿದರು. ಸಮಾರಂಭಕ್ಕೆ ಬಂದವರೆಲ್ಲ ಶೀನೂನ ಕೆಲಸವನ್ನು ಮೆಚ್ಚಿ ಹೊಗಳುತ್ತಿದ್ದರು. ಅತೀವ ಸಂತಸದಲ್ಲಿದ್ದ ಶೀನು ಈಗ ಇನ್ನಷ್ಟು ಹುರುಪಿನಿಂದ ಶಾಲಾ ರಜೆಯ ದಿನದಲ್ಲೂ ಬಂದು ಗಾರ್ಡನ್ ಚಂದಗೊಳಿಸುವುದರಲ್ಲಿ ಉತ್ಸುಕನಾದ. ಅವನ ಹೆಂಡತಿಗೆ ಮನೆ ಕೆಲಸಕ್ಕೆ ಹೋಗಲು ಕೊಡದೆ ಮಕ್ಕಳನ್ನು ನೋಡಿಕೊಂಡು ಅವರೊಂದಿಗಿರು ಸಾಕು. ಮನೆ ಕಡೆ ಜೋಪಾನ. ನಮ್ಮ ಮಕ್ಕಳೂ ಪಟೇಲರ ಮಕ್ಕಳಂತೆ ವಿದ್ಯೆ ಕಲಿತು ಮುಂದುವರಿಯಲಿ ಎಂದು ತಾಕೀತು ಮಾಡಿದ.

ದಿನ ಕಳೆದಂತೆ ಕಾಂಕ್ರೀಟ್ ಕಾಡಿನಂತಿದ್ದ ಶಾಲೆ ನಳನಳಿಸುತ್ತಿತ್ತು. ಗಿಡಗಳು ಎತ್ತರವಾಗಿ ಬೆಳೆದು ಅನೇಕ ಹಕ್ಕಿ ಪಕ್ಷಿಗಳಿಗೆ ಆಶ್ರಯ ತಾಣವಾದವು. ಸುತ್ತಮುತ್ತಲಿನ ಶಾಲೆಗಳೂ ಈ ಶಾಲೆ ನೋಡಿ ತಾವೂ ಯಾಕೆ ಈ ನಿಟ್ಟಿನಲ್ಲಿ ಮುಂದುವರಿಯಬಾರದು ಎಂಬ ನಿರ್ಧಾರಕ್ಕೆ ಬಂದರು.

“ನೋಡಿ ತಿಳಿ ಮಾಡಿ ಕಲಿ” ” ಕೈ ಕೆಸರಾದರೆ ಬಾಯಿ ಮೊಸರು” ಈ ಗಾದೆ ಮಾತುಗಳು ಎಷ್ಟು ಸತ್ಯ ಅಲ್ಲವೇ?ಪಟೇಲರ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ತನ್ನ ಮಕ್ಕಳಿಗೂ ವಿದ್ಯೆ ಕಲಿಸಬೇಕೆಂಬ ಜ್ಞಾನ ಶೀನೂನಲ್ಲಿ ಉಂಟಾಯಿತು. ಶಾಲೆಗೆ ಹೋಗುವ ಮಕ್ಕಳಿಂದಾಗಿ ಹೆತ್ತವರಿಗೂ ಒಂದಷ್ಟು ಅರಿವು ಮೂಡಿತು. ವಿದ್ಯೆ ಇಲ್ಲದ ಶೀನೂನಲ್ಲಿ ಒಳ್ಳೆಯ ಗುಣ ಇತ್ತು. ವಿನಯ ಇತ್ತು. ಮೈ ಬಗ್ಗಿ ದುಡಿಯುವ ಮನಸ್ಸಿತ್ತು. ನಿಯತ್ತಿತ್ತು. ಇಂತಹವರಿಗೆ ಎಲ್ಲಿ ಹೋದರೂ ಮನ್ನಣೆ ಇದ್ದೇ ಇದೆ. ಎಲ್ಲದಕ್ಕೂ ಮನಸ್ಸು ಮುಖ್ಯ.

***********

29-10-2019. 8.47pm

ಕಾಡಿನಲ್ಲೊಂದು ದಿನ (ಮಕ್ಕಳ ಕಥೆ)

(ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು(ರಿ) ಜಿಲ್ಲಾ ಘಟಕ,ರಾಯಚೂರು ಇವರು ನವೆಂಬರ್ 2019ರಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಮಕ್ಕಳ ಕಥಾ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ ಮೂರನೆಯ ಬಹುಮಾನ ಪಡೆದ ಕಥೆಯಿದು. ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಒಟ್ಟೂ 34 ಕಥೆಗಳನ್ನೊಳಗೊಂಡ “ನವಿಲು ಕುಣಿದಾವ” ಎಂಬ ಅಂದವಾದ ಹೆಸರನ್ನಿಟ್ಟು ಅರಣ್ಯ ರಕ್ಷಕರೂ ಹಾಗೂ ಘಟಕದ ಅಧ್ಯಕರೂ ಆದ ಶ್ರೀ ಯಲ್ಲಪ್ಪ ಎಮ್.ಮರ್ಚೇಡ್ ರವರು ಮಕ್ಕಳ ಕಥಾ ಪುಸ್ತಕವನ್ನು ಹೊರ ತಂದಿದ್ದಾರೆ) ಅದೊಂದು ದೊಡ್ಡ ಕಾಡು. ಯಾವೊಬ್ಬ ನರ ಪಿಳ್ಳೆಯೂ ಅಲ್ಲಿಗೆ ಕಾಲಿಡಲೂ ಹೆದರುತ್ತಿದ್ದನು. ಆಗಸಕ್ಕೆ ಮುಖ ಮಾಡಿ ನಿಂತ ಎತ್ತರವಾದ ಮರಗಳು ಅಜಾನುಬಾಹುವಾಗಿ ತಮ್ಮ ಟೊಂಗೆಗಳನ್ನು ಊರಗಲ ಚಾಚಿ ಸೂರ್ಯನ ಕಿರಣಕ್ಕೆ ಚಪ್ಪರ ಹಾಸಿಬಿಟ್ಟಿದ್ದವು. ಅಲ್ಲಲ್ಲಿ ಹರಿಯುವ ಜರಿ ತೊರೆಗಳು ಗಿಡ ಮರ ಪಕ್ಷಿ ಪ್ರಾಣಿಗಳಿಗೆ ಯಥೇಚ್ಚವಾಗಿ ನೀರುಣಿಸುತ್ತ ಜುಳು ಜುಳು ನಾದ ಆ ಪಕ್ಷಿಗಳ ನಿನಾದ ಕಾಡು ಮೃಗಗಳ ಗರ್ಜನೆ ಇಡೀ ಕಾಡೂ ಭಯಾನಕ ಅಷ್ಟೇ ರೋಮಾಂಚಕ ವಾತಾವರಣ ಸೃಷ್ಟಿ ಮಾಡಿತ್ತು. ಜನರೇ ಪ್ರವೇಶಿಸುತ್ತಿರಲಿಲ್ಲ ಅಂದ ಮೇಲೆ ಇನ್ನೇನು? ಕಾಡು ಸದಾ ಸಮೃದ್ದಿ! ಮರ ಕಡಿಯುವವರಿಲ್ಲ, ಪ್ರಾಣಿ ಭೇಟೆಯಾಡುವವರಿಲ್ಲ. ಮನಸೋ ಇಚ್ಛೆ ಪ್ರಾಣಿಗಳ ಓಡಾಟ. ಜೇನು ಗೂಡುಗಳಂತೂ ಜೇನು ತುಂಬಿ ಸುತ್ತೆಲ್ಲ ಮಕರಂದದ ಸುವಾಸನೆ ಜೊತೆಗೆ ಕಾಡು ಹೂವುಗಳು ತಾವೇನು ಕಮ್ಮಿ ಎಂಬಂತೆ ಪಂದ್ಯಕ್ಕೆ ನಿಂತಿದ್ದವು. ಅಂತೂ ಆ ಕಾಡಿನ ದೃಶ್ಯ ವರ್ಣನಾತೀತ.

ಒಮ್ಮೆ ಒಬ್ಬ ವಿಜ್ಞಾನಿ ಈ ಕಾಡಿನ ಬಗ್ಗೆ ವಿಷಯ ತಿಳಿದು ಹೇಗಾದರೂ ಸರಿ ಈ ಕಾಡನ್ನು ನೋಡಲೇ ಬೇಕೆಂದು ಒಂದು ದಿನ ಬೆಳ್ಳಂಬೆಳಗ್ಗೆ ಹೊರಡುತ್ತಾನೆ. ಹೋಗುವಾಗ ತನ್ನ ರಕ್ಷಣೆಗೆ ಏನೆಲ್ಲಾ ಬೇಕು ಎಲ್ಲವನ್ನೂ ವ್ಯವಸ್ಥೆ ಮಾಡಿಕೊಳ್ಳುತ್ತಾನೆ. ದಟ್ಟಾರಣ್ಯ ಪ್ರವೇಶಿಸುತ್ತಿದ್ದಂತೆ ಅವನ ಜಂಗಾಲವೇ ಉಡುಗಿ ಹೋದ ಅನುಭವ. ಎತ್ತರದ ಮರದಿಂದ ಇಳಿ ಬಿಟ್ಟ ಹೆಬ್ಬಾವೊಂದು ಬಾಯಿ ತೆರೆದು ಇವನತ್ತ ನುಗ್ಗುತ್ತದೆ. ಇವನೋ ಎಲ್ಲಿ ಕಾಲಿಟ್ಟರೆ ಹೇಗೋ ಎಂಬ ಯೋಚನೆಯಲ್ಲಿ ನೆಲ ನೋಡುತ್ತ ಹೆಜ್ಜೆ ಹಾಕುತ್ತಿದ್ದ. ಒಣಗಿದ ಎಲೆಗಳ ನಡುವೆ ಒಂದೊಂದೇ ಹೆಜ್ಜೆ ಹಾಕಿದಾಗಲೆಲ್ಲ ಸರ್ ಪರ್ ಶಬ್ದ ಬೇಡ ಬೇಡವೆಂದರೂ ಬರುತ್ತಿತ್ತು ಎಷ್ಟೇ ನಿಧಾನವಾಗಿ ಹೆಜ್ಜೆ ಹಾಕಿದರೂ. ಈ ಶಬ್ದ ಹಾವಿನ ಕಿವಿಗೆ ತಾಗಿತ್ತೋ ಅಥವಾ ಭೇಟೆಗಾಗಿ ಕಾದಿತ್ತೊ ಏಕ್ದಂ ಇವನತ್ತ ನುಗ್ಗಿ ಬಂದಿತ್ತು. ಅದು ಬರುವ ವೇಗಕ್ಕೆ ಇವನೂ ಜಾಗೃತಗೊಂಡು ಸತ್ತೆನೊ ಬಿದ್ದೆನೊ ಎನ್ನುತ್ತ ಕಾಲು ಹೋದ ಕಡೆ ಓಡಲು ಶುರು ಮಾಡಿದ. ಓಡುತ್ತಿದ್ದಾನೆ ಜೀವದ ಹಂಗು ತೊರೆದು‌. ಎಷ್ಟೇ ರಕ್ಷಾ ಕವಚದ ಗಂಬೂಟು ಹಾಕಿದ್ದರೂ ಅಲ್ಲಿ ಬೆಳೆದ ಮುಳ್ಳು ಕಂಟಿಗಳು ಇವನ ಕೈ ಕಾಲು ಮುಖ ಮೈಯ್ಯೆಲ್ಲಾ ತರಚಿಬಿಟ್ಟಿದ್ದವು. ಅಂದರೂ ಜೀವ ರಕ್ಷಣೆಗಾಗಿ ಓಡುತ್ತಲೇ ಇದ್ದಾನೆ. ಹಾವು ಎಷ್ಟು ದೂರ ಓಡಿದರೂ ಇವನ ಬೆನ್ನು ಬಿಡುತ್ತಿಲ್ಲ. ಓಡಿ ಹೋಗುವ ರಭಸದಲ್ಲಿ ಹಾವು ಬೆನ್ನಟ್ಟಿದ ಗಾಬರಿಯಲ್ಲಿ ಅವನು ಜೊತೆಗೆ ತಂದಿದ್ದ ಸಾಮಾನುಗಳೆಲ್ಲ ಒಂದೊಂದೇ ಉದುರಿ ಕೊನೆಗೆ ಅದ್ಯಾವುದೊ ಮುಳ್ಳು ಕಂಟಿ ಕೋಲು ಮಾತ್ರ ಅವನು ಕೈ ಬಿಟ್ಟಿರಲಿಲ್ಲ.

ದೂರದಲ್ಲೊಂದು ನದಿ ಕಾಣುತ್ತಿದೆ. ಇವನಿಗೋ ಭಯಂಕರ ದಾಹ. ಅತ್ತ ಕಡೆಯೇ ಓಡುತ್ತಾನೆ. ಒಮ್ಮೆ ಹಿಂತಿರುಗಿ ನೋಡುತ್ತಾನೆ; ಕಾಡು ಬಿಟ್ಟು ನದಿಯ ಬಯಲಿಗೆ ಬಂದಿದ್ದಾನೆ. ಹಾವೂ ಇಲ್ಲ ಕಾಡೂ ಇಲ್ಲ. ಅಯ್ಯಪ್ಪಾ! ಸಾಕಪ್ಪಾ ಈ ಕಾಡಿನ ಸಹವಾಸ. ನಾನೆಲ್ಲಿದ್ದೀನೊ. ನನ್ನೂರು ಯಾವ ಕಡೆಯೋ. ಒಂದೂ ಗೊತ್ತಾಗುತ್ತಿಲ್ಲ ಇಲ್ಲಿ. ಸದ್ಯ ಬದುಕಿದೆಯಾ ಬಡ ಜೀವವವೇ ಅಂತಂದುಕೊಂಡು ದೀರ್ಘ ನಿಟ್ಟುಸಿರು ಬಿಟ್ಟು ನದಿಯ ಅಂಚಿನಲ್ಲಿ ಕೂತು ಸಂತೃಪ್ತಿಯಾಗುವಷ್ಟು ನೀರು ಕುಡಿದು ದಣಿವಾರಿಸಿಕೊಳ್ಳಲು ಅಲ್ಲೆ ಉದ್ದಂಡ ಮಲಗಿ ಬಿಟ್ಟ. ಕಣ್ಣು ಮುಚ್ಚಿದ್ದೊಂದೇ ಗೊತ್ತು. ಬಿಸಿಲ ಜಳ ಕಾವೇರಿದಂತೆ ಎಚ್ಚರಗೊಂಡು ನದಿ ನೀರಲ್ಲಿ ಮುಳುಗೆದ್ದು ಹೊರಟ ತನ್ನೂರು ಅರಸುತ್ತ. ಎಷ್ಟು ದೂರ ಹೋದರೂ ನದಿದಂಡೆ ಜನವಸತಿ ಪ್ರದೇಶ ಕಾಣಿಸುತ್ತಿಲ್ಲ. ಕತ್ತಲಾವರಿಸತೊಡಗಿತು. ಜೊತೆಗೆ ಭಯನೂ ಶುರುವಾಯಿತು‌. ಅಲ್ಲಾ ಇಷ್ಟು ಪುಕ್ಕಲಾ ನಾನು? ಮತ್ಯಾಕೆ ಕಾಡು ಪ್ರವೇಶಿಸುವ ಪ್ರಯತ್ನ ಮಾಡಿದೆ? ಛೆ ಛೆ, ನಾನು ಅಧೈರ್ಯಗೆಡಬಾರದು. ನಾನು ಬಂದ ಉದ್ದೇಶ ಈ ಕಾಡು ನೋಡಲು. ಒಂದಷ್ಟು ಸಂಶೋಧನೆ ಮಾಡಲು. ಆದರೆ ನನ್ನ ಹತ್ತಿರ ಇದ್ದ ಸಾಮಾನೆಲ್ಲ ಎಲ್ಲೆಲ್ಲಿ ಬಿತ್ತೊ ಏನೊ. ಈಗ ಈ ಕೆಲಸ ಕಷ್ಟ ಸಾದ್ಯ‌. ಕತ್ತಲಾದರೂ ಪರವಾಗಿಲ್ಲ. ಮುಂದೆ ಹೋಗುತ್ತಿರುವುದೇ ಸರಿ. ಎಲ್ಲಾದರೂ ಮಿಣುಕು ದೀಪ ಕಾಣಬಹುದು ಎಂಬ ಆಸೆಯಿಂದ ಹೊರಟ.

ಪೂರ್ತಿ ಅಮಾವಾಸ್ಯೆಯ ಕಗ್ಗತ್ತಲು. ಚುಕ್ಕೆಗಳು ಆಕಾಶವೆಲ್ಲ ಆವರಿಸಿದೆ. ನಭೋ ಮಂಡಲ ಅತ್ಯಂತ ರಮಣೀಯವಾಗಿ ಕಾಣುತ್ತಿದೆ. ನದಿಯಿಂದ ಬರುವ ತಂಪಾದ ಗಾಳಿ ಚಂದಿರನಿಲ್ಲದ ಆ ರಾತ್ರಿ ಅವನು ತಾನೆಲ್ಲಿರುವೆನೆಂದು ಮರೆಯುವಷ್ಟು ಖುಷಿ ಕೊಟ್ಟಿವೆ‌. ನಡೆಯುವ ನಡಿಗೆ ನಿಧಾನವಾಗುತ್ತಿದೆ. ಚಂದ ಚಂದ ಈ ಸೃಷ್ಟಿಯೇ ಚಂದ. ಈ ರಾತ್ರಿ ಹೀಗೆಯೇ ಇದ್ದುಬಿಡಲಿ, ಈ ತಾರೆಗಳು ಹೀಗೆಯೇ ಬೆಳಗುತ್ತಿರಲಿ, ಈ ನಡಿಗೆ ಹೀಗೆ ನಿರಂತರವಾಗಿರಲಿ ಎಂದು ತನ್ನಷ್ಟಕ್ಕೆ ಮಾತಾಡಿಕೊಳ್ಳುತ್ತಿದ್ದಾನೆ!

” ಸುರೇಶಾ ಸುರೇಶಾ ಎದ್ದೇಳೊ. ಸ್ಕೂಲಿಗೆ ಹೋಗುವುದಿಲ್ಲವೆನೊ? ” ಅವರಮ್ಮ ತಟ್ಟಿ ತಟ್ಟಿ ಎಬ್ಬಿಸುತ್ತಿದ್ದಾರೆ. ನಿಧಾನವಾಗಿ ಕಣ್ಣು ಬಿಟ್ಟ ಸುರೇಶ ಓಹ್! ಇದುವರೆಗೂ ನಾನು ಕಂಡಿದ್ದು ಕನಸು. ಛೆ! ಈ ಅಮ್ಮ ಬೇರೆ ಈಗಲೇ ಬಂದು ಎಬ್ಬಿಸಬೇಕಾ? ಎಷ್ಟೊಳ್ಳೆ ಕನಸು. ಸಖತ್ತಾಗಿತ್ತು. ಇನ್ನೂ ಏನೇನು ನೋಡುತ್ತಿದ್ದೆನೊ ಏನೊ‌. ಎಲ್ಲಾ ಹಾಳಾಯಿತು ಎಂದು ಮುಖ ಪೆಚ್ಚು ಮಾಡಿಕೊಂಡು ಎದ್ದವನು ನಿತ್ಯಕರ್ಮ ಮುಗಿಸಿ ಶಾಲೆಗೆ ಹೋಗಲು ಅಣಿಯಾದ. ಆದರೂ ತನ್ನಲ್ಲೇನೊ ಖುಷಿ ಆವರಿಸಿದ ಭಾವಕ್ಕೆ ತನ್ನಷ್ಟಕ್ಕೇ ಮುಗುಳ್ನಕ್ಕ. ಸುರೇಶ ತನ್ನೂರಿನ ಸರ್ಕಾರಿ ಕನ್ನಡ ಶಾಲೆಯ ಮಾಸ್ತರಾಗಿದ್ದ. ಎಂದಿನಂತೆ ಇವತ್ತೂ ಶಾಲೆಗೆ ಹೊರಟಿದ್ದರೂ ದಿನಕ್ಕಿಂತ ಅದೇನೊ ಉಮೇದಿ. ನೆನಪಿಸಿಕೊಂಡು ತನ್ನ ಬಳಿ ಇದ್ದ ಬಣ್ಣದ ಬಳಪಗಳನ್ನು ಎತ್ತಿಟ್ಟುಕೊಳ್ಳುತ್ತಾನೆ. ಸರಿಯಾಗಿ ಒಂಬತ್ತು ಗಂಟೆಗೆ ಪ್ರಾರ್ಥನೆ ಮುಗಿದು ನಿತ್ಯದ ತರಗತಿ ಶುರುವಾಗುತ್ತದೆ.

ಸುರೇಶ ತನ್ನ ತರಗತಿಯ ಮಕ್ಕಳಿಗೆ ನಿತ್ಯದ ಪಾಠಗಳನ್ನು ಹೇಳಿಕೊಟ್ಟಿದ್ದಲ್ಲದೇ ಮಕ್ಕಳನ್ನು ತನ್ನ ಸುತ್ತಲೂ ಪೇರಿಸಿಕೊಂಡು ಹೇಳುತ್ತಾನೆ “ಇವತ್ತೊಂದು ಕಥೆ ಹೇಳ್ತೀನಿ ಬನ್ನಿ ” ;

“ಅದೊಂದು ಕಾಡು. ಒಬ್ಬ ವಿಜ್ಞಾನಿ…‌‌…” ಹೀಗೆ ತನ್ನ ಕನಸಿನ ವೃತ್ತಾಂತ ಮಕ್ಕಳಿಗೆ ಹೇಳುತ್ತ ಅದಕ್ಕೆ ತಕ್ಕಂತೆ ತಾನು ಕಂಡ ದೃಶ್ಯಾವಳಿಗಳನ್ನು ಬಣ್ಣ ಬಣ್ಣದ ಚಾಕ್ಪೀಸಲ್ಲಿ ಬಿಡಿಸುತ್ತ ಮಕ್ಕಳಿಗೆ ಮನದಟ್ಟಾಗುವಂತೆ ಹೇಳುತ್ತಿದ್ದಾನೆ. ಮಕ್ಕಳೂ ಅಷ್ಟೇ ತದೇಕ ಚಿತ್ತದಿಂದ ಕಿವಿಗೊಟ್ಟು ಕೇಳುತ್ತಿದ್ದಾರೆ. ಅವರ್ಯಾರಿಗೂ ಸುತ್ತಲಿನ ಪರಿವೇ ಇಲ್ಲ. ಚಿತ್ರ ಬಿಡಿಸುತ್ತ ಬಿಡಿಸುತ್ತ ಆ ಕಪ್ಪು ಬೋರ್ಡ್ ಅಂದವಾದ ಕಾಡಿನ ಚಿತ್ರ, ನದಿ, ನಕ್ಷತ್ರಗಳಿಂದ ಆ ರಾತ್ರಿಯ ಸನ್ನಿವೇಶವೆಲ್ಲವುಗಳಿಂದ ತುಂಬಿ ಹೋಗಿದೆ‌. ಇತ್ತ ಮುಖ್ಯ ಶಿಕ್ಷಕರು ಕಾರಿಡಾರಿನಲ್ಲಿ ಬರುತ್ತಿರುವಾಗ ಇವರ ತರಗತಿಯಲ್ಲಿ ನಡೆಯುತ್ತಿರುವ ಕಥಾ ಸರಣಿ ಕೇಳುತ್ತ ಅಲ್ಲೇ ನಿಂತುಬಿಡುತ್ತಾರೆ‌. ಇವರು ನಿಂತದ್ದು ಕಂಡ ಉಳಿದ ಶಿಕ್ಷಕರು ಅವರೊಂದಿಗೆ ಇಡೀ ಶಾಲೆ ಮಕ್ಕಳೂ ಸೇರಿ ಬಿಟ್ಟಿದ್ದಾರೆ. ಏನೊಂದೂ ಗಮನಿಸದ ಸುರೇಶ ತಾನು ಕಂಡ ಕನಸಿನ ಕಥೆ ಮುಗಿಸಿದಾಗ ಜೋರಾದ ಚಪ್ಪಾಳೆ ಮೊಳಗುತ್ತದೆ. ಎಲ್ಲರ ಹೊಗಳಿಕೆ ಬೋರ್ಡ್ ಮೇಲೆ ರಾರಾಜಿಸುತ್ತಿದ್ದ ಆ ಚಿತ್ರಗಳು ಸುರೇಶನಿಗೆ ಶಾಲೆಯ ವಾರ್ಷಿಕೋತ್ಸವದಲ್ಲಿ ” ಉತ್ತಮ ಶಿಕ್ಷಕ” ಎಂಬ ಬಹುಮಾನ ತಂದುಕೊಡುತ್ತದೆ.

ಈ ಕಥೆಯ ತಾತ್ಪರ್ಯ “ಕಾಡನ್ನು ಉಳಿಸಿ, ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿ, ಉತ್ತಮ ಶಿಕ್ಷಕ ಮಕ್ಕಳಿಗೆ  ಉತ್ತೇಜನ.” 
                    
4-11-2019. 6.04pm

ಪೋರನ ಅವಾಂತರ…

ಇಕ್ಕಿಟಿಪ್ಪಿ ಇಕ್ಕಿಟಿಪ್ಪಿ
ಮನೆಯಲ್ಲಿದ್ದ ಪೋರಾ
ಅಡಿಗೆ ಮನೆ ಸೇರಿಕೊಂಡು
ಮಾಡಿದ ನೋಡು ಸಾರಾ.

ಕಟ್ ಕಟ್ ಕಟ್
ತರಕಾರಿನೆಲ್ಲ ತಿರಿದು
ಮೊಳಕೆ ಕಾಳು ಈರುಳ್ಳಿ
ಮಾಡೇಬಿಟ್ಟ ಪಲಾವು.

ಫೀ ಫೀ ಫೀ ಕುಕ್ಕರು
ಹೊಡದೆ ಬಿಡ್ತು ವಿಸಿಲ್ಲು
ಕೊತ ಕೊತ ಕುದಿದು ರೆಡಿ
ಒಗ್ಗರಣೆಯ ದಾಲು.

ಲಟಪಟ ಲಟಪಟ
ಲಟ್ಟಣಿಗೆ ಓಡಾಡಿ
ಬುಸ್ ಎಂದು ಉಬ್ಬೆ ಬಿಡ್ತು
ಬಾಣಲೆ ಮೇಲಿನ ಪುಲ್ಕಾ.

ಕೆಂಪಕ್ಕಿ ಅನ್ನ ಮಜ್ಜಿಗೆ
ಉಪ್ಪಿನ ಕಾಯಿ ಹಪ್ಪಳ
ಪಟ್ಟಾಗಿ ಕಳಿತು ಒಬ್ಬನೆ
ಇಳಿಸೆ ಬಿಟ್ಟ ಊಟ.

ಅಮ್ಮನಿಲ್ಲದ ಅಡಿಗೆ ಮನೆ
ಚಲ್ಲಾ ಪಿಲ್ಲಿ ಹರಡಿ
ಬಂದ ಅಮ್ಮ ಕೇಳಿದಳಾಗ
ಕಾಲಿಕ್ಕೋದು ಇನ್ನೆಲ್ಲಿ.

ನಕ್ಕು ನಕ್ಕು ಒಳಗೊಳಗೆ
ಖುಷಿ ಪಟ್ಟಳು ಅಮ್ಮ
ಅಡಿಗೆ ಮಾಡಿ ತಿಂದ
ಮಗನ ಅವಾಂತರ ಕಂಡು.☺

12-3-2017. 7.32pm

ಮಕ್ಕಳಿಗೊಂದು ರಾಜಾ ರಾಣಿ ಕಥೆ

ಒಂದಲ್ಲಾ ಒಂದು ಊರಲ್ಲಿ ಒಬ್ಬ ರಾಜನಿದ್ದ. ಅವನಿಗೆ ಇಬ್ಬರು ಹೆಂಡತಿಯರು ಇದ್ದರು. ಇಬ್ಬರಲ್ಲಿ ಒಬ್ಬಳು ತುಂಬಾ ಸುಂದರಿ. ಅವಳ ಹೆಸರೂ ಕೂಡಾ ಸುಂದರಿ. ಇನ್ನೊಬ್ಬಳ ಹೆಸರು ಕಮಲ.

ಈ ಇಬ್ಬರಲ್ಲಿ ರಾಜನಿಗೆ ಸುಂದರಿಯನ್ನು ಕಂಡರೆ ತುಂಬಾ ಪ್ರೀತಿ. ಸುಂದರವಾಗಿದ್ದಳಲ್ಲವೆ? ಸದಾ ಅವಳ ಜೊತೆಗೇ ಇರುತ್ತಿದ್ದ. ಅವಳು ಏನು ಕೇಳಿದರೂ ಇಲ್ಲವೆನ್ನುತ್ತಿರಲಿಲ್ಲ. ಅವಳು ಹೇಳಿದಂತೆ ಎಲ್ಲವೂ ನಡೆಯುತ್ತಿತ್ತು. ಇವೆಲ್ಲವುಗಳ ಪರಿಣಾಮ ಅವಳು ತುಂಬಾ ಸೊಕ್ಕಿನಿಂದ ಮೆರೆಯುತ್ತಿದ್ದಳು. ಎಲ್ಲರ ಮೇಲೆ ಅಹಂಕಾರ, ದಪ೯. ಮಾತಿನಲ್ಲಿ ಸ್ವಲ್ಪವೂ ನಯ ವಿನಯ ಗೊತ್ತಿರಲಿಲ್ಲ. ಇವಳು ರಾಜನ ಎರಡನೆಯ ಹೆಂಡತಿ ಬೇರೆ. ಅರಮನೆಯಲ್ಲಿ ಚಿಕ್ಕ ಸೊಸೆ. ರಾಜನ ಮೊದಲನೆಯ ಹೆಂಡತಿಯಾದ ಕಮಲಳ ಮೇಲೆ ಸದಾ ಏನಾದರೂ ಕೊಂಕು ಮಾತಾಡಿ ಅವಳ ಮನಸ್ಸು ಘಾಸಿಗೊಳಿಸುವುದು ಇವಳ ದಿನ ನಿತ್ಯದ ಕೆಲಸ. ಅವಳ ವಿರುದ್ಧ ಇಲ್ಲ ಸಲ್ಲದ ಚಾಡಿ ಹೇಳಿ ರಾಜನ ಮನಸ್ಸು ಕೆಡಿಸುತ್ತಿದ್ದಳು. ಇದನ್ನು ನಂಬಿದ ರಾಜ ಮೊದಲ ಹೆಂಡತಿ ಹತ್ತಿರ ಸೇರಿಸುವುದನ್ನೂ ಬಿಟ್ಟ. ಇದೇ ಅವಕಾಶ ಉಪಯೋಗಿಸಿಕೊಂಡ ಸುಂದರಿ ರಾಜ ಅವಳನ್ನು ಅರಮನೆಯಿಂದಲೇ ಹೊರಗೆ ಹಾಕುವಂತೆ ಮಾಡಿದಳು.

ಪಾಪ! ಕಮಲ. ಹೆಸರಿಗೆ ತಕ್ಕಂತೆ ಸೌಮ್ಯ ಸ್ವಭಾವದವಳು. ಯಾವುದನ್ನೂ ಪ್ರತಿಭಟಿಸುವ ಶಕ್ತಿ ಅವಳಿಗಿರಲಿಲ್ಲ. ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಇದ್ದ ಅವಳು ಎಲ್ಲರ ಪ್ರೀತಿಗೆ ಪಾತ್ರಳಾಗಿದ್ದಳು. ಊರಿನ ಜನರೆಲ್ಲರಿಗೂ ಅವಳನ್ನು ಕಂಡರೆ ಅಪಾರ ಪ್ರೀತಿ. ಆದರೆ ರಾಜ ಅರಮನೆಯಿಂದ ಹೊರ ಹಾಕಿದಾಗ ಎಲ್ಲರಿಗೂ ತುಂಬಾ ಬೇಸರವಾಯಿತು. ಆದರೆ ರಾಜನ ಮಾತು ಯಾರೂ ಪ್ರತಿಭಟಿಸುತ್ತಿರಲಿಲ್ಲ. ರಾಜನಲ್ಲವೆ? ಭಯ ಎಲ್ಲರಿಗೂ.

ರಾಜನಿಂದ ಹೊರಗಟ್ಟಲ್ಪಟ್ಟ ಕಮಲ ದಿಕ್ಕು ತೋಚದಂತಾಗಿ ಇನ್ನೆಲ್ಲಿ ನನಗೆ ಬದುಕು? ದೂರ ಬಹುದೂರ ಹೊರಟು ಹೋಗೋಣವೆಂದು ನಿಧ೯ರಿಸಿ ಹೋಗುತ್ತಿದ್ದಾಳೆ ದಿಕ್ಕು ದೆಸೆಯಿಲ್ಲದೆ ಅಳುತ್ತ. ಹೀಗೆ ಹೋಗುತ್ತಿರುವಾಗ ಒಬ್ಬ ದಾಸಯ್ಯ ದಾರಿಯಲ್ಲಿ ಸಿಗುತ್ತಾನೆ. ಇವಳು ಅಳುತ್ತಿರುವುದನ್ನು ಕಂಡು “ತಂಗಿ ಯಾಕವ್ವ ಅಳ್ತೀಯಾ? ಏನಾಯಿತು? ನನ್ನ ಹತ್ತಿರ ಹೇಳು. ನನ್ನ ಕೈಲಾದ ಸಹಾಯ ಮಾಡುತ್ತೇನೆ.” ಎಂದಾಗ ಇವಳಿಗೆ ದುಃಖ ಒತ್ತರಿಸಿ ಬಂದು ಇರುವ ವಿಷಯ ಹೇಳುತ್ತಾಳೆ. “ಅಷ್ಟೇನಾ? ಯೋಚಿಸಬೇಡ. ತಂಗಿ ನಿನ್ನ ಗುಣವೆ ನಿನ್ನ ಕಾಪಾಡುವುದು. ನೀನು ನಾನು ಹೇಳಿದಂತೆ ಮಾಡ್ತೀಯಾ?” “ಆಯಿತು ಸ್ವಾಮಿ, ಅದೇನು ಹೇಳಿ.” “ನೋಡು ಇಲ್ಲಿಂದ ನೇರವಾಗಿ ಹತ್ತು ಗಜ ದೂರದಲ್ಲಿ ಒಂದು ದೇವಸ್ಥಾನವಿದೆ. ಅಲ್ಲಿ ಪೂಜಾರಿಯನ್ನು ಕಂಡು ಅವರು ಹೇಳಿದಂತೆ ನಡೆದುಕೊ. ತಪ್ಪಬೇಡ” ಎಂದು ಹೇಳಿ ದಾಸಯ್ಯ ಹೊರಟು ಹೋದ.

ಕಮಲ ದಾಸಯ್ಯ ಹೇಳಿದಂತೆ ದೇವಸ್ಥಾನಕ್ಕೆ ಹೋಗುತ್ತಾಳೆ. ಅಲ್ಲಿಯ ಪೂಜಾರಿ ಇವಳನ್ನು ಕಂಡು ” ಬಾರವ್ವ ಇಲ್ಲಿ. ಈಗ ನಾನು ಕೊಡುವ ಈ ಲಿಂಬೆ ಹಣ್ಣು ತಲೆಗೆ ಹಚ್ಚಿಕೊಂಡು ಕಲ್ಯಾಣಿಯಲ್ಲಿ ಮೂರು ಸಾರಿ ಮುಳುಗೇಳಬೇಕು. ನಂತರ ಈ ಮಡಿಯುಟ್ಟು ಬಂದು ದೇವರಿಗೆ ಪೂಜೆ ಸಲ್ಲಿಸು” ಎಂದು ಹೇಳುತ್ತಾರೆ.

ಅದರಂತೆ ಕಮಲ ಕಲ್ಯಾಣಿಯಲ್ಲಿ ಮೂರು ಸಲ ಮುಳುಗೇಳುತ್ತಾಳೆ. ಅದೇನಾಶ್ಚಾಯ೯. ತಲೆಯಲ್ಲಿದ್ದ ಒಂದೇ ಒಂದು ಕೂದಲಿನ ಬದಲಾಗಿ ನೀಳವಾದ ಕೇಶ ರಾಶಿ. ದೇಹವೆಲ್ಲ ಸುಂದರವಾಗಿದೆ. ಮೈಯ್ಯಲ್ಲಿ ನವ ಚೇತನ. ಖುಷಿಯಿಂದ ಮೇಲೆ ಬಂದು ಮಡಿಯುಟ್ಟು ಪೂಜಾರಿ ಹೇಳಿದಂತೆ ದೇವರಿಗೆ ಪೂಜೆ ಸಲ್ಲಿಸುತ್ತಾಳೆ.

ಮತ್ತೆ ಅರಮನೆಗೆ ಮರಳುವಾಸೆ ಮನದಲ್ಲಿ.. ದಾರಿಯಲ್ಲಿ ಸಾಗುತ್ತಿರಲು ಅಡಿಕೆ ತೆಂಗು ಬಾಳೆಯ ಗಿಡಗಳು “ಅಕ್ಕಾ ಅಕ್ಕಾ ನಮಗೆ ಸ್ವಲ್ಪ ನೀರು ಹಾಕು” ಎಂದಾಗ ಅವುಗಳಿಗೆಲ್ಲ ನೀರುಣಿಸಿ ಅವುಗಳು ಕೊಟ್ಟ ಹಣ್ಣು ಹೊಟ್ಟೆ ತುಂಬಾ ತಿಂದು ಮುಂದೆ ಸಾಗುತ್ತಾಳೆ. ಮತ್ತೆ ಹೂಗಳ ಗಿಡಗಳು ಇದೇ ಮಾತು ಹೇಳಿದವು. ಅವುಗಳಿಗೂ ನೀರೆರೆದಾಗ ಹೂವರಳಿಸಿ ಅಕ್ಕಾ ಮುಡಿದುಕೊ ಬಾ ಎಂದು ಅವಳ ಹೆರಳೇರಿ ತಲೆ ತುಂಬ ಹೂಗಳು ನಳನಳಿಸುತ್ತವೆ. ಹಾಗೆ ಮುಂದೆ ಸಾಗಿದಾಗ ಒಬ್ಬ ಮಾಂತ್ರಿಕ ಎದುರಾಗುತ್ತಾನೆ. “ತಂಗಿ ಇಷ್ಟೆಲ್ಲಾ ಶೃಂಗಾರ ಮಾಡಿಕೊಂಡಿದ್ದೀಯಾ. ಒಡವೆನೆ ಹಾಕಿಲ್ಲ. ಬಾ ನನ್ನ ಹತ್ತಿರ ಎರಡು ಪೆಟ್ಟಿಗೆ ಇದೆ. ಇದರಲ್ಲಿ ನಿನಗೆ ಚೇಳಿನ ಪೆಟ್ಟಿಗೆ ಬೇಕೊ ಬಂಗಾರದ ಪೆಟ್ಟಿಗೆ ಬೇಕೊ ” ಕೇಳುತ್ತಾನೆ. ಆಗ ಅವಳಿಗೆ ಮನದ ಮೂಲೆಯಲ್ಲಿ ರಾಜ ಹೊರಗಾಕಿದ್ದಾನೆ ಅನ್ನುವ ನೋವಿತ್ತಲ್ಲ. ಅದಕ್ಕೆ ಅವಳು ಈ ಬಂಗಾರ ತಗೊಂಡು ಏನು ಮಾಡಲಿ! “ಚೇಳಿನ ಪೆಟ್ಟಿಗೇನೆ ಕೊಡಿ” ಎಂದು ಹೇಳುತ್ತಾಳೆ. ಮಾಂತ್ರಿಕ ಅವಳು ಕೇಳಿದ ಪೆಟ್ಟಿಗೆ ಕೊಟ್ಟು ಮುಂದೆ ಸಾಗುತ್ತಾನೆ.

ಕಮಲಳಿಗೆ ಯಾಕೊ ಇದುವರೆಗೆ ಇಲ್ಲದ ಆತಂಕ, ಬೇಸರ, ನಿರಾಸೆ. ನಾನು ಅರಮನೆಗೆ ಹೋದರೆ ರಾಜ ಮತ್ತೆ ನನ್ನ ಸ್ವೀಕರಿಸುತ್ತಾನೆ ಅಂತ ಯಾವ ಗ್ಯಾರಂಟಿ. ಪೆಟ್ಟಿಗೆಯಲ್ಲಿನ ಚೇಳಿಂದ ಕಚ್ಚಿಸಿಕೊಂಡು ಸಾಯೋಣವೆಂದು ಪೆಟ್ಟಿಗೆ ತೆಗೆದರೆ ಅದರ ತುಂಬಾ ಬಂಗಾರ, ವಜ್ರದ ಒಡವೆಗಳು. ಮತ್ತೆ ಖುಷಿಯಿಂದ ಎಲ್ಲ ಧರಿಸಿಕೊಂಡು ನೋಡುತ್ತಾಳೆ ಅದೇ ಸಾದು ಎದುರಿಗೆ ನಿಂತಿದ್ದಾರೆ. ಅವರಿಗೆ ನಮಸ್ಕಾರ ಮಾಡುತ್ತಾಳೆ. “ತಂಗಿ ನೀನು ಧೈರ್ಯವಾಗಿ ಅರಮನೆಗೆ ಹೋಗು. ಒಳ್ಳೆಯದಾಗಲಿ “ಎಂದು ಹಾರೈಸಿ ಹೋಗುತ್ತಾರೆ. ಅವಳು ಜಗಮಗಿಸುವ ನವ ತರುಣಿಯ ಸೌಂದರ್ಯ ಹೊತ್ತು ಅರಮನೆ ಪ್ರವೇಶಿಸಿದಾಗ ರಾಜ ಆಶ್ಚರ್ಯ ಚಕಿತನಾಗಿ ಅವಳನ್ನು ಭರಮಾಡಿಕೊಳ್ಳುತ್ತಾನೆ.

ಆದರೆ ಸುಂದರಿಗೆ ಅಸೂಯೆ ಶುರುವಾಗುತ್ತದೆ. ಅವಳು ಇವಳಿಂದ ಉಪಾಯವಾಗಿ ಎಲ್ಲ ವಿಷಯ ತಿಳಿದು ಇನ್ನೂ ಹೆಚ್ಚಿನ ಸೌಂದರ್ಯವತಿಯಾಗಿ ರಾಜನನ್ನು ಮೆಚ್ಚಿಸಬೇಕೆಂದು ಇವಳು ಸಾಗಿದ ದಾರಿಯಲ್ಲೇ ಹೋಗುತ್ತಾಳೆ. ಅದೇ ದಾಸಯ್ಯ, ಅದೇ ಪೂಜಾರಿ, ಅದೆ ಗಿಡ ಮರಗಳು, ಅದೇ ಮಾಂತ್ರಿಕ ಎಲ್ಲರೂ ಎದುರಾಗುತ್ತಾರೆ. ಎಲ್ಲರ ಹತ್ತಿರವೂ ವ್ಯತಿರಿಕ್ತವಾಗಿ ಉದ್ಧಟತನದಿಂದ ಅಹಂಕಾರದಿಂದ ನಡೆದುಕೊಳ್ಳುತ್ತಾಳೆ. ಇದರಿಂದಾಗಿ ಇರುವ ಸೌಂದರ್ಯ ಹೋಗಿ ಕುರೂಪಿಯಾಗುತ್ತಾಳೆ. ಮಾಂತ್ರಿಕ ಕೊಟ್ಟ ಪೆಟ್ಟಿಗೆ ಬಂಗಾರದ್ದೆಂದು ನಂಬಿ ತೆರೆದಾಗ ಅದರಲ್ಲಿಯ ಚೇಳು ಕಡಿತದಿಂದ ಅಸು ನೀಗುತ್ತಾಳೆ.

ಇತ್ತ ಕಮಲ ರಾಜನೊಂದಿಗೆ ಸುಃಖ ಸಂತೋಷದಿಂದ ಜೀವನ ಸಾಗಿಸುತ್ತಾಳೆ. ಹಾಳಾದ ರಾಜನ ಮನಸ್ಸು ತಿದ್ದಿ ತೀಡಿ ಉತ್ತಮವಾಗಿ ಸಂಸಾರ ನಡೆಸುತ್ತಾಳೆ. ಪ್ರಜೆಗಳ ಪ್ರೀತಿಗೆ ಮತ್ತೆ ಪಾತ್ರನಾದ ರಾಜ ಒಳ್ಳೆಯ ರಾಜನೆಂದು ಹೊಗಳಿಸಿಕೊಳ್ಳುತ್ತಾನೆ.

ಅಂದರೆ ಮನುಷ್ಯನಿಗೆ ರೂಪ ಮುಖ್ಯ ಅಲ್ಲ,; ಮನಸ್ಸು ಸುಂದರವಾಗಿರಬೇಕು. ಅವನ ಗುಣವೆ ಅವನನ್ನು ರಕ್ಷಿಸುತ್ತದೆ. ಆದುದರಿಂದ ಮಕ್ಕಳೆ ಗುಣವಂತರಾಗಿ ಬಾಳಿ.

13-11-2016. 8.29pm

ಮಕ್ಕಳಾಟ

ಬಿತ್ತೊಂದು ಮಳೆ
ನೆತ್ತಿ ತಣ್ಣಗಾಗಲಿಲ್ಲ
ಕತ್ತೆತ್ತುವ ಭರದಲ್ಲಿ
ಕತ್ತು ಉಳುಕಿತಲ್ಲ||

ಬಾರೊ ಬಾರೊ
ಮಳೆರಾಯ
ಮಕ್ಕಳ ಹಾಡಿಗೆ
ಕುಣಿಯಲಾಗಲಿಲ್ಲ||

ಚೌಕಾ ಬಾರಾ
ಕವಡೆ ಕಾಯಿ
ಕುಲು ಕುಲುಕಿ
ಹಾಕಲಾಗಲಿಲ್ಲ||

ಚಿನ್ನಿ ದಾಂಡು
ಗಿರ ಗಿರ ಗಿಲ್ಲಿ
ಹೊಡೆಯುವ ಹಳೆ ಆಟ
ಹೇಳಿಕೊಡಲಾಗಲಿಲ್ಲ||

ಚನ್ನೆಮಣೆಯ
ಅಟ್ಟದಿ ತೆಗೆದು
ಮಕ್ಕಳೊಟ್ಟಿಗೆ ಕುಳಿತು
ಆಡಿಸಲಾಗಲಿಲ್ಲ||

ಕಣ್ಣಾ ಮುಚ್ಚೆ
ಕಾಡೆ ಗೂಡೆ….
ಅಡಗುವ ಆಟ
ತಿಳಿಸಿಕೊಡಲಾಗಲಿಲ್ಲ||

ತಿರುಗುವ ಮಕ್ಕಳ
ಒಟ್ಟಿಗೆ ಸೇರಿಸಿ
ಚಂದಮಾಮಾ ಕಥೆ
ಹೇಳಲಾಗಲಿಲ್ಲವಲ್ಲ||

ಕಜ್ಜಾಯದಡುಗೆ
ಕೈ ತುತ್ತ ನೀಡಿ
ಒಟ್ಟಿಗೆ ಕುಳಿತ
ಬೆಳದಿಂಗಳೂಟವಿಲ್ಲ||

ಮಕ್ಕಳ ಕರೆದು
ಹೇಳಿದರಂದರು
ಇವೆಲ್ಲ ಓಲ್ಡ ಜಮಾನಾ
ಹೋಗಜ್ಜಿ||

ನಮಗೇನಿದ್ದರು
ಟೀವೀನೇ ಬೇಕು
ಮೊಬೈಲು ಬೇಕು
ನಿನ್ನಾಟ ಯಾರಿಗೆ ಬೇಕು||

ರುಚಿಕಟ್ಟಾದ
ಪಿಜ್ಜಾ ಬರಗರ್
ಸಾಕು ಹೊಟೇಲಿನ
ಮಂದ ದೀಪ||

ಬೈ ಬೈ ಅಜ್ಜಿ
ಹೊರಡುವೆವೀಗ
ಬಾಗಿಲು ತೆಗಿ ಬರುವೆವು
ರಾತ್ರಿ ಹನ್ನೆರಡರೊಳಗೆ||

(ಇದು ನಾನು ಬರೆದ ಮೊದಲ ಮಕ್ಕಳ ಪದ್ಯ)
14-4-2016. 10.56pm