ಮನದ ಮಾತು

ಸಂತೋಷವಾದಾಗ ಮಾತ್ರ
ಮನ ನಾ ಹೇಳಿದಂತೆ ಕುಣಿಯುತ್ತದೆ.

ರಂಗಸ್ಥಳದ ಅಗತ್ಯ ಇಲ್ಲವೇ ಇಲ್ಲ
ಪೂರ್ವ ತಯಾರಿ ಬೇಕಾಗೇ ಇಲ್ಲ
ಕಣ್ಣು ಹೊಳಪಾಗಿ
ಮನ ಹಗುರಾಗಿ
ಹೃದಯ ನವಿಲಂತೆ ಹಾರಾಡಿ
ಇಕ್ಕುವ ಹೆಜ್ಜೆ
ಒಂದಿನಿತೂ ತಾಳ ತಪ್ಪದೆ
ತಕಧಿಮಿ ತಕಧಿಮಿ ಕುಣಿವಾಗಾ
ಏನ್ ಕೇಳ್ತೀರಾ ಅದರ ಅಂದಾವಾ^^^^!

ಹೀಗೆಯೇ ಇರು
ಬೇಡಾ ಅಂದವರಾರು?

ಮನ ಎಷ್ಟು ಅಲವತ್ತುಕೊಂಡರೂ
ಆಗಾಗ ಕುಟುಕಿ ಬುದ್ಧಿ ಹೇಳಿದರೂ
ನಾನ್ಯಾಕೆ ಊರಿಗಿಲ್ಲದ ಉಸಾಪರಿ ಮೈಮೇಲೆ ಎಳಕೊಂಡು
ಮನದ ಮಾತಿಗೆ ಬೆಲೆನೇ ಕೊಡದೆ
ಅವಮಾನ ಮಾಡ್ತಿದ್ದೀನಲ್ಲಾ
ಅದರ ಸಂತೋಷ ಪದೇ ಪದೇ ಚಿವುಟ್ತೀನಲ್ಲಾ
ತಪ್ಪೆಂದೆನಿಸಿದರೂ ಮತ್ತದೆ ಪುನರಾವರ್ತನೆ!

ಆಗೆಲ್ಲ
ಸಹಿಸಲಾರದೆ ಸೆಟಗೊಂಡು ಅನ್ನುತ್ತೆ
ಹೋಗಿ ಹೋಗಿ ನಿನಗೆ ಬುದ್ಧಿ ಹೇಳ್ತೀನಲ್ಲಾ
ನಿನ್ನ ಕರ್ಮ
ಅನುಭವಿಸು!

29-8-2017. 2.26pm

Advertisements

ಒಂದು ಮೊಟ್ಟೆಯ ಕಥೆ.

ರೆಡಿಯೊ ಜಾಕಿಯಾಗಿದ್ದ ಶ್ರೀ ರಾಜೇಶ್ ಬಿ.ಶೆಟ್ಟಿಯವರು ಬರೆದು ನಿರ್ದೇಶಿಸಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ ಕನ್ನಡ ಚಿತ್ರ ಒಮ್ಮೆ ಎಲ್ಲರೂ ನೋಡಲೇ ಬೇಕಾದ ಚಿತ್ರ. ವಾಸ್ತವದ ಸತ್ಯವನ್ನು ಎಷ್ಟು ಸೊಗಸಾಗಿ ಕಥೆ ಹೆಣೆದು ಚಿತ್ರದುದ್ದಕ್ಕೂ ಆಗಾಗ ಬರುವ ಅಣ್ಣಾವರ ಹಾಡಿನೊಂದಿಗೆ ಹೊಟ್ಟೆ ತುಂಬ ನಗಿಸಿದ ಪರಿ ವಾವ್! ಸಂಭಾಷಣೆಯಲ್ಲಿ ಮದುವೆಯಾಗುವ ಹೆಣ್ಣು ಗಂಡುಗಳಿಗೆ ಒಂದೊಳ್ಳೆ ಸಂದೇಶ ತೋರಿಸಿಕೊಟ್ಟಿದ್ದಾರೆ. ಒಳ ಮನಸಿನ ತೊಳಲಾಟ ಒಂದು ಹಂತದಲ್ಲಿ ಹೇಗೆ ಅನಾವರಣವಾಗುತ್ತದೆ, ಮನಸ್ಸಿಗೆ ಸಂತೋಷ ನಿಜವಾಗಿ ಯಾವುದು ಎಂಬುದನ್ನು ಚಿತ್ರದ ಕೊನೆಯಲ್ಲಿ ಜನರ ಮುಂದಿಟ್ಟಿರುವ ವೈಖರಿ ಸೂಪರ್. ಚಿತ್ರ ಮುಗಿದಾಗ ಛೆ! ಇನ್ನೂ ಸ್ವಲ್ಪ ಹೊತ್ತು ಚಿತ್ರ ಇದ್ದಿದ್ದರೆ ಅನಿಸುವುದಂತೂ ಖಂಡಿತ. ಕನ್ನಡ ಚಿತ್ರ ರಸಿಕರಿಗೆ ಒಂದೊಳ್ಳೆ ಚಿತ್ರ ನೋಡುವ ಭಾಗ್ಯ ಕರುಣಿಸಿದ ನಿರ್ದೇಶಕರಿಗೆ ಧನ್ಯವಾದಗಳು😊

16-7-2017 9.10pm

ಏಕಾಂಗಿಯ ದಿನಗಳು

ಮನೆಯೆಲ್ಲ ನಿಶ್ಯಬ್ಧ ಮೌನ. ರಾತ್ರಿಯ ನಿರವತೆ ಮನಸಿಗೆ ಹಿತವಾಗಿ ಇತ್ತು ಮೊದಲ ದಿನ. ಯಾವ ಅಡೆತಡೆ ಇಲ್ಲ. ಒಬ್ಬಳೇ ಇಡೀ ಮನೆಯ ರಾಣಿ. ಹೆದರಿಕೆ? ಯಾಕೆ ಹೆದರುವ ಗೊಂದಲದ ಸಾಂಗತ್ಯ? ಹೇಗಿದ್ದರೂ ಸುತ್ತ ಕಬ್ಬಿಣದ ಕಾವಲುಗಾರರು. ಜೊತೆಗೆ ಬೀಗಣ್ಣನ ನಂಟು. ಸುಭದ್ರಗೊಳಿಸಿಕೊಂಡ ಮನೆಯೆಂಬ ಜಗುಲಿಯೂ ನನ್ನದೆ ಅಡಿಗೆ ಮನೆ ಎಲ್ಲ ಎಲ್ಲಾ ನನ್ನದೇ,ನಾನೊಬ್ಬಳೆ. ನನ್ನಿಷ್ಟದ ಭೋಜನಕೆ ಕೊಂಚ ತಗಾದೆ ತೆಗೆದ ದೇಹದ ನೆಂಟ, ಅದಕೆ ತಕ್ಕಂತೆ ಬೇಯಿಸಿಕೊಳ್ಳುವ ಹೊಣೆಗಾರಿಕೆ ಕೂಡಾ ನನ್ನದೆ. ಇರಲಿ, ಪರವಾಗಿಲ್ಲ. ಏನು ಮಾಡಲಿ ಬಿಡಲಿ ; ತಿನ್ನಲಿ ತಿನ್ನದಿರಲಿ ಕೇಳುವವರಾರು? ದೂರದಿಂದ ಬರುವ ಅಶರೀರವಾಣಿ ಏನಮ್ಮಾ ಹೇಗಿದ್ದೀಯಾ? ನಾನಿಲ್ಲಿ ಆರಾಂ, ಓಕೆ ಬೈ. ಕಾಳಜಿಯ ಕುಸುಮಾಂಗನೆಯ ಅಲ್ಲೊಂದು ಇಲ್ಲೊಂದು ಮಾತು ಆಗೋ ಈಗೋ! Net ಸಿಕ್ಕಾಗ. ಅದೂ ಒಂಥರಾ ಖುಷಿ ಮನಸಿಗೆ ಒಂಟಿಯಾಗಿದ್ದೂ ನಾ ಒಂಟಿಯಾಗಿಲ್ಲ ಜೊತೆಗೆ ದೂರದಲ್ಲಿದೆ ನನ್ನ ನೆನಪಿಸಿಕೊಳ್ಳುವ ಮನಸು.

ತದೇಕ ಚಿತ್ತದಿ ಮುಂದೆ ಕುಳಿತು ನೋಡುವ ನನ್ನ ಮುದ್ದು ಮರಿ,ಮೂಲೆ ಸೇರಿ ಮಲಗೀ ಮಲಗಿ ಸುಸ್ತಾಯಿತೇನೊ. ಕಾಲು ಕೆರೆದು ಮೂತಿ ನೀವಿ ಎಚ್ಚರಿಸಿ ಭೌ ಎಂದಾಗ ಹಾಗೆ ಅದೆಷ್ಟು ಹೊತ್ತು ಕೂತು ಓದುತ್ತಿದ್ದೇನೆ ಅನ್ನುವುದು ಅರಿವಾದಾಗ ಒಲೆಯ ಮೇಲೆ ಕಾಯಲು ಇಟ್ಟ ಹಾಲು ಕಾದೂ ಕಾದು ಲಟಕ್ ಪಟಕ್ ಶಬ್ಧ ಪಾತ್ರೆಯಿಂದ ಹೊರ ಬಂದಾಗ “ಓ….ಹಾಲಿಟ್ಟಿದ್ದೆ ಕಾಯಲು,ಛೆ! ಮರೆತೆ” ಒಂದೇ ನೆಗೆತಕ್ಕೆ ಕಾಲು ಅಡಿಗೆ ಮನೆಯಲ್ಲಿ ಕೈಯ್ಯಾರಿಸಿದ ಉರಿ ಹಾಲು ತಳ ಕಂಡಿತ್ತು ಇನ್ನೇನು ಸೀಯಲು. ಅಯ್ಯೋ! ನನ್ನ ಮರೆವಿಗಿಷ್ಟು. ಇನ್ಮೇಲೆ ಒಲೆ ಮೇಲೆ ಏನಾದರೂ ಇಟ್ಟು ಓದುವುದು ಬರೆಯುವುದು ಮಾಡಬಾರದು. ಹೀಗಂದುಕೊಂಡಿದ್ದಷ್ಟೆ. ಮತ್ತೆ ಅದೇ ಪುನರಾವರ್ತನೆ ಮಾರನೆ ದಿನ ನೀರು ಕುದಿಯಲು ಇಟ್ಟಾಗ. ಮರೆವು ಧಾಂಗುಡಿ ಇಡುವ ಕ್ಷಣ ನಾ ಓದು ಬರಹದಲ್ಲಿ ಮೈ ಮರೆತಾಗ, ಇದು ಇತ್ತೀಚಿನ ಸಾಮಾನ್ಯ ಅವಾಂತರ.

ಬಾಲಂಗೋಚಿ ಮತ್ತೆ ಭೌ ಭೌ ಅಂದಾಗ ಹಸಿವಾಯ್ತಾ ಪುಟ್ಟಾ ಇರು ಅನ್ನ ಹಾಕುತ್ತೇನೆ ಹಾಲಾಕಿ ಕಲಸಿ. ಕುಕ್ಕರ್ ಮುಚ್ಚಲ ತೆಗೆದರೆ ಖಾಲಿ. ಮಾಡಿದರೆ ತಾನೆ ಅನ್ನ ಇರೋದು! ಬಪ್ಪರೆ ಮರೆವೆ ಇಲ್ಲೂ ನಿನ್ನ ಬುದ್ಧಿ ತೋರಿಸಿದೆಯಲ್ಲಾ. ಅವನಿಗೊ ಬಲೂ ಖುಷಿ, ಒಂದಷ್ಟು ಅವನ ತಿಂಡಿ ಸಿಕ್ಕಿತಲ್ಲಾ,ಬರೀ ಅನ್ನ ತಿಂದು ಸಾಕಾಗಿದೆ ಅನ್ನುವಂತಿತ್ತು ಛಪ್ಪರಿಸಿ ಪೆಡಿಕ್ರಿ,ಸ್ಟಿಕ್,ಬಿಸ್ಕತ್ತು ತಿನ್ನುವಾಗಿನ ವರ್ತನೆ. ಲೊಚ ಲೊಚ ಹಾಲು ಹೀರಿ ಮಲಗಿದ ತನ್ನದೇ ಭಂಗಿಯಲ್ಲಿ ಆಯ್ತು ನನ್ನ ಕೆಲಸ ಎನ್ನುವಂತೆ.

ಮತ್ತದೆ ಮೌನ ಇಡೀ ಮನೆಯಲ್ಲಿ ನನ್ನ ಹೆಜ್ಜೆಯ ಸಪ್ಪಳ ನನಗೇ ಕೇಳಿಸುವಷ್ಟು. ಸಣ್ಣದಾಗಿ ಹೊಟ್ಟೆ ತನ್ನಿರುವನ್ನು ಜ್ಞಾಪಿಸಿತು. ಸರಿ ಗಂಟೆ ಒಂಬತ್ತಾಯಿತು. ಏನು ತಿನ್ನಲು ಇದೆ? ಮಾಡಿಕೊಳ್ಳಬೇಕಷ್ಟೆ. ಸೋಂಬೇರಿತನ ಈ ದಿನ ಮನೆ ಮಾಡಿತ್ತು. ಮಾಡುವಷ್ಟು ಹೊತ್ತು ಹಸಿದ ಹೊಟ್ಟೆ ಸುಮ್ಮನಿರದು. ತಡಕಾಡಿ ಒಂದಷ್ಟು ಹಲಸಿನ ಹಣ್ಣಿನ ತೊಳೆ, ವೋಟ್ಸ ಕಾಯಿಸಿ ತಿಂದು ಎರಡನೆಯ ರಾತ್ರಿಯ ಪ್ರವರ ಮುಕ್ತಾಯವಾಯಿತು.

ಯಾಕೊ ಮಲಗಿದರೆ ನಿನ್ನೆಯ ದಿನದಂತೆ ಸೋಂಪಾಗಿ ನಿದ್ದೆ ಬರುವಂತೆ ಅನಿಸುವುದಿಲ್ಲವಲ್ಲಾ,? ಏನು, ಯಾಕೀಗೆ? ಏನೊ ಗಜಿಬಿಜಿ ಅರ್ಥವಾಗುತ್ತಿಲ್ಲ. ಬಹುಶಃ ಏಕಾಂತದ ಬಿಸಿ ಕೊಂಚ ತಟ್ಟಿತೇನೊ ಮನಸ್ಸಿಗೆ ಯೋಚನೆಗಳ ದಂಡು ಸಾವಕಾಶವಾಗಿ ಒಂದೊಂದೇ ಧಾಳಿ ಇಡಲು ಪ್ರಾರಂಭಿಸಿದಂತಿದೆ. ದಿಂಬಿಗೆ ತಲೆ ಕೋಟ್ಟಂಥಹ ಗಳಿಗೆಯಲ್ಲೇ ತಾನೆ ನಿದ್ದೆ ಓಡಿಸೊ ಶತ್ರು ಇಂಬು ಮಾಡಿಕೊಂಡು ಕಾಲಿಕ್ಕೋದು. ಬೇಡ ಬೇಡಾ ಅಂದರೂ ನಾ ಬಂದೆ ನಾ ಬಂದೆ ಎಂದು ಶಿರಕ್ಕೆ ಕುಟುಕೋದು. ಹೊರಳಾಡುತ್ತ ಹೊರಳಾಡುತ್ತ ನಿದ್ದೆಗೆಟ್ಟು ಕೊನೆಗೆ ಅದೆಷ್ಟು ಹೊತ್ತಿಗೆ ಕಣ್ಣು ಮುಚ್ಚಿದೆನೊ ಏನೊ ಗೊತ್ತಿಲ್ಲ.

ಬೆಳಗ್ಗೆ ಎದ್ದಾಗ ಏಳೂ ಮೂವತ್ತೈದು ಗಂಟೆ ತೋರಿಸಿತು ನನ್ನ ಮೊಬೈಲ್ ರಾಣಿ. ಏಳುವ ಧಾವಂತವೇನೂ ಇಲ್ಲ ಮನಸಿಗೆ. ಆದರೂ ಏಳಲೇಬೇಕಲ್ಲ ಮೈಯ್ಯೆಲ್ಲ ಒಂಥರಾ ಜಿಡ್ಡು ಸರಿ ಹೊತ್ತಿಗೆ ನಿದ್ದೆ ಇಲ್ಲದ ಖರಾಮತ್ತಿನಿಂದಾಗಿ. ಕೆಲಸ ಇದ್ದರೂ ಮಾಡಲಾರದಷ್ಟು ಸೋಂಬೇರಿತನ, ನಿಷ್ಯಕ್ತಿ , ಉದಾಸೀನ. ಅಂತೂ ದಿನವೆಲ್ಲ ಸುಮ್ಮನೆ ಕಾಲಹರಣ ಈ ದಿನ ಅದೇನೇನು ಕೆಲಸ ಕಾರ್ಯ ಮಾಡಬೇಕು ಅಂದುಕೊಂಡಿದ್ದೆನೊ ಯಾವುದೂ ಮಾಡಲಾಗದೆ ನಿರುತ್ಸಾಹಿಯಾಗಿ ರಾತ್ರಿ ಬೇಗ ಹಾಸಿಗೆಗೆ ಜಾರಿಕೊಂಡೆ. ಮಮಲಗಿದ್ದೊಂದು ಗೊತ್ತು ಯಾವ ಕನಸಿಲ್ಲದೆ ಬೆಳಿಗ್ಗೆ ಕೋಗಿಲೆಯ ಗಾನ ಮನೆ ಮುಂದಿನ ಮರದಲ್ಲಿ ಆರು ಗಂಟೆಗೆ ಎದ್ದಾಗ ಕೇಳಿಸಿತು.

ನಿತ್ಯ ಕರ್ಮ ಮುಗಿಸಿ ನನ್ನ ಶ್ವಾನದ ಜೊತೆಗೆ ಒಂದು ಲಾಂಗ್ ವಾಯುವಿಹಾರ ನಮ್ಮ ಬಡಾವಣೆಯ ರಸ್ತೆಗಳಲ್ಲಿ ಅದು ಕಾಲೆತ್ತಿದಾಗ ಕೊಂಚ ನಿಲ್ಲುತ್ತ ಕೆಲವರ ಕೆಕ್ಕರುಗಣ್ಣಿನ ನೋಟ, ವಟವಟ ಬಯ್ಗಳ ಇವನಿಗದೆಲ್ಲ ಮಾಮೂಲು ನನಗೊ ಯಾಕಪ್ಪಾ ಈ ಪುಟಾಣಿ ಸಾಕಿಕೊಂಡೆ ಅಂತ ಹಲವು ಬಾರಿಯ ಅನಿಸಿಕೆ ಮನ ಚುಚ್ಚುತ್ತದೆ ಅವರ ಮಾತು. ಇದು ದಿನ ನಿತ್ಯದ ಪಾಠವಾಗಿ ಮನಸು ಮರಗಟ್ಟಿದೆ. ಆದರೆ ಇಲ್ಲೂ ಒಂದು ಬರಹ ಹುಟ್ಟಿಕೊಳ್ಳುವ ಸಾಧ್ಯತೆ ಅಘಾದವಾಗಿ ಇದೆ.

ಮಾವಿನ ಹಣ್ಣು, ಪಪ್ಪಾಯಾ ಹಣ್ಣು,ರಸ್ಕು, ಬಿಸ್ಕತ್ತು ಒಂದಷ್ಟು ಟೀ, ಕಾಫಿ ಆಗಾಗ ಸೇವನೆಯಲ್ಲಿ ಮನೆ ಕೆಲಸದ ಕಡೆ ಸಂಪೂರ್ಣ ಗಮನ ; ಕಾರಣ ಕುಟುಂಬದ ಸದಸ್ಯರ ಮರಣ ಹನ್ನೊಂದು ದಿನದ ಸೂತಕ ಭಾವನವರಿಂದ ಬೆಳಂಬೆಳಗ್ಗೆ ಬಂದ ದೂರವಾಣಿ ಸಂದೇಶ ಈ ದಿನ ಛಾಯೆ ಕಳೆವ ದಿನ. ಮನೆ ಮನವೆಲ್ಲ ಶುದ್ಧೀಕರಿಸಿ ದಿನ ನಿತ್ಯದ ದೇವರ ಪೂಜೆ ಪುನಃ ಪ್ರಾರಂಭಗೊಳ್ಳುವ ದಿನ.

ಅಬ್ಬಾ! ಹತ್ತು ದಿನ ಒಬ್ಬಳೇ ಹೀಗೆ ಯಾವ ಕೆಲಸ ಕಾರ್ಯ ಇಲ್ಲದೆ ಶುದ್ಧ ಸೋಂಬೇರಿಯಾಗಿ ಹೇಗೆ ಕಳೆದೆ? ಒಂದು ಕೆಲಸನೂ ಸುಸೂತ್ರವಾಗಿ ಮಾಡದೇ? ಎಷ್ಟೊಂದು ಸಮಯ ವ್ಯರ್ಥ ಆಯಿತಲ್ಲ ಅಂತ ಮನಸ್ಸಿಗೆ ಖೇದವಾದರೂ ಒಂಥರಾ ಖುಷಿ ಇತ್ತು. ನನ್ನ ಮನಸ್ಸಿಗೇ ಕದ್ದು ಮುಚ್ಚಿ ತಿನ್ನಬಾರದ ರುಚಿ ರುಚಿ ತಿಂಡಿ ಅದೇ ನಾ ತಿನ್ನಬಾರದ ಮಾವಿನ ಹಣ್ಣು, ಹಲಸಿನ ತೊಳೆ ತಿಂದ ಅವತಾರ ಮೆಲ್ಲನೆ ತನ್ನ ಪ್ರಭಾವ ತೋರಿಸುತ್ತಿದೆ. ಛೆ! ಏನಾಗಲ್ಲ ಬಿಡು ಅಂತಂದುಕೊಂಡು ಹುಚ್ಚು ಧೈರ್ಯದಲ್ಲಿ ಇಡೀ ದಿನ ಎಲ್ಲ ಕೆಲಸ ಅಚ್ಚುಕಟ್ಟಾಗಿ ಮಾಡಿ ಮುಗಿಸಿದೆ. ಅಲ್ಪ ಸ್ವಲ್ಪ ಇರೋದು ನಾಳೆ ಅಂತಂದುಕೊಂಡು ತೆಪ್ಪಗೆ ಪವಡಿಸಿದೆ ನೋಡಿ ಮಧ್ಯ ರಾತ್ರಿ 3.45am ಗೆ ತಗಲಾಕ್ಕೊಂಡೆ ವಾಕರಿಕೆಯ ಸಂಕೋಲೆಗೆ. ಬರವಲ್ಲದು ಬಿಡವಲ್ಲದು. ಯಪ್ಪಾ…..ಹೆಂಗೇಂಗೋ ಸಾವರಿಸಿಕೊಂಡು ಅದ್ಯಾವಾಗ ನಿದ್ದೆ ಬಂತೊ ಅದೂ ಗೊತ್ತಿಲ್ಲ.

ಎಚ್ಚರಾದಾಗ ಮಾಮೂಲಿ ಎಂಟು ಗಂಟೆಗೆ ಬರುವ ಹೂ ಮಾರಾಟಗಾರನ ಸ್ವರ ರಪ್ ಅಂತ ಕಿವಿಗೆ ಬಿತ್ತು. ” ಹೂವ್ವ್ಯಾ ಹೂವ್ವ್ಯಾ” ಅವನೇಳುವ ವೈಖರಿ ನಿಜಕ್ಕೂ ವಾಂತಿಯ ಸ್ವರದಂತಿರುತ್ತದೆ. ನನಗೋ ಪಕ್ಕನೆ ನೆನಪಾಯಿತು ರಾತ್ರಿ ಅವತಾರ. ಹಿಂದಿನ ದಿನದ ಕೆಲಸದ ಆಯಾಸಕ್ಕೊ,ನಿದ್ದೆಯ ಅವಾಂತರಕ್ಕೊ ಇಲ್ಲಾ ಒಳಗೊಳಗೆ ತಿಂದುಂಡು ತಪ್ಪು ಮಾಡಿದ ಭಯಕ್ಕೊ ಆರೋಗ್ಯದಲ್ಲಿ ಏನೊ ವ್ಯತ್ಯಾಸ ಆಗಿರೋದು ಖಚಿತವಾಗ್ತಾ ಇದೆ. ಹಾಂಗೂ ಹೀಂಗೂ ಬೆಳಗಿನ ಹತ್ತು ಗಂಟೆಯವರೆಗೆ ಕಳೆದೆ. ಇದಾಗೋದಿಲ್ಲ ಹೋಗೋದೆ ಮಾಮೂಲಿ ಡಾಕ್ಟರ್ ಹತ್ತಿರ, ಹೋದೆ ಅದೇ ನನ್ನ ಸ್ಕೂಟಿಯಲ್ಲಿ ಒಣಾ ಧೈರ್ಯ ಮಾಡಿ.

ಏನೇನು ತಿಂದು ಹೀಗಾಗ್ತಿದೆ ಅನ್ನೋದು ಮುಚ್ಚಿಟ್ಟು ಇರೊ ಪರಿಸ್ಥಿತಿ ಹೇಳಿದೆ. ಗಂಟಲು ಕಟ್ಟಿದಂತಾಗ್ತಿದೆ, urine problem, ವಾಕರಿಕೆ ಅದೂ ಇದೂ. ನನ್ನ ತೊಂದರೆ ಕೇಳಿ ಮಾಡ್ಸಮ್ಮಾ “Urine cultural test”ಆಯ್ತು ಸುರಿದೆ ಒಂದಷ್ಟು ದುಡ್ಡು, ಮತ್ತೆ tablet ನುಂಗಾಣಾ ಐದು ದಿನಕ್ಕೆ. ಬೇಕಿತ್ತಾ ಇದೆಲ್ಲಾ ನನಗೇ ನಾ ಚೆನ್ನಾಗಿ ಬಯ್ಕೊಂಡೆ. ರಿಪೋರ್ಟ ಬರಲು ಮೂರು ದಿನ ಆಗುತ್ತೆ. ಬನ್ನಿ ಕೊಡ್ತೀವಿ. ನನಗೊ ಆಗಿರೊ ಆರೋಗ್ಯದ ಏರುಪೇರು ಸರಿ ಹೋಗ್ತಾನೇ ಇಲ್ಲ.

ಮಾರನೆ ದಿನ ರಾತ್ರಿ ಮಗಳು ಮಾದೇವಿ ಟೂರ್ ಮುಗಿಸಿಕೊಂಡು ಮನೆಗೆ ಎಂಟ್ರಿ ಆದ್ಲು ನೋಡಿ ನಾನೂನು ನನ್ನ ಭೌ ಭೌ ಜಿಂಕೆ ತರ ಆಗ್ಬಿಟ್ವಿ. ಖುಷಿಯೋ ಖುಷಿ. ಊರು ಸುತ್ತಿದ ಸಮಾಚಾರ ಮೊಗೆದೂ ಮೊಗೆದೂ ಹೇಳುತ್ತ ಜೊತೆಗೊಂದಷ್ಟು ಕ್ಲಿಕ್ಕುಗಳ ವರ್ಣನೆ ಅದೂ ಇದೂ ಹೊತ್ತೊಗಿದ್ದೂ ಗೊತ್ತಾಗಿಲ್ಲ ಜೊತೆಗೆ ನನ್ನ ಆರೋಗ್ಯ ಅದೇಃಗೆ ಸರಿ ಹೋಯಿತೊ ಅದೂ ಗೊತ್ತಾಗಿಲ್ಲ. ಎಲ್ಲಾ ಮಂಗಮಾಯಾ! ತಿಂದುಂಡು ದಿಂಬಿಗೆ ತಲೆ ಕೊಟ್ಟಿದ್ದೊಂದೇ ಗೊತ್ತು😊

ಮಾರನೇ ದಿನ ರಿಪೋರ್ಟಲ್ಲಿ ಏನಿಲ್ಲಾ ಎಲ್ಲಾ nil. ಅಂದರೆ ನನಗೇನಾಗಿತ್ತು? ಅದೇ ಬಹಳ ಕೊಚ್ಚಿಕೊಂಡಿದ್ದೆ ಅಹಂಕಾರದಲ್ಲಿ ; ಎಷ್ಟೆಲ್ಲಾ ಬರಿತೀನಿ, ಓದ್ತೀನಿ, ಏನೆಲ್ಲಾ ಕೆಲಸ ಮಾಡ್ಕೊಳೋದಿದೆ ಅಂತೆಲ್ಲ ಹೇಳಿದ್ದು ನಾನಂದುಕೊಂಡಂತೆ ಮಾಡಲು ಆಗಲಿಲ್ಲ. ಕಾರಣ ಏನು ಗೊತ್ತಾ? ಒಂಟಿ ಬದುಕು ಬಹಳ ಕಷ್ಟ, ಬಹಳ ಬೇಜಾರು ಬರುತ್ತದೆ, ಈ ಬೇಜಾರಲ್ಲಿ ಆಹಾರ ನಿದ್ದೆ ದಿನ ನಿತ್ಯದ ಕೆಲಸ ಕಾರ್ಯ ಎಲ್ಲಾ ಏರುಪೇರಾಗಿ ಮನಸ್ಸು ನಮಗೆ ಗೊತ್ತಿಲ್ಲದಂತೆ ಜಡತ್ವ ಹೊಂದುತ್ತದೆ. ತುಂಬಾ ತುಂಬಾ ಬೇಜಾರು ಬಂದು ಮನಸ್ಸು ನಮ್ಮ ಹಿಡಿತದಲ್ಲಿ ಇರೋದಿಲ್ಲ. ಒಂಥರಾ ಕೆಟ್ಟ ಹಸಿವು,ಮತ್ತೊಂದು ದಿನ ಏನೂ ಬೇಡ, ಮಗದೊಂದು ದಿನ ಇನ್ನೇನೊ ಹೀಗೆ ಅತಂತ್ರ ಮನಸ್ಥಿತಿಗೆ ದಾಸರಾಗುವುದಂತೂ ನಿಜ.

ಮನುಷ್ಯನಿಗೆ ನಿಜಕ್ಕೂ ಖುಷಿಯಿಂದ ಬದುಕಲು ಹತ್ತಿರದವರ ಒಡನಾಟ ಬೇಕು. ಆ ಖುಷಿ ನಮ್ಮ ಆರೋಗ್ಯ ಕಾಪಾಡುತ್ತದೆ. ಉತ್ಸಾಹ, ಉಲ್ಲಾಸ ತುಂಬುತ್ತದೆ. ಒಬ್ಬರಿಗೊಬ್ಬರು ಇರಲೇ ಬೇಕು. ಒಂಟಿ ಬದುಕು ಸಲ್ಲದು. ಜೀವನ ನಿಂತಿರೋದೆ ಪ್ರೀತಿಯ ಮೇಲೆ. ಇದು ಈ ಕೆಲವೇ ದಿನಗಳಲ್ಲಿ ನಾನು ಕಂಡುಕೊಂಡ ಸತ್ಯ.

4-7-2017. 8.08pm

ಏರಿಳಿತ..

ಜೀವನವೆಂದರೆ ಹರಿಯುವ ನದಿ ಇದ್ದಂತೆ.  ಸಾಗುವಾಗ ಕಲ್ಲು ಮುಳ್ಳುಗಳು ಕಾಲಿಗೆ ತೊಡರಿ ತಮ್ಮ ಪ್ರಭಾವವನ್ನು ತೋರಿಸುತ್ತವೆ.  ನೋವು ನಮ್ಮ ಚಿತ್ತ ಅಲ್ಲಾಡಿಸುತ್ತವೆ.  ಆದರೆ ಅಧೈರ್ಯ ಪಡದೆ ಛಲದಿಂದ ಮುಂದೆ ಮುಂದೆ ಸಾಗಿದಲ್ಲಿ ಕಲ್ಲೂ ಕೂಡಾ ಹೂವಂತೆ ಕೋಮಲತೆ ತೋರಿ ನಡೆಯುವ ದಾರಿಯಿಂದ ಸರಿದು ಮುನ್ನಡೆಯಲು ಹಾರೈಸುತ್ತವೆ.  ಎಲ್ಲದಕ್ಕೂ ನಮ್ಮ ನಡೆ ಮುಖ್ಯ.  ಪ್ರತಿಯೊಂದು ವಸ್ತುವಿನಲ್ಲೂ ಜೀವ ಕಾಣುವಷ್ಟು ನಮ್ಮ ಮನಸ್ಸು ಪಕ್ವಗೊಳಿಸಿಕೊಳ್ಳಬೇಕು.  ಪ್ರೀತಿಯಿಂದ ಕಾಣುವ ನಡೆ ನಮ್ಮದಾಗಬೇಕು.  ಆಗ ಗೆಲುವಿನ ಹಾದಿ ಖಂಡಿತಾ ಗೋಚರಿಸುತ್ತದೆ.  

13-5-2017. 3.11p

ವಿಶ್ವ ಭೂ ದಿನಾಚರಣೆ

ಇಂದು ವಿಶ್ವ ಭೂ ದಿನಾಚರಣೆ. ಈ ವಿಶ್ವ ಭೂ ದಿನಾಚರಣೆಯನ್ನು 90ರ ದಶಕದಲ್ಲಿ ಕೇವಲ ಅಮೇರಿಕಾ ದೇಶದವರು ಮಾತ್ರ ಆಚರಿಸುತ್ತಿದ್ದರು. ಕ್ರಮೇಣ ಇನ್ನಿತರ ದೇಶಗಳು ಈ ನಿಟ್ಟಿನಲ್ಲಿ ತಮ್ಮ ತಮ್ಮ ಪ್ರದೇಶದಲ್ಲಿ ಪ್ರಚಾರ ಪಡಿಸುತ್ತ 1970ರಿಂದ 192 ರಾಷ್ಟ್ರಗಳು ವಿಶ್ವ ಭೂ ದಿನಾಚರಣೆಯನ್ನು ಏಪ್ರಿಲ್ 22 ರಂದು ಆಚರಿಸುತ್ತ ಬಂದಿವೆ. ಆದರೆ ಈ ಕಾಳಜಿ ಕೇವಲ.ಒಂದು ದಿನಕ್ಕೆ ಮುಗಿಯದೆ ಪ್ರತಿ ದಿನ ಪ್ರತಿಯೊಬ್ಬರಲ್ಲೂ ಪ್ರತಿ ಮನೆ ಮನೆಗಳಲ್ಲೂ ಜಾಗ್ರತವಾಗಿರಬೇಕು. ಅನೇಕ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ ಕೂಡ ಈ ದಿನ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಅನೇಕ ಕಾರ್ಯ ಕ್ರಮ ಹಮ್ಮಿಕೊಳ್ಳುತ್ತಿರುವುದು ‌ಸಂತೋಷದ ಸಂಗತಿ. ಮಕ್ಕಳಿಗೆ ಮನೆಯೆ ಮೊದಲ ಪಾಠ ಶಾಲೆ ಅನ್ನುವಂತೆ ಚಿಕ್ಕಂದಿನಿಂದಲೆ ಅವರಲ್ಲಿ ಭೂಮಿ ಅಂದರೆ ಏನು, ಅದನ್ನು ಸ್ವಶ್ಚವಾಗಿರಿಸಿಕೊಳ್ಳುವ ಬಗ್ಗೆ, ಪರಿಸರ ಕಾಳಜಿ, ಗಿಡ ಮರಗಳ ಬಗ್ಗೆ ಪ್ರೀತಿಯ ಭಾವನೆ ಬೆಳೆಸುವುದು ಹೆತ್ತವರ ಕರ್ತವ್ಯ ಕೂಡಾ.

“ಭೂಮಿ” ಈ ಶಬ್ದವನ್ನು ಒಂದತ್ತು ಸಾರಿ ಕಣ್ಣು ಮುಚ್ಚಿಕೊಂಡು ಮನಸ್ಸಿನಲ್ಲಿ ಹೇಳಿಕೊಳ್ಳಿ. ಏನನ್ನಿಸುತ್ತದೆ ನೋಡಿ. ನಮಗರಿವಿಲ್ಲದಂತೆ ಇಡೀ ಬ್ರಹ್ಮಾಂಡದ ಕಲ್ಪನೆ ಚಿತ್ರ ತನ್ನಷ್ಟಕ್ಕೆ ಹಾದು ಹೋದಂತೆ ಅನಿಸುತ್ತದೆ. ಯಾಕೆ ಹೀಗೆ ಎಂದು ಹಲವಾರು ಬಾರಿ ನನಗೇ ನಾನು ಪ್ರಶ್ನೆ ಮಾಡಿಕೊಂಡಿದ್ದಿದೆ. ಆದರೆ ಎಷ್ಟು ಯೋಚಿಸಿದರೂ ಉತ್ತರ ಸಿಗದೆ ಒದ್ದಾಡಿದ್ದಿದೆ. ಕಾರಣ ಈ ಮೊದಲು ನನಗೆ ಈ ಭೂಮಿಯ ಬಗ್ಗೆ ಅಷ್ಟೊಂದು ಕಾಳಜಿ ಇರಲಿಲ್ಲವೆ? ಪ್ರೀತಿ ಇರಲಿಲ್ಲವೆ? ಯಾಕೆ ನನಗೆ ಉತ್ತರ ಹೊಳೆಯುತ್ತಿಲ್ಲ? ಬರೀ ಚಿತ್ರ ಮಾತ್ರ ಕಾಣುತ್ತಿದೆಯಲ್ಲ? ಇದರ ಸ್ಪಷ್ಟತೆ ಏನು?

ನಿಜ ನನ್ನಲ್ಲಿರುವ ಈ ತಿಳುವಳಿಕೆಯ ಕೊರತೆ ಹೀಗಾಗಲು ಕಾರಣ. ಇದು ನನ್ನ ವಾದ. ಎದುರಾಳಿ ಏನೆ ಹೇಳಿದರೂ ಕೇಳುವಷ್ಟು ತಾಳ್ಮೆ ಈಗ ನನಗಿಲ್ಲ. ಕಾರಣ ನಾನು ಈ ಭೂಮಿ ಜೊತೆ ಈ ಪರಿಸರದ ಜೊತೆ ಅಷ್ಟು ಬೆರೆತು ಹೋಗಿದ್ದೇನೆ. ನನಗೆ ಯಾವಾಗಿಂದ ಈ ಭೂಮಿಯ ಬಗ್ಗೆ ಇಷ್ಟು ವಾತ್ಸಲ್ಯ ಬಂದಿತೊ ಗೊತ್ತಿಲ್ಲ. ಆದರೆ ನನಗರಿವಿಲ್ಲದಂತೆ ಪರಕಾಯ ಪ್ರವೇಶ ಮಾಡಿದ ಈ ಭೂಮಿಯ ನಂಟು ಗಿಡ ಮರಗಳ ಬಗ್ಗೆ ಪ್ರೀತಿ ಪ್ರತಿ ದಿನ ಒಂದಿಲ್ಲೊಂದು ರೀತಿಯಲ್ಲಿ ಸೇವೆ ಮಾಡುವ ತವಕ ಉಂಟು ಮಾಡಿದೆ.

ಅದೇನೊ ಹೇಳುತ್ತಾರಲ್ಲ ; ” ಬರಗಾಲದಲ್ಲಿ ಮಗ ಊಟ ಮಾಡೋದು ಕಲಿತಿದ್ದನಂತೆ” ” ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಕ್ಕೆ ಮಲ್ಲಿಗೆ ಕೇಳಿದಂತೆ” ಅಲ್ವೆ ಮತ್ತೆ ಈ ಸಿಟಿಯಲ್ಲಿ ನೀರಿಲ್ಲದ ಕಾಲದಲ್ಲಿ! ನಮ್ಮ ಹಿರಿಯರು ಸುಮ್ಮನೆ ಗಾದೆ ಮಾಡಿಟ್ಟಿದ್ದಾರಾ? ನನ್ನಂಥವರನ್ನು ನೋಡೆ ಮಾಡಿರಬೆಕು. ಆದರೆ ನನಗೆ ಹೇಳಿಕೊಳ್ಳಲು ಸ್ವಲ್ಪವೂ ಬೇಜಾರಿಲ್ಲ. ಏಕೆಂದರೆ ನನ್ನ ಕೈಲಾದಷ್ಟು ಈ ಭೂಮಿಯ ಸೇವೆ ಮಾಡುವ ಉತ್ಸಾಹ ನನ್ನದು. ದೇಹದಲ್ಲಿ ಶಕ್ತಿ ಇರುವವರೆಗೂ ಈ ತಾಯಿಯ ಸೇವೆ ಮಾಡಬೇಕು‌ ಹೇಗೆ? ಇದು ನನ್ನಷ್ಟಕ್ಕೆ ನಾನೇ ಕಂಡುಕೊಂಡ ದಾರಿ.

ಕಡಲ ತಡಿಯಲ್ಲಿ ಅಡಗಿದ ಸೂರ್ಯ ಜಗತ್ತನ್ನೆಲ್ಲ ಮಲಗಿಸಿ ಯಾರಂಕುಶವಿಟ್ಟರೊ ಕಾಣೆ ನಿಯತ್ತಾಗಿ ತನ್ನ ದಿಕ್ಕು ಕಿಂಚಿತ್ತೂ ಬದಲಾಯಿಸದೆ ತನ್ನ ದಿನ ನಿತ್ಯದ ಕಾಯಕ ಶುರು ಮಾಡುವ ಹೊತ್ತು. ನಾನೂ ಏಳುವುದು ಅದೇ ಹೊತ್ತು. ತಣ್ಣನೆಯ ಭುವಿಯ ಸ್ಪರ್ಶ ಮಾಡಿ ಕೈ ಮುಗಿದು ಮೇಲೆಳುವಾಗೆಲ್ಲ ದೇಹದಲ್ಲಿ ನವ ಚೈತನ್ಯ. ಈ ಚೈತನ್ಯ ಕೊಟ್ಟು ಈ ಭೂಮಿಯ ಮೇಲೆ ನನ್ನ ಈ ದಿನದ ಬೆಳಗು ನೋಡುವಂತೆ ಮಾಡಿದ ಆ ಭಗವಂತನಿಗೆ ಅಂದರೆ ಪ್ರತ್ಯಕ್ಷ ದೇವರೇ ಈ ಉದಯದ ಸೂರ್ಯ, ಅವನ ಶ್ಲೋಕ “ಆದಿದೇವ ನಮಸ್ತುಭ್ಯಂ| ಪ್ರಸೀದ ಮಮ ಭಾಸ್ಕರ…….” ನಾಮ ಸ್ಮರಣೆ ಮಾಡಿ ಮುಂದಿನ ಕೆಲಸಕ್ಕೆ ಅಣಿ.

ತಂಗಾಳಿಗೆ ತರಗೆಲೆಗಳ ಚೆಲ್ಲಾ ಪಿಲ್ಲಿ ಮನೆ ಮುಂದಿನ ಅಂಗಳದ ತುಂಬಾ. ನನಗೊ ಇದೊಂದು ರೀತಿ ಖುಷಿ. ಏಕೆ ಗೊತ್ತಾ, ಪೊರಕೆ ಹಿಡಿದು ಗುಡಿಸುವಾಗೆಲ್ಲ ಅದೊಂದು ರೀತಿ ಶಬ್ದ ನನ್ನೂರಿಗೆ ಎಳೆದೊಯ್ಯುತ್ತದೆ ಮನಸ್ಸನ್ನು. ಊರು ಅಂದರೆ ನಮ್ಮಳ್ಳಿ ಮಲೆನಾಡು. ಅಲ್ಲಿ ಅಡಿಕೆ ತೋಟದ ಸುತ್ತ ಗಿಡ ಮರಗಳಿರುವ ಬೆಟ್ಟ. ಬೇಸಿಗೆ ಮುಗಿಯುತ್ತ ಬಂದಂತೆ ಕೆಲಸದ ಹೆಣ್ಣಾಳುಗಳು ಗಿಡದ ಟೊಂಗೆಯಿಂದ ಮಾಡಿದ ವಿಶಿಷ್ಟ ಪೊರಕೆಯಲ್ಲಿ ಬೆಟ್ಟವನ್ನೆಲ್ಲ ಗುಡಿಸುತ್ತಿದ್ದರು. ಈ ಗುಡಿಸುವಿಕೆ ಚಿಕ್ಕವಳಿದ್ದಾಗ ತೋಟದಲ್ಲಿ ಅಪ್ಪನ ಜೊತೆ ಕುಳಿತು ಆಲಿಸುತ್ತಿದ್ದೆ. ಅಲ್ಲಿಂದ ಒಂದು ರೀತಿ ಸರಪರ ಶಬ್ಧ ನನ್ನ ಕಿವಿಯಲ್ಲಿನ್ನು ಇದೆ. ಈ ನಂಟು ನನಗೆ ಖುಷಿ ತರಿಸುತ್ತದೆ ಪ್ರತಿ ದಿನ. ಇರುವ ಜಾಗದಲ್ಲೆ ಒಂದಷ್ಟು ಗಿಡಗಳ ನಿರ್ವಹಣೆ ಮನೆ ಮುಂದಿನ ಪುಟ್ಪಾತು ಆವರಿಸಿದೆ.

ಬಿಬಿಎಂಪಿಯವರು ರಸ್ತೆ ಸರಿ ಮಾಡುವಾಗ ಎಲ್ಲಿ ಎಲ್ಲವನ್ನೂ ಕಿತ್ತಾಕುತ್ತಾರಾ? ಅಕ್ಕ ಪಕ್ಕದ ಕೆಲವರ ಕೆಂಗಣ್ಣು, ಅಸಹನೆ ಇವೆಲ್ಲ ನಾಶವಾದರೆ ಅಂತ ಒಳಗೊಳಗೆ ಆತಂಕ. ” ಸರ್ ತೊಂದರೆಯಾದರೆ ಎಲ್ಲ ಕಿತ್ತಾಕಿ” ಅಂತ ತುದಿ ಬಾಯಲ್ಲಿ ನಾನೆ ಹೇಳಿದರೂ “ಛೆ! ಮೇಡಮ್ಮವರೆ ಎಷ್ಟು ಮುತವರ್ಜಿಯಿಂದ ಬೆಳೆಸಿದ್ದೀರಾ, ಇದೇನು ಮೇನ್ ರೋಡ್ ಅಲ್ಲ, ಇರಲಿ ಬಿಡಿ, ತಂಪಾಗಿರುತ್ತದೆ” ಎಂದನ್ನಬೇಕಾ! ನನಗೊ ಆಶ್ಚರ್ಯ ಸಂತೋಷ ಒಟ್ಟಿಗೆ. ಅವರೂ ಕೂಡಾ ಗಿಡಮರಗಳ ಪ್ರೇಮಿಗಳಾಗಿರುವುದು ಈಗ ಹದಿನೇಳು ವರ್ಷಗಳಿಂದ ತಂಗಾಳಿ ಬೀಸುತ್ತಿವೆ ನಾ ಬೆಳೆದ ಗಿಡಗಳು. ರೆಂಬೆ ಕೊಯ್ಯಲು ಬಂದ ಕೆಇಬಿಯವರು ಇದು ಯಾವ ಮರವೆಂದು ಗೊತ್ತಿಲ್ಲದೆ ಹೆಚ್ಚಿನ ರೆಂಬೆ ಕಟ್ ಮಾಡಿ ಆಮೇಲೆ ನನ್ನ ನೋಡಿ “ಮೇಡಮ್ಮವರೆ ಇದು ಎಂಥಾ ಮರ,ಮನೆ ಗೋಡೆ ಪಕ್ಕನೆ ಕಂಪೌಂಡೊಳಗೆ ಬೆಳೆಸಿದ್ದೀರಲ್ಲಾ?” “ಇದು ಬಟರ್ ಫ್ರೂಟ್(ಬೆಣ್ಣೆ ಹಣ್ಣು) ಗಿಡ ಅಂದಾಗ “ಅಯ್ಯೋ ಎಷ್ಟೆಲ್ಲಾ ರೆಂಬೆ ಕಡಿದು ಬಿಟ್ವಿ ಪಕ್ಕದವರು ಕಂಪ್ಲೇಂಟು ಮಾಡಿದರು ಅಂತಾ . ಛೆ! ” ಎಂದು ಪರಿತಪಿಸಿದಾಗ “ಯೋಚಿಸಬೇಡಿ, ಚಿಗುರುತ್ತದೆ ಮತ್ತೆ” ಅಂದ ದಿನದಿಂದ ಇವತ್ತಿನವರೆಗೂ ಈ ಮರ ಅವರ ಪ್ರೀತಿಗೂ ಪಾತ್ರವಾಗಿದೆ. ಇದ್ಯಾವ ಗೊಡವೆ ಬೇಡವೆಂದೊ ಏನೊ ಈ ಮರ ತಂತಿ ಬಿಟ್ಟು ಮೇಲೆ ಮೇಲೆ ಬೆಳೆಯುತ್ತಿದೆ. ವರ್ಷಕ್ಕೆ ತಿಂದು ಮಾರುವಷ್ಟು ಹಣ್ಣು ಕೊಟ್ಟು ಋಣ ತೀರಿಸುತ್ತಿದೆ.

ಇನ್ನು ಇಷ್ಟೆಲ್ಲಾ ಗಿಡಗಳ ನಿರ್ವಹಣೆಗೆ ನೀರು ಗೊಬ್ಬರ ಒದಗಿಸುವ ಪಾಳಿ ಮುಂಜಾನೆಯ ಎದ್ದ ಗಳಿಗೆಯಲ್ಲಿ. ಬೀಡಾಡಿ ಹಸುಗಳು ಮನೆ ಮುಂದಿನ ಹಾದಿಯಲ್ಲಿ ಬಂದಾಗ ಸಿಗುವ ಸಗಣಿ ಉತ್ತಮ ಆಹಾರ ಹೂ ಬಿಡುವ ಗಿಡಗಳಿಗೆ. ಬಕೆಟ್ ನೀರಲ್ಲಿ ಕರಡಿ ಅದಕ್ಕೊಂದಿಷ್ಟು ಮನೆಯ ತ್ಯಾಜ್ಯವಾದ ತರಕಾರಿ ಸಿಪ್ಪೆ, ತೊಳೆದ ಅಕ್ಕಿ ನೀರು,ಮಾಡಿದ ಚಹಾ ಕಾಫಿ ಗಸಟು, ಉಳಿದ ಅಡಿಗೆ ಪದಾರ್ಥ ಇತ್ಯಾದಿ ಒಂದು ವಾರ ಕೊಳೆಯಲು ಬಿಟ್ಟು ಎಲ್ಲವನ್ನೂ ಸೇರಿಸಿ ಪ್ರತಿ ಗಿಡಕ್ಕೆ ಹಾಕುವುದು ವಾರಕ್ಕೊಮ್ಮೆ. ಈ ಗೊಬ್ಬರದಲ್ಲೆ ದಾಳಿಂಬೆ ಗಿಡದಲ್ಲಿ ನಳನಳಿಸಿದ ಹಣ್ಣುಗಳು ನನ್ನ ಕಲ್ಪನೆಗೂ ಮೀರಿದ್ದು.

ಮಿಕ್ಕಿದ ದಿನಗಳಲ್ಲಿ ತರಕಾರಿ ತೊಳೆದ ನೀರು, ವಾಷಿಂಗ್ ಮೆಷಿನ್ ನೀರು, ನೆಲ ಒರೆಸಿದ ನೀರು ಇತ್ಯಾದಿ ತೊಳೆದ ನೀರೆಲ್ಲ ಗಿಡಗಳಿಗೆ ಹಾಕುವ ನೆವದಲ್ಲಿ ಭೂಮಿ ಸೇರಿ ಭೂಮಿಯನ್ನು ತಂಪು ಮಾಡುವ ಕಸರತ್ತು ನನ್ನದು. ಸ್ವಲ್ಪ ಸಮಯ ವ್ಯರ್ಥ ಮಾಡಬೇಕು ಎಲ್ಲವನ್ನೂ ಸಂಗ್ರಹಿಸಿಡಲು. ಆದರೂ ಚಿಂತೆಯಿಲ್ಲ. ದೇಹಕ್ಕೆ ಒಳ್ಳೆಯ ವ್ಯಾಯಾಮ ಇದರಿಂದ ಸಿಗುತ್ತಿದೆ. ಚಿಮುಕಿಸಿದ ನೀರು ಮನೆಮುಂದೆ ರಂಗೋಲಿ ಇಕ್ಕಿ ಪೂಜೆಗೆ ಹೂ ಕೊಯ್ದು ಒಳ ಬರುವಾಗ ಮತ್ತೆ ಒಮ್ಮೆ ನಿಂತು ನೋಡುತ್ತೇನೆ. ಮನಸ್ಸಿಗೆ ಹಾಯ್ ಎನಿಸುತ್ತದೆ ನೀರ ಕುಡಿದ ಭೂತಾಯ ಮಡಿಲಲ್ಲಿ ಓಲಾಡುವ ಗಿಡಗಳ ಕಂಡು. ಇದೇ ಭಾವ ಉಕ್ಕಿ ಉತ್ಸಾಹದಲ್ಲಿ ಬೆಳಗಿನಲ್ಲೆ ಹೆಚ್ಚಿನ ಬರಹಗಳು ಹೊರ ಹೊಮ್ಮುವುದು. ಅವುಗಳಲ್ಲಿ ಈ ಕವನವೂ ಒಂದು.

ಬಿಳಿ ಮುತ್ತಿನ ಸಾಲಲ್ಲಿ
ಅಡಗಿ ಕುಳಿತ ನನ್ನ ಮನೆ
ಮುಂದಿನ ರಂಗೋಲಿ ನೀನು.

ಮುಂಜಾನೆಯ ಚಳಿಯಲ್ಲಿ
ತೊಟ್ಟಿಕ್ಕುವ ಮುದ್ದಾದ
ಇಬ್ಬನಿಯ ಹನಿ ನೀನು.

ಹೂ ಗಿಡಗಳ ಮರೆಯಲ್ಲಿ
ಇಣುಕಿ ಹಾಕುವ
ಮರಿ ಗುಬ್ಬಚ್ಚಿ ನೀನು.

ಸ್ವಾತಿ ಮಳೆ ಚಳಿಯಲ್ಲಿ
ಬೆಚ್ಚನೆಯ ಕಾವು ಕೊಡುವ
ನನ್ನ ಕಂಬಳಿ ನೀನು.

ಹೊತ್ತಿಲ್ಲದ ಹೊತ್ತಲ್ಲಿ
ಬೆನ್ನತ್ತಿ ಬರುವ
ನನ್ನೊಳಗಿನ ಮನಸ್ಸು ನೀನು.

ದಿನವೆಲ್ಲ ತಲೆ ಕೊರೆದು
ವಿಷಯಾಸಕ್ತಿಗೆ ತಳ್ಳುವ
ಅಪರೂಪದ ಗೆಳತಿ ನೀನು.

ಹಗಲಲ್ಲು ಇರುಳಲ್ಲು
ನನ್ನೊಂದಿಗೆ ಹೆಜ್ಜೆ ಹಾಕುತ್ತಿರುವ
ನನ್ನೊಳಗಿನ ಕವನವಲ್ಲವೆ ನೀನು?

ಈ ಬುಗಿಲೇಳುವ ಬರಹಗಳ ಸಂಗಾತಿ ಈ ಪರಿಸರ. ಎಲ್ಲವನ್ನೂ ಹೊತ್ತು ನಿಂತ ಈ ಭೂತಾಯಿ ಮಡಿಲಿಗೆ ಬದುಕಿರುವ ನಾವು ಏನು ಕೊಟ್ಟೇವು? ಸದಾ ಗಲೀಜು ಮಾಡುತ್ತ ಪರಿಸರವನ್ನೆ ಹಾಳು ಮಾಡುತ್ತಿರುವ ಎಲ್ಲೆಂದರಲ್ಲಿ ಕಸ ಬಿಸಾಕುವ ಅನೇಕ ಜನರನ್ನು ಕಂಡಾಗ “ಯಾಕೆ ಕಸ ತಂದು ಹೀಗೆ ಬಿಸಾಕುತ್ತೀರಾ? ಹಾಕಬೇಡಿ ದಯವಿಟ್ಟು” ” ನಿಮಗ್ಯಾಕ್ರಿ, ನಾನೇನು ನಿಮ್ಮನೆ ಮುಂದೆ ಹಾಕಿದ್ನಾ” ಅವರ ಹತ್ತಿರ ಬಾಯಿಗೆ ಬಂದಾಗೆ ಉಗಿಸಿಕೊಂಡು ಮನಸ್ಸು ಕೆಡಿಸಿಕೊಂಡ ಸಂದರ್ಭ ಹಲವಾರಿದೆ.

ಕಾರಣ ಈ ಶ್ವಾನವನ್ನು ಸಾಕಿಕೊಂಡು ಬೆಳಗ್ಗೆನೆ ಮೆರವಣಿಗೆ ಹೊರಡಲೇ ಬೇಕು ಇವರುಗಳು ಕಸ ಬಿಸಾಕೋದು ಅದೇ ವೇಳೆ, ಕಣ್ಣಿಗೆ ಕಂಡ ಮೇಲೆ ಹೇಳದೆ ಇರೋಕಾಗದೆ ಒದ್ದಾಡೋದು. ಬೇಕಿತ್ತಾ ನಿನಗೆ ಈ ಉಸಾಪರಿ ಅಂತ ಒಳ ಮನಸ್ಸು ಉಗಿದರೂ ಹೇಳೋದು ಬಿಟ್ಟಿಲ್ಲ. ಸಧ್ಯಕ್ಕೆ ನನ್ನ ಕಂಡರೆ ಮಾಮೂಲಿ ಗಿರಾಕಿಗಳು ಸ್ವಲ್ಪ ಮುಂದೆ ಅಂತೂ ಹೋಗುತ್ತಿದ್ದಾರೆ ಕೈಯ್ಯಲ್ಲಿರೊ ಕಸದ ಚೀಲದೊಂದಿಗೆ. ಮನಸ್ಸಲ್ಲಿ ಅದೆಷ್ಟು ಬೈಕೋತಾರೊ ಕಾಣೆ. ಇರಲಿ, ಇದು ನನ್ನ ಅಳಿಲು ಸೇವೆ ಎಂದು ನಕ್ಕು ಬಿಡುತ್ತೇನೆ.

ಇನ್ನೊಂದು ರೀತಿಯ ಕಾಳಜಿ ಈಗೆರಡು ವರ್ಷದಲ್ಲಿ ಹುಟ್ಟಿಕೊಂಡಿದ್ದು. ಅದೆ ಬೀಜಗಳನ್ನು ಸಂಗ್ರಹಿಸಿಡೋದು. ದಿನ ನಿತ್ಯ ಉಪಯೋಗಿಸುವ ಯಾವುದೆ ಹಣ್ಣು, ತರಕಾರಿ, ಹೂಗಳ ಬೀಜಗಳನ್ನು ಮುತುವರ್ಜಿಯಿಂದ ತೊಳೆದು ನೆರಳಲ್ಲಿ ಒಣಗಿಸಿ ಬೇರೆ ಬೇರೆ ಪೇಪರ್ ಕವರಿನಲ್ಲಿ ಕೂಡಿಟ್ಟು ಊರಿಗೆ ಹೋದಾಗ ಅಲ್ಲಿ ಅಣ್ಣನಿಗೆ ಕೊಟ್ಟು ಇಂಥಿಂತಾ ಬೀಜ ನೋಡು ಎಂದಾಗ ಆಶ್ಚರ್ಯದಿಂದ ಕಣ್ಣರಳಿಸಿ “ಇದೇನೆ ಇದು ಬೆಂಗಳೂರಲ್ಲಿ ಇದ್ದು ಇಷ್ಟೊಂದು ಬೀಜ ಸಂಗ್ರಹ ಮಾಡಿದ್ಯಲ್ಲೆ” ಅಂದಾಗ ಖುಷಿಯಿಂದ ಬೀಗುತ್ತೇನೆ. ಅಷ್ಟೆ ಆಸಕ್ತಿಯಿಂದ ಅವುಗಳನ್ನು ಎಲ್ಲೆಲ್ಲಿ ಹಾಕಬೇಕೆನ್ನುವ ಮುತುವರ್ಜಿ ವಹಿಸುವುದು ಅವರ ಕೆಲಸ.

ಇತ್ತೀಚೆಗೆ ದಕ್ಷಿಣ ಕನ್ನಡದ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಪರಿಸರ ಬೆಳೆಸುವ ಕಾರ್ಯಕ್ರಮ ಟೀವಿಯಲ್ಲಿ ನೋಡಿ ನನ್ನಲ್ಲಿ ಇನ್ನೂ ಹೆಚ್ಚಿನ ಬೀಜ ಸಂಗ್ರಹಿಸಿ ಬೆಳೆಯುವ ಭೂಮಿಗೆ ಹಾಕುವ ಆಸಕ್ತಿ ಹೆಚ್ಚಾಗಿದೆ‌.  ಅದರಲ್ಲೂ ನಾವು ತಿನ್ನುವ ನೇರಳೆ , ಹಲಸು,ಮಾವು ಇವುಗಳು ದೊಡ್ಡ ಮರವಾಗಿ ಬೆಳೆಯುವುದರಿಂದ ಯಾವುದಾದರೂ ಊರಿಗೆ ಹೋಗುವಾಗ ಕೊಂಡೊಯ್ದು ದಾರಿಯಲ್ಲಿ ಸಿಗುವ ವನಗಳಲ್ಲಿ ಎಸೆದರೆ ಮಳೆ ಬಂದಾಗ ಮೊಳಕೆಯೊಡೆದು ಮೇಲೆ ಬರಬಹುದೆನ್ನುವ ದೂರದ ನಂಬಿಕೆ. 

ಇಂತಹ ಅನೇಕ ರೀತಿಯ ಪ್ರಯತ್ನ ಪರಿಸರ ಸಂರಕ್ಷಣೆ ಭೂಮಿಯನ್ನು ತಂಪಾಗಿಸುವತ್ತ ಎಲ್ಲರೂ ಕಾಳಜಿ ವಹಿಸಿದರೆ ಏರುತ್ತಿರುವ ತಾಪ ಮಾನ ಸ್ವಲ್ಪವಾದರೂ ಕಡಿಮೆ ಮಾಡಬಹುದೆ? ಆದರೆ ಎಲ್ಲರೂ ಈ ಕುರಿತು ಮನಸ್ಸು ಮಾಡಬೇಕು ಅಷ್ಟೆ.
ಹಿಂದೆ ನಮ್ಮ ಹಳ್ಳಿಯಲ್ಲಿ ಊರವರು ಅಕ್ಕಪಕ್ಕದ ಹಳ್ಳಿಯವರೆಲ್ಲ ಸೇರಿ ವನ ಮಹೋತ್ಸವ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೆವು. ಹತ್ತಿರದಲ್ಲೆ ಇರುವ ಹೊಳೆಯ ಪಕ್ಕದಲ್ಲಿ ಈ ಆಚರಣೆ. ಇದನ್ನು ಹೊಳೆ ಊಟ ಅಂತಲೂ ಕರೆಯುತ್ತಿದ್ದೆವು. ಕಾರಣ ಈ ದಿನ ಹಿರಿಯ ಕಿರಿಯರೆನ್ನದೆ ಹೆಂಗಸರು ಗಂಡಸರು ಅನ್ನುವ ಭೇದ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಮಾಡುವ ಅಡಿಗೆಯ ಕೆಲಸ ಅದೂ ಹೊಳೆಯಂಚಿನಲ್ಲಿ. ಪಾತ್ರೆ, ಅಡಿಗೆ ಸಾಮಾನು ಇನ್ನಿತರ ಪರಿಕರಗಳೊಂದಿಗೆ ಬೆಳಗ್ಗೆ ಬೇಗನೆ ಎಲ್ಲರೂ ಹೊಳೆಗೆ ಹೋಗಿ ಅಲ್ಲೆ ಎಲ್ಲರ ಸ್ನಾನ. ಈಜುವವರ ಕೇಕೇ ಮೋಜಿನ ಕ್ಷಣ ಸಖತ್ ಗಲಾಟೆ. ನಂತರ ಒಂದಷ್ಟು ಜನರೆಲ್ಲ ಸೇರಿ ಅಡಿಗೆ ತಯಾರಿ ನಡೆಸುತ್ತಿದ್ದರೆ ಈ ಕಡೆ ಉರುವಲಿಗೆ ಅಕ್ಕ ಪಕ್ಕ ಸಿಗುವ ಒಣ ಕಟ್ಟಿಗೆ ಎರಡು ದೊಡ್ಡ ಕಲ್ಲು ಇಟ್ಟು ಒಲೆಯ ಆಕಾರ ನೀಡಿ ಉರಿ ಹೊತ್ತಿಸುವುದು ಇನ್ನೊಂದು ತಂಡ. ಸ್ವಲ್ಪ ವಯಸ್ಸಾದವರು ತಮ್ಮ ಹಳೆಯ ಅನುಭವದ ಹೊಳೆ ಊಟದ ವರ್ಣನೆ. ಹೀಗೆ ಅಂತೂ ಸಿಹಿ ಪಾಯಸದ ಅಡುಗೆಯೊಂದಿಗೆ ಊಟ ಮುಗಿದ ಮೇಲೆ ಮನರಂಜನೆ ಕಾರ್ಯಕ್ರಮ. ಏಕ ಪಾತ್ರಾಭಿನಯ, ಯಕ್ಷಗಾನದ ಹಾಡು, ಹಾಸ್ಯ ಚಟಾಕಿ ಇತ್ಯಾದಿಗಳ ಸಂಭ್ರಮದಲ್ಲಿ ಹೊತ್ತು ಮುಳುಗುತ್ತಿರುವ ಸೂರ್ಯ ಮರೆಯಾಗುವ ಸೂಚನೆ ಕಂಡಾಗ ಎಲ್ಲರೂ ಮನೆಯತ್ತ ಪಯಣ ದಾರಿಯುದ್ದಕ್ಕೂ ಮಾತು ಮಾತು ಮಾತು. ಎಂತಹ ಚಂದದ ದಿನ. ಅಂದರೆ ಇಲ್ಲಿ ವರ್ಷವೆಲ್ಲ ತೋಟ ಬೆಟ್ಟ ಅಂತ ದುಡಿದ ಜೀವಗಳ ಒಂದು ದಿನದ ಸಂತೋಷದ ಕ್ಷಣ ಎಲ್ಲರೂ ಒಟ್ಟಿಗೆ ಸವಿಯುವುದು. ಮೈ ಮನವೆಲ್ಲ ಹಗುರ. ಇಂದಿಗೂ ಹಲವು ಹಳ್ಳಿಗಳಲ್ಲಿ ರೂಢಿಯಿದೆ.

ಇವೆಲ್ಲ ಅನುಭವ, ಸ್ವ ಪ್ರಯತ್ನದ ಕಸರತ್ತು ಹೇಳಿದ ಉದ್ದೇಶ ಇಷ್ಟೆ. ಈ ದಿನವನ್ನು ಎಲ್ಲರೂ ಅರ್ಥ ಪೂರ್ಣವಾಗಿ ಆಚರಿಸುವಂತಾಗಲಿ. ಎಲ್ಲರ ಚಿತ್ತ ಪರಿಸರದ ಕಾಳಜಿಯತ್ತ ಸದಾ ಇರಲಿ. ಸರಕಾರದ ಸ್ವಶ್ಚತಾ ಕಾರ್ಯಕ್ರಮಕ್ಕೆ ನಾವೂ ಕೈ ಜೋಡಿಸೋಣ. ಭೂ ತಾಯಿಯ ಒಡಲು ಧಗ ಧಗ ಉರಿಯುತ್ತಲಿದೆ. ದಿನ ದಿನ ಭೂಮಿಯ ಶಾಖ ಹೆಚ್ಚುತ್ತಿದೆ. ಒಂದಿನಿತೂ ನೀರು ಪೋಲು ಮಾಡದೆ ಆದಷ್ಟು ಗಿಡ ಮರ ಬೆಳೆಸಿ ಪರಿಸರ ಉಳಿಸೋಣ. ಭೂಮಿ ತಂಪಾಗಿರುವಂತೆ ನೋಡಿಕೊಳ್ಳೋಣ. ಇದೆ ನನ್ನ ಆಶಯ, ಕನಸು.

20-4-2017. 1.19am

ನನಗೆ ಸಿಕ್ಕ ಉಡುಗೊರೆ

Who r u?

ಬೈಬೇಡಿ ಮೇಡಂ, ನಾನು ಜಿ ಎನ್ ಮೋಹನ್

ಸರ್ ನೀವೂ
ಎಷ್ಟು ಸಂತೋಷ ಆಗ್ತಿದೆ ಸರ್
I am soooooooooo happy sir
I can’t believe😱😁

ಈ ದಿನ ನನಗೆ ಅವಿಸ್ಮರಣೀಯ ದಿನ. ಅಚಾನಕ್ಕಾಗಿ ಬಂದ ಮಹಿಳಾ ದಿನಾಚರಣೆ ಶುಭಾಶಯ. ನಿಜಕ್ಕೂ ನನಗೆ ಅವಧಿಯಲ್ಲಿ ಯಾರೊಬ್ಬರ ಪರಿಚಯ ಇಲ್ಲ. ಯಾರು ಎಂದು ಊಹಿಸಲೂ ಸಾಧ್ಯ ಆಗಲಿಲ್ಲ ; ಕಾರಣ WhatsAppನಲ್ಲಿ ಬಂದ ಶುಭಾಶಯವಿದು.

ಸ್ವಲ್ಪ ಹೊತ್ತಿಗೆ ಬಂದ ಅವರ phone call ಅವರೊಂದಿಗೆ ನಡೆದ ಸಂಭಾಷಣೆ ಇಂದಿಗೂ ಸಂತೋಷ ಅರಗಿಸಿಕೊಳ್ಳಲು ಆಗುತ್ತಿಲ್ಲ. ಎಲೆ ಮರೆಯ ಕಾಯಂತಿದ್ದ ನನ್ನ ಹಲವಾರು ಬರಹಗಳನ್ನು ಅವಧಿಯಲ್ಲಿ ಪ್ರಕಟಿಸಿ ನನ್ನ ಬರಹಕ್ಕೆ ಪ್ರೋತ್ಸಾಹ ನೀಡಿ “ನಾನೂ ಬರೆಯ ಬಲ್ಲೆ, ನನ್ನ ಬರಹಕ್ಕೆ ಬೆಲೆ ಇದೆ, ಇನ್ನೂ ಹೆಚ್ಚು ಹೆಚ್ಚು ಬರೆಯಬೇಕು” ಅನ್ನುವ ಧೈರ್ಯ ತುಂಬಿದ ಮಹನೀಯರು.

“ಸರ್, ನನಗೆ ಕವನ ಮಾರ್ಮಿಕವಾಗಿ ಚೆನ್ನಾಗಿ ಬರೆಯಲು ಬರೋದಿಲ್ಲ ಅಂದರೆ ” “ಇಲ್ಲ ಕವನ ತುಂಬಾ ಚೆನ್ನಾಗಿ ಬರಿತೀರಾ,ನೀವು ಬರೆದಿದ್ದು ನಿಮಗಿಷ್ಟ ಆಗದಿರಬಹುದು ಆದರೆ ಓದುಗನಿಗೆ ಇಷ್ಟವಾಗುತ್ತಿದೆ, ಹೀಗೆ ಬರೆಯುತ್ತಿರಿ”.

ನನ್ನಂಥ ಹೊಸ ಬರಹಗಾರರಿಗೆ ತಮ್ಮ ಅವಧಿಯಲ್ಲಿ ಅವಕಾಶ ಮಾಡಿಕೊಟ್ಟು ಪರೋಕ್ಷವಾಗಿ ಈ ಸಾಹಿತ್ಯ ಲೋಕಕ್ಕೆ ಪರಿಚಯಿಸುತ್ತಿರುವ ಅವರ ಸಾಹಿತ್ಯ ಸೇವೆ ನಿಜಕ್ಕೂ ಶ್ಲಾಘನೀಯ!

ಅಬ್ಬಾ! ಧನ್ಯೋಸ್ಮಿ ಸರ್.

ಇತ್ತೀಚೆಗೆ News 13 Auditor ಶ್ರೀ ಅಂಬರೀಷ್ ರವರು ನನ್ನ ಬ್ಲಾಗ್ ಓದಿ ನಾನು ಬರೆದ “ತೀರ್ಥ ಕ್ಷೇತ್ರ ದರ್ಶನ” ವನ್ನು ಪ್ರಕಟಿಸುತ್ತಿದ್ದಾರೆ. ಇನ್ನೂ ಅನೇಕ ಬರಹ ಬರೆದು ಕೊಡಿರೆಂದು ಆಹ್ವಾನ ವಿತ್ತಿದ್ದಾರೆ. ಹುಬ್ಬಳ್ಳಿಯ online ಪತ್ರಿಕೆಗೆ ನನ್ನ ಬರಹ ಪರಿಚಯಿಸತ್ತಿದ್ದಾರೆ. 

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ “ಬೇಂದ್ರೆ ಸಾಹಿತ್ಯ ಕವಿ ಸಮ್ಮೇಳನಕ್ಕೆ ” ಕವನ ವಾಚಿಸಲು ಶ್ರೀಮತಿ ಪದ್ಮಾ ಹುಯಿಲ್ಗೋಳ್ ಅವರಿಂದ ಆಹ್ವಾನ ಬಂದಿತ್ತು. ಆದರೆ ಅನಾರೋಗ್ಯದ ಕಾರಣ ಭಾಗವಹಿಸಲು ಸಾಧ್ಯ ವಾಗಲಿಲ್ಲ.

ಇನ್ನುಮುಖ ಪುಸ್ತಕದ ಅನೇಕ ಸ್ನೇಹಿತರಿಂದ WhatsApp ಸ್ನೇಹಿತರಿಂದ ಶುಭಾಶಯಗಳ ವಿನಿಮಯ.

ಒಟ್ಟಿನಲ್ಲಿ ಈ ವರ್ಷದ ಮಹಿಳಾ ದಿನಾಚರಣೆ ನನ್ನ ಬದುಕಿನ ಮರೆಯಲಾಗದ ನೆನಪಿನ ದಿನವಾಗಿದೆ.

ಎಲ್ಲರಿಗೂ ನನ್ನ ಧನ್ಯವಾದಗಳು.
13-3-2017. 2.07pm

ಬೆಲೆಯಿಲ್ಲದ ಬದುಕು

ಇದು ಕಾಲನ ನಿಯಂತ್ರಣದಲ್ಲಿ ಕಳೆಯುತ್ತಿರುವ ಕಾಲವೊ ಅಥವಾ ಮನುಜ ತಾನಾಗಿ ತಂದುಕೊಂಡ ಅತಿ ಆಸೆಯ ಫಲವೊ ಯಾವುದು ನನ್ನ ನಿರ್ಧಾರಕ್ಕೆ ಸಿಗುತ್ತಿಲ್ಲ. ಯೋಚಿಸುತ್ತ ಕುಳಿತರೆ ಹಗಲಂತೂ ನಿದ್ದೆ ಬರೋಲ್ಲ ಬಿಡಿ ; ರಾತ್ರಿಯ ನಿದ್ರೆಯನ್ನೂ ಕಸಿದು ಕೊಳ್ಳುವಷ್ಟು ಕ್ರೂರಿ. ನಿರಾತಂಕವಾದ ಬದುಕು ಕಾಣುವ ಹಂಬಲ ಕೊನೆ ಗಾಲದಲ್ಲಿ ಅದೆಷ್ಟು ಮನೆ ಮಾಡಿತ್ತೊ ಹರೆಯದಲ್ಲಿ ; ಅದೆ ರೀತಿ ಹಿಂದೆ ತಿರುಗಿ ನೋಡಿದಾಗ ಹರೆಯದ ಕನಸೂ ಅಂದುಕೊಂಡಂತೆ ಸಾಕಾರವಾಗದ ನೆನಪು ಬಿಚ್ಚಿಕೊಳ್ಳುವುದು ಇಳಿ ವಯಸ್ಸಿನಲ್ಲಿ.. ಆದರೂ ಬದುಕಿನೊಂದಿಗಿನ ಪ್ರೀತಿ ಸಾಯೋದೆ ಇಲ್ಲ. ಮತ್ತೆ ವಯಸ್ಸಿಗೆ ತಕ್ಕಂತೆ ಅಥವಾ ಕಾಲಕ್ಕೆ ತಕ್ಕಂತೆ ಮನಸ್ಸು ಬದಲಾಯಿಸಿಕೊಳ್ಳುತ್ತ ತೃಪ್ತಿ ಕಾಣಲು ಹವಣಿಸುತ್ತದೆ ಮನ. ಗಾದೆ ಇದೆಯಲ್ಲ “ಬಿದ್ದರೂ ಮೂಗು ಮೇಲೆ” ಸಮರ್ಥಿಸಿಕೊಳ್ಳುವುದರಲ್ಲಿ ನಿಸ್ಸೀಮ ಈ ಮನಸ್ಸು. ಆದರೆ ಜೀವನ ಯಾವಾಗ, ಹೇಗೆ, ಯಾವ ರೀತಿ ತಿರುವು ಪಡೆಯುತ್ತದೆ ಅನ್ನುವುದು ಯಾರಿಗೂ ಗೊತ್ತಾಗುವುದೆ ಇಲ್ಲ. ನಾವಂದು ಕೊಂಡಂತೆ ಯಾವುದೂ ನಡೆಯುವುದಿಲ್ಲ. ನಮ್ಮೆದುರಿಗೆ ಕಾಣುವುದೆಲ್ಲ ಸತ್ಯ ಅಂತ ನಾವಂದುಕೊಳ್ಳುತ್ತೇವೆ. ಆದರೆ ಅಲ್ಲಿ ಹಾಗಿರೋದೆ ಇಲ್ಲ. ಆ ನಿಯಾಮಕ ಇನ್ನೇನೊ ಬರೆದಿರುತ್ತಾನೆ. ಅದು ಗೊತ್ತಾಗುವುದು ಕಾಲ ಸರಿದಂತೆ ಅದರ ಪ್ರಭಾವ ಅರಿವಾಗುತ್ತ ನಡೆಯುತ್ತದೆ. ಅದಕ್ಕೆ ಮನುಷ್ಯನಿಗೆ. ಜೀವನದ ಅರಿವಾಗುತ್ತ ನಡೆಯುವುದು ವಯಸ್ಸಾದಂತೆ. ಹರೆಯದಲ್ಲಿ ಅದೆಷ್ಟು ಬಿಸಿ ರಕ್ತದ ಉಮೇದಿಯಲ್ಲಿ ಉರಿದಿರುತ್ತಾನೊ ವಯಸ್ಸಾದಂತೆ ಅಷ್ಟೆ ಪಾತಾಳದತ್ತ ಅವನ ಮನಸ್ಸು. ಆಗ ಅವನ ಬಾಯಲ್ಲಿ ವೇದಾಂತ, ಸತ್ಸಂಗ, ಆಶ್ರಮ ಕಾಣುವುದು. ಮಾತು, ನಡೆ, ನುಡಿ ಎಲ್ಲ ಬದಲಾಗುವುದು.

ಎಷ್ಟು ವಿಚಿತ್ರ ಅಲ್ಲವೆ ಈ ಬದುಕು!. ಬರಿ ಕನಸು ಕಾಣುತ್ತಲೆ ಕಳೆಯುವ ಕಾಲ ದಿನ ಹೋದಂತೆ ಬದುಕಿನ ಪಯಣ ಒಂದು ರೀತಿ ಕಗ್ಗಂಟಾದಾಗ ಹೇಗೆ ಬಿಡಿಸಿಕೊಳ್ಳಲಿ? ದಾರಿ ಎಲ್ಲಿ? ಹೇಗೆ? ನೂರಾರು ಪ್ರಶ್ನೆಗಳು ಕಿತ್ತು ತಿನ್ನುತ್ತಿರುತ್ತವೆ. ದಾರಿಯ ಮುಂದೆ ಅಡ್ಡ ಗೋಡೆಯಂತೆ ನಿಲ್ಲುವ ಸಮಸ್ಯೆಗಳು ಕಪ್ಪು ಭೂತದಂತೆ ರಾಚಿ ಎದೆ ತಿವಿಯುತ್ತವೆ. ಮನಸ್ಸನ್ನು ಪದೇ ಪದೆ ಘಾಸಿಗೊಳಿಸಿ ಹಿಂಸಿಸುವ ಯಮನ ಉರುಳು. ಗಂಟಲುಬ್ಬಿ ಬಂದಾಗ ಸಂತೈಸಬಹುದೆ ಯಮಧೂತ. ಇಲ್ಲ, ಖಂಡಿತಾ ಇಲ್ಲ. ಅವನಿಗೆ ತನ್ನ ಕಾರ್ಯ ಮಾಡುವುದಷ್ಟೆ ಗೊತ್ತು.. ಬದುಕು ಅಂದರೆ ಏನು ಎಂದು ಕಲಿಸುವ ಪಾಠ ಶಾಲೆ ಚಿಂತೆಯೆಂಬ ಅಗ್ನಿ ಕುಂಡ. ಪ್ರತಿಯೊಂದು ಸಂದರ್ಭ, ಘಟನೆ ಮನುಷ್ಯನಿಗೆ ಒಂದೊಂದು ವಿಷಯ ಗಣಿತದಂತೆ ಕಬ್ಬಿಣದ ಕಡಲೆ, ಅರಿವಾದಾಗ ಸಿಹಿ ಬೆಲ್ಲ. ಎರಡೂ ಬದುಕನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಅದರ ಮೇಲೆ ನಿಂತಿದೆ ಅಂತ್ಯದ ಜೀವನ. ಬರುವುದೆಲ್ಲ ಹೇಗೆ ಎದುರಿಸಿ ಮುನ್ನಡೆಯಬೇಕೆನ್ನುವ ಎಚ್ಚರಿಕೆ ಮನುಷ್ಯನಿಗೆ ಇರಬೇಕು. ಬೆಳೆಸಿಕೊಳ್ಳಬೇಕು.

ಅದಕ್ಕೆ ಕವಿ ಇವೆಲ್ಲವುಗಳಿಂದ ತಪ್ಪಿಸಿಕೊಳ್ಳಲು ತಾನೂ ಹಲವಾರು ಕವಿತೆಗಳನ್ನು ಬರೆದ ಅಜರಾಮರವಾಗಿ ಇರಲೆಂದು. ಈ ಸಾಲುಗಳು ಮನಃಪಟಲಕ್ಕೆ ಆಗಾಗ ಬಂದಪ್ಪಳಿಸುವದು. ಜೋರಾಗಿ ಮನೆಯೆಲ್ಲ ಮೊಳಗುವಂತೆ ಅದೆಷ್ಟು ಸಾರಿ ಹೇಳಿಕೊಂಡೆನೊ ಗೊತ್ತಿಲ್ಲ. ” ಬರುವುದೆಲ್ಲ ಬರಲಿ ಬಿಡು ಏಕೆ ಅದರ ಚಿಂತೆ.” ” ಇಲ್ಲಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೆ” ” ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬದುಕು” ಹೀಗೆ ಹಲವಾರು ಹಾಡುಗಳನ್ನು ಹೇಳಿ ನೊಂದ ಮನದ ನೋವ ಶಮನಗೊಳಿಸಿಕೊಳ್ಳಲು ನೆರವಾದ ಕವಿವರ್ಯರೆಲ್ಲರಿಗೂ ಸದಾ ನಾಭಿಯಿಂದ ಹೊರಡುವುದು ಕೃತಜ್ಞತೆಯ ಭಾವ. ಮನಸ್ಸು ಭಾವೋದ್ವೇಗದ ಉತ್ತುಂಗದ ಶಿಖರ ಏರಿದಾಗಲೆಲ್ಲ ಅಲೆ ಅಲೆಯಾಗಿ ಹರಿದು ಬರುವುದು ನನ್ನೊಳಗಿನ ಕಕ್ಕುಲತೆಯ ಇನ್ನಿಲ್ಲದ ಅನಿಸಿಕೆಗಳು. ಇಂತಹ ಸ್ಥಿತಿಯಲ್ಲಿ ನುಗ್ಗಿ ಬರುವ ಶಬ್ದಗಳು ಅನೇಕ ಬರಹ ಬರೆಸಿವೆ. ಆದರೆ ನನಗ್ಯಾವತ್ತೂ ನನ್ನ ಬರಹದ ಕುರಿತು ಸಮಾಧಾನ, ಸಾಕು , ಎಂತಹ ಬರಹ ಬರೆದೆ ಅನ್ನುವ ತೃಪ್ತಿ ಇದುವರೆಗೂ ಸಿಗಲೇ ಇಲ್ಲ. ಮೇರು ಕವಿಯ ಕಿವಿ ಮಾತುಗಳು ನನ್ನ ಸುತ್ತಲೂ ಗಿರಕಿ ಹೊಡೆಯುತ್ತಲೆ ಇರುತ್ತವೆ. ಎಂತಹ ಅದ್ಭುತ ಪಾಂಡಿತ್ಯ, ಅದೆಷ್ಟೋ ಜನರ ಮನ ಸೂರೆಗೊಂಡ ಬರಹಗಳು. ಸಂತೈಸಿ ತಾಯಂತೆ ಜೋಗುಳ ಹಾಡುವ ಲಾಲಿ ಹಾಡುಗಳು. ನಿಜಕ್ಕೂ ಮನ ಮೂಕವಾಗುತ್ತದೆ ಪ್ರತಿ ಬಾರಿ ಓದಿದಾಗ, ಗುಣಗುಣಿಸಿದಾಗ. ಬಿದ್ದು ಹೋಗುವ ಜೀವಗಳಿಗೆ ಅಮೃತ ಸಂಜೀವಿನಿ. ಅರ್ಥ ಮಾಡಿಕೊಂಡಷ್ಟೂ ಮುಗಿಯದ ಖನಿ ಅವರೆಲ್ಲ ಬರೆದಿಟ್ಟ ಸಾಲುಗಳು.

ಬದುಕನ್ನು ನಾವೆಷ್ಟು ಪ್ರೀತಿಸುತ್ತೇವೊ ಅಷ್ಟೆ ಪ್ರೀತಿ ಈ ಬದುಕು ನಮ್ಮನ್ನು ಪ್ರೀತಿಸೋದೆ ಇಲ್ಲ ಯಾಕೆ? ಪ್ರತೀ ಹೆಜ್ಜೆಗೂ ಏನಾದರೊಂದು ತೊಡಕು. ಶಾಂತವಾಗಿ ಕುಳಿತು ಸದಾ ಒಂದಲ್ಲಾ ಒಂದು ವಿಷಯದತ್ತ ಅವಲೋಕಿಸುತ್ತಲೆ ಇದ್ದರೂ ಎಲ್ಲೊ ಏನೊ ತಪ್ಪಾಗಿದೆಯೇನೊ ಅನಿಸುತ್ತದೆ ಒಮ್ಮೊಮ್ಮೆ.. ಆದರೆ ಎಲ್ಲಿ ಅಂತ ಗೊತ್ತಾಗೋದು ತುಂಬಾ ತಡವಾದಾಗ ಹಪಹಪಿಸುತ್ತದೆ ಮನಸ್ಸು. ಎಲ್ಲರಲ್ಲೂ ಇದೆ ಗೊಂದಲವಾ? ಅಥವಾ ನಾನೊಬ್ಬನೆ ಹೀಗಾ? ಇರಲಿಕ್ಕಿಲ್ಲ. ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆ ಇದ್ದಿದ್ದೆ. ನಾನ್ಯಾಕೆ ಒಬ್ಬಳೆ ತಲೆ ಕೆಡಿಸಿಕೊಳ್ಳಲಿ? ಹತ್ತರಲ್ಲಿ ಹನ್ನೊಂದು ಅಂತ ಎಷ್ಟೋ ಸಾರಿ ಸಮಾಧಾನ ಪಟ್ಟಕೊಂಡಿದ್ದಿದೆ. ಆದರೆ ಆ ಹತ್ತರಲ್ಲಿ ಹನ್ನೊಂದು ನಾನ್ಯಾಕೆ ಅದೆ? ಆಗಬೇಕು.? ಹೀಗಂದುಕೊಂಡಾಗ ಮತ್ತೆ ಅದೇ ವ್ಯಥೆ. ಛೆ! ಈ ಜೀವನವೆ ಇಷ್ಟು. ನೊಂದ ಮನಕೆ ನೋವು ಮತ್ತೆ ಮತ್ತೆ. ತೀರಕ್ಕೆ ಬಡಿಯುವ ಅಲೆಗಳಂತೆ.

ಹಾಗಾದರೆ ಬದುಕಿಗೆ ಸೈರಣೆಯೆ ಮುಖ್ಯ ಅಂದಾಂಗಾಯಿತು. ಕಾರಣ ಬಂದಿದ್ದೆಲ್ಲ ಸಹಿಸಿಕೊಂಡು ಬದುಕುವುದಿದೆಯಲ್ಲ ಅದು ಕಷ್ಟ. ಆದರೂ ಸಾಯಲಾಗದೆ, ಅಥವಾ ಕಾಲನ ಕರೆ ಬರುವವರೆಗೂ ಕಾಯ ಬೇಕೆಂಬ ನಿಯಮ ಮೀರಲಾಗದೆ ಅಥವಾ ಇನ್ನಾವ ಕಾರಣಕ್ಕೊ ಬದುಕಿರುತ್ತೇವಲ್ಲ ; ಒಳಗೊಳಗೆ ಎದುರಿಸುತ್ತ ಚಿಂತೆಗಳ ಎದುರಿಗೆ ಮುಖವಾಡ ಹೊತ್ತ ನಗೆ ಗಾಯಕ್ಕೆ ಮುಲಾಮು ಹಚ್ಚಿ ಮರ್ಯಾದೆ ಕೊಟ್ಟಂತೆ.

ನಿಜ ಯಾರನ್ನೂ ಬಿಡದೀ ಮಾಯೆ. ಎಲ್ಲಿಯವರೆಗೆ ಬುಡದಿಂದ ಬೆಳೆಸಿಕೊಂಡು ಬಂದ ಆಸೆ, ಆಕಾಂಕ್ಷೆಗಳು ಕೈಗೂಡುವುದಿಲ್ಲವೊ ಅಲ್ಲಿಯವರೆಗೂ ಮನುಷ್ಯನಿಗೆ ಚಿಂತೆ ತಪ್ಪಿದ್ದಲ್ಲ. ಅದರಲ್ಲೂ ನಿರ್ವಹಿಸಬೇಕಾದ ಕರ್ತವ್ಯ ನಮ್ಮಿಂದ ಈಡೇರಿಸಲು ಸಾಧ್ಯವಾಗದಿರುವಾಗ ಆಗುವ ಹಿಂಸೆ, ನೋವು, ಸಂಕಟ ಸಹಿಸಲಸಾಧ್ಯ. ಅನುಭವ ಜೀವನದಲ್ಲಿ ಪಾಠ ಕಲಿಸಿದರೆ ಅಸಹಾಯಕತೆ ಜೀವವನ್ನೆ ಹಿಂಡುತ್ತದೆ. ಇರಲಾಗದ ಬದುಕಿಗೆ ಬೆನ್ನು ತಿರುಗಿಸಿ ಮಲಗಿ ಬಿಡುವಷ್ಟು ಹತಾಷೆ.

ಇಂಥಾ ಪರಿಸ್ಥಿತಿಯಲ್ಲೆ ಮನುಷ್ಯನ ಮನದಲ್ಲಿ ಮೂಡುವ ಪ್ರಶ್ನೆ “ದೇವರಿದ್ದಾನಾ? ಇದ್ದರೆ ಅವನಿಗ್ಯಾಕೆ ಅರ್ಥ ಆಗುತ್ತಿಲ್ಲ ನನ್ನ ಸಮಸ್ಯೆ? ” ಕೊನೆಯಲ್ಲಿ ಬರುವ ನಿಟ್ಟುಸಿರಿನ ಕಣ್ಣೀರು ಮನಸ್ಸಿಗೆ ಕೊಡುವ ಸಮಾಧಾನವಷ್ಟೆ. ಆದರೆ ಸಮಸ್ಯೆ ಯಾವತ್ತೂ ಸಮಸ್ಯೆ ಆಗಿಯೆ ಉಳಿದಾಗ ಅನಿಸುವುದು ಮನಕೆ ಬದುಕೆಂದರೆ ಇದೇನಾ? ಇಷ್ಟೇನಾ?

2-2-2017. 5.52pm