ಭಾಂದವ್ಯ

ಜಡಿಮಳೆಯ ಅಬ್ಬರಕೆ
ನಾ ಕಿಟಕಿ ಬಾಗಿಲು ಮುಚ್ಚಲಾರೆ
ಅಲ್ಲಿ ಆ ಕಡೆ ನಿಂತ ನಾ ನೆಟ್ಟ ಗಿಡಗಳು
ತೊಪತೊಪನೆ ಒದ್ದೆಯಾಗಿ
ಅಮ್ಮಾ ನನಗೂ ಚಳಿ ಚಳಿ
ಅಂದಾಂಗಾಯ್ತು.

ಯಾಕೊ ಮುದುಡಿದ ಮನ
ಅಯ್ಯೋ! ಪಾಪ
ಹೌದಲ್ಲಾ
ನೆನೆನೆನೆದು ತೊಪ್ಪಯಾಗುತಿವೆಯಲ್ಲಾ
ಛೆ! ಏನು ಮಾಡಲಿ ಈಗ?
ಕೈ ಕೈ ಹಿಸುಕಿಕೊಂಡೆ.

ಮೆಲ್ಲಗೆ ಉಸುರಿತು ಅಲ್ಲಿ ಅರಳಿದ ಮಲ್ಲಿಗೆ
ಅಮ್ಮಾ ಮಳೆರಾಯ ಕಚಗುಳಿ ಇಟ್ಟು ನಗಿಸುತ್ತಿದ್ದಾನೆ
ನೋಡು ಬೇಗ್ ಬಾರೆ ಹೊರಗೆ
ನಮ್ಮಂತೆ ನೀನೂ ನಗುವಂತೆ
ಯಾಕೆ ಒಬ್ಬಳೇ ಮೂಲೆ ಸೇರಿ ಕುಳಿತೆ?

ಅಬ್ಬಾ! ಪರವಾಗಿಲ್ವೆ
ನಾನಿಲ್ಲಿ ನಿಮ್ಮಗಳ ಬಗ್ಗೆ
ಏನೇನೊ ಪರಿತಪಿಸುತ್ತಿರುವಾಗ
ಮಳೆರಾಯನೊಂದಿಗೆ ನಿಮ್ಮ ಚಕ್ಕಂದನಾ
ಥಂಡಿ ಗಿಂಡಿ ಆಗಲ್ವೇನ್ರೆ?
ಹುಷಾರೂ^^^^

ಭಡ್ ಎನ್ನುವ ಶಬ್ಧಕ್ಕೆ
ಕಲ್ಪನೆಯ ಚಿತ್ತ ಕೊಂಚ ಎಡವಿತಾಗ
ವಾಸ್ತವಕೆ ಬಂದೆ
ನನ್ನೇ ನಾ ಬಯ್ಕೊಂಡೆ.

ಅಯ್ಯೋ! ನನ್ನ ಬುದ್ಧಿಗಿಷ್ಟು
ಅದೇನಂತ ಯೋಚಿಸ್ತೀನೊ ಏನೊ
ತಿಕಲ್ ಮೈಂಡು ;
ಒಬ್ಬಳೇ ನಗುತ್ತ ಖುಷಿಯಲ್ಲಿ
ನಡೆದೆ ಅಡಿಗೆಮನೆಯತ್ತ.☺

16-6-2017 2.19pm

Advertisements

ಹಿಮ ಮಣಿಯ ಸ್ಪರ್ಶ…

ಮೂಡಣದ ಭಾನಲ್ಲಿ ಮಳೆ ಮಿಂಚಿನ ಕೋಲು
ಮೇಘದ ಆರ್ಭಟಕೆ ಎದೆ ಝಲ್ಲೆಂದು ನಡುಗಿತ್ತು
ಸುಖಾಸುಮ್ಮನೆ ಬರುವವ ನಾನಲ್ಲವೆಂದು
ಸೆಟಗೊಂಡು ಮಳೆರಾಯ ಎಚ್ಚರಿಸಿದಂತಿತ್ತು.

ಇಂಚಿಂಚು ಇಳಿಯುವ ಆ ಭಾನ ಮುತ್ತು
ಕಚಗುಳಿಯಿಡುತ ತನು ತಾನೆ ತೋಯುತಿತ್ತು
ಹಿಮ ಮಣಿಯ ಸ್ಷರ್ಶ ಪುಳಕಗೊಂಡ ಮನ
ಅಂಗಾಂಗದ ತುಂಬೆಲ್ಲ ಹೊಸ ಮಣ್ಣ ಘಮಲು.

ಬರೆಯುವ ಕೈಗೋ ಅದರದೇ ಅಮಲು
ಭೋರ್ಗರೆಯುವ ನಾದಕೆ ಭಾವನೆಗಳ ಥಳುಕು
ಸುರ ಹೊನ್ನೆಯ ಝಳಕು ಕಣ್ಗಳಿಗೆ ಹೊಳಪು
ಪುಟ ಪುಟದ ತುಂಬಾ ಬಗೆ ಬಗೆಯ ಬಳುಕು.

ಸುರಿ ಸುರಿದ ಮಳೆರಾಯ ತೃಪ್ತಿ ಗೊಂಡಂತಿತ್ತು
ಭೂರಮೆಯ ತುಂಬೆಲ್ಲ ತನ್ನಧಿಕಾರ ಕಂಡು
ಬಿಸಿಲ ಬೇಗೆಯ ಒದ್ದಾಟಕೆ ಸೆಡ್ಡು ಹೊಡೆದು
ಸಪ್ತವರ್ಣದ ಕಾಮನಬಿಲ್ಲಿನಲಿ ಶೃಂಗಾರಗೊಂಡು.

ಆಕಾಶದ ಅಟ್ಟಣಿಗೆಯು ಬರಿದಾದ ಹೊತ್ತು
ಶುಭ್ರ ಬೆಳ್ಳಿಯ ತಟ್ಟೆ ಮಿರಿ ಮಿರಿ ಮಿನುಗು
ಕರಿ ಮೋಡ ಆಳಿದುಳಿದು ಬಿಳಿ ಮೈಯ್ಯ ತೊಗಲು
ಆಹಾ! ನಭೋ ಮಂಡಲವೆ ನೀ ಎಂಥ ಸೊಗಸು.

28-5-2017. 12.24am