ಕವನ (142)

ನಿನ್ನಿರುವಿನ ರಾತ್ರಿಯಲಿ
ನಿದ್ದೆ ಗಾಳಿಗೆ ತೂರಿ
ಪೊಗದಸ್ತಾಗೊಂದು ಚಹಾ ಕುಡಿದು
ಬರೆಯಲು ಕೂಡುತ್ತೇನೆ
ಜಗವನ್ನೇ ಮರೆತು
ಕಣ್ಣು ಮಂಜಾಗುವುದಿಲ್ಲ
ಸುಸ್ತು ಗೊತ್ತಾಗುವುದಿಲ್ಲ
ಎಷ್ಟೊಂದು ಉತ್ಸಾಹ ಗೊತ್ತಾ?

ಅಲ್ಲಿ ನಾನು ಮತ್ತೆ ನೀನು
ಬಿಟ್ಟರೆ ಪದಗಳ ಕುಣಿತ
ತಲೆ ತುಂಬ ಹರಿದಾಡಿ
ನಾ ಮುಂದು ತಾ ಮುಂದು
ಎಂದೆನ್ನುತ ಧಾಳಿಯಿಡುವ ಚಂದ
ಏನ್ ಕೇಳ್ತೀಯಾ…
ಸೂಪರೋ…ಸೂಪರ್ರೂ.

ಎಷ್ಟು ಬರೆವೆ ಬರಿ ಎಂದು
ನೀನು ಕಿಚಾಯಿಸುವುದು
ನನಗೊಂಥರಾ ಉಮೇದಿ
ಕೈ ಸೋಲುವುದಿಲ್ಲ
ನಿದ್ದೆ ಹತ್ತಿರ ಸುಳಿಯುವುದಿಲ್ಲ
ಹೊತ್ತು ಕಳೆದಿದ್ದು ಗೊತ್ತಾಗುವುದೇ ಇಲ್ಲ
ಮತ್ತೇನು ಮಾಡಲಿ ಹೇಳು
ಎಲ್ಲಾ ನಿನ್ನ ಸಹವಾಸ ದೋಷ…!

ಬಿಡು ನಾನು ಮತ್ತೆ ನೀನು
ಹೀಗೆಯೇ ಇದ್ದು ಬಿಡೋಣ
ಊಟ ಬೇಡಾ ನಿದ್ದೆ ಬೇಡಾ
ಹಸಿವೆಯ ಹಂಗು ತೊರೆದು
ಜೀವನ ಪರ್ಯಂತ
ನಮ್ಮೊಳೊಂದಾಗಿ ಕಾಲ ತಳ್ಳುತ್ತ
ಇಹವನ್ನೇ ಮರೆತು ಧಿಲ್ದಾರಾಗಿ
ಲೈಫು ಕಳೆದು ಬಿಡೋಣ
ಏನಂತೀಯಾ??😊

15-2-2019. 11.19am

Advertisements

ಕವನ (141)

ನಿನ್ನ ಹೆಜ್ಜೆಯ ಸದ್ದಿಗೆ ಕಿವಿಯಾಗಬೇಕು
ಅಂದುಕೊಂಡಿರಲಿಲ್ಲ ನಾನೆಂದೂ
ಅನಿರೀಕ್ಷಿತವೋ ಋಣಾನುಬಂಧವೋ
ನೀ ಬಂದ ಮೇಲೆ ಮನಕರಿವಾಯಿತು
ಇರಬೇಕು ನಿನ್ನ ಜೊತೆ ನಾನೆಂದೂ.

ತಲ್ಲಣದ ತುಡಿತಗಳ ಮಿಡಿತವೋ
ಭಾವಗಳ ಮೇಲಾಟದ ಉದ್ವೇಗವೋ
ಮನ ಚಿಪ್ಪು ಹಿಡಿದು ಕಾಯುತ್ತಿದೆ
ಮಟ ಮಟ ಮಧ್ಯಾಹ್ನದುರಿಬಿಸಿಲು
ಲೆಕ್ಕಿಸದೆ ಭಿಕ್ಷುಕ ಹಿಡಿದ ಬಟ್ಟಲಂತೆ.

ಅಲ್ಲಲ್ಲಿ ಗೀಚಿದ್ದು ಬಾಚಿದ್ದು ಬಸವಳಿದಿದ್ದು
ನಕ್ಕು ಸುಮ್ಮನಾಗಿದ್ದು, ಸೆಟಗೊಂಡಿದ್ದು
ಒಟ್ಟಾರೆ ಮುತ್ತಿಕೊಂಡ ನೆನಪು ಹದಗೊಂಡು
ದೂರದಲ್ಲಿ ಗೋಡೆಗೊರಗಿದ ಕತ್ತು
ನೋಯುತ್ತಿತ್ತು ನಿನ್ನ ಬರುವಿಕೆಗಾಗಿ ಕಾದು ಕಾದು.

ಬಂದರೂ ಬಾರದಿದ್ದರೂ ಖೇದವಿಲ್ಲ ಮನಸಿಗೆ
ಬೆಚ್ಚನೆಯ ಸ್ಪರ್ಶ ಸುಃಖದಂತಹ ಚಂದದ
ನಿನ್ನೊಂದಿಗಿನ ನೆನಪು ಮರೆಯಲುಂಟೇ…
ಗೀಚಿದಷ್ಟೂ ಮುಗಿಯದದರ ಅಂತ್ಯ
ಬೆಳ್ಳ್ ಮುಗಿಲಷ್ಟು ನಿರ್ಮಲ ನನಗಷ್ಟೇ ಗೊತ್ತು.

ಕಾವ ಮನಸಿಗೊಂದಷ್ಟು ಸಾಂತ್ವನವೀವ
ನಿನ್ನ ಮಾತ ನರ್ತನ ಕರ್ಣಕದೇನೋ ಇಂಪು
ಪದ ಪದಗಳಮೇಲೋಲಗದ ಮಾಧುರ್ಯ
ಇಂಚರದ ಸಿಂಚನಕೆ ಮುದಗೊಂಡ ತನು ಮನ
ಭಾವೋದ್ವೇಗದೊಳು ಗೀಚುವಿಕೆಯೀಗ ನಿರಂತರ!!

29-1-2019 1.40pm

ಕವನ (140)

ನೀನಿರುವ ತಾಣ
ಎಣಿಕೆಗೂ ನಗಣ್ಯ
ಹೊತ್ತೊಯ್ಯುವೆ ಮನಸ
ತೀರದ ದಾಹದೆಡೆಗೆ
ಅವಿತಿರುವ ಭಾವಗಳ
ಬಿಡದೆ ಬೆಂಬತ್ತಿ
ಬರೆಸುವ ಪರಿ
ನಿಜಕ್ಕೂ ಕುಚೋದ್ಯ
ಕೊಂಚ ಹೇಳಿಬಿಡು
ನಿನ್ನ ಈ ಖರಾಮತ್ತು
ಜತನವಾಗಿರಿಸಿಕೊಳ್ಳುವೆ
ಗುಟ್ಟಾಗಿ ಮನಸ
ಮಂಡಲದೊಳಗೆ.

7-1-2019 6.58pm

ಕವನ (139)

ಬತ್ತಿದಾ ಕಣ್ಣೆವೆಗಳು ಸಾಯುವುದಿಲ್ಲ
ನಿನ್ನ ನೋಡುವ ತನಕ.

ಅತ್ತು ಅತ್ತು ಸೋತ ಜೀವ ತೊರೆಯುವುದಿಲ್ಲ
ನಿನ್ನ ಮಾತಾಡಿಸುವ ತನಕ.

ಸರಿವ ಬದುಕಿನಾದಿಗೆ ಸುಂಕ ಎಣಿಸುವುದಿಲ್ಲ
ನಿನ್ನಲ್ಲಿ ನನ್ನ ಜೀವವಿರುವ ತನಕ.

ಕಾಲನ ಪರಿವೆ ನನಗದರರಿವಿರುವುದಿಲ್ಲ
ನಿನ್ನ ಸ್ಪಟಿಕದಂತ ಪ್ರೀತಿಯಿರುವ ತನಕ.

ಸಂಗಾತದ ಸಾಂಗತ್ಯ ಮರೆಯುವುದಿಲ್ಲ
ನಿನ್ನ ಮಡಿಲಲಿ ನಾನಿರುವ ತನಕ.

ಜಡ ದೇಹ ಚಿಗುರಿದ ನೆನಪಳಿಯುವುದಿಲ್ಲ
ನಿನ್ನ ನೆನಪು ನನ್ನೊಂದಿಗಿರುವ ತನಕ.

ಸಾಧನೆಯ ಮೆಟ್ಟಿಲು ತೊರೆಯುವುದಿಲ್ಲ
ನಿನ್ನ ಹಾರೈಕೆಯಿರುವ ತನಕ.

ಇದ್ದರೆ ಹೀಗೆಯೇ ಇರು ಸದಾ ನನ್ನ ಕವನಾ
ನಿನ್ನ ಧ್ವನಿ ನನ್ನ ಹೆಸರಲಿರುವ ತನಕ.

ಸಂಗೀತದ ಲಾಲಿತ್ಯ ರಾಗಾಲಾಪನೆಯಲ್ಲಿ
ನಿನ್ನ ಪಾದದ ಬಳಿ ನಾ ಹಾಡುವೆ ಕೊನೆ ತನಕ.

9-102018. 8.46am

ಕವನ (138)

ನೀ ಯಾವಾಗ ನನ್ನ ಮುತ್ತಿಕೊಳ್ಳುತ್ತಿ ;
ತುರಿಕೆ ಕಾಡಿದರೂ
ತುರಿಸಿಕೊಳ್ಳಲು ಪುರುಸೊತ್ತಿಲ್ಲದ ಸಮಯದಲ್ಲಿ
ಅಷ್ಟೊಂದು ಕೆಲಸದ ಮಧ್ಯೆ
ನೀ ಧಾಂಗುಡಿ ಇಟ್ಟರೆ ಹೇಗೆ?

ಎಷ್ಟು ಸರ್ತಿ ಕಿವಿ ಹಿಂಡಿ ಹೇಳಿದ್ದೇನೆ
“ನೀ ಹೀಂಗ ಕಾಡಬೇಡಾ ನನ್ನ”
ಜಾನಪದ ಸೊಗಡಿನ ಗೀತೆ ಹಾಡುತ್ತ
ಪರಿ ಪರಿಯಾಗಿ
ಅಲವತ್ತು ಬೇಡಿಕೊಂಡಷ್ಟೂ
ಮತ್ತೆ ಮತ್ತೆ ನನ್ನ ಹೆಗಲೇ ಬೇಕಾ ನಿನಗೆ?

ಪಂಚತಂತ್ರದ ಜಾಣ್ಮೆ
ಗೊತ್ತಿಲ್ಲ ನನಗೆ
ಏನೋ ಒಂದಷ್ಟು ಸುಃಖಾ ಸುಮ್ಮನೆ
ಬರೆಯುವ ಗೀಳು ಅಂಟಿಸಿಕೊಂಡೆ ಕಣೆ
ಅರವತ್ತರ ಅರಳಾದ ಮರುಳಲ್ಲಿ.

ಯಾರೋ ಮಾತಾಡ್ತಿದ್ರು ವಾಕಿಂಗಾಯಣದಲ್ಲಿ
“ಅರವತ್ತರಲ್ಲಿ ಜ್ಞಾನೋದಯವಾದರೆ ಏನು ಬಂತು ಮಣ್ಣು”
ಅವರಿಗೇನು ಗೊತ್ತು ನಿನ್ನೊಡನಾಟದ ಗಮ್ಮತ್ತು
ತದುಕಿ ಬಿಡುವಷ್ಟು ಸಿಟ್ಟು
ಸುಮ್ಮನೆ ಬಂದೆ
ಗೊತ್ತಿಲ್ಲದವರ ಹತ್ತಿರ ಏನು ಮಾತು?

ಅದು ಹಾಗೆ
ನಿನ್ನಾರಳಿದರೂ ಕೋಪ ನನಗೆ
ಆಗೆಲ್ಲ ಮನ ಕುದಿಯುವ ಕೆಂಡ
ಬೇಡ ಬೇಡಾ ಅಂದರೂ ಸುತ್ತಿಕೊಳ್ಳುವ
ನಿನ್ನದರದ ತುಂಬಾ ಮುತ್ತಿನ ಮಳೆಗರೆದು
ತಾಯ್ಮಡಿಲಲ್ಲಿ ಕಂದನ
ಅವಿತಿಟ್ಟುಕೊಳ್ಳುವಷ್ಟು ಪ್ರೀತಿ, ಮಮತೆ.

ಜೀವನ ಹೇಗೊ ಏನೊ ಯಾರಿಗೊತ್ತು
ಇರಲಿ
ಸವೆದ ದಿನಗಳ ಲೆಕ್ಕ ಹಿಂತಿರುಗಿ ನೋಡಿದಾಗೆಲ್ಲ
ಸಾಧನೆಯ ಹಾದಿ
ಶೂನ್ಯವೆಂದೆನಿಸುವುದ ಮರೆಸಿದ
ನಿನ್ನ ಆಗಮನದ ಗಳಿಗೆ
ತಂದ ನವೋಲ್ಲಾಸ ಮರೆತಿಲ್ಲ.

ಆದರೂ
ಪದೇ ಪದೇ ನೀ ಹೀಗೆ ಕಾಡಿದಾಗ
ಭಟ್ಟಿ ಇಳಿಸುವ ಕ್ರಿಯೆ
ಬಿಡಲಾಗದೇ ಉದುರಿಸಿ
ಒಪ್ಪವಾಗಿ ಜೋಡಿಸಿ
ಕಂಡವರ ಮುಂದೆ ಇಟ್ಟುಬಿಡುತ್ತೇನೆ
ಸ್ವಲ್ಪ ರುಚಿ ನೋಡಿರೆಂದು
‘ಹೊಸದರಲ್ಲಿ ಗಂಡನಿಗೆ
ಅಡಿಗೆ ಮಾಡಿ ಬಡಿಸಿದ ಹೆಂಡತಿಯಂತೆ!’

13-7-2018 8.39am

ಕವನ (137)

ಹೆಚ್ಚು ನಿನ್ನ ಸವರಿಕೊಂಡು
ಇನ್ನಿಲ್ಲದ ಮುದ್ದುಗರೆಯುತ್ತ
ಸಲಾಮು ಹೊಡೆಯುವ
ದರ್ಧು ನನಗೇನಿಲ್ಲ ಬಿಡು.

ಹಂಗಂಗೆ ಉದುರುವ
ಪದಗಳ ಜೋಡಿಸುತ್ತ
ಕಲ್ಪನೆಯಲ್ಲೆ ಸೌಧ ಕಟ್ಟುವೆ
ಊರಗಲದಷ್ಟು ವಿಶಾಲವಾಗಿ.

ಒಂದಷ್ಟು ಮಾತಾಡಿದಂತೆ
ಇನ್ನೊಂದಷ್ಟು ನಗುವಂತೆ
ಮತ್ತೊಂದಷ್ಟು ಬೆಪ್ಪಾಗುವಂತೆ
ಜನ ಸರಾಗವಾಗಿ ಓದುವಂತೆ.

ಅದೇನಂತ ಯೋಚನೆಯಾಯ್ತಾ
ನಾ ಹೆಳೋಲ್ಲ ಹೋಗು ಏನೀಗಾ?
ಎಷ್ಟು ಸತಾಯಿಸ್ತೀಯಾ ಅಂದ್ರೆ
ಅದು ನಿಂಗೂ ಅನುಭವ ಆಗಲಿ.

ಆಗಲಾದರೂ ಬೇಕೆಂದಾಗ ಬಂದು
ನನ್ನ ತೆಕ್ಕೆಗೆ ಬಿದ್ದು, ಅಪ್ಪಿ,ಮುದ್ದುಗರೆದು
ಮನಃ ಸಂತೃಪ್ತಿಯಾಗುವವರೆಗೂ
ಜೊತೆಗಿರ್ತಿಯಾ ನೋಡ್ತೀನಿ!!

24-8-2018. 1.13pm

ಕವನ (136)

ಸುಃಖಾ ಸುಮ್ಮನೆ
ನೀ ಬರೆಯೆಂದರೀಗ
ನಾ ಬರೆಯಲಾರೆ
ಅದು ಗೊತ್ತಾ ನಿನಗೆ?

ಚಿತ್ತದ ಭಿತ್ತಿಯೊಳಗೆಲ್ಲ
ಮಂಕು ಕವಿದಂತಿದೆ
ತುಕ್ಕು ಹಿಡಿದಂತಾಗಿದೆ
ನಿನ್ನೊಲುಮೆಯಿರದೆ.

ಹುಚ್ಚು ಹಿಡಿದಂತೆ
ಒದ್ದಾಡುತಿದೆ ಮನ
ನಿನ್ನ ಕಟ್ಟಿಹಾಕಲು
ಪದಗಳೇ ಸಿಗುತಿಲ್ಲವಲ್ಲ!

ಒಂದಷ್ಟು ಬರೆ ಬರೆದು
ಅರ್ಧಕ್ಕೆ ನಿಂತಿದೆ
ಶಬ್ದ ಕೊಸರಿಕೊಂಡಂತಿದೆ
ಮುಗಿಸಲಾಗುತಿಲ್ಲವಲ್ಲ!

ಆಗಾಗ ನೀ ಬಂದು
ಬಿಡದೆ ಕದ ತಟ್ಟುತ್ತಿದ್ದೆ
ಆ ಕ್ಷಣವೆ ಮುತ್ತುಗಳಲಿ
ನಿನಗಾರವನಾಕುತ್ತಿದ್ದೆ.

ಆದರೀಗೇಕೀಕೋಪ
ಹೇಳು ಬೇಗ ನೀ ನನ್ನ ಬೆಲ್ಲ
ನೀ ಸೃವಿಸದ ಹೊರತಿಲ್ಲಿ
ಈ ಜೀವ ಚಿಗುರುವುದಿಲ್ಲ.

ಒಂದು ಬಿನ್ನಹ ಕೇಳು
ಒಮ್ಮೆ ನೀ ಬಂದು
ಕಾರಣ ಹೇಳಿ
ಹೊರಡು ಸಾಕು

ಎಡತಾಕುವ ಮನಕೆ
ಒಂದಷ್ಟು ಸಾಂತ್ವನ ಸಿಕ್ಕು
ನಿರಂಮ್ಮಳವಾಗುವೆ
ನಿಶ್ಚಿಂತೆಯಲಿ ಬರೆದು.

18-8-2018 11.09pm